०६३ कुम्भकर्णेन रावणाश्वासनम्

वाचनम्
ಭಾಗಸೂಚನಾ

ರಾವಣನ ಕುತ್ಸಿತ ಕಾರ್ಯಕ್ಕಾಗಿ ಕುಂಭಕರ್ಣನ ನಿಂದನೆ, ಆದರೂ ಯುದ್ಧದ ವಿಷಯದಲ್ಲಿ ಪ್ರೋತ್ಸಾಹಿಸಿದುದು

ಮೂಲಮ್ - 1

ತಸ್ಯ ರಾಕ್ಷಸರಾಜಸ್ಯ ನಿಶಮ್ಯ ಪರಿದೇವಿತಮ್ ।
ಕುಂಭಕರ್ಣೋ ಬಭಾಷೇದಂ ವಚನಂ ಪ್ರಜಹಾಸ ಚ ॥

ಅನುವಾದ

ರಾಕ್ಷಸರಾಜನಾದ ರಾವಣನ ಈ ವಿಲಾಪವನ್ನು ಕೇಳಿ ಕುಂಭಕರ್ಣನು ಗಹಗಹಿಸಿ ನಗುತ್ತಾ ಹೇಳಿದನು .॥1॥

ಮೂಲಮ್ - 2

ದೃಷ್ಟೋ ದೋಷೋ ಹಿ ಯೋಽಸ್ಮಾಭಿಃ ಪುರಾ ಮಂತ್ರವಿನಿರ್ಣಯೇ ।
ಹಿತೇಷ್ವನಭಿರಕ್ತೇನ ಸೋಽಯಮಾಸಾದಿತಸ್ತ್ವಯಾ ॥

ಅನುವಾದ

ಅಣ್ಣಾ! ಮೊದಲು ವಿಭೀಷಣಾದಿಗಳ ಜೊತೆಗೆ ಮಂತ್ರಾಲೋಚನೆ ಮಾಡುವಾಗ ನಾವು ನೋಡಿದ ದೋಷವೇ ಈಗ ನಿನಗೆ ಪ್ರಾಪ್ತವಾಗದೆ. ಏಕೆಂದರೆ ನೀನು ಹಿತೈಷಿಗಳ ಮಾತಿನಲ್ಲಿ ವಿಶ್ವಾಸವಿಡುವುದಿಲ್ಲ.॥2॥

ಮೂಲಮ್ - 3

ಶೀಘ್ರಂ ಖಲ್ವಭ್ಯುಪೇತಂ ತ್ವಾಂ ಫಲಂ ಪಾಪಸ್ಯಕರ್ಮಣಃ ।
ನಿರಯೇಷ್ವೇನ ಪತನಂ ಯಥಾ ದುಷ್ಕೃತಕರ್ಮಣಃ ॥

ಅನುವಾದ

ನಿನಗೆ ಬೇಗನೇ ತನ್ನ ಪಾಪ ಕರ್ಮದ ಫಲ ದೊರಕಿದೆ. ಕೆಟ್ಟ ಕಾರ್ಯಮಾಡುವವನು ನರಕದಲ್ಲಿ ಬೀಳುವುದು ನಿಶ್ಚಿತವಿರುವಂತೆ ನಿನಗೂ ಕೂಡ ತನ್ನ ದುಷ್ಕರ್ಮದ ಫಲ ಸಿಗುವುದು ಖಂಡಿತ.॥3॥

ಮೂಲಮ್ - 4

ಪ್ರಥಮಂ ವೈ ಮಹಾರಾಜ ಕೃತ್ಯಮೇತದಚಿಂತಿತಮ್ ।
ಕೇವಲಂ ವೀರ್ಯ ದರ್ಪೇಣನಾನುಬಂಧೋ ವಿಚಾರಿತಃ ॥

ಅನುವಾದ

ಮಹಾರಾಜಾ! ಕೇವಲ ಬಲಗರ್ವದಿಂದ ನೀನು ಈ ಪಾಪಕರ್ಮದ ಪರಿವೆ ಮಾಡಲಿಲ್ಲ. ಇದರ ಪರಿಣಾಮವನ್ನು ಯೋಚಿಸಿಯೇ ಇಲ್ಲ.॥4॥

ಮೂಲಮ್ - 5

ಯಃ ಪಶ್ಚಾತ್ಪೂರ್ವಕಾರ್ಯಾಣಿ ಕುರ್ಯಾದೈಶ್ವರ್ಯಮಾಸ್ಥಿತಃ ।
ಪೂರ್ವಂ ಚೋತ್ತರಕಾರ್ಯಾಣಿ ನ ಸ ವೇದ ನಯಾನಯೌ ॥

ಅನುವಾದ

ಐಶ್ವರ್ಯದ ಅಭಿಮಾನದಿಂದ ಮೊದಲು ಮಾಡಬೇಕಾದ ಕಾರ್ಯವನ್ನು ಕಡೆಗೂ, ಕಡೆಗೆ ಮಾಡಬೇಕಾದ ಕಾರ್ಯವನ್ನು ಮೊದಲಿಗೆ ಮಾಡುವವನು ನೀತಿ-ಅನೀತಿಗಳನ್ನು ತಿಳಿಯುವುದಿಲ್ಲ.॥5॥

ಮೂಲಮ್ - 6

ದೇಶಕಾಲ ವಿಹೀನಾನಿ ಕರ್ಮಾಣಿ ವಿಪರೀತವತ್ ।
ಕ್ರಿಯಮಾಣಾನಿ ದುಷ್ಯಂತಿ ಹವೀಂಷ್ಯ ಪ್ರಯತೇಷ್ವಿವ ॥

ಅನುವಾದ

ಯಾವ ಕಾರ್ಯವು ಉಚಿತವಾದ ದೇಶ-ಕಾಲವಿಲ್ಲದಿದ್ದರೂ ವಿಪರೀತ ಸ್ಥಿತಿಯಲ್ಲಿ ಮಾಡಲಾಗುವುದೋ, ಅದು ಸಂಸ್ಕಾರಹೀನ ಅಗ್ನಿಯಲ್ಲಿ ಹೋಮಿಸಿದ ಹವಿಸ್ಸಿನಂತೆ ನಿಷ್ಫಲವಾಗಿ ಕೇವಲ ದುಃಖಕ್ಕೆ ಕಾರಣವಾಗುತ್ತದೆ.॥6॥

ಮೂಲಮ್ - 7

ತ್ರಯಾಣಾಂ ಪಂಚಧಾ ಯೋಗಂ ಕರ್ಮಣಾಂ ಯಃ ಪ್ರಪದ್ಯತೇ ।
ಸಚಿವೈಃ ಸಮಯಂ ಕೃತ್ವಾ ಸ ಸಮ್ಯಗ್ ವರ್ತತೇ ಪಥಿ ॥

ಅನುವಾದ

ಯಾವ ರಾಜನು ಸಚಿವರೊಂದಿಗೆ ವಿಚಾರ ಮಾಡಿ ಕ್ಷಯ, ವೃದ್ಧಿ ಮತ್ತು ಸ್ಥಾನರೂಪದಿಂದ ಉಪಲಕ್ಷಿತನಾದ ಸಾಮ, ದಾನ, ದಂಡ ಈ ಮೂರು ಕರ್ಮಗಳ ಐದು1 ರೀತಿಯಿಂದ ಪ್ರಯೋಗದಲ್ಲಿ ತರುವನೋ, ಅವನೇ ಉತ್ತಮ ನೀತಿ ಮಾರ್ಗದಲ್ಲಿ ಇದ್ದಾನೆ ಎಂದು ತಿಳಿಯಬೇಕು.॥7॥

ಟಿಪ್ಪನೀ
  1. ಕಾರ್ಯವನ್ನು ಪ್ರಾರಂಭಿಸಲು- ಉಪಾಯ, ಪುರುಷ ಮತ್ತು ಸಂಪತ್ತು, ದೇಶಕಾಲದ ವಿಭಾಗ, ವಿಪತ್ತನ್ನು ತಪ್ಪಿಸುವ ಉಪಾಯ ಮತ್ತು ಕಾರ್ಯದ ಸಿದ್ಧಿ ಈ ಐದು ಪ್ರಕಾರದ ಸಾಧನಗಳಿವೆ.
ಮೂಲಮ್ - 8

ಯಥಾಗಮಂ ಚ ಯೋ ರಾಜಾ ಸಮಯಂ ಚ ವಿಕೀರ್ಷತಿ ।
ಬುಧ್ಯತೇ ಸಚಿವೈರ್ಬುದ್ಧ್ಯಾಸುಹೃದಶ್ಚಾನುಪಶ್ಯತಿ ॥

ಅನುವಾದ

ಯಾವ ಅರಸನು ನೀತಿಶಾಸ್ತ್ರಕ್ಕನುಸಾರ ಮಂತ್ರಿಗಳೊಂದಗೆ ಕ್ಷಯಾ2ದಿಗಳ ಕುರಿತು ಉಪಯುಕ್ತ ಸಮಯದ ವಿಚಾರ ಮಾಡಿ ಅದರಂತೆ ಕಾರ್ಯಮಾಡುವನೋ, ತನ್ನ ಬುದ್ಧಿಯಿಂದ ಸಹೃದರನ್ನು ಗುರುತಿಸುತ್ತಾನೋ, ಅವನೇ ಕರ್ತವ್ಯ-ಅಕರ್ತವ್ಯವನ್ನು ತಿಳಿಯಬಲ್ಲನು.॥8॥

ಟಿಪ್ಪನೀ
  1. ತನ್ನ ವೃದ್ಧಿ ಮತ್ತು ಶತ್ರುವಿನ ಹಾನಿಯ ಸಮಯ ಇದ್ದಾಗ ದಂಡೋಪಯೋಗಿ ಯಾನ (ಯುದ್ಧಯಾತ್ರೆ) ಉಚಿತವಾಗಿದೆ. ತನ್ನ ಮತ್ತು ಶತ್ರುವಿನ ಸ್ಥಿತಿ ಸಮಾನವಾಗಿದ್ದರೆ ಸಾಮದಿಂದ ಸಂಧಿ ಮಾಡಿಕೊಳ್ಳುವುದು ಉಚಿತವಾಗಿದೆ. ತನ್ನ ಹಾನಿ ಮತ್ತು ಶತ್ರುವಿನ ವೃದ್ಧಿಯ ಸಮಯ ಇದ್ದರೆ ಆಗ ಅವನಿಗೆ ಏನಾದರೂ ಕೊಟ್ಟು ಅವನ ಆಶ್ರಯ ಪಡೆಯುವುದು ಉಚಿತವಾಗಿದೆ.
ಮೂಲಮ್ - 9

ಧರ್ಮಮರ್ಥಂ ಹಿ ಕಾಮಂ ವಾ ಸರ್ವಾನ್ವಾ ರಕ್ಷಸಾಂ ಪತೇ ।
ಭಜೇತ ಪುರುಷಃ ಕಾಲೇ ತ್ರೀಣಿ ದ್ವಂದ್ವಾನಿ ವಾ ಪುನಃ ॥

ಅನುವಾದ

ರಾಕ್ಷಸರಾಜನೇ! ನೀತಿಜ್ಞ ಪುರುಷನು ಧರ್ಮಾ, ಅರ್ಥ, ಕಾಮ ಅಥವಾ ಎಲ್ಲವನ್ನೂ ಸಮಯಕ್ಕನುಸಾರ ಸೇವಿಸಬೇಕು. ಇಲ್ಲವೇ ಮೂರು ದ್ವಂದ್ವಗಳನ್ನು-ಧರ್ಮ-ಅಧರ್ಮ, ಅರ್ಥ-ಧರ್ಮ ಮತ್ತು ಕಾಮ-ಅರ್ಥ ಇವೆಲ್ಲವನ್ನು ಉಪಯುಕ್ತ ಸಮಯದಲ್ಲೇ ಸೇವಿಸಬೇಕು..॥9॥

ಟಿಪ್ಪನೀ
  1. ಶಾಸ್ತ್ರಕ್ಕನುಸಾರ ಪ್ರಾತಃಕಾಲ ಧರ್ಮವನ್ನು, ಮಧ್ಯಾಹ್ನಕಾಲದಲ್ಲಿ ಅರ್ಥವನ್ನು ಮತ್ತು ರಾತ್ರಿಯಲ್ಲಿ ಕಾಮಸೇನೆಯ ವಿಧಾನವಿದೆ. ಆದ್ದರಿಂದ ಆಯಾಯಾ ಕಾಲದಲ್ಲೇ ಧರ್ಮಾದಿಗಳನ್ನು ಸೇವಿಸಬೇಕು. ಅಥವಾ ಪ್ರಾತಃಕಾಲದಲ್ಲಿ ಧರ್ಮ-ಅರ್ಥರೂಪೀ ದ್ವಂದ್ವವನ್ನು, ಮಧ್ಯಾಹ್ನದಲ್ಲಿ ಅರ್ಥ-ಧರ್ಮವನ್ನು ಮತ್ತು ರಾತ್ರಿಯಲ್ಲಿ ಕಾಮ-ಅರ್ಥಗಳನ್ನು ಸೇವಿಸಬೇಕು. ಎಲ್ಲ ಹೊತ್ತಿನಲ್ಲಿಯೂ ಕಾಮಸೇವನೆ ಮಾಡುವವನು ಅಧಮನಾಗಿದ್ದಾನೆ.
ಮೂಲಮ್ - 10

ತ್ರಿಷು ಚೈತೇಷು ಯಚ್ಛ್ರೇಷ್ಠಂ ಶ್ರುತ್ವಾ ತನ್ನಾವಬುಧ್ಯತೇ ।
ರಾಜಾ ವಾ ರಾಜಪುತ್ರೋ ವಾ ವ್ಯರ್ಥಂ ತಸ್ಯ ಬಹುಶ್ರುತಮ್ ॥

ಅನುವಾದ

ಧರ್ಮ, ಅರ್ಥ ಮತ್ತು ಕಾಮ ಈ ಮೂರರಲ್ಲಿ ಧರ್ಮವೇ ಶ್ರೇಷ್ಠವಾಗಿದೆ. ಆದ್ದರಿಂದ ವಿಶೇಷ ಸಂದರ್ಭಗಳಲ್ಲಿ ಅರ್ಥ ಮತ್ತು ಕಾಮವನ್ನು ಉಪೇಕ್ಷೆ ಮಾಡಿ ಧರ್ಮವನ್ನೇ ಸೇವನ ಮಾಡಬೇಕು. ಇದನ್ನು ವಿಶ್ವಾಸಕ್ಕೆ ಯೋಗ್ಯರಾದವರಿಂದ ಕೇಳಿಯೂ ಯಾವ ರಾಜನು ಅಥವಾ ರಾಜಪುರುಷನು ತಿಳಿದುಕೊಳ್ಳುವುದಿಲ್ಲವೋ, ಅಥವಾ ತಿಳಿದರೂ ಸ್ವೀಕಾರ ಮಾಡುವುದಿಲ್ಲವೋ ಅವನು ಮಾಡಿದ ಅನೇಕ ಶಾಸ್ತ್ರಗಳ ಅಧ್ಯಯನ ವ್ಯರ್ಥವಾಗಿದೆ.॥1.॥

ಮೂಲಮ್ - 11

ಉಪಪ್ರದಾನಂ ಸಾಂತ್ವಂ ಚ ಭೇದಂ ಕಾಲೇ ಚ ವಿಕ್ರಮಮ್ ।
ಯೋಗಂ ಚ ರಕ್ಷಸಾಂ ಶ್ರೇಷ್ಠ ತಾವುಭೌ ಚ ನಯಾನಯೌ ॥

ಮೂಲಮ್ - 12

ಕಾಲೇ ಧರ್ಮಾರ್ಥ ಕಾಮಾನ್ಯಃ ಸಮ್ಮಂತ್ರ್ಯ ಸಚಿವೈಃ ಸಹ ।
ನಿಷೇವೇತಾತ್ಮವಾನ್ಲ್ಲೋಕೇ ನ ಸ ವ್ಯಸನಮಾಪ್ನುಯಾತ್ ॥

ಅನುವಾದ

ರಾಕ್ಷಸಶ್ರೇಷ್ಠನೇ ! ಯಾವ ರಾಜನು ಮಂತ್ರಿಗಳಿಂದ ಚೆನ್ನಾದ ಸಲಹೆ ಪಡೆದು ಸಮಯಾನುಸಾರ ದಾನ, ಭೇದ ಮತ್ತು ಪರಾಕ್ರಮಗಳನ್ನು ಹಿಂದೆ ಹೇಳಿದ ಐದು ಪ್ರಕಾರದ ಯೋಗಗಳನ್ನು ಆಚರಣೆಯಲ್ಲಿ ಇರಿಸುವನೋ, ನೀತಿ-ಅನೀತಿ ತಿಳಿದು ಆಯಾ ಕಾಲಗಳಲ್ಲಿ ಧರ್ಮ, ಅರ್ಥ ಕಾಮಗಳನ್ನು ಸೇವಿಸುವನೋ, ಅವನು ಈ ಲೋಕದಲ್ಲಿ ಎಂದಿಗೂ ದುಃಖ ಅಥವಾ ವಿಪತ್ತಿಗೆ ಭಾಗಿಯಾಗುವುದಿಲ್ಲ.॥11-12॥

ಮೂಲಮ್ - 13

ಹಿತಾನುಬಂಧ ಮಾಲೋಕ್ಯಕುರ್ಯಾತ್ಕಾರ್ಯಮಿಹಾತ್ಮನಃ ।
ರಾಜಾ ಸಹಾರ್ಥತತ್ತ್ವಜ್ಞೈಃ ಸಚಿವೈರ್ಬುದ್ಧಿಜೀವಿಭಿಃ ॥

ಅನುವಾದ

ರಾಜನು ಅರ್ಥತತ್ತ್ವಜ್ಞ ಹಾಗೂ ಬುದ್ಧಿಜೀವಿಗಳಾದ ಮಂತ್ರಿಗಳಿಂದ ಸಲಹೆ ಪಡೆದು, ತನಗೆ ಪರಿಣಾಮದಲ್ಲಿ ಹಿತಕರವಾಗಿ ಕಾಣುವ ಕಾರ್ಯವನ್ನೇ ಮಾಡಬೇಕು.॥13॥

ಮೂಲಮ್ - 14

ಅನಭಿಜ್ಞಾಯ ಶಾಸ್ತ್ರಾರ್ಥಾನ್ಪುರುಷಾಃ ಪಶುಬುದ್ಧಯಃ ।
ಪ್ರಾಗಲ್ಬ್ಯಾದ್ವಕ್ತು ಮಿಚ್ಛಂತಿ ಮಂತ್ರಿಷ್ವಭ್ಯಂತರೀಕೃತಾಃ ॥

ಅನುವಾದ

ಪಶುವಿನಂತೆ ಬುದ್ಧಿಯುಳ್ಳ, ಪುರುಷರು ಶಾಸ್ತ್ರಾರ್ಥವನ್ನು ಸರಿಯಾಗಿ ತಿಳಿಯದೆ ಮಂತ್ರಾಲೋಚನೆ ಯಲ್ಲಿ ದಿಟ್ಟತನದಿಂದ ಬೇಕಾದ ಹಾಗೆ ಮಾತನಾಡುತ್ತಾರೆ.॥14॥

ಮೂಲಮ್ - 15

ಅಶಾಸ್ತ್ರವಿದುಷಾಂ ತೇಷಾಂ ನ ಕಾರ್ಯಂ ನಾಭಿಹಿತಂ ವಚಃ ।
ಅರ್ಥಶಾಸ್ತ್ರಾನಭಿಜ್ಞಾನಾಂ ವಿಪುಲಾಂ ಶ್ರಿಯಮಿಚ್ಛತಾಮ್ ॥

ಅನುವಾದ

ಶಾಸ್ತ್ರಜ್ಞಾನಶೂನ್ಯರಾದ, ಅರ್ಥಶಾಸ್ತ್ರವನ್ನು ತಿಳಿಯದ, ಹೇರಳ ಸಂಪತ್ತನ್ನು ಬಯಸುವ ಅಯೋಗ್ಯಮಂತ್ರಿಗಳು ಹೇಳಿದ ಮಾತನ್ನು ಎಂದೂ ಕೇಳಬಾರದು.॥15॥

ಮೂಲಮ್ - 16

ಅಹಿತಂ ಚ ಹಿತಾಕಾರಂ ಧಾರ್ಷಾಜ್ಜಲ್ಪಂತಿಯೇ ನರಾಃ ।
ಅವಶ್ಯಂ ಮಂತ್ರಬಾಹ್ಯಾಸ್ತೇ ಕರ್ತವ್ಯಾಃ ಕೃತ್ಯದೂಷತಾಃ ॥

ಅನುವಾದ

ಯಾರು ನಾಚಿಕೆಯಿಲ್ಲದೆ ಅಹಿತವಾದುದನ್ನೇ ಹಿತವೆಂದೂ ಹೇಳುವವರು ನಿಶ್ಚಯವಾಗಿ ಸಲಹೆ ಕೊಡಲು ಯೋಗ್ಯರಲ್ಲ. ಆದ್ದರಿಂದ ಅವರನ್ನು ಈ ರಾಜಕಾರ್ಯದಿಂದ ದೂರವಿಡಬೇಕು. ಅವರಿಂದ ಕಾರ್ಯಹಾನಿಯೇ ಆಗುವುದು.॥16॥

ಮೂಲಮ್ - 17

ವಿನಾಶಯಂತೋ ಭರ್ತಾರಂ ಸಹಿತಾಃ ಶತ್ರುಭಿರ್ಬುಧೈಃ ।
ವಿಪರೀತಾನಿ ಕೃತ್ಯಾನಿ ಕಾರಯಂತೀಹ ಮಂತ್ರಿಣಃ ॥

ಅನುವಾದ

ಕೆಲವು ಕೆಟ್ಟಮಂತ್ರಿಗಳು ಸಾಮ-ದಾನಾದಿ ಉಪಾಯಗಳನ್ನು ತಿಳಿದ ಶತ್ರುಗಳೊಂದಿಗೆ ಸೇರಿ, ತನ್ನ ಒಡೆಯನ ವಿನಾಶಮಾಡಲೆಂದೇ ಅವನಿಂದ ವಿಪರೀತವಾದ ಕಾರ್ಯಗಳನ್ನು ಮಾಡಿಸುತ್ತಾರೆ.॥17॥

ಮೂಲಮ್ - 18

ತಾನ್ಭರ್ತಾ ಮಿತ್ರಸಂಕಾಶಾನಮಿನ್ ಮಂತ್ರನಿರ್ಣಯೇ ।
ವ್ಯವಹಾರೇಣ ಜಾನೀಯಾತ್ ಸಚಿವಾನುಪಸಂಹಿತಾನ್ ॥

ಅನುವಾದ

ಯಾವುದೇ ವಸ್ತುವಿನ ಅಥವಾ ಕಾರ್ಯದ ನಿಶ್ಚಯಕ್ಕಾಗಿ ಮಂತ್ರಿಗಳ ಸಲಹೆ ಪಡೆಯುವಾಗ ರಾಜನು ವ್ಯಾವಹಾರಿಕವಾಗಿಯೋ, ಅವನು ಲಂಚ ಪಡೆದು ಶತ್ರುಗಳೊಂದಿಗೆ ಸೇರಿದ್ದಾನೋ, ರಾಜನ ಮಿತ್ರನಂತೆ ಇದ್ದು ವಾಸ್ತವವಾಗಿ ಶತ್ರುವಿನ ಕೆಲಸ ಮಾಡುತ್ತಿರುವನೋ ಎಂದು ತಿಳಿದುಕೊಳ್ಳಬೇಕು.॥18॥

ಮೂಲಮ್ - 19

ಚಪಲಸ್ಯೇಹ ಕೃತ್ಯಾನಿ ಸಹಸಾನುಪ್ರಧಾವತಃ ।
ಛಿದ್ರಮನ್ಯೇ ಪ್ರಪದ್ಯಂತೇ ಕ್ರೌಂಚಸ್ಯ ಖಮಿವ ದ್ವಿಜಾಃ ॥

ಅನುವಾದ

ಚಂಚಲ ಚಿತ್ತನಾದ ರಾಜನು ಬಣ್ಣದ ಮಾತನ್ನು ಕೇಳಿ ಸಂತುಷ್ಟನಾಗುವನೋ, ಯಾವುದೇ ವಿಚಾರ ಮಾಡದೆ ಒಮ್ಮೆಗೆ ಯಾವುದಾದರೂ ಕಾರ್ಯಕ್ಕಾಗಿ ಓಡುವನೋ, ಅವನ ಆ ಛಿದ್ರ (ದೌರ್ಬಲ್ಯ)ವನ್ನು, ಕ್ರೌಂಚಪರ್ವತದ ಛಿದ್ರವನ್ನು, ಪಕ್ಷಿಗಳು ತಿಳಿಯುವಂತೆ, ಶತ್ರುಗಳು ತಿಳಿದುಕೊಳ್ಳುವರು. (ಕ್ರೌಂಚಪರ್ವದ ಛೇದದಿಂದ ಪಕ್ಷಿಗಳು ಆ ಕಡೆ ಈ ಕಡೆ ಬಂದು ಹೋಗುವಂತೆ ಶತ್ರುವೂ ಕೂಡ ರಾಜನ ಛಿದ್ರದ ಅಥವಾ ದೌರ್ಬಲ್ಯದ ಲಾಭ ಪಡೆಯುವರು.॥19॥

ಮೂಲಮ್ - 20

ಯೋ ಹಿ ಶತ್ರುಮವಜ್ಞಾಯ ಆತ್ಮಾನಂ ನಾಭಿರಕ್ಷತಿ ।
ಅವಾಪ್ನೋತಿಹಿ ಸೋಽನರ್ಥಾನ್ ಸ್ಥಾನಾಚ್ಚ ವ್ಯವರೋಪ್ಯತೇ ॥

ಅನುವಾದ

ಯಾವ ರಾಜನು ಶತ್ರುವಿನ ಅವಹೇಳನ ಮಾಡಿ, ತನ್ನ ರಕ್ಷಣೆಯ ವ್ಯವಸ್ಥೆ ಮಾಡಿಕೊಳ್ಳುವುದಿಲ್ಲವೋ, ಅವನು ಅನೇಕ ಅನರ್ಥಗಳಿಗೆ ಗುರಿಯಾಗಿ, ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ.॥20॥

ಮೂಲಮ್ - 21

ಯದುಕ್ತಮಿಹ ತೇ ಪೂರ್ವಂ ಪ್ರಿಯಯಾ ಮೇಽನುಜೇನ ಚ ।
ತದೇವ ನೋ ಹಿತಂ ವಾಕ್ಯಂ ಯಥೇಚ್ಛಸಿ ತಥಾ ಕುರು ॥

ಅನುವಾದ

ನಿನ್ನ ಪ್ರಿಯ ಪತ್ನಿ ಮಂದೋದರೀ ಮತ್ತು ತಮ್ಮ ವಿಭೀಷಣನು ಹಿಂದೆ ನಿನ್ನಲ್ಲಿ ಹೇಳಿದುದೇ ನಮಗಾಗಿ ಹಿತಕರವಾಗಿತ್ತು. ಇನ್ನು ನಿನ್ನ ಇಚ್ಛೆ ಇದ್ದಂತೆ ಮಾಡು.॥21॥

ಮೂಲಮ್ - 22

ತತ್ತು ಶ್ರುತ್ವಾ ದಶಗ್ರೀವಃ ಕುಂಭಕರ್ಣಸ್ಯ ಭಾಷಿತಮ್ ।
ಭ್ರುಕುಟಂ ಚೈವ ಸಂಚಕ್ರೇ ಕ್ರುದ್ಧಶ್ಚೈನಮಭಾಷತ ॥

ಅನುವಾದ

ಕುಂಭಕರ್ಣನ ಮಾತನ್ನು ಕೇಳಿ ದಶಗ್ರೀವ ರಾವಣನು ಹುಬ್ಬೇರಿಸಿಕೊಂಡು ಕುಪಿತನಾಗಿ ನುಡಿದನು.॥22॥

ಮೂಲಮ್ - 23

ಮಾನ್ಯೋ ಗುರುರಿವಾಚಾರ್ಯಃ ಕಿಂ ಮಾಂ ತ್ವಮನುಶಾಸಸೇ ।
ಕಿಮೇವಂ ವಾಕ್ಶ್ರಮಂ ಕೃತ್ವಾ ಯದ್ ಯುಕ್ತಂ ವಿಧೀಯತಾಮ್ ॥

ಅನುವಾದ

ನೀನು ಮಾನ್ಯ ಗುರು, ಆಚಾರ್ಯನಂತೆ ನನಗೆ ಉಪದೇಶ ಏಕೆ ಕೊಡುತ್ತಿರುವೆ? ಈರೀತಿ ಭಾಷಣ ಮಾಡುವುದರಿಂದ ಏನು ಲಾಭವಿದೆ? ಈಗ ಉಚಿತವಾದ ಹಾಗೂ ಆವಶ್ಯಕವಾದ ಕಾರ್ಯವನ್ನು ಮಾಡು.॥23॥

ಮೂಲಮ್ - 24

ವಿಭ್ರಮಾಚ್ಚಿತ್ತ ಮೋಹಾದ್ ವಾ ಬಲವೀರ್ಯಾಶ್ರಯೇಣ ವಾ ।
ನಾಭಿಪನ್ನ ಮಿದಾನೀಂ ಯದ್ವ್ಯರ್ಥಾಸ್ತಸ್ಯ ಪುನಃ ಕಥಾಃ ॥

ಅನುವಾದ

ನಾನು ಭ್ರಮೆಯಿಂದ, ಮೋಹಪರವಶತೆಯಿಂದ, ಬಲ-ಪರಾಕ್ರಮದ ಭರವಸೆಯಿಂದ, ನಿಮ್ಮ ಮಾತನ್ನು ಮಾನ್ಯಮಾಡಲಿಲ್ಲವೆಂಬುದು ನಿಜ. ಅದನ್ನು ಪುನಃ ಪುನಃ ಚರ್ಚಿಸುವುದು ವ್ಯರ್ಥವಾಗಿದೆ.॥24॥

ಮೂಲಮ್ - 25½

ಅಸ್ಮಿನ್ಕಾಲೇ ತು ಯದ್ಯುಕ್ತಂ ತದಿದಾನೀಂ ವಿಚಿಂತ್ಯತಾಮ್ ।
ಗತಂ ತು ನಾನುಶೋಚಂತಿ ಗತಂ ತು ಗತಮೇವ ಹಿ ॥
ಮಮಾಪನಯಜಂ ದೋಷಂ ವಿಕ್ರಮೇಣ ಸಮೀಕುರು ।

ಅನುವಾದ

ಕಳೆದುಹೋದ ಮಾತು ಮರೆತುಬಿಡು. ಕಳೆದುಹೋದ ಮಾತಿಗಾಗಿ ಬುದ್ಧಿವಂತರು ಶೋಕಿಸುವುದಿಲ್ಲ. ಈಗ ನಾವು ಏನು ಮಾಡಬೇಕೆಂಬುದನ್ನು ಯೋಚಿಸು. ನಿನ್ನ ಪರಾಕ್ರಮದಿಂದ ನನ್ನ ಅನೀತಿ ಜನಿತ ದುಃಖವನ್ನು ಶಾಂತಗೊಳಿಸು.॥25॥

ಮೂಲಮ್ - 26½

ಯದಿ ಖಲ್ವಸ್ತಿ ಮೇ ಸ್ನೇಹೋ ವಿಕ್ರಮಂ ವಾಧಿಗಚ್ಛಸಿ ॥
ಯದಿ ವಾ ಕಾರ್ಯಂಮಮೈತತ್ತೇ ಹೃದಿ ಕಾರ್ಯತಮಂ ಮತಮ್ ।

ಅನುವಾದ

ನನ್ನ ಮೇಲೆ ನಿನಗೆ ಸ್ನೇಹವಿದ್ದರೆ, ನಿನ್ನೊಳಗೆ ಯಥೇಷ್ಟ ಪರಾಕ್ರಮವಿದೆ ಎಂದು ತಿಳಿಯುತ್ತಿರುವೆಯಾದರೆ, ನನ್ನ ಈ ಕಾರ್ಯವನ್ನು ಪರಮ ಕರ್ತವ್ಯವೆಂದು ತಿಳಿಯುವೆಯಾದರೆ, ಯುದ್ಧಮಾಡು.॥26॥

ಮೂಲಮ್ - 27½

ಸ ಸುಹೃದ್ಯೋ ವಿಪನ್ನಾರ್ಥಂ ದೀನಮಭ್ಯುಪಪದ್ಯತೇ ॥
ಸ ಬಂಧುರ್ಯೋಂಽಪನೀತೇಷು ಸಾಹಾಯ್ಯಾಯೋಪಕಲ್ಪತೇ ।

ಅನುವಾದ

ಎಲ್ಲ ಕಾರ್ಯನಾಶವಾದಾಗ ದುಃಖಿತನಾದ ಸ್ವಜನನ ಮೇಲೆ ಅನುಗ್ರಹ ಬುದ್ಧಿಯಿಂದ ಸಹಾಯ ಮಾಡುವವನೇ ಸುಹೃದನು. ಅನೀತಿಯಿಂದ ಸಂಕಟದಲ್ಲಿ ಬಿದ್ದಿರುವವನಿಗೆ ಸಹಾಯ ಮಾಡುವವನೇ ಬಂಧು ಆಗಿದ್ದಾನೆ.॥27॥

ಮೂಲಮ್ - 28½

ತಮಥೈವಂ ಬ್ರುವಾಣಂ ತು ವಚನಂ ಧೀರದಾರುಣಮ್ ॥
ರುಷ್ಟೋಽಯಮಿತಿ ವಿಜ್ಞಾಯ ಶನೈಃ ಶ್ಲಕ್ಷ್ಣ ಮುವಾಚ ಹ ।

ಅನುವಾದ

ರಾವಣನು ಹೀಗೆ ದಾರುಣವಾದ ಮಾತುಗಳನ್ನಾಡುವುದನ್ನು ನೋಡಿ, ಅಣ್ಣನಿಗೆ ಸಿಟ್ಟು ಬಂದಿದೆ ಎಂದು ತಿಳಿದು ಕುಂಭಕರ್ಣನು ಮೆಲ್ಲನೆ ಮಧುರವಾಣಿಯಿಂದ ಹೇಳತೊಡಗಿದನು.॥28॥

ಮೂಲಮ್ - 29½

ಅತೀವ ಹಿ ಸಮಾಲಕ್ಷ್ಯ ಭ್ರಾತರಂ ಕ್ಷುಭಿತೇಂದ್ರಿಯಮ್ ॥
ಕುಂಭಕರ್ಣಃ ಶನೈರ್ವಾಕ್ಯಂ ಬಭಾಷೇ ಪರಿಸಾಂತ್ವಯನ್ ।

ಅನುವಾದ

ಅಣ್ಣನ ಇಂದ್ರಿಯವೆಲ್ಲ ಅತ್ಯಂತ ಕ್ಷುಬ್ಧವಾಗಿರುವುದನ್ನು ನೋಡಿ, ಕುಂಭಕರ್ಣನು ನಿಧಾನವಾಗಿ ಅವನಿಗೆ ಸ್ವಾಂತನ ನೀಡುತ್ತಾ ಹೇಳಿದನು.॥2.॥

ಮೂಲಮ್ - 30

ಶೃಣು ರಾಜನ್ನವಹಿತೋ ಮಮ ವಾಕ್ಯಮರಿಂದಮ ॥

ಮೂಲಮ್ - 31

ಅಲಂ ರಾಕ್ಷಸರಾಜೇಂದ್ರ ಸಂತಾಪ ಮುಪಪದ್ಯ ತೇ ।
ರೋಷಂ ಚ ಸಂಪರಿತ್ಯಜ್ಯ ಸ್ವಸ್ಥೋ ಭವಿತುಮರ್ಹಸಿ ॥

ಅನುವಾದ

ಶತ್ರುದಮನ ಮಹಾರಾಜನೇ! ಸಾವಧಾನವಾಗಿ ನನ್ನ ಮಾತನ್ನು ಕೇಳು. ಸಂತಾಪಪಡುವುದು ವ್ಯರ್ಥವಾಗಿದೆ. ಈಗ ನೀನು ರೋಷವನ್ನು ತ್ಯಜಿಸಿ ಸ್ವಸ್ಥನಾಗಬೇಕು..॥30-31॥

ಮೂಲಮ್ - 32

ನೈತನ್ಮನಸಿ ಕರ್ತವ್ಯಂ ಮಯಿ ಜೀವತಿ ಪಾರ್ಥಿವ ।
ತಮಹಂ ನಾಶಯಿಷ್ಯಾಮಿ ಯತ್ಕೃತೇ ಪರಿತಪ್ಯಸೇ ॥

ಅನುವಾದ

ಪೃಥಿವೀಪತೇ! ನಾನು ಬದುಕಿರುವಾಗ ಇಂತಹ ಭಾವನೆ ಇರಬಾರದು. ನೀನು ಯಾರಿಗಾಗಿ ಸಂತಪ್ತನಾಗಿರುವೆಯೋ ಅವನನ್ನು ನಾನು ನಾಶಮಾಡಿಬಿಡುವೆನು.॥32॥

ಮೂಲಮ್ - 33

ಅವಶ್ಯಂ ತು ಹಿತಂ ವಾಚ್ಯಂ ಸರ್ವಾವಸ್ಥಂ ಮಯಾ ತವ ।
ಬಂಧುಭಾವಾದಭಿಹಿತಂ ಭ್ರಾತೃಸ್ನೇಹಾಚ್ಚ ಪಾರ್ಥಿವ ॥

ಅನುವಾದ

ಮಹಾರಾಜನೇ! ಎಲ್ಲ ಅವಸ್ಥೆಗಳಲ್ಲಿ ನಿನ್ನ ಹಿತದ ಮಾತನ್ನು ಹೇಳುವುದು ನನಗೆ ಆವಶ್ಯಕವಾಗಿದೆ. ಆದ್ದರಿಂದ ಬಂಧುಭಾವದಿಂದ ಮತ್ತು ಭ್ರಾತೃಸ್ನೇಹದಿಂದಾಗಿಯೇ ಈ ಮಾತನ್ನು ನಾನು ಹೇಳಿದೆ.॥33॥

ಮೂಲಮ್ - 34

ಸದೃಶಂ ಯತ್ತು ಕಾಲೇಽಸ್ಮಿನ್ಕರ್ತುಂ ಸ್ನೇಹೇನ ಬಂಧುನಾ ।
ಶತ್ರೂಣಾಂ ಕದನಂ ಪಶ್ಯ ಕ್ರಿಯಮಾಣಂ ಮಯಾ ರಣೇ ॥

ಅನುವಾದ

ಈಗ ಒಬ್ಬ ಸಹೋದರನು ಸ್ನೇಹವಶವಾಗಿ ಏನು ಮಾಡುವುದು ಉಚಿತವೋ ಅದನ್ನೇ ಮಾಡುವೆನು. ಇನ್ನು ರಣಭೂಮಿಯಲ್ಲಿ ನಾನು ಮಾಡುವ ಶತ್ರುಸಂಹಾರವನ್ನು ನೋಡುವೆ.॥34॥

ಮೂಲಮ್ - 35

ಅದ್ಯ ಪಶ್ಯ ಮಹಾಬಾಹೋ ಮಯಾ ಸಮರಮೂರ್ಧನಿ ।
ಹತೇ ರಾಮೇ ಸಹ ಭ್ರಾತ್ರಾ ದ್ರವಂತೀಂ ಹರಿವಾಹಿನೀಮ್ ॥

ಅನುವಾದ

ಮಹಾಬಾಹೋ! ಇಂದು ಯುದ್ಧರಂಗದಲ್ಲಿ ಸಹೋದರ ಸಹಿತ ಶ್ರೀರಾಮನನ್ನು ನಾನು ಕೊಂದುಹಾಕಿದಾಗ ವಾನರಸೈನ್ಯವು ಹೇಗೆ ಓಡಿಹೋಗುವುದೋ ಅದನ್ನು ನೀನು ನೋಡುವೆಯಂತೆ.॥35॥

ಮೂಲಮ್ - 36

ಅದ್ಯ ರಾಮಸ್ಯ ತದ್ದೃಷ್ಟ್ವಾ ಮಯಾಽಽನೀತಂ ರಣಾಚ್ಛಿರಃ ।
ಸುಖೀ ಭವ ಮಹಾಬಾಹೋ ಸೀತಾ ಭವತು ದುಃಖಿತಾ ॥

ಅನುವಾದ

ಇಂದು ನಾನು ಸಂಗ್ರಾಮಭೂಮಿಯಲ್ಲಿ ರಾಮನ ತಲೆ ಕತ್ತರಿಸಿ ತರುವೆನು. ಅದನ್ನು ನೋಡಿ ನೀನು ಸುಖೀಯಾಗುವೆ ಹಾಗೂ ಸೀತೆ ದುಃಖದಲ್ಲಿ ಮುಳುಗಿಹೋಗುವಳು.॥36॥

ಮೂಲಮ್ - 37

ಅದ್ಯ ರಾಮಸ್ಯ ಪಶ್ಯಂತು ನಿಧನಂ ಸುಮಹತ್ಪ್ರಿಯಮ್ ।
ಲಂಕಾಯಾಂ ರಾಕ್ಷಸಾಃ ಸರ್ವೇ ಯೇ ತೇ ನಿಹತಬಾಂಧವಾಃ ॥

ಅನುವಾದ

ಲಂಕೆಯಲ್ಲಿ ಯಾವ ರಾಕ್ಷಸರ ಬಂಧುಗಳು ಸತ್ತುಹೋಗಿರುವರೋ, ಅವರೂ ಕೂಡ ಇಂದು ರಾಮನ ಮೃತ್ಯುವನ್ನು ನೋಡಲಿ. ಇದು ಅವರಿಗೆ ಬಹಳ ಪ್ರಿಯವಾದೀತು.॥37॥

ಮೂಲಮ್ - 38

ಅದ್ಯ ಶೋಕಪರೀತಾನಾಂ ಸ್ವಬಂಧುವಧಶೋಚಿನಾಮ್ ।
ಶತ್ರೋರ್ಯುಧಿ ವಿನಾಶೇನ ಕರೋಮ್ಯಶ್ರುಪ್ರಮಾರ್ಜನಮ್ ॥

ಅನುವಾದ

ತಮ್ಮ ಸಹೋದರ ಬಂಧುಗಳು ಸತ್ತುಹೋಗಿರುವುದರಿಂದ ಯಾವ ಜನರು ಅತ್ಯಂತ ಶೋಕದಲ್ಲಿ ಮುಳುಗಿರುವರೋ, ಇಂದು ಯುದ್ಧದಲ್ಲಿ ಶತ್ರುವಿನ ನಾಶಗೊಳಿಸಿ ಅವರ ಕಣ್ಣೀರು ಒರೆಸುವೆನು.॥38॥

ಮೂಲಮ್ - 39

ಅದ್ಯ ಪರ್ವತಸಂಕಾಶಂ ಸಸೂರ್ಯಮಿವ ತೋಯದಮ್ ।
ವಿಕೀರ್ಣಂ ಪಶ್ಯ ಸಮರೇ ಸುಗ್ರೀವಂ ಪ್ಲವಗೇಶ್ವರಮ್ ॥

ಅನುವಾದ

ಇಂದು ಪರ್ವತದಂತೆ ವಿಶಾಲಕಾಯ ವಾನರರಾಜ ಸುಗ್ರೀವನು ಸಮರಾಂಗಣದಲ್ಲಿ ರಕ್ತದಿಂದ ತೊಯ್ದು ನರಳುತ್ತಾ ಇರುವುದನ್ನು ಸೂರ್ಯನೊಡ ಗೂಡಿದ ಮೇಘದಂತೆ ಕಾಣುವುದನ್ನು ನೋಡುವೆ.॥39॥

ಮೂಲಮ್ - 40

ಕಥಂ ಚ ರಾಕ್ಷಸೈರೇಭಿರ್ಮಯಾ ಚ ಪರಿಸಾಂತ್ವಿತಃ ।
ಜಿಘಾಂಸುಭಿರ್ದಾಶರಥಿಂ ವ್ಯಥಸೇ ತ್ವಂ ಸದಾನಘ ॥

ಅನುವಾದ

ಅನಘನೇ ಈ ರಾಕ್ಷಸರೆಲ್ಲರೂ ಹಾಗೂ ನಾನು ದಶರಥ ಪುತ್ರರಾಮನನ್ನು ಸಂಹರಿಸುವ ಇಚ್ಛೆಯುಳ್ಳವರಾಗಿದ್ದೇವೆ. ನಿನಗೆ ಈ ವಿಷಯದಲ್ಲಿ ಆಶ್ವಾಸನೆ ಕೊಡುತ್ತಿದ್ದೇವೆ, ಹೀಗಿದ್ದರೂ ನೀನು ಏಕೆ ವ್ಯಥಿತನಾಗಿರುವೆ.॥40॥

ಮೂಲಮ್ - 41

ಮಾಂ ನಿಹತ್ಯ ಕಿಲ ತ್ವಾಂ ಹಿ ನಿಹನಿಷ್ಯಂತಿ ರಾಘವಃ ।
ನಾಹಮಾತ್ಮನಿ ಸಂತಾಪಂ ಗಚ್ಛೇಯಂ ರಾಕ್ಷಸಾಧಿಪ ॥

ಅನುವಾದ

ರಾಕ್ಷಸರಾಜನೇ! ಮೊದಲು ನನ್ನನ್ನು ವಧಿಸಿಯೇ ರಾಮನು ನಿನ್ನನ್ನು ಕೊಲ್ಲ ಬಲ್ಲನು. ಆದರೆ ನನ್ನ ವಿಷಯದಲ್ಲಿ ರಾಮನಿಂದ ನಾನು ಭಯಪಡುವುದಿಲ್ಲ.॥41॥

ಮೂಲಮ್ - 42

ಕಾಮಂ ತ್ವಿದಾನೀಮಪಿ ಮಾಂ ವ್ಯಾದಿಶ ತ್ವಂ ಪರಂತಪ ।
ನ ಪರಃ ಪ್ರೇಕ್ಷಣೀಯಸ್ತೇ ಯುದ್ಧಾಯಾತುಲವಿಕ್ರಮ ॥

ಅನುವಾದ

ಪರಂತಪ ಪರಾಕ್ರಮೀ ವೀರನೇ! ಈಗ ನೀನು ನಿನ್ನ ಇಚ್ಛೆಗನುಸಾರ ಯುದ್ಧಕ್ಕಾಗಿ ನನಗೆ ಅಪ್ಪಣೆ ಕೊಡು. ಶತ್ರುಗಳೊಡನೆ ಕಾದಾಡಲು ಬೇರೆ ಯಾರ ಕಡೆಗೂ ನೋಡುವ ಆವಶ್ಯಕತೆ ಈಗಿಲ್ಲ.॥42॥

ಮೂಲಮ್ - 43½

ಅಹಮುತ್ಸಾದಯಿಷ್ಯಾಮಿ ಶತ್ರೂಂಸ್ತವ ಮಹಾಬಲಾನ್ ।
ಯದಿ ಶಕ್ರೋ ಯದಿ ಯಮೋ ಯದಿ ಪಾವಕಮಾರುತೌ ॥
ತಾನಹಂ ಯೋಧಯಿಷ್ಯಾಮಿ ಕುಬೇರವರುಣಾವಪಿ ।

ಅನುವಾದ

ನಿನ್ನ ಮಹಾಬಲಿ ಶತ್ರು ಇಂದ್ರ, ಯಮ, ಅಗ್ನಿ, ವಾಯು, ಕುಬೇರ, ವರುಣ ಮೊದಲಾದವರಾಗಿದ್ದರೂ ನಾನು ಅವರೊಡನೆ ಯುದ್ಧಮಾಡುವೆನು ಹಾಗೂ ಅವರೆಲ್ಲರನ್ನು ಕಿತ್ತು ಎಸೆದುಬಿಡುವೆನು.॥43½॥

ಮೂಲಮ್ - 44½

ಗಿರಿಮಾತ್ರಶರೀರಸ್ಯ ಶಿತಶೂಲಧರಸ್ಯ ಮೇ ॥
ನರ್ದತಸ್ತೀಕ್ಷ್ಣ ದಂಷ್ಟ್ರಸ್ಯ ಬಿಭೀಯಾದ್ವೈ ಪುರಂದರಃ ।

ಅನುವಾದ

ಪರ್ವತದಂತೆ ನನಗೆ ವಿಶಾಲ ಶರೀರವಿದ್ದು, ಕೈಯಲ್ಲಿ ಹರಿತವಾದ ತ್ರಿಶೂಲವನ್ನು ಧರಿಸಿರುವೆನು. ನನ್ನ ಕೋರೆದಾಡೆಗಳೂ ತೀಕ್ಷ್ಣವಾಗಿವೆ. ನನ್ನ ಸಿಂಹನಾದದಿಂದ ಇಂದ್ರನು ಭಯದಿಂದ ನಡುಗಿ ಹೋಗುತ್ತಾನೆ.॥44½॥

ಮೂಲಮ್ - 45½

ಅಥ ವಾ ತ್ಯಕ್ತಶಸಸ್ಯ ಮೃದ್ಗತಸ್ತರಸಾ ರಿಪೂನ್ ॥
ನ ಮೇ ಪ್ರತಿಮುಖೇ ಕಶ್ಚಿತ್ ಸ್ಥಾತುಂ ಶಕ್ತೋ ಜಿಜೀವಿಷುಃ ।

ಅನುವಾದ

ನಾನು ಶಸ್ತ್ರತ್ಯಾಗಮಾಡಿ ವೇಗದಿಂದ ಶತ್ರು ಗಳನ್ನು ಅರೆಯುತ್ತಾ ಸಂಚರಿಸತೊಡಗಿದರೆ, ಬದುಕುಳಿಯುವ ಇಚ್ಛೆಯುಳ್ಳ ಯಾವ ಪ್ರಾಣಿಯೂ ಎದುರಿಗೆ ನಿಲ್ಲಲಾರನು.॥45½॥

ಮೂಲಮ್ - 46½

ನೈವ ಶಕ್ತ್ಯಾ ನ ಗದಯಾ ನಾಸಿನಾ ನಿಶಿತೈಃ ಶರೈಃ ॥
ಹಸ್ತಾಭ್ಯಾಮೇವ ಸಂರಭ್ಯ ಹನಿಷ್ಯಾಮಿ ಸವಜ್ರಿಣಮ್ ।

ಅನುವಾದ

ನಾನು ಗದೆಯಿಂದ, ಶಕ್ತಿಯಿಂದ, ಖಡ್ಗದಿಂದ, ಹರಿತ ಬಾಣಗಳಿಂದ ಯುದ್ಧ ಮಾಡುವುದಿಲ್ಲ. ರೋಷಗೊಂಡು ಕೇವಲ ಎರಡೇ ಕೈಗಳಿಂದಲೇ ವಜ್ರಧಾರೀ ಇಂದ್ರನಂತಹ ಶತ್ರುವನ್ನು ಸಂಹರಿಸಿಬಿಡುವೆನು.॥46½॥

ಮೂಲಮ್ - 47½

ಯದಿ ಮೇ ಮುಷ್ಟಿವೇಗಂ ಸ ರಾಘವೋಽದ್ಯ ಸಹಿಷ್ಯತಿ ॥
ತತಃ ಪಾಸ್ಯಂತಿ ಬಾಣೌಘಾ ರುಧಿರಂ ರಾಘವಸ್ಯ ಮೇ ।

ಅನುವಾದ

ಇಂದು ರಾಮನು ನನ್ನ ಮುಷ್ಟಿಯ ವೇಗವನ್ನು ಸಹಿಸಿಕೊಂಡರೆ ನನ್ನ ಬಾಣ ಸಮೂಹಗಳು ಅವಶ್ಯವಾಗಿ ಅವನ ರಕ್ತಪಾನ ಮಾಡುವುವು.॥47½॥

ಮೂಲಮ್ - 48½

ಚಿಂತಯಾ ತಪ್ಯಸೇ ರಾಜನ್ಕಿಮರ್ಥಂ ಮಯಿ ತಿಷ್ಠತಿ ॥
ಸೋಽಹಂ ಶತ್ರುವಿನಾಶಾಯ ತವ ನಿರ್ಯಾತುಮುದ್ಯತಃ ।

ಅನುವಾದ

ರಾಜನೇ! ನಾನಿರುವಾಗ ನೀನು ಏಕೆ ಚಿಂತೆಯ ಬೆಂಕಿಯಿಂದ ಸುಡುತ್ತಿರುವೆ? ನಾನು ನಿನ್ನ ಶತ್ರುವನ್ನು ವಿನಾಶ ಮಾಡಲಿಕ್ಕಾಗಿ ಈಗಲೇ ರಣಭೂಮಿಗೆ ಹೊರಡುವೆನು.॥48½॥

ಮೂಲಮ್ - 49½

ಮುಂಚ ರಾಮಾದ್ ಭಯಂ ಘೋರಂ ನಿಹನಿಷ್ಯಾಮಿ ಸಂಯುಗೇ ॥
ರಾಘವಂ ಲಕ್ಷ್ಮಣಂ ಚೈವ ಸುಗ್ರೀವಂ ಚ ಮಹಾಬಲಮ್ ।

ಅನುವಾದ

ರಾಮನಿಂದ ಇರುವ ನಿನ್ನ ಘೋರ ಭಯವನ್ನು ತ್ಯಜಿಸಿಬಿಡು. ನಾನು ರಣಭೂಮಿಯಲ್ಲಿ ರಾಮ ಲಕ್ಷ್ಮಣ ಮತ್ತು ಮಹಾಬಲಿ ಸುಗ್ರೀವನನ್ನು ಅವಶ್ಯವಾಗಿ ಕೊಂದುಹಾಕುವೆನು.॥49½॥

ಮೂಲಮ್ - 50

ಹನೂಮಂತಂ ಚ ರಕ್ಷೋಘ್ನಂ ಲಂಕಾ ಯೇನ ಪ್ರದೀಪಿತಾ ॥

ಮೂಲಮ್ - 51

ಹರೀಂಶ್ಚ ಭಕ್ಷಯಿಷ್ಯಾಮಿ ಸಂಯುಗೇ ಸಮವಸ್ಥಿತೇ ।
ಅಸಾಧಾರಣಮಿಚ್ಛಾಮಿ ತವ ದಾತುಂ ಮಹದ್ಯಶಃ ॥

ಅನುವಾದ

ಯುದ್ಧ ಉಪಸ್ಥಿತವಾದಾಗ ರಾಕ್ಷಸರನ್ನು ಸಂಹಾರಮಾಡುವ, ಲಂಕೆಯನ್ನು ಸುಟ್ಟಿರುವ ಆ ಹನುಮಂತನನ್ನು ನಾನು ಜೀವಂತವಾಗಿ ಬಿಡಲಾರೆನು. ಜೊತೆಗೆ ಇತರ ವಾನರರನ್ನು ತಿಂದುಹಾಕುವೆನು. ಇಂದು ನಾನು ನಿನಗೆ ಅಲೌಕಿಕ ಹಾಗೂ ಮಹಾಯಶಸ್ಸನ್ನು ತಂದುಕೊಡಲು ಬಯಸುತ್ತೇನೆ.॥50-51॥

ಮೂಲಮ್ - 52

ಯದಿ ಚೇಂದ್ರಾದ್ಭಯಂ ರಾಜನ್ಯದಿ ಚಾಪಿ ಸ್ವಯಂಭುವಃ ।
ತತೋಽಹಂ ನಾಶಯಿಷ್ಯಾಮಿ ನೈಶಂ ತಮ ಇವಾಂಶುಮಾನ್ ॥

ಅನುವಾದ

ರಾಜನೇ! ನಿನಗೆ ಇಂದ್ರ ಅಥವಾ ಸ್ವಯಂಭೂ ಬ್ರಹ್ಮನಿಂದಲೂ ಭಯ ವಿದ್ದರೆ, ಆ ಭಯವನ್ನು ಸೂರ್ಯನು ಅಂಧಕಾರವನ್ನು ನಾಶಮಾಡುವಂತೆ ನಾನು ನಾಶಮಾಡಿಬಿಡುವೆನು.॥52॥

ಮೂಲಮ್ - 53

ಅಪಿ ದೇವಾಃ ಶಯಿಷ್ಯಂತೇ ಮಯಿ ಕ್ರುದ್ಧೇ ಮಹೀತಲೇ ।
ಯಮಂ ಚ ಶಮಯಿಷ್ಯಾಮಿ ಭಕ್ಷಯಿಷ್ಯಾಮಿ ಪಾವಕಮ್ ॥

ಅನುವಾದ

ನಾನು ಕುಪಿತನಾದರೆ ದೇವತೆಗಳೂ ಧರಾಶಾಯಿಯಾಗುವರು. ಹಾಗಿರುವಾಗ ಮನುಷ್ಯರ, ವಾನರರ ಮಾತೇನಿದೆ? ನಾನು ಯಮರಾಜನನ್ನು ಕೊಂದುಬಿಡುವೆನು. ಸರ್ವಭಕ್ಷಿ ಅಗ್ನಿಯನ್ನು ತಿಂದು ಬಿಡುವೆನು.॥53॥

ಮೂಲಮ್ - 54

ಆದಿತ್ಯಂ ಪಾತಯಿಷ್ಯಾಮಿ ಸನಕ್ಷತ್ರಂ ಮಹೀತಲೇ ।
ಶತಕ್ರತುಂ ವಧಿಷ್ಯಾಮಿ ಪಾಸ್ಯಾಮಿ ವರುಣಾಲಯಮ್ ॥

ಅನುವಾದ

ನಕ್ಷತ್ರಗಳ ಸಹಿತ ಸೂರ್ಯನನ್ನು ಭೂಮಿಗೆ ಕೆಡಹುವೆನು. ಇಂದ್ರನನ್ನೂ ವಧಿಸಿಬಿಡುವೆನು. ಸಮುದ್ರವನ್ನು ಕುಡಿದು ಬಿಡುವೆನು.॥54॥

ಮೂಲಮ್ - 55

ಪರ್ವತಾಂಶ್ಚೂರ್ಣಯಿಷ್ಯಾಮಿ ದಾರಯಿಷ್ಯಾಮಿ ಮೇದಿನೀಮ್ ।
ದೀರ್ಘಕಾಲಂ ಪ್ರಸುಪ್ತಸ್ಯ ಕುಂಭ ಕರ್ಣಸ್ಯ ವಿಕ್ರಮಮ್ ॥

ಮೂಲಮ್ - 56

ಆದ್ಯ ಪಶ್ಯಂತು ಭೂತಾನಿ ಭಕ್ಷ್ಯಮಾಣಾನಿ ಸರ್ವಶಃ ।
ನ ತ್ವಿದಂ ತ್ರಿದಿವಂ ಸರ್ವಮಾಹಾರೋ ಮಮ ಪೂರ್ಯತೇ ॥

ಅನುವಾದ

ಪರ್ವತಗಳನ್ನು ನುಚ್ಚುನೂರಾಗಿಸುವೆನು. ಭೂಮಂಡಲವನ್ನು ಸೀಳಿ ಹಾಕುವೆನು. ಇಂದು ನಾನು ತಿಂದು ಹಾಕುವ ಎಲ್ಲ ಪ್ರಾಣಿಗಳು ದೀರ್ಘಕಾಲ ಮಲಗಿ ಎದ್ದ ಕುಂಭಕರ್ಣನಾದ ನನ್ನ ಪರಾಕ್ರಮ ನೋಡಲಿ. ಇಡೀ ತ್ರಿಲೋಕವೇ ಆಹಾರವಾದರೂ ನನ್ನ ಹೊಟ್ಟೆ ತುಂಬಲಾರದು.॥55-56॥

ಮೂಲಮ್ - 57

ವಧೇನ ತೇ ದಾಶರಥೇಃ ಸುಖಾವಹಂ
ಸುಖಂ ಸಮಾಹರ್ತುಮಹಂ ವ್ರಜಾಮಿ ।
ನಿಕೃತ್ಯ ರಾಮಂ ಸಹ ಲಕ್ಷ್ಮಣೇನ
ಖಾದಾಮಿ ಸರ್ವಾನ್ ಹರಿಯೂಥಮುಖ್ಯಾನ್ ॥

ಅನುವಾದ

ದಶರಥಕುಮಾರ ಶ್ರೀರಾಮನನ್ನು ವಧಿಸಿ ನಾನು ನಿನಗೆ ಉತ್ತರೋತ್ತರ ಸುಖದ ಪ್ರಾಪ್ತಿಮಾಡುವಂತಹ ಸುಖ-ಸೌಭಾಗ್ಯವನ್ನು ಕೊಡಲು ಬಯಸುತ್ತಿರುವೆ. ಲಕ್ಷ್ಮಣ ಸಹಿತ ರಾಮನನ್ನು ವಧಿಸಿ ಎಲ್ಲ ಮುಖ್ಯ ಮುಖ್ಯ ವಾನರ ಸೇನಾಪತಿಗಳನ್ನು ತಿಂದುಹಾಕುವೆನು.॥57॥

ಮೂಲಮ್ - 58

ರಮಸ್ವ ಕಾಮಂ ಪಿಬ ಚಾದ್ಯ ವಾರುಣೀಂ
ಕುರುಷ್ವ ಕೃತ್ಯಾನಿ ವಿನೀಯ ದುಃಖಮ್ ।
ಮಯಾದ್ಯ ರಾಮೇ ಗಮಿತೇ ಯಮಕ್ಷಯಂ
ಚಿರಾಯ ಸೀತಾ ವಶಗಾ ಭವಿಷ್ಯತಿ ॥

ಅನುವಾದ

ರಾಜನೇ! ಇಂದು ನೀನು ಯಥೇಚ್ಛವಾಗಿ ವಿಹರಿಸು, ಮದ್ಯ ಕುಡಿ. ಮಾನಸಿಕ ದುಃಖವನ್ನು ಮರೆತು ಬಿಡು. ಇಂದು ನಾನು ರಾಮ-ಲಕ್ಷ್ಮಣರನ್ನು ಯಮಲೋಕಕ್ಕೆ ಕಳಿಸಿಬಿಡುವೆ. ಮತ್ತೆ ಸೀತೆ ಚಿರಕಾಲ ನಿನ್ನ ಅಧೀನವಾಗುವಳು.॥58॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತಮೂರನೆಯ ಸರ್ಗ ಪೂರ್ಣವಾಯಿತು. ॥63॥