वाचनम्
ಭಾಗಸೂಚನಾ
ಪರಾಜಯದಿಂದ ದುಃಖಿತನಾದ ರಾವಣನ ಆಜ್ಞೆಯಂತೆ ಮಲಗಿದ್ದ ಕುಂಭಕರ್ಣನನ್ನು ಎಚ್ಚರಿಸಿದುದು, ಅವನನ್ನು ನೋಡಿ ವಾನರರು ಭಯಗೊಂಡುದು
ಮೂಲಮ್ - 1
ಸ ಪ್ರವಿಶ್ಯ ಪುರೀಂ ಲಂಕಾಂ ರಾಮಬಾಣ ಭಯಾರ್ದಿತಃ ।
ಭಗ್ನದರ್ಪಸ್ತದಾ ರಾಜಾ ಬಭೂವ ವ್ಯಥಿತೇಂದ್ರಿಯಃ ॥
ಅನುವಾದ
ಭಗವಾನ್ ಶ್ರೀರಾಮನ ಬಾಣಗಳ ಭಯದಿಂದ ಪೀಡಿತನಾದ ರಾವಣನು ಲಂಕೆಯನ್ನು ಪ್ರವೇಶಿಸಿದಾಗ ಅವನ ಅಭಿಮಾನ ನುಚ್ಚುನೂರಾಗಿಸಿತ್ತು. ಅವನ ಸರ್ವೇಂದ್ರಿಯಗಳು ವ್ಯಥೆಯಿಂದ ವ್ಯಾಕುಲವಾದುವು.॥1॥
ಮೂಲಮ್ - 2
ಮಾತಂಗ ಇವ ಸಿಂಹೇನ ಗರುಡೇನೇವ ಪನ್ನಗಃ ।
ಅಭಿಭೂತೋಽಭವದ್ರಾಜಾ ರಾಘವೇಣ ಮಹಾತ್ಮನಾ ॥
ಅನುವಾದ
ಸಿಂಹನಿಂದ ಆನೆಯು ಮತ್ತು ಗರುಡನಿಂದ ದೊಡ್ಡ ನಾಗವು ಪರಾಜಿತವಾದಂತೆ ಮಹಾತ್ಮಾ ರಘುನಾಥನು ರಾಜಾ ರಾವಣನನ್ನು ಪರಾಜಿತಗೊಳಿಸಿದ್ದನು.॥2॥
ಮೂಲಮ್ - 3
ಬ್ರಹ್ಮದಂಡ ಪ್ರತೀಕಾನಾಂ ವಿದ್ಯುಚ್ಚಲಿತ ವರ್ಚಸಾಮ್ ।
ಸ್ಮರನ್ರಾಘವಬಾಣಾನಾಂ ವಿವ್ಯಥೇ ರಾಕ್ಷಸೇಶ್ವರಃ ॥
ಅನುವಾದ
ಶ್ರೀರಾಮನ ಬಾಣಗಳು ಬ್ರಹ್ಮದಂಡದಂತೆ ಕಂಡುಬರುತ್ತಿದ್ದವು. ಅವುಗಳ ದೀಪ್ತಿ ವಿದ್ಯುಲ್ಲತೆಯಂತೆ ಚಂಚಲವಾಗಿತ್ತು. ಅವುಗಳನ್ನು ನೆನೆದು ರಾಕ್ಷಸೇಶ್ವರ ರಾವಣನು ಆಗ ಹೀಗೆ ಹೇಳ ತೊಡಗಿದನು .॥3॥
ಮೂಲಮ್ - 4
ಸ ಕಾಂಚನಮಯಂ ದಿವ್ಯಮಾಶ್ರಿತ್ಯ ಪರಮಾಸನಮ್ ।
ವಿಪ್ರೇಕ್ಷಮಾಣೋ ರಕ್ಷಾಂಸಿ ರಾವಣೋ ವಾಕ್ಯಮಬ್ರವೀತ್ ॥
ಅನುವಾದ
ಶ್ರೇಷ್ಠವಾದ ಸ್ವರ್ಣ ಸಿಂಹಾಸನದಲ್ಲಿ ಕುಳಿತು ರಾಕ್ಷಸರ ಕಡೆಗೆ ನೋಡುತ್ತಾ ರಾವಣನು ಹಿಂದೆ ಹೇಳಿದನು.॥4॥
ಮೂಲಮ್ - 5
ಸರ್ವಂ ತತ್ಖಲು ಮೇ ಮೋಘಂ ಯತ್ತಪ್ತಂ ಪರಮಂ ತಪಃ ।
ಯತ್ಸಮಾನೋ ಮಹೇಂದ್ರೇಣ ಮಾನುಷೇಣ ವಿನಿರ್ಜಿತಃ ॥
ಅನುವಾದ
ನಾನು ಮಾಡಿದ ಭಾರೀ ತಪಸ್ಸು ಖಂಡಿತವಾಗಿ ವ್ಯರ್ಥವಾಯಿತು; ಏಕೆಂದರೆ ಇಂದು ಮಹೇಂದ್ರತಲ್ಯ ಪರಾಕ್ರಮಿ ರಾವಣನಾದ ನನ್ನನ್ನು ಒಬ್ಬ ಮನುಷ್ಯನು ಸೋಲಿಸಿಬಿಟ್ಟನು.॥5॥
ಮೂಲಮ್ - 6
ಇದಂ ತದ್ಬ್ರಹ್ಮಣೋ ಘೋರಂ ವಾಕ್ಯಂ ಮಾಮಭ್ಯುಪಸ್ಥಿತಮ್ ।
ಮಾನುಷೇಭ್ಯೋ ವಿಜಾನೀಹಿ ಭಯಂ ತ್ವಮಿತಿ ತತ್ತಥಾ ॥
ಅನುವಾದ
‘ನಿನಗೆ ಮನುಷ್ಯರಿಂದ ಭಯ ಪ್ರಾಪ್ತವಾಗಬಹುದು ಇದು ಚೆನ್ನಾಗಿ ತಿಳಿದುಕೋ’ ಎಂದು ಬ್ರಹ್ಮದೇವರು ನನ್ನಲ್ಲಿ ಹೇಳಿದ್ದರು. ಅವರು ನುಡಿದ ಆ ಘೋರ ವಚನವು ಈಗ ಸಲವಾಗಿ ನನ್ನ ಎದುರಿಗೆ ಬಂದು ನಿಂತಿದೆ.॥6॥
ಮೂಲಮ್ - 7
ದೇವದಾನವಗಂಧರ್ವೈರ್ಯಕ್ಷರಾಕ್ಷಸಪನ್ನಗೈಃ ।
ಅವಧ್ಯತ್ವಂ ಮಯಾಪ್ರೋಕ್ತಂ ಮಾನುಷೇಭ್ಯೋ ನ ಯಾಚಿತಮ್ ॥
ಅನುವಾದ
ನಾನಾದರೋ ದೇವತೆ, ದಾನವ, ಗಂಧರ್ವ, ಯಕ್ಷ, ರಾಕ್ಷಸ, ಸರ್ಪ ಇವರಿಂದಲೇ ಅವಧ್ಯನಾಗುವ ವರವನ್ನು ಬೇಡಿದ್ದೆ, ಮನುಷ್ಯರಿಂದ ನಿರ್ಭಯನಾಗಿರುವ ವರವನ್ನು ಕೇಳಿರಲಿಲ್ಲ.॥7॥
ಮೂಲಮ್ - 8
ತಮಿಮಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ।
ಇಕ್ಷ್ವಾಕುಕುಲಜಾತೇನ ಅನರಣ್ಯೇನ ಯತ್ಪುರಾ ॥
ಮೂಲಮ್ - 9½
ಉತ್ಪತ್ಸ್ಯತಿ ಹಿ ಮದ್ವಂಶಪುರುಷೋ ರಾಕ್ಷಸಾಧಮ ।
ಯಸ್ತ್ವಾಂ ಸಪುತ್ರಂ ಸಾಮಾತ್ಯಂ ಸಬಲಂ ಸಾಶ್ವಸಾರಥಿಮ್ ॥
ನಿಹನಿಷ್ಯತಿ ಸಂಗ್ರಾಮೇ ತ್ವಾಂ ಕುಲಾಧಮ ದುರ್ಮತೇ ।
ಅನುವಾದ
ಹಿಂದೆ ಇಕ್ಷ್ವಾಕುವಂಶೀ ರಾಜಾ ಅನರಣ್ಯನು ನನಗೆ ಶಾಪ ಕೊಡುವಾಗ - ‘ಎಲೈ ರಾಕ್ಷಸಾಧಮಾ! ಕುಲಾಂಗಾರ, ದುರ್ಮತೇ! ನಿನ್ನ ಪುತ್ರ, ಮಂತ್ರಿ, ಸೈನ್ಯ, ಅಶ್ವ ಸಾರಥಿ ಸಹಿತ ಯುದ್ಧರಂಗದಲ್ಲಿ ಸಂಹರಿಸುವ ಶ್ರೇಷ್ಠ ಪುರುಷನು ನನ್ನ ವಂಶದಲ್ಲಿ ಹುಟ್ಟಿ ನಿನ್ನನ್ನು ಕೊಂದುಬಿಡುವನು’. ಅನರಣ್ಯನು ಯಾವುದನ್ನು ಸಂಕೇತ ಮಾಡಿದ್ದನೋ ಅವನೇ ಈ ದಶರಥಕುಮಾರ ಮನುಷ್ಯ ರಾಮನೇ ಆಗಿದ್ದಾನೆ.॥8-9॥
ಮೂಲಮ್ - 10½
ಶಪ್ತೋಽಹಂ ವೇದವತ್ಯಾ ಚ ಯಥಾ ಸಾ ಧರ್ಷಿತಾ ಪುರಾ ॥
ಸೇಯಂ ಸೀತಾ ಮಹಾಭಾಗಾ ಜಾತಾ ಜನಕನಂದಿನೀ ।
ಅನುವಾದ
ಇದಲ್ಲದೆ ಹಿಂದೆ ವೇದವತಿಯೂ ನನಗೆ ಶಾಪಕೊಟ್ಟದ್ದಳು; ಏಕೆಂದರೆ ನಾನು ಆಕೆಯನ್ನು ಬಲಾತ್ಕಾರ ಮಾಡಿದ್ದೆ. ಆಕೆಯೇ ಈ ಮಹಾ ಭಾಗಾ ಜನಕನಂದಿನಿ ಸೀತೆಯಾಗಿ ಪ್ರಕಟವಾಗಿರುವಂತೆ ಅನಿಸುತ್ತದೆ.॥10॥
ಮೂಲಮ್ - 11½
ಉಮಾ ನಂದೀಶ್ವರಶ್ಚಾಪಿ ರಂಭಾ ವರುಣಕನ್ಯಕಾ ॥
ಯಥೋಕ್ತಾಸ್ತನ್ಮಯಾ ಪ್ರಾಪ್ತಂ ನ ಮಿಥ್ಯಾ ಋಷಿಭಾಷಿತಮ್ ।
ಅನುವಾದ
ಇದೇ ರೀತಿ ಉಮಾ, ನಂದೀಶ್ವರ, ರಂಭೆ, ವರುಣ ಕನ್ಯೆ ಹೇಳಿದಂತೆಯೇ ಪರಿಣಾಮ ನನಗೆ ಪ್ರಾಪ್ತವಾಯಿತು.* ಋಷಿಗಳ ಮಾತು ಎಂದೂ ಸುಳ್ಳಾಗುವುದಿಲ್ಲ. ಇದು ನಿಜವೇ ಆಗಿದೆ.॥11॥
ಟಿಪ್ಪನೀ
- ಕೈಲಾಸವನ್ನು ಎತ್ತಿದಾಗ ರಾವಣನಿಗೆ ಭಯಗೊಂಡ ಉಮೆಯು- ‘ಸ್ತ್ರೀ ನಿಮಿತ್ತದಿಂದಲೇ ನಿನ್ನ ಮೃತ್ಯುವಾಗುವುದು’ ಎಂದು ಶಪಿಸಿದ್ದಳು. ನಂದೀಶ್ವರನ ವಾನರಮೂರ್ತಿಯನ್ನು ನೋಡಿ ರಾವಣನು ನಕ್ಕಿದ್ದನು, ಅದರಿಂದ ಅವನು- ‘ನನ್ನಂತೆಯೇ ರೂಪ-ಪರಾಕ್ರಮವುಳ್ಳವರೇ ನಿನ್ನ ಕುಲವನ್ನು ನಾಶಗೊಳಿಸುವರು’ ಎಂದು ಶಪಿಸಿದ್ದರು. ರಂಭೆಯ ನಿಮಿತ್ತದಿಂದ ನಳಕೂಬರರು ಹಾಗೂ ವರುಣ ಕನ್ಯೆ ಪುಂಜಿಕಸ್ಥಲೆಯ ನಿಮಿತ್ತದಿಂದ ಬ್ರಹ್ಮದೇವರು- ‘ಆಕೆ ಬಯಸದೇ ಯಾವುದೇ ಸ್ತ್ರೀಯೊಡನೆ ಸಂಭೋಗಮಾಡಿದಾಗ ನಿನ್ನ ಮೃತ್ಯುವಾಗುವುದು’ ಎಂದು ಶಪಿಸಿದ್ದರು.
ಮೂಲಮ್ - 12½
ಏತದೇವ ಸಮಾಗಮ್ಯ ಯತ್ನಂ ಕರ್ತುಮಿಹಾರ್ಹಥ ॥
ರಾಕ್ಷಸಾಶ್ಚಾಪಿ ತಿಷ್ಠಂತು ಚರ್ಯಾ ಗೋಪುರಮೂರ್ಧಸು ।
ಅನುವಾದ
ಈ ಶಾಪಗಳೇ ನನ್ನ ಮೇಲೆ ಭಯ, ಸಂಕಟ ತಂದೊಡ್ಡಲು ಕಾರಣವಾಗಿದೆ. ಇದನ್ನು ತಿಳಿದು ನೀವೆಲ್ಲರೂ ಬಂದಿರುವ ಸಂಕಟವನ್ನು ನಿವಾರಿಸಲು ಪ್ರಯತ್ನಿಸಿರಿ. ರಾಕ್ಷಸರು ರಾಜಮಾರ್ಗ ಹಾಗೂ ಗೋಪುರ ಶಿಖರಗಳ ರಕ್ಷಣೆಗಾಗಿ ಸಿದ್ಧರಿರಲಿಲ್ಲ.॥12॥
ಮೂಲಮ್ - 13½
ಸ ಚಾಪ್ರತಿಮಗಾಂಭೀರ್ಯೋ ದೇವದಾನವ ದರ್ಪಹಾ ॥
ಬ್ರಹ್ಮಶಾಪಾಭಿಭೂತಸ್ತು ಕುಂಭಕರ್ಣೋ ವಿಬೋಧ್ಯತಾಮ್ ।
ಅನುವಾದ
ಜೊತೆಗೆ ಯಾರ ಗಾಂಭಿರ್ಯದ ತುಲನೆಯೇ ಇಲ್ಲವೋ, ದೇವತೆಗಳ, ದಾನವರ ದರ್ಪವನ್ನು ಅರೆಯಬಲ್ಲನೋ, ಬ್ರಹ್ಮದೇವರ ಶಾಪದಿಂದ ಪ್ರಾಪ್ತವಾದ ನಿದ್ರೆಯಲ್ಲೆ ಸದಾ ಮುಳುಗಿರುತ್ತಾನೋ, ಆ ಕುಂಭಕರ್ಣನನ್ನು ಎಚ್ಚರಿಸಲಾಗುವುದು.॥13॥
ಮೂಲಮ್ - 14
ಸಮರೇ ಜಿತಮಾತ್ಮಾನಂ ಪ್ರಹಸ್ತಂ ಚ ನಿಷೂದಿತಮ್ ॥
ಮೂಲಮ್ - 15½
ಜ್ಞಾತ್ವಾ ರಕ್ಷೋಬಲಂ ಭೀಮಮಾದಿದೇಶ ಮಹಾಬಲಃ ।
ದ್ವಾರೇಷು ಯತ್ನಃ ಕ್ರಿಯತಾಂ ಪ್ರಾಕಾರಶ್ಚಾಧಿರುಹ್ಯತಾಮ್ ॥
ನಿದ್ರಾವಶಸಮಾವಿಷ್ಟಃ ಕುಂಭಕರ್ಣೋ ವಿಬೋಧ್ಯತಾಮ್ ।
ಅನುವಾದ
ಪ್ರಹಸ್ತನು ಸತ್ತುಹೋದನು, ನಾನೂ ಸಮರಾಂಗಣದಲ್ಲಿ ಸೋತು ಹೋದೆ, ಹೀಗೆ ತಿಳಿದ ಮಹಾಬಲಿ ರಾವಣನು ರಾಕ್ಷಸರ ಭಯಾನಕ ಸೈನ್ಯಕ್ಕೆ ನೀವು ಪ್ರಾಕಾರಗಳ ಮೇಲೆ ಹತ್ತಿ ನಿಂತುಕೊಳ್ಳಿ, ನಗರದ ಮಹಾದ್ವಾರಗಳಲ್ಲಿ ನಿಂತು ಅವನ್ನು ರಕ್ಷಿಸುವ ಪ್ರಯತ್ನ ಮಾಡಿರಿ ಹಾಗೂ ನಿದ್ರೆಗೆ ಅಧೀನನಾದ ಕುಂಭಕರ್ಣನನ್ನು ಎಚ್ಚರಿಸಿರಿ.॥14-15॥
ಮೂಲಮ್ - 16
ಸುಖಂ ಸ್ವಪಿತಿ ನಿಶ್ಚಿಂತಃ ಕಾಮೋಪಹತಚೇತನಃ ॥
ಮೂಲಮ್ - 17
ನವ ಸಪ್ತ ದಶಾಷ್ಟೌ ಚ ಮಾಸಾನ್ ಸ್ವಪಿತಿ ರಾಕ್ಷಸಃ ।
ಮಂತ್ರಂಕೃತ್ವಾಪ್ರಸುಪ್ತೋಽಯಮಿತಸ್ತು ನವಮೇಽಹನಿ ॥
ಅನುವಾದ
ನಾನಾದರೋ ದುಃಖಿ, ಚಿಂತಿತ ಮತ್ತು ಅಪೂರ್ಣಕಾಮನಾಗಿ ನಿದ್ರಾಹೀನನಾಗಿದ್ದೇನೆ. ಆ ರಾಕ್ಷಸನು ಕಾಮಭೋಗದಿಂದ ನಿಶ್ಚೇಷ್ಟಿತನಾಗಿ, ನಿಶ್ಚಿಂತೆಯಿಂದ ಸುಖವಾಗಿ ಮಲಗಿದ್ದಾನೆ. ಅವನು ಕೆಲವೊಮ್ಮೆ ಒಂಭತ್ತು, ಕೆಲವೊಮ್ಮೆ ಏಳು, ಹತ್ತು, ಎಂಟು ತಿಂಗಳುವರೆಗೆ ಮಲಗಿಯೇ ಇರುತ್ತಾನೆ. ಇಂದಿನಿಂದ ಒಂಭತ್ತು ತಿಂಗಳುಗಳ ಮೊದಲು ನನ್ನಲ್ಲಿ ಸಲಹೆ ಕೇಳಿ ಮಲಗಿದ್ದನು.॥16-17॥
ಮೂಲಮ್ - 18
ತಂ ತು ಬೋಧಯತ ಕ್ಷಿಪ್ರಂ ಕುಂಭಕರ್ಣಂ ಮಹಾಬಲಮ್ ।
ಸ ಹಿ ಸಂಖ್ಯೇ ಮಹಾಬಾಹುಃ ಕಕುದಂ ಸರ್ವರಕ್ಷಸಾಮ್ ।
ವಾನರಾನ್ರಾಜಪುತ್ರೌ ಚ ಕ್ಷಿಪ್ರಮೇವ ಹನಿಷ್ಯತಿ ॥
ಅನುವಾದ
ಆದ್ದರಿಂದ ನೀವು ಮಹಾಬಲಿ ಕುಂಭಕರ್ಣನನ್ನು ಬೇಗನೆ ಎಬ್ಬಿಸಿರಿ. ಮಹಾಬಾಹು ಕುಂಭಕರ್ಣನು ಎಲ್ಲ ರಾಕ್ಷಸರಲ್ಲಿ ಶ್ರೇಷ್ಠನಾಗಿದ್ದಾನೆ. ಅವನು ಯುದ್ಧದಲ್ಲಿ ವಾನರರನ್ನು ಮತ್ತು ರಾಜಕುಮಾರರನ್ನು ಶೀಘ್ರವಾಗಿ ಕೊಲ್ಲುವನು.॥18॥
ಮೂಲಮ್ - 19
ಏಷ ಕೇತುಃ ಪರಂ ಸಂಖ್ಯೇ ಮುಖ್ಯೋ ವೈ ಸರ್ವರಕ್ಷಸಾಮ್ ।
ಕುಂಭಕರ್ಣಃ ಸದಾ ಶೇತೇ ಮೂಢೋ ಗ್ರಾಮ್ಯಸುಖೇ ರತಃ ॥
ಅನುವಾದ
ಸಮಸ್ತ ರಾಕ್ಷಸರಲ್ಲಿ ಪ್ರಧಾನನಾದ ಈ ಕುಂಭಕರ್ಣನು ರಣರಂಗದಲ್ಲಿ ನಮಗಾಗಿ ಸರ್ವೋತ್ತಮ ವಿಜಯ ವೈಜಯಂತೆ ಇದ್ದಾನೆ; ಆದರೆ ಆ ಮೂರ್ಖನು ಗ್ರಾಮ್ಯಸುಖದಲ್ಲಿ ಆಸಕ್ತನಾಗಿ ಸದಾ ಮಲಗಿಯೇ ಇರುವುದು ಅತ್ಯಂತ ಖೇದದ ಮಾತಾಗಿದೆ.॥19॥
ಮೂಲಮ್ - 20
ರಾಮೇಣಾಭಿನಿರಸ್ತಸ್ಯ ಸಂಗ್ರಾಮೇಽಸ್ಮಿನ್ ಸುದಾರುಣೇ ।
ಭವಿಷ್ಯತಿ ನ ಮೇ ಶೋಕಃ ಕುಂಭಕರ್ಣೇ ವಿಬೋಧಿತೇ ॥
ಅನುವಾದ
ಕುಂಭಕರ್ಣನನ್ನು ಎಚ್ಚರಿಸಿದರೆ ಈ ಭಯಂಕರ ಸಂಗ್ರಾಮದಲ್ಲಿ ರಾಮನಿಂದ ಪರಾಜಿತನಾದ ಶೋಕ ಆಗಲಾರದು.॥20॥
ಮೂಲಮ್ - 21
ಕಿಂ ಕರಿಷ್ಯಾಮ್ಯಹಂ ತೇನ ಶಕ್ರತುಲ್ಯಬಲೇನ ಹಿ ।
ಈದೃಶೇ ವ್ಯಸನೇ ಘೋರೇ ಯೋ ನ ಸಾಹ್ಯಾಯ ಕಲ್ಪತೇ ॥
ಅನುವಾದ
ಈ ಘೋರ ಸಂಕಟ ಸಮಯದಲ್ಲಿಯೂ ಕುಂಭಕರ್ಣನು ನನಗೆ ಸಹಾಯ ಮಾಡಲು ಅಸಮರ್ಥನಾದರೆ ಇಂದ್ರತುಲ್ಯ ಬಲಶಾಲಿಯಾಗಿದ್ದರೂ ಅವನಿಂದ ನನಗೇನು ಪ್ರಯೋಜನ? ಅವನನ್ನು ಇಟ್ಟುಕೊಂಡು ಏನು ಮಾಡಲಿ.॥21॥
ಮೂಲಮ್ - 22
ತೇ ತು ತದ್ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ರಾಕ್ಷಸಾಃ ।
ಜಗ್ಮುಃ ಪರಮಸಂಭ್ರಾಂತಾಃ ಕುಂಭಕರ್ಣ ನಿವೇಶನಮ್ ॥
ಅನುವಾದ
ರಾಕ್ಷಸ ರಾಜಾ ರಾವಣನ ಆ ಮಾತನ್ನು ಕೇಳಿ ಸಮಸ್ತ ರಾಕ್ಷಸರು ಗಾಬರಿಗೊಂಡು ಕುಂಭಕರ್ಣನ ಮನೆಗೆ ಹೋದರು.॥22॥
ಮೂಲಮ್ - 23
ತೇ ರಾವಣಸಮಾದಿಷ್ಟಾ ಮಾಂಸ ಶೋಣಿತಭೋಜನಾಃ ।
ಗಂಧ ಮಾಲ್ಯಂ ಮಹದ್ಭಕ್ಷ್ಯಮಾದಾ ಸಹಸಾ ಯಯುಃ ॥
ಅನುವಾದ
ರಕ್ತ-ಮಾಂಸದ ಭೋಜನ ಮಾಡುವ ಆ ರಾಕ್ಷಸರು ರಾವಣನ ಅಪ್ಪಣೆಯಂತೆ ಗಂಧ, ಮಾಲ್ಯ ಹಾಗೂ ಹೆಚ್ಚಾದ ಖಾದ್ಯ-ಪಾನೀಯ ಸಾಮಗ್ರಿಗಳನ್ನೆತ್ತಿಕೊಂಡು ಕೂಡಲೇ ಕುಂಭಕರ್ಣನ ಬಳಿಗೆ ಹೋದರು.॥23॥
ಮೂಲಮ್ - 24
ತಾಂ ಪ್ರವಿಶ್ಯ ಮಹಾದ್ವಾರಾಂ ಸರ್ವತೋ ಯೋಜನಾಯತಾಮ್ ।
ಕುಂಭಕರ್ಣಗುಹಾಂ ರಮ್ಯಾಂ ಪುಷ್ಪಗಂಧ ಪ್ರವಾಹಿನೀಮ್ ॥
ಮೂಲಮ್ - 25
ಕುಂಭಕರ್ಣಸ್ಯ ನಿಃಶ್ಚಾಸಾದವಧೂತಾ ಮಹಾಬಲಾಃ ।
ಪ್ರತಿಷ್ಠಮಾನಾಃ ಕೃಚ್ಛ್ರೇಣ ಯತ್ನಾತ್ ಪ್ರವಿವಿಶುರ್ಗುಹಾಮ್ ॥
ಅನುವಾದ
ಕುಂಭಕರ್ಣನು ಒಂದು ಸುಂದರವಾದ ಗುಹೆಯಲ್ಲಿ ಇರುತ್ತಿದ್ದನು. ಅದರಲ್ಲಿ ಹೂವುಗಳ ಪರಿಮಳ ಪಸರಿಸಿತ್ತು. ಅದು ಒಂದು ಯೋಜನ ಉದ್ದ- ಅಗಲವಿದ್ದು, ಬಾಗಿಲು ಬಹಳ ದೊಡ್ಡದಾಗಿತ್ತು. ಅದರಲ್ಲಿ ಪ್ರವೇಶಿಸುತ್ತಲೇ ಮಹಾಬಲಿ ರಾಕ್ಷಸರು ಕುಂಭಕರ್ಣನ ಬಿಟ್ಟ ಉಸಿರಿನಿಂದ ಹಿಂದಕ್ಕೆ ತಳ್ಳಲ್ಪಟ್ಟರು. ಮತ್ತೆ ಕಷ್ಟದಿಂದ ಪೂರ್ಣ ಪ್ರಯತ್ನಪೂರ್ವಕ ಆ ಗುಹೆಯೊಳಗೆ ಹೊಕ್ಕರು.॥24-25॥
ಮೂಲಮ್ - 26
ತಾಂ ಪ್ರವಿಶ್ಯ ಗುಹಾಂ ರಮ್ಯಾಂ ರತ್ನಕಾಂಚನ ಕುಟ್ಟಿಮಾಮ್ ।
ದದೃಶುರ್ನೈರ್ಋತವ್ಯಾಘ್ರಾಃ ಶಯಾನಂ ಭೀಮದರ್ಶನಮ್ ॥
ಅನುವಾದ
ಆ ಗುಹೆಯ ನೆಲಕ್ಕೆ ರತ್ನಗಳನ್ನು, ಸುವರ್ಣವನ್ನು ಹಾಸಿದ್ದರು, ಅದರಿಂದ ಅದರ ರಮಣೀಯತೆ ಹೆಚ್ಚಾಗಿತ್ತು. ಅದರೊಳಗೆ ಪ್ರವೇಶಿಸಿ ಆ ರಾಕ್ಷಸಶ್ರೇಷ್ಠರು ಕುಂಭಕರ್ಣನು ಮಲಗಿರುವುದನ್ನು ನೋಡಿದರು.॥26॥
ಮೂಲಮ್ - 27
ತೇ ತು ತಂ ವಿಕೃತಂ ಸುಪ್ತಂ ವಿಕೀರ್ಣಮಿವ ಪರ್ವತಮ್ ।
ಕುಂಭಕರ್ಣಂ ಮಹಾನಿದ್ರಂ ಸಮೇತಾಃ ಪ್ರತ್ಯಬೋಧಯನ್ ॥
ಅನುವಾದ
ಮಹಾನಿದ್ರೆಯಲ್ಲಿ ಮುಳುಗಿದ ಕುಂಭಕರ್ಣನು ಹರಡಿದ ಪರ್ವತದಂತೆ ವಿಕೃತಾವಸ್ಥೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದನು. ಆ ರಾಕ್ಷಸರೆಲ್ಲ ಒಂದಾಗಿ ಅವನನ್ನು ಎಚ್ಚರಿಸಲು ಪ್ರಯತ್ನಿಸತೊಡಗಿದರು.॥27॥
ಮೂಲಮ್ - 28
ಊರ್ಧ್ವಲೋಮಾಂಚಿತ ತನುಂ ಶ್ವಸಂತಮಿವ ಪನ್ನಗಮ್ ।
ಭ್ರಾಮಯಂತಂ ವಿನಿಃಶ್ವಾಸೈಃ ಶಯಾನಂ ಭೀಮವಿಕ್ರಮಮ್ ॥
ಅನುವಾದ
ಅವನ ಶರೀರದ ರೋಮಗಳೆಲ್ಲ ನಿಮಿರಿನಿಂತಿದ್ದವು, ಸರ್ಪದಂತೆ ಉಸಿರಾಡುತ್ತಾ ಆ ಗಾಳಿಯಿಂದ ಬಳಿಯಲಿದ್ದ ಜನರನ್ನು ಅಲ್ಲಿಂದಿಲ್ಲಿಗೆ ಸುತ್ತಾಡಿಸುತ್ತಿದ್ದನು. ಅಲ್ಲಿ ಮಲಗಿದ್ದ ಆ ಭಯಾನಕ ರಾಕ್ಷಸನು ಬಲ-ವಿಕ್ರಮ ಸಂಪನ್ನನಾಗಿದ್ದನು.॥28॥
ಮೂಲಮ್ - 29
ಭೀಮನಾಸಾಪುಟಂ ತಂ ತು ಪಾತಾಲ ವಿಪುಲಾನನಮ್ ।
ಶಯನೇ ನ್ಯಸ್ತಸರ್ವಾಂಗಂ ಮೇದೋರುಧಿರ ಗಂಧಿನಮ್ ॥
ಅನುವಾದ
ಅವನ ಮೂಗಿನ ಹೊಳ್ಳೆಗಳು ಭಾರೀ ಭಯಂಕರವಾಗಿದ್ದವು. ಬಾಯಿ ಪಾತಾಳದಂತೆ ವಿಶಾಲವಾಗಿತ್ತು. ಶಯ್ಯೆಯಲ್ಲಿ ಮಲಗಿದ್ದ ಅವನ ದೇಹದಿಂದ ರಕ್ತ ಮತ್ತು ಮೇದಸ್ಸಿನ ವಾಸನೆ ಹೊರಸೂಸುತ್ತಿತ್ತು.॥29॥
ಮೂಲಮ್ - 30
ಕಾಂಚನಾಂಗದನದ್ಧಾಂಗಂ ಕಿರೀಟೇನಾರ್ಕವರ್ಚಸಮ್ ।
ದದೃಶುರ್ನೈರ್ಋತವ್ಯಾಘ್ರಂ ಕುಂಭಕರ್ಣಮರಿಂದಮಮ್ ॥
ಅನುವಾದ
ಭುಜಗಳಲ್ಲಿ ತೋಳ್ಬಂದಿಗಳು ಶೋಭಿಸುತ್ತಿದ್ದವು, ತಲೆಯಲ್ಲಿ ತೇಜಸ್ವೀ ಕಿರೀಟ ಧರಿಸಿದ್ದರಿಂದ ಅವನು ಸೂರ್ಯನಂತೆ ಪ್ರಕಾಶಪುಂಜನಾಗಿ ಕಾಣುತ್ತಿದ್ದನು. ಹೀಗೆ ರಾಕ್ಷಸ ಶ್ರೇಷ್ಠರು ಶತ್ರುದಮನ ಕುಂಭಕರ್ಣನನ್ನು ನೋಡಿದರು.॥30॥
ಮೂಲಮ್ - 31
ತತಶ್ಚಕ್ರುರ್ಮಹಾತ್ಮಾನಃ ಕುಂಭಕರ್ಣಸ್ಯ ಚಾಗ್ರತಃ ।
ಭೂತಾನಾಂ ಮೇರುಸಂಕಾಶಂ ರಾಶಿಂ ಪರಮತರ್ಪಣಮ್ ॥
ಅನುವಾದ
ಬಳಿಕ ಆ ಮಹಾಕಾಯ ನಿಶಾಚರರು ಕುಂಭಕರ್ಣನಿಗೆ ಅತ್ಯಂತ ತೃಪ್ತಿಪಡಿಸುವ ಪ್ರಾಣಿಗಳನ್ನು ಮೇರುಪರ್ವತದಂತೆ ಅವನು ಮುಂದೆ ರಾಶಿ ಹಾಕಿದರು.॥31॥
ಮೂಲಮ್ - 32
ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಸಂಚಯಾನ್ ।
ಚಕ್ರುರ್ನೈರ್ಋತ ಶಾರ್ದೂಲಾ ರಾಶಿಮನ್ನಸ್ಯ ಚಾದ್ಭುತಮ್ ॥
ಅನುವಾದ
ಆ ಶ್ರೇಷ್ಠರಾಕ್ಷಸರು ಅಲ್ಲಿ ಜಿಂಕೆ, ಕೋಣ, ಹಂದಿಗಳ ಸಮೂಹಗಳನ್ನೇ ತಂದುಬಿಟ್ಟಿದ್ದರು ಹಾಗೂ ಅನ್ನವನ್ನು ಕೂಡ ಅದ್ಭುತ ರಾಶಿಯನ್ನು ಸಿದ್ಧಪಡಿಸಿದರು.॥32॥
ಮೂಲಮ್ - 33
ತತಃ ಶೋಣಿತ ಕುಂಭಾಂಶ್ಚ ಮಾಂಸಾನಿ ವಿವಿಧಾನಿ ಚ ।
ಪುರಸ್ತಾತ್ ಕುಂಭಕರ್ಣಸ್ಯ ಚಕ್ರುಸ್ತ್ರಿದಶಶತ್ರವಃ ॥
ಅನುವಾದ
ಇಷ್ಟೇ ಅಲ್ಲದೆ ದೇವದ್ರೋಹಿಗಳು ಕುಂಭಕರ್ಣನ ಮುಂದೆ ರಕ್ತದಿಂದ ತುಂಬಿದ ಬಹಳಷ್ಟು ಗಡಿಗೆಗಳನ್ನು ಹಾಗೂ ನಾನಾ ವಿಧದ ಮಾಂಸವನ್ನು ಇರಿಸಿದರು.॥33॥
ಮೂಲಮ್ - 34
ಲಿಲಿಪುಶ್ಚ ಪರಾರ್ಧ್ಯೇನ ಚಂದನೇನ ಪರಂತಪಮ್ ।
ದಿವ್ಯೈರಾಶ್ವಾಸಯಾಮಾಸುರ್ಮಾಲ್ಯೈರ್ಗಂಧೈಶ್ಚಃ ಗಂಧಿಭಿಃ ॥
ಮೂಲಮ್ - 35
ಧೂಪ ಗಂಧಾಶ್ಚ ಸಸೃಜುಸ್ತುಷ್ಟುವುಶ್ಚ ಪರಂತಪಮ್ ।
ಜಲದಾ ಇವ ಚಾನೇದುರ್ಯಾತುಧಾನಾಸ್ತತಸ್ತತಃ ॥
ಅನುವಾದ
ಬಳಿಕ ಅವರು ಶತ್ರುಸಂತಾಪಿ ಕುಂಭಕರ್ಣನ ಶರೀರದಲ್ಲಿ ಅಮೂಲ್ಯ ಚಂದನವನ್ನು ಲೇಪಿಸಿದರು. ದಿವ್ಯ ಸುಗಂಧಿತ ಪುಷ್ಪ, ಚಂದನವನ್ನು ಮೂಗಿಗೆ ತುರುಕಿದರು. ಧೂಪದ ಹೊಗೆ ಹಾಕಿದರು. ಆ ಶತ್ರುದಮನ ವೀರನನ್ನು ಸ್ತುತಿಸಿ, ಸುತ್ತಲೂ ನಿಂತು ಮೇಘಗಂಭೀರ ಧ್ವನಿಯಿಂದ ಸಿಂಹ ಗರ್ಜನೆ ಮಾಡತೊಡಗಿದರು.॥34-35॥
ಮೂಲಮ್ - 36
ಶಂಖಾಶ್ಚ ಪೂರಯಮಾಸುಃ ಶಶಾಂಕ ಸದೃಶಪ್ರಭಾನ್ ।
ತುಮುಲಂ ಯುಗಪಚ್ಚಾಪಿ ವಿನೇದುಶ್ಚಾಪ್ಯಮರ್ಷಿತಾಃ ॥
ಅನುವಾದ
ಆಗಲೂ ಕುಂಭಕರ್ಣನು ಎಚ್ಚರಗೊಳ್ಳದಿರಲು ಅಸಹನೆಯಿಂದ ರಾಕ್ಷಸರು ಚಂದ್ರನಂತಿದ್ದ ಬಿಳಿಯ ಶಂಖಗಳನ್ನು ಊದಿದರು ಹಾಗೂ ಎಲ್ಲರೂ ಒಟ್ಟಾಗಿ ತುಮುಲವಾಗಿ ಜೋರಾಗಿ ಬೊಬ್ಬಿಟ್ಟರು.॥36॥
ಮೂಲಮ್ - 37
ನೇದುರಾಸ್ಫೋಟಯಾಮಾಸುಶ್ಚಿಕ್ಷಿಪುಸ್ತೇ ನಿಶಾಚರಾಃ ।
ಕುಂಭಕರ್ಣವಿಬೋಧಾರ್ಥಂ ಚಕ್ರುಸ್ತೇ ವಿಪುಲಂ ಸ್ವರಮ್ ॥
ಅನುವಾದ
ಆ ನಿಶಾಚರರು ಸಿಂಹನಾದ ಮಾಡುತ್ತಾ, ಚಪ್ಪಾಳೆ ತಟ್ಟಿ, ಕುಂಭಕರ್ಣನ ಅವಯವಗಳನ್ನು ಚುಚ್ಚತೊಡಗಿದರು. ಕುಂಭಕರ್ಣನನ್ನು ಎಬ್ಬಿಸಲು ಗಟ್ಟಿಯಾದ ಗಂಭೀರಧ್ವನಿ ಮಾಡಿದರು.॥37॥
ಮೂಲಮ್ - 38
ಸಶಂಖ ಭೇರೀಪಣವ ಪ್ರಣಾದಂ
ಸಾಸ್ಫೋಟಿತಕ್ಷ್ವೇಲಿತ ಸಿಂಹನಾದಮ್ ।
ದಿಶೋ ದ್ರವಂತಸ್ತ್ರಿದಿವಂ ಕಿರಂತಃ
ಶ್ರುತ್ವಾ ವಿಹಂಗಾಃ ಸಹಸಾ ನಿಪೇತುಃ ॥
ಅನುವಾದ
ಶಂಖ, ಭೇರಿ, ಪಣವ ಬಾರಿಸಿದರು, ಚಪ್ಪಾಳೆಯ, ಸಿಂಹನಾದದ ಶಬ್ದ ಎಲ್ಲೆಡೆ ಪ್ರತಿಧ್ವನಿಸಿತು. ಆ ತುಮುಲನಾದ ಕೇಳಿ ಪಕ್ಷಿಗಳು ದಿಕ್ಕಾಪಾಲಾಗಿ ಓಡುತ್ತಾ ಆಕಾಶದಲ್ಲಿ ಹಾರತೊಡಗಿದವು. ಹಾರಿ ಹಾರಿ ಅವು ನೆಲಕ್ಕೆ ಬಿದ್ದುಬಿಡುತ್ತಿದ್ದವು.॥38॥
ಮೂಲಮ್ - 39
ಯದಾ ಭೃಶಂ ತೈರ್ನಿನದೈರ್ಮಹಾತ್ಮಾ
ನ ಕುಂಭಕರ್ಣೋ ಬುಬುಧೇ ಪ್ರಸುಪ್ತಃ ।
ತತೋ ಭುಶುಂಡೀರ್ಮುಸಲಾನಿ ಸರ್ವೇ
ರಕ್ಷೋಗಣಾಸ್ತೇ ಜಗೃಹುರ್ಗದಾಶ್ಚ ॥
ಅನುವಾದ
ಆ ಮಹಾ ಕೋಲಾಹಲದಿಂದಲೂ ಮಲಗಿದ್ದ ವಿಶಾಲಕಾಯ ಕುಂಭಕರ್ಣನು ಎಚ್ಚರಗೊಳ್ಳದಿದ್ದಾಗ ಆ ಸಮಸ್ತ ರಾಕ್ಷಸರು ಕೈಗಳಲ್ಲಿ ಭುಶಂಡೀ, ಒನಕೆ, ಗದೆಗಳನ್ನು ಎತ್ತಿಕೊಂಡರು.॥39॥
ಮೂಲಮ್ - 40
ತಂ ಶೈಲಶೃಂಗೈ ರ್ಮುಸಲೈರ್ಗದಾಭಿ-
ರ್ವೃಕ್ಷಃಸ್ಥಲೇ ಮುದ್ಗರಮುಷ್ಟಿಭಿಶ್ಚ ।
ಸುಖಪ್ರಸುಪ್ತಂ ಭುವಿ ಕುಂಭಕರ್ಣಂ
ರಕ್ಷಾಂಸ್ಯುದಗ್ರಾಣಿ ತದಾ ನಿಜಘ್ನುಃ ॥
ಅನುವಾದ
ಕುಂಭಕರ್ಣನು ನೆಲದಲ್ಲೇ ಸುಖವಾಗಿ ಮಲಗಿದ್ದನು. ಅದೇ ಸ್ಥಿತಿಯಲ್ಲಿ ಆ ಪ್ರಚಂಡ ರಾಕ್ಷಸರು ಆಗ ಎದೆಯ ಮೇಲೆ ಪರ್ವತಶಿಖರಗಳಿಂದ, ಒನಕೆಗಳಿಂದ, ಮುದ್ಗರ, ಮುಷ್ಟಿಗಳಿಂದ ಹೊಡೆಯಲು ಪ್ರಾರಂಭಿಸಿದರು.॥40॥
ಮೂಲಮ್ - 41
ತಸ್ಯ ನಿಃಶ್ವಾಸವಾತೇನ ಕುಂಭಕರ್ಣಸ್ಯ ರಕ್ಷಸಃ ।
ರಾಕ್ಷಸಾಃ ಕುಂಭಕರ್ಣಸ್ಯ ಸ್ಥಾತುಂ ಶೇಕುರ್ನ ಜಾಗ್ರತಃ ॥
ಅನುವಾದ
ಆದರೆ ರಾಕ್ಷಸರ ಕುಂಭಕರ್ಣನ ಉಸಿರಾಟದಿಂದಾಗಿ ಆ ನಿಶಾಚರರೆಲ್ಲ ಅವನ ಮುಂದೆ ನಿಲ್ಲದಾದರು.॥41॥
ಮೂಲಮ್ - 42
ತತಃ ಪರಿಹಿತಾ ಗಾಢಂ ರಾಕ್ಷಸಾ ಭೀಮವಿಕ್ರಮಾಃ ।
ಮೃದಂಗಪಣವಾನ್ಭೇರೀಃ ಶಂಖಕುಂಭಗಣಾಂಸ್ತದಾ ॥
ಮೂಲಮ್ - 43
ದಶ ರಾಕ್ಷಸಸಾಹಸ್ರಾ ಯುಗಪತ್ಪರ್ಯವಾದಯತ್ ।
ನೀಲಾಂಜನಚಯಾಕಾರಂ ತೇ ತು ತಂ ಪ್ರತ್ಯಬೋಧಯನ್ ॥
ಅನುವಾದ
ಅನಂತರ ಭಯಾನಕ ಪರಾಕ್ರಮಿ ಹತ್ತು ಸಾವಿರ ರಾಕ್ಷಸರು ವಸ್ತುಗಳನ್ನು ಬಿಗಿಯಾಗಿ ಕಟ್ಟಿಕೊಂಡು ಕುಂಭಕರ್ಣನ ಸುತ್ತಲೂ ಬಂದು ನಿಂತರು. ಕಪ್ಪಾದ ಇದ್ದಿಲಿನ ರಾಶಿಯಂತೆ ಬಿದ್ದುಕೊಂಡಿದ್ದ ನಿಶಾಚರನನ್ನು ಎಬ್ಬಿಸಲು ಪ್ರಯತ್ನಿಸಿದರು. ಅವರೆಲ್ಲರೂ ಒಟ್ಟಿಗೆ ಮೃದಂಗ, ಪಣವ, ಭೇರಿ, ಶಂಖ, ಕುಂಭವಾದ್ಯ ನುಡಿಸಲುತೊಡಗಿದರು.॥42-43॥
ಮೂಲಮ್ - 44½
ಅಭಿಘ್ನಂತೋ ನದಂತಶ್ಚ ನಚ ಸಂಬುಬುಧೇ ತದಾ ।
ಯದಾ ಚೈನಂ ನ ಶೇಕುಸ್ತೇ ಪ್ರತಿಬೋಧಯಿತುಂ ತದಾ ॥
ತತೋ ಗುರುತರಂ ಯತ್ನಂ ದಾರುಣಂ ಸಮುಪಾಕ್ರಮನ್ ।
ಅನುವಾದ
ಹೀಗೆ ಆ ರಾಕ್ಷಸರು ವಾದ್ಯಗಳನ್ನು ಬಾರಿಸುತ್ತಾ, ಗರ್ಜಸುತ್ತಿರುವಾಗಲೂ ಕುಂಭಕರ್ಣನ ನಿದ್ರೆಯಿಂದ ಎಚ್ಚರಗೊಳ್ಳದಿರಲು, ಅವನನ್ನು ಎಚ್ಚರಿಸಲಾರದೆ ಅವರು ಮೊದಲಿಗಿಂತಲೂ ಹೆಚ್ಚಾದ ಪ್ರಯತ್ನ ಪ್ರಾರಂಭಿಸಿದರು.॥44॥
ಮೂಲಮ್ - 45
ಅಶ್ವಾನುಷ್ಟ್ರಾನ್ಖರಾನ್ನಾಗಾನ್ ಜಘ್ನುರ್ದಂಡಕಶಾಂಕುಶೈಃ ॥
ಮೂಲಮ್ - 46
ಭೇರೀಶಂಖಮೃದಂಗಾಶ್ಚ ಸರ್ವಪ್ರಾಣೈರವಾದಯನ್ ।
ನಿಜಗ್ನುಶ್ಚಾಸ್ಯ ಗಾತ್ರಾಣಿ ಮಹಾಕಾಷ್ಠಕಟಂಕರೈಃ ॥
ಮೂಲಮ್ - 47
ಮುದ್ಗರೈರ್ಮುಸಲೈಶ್ಚಾಪಿ ಸರ್ವಪ್ರಾಣ ಸಮುದ್ಯತೈಃ ।
ತೇನ ನಾದೇನ ಮಹತಾ ಲಂಕಾ ಸರ್ವಾ ಪ್ರಪೂರಿತಾ ।
ಸಪರ್ವತವನಾ ಸರ್ವಾ ಸೋಽಪಿ ನೈವ ಪ್ರಬುಧ್ಯತೇ ॥
ಅನುವಾದ
ಕುದುರೆಗಳನ್ನು, ಒಂಟೆಗಳನ್ನು, ಕತ್ತೆಗಳನ್ನು, ಆನೆಗಳನ್ನು ಮುಳ್ಳಿನ ದೊಣ್ಣೆಗಳಿಂದ, ಅಂಕುಶದಿಂದ ಹೊಡೆದೊಡೆದು ಕುಂಭಕರ್ಣನ ದೇಹದ ಮೇಲೆ ಹತ್ತಿಸಿದರು. ಶಕ್ತಿಮೀರಿ ಭೇರಿ, ಮೃದಂಗ, ಶಂಖಗಳನ್ನು ನುಡಿಸಿದರು. ಹಾಗೆಯೇ ಕಷ್ಟಪಟ್ಟು ದೊಡ್ಡ ದೊಡ್ಡ ಮುಳ್ಳಿನ ಕೋಲುಗಳಿಂದ, ಮುದ್ಗರಗಳಿಂದ, ಒನಕೆಗಳಿಂದ ಅವನನ್ನು ಪ್ರಹರಿಸತೊಡಗಿದರು. ಆ ಮಹಾ ಕೋಲಾಹಲದಿಂದ ಪರ್ವತ, ವನಗಳ ಸಹಿತ ಇಡೀ ಲಂಕೆಯು ಪ್ರತಿಧ್ವನಿಸಿತು, ಆದರೂ ಕುಂಭಕರ್ಣನು ಎಚ್ಚರಗೊಂಡಿಲ್ಲ.॥45-47॥
ಮೂಲಮ್ - 48
ತತೋ ಭೇರೀ ಸಹಸ್ರಂ ತು ಯುಗಪತ್ಸಮಹನ್ಯತ ।
ಮೃಷ್ಟಕಾಂಚನಕೋಣಾನಾಮಸಕ್ತಾನಾಂ ಸಮಂತತಃ ॥
ಅನುವಾದ
ಅನಂತರ ಸುತ್ತಲೂ ಸುಂದರವಾದ ಸುವರ್ಣಮಯ ಕೋಲುಗಳಿಂದ ಒಂದು ಸಾವಿರ ಭೇರಿಗಳನ್ನು ಏಕಕಾಲದಲ್ಲಿ ಬಾರಿಸಿದರು.॥48॥
ಮೂಲಮ್ - 49
ಏವಮಪ್ಯತಿನಿದ್ರಸ್ತು ಯದಾ ನೈವ ಪ್ರಭುಧ್ಯತೇ ।
ಶಾಪಸ್ಯ ವಶಮಾಪನ್ನಸ್ತತಃ ಕ್ರುದ್ಧಾ ನಿಶಾಚರಾಃ ॥
ಅನುವಾದ
ಇಷ್ಟಾದರೂ ಶಾಪಗ್ರಸ್ತನಾದ ಅವನು ಅತಿನಿದ್ರಿತವಾದ ನಿಶಾಚರನು ಏಳಲಿಲ್ಲ. ಇದರಿಂದ ಅಲ್ಲಿಗೆ ಬಂದಿರುವ ಎಲ್ಲ ರಾಕ್ಷಸರಿಗೂ ಬಹಳ ಕ್ರೋಧಬಂದಿತು.॥49॥
ಮೂಲಮ್ - 50
ತತಃ ಕೋಪಸಮಾವಿಷ್ಟಾಃ ಸರ್ವೇ ಭೀಮಪರಾಕ್ರಮಾಃ ।
ತದ್ರಕ್ಷೋ ಬೋಧಯಿಷ್ಯಂತಶ್ಚಕ್ರುರನ್ಯೇ ಪರಾಕ್ರಮಮ್ ॥
ಅನುವಾದ
ರೋಷಗೊಂಡ ಭಯಾನಕ ನಿಶಾಚರರೆಲ್ಲರು ಆ ರಾಕ್ಷಸನನ್ನು ಎಚ್ಚರಿಸಲು ಪುನಃ ಪರಾಕ್ರಮ ಪ್ರಕಟಿಸಿದರು.॥50॥
ಮೂಲಮ್ - 51
ಅನ್ಯೇ ಭೇರೀಃ ಸಮಾಜಘ್ನುರನ್ಯೆ ಚಕ್ರುರ್ಮಹಾಸ್ವನಮ್ ।
ಕೇಶಾನನ್ಯೇ ಪ್ರಲುಲುಪುಃ ಕರ್ಣಾವನ್ಯೇ ದಶಂತಿ ಚ ॥
ಅನುವಾದ
ಕೆಲವರು ಭೇರಿಗಳನ್ನು ಬಾರಿಸಿದರೆ, ಕೆಲವರು ಮಹಾಕೋಲಾಹಲ ಎಬ್ಬಿಸಿದರು, ಕೆಲವರು ಕುಂಭಕರ್ಣನ ತಲೆಯ ಕೂದಲನ್ನು ಕಿತ್ತರು, ಕೆಲವರು ಹಲ್ಲುಗಳಿಂದ ಕಿವಿಗಳನ್ನು ಕಚ್ಚುತ್ತಿದ್ದರು.॥51॥
ಮೂಲಮ್ - 52
ಉದಕುಂಭಶತಾನ್ಯನ್ಯೇ ಸಮಸಿಂಚಂತ ಕರ್ಣಯೋಃ ।
ನ ಕುಂಭಕರ್ಣಃ ಪಸ್ಪಂದೇ ಮಹಾನಿದ್ರಾವಶಂ ಗತಃ ॥
ಅನುವಾದ
ಬೇರೆ ರಾಕ್ಷಸರು ಎರಡೂ ಕಿವಿಗಳಲ್ಲಿ ನೂರಾರು ಗಡಿಗೆ ನೀರು ಸುರಿದರೂ ಮಹಾನಿದ್ರೆಗೆ ವಶನಾದ ಆ ಕುಂಭಕರ್ಣನು ಕೊಂಚವೂ ಕದಲಲಿಲ್ಲ.॥52॥
ಮೂಲಮ್ - 53
ಅನ್ಯೇ ಚ ಬಲಿನಸ್ತಸ್ಯ ಕೂಟಮುದ್ಗರಪಾಣಯಃ ।
ಮೂರ್ಧ್ನಿ ವಕ್ಷಸಿ ಗಾತ್ರೇಷು ಪಾತಯನ್ಕೂಟಮುದ್ಗರಾನ್ ॥
ಅನುವಾದ
ಇತರ ಬಲಿಷ್ಠರಾಕ್ಷಸರು ಮುಳ್ಳಿನ ಮುದ್ಗರಗಳನ್ನು ಕೈಯಲ್ಲೆತ್ತಿಕೊಂಡು ಅವನ ತಲೆಗೆ, ಎದೆಗೆ ಹಾಗೂ ಇತರ ಅಂಗಾಂಗಗಳಿಗೆ ಹೊಡೆಯತೊಡಗಿದರು.॥53॥
ಮೂಲಮ್ - 54
ರಜ್ಜುಬಂಧನಬದ್ಧಾಭಿಃ ಶತಘ್ನೀಭಿಶ್ಚ ಸರ್ವತಃ ।
ವಧ್ಯಮಾನೋ ಮಹಾಕಾಯೋ ನ ಪ್ರಾಬುಧ್ಯತ ರಾಕ್ಷಸಃ ॥
ಅನುವಾದ
ಅನಂತರ ಹಗ್ಗಗಳಿಂದ ಕಟ್ಟಿದ ಶತಘ್ನಿಗಳಿಂದ ಸುತ್ತಲು ಅವನನ್ನು ಪ್ರಹರಿಸ ತೊಡಗಿದರು; ಹೀಗಾದರೂ ಆ ಮಹಾಕಾಯ ರಾಕ್ಷಸನ ನಿದ್ದೆ ಹರಿದಿಲ್ಲ.॥54॥
ಮೂಲಮ್ - 55
ವಾರಣಾನಾಂ ಸಹಸ್ರಂ ಚ ಶರೀರೇಽಸ್ಯ ಪ್ರಧಾವಿತಮ್ ।
ಕುಂಭಕರ್ಣಸ್ತದಾ ಬುದ್ಧ್ವಾ ಸ್ಪರ್ಶಂ ಪರಮಬುಧ್ಯತ ॥
ಅನುವಾದ
ಅನಂತರ ಅವನ ಶರೀರದ ಮೇಲೆ ಸಾವಿರಾರು ಆನೆಗಳನ್ನು ಓಡಿಸಿದರು. ಆಗ ಅವನಿಗೆ ಏನೋ ತಗಲಿದಂತಾಗಿ ಎಚ್ಚರಗೊಂಡನು.॥55॥
ಮೂಲಮ್ - 56
ಸ ಪಾತ್ಯ ಮಾನೈರ್ಗಿರಿ ಶೃಂಗವೃಕ್ಷ್ಯೆ-
ರಚಿಂತಯಂಸ್ತಾನ್ ವಿಪುಲಾನ್ ಪ್ರಹಾರಾನ್ ।
ನಿದ್ರಾಕ್ಷಯಾತ್ ಕ್ಷುದ್ಭಯಪೀಡಿತಶ್ಚ
ವಿಜೃಂಭಮಾಣಃ ಸಹಸೋತ್ಪಪಾತ ॥
ಅನುವಾದ
ಅವನ ಮೇಲೆ ಪರ್ವತ ಶಿಖರ ಮತ್ತು ವೃಕ್ಷಗಳನ್ನು ಬೀಳಿಸುತ್ತಿದ್ದರೂ ಅವನು ಆ ಭಾರೀ ಪ್ರಹಾರಗಳನ್ನು ಎಣಿಸಿರಲಿಲ್ಲ. ಆನೆಗಳ ಸ್ಪರ್ಶದಿಂದ ಅವನ ನಿದ್ದೆ ಹರಿದಾಗ ಅವನು ಹಸಿವಿನಿಂದ ಪೀಡಿತನಾಗಿ ಆಕಳಿಸುತ್ತಾ, ಕೂಡಲೇ ಮೇಲೆದ್ದು ಕುಳಿತನು.॥56॥
ಮೂಲಮ್ - 57
ಸ ನಾಗಭೋಗಾಚಲ ಶೃಂಗಕಲ್ಪೌ
ವಿಕ್ಷಿಪ್ಯ ಬಾಹೂ ಜಿತವಜ್ರಸಾರೌ ।
ವಿವೃತ್ಯ ವಕ್ತ್ರಂ ವಡವಾಮುಖಾಭಂ
ನಿಶಾಚರೋಽಸೌ ವಿಕೃತಂ ಜಜೃಂಭೇ ॥
ಅನುವಾದ
ಅವನ ಎರಡೂ ಭುಜಗಳೂ ಮಹಾನಾಗಗಳಂತೆ, ಪರ್ವತ ಶಿಖರದಂತೆ ಕಂಡುಬರುತ್ತಿದ್ದವು. ವಜ್ರಾಯುಧವನ್ನು ಗೆದ್ದಿದ್ದ ಅವನು ಎರಡೂ ತೋಳುಗಳನ್ನು ಚಾಚಿ, ಬಾಯಿತೆರೆದು ಆಕಳಿಸತೊಡಗಿದಾಗ ಅವನ ಮುಖವು ವಡವಾಗ್ನಿಯಂತೆ ವಿಕರಾಳವಾಗಿ ಕಾಣುತ್ತಿತ್ತು.॥57॥
ಮೂಲಮ್ - 58
ತಸ್ಯ ಜಾಜೃಂಭಮಾಣಸ್ಯ ವಕ್ತ್ರಂ ಪಾತಾಲಸಂನಿಭಮ್ ।
ದದೃಶೇ ಮೇರುಶೃಂಗಾಗ್ರೇ ದಿವಾಕರ ಇವೋದಿತಃ ॥
ಅನುವಾದ
ಆಕಳಿಸಿದಾಗ ಕುಂಭಕರ್ಣನ ಪಾತಾಳದಂತಹ ಮುಖ ಮೇರುಪರ್ವತ ಶಿಖರದಲ್ಲಿ ಉದಯಿಸಿದ ಸೂರ್ಯನಂತೆ ಕಂಡುಬರುತ್ತಿತ್ತು.॥58॥
ಮೂಲಮ್ - 59
ಸ ಜೃಂಭಮಾಣೋಽತಿಬಲಃ ಪ್ರಬುದ್ಧಸ್ತು ನಿಶಾಚರಃ ।
ನಿಃಶ್ವಾಸಶ್ಚಾಸ್ಯ ಸಂಜಜ್ಞೆ ಪರ್ವತಾದಿವ ಮಾರುತಃ ॥
ಅನುವಾದ
ಹೀಗೆ ಆಕಳಿಸುತ್ತಾ ಆ ಅತ್ಯಂತ ಬಲಶಾಲಿ ನಿಶಾಚರನು ಎಚ್ಚರವಾದಾಗ ಅವನ ಬಾಯಿಯಿಂದ ಹೊರಟ ಉಸಿರು ಪರ್ವತದಿಂದ ಹೊರಟ ಗಾಳಿಯಂತೆ ಅನಿಸುತ್ತಿತ್ತು.॥59॥
ಮೂಲಮ್ - 60
ರೂಪಮುತ್ತಿಷ್ಠತಸ್ತಸ್ಯ ಕುಂಭಕರ್ಣಸ್ಯ ತದ್ಬಭೌ ।
ಯುಗಾಂತೇ ಸರ್ವಭೂತಾನಿ ಕಾಲಸ್ಯೇವ ದಿಧಕ್ಷತಃ ॥
ಅನುವಾದ
ನಿದ್ದೆಯಿಂದ ಎದ್ದ ಕುಂಭಕರ್ಣನ ಆ ರೂಪವು ಪ್ರಳಯ ಕಾಲದಲ್ಲಿ ಸಮಸ್ತ ಪ್ರಾಣಿಗಳನ್ನು ಸಂಹರಿಸುವ ಕಾಲನಂತೆ ಇತ್ತು.॥60॥
ಮೂಲಮ್ - 61
ತಸ್ಯ ದೀಪ್ತಾಗ್ನಿಸದೃಶೇ ವಿದ್ಯುತ್ಸದೃಶವರ್ಚಸೀ ।
ದದೃಶಾತೇ ಮಹಾನೇತ್ರೇ ದೀಪ್ತಾವಿವ ಮಹಾಗ್ರಹೌ ॥
ಅನುವಾದ
ಅವನ ಎರಡು ಕಣ್ಣುಗಳು ಉರಿಯುವ ಬೆಂಕಿ ಮತ್ತು ಸಿಡಿಲಿನಂತೆ ಪ್ರಕಾಶಮಾನವಾಗಿ ಕಾಣುತ್ತಿತ್ತು. ಅವು ಎರಡು ಗ್ರಹರು ಪ್ರಕಾಶಿಸುತ್ತಿವೆಯೇ ಎಂಬಂತಿತ್ತು.॥61॥
ಮೂಲಮ್ - 62
ತತಸ್ತ್ವ ದರ್ಶಯನ್ಸರ್ವಾನ್ ಭಕ್ಷ್ಯಾಂಶ್ಚ ವಿವಿಧಾನ್ಬಹೂನ್ ।
ವರಾಹಾನ್ಮಹಿಷಾಂಶ್ಚೈವ ಬಭಕ್ಷ ಸ ಮಹಾಬಲಃ ॥
ಅನುವಾದ
ಅನಂತರ ರಾಕ್ಷಸರು ತಿಂದು-ಕುಡಿಯುವ ವಸ್ತುಗಳಲ್ಲಿ ಅಲ್ಲಿ ಇರಿಸಿದ್ದರೋ ಅವೆಲ್ಲವನ್ನು ಕುಂಭಕರ್ಣನಿಗೆ ತೋರಿಸಿದರು. ಆ ಮಹಾಬಲಿ ರಾಕ್ಷಸನು ಕ್ಷಣಮಾತ್ರದಲ್ಲಿ ಕೋಣಗಳನ್ನು, ಹಂದಿಗಳನ್ನು ನುಂಗಿಬಿಟ್ಟನು.॥62॥
ಮೂಲಮ್ - 63
ಆದದ್ಭುಭುಕ್ಷಿತೋ ಮಾಂಸಂ ಶೋಣಿತಂ ತೃಷಿತೋಽಪಿಬತ್ ।
ಮೇದಃ ಕುಂಭಾಂಶ್ಚ ಮದ್ಯಾಂಶ್ಚ ಚ ಪಪೌ ಶಕ್ರರಿಪುಸ್ತದಾ ॥
ಅನುವಾದ
ಅವನಿಗೆ ತುಂಬಾ ಹಸಿವಾಗಿತ್ತು. ಆದ್ದರಿಂದ ಹೊಟ್ಟೆತುಂಬಾ ಮಾಂಸತಿಂದು, ಬಾಯಾರಿಕೆಗಾಗಿ ರಕ್ತವನ್ನು ಕುಡಿದನು. ಬಳಿಕ ಮೆದಸ್ಸಿನಿಂದ ತುಂಬಿದ ಎಷ್ಟೋ ಗಡಿಗೆಗಳನ್ನು, ಎಷ್ಟೋ ಮದ್ಯದ ಗಡಿಗೆಗಳನ್ನು ನುಂಗಿಬಿಟ್ಟನು.॥63॥
ಮೂಲಮ್ - 64
ತತಸ್ತೃಪ್ತ ಇತಿ ಜ್ಞಾತ್ವಾ ಸಮುತ್ಪೇತುರ್ನಿಶಾಚರಾಃ ।
ಶಿರೋಭಿಶ್ಚ ಪ್ರಣಮ್ಯೈನಂ ಸರ್ವತಃ ಪರ್ಯವಾರಯನ್ ॥
ಅನುವಾದ
ಅವನು ತೃಪ್ತನಾದನೆಂದು ತಿಳಿದ ರಾಕ್ಷಸರು ಕುಣಿಯುತ್ತಾ ಅವನ ಎದುರಿಗೆ ಬಂದು ತಲೆಬಾಗಿ ವಂದಿಸಿ ಅವನ ಸುತ್ತಲೂ ನಿಂತುಕೊಂಡರು.॥64॥
ಮೂಲಮ್ - 65
ನಿದ್ರಾವಿಶದನೇತ್ರಸ್ತು ಕಲುಷೀಕೃತಲೋಚನಃ ।
ಚಾರಯನ್ ಸರ್ವತೋ ದೃಷ್ಟಿಂ ತಾನ್ದದರ್ಶ ನಿಶಾಚರಾನ್ ॥
ಅನುವಾದ
ಆ ಸಮಯದಲ್ಲಿ ಅವನ ಕಣ್ಣುಗಳು ನಿದ್ದೆಯಿಂದಾಗಿ ಅಪ್ರಸನ್ನ-ಮಲಿನವಾಗಿದ್ದವು. ಅವನು ಎಲ್ಲ ಕಡೆ ದೃಷ್ಟಿಬೀರಿ ಅಲ್ಲಿ ನಿಂತಿರುವ ನಿಶಾಚರರನ್ನು ನೋಡಿದನು.॥65॥
ಮೂಲಮ್ - 66
ಸ ಸರ್ವಾನ್ ಸಾಂತ್ವಯಾಮಾಸ ನೈರ್ಋತಾನ್ ನೈರ್ಋತರ್ಷಭಃ ।
ಬೋಧನಾದ್ವಿಸ್ಮಿತಶ್ಚಾಪಿ ರಾಕ್ಷಸಾನಿದಮಬ್ರವೀತ್ ॥
ಅನುವಾದ
ನಿಶಾಚರರಲ್ಲಿ ಶ್ರೇಷ್ಠನಾದ ಕುಂಭಕರ್ಣನು ಅವರೆಲ್ಲರನ್ನು ಸಾಂತ್ವನಪಡಿಸಿ, ತನ್ನನ್ನು ಎಚ್ಚರಿಸಿದ ಕಾರಣವನ್ನು ವಿಸ್ಮಿತನಾಗಿ ಕೇಳಿದನು.॥66॥
ಮೂಲಮ್ - 67
ಕಿಮರ್ಥಮಹಮಾದೃತ್ಯ ಭವದ್ಭಿಃ ಪ್ರತಿಬೋಧಿತಃ ।
ಕಚ್ಚಿತ್ಸುಕುಶಲಂ ರಾಜ್ಞೋ ಭಯಂ ವಾ ನೇಹ ಕಿಂಚನ ॥
ಅನುವಾದ
ನೀವು ಹೀಗೆ ಆದರಿಸಿ ನನ್ನನ್ನು ಏಕೆ ಎಚ್ಚರಿಸಿದಿರಿ? ರಾಕ್ಷಸರಾಜಾ ರಾವಣನು ಕುಶಲ ತಾನೇ? ಇಲ್ಲಿ ಯಾರಿಂದಲಾ1ದರೂ ಭಯವು ಇಲ್ಲ ತಾನೆ.॥67॥
ಮೂಲಮ್ - 68
ಅಥವಾ ಧ್ರುವಮನ್ಯೇಭ್ಯೋ ಭಯಂ ಪರಮುಪಸ್ಥಿತಮ್ ।
ಯದರ್ಥಮೇವ ತ್ವರಿತೈರ್ಭವದ್ಭಿಃ ಪ್ರತಿಬೋಧಿತಃ ॥
ಅನುವಾದ
ಅಥವಾ ನಿಶ್ಚಯವಾಗಿಯೂ ಇಲ್ಲಿ ಬೇರೆಯವರಿಂದ ಯಾವುದೋ ಮಹಾಭಯ ಉಪಸ್ಥಿತವಾಗಿರಬೇಕು. ಅದರ ನಿವಾರಣೆಗಾಗಿ ನೀವು ಇಷ್ಟು ಅವಸರದಿಂದ ನನ್ನನ್ನು ಎಬ್ಬಿಸಿರಬೇಕು.॥68॥
ಮೂಲಮ್ - 69
ಅದ್ಯ ರಾಕ್ಷಸರಾಜಸ್ಯ ಭಯಮುತ್ಪಾಟಯಾಮ್ಯಹಮ್ ।
ದಾರಯಿಷ್ಯೇ ಮಹೇಂದ್ರಂ ವಾ ಶೀತಯಿಷ್ಯೇ ತಥಾನಲಮ್ ॥
ಅನುವಾದ
ಸರಿ, ಇಂದೇ ನಾನು ರಾಕ್ಷಸರಾಜನ ಭಯವನ್ನು ಕಿತ್ತೆಸೆಯುವೆನು. ಮಹೇಂದ್ರ (ಇಂದ್ರ ಅಥವಾ ಪರ್ವತ)ನನ್ನು ಸೀಳಿ ಹಾಕುವೆನು ಹಾಗೂ ಬೆಂಕಿಯನ್ನು ಶೀತಲಗೊಳಿಸುವೆನು.॥69॥
ಮೂಲಮ್ - 70
ನ ಹ್ಯಲ್ಪಕಾರಣೇ ಸುಪ್ತಂ ಬೋಧಯಿಷ್ಯತಿ ಮಾದೃಶಮ್ ।
ತದಾಖ್ಯಾತಾರ್ಥ ತತ್ತ್ವೇನ ಮತ್ಪ್ರಬೋಧನಕಾರಣಮ್ ॥
ಅನುವಾದ
ನನ್ನಂತಹ ಪುರುಷನನ್ನು ಸಣ್ಣ ಪುಟ್ಟ ಕಾರಣಗಳಿಂದ ನಿದ್ದೆಯಿಂದ ಎಚ್ಚರಿಸಲಾಗುವುದಿಲ್ಲ. ಆದ್ದರಿಂದ ನನ್ನನ್ನು ಎಚ್ಚರಿಸಿದ ಕಾರಣವನ್ನು ನೀವು ಸರಿಯಾಗಿ ತಿಳಿಸಿರಿ.॥70॥
ಮೂಲಮ್ - 71
ಏವಂ ಬ್ರುವಾಣಂ ಸಂರಬ್ಧಂ ಕುಂಭಕರ್ಣಮರಿಂದಮಮ್ ।
ಯೂಪಾಕ್ಷಃ ಸಚಿವೋ ರಾಜ್ಞಃ ಕೃತಾಂಜಲಿರಭಾಷತ ॥
ಅನುವಾದ
ಶತ್ರುಸೂದನ ಕುಂಭಕರ್ಣನು ರೋಷಗೊಂಡು ಹೀಗೆ ಕೇಳಿದಾಗ ರಾಜಾರಾವಣನ ಸಚಿವ ಯೂಪಾಕ್ಷನು ಕೈಮುಗಿದು ಇಂತೆಂದರು.॥71॥
ಮೂಲಮ್ - 72
ನ ನೋ ದೇವಕೃತಂ ಕಿಂಚಿದ್ಭಯಮಸ್ತಿ ಕದಾಚನ ।
ಮಾನುಷಾನ್ನೋ ಭಯಂ ರಾಜಂಸ್ತುಮುಲಂ ಸಂಪ್ರಬಾಧತೇ ॥
ಅನುವಾದ
ಮಹಾರಾಜಾ! ನಮಗೆ ದೇವತೆಗಳಿಂದ ಯಾವುದೇ ಭಯ ಉಂಟಾಗಲಾರದು. ಈಗ ಕೇವಲ ಒಬ್ಬ ಮನುಷ್ಯನಿಂದ ತುಮುಲ ಭಯ ಪ್ರಾಪ್ತವಾಗಿ ನಮ್ಮನ್ನು ಬಾಧಿಸುತ್ತಿದೆ.॥72॥
ಮೂಲಮ್ - 73
ನ ದೈತ್ಯದಾನವೇಭ್ಯೋ ವಾ ಭಯಮಸ್ತಿ ನ ನಃ ಕ್ವಚಿತ್ ।
ಯಾದೃಶಂ ಮಾನುಷಂ ರಾಜನ್ ಭಯಮಸ್ಮಾನುಪಸ್ಥಿತಮ್ ॥
ಅನುವಾದ
ರಾಜನೇ! ಈಗ ಓರ್ವ ಮನುಷ್ಯನಿಂದ ನಮಗೆ ಉಪಸ್ಥಿತವಾದ ಭಯದಂತಹ ಭಯವು ದೈತ್ಯರಿಂದ ದಾನವರಿಂದ ಎಂದೂ ಉಂಟಾಗಲಿಲ್ಲ.॥73॥
ಮೂಲಮ್ - 74
ವಾನರೈಃ ಪರ್ವತಾಕಾರೈರ್ಲಂಕೇಯಂ ಪರಿವಾರಿತಾ ।
ಸೀತಾಹರಣಸಂತಪ್ತಾದ್ ರಾಮಾನ್ನಸ್ತುಮುಲಂ ಭಯಮ್ ॥
ಅನುವಾದ
ಪರ್ವತಾಕಾರ ವಾನರರು ಬಂದು ಈ ಲಂಕೆಯನ್ನು ಸುತ್ತಲೂ ಆಕ್ರಮಿಸಿದ್ದಾರೆ. ಸೀತಾಹರಣದಿಂದ ಸಂತಪ್ತನಾದ ಶ್ರೀರಾಮನ ಕಡೆಯಿಂದ ನಮಗೆ ಘೋರವಾದ ಭಯಪ್ರಾಪ್ತವಾಗಿದೆ.॥74॥
ಮೂಲಮ್ - 75
ಏಕೇನ ವಾನರೇಣೇಯಂ ಪೂರ್ವಂ ದಗ್ಧಾ ಮಹಾಪುರೀ ।
ಕುಮಾರೋ ನಿಹತಶ್ಚಾಕ್ಷಃ ಸಾನುಯಾತ್ರಃ ಸಕುಂಜರಃ ॥
ಅನುವಾದ
ಮೊದಲು ಒಂದೇ ವಾನರನು ಇಲ್ಲಿಗೆ ಬಂದು ಈ ಮಹಾಪುರಿಯನ್ನು ಸುಟ್ಟುಹಾಕಿದ್ದನು ಹಾಗೂ ಆನೆಗಳ ಮತ್ತು ಸಾರಥಿಸಹಿತ ರಾಜಕುಮಾರ ಅಕ್ಷನನ್ನು ಕೊಂದು ಹಾಕಿದ್ದನು.॥75॥
ಮೂಲಮ್ - 76
ಸ್ವಯಂ ರಕ್ಷೋಧಿಪಶ್ಚಾಪಿ ಪೌಲಸ್ತ್ಯೋ ದೇವಕಂಟಕಃ ।
ವ್ರಜೇತಿ ಸಂಯುಗೇ ಮುಕ್ತೋ ರಾಮೇಣಾದಿತ್ಯವರ್ಚಸಾ ॥
ಅನುವಾದ
ಶ್ರೀರಾಮನು ಸೂರ್ಯನಂತೆ ತೇಜಸ್ವಿಯಾಗಿದ್ದಾನೆ. ಅವನು ದೇವಶತ್ರು ಪುಲಸ್ತ್ಯಕುಲನಂದನ ಸಾಕ್ಷಾತ್ ರಾಕ್ಷಸರಾಜ ರಾವಣನನ್ನು ಸೋಲಿಸಿ, ಜೀವಂತವಾಗಿ ಬಿಟ್ಟು ‘ಲಂಕೆಗೆ ಮರಳಿ ಹೋಗು’ ಎಂದು ಹೇಳಿದನು.॥76॥
ಮೂಲಮ್ - 77
ಯನ್ನ ದೇವೈಃ ಕೃತೋ ರಾಜಾ ನಾಪಿ ದೈತ್ಯೈರ್ನ ದಾನವೈಃ ।
ಕೃತಃ ಸ ಇಹ ರಾಮೇಣ ವಿಮುಕ್ತಃ ಪ್ರಾಣ ಸಂಶಯಾತ್ ॥
ಅನುವಾದ
ಮಹಾರಾಜನ ಈ ಸ್ಥಿತಿಯನ್ನು ದೇವ-ದಾನವ-ದೈತ್ಯರೂ ಮಾಡದಿದ್ದುದು ರಾಮನು ಮಾಡಿಬಿಟ್ಟಿರುವನು. ಅವನ ಪ್ರಾಣಗಳು ದೊಡ್ಡ ಸಂಕಟದಿಂದ ಉಳಿದಿವೆ.॥77॥
ಮೂಲಮ್ - 78
ಸ ಯೂಪಾಕ್ಷವಚಃ ಶ್ರುತ್ವಾ ಭ್ರಾತುರ್ಯುಧಿ ಪರಾಭವಮ್ ।
ಕುಂಭಕರ್ಣೋ ವಿವೃತ್ತಾಕ್ಷೋ ಯೂಪಾಕ್ಷಮಿದಮಬ್ರವೀತ್ ॥
ಅನುವಾದ
ಯುದ್ಧದಲ್ಲಿ ಅಣ್ಣನ ಪರಾಜಯದ ಮಾತನ್ನು ಯೂಪಾಕ್ಷನಿಂದ ಕೇಳಿ ಕುಂಭಕರ್ಣನು ಕಣ್ಣುಬಿಟ್ಟು ನೋಡುತ್ತಾ, ಯೂಪಾಕ್ಷನಲ್ಲಿ ಹೀಗೆ ಹೇಳಿದನು.॥78॥
ಮೂಲಮ್ - 79
ಸರ್ವಮದ್ಯೈವ ಯೂಪಾಕ್ಷ ಹರಿಸೈನ್ಯಂ ಸಲಕ್ಷ್ಮಣಮ್ ।
ರಾಘವಂ ಚ ರಣೇ ಜಿತ್ವಾ ತತೋದ್ರಕ್ಷ್ಯಾಮಿ ರಾವಣಮ್ ॥
ಅನುವಾದ
ಯೂಪಾಕ್ಷನೇ! ನಾನು ಈಗಲೇ ವಾನರರ ಎಲ್ಲ ಸೈನ್ಯವನ್ನು ಹಾಗೂ ಲಕ್ಷ್ಮಣ ಸಹಿತ ರಾಮನನ್ನು ಕೂಡ ರಣಭೂಮಿಯಲ್ಲಿ ಜಯಿಸಿ ರಾವಣನನ್ನು ದರ್ಶಿಸುವೆನು.॥79॥
ಮೂಲಮ್ - 80
ರಾಕ್ಷಸಾಂಸ್ತರ್ಪಯಿಷ್ಯಾಮಿ ಹರೀಣಾಂ ಮಾಂಸಶೋಣಿತೈಃ ।
ರಾಮಲಕ್ಷ್ಮಣಯೋಶ್ಚಾಪಿ ಸ್ವಯಂ ಪಾಸ್ಯಾಮಿ ಶೋಣಿತಮ್ ॥
ಅನುವಾದ
ಇಂದೇ ವಾನರರ ರಕ್ತ-ಮಾಂಸದಿಂದ ರಾಕ್ಷಸರನ್ನು ತೃಪ್ತಿಪಡಿಸುವೆನು ಮತ್ತು ಸ್ವತಃ ರಾಮ ಮತ್ತು ಲಕ್ಷ್ಮಣನ ರಕ್ತವನ್ನು ಕುಡಿಯುವೆನು.॥80॥
ಮೂಲಮ್ - 81
ತತ್ತಸ್ಯ ವಾಕ್ಯಂ ಬ್ರುವತೋ ನಿಶಮ್ಯ
ಸಗರ್ವಿತಂ ರೋಷವಿವೃದ್ಧದೋಷಮ್ ।
ಮಹೋದರೋ ನೈರ್ಋತಯೋಧಮುಖ್ಯಃ
ಕೃತಾಂಜಲಿರ್ವಾಕ್ಯಮಿದಂ ಬಭಾಷೇ ॥
ಅನುವಾದ
ಕುಂಭಕರ್ಣನ ಹೆಚ್ಚಿದ ರೋಷ-ದೋಷದಿಂದ ಕೂಡಿ ಅಹಂಕಾರಪೂರ್ಣ ಮಾತನ್ನು ಕೇಳಿ, ರಾಕ್ಷಸ ಯೋಧರಲ್ಲಿ ಪ್ರಧಾನನಾದ ಮಹೋದನು ಕೈಮುಗಿದು ಹೀಗೆ ಹೇಳಿದನು-॥81॥
ಮೂಲಮ್ - 82
ರಾವಣ ಸ್ಯ ವಚಃ ಶ್ರುತ್ವಾ ಗುಣದೋಷೌ ವಿಮೃಶ್ಯ ಚ ।
ಪಶ್ಚಾದಪಿ ಮಹಾಬಾಹೋ ಶತ್ರೂನ್ಯುಧಿ ವಿಜೇಷ್ಯಸಿ ॥
ಅನುವಾದ
ಮಹಾಬಾಹೋ! ಮೊದಲು ಹೋಗಿ ಮಹಾರಾಜ ರಾವಣನ ಮಾತನ್ನು ಕೇಳಿಕೊಳ್ಳಿ. ಮತ್ತು ಗುಣ-ದೋಷಗಳ ವಿಚಾರಮಾಡಿ ಅನಂತರ ಯುದ್ಧದಲ್ಲಿ ಶತ್ರುಗಳನ್ನು ಪರಾಜಯಗೊಳಿಸಿರಿ.॥82॥
ಮೂಲಮ್ - 83
ಮಹೋದರ ವಚಃ ಶ್ರುತ್ವಾ ರಾಕ್ಷಸೈಃ ಪರಿವಾರಿತಃ ।
ಕುಂಭಕರ್ಣೋ ಮಹಾತೇಜಾಃ ಸಂಪ್ರತಸ್ಥೇ ಮಹಾಬಲಃ ॥
ಅನುವಾದ
ಮಹೋದರನ ಮಾತನ್ನು ಕೇಳಿ ರಾಕ್ಷಸರಿಂದ ಸುತ್ತುವರೆದ ಮಹಾತೇಜಸ್ವೀ, ಮಹಾಬಲಿ ಕುಂಭ ಕರ್ಣನು ಅಲ್ಲಿಂದ ಹೊರಡುವ ಸಿದ್ಧತೆ ಮಾಡತೊಡಗಿದನು.॥83॥
ಮೂಲಮ್ - 84
ಸುಪ್ತಮುತ್ಥಾಪ್ಯ ಭೀಮಾಕ್ಷಂ ಭೀಮರೂಪ ಪರಾಕ್ರಮಮ್ ।
ರಾಕ್ಷಸಾಸ್ತ್ವರಿತಾ ಜಗ್ಮುರ್ದಶಗ್ರೀವ ನಿವೇಶನಮ್ ॥
ಅನುವಾದ
ಈ ಪ್ರಕಾರ ಭಯಾನಕ ನೇತ್ರ ಮತ್ತು ಪರಾಕ್ರಮವುಳ್ಳ ಕುಂಭಕರ್ಣನನ್ನು ನಿದ್ದೆಯಿಂದ ಎಚ್ಚರಗೊಳಿಸಿ ಆ ರಾಕ್ಷಸರು ಶೀಘ್ರವಾಗಿ ದಶಮುಖ ರಾವಣನ ಅರಮನೆಗೆ ಹೋದರು.॥84॥
ಮೂಲಮ್ - 85
ತೇಽಭಿಗಮ್ಯ ದಶಗ್ರೀವಮಾಸೀನಂ ಪರಮಾಸನೇ ।
ಊಚುರ್ಬದ್ಧಾಂಜಲಿಪುಟಾಃ ಸರ್ವ ಏವ ನಿಶಾಚರಾಃ ॥
ಅನುವಾದ
ಉತ್ತಮ ಸಿಂಹಾಸನದಲ್ಲಿ ಕುಳಿತಿರುವ ದಶಗ್ರೀವನ ಬಳಿಗೆ ಹೋಗಿ ನಿಶಾರರೆಲ್ಲರೂ ಕೈಮುಗಿದು ನಿಂತುಕೊಂಡನು.॥85॥
ಮೂಲಮ್ - 86
ಕುಂಭಕರ್ಣಃ ಪ್ರಬುದ್ಧೋಽಸೌ ಭ್ರಾತಾ ತೇ ರಾಕ್ಷಸೇಶ್ವರ ।
ಕಥಂ ತತ್ರೈವ ನಿರ್ಯಾತು ದ್ರಕ್ಷಸೇ ತಮಿಹಾಗತಮ್ ॥
ಅನುವಾದ
ರಾಕ್ಷಸೇಶ್ವರನೇ! ನಿಮ್ಮ ಸಹೋದರ ಕುಂಭಕರ್ಣನು ಎಚ್ಚರಗೊಂಡಿರುವನು. ಅವರು ಏನು ಮಾಡುವುದು ಎಂದು ತಿಳಿಸಿರಿ. ನೇರವಾಗಿ ಯುದ್ಧಕ್ಕೆ ಹೋಗುವುದೇ ಅಥವಾ ಇಲ್ಲಿಗೆ ಬಂದು ಅವರನ್ನು ನೀವು ನೋಡಲು ಬಯಸುವಿರಾ.॥86॥
ಮೂಲಮ್ - 87
ರಾವಣಸ್ತ್ವಬ್ರವೀದ್ಧಷ್ಟೋ ರಾಕ್ಷಸಾಂಸ್ತಾನುಪಸ್ಥಿತಾನ್ ।
ದ್ರಷ್ಟುಮೇನಮಿಹೇಚ್ಛಾಮಿ ಯಥಾನ್ಯಾಯಂ ಚ ಪೂಜ್ಯತಾಮ್ ॥
ಅನುವಾದ
ಆಗ ರಾವಣನು ಭಾರೀ ಹರ್ಷದಿಂದ ಅಲ್ಲಿಗೆ ಬಂದ ರಾಕ್ಷಸರಲ್ಲಿ ಹೇಳಿದನು- ನಾನು ಕುಂಭಕರ್ಣನನ್ನು ಇಲ್ಲೇ ನೋಡಲು ಬಯಸುವೆನು. ಅವನನ್ನು ಯಥೋಚಿತವಾಗಿ ಸತ್ಕರಿಸಲಾಗುವುದು.॥87॥
ಮೂಲಮ್ - 88
ತಥೇತ್ಯುಕ್ತ್ವಾ ತು ತೇ ಸರ್ವೇ ಪುನರಾಗಮ್ಯ ರಾಕ್ಷಸಾಃ ।
ಕುಂಭಕರ್ಣಮಿದಂ ವಾಕ್ಯಮೂಚೂ ರಾವಣಚೋದಿತಾಃ ॥
ಅನುವಾದ
‘ಹಾಗೇ ಆಗಲಿ’ ಎಂದು ಹೇಳಿ ರಾವಣನು ಕಳಿಸಿದ ಆ ರಾಕ್ಷಸರೆಲ್ಲರೂ ಪುನಃ ಕುಂಭಕರ್ಣನ ಬಳಿಗೆ ಬಂದು ಈ ಪ್ರಕಾರ ಹೇಳಿದರು.॥88॥
ಮೂಲಮ್ - 89
ದ್ರಷ್ಟುಂ ತ್ವಾಂ ಕಾಂಕ್ಷತೇ ರಾಜಾ ಸರ್ವರಾಕ್ಷಸಪುಂಗವಃ ।
ಗಮನೇ ಕ್ರಿಯತಾಂ ಬುದ್ಧಿರ್ಭ್ರಾತರಂ ಸಂಪ್ರಹರ್ಷಯ ॥
ಅನುವಾದ
ಪ್ರಭೋ! ಸರ್ವರಾಕ್ಷಸ ಶ್ರೇಷ್ಠ ಮಹಾರಾಜ ರಾವಣನು ನಿಮ್ಮನ್ನು ನೋಡಬಯಸುವನು. ಆದ್ದರಿಂದ ನೀವು ಅಲ್ಲಿಗೆ ಹೋಗುವ ವಿಚಾರಮಾಡಿರಿ ಹಾಗೂ ಆಗಮಿಸಿ ನಿಮ್ಮ ಅಣ್ಣನನ್ನು ಹರ್ಷಗೊಳಿಸಿರಿ.॥89॥
ಮೂಲಮ್ - 90
ಕುಂಭಕರ್ಣಸ್ತು ದುರ್ಧರ್ಘೋ ಭ್ರಾತುರಾಜ್ಞಾಯ ಶಾಸನಮ್ ।
ತಥೇತ್ಯುಕ್ತ್ವಾ ಮಹಾವೀರ್ಯಃ ಶಯನಾದುತ್ಪಪಾತ ಹ ॥
ಅನುವಾದ
ಅಣ್ಣನ ಈ ಆದೇಶ ಪಡೆದ ಮಹಾಪರಾಕ್ರಮಿ ದುರ್ಜಯ ವೀರ ಕುಂಭಕರ್ಣನು ಸರಿ, ಎಂದು ಹೇಳಿ ಹಾಸಿಗೆಯಿಂದ ಎದ್ದು ನಿಂತುಕೊಂಡನು.॥90॥
ಮೂಲಮ್ - 91
ಪ್ರಕ್ಷಾಲ್ಯ ವದನಂ ಹೃಷ್ಟಃ ಸ್ನಾತಃ ಪರಮಹರ್ಷಿತಃ ।
ಪಿಪಾಸುಸ್ತ್ವರಯಾಮಾಸ ಪಾನಂ ಬಲಸಮೀರಣಮ್ ॥
ಅನುವಾದ
ಅವನು ಹರ್ಷದಿಂದ, ಮುಖ ತೊಳೆದು ಸ್ನಾನ ಮಾಡಿ, ಕೂಡಲೇ ಬಲವರ್ಧಕ ಪಾನೀಯ ಕುಡಿಯುವ ಇಚ್ಛೆಯಿಂದ ಅದನ್ನು ತರಲು ಆಜ್ಞಾಪಿಸಿದನು.॥91॥
ಮೂಲಮ್ - 92
ತತಸ್ತೇ ತ್ವರಿತಾಸ್ತತ್ರ ರಾಕ್ಷಸಾ ರಾವಣಾಜ್ಞಯಾ ।
ಮದ್ಯಂಭಕ್ಷ್ಯಾಂಶ್ಚ ವಿವಿಧಾನ್ ಕ್ಷಿಪ್ರಮೇವೋಪಹಾರಯನ್ ॥
ಅನುವಾದ
ಆಗ ರಾವಣನ ಆದೇಶದಂತೆ ಆ ರಾಕ್ಷಸರೆಲ್ಲರೂ ಕೂಡಲೇ ಮದ್ಯ ಹಾಗೂ ನಾನಾ ಪ್ರಕಾರದ ಭಕ್ಷ್ಯಗಳನ್ನು ತೆಗೆದುಕೊಂಡು ಬಂದರು.॥92॥
ಮೂಲಮ್ - 93
ಪೀತ್ವಾ ಘಟಸಹಸ್ರೇ ದ್ವೇ ಗಮನಾಯೋಪಚಕ್ರಮೇ ।
ಈಷತ್ಸಮುತ್ಕಟೋ ಮತ್ತಸ್ತೇಜೋಬಲ ಸಮನ್ವಿತಃ ॥
ಅನುವಾದ
ಕುಂಭಕರ್ಣನು ಎರಡು ಸಾವಿರ ಮದ್ಯದ ಗಡಿಗೆಗಳನ್ನು ಕುಡಿದು ಹೊರಟನು. ಇದರಿಂದ ಅವನು ಸ್ವಲ್ಪ ಉತ್ಕಟನೂ, ಮತ್ತನೂ, ತೇಜೋಬಲ ಸಮಾಯುಕ್ತನಾದನು.॥93॥
ಮೂಲಮ್ - 94
ಕುಂಭಕರ್ಣೋ ಬಭೌ ರುಷ್ಟಃ ಕಾಲಾಂತಕಯಮೋಪಮಃ ।
ಭ್ರಾತುಃ ಸ ಭವನಂ ಗಚ್ಛನ್ ರಕ್ಷೋಬಲಸಮನ್ವಿತಃ ।
ಕುಂಭಕರ್ಣಃ ಪದನ್ಯಾಸೈರಕಂಪಯತ ಮೇದಿನೀಮ್ ॥
ಅನುವಾದ
ಮತ್ತೆ ರಾಕ್ಷಸ ಸೈನ್ಯದೊಂದಿಗೆ ಕುಂಭಕರ್ಣನು ಅಣ್ಣನ ಅರಮನೆಗೆ ಹೋಗುವಾಗ ಅವನು ರೋಷಗೊಂಡ ಪ್ರಳಯಕಾಲದ ವಿನಾಶಕಾರೀ ಯಮನಂತೆ ಕಂಡುಬರುತ್ತಿದ್ದನು. ಅವನು ತನ್ನ ಪಾದಾಘಾತದಿಂದ ಇಡೀ ಪೃಥಿವಿಯನ್ನು ನಡುಗಿಸುತ್ತಿದ್ದನು.॥94॥
ಮೂಲಮ್ - 95
ಸ ರಾಜಮಾರ್ಗಂ ವಪುಷಾ ಪ್ರಕಾಶಯನ್
ಸಹಸ್ರರಶ್ಮಿರ್ಧರಣೀಮಿವಾಂಶುಭಿಃ ।
ಜಗಾಮ ತತ್ರಾಂಜಲಿಮಾಲಯಾ ವೃತಃ
ಶತಕ್ರತುರ್ಗೇಹಮಿವ ಸ್ವಯಂಭುವಃ ॥
ಅನುವಾದ
ಸೂರ್ಯನು ತನ್ನ ಕಿರಣಗಳಿಂದ ಭೂತಳವನ್ನು ಪ್ರಕಾಶಿತಗೊಳಿಸುವಂತೆಯೇ ಅವನು ತನ್ನ ತೇಜಸ್ವೀ ಶರೀರದಿಂದ ರಾಜಮಾರ್ಗವನ್ನು ಬೆಳಗುತ್ತಾ ಕೈಮುಗಿದುಕೊಂಡು, ದೇವೇಂದ್ರನು ಬ್ರಹ್ಮದೇವರ ಧಾಮಕ್ಕೆ ಹೋಗುವಂತೆಯೇ ಅಣ್ಣನ ಭವನಕ್ಕೆ ಹೋದನು.॥95॥
ಮೂಲಮ್ - 96
ತಂ ರಾಜಮಾರ್ಗಸ್ಥಮಮಿತ್ರಘಾತಿನಂ
ವನೌಕಸಸ್ತೇ ಸಹಸಾ ಬಹಿಃಸ್ಥಿತಾಃ ।
ದೃಷ್ಟ್ವಾ ಪ್ರಮೇಯಂ ಗಿರಿಶೃಂಗಕಲ್ಪಂ
ವಿತತ್ರಸುಸ್ತೇ ಸಹ ಯೂಥಪಾಲೈಃ ॥
ಅನುವಾದ
ರಾಜಬೀದಿಯಲ್ಲಿ ನಡೆಯುವಾಗ ಶತ್ರುಘಾತಿ ಕುಂಭಕರ್ಣನು ಪರ್ವತಶಿಖರದಂತೆ ಕಂಡುಬರುತ್ತಿದ್ದನು. ನಗರದ ಹೊರಗೆ ನಿಂತಿದ್ದ ವಾನರರು ಆ ವಿಶಾಲಕಾಯ ರಾಕ್ಷಸನನ್ನು ನೋಡಿ ಸೇನಾಪತಿಗಳೊಂದಿಗೆ ಭಯಗೊಂಡರು.॥96॥
ಮೂಲಮ್ - 97
ಕೇಚಿಚ್ಛರಣ್ಯಂ ಶರಣಂ ಸ್ಮ ರಾಮಂ
ವ್ರಜಂತಿ ಕೇಚಿದ್ವ್ಯಥಿತಾಃ ಪತಂತಿ ।
ಕೇಚಿದ್ ದಶಶ್ಚ ವ್ಯಥಿತಾಃ ಪ್ರಯಾಂತಿ
ಕೇಚಿದ್ಭಯಾರ್ತಾ ಭುವಿ ಶೇರತೇ ಸ್ಮ ॥
ಅನುವಾದ
ಅವರಲ್ಲಿ ಕೆಲವರು ಶರಣಾಗತ ವತ್ಸಲ ಭಗವಾನ್ ಶ್ರೀರಾಮನಲ್ಲಿ ಶರಣಾದರು. ಕೆಲವರು ವ್ಯಥಿತರಾಗಿ ಕೆಳಕ್ಕೆ ಬಿದ್ದರು. ಕೆಲವರು ಪೀಡಿತರಾಗಿ ದಶದಿಕ್ಕುಗಳಿಗೆ ಓಡಿಹೋದರು, ಕೆಲವರು ಅಲ್ಲಲ್ಲೇ ಧರಾಶಾಯಿಯಾದರು. ಎಷ್ಟೋ ವಾನರರು ಭಯಪೀಡಿತರಾಗಿ ನೆಲಕ್ಕುರುಳಿದರು.॥97॥
ಮೂಲಮ್ - 98
ತಮದ್ರಿಶೃಂಗಪ್ರತಿಮಂ ಕಿರೀಟಿನಂ
ಸ್ಪಶಂತಮಾದಿತ್ಯಮಿವಾತ್ಮತೇಜಸಾ ।
ವನೌಕಸಃ ಪ್ರೇಕ್ಷ್ಯ ವಿವೃದ್ಧಮದ್ಭುತಂ
ಭಯಾರ್ದಿತಾ ದುದ್ರುವಿರೇ ಯತಸ್ತತಃ ॥
ಅನುವಾದ
ಕುಂಭ ಕರ್ಣನು ಪರ್ವತದಂತೆ ಎತ್ತರವಾಗಿದ್ದನು. ತಲೆಯಲ್ಲಿ ಕಿರೀಟ ಶೋಭಿಸುತ್ತಿತ್ತು. ಅವನು ತನ್ನ ಜೇತದಿಂದ ಸೂರ್ಯನನ್ನು ಸ್ಪರ್ಧಿಸುವಂತಿತ್ತು. ಆ ವಿಶಾಲಕಾಯ ಹಾಗೂ ಅದ್ಭುತ ರಾಕ್ಷಸನನ್ನು ನೋಡಿ ಎಲ್ಲ ವನವಾಸೀ ವಾನರರು ಭಯದಿಂದ ಪೀಡಿತರಾಗಿ ಕಂಡ ಕಂಡಲ್ಲಿಗೆ ಓಡತೊಡಗಿದರು.॥98॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತನೆಯ ಸರ್ಗ ಪೂರ್ಣವಾಯಿತು.॥60॥