०५८ विभीषणेन प्रहस्तबलवर्णनम्

वाचनम्
ಭಾಗಸೂಚನಾ

ನೀಲನಿಂದ ಪ್ರಹಸ್ತನ ವಧೆ

ಮೂಲಮ್

(ಶ್ಲೋಕ - 1)
ತತಃ ಪ್ರಹಸ್ತಂ ನಿರ್ಯಾಂತಂ ದೃಷ್ಟ್ವಾ ರಣಕೃತೋದ್ಯಮಮ್ ।
ಉವಾಚ ಸಸ್ಮಿತಂ ರಾಮೋ ವಿಭೀಷಣಮರಿಂದಮಃ ॥

ಅನುವಾದ

ಇದಕ್ಕೆ ಮೊದಲು ಯುದ್ಧಕ್ಕೆ ಸಿದ್ಧನಾಗಿ ಲಂಕೆಯಿಂದ ಹೊರಟ ಪ್ರಹಸ್ತನನ್ನು ನೋಡಿ ಶತ್ರುಸೂದನ ಶ್ರೀರಾಮಚಂದ್ರನು ವಿಭೀಷಣನಲ್ಲಿ ಮುಗುಳ್ನಗುತ್ತಾ ಕೇಳಿದನು.॥1॥

ಮೂಲಮ್ - 2½

ಕ ಏಷ ಸುಮಹಾಕಾಯೋ ಬಲೇನ ಮಹತಾ ವೃತಃ ।
ಆಗಚ್ಛತಿ ಮಹಾವೇಗಃ ಕಿಂರೂಪ ಬಲಪೌರುಷಃ ॥
ಆಚಕ್ಷ್ವ ಮೇ ಮಹಾಬಾಹೋ ವೀರ್ಯವಂತಂ ನಿಶಾಚರಮ್ ।

ಅನುವಾದ

ಮಹಾಬಾಹೋ! ಭಾರೀ ಶರೀರವುಳ್ಳ, ವೇಗಶಾಲಿ, ಅಪಾರ ಸೈನ್ಯದೊಂದಿಗೆ ಹೊರಟ ಯೋಧನು ಯಾರು? ಇವನ ರೂಪ, ಬಲ, ಪೌರುಷವೆಂತು? ಈ ಪರಾಕ್ರಮಿ ನಿಶಾಚರನನ್ನು ನನಗೆ ಪರಿಚಯಿಸು.॥2½॥

ಮೂಲಮ್ - 3

ರಾಘವಸ್ಯ ವಚಃ ಶ್ರುತ್ವಾ ಪ್ರತ್ಯುವಾಚ ವಿಭೀಷಣಃ ॥

ಮೂಲಮ್ - 4

ಏಷ ಸೇನಾಪತಿಸ್ತಸ್ಯ ಪ್ರಹಸ್ತೋ ನಾಮ ರಾಕ್ಷಸಃ ।
ಲಂಕಾಯಾಂ ರಾಕ್ಷಸೇಂದ್ರಸ್ಯ ತ್ರಿಭಾಗ ಬಲಸಂವೃತಃ ।
ವೀರ್ಯವಾನಸ್ತ್ರವಿಚ್ಛೂರಃ ಸುಪ್ರಖ್ಯಾತ ಪರಾಕ್ರಮಃ ॥

ಅನುವಾದ

ಶ್ರೀರಾಮನ ಮಾತನ್ನು ಕೇಳಿ ವಿಭೀಷಣನು ಇಂತೆಂದು ಉತ್ತರಿಸಿದನು - ಪ್ರಭೋ! ಇವನ ಹೆಸರು ಪ್ರಹಸ್ತ. ಇವನು ರಾಕ್ಷಸೇಂದ್ರ ರಾವಣನ ಸೇನಾಪತಿಯು ಹಾಗೂ ಲಂಕೆಯ ಮೂರನೆಯ ಒಂದು ಭಾಗ ಸೈನ್ಯ ಇವನೊಂದಿಗೆ ಇದೆ. ಇವನ ಪರಾಕ್ರಮ ವಿಖ್ಯಾತವಾಗಿದ್ದು, ಇವನು ಅನೇಕ ರೀತಿಯ ಅಸ್ತ್ರ-ಶಸ್ತ್ರಗಳನ್ನು ಬಲ್ಲವನು, ಬಲ ವಿಕ್ರಮಗಳಿಂದ ಸಂಪನ್ನ ಶೂರ-ವೀರನಾಗಿದ್ದಾನೆ.॥3-4॥

ಮೂಲಮ್ - 5

ತತಃ ಪ್ರಹಸ್ತಂ ನಿರ್ಯಾಂತಂ ಭೀಮಂ ಭೀಮಪರಾಕ್ರಮಮ್ ।
ಗರ್ಜಂತಂ ಸುಮಹಾಕಾಯಂ ರಾಕ್ಷಸೈರಭಿ ಸಂವೃತಮ್ ॥

ಮೂಲಮ್ - 6

ದದರ್ಶ ಮಹತೀ ಸೇನಾ ವಾನರಾಣಾಂ ಬಲೀಯಸಾಮ್ ।
ಅಭಿಸಂಜಾತ ಘೋಷಾಣಾಂ ಪ್ರಹಸ್ತಮಭಿಗರ್ಜತಾಮ್ ॥

ಅನುವಾದ

ಆಗಲೇ ಮಹಾಬಲಶಾಲಿ ವಾನರರ ವಿಶಾಲ ಸೇನೆಯೂ ಭಯಾನಕ ಪರಾಕ್ರಮಿ, ಭೀಷಣರೂಪಧಾರೀ, ಮಹಾಕಾಯ ಪ್ರಹಸ್ತನು ಭಾರೀ ಗರ್ಜಿಸುತ್ತಾ ಲಂಕೆಯಿಂದ ಬಂದುದನ್ನು ನೋಡಿತು. ಅವನು ಅಸಂಖ್ಯ ರಾಕ್ಷಸರಿಂದ ಪರಿವೃತನಾಗಿದ್ದನು. ಅವನನ್ನು ನೋಡುತ್ತಲೇ ವಾನರ ಸೈನ್ಯದಲ್ಲಿಯೂ ಮಹಾಕೋಲಾಹಲವಾಗಿ, ಪ್ರಹಸ್ತನ ಕಡೆಗೆ ನೋಡುತ್ತಾ ವಾನರರು ಗರ್ಜಿಸತೊಡಗಿದರು.॥5-6॥

ಮೂಲಮ್ - 7

ಖಡ್ಗಶಕ್ತ್ಯಷ್ಟಿಶೂಲಾಶ್ಚ ಬಾಣಾನಿ ಮುಸಲಾನಿ ಚ ।
ಗದಾಶ್ಚ ಪರಿಘಾಃ ಪ್ರಾಸಾ ವಿವಿಧಾಶ್ಚ ಪರಶ್ವಧಾಃ ॥

ಮೂಲಮ್ - 8

ಧನೂಂಷಿ ಚ ವಿಚಿತ್ರಾಣಿ ರಾಕ್ಷಸಾನಾಂ ಜಯೈಷಿಣಾಮ್ ।
ಪ್ರಗೃಹೀತಾನ್ಯ ರಾಜಂತಂ ವಾನರಾನಭಿಧಾವತಾಮ್ ॥

ಅನುವಾದ

ವಿಜಯೇಚ್ಛುಗಳಾದ ರಾಕ್ಷಸರು ವಾನರರ ಕಡೆಗೆ ಓಡಿದರು. ಅವರ ಕೈಗಳಲ್ಲಿ ಖಡ್ಗ, ಶಕ್ತಿ, ಋಷ್ವಿ, ಶೂಲ, ಬಾಣ, ಮುಸಲ, ಗದೆ, ಪರಿಘ, ಪ್ರಾಸ, ಅನೇಕ ಪ್ರಕಾರದ ಗಂಡು ಕೊಡಲಿ, ಚಿತ್ರ-ವಿಚಿತ್ರವಾದ ಧನುಸ್ಸುಗಳು ಶೋಭಿಸುತ್ತಿದ್ದವು.॥7-8॥

ಮೂಲಮ್ - 9

ಜಗೃಹುಃ ಪಾದಪಾಂಶ್ಚಾಪಿ ಪುಷ್ಟಿತಾಂಸ್ತು ಗಿರೀಂಸ್ತಥಾ ।
ಶಿಲಾಶ್ಚ ವಿಪುಲಾ ದೀರ್ಘಾ ಯೋದ್ಧುಕಾಮಾಃ ಪ್ಲವಂಗಮಾಃ ॥

ಅನುವಾದ

ಆಗ ವಾನರರೂ ಕೂಡ ಯುದ್ಧಕ್ಕಾಗಿ ಹೂಗಳು ಅರಳಿ ನಿಂತ ವೃಕ್ಷಗಳನ್ನು, ಪರ್ವತಗಳನ್ನು, ದೊಡ್ಡ ದೊಡ್ಡ ಶಿಲೆಗಳನ್ನು ಎತ್ತಿಕೊಂಡರು.॥9॥

ಮೂಲಮ್ - 10

ತೇಷಾಮನ್ಯೋನ್ಯಮಾಸಾದ್ಯ ಸಂಗ್ರಾಮಃ ಸುಮಹಾನಭೂತ್ ।
ಬಹೂನಾಮಶ್ಮವೃಷ್ಟಿಂ ಚ ಶರವರ್ಷಂ ಚ ವರ್ಷತಾಮ್ ॥

ಅನುವಾದ

ಮತ್ತೆ ಎರಡೂ ಪಕ್ಷದ ಅಸಂಖ್ಯ ವೀರರು ಶಿಲೆಗಳ ಮತ್ತು ಬಾಣಗಳ ಮಳೆಯೊಂದಿಗೆ ಪರಸ್ಪರ ಭಾರೀ ಸಂಗ್ರಾಮ ನಡೆಯತೊಡಗಿತು.॥10॥

ಮೂಲಮ್ - 11

ಬಹವೋ ರಾಕ್ಷಸಾ ಯುದ್ಧೇ ಬಹೂನ್ ವಾನರಪುಂಗವಾನ್ ।
ವಾನರಾ ರಾಕ್ಷಸಾಂಶ್ಚಾಪಿ ನಿಜಘ್ನುರ್ಬಹವೋ ಬಹೂನ್ ॥

ಅನುವಾದ

ರಣರಂಗಲ್ಲಿ ಅನೇಕ ರಾಕ್ಷಸರು ಬಹಳಷ್ಟು ವಾನರರನ್ನು ಮತ್ತು ಅಸಂಖ್ಯ ವಾನರರು ಬಹಳಷ್ಟು ರಾಕ್ಷಸರನ್ನು ಸಂಹಾರ ಮಾಡಿದರು.॥11॥

ಮೂಲಮ್ - 12

ಶೂಲೈಃ ಪ್ರಮಥಿತಾಃ ಕೇಚಿತ್ಕೇಚಿತ್ತು ಪರಮಾಯುಧೈಃ ।
ಪರಿಘೈರಾಹತಾಃ ಕೇಚಿತ್ಕೇಚಿಚ್ಛಿನ್ನಾಃ ಪರಶ್ವಧೈಃ ॥

ಅನುವಾದ

ವಾನರರಲ್ಲಿ ಕೆಲವರನ್ನು ಶೂಲದಿಂದ, ಕೆಲವರನ್ನು ಚಕ್ರದಿಂದ ಕೊಂದುಹಾಕಿದರು. ಎಷ್ಟೋ ವಾನರರು ಪರಿಘದಿಂದ ಹತರಾದರು. ಎಷ್ಟೋ ಕಪಿಗಳು ಕೊಡಲಿಯಿಂದ ತುಂಡು ತುಂಡಾದರು.॥12॥

ಮೂಲಮ್ - 13

ನಿರುಚ್ಛ್ವಾಸಾಃ ಪುನಃ ಕೇಚಿತ್ಪತಿತಾ ಧರಣೀತಲೇ ।
ವಿಭಿನ್ನಹೃದಯಾಃ ಕೇಚಿದಿಷುಸಂಧಾನಸಾಧಿತಾಃ ॥

ಅನುವಾದ

ಎಷ್ಟೋ ಯೋಧರ ಉಸಿರು ನಿಂತು ಭೂಮಿಗೆ ಬಿದ್ದರು. ಎಷ್ಟೋ ಯೋಧರು ಬಾಣಗಳಿಗೆ ಗುರಿಯಾದರು. ಅದರಿಂದ ಅವರ ಹೃದಯ ಸೀಳಿಹೋಯಿತು.॥13॥

ಮೂಲಮ್ - 14

ಕೇಚಿದ್ವಧಾ ಕೃತಾಃ ಖಡ್ಗೈಃ ಸ್ಫುರಂತಃ ಪತಿತಾ ಭುವಿ ।
ವಾನರಾ ರಾಕ್ಷಸೈಃಶೂರೈಃ ಪಾರ್ಶ್ವತಶ್ಚ ವಿದಾರಿತಾಃ ॥

ಅನುವಾದ

ಎಷ್ಟೋ ವಾನರರು ಖಡ್ಗಾಘಾತದಿಂದ ತುಂಡಾಗಿ ನೆಲಕ್ಕೆ ಬಿದ್ದು ವಿಲವಿಲನೆ ಒದ್ದಾಡಿದರು. ಎಷ್ಟೋ ವೀರ ರಾಕ್ಷಸರು ವಾನರರ ಪಕ್ಕೆಗಳನ್ನು ಸೀಳಿಬಿಟ್ಟರು.॥14॥

ಮೂಲಮ್ - 15

ವಾನರೈಶ್ಚಾಪಿ ಸಂಕ್ರುದ್ಧೈ ರಾಕ್ಷಸೌಘಾಃ ಸಮಂತತಃ ।
ಪಾದಪೈರ್ಗಿರಿಶೃಂಗೈಶ್ಚ ಸಂಪಿಷ್ಟಾ ವಸುಧಾತಲೇ ॥

ಅನುವಾದ

ಹೀಗೆಯೇ ವಾನರರೂ ಕೂಡ ಅತ್ಯಂತ ಕುಪಿತರಾಗಿ ವೃಕ್ಷ, ಪರ್ವತ ಶಿಖಗಳಿಂದ ಎಲ್ಲೆಡೆ ರಾಕ್ಷಸರ ಗುಂಪು ಗುಂಪುಗಳನ್ನು ಜಜ್ಜಿಹಾಕಿದರು.॥15॥

ಮೂಲಮ್ - 16

ವಜ್ರಸ್ಪರ್ಶತಲೈರ್ಹಸ್ತೈರ್ಮುಷ್ಟಿಭಿಶ್ಚ ಹತಾ ಭೃಶಮ್ ।
ವಮನ್ಶೋಣಿತಮಾಸ್ಯೇಭ್ಯೋ ವಿಶೀರ್ಣದಶನೇಕ್ಷಣಾಃ ॥

ಅನುವಾದ

ವಾನರರ ವಜ್ರದಂತಹ ಅಂಗೈ ಏಟುಗಳ, ಮುಷ್ಟಿಗಳ ಪ್ರಹಾರದಿಂದ ರಕ್ತವನ್ನು ಕಾರುತ್ತಿದ್ದರು. ಅವರ ಹಲ್ಲು, ಕಣ್ಣುಗಳು ಹೊರ ಬಂದು ಚೆಲ್ಲಾಪಿಲ್ಲಿಯಾದವು.॥16॥

ಮೂಲಮ್ - 17

ಆರ್ತಸ್ವನಂ ಚ ಸ್ವನತಾಂ ಸಿಂಹನಾದಂ ಚ ನರ್ದತಾಮ್ ।
ಬಭೂವ ತುಮುಲಃ ಶಬ್ದೋ ಹರೀಣಾಂ ರಕ್ಷಸಾಮಪಿ ॥

ಅನುವಾದ

ಕೆಲವರು ಆರ್ತನಾದ ಮಾಡಿದರೆ, ಕೆಲವರು ಸಿಂಹದಂತೆ ಗರ್ಜಿಸುತ್ತಿದ್ದರು. ಹೀಗೆ ವಾನರರ ಮತ್ತು ರಾಕ್ಷಸರ ಭಯಂಕರ ಕೋಲಾಹಲ ಅಲ್ಲಿ ಎಲ್ಲೆಡೆ ಪ್ರತಿಧ್ವನಿಸಿತು.॥17॥

ಮೂಲಮ್ - 18

ವಾನರಾ ರಾಕ್ಷಸಾಃ ಕ್ರುದ್ಧಾ ವೀರಮಾರ್ಗಮನುವ್ರತಾಃ ।
ವಿವೃತ್ತವದನಾಃ ಕ್ರೂರಾಶ್ಚಕ್ರುಃ ಕರ್ಮಾಣ್ಯಭೀತವತ್ ॥

ಅನುವಾದ

ಕ್ರೋಧಗೊಂಡ ವಾನರರು ಮತ್ತು ರಾಕ್ಷಸರು ವೀರೋಚಿತ ಮಾರ್ಗಹಿಡಿದು ಯುದ್ಧದಲ್ಲಿ ಬೆನ್ನು ತೋರುತ್ತಿರಲಿಲ್ಲ. ಅವರು ಮುಖಗಳನ್ನು ಅರಳಿಸಿಕೊಂಡು ನಿರ್ಭಯವಾಗಿ ಕ್ರೂರವಾದ ಕರ್ಮ ಮಾಡುತ್ತಿದ್ದರು.॥18॥

ಮೂಲಮ್ - 19

ನರಾಂತಕಃ ಕುಂಭಹನುರ್ಮಹಾನಾದಃ ಸಮುನ್ನತಃ ।
ಏತೇ ಪ್ರಹಸ್ತಸಚಿವಾಃ ಸರ್ವೇ ಜಘ್ನುರ್ವನೌಕಸಃ ॥

ಅನುವಾದ

ನರಾಂತಕ, ಕುಂಭಹನು, ಮಹಾನಾದ ಮತ್ತು ಸಮುನ್ನತರೆಂಬ ಪ್ರಹಸ್ತನ ಸಚಿವರಾದ ಈ ನಾಲ್ವರು ವಾನರರನ್ನು ವಧಿಸತೊಡಗಿದರು.॥19॥

ಮೂಲಮ್ - 20

ತೇಷಾಂ ನಿಪತತಾಂ ಶೀಘ್ರಂ ನಿಘ್ನತಾಂ ಚಾಪಿ ವಾನರಾನ್ ।
ದ್ವಿವಿದೋ ಗಿರಿಶೃಂಗೇಣ ಜಘಾನೈಕಂ ನರಾಂತಕಮ್ ॥

ಅನುವಾದ

ಶೀಘ್ರವಾಗಿ ಆಕ್ರಮಣ ಮಾಡುತ್ತಾ ವಾನರರನ್ನು ಕೊಲ್ಲುತ್ತಿರುವ ಪ್ರಹಸ್ತನ ಸಚಿವನಾದ ನರಾಂತಕನನ್ನು ದ್ವಿವಿದನು ಒಂದು ಪರ್ವತವನ್ನು ಎತ್ತಿ ಹೊಡೆದು ಕೊಂದು ಹಾಕಿದನು.॥20॥

ಮೂಲಮ್ - 21

ದುರ್ಮುಖಃ ಪುನರುತ್ಥಾಯ ಕಪಿಃ ಸವಿಪುಲದ್ರುಮಮ್ ।
ರಾಕ್ಷಸಂ ಕ್ಷಿಪ್ರಹಸ್ತಂ ತು ಸಮುನ್ನತಮಪೋಥಯತ್ ॥

ಅನುವಾದ

ಮತ್ತೆ ದುರ್ಮುಖನು ಒಂದು ವಿಶಾಲ ವೃಕ್ಷವನ್ನೆತ್ತಿಕೊಂಡು, ಕ್ಷಿಪ್ರವಾದ ಕೈಚಳಕವುಳ್ಳ ರಾಕ್ಷಸ ಸಮುನ್ನತನನ್ನು ಕೊಂದುಹಾಕಿದನು.॥21॥

ಮೂಲಮ್ - 22

ಜಾಂಬವಾಂಸ್ತು ಸುಸಂಕ್ರುದ್ಧಃ ಪ್ರಗೃಹ್ಯ ಮಹತೀಂ ಶಿಲಾಮ್ ।
ಪಾತಯಾಮಾಸ ತೇಜಸ್ವೀ ಮಹಾನಾದಸ್ಯ ವಕ್ಷಸಿ ॥

ಅನುವಾದ

ಬಳಿಕ ಅತ್ಯಂತ ಕುಪಿತನಾದ ತೇಜಸ್ವೀ ಜಾಂಬವಂತನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡು ಅದನ್ನು ಮಹಾನಾದನ ಎದೆಗೆ ಪ್ರಹರಿಸಿದನು.॥22॥

ಮೂಲಮ್ - 23

ಅಥ ಕುಂಭಹನುಸ್ತತ್ರ ತಾರೇಣಾಸಾದ್ಯ ವೀರ್ಯವಾನ್ ।
ವೃಕ್ಷೇಣ ಮಹತಾ ಸದ್ಯಃ ಪ್ರಾಣಾನ್ ಸಂತ್ಯಾಜಯದ್ರಣೇ ॥

ಅನುವಾದ

ಉಳಿದ ಪರಾಕ್ರಮಿ ಮಹಾಹನವನ್ನು ತಾರನೆಂಬ ವಾನರನು ಎದುರಿಸಿದನು ಹಾಗೂ ಕೊನೆಗೆ ಒಂದು ವಿಶಾಲ ವೃಕ್ಷದ ಏಟಿನಿಂದ ಮಹಾಹನೂ ಪ್ರಾಣಗಳನ್ನು ಕಳೆದುಕೊಂಡನು.॥23॥

ಮೂಲಮ್ - 24

ಅಮೃಷ್ಯಮಾಣಸ್ತತ್ಕರ್ಮ ಪ್ರಹಸ್ತೋ ರಥಮಾಸ್ಥಿತಃ ।
ಚಕಾರ ಕದನಂ ಘೋರಂ ಧನುಷ್ಪಾಣಿರ್ವನೌಕಸಾಮ್ ॥

ಅನುವಾದ

ರಥದಲ್ಲಿ ಕುಳಿತ ಪ್ರಹಸ್ತನು ವಾನರರ ಈ ಅದ್ಭುತ ಪರಾಕ್ರಮವನ್ನು ಸಹಿಸಲಾರದೆ ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ವಾನರರ ಘೋರ ಸಂಹಾರ ಮಾಡತೊಡಗಿದನು.॥24॥

ಮೂಲಮ್ - 25

ಆವರ್ತ ಇವ ಸಂಜಜ್ಞೇ ಸೇನಯೋರುಭಯೋಸ್ತದಾ ।
ಕ್ಷುಭಿತಸ್ಯಾಪ್ರಮೇಯಸ್ಯ ಸಾಗರಸ್ಯೇವ ನಿಃಸ್ವನಃ ॥

ಅನುವಾದ

ಆಗ ಎರಡೂ ಸೈನ್ಯಗಳೂ ನೀರಿನ ಸುಳಿಯಂತೆ ಸುತ್ತುತ್ತಿದ್ದವು. ವಿಕ್ಷುಬ್ಧವಾದ ಮಹಾಸಾಗರದ ಗರ್ಜನೆಯಂತೆ ಅವರ ಗರ್ಜನೆ ಕೇಳಿಬರುತ್ತಿತ್ತು.॥25॥

ಮೂಲಮ್ - 26

ಮಹತಾ ಹಿ ಶರೌಘೇಣ ರಾಕ್ಷಸೋ ರಣದುರ್ಮದಃ ।
ಅರ್ದಯಾಮಾಸ ಸಂಕ್ರುದ್ಧೋ ವಾನರಾನ್ಪರಮಾಹವೇ ॥

ಅನುವಾದ

ಅತ್ಯಂತ ಕ್ರೋಧಗೊಂಡ ರಣದುರ್ಮದ ರಾಕ್ಷಸ ಪ್ರಹಸ್ತನು ಬಾಣಸಮೂಹ ಗಳಿಂದ ಆ ಮಹಾಸಮರದಲ್ಲಿ ವಾನರರನ್ನು ಪೀಡಿಸಲು ಪ್ರಾರಂಭಿಸಿದನು.॥26॥

ಮೂಲಮ್ - 27

ವಾನರಾಣಾಂ ಶರೀರೈಸ್ತು ರಾಕ್ಷಸಾನಾಂ ಚ ಮೇದಿನೀ ।
ಬಭೂವಾತಿಚಿತಾ ಘೋರೈಃ ಪರ್ವತೈರಿವ ಸಂವೃತಾ ॥

ಅನುವಾದ

ಪೃಥಿವಿಯಲ್ಲಿ ವಾನರರ ಮತ್ತು ರಾಕ್ಷಸರ ಹೆಣಗಳು ರಾಶಿ-ರಾಶಿಯಾಗಿ ಬಿದ್ದವು. ಅದರಿಂದ ಆಚ್ಛಾದಿತವಾದ ರಣಭೂಮಿಯು ಭಯಾನಕ ಪರ್ವತಗಳಿಂದ ಮುಚ್ಚಿದಂತೆ ಅನಿಸುತ್ತಿತ್ತು.॥27॥

ಮೂಲಮ್ - 28

ಸಾ ಮಹೀ ರುಧಿರೌಘೇಣ ಪ್ರಚ್ಛನ್ನಾ ಸಂಪ್ರಕಾಶತೇ ।
ಸಂಛನ್ನಾ ಮಾಧವೇ ಮಾಸಿ ಪಲಾಶೈರಿವ ಪುಷ್ಪಿತೈಃ ॥

ಅನುವಾದ

ರಕ್ತಪ್ರವಾಹದಿಂದ ಆವರಿಸಿದ ಆ ಯುದ್ಧಭೂಮಿಯು ವೈಶಾಖದಲ್ಲಿ ಹೂ ಅರಳಿದ ಮುತ್ತುಗದ ವೃಕ್ಷಗಳಿಂದ ತುಂಬಿದ ಕಾಡಿನಂತೆ ಸುಶೋಭಿತವಾಗಿತ್ತು.॥28॥

ಮೂಲಮ್ - 29

ಹತವೀರೌಘವಪ್ರಾಂ ತು ಭಗ್ನಾಯುಧ ಮಹಾದ್ರುಮಾಮ್ ।
ಶೋಣಿತೌಘ ಮಹಾತೋಯಾಂ ಯಮಸಾಗರಗಾಮಿನೀಮ್ ॥

ಮೂಲಮ್ - 30

ಯಕೃತ್ಪ್ಲೀಹಮಹಾಪಂಕಾಂ ವಿನಿಕೀರ್ಣಾಂತ್ರಶೈವಲಾಮ್ ।
ಭಿನ್ನಕಾಯಶಿರೋಮೀನಾಮಂಗಾವಯವಶಾದ್ವಲಾಮ್ ॥

ಮೂಲಮ್ - 31

ಗೃಧ್ರಹಂಸವರಾಕೀರ್ಣಾಂ ಕಂಕಸಾರಸಸೇವಿತಾಮ್ ।
ಮೇದಃಫೇನ ಸಮಾಕೀರ್ಣಾಮಾರ್ತಸ್ತನಿತನಿಃಸ್ವನಾಮ್ ॥

ಮೂಲಮ್ - 32

ತಾಂ ಕಾಪುರುಷದುಸ್ತಾರಾಂ ಯುದ್ಧಭೂಮಿಮಯೀಂ ನದೀಮ್ ।
ನದೀಮಿವ ಘನಾಪಾಯೇ ಹಂಸಸಾರಸಸೇವಿತಾಮ್ ॥

ಮೂಲಮ್ - 33

ರಾಕ್ಷಸಾಃ ಕಪಿಮುಖ್ಯಾಸ್ತೇ ತೇರುಸ್ತಾಂ ದುಸ್ತರಾಂ ನದೀಮ್ ।
ಯಥಾ ಪದ್ಮರಜೋಧ್ವಸ್ತಾಂ ನಲಿನೀಂ ಗಜಯೂಥಪಾಃ ॥

ಅನುವಾದ

ರಣಭೂಮಿಯಲ್ಲಿ ಒಂದು ದುಸ್ತರವಾದ ನದಿಯು ಹರಿಯುತ್ತಿತ್ತು. ವೀರರ ಹೆಣಗಳೇ ಅವರ ದಡಗಳಾಗಿದ್ದು, ರಕ್ತವೇ ನೀರಾಗಿತ್ತು. ಖಂಡಿತವಾದ ಅಸ್ತ್ರ-ಶಸ್ತ್ರಗಳೇ ಅದರ ತೀರದ ವಿಶಾಲ ವೃಕ್ಷಗಳು. ಅದು ಯಮಲೋಕರೂಪೀ ಸಮುದ್ರವನ್ನು ಸೇರುತ್ತಿತ್ತು. ಸೈನಿಕರ ಯಕೃತ್ (ಹೃದಯದ ಬಲಭಾಗ) ಮತ್ತು ಪ್ಲೀಹಗಳೇ (ಹೃದಯದ ಎಡಭಾಗ) ಅದರಲ್ಲಿನ ಮಹಾ ಕೆಸರಾಗಿತ್ತು. ಹೊರಬಿದ್ದ ಕರುಳ ಬಳ್ಳಿಗಳೇ ಪಾಚಿಯಾಗಿತ್ತು. ತುಂಡಾದ ರುಂಡ-ಮುಂಡಗಳೇ ಅಲ್ಲಿ ಮೀನುಗಳಂತೆ ಕಂಡುಬರುತ್ತಿದ್ದವು. ಶರೀರದ ಸಣ್ಣಪುಟ್ಟ ಅವಯವಗಳು ಮತ್ತು ಕೂದಲು ಹುಲ್ಲಿನಂತೆ ಭ್ರಮೆ ಉಂಟುಮಾಡುತ್ತಿತ್ತು. ಇಲ್ಲಿ ರಣ ಹದ್ದುಗಳೇ ಹಂಸಗಳಂತೆ ಕುಳಿತ್ತಿದ್ದವು. ಹದ್ದಿನ ರೂಪದ ಸಾರಸಗಳು ಅದನ್ನು ಸೇವಿಸುತ್ತಿದ್ದವು. ಮೇದಸ್ಸು ನೊರೆಯಾಗಿ ಎಲ್ಲೆಡೆ ಹರಡಿಕೊಂಡಿತ್ತು. ಪೀಡಿತರ ಆರ್ತನಾದವೇ ಆ ನದಿಯ ಕಲರವ ಧ್ವನಿಯಾಗಿತ್ತು. ಹೇಡಿಗಳಿಗೆ ಅದನ್ನು ದಾಟುವುದು ಅತ್ಯಂತ ಕಠಿಣವಾಗಿತ್ತು. ಈ ಯುದ್ಧರೂಪೀ ನದಿಯನ್ನು ಹರಿಸಿ ರಾಕ್ಷಸ ಮತ್ತು ಶ್ರೇಷ್ಠ ವಾನರರು ವರ್ಷಾಕಾಲದ ಕೊನೆಯಲ್ಲಿ ಹಂಸ, ಸಾರಸರಿಂದ ಸೇವಿತ ಸರಿತೆಯನ್ನು ಆನೆಗಳ ಹಿಂಡು ಕಮಲದ ಪರಾಗದಿಂದ ಆಚ್ಛಾದಿತವಾದ ಸರೋವರವನ್ನು ದಾಟುವಂತೆ ದಾಟಿಹೋಗುತ್ತಿದ್ದರು.॥29-33॥

ಮೂಲಮ್ - 34

ತತಃ ಸೃಜಂತಂ ಬಾಣೌಘಾನ್ ಪ್ರಹಸ್ತಂ ಸ್ಯಂದನೇ ಸ್ಥಿತಮ್ ।
ದದರ್ಶ ತರಸಾ ನೀಲೋ ವಿಧಮಂತಂ ಪ್ಲವಂಗಮಾನ್ ॥

ಅನುವಾದ

ಅನಂತರ ರಥದಲ್ಲಿ ಕುಳಿತ ಪ್ರಹಸ್ತನು ಬಾಣಸಮೂಹಗಳ ಮಳೆಗರೆದು ವೇಗವಾಗಿ ವಾನರರನ್ನು ಸಂಹರಿಸುವುದನ್ನು ನೀಲನು ನೋಡಿದನು.॥34॥

ಮೂಲಮ್ - 35½

ಉದ್ಧೂತ ಇವ ವಾಯುಃ ಖೇ ಮಹದಭ್ರಬಲಂ ಬಲಾತ್ ।
ಸಮೀಕ್ಷ್ಯಾಭಿದ್ರುತಂ ಯುದ್ಧೇ ಪ್ರಹಸ್ತೋ ವಾಹಿನೀಪತಿಃ ।
ರಥೇನಾದಿತ್ಯವರ್ಣೇನ ನೀಲಮೇವಾಭಿದುದ್ರುವೇ ॥

ಅನುವಾದ

ಪ್ರಚಂಡ ವಾಯುವು ಆಕಾಶದಲ್ಲಿ ಮಹಾಮೇಘಮಂಡಲವನ್ನು ಭಿನ್ನ ಭಿನ್ನಮಾಡಿ ಹಾರಿಸಿಬಿಡುವಂತೆಯೇ ನೀಲನು ಬಲವಂತವಾಗಿ ರಾಕ್ಷಸರ ಸೈನ್ಯವನ್ನು ಸಂಹರಿಸತೊಡಗಿದನು. ಇದರಿಂದ ಯುದ್ಧರಂಗದಲ್ಲಿ ರಾಕ್ಷಸರ ಸೈನ್ಯವು ಪಲಾಯನ ಮಾಡಿತು. ಸೇನಾಪತಿ ಪ್ರಹಸ್ತನು ತನ್ನ ಸೈನ್ಯದ ಇಂತಹ ದುರವಸ್ಥೆಯನ್ನು ನೋಡಿ, ಅವನು ಸೂರ್ಯನಂತಹ ತೇಜಸ್ವೀ ರಥದಿಂದ ನೀಲನ ಮೇಲೆ ಆಕ್ರಮಣ ಮಾಡಿದನು.॥35½॥

ಮೂಲಮ್ - 36½

ಸ ಧನುರ್ಧನ್ವಿನಾಂ ಶ್ರೇಷ್ಠೋ ವಿಕೃಷ್ಯ ಪರಮಾಹವೇ ॥
ನೀಲಾಯ ವ್ಯಸೃಜದ್ಬಾಣಾನ್ ಪ್ರಹಸ್ತೋ ವಾಹಿನೀಪತಿಃ ।

ಅನುವಾದ

ಧನುರ್ಧಾರಿಗಳಲ್ಲಿ ಶ್ರೇಷ್ಠನಾದ, ರಾಕ್ಷಸರ ಸೇನಾಧ್ಯಕ್ಷ ಪ್ರಹಸ್ತನು ಆ ಮಹಾಸಮರದಲ್ಲಿ ಧನುಸ್ಸನ್ನು ಸೆಳೆದು ನೀಲನ ಮೇಲೆ ಬಾಣಗಳ ಮಳೆಗರೆದನು.॥36½॥

ಮೂಲಮ್ - 37½

ತೇ ಪ್ರಾಪ್ಯ ವಿಶಿಖಾ ನೀಲಂ ವಿನಿರ್ಭಿದ್ಯ ಸಮಾಹಿತಾಃ ॥
ಮಹೀಂ ಜಗ್ಮುರ್ಮಹಾವೇಗಾ ರೋಷಿತಾ ಇವ ಪನ್ನಗಾಃ ।

ಅನುವಾದ

ರೋಷಗೊಂಡ ಸರ್ಪಗಳಂತೆ ಆ ಮಹಾ ವೇಗಶಾಲಿ ಬಾಣಗಳು ನೀಲನವರೆಗೆ ತಲುಪಿ ಅವನನ್ನು ನೋಯಿಸಿ ನೆಲಕ್ಕೆ ಬಿದ್ದುಹೋದವು.॥37½॥

ಮೂಲಮ್ - 38

ನೀಲಃ ಶರೈರಭಿಹತೋ ನಿಶಿತೈರ್ಜ್ವಲನೋಪಮೈಃ ॥

ಮೂಲಮ್ - 39

ಸ ತಂ ಪರಮದುರ್ಧರ್ಷಮಾಪತಂತಂ ಮಹಾಕಪಿಃ ।
ಪ್ರಹಸ್ತಂ ತಾಡಯಾಮಾಸ ವೃಕ್ಷಮುತ್ಪಾಟ್ಯ ವೀರ್ಯವಾನ್ ॥

ಅನುವಾದ

ಪ್ರಹಸ್ತನ ಹರಿತವಾದ ಬಾಣಗಳು ಪ್ರಜ್ವಲಿತ ಅಗ್ನಿಯಂತೆ ಅನಿಸುತ್ತಿದ್ದವು. ಅವುಗಳ ಏಟಿನಿಂದ ನೀಲನು ಗಾಯಗೊಂಡನು. ಹೀಗೆ ಆ ಪರಮ ದುರ್ಜಯ ರಾಕ್ಷಸ ಪ್ರಹಸ್ತನು ತನ್ನ ಮೇಲೆ ಆಕ್ರಮಿಸಿದನ್ನು ನೋಡಿ, ಬಲವಿಕ್ರಮಶಾಲೀ ಮಹಾಕಪಿ ನೀಲನು ಒಂದು ಮರವನ್ನೆತ್ತಿಕೊಂಡು ಅದರಿಂದ ಪ್ರಹಸ್ತನಿಗೆ ಹೊಡೆದನು.॥38-39॥

ಮೂಲಮ್ - 40

ಸ ತೇನಾಭಿಹತಃ ಕ್ರುದ್ಧೋ ನರ್ದನ್ರಾಕ್ಷಸಪುಂಗವಃ ।
ವವರ್ಷ ಶರವರ್ಷಾಣಿ ಪ್ಲವಂಗಾನಾಂ ಚಮೂಪತೌ ॥

ಅನುವಾದ

ನೀಲನ ಏಟು ತಿಂದು ಕುಪಿತನಾದ ರಾಕ್ಷಸ ಶ್ರೇಷ್ಠ ಪ್ರಹಸ್ತನು ಜೋರಾಗಿ ಗರ್ಜಿಸುತ್ತಾ, ಆ ವಾನರ ಸೇನಾಪತಿಯ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು.॥40॥

ಮೂಲಮ್ - 41

ತಸ್ಯ ಬಾಣಗಣಾನೇವ ರಾಕ್ಷಸಸ್ಯ ದುರಾತ್ಮನಃ ।
ಅಪಾರಯನ್ ವಾರಯಿತುಂ ಪ್ರತ್ಯಗೃಹ್ಣಾನ್ನಿಮೀಲಿತಃ ।
ಯಥೈವ ಗೋವೃಷೋ ವರ್ಷಂ ಶಾರದಂ ಶೀಘ್ರಮಾಗತಮ್ ॥

ಮೂಲಮ್ - 42

ಏವಮೇವ ಪ್ರಹಸ್ತಸ್ಯ ಶರವರ್ಷಾನ್ ದುರಾಸದಾನ್ ।
ನಿಮೀಲಿತಾಕ್ಷಃ ಸಹಸಾ ನೀಲಃ ಸೇಹೇ ಸುದಾಸದಾನ್ ॥

ಅನುವಾದ

ದುರಾತ್ಮನಾದ ಪ್ರಹಸ್ತನ ಶರವರ್ಷವನ್ನು ತಪ್ಪಿಸಿಕೊಳ್ಳಲಾಗದೆ ನೀಲನು ಕಣ್ಣುಗಳನ್ನು ಮುಚ್ಚಿ ಆ ಬಾಣಗಳೆಲ್ಲವನ್ನು ಶರೀರದಲ್ಲಿ ಸಹಿಸಿಕೊಂಡನು. ಶರದ್ಋತುವಿನಲ್ಲಿ ಆಕಸ್ಮಿಕವಾಗಿ ಬೀಳುವ ಮಳೆಯನ್ನು ಹೋರಿಯು ಸುಮ್ಮನೆ ನಿಂತು ಸಹಿಸುವಂತೆಯೇ ಪ್ರಹಸ್ತನ ಆ ದುಃಸಹ ಬಾಣಗಳ ಮಳೆಯನ್ನು ನೀಲನು ಕಣ್ಣುಗಳನ್ನು ಮುಚ್ಚಿಕೊಂಡು ಸಹಿಸುತ್ತಿದ್ದನು.॥41-42॥

ಮೂಲಮ್ - 43

ರೋಷಿತಃ ಶರವರ್ಷೇಣ ಸಾಲೇನ ಮಹತಾ ಮಹಾನ್ ।
ಪ್ರಜಘಾನ ಹಯಾನ್ನೀಲಃ ಪ್ರಹಸ್ತಸ್ಯ ಮಹಾಬಲಃ ॥

ಅನುವಾದ

ಪ್ರಹಸ್ತನ ಬಾಣವರ್ಷದಿಂದ ಕುಪಿತನಾದ ಮಹಾಬಲಿ ಕಪಿವೀರನು ಒಂದು ವಿಶಾಲವಾದ ತಾಳೆಮರದಿಂದ ಅವನ ಕುದುರೆಗಳನ್ನು ಕೊಂದುಹಾಕಿದನು.॥43॥

ಮೂಲಮ್ - 44

ತತೋ ರೋಷಪರೀತಾತ್ಮಾ ಧನುಸ್ತಸ್ಯ ದುರಾತ್ಮನಃ ।
ಬಭಂಜ ತರಸಾ ನೀಲೋ ನನಾದ ಚ ಪುನಃ ಪುನಃ ॥

ಅನುವಾದ

ಬಳಿಕ ನೀಲನು ರೋಷಗೊಂಡು ಆ ದುರಾತ್ಮನ ಧನುಸ್ಸನ್ನು ವೇಗವಾಗಿ ತುಂಡರಿಸಿ ಪದೇ ಪದೇ ಗರ್ಜಿಸತೊಡಗಿದನು.॥44॥

ಮೂಲಮ್ - 45

ವಿಧನುಃ ಸ ಕೃತಸ್ತೇನ ಪ್ರಹಸ್ತೋ ವಾಹಿನೀಪತಿಃ ।
ಪ್ರಗೃಹ್ಯ ಮುಸಲಂ ಘೋರಂ ಸ್ಯಂದನಾದವಪುಪ್ಲುವೇ ॥

ಅನುವಾದ

ನೀಲನಿಂದ ಧನುಷ್ಯರಹಿತನಾದ ಸೇನಾಪತಿ ಪ್ರಹಸ್ತನು ಒಂದು ಭಯಾನಕ ಒನಕೆಯನ್ನು ಕೈಯಲ್ಲೆತ್ತಿಕೊಂಡು ರಥದಿಂದ ಕೆಳಕ್ಕೆ ಹಾರಿದನು.॥45॥

ಮೂಲಮ್ - 46

ತಾವುಭೌ ವಾಹಿನೀಮುಖ್ಯೌ ಜಾತವೈರೌ ತರಸ್ವಿನೌ ।
ಸ್ಥಿತೌ ಕ್ಷತಜಸಿಕ್ತಾಂಗೌ ಪ್ರಭಿನ್ನಾವಿವ ಕುಂಜರೌ ॥

ಅನುವಾದ

ಅವರಿಬ್ಬರೂ ವೀರರು ತಮ್ಮ ತಮ್ಮ ಸೈನ್ಯದ ಪ್ರಮುಖರಾಗಿದ್ದರು. ಇಬ್ಬರೂ ಪರಸ್ಪರ ವೈರಿಗಳಾಗಿದ್ದು, ವೇಗಶಾಲಿಗಳಾಗಿದ್ದರು. ಅವರು ಮದೋದಕ ವನ್ನು ಹರಿಸುವ ಎರಡು ಗಜರಾಜರಂತೆ ರಕ್ತದಿಂದ ತೊಯ್ದು ಹೋಗಿದ್ದರು.॥46॥

ಮೂಲಮ್ - 47

ಉಲ್ಲಿಖಂತೌ ಸುತೀಕ್ಷ್ಣಾಭಿರ್ದ್ರಂಷ್ಟ್ರಾಭಿರಿತರೇತರಮ್ ।
ಸಿಂಹಶಾರ್ದೂಲ ಸದೃಶೌ ಸಿಂಹಶಾರ್ದೂಲಚೇಷ್ಟಿತೌ ॥

ಅನುವಾದ

ಇಬ್ಬರೂ ತಮ್ಮ ಕೊರೆದಾಡೆಗಳಿಂದ ಕಟಕಟನೆ ಕಡಿಯುತ್ತಾ ಪರಸ್ಪರ ಗಾಯಗೊಳಿಸುತ್ತಿದ್ದರು. ಅವರಿಬ್ಬರೂ ಸಿಂಹ ಮತ್ತು ಹುಲಿಯಂತೆ ಶಕ್ತಿಶಾಲಿಗಳಾಗಿದ್ದು ವಿಜಯಕ್ಕಾಗಿ ಪ್ರಯತ್ನಿಸುತ್ತಿದ್ದರು.॥47॥

ಮೂಲಮ್ - 48

ವಿಕ್ರಾಂತ ವಿಜಯೌ ವೀರೌ ಸಮರೇಷ್ವ ನಿವರ್ತಿನೌ ।
ಕಾಂಕ್ಷಮಾಣೌ ಯಶಃ ಪ್ರಾಪ್ತುಂ ವೃತ್ರವಾಸವಯೋರಿವ ॥

ಅನುವಾದ

ಇಬ್ಬರೂ ವೀರರೂ ಪರಾಕ್ರಮಿಗಳೂ, ಯುದ್ಧದಲ್ಲಿ ಎಂದೂ ಬೆನ್ನು ತೋರದವರೂ ಹಾಗೂ ವೃತ್ರಾಸುರ ಹಾಗೂ ಇಂದ್ರನಂತೆ ಯುದ್ಧದಲ್ಲಿ ಯಶಗಳಿಸುವ ಅಭಿಲಾಷೆಯಿಂದ ಇದ್ದರು.॥48॥

ಮೂಲಮ್ - 49

ಆಜಘಾನ ತದಾ ನೀಲಂ ಲಲಾಟೇ ಮುಸಲೇನ ಸಃ ।
ಪ್ರಹಸ್ತಃ ಪರಮಾಯತ್ತಸ್ತತಃ ಸುಸ್ರಾವ ಶೋಣಿತಮ್ ॥

ಅನುವಾದ

ಅತ್ಯಂತ ಪ್ರಯತ್ನಶೀಲ ಪ್ರಹಸ್ತನು ನೀಲನ ಹಣೆಗೆ ಮುಸಲಾಯುಧದಿಂದ ಆಘಾತಮಾಡಿದನು. ಇದರಿಂದ ನೀಲನ ಹಣೆಯಿಂದ ರಕ್ತದ ಕೋಡಿಯೇ ಹರಿಯಿತು.॥49॥

ಮೂಲಮ್ - 50

ತತಃ ಶೋಣಿತದಿಗ್ಧಾಂಗಃ ಪ್ರಗೃಹ್ಯ ಚ ಮಹಾತರುಮ್ ।
ಪ್ರಹಸ್ತ ಸ್ಯೋರಸಿ ಕ್ರುದ್ಧೋ ವಿಸಸರ್ಜ ಮಹಾಕಪಿಃ ॥

ಅನುವಾದ

ಅವನ ಸರ್ವಾಂಗವೂ ರಕ್ತದಿಂದ ತೊಯ್ದುಹೋಯಿತು. ಆಗ ಕ್ರೋಧಗೊಂಡ ಮಹಾಕಪಿ ನೀಲನು ಒಂದು ವಿಶಾಲ ವೃಕ್ಷವನ್ನೆತ್ತಿ ಪ್ರಹಸ್ತನ ಎದೆಗೆ ಪ್ರಹರಿಸಿದನು.॥50॥

ಮೂಲಮ್ - 51

ತಮಚಿಂತ್ಯಪ್ರಹಾರಂ ಸ ಪ್ರಗೃಹ್ಯ ಮುಸಲಂ ಮಹತ್ ।
ಅಭಿದುದ್ರಾವ ಬಲಿನಂ ಬಲಾನ್ನೀಲಂ ಪ್ಲವಂಗಮಮ್ ॥

ಅನುವಾದ

ಆ ಪ್ರಹಾರದ ಪರಿವೆಯೇ ಮಾಡದೆ ಪ್ರಹಸ್ತನು ಮಹಾ ಮುಸಲಾಯುಧವನ್ನೆತ್ತಿಕೊಂಡು ಬಲವಂತ ವಾನರ ನೀಲನ ಕಡೆಗೆ ವೇಗವಾಗಿ ಓಡಿದನು.॥51॥

ಮೂಲಮ್ - 52

ತಮುಗ್ರವೇಗಂ ಸಂರಬ್ಧಮಾಪತಂತಂ ಮಹಾಕಪಿಃ ।
ತತಃ ಸಂಪ್ರೇಕ್ಷ್ಯ ಜಗ್ರಾಹ ಮಹಾವೇಗೋ ಮಹಾಶಿಲಾಮ್ ॥

ಅನುವಾದ

ಆ ಭಯಂಕರ ರೋಷ ಗೊಂಡು ವೇಗಶಾಲೀ ರಾಕ್ಷಸನು ಆಕ್ರಮಣ ಮಾಡುವುದನ್ನು ನೋಡಿ, ಮಹಾವೇಗಶಾಲೀ ಮಹಾಕಪಿ ನೀಲನು ಒಂದು ದೊಡ್ಡ ಶಿಲೆಯನ್ನು ಎತ್ತಿಕೊಂಡನು.॥52॥

ಮೂಲಮ್ - 53

ತಸ್ಯ ಯುದ್ಧಾಭಿಕಾಮಸ್ಯ ಮೃಧೇ ಮುಸಲಯೋಧಿನಃ ।
ಪ್ರಹಸ್ತಸ್ಯ ಶಿಲಾಂ ನೀಲೋ ಮೂರ್ಧ್ನಿ ತೂರ್ಣಮಪಾತಯತ್ ॥

ಅನುವಾದ

ಆ ಶಿಲೆಯನ್ನು ನೀಲನು ರಣಭೂಮಿಯಲ್ಲಿ ಸಂಗ್ರಾಮದ ಇಚ್ಛೆಯುಳ್ಳ ಮುಸಲಯೋಧಿ ನಿಶಾಚರ ಪ್ರಹಸ್ತನ ತಲೆಯ ಮೇಲೆ ಬೇಗನೆ ಅಪ್ಪಳಿಸಿದನು.॥53॥

ಮೂಲಮ್ - 54

ನೀಲೇನ ಕಪಿಮುಖ್ಯೇನ ವಿಮುಕ್ತಾ ಮಹತೀ ಶಿಲಾ ।
ಬಿಭೇದ ಬಹುಧಾ ಘೋರಾ ಪ್ರಹಸ್ತಸ್ಯ ಶಿರಸ್ತದಾ ॥

ಅನುವಾದ

ಕಪಿಶ್ರೇಷ್ಠ ನೀಲನು ಪ್ರಯೋಗಿಸಿದ ಆ ಭಯಂಕರ ವಿಶಾಲ ಶಿಲೆಯು ಪ್ರಹಸ್ತನ ತಲೆಯನ್ನು ನುಚ್ಚುನೂರು ಮಾಡಿತು.॥54॥

ಮೂಲಮ್ - 55

ಸ ಗತಾಸುರ್ಗತಶ್ರೀಕೋ ಗತಸತ್ತ್ವೋ ಗತೇಂದ್ರಿಯಃ ।
ಪಪಾತ ಸಹಸಾ ಭೂಮೌ ಛಿನ್ನಮೂಲ ಇವ ದ್ರುಮಃ ॥

ಅನುವಾದ

ಅವನ ಪ್ರಾಣಪಕ್ಷಿ ಹಾರಿಹೋಯಿತು. ಅವನ ಶಾಂತಿ, ಬಲ ಎಲ್ಲ ಇಂದ್ರಿಯಗಳು ನಾಶವಾದವು. ಆ ರಾಕ್ಷಸನು ಬೇರು ಕತ್ತರಿಸಿದ ಮರದಂತೆ ಆಗಲೇ ಧರೆಗುರುಳಿದನು.॥55॥

ಮೂಲಮ್ - 56

ವಿಭಿನ್ನ ಶಿರಸಸ್ತಸ್ಯ ಬಹು ಸುಸ್ರಾವ ಶೋಣಿತಮ್ ।
ಶರೀರಾದಪಿ ಸುಸ್ರಾವ ಗಿರೇಃ ಪ್ರಸ್ರವಣಂ ಯಥಾ ॥

ಅನುವಾದ

ಅವನ ಪುಡಿಯಾದ ಮಸ್ತಕದಿಂದ, ಶರೀರದಿಂದ, ಪರ್ವತದಿಂದ ಹರಿಯುವ ನೀರಿನ ಝರಿಯಂತೆ ರಕ್ತ ಹರಿಯತೊಡಗಿತು.॥5.॥

ಮೂಲಮ್ - 57

ಹತೇ ಪ್ರಹಸ್ತೇ ನೀಲೇನ ತದಕಂಪ್ಯಂ ಮಹಾಬಲಮ್ ।
ರಾಕ್ಷಸಾನಾಮಹೃಷ್ಟಾನಾಂ ಲಂಕಾಮಭಿಜಗಾಮ ಹ ॥

ಅನುವಾದ

ನೀಲನಿಂದ ಪ್ರಹಸ್ತನು ಹತನಾದಾಗ ದುಃಖಿತರಾದ ರಾಕ್ಷಸರ ಮಹಾಸೈನ್ಯವು ಲಂಕೆಗೆ ಹಿಂದಿರುಗಿತು.॥57॥

ಮೂಲಮ್ - 58

ನ ಶೇಕುಃ ಸಮವಸ್ಥಾತುಂ ನಿಹತೇ ವಾಹಿನೀಪತೌ ।
ಸೇತುಬಂಧಂ ಸಮಾಸಾದ್ಯ ವಿಶೀರ್ಣಂ ಸಲಿಲಂ ಯಥಾ ॥

ಅನುವಾದ

ಸೇನಾ ಪತಿಯು ಸತ್ತು ಹೋದಾಗ ಆಣೆಕಟ್ಟೆಯು ಒಡೆದುಹೋದಾಗ ನದಿಯ ನೀರನ್ನು ತಡೆಯಲಾರದಂತೆ, ಆ ಸೈನ್ಯವು ನಿಲ್ಲಲಾರದೆ ಓಡಿತು.॥58॥

ಮೂಲಮ್ - 59

ಹತೇ ತಸ್ಮಿಂಶ್ಚಮೂಮುಖ್ಯೇ ರಾಕ್ಷಸಾಸ್ತೇ ನಿರುದ್ಯಮಾಃ ।
ರಕ್ಷಃ ಪತಿಗೃಹಂ ಗತ್ವಾ ಧ್ಯಾನಮೂಕತ್ವ ಮಾಗತಾಃ ॥

ಮೂಲಮ್ - 60

ಪ್ರಾಪ್ತಾಃ ಶೋಕಾರ್ಣವಂ ತೀವ್ರಂ ವಿಸಂಜ್ಞಾ ಇವ ತೇಽಭವನ್ ॥

ಅನುವಾದ

ಸೇನಾನಾಯಕನು ಮರಣ ಹೊಂದಿದಾಗ ರಾಕ್ಷಸರೆಲ್ಲರೂ ಯುದ್ಧೋತ್ಸಾಹವನ್ನು ಕಳೆದುಕೊಂಡು, ರಾಕ್ಷಸೇಂದ್ರ ರಾವಣನ ಭವನಕ್ಕೆ ಹೋಗಿ ಚಿಂತೆಯಿಂದಾಗಿ ಸುಮ್ಮನೆ ನಿಂತುಕೊಂಡಿದ್ದರು. ತೀವ್ರ ಶೋಕಸಮುದ್ರದಲ್ಲಿ ಮುಳುಗಿದ್ದರಿಂದ ಅವರೆಲ್ಲರೂ ಸತ್ತಂತೇ ಆಗಿದ್ದರು.॥59-60॥

ಮೂಲಮ್ - 61

ತತಸ್ತು ನೀಲೋ ವಿಜಯೀ ಮಹಾಬಲಃ
ಪ್ರಶಸ್ಯಮಾನಃ ಸುಕೃತೇನ ಕರ್ಮಣಾ ।
ಸಮೇತ್ಯ ರಾಮೇಣ ಸಲಕ್ಷ್ಮಣೇನ
ಪ್ರಹೃಷ್ಟರೂಪಸ್ತು ಬಭೂವ ಯೂಥಪಃ ॥

ಅನುವಾದ

ಅನಂತರ ವಿಜಯೀ ಸೇನಾಪತಿ ಮಹಾಬಲಿ ನೀಲನು ತನ್ನ ಮಹಾಕರ್ಮದಿಂದ ಪ್ರಶಂಸಿತನಾಗಿ ಶ್ರೀರಾಮ ಮತ್ತು ಲಕ್ಷ್ಮಣರ ಬಳಿಗೆ ಬಂದು, ಭಾರಿ ಹರ್ಷಪಟ್ಟನು.॥61॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೆಂಟನೆಯ ಸರ್ಗ ಪೂರ್ಣವಾಯಿತು.॥58॥