०६४ रावण-कुम्भकर्णसंवादः

वाचनम्
ಭಾಗಸೂಚನಾ

ಮಹೋದರನು ಕುಂಭಕರ್ಣನ ಮಾತಿಗೆ ಆಕ್ಷೇಪವನ್ನೆತ್ತಿ ಯುದ್ಧ ಮಾಡದೆಯೇ ಇಷ್ಟಾರ್ಥವನ್ನು ಪಡೆಯುವ ಉಪಾಯ ತಿಳಿಸಿದುದು

ಮೂಲಮ್ - 1

ತದುಕ್ತಮತಿಕಾಯಸ್ಯ ಬಲಿನೋ ಬಾಹುಶಾಲಿನಃ ।
ಕುಂಭಕರ್ಣಸ್ಯ ವಚನಂ ಶ್ರುತ್ವೋವಾಚ ಮಹೋದರಃ ॥

ಅನುವಾದ

ಮಹಾಕಾಯನಾದ, ಮಹಾಬಾಹುವಾದ, ಬಲಿಷ್ಠ ಕುಂಭಕರ್ಣನ ಮಾತನ್ನು ಕೇಳಿ ಮಹೋದರನೆಂಬ ಮಂತ್ರಿಯು ಹೇಳಿದನು.॥1॥

ಮೂಲಮ್ - 2

ಕುಂಭಕರ್ಣ ಕುಲೇ ಜಾತೋ ಧೃಷ್ಟಃ ಪ್ರಾಕೃತದರ್ಶನಃ ।
ಅವಲಿಪ್ತೋ ನ ಶಕ್ನೋಷಿ ಕೃತ್ಯಂ ಸರ್ವತ್ರ ವೇದಿತುಮ್ ॥

ಅನುವಾದ

ಕುಂಭಕರ್ಣ! ನೀನು ಉತ್ತಮ ಕುಲದಲ್ಲಿ ಹುಟ್ಟಿದ್ದರೂ, ಧೂರ್ತನೂ, ಕ್ಷುದ್ರ ಬುದ್ಧಿಯವನೂ ಗರ್ವಿತನೂ ಆಗಿರುವೆ. ಎಲ್ಲ ವಿಷಯಗಳಲ್ಲಿ ಕರ್ತವ್ಯವನ್ನು ನೀನು ತಿಳಿಯಲಾರೆ.॥2॥

ಮೂಲಮ್ - 3

ನಹಿ ರಾಜಾ ನ ಜಾನೀತೇ ಕುಂಭಕರ್ಣ ನಯಾನಯೌ ।
ತ್ವಂ ತುಕೈಶೋರಕಾದ್ಧೃಷ್ಟಃ ಕೇವಲಂ ವಕ್ತುಮಿಚ್ಛಸಿ ॥

ಅನುವಾದ

ನಮ್ಮ ರಾಜನು ನೀತಿ-ಅನೀತಿಗಳನ್ನು ತಿಳಿಯದವನನಲ್ಲ. ನೀನು ಮಾತ್ರ ಬಾಲಿಶವಾಗಿ ಧೂರ್ತತನದ ಇಂತಹ ಮಾತುಗಳನ್ನು ಆಡುತ್ತಿರುವೆ.॥3॥

ಮೂಲಮ್ - 4

ಸ್ಥಾನಂ ವೃದ್ಧಿಂ ಚ ಹಾನಿಂ ಚ ದೇಶಕಾಲವಿಧಾನವಿತ್ ।
ಆತ್ಮನಶ್ಚ ಪರೇಷಾಂ ಚ ಬುಧ್ಯತೇ ರಾಕ್ಷಸರ್ಷಭಃ ॥

ಅನುವಾದ

ರಾಕ್ಷಸಶ್ರೇಷ್ಠ ರಾವಣನು ದೇಶ-ಕಾಲಕ್ಕನುಸಾರವಾದ ಕರ್ತವ್ಯಗಳನ್ನು ತಿಳಿದಿರುವನು. ತನ್ನ ಶತ್ರುವಿನ ಸ್ಥಾನ, ವೃದ್ಧಿ, ಕ್ಷಯವನ್ನು ಚೆನ್ನಾಗಿ ತಿಳಿಯುತ್ತಿರುವನು.॥4॥

ಮೂಲಮ್ - 5

ಯತ್ ತ್ವಶಕ್ಯಂ ಬಲವತಾ ಕರ್ತುಂ ಪ್ರಾಕೃತಬುದ್ಧಿನಾ ।
ಅನುಪಾಸಿತವೃದ್ಧೇನ ಕಃ ಕುರ್ಯಾತ್ತಾದೃಶಂ ಬುಧಃ ॥

ಅನುವಾದ

ಬಲಿಷ್ಠನಾಗಿದ್ದರೂ ವೃದ್ಧರನ್ನು ಸೇವಿಸದಿರುವ ಗ್ರಾಮ್ಯ ಬುದ್ಧಿಯವನು ಮಾಡುವ ಕಾರ್ಯವನ್ನು ವಿದ್ವಾಂಸ ನಾದವನು ಹೇಗೆ ತಾನೇ ಮಾಡಬಲ್ಲನು.॥5॥

ಮೂಲಮ್ - 6

ಯಾಂಸ್ತು ಧರ್ಮಾರ್ಥಕಾಮಾಂಸ್ತ್ವಂ ಬ್ರವೀಷಿ ಪೃಥಗಾಶ್ರಯಾನ್ ।
ಅವಬೋದ್ಧುಂ ಸ್ವಭಾವೇನ ನಹಿ ಲಕ್ಷಣಮಸ್ತಿತಾನ್ ॥

ಅನುವಾದ

ಯಾವ ಧರ್ಮಾರ್ಥಕಾಮಗಳನ್ನು ಬೇರೆ ಬೇರೆಯಾಗಿರ ಬೇಕೆಂದು ನೀನು ಹೇಳುತ್ತಿರುವೆಯೋ, ಅವನ್ನು ಯಥಾವತ್ತಾಗಿ ತಿಳಿಯುವ ಶಕ್ತಿ ನಿನ್ನಲ್ಲಿ ಇಲ್ಲವೇ ಇಲ್ಲ.॥6॥

ಮೂಲಮ್ - 7

ಕರ್ಮ ಚೈವ ಹಿ ಸರ್ವೇಷಾಂ ಕಾರಣಾನಾಂ ಪ್ರಯೋಜನಮ್ ।
ಶ್ರೇಯಃ ಪಾಪೀಯಸಾಂ ಚಾತ್ರ ಫಲಂ ಭವತಿ ಕರ್ಮಣಾಮ್ ॥

ಅನುವಾದ

ಸುಖದ ಸಾಧನಭೂತ ಧರ್ಮ, ಅರ್ಥ, ಕಾಮಗಳ ಇವೆಲ್ಲವುಗಳ ಏಕಮಾತ್ರ ಸಾಧನೆ ಕರ್ಮವೇ ಪ್ರಯೋಜನ ವಾಗಿದೆ. (ಏಕೆಂದರೆ ಕರ್ಮಾನುಷ್ಠಾನ ರಹಿತನಾದವನ ಧರ್ಮ, ಅರ್ಥ, ಕಾಮಗಳು ಸಫಲವಾಗುವುದಿಲ್ಲ.) ಹೀಗೆಯೇ ಪುರುಷ ಪ್ರಯತ್ನದಿಂದ ಸಿದ್ಧವಾಗುವ ಎಲ್ಲ ಶುಭಾಶುಭ ಕರ್ಮಗಳ ಫಲವು ಇಲ್ಲೇ ಒಬ್ಬ ಕರ್ತನಿಗೇ ಸಿಗುತ್ತದೆ. (ಹೀಗೆ ಪರಸ್ಪರ ವಿರುದ್ಧವಾಗಿದ್ದರೂ ಧರ್ಮ ಮತ್ತು ಕಾಮದ ಅನುಷ್ಠಾನ ಒಬ್ಬನೇ ಮಾಡುವುದನ್ನು ನೋಡುತ್ತೇವೆ. ಹಾಗಿರುವಾಗ ಕೇವಲ ಧರ್ಮದ ಅನುಷ್ಠಾನವೇ ಮಾಡ ಬೇಕು, ಧರ್ಮವಿರೋಧಿ ಕಾರ್ಯವಲ್ಲ ಎಂದು ನೀನು ಹೇಳಿದುದು ಹೇಗೆ ಹೊಂದಿಕೊಳ್ಳುತ್ತದೆ?॥7॥

ಮೂಲಮ್ - 8

ನಿಃಶ್ರೇಯಸ ಫಲಾವೇವ ಧರ್ಮಾರ್ಥಾವಿತರಾವಪಿ ।
ಅಧರ್ಮಾನರ್ಥಯೋಃ ಪ್ರಾಪ್ತಂ ಫಲಂ ಚ ಪ್ರತ್ಯವಾಯಿಕಮ್ ॥

ಅನುವಾದ

ನಿಷ್ಕಾಮ ಭಾವದಿಂದ ಮಾಡಿದ ಧರ್ಮವೂ (ಜಪ-ಧ್ಯಾನಾದಿಗಳು), ಅರ್ಥವೂ (ಅರ್ಥಸಾಧ್ಯವಾದ ಯಜ್ಞಯಾಗಾದಿಗಳು) ಚಿತ್ತಶುದ್ಧಿಯ ಮೂಲಕ ಮೋಕ್ಷಫಲವನ್ನೇ ಕೊಡುತ್ತವೆ. ನಿಷ್ಕಾಮಭಾವನೆ ಇಲ್ಲದೆ ಐಹಿಕ ಆಮುಷ್ಮಿಕ ಫಲಗಳ ಪ್ರಾಪ್ತಿಗಾಗಿ ಕರ್ಮಗಳನ್ನು ಮಾಡಿದರೂ ಸ್ವರ್ಗಾದಿಗಳು, ಅಭ್ಯುದಯವೂ, ಸಂಕಲ್ಪಿಸಿದ ಇತರ ಫಲಗಳೂ ಲಭಿಸುತ್ತವೆ. ಹಾಗೆಯೇ ಅಧರ್ಮ, ಅನರ್ಥ ಕಾರ್ಯಗಳನ್ನು ಮಾಡಿದರೂ ವಿಪರೀತ ಫಲವೇ ಲಭಿಸುತ್ತದೆ.॥8॥

ಮೂಲಮ್ - 9

ಐಹಲೌಕಿಕ ಪಾರಕ್ಯಂ ಕರ್ಮ ಪುಂಭಿರ್ನಿಷೇವ್ಯತೇ ।
ಕರ್ಮಾಣ್ಯಪಿ ತು ಕಲ್ಯಾನಿ ಲಭತೇ ಕಾಮಮಾಸ್ಥಿತಃ ॥

ಅನುವಾದ

ಧರ್ಮ, ಅಧರ್ಮಗಳ ಫಲಗಳು ಜೀವಿಗೆ ಇಹಲೋಕ ಮತ್ತು ಪರಲೋಕದಲ್ಲಿ ಅನುಭವಿಸಬೇಕಾಗುತ್ತವೆ. ಆದರೆ ಕಾಮನಾವಿಶೇಷದಿಂದ ಪ್ರಯತ್ನಪೂರ್ವಕ ಕರ್ಮಗಳನ್ನು ಅನುಷ್ಠಾನ ಮಾಡುವವನಿಗೆ ಇಲ್ಲಿಯೂ ಸುಖ-ಮನೋರಥಗಳು ಪ್ರಾಪ್ತಿಯಾಗುತ್ತವೆ. ಧರ್ಮಾದಿಗಳ ಫಲದಂತೆ ಅವನಿಗಾಗಿ ಕಾಲಾಂತರದಲ್ಲಿ ಅಥವಾ ಲೋಕಾಂತದ ಅಪೇಕ್ಷೆ ಇರುವುದಿಲ್ಲ. (ಹೀಗೆ ಕಾಮ, ಧರ್ಮ ಮತ್ತು ಅರ್ಥದಿಂದ ವಿಲಕ್ಷಣ ಸಿದ್ಧನಾಗುತ್ತಾನೆ.॥9॥

ಮೂಲಮ್ - 10

ತತ್ರ ಕ್ಲಪ್ತಮಿದಂ ರಾಜ್ಞಾ ಹೃದಿ ಕಾರ್ಯಂ ಮತಂ ಚ ನಃ ।
ಶತ್ರೌ ಹಿ ಸಾಹಸಂ ಯತ್ತತ್ಕಿಮಿವಾತ್ರಾಪನೀಯತೇ ॥

ಅನುವಾದ

ಇಲ್ಲಿ ರಾಜನಿಗಾಗಿ ಕಾಮರೂಪೀ ಪುರುಷಾರ್ಥದ ಸೇವನವೇ ಉಚಿತವಾಗಿದೆ.* ಹೀಗೆಯೇ ರಾಕ್ಷಸರಾಜನು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿರುವನು ಹಾಗೂ ಮಂತ್ರಿಗಳಾದ ನಮ್ಮ ಸಮ್ಮತಿಯೂ ಆಗಿದೆ. ಶತ್ರುವಿನ ಕುರಿತು ಸಾಹಸಕಾರ್ಯ ಮಾಡುವುದು ಎಂತಹ ಅನೀತಿಯಾಗಿದೆ? (ಆದ್ದರಿಂದ ಇವರು ಮಾಡಿದುದು ಉಚಿತವೇ ಆಗಿದೆ.॥10॥

ಟಿಪ್ಪನೀ
  • ಇಲ್ಲಿ ಮಹೋದರನು ರಾವಣನನ್ನು ಹೊಗಳಲೆಂದೇ ‘ಕಾಮವಾದ’ವನ್ನು ಪ್ರಶಂಸಿಸಿದ್ದಾನೆ. ಇದು ಆದರ್ಶಮತವಲ್ಲ. ವಾಸ್ತವವಾಗಿ ಧರ್ಮ, ಅರ್ಥ, ಕಾಮಗಳಲ್ಲಿ ಧರ್ಮವೇ ಪ್ರಧಾನವಾಗಿದೆ. ಆದ್ದರಿಂದ ಅವನ್ನು ಸೇವಿಸಿದರೇನೇ ಪ್ರಾಣಿ ಮಾತ್ರರ ಶ್ರೇಯಸ್ಸು ಆಗಬಲ್ಲದು.
ಮೂಲಮ್ - 11

ಏಕಸ್ಯೈವಾಭಿಯಾನೇ ತು ಹೇತುರ್ಯಃ ಪ್ರಾಹೃತಸ್ತ್ವಯಾ ।
ತತ್ರಾಪ್ಯನುಪಪನ್ನಂ ತೇ ವಕ್ಷ್ಯಾಮಿ ಯದಸಾಧು ಚ ॥

ಅನುವಾದ

ಯುದ್ಧಕ್ಕಾಗಿ ಒಬ್ಬನೇ ಹೋಗುವುದಾಗಿ ನೀನು ಮಹಾಬಲದಿಂದ ಶತ್ರುವನ್ನು ಸೋಲಿಸುವುದಾಗಿ ಮಾಡಿದ ಘೋಷಣೆ ಯಲ್ಲಿಯೂ ಇರುವ ಅಸಂಗತ ಅನುಚಿತ ಮಾತನ್ನು ನಾನು ನಿನ್ನೆದುರಿಗೆ ಇಡುತ್ತೇನೆ.॥11॥

ಮೂಲಮ್ - 12

ಯೇನ ಪೂರ್ವಂ ಜನಸ್ಥಾನೇ ಬಹವೋಽತಿಬಲಾ ಹತಾಃ ।
ರಾಕ್ಷಸಾ ರಾಘವಂ ತಂ ತ್ವಂ ಕಥಮೇಕೋ ಜಯಿಷ್ಯಸಿ ॥

ಅನುವಾದ

ಮೊದಲು ಜನ್ಮಸ್ಥಾನದಲ್ಲಿ ಅನೇಕ ಅತ್ಯಂತ ಬಲಶಾಲಿ ರಾಕ್ಷಸರನ್ನು ಕೊಂದ ಆ ರಘುವಂಶೀ ವೀರ ಶ್ರೀರಾಮನನ್ನು ನೀನೊಬ್ಬನೆ ಹೇಗೆ ಸೋಲಿಸಬಲ್ಲೆ.॥12॥

ಮೂಲಮ್ - 13

ಯೇ ಪೂರ್ವಂ ನಿರ್ಜಿತಾಸ್ತೇನ ಜನಸ್ಥಾನೇ ಮಹೌಜಸಃ ।
ರಾಕ್ಷಸಾಂಸ್ತಾನ್ಪುರೇ ಸರ್ವಾನ್ಭೀತಾನದ್ಯ ನ ಪಶ್ಯಸಿ ॥

ಅನುವಾದ

ಜನಸ್ಥಾನದಲ್ಲಿ ರಾಮನು ಹಿಂದೆ ಹೊಡೆದು ಓಡಿಸಿದ ನಿಶಾಚರರು ಇಂದೂ ಲಂಕೆಯಲ್ಲಿ ಇದ್ದಾರೆ. ಅವರ ಭಯ ಇನ್ನೂ ದೂರವಾಗಲಿಲ್ಲ. ನೀನು ಆ ರಾಕ್ಷಸರನ್ನು ನೋಡಿಲ್ಲವೇ?॥13॥

ಮೂಲಮ್ - 14

ತಂ ಸಿಂಹಮಿವ ಸಂಕ್ರುದ್ಧಂ ರಾಮಂ ದಶರಥಾತ್ಮಜಮ್ ।
ಸರ್ಪಂ ಸುಪ್ತಮಹೋಬುದ್ಧ್ವಾ ಪ್ರಬೋಧಯಿತುಮಿಚ್ಛಸಿ ॥

ಅನುವಾದ

ದಶರಥಕುಮಾರ ಶ್ರೀರಾಮನು ಅತ್ಯಂತ ಕುಪಿತವಾದ ಸಿಂಹದಂತೆ ಭಯಂಕರ ಪರಾಕ್ರಮಿಯಾಗಿದ್ದಾನೆ. ಅವನೊಡನೆ ಕಾದಾಡಲು ನೀನು ಸಾಹಸ ಮಾಡುವೆಯಾ? ಮಲಗಿರುವ ಸರ್ಪವನ್ನು ತಿಳಿದು ತಿಳಿದು ಎಚ್ಚರಗೊಳಿಸುವೆಯಾ? ನಿನ್ನ ಮೂರ್ಖತೆಯ ಕುರಿತು ಆಶ್ಚರ್ಯವಾಗುತ್ತಿದೆ.॥14॥

ಮೂಲಮ್ - 15

ಜ್ವಲಂತಂ ತೇಜಸಾ ನಿತ್ಯಂ ಕ್ರೋಧೇನ ಚ ದುರಾಸದಮ್ ।
ಕಸ್ತಂ ಮೃತ್ಯುಮಿವಾಸಹ್ಯಮಾಸಾದಯಿತುಮರ್ಹತಿ ॥

ಅನುವಾದ

ಶ್ರೀರಾಮನು ಸದಾ ತನ್ನ ತೇಜದಿಂದ ಬೆಳಗುತ್ತಿದ್ದಾನೆ. ಅವನು ಕ್ರೋಧಗೊಂಡಾಗ ಅತ್ಯಂತ ದುರ್ಜಯ ಮತ್ತು ಮೃತ್ಯುವಿನಂತೆ ಅಸಹ್ಯವಾಗುತ್ತಾನೆ. ಯಾವ ಯೋಧನು ತಾನೇ ಅವನನ್ನು ಎದುರಿಸಬಲ್ಲನು.॥15॥

ಮೂಲಮ್ - 16

ಸಂಶಯಸ್ಥಮಿದಂ ಸರ್ವಂ ಶತ್ರೋಃ ಪ್ರತಿಸಮಾಸನೇ ।
ಏಕಸ್ಯ ಗಮನಂ ತಾತ ನಹಿ ಮೇ ರೋಚತೇ ಭೃಶಮ್ ॥

ಅನುವಾದ

ನಮ್ಮ ಎಲ್ಲ ಸೈನ್ಯವು ಆ ಅಜೇಯ ಶತ್ರುವನ್ನು ಎದುರಿಸಲು ಮುಂದಾದರೆ ಅವರ ಜೀವನವೂ ಸಂಶಯದಲ್ಲಿ ಬೀಳಬಲ್ಲದು. ಆದ್ದರಿಂದ ಅಯ್ಯಾ! ಯುದ್ಧಕ್ಕಾಗಿ ನೀನೊಬ್ಬನೇ ಹೋಗುವುದು ನನಗೆ ಸರಿಬೀಳುವುದಿಲ್ಲ.॥16॥

ಮೂಲಮ್ - 17

ಹೀನಾರ್ಥಸ್ತು ಸಮೃದ್ಧಾರ್ಥಂ ಕೋ ರಿಪುಂ ಪ್ರಾಕೃತಂ ಯಥಾ ।
ನಿಶ್ಚಿತಂ ಜೀವಿತತ್ಯಾಗೇ ವಶಮಾನೇತುಮಿಚ್ಛತಿ ॥

ಅನುವಾದ

ಸಹಾಯಕರಿಂದೊಡಗೂಡಿ, ಪ್ರಾಣದ ಹಂಗುತೊರೆದು ಶತ್ರುಗಳ ಸಂಹಾರಕ್ಕಾಗಿ ನಿಶ್ಚಿತ ವಿಚಾರವುಳ್ಳ ಶತ್ರುವನ್ನು ಅತ್ಯಂತ ಸಾಧಾರಣವೆಂದು ತಿಳಿದು ಯಾವ ಅಸಹಾಯ ಯೋಧನು ವಶಪಡಿಸಲು ಇಚ್ಚಿಸಬಲ್ಲನು.॥17॥

ಮೂಲಮ್ - 18

ಯಸ್ಯ ನಾಸ್ತಿ ಮನುಷ್ಯೇಷು ಸದೃಶೋ ರಾಕ್ಷಸೋತ್ತಮ ।
ಕಥಮಾಶಂಸಸೇ ಯೋದ್ಧುಂ ತುಲ್ಯೇನೇಂದ್ರವಿವಸ್ವತೋಃ ॥

ಅನುವಾದ

ರಾಕ್ಷಸಶ್ರೇಷ್ಠನೇ! ಯಾರ ಸಮಾನವಾಗಿ ಮನುಷ್ಯರಲ್ಲಿ ಯಾರು ಇಲ್ಲವೋ, ಇಂದ್ರ, ಸೂರ್ಯನಂತೆ ತೇಜಸ್ವಿಯೋ ಆ ಶ್ರೀರಾಮನೊಡನೆ ಯುದ್ಧಮಾಡಲು ನೀನು ಹೇಗೆ ತಾನೇ ಬಯಸುವೆ.॥18॥

ಮೂಲಮ್ - 19

ಏವಮುಕ್ತ್ವಾ ತು ಸಂರಬ್ಧಂ ಕುಂಭಕರ್ಣಂ ಮಹೋದರಃ ।
ಉವಾಚ ರಕ್ಷಸಾಂ ಮಧ್ಯೇ ರಾವಣಂ ಲೋಕರಾವಣಮ್ ॥

ಅನುವಾದ

ರೋಷಾವೇಶಯುಕ್ತ ಕುಂಭಕರ್ಣನಲ್ಲಿ ಹೀಗೆ ಹೇಳಿ ಮಹೋದರನು ಸಮಸ್ತರಾಕ್ಷಸರ ನಡುವೆ ಕುಳಿತಿರುವ ಲೋಕಗಳನ್ನು ಅಳಿಸುವ ರಾವಣನಲ್ಲಿ ಹೇಳಿದನು.॥19॥

ಮೂಲಮ್ - 20

ಲಬ್ಧ್ವಾ ಪುರಸ್ತಾದ್ ವೈದೇಹೀಂ ಕಿಮರ್ಥಂ ತ್ವಂ ವಿಲಂಬಸೇ ।
ಯದೀಚ್ಛಸಿ ತದಾ ಸೀತಾ ವಶಗಾ ತೇ ಭವಿಷ್ಯತಿ ॥

ಅನುವಾದ

ಮಹಾರಾಜಾ! ನೀವು ವಿದೇಹಕುಮಾರಿಯನ್ನು ಪಡೆದಿದ್ದರೂ ಏಕೆ ವಿಳಂಬಿಸುತ್ತಿರುವೆ? ನೀನು ಬಯಸಿದಾಗ ಸೀತೆಯು ನಿನಗೆ ವಶಳಾಗುವಳು.॥20॥

ಮೂಲಮ್ - 21

ದೃಷ್ಟಃ ಕಶ್ಚಿದುಪಾಯೋ ಮೇ ಸೀತೋಪಸ್ಥಾನಕಾರಕಃ ।
ರುಚಿರಶ್ಚೇತ್ ಸ್ವಯಾ ಬುದ್ಧ್ಯಾ ರಾಕ್ಷಸೇಂದ್ರ ತತಃ ಶೃಣು ॥

ಅನುವಾದ

ರಾಕ್ಷಸರಾಜನೆ! ಸೀತೆಯು ನಿನ್ನ ಸೇವೆಯಲ್ಲಿ ಉಪಸ್ಥಿತಳಾಗುವಂತಹ ಒಂದು ಉಪಾಯ ನನಗೆ ತೋಚಿದೆ. ಅದನ್ನು ಕೇಳು. ಕೇಳಿ ನಿನ್ನ ಬುದ್ಧಿಯಿಂದ ವಿಚಾರಮಾಡಿ, ಸರಿಕಂಡರೆ ಅದನ್ನು ಉಪಯೋಗಿಸು.॥21॥

ಮೂಲಮ್ - 22

ಅಹಂ ದ್ವಿಜಿಹ್ವಃ ಸಂಹ್ರಾದೀ ಕುಂಭಕರ್ಣೋ ವಿತರ್ದನಃ ।
ಪಂಚ ರಾಮವಧಾಯೈತೇ ನಿರ್ಯಾಂತೀತ್ಯವಘೋಷಯ ॥

ಅನುವಾದ

ಮಹೋದರ, ದ್ವಿಜಿಹ್ವ, ಸಂಹ್ರಾದೀ, ಕುಂಭಕರ್ಣ ಮತ್ತು ವಿತರ್ದನ ಹೀಗೆ ಐದು ರಾಕ್ಷಸರು ರಾಮನನ್ನು ವಧಿಸಲು ಹೋಗುತ್ತಿದ್ದಾರೆ ಎಂದು ನಗರದಲ್ಲಿ ಡಂಗುರ ಹೊಡೆಸು.॥22॥

ಮೂಲಮ್ - 23

ತತೋ ಗತ್ವಾ ವಯಂ ಯುದ್ಧಂ ದಾಸ್ಯಾಮಸ್ತಸ್ಯ ಯತ್ನತಃ ।
ಜೇಷ್ಯಾಮೋ ಯದಿ ತೇ ಶತ್ರೂನ್ನೋಪಾಯೈಃ ಕಾರ್ಯಮಸ್ತಿ ನಃ ॥

ಅನುವಾದ

ನಾವು ರಣಭೂಮಿಗೆ ಹೋಗಿ ಪ್ರಯತ್ನಪೂರ್ವಕ ಶ್ರೀರಾಮನೊಂದಿಗೆ ಯುದ್ಧ ಮಾಡುವೆವು. ನಿಮ್ಮ ಶತ್ರುವನ್ನು ನಾವು ಗೆದ್ದರೆ, ನಮಗೆ ಸೀತೆಯನ್ನು ವಶಪಡಿಸಿಕೊಳ್ಳಲು ಬೇರೆ ಉಪಾಯದ ಆವಶ್ಯಕತೆ ಬೀಳಲಾರದು.॥23॥

ಮೂಲಮ್ - 24

ಅಥ ಜೀವತಿ ನಃ ಶತ್ರುರ್ವಯಂ ಚ ಕೃತಸಂಯುಗಾಃ ।
ತತಃ ಸಮಭಿಪತ್ಸ್ಯಾಮೋ ಮನಸಾ ಯತ್ಸಮೀಕ್ಷಿತಮ್ ॥

ಅನುವಾದ

ನಮ್ಮ ಶತ್ರು ಅಜೇಯನಾಗಿ ಜೀವಿಸಿ ಉಳಿದರೆ ಹಾಗೂ ನಾವೂ ಯುದ್ಧಮಾಡುತ್ತಾ ಮಾಡುತ್ತಾ ಬದುಕಿ ಉಳಿದರೆ, ನಾನು ಯೋಚಿಸಿದ ಉಪಾಯವನ್ನು ಪ್ರಯೋಗಿಸ ಬಹುದು.॥24॥

ಮೂಲಮ್ - 25

ವಯಂ ಯುದ್ಧಾದಿಹೈಷ್ಯಾಮೋ ರುಧಿರೇಣ ಸಮುಕ್ಷಿತಾಃ ।
ವಿದಾರ್ಯ ಸ್ವತನುಂ ಬಾಣೈ ರಾಮನಾಮಾಂಕಿತೈಃ ಶಿತೈಃ ॥

ಮೂಲಮ್ - 26

ಭಕ್ಷಿತೋ ರಾಘವೋಽಸ್ಮಾಭಿರ್ಲಕ್ಷ್ಮಣಶ್ಚೇತಿ ವಾದಿನಃ ।
ತತಃ ಪಾದೌ ಗ್ರಹೀಷ್ಯಾಮಸ್ತ್ವಂ ನಃ ಕಾಮಂ ಪ್ರಪೂರಯ ॥

ಅನುವಾದ

ರಾಮನಾಮಾಂಕಿತ ಬಾಣಗಳಿಂದ ನಮ್ಮ ಶರೀರ ಗಾಯಗೊಂಡು ರಕ್ತತೊಯ್ದು ಹೋಗಿ, ಯುದ್ಧಭೂಮಿ ಯಿಂದ ಮರಳಿ- ‘ನಾವು ರಾಮ-ಲಕ್ಷ್ಮಣರನ್ನು ತಿಂದು ಹಾಕಿದೆವು’ ಎಂದು ಹೇಳುವೆವು. ಆಗ ನಿಮ್ಮ ಕಾಲಿಗೆ ಬಿದ್ದು ನಾವು ಶತ್ರುಗಳನ್ನು ಕೊಂದುಹಾಕಿದೆವು. ಅದಕ್ಕಾಗಿ ನೀವು ನಮ್ಮ ಇಚ್ಛೆಪೂರ್ಣಮಾಡಿರೆಂದು ಹೇಳುವೆವ.॥25-26॥

ಮೂಲಮ್ - 27

ತತೋಽವಘೋಷಯ ಪುರೇ ಗಜಸ್ಕಂಧೇನ ಪಾರ್ಥೀವ ।
ಹತೋ ರಾಮಃ ಸಹ ಭ್ರಾತ್ರಾ ಸಸೈನ್ಯ ಇತಿ ಸರ್ವತಃ ॥

ಅನುವಾದ

ಪೃಥಿವೀಪತೇ! ಆಗ ನೀವು ಆನೆಯ ಬೆನ್ನಮೇಲೆ ಯಾರನ್ನಾದರೂ ಕುಳ್ಳಿರಿಸಿ - ‘ಸಹೋದರ ಮತ್ತು ಸೈನ್ಯಸಹಿತ ರಾಮನು ಹತನಾದನು’ ಎಂಬ ಡಂಗುರ ಸಾರಿಸಿ ಬಿಡಿ.॥27॥

ಮೂಲಮ್ - 28

ಪ್ರೀತೋನಾಮ ತತೋ ಭೂತ್ವಾ ಭೃತ್ಯಾನ್ಯಾಂ ತ್ವಮರಿಂದಮ ।
ಭೋಗಾಂಶ್ಚ ಪರಿವಾರಾಂಶ್ಚ ಕಾಮಾನ್ ವಸುಚ ದಾಪಯ ॥

ಮೂಲಮ್ - 29

ತತೋ ಮಾಲ್ಯಾನಿ ವಾಸಾಂಸಿ ವೀರಾಣಾಮನುಲೇಪನಮ್ ।
ಪೇಯಂ ಚ ಬಹು ಯೋಧೇಭ್ಯಃ ಸ್ವಯಂ ಚ ಮುದಿತಃ ಪಿಬ ॥

ಅನುವಾದ

ಶತ್ರುದಮನ! ಇಷ್ಟೇ ಅಲ್ಲ, ನೀವು ಪ್ರಸನ್ನರಾಗಿ ತಮ್ಮ ವೀರ ಸೇವಕರಿಗೆ ಅವರು ಬಯಸಿದ ವಸ್ತುಗಳನ್ನು ವಿಧವಿಧದ ಭೋಗಸಾಮಗ್ರಿಗಳನ್ನು, ದಾಸ-ದಾಸೀ, ಧನ-ರತ್ನ, ಆಭೂಷಣ, ವಸ್ತ್ರ, ಅನುಲೇಪನ ಕೊಡಿಸಿರಿ. ಇತರ ಯೋಧರಿಗೂ ಅನೇಕ ಉಡುಗೊರೆ ಕೊಟ್ಟು, ನೀವು ಸ್ವತಃ ಮದ್ಯಪಾನ ಮಾಡಿ ಸಂತೋಷವನ್ನು ಆಚರಿಸಿರಿ.॥28-29॥

ಮೂಲಮ್ - 30

ತತೋಽಸ್ಮಿನ್ ಬಹುಲೀಭೂತೇ ಕೌಲೀನೇ ಸರ್ವತೋ ಗತೇ ।
ಭಕ್ಷಿತಃ ಸಸುಹೃದ್ರಾಮೋ ರಾಕ್ಷಸೈರಿತಿ ವಿಶ್ರುತೇ ॥

ಮೂಲಮ್ - 31

ಪ್ರವಿಶ್ಯಾಶ್ವಾಸ್ಯ ಚಾಪಿ ತ್ವಂ ಸೀತಾಂ ರಹಸಿ ಸಾಂತ್ವಯನ್ ।
ಧನಧಾನ್ಯೈಶ್ಚ ಕಾಮೈಶ್ಚ ರತ್ನೈಶ್ಚೈನಾಂ ಪ್ರಲೋಭಯ ॥

ಅನುವಾದ

ಅನಂತರ ರಾಮನು ತನ್ನ ಸುಹೃದರೊಂದಿಗೆ ರಾಕ್ಷಸರಿಗೆ ಆಹಾರವಾದನು ಎಂಬ ವದಂತಿ ಎಲ್ಲೆಡೆ ಹಬ್ಬಿ, ಸೀತೆಯ ಕಿವಿಗೂ ಈ ಸುದ್ದಿ ಮುಟ್ಟಿದಾಗ, ಸೀತೆಯನ್ನು ಸಮಜಾಯಿಸಲು ನೀವು ಏಕಾಂತದಲ್ಲಿ ಅವಳ ಬಳಿಗೆ ಹೋಗಿ ಬಗೆ ಬಗೆಯಾಗಿ ಧೈರ್ಯಹೇಳಿ, ಆಕೆಗೆ ಧನ-ಧಾನ್ಯ, ನಾನಾರೀತಿಯ ಭೋಗಗಳನ್ನು ಮತ್ತು ರತ್ನಗಳ ಪ್ರಲೋಭನೆ ಯನ್ನು ಉಂಟುಮಾಡಿರಿ.॥30-31॥

ಮೂಲಮ್ - 32

ಅನಯೋಪಧಯಾ ರಾಜನ್ ಭೂಯಃ ಶೋಕಾನುಬಂಧಯಾ ।
ಆಕಾಮಾ ತ್ವದ್ವಶಂ ಸೀತಾ ನಷ್ಟನಾಥಾ ಗಮಿಷ್ಯತಿ ॥

ಅನುವಾದ

ರಾಜನೇ! ಹೀಗೆ ವಂಚಿಸುವುದರಿಂದ ಪತಿಯನ್ನು ಕಳೆದುಕೊಂಡ ಅನಾಥಳಾದ ಸೀತೆಯ ಶೋಕಹೆಚ್ಚಿ, ಅವಳು ಇಚ್ಛೆ ಇಲ್ಲದಿದ್ದರೂ ನಿನಗೆ ಅಧೀನಳಾಗುವಳು.॥32॥

ಮೂಲಮ್ - 33

ರಮಣೀಯಂ ಹಿ ಭರ್ತಾರಂ ವಿನಷ್ಟಮಧಿಗಮ್ಯ ಸಾ ।
ನೈರಾಶ್ಯಾತ್ ಸ್ತ್ರೀಲಘುತ್ವಾಚ್ಚ ತ್ವದ್ವಶಂ ಪ್ರತಿಪತ್ಸ್ಯತೇ ॥

ಅನುವಾದ

ರಮಣಿಯ ತನ್ನ ಪತಿಯ ವಿನಾಶವನ್ನು ತಿಳಿದು ಆಕೆಯು ನಿರಾಶಳಾಗಿ ಸೀಸಹಜ ಚಪಲತೆಯಿಂದ ನಿನ್ನ ವಶಳಾಗುವಳು.॥33॥

ಮೂಲಮ್ - 34

ಸಾ ಪುರಾ ಸುಖಸಂವೃದ್ಧಾ ಸುಖಾರ್ಹಾ ದುಃಖಕರ್ಶಿತಾ ।
ತ್ವಯ್ಯಧೀನಂ ಸುಖಂ ಜ್ಞಾತ್ವಾಸರ್ವಥೈವ ಗಮಿಷ್ಯತಿ ॥

ಅನುವಾದ

ಅವಳು ಮೊದಲು ಸುಖದಲ್ಲಿ ಬೆಳೆದವಳು, ಸುಖ- ಭೋಗಕ್ಕೆ ಯೋಗ್ಯಳಾಗಿದ್ದು, ಈ ದಿನಗಳಲ್ಲಿ ದುಃಖದಿಂದ ದುರ್ಬಲಳಾಗಿದ್ದಾಳೆ. ಇಂತಹ ಸ್ಥಿತಿಯಲ್ಲಿ ಇನ್ನು ನಿಮ್ಮ ಅಧೀನದಲ್ಲೇ ತನ್ನ ಸುಖವೆಂದು ತಿಳಿದು ನಿಮ್ಮ ಸೇವೆಗೆ ಅನುವಾಗುವಳು.॥34॥

ಮೂಲಮ್ - 35

ಏತತ್ ಸುನೀತಂ ಮಮ ದರ್ಶನೇನ
ರಾಮಂ ಹಿ ದೃಷ್ಟೈವ ಭವೇದನರ್ಥಃ ।
ಇಹೈವ ತೇ ಸೇತ್ಸ್ಯತಿ ಮೋತ್ಸುಕೋ ಭೂ-
ರ್ಮಹಾನಯುದ್ಧೇನ ಸುಖಸ್ಯ ಲಾಭಃ ॥

ಅನುವಾದ

ನನ್ನ ದೃಷ್ಟಿಯಲ್ಲಿ ಇದೆ ಎಲ್ಲಕ್ಕಿಂತ ಸುಂದರ ನೀತಿಯಾಗಿದೆ. ಯುದ್ಧದಲ್ಲಿ ಶ್ರೀರಾಮನ ದರ್ಶನವಾಗುತ್ತಲೇ ನಿಮಗೆ ಮೃತ್ಯುಪ್ರಾಪ್ತವಾಗಬಲ್ಲದು; ಆದ್ದದರಿಂದ ಯುದ್ಧಕ್ಕೆ ಹೋಗಲು ಉತ್ಸುಕರಾಗಬೇಡಿ. ಇಲ್ಲೇ ನಿಮ್ಮ ಅಭೀಷ್ಟದ ಸಿದ್ಧಿಯಾಗುವುದು. ಯುದ್ಧವಿಲ್ಲದೆಯೇ ನಿಮಗೆ ಮಹಾಸುಖದ ಲಾಭವಾಗುವುದು.॥35॥

ಮೂಲಮ್ - 36

ಅನಷ್ಟ ಸೈನ್ಯೋ ಹ್ಯನವಾಪ್ತ ಸಂಶಯೋ
ರಿಪುಂತ್ವಯುದ್ಧೇನ ಜಯನ್ ಜನಾಧಿಪಃ ।
ಯಶಶ್ಚ ಪುಣ್ಯಂ ಚ ಮಹಾನ್ಮಹೀಪತೇ
ಶ್ರಿಯಂ ಚ ಕೀರ್ತಿಂ ಚ ಚಿರಂ ಸಮಶ್ನುತೇ ॥

ಅನುವಾದ

ಮಹಾರಾಜಾ! ಯುದ್ಧವಿಲ್ಲದೆಯೇ ಶತ್ರುವನ್ನು ಗೆಲ್ಲುವ ರಾಜನ ಸೈನ್ಯನಾಶವಾಗುವುದಿಲ್ಲ. ಅವನ ಜೀವನ ಸಂಶಯದಲ್ಲಿಯೂ ಬೀಳುವುದಿಲ್ಲ. ಅವನು ಪವಿತ್ರ ಮಹಾಯಶವನ್ನು ಪಡೆದು ದೀರ್ಘಕಾಲ ಲಕ್ಷ್ಮೀ ಮತ್ತು ಉತ್ತಮ ಕೀರ್ತಿಯನ್ನು ಅನುಭವಿಸುತ್ತಾನೆ.॥36॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥64॥