वाचनम्
ಭಾಗಸೂಚನಾ
ರಾವಣನ ಆಜ್ಞೆಯಂತೆ ಪ್ರಹಸ್ತನು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿದ್ದು
ಮೂಲಮ್ - 1
ಅಕಂಪನವಧಂ ಶ್ರುತ್ವಾ ಕ್ರುದ್ಧೋ ವೈ ರಾಕ್ಷಸೇಶ್ವರಃ ।
ಕಿಂಚಿದ್ದೀನಮುಖಶ್ಚಾಪಿ ಸಚಿವಾಂಸ್ತಾನುದೈಕ್ಷತ ॥
ಅನುವಾದ
ಅಕಂಪನ ವಧೆಯ ವಾರ್ತೆಯನ್ನು ಕೇಳಿದ ರಾವಣನು ಕ್ರುದ್ಧನಾದನು. ಅವನ ಮುಖದಲ್ಲಿ ಸ್ವಲ್ಪ ದೀನತೆಯೂ ಆವರಿಸಿತು. ಅವನು ಮಂತ್ರಿಗಳ ಕಡೆಗೆ ನೋಡಿದನು.॥1॥
ಮೂಲಮ್ - 2
ಸ ತು ಧ್ಯಾತ್ವಾ ಮುಹೂರ್ತಂ ತು ಮಂತ್ರಿಭಿಃ ಸಂವಿಚಾರ್ಯ ಚ ।
ತತಸ್ತು ರಾವಣಃ ಪೂರ್ವದಿವಸೇ ರಾಕ್ಷಸಾಧಿಪಃ ।
ಪುರೀಂ ಪರಿಯಯೌ ಲಂಕಾಂ ಸರ್ವಾನ್ಗುಲ್ಮಾನವೇಕ್ಷಿತುಮ್ ॥
ಅನುವಾದ
ಎರಡು ಗಳಿಗೆ ಏನೋ ಯೋಚಿಸುತ್ತಾ ಮತ್ತೆ ರಾವಣನು ಮಂತ್ರಿಗಳೊಡನೆ ಮಾಡಿದ ಬಳಿಕ ಬೆಳಗಿನ ಸಮಯದಲ್ಲಿ ಲಂಕೆಯ ಎಲ್ಲ ಸೇನಾ ತುಕುಡಿಗಳನ್ನು ವೀಕ್ಷಿಸಲು ಹೊರಟನು.॥2॥
ಮೂಲಮ್ - 3
ತಾಂ ರಾಕ್ಷಸಗಣೈರ್ಗುಪ್ತಾಂ ಗುಲ್ಮೈರ್ಬಹುಭಿರಾವೃತಾಮ್ ।
ದದರ್ಶ ನಗರೀಂ ರಾಜಾ ಪತಾಕಾಧ್ವಜಮಾಲಿನೀಮ್ ॥
ಅನುವಾದ
ರಾಕ್ಷಸರಿಂದ ಸುರಕ್ಷಿತವಾದ, ಅನೇಕ ಸೈನ್ಯ ಶಿಬಿರಗಳಿಂದ ಕೂಡಿದ, ಧ್ವಜ-ಪತಾಕೆಗಳಿಂದ ಸುಶೋಭಿತವಾದ ಲಂಕಾನಗರಿಯನ್ನು ರಾವಣನು ಚೆನ್ನಾಗಿ ನೋಡಿದನು.॥3॥
ಮೂಲಮ್ - 4
ರುದ್ಧಾಂ ತು ನಗರೀಂ ದೃಷ್ಟ್ವಾ ರಾವಣೋ ರಾಕ್ಷಸೇಶ್ವರಃ ।
ಉವಾಚಾತ್ಮಹಿತಂ ಕಾಲೇ ಪ್ರಹಸ್ತಂ ಯುದ್ಧ ಕೋವಿದಮ್ ॥
ಅನುವಾದ
ಲಂಕೆಯು ಸುತ್ತಲಿಂದ ಶತ್ರುಗಳಿಂದ ಆಕ್ರಮಿಸಲ್ಪಟ್ಟಿತ್ತು. ಇದನ್ನು ನೋಡಿ ರಾಕ್ಷಸೇಶ್ವರ ರಾವಣನು ತನ್ನ ಹಿತೈಷಿ ಯುದ್ಧ ಕಲಾಕೋವಿದ ಪ್ರಹಸ್ತನಲ್ಲಿ ಸಮಯೋಚಿತ ಮಾತನ್ನು ಹೇಳಿದನು.॥4॥
ಮೂಲಮ್ - 5
ಪುರಸ್ಯೋಪನಿವಿಷ್ಟಸ್ಯ ಸಹಸಾ ಪೀಡಿತಸ್ಯ ಹ ।
ನಾನ್ಯಯುದ್ಧಾತ್ ಪ್ರಪಶ್ಯಾಮಿ ಮೋಕ್ಷಂ ಯುದ್ಧವಿಶಾರದ ॥
ಅನುವಾದ
ಯುದ್ಧವಿಶಾರದ ವೀರನೇ! ನಗರದ ಹತ್ತಿರದಲ್ಲೆ ಶತ್ರುಗಳು ಬೀಡುಬಿಟ್ಟಿದ್ದಾರೆ. ಇವರಿಂದ ಇಡೀ ನಗರ ವ್ಯಥಿತವಾಗಿದೆ. ಬೇರೆ ಯಾರೂ ಯುದ್ಧಮಾಡಿದರೂ ಇದರಿಂದ ಬಿಡುಗಡೆಯಾಗುವುದನ್ನು ನಾನು ನೋಡುವುದಿಲ್ಲ.॥5॥
ಮೂಲಮ್ - 6
ಅಹಂ ವಾ ಕುಂಭಕರ್ಣೋ ವಾ ತ್ವಂ ವಾ ಸೇನಾಪತಿರ್ಮಮ ।
ಇಂದ್ರಜಿದ್ ವಾ ನಿಕುಂಭೋ ವಾ ವಹೇಯುರ್ಭಾರಮೀದೃಶಮ್ ॥
ಅನುವಾದ
ಈಗ ಇಂತಹ ಯುದ್ಧದ ಹೊಣೆಯನ್ನು ನಾನು, ಕುಂಭಕರ್ಣ, ಸೇನಾಪತಿಯಾದ ನೀನು, ಮಗ ಇಂದ್ರಜಿತು ಅಥವಾ ನಿಕುಂಭನೇ ಹೊರಬಲ್ಲರು.॥6॥
ಮೂಲಮ್ - 7
ಸ ತ್ವಂ ಬಲಮತಃ ಶೀಘ್ರಮಾದಾಯ ಪರಿಗೃಹ್ಯ ಚ ।
ವಿಜಯಾಯಾಭಿನಿರ್ಯಾಹಿ ಯತ್ರ ಸರ್ವೇ ವನೌಕಸಃ ॥
ಅನುವಾದ
ಆದ್ದರಿಂದ ನೀನು ಶೀಘ್ರವಾಗಿ ಸೈನ್ಯದೊಂದಿಗೆ ವಿಜಯಕ್ಕಾಗಿ ಹೊರಟು, ಎಲ್ಲ ವಾನರರು ಇರುವಲ್ಲಿಗೆ ಹೋಗು.॥7॥
ಮೂಲಮ್ - 8
ನಿರ್ಯಾಣಾದೇವ ತೂರ್ಣ ಚಂ ಚಲಿತಾ ಹರಿವಾಹಿನೀ ।
ನರ್ದತಾಂ ರಾಕ್ಷಸೇಂದ್ರಾಣಾಂ ಶ್ರುತ್ವಾ ನಾದಂ ದ್ರವಿಷ್ಯತಿ ॥
ಅನುವಾದ
ನೀನಿಲ್ಲಿಂದ ಹೊರಡುತ್ತಲೇ ಎಲ್ಲ ವಾನರ ಸೈನ್ಯವು ವಿಚಲಿತವಾಗುವುದು. ಗರ್ಜಿಸುತ್ತಿರುವ ರಾಕ್ಷಸ ಶ್ರೇಷ್ಠರ ಸಿಂಹನಾದ ಕೇಳಿ ಓಡಿ ಹೋಗುವುದು.॥8॥
ಮೂಲಮ್ - 9
ಚಪಲಾ ಹ್ಯವಿನೀತಾಶ್ಚ ಚಲಚಿತ್ತಾಶ್ಚ ವಾನರಾಃ ।
ನ ಸಹಿಷ್ಯಂತಿ ತೇ ನಾದಂ ಸಿಂಹನಾದಮಿವ ದ್ವಿಪಾಃ ॥
ಅನುವಾದ
ವಾನರರು ಬಹಳ ಚಂಚಲರೂ, ನೀತಿನಿಯಮ ತಿಳಿಯದವರು, ಭೀರುಗಳಾಗಿರುವರು. ಸಿಂಹ ಗರ್ಜನೆಯನ್ನು ಆನೆಯು ಸಹಿಸದಂತೆಯೇ ವಾನರರು ನಿಮ್ಮ ಗರ್ಜನೆಯನ್ನು ಸಹಿಸಲಾರರು.॥9॥
ಮೂಲಮ್ - 10
ವಿದ್ರುತೇ ಚ ಬಲೇ ತಸ್ಮಿನ್ರಾಮಃ ಸೌಮಿತ್ರಿಣಾ ಸಹ ।
ಅವಶಸ್ತೇ ನಿರಾಲಂಬಃ ಪ್ರಹಸ್ತ ವಶಮೇಷ್ಯತಿ ॥
ಅನುವಾದ
ಪ್ರಹಸ್ತನೇ! ವಾನರ ಸೈನ್ಯವು ಓಡಿಹೋದಾಗ ಯಾವುದೇ ಆಸರೆ ಇಲ್ಲದೆ ಲಕ್ಷ್ಮಣಸಹಿತ ರಾಮನು ವಿವಶನಾಗಿ ನಿನಗೆ ಅಧೀನನಾಗುವನು.॥10॥
ಮೂಲಮ್ - 11
ಅಪತ್ಸಂಶಯಿತಾ ಶ್ರೇಯೋ ನಾತ್ರ ನಿಃಸಂಶಯೀಕೃತಾ ।
ಪ್ರತಿಲೋಮಾನುಲೋಮಂ ವಾ ಯತ್ತುನೋ ಮನ್ಯಸೇ ಹಿತಮ್ ॥
ಅನುವಾದ
ಯುದ್ಧದಲ್ಲಿ ಮೃತ್ಯು ಸಂದಿಗ್ಧವಾಗಿರುತ್ತದೆ. ಆದರೆ ಯುದ್ಧದಲ್ಲಿನ ಮೃತ್ಯು ಶ್ರೇಷ್ಠವಾದುದು. ಜೀವಿಗೆ ಯುದ್ಧರಂಗಕ್ಕೆ ಹೋಗದೆಯೂ ಮೃತ್ಯುವಾಗುತ್ತದೆ, ಆದರೆ ಇದು ವೀರರಿಗೆ ಯೋಗ್ಯವಲ್ಲ. ಈ ಕುರಿತು ನಿನಗೆ ಇದರಲ್ಲಿ ಅನುಕೂಲಯಾವುದು, ಪ್ರತಿಕೂಲ ಯಾವುದು ತಿಳಿಸು.॥11॥
ಮೂಲಮ್ - 12
ರಾವಣೇನೈವಮುಕ್ತಸ್ತು ಪ್ರಹಸ್ತೋ ವಾಹಿನೀಪತಿಃ ।
ರಾಕ್ಷಸೇಂದ್ರಮುವಾಚೇದಮಸುರೇಂದ್ರಮಿವೋಶನಾ ॥
ಅನುವಾದ
ರಾವಣನು ಹೀಗೆ ಹೇಳಿದಾಗ ಸೇನಾಪತಿ ಪ್ರಹಸ್ತನು ರಾಕ್ಷಸೇಂದ್ರನಲ್ಲಿ-ಶುಕ್ರಾಚಾರ್ಯರು ಅಸುರರಾಜ ಬಲಿಗೆ ಸಲಹೆ ಕೊಟ್ಟಂತೆ, ತನ್ನ ಅಭಿಪ್ರಾಯವನ್ನು ತಿಳಿಸಿದನು.॥12॥
ಮೂಲಮ್ - 13
ರಾಜನ್ಮಂತ್ರಿತಪೂರ್ವಂ ನಃ ಕುಶಲೈಃ ಸಹ ಮಂತ್ರಿಭಿಃ ।
ವಿವಾದಶ್ಚಾಪಿ ನೋ ವೃತ್ತಃ ಸಮವೇಕ್ಷ್ಯ ಪರಸ್ಪರಮ್ ॥
ಅನುವಾದ
ಪ್ರಹಸ್ತನೆಂದ ರಾಜನೇ! ಕುಶಲ ಮಂತ್ರಿಗಳೊಡನೆ ನಾವು ಮೊದಲು ಈ ವಿಷಯದಲ್ಲಿ ವಿಚಾರಮಾಡಿದ್ದೇವೆ. ಆಗ ಒಬ್ಬರ ಮತವನ್ನು ಇನ್ನೊಬ್ಬರು ಚರ್ಚಿಸುತ್ತಾ ವಿವಾದವೂ ಉಂಟಾಗಿತ್ತು. ಸರ್ವಸಮ್ಮತಿಯಿಂದ ನಾವು ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ.॥13॥
ಮೂಲಮ್ - 14
ಪ್ರದಾನೇನ ತು ಸೀತಾಯಾಃ ಶ್ರೇಯೋ ವ್ಯವಸಿತಂ ಮಯಾ ।
ಅಪ್ರದಾನೇ ಪುನರ್ಯುದ್ಧಂ ದೃಷ್ಟಮೇವ ತಥೈವ ನಃ ॥
ಅನುವಾದ
ಸೀತೆಯನ್ನು ಮರಳಿ ರಾಮನಿಗೆ ಒಪ್ಪಿಸುವುದರಲ್ಲಿ ನಮ್ಮ ಶ್ರೇಯಸ್ಸು ಇದೆ, ಇಲ್ಲದಿದ್ದರೆ ಯುದ್ಧವು ಖಂಡಿತವಾಗಿ ಆಗುವುದು ಎಂದೆ ಮೊದಲಿನಿಂದಲೂ ನನ್ನ ಅಭಿಪ್ರಾಯವಿದೆ. ಆ ನಿಶ್ಚಿಯದಂತೆ ಇಂದು ನಮಗೆ ಈ ಯುದ್ಧದ ಸಂಕಟ ಉಪಸ್ಥಿತವಾಗಿದೆ.॥14॥
ಮೂಲಮ್ - 15
ಸೋಽಹಂ ದಾನೈಶ್ಚ ಮಾನೈಶ್ಚ ಸತತಂ ಪೂಜಿತಸ್ತ್ವಯಾ ।
ಸಾಂತ್ವೈಶ್ಚ ವಿವಿಧೈಃ ಕಾಲೇ ಕಿಂ ನ ಕುರ್ಯಾಂ ಹಿತಂ ತವ ॥
ಅನುವಾದ
ನೀವು ದಾನ-ಮಾನ ಮತ್ತು ವಿವಿಧ ಸಾಂತ್ವನದಿಂದ ಆಗಾಗ ನನ್ನನ್ನು ಸತ್ಕರಿಸಿದ್ದೀರಿ. ಹಾಗಿರುವಾಗ ನಾನು ನಿಮ್ಮ ಹಿತಸಾಧನೆಯನ್ನೇ ಮಾಡುವೆನು.॥15॥
ಮೂಲಮ್ - 16
ನಹಿ ಮೇ ಜೀವಿತಂ ರಕ್ಷ್ಯಂ ಪುತ್ರದಾರ ಧನಾನಿ ಚ ।
ತ್ವಂ ಪಶ್ಯ ಮಾಂ ಜುಹೂಷಂತಂ ತ್ವದರ್ಥೇ ಜೀವಿತಂ ಯುಧಿ ॥
ಅನುವಾದ
ನನಗೆ ನನ್ನ ಬಾಳಿನ ಪತ್ನೀ ಪುತ್ರ, ಧನ ಮೊದಲಾದುವನ್ನು ರಕ್ಷಿಸಬೇಕಾಗಿಲ್ಲ. ಇವರ ರಕ್ಷಣೆಯಯ ಚಿಂತೆ ನನಗಿಲ್ಲ. ನಾನು ಯಾವ ರೀತಿಯಿಂದ ನಿಮಗಾಗಿ ಯುದ್ಧದ ಜ್ವಾಲೆಯಲ್ಲಿ ನನ್ನ ಜೀವನದ ಆಹುತಿಯನ್ನು ಕೊಡುತ್ತೇನೆ ಎಂಬುದನ್ನು ನೀವು ನೋಡಿರಿ.॥16॥
ಮೂಲಮ್ - 17
ಏವಮುಕ್ತ್ವಾ ತು ಭರ್ತಾರಂ ರಾವಣಂ ವಾಹಿನೀಪತಿಃ ।
ಉವಾಚೇದಂ ಬಲಾಧ್ಯಕ್ಷಾನ್ ಪ್ರಹಸ್ತಃ ಪುರತಃ ಸ್ಥಿತಾನ್ ॥
ಅನುವಾದ
ತನ್ನ ಒಡೆಯ ರಾವಣನಲ್ಲಿ ಹೀಗೆ ಹೇಳಿ ಪ್ರಧಾನ ಸೇನಾಪತಿ ಪ್ರಹಸ್ತನು ತನ್ನೆದುರಿಗೆ ನಿಂತಿದ್ದ ಸೇನಾಧ್ಯಕ್ಷನಲ್ಲಿ ಹೀಗೆ ಹೇಳಿದನು.॥17॥
ಮೂಲಮ್ - 18½
ಸಮಾನಯತ ಮೇ ಶೀಘ್ರಂ ರಾಕ್ಷಸಾನಾಂ ಮಹಾಬಲಮ್ ।
ಮದ್ಬಾಣಾನಾಂ ತು ವೇಗೇನ ಹತಾನಾಂ ಚ ರಣಾಜಿರೇ ॥
ಅದ್ಯ ತೃಪ್ಯಂತು ಮಾಂಸಾದಾಃ ಪಕ್ಷಿಣಃ ಕಾನನೌಕಸಾಮ್ ।
ಅನುವಾದ
ನೀನು ಶೀಘ್ರವಾಗಿ ರಾಕ್ಷಸರ ವಿಶಾಲವಾದ ಸೈನ್ಯವನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಇಂದು ಮಾಂಸಾಹಾರಿ ಪಕ್ಷಿಗಳು ಸಮರಾಂಗಣದಲ್ಲಿ ನನ್ನ ಬಾಣಗಳಿಂದ ಸತ್ತ ವಾನರರ ಮಾಂಸ ತಿಂದು ತೃಪ್ತರಾಗುವವು.॥18½॥
ಮೂಲಮ್ - 19½
ತಸ್ಯ ತದ್ ವಚನಂ ಶ್ರುತ್ವಾ ಬಲಾಧ್ಯಕ್ಷಾಃ ಮಹಾಬಲಾಃ ॥
ಬಲಮುದ್ಯೋಜಯಾಮಾಸುಸ್ತಸ್ಮಿನ್ ರಾಕ್ಷಸಮಂದಿರೇ ।
ಅನುವಾದ
ಪ್ರಹಸ್ತನ ಮಾತನ್ನು ಕೇಳಿ ಮಹಾಬಲಿ ಸೇನಾಧ್ಯಕ್ಷನು ರಾವಣನ ಆ ಭವನದ ಬಳಿಯಲ್ಲಿ ವಿಶಾಲ ಸೈನ್ಯವನ್ನು ಯುದ್ಧಕ್ಕಾಗಿ ಸಿದ್ಧಗೊಳಿಸಿದನು.॥19½॥
ಮೂಲಮ್ - 20½
ಸಾ ಬಭೂವ ಮುಹೂರ್ತೇನ ಭೀಮೈರ್ನಾನಾವಿಧಾಯುಧೈಃ ॥
ಲಂಕಾ ರಾಕ್ಷಸವೀರೈಸ್ತೈರ್ಗಜೈರಿವ ಸಮಾಕುಲಾ ।
ಅನುವಾದ
ಎರಡೇ ಗಳಿಗೆಯಲ್ಲಿ ನಾನಾ ವಿಧದ ಅಸ್ತ್ರ-ಶಸ್ತ್ರಗಳನ್ನು ಧರಿಸಿ, ಆನೆಯಂತಿರುವ ಭಯಾನಕ ರಾಕ್ಷಸವೀರರಿಂದ ಲಂಕೆಯು ತುಂಬಿ ಹೋಯಿತು.॥20½॥
ಮೂಲಮ್ - 21½
ಹುತಾಶನಂ ತರ್ಪಯತಾಂ ಬ್ರಾಹ್ಮಣಾಂಶ್ಚ ನಮಸ್ಯತಾಮ್ ॥
ಆಜ್ಯಗಂಧಪ್ರತಿವಹಃ ಸುರಭಿರ್ಮಾರುತೋ ವವೌ ।
ಅನುವಾದ
ಎಷ್ಟೋ ರಾಕ್ಷಸರು ತುಪ್ಪದ ಆಹುತಿಗಳಿಂದ ಯಜ್ಞೇಶ್ವರನನ್ನು ತೃಪ್ತಿಪಡಿಸಿದರು, ಬ್ರಾಹ್ಮಣರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಆಗ ಹೋಮಗಂಧವನ್ನು ಹೊತ್ತಿದ್ದ ವಾಯುವು ಎಲ್ಲೆಡೆ ಬೀಸುತ್ತಿತ್ತು.॥21½॥
ಮೂಲಮ್ - 22½
ಸ್ರಜಶ್ಚ ವಿವಿಧಾಕಾರಾ ಜಗೃಹುಸ್ತ್ವಭಿಮಂತ್ರಿತಾಃ ॥
ಸಂಗ್ರಾಮಸಜ್ಜಾಃ ಸಂಹೃಷ್ಟಾ ಧಾರಯನ್ ರಾಕ್ಷಸಾಸ್ತದಾ ।
ಅನುವಾದ
ರಾಕ್ಷಸರು ಮಂತ್ರಗಳಿಂದ ಅಭಿಮಂತ್ರಿಸಿದ ನಾನಾ ಪ್ರಕಾರದ ಮಾಲೆಗಳನ್ನು ಧರಿಸಿದರು. ಹರ್ಷೋತ್ಸಾಹದಿಂದ ಕೂಡಿ ಯುದ್ಧೋಪಯೋಗಿ ವೇಷ-ಭೂಷಣಗಳನ್ನು ಧರಿಸಿದರು.॥22½॥
ಮೂಲಮ್ - 23½
ಸಧನುಷ್ಕಾಃ ಕವಚಿನೋ ವೇಗಾದಾಪ್ಲುತ್ಯ ರಾಕ್ಷಸಾಃ ॥
ರಾವಣಂ ಪ್ರೇಕ್ಷ್ಯ ರಾಜಾನಂ ಪ್ರಹಸ್ತಂ ಪರ್ಯವಾರಯನ್ ।
ಅನುವಾದ
ಕವಚ, ಧನುರ್ಬಾಣ ಧಾರೀ ರಾಕ್ಷಸರು ವೇಗದಿಂದ ನೆಗೆಯುತ್ತಲೇ ಮುಂದರಿದರು, ರಾವಣನನ್ನು ದರ್ಶಿಸುತ್ತಾ ಪ್ರಹಸ್ತನನ್ನು ಸುತ್ತುವರೆದು ನಿಂತುಕೊಂಡರು.॥23½॥
ಮೂಲಮ್ - 24½
ಅಥಾಮಂತ್ರ್ಯ ತು ರಾಜಾನಂ ಭೇರೀಮಾಹತ್ಯ ಭೈರವಾಮ್ ॥
ಆರುರೋಹ ರಥಂ ಯುಕ್ತಃ ಪ್ರಹಸ್ತಃ ಸಜ್ಜ ಕಲ್ಪಿತಮ್ ।
ಅನುವಾದ
ಬಳಿಕ ರಾಜನ ಅಪ್ಪಣೆ ಪಡೆದು ಭಯಂಕರ ಭೇರಿಗಳ ಶಬ್ದ ಆಗುತ್ತಿರುವಂತೆ ಕವಚಾದಿಗಳನ್ನು ಧರಿಸಿ, ಯುದ್ಧಕ್ಕೆ ಸಿದ್ಧನಾದ ಪ್ರಹಸ್ತನು ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತನಾಗಿ ರಥವನ್ನೇರಿದನು.॥24½॥
ಮೂಲಮ್ - 25½
ಹಯೈರ್ಮಹಾಜವೈರ್ಯುಕ್ತಂ ಸಮ್ಯಕ್ಸೂತಂ ಸುಸಂಯತಮ್ ॥
ಮಹಾಜಲದನಿರ್ಘೋಷಂ ಸಾಕ್ಷಾಚ್ಚಂದ್ರಾರ್ಕಭಾಸ್ಕರಮ್ ।
ಅನುವಾದ
ಪ್ರಹಸ್ತನ ರಥಕ್ಕೆ ವೇಗಶಾಲಿ ಕುದುರೆಗಳನ್ನು ಹೂಡಿದ್ದರು, ಸಾರಥಿಯೂ ಕುಶಲನಾಗಿದ್ದನು. ಆ ರಥವು ಪೂರ್ಣವಾಗಿ ಸಾರಥಿಯ ನಿಯಂತ್ರಣದ್ಲಲಿತ್ತು. ಅದು ನಡೆದಾಗ ಮಹಾ ಮೇಘ ಗರ್ಜನೆಯಂತೆ ಶಬ್ದಮಾಡುತ್ತಿತ್ತು. ರಥವು ಪ್ರತ್ಯಕ್ಷ ಚಂದ್ರ-ಸೂರ್ಯರಂತೆ ಪ್ರಕಾಶಮಾನವಾಗಿತ್ತು.॥25½॥
ಮೂಲಮ್
(ಶ್ಲೋಕ - 26½)
ಉರಗಧ್ವಜದುರ್ಧರ್ಷಂ ಸವರೂಥಂ ಸ್ವಪಸ್ಕರಮ್ ॥
ಸುವರ್ಣಜಾಲಸಂಯುಕ್ತಂ ಪ್ರಹಸಂತಮಿವ ಶ್ರಿಯಾ ।
ಅನುವಾದ
ಸರ್ಪ ಚಿಹ್ನೆಯ ಧ್ವಜದಿಂದಾಗಿ ಅದು ದುರ್ಧರ್ಷವಾಗಿ ಅನಿಸುತ್ತಿತ್ತು. ರಥದ ರಕ್ಷಾಕವಚನವು ಸುಂದರವಾಗಿತ್ತು. ಅದರಲ್ಲಿ ಶ್ರೇಷ್ಠ ಸಾಮಗ್ರಿಗಳನ್ನಿರಿಸಿದರು. ಅದು ತನ್ನ ಶಾಂತಿಯಿಂದ ನಗುತ್ತಿರುವಂತೆ ಕಂಡುಬರುತ್ತಿತ್ತು.॥26½॥
ಮೂಲಮ್ - 27½
ತತಸ್ತಂ ರಥಮಾಸ್ಥಾಯ ರಾವಣಾರ್ಪಿತಶಾಸನಃ ॥
ಲಂಕಾಯಾ ನಿರ್ಯಯೌ ತೂರ್ಣಂ ಬಲೇನ ಮಹತಾ ವೃತಃ ।
ಅನುವಾದ
ರಾವಣನ ಆಜ್ಞೆಯನ್ನು ಶಿರಸಾವಹಿಸಿ, ರಥದಲ್ಲಿ ಕುಳಿತ ಪ್ರಹಸ್ತನು ವಿಶಾಲ ಸೈನ್ಯದಿಂದ ಪರಿವೃತನಾಗಿ ಶೀಘ್ರವಾಗಿ ಲಂಕೆಯಿಂದ ಹೊರಟನು.॥27½॥
ಮೂಲಮ್ - 28
ತತೋ ದುಂದುಭಿನಿರ್ಘೋಷಃ ಪರ್ಜನ್ಯ ನಿನದೋಪಮಃ ।
ವಾದಿತ್ರಾಣಾಂ ಚ ನಿನದಃ ಪೂರಯನ್ನಿವ ಮೇದಿನೀಮ್ ॥
ಅನುವಾದ
ಅವನು ಹೊರಟಾಗ ವೇಘಗಂಭೀರ ಗರ್ಜನೆಯಂತೆ ದುಂದುಭಿಗಳು ಮೊಳಗಿದವು. ರಣವಾದ್ಯಗಳ ನಿನಾದವೂ ಪೃಥಿವಿಯನ್ನೇ ಮುಚ್ಚಿಬಿಡುವಂತಿತ್ತು.॥28॥
ಮೂಲಮ್ - 29½
ಶುಶ್ರುವೇ ಶಂಖಶಬ್ದಶ್ಚ ಪ್ರಯಾತೇ ವಾಹಿನೀಪತೌ ।
ನಿನದಂತಃ ಸ್ವರಾನ್ಘೋರಾನ್ ರಾಕ್ಷಸಾ ಜಗ್ಮುರಗ್ರತಃ ॥
ಭೀಮರೂಪಾ ಮಹಾಕಾಯಾಃ ಪ್ರಹಸ್ತಸ್ಯ ಪುರಃ ಸರಾಃ ।
ಅನುವಾದ
ಸೇನಾಪತಿಯ ಪ್ರಸ್ಥಾನ ಸಮಯದಲ್ಲಿ ಶಂಖಧ್ವನಿಗಳು ಕೇಳಿ ಬರುತ್ತಿದ್ದವು. ಪ್ರಹಸ್ತನ ಮುಂದೆ ಸಾಗುತ್ತಿದ್ದ ಭಯಂಕರ ರೂಪಧಾರಿ ವಿಶಾಲಕಾಯರಾದ ರಾಕ್ಷಸರು ಭಯಂಕರ ಧ್ವನಿಯಿಂದ ಗರ್ಜಿಸುತ್ತಾ ಮುನ್ನಡೆದರು.॥29½॥
ಮೂಲಮ್ - 30
ನರಾಂತಕಃ ಕುಂಭಹನುರ್ಮಹಾನಾದಃ ಸಮುನ್ನತಃ ।
ಪ್ರಹಸ್ತಸಚಿವಾ ಹ್ಯೇತೇ ನಿರ್ಯಯುಃ ಪರಿವಾರ್ಯ ತಮ್ ॥
ಅನುವಾದ
ನರಾಂತಕ, ಕುಂಭಹನು, ಮಹಾನಾದ, ಸಮುನ್ನತ ಎಂಬ ನಾಲ್ಕು ಪ್ರಹಸ್ತನ ಸಚಿವರು ಅವನನ್ನು ಅನುಸರಿಸಿ ಹೊರಟರು.॥30॥
ಮೂಲಮ್ - 31
ವ್ಯೂಢೇನೈವ ಸುಘೋರೇಣ ಪೂರ್ವ ದ್ವಾರಾತ್ ಸ ನಿರ್ಯಯೌ ।
ಗಜಯೂಥನಿಕಾಶೇನ ಬಲೇನ ಮಹತಾ ವೃತಃ ॥
ಅನುವಾದ
ಪ್ರಹಸ್ತನ ಆ ವಿಶಾಲ ಸೈನ್ಯವು ಆನೆಗಳ ಸಮೂಹದಂತೆ ಭಯಂಕರವಾಗಿ ಅನಿಸುತ್ತಿತ್ತು. ಆ ವ್ಯೆಹಬದ್ಧ ಸೈನ್ಯದೊಂದಿಗೆ ಪ್ರಹಸ್ತನು ಲಂಕೆಯ ಪೂರ್ವದ್ವಾರದಿಂದ ಹೊರಗೆ ಹೊರಟನು.॥31॥
ಮೂಲಮ್ - 32
ಸಾಗರಪ್ರತಿಮೌಘೇನ ವೃತಸ್ತೇನ ಬಲೇನ ಸಃ ।
ಪ್ರಹಸ್ತೋ ನಿರ್ಯಯೌ ಕ್ರುದ್ಧಃ ಕಾಲಾಂತಕಯಮೋಪಮಃ ॥
ಅನುವಾದ
ಸಮುದ್ರದಂತಹ ಅಪಾರ ಸೈನ್ಯದೊಂದಿಗೆ ಪ್ರಹಸ್ತನು ಹೊರಟಾಗ ಕ್ರೋಧಗೊಂಡ ಪ್ರಳಯದ ಸಂಹಾರಕಾರೀ ಯಮನಂತೆ ಕಂಡು ಬರುತ್ತಿದ್ದನು.॥32॥
ಮೂಲಮ್ - 33
ತಸ್ಯ ನಿರ್ಯಾಣಘೋಷೇಣ ರಾಕ್ಷಸಾನಾಂ ಚ ನರ್ದತಾಮ್ ।
ಲಂಕಾಯಾಂ ಸರ್ವಭೂತಾನಿ ವಿನೇದುರ್ವಿಕೃತೈಃ ಸ್ವರೈಃ ॥
ಅನುವಾದ
ಅವನು ಹೊರಟಾಗ ಭೇರಿಯೇ ಮುಂತಾದವುಗಳ ಘೋಷದಿಂದ, ರಾಕ್ಷಸರ ಗಂಭೀರ ಗರ್ಜನೆಯಿಂದ ಲಂಕೆಯ ಎಲ್ಲ ಪ್ರಾಣಿಗಳು ವಿಕೃತವಾಗಿ ಕೆಟ್ಟದಾಗಿ ಚೀರತೊಡಗಿದವು.॥33॥
ಮೂಲಮ್ - 34
ವ್ಯಭ್ರಮಾಕಾಶಮಾವಿಶ್ಯ ಮಾಂಸಶೋಣಿತ ಭೋಜನಾಃ ।
ಮಂಡಲಾನ್ಯಪಸವ್ಯಾನಿ ಖಗಾಶ್ಚಕ್ರೂ ರಥಂ ಪ್ರತಿ ॥
ಅನುವಾದ
ಆಗ ಮೋಡಗಳಿಲ್ಲದ ಆಕಾಶದಲ್ಲಿ ಹಾರಾಡುತ್ತಿದ್ದ ಮಾಂಸಭಕ್ಷಿ ಪಕ್ಷಿಗಳು ಪ್ರಹಸ್ತನ ರಥವನ್ನು ಅಪ್ರದಕ್ಷಿಣೆಯಾಗಿ ಸುತ್ತುತ್ತಿದ್ದವು.॥34॥
ಮೂಲಮ್ - 35
ವಮಂತ್ಯಃ ಪಾವಕಜ್ವಾಲಾಃ ಶಿವಾ ಘೋರಾ ವವಾಶಿರೇ ।
ಅಂತರಿಕ್ಷಾತ್ ಪಪಾತೋಲ್ಕಾ ವಾಯುಶ್ಚ ಪರುಷಂ ವವೌ ॥
ಅನುವಾದ
ಭಯಾನಕ ಗುಳ್ಳೆನರಿಗಳು ಬೆಂಕಿ ಯನ್ನು ಉಗುಳುತ್ತಾ ಅಮಂಗಲವಾಗಿ ಕೂಗಿ ಕೊಳ್ಳುತ್ತಿದ್ದವು. ಆಕಾಶದಿಂದ ಉಲ್ಕಾಪಾತ ಪ್ರಾರಂಭವಾಗಿ ಪ್ರಚಂಡವಾಯು ಬೀಸತೊಡಗಿತು.॥35॥
ಮೂಲಮ್ - 36
ಅನ್ಯೋನ್ಯಮಭಿಸಂರಬ್ಧಾ ಗ್ರಹಾಶ್ಚ ನ ಚಕಾಶಿರೇ ।
ಮೇಘಾಶ್ಚ ಖರನಿರ್ಘೋಷಾ ರಥಸ್ಯೋಪರಿ ರಕ್ಷಸಃ ॥
ಮೂಲಮ್ - 37½
ವವೃರ್ಷೂ ರುಧಿರಂ ಚಾಸ್ಯಸಿಷಿಚುಶ್ಚ ಪುರಃಸರಾನ್ ।
ಕೇತುಮೂರ್ಧನಿ ಗೃಧ್ರಸ್ತು ವಿಲೀನೋ ದಕ್ಷಿಣಾಮುಖಃ ॥
ತುದನ್ನುಭಯತಃ ಪಾರ್ಶ್ವಂ ಸಮಗ್ರಾಂಶ್ರಿಯಮಾಹರತ್ ।
ಅನುವಾದ
ರೋಷಪೂರ್ವಕ ಗ್ರಹರು ಪರಸ್ಪರ ಕಾದಾಡತೊಡಗಿದವು, ಅದರಿಂದ ಅವರ ಪ್ರಕಾಶ ಮಂದವಾಯಿತು. ರಾಕ್ಷಸನ ರಥದ ಮೇಲೆ ಮೇಘಗಳು ಕತ್ತೆಗಳಂತೆ ಶಬ್ದಮಾಡುತ್ತಾ ರಕ್ತದ ಮಳೆ ಸುರಿಸಿದವು. ಮುಂದೆ ಹೋಗುವ ಸೈನಿಕರನ್ನು ಬಿರುಗಾಳಿ ಹಿಂದಕ್ಕೆ ತಳ್ಳಿಬಿಟ್ಟಿತು. ಅವನ ಧ್ವಜದ ಮೇಲೆ ಹದ್ದು ದಕ್ಷಿಣಾಭಿಮುಖವಾಗಿ ಕುಳಿತು ಕೊಂಡಿತು. ಎರಡೂ ಕಡೆಗೆ ತಿರುಗಿ ಅಶುಭವಾಗಿ ಕೂಗುತ್ತಾ ರಥದ ಸಾರಿಥಿಯನ್ನೇ ಹಾಳುಮಾಡಿಬಿಟ್ಟಿತು.॥36-37½॥
ಮೂಲಮ್ - 38½
ಸಾರಥೇರ್ಬಹುಶಶ್ಚಾಸ್ಯ ಸಂಗ್ರಾಮಮವಗಾಹತಃ ॥
ಪ್ರತೋದೋ ನ್ಯಪತದ್ಧಸ್ತಾತ್ಸೂತಸ್ಯ ಹಯಸಾದಿನಃ ।
ಅನುವಾದ
ಸಂಗ್ರಾಮ ಸ್ಥಳವನ್ನು ಪ್ರವೇಶಿಸುವಾಗ ಕುದುರೆಗಳನ್ನು ಹತೋಟಿಯಲ್ಲಿಡುವ ಚಮ್ಮಟಿಗೆಯು ಸಾರಥಿಯ ಕೈಯಿಂದ ಅನೇಕ ಸಲ ಕೆಳಗೆ ಬಿದ್ದುಹೋಯಿತು.॥38½॥
ಮೂಲಮ್ - 39½
ನಿರ್ಯಾಣಶ್ರೀಶ್ಚ ಯಾಚ ಸ್ಯಾದ್ ಭ್ರಾಸ್ವರಾ ಚ ಸುದುರ್ಲಭಾ ॥
ಸಾ ನನಾಶ ಮುಹೂರ್ತೇನ ಸಮೇ ಚ ಸ್ಖಲಿತಾ ಹಯಾಃ ।
ಅನುವಾದ
ಯುದ್ಧಕ್ಕೆ ಹೊರಟಾಗ ಪ್ರಹಸ್ತನಲ್ಲಿದ್ದ ಪರಮ ದುರ್ಲಭ ಶೋಭೆಯು ಎರಡೇ ಗಳಿಗೆಯಲ್ಲಿ ನಾಶವಾಯಿತು. ಅವನ ರಥದ ಕುದುರೆಗಳು ಎಡವಿ ಬಿದ್ದುಬಿಟ್ಟವು.॥39½॥
ಮೂಲಮ್ - 40
ಪ್ರಹಸ್ತಂ ತಂ ಹಿ ನಿರ್ಯಾಂತಂ ಪ್ರಖ್ಯಾತ ಗುಣಪೌರುಷಮ್ ।
ಯುಧಿ ನಾನಾ ಪ್ರಹರಣಾ ಕಪಿಸೇನಾಭ್ಯವರ್ತತ ॥
ಅನುವಾದ
ಗುಣ-ಪೌರುಷಗಳು ವಿಖ್ಯಾತವಾಗಿದ್ದ ಪ್ರಹಸ್ತನು ಯುದ್ಧಭೂಮಿಗೆ ಬರುತ್ತಲೇ, ಶಿಲೆ, ವೃಕ್ಷ ಮುಂತಾದ ಆಯುಧಗಳಿಂದ ಸಂಪನ್ನರಾದ ವಾನರರು ಅವನನ್ನು ಎದುರಿಸಲು ಮುಂದಾದರು.॥40॥
ಮೂಲಮ್ - 41
ಅಥ ಘೋಷಃ ಸುತುಮುಲೋ ಹರೀಣಾಂ ಸಮಜಾಯತ ।
ವೃಕ್ಷಾನಾರುಜತಾಂ ಚೈವ ಗುರ್ವೀರ್ವೈಗೃಹ್ಣತಾಂ ಶಿಲಾಃ ॥
ಅನುವಾದ
ಅನಂತರ ಮರಗಳನ್ನು ಕಿತ್ತುಕೊಂಡು, ಬಂಡೆಗಳನ್ನು ಎತ್ತಿಕೊಂಡು ಬರುವ ವಾನರರ ಅತ್ಯಂತ ಭಯಂಕರ ಕೋಲಾಹಲವು ಅಲ್ಲಿ ಎಲ್ಲೆಡೆ ವ್ಯಾಪಿಸಿತು.॥41॥
ಮೂಲಮ್ - 42
ನದತಾಂ ರಾಕ್ಷಸಾನಾಂ ಚ ವಾನರಾಣಾಂ ಚ ಗರ್ಜತಾಮ್ ।
ಉಭೇ ಪ್ರಮುದಿತೇ ಸೈನ್ಯೇ ರಕ್ಷೋಗಣ ವನೌಕಸಾಮ್ ॥
ಅನುವಾದ
ಒಂದು ಕಡೆ ರಾಕ್ಷಸರು ಸಿಂಹನಾದ ಮಾಡುತ್ತಿದ್ದರೆ, ಇನ್ನೊಂದೆಡೆ ವಾನರರು ಗರ್ಜಿಸುತ್ತಿದ್ದರು. ಅವರ ತುಮುಲನಾದವು ಅಲ್ಲಿ ಹರಡಿಹೋಯಿತು. ರಾಕ್ಷಸರ ಮತ್ತು ವಾನರರ ಸೈನ್ಯಗಳು ಹರ್ಷೋಲ್ಲಾಸದಿಂದ ತುಂಬಿ ಹೋಗಿತ್ತು.॥42॥
ಮೂಲಮ್ - 43
ವೇಗಿತಾನಾಂ ಸಮರ್ಥಾನಾಮನ್ಯೋನ್ಯವಧಕಾಂಕ್ಷಿಣಾಮ್ ।
ಪರಸ್ಪರಂ ಚಾಹ್ವಯತಾಂ ನಿನಾದಃ ಶ್ರೂಯತೇ ಮಹಾನ್ ॥
ಅನುವಾದ
ಅತ್ಯಂತ ವೇಗಶಾಲೀ ಸಮರ್ಥ ಯೋಧರು ಪರಸ್ಪರ ವಧಿಸಲು ಪಂಥಾಹ್ವಾನ ನೀಡುತ್ತಿದ್ದರು. ಅವರ ಮಹಾಕೋಲಾಹಲವು ಎಲ್ಲರಿಗೆ ಕೇಳಿ ಬರುತ್ತಿತ್ತು.॥43॥
ಮೂಲಮ್ - 44
ತತಃ ಪ್ರಹಸ್ತಃ ಕಪಿರಾಜವಾಹಿನೀ
ಮಭಿಪ್ರತಸ್ಥೇ ವಿಜಯಾಯ ದುರ್ಮತಿಃ ।
ವಿವೃದ್ಧವೇಗಾಂ ಚ ವಿವೇಶ ತಾಂ ಚಮೂಂ
ಯಥಾ ಮುಮೂರ್ಷುಃ ಶಲಭೋ ವಿಭಾವಸುಮ್ ॥
ಅನುವಾದ
ಆಗಲೇ ದುರ್ಬುದ್ಧಿಯಿಂದ ಪ್ರಹಸ್ತನು ವಿಜಯದ ಇಚ್ಛೆಯಿಂದ ವಾನರರಾಜ ಸುಗ್ರೀವನ ಸೈನ್ಯದ ಕಡೆಗೆ ದೀಪದ ಹುಳುವು ಸಾಯಲೆಂದೇ ಬೆಂಕಿಗೆ ಬೀಳುವಂತೆ ವೇಗಶಾಲಿ ಆ ವಾನರ ಸೈನ್ಯದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದನು.॥44॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೇಳನೆಯ ಸರ್ಗ ಪೂರ್ಣವಾಯಿತು.॥57॥