वाचनम्
ಭಾಗಸೂಚನಾ
ಅರಮನೆಗೆ ಬಂದ ಕುಂಭಕರ್ಣನಿಗೆ ರಾವಣನು ರಾಮನಿಂದ ಉಂಟಾದ ಭಯವನ್ನು ತಿಳಿಸಿ, ಶತ್ರುಸೈನ್ಯವನ್ನು ವಿನಾಶಗೊಳಿಸಲು ಅವನನ್ನು ಪ್ರೇರೇಪಿಸಿದನು
ಮೂಲಮ್ - 1
ಸ ತು ರಾಕ್ಷಸ ಶಾರ್ದೂಲೋ ನಿದ್ರಾಮದಸಮಾಕುಲಃ ।
ರಾಜಮಾರ್ಗಂ ಶ್ರಿಯಾ ಜುಷ್ಟಂ ಯಯೌ ವಿಪುಲವಿಕ್ರಮಃ ॥
ಅನುವಾದ
ಮಹಾಪರಾಕ್ರಮಿ ರಾಕ್ಷಸಶ್ರೇಷ್ಠನಾದ ಕುಂಭಕರ್ಣನು ನಿದ್ದೆಯಿಂದಲೂ, ಮದದಿಂದಲೂ ಉನ್ಮತ್ತನಂತಾಗಿ ಸಂಪದ್ಯುಕ್ತ ವಾದ ರಾಜಬೀದಿಯಲ್ಲಿ ಹೋಗುತ್ತಿದ್ದನು.॥1॥
ಮೂಲಮ್ - 2
ರಾಕ್ಷಸಾನಾಂ ಸಹಸ್ರೈಶ್ಚ ವೃತಃ ಪರಮದುರ್ಜಯಃ ।
ಗೃಹೇಭ್ಯಃ ಪುಷ್ಪವರ್ಷೇಣ ಕೀರ್ಯಮಾಣಸ್ತದಾ ಯಯೌ ॥
ಅನುವಾದ
ಅ ಪರಮದುರ್ಜಯ ವೀರನು ಸಾವಿರಾರು ರಾಕ್ಷಸರಿಂದ ಪರಿವೃತನಾಗಿ ಸಾಗುತ್ತಿದ್ದನು. ರಾಜಬೀದಿಯ ಪಕ್ಕದಲ್ಲಿದ್ದ ಮನೆಗಳಿಂದ ಅವನ ಮೇಲೆ ಹೂವುಗಳನ್ನು ಚೆಲ್ಲುತ್ತಿದ್ದರು.॥2॥
ಮೂಲಮ್ - 3
ಸ ಹೇಮಜಾಲವಿತತಂ ಭಾನುಭಾಸ್ವರ ದರ್ಶನಮ್ ।
ದದರ್ಶ ವಿಪುಲಂ ರಮ್ಯಂ ರಾಕ್ಷಸೇಂದ್ರ ನಿವೇಶನಮ್ ॥
ಅನುವಾದ
ಸ್ವರ್ಣಮಯ ಜಾಲರಿಗಳಿಂದ ಆಚ್ಛಾದಿತವಾದ, ಸೂರ್ಯನಂತೆ ಬೆಳಗುತ್ತಿದ್ದ ರಾಕ್ಷಸರಾಜ ರಾವಣನ ರಮಣೀಯ ವಿಶಾಲ ಅರಮನೆಯನ್ನು ನೋಡಿದನು.॥3॥
ಮೂಲಮ್ - 4
ಸ ತತ್ತದಾ ಸೂರ್ಯ ಇವಾಭ್ರಜಾಲಂ
ಪ್ರವಿಶ್ಯ ರಕ್ಷೋಧಿಪತೇರ್ನಿವೇಶನಮ್ ।
ದದರ್ಶ ದೂರೇಽಗ್ರಜಮಾಸನಸ್ಥಂ
ಸ್ವಯಂಭುವಂ ಶಕ್ರ ಇವಾಸನಸ್ಥಮ್ ॥
ಅನುವಾದ
ಸೂರ್ಯನು ಮೇಘಮಂಡಲವನ್ನು ಪ್ರವೇಶಿಸುವಂತೆ ಕುಂಭಕರ್ಣನು ರಾವಣನ ಅರಮನೆಯನ್ನು ಪ್ರವೇಶಿಸಿ, ದೇವೇಂದ್ರನು ದಿವ್ಯ ಕಮಲಾಸನದಲ್ಲಿ ವಿರಾಜಮಾನನಾದ ಸ್ವಯಂಭೂ ಬ್ರಹ್ಮನನ್ನು ದರ್ಶಿಸಿದಂತೆ ರಾಜ ಸಿಂಹಾಸನದಲ್ಲಿ ಕುಳಿತಿರುವ ತನ್ನಣ್ಣನನ್ನು ದೂರದಿಂದಲೇ ನೋಡಿದನು.॥4॥
ಮೂಲಮ್ - 5
ಭ್ರಾತುಃ ಸ ಭವನಂ ಗಚ್ಛನ್ ರಕ್ಷೋಗಣಸಮನ್ವಿತಃ ।
ಕುಂಭಕರ್ಣಃ ಪದನ್ಯಾಸೈರ ಕಂಪಯತ ಮೇದಿನೀಮ್ ॥
ಅನುವಾದ
ರಾಕ್ಷಸರೊಂದಿಗೆ ಕುಂಭಕನು ತನ್ನಣ್ಣನ ಭವನವನ್ನು ಪ್ರವೇಶಿಸುವಾಗ ಅವನ ಪಾದಾಘಾತದಿಂದ ಭೂಮಿಯು ನಡುಗುತ್ತಿತ್ತು.॥5॥
ಮೂಲಮ್ - 6
ಸೋಽಭಿಗಮ್ಯ ಗೃಹಂ ಭ್ರಾತುಃ ಕಕ್ಷ್ಯಾಮಭಿವಿಗಾಹ್ಯ ಚ ।
ದದರ್ಶೋದ್ವಿಗ್ನಮಾಸೀನಂ ವಿಮಾನೇ ಪುಷ್ಪಕೇ ಗುರುಮ್ ॥
ಅನುವಾದ
ಅಣ್ಣನ ಭವನದ ಒಳ ಕಕ್ಷೆಯನ್ನು ಪ್ರವೇಶಿಸಿದಾಗ ಪುಷ್ಪಕವಿಮಾನದಲ್ಲಿ ವಿರಾಜನಾದ ರಾವಣನು ಉದ್ವಿಗ್ನ ಸ್ಥಿತಿಯಲ್ಲಿರುವುದನ್ನು ನೋಡಿದನು.॥6॥
ಮೂಲಮ್ - 7
ಅಥ ದೃಷ್ಟ್ವಾದಶಗ್ರೀವಃ ಕುಂಭಕರ್ಣಮುಪಸ್ಥಿತಮ್ ।
ತೂರ್ಣಮುತ್ಥಾಯ ಸಂಹೃಷ್ಟಃ ಸಂನಿಕರ್ಷಮುಪಾನಯತ್ ॥
ಅನುವಾದ
ಕುಂಭಕರ್ಣನು ಬಂದಿರುವುದನ್ನು ನೋಡಿ ದಶಕಂಠ ರಾವಣನು ಕೂಡಲೇ ಎದ್ದು ನಿಂತು, ಬಹಳ ಹರ್ಷದೊಂದಿಗೆ ಅವನನ್ನು ಬಳಿಗೆ ಕರೆದನು.॥7॥
ಮೂಲಮ್ - 8
ಅಥಾಸೀನಸ್ಯ ಪರ್ಯಂಕೇ ಕುಂಭಕರ್ಣೋ ಮಹಾಬಲಃ ।
ಭ್ರಾತುರ್ವವಂದೇ ಚರಣೌ ಕಿಂ ಕೃತ್ಯಮಿತಿಚಾಬ್ರವೀತ್ ॥
ಅನುವಾದ
ಮಹಾಬಲಿ ಕುಂಭಕರ್ಣನು ಸಿಂಹಾಸನದಲ್ಲಿ ಕುಳಿತಿರುವ ಅಣ್ಣನ ಪಾದಗಳಲ್ಲಿ ವಂದಿಸಿಕೊಂಡು- ‘ಯಾವ ಕಾರ್ಯ ಉಪಸ್ಥಿತವಾಗಿದೆ? ನನ್ನಿಂದೇನಾಗಬೇಕು?’ ಎಂದು ಕೇಳಿದನು.॥8॥
ಮೂಲಮ್ - 9
ಉತ್ಪತ್ಯ ಚೈನಂ ಮುದಿತೋ ರಾವಣಃ ಪರಿಷಸ್ವಜೇ ।
ಸ ಭ್ರಾತ್ರಾ ಸಂಪರಿಷ್ವಕ್ತೋ ಯಥಾವಚ್ಚಾಭಿನಂದಿತಃ ॥
ಅನುವಾದ
ರಾವಣನು ನೆಗೆದು ಮುಂದೆ ಬಂದು ಸಂತೋಷದಿಂದ ಕುಂಭಕರ್ಣನನ್ನು ಅಪ್ಪಿಕೊಂಡನು. ರಾವಣನು ಅವನನ್ನು ಆಲಂಗಿಸಿಕೊಂಡು ಅಭಿನಂದಿಸಿದನು.॥9॥
ಮೂಲಮ್ - 10½
ಕುಂಭಕರ್ಣಃ ಶುಭಂ ದಿವ್ಯಂ ಪ್ರತಿಪೇದೇ ವರಾಸನಮ್ ।
ಸ ತದಾಸನಮಾಶ್ರಿತ್ಯ ಕುಂಭಕರ್ಣೋ ಮಹಾಬಲಃ ॥
ಸಂರಕ್ತನಯನಃ ಕ್ರೋಧಾದ್ ರಾವಣಂ ವಾಕ್ಯಮಬ್ರವೀತ್ ।
ಅನುವಾದ
ಬಳಿಕ ಕುಂಭಕರ್ಣನು ಸುಂದರ ದಿವ್ಯಸಿಂಹಾಸನದಲ್ಲಿ ಕುಳಿತು, ಮಹಾ ಬಲಿ ಕುಂಭಕರ್ಣನು ಕ್ರೋಧದಿಂದ ಕಣ್ಣುಕೆಂಪಗಾಗಿಸಿ ರಾವಣನಲ್ಲಿ ಕೇಳಿದನು.॥10½॥
ಮೂಲಮ್ - 11½
ಕಿಮರ್ಥಮಹಮಾದೃತ್ಯ ತ್ವಯಾ ರಾಜನ್ ಪ್ರಬೋಧಿತಃ ॥
ಶಂಸ ಕಸ್ಮಾದ್ಭಯಂ ತೇಽತ್ರ ಕೋ ವಾ ಪ್ರೇತೋ ಭವಿಷ್ಯತಿ ।
ಅನುವಾದ
ರಾಜನೇ! ಯಾವುದಕ್ಕಾಗಿ ನೀನು ತುಂಬಾ ಆದರದೊಂದಿಗೆ ನನ್ನನ್ನು ಏಕೆ ಎಚ್ಚರಿಸಿದೆ? ನಿನಗೆ ಯಾರಿಂದ ಭಯ ಉಂಟಾಗಿದೆ? ಎಂದು ಹೇಳು. ಯಾರು ಪರಲೋಕದ ಪಥಿಕನಾಗುವನು.॥11½॥
ಮೂಲಮ್ - 12½
ಭ್ರಾತರಂ ರಾವಣಃ ಕ್ರುದ್ಧಂ ಕುಂಭಕರ್ಣಮವಸ್ಥಿತಮ್ ॥
ರೋಷೇಣ ಪರಿವೃತ್ತಾಭ್ಯಾಂನೇತ್ರಾಭ್ಯಾಂ ವಾಕ್ಯಮಬ್ರವೀತ್ ।
ಅನುವಾದ
ಆಗ ರಾವಣನು ತನ್ನ ಬಳಿ ಕುಪಿತನಾಗಿ ಕುಳಿತಿರುವ ಕುಂಭಕರ್ಣನಲ್ಲಿ ರೋಷದಿಂದ ಉರಿಯುವ ಕಣ್ಣುಗಳಿಂದ ಹೇಳಿದ.॥12½॥
ಮೂಲಮ್ - 13½
ಅದ್ಯ ತೇ ಸುಮಹಾನ್ಕಾಲಃ ಶಯಾನಸ್ಯ ಮಹಾಬಲ ॥
ಸುಷುಪ್ತಸ್ತ್ವಂ ನ ಜಾನೀಷೇ ಮಮ ರಾಮಕೃತಂ ಭಯಮ್ ।
ಅನುವಾದ
ಮಹಾಬಲಿ ವೀರನೇ! ನೀನು ಮಲಗಿ ಬಹಳ ಸಮಯ ಕಳೆಯಿತು. ನೀನು ಗಾಢನಿದ್ರೆಯಲ್ಲಿ ಮುಳುಗಿದ್ದರಿಂದ ರಾಮನಿಂದ ನನಗೆ ಭಯ ಉಂಟಾದುದು ನಿನಗೆ ತಿಳಿಯದೆ ಹೋಯಿತು.॥13½॥
ಮೂಲಮ್ - 14½
ಏಷ ದಾಶರಥಿಃ ಶ್ರೀಮಾನ್ ಸುಗ್ರೀವಸಹಿತೋ ಬಲೀ ॥
ಸಮುದ್ರಂ ಲಂಘಯಿತ್ವಾತು ಮೂಲಂ ನಃ ಪರಿಕೃಂತತಿ ।
ಅನುವಾದ
ಈ ದಶರಥಕುಮಾರ ಬಲಿಷ್ಠ ಶ್ರೀಮಾನ್ ರಾಮನು ಸುಗ್ರೀವನೊಂದಿಗೆ ಸಮುದ್ರವನ್ನು ದಾಟಿ ಇಲ್ಲಿಗೆ ಬಂದಿರುವನು ಹಾಗೂ ನಮ್ಮ ಕುಲವನ್ನು ವಿನಾಶಗೊಳಿಸುತ್ತಿದ್ದಾನೆ.॥14½॥
ಮೂಲಮ್ - 15½
ಹಂತ ಪಶ್ಯಸ್ವ ಲಂಕಾಯಾಂ ವನಾನ್ಯುಪವನಾನಿ ಚ ॥
ಸೇತುನಾ ಸುಖಮಾಗತ್ಯ ವಾನರೈಕಾರ್ಣವಂ ಕೃತಮ್ ।
ಅನುವಾದ
ಅಯ್ಯೋ! ನೋಡು, ಸಮುದ್ರಕ್ಕೆ ಸೇತುವೆ ಕಟ್ಟಿ ಸುಖವಾಗಿ ಇಲ್ಲಿಗೆ ಬಂದಿರುವ ವಾನರರು ಲಂಕೆಯ ಸಮಸ್ತ ವನ, ಉಪವನಗಳನ್ನು ಸಮುದ್ರಮಯವನ್ನಾಗಿ ಮಾಡಿಬಿಟ್ಟಿದ್ದಾರೆ. ಇಲ್ಲಿ ವಾನರರೂಪೀ ಸಮುದ್ರವೇ ಉಂಟಾದಂತಿದೆ.॥15½॥
ಮೂಲಮ್ - 16
ಯೇ ರಾಕ್ಷಸಾ ಮುಖ್ಯತಮಾ ಹತಾಸ್ತೇ ವಾನರೈರ್ಯುಧಿ ॥
ಮೂಲಮ್ - 17
ವಾನರಾಣಾಂ ಕ್ಷಯಂ ಯುದ್ಧೇ ನ ಪಶ್ಯಾಮಿ ಕಥಂಚನ ।
ನ ಚಾಪಿ ವಾನರಾ ಯುದ್ಧೇ ಜಿತಪೂರ್ವಾಃ ಕದಾಚನ ॥
ಅನುವಾದ
ನಮ್ಮ ಮುಖ್ಯ ಮುಖ್ಯ ವೀರ ರಾಕ್ಷಸರನ್ನು ವಾನರರು ಯುದ್ಧದಲ್ಲಿ ಕೊಂದುಹಾಕಿದರು. ಆದರೆ ಯುದ್ಧದಲ್ಲಿ ವಾನರ ಸಂಹಾರವಾಗುವುದನ್ನು ನಾನು ನೋಡಿಲ್ಲ. ರಣದಲ್ಲಿ ಯಾವ ವಾನರರೂ ಪರಾಜಿತರಾಗುವುದಿಲ್ಲ.॥16-17॥
ಮೂಲಮ್ - 18
ತದೇತದ್ ಭಯಮುತ್ಪನ್ನಂ ತ್ರಾಯಸ್ವೇಹ ಮಹಾಬಲ ।
ನಾಶಯ ತ್ವಮಿಮಾನದ್ಯ ತದರ್ಥಂ ಬೋಧಿತೋ ಭವಾನ್ ॥
ಅನುವಾದ
ಮಹಾಬಲಿ ವೀರನೇ! ಈಗ ನಮ್ಮ ಮೇಲೆ ಇದೇ ಭಯ ಬಂದೆರಗಿದೆ. ನೀನು ಇದರಿಂದ ನಮ್ಮನ್ನು ರಕ್ಷಿಸು. ಇಂದೇ ಈ ವಾನರರನ್ನು ನಾಶಗೊಳಿಸು. ಅದಕ್ಕಾಗಿ ನಿನ್ನನ್ನು ಎಬ್ಬಿಸಿರುವುದು.॥18॥
ಮೂಲಮ್ - 19
ಸರ್ವಕ್ಷಪಿತಕೋಶಂ ಚ ಸ ತ್ವಮಭ್ಯುಪಪದ್ಯ ಮಾಮ್ ।
ತ್ರಾಯಸ್ವೇಮಾಂ ಪುರೀಂ ಲಂಕಾಂ ಬಾಲವೃದ್ಧಾವಶೇಷಿತಾಮ್ ॥
ಅನುವಾದ
ನಮ್ಮ ಭಂಡಾರವೆಲ್ಲ ಬರಿದಾಗಿದೆ. ಇದನ್ನು ಗಮನಿಸಿ ಬಾಲಕರು ಮತ್ತು ವೃದ್ಧರೇ ಉಳಿದುಕೊಂಡಿರುವ ಈ ಲಂಕಾಪಟ್ಟಣವನ್ನು ನೀನು ರಕ್ಷಿಸು.॥19॥
ಮೂಲಮ್ - 20
ಭ್ರಾತುರರ್ಥೇ ಮಹಾಬಾಹೋ ಕುರು ಕರ್ಮ ಸುದುಷ್ಕರಮ್ ।
ಮಯೈವಂ ನೋಕ್ತಪೂರ್ವೋ ಹಿ ಭ್ರಾತಾ ಕಶ್ಚಿತ್ ಪರಂತಪ ॥
ಅನುವಾದ
ಮಹಾಬಾಹೋ! ನಿನ್ನ ಈ ಅಣ್ಣನಿಗಾಗಿ ಅತ್ಯಂತ ದುಷ್ಕರ ಪರಾಕ್ರಮವನ್ನು ತೋರು, ಪರಂತಪ! ಈ ಮೊದಲ ಎಂದಿಗೂ ಯಾವುದೇ ತಮ್ಮನಲ್ಲಿ ನಾನು ಇಂತಹ ಬೇಡಿಕೆ ಮಾಡಲಿಲ್ಲ.॥20॥
ಮೂಲಮ್ - 21
ತ್ವಯ್ಯಸ್ತಿ ಮಮ ಚ ಸ್ನೇಹಃ ಪರಾ ಸಂಭಾವನಾ ಚ ಮೇ ।
ದೈವಾಸುರೇಷು ಯುದ್ಧೇಷು ಬಹುಶೋರಾಕ್ಷಸರ್ಷಭ ॥
ಮೂಲಮ್ - 22
ತ್ವಯಾ ದೇವಾಃ ಪ್ರತಿವ್ಯೆಹ್ಯ ನಿರ್ಜಿತಾಶ್ಚಾಸುರಾ ಯುಧಿ ॥
ಅನುವಾದ
ನಿನ್ನ ಮೇಲೆ ಅತ್ಯಧಿಕ ಸ್ನೇಹವಿದ್ದು, ನಿನ್ನಲ್ಲಿ ಭಾರೀ ಆಸೆ ಇಟ್ಟಿದ್ದೇನೆ. ರಾಕ್ಷಸಶ್ರೇಷ್ಠನೇ! ನೀನು ದೇವಾಸುರ ಸಂಗ್ರಾಮದಲ್ಲಿ ಅನೇಕ ಬಾರಿ ಶತ್ರುಪಕ್ಷದಲ್ಲಿ ನಿಂತು ದೇವಾಸುರರನ್ನು ಪರಾಜಯಗೊಳಿಸಿರುವೆ.॥21-22॥
ಮೂಲಮ್ - 23
ತದೇತತ್ಸರ್ವಮಾತಿಷ್ಠ ವೀರ್ಯಂ ಭೀಮಪರಾಕ್ರಮ ।
ನಹಿ ತೇ ಸರ್ವಭೂತೇಷು ದೃಶ್ಯತೇ ಸದೃಶೋ ಬಲೀ ॥
ಅನುವಾದ
ಭಯಂಕರ ಪರಾಕ್ರಮಿ ವೀರನೇ ! ನೀನೇ ಈ ಪರಾಕ್ರಮ ಪೂರ್ಣಕಾರ್ಯವನ್ನು ನೆರವೇರಿಸಬೇಕು. ಏಕೆಂದರೆ ಸಮಸ್ತ ಪ್ರಾಣಿಗಳಲ್ಲಿ ನಿನ್ನಂತಹ ಬಲವಂತನು ನನಗೆ ಬೇರೆ ಯಾರೂ ಕಾಣುವುದಿಲ್ಲ.॥23॥
ಮೂಲಮ್ - 24
ಕುರುಷ್ವ ಮೇ ಪ್ರಿಯಹಿತಮೇತದುತ್ತಮಂ
ಯಥಾಪ್ರಿಯಂ ಪ್ರಿಯರಣ ಬಾಂಧವಪ್ರಿಯ ।
ಸ್ವತೇಜಸಾ ವ್ಯಥಯ ಸಪತ್ನವಾಹಿನೀಂ
ಶರದ್ಘನಂ ಪವನ ಇವೋದ್ಯತೋ ಮಹಾನ್ ॥
ಅನುವಾದ
ನೀನು ಯುದ್ಧ ಪ್ರಿಯನೇ ಆಗಿರುವೆ. ತನ್ನ ಬಂಧು-ಬಾಂಧವರನ್ನು ಪ್ರೀತಿಸುವವನಾಗಿರುವೆ. ಈಗ ನೀನು ನನ್ನ ಈ ಉತ್ತಮವಾದ ಪ್ರಿಯ ಕಾರ್ಯವನ್ನು ಮಾಡು. ತನ್ನ ತೇಜದಿಂದ ಶತ್ರು ಸೈನ್ಯವನ್ನು ವೇಗವಾಗಿ ಬೀಸಿದ ಪ್ರಚಂಡವಾಯು ಶರದ್ ಋತುವಿನ ಮೋಡಗಳನ್ನು ಭಿನ್ನಭಿನ್ನ ಮಾಡುವಂತೆ, ವ್ಯಥಿತಗೊಳಿಸು.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೆರಡನೆಯ ಸರ್ಗ ಪೂರ್ಣವಾಯಿತು.॥62॥