०६१ रामेण कुम्भकर्णबलश्रवणम्

वाचनम्
ಭಾಗಸೂಚನಾ

ವಿಭೀಷಣನು ಶ್ರೀರಾಮನಿಗೆ ಕುಂಭಕರ್ಣನನ್ನು ಪರಿಚಯ ಮಾಡಿಸಿದುದು, ಶ್ರೀರಾಮನ ಆಜ್ಞೆಯಂತೆ ವಾನರರು ಯುದ್ಧಕ್ಕಾಗಿ ಲಂಕೆಯದ್ವಾರಗಳನ್ನು ಆಕ್ರಮಿಸಿದುದು

ಮೂಲಮ್ - 1

ತತೋ ರಾಮೋ ಮಹಾತೇಜಾ ಧನುರಾದಾಯ ವೀರ್ಯವಾನ್ ।
ಕಿರೀಟಿನಂ ಮಹಾಕಾಯಂ ಕುಂಭಕರ್ಣಂ ದದರ್ಶ ಹ ॥

ಅನುವಾದ

ಅನಂತರ ಬಲವಿಕ್ರಮ ಸಂಪನ್ನ, ಧನುರ್ಧಾರೀ ಮಹಾತೇಜಸ್ವೀ ಶ್ರೀರಾಮನು ಕಿರೀಟಧಾರಿ ಮಹಾಕಾಯ ರಾಕ್ಷಸ ಕುಂಭಕರ್ಣನನ್ನು ನೋಡಿದನು.॥1॥

ಮೂಲಮ್ - 2

ತಂ ದೃಷ್ಟ್ವಾ ರಾಕ್ಷಸಶ್ರೇಷ್ಠಂ ಪರ್ವತಾಕಾರ ದರ್ಶನಮ್ ।
ಕ್ರಮಮಾಣಮಿವಾಕಾಶಂ ಪುರಾ ನಾರಾಯಣಂ ಯಥಾ ॥

ಮೂಲಮ್ - 3

ಸತೋಯಾಂಬುದ ಸಂಕಾಶಂ ಕಾಂಚನಾಂಗದಭೂಷಣಮ್ ।
ದೃಷ್ಟ್ವಾ ಪುನಃ ಪ್ರದುದ್ರಾವ ವಾನರಾಣಾಂ ಮಹಾಚಮೂಃ ॥

ಅನುವಾದ

ಅವನು ರಾಕ್ಷಸರಲ್ಲಿ ಬಹಳ ದೊಡ್ಡವನಾಗಿದ್ದು, ಪರ್ವತದಂತೆ ಕಂಡು ಬರುತ್ತಿದ್ದನು. ಹಿಂದೆ ಭಗವಾನ್ ನಾರಾಯಣನು ಆಕಾಶವನ್ನು ಅಳೆಯಲು ಪಾದ ಬೆಳೆಸಿದಂತೆ, ಹೆಜ್ಜೆ ಇಡುತ್ತಾ ಹೋಗು ತ್ತಿದ್ದನು. ನೀರು ತುಂಬಿದ ಮೇಘದಂತೆ ಕಪ್ಪಾದ ಕುಂಭಕರ್ಣನು ಸ್ವರ್ಣಭುಜಕೀರ್ತಿಯಿಂದ ವಿಭೂಷಿತನಾಗಿದ್ದನು. ಅವನನ್ನು ನೋಡಿ ವಾನರರ ವಿಶಾಲ ಸೈನ್ಯವು ಪುನಃ ಜೋರಾಗಿ ಓಡತೊಡಗಿತು.॥2-3॥

ಮೂಲಮ್ - 4

ವಿದ್ರುತಾಂ ವಾಹಿನೀಂ ದೃಷ್ಟ್ವಾ ವರ್ಧಮಾನಂ ಚ ರಾಕ್ಷಸಮ್ ।
ಸವಿಸ್ಮಿತಮಿದಂ ರಾಮೋ ವಿಭೀಷಣಮುವಾಚ ಹ ॥

ಅನುವಾದ

ತನ್ನ ಸೈನ್ಯವು ಓಡುತ್ತಿರುವುದನ್ನು ಹಾಗೂ ರಾಕ್ಷಸ ಕುಂಭಕರ್ಣನು ಮುಂದುವರಿಯುವುದನ್ನು ನೋಡಿ ಶ್ರೀರಾಮಚಂದ್ರನಿಗೆ ಬಹಳ ಆಶ್ಚರ್ಯವಾಗಿ, ಅವನು ವಿಭೀಷಣನಲ್ಲಿ ಕೇಳಿದನು.॥4॥

ಮೂಲಮ್ - 5

ಕೋಽಸೌ ಪರ್ವತಸಂಕಾಶಃ ಕಿರೀಟೀ ಹರಿಲೋಚನಃ ।
ಲಂಕಾಯಾಂ ದೃಶ್ಯತೇ ವೀರ ಸವಿದ್ಯುದಿವ ತೋಯದಃ ॥

ಅನುವಾದ

ಲಂಕಾಪುರಿಯಲ್ಲಿ ಈ ಪರ್ವತದಂತೆ ವಿಶಾಲಕಾಯ ವೀರನು ಯಾರು? ಇವನ ತಲೆಯಮೇಲೆ ಕಿರೀಟವಿದ್ದು, ಕಣ್ಣುಗಳು ಕಂದು ಬಣ್ಣದ್ದಾಗಿದ್ದು, ಸಿಡಿಲು ಸಹಿತ ಮೋಡದಂತೆ ಕಂಡುಬರುತ್ತಿರುವ ಇವನಾರು.॥5॥

ಮೂಲಮ್ - 6

ಪೃಥಿವ್ಯಾಂ ಕೇತುಭೂತೋಽಸೌ ಮಹಾನೇಕೋಽತ್ರ ದೃಶ್ಯತೇ ।
ಯಂ ದೃಷ್ಟ್ವಾ ವಾನರಾಃ ಸರ್ವೇ ವಿದ್ರವಂತಿ ತತಸ್ತತಃ ॥

ಅನುವಾದ

ಈ ಭೂತಳದಲ್ಲಿ ಇವನೊಬ್ಬನೇ ಧ್ವಜದಂತೆ ತೋರುತ್ತಿರುವನು. ಇವನನ್ನು ನೋಡಿ ವಾನರರೆಲ್ಲರೂ ಎಲ್ಲೆಡೆ ಓಡಿಹೋಗುತ್ತಿದ್ದಾರೆ.॥6॥

ಮೂಲಮ್ - 7

ಆಚಕ್ಷ್ವ ಸುಮಹಾನ್ ಕೋಽಸೌ ರಕ್ಷೋ ವಾ ಯದಿ ವಾಸುರಃ ।
ನ ಮಯೈವಂ ವಿಧಂ ಭೂತಂ ದೃಷ್ಟಪೂರ್ವಂ ಕದಾಚನ ॥

ಅನುವಾದ

ವಿಭೀಷಣ! ಈ ಮಹಾ ಪುರುಷನಾರು? ಇವನೇನು ರಾಕ್ಷಸನೋ, ಅಸುರನೋ? ಇಂತಹ ಅದ್ಭುತವಾದ ಪ್ರಾಣಿಯನ್ನು ನಾನಿದುವರೆಗೂ ನೋಡಿಯೇ ಇಲ್ಲ.॥7॥

ಮೂಲಮ್ - 8

ಸಂಪೃಷ್ಟೋ ರಾಜಪುತ್ರೇಣ ರಾಮೇಣಾಕ್ಲಿಷ್ಟಕರ್ಮಣಾ ।
ವಿಭೀಷಣೋ ಮಹಾಪ್ರಾಜ್ಞಃ ಕಾಕುತ್ಸ್ಥಮಿದಮಬ್ರವೀತ್ ॥

ಅನುವಾದ

ಆಯಾಸವಿಲ್ಲದೆ ಮಹತ್ಕಾರ್ಯ ಮಾಡುವ ರಾಜ ಕುಮಾರ ಶ್ರೀರಾಮನು ಹೀಗೆ ಕೇಳಿದಾಗ, ಪರಮ ಬುದ್ಧಿವಂತ ವಿಭೀಷಣನು ಆ ಕಕುತ್ಸ್ಥಕುಲಭೂಷಣ ರಘುನಾಥನಲ್ಲಿ ಹೀಗೆ ಹೇಳಿದನು.॥8॥

ಮೂಲಮ್ - 9

ಯೇನ ವೈವಸ್ವತೋ ಯುದ್ಧೇ ವಾಸವಶ್ಚ ಪರಾಜಿತಃ ।
ಸೈಷ ವಿಶ್ರವಸಃ ಪುತ್ರಃ ಕುಂಭಕರ್ಣಃ ಪ್ರತಾಪವಾನ್ ।
ಅಸ್ಯ ಪ್ರಮಾಣಸದೃಶೋ ರಾಕ್ಷಸೋಽನ್ಯೋ ನ ವಿದ್ಯತೇ ॥

ಅನುವಾದ

ಭಗವಂತ! ಯಾರು ಯುದ್ಧದಲ್ಲಿ ವೈವಸ್ವತ ಯಮ ಮತ್ತು ದೇವೇಂದ್ರನನ್ನು ಪರಾಜಿತಗೊಳಿಸಿರುವನೋ, ಇವನೇ ಆ ವಿಶ್ವವಸ್ಸುವಿನ ಪ್ರತಾಪಿ ಪುತ್ರ ಕುಂಭಕರ್ಣನು. ಇವನಿಗೆ ಸರಿಯಾದ ಬೇರೆ ರಾಕ್ಷಸನೇ ಇಲ್ಲ.॥9॥

ಮೂಲಮ್ - 10

ಏತೇನ ದೇವಾ ಯುಧಿ ದಾನವಾಶ್ಚ
ಯಕ್ಷಾ ಭುಜಂಗಾಃ ಪಿಶಿತಾಶನಾಶ್ಚ ।
ಗಂಧರ್ವವಿದ್ಯಾಧರಕಿನ್ನರಾಶ್ಚ
ಸಹಸ್ರಶೋ ರಾಘವ ಸಂಪ್ರಭಗ್ನಾಃ ॥

ಅನುವಾದ

ರಘುನಂದನ! ಇವನು ದೇವತೆ, ದಾನವ, ಯಕ್ಷ, ನಾಗ, ರಾಕ್ಷಸ, ಗಂಧರ್ವ, ವಿದ್ಯಾಧರ, ಕಿನ್ನರ ಹೀಗೆ ಇವರೆಲ್ಲರನ್ನು ಸಾವಿರಾರು ಬಾರಿ ಯುದ್ಧದಲ್ಲಿ ಸೋಲಿಸಿ ಬಿಟ್ಟಿರುವನು.॥10॥

ಮೂಲಮ್ - 11

ಶೂಲಪಾಣಿಂ ವಿರೂಪಾಕ್ಷಂ ಕುಂಭಕರ್ಣಂ ಮಹಾಬಲಮ್ ।
ಹಂತುಂ ನ ಶೇಕುಸ್ತ್ರಿದಶಾಃ ಕಾಲೋಽಯಮಿತಿ ಮೋಹಿತಾಃ ॥

ಅನುವಾದ

ಇವನ ಕಣ್ಣುಗಳು ಭಯಂಕರವಾಗಿವೆ. ಈ ಮಹಾಬಲಿ ಕುಂಭಕರ್ಣನು ಕೈಯಲ್ಲಿ ಶೂಲ ಹಿಡಿದು ಯುದ್ಧದಲ್ಲಿ ನಿಂತಾಗ ದೇವತೆಗಳೂ ಇವನನ್ನು ಕೊಲ್ಲಲು ಸಮರ್ಥರಾಗಲಿಲ್ಲ. ಇವನು ಕಾಲರೂಪನೆಂದೇ ತಿಳಿದು ಎಲ್ಲರೂ ಮೋಹಿತರಾಗಿದ್ದರು.॥11॥

ಮೂಲಮ್ - 12

ಪ್ರಕೃತ್ಯಾ ಹ್ಯೇಷ ತೇಜಸ್ವೀ ಕುಂಭಕರ್ಣೋ ಮಹಾಬಲಃ ।
ಅನ್ಯೇಷಾಂ ರಾಕ್ಷಸೇಂದ್ರಾಣಾಂ ವರದಾನ ಕೃತಂ ಬಲಮ್ ॥

ಅನುವಾದ

ಕುಂಭಕರ್ಣನು ಸ್ವಾಭಾವಿಕವಾಗಿಯೇ ತೇಜಸ್ವಿಯೂ, ಮಹಾಬಲವಂತನೂ ಆಗಿದ್ದಾನೆ. ಇತರ ರಾಕ್ಷಸರಲ್ಲಿ ಇರುವ ಬಲವನ್ನೆಲ್ಲ ಇವನು ವರಬಲದಿಂದ ಪಡೆದಿರುವನು.॥12॥

ಮೂಲಮ್ - 13

ಬಾಲೇನ ಜಾತಮಾತ್ರೇಣ ಕ್ಷುಧಾರ್ತೇನ ಮಹಾತ್ಮನಾ ।
ಭಕ್ಷಿತಾನಿ ಸಹಸ್ರಾಣಿ ಪ್ರಜಾನಾಂ ಸುಬಹೂನ್ಯಪಿ ॥

ಅನುವಾದ

ಈ ಮಹಾಕಾಯ ರಾಕ್ಷಸನು ಹುಟ್ಟಿದಾಗಲೇ ಬಾಲ್ಯದಲ್ಲೇ ಹಸಿವಿನಿಂದ ಪೀಡಿತನಾಗಿ ಅನೇಕ ಸಾವಿರ ಪ್ರಜಾಜನರನ್ನು ತಿಂದುಹಾಕಿದ್ದನು.॥13॥

ಮೂಲಮ್ - 14

ತೇಷು ಸಂಭಕ್ಷ್ಯಮಾಣೇಷು ಪ್ರಜಾ ಭಯನಿಪೀಡಿತಾಃ ।
ಯಾಂತಿ ಸ್ಮ ಶರಣಂ ಶಕ್ರಂ ತಮಪ್ಯರ್ಥಂ ನ್ಯವೇದಯನ್ ॥

ಅನುವಾದ

ಸಾವಿರಾರು ಪ್ರಜಾಜನರು ಇವನ ಆಹಾರವಾದಾಗ ಭಯದಿಂದ ಪೀಡಿತರಾದ ಎಲ್ಲರೂ ದೇವೇಂದ್ರನಲ್ಲಿ ಶರಣಾಗಿ, ಅವನಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡರು.॥14॥

ಮೂಲಮ್ - 15

ಸ ಕುಂಭಕರ್ಣಂ ಕುಪಿತೋ ಮಹೇಂದ್ರೋ
ಜಘಾನ ವಜ್ರೇಣ ಶಿತೇನ ವಜ್ರೀ ।
ಸ ಶಕ್ರವಜ್ರಾಭಿಹತೋ ಮಹಾತ್ಮಾ
ಚಚಾಲ ಕೋಪಾಚ್ಚ ಭೃಶಂ ನನಾದ ॥

ಅನುವಾದ

ಇದರಿಂದ ವಜ್ರಧಾರೀ ಇಂದ್ರನಿಗೆ ಭಾರೀ ಕ್ರೋಧ ಉಂಟಾಗಿ, ಅವನು ತನ್ನ ತೀಕ್ಷ್ಣ ವಜ್ರಾಯುಧದಿಂದ ಕುಂಭಕರ್ಣನನ್ನು ಗಾಯಗೊಳಿಸಿದನು. ಇಂದ್ರನ ವಜ್ರದ ಏಟು ತಿಂದು ಈ ಮಹಾಕಾಯ ರಾಕ್ಷಸನು ಕ್ಷುಬ್ಧನಾದನು ಹಾಗೂ ರೋಷದಿಂದ ಜೋರಾಗಿ ಸಿಂಹನಾದ ಮಾಡತೊಡಗಿದನು.॥15॥

ಮೂಲಮ್ - 16

ತಸ್ಯ ನಾನದ್ಯಮಾನಸ್ಯ ಕುಂಭಕರ್ಣಸ್ಯ ರಕ್ಷಸಃ ।
ಶ್ರುತ್ವಾ ನಿನಾದಂ ವಿತ್ರಸ್ತಾಃ ಪ್ರಜಾ ಭೂಯೋ ವಿತತ್ರಸುಃ ॥

ಅನುವಾದ

ರಾಕ್ಷಸ ಕುಂಭಕರ್ಣನು ಪದೇ ಪದೇ ಗರ್ಜಿಸಿದಾಗ, ಅವನ ಸಿಂಹನಾದ ಕೇಳಿ ಪ್ರಜಾವರ್ಗವು ಇನ್ನೂ ಭಯಗೊಂಡರು.॥16॥

ಮೂಲಮ್ - 17

ತತಃ ಕ್ರುದ್ಧೋಮಹೇಂದ್ರಸ್ಯ ಕುಂಭಕರ್ಣೋ ಮಹಾಬಲಃ ।
ವಿಕೃಷ್ಯೈರಾವತಾದ್ದಂತಂ ಜಘಾನೋರಸಿ ವಾಸವಮ್ ॥

ಅನುವಾದ

ಅನಂತರ ಕುಪಿತನಾದ ಮಹಾಬಲಿ ಕುಂಭಕರ್ಣನು ಇಂದ್ರನ ಐರಾವತದ ಒಂದು ದಾಡೆಯನ್ನು ಮುರಿದು, ಅದರಿಂದ ದೇವೇಂದ್ರನ ಎದೆಗೆ ಪ್ರಹರಿಸಿದನು.॥17॥

ಮೂಲಮ್ - 18

ಕುಂಭಕರ್ಣ ಪ್ರಹಾರಾರ್ತೋ ವಿಜಜ್ವಾಲ ಸ ವಾಸವಃ ।
ತತೋ ವಿಷೇದುಃ ಸಹಸಾ ದೇವಾ ಬ್ರಹ್ಮರ್ಷಿದಾನವಾಃ ॥

ಅನುವಾದ

ಕುಂಭಕರ್ಣನ ಪ್ರಹಾರದಿಂದ ಇಂದ್ರನು ವ್ಯಾಕುಲನಾಗಿ, ಉರಿಯತೊಡಗಿದನು. ಇದನ್ನು ನೋಡಿದ ಎಲ್ಲ ದೇವತೆಗಳು, ಬ್ರಹ್ಮರ್ಷಿಗಳು, ದಾನವರೂ ವಿಷಾದಗ್ರಸ್ತರಾದರು.॥18॥

ಮೂಲಮ್ - 19

ಪ್ರಜಾಭಿಃಸಹ ಶಕ್ರಶ್ಚ ಯಯೌ ಸ್ಥಾನಂ ಸ್ವಯಂಭುವಃ ।
ಕುಂಭಕರ್ಣಸ್ಯ ದೌರಾತ್ಮ್ಯಂ ಶಶಂಸುಸ್ತೇ ಪ್ರಜಾಪತೇಃ ॥

ಅನುವಾದ

ಅನಂತರ ಇಂದ್ರನ ಆ ಪ್ರಜಾಜನರೊಂದಿಗೆ ಬ್ರಹ್ಮದೇವರ ಧಾಮಕ್ಕೆ ಹೋಗಿ ಎಲ್ಲರೂ ಪ್ರಜಾಪತಿಯಲ್ಲಿ ಕುಂಭಕರ್ಣನ ದುಷ್ಟತೆಯನ್ನು ವಿಸ್ತಾರವಾಗಿ ವಿವರಿಸಿದರು.॥19॥

ಮೂಲಮ್ - 20

ಪ್ರಜಾನಾಂ ಭಕ್ಷಣಂ ಚಾಪಿ ದೇವಾನಾಂ ಚಾಪಿ ಧರ್ಷಣಮ್ ।
ಆಶ್ರಮಧ್ವಂಸನಂ ಚಾಪಿ ಪರಸ್ತ್ರೀಹರಣಂ ಭೃಶಮ್ ॥

ಅನುವಾದ

ಇವನು ಪ್ರಜೆಗಳನ್ನು ಭಕ್ಷಿಸಿದುದು, ದೇವತೆಗಳನ್ನು ತಿರಸ್ಕರಿಸಿದುದು, ಋಷಿಗಳ ಆಶ್ರಮ ಹಾಳುಗೆಡಹಿದುದು, ಪರಸ್ತ್ರೀಯರನ್ನು ಪದೇ ಪದೇ ಅಪಹರಿಸಿದುದು, ಎಲ್ಲವನ್ನೂ ತಿಳಿಸಿದರು.॥20॥

ಮೂಲಮ್ - 21

ಏವಂ ಪ್ರಜಾ ಯದಿ ತ್ವೇಷ ಭಕ್ಷಯಿಷ್ಯತಿ ನಿತ್ಯಶಃ ।
ಆಚಿರೇಣೈವ ಕಾಲೇನ ಶೂನ್ಯೋ ಲೋಕೋ ಭವಿಷ್ಯತಿ ॥

ಅನುವಾದ

ಇಂದ್ರನು ಹೇಳಿದನು- ಪೂಜ್ಯರೇ! ಇವನು ಪ್ರತಿದಿನ ಹೀಗೆ ಪ್ರಜಾಜನರನ್ನು ಭಕ್ಷಿಸಿದರೆ ಸ್ವಲ್ಪ ಸಮಯದಲ್ಲೇ ಇಡೀ ಜಗತ್ತು ಬರಿದಾಗಿ ಹೋದೀತು.॥21॥

ಮೂಲಮ್ - 22

ವಾಸವಸ್ಯ ವಚಃ ಶ್ರುತ್ವಾ ಸರ್ವಲೋಕ ಪಿತಾಮಹಃ ।
ರಕ್ಷಾಂಸ್ಯಾವಾಹಯಾಮಾಸ ಕುಂಭಕರ್ಣಂ ದದರ್ಶ ಹ ॥

ಅನುವಾದ

ಇಂದ್ರನ ಮಾತನ್ನು ಕೇಳಿ ಸರ್ವಲೋಕ ಪಿತಾಮಹ ಬ್ರಹ್ಮದೇವರು ಎಲ್ಲ ರಾಕ್ಷಸರನ್ನು ಕರೆಸಿ, ಅವರಲ್ಲಿ ಕುಂಭಕರ್ಣನನ್ನು ನೋಡಿದನು.॥22॥

ಮೂಲಮ್ - 23

ಕುಂಭಕರ್ಣಂ ಸಮೀಕ್ಷ್ಯೇವ ವಿತತ್ರಾಸ ಪ್ರಜಾಪತಿಃ ।
ಕುಂಭಕರ್ಣಮಥಾಶ್ವಾಸ್ತಃ ಸ್ವಯಂಭೂರಿದಮಬ್ರವೀತ್ ॥

ಅನುವಾದ

ಕುಂಭಕರ್ಣನನ್ನು ನೋಡುತ್ತಲೇ ಸ್ವಯಂಭೂ ಬ್ರಹ್ಮದೇವರು ನಡುಗಿಹೋದರು. ಮತ್ತೆ ಸಾವರಿಸಿಕೊಂಡು ಆ ರಾಕ್ಷಸನಲ್ಲಿ ಹೇಳಿದರು.॥23॥

ಮೂಲಮ್ - 24

ಧ್ರುವಂ ಲೋಕವಿನಾಶಾಯ ಪೌಲಸ್ತ್ಯೇನಾಸಿ ನಿರ್ಮಿತಃ ।
ತಸ್ಮಾತ್ ತ್ವಮದ್ಯಪ್ರಭೃತಿ ಮೃತಕಲ್ಪಃ ಶಯಿಷ್ಯಸೇ ॥

ಅನುವಾದ

ಕುಂಭಕರ್ಣನೇ! ಖಂಡಿತವಾಗಿ ಈ ಜಗತ್ತನ್ನು ವಿನಾಶಗೊಳಿಸಲೆಂದೇ ವಿಶ್ರವಸ್ಸುವಿನಿಂದ ನೀನು ಹುಟ್ಟಿರುವೆ. ಆದ್ದರಿಂದ ‘ಇಂದಿನಿಂದ ನೀನು ಮಲಗಿಯೇ ಇರು’ ಎಂದು ನಾನು ಶಾಪಕೊಡುತ್ತಿದ್ದೇನೆ.॥24॥

ಮೂಲಮ್ - 25

ಬ್ರಹ್ಮಶಾಪಾಭಿಭೂತೋಽಥ ನಿಪಪಾತಾಗ್ರತಃ ಪ್ರಭೋಃ ।
ತತಃ ಪರಮಸಂಭ್ರಾನ್ತೋ ರಾವಣೋ ವಾಕ್ಯಮಬ್ರವೀತ್ ॥

ಅನುವಾದ

ಬ್ರಹ್ಮನ ಶಾಪದಿಂದ ತಿರಸ್ಕೃತನಾಗಿ ಕುಂಭಕರ್ಣನು ಅಣ್ಣನ ಕಾಲುಗಳಲ್ಲಿ ಬಿದ್ದನು. ಇದಿರಂದ ರಾವಣನು ಗಾಬರಿಗೊಂಡು ಹೇಳಿದನು.॥25॥

ಮೂಲಮ್ - 26

ಪ್ರವೃದ್ಧಃ ಕಾಂಚನೋ ವಕ್ಷಃ ಫಲಕಾಲೇ ನಿಕೃತ್ಯತೇ ।
ನ ನಪ್ತಾರಂ ಸ್ವಕಂ ನ್ಯಾಯ್ಯಂ ಶಪ್ತುಮೇವಂ ಪ್ರಜಾಪತೇ ॥

ಅನುವಾದ

ಪ್ರಜಾಪತಿಯೇ! ಚೆನ್ನಾಗಿ ನೆಟ್ಟು, ಬೆಳೆಸಿದ ಸ್ವರ್ಣಮಯ ವೃಕ್ಷವನ್ನು ಫಲಕೊಡುವ ಸಮಯದಲ್ಲೆ ಕತ್ತರಿಸಿ ಹಾಕುವುದಿಲ್ಲ. ಇವನು ನಿನ್ನ ಮೊಮ್ಮಗನೇ ಆಗಿದ್ದು, ಹೀಗೆ ಶಪಿಸುವುದು ಉಚಿತವಲ್ಲ.॥26॥

ಮೂಲಮ್ - 27

ನ ಮಿಥ್ಯಾವಚನಶ್ಚ ತ್ವಂ ಸ್ವಪ್ಸ್ಯತ್ಯೇವ ನ ಸಂಶಯಃ ।
ಕಾಲಸ್ತು ಕ್ರಿಯತಾಮಸ್ಯ ಶಯನೇ ಜಾಗರೇ ತಥಾ ॥

ಅನುವಾದ

ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಅದರಿಂದ ಈಗ ಇವನು ಮಲಗಲೇಬೇಕಾಗುವುದು, ಇದರಲ್ಲಿ ಸಂಶಯವೇ ಇಲ್ಲ. ಆದರೆ ಅವನು ಮಲಗುವ ಮತ್ತು ಎಚ್ಚರಗೊಳ್ಳುವ ಸಮಯವನ್ನು ನೀನೇ ನಿಗದಿಪಡಿಸು.॥27॥

ಮೂಲಮ್ - 28

ರಾವಣಸ್ಯ ವಚಃ ಶ್ರುತ್ವಾ ಸ್ವಯಂಭೂರಿದಮಬ್ರವೀತ್ ।
ಶಯಿತಾ ಹ್ಯೇಷ ಷಣ್ಮಾಸಮೇಕಾಹಂ ಜಾಗರಿಷ್ಯತಿ ॥

ಅನುವಾದ

ರಾವಣನ ಈ ಮಾತನ್ನು ಕೇಳಿ ಬ್ರಹ್ಮದೇವರು ಹೇಳಿದರು - ಇವನು ಆರು ತಿಂಗಳವರೆಗೆ ಮಲಗಿಯೇ ಇರುವನು ಹಾಗೂ ಒಂದು ದಿನ ಎಚ್ಚರವಾಗಿರುವನು.॥28॥

ಮೂಲಮ್ - 29

ಏಕೇನಾಹ್ನಾ ತ್ವಸೌ ವೀರಶ್ಚರನ್ ಭುಮಿಂ ಬುಭುಕ್ಷಿತಃ ।
ವ್ಯಾತ್ತಾಸ್ಯೋ ಭಕ್ಷಯೇಲ್ಲೋಕಾನ್ ಸಂವೃದ್ಧ ಇವ ಪಾವಕಃ ॥

ಅನುವಾದ

ಆ ಒಂದು ದಿನವೇ ಈ ವೀರನು ಹಸಿವಿನಿಂದ ಸಂಚರಿಸುತ್ತಾ ಪ್ರಜ್ವಲಿತ ಅಗ್ನಿಯಂತೆ ಬಾಯಿ ತೆರೆದು ಅನೇಕ ಪ್ರಾಣಿಗಳನ್ನು ತಿಂದುಹಾಕುವನು.॥29॥

ಮೂಲಮ್ - 30

ಸೋಽಸೌ ವ್ಯಸನಮಾಪನ್ನಃ ಕುಂಭಕರ್ಣಮಬೋಧಯತ್ ।
ತ್ವತ್ಪರಾಕ್ರಮಭೀತಶ್ಚ ರಾಜಾ ಸಂಪ್ರತಿ ರಾವಣಃ ॥

ಅನುವಾದ

ಶ್ರೀರಾಮಾ! ಈಗ ಆಪತ್ತಿಗೆ ಸಿಲುಸಿದ ರಾಜಾರಾವಣನು ನಿನ್ನ ಪರಾಕ್ರಮದಿಂದ ಭಯಗೊಂಡು ಕುಂಭಕರ್ಣನನ್ನು ನಿದ್ದೆಯಿಂದ ಎಚ್ಚರಿಸಿರುವನು.॥30॥

ಮೂಲಮ್ - 31

ಸ ಏಷ ನಿರ್ಗತೋ ವೀರಃ ಶಿಬಿರಾದ್ಭೀಮವಿಕ್ರಮಃ ।
ವಾನರಾನ್ ಭೃಶಸಂಕ್ರುದ್ಧೋ ಭಕ್ಷಯನ್ ಪರಿಧಾವತಿ ॥

ಅನುವಾದ

ಈ ಭಯಾನಕ ಪ್ರರಾಕ್ರಮಿ ವೀರನು ತನ್ನ ಶಿಬಿರದಿಂದ ಹೊರಟು, ಅತ್ಯಂತ ಕುಪಿತನಾಗಿ ವಾನರರನ್ನು ತಿಂದುಹಾಕಲು ಎಲ್ಲೆಡೆ ಓಡುತ್ತಿದ್ದಾನೆ.॥31॥

ಮೂಲಮ್ - 32

ಕುಂಭಕರ್ಣಂ ಸಮೀಕ್ಷ್ಯೆವ ಹರಯೋಽದ್ಯ ಪ್ರದುದ್ರುವುಃ ।
ಕಥಮೇನಂ ರಣೇ ಕ್ರುದ್ಧಂ ವಾರಯಿಷ್ಯಂತಿ ವಾನರಾಃ ॥

ಅನುವಾದ

ಕುಂಭಕರ್ಣನನ್ನು ನೋಡಿಯೇ ಇಂದು ವಾನರರೆಲ್ಲ ಓಡುತ್ತಿರುವಾಗ, ನಾಳೆ ರಣರಂಗದಲ್ಲಿ ಕಂಪತನಾದ ಈ ವೀರನನ್ನು ಹೇಗೆ ತಾನೇ ತಡೆಯಬಲ್ಲರು.॥32॥

ಮೂಲಮ್ - 33

ಉಚ್ಯಂತಾಂ ವಾನರಾಃ ಸರ್ವೇ ಯಂತ್ರಮೇತತ್ಸಮುಚ್ಛ್ರಿತಮ್ ।
ಇತಿ ವಿಜ್ಞಾಯ ಹರಯೋ ಭವಿಷ್ಯಂತೀಹ ನಿರ್ಭಯಾಃ ॥

ಅನುವಾದ

ಎಲ್ಲ ವಾನರಿಗೆ ‘ಇದು ಯಾವುದೇ ವ್ಯಕ್ತಿಯಲ್ಲ, ಅಲ್ಲೊಂದು ಪರ್ವತೋಪಮ ಮಂತ್ರದ ಸ್ಥಾಪನೆಯಾಗಿದೆ’ ಎಂದು ಹೇಳಿದರೆ ಇದನ್ನು ತಿಳಿದು ಅವರು ನಿರ್ಭಯರಾಗುವರು.॥33॥

ಮೂಲಮ್ - 34

ವಿಭೀಷಣವಚಃ ಶ್ರುತ್ವಾ ಹೇತುಮತ್ ಸುಮುಖೋದ್ಗತಮ್ ।
ಉವಾಚ ರಾಘವೋ ವಾಕ್ಯಂ ನೀಲಂ ಸೇನಾಪತಿಂ ತದಾ ॥

ಅನುವಾದ

ವಿಭೀಷಣನು ಆಡಿದ ಯುಕ್ತಿಯುಕ್ತ ಮಾತನ್ನು ಕೇಳಿ ಶ್ರೀರಾಮನು ಸೇನಾಪತಿ ನೀಲನಲ್ಲಿ ಹೇಳಿದನು.॥34॥

ಮೂಲಮ್ - 35

ಗಚ್ಛಸೈನ್ಯಾನಿ ಸರ್ವಾಣಿ ವ್ಯೂಹ್ಯ ತಿಷ್ಠಸ್ವ ಪಾವಕೇ ।
ದ್ವಾರಾಣ್ಯಾದಾಯ ಲಂಕಾಯಾಶ್ಚರ್ಯಾಶ್ಚಾಸ್ಯಾಥ ಸಂಕ್ರಮಾನ್ ॥

ಅನುವಾದ

ಅಗ್ನಿನಂದನ! ಹೋಗು, ವಾನರಸೈನ್ಯವನ್ನು ಸಂಘಟಿಸಿ, ವ್ಯೂಹಕ್ರಮದಲ್ಲಿ ನಿಲ್ಲಿಸು, ಲಂಕೆಯ ಮಹಾದ್ವಾರಗಳಲ್ಲಿ, ರಾಜಬೀದಿಗಳನ್ನು ಸ್ವಾಧೀನಪಡಿಸಿಕೊಂಡು ಯುದ್ಧಕ್ಕಾಗಿ ಸಿದ್ಧರಾಗಿ ನಿಲ್ಲಲಿ.॥35॥

ಮೂಲಮ್ - 36

ಶೈಲಶೃಂಗಾಣಿ ವೃಕ್ಷಾಂಶ್ಚ ಶಿಲಾಶ್ಚಾಪ್ಯುಪಸಂಹರನ್ ।
ಭವಂತಃ ಸಾಯುಧಾಃ ಸರ್ವೇ ವಾನರಾಃ ಶೈಲಪಾಣಯಃ ॥

ಅನುವಾದ

ಪರ್ವತ ಶಿಖರಗಳನ್ನು, ವೃಕ್ಷ, ಶಿಲೆಗಳನ್ನು ಜೊತೆ ಸೇರಿಸಿಕೊಳ್ಳಿ. ಎಲ್ಲ ವಾನರರು ಅಸ್ತ್ರ-ಶಸ್ತ್ರ ಹಾಗೂ ಬಂಡೆಗಳನ್ನು ಧರಿಸಿ ಸಿದ್ಧರಾಗಲಿ.॥36॥

ಮೂಲಮ್ - 37

ರಾಘವೇಣ ಸಮಾದಿಷ್ಟೋ ನೀಲೋ ಹರಿಚಮೂಪತಿಃ ।
ಶಶಾಸ ವಾನರಾನೀಕಂ ಯಥಾವತ್ ಕಪಿಕುಂಜರಃ ॥

ಅನುವಾದ

ಶ್ರೀರಘುನಾಥನ ಈ ಆಜ್ಞೆಪಡೆದು ವಾನರಸೇನಾಪತಿ ಕಪಿಶ್ರೇಷ್ಠ ನೀಲನು ತನ್ನ ಸೈನ್ಯಕ್ಕೆ ಯಥೋಚಿತ ಕಾರ್ಯಕ್ಕಾಗಿ ಆದೇಶ ನೀಡಿದನು.॥37॥

ಮೂಲಮ್ - 38

ತತೋ ಗವಾಕ್ಷಃ ಶರಭೋ ಹನೂಮಾನಂಗದಸ್ತಥಾ ।
ಶೈಲಶೃಂಗಾಣಿ ಶೈಲಾಭಾ ಗೃಹೀತ್ವಾ ದ್ವಾರಮಭ್ಯಯುಃ ॥

ಅನುವಾದ

ಅನಂತರ ಗವಾಕ್ಷ, ಶರಭ, ಹನುಮಂತ, ಅಂಗದ ಮೊದಲಾದ ಪರ್ವತಾಕಾರದ ವಾನರರು ಪರ್ವತ ಶಿಖರಗಳನ್ನೆತ್ತಿಕೊಂಡು ಲಂಕೆಯ ಮಹಾದ್ವಾರಗಳನ್ನು ಆಕ್ರಮಿಸಿದರು.॥38॥

ಮೂಲಮ್ - 39

ರಾಮವಾಕ್ಯಮುಪಶ್ರುತ್ಯ ಹರಯೋ ಜಿತಕಾಶಿನಃ ।
ಪಾದಪೈರರ್ದಯನ್ವೀರಾ ವಾನರಾಃ ಪರವಾಹಿನೀಮ್ ॥

ಅನುವಾದ

ವಿಜಯೋಲ್ಲಾಸದಿಂದ ಸುಶೋಭಿತರಾದ ವೀರ ವಾನರರು ಶ್ರೀರಾಮಚಂದ್ರನ ಅಪ್ಪಣೆ ಪಡೆದು ವೃಕ್ಷಗಳಿಂದ ಶತ್ರುಸೈನ್ಯವನ್ನು ಸದೆಬಡಿಯತೊಡಗಿದರು.॥39॥

ಮೂಲಮ್ - 40

ತತೋ ಹರೀಣಾಂ ತದನೀಕಮುಗ್ರಂ
ರರಾಜ ಶೈಲೋದ್ಯತವೃಕ್ಷ ಹಸ್ತಮ್ ।
ಗಿರೇಃ ಸಮೀಪಾನುಗತಂ ಯಥೈವ
ಮಹನ್ಮಹಾಂಭೋಧರ ಜಾಲಮುಗ್ರಮ್ ॥

ಅನುವಾದ

ಅನಂತರ ಕೈಗಳಲ್ಲಿ ಶೈಲ-ಶಿಖರ ಮತ್ತು ವೃಕ್ಷಗಳನ್ನು ಎತ್ತಿಕೊಂಡ ವಾನರರ ಆ ಭಯಂಕರ ಸೈನ್ಯವು ಪರ್ವತದ ಮೇಲೆ ಕವಿದ ಭಾರೀ ಮೇಘಗಳಂತೆ ಶೋಭಿಸತೊಡಗಿದರು.॥40॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೊಂದನೆಯ ಸರ್ಗ ಪೂರ್ಣವಾಯಿತು.॥61॥