वाचनम्
ಭಾಗಸೂಚನಾ
ಪ್ರಹಸ್ತನು ಸತ್ತುಹೋದುದರಿಂದ ಯುದ್ಧಕ್ಕೆ ರಾವಣನ ಪ್ರಸ್ತಾನ, ಅವನ ಜೊತೆಗಾರರ ಪರಿಚಯ, ರಾವಣನ ಪ್ರಹಾರದಿಂದ ಸುಗ್ರೀವನ ಮೂರ್ಛೆ, ಲಕ್ಷ್ಮಣ-ರಾವಣರ ಯುದ್ಧ, ಹನುಮಂತ-ರಾವಣರ ಮುಷ್ಟಿಯುದ್ಧ, ನೀಲ-ಲಕ್ಷ್ಮಣರ ಮೂರ್ಛೆ, ಶ್ರೀರಾಮನಿಂದ ಪರಾಜಿತನಾಗಿ ರಾವಣನು ಲಂಕಾಭಿಗಮನ
ಮೂಲಮ್ - 1
ತಸ್ಮಿನ್ಹತೇ ರಾಕ್ಷಸಸೈನ್ಯ ಪಾಲೇ
ಪ್ಲವಂಗಮಾನಾಮೃಷಭೇಣ ಯುದ್ಧೇ ।
ಭೀಮಾಯುಧಂ ಸಾಗರವೇಗಂ ತುಲ್ಯ
ವಿದುದ್ರುವೇ ರಾಕ್ಷಸರಾಜಸೈನ್ಯಮ್ ॥
ಅನುವಾದ
ವಾನರಶ್ರೇಷ್ಠ ನೀಲನು ಯುದ್ಧದಲ್ಲಿ ರಾಕ್ಷಸ ಸೇನಾಪತಿ ಪ್ರಹಸ್ತನನ್ನು ಸಂಹರಿಸಿದಾಗ, ಸಮುದ್ರದಂತೆ ವೇಗಶಾಲೀ, ಭಯಾನಕ ಆಯುಧಗಳನ್ನು ಧರಿಸಿದ ರಾಕ್ಷಸರಾಜನ ಸೈನ್ಯವು ಓಡಿಹೋಯಿತು.॥1॥
ಮೂಲಮ್ - 2
ಗತ್ವಾತು ರಕ್ಷೋಧಿಪತೇಃ ಶಶಂಸುಃ
ಸೇನಾಪತಿಂ ಪಾವಕಸೂನುಶಸ್ತಮ್ ।
ತಚ್ಚಾಪಿ ತೇಷಾಂ ವಚನಂ ನಿಶಮ್ಯ
ರಕ್ಷೋಧಿಪಃ ಕ್ರೋಧವಶಂ ಜಗಾಮ ॥
ಅನುವಾದ
ರಾಕ್ಷಸರು ನಿಶಾಚರರಾಜ ರಾವಣನ ಬಳಿಗೆ ಹೋಗಿ ಅಗ್ನಿಪುತ್ರ ನೀಲನಿಂದ ಪ್ರಹಸ್ತನು ಮರಣಿಸಿದ ಸಮಾಚಾರ ತಿಳಿಸಿದರು. ಅವರ ಮಾತನ್ನು ಕೇಳಿ ರಾವಣನಿಗೆ ಭಾರೀ ಕ್ರೋಧ ಉಂಟಾಯಿತು.॥.॥
ಮೂಲಮ್ - 3
ಸಂಖ್ಯೇ ಪ್ರಹಸ್ತಂ ನಿಹತಂ ನಿಶಮ್ಯ
ಶೋಕಾರ್ದಿತಃ ಕ್ರೋಧಪರೀತಚೇತಾಃ ।
ಉವಾಚ ತಾನ್ ರಾಕ್ಷಸಯೂಥಮುಖ್ಯಾ
ನಿಂದ್ರೋ ಯಥಾ ನಿರ್ಜರ ಯೂಥಮುಖ್ಯಾನ್ ॥
ಅನುವಾದ
ಯುದ್ಧದಲ್ಲಿ ಪ್ರಹಸ್ತನು ಸತ್ತುಹೋದ ಎಂದು ಕೇಳುತ್ತಲೇ ರಾವಣನು ಸಿಟ್ಟಿನಿಂದ ಉರಿದೆದ್ದನು. ಆದರೆ ಸ್ವಲ್ಪ ಹೊತ್ತಿನಲ್ಲೇ ಅವನ ಚಿತ್ತ ಪ್ರಹಸ್ತನಿಗಾಗಿ ಶೋಕಾಕುಲವಾದನು. ಪ್ರಧಾನ ದೇವತೆಗಳೊಂದಿಗೆ ಮಾತುಕತೆ ನಡೆಸುವ ಇಂದ್ರನಂತೆ ರಾಕ್ಷಸ ಸೈನ್ಯದ ಮುಖ್ಯ ಅಧಿಕಾರಿಗಳಲ್ಲಿ ಇಂತೆದನು.॥3॥
ಮೂಲಮ್ - 4
ನಾವಜ್ಞಾ ರಿಪವೇ ಕಾರ್ಯಾಯೈರಿಂದ್ರಬಲಸಾದನಃ ।
ಸೂದಿತಃ ಸೈನ್ಯಪಾಲೋ ಮೇ ಸಾನುಯಾತ್ರಃ ಸಕುಂಜರಃ ॥
ಅನುವಾದ
ಶತ್ರುಗಳು ಅಗಣ್ಯರೆಂದು ತಿಳಿದು ಅವರ ಅವಹೇಳನ ಮಾಡಬಾರದು. ನಾನು ಅಲ್ಪರೆಂದು ತಿಳಿದ ಶತ್ರುಗಳೇ ಇಂದ್ರನ ಸೈನ್ಯವನ್ನು ಸಂಹರಿಸಲು ಸಮರ್ಥನಾಗಿದ್ದ ನನ್ನ ಸೇನಾಪತಿಯನ್ನು, ಸೇವಕರನ್ನು, ಆನೆಗಳ ಸಹಿತ ಕೊಂದುಹಾಕಿದರು.॥4॥
ಮೂಲಮ್ - 5
ಸೋಽಹಂ ರಿಪುವಿನಾಶಾಯ ವಿಜಯಾಯಾ ವಿಚಾರಯನ್ ।
ಸ್ವಯಮೇವ ಗಮಿಷ್ಯಾಮಿ ರಣಶೀರ್ಷಂ ತದದ್ಭುತಮ್ ॥
ಅನುವಾದ
ಈಗ ನಾನು ಶತ್ರುಗಳ ಸಂಹಾರ ಮತ್ತು ವಿಜಯಕ್ಕಾಗಿ ಯಾವುದೇ ವಿಚಾರ ಮಾಡದೆ ಸ್ವತಃ ಅದ್ಭುತ ಯುದ್ಧಭೂಮಿಗೆ ಹೋಗುವೆನು.॥5॥
ಮೂಲಮ್ - 6
ಅದ್ಯ ತದ್ವಾನರಾನೀಕಂ ರಾಮಂ ಚ ಸಹಲಕ್ಷ್ಮಣಮ್ ।
ನಿರ್ದಹಿಷ್ಯಾಮಿ ಬಾಣೌಘೈರ್ವನಂ ದೀಪ್ತೈರಿವಾಗ್ನಿ ಭಿಃ ।
ಅದ್ಯ ಸಂತರ್ಪಯಿಷ್ಯಾಮಿ ಪೃಥಿವೀಂ ಕಪಿಶೋಣಿತೈಃ ॥
ಅನುವಾದ
ಪ್ರಜ್ವಲಿತ ಅಗ್ನಿಯು ವನವನ್ನು ಸುಟ್ಟುಬಿಡುವಂತೆ ಇಂದು ನನ್ನ ಬಾಣಸಮೂಹಗಳಿಂದ ವಾನರ ಸೈನ್ಯವನ್ನು ಹಾಗೂ ಲಕ್ಷ್ಮಣಸಹಿತ ಶ್ರೀರಾಮನನ್ನು ನಾನು ಸುಟ್ಟುಬಿಡುವೆನು. ವಾನರರ ರಕ್ತದಿಂದ ಇಂದು ಪೃಥ್ವಿಯನ್ನು ತೃಪ್ತಪಡಿಸುವೆನು.॥6॥
ಮೂಲಮ್ - 7
ಸ ಏವಮುಕ್ತ್ವಾ ಜ್ವಲನಪ್ರಕಾಶಂ
ರಥಂ ತುರಂಗೋತ್ತಮರಾಜಿಯುಕ್ತಮ್ ।
ಪ್ರಕಾಶಮಾನಂ ವಪುಷಾ ಜ್ವಲಂತಂ
ಸಮಾರುರೋಹಾಮರರಾಜಶತ್ರುಃ ॥
ಅನುವಾದ
ಹೀಗೆ ಹೇಳಿ ದೇವರಾಜ ಶತ್ರು ರಾವಣನು ಅಗ್ನಿಯಂತಹ ಪ್ರಕಾಶಮಾನ ರಥವನ್ನು ಹತ್ತಿದನು. ಅವನ ರಥಕ್ಕೆ ಉತ್ತಮ ಕುದುರೆಗಳನ್ನು ಹೂಡಿದ್ದವು. ಅವುಗಳ ಶರೀರಕಾಂತಿಯು ಉರಿಯುವ ಅಗ್ನಿಯಂತೆ ಜಾಜಲ್ಯಮಾನವಾಗಿತ್ತು.॥7॥
ಮೂಲಮ್ - 8
ಸ ಶಂಖ ಭೇರೀಪಣವಪ್ರಣಾದೈ-
ರಾಸ್ಫೋಟಿತಕ್ಷ್ವೇಲಿತ ಸಿಂಹನಾದೈಃ ।
ಪುಣ್ಯೈಃ ಸ್ತವೈಶ್ಚಾಪಿ ಸುಪೂಜ್ಯಮಾನ
ಸ್ತದಾ ಯಯೌ ರಾಕ್ಷಸರಾಜಮುಖ್ಯಃ ॥
ಅನುವಾದ
ಅವನು ಹೊರಟಾಗ ಶಂಖ, ಭೇರಿ, ಪಣವ ಮುಂತಾದ ವಾದ್ಯಗಳು ಮೊಳಗಿದುವು. ಯೋಧರ ಚಪ್ಪಾಳೆ ತಟ್ಟಿ ಗರ್ಜಿಸುತ್ತಾ ಸಿಂಹನಾದ ಮಾಡತೊಡಗಿದರು. ವಂದಿಗಳು ಪವಿತ್ರಸ್ತುತಿಗಳಿಂದ ರಾಕ್ಷಸಶ್ರೇಷ್ಠ ರಾವಣನನ್ನು ಚೆನ್ನಾಗಿ ಸುತ್ತಿಸ ತೊಡಗಿದರು. ಹೀಗೆ ಅವನು ಪ್ರಯಾಣ ಮಾಡಿದನು.॥.॥
ಮೂಲಮ್ - 9
ಸ ಶೈಲಜೀಮೂತನಿಕಾಶರೂಪೈ-
ರ್ಮಾಂಸಾಶನೈಃ ಪಾವಕದೀಪ್ತನೇತ್ರೈಃ ।
ಬಭೌ ವೃತೋ ರಾಕ್ಷಸರಾಜಮುಖ್ಯೋ
ಭೂತೈರ್ವೃತೋ ರುದ್ರ ಇವಾಮರೇಶಃ ॥
ಅನುವಾದ
ಪರ್ವತ ಮತ್ತು ಮೇಘಗಳಂತೆ ಕಪ್ಪಾದ ವಿಶಾಲ ರೂಪವುಳ್ಳ ಅಗ್ನಿಯಂತೆ ಪ್ರಜ್ವಲಿತ ಅಗ್ನಿಯಂತೆ ನೇತ್ರಗಳುಳ್ಳ ಮಾಂಸಾಹಾರೀ ರಾಕ್ಷಸರಿಂದ ಸುತ್ತುವರೆದು ರಾಕ್ಷಸರಾಜ ರಾವಣನು, ಭೂತಗಣಗಳಿಂದ ಪರಿವೃತನಾದ ದೇವೇಶ್ವರ ರುದ್ರನಂತೆ ಶೋಭಿಸುತ್ತಿದ್ದನು.॥.॥
ಮೂಲಮ್ - 10
ತತೋ ನಗರ್ಯಾಃ ಸಹಸಾ ಮಹೌಜಾ
ನಿಷ್ಕ್ರಮ್ಯ ತದ್ವಾನರಸೈನ್ಯಮುಗ್ರಮ್ ।
ಮಹಾರ್ಣವಾಭ್ರಸ್ತನಿತಂ ದದರ್ಶ
ಸಮುದ್ಯತಂ ಪಾದಪಶೈಲಹಸ್ತಮ್ ॥
ಅನುವಾದ
ಮಹಾ ತೇಜಸ್ವೀ ರಾವಣನು ಲಂಕೆಯಿಂದ ಹೊರಟು, ಮಹಾಸಾಗರ ಮತ್ತು ಮೇಘಗಳಂತೆ ಗರ್ಜಿಸುತ್ತಿರುವ ಕೈಗಳಲ್ಲಿ ಪರ್ವತಶಿಖರ, ವೃಕ್ಷಗಳನ್ನು ಧರಿಸಿ ಯುದ್ಧಕ್ಕೆ ಸಿದ್ಧರಾದ ಆ ಭಯಂಕರ ವಾನರ ಸೈನ್ಯವನ್ನು ನೋಡಿದನು.॥1.॥
ಮೂಲಮ್ - 11
ತದ್ರಾಕ್ಷಸಾನೀಕಮತಿಪ್ರಚಂಡ
ಮಾಲೋಕ್ಯ ರಾಮೋ ಭುಜಗೇಂದ್ರ ಬಾಹುಃ ।
ವಿಭೀಷಣಂ ಶಸ್ತ್ರಭೃತಾಂ ವರಿಷ್ಠ-
ಮುವಾಚ ಸೇನಾನುಗತಃ ಪೃಥುಶ್ರೀಃ ॥
ಅನುವಾದ
ಆ ಅತ್ಯಂತ ಪ್ರಚಂಡ ರಾಕ್ಷಸ ಸೈನ್ಯವನ್ನು ನೋಡಿ, ನಾಗರಾಜ ಶೇಷನಂತೆ ಭುಜಗಳುಳ್ಳ, ವಾನರ ಸೈನ್ಯದಿಂದ ಸುತ್ತುವರೆದ ಶೋಭಾಸಂಪನ್ನನಾದ ಶ್ರೀರಾಮಚಂದ್ರನು ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ವಿಭೀಷಣನಲ್ಲಿ ಕೇಳಿದನು.॥11॥
ಮೂಲಮ್ - 12
ನಾನಾ ಪತಾಕಾಧ್ವಜಛತ್ರಜುಷ್ಟಂ
ಪ್ರಾಸಾಸಿ ಶೂಲಾಯುಧ ಶಸ್ತ್ರಜುಷ್ಟಮ್ ।
ಕಸ್ಯೇದಮಕ್ಷೋಭ್ಯಮಭೀರುಜುಷ್ಟಂ
ಸೈನ್ಯಂ ಮಹೇಂದ್ರೋಪಮನಾಗಜುಷ್ಟಮ್ ॥
ಅನುವಾದ
ನಾನಾ ಪ್ರಕಾರದ ಧ್ವಜ-ಪತಾಕೆಗಳಿಂದ, ಛತ್ರಗಳಿಂದ ಸುಶೋಭಿತವಾದ, ಪ್ರಾಸ, ಖಡ್ಗ, ಶೂಲ ಆದಿ ಅಸ್ತ್ರ-ಶಸ್ತ್ರಗಳಿಂದ ಸಂಪನ್ನವಾದ, ಅಜೇಯ ನಿರ್ಭೀತ ಯೋಧರಿಂದ ಸೇವಿತ, ಮಹೇಂದ್ರ ಪರ್ವತದಂತೆ ವಿಶಾಲಕಾಯ ಆನೆಗಳಿಂದ ತುಂಬಿದ ಈ ಸೈನ್ಯ ಯಾರದಾಗಿದೆ.॥12॥
ಮೂಲಮ್ - 13
ತತಸ್ತು ರಾಮಸ್ಯ ನಿಶಮ್ಯ ವಾಕ್ಯಂ
ವಿಭೀಷಣಃ ಶಕ್ರಸಮಾನವೀರ್ಯಃ ।
ಶಶಂಸ ರಾಮಸ್ಯ ಬಲಪ್ರವೇಕಂ
ಮಹಾತ್ಮನಾಂ ರಾಕ್ಷಸ ಪುಂಗವಾನಾಮ್ ॥
ಅನುವಾದ
ಇಂದ್ರನಂತೆ ಮಹಾಬಲಶಾಲಿ ವಿಭೀಷಣನು ಶ್ರೀರಾಮನ ಮಾತನ್ನು ಕೇಳಿ ಮಹಾತ್ಮಾ ರಾಕ್ಷಸ ಶ್ರೇಷ್ಠನ ಬಲ ಹಾಗೂ ಸೈನಿಕರ ಶಕ್ತಿಯ ಪರಿಚಯ ಮಾಡಿಸುತ್ತಾ ಹೇಳಿದನು.॥13॥
ಮೂಲಮ್ - 14
ಯೋಽಸೌ ಗಜಸ್ಕಂಧಗತೋ ಮಹಾತ್ಮಾ
ನವೋದಿತಾರ್ಕೋಪಮತಾಮ್ರವಕ್ತ್ರಃ ।
ಪ್ರಕಂಪಯನ್ನಾಗಶಿರೋಽಭ್ಯುಪೈತಿ
ಹ್ಯಕಂಪನಂ ತ್ವೇನಮವೇಹಿ ರಾಜನ್ ॥
ಅನುವಾದ
ರಾಜನೇ! ಆನೆಯ ಮೇಲೆ ಕುಳಿತಿರುವ ಉದಯಿಸುತ್ತಿರುವ ಸೂರ್ಯನಂತೆ ಕೆಂಪಾದ ಬಣ್ಣುವುಳ್ಳ ತನ್ನ ಭಾರದಿಂದ ಆನೆಯ ಮಸ್ತಕವನ್ನು ನಡುಗಿಸುತ್ತಾ ಇತ್ತಬರುತ್ತಿರುವ ಮಹಾಮನಸ್ವೀ ವೀರನು ಅಕಂಪನನೆಂದು ತಿಳಿ.॥14॥*
ಟಿಪ್ಪನೀ
- ಹನುಮಂತನಿಂದ ಹತಾನದ ಆ ಅಕಂಪನಿಂದ ಇವನು ಬೇರೆ.
ಮೂಲಮ್ - 15
ಯೋಽಸೌ ರಥಸ್ಥೋ ಮೃಗರಾಜಕೇತು
ರ್ಧುನ್ವನ್ಧನುಃ ಶಕ್ರಧನುಃ ಪ್ರಕಾಶಮ್ ।
ಕರೀವ ಭಾತ್ಯುಗ್ರವಿವೃತ್ತದಂಷ್ಟ್ರಃ
ಸ ಇಂದ್ರಜಿನ್ನಾಮ ವರಪ್ರಧಾನಃ ॥
ಅನುವಾದ
ರಥಾರೂಢನಾಗಿ, ಸಿಂಹಧ್ವಜದಿಂದ ಕೂಡಿದ್ದು, ಆನೆಯಂತೆ ಕೊರೆದಾಡೆಗಳು ಹೊರಗೆ ಚಾಚಿಕೊಂಡಿರುವೆಯೋ, ಇಂದ್ರಧನುಸ್ಸಿನಂತೆ ಕಾಂತಿಯುಕ್ತ ಧನುಷ್ಯವನ್ನು ಓಲಾಡಿಸುತ್ತಿರುವನೋ, ಅವನ ಹೆಸರು ಇಂದ್ರಜಿತು. ಇವನು ವರಪ್ರಭಾವದಿಂದ ಭಾರೀ ಪ್ರಬಲನಾಗಿರುವನು.॥15॥
ಮೂಲಮ್ - 16
ಯಶ್ಚೈಷ ವಿಂಧ್ಯಾಸ್ತಮಹೇಂದ್ರಕಲ್ಪೋ
ಧನ್ವೀ ರಥಸ್ಥೋಽತಿರಥೋಽತಿವೀರಃ ।
ವಿಸ್ಫಾರಯಂಶ್ಚಾಪಮತುಲ್ಯಮಾನಂ
ನಾಮ್ನಾತಿಕಾಯೋಽತಿವಿವೃದ್ಧ ಕಾಯಃ ॥
ಅನುವಾದ
ವಿಂಧ್ಯಾಚಲ, ಅಸ್ತಾಚಲ, ಮಹೇಂದ್ರಗಿರಿಯಂತೆ ವಿಶಾಲ ಕಾಯನೂ, ಅತಿರಥ, ಅತಿಶಯ ವೀರನು ಧನುರ್ಧಾರಿಯಾಗಿ ರಥದಲ್ಲಿ ಕುಳಿತಿರುವನೋ, ತನ್ನ ಧನುಸ್ಸನ್ನು ಪದೇ ಪದೇ ಸೆಳೆಯುತ್ತಿರುವನೋ ಇವನ ಹೆಸರು ಅತಿಕಾಯ. ಇವನ ಶರೀರ ಹೆಸರಿನಂತೆ ಬಹಳ ದೊಡ್ಡದಾಗಿದೆ.॥16॥
ಮೂಲಮ್ - 17
ಯೋಽಸೌ ನವಾರ್ಕೋದಿತತಾಮ್ರಚಕ್ಷು-
ರಾರುಹ್ಯ ಘಂಟಾನಿನದಪ್ರಣಾದಮ್ ।
ಗಜಂ ಖರಂ ಗರ್ಜತಿ ವೈ ಮಹಾತ್ಮಾ
ಮಹೋದರೋ ನಾಮ ಸ ಏಷ ವೀರಃ ॥
ಅನುವಾದ
ಯಾರ ನೇತ್ರಗಳು ಉದಯಿ ಸುತ್ತಿರುವ ಸೂರ್ಯನಂತೆ ಕೆಂಪಾಗಿದೆಯೋ, ಯಾರ ದನಿಯು ಘಂಟೆಯ ದನಿಗಿಂತಲೂ ಉತ್ಕೃಷ್ಟವಾಗಿದೆಯೋ, ಕ್ರೂರ ಸ್ವಭಾವವುಳ್ಳ ಆನೆಯ ಮೇಲೆ ಆರೂಢನಾಗಿ ಜೋರಾಗಿ ಗರ್ಜಿಸುತ್ತಿರುವನೇ ಮಹಾಮನಸ್ವೀ ವೀರ ಮಹೋದರನೆಂದು ಪ್ರಸಿದ್ಧನಾಗಿದ್ದಾನೆ.॥17॥
ಮೂಲಮ್ - 18
ಯೋಽಸೌ ಹಯಂ ಕಾಂಚನಚಿತ್ರಭಾಂಡ-
ಮಾರುಹ್ಯ ಸಂಧ್ಯಾಭ್ರಗಿರಿಪ್ರಕಾಶಮ್ ।
ಪ್ರಾಸಂ ಸಮುದ್ಯಮ್ಯ ಮರೀಚಿನದ್ಧಂ
ಪಿಶಾಚ ಏಷೋಽಶನಿತುಲ್ಯವೇಗಃ ॥
ಅನುವಾದ
ಯಾರು ಸಂಧ್ಯಾಕಾಲದ ಮೇಘ ಯುಕ್ತ ಪರ್ವತದಂತೆ ಬೆಳಗುತ್ತಿರುವನೋ, ಸ್ವರ್ಣಮಯ ಆಭೂಷಣಗಳಿಂದ ಭೂಷಿತನಾಗಿ ಕುದುರೆಯನ್ನು ಹತ್ತಿ, ಹೊಳೆಯುವ ಭಲ್ಲೆಯನ್ನು ಹಿಡಿದು ಇತ್ತ ಬರುತ್ತಿರುವನೋ ಅವನೇ ಪಿಶಾಚನೆಂಬ ರಾಕ್ಷಸನು. ಇವನು ವಜ್ರದಂತೆ ವೇಗ ಶಾಲೀ ಯೋಧನಾಗಿದ್ದಾನೆ.॥18॥
ಮೂಲಮ್ - 19
ಯಶ್ಚೈಷ ಶೂಲಂ ನಿಶಿತಂ ಪ್ರಗೃಹ್ಯ
ವಿದ್ಯುತ್ಪ್ರಭಂ ಕಿಂಕರವಜ್ರವೇಗಮ್ ।
ವೃಷೇಂದ್ರಮಾಸ್ಥಾಯ ಶಶಿಪ್ರಕಾಶ-
ಮಾಯಾತಿ ಯೋಽಸೌ ತ್ರಿಶಿರಾ ಯಶಸ್ವೀ ॥
ಅನುವಾದ
ಅವನು ವಜ್ರಾಯುಧದ ವೇಗದಂತೆ ವೇಗವುಳ್ಳವನೂ, ಸಿಡಿಲಿನಂತೆ ಹೊಳೆಯುವ ನಿಶಿತವಾದ ತ್ರಿಶೂಲವನ್ನು ಧರಿಸಿರುವನೂ, ಚಂದ್ರನಂತಹ ಶ್ವೇತಗೂಳಿಯ ಮೇಲೆ ಕುಳಿತು ಯುದ್ಧಭೂಮಿಗೆ ಬರುತ್ತಿರು ವವನೂ, ಯಶಸ್ವೀ ವೀರ ತ್ರಿಶಿರನೆಂಬುವನು.॥19॥
ಮೂಲಮ್ - 20
ಅಸೌ ಚ ಜೀಮೂತನಿಕಾಶರೂಪಃ
ಕುಂಭಃ ಪೃಥುವ್ಯೂಢ ಸುಜಾತವಕ್ಷಾಃ ।
ಸಮಾಹಿತಃ ಪನ್ನಗರಾಜಕೇತು-
ರ್ವಿಸ್ಫಾರಯನ್ಯಾತಿ ಧನುರ್ವಿಧುನ್ವನ್ ॥
ಅನುವಾದ
ಯಾವನ ರೂಪವು ಮೇಘದಂತೆ ಕಪ್ಪಾಗಿದೆಯೋ, ವಕ್ಷಃಸ್ಥಳವು ಉಬ್ಬಿಕೊಂಡು, ಅಗಲವಾಗಿದೆಯೋ, ಧ್ವಜದಲ್ಲಿ ವಾಸುಕಿಯ ಚಿಹ್ನೆ ಇದೆಯೋ, ಏಕಾಗ್ರಚಿತ್ತನಾಗಿ ಧನುಸ್ಸನ್ನು ಅಲುಗಾಡಿ ಸುತ್ತಾ, ಸೆಳೆಯುತ್ತಾ ಬರುತ್ತಿರುವನೋ, ಅವನು ಕಂಭನೆಂಬ ಯೋಧನು.॥20॥
ಮೂಲಮ್ - 21
ಯಶ್ಚೈಷ ಜಾಂಬೂನದವಜ್ರಜುಷ್ಟಂ
ದೀಪ್ತಂ ಸಧೂಮಂ ಪರಿಘಂ ಪ್ರಗೃಹ್ಯ ।
ಆಯಾತಿ ರಕ್ಷೋಬಲ ಕೇತುಭೂತೋ
ಯೋಽಸೌ ನಿಕುಂಭೋಽದ್ಭುತ ಘೋರಕರ್ಮಾ ॥
ಅನುವಾದ
ಸುವರ್ಣ, ವಜ್ರಖಚಿತ ಪ್ರಕಾಶವುಳ್ಳ ಹಾಗೂ ಇಂದ್ರನೀಲಮಣಿಯಂತೆ ಧೂಮಯುಕ್ತ ಅಗ್ನಿಯಂತೆ ಪ್ರಕಾಶಿಸುತ್ತಿರುವ ಪರಿಘವನ್ನು ಧರಿಸಿ, ರಾಕ್ಷಸರ ಸೈನ್ಯದ ಧ್ವಜದಂತೆ ಬರುತ್ತಿರುವವನೇ ನಿಕುಂಭನೆಂಬುದನು. ಇವನ ಪರಾಕ್ರಮ ಅದ್ಭುತವಾಗಿದೆ.॥21॥
ಮೂಲಮ್ - 22
ಯಶ್ಚೈಷ ಚಾಪಾಸಿಶರೌಘಜುಷ್ಟಂ
ಪತಾಕಿನಂ ಪಾವಕದೀಪ್ತರೂಪಮ್ ।
ರಥಂ ಸಮಾಸ್ಥಾಯ ವಿಭಾತ್ಯುದಗ್ರೋ
ನರಾಂತಕೋಽಸೌ ನಗಶೃಂಗಯೋಧೀ ॥
ಅನುವಾದ
ಧನುಸ್ಸು, ಖಡ್ಗ, ಬಾಣ ತುಂಬಿದ ಬತ್ತಳಿಕೆಯೊಂದಿಗೆ ಧ್ವಜಪತಾಕೆಗಳಿಂದ ಅಲಂಕೃತ ಹಾಗೂ ಅಗ್ನಿಯಂತೆ ದೇದೀಪ್ಯಮಾನ ರಥಾರೂಢನಾಗಿ ಅತಿಶಯ ಶೋಭಿಸುತ್ತಿರುವ ಎತ್ತರನಾದ ಯೋಧನೇ ನರಾಂತಕನು. ಇವನು ಪರ್ವತ ಶಿಖರಗಳಿಂದ ಯುದ್ಧಮಾಡುತ್ತಾನೆ.॥2.॥
ಮೂಲಮ್ - 23
ಯಶ್ಚೈಷ ನಾನಾವಿಧಘೋರರೂಪೈ-
ರ್ವ್ಯಾಘ್ರೋಷ್ಟ್ರನಾಗೇಂದ್ರಮೃಗಾಶ್ವವಕ್ತೈಃ ।
ಭೂತೈರ್ವೃತೋ ಭಾತಿ ವಿವೃತ್ತನೇತ್ರೇ-
ರ್ಯೋಸೌ ಸುರಾಣಾಮಪಿ ದರ್ಪಹಂತಾ ॥
ಮೂಲಮ್ - 24
ಯತ್ರೈತದಿಂದುಪ್ರತಿಮಂ ವಿಭಾತಿ
ಛತ್ರಂ ಸಿತಂ ಸೂಕ್ಷ್ಮಶಲಾಕಮಗ್ರ್ಯಮ್ ।
ಅತ್ರೈಷ ರಕ್ಷೋಧಿಪತಿರ್ಮಹಾತ್ಮಾ
ಭೂತೈರ್ವೃತೋ ರುದ್ರ ಇವಾವಭಾತಿ ॥
ಅನುವಾದ
ಇವನು ಹುಲಿ, ಒಂಟೆ, ಆನೆ, ಜಿಂಕೆ, ಕುದುರೆ ಮುಂತಾದ ಮುಖಗಳುಳ್ಳ, ಹುಬ್ಬನ್ನೇರಿಸಿಕೊಂಡ ಅನೇಕ ರೀತಿಯ ಭಯಂಕರ ರೂಪವುಳ್ಳ ಭೂತಗಳಿಂದ ಪರಿವೃತಗಾಗಿ, ದೇವತೆಗಳ ದರ್ಪವನ್ನು ದಮನ ಮಾಡುವ ತಲೆಯ ಮೇಲೆ ಚಂದ್ರನಂತೆ ಬೆಳ್ಳಗಾದ ಸೂಕ್ಷ್ಮ ಶಲಾಕೆ ಗಳಿಂದ ಕೂಡಿದ ಶ್ರೇಷ್ಠನಾದ ಶ್ವೇತಛತ್ರವಿದೆಯೇ, ಅವನೇ ಭೂತಗಳಿಂದ ಆವೃತವಾದ ರುದ್ರನಂತೆ ಸುಶೋಭಿತನಾದ ರಾಕ್ಷಸರಾಜ ಮಹಾಮನಾ ರಾವಣನು.॥23-24॥
ಮೂಲಮ್ - 25
ಅಸೌ ಕಿರೀಟೀ ಚಲಕುಂಡಲಾಸ್ಯೋ
ನಗೇಂದ್ರವಿಂಧ್ಯೋಪಮ ಭೀಮಕಾಯಃ ।
ಮಹೇಂದ್ರ ವೈವಸ್ವತ ದರ್ಪಹಂತಾ
ರಕ್ಷೋಧಿಪಃ ಸೂರ್ಯ ಇವಾವಭಾತಿ ॥
ಅನುವಾದ
ಇವನು ತಲೆಯಲ್ಲಿ ಕಿರೀಟ ಧರಿಸಿರುವನು. ಕಿವಿಗಳಲ್ಲಿ ಓಲಾಡುವ ಕುಂಡಲಗಳಿವೆ. ಇವನ ಶರೀರ ಗಿರಿರಾಜ ಹಿಮಾಲಯ, ವಿಂದ್ಯಾಚಲದಂತೆ ವಿಶಾಲ ಹಾಗೂ ಭಯಂಕರವಾಗಿದೆ. ಇವನು ಇಂದ್ರ, ಯಮರ ಗರ್ವವನ್ನು, ಚೂರು ಮಾಡುವವನಾಗಿದ್ದಾನೆ. ನೋಡು, ಈ ರಾಕ್ಷಸರಾಜನು ಸಾಕ್ಷಾತ್ ಸೂರ್ಯನಂತೆ ಪ್ರಕಾಶಿಸುತ್ತಿದ್ದಾನೆ.॥25॥
ಮೂಲಮ್ - 26
ಪ್ರತ್ಯುವಾಚ ತತೋ ರಾಮೋ ವಿಭೀಷಣಮರಿಂದಃ ।
ಅಹೋ ದೀಪ್ತಮಹಾತೇಜಾ ರಾವಣೋ ರಾಕ್ಷಸೇಶ್ವರಃ ॥
ಅನುವಾದ
ಆಗ ಶತ್ರುದಮನ ಶ್ರೀರಾಮನು ವಿಭೀಷಣನಲ್ಲಿ ಇಂತೆಂದನು- ಅಬ್ಬಾ! ರಾಕ್ಷಸರಾಜ ರಾವಣನು ಎಷ್ಟು ದೇದಿಪ್ಯಮಾನವಾದ ತೇಜಸ್ಸಿನಿಂದ ಬೆಳಗುತ್ತಿದ್ದಾನೆ.॥26॥
ಮೂಲಮ್ - 27
ಆದಿತ್ಯ ಇವ ದುಷ್ಟ್ರೇಕ್ಷೋ ರಶ್ಮಿಭಿರ್ಭಾತಿ ರಾವಣಃ ।
ನ ವ್ಯಕ್ತಂ ಲಕ್ಷಯೇ ಹ್ಯಸ್ಯ ರೂಪಂ ತೇಜಃಸಮಾವೃತಮ್ ॥
ಅನುವಾದ
ರಾವಣನು ತನ್ನ ಪ್ರಭೆಯಿಂದ ಸೂರ್ಯನಂತೆ ಶೋಭಿಸುತ್ತಾ, ಅವನ ಕಡೆಗೆ ನೋಡಲೂ ಕಠಿಣವಾಗಿದೆ. ತೇಜೋಮಂಡಲದಿಂದ ವ್ಯಾಪ್ತ ನಾದ್ದರಿಂದ ಇವನ ರೂಪವು ನನಗೆ ಸ್ಪಷ್ಟವಾಗಿ ಕಾಣುವುದಿಲ್ಲ.॥27॥
ಮೂಲಮ್ - 28
ದೇವದಾನಾವವೀರಾಣಾಂ ವಪುರ್ನೈವಂವಿಧಂ ಭವೇತ್ ।
ಯಾದೃಶಂ ರಾಕ್ಷಸೇಂದ್ರಸ್ಯ ವಪುರೇತದ್ ವಿರಾಜತೇ ॥
ಅನುವಾದ
ಈ ರಾಕ್ಷಸರಾಜನ ಶರೀರ ಬೆಳಗುವಂತೆ ದೇವತೆಗಳ, ದಾನವರ ವೀರರ ದೇಹಗಳೂ ಬೆಳಗುವುದಿಲ್ಲ.॥2.॥
ಮೂಲಮ್ - 29
ಸರ್ವೇ ಪರ್ವತ ಸಂಕಾಶಾಃ ಸರ್ವೇ ಪರ್ವತಯೋಧಿನಃ ।
ಸರ್ವೇ ದೀಪ್ತಾಯುಧಧರಾ ಯೋಧಾಸ್ತಸ್ಯ ಮಹಾತ್ಮನಃ ॥
ಅನುವಾದ
ಈ ಮಹಾಕಾಯ ರಾಕ್ಷಸನ ಎಲ್ಲ ಯೋಧರು ಪರ್ವತದಂತೆ ವಿಶಾಲರಾಗಿದ್ದಾರೆ. ಎಲ್ಲರೂ ಪರ್ವತದೊಂದಿಗೆ ಯುದ್ಧ ಮಾಡುವವರಾಗಿದ್ದು, ಹೊಳೆಯುತ್ತಿರುವ ಅಸ್ತ್ರ-ಶಸ್ತ್ರಗಳನ್ನು ಧರಿಸಿರುವರು.॥2.॥
ಮೂಲಮ್ - 30
ವಿಭಾತಿ ರಕ್ಷೋರಾಜೋಽಸೌ ಪ್ರದೀಪ್ತೈರ್ಭೀಮದರ್ಶನೈಃ ।
ಭೂತೈಃ ಪರಿವೃತಸ್ತೀಕ್ಷ್ಣೈರ್ದೇಹವದ್ಭಿರಿವಾಂತಕಃ ॥
ಅನುವಾದ
ಭಯಂಕರ ಪ್ರಭೆಯಿಂದ ತೋರುವ, ತೀಕ್ಷ್ಣ ಸ್ವಭಾವದ ರಾಕ್ಷಸರಿಂದ ಸುತ್ತುವರಿದ ಈ ರಾಕ್ಷಸರಾಜ ರಾವಣನು ದೇಹಧಾರೀ ಭೂತಗಳಿಂದ ಪರಿವೃತನಾದ ಯಮನಂತೆ ಕಂಡುಬರುವನು.॥3.॥
ಮೂಲಮ್ - 31
ದಿಷ್ಟ್ಯಾಯಮದ್ಯ ಪಾಪಾತ್ಮಾ ಮಮ ದೃಷ್ಟಿಪಥಂ ಗತಃ ।
ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ಸೀತಾಹರಣ ಸಂಭವಮ್ ॥
ಅನುವಾದ
ಈ ಪಾಪಾತ್ಮಾ ನನ್ನ ಕಣ್ಮುಂದೆ ಬಂದುದು ಸೌಭಾಗ್ಯದ ಮಾತಾಗಿದೆ. ಸೀತಾಪಹರಣದಿಂದಾಗಿ ನನ್ನ ಮನಸ್ಸಿನಲ್ಲಿ ಮಡುಗಟ್ಟಿದ ಕ್ರೋಧವನ್ನು ಇಂದೇ ಇವನ ಮೇಲೆ ಪ್ರಯೋಗಿಸುವೆನು.॥31॥
ಮೂಲಮ್ - 32
ಏವಮುಕ್ತ್ವಾ ತತೋ ರಾಮೋಧನುರಾದಾಯ ವೀರ್ಯವಾನ್ ।
ಲಕ್ಷ್ಮಣಾನುಚರಸ್ತಸ್ಥೌ ಸಮುದ್ದತ್ಯ ಶರೋತ್ತಮಮ್ ॥
ಅನುವಾದ
ಹೀಗೆ ಹೇಳಿ ಬಲ-ವಿಕ್ರಮಶಾಲಿ ಶ್ರೀರಾಮನು ಧನುಸ್ಸನ್ನೆತ್ತಿಕೊಂಡು, ಉತ್ತಮ ಬಾಣವನ್ನು ತೆಗೆದು ಯುದ್ಧಕ್ಕಾಗಿ ಸಿದ್ಧನಾಗಿ ನಿಂತನು. ಲಕ್ಷ್ಮಣನೂ ಈ ಕಾರ್ಯದಲ್ಲಿ ಸಹಯೋಗಿ ಯಾದನು.॥3.॥
ಮೂಲಮ್ - 33
ತತಃ ಸ ರಕ್ಷೋಧಿಪತಿರ್ಮಹಾತ್ಮಾ
ರಕ್ಷಾಂಸಿ ತಾನ್ಯಾಹ ಮಹಾಬಲಾನಿ ।
ದ್ವಾರೇಷು ಚರ್ಯಾಗೃಹ ಗೋಪುರೇಷು
ಸುನಿರ್ವೃತಾಸ್ತಿಷ್ಠತ ನಿರ್ವಿಶಂಕಾಃ ॥
ಅನುವಾದ
ಅನಂತರ ಮಹಾಮನಸ್ವಿಯಾದ ರಾವಣನು ತನ್ನೊಡನೆ ಬಂದಿರುವ ಮಹಾಬಲಿ ರಾಕ್ಷಸರಲ್ಲಿ ಹೇಳಿದನು - ನೀವು ನಿರ್ಭಯರಾಗಿ, ಯಾವುದೇ ಆತಂಕವಿಲ್ಲದೆ ನಗರದ್ವಾರಗಳಲ್ಲಿ ಹಾಗೂ ರಾಜಮಾರ್ಗದ ಗೃಹಗೋಪುರಗಳ ಮೇಲೆ ನಿಂತುಕೊಳ್ಳಿ.॥33॥
ಮೂಲಮ್ - 34
ಇಹಾಗತಂ ಮಾಂ ಸಹಿತಂ ಭವದ್ಭಿ-
ರ್ವನೌಕಸಶ್ಛಿದ್ರಮಿದಂ ವಿದಿತ್ವಾ ।
ಶೂನ್ಯಾಂ ಪುರೀಂ ದುಷ್ಟ್ರಸಹಾಂ ಪ್ರಮಥ್ಯ
ಪ್ರಧರ್ಷಯೇಯುಃ ಸಹಸಾ ಸಮೇತಾಃ ॥
ಅನುವಾದ
ಏಕೆಂದರೆ ನೀವೆಲ್ಲರೂ ನನ್ನೊಡನೆ ಬಂದಿರುವುದನ್ನು ನೋಡಿ ವಾನರರು ಇದು ಒಳ್ಳೆಯ ಸಮಯವೆಂದರಿತು ಎಲ್ಲರೂ ಒಟ್ಟಿಗೆ ಸೇರಿ, ಒಳಗೆ ಪ್ರವೇಶಿಸಲು ಬೇರೆಯವರಿಗೆ ಬಹಳ ಕಷ್ಟಕರವಾದ ಶೂನ್ಯವಾದ ಲಂಕೆಯೊಳಗೆ ನುಗ್ಗಿ ಸರ್ವನಾಶ ಮಾಡಿಬಿಡುವರು.॥34॥
ಮೂಲಮ್ - 35
ವಿಸರ್ಜಯಿತ್ವಾ ಸಚಿವಾಂಸ್ತತಸ್ತಾನ್
ಗತೇಷು ರಕ್ಷಸ್ಸು ಯಥಾನಿಯೋಗಮ್ ।
ವ್ಯದಾರಯದ್ ವಾನರಸಾಗರೌಘಂ
ಮಹಾಝುಷಃ ಪೂರ್ಣಮಿವಾರ್ಣವೌಘಮ್ ॥
ಅನುವಾದ
ಹೀಗೆ ತನ್ನ ಮಂತ್ರಿಗಳನ್ನು ಬೀಳ್ಕೊಟ್ಟಾಗ ಆ ರಾಕ್ಷಸರು ಅವನಪ್ಪಣೆಯಂತೆ ಆಯಾಯಾ ಸ್ಥಾನಗಳಿಗೆ ಹೊರಟುಹೋದರು. ಆಗ ತಿಮಿಂಗಿಲವು ಮಹಾ ಸಾಗರವನ್ನು ಅಲ್ಲೋಲ ಕಲ್ಲೋಲಗೊಳಿಸುವಂತೆ ರಾವಣನು ಸಮುದ್ರದಂತಿದ್ದ ವಾನರ ಸೈನ್ಯವನ್ನು ವಿದೀರ್ಣಗೊಳಿಸತೊಡಗಿದನು.॥35॥
ಮೂಲಮ್ - 36
ತಮಾಪತಂತೊ ಸಹಸಾ ಸಮೀಕ್ಷ್ಯ
ದೀಪ್ತೇಷುಚಾಪಂ ಯುಧಿ ರಾಕ್ಷಸೇಂದ್ರಮ್ ।
ಮಹತ್ ಸಮುತ್ಪಾಟ್ಯ ಮಹೀಧರಾಗ್ರಂ
ದುದ್ರಾವ ರಕ್ಷೋಧಿಪತಿಂ ಹರೀಶಃ ॥
ಅನುವಾದ
ಹೊಳೆಯುತ್ತಿರುವ ಧನುರ್ಬಾಣಗಳನ್ನು ಧರಿಸಿದ ರಾಕ್ಷಸೇಂದ್ರ ರಾವಣನು ಯುದ್ಧರಂಗಕ್ಕೆ ಬಂದಿರುವುದನ್ನು ನೋಡಿ ಸುಗ್ರೀವನು ಒಂದು ಭಾರೀ ಪರ್ವತವನ್ನೆತ್ತಿಕೊಂಡು ನಿಶಾಚರ ರಾಜನ ಮೇಲೆ ಆಕ್ರಮಣ ಮಾಡಿದನು.॥36॥
ಮೂಲಮ್ - 37
ತಚ್ಛೈಲಶೃಂಗಂ ಬಹುವೃಕ್ಷಸಾನುಂ
ಪ್ರಗೃಹ್ಯ ಚಿಕ್ಷೇಪ ನಿಶಾಚರಾಯ ।
ತಮಾಪತಂತಂ ಸಹಸಾ ಸಮೀಕ್ಷ್ಯ
ಚಿಚ್ಛೇದ ಬಾಣೈಸ್ತಪನೀಯಪುಂಖೈಃ ॥
ಅನುವಾದ
ಅನೇಕ ವೃಕ್ಷ ಶಿಖರಗಳಿಂದ ಕೂಡಿದ ಆ ಮಹಾಶೈಲವನ್ನು ಸುಗ್ರೀವನು ರಾವಣ ಮೇಲೆ ಎಸೆದನು. ಆ ಪರ್ವತವು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ರಾವಣನು ಸುವರ್ಣ ಪಂಖಗಳುಳ್ಳ ಅನೇಕ ಬಾಣಗಳನ್ನು ಪ್ರಯೋಗಿಸಿ ಅದನ್ನು ನುಚ್ಚುನೂರಾಗಿಸಿದನು.॥37॥
ಮೂಲಮ್ - 38
ತಸ್ಮಿನ್ಪ್ರವೃದ್ಧೋತ್ತ ಮಸಾನುವೃಕ್ಷೇ
ಶೃಂಗೇ ವಿದೀರ್ಣೇ ಪತಿತೇ ಪೃಥಿವ್ಯಾಮ್ ।
ಮಹಾಹಿಕಲ್ಪಂ ಶರಮಂತಕಾಭಂ
ಸಮಾದಧೇ ರಾಕ್ಷಸ ಲೋಕನಾಥಃ ॥
ಅನುವಾದ
ವೃಕ್ಷಗಳು ಮತ್ತು ಶಿಖರಗಳುಳ್ಳ ಆ ಮಹಾಪರ್ವತವು ಪುಡಿಪುಡಿಯಾಗಿ ಬಿದ್ದಾಗ ರಾಕ್ಷಸರ ಸ್ವಾಮಿ ರಾವಣನು ಯಮರಾಜನಂತಿದ್ದ ಒಂದು ಭಯಂಕರ ಸರ್ಪಬಾಣವನ್ನು ಧನುಸ್ಸಿಗೆ ಹೂಡಿದನು.॥38॥
ಮೂಲಮ್ - 39
ಸ ತಂ ಗೃಹೀತ್ವಾನಿಲತುಲ್ಯವೇಗಂ
ಸವಿಸ್ಫುಲಿಂಗಜ್ವಲನ ಪ್ರಕಾಶಮ್ ।
ಬಾಣಂ ಮಹೇಂದ್ರಾಶನಿತುಲ್ಯವೇಗಂ
ಚಿಕ್ಷೇಪ ಸುಗ್ರೀವವಧಾಯ ರುಷ್ಟಃ ॥
ಅನುವಾದ
ಆ ಬಾಣದ ವೇಗ ವಾಯುವಿನಂತಿದ್ದು, ಅದರಿಂದ ಕಿಡಿಗಳು ಹಾರುತ್ತಾ ಉರಿಯುವ ಅಗ್ನಿಯಂತೆ ಪ್ರಕಾಶ ಹರಡಿತ್ತು. ಇಂದ್ರನ ವಜ್ರದಂತೆ ಭಯಂಕರ ವೇಗವುಳ್ಳ ಬಾಣವನ್ನು ರಾವಣನು ದುಷ್ಟನಾಗಿ ಸುಗ್ರೀವನನ್ನು ಕೊಲ್ಲಲು ಪ್ರಯೋಗಿಸಿದನು.॥39॥
ಮೂಲಮ್ - 40
ಸ ಸಾಯಕೋ ರಾವಣಬಾಹುಮುಕ್ತಃ
ಶಕ್ರಾಶನಿಪ್ರಖ್ಯವಪುಃ ಪ್ರಕಾಶಮ್ ।
ಸುಗ್ರೀವಮಾಸಾದ್ಯ ಬಿಭೇದ ವೇಗಾದ್
ಗುಹೇರಿತಾ ಕ್ರೌಂಚಮಿವೋಗ್ರಶಕ್ತಿಃ ॥
ಅನುವಾದ
ರಾವಣನು ಬಿಟ್ಟ ಆ ಸಾಯಕವು ಇಂದ್ರನ ವಜ್ರದಂತೆ, ಕಾರ್ತೀಕ ಸ್ವಾಮಿಯು ಪ್ರಯೋಗಿಸಿದ ಭಯಾನಕ ಶಕ್ತಿಯು ಕ್ರೌಂಚಪರ್ವತವನ್ನು ವಿದೀರ್ಣ ಗೊಳಿಸಿದಂತೆ, ಕಾಂತಿಯುಕ್ತ ಶರೀರವುಳ್ಳ ಸುಗ್ರೀವನ ಬಳಿಗೆ ಬಂದು ಅವನನ್ನು ಘಾಸಿಗೊಳಿಸಿತು.॥40॥
ಮೂಲಮ್ - 41
ಸ ಸಾಯಕಾರ್ತೋ ವಿಪರೀತ ಚೇತಾಃ
ಕೂಜನ್ ಪೃಥಿವ್ಯಾಂ ನಿಪಪಾತ ವೀರಃ ।
ತಂ ವೀಕ್ಷ್ಯ ಭೂಮೌ ಪತಿತಂ ವಿಸಂಜ್ಞಂ
ನೇದುಃ ಪ್ರಹೃಷ್ಟಾ ಯುಧಿ ಯಾತುಧಾನಾಃ ॥
ಅನುವಾದ
ಆ ಬಾಣದ ಏಟಿನಿಂದ ವೀರ ಸುಗ್ರೀವನು ಆರ್ತನಾದ ಮಾಡುತ್ತಾ ಮೂರ್ಛಿತನಾಗಿ ನೆಲಕ್ಕೆ ಬಿದ್ದುಬಿಟ್ಟನು. ಸುಗ್ರೀವನು ನಿಶ್ಚೇಷ್ಟಿತನಾಗಿ ಬಿದ್ದಿರುವುದನ್ನು ನೋಡಿ ಯುದ್ಧಕ್ಕೆ ಬಂದ ಎಲ್ಲ ರಾಕ್ಷಸರು ಹರ್ಷದಿಂದ ಸಿಂಹನಾದ ಮಾಡಿದರು..॥41॥
ಮೂಲಮ್ - 42
ತತೋ ಗವಾಕ್ಷೋ ಗವಯಃ ಸುಷೇಣ-
ಸ್ತ್ವಥರ್ಷಭೋ ಜ್ಯೋತಿಮುಖೋ ನಲಶ್ಚ ।
ಶೈಲಾನ್ ಸಮುತ್ಪಾಟ್ಯ ವಿವೃದ್ಧಕಾಯಾಃ
ಪ್ರದುದ್ರುವುಸ್ತಂ ಪ್ರತಿ ರಾಕ್ಷಸೇಂದ್ರಮ್ ॥
ಅನುವಾದ
ಆಗ ಗವಾಕ್ಷ, ಗವಯ, ಸುಷೇಣ, ಋಷಭ, ಜ್ಯೋತಿರ್ಮುಖ, ನಲ ಮುಂತಾದ ವಿಶಾಲಕಾಯ ವಾನರರು ಪರ್ವತ ಶಿಖರಗಳನ್ನು ಕಿತ್ತು ರಾವಣನಮೇಲೆ ಆಕ್ರಮಿಸಿದರು.॥42॥
ಮೂಲಮ್ - 43½
ತೇಷಾಂ ಪ್ರಹಾರಾನ್ ಸ ಚಕಾರ ಮೋಘಾನ್
ರಕ್ಷೋಧಿಪೋ ಬಾಣಶತೈಃ ಶಿತಾಗ್ರೈಃ ।
ತಾನ್ವಾನರೇಂದ್ರಾನಪಿ ಬಾಣಜಾಲೈ
ರ್ಬಿಭೇದ ಜಾಂಬೂನದ ಚಿತ್ರಪುಂಖೈಃ ॥
ತೇ ವಾನರೇಂದ್ರಾಸ್ತ್ರಿದಶಾರಿಬಾಣೈ-
ರ್ಭಿನ್ನಾ ನಿಪೇತುರ್ಭುವಿ ಭೀಮಕಾಯಾಃ ।
ಅನುವಾದ
ಆದರೆ ನಿಶಾಚರ ರಾಜಾರಾವಣನು ನೂರಾರು ಹರಿತವಾದ ಬಾಣಗಳಿಂದ ಅವರ ಪ್ರಹಾರಗಳನ್ನು ವ್ಯರ್ಥಗೊಳಿಸಿದನು. ಆ ವಾನರೇಶ್ವರರಿಗೂ ಚಿನ್ನದ ಗರಿಗಳುಳ್ಳ ಬಾಣಸಮೂಹದಿಂದ ಕ್ಷತ-ವಿಕ್ಷತಗೊಳಿಸಿದನು. ದೇವದ್ರೋಹಿ ರಾವಣನ ಬಾಣಗಳಿಂದ ಗಾಯಗೊಂಡ ಭೀಮಕಾಯ ವಾನರೇಂದ್ರರು ಭೂಮಿಗೆ ಬಿದ್ದುಬಿಟ್ಟರು.॥43॥
ಮೂಲಮ್ - 44½
ತತಸ್ತು ತದ್ವಾನರಸೈನ್ಯಮುಗ್ರಂ
ಪ್ರಚ್ಛಾದಯಾಮಾಸ ಸ ಬಾಣಜಾಲೈಃ ॥
ತೇ ವಧ್ಯಮಾನಾಃ ಪತಿತಾಶ್ಚವೀರಾ
ನಾನದ್ಯಮಾನಾ ಭಯಶಲ್ಯವಿದ್ಧಾಃ ।
ಅನುವಾದ
ಮತ್ತೆ ರಾವಣನು ತನ್ನ ಬಾಣಸಮೂಹದಿಂದ ಭಯಂಕರ ವಾನರರನ್ನು ಮುಚ್ಚಿಬಿಟ್ಟನು. ರಾವಣನ ಬಾಣಗಳಿಂದ ಪೀಡಿತರಾಗಿ, ಭಯಗೊಂಡ ವಾನರರು ಬಾಣಗಳ ಪೆಟ್ಟುತಿಂದು ಜೋರಾಗಿ ಕಿರಿಚುತ್ತಾ ಧರಾಶಾಯಿಯಾದವು.॥44½॥
ಮೂಲಮ್ - 45
ಶಾಖಾಮೃಗಾ ರಾವಣಸಾಯಕಾರ್ತಾ
ಜಗ್ಮುಃ ಶರಣ್ಯಂ ಶರಣಂ ಸ್ಮ ರಾಮಮ್ ॥
ಮೂಲಮ್ - 46
ತತೋ ಮಹಾತ್ಮಾ ಸ ಧನುರ್ಧನುಷ್ಮಾ-
ನಾದಾಯ ರಾಮಃ ಸಹಸಾ ಜಗಾಮ
ತಂ ಲಕ್ಷ್ಮಣಃ ಪ್ರಾಂಜಲಿರಭ್ಯುಪೇತ್ಯ
ಉವಾಚ ರಾಮಂ ಪರಮಾರ್ಥಯುಕ್ತಮ್ ॥
ಅನುವಾದ
ರಾವಣನ ಅಂಬುಗಳಿಂದ ಪೀಡಿತರಾದ ಅನೇಕ ವಾನರರು ಶರಣಾಗತವತ್ಸಲ ಶ್ರೀರಾಮನಲ್ಲಿ ಶರಣರಾದರು. ಆಗ ಧನುರ್ಧರ ಮಹಾತ್ಮಾ ಶ್ರೀರಾಮನು ಧನುಸ್ಸನ್ನೆತ್ತಿಕೊಂಡು ಮುಂದರಿದನು. ಆಗಲೇ ಲಕ್ಷ್ಮಣನು ಅವನ ಎದುರಿಗೆ ಬಂದು ಕೈಮುಗಿದು ಅವನಲ್ಲಿ ಅರ್ಥಯುಕ್ತ ಮಾತನ್ನಾಡಿದನು.॥45-46॥
ಮೂಲಮ್ - 47
ಕಾಮಮಾರ್ಯ ಸುಪರ್ಯಾಪ್ತೋ ವಧಾಯಾಸ್ಯ ದುರಾತ್ಮನಃ ।
ವಿಧಮಿಷ್ಯಾಮ್ಯಹಂ ಚೈತಮನುಜಾನೀಹಿ ಮಾಂ ವಿಭೋ ॥
ಅನುವಾದ
ಆರ್ಯನೇ! ಈ ದುರಾತ್ಮನನ್ನು ವಧಿಸಲು ನಾನೊಬ್ಬನೇ ಸಾಕು. ಪ್ರಭೋ! ನಾನು ಇವನನ್ನು ನಾಶಮಾಡುವೆನು, ನೀನು ನನಗೆ ಅಪ್ಪಣೆ ಕೊಡು.॥47॥
ಮೂಲಮ್ - 48
ತಮಬ್ರವೀನ್ಮಹಾತೇಜಾ ರಾಮಃ ಸತ್ಯಪರಾಕ್ರಮಃ ।
ಗಚ್ಛ ಯತ್ನಪರಶ್ಚಾಪಿ ಭವ ಲಕ್ಷ್ಮಣ ಸಂಯುಗೇ ॥
ಅನುವಾದ
ಅವನ ಮಾತನ್ನು ಕೇಳಿ ಮಹಾ ತೇಜಸ್ವೀ, ಸತ್ಯಪರಾಕ್ರಮಿ ಶ್ರೀರಾಮನು-ಸರಿ, ಲಕ್ಷ್ಮಣ! ಹೋಗು! ಆದರೋ ಸಂಗ್ರಾಮದಲ್ಲಿ ವಿಜಯ ಪಡೆಯಲು ಪೂರ್ಣಪ್ರಯತ್ನ ಶೀಲನಾಗಿರಬೇಕು.॥48॥
ಮೂಲಮ್ - 49
ರಾವಣೋ ಹಿ ಮಹಾವೀರ್ಯೋ ರಣೇಽದ್ಭುತ ಪರಾಕ್ರಮಃ ।
ತ್ರೈಲೋಕ್ಯೇನಾಪಿ ಸಂಕ್ರುದ್ಧೋ ದುಷ್ಟ್ರಸಹ್ಯೋ ನ ಸಂಶಯಃ ॥
ಅನುವಾದ
ಏಕೆಂದರೆ ರಾವಣನು ಮಹಾ ಬಲ-ಪರಾಕ್ರಮದಿಂದ ಸಂಪನ್ನನಾಗಿದ್ದಾನೆ. ಇವನು ಯುದ್ಧದಲ್ಲಿ ಅದ್ಭುತ ಪರಾಕ್ರಮ ತೋರುವನು. ರಾವಣನು ಹೆಚ್ಚು ಕುಪಿತನಾಗಿ ಯುದ್ಧಮಾಡತೊಡಗಿದರೆ, ಮೂರು ಲೋಕಗಳೂ ಇವನ ವೇಗವನ್ನು ಸಹಿಸಲು ಕಷ್ಟವಾಗಬಹುದು.॥49॥
ಮೂಲಮ್ - 50
ತಸ್ಯಚ್ಛಿದ್ರಾಣಿ ಮಾರ್ಗಸ್ವ ಸ್ವಚ್ಛಿದ್ರಾಣಿ ಚ ಲಕ್ಷಯ ।
ಚಕ್ಷುಷಾ ಧನುಷಾಽಽತ್ಮಾನಂ ಗೋಪಯಸ್ವ ಸಮಾಹಿತಃ ॥
ಅನುವಾದ
ನೀನು ಯುದ್ಧದಲ್ಲಿ ರಾವಣನ ಛಿದ್ರವನ್ನು ನೋಡುತ್ತಿರು, ಅವನ ದೌರ್ಬಲ್ಯದ ಲಾಭಪಡೆ. ತನ್ನ ಛಿದ್ರಗಳ ಕಡೆಗೆ ಗಮನವಿರಲಿ. ಏಕಾಗ್ರಚಿತ್ತನಾಗಿ ಎಚ್ಚರಿಕೆಯಿಂದ ಕಣ್ಣುಗಳಿಂದಲೂ, ಧನುಸ್ಸಿನಿಂದಲೂ ನಿನ್ನನ್ನು ರಕ್ಷಿಸಿಕೋ.॥50॥
ಮೂಲಮ್ - 51
ರಾಘವಸ್ಯ ವಚಃ ಶ್ರುತ್ವಾ ಸಂಪರಿಷ್ವಜ್ಯ ಪೂಜ್ಯ ಚ ।
ಅಭಿವಾದ್ಯ ಚ ರಾಮಾಯ ಯಯೌ ಸೌಮಿತ್ರಿರಾಹವೇ ॥
ಅನುವಾದ
ಶ್ರೀರಘುನಾಥನ ಮಾತನ್ನು ಕೇಳಿ ಸೌಮಿತ್ರಿಯು ಅವನನ್ನು ಬಿಗಿದಪ್ಪಿಕೊಂಡನು. ಶ್ರೀರಾಮನನ್ನು ಪೂಜಿಸಿ, ಅಭಿವಾದನ ಮಾಡಿ ಯುದ್ಧಕ್ಕಾಗಿ ಹೊರಟನು.॥51॥
ಮೂಲಮ್ - 52
ಸ ರಾವಣಂ ವಾರಣಹಸ್ತ ಬಾಹುಂ
ದದರ್ಶ ಭೀಮೋದ್ಯತದೀಪ್ತಚಾಪಮ್ ।
ಪ್ರಚ್ಛಾದಯಂತಂ ಶರವೃಷ್ಟಿ ಜಾಲೈ-
ಸ್ತಾನ್ ವಾನರಾನ್ ಭಿನ್ನ ವಿಕೀರ್ಣದೇಹಾನ್ ॥
ಅನುವಾದ
ರಾವಣನ ಭುಜಗಳು ಆನೆಯ ಸೊಂಡಿಲನಂತಿದ್ದು, ದೊಡ್ಡದಾದ ಭಯಂಕರ ಪ್ರಕಾಶಮಾನ ಧನುಸ್ಸನ್ನು ಧರಿಸಿ, ಬಾಣಗಳ ಮಳೆಗರೆದು ವಾನರರನ್ನು ಹಿಮ್ಮೆಟಿಸ್ಸುತ್ತಾ, ಅವರ ಶರೀರಗಳನ್ನು ಭಿನ್ನ ಭಿನ್ನಗೊಳಿಸುತ್ತಿರುವುದನ್ನು ಲಕ್ಷ್ಮಣನು ನೋಡದನು.॥52॥
ಮೂಲಮ್ - 53
ತಮಾಲೋಕ್ಯ ಮಹಾತೇಜಾ ಹನುಮಾನ್ಮಾರುತಾತ್ಮಜಃ ।
ನಿವಾರ್ಯ ಶರಜಾಲಾನಿ ಪ್ರದುದ್ರಾವ ಸ ರಾವಣಮ್ ॥
ಅನುವಾದ
ಹೀಗೆ ಪರಾಕ್ರಮ ತೋರುವ ರಾವಣನನ್ನು ನೋಡಿ ಮಹಾತೇಜಸ್ವೀ ವಾಯುನಂದನ ಹನುಮಂತನು ಅವನ ಬಾಣ ಸಮೂಹವನ್ನು ನಿವಾರಿಸುತ್ತಾ ಅವನ ಕಡೆಗೆ ಓಡಿದನು.॥53॥
ಮೂಲಮ್ - 54
ರಥಂ ತಸ್ಯ ಸಮಾಸಾದ್ಯ ಬಾಹುಮುದ್ಯಮ್ಯ ದಕ್ಷಿಣಮ್ ।
ತ್ರಾಸಯನ್ ರಾವಣಂ ಧೀಮಾನ್ ಹನೂಮಾನ್ ವಾಕ್ಯಮಬ್ರವೀತ್ ॥
ಅನುವಾದ
ಅವನ ರಥದ ಬಳಿಗೆ ಹೋಗಿ ಬಲ ಕೈಯನ್ನೆತ್ತಿ ಬುದ್ಧಿವಂತ ಹನುಮಂತನು ರಾವಣನನ್ನು ಭಯಪಡಿಸುತ್ತಾ ಹೇಳಿದನು.॥54॥
ಮೂಲಮ್ - 55
ದೇವದಾನವಗಂಧರ್ವೈರ್ಯಕ್ಷೈಶ್ಚ ಸಹ ರಾಕ್ಷಸೈಃ ।
ಅವಧ್ಯತ್ವಂ ತ್ವಯಾ ಪ್ರಾಪ್ತಂ ವಾನರೇಭ್ಯಸ್ತು ತೇ ಭಯಮ್ ॥
ಅನುವಾದ
ಎಲೈ ನಿಶಾಚರನೇ! ನೀನು ದೇವತೆಗಳಿಂದ, ದಾನವರಿಂದ, ಗಂಧರ್ವ-ಯಕ್ಷರಿಂದ, ರಾಕ್ಷಸರಿಂದ ಸಾಯದಂತಿರುವ ವರ ಪಡೆದಿರುವೆ. ಆದರೆ ವಾನರರಿಂದ ನಿನಗೆ ಭಯ ಇದ್ದೇ ಇದೆ.॥55॥
ಮೂಲಮ್ - 56
ಏಷ ಮೇ ದಕ್ಷಿಣೋ ಬಾಹುಃ ಪಂಚಶಾಖಃ ಸಮುದ್ಯತಃ ।
ವಿಧಮಿಷ್ಯತಿ ತೇ ದೇಹೇಭೂತಾತ್ಮಾನಂ ಚಿರೋಷಿತಮ್ ॥
ಅನುವಾದ
ನೋಡು, ಐದು ಬೆರಳುಗಳುಳ್ಳ ಈ ನನ್ನ ಬಲಕೈ ಎತ್ತಿರುವೆನು. ನಿನ್ನ ಶರೀರದಲ್ಲಿ ಚಿರಕಾಲದಿಂದ ಇದ್ದ ಜೀವಾತ್ಮನನ್ನು ನಾನು ಇಂದು ದೇಹದಿಂದ ಬೇರ್ಪಡಿಸುವೆನು.॥56॥
ಮೂಲಮ್ - 57
ಶ್ರುತ್ವಾ ಹನುಮತೋ ವಾಕ್ಯಂ ರಾವಣೋ ಭೀಮವಿಕ್ರಮಃ ।
ಸಂರಕ್ತನಯನಃ ಕ್ರೋಧಾದಿದಂ ವಚನಮಬ್ರವೀತ್ ॥
ಅನುವಾದ
ಹನುಮಂತನ ಈ ಮಾತನ್ನು ಕೇಳಿ ಭಯಾನಕ ಪರಾಕ್ರಮಿ ರಾವಣನ ಕಣ್ಣುಗಳು ಕ್ರೋಧದಿಂದ ಕೆಂಪಾದವು. ಅವನು ರೋಷಗೊಂಡು ಹೇಳಿದನು.॥57॥
ಮೂಲಮ್ - 58
ಕ್ಷಿಪ್ರಂ ಪ್ರಹರ ನಿಃಶಂಕ ಸ್ಥಿರಾಂ ಕೀರ್ತಿಮವಾಪ್ನುಹಿ ।
ತತಸ್ತ್ವಾಂ ಜ್ಞಾತವಿಕ್ರಾಂತಂ ನಾಶಯಿಷ್ಯಾಮಿ ವಾನರ ॥
ಅನುವಾದ
ವಾನರನೇ! ನೀನು ಯಾವುದೇ ಅಳುಕುವಿಲ್ಲದೆ ನನ್ನನ್ನು ಪ್ರಹರಿಸಿ ಸುಸ್ಥಿರ ಯಶವನ್ನು ಪಡೆ. ನಿನ್ನಲ್ಲಿರುವ ಪರಾಕ್ರಮವನ್ನು ನೋಡಿದ ಬಳಿಕ ನಾನು ನಿನ್ನನ್ನು ನಾಶಪಡಿಸುವೆನು.॥58॥
ಮೂಲಮ್ - 59
ರಾವಣಸ್ಯ ವಚಃ ಶ್ರುತ್ವಾ ವಾಯುಸೂನುರ್ವಚೋಽಬ್ರವೀತ್ ।
ಪ್ರಹೃತಂ ಹಿ ಮಯಾ ಪೂರ್ವಮಕ್ಷಂ ತವ ಸುತಂ ಸ್ಮರ ॥
ಅನುವಾದ
ರಾವಣನ ಮಾತನ್ನು ಕೇಳಿ ಪವನಪುತ್ರ ಹನುಮಂತನು ನುಡಿದನು- ನಾನಾದರೋ ಮೊದಲೇ ನಿನ್ನ ಪುತ್ರ ಅಕ್ಷನನ್ನು ಸಂಹರಿಸಿಬಿಟ್ಟಿರುವೆ. ಇದನ್ನು ಸ್ವಲ್ಪ ನೆನೆಸಿಕೋ.॥59॥
ಮೂಲಮ್ - 60
ಏವಮುಕ್ತೋ ಮಹಾತೇಜಾ ರಾವಣೋ ರಾಕ್ಷಸೇಶ್ವರಃ ।
ಆಜಘಾನಾನಿಲಸುತಂ ತಲೇನೋರಸಿ ವೀರ್ಯವಾನ್ ॥
ಅನುವಾದ
ಇಷ್ಟು ಹೇಳುತ್ತಲೇ ಬಲವಿಕ್ರಮ ಸಂಪನ್ನ ಮಹಾತೇಜಸ್ವೀ ರಾಕ್ಷಸ ರಾವಣನು ಆ ವಾಯುನಂದನನ ಎದೆಗೆ ಅಂಗೈಯಿಂದ ಪ್ರಹರಿಸಿದನು.॥60॥
ಮೂಲಮ್ - 61½
ಸ ತಲಾಭಿಹತಸ್ತೇನ ಚಚಾಲ ಚ ಮುಹುರ್ಮುಹುಃ ।
ಸ್ಥಿತ್ವಾ ಮುಹೂರ್ತಂ ತೇಜಸ್ವೀ ಸ್ಥೈರ್ಯಂ ಕೃತ್ವಾ ಮಹಾಮತಿಃ ॥
ಆಜಘಾನ ಚ ಸಂಕ್ರುದ್ಧಸ್ತಲೇನೈವಾಮರದ್ವಿಷಮ್ ॥
ಅನುವಾದ
ಆ ಏಟಿನಿಂದ ಹನುಮಂತನು ಸ್ವಲ್ಪ ಹೊತ್ತು ತತ್ತರಿಸಿದನು. ಆದರೆ ಬುದ್ಧಿವಂತ, ತೇಜಸ್ವಿಯಾದ ಅವನು ಮುಹೂರ್ತ ಕಾಲದಲ್ಲಿ ಸುಸ್ಥಿರವಾಗಿ ನಿಂತುಕೊಂಡನು. ಮತ್ತೆ ಅವನು ಅತ್ಯಂತ ಕುಪಿತನಾಗಿ ಆ ದೇವದ್ರೋಹಿಯನ್ನು ಅಂಗೈಯಿಂದ ಪ್ರಹರಿಸಿದನು.॥61॥
ಮೂಲಮ್ - 62½
ತತಃ ಸ ತೇನಾಭಿಹತೋ ವಾನರೇಣ ಮಹಾತ್ಮನಾ ॥
ದಶಗ್ರೀವಃ ಸಮಾಧೂತೋ ಯಥಾ ಭೂಮಿತಲೇಽಚಲಃ ।
ಅನುವಾದ
ಆ ಮಹಾತ್ಮಾ ವಾನರನ ಏಟು ತಿಂದು ದಶಮುಖ ರಾವಣನು ಭೂಕಂಪವಾದಾಗ ಪರ್ವತಗಳು ನಡುಗುವಂತೆಯೇ ನಡುಗಿ ಹೋದನು.॥62॥
ಮೂಲಮ್ - 63½
ಸಂಗ್ರಾಮೇ ತಂ ತಥಾ ದೃಷ್ಟ್ವಾ ರಾವಣಂ ತಲತಾಡಿತಮ್ ॥
ಋಷಯೋ ವಾನರಾಃ ಸಿದ್ಧಾ ನೇದುರ್ದೇವಾಃ ಸಹಾಸುರೈಃ ।
ಅನುವಾದ
ರಣಭೂಮಿಯಲ್ಲಿ ರಾವಣನು ಏಟು ತಿಂದುದನ್ನು ನೋಡಿ ಋಷಿಗಳು, ವಾನರರು, ಸಿದ್ಧರು, ದೇವತೆಗಳು, ಅಸುರರು ಹೀಗೆ ಎಲ್ಲರೂ ಹರ್ಷಧ್ವನಿ ಮಾಡತೊಡಗಿದರು.॥63॥
ಮೂಲಮ್ - 64½
ಅಥಾಶ್ವಸ್ಯ ಮಹಾತೇಜಾ ರಾವಣೋ ವಾಕ್ಯಮಬ್ರವೀತ್ ॥
ಸಾಧು ವಾನರ ವೀರ್ಯೇಣ ಶ್ಲಾಘನೀಯೋಽಸಿ ಮೇ ರಿಪುಃ ।
ಅನುವಾದ
ಅನಂತರ ಮಹಾತೇಜಸ್ವೀ ರಾವಣನು ಸಾವರಿಸಿಕೊಂಡು ಭಲೇ ವಾನರ! ಶಹಬಾಸ್! ಪರಾಕ್ರಮದ ದೃಷ್ಟಿಯಿಂದ ನೀನು ನನಗೆ ಪ್ರಶಂಸನೀಯ ಪ್ರತಿದ್ವಂದ್ವಿ ಆಗಿರುವೆ.॥64॥
ಮೂಲಮ್ - 65½
ರಾವಣೇನೈವಮುಕ್ತಸ್ತು ಮಾರುತಿರ್ವಾಕ್ಯಮಬ್ರವೀತ್ ॥
ಧಿಗಸ್ತು ಮಮ ವೀರ್ಯಸ್ಯ ಯತ್ತ್ವಂ ಜೀವಸಿ ರಾವಣ ।
ಅನುವಾದ
ರಾವಣನು ಹೀಗೆ ಹೇಳಿದಾಗ ಪವನಕುಮಾರ ಹನುಮಂತನು ಹೇಳಿದರು- ರಾವಣನೇ! ನೀನಿನ್ನೂ ಜೀವಿಸಿ ಇರುವೆಯಲ್ಲ! ನನ್ನ ಪರಾಕ್ರಮಕ್ಕೆ ಧಿಕ್ಕಾರವಿರಲಿ.॥65½॥
ಮೂಲಮ್ - 66½
ಸಕೃತ್ತು ಪ್ರಹರೇದಾನೀಂ ದುರ್ಬುದ್ಧೇ ಕಿಂ ವಿಕತ್ಥಸೇ ॥
ತತಸ್ತ್ವಾಂ ಮಾಮಕೋ ಮುಷ್ಟಿರ್ನಯಿಷ್ಯತಿ ಯಮಕ್ಷಯಮ್ ।
ಅನುವಾದ
ದುರ್ಬುದ್ಧಿಯೇ ಸುಮ್ಮನೆ ಏಕೆ ಹರಟುತ್ತಿರುವೆ? ನನ್ನನ್ನು ಇನ್ನೊಮ್ಮೆ ಪ್ರಹರಿಸು. ಬಳಿಕ ನನ್ನ ಮುಷ್ಟಿಯು ನಿನ್ನನ್ನು ಯಮಲೋಕಕ್ಕೆ ಕಳುಹಿಸಿಬಿಡುತ್ತದೆ.॥66½॥
ಮೂಲಮ್ - 67
ತತೋ ಮಾರುತಿವಾಕ್ಯೇನ ಕೋಪಸ್ತಸ್ಯ ಪ್ರಜಜ್ವಲೇ ॥
ಮೂಲಮ್ - 68
ಸಂರಕ್ತನಯನೋ ಯತ್ನಾನ್ಮುಷ್ಟಿಮಾವೃತ್ಯ ದಕ್ಷಿಣಮ್ ।
ಪಾತಯಾಮಾಸ ವೇಗೇನ ವಾನರೋರಸಿ ವೀರ್ಯವಾನ್ ॥
ಅನುವಾದ
ಹನುಮಂತನ ಈ ಮಾತಿನಿಂದ ರಾವಣನ ಕ್ರೋಧ ಉರಿದೆದ್ದಿತು. ಅವನ ಕಣ್ಣು ಕೆಂಪಾದವು. ಆ ಪರಾಕ್ರಮಿ ರಾಕ್ಷಸನು ಬಲಗೈ ಮುಷ್ಟಿ ಬಿಗಿದು ಹನುಮಂತನ ಎದೆಗೆ ವೇಗವಾಗಿ ಹೊಡೆದನು.॥67-68॥
ಮೂಲಮ್ - 69½
ಹನುಮಾನ್ವಕ್ಷಸಿ ವ್ಯೂಢೇ ಸಂಚಚಾಲ ಪುನಃ ಪುನಃ ।
ವಿಹ್ವಲಂ ತು ತದಾ ದೃಷ್ಟ್ವಾ ಹನೂಮಂತಂ ಮಹಾಬಲಮ್ ॥
ರಥೇನಾತಿರಥಃ ಶೀಘ್ರಂ ನೀಲಂ ಪ್ರತಿ ಸಮಭ್ಯಗಾತ್ ।
ಅನುವಾದ
ವಕ್ಷಃಸ್ಥಳದಲ್ಲಿ ಬಿದ್ದ ಏಟಿನಿಂದ ಹನುಮಂತನು ಪುನಃ ವಿಚಲಿತನಾದನು. ಮಹಾಬಲಿ ಹನುಮಂತನು ಆಗ ವಿಹ್ವಲನಾದುದನ್ನು ನೋಡಿ ಅತಿರಥಿ ರಾವಣನು ರಥದಿಂದ ನೀಲನ ಆಕ್ರಮಣ ಮಾಡಿದನು.॥69½॥
ಮೂಲಮ್ - 70
ರಾಕ್ಷಸಾನಾಮಧಿಪತಿರ್ದಶಗ್ರೀವಃ ಪ್ರತಾಪವಾನ್ ॥
ಮೂಲಮ್ - 71
ಪನ್ನಗಪ್ರತಿಮೈರ್ಭೀಮೈಃ ಪರಮರ್ಮಾಭಿಭೇದನೈಃ ।
ಶರೈರಾದೀಪಯಾಮಾಸ ನೀಲಂ ಹರಿಚಮೂಪತಿಮ್ ॥
ಅನುವಾದ
ರಾಕ್ಷಸೇಶ್ವರ ಪ್ರತಾಪಿ ದಶಗ್ರೀವನು ಶತ್ರುವಿನ ಮರ್ಮವನ್ನು ವಿದೀರ್ಣಗೊಳಿಸುವ ಸರ್ಪದಂತಹ ಭಯಂಕರ ಬಾಣಗಳಿಂದ ವಾನರ ಸೇನಾಪತಿಯನ್ನು ಸಂತಾಪಗೊಳಿಸಲು ಪ್ರಾರಂಭಿಸಿದನು.॥70-71॥
ಮೂಲಮ್ - 72
ಸ ಶರೌಘಸಮಾಯಸ್ತೋ ನೀಲೋ ಹರಿಚಮೂಪತಿಃ ।
ಕರೇಣೈಕೇನ ಶೈಲಾಗ್ರಂ ರಕ್ಷೋಧಿಪತಯೇಽಸೃಜತ್ ॥
ಅನುವಾದ
ರಾವಣನ ಬಾಣಗಳಿಂದ ಪೀಡಿತನಾದ ವಾನರ ಸೇನಾಪತಿ ನೀಲನು ಅವನ ಮೇಲೆ ಒಂದೇ ಕೈಯಿಂದ ಪರ್ವತವೊಂದನ್ನು ಎತ್ತಿ ರಭಸದಿಂದ ಎಸೆದನು.॥72॥
ಮೂಲಮ್ - 73
ಹನುಮಾನಪಿ ತೇಜಸ್ವೀ ಸಮಾಶ್ವಸ್ತೋ ಮಹಾಮನಾಃ ।
ವಿಪ್ರೇಕ್ಷಮಾಣೋ ಯುದ್ಧೇಪ್ಸುಃ ಸರೋಷಮಿದಮಬ್ರವೀತ್ ॥
ಮೂಲಮ್ - 74
ನೀಲೇನ ಸಹ ಸಂಯುಕ್ತಂ ರಾವಣಂ ರಾಕ್ಷಸೇಶ್ವರಮ್ ।
ಅನ್ಯೇನ ಯುಧ್ಯಮಾನಸ್ಯ ನ ಯುಕ್ತಮಭಿಧಾವನಮ್ ॥
ಅನುವಾದ
ಅಷ್ಟರಲ್ಲಿ ಮಹಾತ್ಮನಾದ, ತೇಜಸ್ವೀ ಹನುಮಂತನು ಸುಧಾರಿಸಿ ಕೊಂಡು ಪುನಃ ಯುದ್ಧದ ಇಚ್ಛೆಯಿಂದ ರಾವಣನ ಕಡೆಗೆ ನೋಡತೊಡಗಿದನು. ಆಗ ರಾಕ್ಷಸೇಶ್ವರ ರಾವಣನು ನೀಲನೊಂದಿಗೆ ಕಾದಾಡುತ್ತಿದ್ದನು. ಹನುಮಂತನು ರೋಷಗೊಂಡು ಅವನಲ್ಲಿ ಹೇಳಿದನು - ಎಲವೋ ನಿಶಾಚರನೇ! ಈಗ ನೀನು ಬೇರೊಬ್ಬನ ಜೊತೆಗೆ ಯುದ್ಧ ಮಾಡುತ್ತಿರುವೆ; ಆದ್ದರಿಂದ ನಿನ್ನ ಮೇಲೆ ಆಕ್ರಮಣ ಮಾಡುವುದು ಉಚಿತವಾಗಲಾರದು.॥73-74॥
ಮೂಲಮ್ - 75
ರಾವಣೋಽಥ ಮಹಾತೇಜಾಸ್ತಂ ಶೃಂಗಂ ಸಪ್ತಭಿಃ ಶರೈಃ ।
ಆಜಘಾನ ಸುತೀಕ್ಷ್ಣಾಗ್ರೈಸ್ತದ್ ವಿಕೀರ್ಣಂ ಪಪಾತ ಹ ॥
ಅನುವಾದ
ಅತ್ತ ಮಹಾತೇಜಸ್ವೀ ರಾವಣನು ಎಸೆದಿರುವ ಪರ್ವತವನ್ನು ಹರಿತವಾದ ಏಳು ಬಾಣಗಳಿಂದ ಚೂರು ಚೂರಾಗಿಸಿ ನೆಲಕ್ಕೆ ಬೀಳಿಸದನು.॥75॥
ಮೂಲಮ್ - 76
ತದ್ವಿಕೀರ್ಣಂ ಗಿರೇಃ ಶೃಂಗಂ ದೃಷ್ಟ್ವಾ ಹರಿಚಮೂಪತಿಃ ।
ಕಾಲಾಗ್ನಿರಿವ ಜಜ್ವಾಲ ಕೋಪೇನ ಪರವೀರಹಾ ॥
ಅನುವಾದ
ಆ ಪರ್ವತವು ಪುಡಿಯಾದುದನ್ನು ನೋಡಿ ಶತ್ರುವೀರರನ್ನು ಸಂಹಾರ ಮಾಡುವ ವಾನರ ಸೇನಾಪತಿ ನೀಲನು ಪ್ರಳಯಕಾಲದ ಅಗ್ನಿಯಂತೆ ಕ್ರೋಧದಿಂದ ಉರಿದೆದ್ದನು.॥76॥
ಮೂಲಮ್ - 77
ಸೋಽಶ್ವಕರ್ಣದ್ರುಮಾನ್ ಶಾಲಾಂಶ್ಚೂತಾಂಶ್ಚಾಪಿ ಸುಪುಷ್ಟಿತಾನ್ ।
ಅನ್ಯಾಂಶ್ಚ ವಿವಿಧಾನ್ವೃಕ್ಷಾನ್ನೀಲಶ್ಚಿಕ್ಷೇಪ ಸಂಯುಗೇ ॥
ಅನುವಾದ
ಅವನು ಅಶ್ವಕರ್ಣ, ತಾಲ, ಅರಳಿದ ಮಾವಿನಮರವನ್ನು ಹಾಗೂ ಇತರ ನಾನಾ ವಿಧದ ವೃಕ್ಷಗಳನ್ನು ಕಿತ್ತು-ಕಿತ್ತು ರಾವಣನ ಮೇಲೆ ಎಸೆಯಲು ಪ್ರಾರಂಭಿಸಿದನು.॥77॥
ಮೂಲಮ್ - 78
ಸ ತಾನ್ವೃಕ್ಷಾನ್ ಸಮಾಸಾದ್ಯ ಪ್ರತಿಚಿಚ್ಛೇದ ರಾವಣಃ ।
ಅಭ್ಯವರ್ಷಚ್ಚ ಘೋರೇಣ ಶರವರ್ಷೇಣ ಪಾವಕಿಮ್ ॥
ಮೂಲಮ್ - 79
ಅಭಿವೃಷ್ಟಃ ಶರೌಘೇಣ ಮೇಘೇನೇವ ಮಹಾಚಲಃ ।
ಹ್ರಸ್ವಂ ಕೃತ್ವಾ ತತೋ ರೂಪಂ ಧ್ವಜಾಗ್ರೇ ನಿಪಪಾತ ಹ ॥
ಅನುವಾದ
ರಾವಣನು ತನ್ನ ಕಡೆಗೆ ಬರುತ್ತಿರುವ ಅವೆಲ್ಲ ವೃಕ್ಷಗಳನ್ನು ಕತ್ತರಿಸಿ ಹಾಕಿ, ಅಗ್ನಿಪುತ್ರ ನೀಲನಮೇಲೆ ಬಾಣಗಳ ಭಯಾನಕ ಮಳೆ ಮೋಡಗಳು ಮಹಾಪರ್ವತದ ಮೇಲೆ ನೀರನ್ನು ಸುರಿಸು ವಂತೆಯೇ ರಾವಣನು ನೀಲನ ಮೇಲೆ ಬಾಣಗಳ ವರ್ಷ ಮಾಡಿದಾಗ ಅವನು ಸಣ್ಣರೂಪತಾಳಿ ರಾವಣನ ಧ್ವಜದಲ್ಲಿ ಹತ್ತಿ ಕುಳಿತನು.॥78-79॥
ಮೂಲಮ್ - 80
ಪಾವಕಾತ್ಮಜಮಾಲೋಕ್ಯ ಧ್ವಜಾಗ್ರೇ ಸಮುಪಸ್ಥಿತಮ್ ।
ಜಜ್ವಾಲ ರಾವಣಃ ಕ್ರೋಧಾತ್ತತೋ ನೀಲೋ ನನಾದ ಚ ॥
ಅನುವಾದ
ತನ್ನ ಧ್ವಜದ ಮೇಲೆ ಕುಳಿತಿರುವ ಅಗ್ನಿಪುತ್ರ ನೀಲನನ್ನು ನೋಡಿ ರಾವಣನು ಕ್ರೋಧಗೊಂಡನು ಹಾಗೂ ಅತ್ತ ನೀಲನು ಜೋರಾಗಿ ಗರ್ಜಿಸತೊಡಗಿದನು.॥80॥
ಮೂಲಮ್ - 81
ಧ್ವಜಾಗ್ರೇ ಧನುಷಶ್ಚಾಗ್ರೇ ಕಿರೀಟಾಗ್ರೇ ಚ ತಂ ಹರಿಮ್ ।
ಲಕ್ಷ್ಮಣೋಽಥ ಹನೂಮಾಂಶ್ಚ ರಾಮಶ್ಚಾಪಿ ಸುವಿಸ್ಮಿತಾಃ ॥
ಅನುವಾದ
ನೀಲನು ಕೆಲವೊಮ್ಮೆ ರಾವಣನ ಧ್ವಜದಲ್ಲಿ, ಕೆಲವೊಮ್ಮೆ ಧನುಸ್ಸಿನ ಮೇಲೆ, ಕೆಲವೊಮ್ಮೆ ಕಿರೀಟದ ಮೇಲೆ ಕುಳಿತಿರುವುದನ್ನು ನೋಡಿ ಶ್ರೀರಾಮ, ಲಕ್ಷ್ಮಣ, ಹನುಮಂತ ಇವರಿಗೆ ಭಾರೀ ಆಶ್ಚರ್ಯವಾಯಿತು.॥81॥
ಮೂಲಮ್ - 82
ರಾವಣೋಽಪಿ ಮಹಾತೇಜಾಃ ಕಪಿಲಾಘವವಿಸ್ಮಿತಃ ।
ಅಸಮಾಹಾರಯಾಮಾಸ ದೀಪ್ತಮಾಗ್ನೇಯಮದ್ಭುತಮ್ ॥
ಅನುವಾದ
ವಾನರ ನೀಲನ ಆ ಲಾಘವವನ್ನು ನೋಡಿ ಮಹಾತೇಜಸ್ವೀ ರಾವಣನಿಗೂ ಆಶ್ಚರ್ಯವಾಯಿತು ಹಾಗೂ ಅವನು ಅದ್ಭುತ ತೇಜಸ್ವೀ ಅಗ್ನೆಯಾಸವನ್ನು ಎತ್ತಿಕೊಂಡನು.॥82॥
ಮೂಲಮ್ - 83
ತತಸ್ತೇ ಚುಕ್ರುಶುರ್ಹೃಷ್ಟಾ ಲಬ್ಧಲಕ್ಷಾಃ ಪ್ಲವಂಗಮಾಃ ।
ನೀಲಲಾಘವಸಂಭ್ರಾಂತಂ ದೃಷ್ಟ್ವಾರಾವಣಮಾಹವೇ ॥
ಅನುವಾದ
ನೀಲನ ಲಾಘವದಿಂದ ರಾವಣನು ಗಾಬರಿಗೊಂಡಿರುವನೆಂದು ನೋಡಿ ಹರ್ಷಪಡುವ ಅವಕಾಶ ದೊರೆತು ವಾನರರೆಲ್ಲರೂ ಸಂತೋಷದಿಂದ ಕಿಲಕಿಲನೆ ಕೂಗತೊಡಗಿದರು.॥83॥
ಮೂಲಮ್ - 84
ವಾನರಾಣಾಂ ಚ ನಾದೇನ ಸಂರಬ್ಧೋ ರಾವಣಸ್ತದಾ ।
ಸಂಭ್ರಮಾವಿಷ್ಟ ಹೃದಯೋ ನ ಕಿಂಚಿತ್ ಪ್ರತ್ಯಪದ್ಯತ ॥
ಅನುವಾದ
ವಾನರರ ಹರ್ಷೋದ್ಗಾರದಿಂದ ರಾವಣನಿಗೆ ಭಾರೀ ಸಿಟ್ಟುಬಂತು. ಜೊತೆಗೆ ಮನಸ್ಸಿನಲ್ಲಿ ಗಾಬರಿಯೂ ಆವರಿಸಿತು. ಅದರಿಂದ ಅವನು ಕಿಂಕರ್ತವ್ಯ ಮೂಢನಾದನು.॥84॥
ಮೂಲಮ್ - 85
ಆಗ್ನೇಯೇನಾಪಿ ಸಂಯುಕ್ತಂ ಗೃಹೀತ್ವಾ ರಾವಣಃ ಶರಮ್ ।
ಧ್ವಜಶೀರ್ಷಸ್ಥಿತಂ ನೀಲಮುದೈಕ್ಷತ ನಿಶಾಚರಃ ॥
ಅನುವಾದ
ಅನಂತರ ನಿಶಾಚರ ರಾವಣನು ಆಗ್ನೆಯಾಸ್ತ್ರದಿಂದ ಅಭಿಮಂತ್ರಿಸಿ ಬಾಣವನ್ನು ಕೈಗೆತ್ತಿಕೊಂಡು ಧ್ವಜದ ತುದಿಯಲ್ಲಿ ಕುಳಿತಿರುವ ನೀಲನನ್ನು ನೋಡಿದನು.॥85॥
ಮೂಲಮ್ - 86
ತತೋಽಬ್ರವೀನ್ಮಹಾತೇಜಾ ರಾವಣೋ ರಾಕ್ಷಸೇಶ್ವರಃ ।
ಕಪೇ ಲಾಘವಯುಕ್ತೋಽಸಿ ಮಾಯಯಾ ಪರಯಾ ಸಹ ॥
ಅನುವಾದ
ಅವನನ್ನು ನೋಡಿ ಮಹಾ ತೇಜಸ್ವೀ ರಾಕ್ಷಸೇಶ್ವರನು ಅವನಲ್ಲಿ ಹೇಳಿದನು- ಎಲೈ ವಾನರನೇ! ನೀನು ಉತ್ಕೃಷ್ಟವಾದ ಮಾಯೆಯನ್ನು ತಿಳಿಯುವುದಲ್ಲದೆ, ಲಾಘವವನ್ನೂ ಹೊಂದಿರುವೆ.॥86॥
ಮೂಲಮ್ - 87
ಜೀವಿತಂ ಖಲು ರಕ್ಷಸ್ವ ಯದಿ ಶಕ್ತೋಽಸಿ ವಾನರ ।
ತಾನಿ ತಾನ್ಯಾತ್ಮರೂಪಾಣಿ ಸೃಜಸಿ ತ್ವಮನೇಕಶಃ ॥
ಮೂಲಮ್ - 88
ತಥಾಪಿ ತ್ವಾಂ ಮಯಾ ಮುಕ್ತಃ ಸಾಯಕೋಽಸ್ತ್ರ ಪ್ರಯೋಜಿತಃ ।
ಜೀವಿತಂ ಪರಿರಕ್ಷಂತಂ ಜೀವಿತಾದ್ ಭ್ರಂಶಯಿಷ್ಯತಿ ॥
ಅನುವಾದ
ವಾನರನೇ ! ನೀನು ಶಕ್ತಿಶಾಲಿಯಾಗಿದ್ದರೆ ನನ್ನ ಬಾಣದಿಂದ ರಕ್ಷಿಸಿಕೋ. ನೀನು ತನ್ನ ಪರಾಕ್ರಮಕ್ಕೆ ಯೋಗ್ಯವಾದ ಬೇರೆ ಬೇರೆ ರೀತಿಯ ಕರ್ಮ ಮಾಡುತ್ತಿದ್ದರೂ ನಾನು ಬಿಟ್ಟಿರುವ ಈ ದಿವ್ಯಾಸಪ್ರೇರಿತ ಬಾಣವು ಬದುಕಲು ಪ್ರಯತ್ನ ಮಾಡಿದರೂ ನಿನ್ನನ್ನು ಪ್ರಾಣಹೀನವಾಗಿಸುವುದು.॥87-88॥
ಮೂಲಮ್ - 89
ಏವಮುಕ್ತ್ವಾ ಮಹಾಬಾಹೂ ರಾವಣೋ ರಾಕ್ಷಸೇಶ್ವರಃ ।
ಸಂಧಾಯ ಬಾಣಮಸ್ತ್ರೇಣ ಚಮೂಪತಿಮತಾಡಯತ್ ॥
ಅನುವಾದ
ಹೀಗೆ ಹೇಳಿ ಮಹಾಬಾಹು ರಾಕ್ಷಸೇಶ್ವರನು ಆಗ್ನೇಯಾಸದಿಂದ ಕೂಡಿದ ಬಾಣವನ್ನು ಧನುಸ್ಸಿಗೆ ಹೂಡಿ ಅದನ್ನು ಸೇನಾಪತಿ ನೀಲನ ಮೇಲೆ ಪ್ರಯೋಗಿಸಿದನು.॥89॥
ಮೂಲಮ್ - 90
ಸೋಽಸ್ತ್ರಮುಕ್ತೇನ ಬಾಣೇನ ನೀಲೋ ವಕ್ಷಸಿ ತಾಡಿತಃ ।
ನಿರ್ದಹ್ಯಮಾನಃ ಸಹಸಾ ಸ ಪಪಾತ ಮಹೀತಲೇ ॥
ಅನುವಾದ
ಅವನು ಪ್ರಯೋಗಿಸಿದ ಬಾಣವು ನೀಲನ ಎದೆಯನ್ನು ಸೀಳಿಬಿಟ್ಟಿತು. ಅವನು ಆ ಬಾಣದ ಉರಿಯಿಂದ ಉರಿಯುತ್ತಾ ನೆಲಕ್ಕೆ ಬಿದ್ದುಬಿಟ್ಟನು.॥90॥
ಮೂಲಮ್ - 91
ಪಿತೃಮಾಹಾತ್ಮ್ಯಸಂಯೋಗಾದಾತ್ಮನಶ್ಚಾಪಿ ತೇಜಸಾ ।
ಜಾನುಭ್ಯಾಮಪತದ್ಭೂಮೌ ನ ಚ ಪ್ರಾಣೈರ್ವಿಯುಜ್ಯತ ॥
ಅನುವಾದ
ನೀಲನು ಪೃಥಿವಿಯಲ್ಲಿ ಮಂಡಿಯೂರಿದ್ದರೂ ತಂದೆ ಅಗ್ನಿದೇವನ ಮಹಿಮೆಯಿಂದ ಮತ್ತು ತೇಜದ ಪ್ರಭಾವದಿಂದ ಅವನ ಪ್ರಾಣಗಳು ಹೋಗಲಿಲ್ಲ.॥91॥
ಮೂಲಮ್ - 92
ವಿಸಂಜ್ಞಂ ವಾನರಂ ದೃಷ್ಟ್ವಾ ದಶಗ್ರೀವೋ ರಣೋತ್ಸುಕಃ ।
ರಥೇನಾಂಬುದನಾದೇನ ಸೌಮಿತ್ರಿಮಭಿದುದ್ರುವೇ ॥
ಅನುವಾದ
ವಾನರ ನೀಲನು ಮೂರ್ಛಿತನಾದುದನ್ನು ನೋಡಿ ರಣೋತ್ಸುಕ ರಾವಣನು ಮೇಘದಂತೆ ಗಂಭೀರವಾಗಿ ಗರ್ಜಿಸಿ, ರಥದಲ್ಲಿ ಕುಳಿತು ಸುಮಿತ್ರಾಕುಮಾರ ಲಕ್ಷ್ಮಣನನ್ನು ಆಕ್ರಮಿಸಿದನು.॥92॥
ಮೂಲಮ್ - 93
ಆಸಾದ್ಯ ರಣಮಧ್ಯೇ ತಂ ವಾರಯಿತ್ವಾ ಸ್ಥಿತೋ ಜ್ವಲನ್ ।
ಧನುರ್ವಿಸ್ಫಾರಯಾಮಾಸ ರಾಕ್ಷಸೇಂದ್ರಃ ಪ್ರತಾಪವಾನ್ ॥
ಅನುವಾದ
ಯುದ್ಧದಲ್ಲಿ ಎಲ್ಲ ವಾನರ ಸೈನ್ಯವನ್ನು ಮುಂದೆ ಹೋಗಲು ತಡೆಯುತ್ತಾ ರಾವಣನು ಲಕ್ಷ್ಮಣನ ಬಳಿಗೆ ಹೋಗಿ, ಪ್ರಜ್ವಲಿತ ಅಗ್ನಿಯಂತೆ ಎದುರಿಗೆ ನಿಂತು ಪ್ರತಾಪಿ ರಾವಣನು ಧನುಷ್ಟಂಕಾರ ಮಾಡತೊಡಗಿದನು.॥93॥
ಮೂಲಮ್ - 94
ತಮಾಹ ಸೌಮಿತ್ರಿರದೀನಸತ್ತ್ವೋ
ವಿಸ್ಫಾರಯಂತಂ ಧನುರಪ್ರಮೇಯಮ್ ।
ಅಭ್ಯೇಹಿ ಮಾಮೇವ ನಿಶಾಚರೇಂದ್ರ
ನ ವಾನರಾಂಸ್ತ್ವಂ ಪ್ರತಿಯೋದ್ಧು ಮರ್ಹಸಿ ॥
ಅನುವಾದ
ಆಗ ತನ್ನ ಅನುಪಮ ಧನುಷ್ಯವನ್ನು ಸೆಳೆಯುತ್ತಾ ಉದಾರ ಶಕ್ತಿಶಾಲಿ ಲಕ್ಷ್ಮಣನು ರಾವಣನಲ್ಲಿ ಹೇಳಿದನು- ನಿಶಾಚರ ರಾಜನೇ! ನಾನು ಬಂದಿರುವೆನೆಂದು ತಿಳಿ. ಆದ್ದರಿಂದ ಈಗ ವಾನರರೊಂದಿಗೆ ನೀನು ಯುದ್ಧಮಾಡಬಾರದು.॥94॥
ಮೂಲಮ್ - 95
ಸ ತಸ್ಯ ವಾಕ್ಯಂ ಪ್ರತಿಪೂರ್ಣಘೋಷಂ
ಜ್ಯಾಶಬ್ದ ಮುಗ್ರಂ ಚ ನಿಶಮ್ಯ ರಾಜಾ ।
ಆಸಾದ್ಯ ಸೌಮಿತ್ರಿಮುಪಸ್ಥಿತಂ ತಂ
ರೋಷಾನ್ವಿತಂ ವಾಟಮುವಾಚ ರಕ್ಷಃ ॥
ಅನುವಾದ
ಲಕ್ಷ್ಮಣನ ಗಂಭೀರ ಧ್ವನಿಯಿಂದ ಕೂಡಿದ್ದ ಮಾತನ್ನು, ನಾಣಿನ ಉಗ್ರವಾದ ಶಬ್ದವನ್ನು ಕೇಳಿ ರಾವಣನು ಯುದ್ಧಕ್ಕಾಗಿ ಉಪಸ್ಥಿತನಾದ ಲಕ್ಷ್ಮಣನ ಬಳಿಗೆ ಬಂದು ರೋಷದಿಂದ ಇಂತೆಂದನು.॥95॥
ಮೂಲಮ್ - 96
ದಿಷ್ಟ್ಯಾಸಿ ಮೇ ರಾಘವ ದೃಷ್ಟಿ ಮಾರ್ಗಂ
ಪ್ರಾಪ್ತೋಂಽತಗಾಮೀ ವಿಪರೀತ ಬುದ್ಧಿಃ ।
ಅಸ್ಮಿನ್ಕ್ಷಣೇ ಯಾಸ್ಯಸಿ ಮೃತ್ಯುಲೋಕಂ
ಸಂಸಾದ್ಯಮಾನೋ ಮಮ ಬಾಣಜಾಲೈಃ ॥
ಅನುವಾದ
ರಘುವಂಶೀ ರಾಜಕುಮಾರನೇ! ನೀನು ನನ್ನ ಕಣ್ಣೆದುರಿಗೆ ಬಂದುದು ಸೌಭಾಗ್ಯದ ಮಾತಾಗಿದೆ. ಬೇಗನೇ ನಿನ್ನ ಅಂತ್ಯವಾಗಲಿದೆ. ಅದರಿಂದ ನಿನ್ನ ಬುದ್ಧಿ ವಿಪರೀತವಾಗಿದೆ. ಈಗ ನೀನು ನನ್ನ ಬಾಣಗಳಿಂದ ಪೀಡಿತನಾಗಿ ಈ ಕ್ಷಣ ಯಮಲೋಕದ ಯಾತ್ರೆ ಮಾಡುವೆ.॥96॥
ಮೂಲಮ್ - 97
ತಮಾಹ ಸೌಮಿತ್ರಿರವಿಸ್ಮಯಾನೋ
ಗರ್ಜಂತಮುದ್ವತ್ತಶಿತಾಗ್ರದಂಷ್ಟ್ರಮ್ ।
ರಾಜನ್ನ ಗರ್ಜಂತಿ ಮಹಾಪ್ರಭಾವಾ
ವಿಕತ್ಥಸೇ ಪಾಪಕೃತಾಂ ವರಿಷ್ಠ ॥
ಅನುವಾದ
ಅವನ ಮಾತನ್ನು ಕೇಳಿ ಸೌಮಿತ್ರಿಗೆ ಯಾವುದೇ ಆಶ್ಚರ್ಯವಾಗಲಿಲ್ಲ. ರಾವಣನ ಹಲ್ಲುಗಳು ತೀಕ್ಷ್ಣವಾಗಿ ಮೇಲಕ್ಕೆ ಉಬ್ಬಿಕೊಂಡಿದ್ದು ಜೋರಾಗಿ ಗರ್ಜಿಸುತ್ತಿದ್ದನು. ಆಗ ಲಕ್ಷ್ಮಣನು ಹೇಳಿದನು- ರಾಜನೇ! ಮಹಾಪ್ರಭಾವಶಾಲಿ ಪುರುಷರು ನಿನ್ನಂತೆ ಕೇವಲ ಗರ್ಜಿಸುವುದಿಲ್ಲ. ಪಾಪಾಚಾರಿಗಳಲ್ಲಿ ಅಗ್ರಗಣ್ಯನೇ! ನೀನು ಬರೆ ಬಡಾಯಿಕೊಚ್ಚಿಕೊಳ್ಳುವೆ.॥97॥
ಮೂಲಮ್ - 98
ಜಾನಾಮಿ ವೀರ್ಯಂ ತವ ರಾಕ್ಷಸೇಂದ್ರ
ಬಲಂ ಪ್ರತಾಪಂ ಚ ಪರಾಕ್ರಮಂ ಚ ।
ಅವಸ್ಥಿತೋಽಹಂ ಶರಚಾಪಪಾಣಿ-
ರಾಗಚ್ಛ ಕಿಂ ಮೋಘವಿಕತ್ಥನೇನ ॥
ಅನುವಾದ
ರಾಕ್ಷಸರಾಜನೇ! ನೀನು ಯಾರೂ ಇಲ್ಲದ ಸಮಯದಲ್ಲಿ ಕಳ್ಳತನದಿಂದ ಓರ್ವ ಅಸಹಾಯಕ ನಾರಿಯನ್ನು ಅಪಹರಿಸಿದಾಗಲೇ ನಿನ್ನ ಬಲ, ವೀರ್ಯ, ಪರಾಕ್ರಮ ನಾನು ತಿಳಿದಿರುವೆ. ಅದರಿಂದ ಧನುರ್ಧಾರಿಯಾಗಿ ಎದುರಿಗೆ ನಿಂತಿರುವೆನು. ಮುಂದೆ ಬಾ! ಯುದ್ಧ ಮಾಡು. ವ್ಯರ್ಥವಾದ ಮಾತಿನಿಂದ ಏನಾಗುವುದು.॥98॥
ಮೂಲಮ್ - 99
ಸ ಏವಮುಕ್ತಃ ಕುಪಿತಃ ಸಸರ್ಜ
ರಕ್ಷೋಧಿಪಃ ಸಪ್ತ ಶರಾನ್ಸುಪುಂಖಾನ್ ।
ತಾಂಲ್ಲಕ್ಷ್ಮಣಃ ಕಾಂಚನಚಿತ್ರಪುಂಖೈ-
ಶ್ಚಿಚ್ಛೇದ ಬಾಣೈರ್ನಿಶಿತಾಗ್ರಧಾರೈಃ ॥
ಅನುವಾದ
ಲಕ್ಷ್ಮಣನು ಹೀಗೆ ಹೇಳಿದಾಗ ಕುಪಿತನಾದ ರಾಕ್ಷಸಾಧಿಪನು ಅವನ ಮೇಲೆ ಸುಂದರ ರೆಕ್ಕೆಗಳುಳ್ಳ ಏಳು ಬಾಣಗಳನ್ನು ಬಿಟ್ಟನು; ಆದರೆ ಲಕ್ಷ್ಮಣನು ಚಿನ್ನದ ಪಂಖಗಳಿಂದ ಸುಶೋಭಿತ ಹರಿತವಾದ ಬಾಣಗಳಿಂದ ಅವುಗಳನ್ನು ಕತ್ತರಿಸಿ ಹಾಕಿದನು.॥99॥
ಮೂಲಮ್ - 100
ತಾನ್ ಪ್ರೇಕ್ಷಮಾಣಃ ಸಹಸಾ ನಿಕೃತ್ತಾನ್
ನಿಕೃತ್ತಭೋಗಾನಿವ ಪನ್ನಗೇಂದ್ರಾನ್ ।
ಲಂಕೇಶ್ವರಃ ಕ್ರೋಧವಶಂ ಜಗಾಮ
ಸಸರ್ಜ ಚಾನ್ಯಾನ್ನಿಶಿತಾನ್ ಪೃಷತ್ಕಾನ್ ॥
ಅನುವಾದ
ದೊಡ್ಡ ದೊಡ್ಡ ಸರ್ಪಗಳನ್ನು ತುಂಡು ತುಂಡು ಮಾಡುವಂತೆ ತನ್ನ ಎಲ್ಲ ಬಾಣಗಳು ಖಂಡಿತವಾದುದನ್ನು ನೋಡಿ ಲಂಕಾಧಿಪತಿ ರಾವಣನು ಕ್ರೋಧವಿಷ್ಟನಾಗಿ ಬೇರೆ ಹರಿತವಾದ ಬಾಣಗಳನ್ನು ಪ್ರಯೋಗಿಸಿದನು.॥100॥
ಮೂಲಮ್ - 101
ಸ ಬಾಣವರ್ಷಂ ತು ವವರ್ಷ ತೀವ್ರಂ
ರಾಮಾನುಜಃ ಕಾರ್ಮುಕ ಸಂಪ್ರಯುಕ್ತಮ್ ।
ಕ್ಷುರಾರ್ಧಚಂದ್ರೋತ್ತಮಕರ್ಣಿಭಲ್ಲೈಃ
ಶರಾಂಶ್ಚ ಚಿಚ್ಛೇದ ನ ಚುಕ್ಷುಭೇ ಚ ॥
ಅನುವಾದ
ಆದರೆ ರಾಮಾನುಜ ಲಕ್ಷ್ಮಣನು ಇದರಿಂದ ವಿಚಲಿತನಾಗದೆ, ತನ್ನ ಧನುಸ್ಸಿನಿಂದ ಬಾಣಗಳ ಭಯಂಕರ ಮಳೆಗರೆದನು ಹಾಗೂ ಕ್ಷುರ, ಅರ್ಧಚಂದ್ರ, ಉತ್ತಮಕರ್ಣಿ, ಭಲ್ಲ ಜಾತಿಯ ಬಾಣಗಳಿಂದ ರಾವಣನು ಪ್ರಯೋಗಿಸಿದ ಎಲ್ಲ ಬಾಣಗಳನ್ನು ಕತ್ತರಿಸಿ ಹಾಕಿದನು.॥101॥
ಮೂಲಮ್ - 102
ಸ ಬಾಣ ಜಾಲಾನ್ಯಪಿ ತಾನಿ ತಾನಿ
ಮೋಘಾನಿ ಪಶ್ಯಂಸ್ತ್ರಿದಶಾರಿರಾಜಃ ।
ವಿಸಿಸ್ಮಿಯೇ ಲಕ್ಷ್ಮಣಲಾಘವೇನ
ಪುನಶ್ಚ ಬಾಣಾನ್ನಿಶಿತಾನ್ ಮುಮೋಚ ॥
ಅನುವಾದ
ತನ್ನ ಎಲ್ಲ ಬಾಣಗಳು ನಿಷ್ಫಲವಾದುದನ್ನು ನೋಡಿ ರಾವಣನು ಲಕ್ಷ್ಮಣನ ಕೈಚಳಕದಿಂದ ಆಶ್ಚರ್ಯ ಚಕಿತನಾದನು. ಮತ್ತೆ ಅವನ ಮೇಲೆ ತೀಕ್ಷ್ಣ ಬಾಣಗಳನ್ನು ಎಸೆಯತೊಡಗಿದನು.॥102॥
ಮೂಲಮ್ - 103
ಸ ಲಕ್ಷ್ಮಣಶ್ಚಾಪಿ ಶರಾನ್ಶಿತಾಗ್ರಾನ್
ಮಹೇಂದ್ರ ತುಲ್ಯೋಽಶನಿ ಭೀಮವೇಗಾನ್ ।
ಸಂಧಾಯ ಚಾಪೇ ಜ್ವಲನಪ್ರಕಾಶಾನ್
ಸಸರ್ಜ ರಕ್ಷೋಧಿಪತೇರ್ವಧಾಯ ॥
ಅನುವಾದ
ದೇವೇಂದ್ರನಂತೆ ಪರಾಕ್ರಮಿ ಲಕ್ಷ್ಮಣನೂ ಕೂಡ ರಾವಣನ ವಧೆಗಾಗಿ ವಜ್ರದಂತೆ ಭಯಾನಕ ವೇಗವುಳ್ಳ, ಹರಿತವಾದ, ಅಗ್ನಿಯಂತೆ ಹೊಳೆಯುವ ಬಾಣಗಳನ್ನು ಧನುಸ್ಸಿಗೆ ಹೂಡಿ ಅವನ ಮೇಲೆ ಪ್ರಯೋಗಿಸಿದನು.॥103॥
ಮೂಲಮ್ - 104
ಸ ತಾನ್ ಪ್ರಚಿಚ್ಛೇದ ಹಿ ರಾಕ್ಷಸೇಂದ್ರಃ
ಶಿತಾನ್ ಶರಾಂಲ್ಲಕ್ಷ್ಮಣಮಾಜಘಾನ ।
ಶರೇಣ ಕಾಲಾಗ್ನಿಸಮಪ್ರಭೇಣ
ಸ್ವಯಂಭುದತ್ತೇನ ಲಲಾಟದೇಶೇ ॥
ಅನುವಾದ
ಆದರೆ ರಾಕ್ಷಸರಾಜನು ಅವೆಲ್ಲವನ್ನೂ ಕತ್ತರಿಸಿ ಹಾಕಿದನು. ಬ್ರಹ್ಮದೇವರು ಕೊಟ್ಟ ಕಾಲಾಗ್ನಿಯಂತೆ ತೇಜಸ್ವೀ ಬಾಣದಿಂದ ಲಕ್ಷ್ಮಣನ ಹಣೆಗೆ ಪ್ರಹರಿಸಿದನು.॥104॥
ಮೂಲಮ್ - 105
ಸ ಲಕ್ಷ್ಮಣೋ ರಾವಣಸಾಯಕಾರ್ತ-
ಶ್ಚಚಾಲ ಚಾಪಂ ಶಿಥಿಲಂ ಪ್ರಗೃಹ್ಯ ।
ಪುನಶ್ಚ ಸಂಜ್ಞಾಂ ಪ್ರತಿಲಭ್ಯ ಕೃಚ್ಛ್ರಾ-
ಚ್ಚಿಚ್ಛೇದ ಚಾಪಂ ತ್ರಿದಶೇಂದ್ರ ಶತ್ರೋಃ ॥
ಅನುವಾದ
ರಾವಣನ ಆ ಬಾಣದಿಂದ ಪೀಡಿತನಾದ ಲಕ್ಷ್ಮಣನು ವಿಚಲಿತನಾದನು. ಕೈಯಲ್ಲಿ ಹಿಡಿದ ಧನುಸ್ಸಿನ ಹಿಡಿತ ಸಡಿಲ ವಾಯಿತು. ಮತ್ತೆ ಅವನು ಸಾವರಿಸಿಕೊಂಡು ದೇವದ್ರೋಹಿ ರಾವಣನ ಧನುಸ್ಸನ್ನು ಕತ್ತರಿಸಿಬಿಟ್ಟನು.॥105॥
ಮೂಲಮ್ - 106
ನಿಕೃತ್ತಚಾಪಂ ತ್ರಿಭಿರಾಜಘಾನ
ಬಾಣೈಸ್ತದಾ ದಾಶರಥಿಃ ಶಿತಾಗ್ರೈಃ ।
ಸ ಸಾಯಕಾರ್ತೋ ವಿಚಚಾಲ ರಾಜಾ
ಕೃಚ್ಛ್ರಾಚ್ಚ ಸಂಜ್ಞಾಂ ಪುನರಾಸಸಾದ ॥
ಅನುವಾದ
ಧನುಸ್ಸು ತುಂಡಾದಾಗ ರಾವಣನಿಗೆ ಲಕ್ಷ್ಮಣನು ಬಹಳ ತೀಕ್ಷ್ಣವಾದ ಮೂರು ಬಾಣಗಳನ್ನು ಹೊಡೆದನು. ಆ ಬಾಣಗಳಿಂದ ಪೀಡಿತನಾದ ರಾವಣನು ವ್ಯಾಕುಲಗೊಂಡನು; ಮತ್ತೆ ಕಷ್ಟದಿಂದ ಅವನು ಎಚ್ಚರಗೊಂಡನು.॥106॥
ಮೂಲಮ್ - 107
ಸ ಕೃತ್ತಚಾಪಃ ಶರಪೀಡಿತಶ್ಚ
ಮೇದಾರ್ದ್ರಗಾತ್ರೋ ರುಧಿರಾವಸಿಕ್ತಃ ।
ಜಗ್ರಾಹ ಶಕ್ತಿಂ ಸ್ವಯಮುಗ್ರ ಶಕ್ತಿಃ
ಸ್ವಯಂಭುದತ್ತಾಂ ಯುಧಿ ದೇವಶತ್ರುಃ ॥
ಅನುವಾದ
ಧನುಷ್ಯ ತುಂಡಾಯಿತು, ಬಾಣಗಳ ಆಳವಾದ ಏಟು ತಿನ್ನಬೇಕಾಯಿತು, ಆಗ ರಾವಣನ ಶರೀರ ಮೇದಸ್ಸು ಮತ್ತು ರಕ್ತದಿಂದ ತೊಯ್ದು ಹೋಯಿತು. ಆ ಸ್ಥಿತಿಯಲ್ಲಿ ಭಯಂಕರ ಶಕ್ತಿಶಾಲೀ ದೇವದ್ರೋಹಿ ರಾಕ್ಷಸನು ಬ್ರಹ್ಮದೇವರು ಕೊಟ್ಟಿರುವ ಶಕ್ತಿಯನ್ನು ಎತ್ತಿಕೊಂಡನು.॥107॥
ಮೂಲಮ್ - 108
ಸ ತಾಂ ವಿಧೂಮಾನಲಸಂನಿಕಾಶಾಂ
ವಿತ್ರಾಸನಾಂ ಸಂಯತಿ ವಾನರಾಣಾಮ್ ।
ಚಿಕ್ಷೇಪ ಶಕ್ತಿಂ ತರಸಾ ಜ್ವಲಂತೀಂ
ಸೌಮಿತ್ರಯೇ ರಾಕ್ಷಸರಾಷ್ಟ್ರನಾಥಃ ॥
ಅನುವಾದ
ಆ ಶಕ್ತಿಯು ಧೂಮಯುಕ್ತ ಅಗ್ನಿಯಂತೆ ಕಂಡುಬರುತ್ತಿತ್ತು ಹಾಗೂ ಯುದ್ಧದಲ್ಲಿ ವಾನರರನ್ನು ಭಯಪಡಿಸುವಂತಿತ್ತು. ರಾಕ್ಷಸೇಶ್ವರ ರಾವಣನು ಆ ಉರಿಯುವ ಶಕ್ತಿಯನ್ನು ವೇಗವಾಗಿ ಲಕ್ಷ್ಮಣನ ಮೇಲೆ ಪ್ರಯೋಗಸಿದನು.॥108॥
ಮೂಲಮ್ - 109
ತಾಮಾಪತಂತೀಂ ಭರತಾನುಜೋಽಸೈ-
ರ್ಜಘಾನ ಬಾಣೈಶ್ಚ ಹುತಾಗ್ನಿ ಕಲ್ಪೈಃ ।
ತಥಾಪಿ ಸಾ ತಸ್ಯ ವಿವೇಶ ಶಕ್ತಿ-
ರ್ಭುಜಾಂತರಂ ದಾಶರಥೇರ್ವಿಶಾಲಮ್ ॥
ಅನುವಾದ
ತನ್ನ ಕಡೆಗೆ ಬರುತ್ತಿರುವ ಶಕ್ತಿಯ ಮೇಲೆ ಲಕ್ಷ್ಮಣನು ಅಗ್ನಿತುಲ್ಯ ತೇಜಸ್ವೀ ಅನೇಕ ಬಾಣಗಳಿಂದ ಹಾಗೂ ಅಸ್ತ್ರಗಳಿಂದ ಪ್ರಹರಿಸಿದನು. ಆದರೂ ಆ ಶಕ್ತಿಯು ಲಕ್ಷ್ಮಣನ ವಿಶಾಲ ವಕ್ಷಃಸ್ಥಳದಲ್ಲಿ ಹೊಕ್ಕಿತು.॥109॥
ಮೂಲಮ್ - 110
ಸ ಶಕ್ತಿಮಾನ್ಶಕ್ತಿಸಮಾಹತಃ ಸನ್
ಜಜ್ವಾಲ ಭೂಮೌ ಸ ರಘುಪ್ರವೀರಃ ।
ತಂ ವಿಹ್ವಲಂತಂ ಸಹಸಾಭ್ಯುಪೇತ್ಯ
ಜಗ್ರಾಹ ರಾಜಾ ತರಸಾ ಭುಜಾಭ್ಯಾಮ್ ॥
ಅನುವಾದ
ರಘುಕುಲದ ಪ್ರಧಾನವೀರ ಲಕ್ಷ್ಮಣನು ಭಾರೀ ಶಕ್ತಿಶಾಲಿಯಾಗಿದ್ದರೂ ಆ ಶಕ್ತಿಯಿಂದ ಆಹತನಾಗಿ ನೆಲಕ್ಕೆ ಬಿದ್ದು ಉರಿಯತೊಡಗಿದನು. ವಿಹ್ವಲನಾದ ಅವನನ್ನು ನೋಡಿ ರಾವಣನು ಕೂಡಲೇ ಅವನ ಬಳಿಗೆ ಹೋಗಿ ತನ್ನೆರಡೂ ಭುಜಗಳಿಂದ ಅವನನ್ನು ಎತ್ತತೊಡಗಿದನು.॥110॥
ಮೂಲಮ್ - 111
ಹಿಮವಾನ್ಮಂದರೋ ಮೇರುಸ್ತ್ರೈಲೋಕ್ಯಂ ವಾ ಸಹಾಮರೈಃ ।
ಶಕ್ಯಂ ಭುಜಾಭ್ಯಾಮುದ್ಧರ್ತುಂ ನ ಶಕ್ಯೋ ಭರತಾನುಜಃ ॥
ಅನುವಾದ
ಯಾವ ರಾವಣನಲ್ಲಿ ದೇವತೆಗಳ ಸಹಿತ ಹಿಮಾಲಯವನ್ನು, ಮಂದರಾಚಲ, ಮೇರುಗಿರಿ, ಅಥವಾ ಮೂರು ಲೋಕಗಳನ್ನು ಭುಜಗಳಿಂದ ಎತ್ತುವ ಶಕ್ತಿ ಇತ್ತೋ, ಅವನು ಭರತಾನುಜ ಲಕ್ಷ್ಮಣನನ್ನು ಎತ್ತಲು ಅಸಮರ್ಥನಾದನು.॥111॥
ಮೂಲಮ್ - 112
ಶಕ್ತ್ಯಾ ಬ್ರಾಹ್ಮ್ಯಾತು ಸೌಮಿತ್ರಿಸ್ತಾಡಿತೋಽಪಿ ಸ್ತನಾಂತರೇ ।
ವಿಷ್ಣೋರಮೀಮಾಂಸ್ಯಸ್ವಂಭಾಗಮಾತ್ಮಾನಂ ಪ್ರತ್ಯನುಸ್ಮರತ್ ॥
ಅನುವಾದ
ಬ್ರಹ್ಮನು ಶಕ್ತಿಯಿಂದ ವಕ್ಷಃಸ್ಥಳದಲ್ಲಿ ಏಟುಬಿದ್ದರೂ ಲಕ್ಷ್ಮಣನು ಭಗವಾನ್ ವಿಷ್ಣುವಿನ ಅಚಿಂತ್ಯ ಅಂಶರೂಪದಿಂದ ತಾನಾರೆಂದು ಚಿಂತಿಸಿದನು.॥112॥
ಮೂಲಮ್ - 113
ತತೋ ದಾನವದರ್ಪಘ್ನಂ ಸೌಮಿತ್ರಿಂ ದೇವಕಂಟಕಃ ।
ತಂ ಪೀಡಯಿತ್ವಾ ಬಾಹುಭ್ಯಾಂ ನ ಪ್ರಭುರ್ಲಂಘನೇಽಭವತ್ ॥
ಅನುವಾದ
ಆದ್ದರಿಂದ ದೇವಶತ್ರು ರಾವಣನು ದಾನವರ ದರ್ಪವನ್ನು ಚೂರ್ಣ ಮಾಡುವವನಾಗಿದ್ದರೂ ಲಕ್ಷ್ಮಣನನ್ನು ತನ್ನೆರಡು ಭುಜಗಳಿಂದ ಅಲ್ಲಾಡಿಸಲೂ ಸಮರ್ಥ ನಾಗಲಿಲ್ಲ.॥113॥
ಮೂಲಮ್ - 114
ತತಃ ಕ್ರುದ್ಧೋ ವಾಯುಸುತೋ ರಾವಣಂ ಸಮಭಿದ್ರವತ್ ।
ಆಜಘಾನೋರಸಿ ಕ್ರುದ್ಧೋ ವಜ್ರಕಲ್ಪೇನ ಮುಷ್ಟಿನಾ ॥
ಅನುವಾದ
ಆಗಲೇ ಕ್ರೋಧಗೊಂಡ ವಾಯುಪುತ್ರ ಹನುಮಂತನು ರಾವಣನ ಕಡೆಗೆ ಓಡಿಹೋಗಿ, ತನ್ನ ವಜ್ರ ದಂತಹ ಮುಷ್ಟಿಯಿಂದ ರಾವಣನ ಎದೆಗೆ ಪ್ರಹರಿಸಿದನು.॥114॥
ಮೂಲಮ್ - 115
ತೇನ ಮುಷ್ಟಿ ಪ್ರಹಾರೇಣ ರಾವಣೋ ರಾಕ್ಷಸೇಶ್ವರಃ ।
ಜಾನುಭ್ಯಾಮಗಮದ್ಭೂಮೌ ಚಚಾಲ ಚ ಪಪಾತ ಚ ॥
ಅನುವಾದ
ಆ ಮುಷ್ಟಿಯ ಆಘಾತದಿಂದ ರಾಕ್ಷಸೇಶ್ವರನು ತತ್ತರಿಸುತ್ತಾ ಮೊಣಕಾಲೂರಿ ನಡುಗುತ್ತಾ ನೆಲಕ್ಕೆ ಬಿದ್ದನು.॥115॥
ಮೂಲಮ್ - 116
ಆಸ್ಯೈಶ್ಚ ನೇತ್ರೈಃ ರವಣೈಃ ಪಪಾತ ರುಧಿರಂ ವಹು ।
ವಿಘೂರ್ಣಮಾನೋ ನಿಶ್ಚೇಷ್ಟೋ ರಥೋಪಸ್ಥ ಉಪಾವಿಶತ್ ॥
ಅನುವಾದ
ಅವನ ಬಾಯಿ, ಕಣ್ಣು, ಕಿವಿಗಳಿಂದ ರಕ್ತಹರಿಯ ತೊಡಗಿತು. ತೂರಾಡುತ್ತಾ ಹೋಗಿ ರಥದಲ್ಲಿ ನಿಶ್ಚೇಷ್ಟಿತನಾಗಿ ಕುಳಿತುಬಿಟ್ಟನು.॥116॥
ಮೂಲಮ್ - 117½
ವಿಸಂಜ್ಞೊ ಮೂರ್ಛಿತಶ್ಚಾಸೀನ್ನ ಚ ಸ್ಥಾನಂ ಸಮಾಲಭತ್ ।
ವಿಸಂಜ್ಞಂ ರಾವಣಂ ದೃಷ್ಟ್ವಾ ಸಮರೇ ಭೀಮವಿಕ್ರಮಮ್ ॥
ಋಷಯೋ ವಾನರಾಶ್ಚೈವ ನೇದುರ್ದೇವಾಶ್ಚ ಸಾಸುರಾಃ ।
ಅನುವಾದ
ಅವನು ಮೂರ್ಛಿತನಾಗಿ ಸಂಜ್ಞಾ ಹೀನನಾಗಿ, ಒಂದೇ ಸ್ಥಿರವಾಗಿರಲಾರದೆ ಚಡಪಡಿಸುತ್ತಾ ಹೊರಳಾಡುತ್ತಿದ್ದನು. ರಣರಂಗದಲ್ಲಿ ಭಯಂಕರ ಪರಾಕ್ರಮಿ ರಾವಣನು ಸಂಜ್ಞಾಹೀನನಾದುದನ್ನು ನೋಡಿ ಋಷಿಗಳು, ದೇವತೆಗಳೂ, ಅಸುರರೂ, ವಾನರರೂ ಹರ್ಷಧ್ವನಿ ಮಾಡಿದರು.॥117॥
ಮೂಲಮ್ - 118½
ಹನುಮಾನಥ ತೇಜಸ್ವೀ ಲಕ್ಷ್ಮಣಂ ರಾವಣಾರ್ದಿತಮ್ ॥
ಅನಯದ್ರಾಘವಾಭ್ಯಾಶಂ ಬಾಹುಭ್ಯಾಂ ಪರಿಗ್ರಹ್ಯತಮ್ ।
ಅನುವಾದ
ಅನಂತರ ತೇಜಸ್ವೀ ಹನುಮಂತನು ರಾವಣನಿಂದ ಪೀಡಿತನಾದ ಲಕ್ಷ್ಮಣನನ್ನು ಎರಡೂ ಕೈಗಳಿಂದ ಎತ್ತಿ ಶ್ರೀರಘುನಾಥನ ಬಳಿಗೆ ತಂದನು.॥118॥
ಮೂಲಮ್ - 119
ವಾಯುಸೂನೋಃ ಸುಹೃತ್ತ್ವೇನ ಭಕ್ತ್ಯಾ ಪರಮಯಾ ಚ ಸಃ ।
ಶತ್ರೂಣಾಮಪ್ಯಕಂಪ್ಯೋಽಪಿ ಲಘುತ್ವಮಗಮತ್ಕಪೇಃ ॥
ಅನುವಾದ
ಹನುಮಂತನ ಸೌಹಾರ್ದ ಮತ್ತು ಉತ್ಕಟ ಭಕ್ತಿಭಾವದಿಂದಾಗಿ ಲಕ್ಷ್ಮಣನು ಅವನಿಗಾಗಿ ಹಗುರವಾದನು. ಶತ್ರುಗಳಿಗೆ ಆಗಲೂ ಅವನು ಅಂಕಪನೀಯನಾಗಿದ್ದನು. ಯಾರೂ ಅಲ್ಲಾಡಿಸಲಾರರು.॥119॥
ಮೂಲಮ್ - 120
ತಂ ಸಮುತ್ಸಜ್ಯ ಸಾ ಶಕ್ತಿಃ ಸೌಮಿತ್ರಿಂ ಯುಧಿ ನಿರ್ಜಿತಮ್ ।
ರಾವಣಸ್ಯ ರಥೇ ತಸ್ಮಿನ್ ಸ್ಥಾನಂ ಪುನರುಪಾಗಮತ್ ॥
ಅನುವಾದ
ಯುದ್ಧದಲ್ಲಿ ಪರಾಜಿತನಾದ ಲಕ್ಷ್ಮಣನನ್ನು ಬಿಟ್ಟ ಆ ಶಕ್ತಿಯು ಪುನಃ ರಾವಣನ ರಥಕ್ಕೆ ಮರಳಿತು.॥120॥
ಮೂಲಮ್ - 121
ರಾವಣೋಽಪಿ ಮಹಾತೇಜಾಃ ಪ್ರಾಪ್ಯಸಂಜ್ಞಾಂ ಮಹಾಹವೇ ।
ಆದದೇ ನಿಶಿತಾನ್ಬಾಣಾನ್ ಜಗ್ರಾಹ ಚ ಮಹದ್ಧನುಃ ॥
ಅನುವಾದ
ಸ್ವಲ್ಪ ಸಮಯದಲ್ಲಿ ಎಚ್ಚರಗೊಂಡ ರಾವಣನು ಮತ್ತೆ ವಿಶಾಲ ಧನುಸ್ಸನ್ನೆತ್ತಿ, ಹರಿತ ಬಾಣಗಳನ್ನು ಎತ್ತಿಕೊಂಡನು.॥121॥
ಮೂಲಮ್ - 122
ಆಶ್ವಸ್ತಶ್ಚ ವಿಶಲ್ಯಶ್ಚ ಲಕ್ಷ್ಮಣಃ ಶತ್ರುಸೂದನಃ ।
ವಿಷ್ಣೋರ್ಭಾಗಮಮೀಮಾಂಸ್ಯಮಾತ್ಮಾನಂ ಪ್ರತ್ಯನುಸ್ಮರನ್ ॥
ಅನುವಾದ
ಶತ್ರುಸೂದನ ಲಕ್ಷ್ಮಣನೂ ಕೂಡ ವಿಷ್ಣುವಿನ ಅಚಿಂತನೀಯ ಅಂಶರೂಪದಿಂದ ತನ್ನನ್ನು ಸ್ಮರಿಸಿಕೊಂಡು ಸ್ವಸ್ಥನಾಗಿ ನಿರೋಗಿಯಾದನು.॥122॥
ಮೂಲಮ್ - 123
ನಿಪಾತಿತ ಮಹಾವೀರಾಂ ವಾನರಾಣಾಂ ಮಹಾಚಮೂಮ್ ।
ರಾಘವಸ್ತು ರಣೇ ದೃಷ್ಟ್ವಾ ರಾವಣಂ ಸಮಭಿದ್ರವತ್ ॥
ಅನುವಾದ
ವಿಶಾಲವಾದ ವಾನರರ ಸೈನ್ಯದ ದೊಡ್ಡ ದೊಡ್ಡ ವೀರರು ಹತರಾಗುತ್ತಿರುವುದನ್ನು ನೋಡಿ ರಣರಂಗದಲ್ಲಿ ಶ್ರೀರಘುನಾಥನು ರಾವಣನನ್ನು ಆಕ್ರಮಿಸಲು ಧಾವಿಸಿದನು.॥123॥
ಮೂಲಮ್ - 124½
ಅಥೈನಮುಪಸಂಕ್ರಮ್ಯ ಹನೂಮಾನ್ ವಾಕ್ಯಮಬ್ರವೀತ್ ।
ಮಮ ಪೃಷ್ಠಂ ಸಮಾರುಹ್ಯ ರಾಕ್ಷಸಂ ಶಾಸ್ತುಮರ್ಹಸಿ ॥
ವಿಷ್ಣುರ್ಯಥಾ ಗರುತ್ಮಂತಮಾರುಹ್ಯಾಮರವೈರಿಣಮ್ ॥
ಅನುವಾದ
ಆಗ ಹನುಮಂತನು ಅವನ ಬಳಿಗೆ ಬಂದು ಹೇಳಿದನು- ಪ್ರಭೋ! ಭಗವಾನ್ ವಿಷ್ಣು ಗರುಡಾರೂಢನಾಗಿ ದೈತ್ಯರನ್ನು ಸಂಹರಿಸುವಂತೆಯೇ ನೀನು ನನ್ನ ಹೆಗಲೇರಿ ಈ ರಾಕ್ಷಸನನ್ನು ದಂಡಿಸಿರಿ.॥124॥
ಮೂಲಮ್ - 125½
ತಚ್ಛ್ರುತ್ವಾ ರಾಘವೋ ವಾಕ್ಯಂ ವಾಯುಪುತ್ರೇಣ ಭಾಷಿತಮ್ ॥
ಅಥಾರೋಹ ಸಹಸಾ ಹನೂಮಂತಂ ಮಹಾಕಪಿಮ್ ।
ಅನುವಾದ
ಪವನನಂದನನು ಹೇಳಿದ ಮಾತನ್ನು ಕೇಳಿ ಶ್ರೀರಾಮನು ಕೂಡಲೇ ಆ ಮಹಾಕಪಿಯ ಹೆಗಲೇರಿದನು.॥125॥
ಮೂಲಮ್ - 126
ರಥಸ್ಥಂ ರಾವಣಂ ಸಂಖ್ಯೇ ದದರ್ಶ ಮನುಜಾಧಿಪಃ ॥
ಮೂಲಮ್ - 127
ತಮಾಲೋಕ್ಯ ಮಹಾತೇಜಾಃ ಪ್ರದುದ್ರಾವ ಸ ರಾವಣಮ್ ।
ವೈರೋಚನಮಿವ ಕ್ರುದ್ಧೋ ವಿಷ್ಣುರಭ್ಯುದ್ಯತಾಯುಧಃ ॥
ಅನುವಾದ
ಮಹಾರಾಜಾ ಶ್ರೀರಾಮನು ಸಮರಾಂಗಣದಲ್ಲಿ ರಾವಣನು ರಥದಲ್ಲಿ ಕುಳಿತಿರುವುದನ್ನು ನೋಡುತ್ತಲೇ ಮಹಾ ತೇಜಸ್ವೀ ಶ್ರೀರಾಮನು ಕುಪಿತನಾದ ಭಗವಾನ್ ವಿಷ್ಣು ಚಕ್ರವನ್ನೆತ್ತಿಕೊಂಡು ವೀರೋಚನಕುಮಾರ ಬಲಿಯ ಬಳಿಗೆ ಧಾವಿಸಿ ಹೋದಂತೆ ರಾವಣನ ಕಡೆಗೆ ಓಡಿದನು.॥126-127॥
ಮೂಲಮ್ - 128
ಜ್ಯಾಶಬ್ದ ಮಕರೋತ್ತೀವ್ರಂ ವಜ್ರನಿಷ್ಪೇಷ ನಿಷ್ಠುರಮ್ ।
ಗಿರಾ ಗಂಭೀರಯಾ ರಾಮೋ ರಾಕ್ಷಸೇಂದ್ರಮುವಾಚ ಹ ॥
ಅನುವಾದ
ಅವನು ಸಿಡಿಲಿನ ಶಬ್ದಕ್ಕಿಂತಲು ಕಠೋರವಾಗಿ ಧನುಷ್ಟಂಕಾರ ಮಾಡಿದನು. ಬಳಿಕ ಶ್ರೀರಾಮಚಂದ್ರನು ರಾಕ್ಷಸರಾಜ ರಾವಣನಲ್ಲಿ ಗಂಭೀರವಾಣಿಯಲ್ಲಿ ನುಡಿದನು .॥128॥
ಮೂಲಮ್ - 129
ತಿಷ್ಠ ತಿಷ್ಠ ಮಮ ತ್ವಂ ಹಿಕೃತ್ವಾ ವಿಪ್ರಿಯಮೀದೃಶಮ್ ।
ಕ್ವ ನು ರಾಕ್ಷಸ ಶಾರ್ದೂಲ ಗತ್ವಾ ಮೋಕ್ಷಮವಾಪ್ಸ್ಯಸಿ ॥
ಅನುವಾದ
ರಾಕ್ಷಸಶ್ರೇಷ್ಠನೇ! ನಿಲ್ಲು, ನಿಲ್ಲು! ನನ್ನ ವಿಷಯದಲ್ಲಿ ಇಷ್ಟೊಂದು ಅಪರಾಧ ಮಾಡಿ ನೀನು ಎಲ್ಲಿಗೆ ಹೋಗಿ ಪ್ರಾಣಸಂಕಟ ದಿಂದ ಬಿಡುಗಡೆ ಹೊಂದುವೆ.॥12.॥
ಮೂಲಮ್ - 130
ಯದೀಂದ್ರವೈವಸ್ವತಭಾಸ್ಕರಾನ್ ವಾ
ಸ್ವಯಂಭು ವೈಶ್ವಾನರಶಂಕರಾನ್ ವಾ ।
ಗಮಿಷ್ಯಸಿ ತ್ವಂ ದಶಧಾವಾ ದಿಶೊ ವಾ
ತಥಾಪಿ ಮೇ ನಾದ್ಯ ಗತೋ ವಿಮೋಕ್ಷ್ಯಸೇ ॥
ಅನುವಾದ
ನೀನು ಇಂದ್ರ, ಯಮ, ಸೂರ್ಯನ ಬಳಿಗೆ, ಬ್ರಹ್ಮಾ, ಅಗ್ನಿ ಅಥವಾ ಶಂಕರನ ಬಳಿಗೆ ಇಲ್ಲವೇ ದಶದಿಕ್ಕುಗಳಲ್ಲಿ ಓಡಿ ಹೋದರೂ ಈಗ ನನ್ನ ಕೈಯಿಂದ ಬದುಕಿರಲಾರೆ.॥130॥
ಮೂಲಮ್ - 131
ಯಶ್ಚೈಷ ಶಕ್ತ್ಯಾನಿಹತಸ್ತ್ವಯಾದ್ಯ
ಗಚ್ಛನ್ ವಿಷಾದಂ ಸಹಸಾಭ್ಯುಪೇತ್ಯ ।
ಸ ಏಷ ರಕ್ಷೋಗಣ ರಾಜ ಮೃತ್ಯುಃ
ಸಪುತ್ರಪೌತ್ರಸ್ಯ ತವಾದ್ಯ ಯುದ್ಧೇ ॥
ಅನುವಾದ
ನೀನು ಇಂದು ತನ್ನ ಶಕ್ತಿಯಿಂದ ಯುದ್ಧದಲ್ಲಿ ಲಕ್ಷ್ಮಣನನ್ನು ಪ್ರಹರಸಿದೆ. ಅದರಿಂದ ಅವನು ಮೂರ್ಛಿತನಾಗಿದ್ದನು; ಅದಕ್ಕೆ ತಕ್ಕ ಪ್ರತಿಕಾರ ಮಾಡಲು ನಾನು ಈಗ ಬಂದಿರುವೆನು. ರಾಕ್ಷಸರಾಜನೇ! ಪುತ್ರ-ಪೌತ್ರಸಹಿತ ನಿನ್ನ ಮೃತ್ಯುವಾಗಿ ಬಂದಿರುವೆನು.॥131॥
ಮೂಲಮ್ - 132
ಏತೇನ ಚಾತ್ಯದ್ಭುತ ದರ್ಶನಾನಿ
ಶರೈರ್ಜನಸ್ಥಾನಕೃತಾಲಯಾನಿ ।
ಚತುರ್ದಶಾನ್ಯಾತ್ತ ವರಾಯುಧಾನಿ
ರಕ್ಷಃ ಸಹಸ್ರಾಣಿ ನಿಷೂದಿತಾನಿ ॥
ಅನುವಾದ
ರಾವಣನೇ! ನಿನ್ನ ಎದುರಿಗೆ ನಿಂತಿರುವ ಈ ರಘುವಂಶೀ ರಾಜಕುಮಾರನೇ ತನ್ನ ಬಾಣಗಳಿಂದ ಜನಸ್ಥಾನದಲ್ಲಿದ್ದ ಅದ್ಭುತವಾಗಿ ಕಾಣುವ ಉತ್ತಮೋತ್ತಮ ಅಸ್ತ್ರ-ಶಸ್ತ್ರ ಸಂಪನ್ನರಾದ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದುದು.॥132॥
ಮೂಲಮ್ - 133
ರಾಘವಸ್ಯ ವಚಃ ಶ್ರುತ್ವಾ ರಾಕ್ಷಸೇಂದ್ರೋ ಮಹಾಬಲಃ ।
ವಾಯುಪುತ್ರಂ ಮಹಾವೇಗಂ ವಹಂತಂ ರಾಘವಂ ರಣೇ ॥
ಮೂಲಮ್ - 134
ರೋಷೇಣ ಮಹತಾಽಽವಿಷ್ಟಃ ಪೂರ್ವವೈರಮನುಸ್ಮರನ್ ।
ಆಜಘಾನ ಶರೈದೀಪ್ತೈ ಕಾಲಾನಲಶಿಖೋಪಮೈಃ ॥
ಅನುವಾದ
ಶ್ರೀರಾಮಚಂದ್ರನ ಮಾತನ್ನು ಕೇಳಿ ಮಹಾಬಲಿ ರಾಕ್ಷಸೇಂದ್ರ ರಾವಣನು ಮಹಾರೋಷಗೊಂಡನು. ಅವನಿಗೆ ಹಿಂದಿನ ವೈರ ನೆನಪಾಯಿತು. ಅದರಿಂದ ಅವನು ಕಾಲಾಗ್ನಿ ಶಿಖೆಯಂತಿರುವ ಹೊಳೆಯುವ ಬಾಣಗಳಿಂದ ಶ್ರೀರಘುನಾಥನ ವಾಹನನಾಗಿದ್ದ ಮಹಾವೇಗಶಾಲೀ ವಾಯುಪುತ್ರ ಹನುಮಂತನನ್ನು ಅತ್ಯಂತ ಗಾಯಗೊಳಿಸಿದನು.॥133-134॥
ಮೂಲಮ್ - 135
ರಾಕ್ಷಸೇನಾಹವೇ ತಸ್ಯ ತಾಡಿತಸ್ಯಾಪಿ ಸಾಯಕೈಃ ।
ಸ್ವಭಾವತೇಜೋಯುಕ್ತಸ್ಯ ಭೂಯಸ್ತೇಜೋಽಭ್ಯವರ್ಧತ ॥
ಅನುವಾದ
ರಣರಂಗದಲ್ಲಿ ಆ ರಾಕ್ಷಸನ ಸಾಯಕಗಳಿಂದ ಆ ಹತನಾದರೂ ಸ್ವಾಭಾವಿಕ ತೇಜನಿಂದ ಸಂಪನ್ನನಾದ ಮಾರುತಿಯ ಶೌರ್ಯ ಇನ್ನಷ್ಟು ವೃದ್ಧಿಗೊಂಡಿತು.॥135॥
ಮೂಲಮ್ - 136
ತತೋ ರಾಮೋ ಮಹಾತೇಜಾ ರಾವಣೇನ ಕೃತವ್ರಣಮ್ ।
ದೃಷ್ಟ್ವಾ ಪ್ಲವಗಶಾರ್ದೂಲಂ ಕ್ರೋಧಸ್ಯ ವಶಮೇಯಿವಾನ್ ॥
ಅನುವಾದ
ವಾನರ ಶ್ರೇಷ್ಠ ಹನು ಮಂತನನ್ನು ರಾವಣನು ಗಾಯಗೊಳಿಸಿದನ್ನು ನೋಡಿ ಮಹಾತೇಜಸ್ವೀ ಶ್ರೀರಾಮನು ಕ್ರೋಧವಶನಾದನು.॥136॥
ಮೂಲಮ್ - 137
ತಸ್ಯಾಭಿಸಂಕ್ರಮ್ಯ ರಥಂ ಸಚಕ್ರಂ
ಸಾಶ್ವಧ್ವಜಚ್ಛತ್ರಮಹಾಪತಾಕಮ್ ।
ಸಸಾರಥಿಂ ಸಾಶನಿಶೂಲಖಡ್ಗಂ
ರಾಮಃ ಪ್ರಚಿಚ್ಛೇದ ಶಿತೈಃ ಶರಾಗ್ರೈಃ ॥
ಅನುವಾದ
ಮತ್ತೆ ಭಗವಾನ್ ಶ್ರೀರಾಮನು ಆಕ್ರಮಣಮಾಡಿ, ರಥಚಕ್ರ, ಕುದುರೆ, ಧ್ವಜ, ಪತಾಕೆ, ಸಾರಥಿ, ರಥದಲ್ಲಿದ್ದ ವಜ್ರಾಯುಧ, ಶೂಲ, ಖಡ್ಗಸಹಿತ ಅವನ ರಥವನ್ನು ತೀಕ್ಷ್ಣವಾದ ಬಾಣಗಳಿಂದ ನುಚ್ಚುನೂರಾಗಿಸಿದನು.॥137॥
ಮೂಲಮ್ - 138
ಅಥೇಂದ್ರಶತ್ರುಂ ತರಸಾ ಜಘಾನ
ಬಾಣೇನ ವಜ್ರಾಶನಿಸಂನಿಭೇನ ।
ಭುಜಾಂತರೇ ವ್ಯೂಢಸುಜಾತರೂಪೇ
ವಜ್ರೇಣ ಮೇರುಂ ಭಗವಾನಿವೇಂದ್ರಃ ॥
ಅನುವಾದ
ದೇವೇಂದ್ರನು ವಜ್ರದಂತೆ ಮೇರುಪರ್ವತದ ಮೇಲೆ ಆಘಾತಮಾಡಿದಂತೆ ಪ್ರಭು ಶ್ರೀರಾಮನು ವಜ್ರಾಯುಧ ಮತ್ತು ಸಿಡಿಲಿನಂತಿದ್ದ ತೇಜಸ್ವೀ ಬಾಣದಿಂದ ಇಂದ್ರಶತ್ರು ರಾವಣನ ವಿಶಾಲ ವಕ್ಷಃಸ್ಥಳಕ್ಕೆ ವೇಗವಾಗಿ ಪ್ರಹರಿಸಿದನು.॥138॥
ಮೂಲಮ್ - 139
ಯೋ ವಜ್ರಪಾತಾಶನಿಸಂನಿಪಾತಾ-
ನ್ನ ಚುಕ್ಷುಭೇ ನಾಪಿ ಚಚಾಲ ರಾಜಾ ।
ಸ ರಾಮಬಾಣಾಭಿಹತೋ ಭೃಶಾರ್ತ-
ಶ್ಚಚಾಲ ಚಾಪಂ ಚ ಮುಮೋಚ ವೀರಃ ॥
ಅನುವಾದ
ವಜ್ರಾಯುಧ, ಸಿಡಿಲಿನ ಆಘಾತದಿಂದಲೂ ಎಂದೂ ವಿಚಲಿತನಾಗದ ಆ ವೀರ ರಾಜಾರಾವಣನು ಆಗ ಶ್ರೀರಾಮಚಂದ್ರನ ಬಾಣದಿಂದ ಗಾಯಗೊಂಡು ಅತ್ಯಂತ ಆರ್ತನಾಗಿ ನಡುಗಿಹೋದನು. ಕೈಯಲ್ಲಿದ್ದ ಧನುಸ್ಸು ಜಾರಿಬಿತ್ತು.॥139॥
ಮೂಲಮ್ - 140
ತಂ ವಿಹ್ವಲಂತಂ ಪ್ರಸಮೀಕ್ಷ್ಯ ರಾಮಃ
ಸಮಾದದೇ ದೀಪ್ತಮಥಾರ್ಧಚಂದ್ರಮ್ ।
ತೇನಾರ್ಕವರ್ಣಂ ಸಹಸಾ ಕಿರೀಟಂ
ಚಿಚ್ಛೇದ ರಕ್ಷೋಧಿಪತೇರ್ಮಹಾತ್ಮಾ ॥
ಅನುವಾದ
ರಾವಣನು ವ್ಯಾಕುಲನಾಗಿರುವುದನ್ನು ನೋಡಿ ಮಹಾತ್ಮಾ ಶ್ರೀರಾಮಚಂದ್ರನು ಒಂದು ಹೊಳೆಯುತ್ತಿರುವ ಅರ್ಧ ಚಂದ್ರಾಕಾರ ಬಾಣವನ್ನೆತ್ತಿಕೊಂಡು, ಅದರಿಂದ ರಾಕ್ಷಸ ರಾಜನ ಸೂರ್ಯನಂತೆ ದೇದೀಪ್ಯಮಾನವಾದ ಕಿರೀಟವನ್ನು ಕತ್ತರಿಸಿಹಾಕಿದನು.॥140॥
ಮೂಲಮ್ - 141
ತಂ ನಿರ್ವಿಷಾಶೀವಿಷಸಂನಿಕಾಶಂ
ಶಾಂತಾರ್ಚಿಷಂ ಸೂರ್ಯಮಿವಾಪ್ರಕಾಶಮ್ ।
ಗತಶ್ರಿಯಂ ಕೃತ್ತಕಿರೀಟಕೂಟ-
ಮುವಾಚ ರಾಮೋ ಯುಧಿ ರಾಕ್ಷಸೇಂದ್ರಮ್ ॥
ಅನುವಾದ
ಆಗ ಧನುಸ್ಸು ಇಲ್ಲದಿರುವುದರಿಂದ ರಾವಣನು ವಿಷಹೀನ ಸರ್ಪದಂತೆ ಪ್ರಭಾವ ಕಳೆದುಕೊಂಡಿದ್ದನು. ಸಾಯಂಕಾಲ ಶಾಂತವಾದ ಸೂರ್ಯನಂತೆ ನಿಸ್ತೇಜನಾಗಿದ್ದನು. ಕಿರೀಟಗಳು ನಾಶವಾದ ಕಾರಣ ಶ್ರೀಹೀನನಾಗಿ ಕಂಡುಬರುತ್ತಿದ್ದನು. ಆ ಸ್ಥಿತಿಯಲ್ಲಿ ಶ್ರೀರಾಮನು ರಾಕ್ಷಸರಾಜನಲ್ಲಿ ಹೇಳಿದನು .॥141॥
ಮೂಲಮ್ - 142
ಕೃತಂ ತ್ವಯಾ ಕರ್ಮ ಮಹತ್ಸುಭೀಮಂ
ಹತಪ್ರವೀರಶ್ಚ ಕೃತಸ್ತ್ವಯಾಹಮ್ ।
ತಸ್ಮಾತ್ಪರಿಶ್ರಾಂತ ಇತಿ ವ್ಯವಸ್ಯ
ನ ತ್ವಾಂ ಶರೈರ್ಮೃತ್ಯುವಶಂ ನಯಾಮಿ ॥
ಅನುವಾದ
ರಾವಣ! ನೀನು ಇಂದು ದೊಡ್ಡ ಭಯಂಕರ ಕರ್ಮ ಮಾಡಿರುವೆ. ನನ್ನ ಸೈನ್ಯದ ಮುಖ್ಯ ಮುಖ್ಯ ವೀರರನ್ನು ಕೊಂದುಹಾಕಿದೆ. ಇಷ್ಟಾದರೂ ಬಳಲಿರುವೆ ಎಂದು ತಿಳಿದು ನಿನ್ನನ್ನು ಬಾಣಗಳಿಂದ ಕೊಲ್ಲುವುದಿಲ್ಲ.॥142॥
ಮೂಲಮ್ - 143
ಪ್ರಯಾಹಿ ಜಾನಾಮಿ ರಣಾರ್ದಿತಸ್ತ್ವಂ
ಪ್ರವಿಶ್ಯ ರಾತ್ರಿಂಚರರಾಜ ಲಂಕಾಮ್ ।
ಆಶ್ವಸ್ಯ ನಿರ್ಯಾಹಿ ರಥೀ ಚ ಧನ್ವೀ
ತದಾಬಲಂ ಪ್ರೇಕ್ಷ್ಯಸಿ ಮೇ ರಥಸ್ಥಃ ॥
ಅನುವಾದ
ನಿಶಾಚರನೇ! ನೀನು ಯುದ್ಧದಿಂದ ಪೀಡಿತನಾಗಿರುವೆ ಎಂದು ನಾನು ತಿಳಿದಿರುವೆ. ಅದಕ್ಕಾಗಿ ಲಂಕೆಗೆ ಹೋಗಿ ಸ್ವಲ್ಪ ಸಮಯ ವಿಶ್ರಾಂತಿ ಮಾಡು ಎಂದು ಆಜ್ಞಾಪಿಸುತ್ತಿದ್ದೇನೆ. ಮತ್ತೆ ರಥ, ಧನುಸ್ಸಿನೊಂದಿಗೆ ಬಾ, ಆಗ ರಥಾರೂಢನಾಗಿ ನೀನು ಪುನಃ ನನ್ನ ಬಲವನ್ನು ನೋಡುವಿಯಂತೆ.॥143॥
ಮೂಲಮ್ - 144
ಸ ಏವಮುಕ್ತೋ ಹತದರ್ಪಹರ್ಷೋ
ನಿಕೃತ್ತಚಾಪಃ ಸ ಹತಾಶ್ವಸೂತಃ ।
ಶರಾರ್ದಿತೋ ಭಗ್ನಮಹಾಕಿರೀಟೋ
ವಿವೇಶ ಲಂಕಾಂ ಸಹಸಾ ಸ್ಮ ರಾಜಾ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ರಾವಣನು ಕೂಡಲೇ ಲಂಕೆಗೆ ತೆರಳಿದನು. ಅವನ ಹರ್ಷ, ಅಭಿಮಾನ ಮಣ್ಣುಪಾಲಾಗಿತ್ತು, ಧನುಸ್ಸು ತುಂಡಾಗಿತ್ತು, ಸಾರಥಿ ಸತ್ತುಹೋಗಿದ್ದನು. ಅವನು ಸ್ವತಃ ಬಾಣಗಳಿಂದ ಪೀಡಿತನಾಗಿದ್ದನು.॥144॥
ಮೂಲಮ್ - 145
ತಸ್ಮಿನ್ಪ್ರವಿಷ್ಟೇ ರಜನೀಚರೇಂದ್ರೇ
ಮಹಾಬಲೇ ದಾನವದೇವಶತ್ರೌ ।
ಹರೀನ್ ವಿಶಲ್ಯಾನ್ಸಹ ಲಕ್ಷ್ಮಣೇನ
ಚಕಾರ ರಾಮಃ ಪರಮಾಹವಾಗ್ರೇ ॥
ಅನುವಾದ
ದೇವ-ದಾನವರ ಶತ್ರು ಮಹಾಬಲಿ ನಿಶಾಚರ ರಾಜಾ ರಾವಣನು ಲಂಕೆಗೆ ತೆರಳಿದ ಬಳಿಕ ಲಕ್ಷ್ಮಣ ಸಹಿತ ಶ್ರೀರಾಮನು ಯುದ್ಧದಲ್ಲಿ ಗಾಯಗೊಂಡ ವಾನರರ ಬಾಣಗಳನ್ನು ಶರೀರದಿಂದ ಕಿತ್ತು ಹಾಕಿದನು.॥14.॥
ಮೂಲಮ್ - 146
ತಸ್ಮಿನ್ ಪ್ರಭಗ್ನೇ ತ್ರಿದಶೇಂದ್ರ ಶತ್ರೌ
ಸುರಾಸುರಾ ಭೂತಗಣಾ ದಿಶಶ್ಚ ।
ಸಸಾಗರಾಃ ಸರ್ಷಿಮಹೋರಗಾಶ್ಚ
ತಥೈವ ಭೂಮ್ಯಂಬುಚರಾಃ ಪ್ರಹೃಷ್ಟಾಃ ॥
ಅನುವಾದ
ದೇವೇಂದ್ರನ ಶತ್ರು ರಾವಣನು ಯುದ್ಧ ಸ್ಥಳದಿಂದ ಓಡಿಹೋದಾಗ, ಅವನ ಪರಾಭವವನ್ನು ಯೋಚಿಸಿ ದೇವತೆಗಳು, ಅಸುರರು, ಭೂತ, ದಿಕ್ಕುಗಳು, ಸಮುದ್ರ, ಋಷಿಗಡಣ, ದೊಡ್ಡ ದೊಡ್ಡ ನಾಗಗಳು ಹಾಗೂ ಭೂಚರ, ಜಲಚರ ಹೀಗೆ ಎಲ್ಲ ಪ್ರಾಣಿಗಳು ಸಂತೋಷಗೊಂಡವು.॥146॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥59॥