०६६ अङ्गदेन युद्धार्थं कपिप्रोत्साहः

वाचनम्
ಭಾಗಸೂಚನಾ

ಕುಂಭಕರ್ಣನ ಭಯದಿಂದ ಓಡಿಹೋದ ವಾನರರಿಗೆ ಅಂಗದನಿಂದ ಪ್ರೋತ್ಸಾಹ, ಕುಂಭಕರ್ಣನಿಂದ ವಾನರರ ಸಂಹಾರ, ಪುನಃ ವಾನರರ ಪಲಾಯನ, ಅಂಗದನು ಸಮಜಾಯಿಸಿ ಹಿಂದಿರುಗಿಸಿದುದು

ಮೂಲಮ್ - 1

ಸ ಲಂಘಯಿತ್ವಾ ಪ್ರಾಕಾರಂ ಗಿರಿಕೂಟೋಪಮೋ ಮಹಾನ್ ।
ನಿರ್ಯಯೌ ನಗರಾತ್ತೂರ್ಣಂ ಕುಂಭಕರ್ಣೋ ಮಹಾಬಲಃ ॥

ಅನುವಾದ

ಮಹಾಪರ್ವತ ಶಿಖರದಂತೆ ಎತ್ತರನಾದ ಕುಂಭಕರ್ಣನು ಲಂಕೆಯ ಪ್ರಾಕಾರವನ್ನು ದಾಟಿಯೇ ವೇಗವಾಗಿ ಹೊರಟನು.॥1॥

ಮೂಲಮ್ - 2

ನನಾದ ಚ ಮಹಾನಾದಂ ಸಮುದ್ರಮಭಿನಾದಯನ್ ।
ಜನಯನ್ನಿವ ನಿರ್ಘಾತಾನ್ವಿಧಮನ್ನಿವ ಪರ್ವತಾನ್ ॥

ಅನುವಾದ

ಲಂಕೆಯಿಂದ ಹೊರಗೆ ಬಂದ ಕುಂಭಕರ್ಣನು ಸಿಡಿಲನ್ನೇ ಮೀರಿಸುವನೋ ಎಂಬಂತೆ, ಪರ್ವತಗಳನ್ನು ನಡುಗಿಸುತ್ತಾ, ಸಮುದ್ರದಲ್ಲೂ ಪ್ರತಿಧ್ವನಿಸುವಂತೆ ಗಂಭೀರವಾಗಿ ಗಟ್ಟಿಯಾಗಿ ಗರ್ಜಿಸಿದನು.॥2॥

ಮೂಲಮ್ - 3

ತಮವಧ್ಯಂ ಮಘವತಾ ಯಮೇನ ವರುಣೇನ ವಾ ।
ಪ್ರೇಕ್ಷ್ಯ ಭೀಮಾಕ್ಷಮಾಯಾಂತಂ ವಾನರಾ ವಿಪ್ರದುದ್ರುವುಃ ॥

ಅನುವಾದ

ವರುಣ, ಇಂದ್ರ, ಯಮರಿಂದಲೂ ಅವಧ್ಯನಾದ ಭಯಂಕರ ಕಣ್ಣು ಗಳುಳ್ಳ ನಿಶಾಚರನು ಬರುತ್ತಿರುವುದನ್ನು ನೋಡಿ ವಾನರ ರೆಲ್ಲರೂ ಪಲಾಯನ ಮಾಡಿದರು.॥3॥

ಮೂಲಮ್ - 4

ತಾಂಸ್ತು ವಿಪ್ರದ್ರುತಾನ್ದೃಷ್ಟ್ವಾರಾಜಪುತ್ರೋಂಽಗದೋಽಬ್ರವೀತ್ ।
ನಲಂ ನೀಲಂ ಗವಾಕ್ಷಂ ಚ ಕುಮುದಂ ಚ ಮಹಾಬಲಮ್ ॥

ಅನುವಾದ

ವಾನರರೆಲ್ಲರೂ ಓಡುತ್ತಿರುವುದನ್ನು ನೋಡಿ ರಾಜಕುಮಾರ ಅಂಗದನು ನಲ, ನೀಲ, ಗವಾಕ್ಷ ಮಹಾಬಲಿ ಕುಮುದ ಇವರನ್ನು ಸಂಬೋಧಿಸುತ್ತಾ ಹೇಳುತ್ತಾನೆ.॥4॥

ಮೂಲಮ್ - 5

ಆತ್ಮನಸ್ತಾನಿ ವಿಸ್ಮತ್ಯ ವೀರ್ಯಾಣ್ಯಭಿಜನಾನಿ ಚ ।
ಕ್ವ ಗಚ್ಛತ ಭಯತ್ರಸ್ತಾಃ ಪ್ರಾಕೃತಾ ಹರಯೋ ಯಥಾ ॥

ಅನುವಾದ

ವಾನರ ವೀರನೇ! ನಿಮ್ಮ ಉತ್ತಮ ಕುಲವನ್ನು, ಅಲೌಕಿಕ ಪರಾಕ್ರಮವನ್ನು ಮರೆತು ಸಾಧಾರಣ ಕಪಿಗಳಂತೆ ಏಕೆ ಓಡಿಹೋಗುತ್ತಿರುವಿರಿ.॥5॥

ಮೂಲಮ್ - 6

ಸಾಧು ಸೌಮ್ಯಾ ನಿವರ್ತಧ್ವಂ ಕಿಂ ಪ್ರಾಣಾನ್ಪರಿರಕ್ಷಥ ।
ನಾಲಂ ಯುದ್ಧಾಯ ವೈ ರಕ್ಷೋಮಹತೀಯಂ ವಿಭೀಷಿಕಾ ॥

ಅನುವಾದ

ಸೌಮ್ಯರೇ! ನೀವು ಎಲ್ಲರೂ ಹಿಂದಿರುಗಿರಿ. ಪ್ರಾಣ ಗಳನ್ನು ರಕ್ಷಿಸಿಕೊಳ್ಳಲು ಓಡುತ್ತಿರುವಿರಾ? ಈ ರಾಕ್ಷಸನು ನಮ್ಮೊಡನೆ ಯುದ್ಧಮಾಡಲು ಸಮರ್ಥನಲ್ಲ. ಇವನು ಮಾಯೆಯನ್ನಾಶ್ರಯಿಸಿ ನಮ್ಮನ್ನು ಭಯಪಡಿಸಲು ವಿಶಾಲ ರೂಪವನ್ನು ಧರಿಸಿ ಬೆದರು ಬೊಂಬೆಯಂತೆ ಇದ್ದಾನೆ.॥6॥

ಮೂಲಮ್ - 7

ಮಹತೀಮುತ್ಥಿತಾಮೇನಾಂ ರಾಕ್ಷಸಾನಾಂ ವಿಭೀಷಿಕಾಮ್ ।
ವಿಕ್ರಮಾದ್ವಿಧಮಿಷ್ಯಾಮೋ ನಿವರ್ತಧ್ವಂ ಪ್ಲವಂಗಮಾಃ ॥

ಅನುವಾದ

ನಮ್ಮ ಎದುರಿಗೆ ನಿಂತಿರುವ ರಾಕ್ಷಸರ ಈ ಭಾರೀ ಬೆದರುಬೊಂಬೆಯನ್ನು ನಾವು ನಮ್ಮ ಪರಾಕ್ರಮದಿಂದ ನಾಶಮಾಡಿ ಬಿಡುವೆವು. ವಾನರ ವೀರರೇ ಮರಳಿ ಬನ್ನಿ.॥7॥

ಮೂಲಮ್ - 8

ಕೃಚ್ಛ್ರೇಣ ತು ಸಮಾಶ್ವಸ್ಯ ಸಂಗಮ್ಯ ಚ ತತಸ್ತತಃ ।
ವೃಕ್ಷಾನ್ ಗೃಹೀತ್ವಾ ಹರಯಃ ಸಂಪ್ರತಸ್ಥೂ ರಣಾಜಿರೇ ॥

ಅನುವಾದ

ಆಗ ವಾನರರು ಬಹಳ ಕಷ್ಟದಿಂದ ಧೈರ್ಯಧರಿಸಿ ಎಲ್ಲೆಡೆಗಳಿಂದ ಒಂದಾಗಿ ಕೈಗಳಲ್ಲಿ ವೃಕ್ಷಗಳನ್ನೆತ್ತಿಕೊಂಡು ರಣಭೂಮಿಯ ಕಡೆಗೆ ಹೊರಟರು.॥8॥

ಮೂಲಮ್ - 9

ತೇ ನಿವೃರ್ತ್ಯ ತು ಸಂರಬ್ಧಾಃ ಕುಂಭಕರ್ಣಂ ವನೌಕಸಃ ।
ನಿಜಘ್ನುಃ ಪರಮಕ್ರುದ್ಧಾಃ ಸಮದಾ ಇವ ಕುಂಜರಾಃ ॥

ಮೂಲಮ್ - 10

ಪ್ರಾಂಶುಭಿರ್ಗಿರಿಶೃಂಗೈಶ್ಚ ಶಿಲಾಭಿಶ್ಚ ಮಹಾಬಲಃ ।
ಪಾದಪೈಃ ಪುಷ್ಪಿತಾಗ್ರೈಶ್ಚ ಹನ್ಯಮಾನೋ ನ ಕಂಪತೇ ॥

ಅನುವಾದ

ಮರಳಿ ಬಂದ ಆ ಮಹಾಬಲಿ ವಾನರು ಮತ್ತಗಜರಂತೆ ಅತ್ಯಂತ ಕ್ರೋಧ ಮತ್ತು ರೋಷಗೊಂಡು, ಕುಂಭಕರ್ಣನ ಮೇಲೆ ಎತ್ತರವಾದ ಪರ್ವತ ಶಿಖರಗಳಿಂದ, ಶಿಲೆಗಳಿಂದ, ಪುಷ್ಪಿತವಾದ ವೃಕ್ಷಗಳಿಂದ ಪ್ರಹರಿಸತೊಡಗಿದರು. ಅವರ ಏಟು ತಿಂದರೂ ಕುಂಭ ಕರ್ಣನು ವಿಚಲಿತನಾಗಲಿಲ್ಲ.॥9-10॥

ಮೂಲಮ್ - 11

ತಸ್ಯ ಗಾತ್ರೇಷು ಪತಿತಾ ಭಿದ್ಯಂತೇ ಬಹವಃ ಶಿಲಾಃ ।
ಪಾದಪಾಃ ಪುಷ್ಪಿತಾಗ್ರಾಶ್ಚ ಭಗ್ನಾಃ ಪೇತುರ್ಮಹೀತಲೇ ॥

ಅನುವಾದ

ಅವನ ಶರೀರಕ್ಕೆ ತಗುಲಿದ ಬಹಳಷ್ಟು ಶಿಲೆಗಳು ಪುಡಿಪುಡಿಯಾಗುತ್ತಿದ್ದವು. ಹೂವರಳಿದ ಮರಗಳೂ ಕೂಡ ಶರೀರಕ್ಕೆ ಢಿಕ್ಕಿಹೊಡೆದು ಚೂರು ಚೂರು ಆಗಿ ಬಿಡುತ್ತಿದ್ದರು.॥11॥

ಮೂಲಮ್ - 12

ಸೋಽಪಿ ಸೈನ್ಯಾನಿ ಸಂಕ್ರುದ್ಧೋ ವಾನರಾಣಾಂ ಮಹೌಜಸಾಮ್ ।
ಮಮಂಥ ಪರಮಾಯತ್ತೋ ವನಾನ್ಯಗ್ನಿರಿವೋತ್ಥಿತಃ ॥

ಅನುವಾದ

ಆ ಕಡೆ ಕ್ರೋಧಗೊಂಡ ಕುಂಭಕರ್ಣನೂ ಕೂಡ ಮಹಾಬಲಿ ವಾನರರ ಸೈನ್ಯವನ್ನು ದಾವಾನಲವು ದೊಡ್ಡ ದೊಡ್ಡ ಅರಣ್ಯಗಳನ್ನು ಸುಟ್ಟು ಬೂದಿಯಾಗಿಸುವಂತೆ ಅರೆದು ಹಾಕುತ್ತಿದ್ದನು.॥12॥

ಮೂಲಮ್ - 13

ಲೋಹಿತಾರ್ದ್ರಾಸ್ತು ಬಹವಃ ಶೇರತೇ ವಾನರರ್ಷಭಾಃ ।
ನಿರಸ್ತಾಃ ಪಾತಿತಾ ಭೂಮೌ ತಾಮ್ರಪುಷ್ಪಾ ಇವ ದ್ರುಮಾಃ ॥

ಅನುವಾದ

ಅನೇಕ ಶ್ರೇಷ್ಠ ವಾನರರು ರಕ್ತತೊಯ್ದು ನೆಲಕ್ಕೆ ಬಿದ್ದಿದ್ದರು. ಅವನು ಮೇಲಕ್ಕೆ ಎತ್ತಿ ಎಸೆದಿರುವ ವಾನರರು ಕೆಂಪುರೂಪುಗಳಿಂದ ತುಂಬಿದ ವೃಕ್ಷಗಳಂತೆ ಕೆಳಕ್ಕೆ ಬೀಳುತ್ತಿದ್ದರು.॥13॥

ಮೂಲಮ್ - 14

ಲಂಘಯಂತಃ ಪ್ರಧಾವಂತೋ ವಾನರಾ ನಾವಲೋಕಯನ್ ।
ಕೇಚಿತ್ ಸಮುದ್ರೇ ಪತಿತಾಃ ಕೇಚಿದ್ಗಗನಮಾಸ್ಥಿತಾಃ ॥

ಅನುವಾದ

ವಾನರರು ಹಿಂದೆ ಮುಂದೆ ಅಕ್ಕ-ಪಕ್ಕ ನೋಡದೆ, ಎತ್ತರ-ತಗ್ಗು ಇರುವ ಭೂಮಿಯಲ್ಲಿ ಜೋರಾಗಿ ಓಡತೊಡಗಿದರು. ಕೆಲವರು ಸಮುದ್ರಕ್ಕೆ ಬಿದ್ದರು, ಕೆಲವರು ಆಗಸದಲ್ಲೇ ಹಾರಾಡುತ್ತಾ ಇದ್ದರು.॥14॥

ಮೂಲಮ್ - 15

ವಧ್ಯಮಾನಾಸ್ತು ತೇ ವೀರಾ ರಾಕ್ಷಸೇನ ಚ ಲೀಲಯಾ ।
ಸಾಗರಂ ಯೇನ ತೇ ತೀರ್ಣಾಃ ಪಥಾ ತೇನೈವದುದ್ರುವುಃ ॥

ಅನುವಾದ

ಆ ರಾಕ್ಷಸನು ಲೀಲಾಜಾಲವಾಗಿ ಬಡಿಯುತ್ತಿದ್ದ ವಾನರರು ಸಮುದ್ರದಾಟಿ ಲಂಕೆಗೆ ಬಂದ ದಾರಿಯಿಂದಲೇ ಹಿಂದಕ್ಕೆ ಓಡತೊಡಗಿದರು.॥15॥

ಮೂಲಮ್ - 16

ತೇ ಸ್ಥಲಾನಿ ತಥಾ ನಿಮ್ನಂ ವಿವರ್ಣ ವದನಾ ಭಯಾತ್ ।
ಋಕ್ಷಾ ವೃಕ್ಷಾನ್ಸ ಮಾರೂಢಾಃ ಕೇಚಿತ್ಪರ್ವತಮಾಶ್ರಿತಾಃ ॥

ಅನುವಾದ

ಭಯದಿಂದಾಗಿ ವಾನರರ ಮುಖಗಳು ಮಂಕಾದವು. ಹಳ್ಳ ಕೊಳ್ಳಗಳನ್ನು ನೋಡಿ ಓಡಿ ಹೋಗಿ ಅಡಗಿದರು. ಎಷ್ಟೋ ಕರಡಿಗಳು ಮರಹತ್ತಿ ಕುಳಿತರೆ, ಕೆಲವರು ಪರ್ವತಗಳಲ್ಲಿ ಆಶ್ರಯಪಡೆದರು.॥16॥

ಮೂಲಮ್ - 17

ಮಮಜ್ಜು ರರ್ಣವೇ ಕೇಚಿದ್ ಗುಹಾಃ ಕೇಚಿತ್ಸಮಾಶ್ರಿತಾಃ ।
ನಿಪೇತುಃ ಕೇಚಿದಪರೇಕೇಚಿನ್ನೈವಾವತಸ್ಥಿರೇ ।
ಕೇಚಿದ್ಭೂಮೌ ನಿಪತಿತಾಃ ಕೇಚಿತ್ಸುಪ್ತಾ ಮೃತಾ ಇವ ॥

ಅನುವಾದ

ಎಷ್ಟೋ ವಾನರರು, ಕರಡಿಗಳು ಸಮುದ್ರದಲ್ಲಿ ಮುಳುಗಿಹೋದರು. ಕೆಲವರು ಗುಹೆಗಳನ್ನು ಹೊಕ್ಕರು. ಎಷ್ಟೋ ವಾನರರು ಒಂದೆಡೆ ನಿಲ್ಲಲಾರದೆ ಓಡಿಹೋದರು. ಕೆಲವರು ಧರಾಶಾಯಿಯಾದರೆ, ಕೆಲವರು ಸತ್ತಂತೆ ಉಸಿರುಕಟ್ಟಿ ಬಿದ್ದಿದ್ದರು.॥17॥

ಮೂಲಮ್ - 18

ತಾನ್ಸ ಮೀಕ್ಷಾಂಗದೋ ಭಗ್ನಾನ್ ವಾನರಾನಿದಮಬ್ರವೀತ್ ।
ಅವತಿಷ್ಠತ ಯುಧ್ಯಾಮೋ ನಿವರ್ತಧ್ವಂ ಪ್ಲವಂಗಮಾಃ ॥

ಅನುವಾದ

ಆ ವಾನರರು ಓಡುತ್ತಿರುವುದನ್ನು ನೋಡಿ ಅಂಗದನು ಇಂತೆಂದನು- ವಾನರವೀರನೇ! ನಿಲ್ಲಿ! ನಿಲ್ಲಿ!! ಮರಳಿ ಬನ್ನಿ; ನಾವೆಲ್ಲರೂ ಸೇರಿ ಯುದ್ಧಮಾಡುವಾ.॥18॥

ಮೂಲಮ್ - 19

ಭಗ್ನಾನಾಂ ವೋ ನ ಪಶ್ಯಾಮಿ ಪರಿಕ್ರಮ್ಯ ಮಹೀಮಿಮಾಮ್ ।
ಸ್ಥಾನಂ ಸರ್ವೇ ನಿವರ್ತಧ್ವಂ ಕಿಂ ಪ್ರಾಣಾನ್ಪರಿರಕ್ಷಥ ॥

ಅನುವಾದ

ನೀವು ಓಡಿ ಹೋಗಿ ಇಡಿ ಭೂಮಂಡಲವನ್ನು ಸುತ್ತಿದರೂ ನಿಮಗೆ ನಿಲ್ಲಲು ಜಾಗ ಸಿಗಬಹುದು ಎಂದು ತೋರುವುದಿಲ್ಲ. (ಸುಗ್ರೀವನ ಅಪ್ಪಣೆ ಇಲ್ಲದೆ ನೀವು ಎಲ್ಲಿಗೆ ಹೋದರೂ ಬದುಕಿ ಉಳಿಯಲಾರಿರಿ.) ಅದಕ್ಕಾಗಿ ಎಲ್ಲರೂ ಮರಳಿ ಬನ್ನಿ; ಪ್ರಾಣಗಳನ್ನು ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯವಿದೆಯೇ.॥19॥

ಮೂಲಮ್ - 20

ನಿರಾಯುಧಾನಾಂ ಕ್ರಮತಾಮಸಂಗಗತಿ ಪೌರುಷಾಃ ।
ದಾರಾ ಹ್ಯುಪಹಸಿಷ್ಯಂತಿ ಸ ವೈ ಘಾತಃ ಸುಜೀವತಾಮ್ ॥

ಅನುವಾದ

ನಿಮ್ಮ ವೇಗ, ಪರಾಕ್ರಮವನ್ನು ಯಾರೂ ತಡೆಯಲಾರರು. ನೀವು ಅಸ್ತ್ರ ತ್ಯಾಗಮಾಡಿ ಓಡಿಹೋದರೆ ನಿಮ್ಮ ಪತ್ನಿಯರು ನಿಮ್ಮನ್ನು ಪರಿಹಾಸ್ಯ ಮಾಡುವರು. ಇಂತಹ ಬದುಕು ನಿಮಗೆ ಮೃತ್ಯುವಿನಂತೆ ದುಃಖದಾಯಕವಾದೀತು.॥20॥

ಮೂಲಮ್ - 21

ಕುಲೇಷು ಜಾತಾಃ ಸರ್ವೇಽಸ್ಮಿನ್ ವಿಸ್ತೀರ್ಣೇಷು ಮಹತ್ಸು ಚ ।
ಕ್ವ ಗಚ್ಛತ ಭಯತ್ರಸ್ತಾಃ ಪ್ರಾಕೃತಾ ಹರಯೋ ಯಥಾ ।
ಅನಾರ್ಯಾಃ ಖಲು ಯದ್ಭೀತಾಸ್ತ್ಯಕ್ತ್ವಾ ವೀರ್ಯಂ ಪ್ರಧಾವತ ॥

ಅನುವಾದ

ನೀವೆಲ್ಲರೂ ಬಹಳ ದೂರದವರೆಗೆ ಹರಡಿಕೊಂಡು ಮಹಾಕುಲದಲ್ಲಿ ಹುಟ್ಟಿರುವಿರಿ. ಹಾಗಿರುವಾಗ ಸಾಧಾರಣ ಕಪಿಗಳಂತೆ ಭಯಗೊಂಡು ಓಡಿಹೋಗುತ್ತಿರುವಿಲ್ಲ? ನೀವು ಪರಾಕ್ರಮ ಬಿಟ್ಟು ಭಯದಿಂದ ಓಡಿ ಹೋದರೆ ನಿಶ್ಚಯವಾಗಿ ಅನಾರ್ಯರಾಗುವಿರಿ.॥21॥

ಮೂಲಮ್ - 22

ವಿಕತ್ಥನಾನಿ ವೋ ಯಾನಿ ಭವದ್ಭಿರ್ಜನಸಂಸದಿ ।
ತಾನಿ ವಃ ಕ್ವ ನು ಯಾತಾನಿ ಸೋದಗ್ರಾಣಿ ಹಿತಾನಿ ಚ ॥

ಅನುವಾದ

ನೀವು ಜನಸಮುದಾಯದಲ್ಲಿ ಕುಳಿತು ‘ನಾವು ಪ್ರಚಂಡವೀರರಾಗಿದ್ದೇವೆ. ಸ್ವಾಮಿಯ ಹಿತೈಷಿಯಾಗಿದ್ದೇವೆ’ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದೀರಲ್ಲ, ಅದೆಲ್ಲ ಇಂದು ಎಲ್ಲಿಗೆ ಹೋಯಿತು.॥22॥

ಮೂಲಮ್ - 23

ಭೀರೋಃ ಪ್ರವಾದಾಃ ಶ್ರೂಯಂತೇ ಯಸ್ತು ಜೀವತಿ ಧಿಕ್ಕೃತಃ ।
ಮಾರ್ಗಃ ಸತ್ಪುರುಷೈರ್ಜುಷ್ಟಃ ಸೇವ್ಯತಾಂ ತ್ಯಜ್ಯತಾಂ ಭಯಮ್ ॥

ಅನುವಾದ

ಸತ್ಪುರುಷರಿಂದ ತಿರಸ್ಕೃತನಾಗಿ ಬದುಕಿರುವನಿಗೆ ಧಿಕ್ಕಾರವಿರಲಿ. ಇಂತಹ ನಿಂದಾತ್ಮಕ ಮಾತುಗಳನ್ನು ಹೇಡಿಗಳು ಸದಾ ಕೇಳಬೇಕಾಗುತ್ತದೆ. ಆದ್ದರಿಂದ ನೀವು ಭಯಬಿಟ್ಟು ಸತ್ಪುರುಷರ ಮಾರ್ಗವನ್ನು ಆಶ್ರಯಿಸಿರಿ.॥23॥

ಮೂಲಮ್ - 24

ಶಯಾಮಹೇವಾ ನಿಹತಾಃ ಪೃಥಿವ್ಯಾಮಲ್ಪಜೀವಿತಾಃ ।
ಪ್ರಾಪ್ನುಯಾಮೋ ಬ್ರಹ್ಮಲೋಕಂ ದುಷ್ಟ್ರಾಪಂ ಚ ಕುಯೋಧಿಭಿಃ ॥

ಅನುವಾದ

ನಾವು ಅಲ್ಪಜೀವಿಯಾಗಿದ್ದರೂ ಶತ್ರುವಿನಿಂದ ರಣರಂಗದಲ್ಲಿ ಸತ್ತುಹೋದರೆ, ಯುದ್ಧ ಪರಾಙ್ಮುಖನಿಗೆ ಪರಮದುರ್ಲಭವಾದ ಬ್ರಹ್ಮಲೋಕದ ಪ್ರಾಪ್ತಿಯಾಗುವುದು.॥24॥

ಮೂಲಮ್ - 25

ಅವಾಪ್ನುಯಾಮಃ ಕೀರ್ತಿಂ ವಾ ನಿಹತ್ವಾ ಶತ್ರುಮಾಹವೇ ।
ನಿಹತಾ ವೀರಲೋಕಸ್ಯ ಭೋಕ್ಷ್ಯಾಮೋ ವಸು ವಾನರಾಃ ॥

ಅನುವಾದ

ವಾನರರೇ! ಯುದ್ಧದಲ್ಲಿ ನಾವು ಶತ್ರುವನ್ನು ಕೊಂದು ಹಾಕಿದರೆ ಉತ್ತಮ ಕೀರ್ತಿ ಸಿಗುವುದು; ಸ್ವತಃ ಸತ್ತುಹೋದರೆ ನಾವು ವೀರಲೋಕದ ವೈಭವವನ್ನು ಅನುಭವಿಸುವೆವು.॥25॥

ಮೂಲಮ್ - 26

ನ ಕುಂಭಕರ್ಣಃ ಕಾಕುತ್ಸ್ಥಂ ದೃಷ್ಟ್ವಾ ಜೀವನ್ಗಮಿಷ್ಯತಿ ।
ದೀಪ್ಯಮಾನಮಿವಾಸಾದ್ಯ ಪತಂಗೋ ಜ್ವಲನಂ ಯಥಾ ॥

ಅನುವಾದ

ಶ್ರೀರಘುನಾಥನ ಎದುರಿಗೆ ಹೋದಾಗ ಕುಂಭಕರ್ಣನು ಮರಳಿ ಬರಲಾರನು; ಉರಿಯುವ ಬೆಂಕಿಯ ಬಳಿಗೆ ಹೋದ ಪತಂಗಗಳು ಭಸ್ಮವಾಗುವಂತೆಯೇ ಅವನೂ ಉಳಿಯಲಾರನು.॥26॥

ಮೂಲಮ್ - 27

ಪಲಾಯನೇನ ಚೋದ್ದಿಷ್ಟಾಃ ಪ್ರಾಣಾನ್ರಕ್ಷಾಮಹೇ ವಯಮ್ ।
ಏಕೇನ ಬಹವೋ ಭಗ್ನಾ ಯಶೋ ನಾಶಂ ಗಮಿಷ್ಯತಿ ॥

ಅನುವಾದ

ನಾವು ಪ್ರಖ್ಯಾತ ವೀರರಾಗಿಯೂ ಓಡಿಹೋಗಿ ಜೀವ ಉಳಿಸಿಕೊಂಡರೆ ಮತ್ತು ಹೆಚ್ಚು ಸಂಖ್ಯೆಯಲ್ಲಿದ್ದು ಓರ್ವ ಯೋಧನನ್ನು ಎದುರಿಸದಿದ್ದರೆ ನಮ್ಮ ಯಶ ಮಣ್ಣು ಪಾಲಾದೀತು.॥27॥

ಮೂಲಮ್ - 28

ಏವಂ ಬ್ರುವಾಣಂ ತಂ ಶೂರಮಂಗದಂ ಕನಕಾಂಗದಮ್ ।
ದ್ರವಮಾಣಾಸ್ತತೋ ವಾಕ್ಯಮೂಚುಃ ಶೂರವಿಗರ್ಹಿತಮ್ ॥

ಅನುವಾದ

ಸ್ವರ್ಣ ತೋಳ್ಬಂದಿ ಧರಿಸಿದ ಶೂರವೀರ ಅಂಗದನು ಹೀಗೆ ಹೇಳುತ್ತಿರುವಾಗ ಕಾರ್ಯಸಂಪನ್ನ ಯೋಧರು ಸದಾ ನಿಂದಿಸುತ್ತಿರುವ, ವಾನರರು ಓಡುತ್ತಾ ಹೀಗೆ ಉತ್ತರಿಸಿದರು.॥28॥

ಮೂಲಮ್ - 29

ಕೃತಂ ನಃ ಕದನಂ ಘೋರಂ ಕುಂಭಕರ್ಣೇನ ರಕ್ಷಸಾ ।
ನ ಸ್ಥಾನಕಾಲೋ ಗಚ್ಛಾಮೋ ದಯಿತಂ ಜೀವಿತಂ ಹಿ ನಃ ॥

ಅನುವಾದ

ವಾನರರು ಹೇಳುತ್ತಾರೆ-ರಾಕ್ಷಸ ಕುಂಭಕರ್ಣನು ನಮ್ಮನ್ನು ಘೋರವಾಗಿ ಸಂಹರಿಸುತ್ತಿದ್ದಾನೆ, ಆದ್ದರಿಂದ ಇಲ್ಲಿ ನಿಲ್ಲುವುದು ಸರಿಯಲ್ಲ. ನಾವು ಹೋಗುತ್ತಾ ಇದ್ದೇವೆ ಏಕೆಂದರೆ ನಮಗೆ ನಮ್ಮ ಪ್ರಾಣಗಳು ಪ್ರಿಯವಾಗಿವೆ.॥29॥

ಮೂಲಮ್ - 30

ಏತಾವದುಕ್ತ್ವಾವಚನಂ ಸರ್ವೇ ತೇ ಭೇಜಿರೇ ದಿಶಃ ।
ಭೀಮಂ ಭೀಮಾಕ್ಷಮಾಯಾಂತಂ ದೃಷ್ಟ್ವಾವಾನರಯೂಥಪಾಃ ॥

ಅನುವಾದ

ಇಷ್ಟು ಹೇಳಿ ಭಯಾನಕ ಕಣ್ಣುಗಳುಳ್ಳ ಭೀಷಣ ಕುಂಭಕರ್ಣನು ಬರುತ್ತಿರುವುದನ್ನು ನೋಡಿ ಎಲ್ಲ ವಾನರರು ಸೇನಾಪತಿ ಸಹಿತ ದಿಕ್ಕಾಪಾಲಾಗಿ ಪಲಾಯನ ಮಾಡಿದರು.॥30॥

ಮೂಲಮ್ - 31

ದ್ರವಮಾಣಾಸ್ತು ತೇ ವೀರಾ ಅಂಗದೇನ ವಲೀಮುಖಾಃ ।
ಸಾಂತ್ವನೈಶ್ಚಾನುಮಾನೈಶ್ಚ ತತಃ ಸರ್ವೇ ನಿವರ್ತಿತಾಃ ॥

ಅನುವಾದ

ಆಗ ಓಡುತ್ತಿರುವ ಆ ಎಲ್ಲ ವೀರ ವಾನರರನ್ನು ಅಂಗದನು ಸಾಂತ್ವನಪಡಿಸಿ, ಆದರ ಸಮ್ಮಾನದಿಂದ ಮರಳಿ ಕರೆತಂದನು.॥31॥

ಮೂಲಮ್ - 32

ಪ್ರಹರ್ಷ ಮುಪನೀತಾಶ್ಚ ವಾಲಿಪುತ್ರೇಣ ಧೀಮತಾ ।
ಆಜ್ಞಾ ಪ್ರತೀಕ್ಷಾಸ್ತಸ್ಥುಶ್ಚ ಸರ್ವೇ ವಾನರಯೂಥಪಾಃ ॥

ಅನುವಾದ

ಬುದ್ಧಿವಂತ ವಾಲಿಪುತ್ರನು ಅವರೆಲ್ಲರನ್ನು ಸಂತೋಷಪಡಿಸಿದನು. ಆಗ ಎಲ್ಲ ಸೇನಾಪತಿಗಳು ಸುಗ್ರೀವನ ಅಪ್ಪಣೆಯನ್ನು ಪ್ರತೀಕ್ಷೆ ಮಾಡುತ್ತಾ ನಿಂತುಕೊಂಡರು.॥32॥

ಮೂಲಮ್ - 33

ಋಷಭಶರಭಮೈಂದಧೂಮ್ರನೀಲಾಃ
ಕುಮುದಸುಷೇಣಗವಾಕ್ಷರಂಭತಾರಾಃ ।
ದ್ವಿವಿದಪನಸವಾಯುಪುತ್ರ ಮುಖ್ಯಾ-
ಸ್ತ್ವರಿತತರಾಭಿಮುಖಂ ರಣಂ ಪ್ರಯಾತಾಃ ॥

ಅನುವಾದ

ಅನಂತರ ಋಷಭ, ಶರಭ, ಮೈಂದ, ಧೂಮ್ರ, ನೀಲ, ಕುಮುದ, ಸುಷೇಣ, ಗವಾಕ್ಷ, ರಂಭ, ತಾರ, ದ್ವಿವಿದ, ಪನಸ, ವಾಯುಪುತ್ರ ಹನುಮಂತ ಮುಂತಾದ ಶ್ರೇಷ್ಠ ವಾನರ ವೀರರು ಕುಂಭ ಕರ್ಣನನ್ನು ಎದುರಿಸಲು ರಣಕ್ಷೇತ್ರಕ್ಕೆ ನಡೆದರು.॥33॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತಾರನೆಯ ಸರ್ಗ ಪೂರ್ಣವಾಯಿತು.॥66॥