०५६ अकम्पनेन युद्धभूमिप्रवेशः

वाचनम्
ಭಾಗಸೂಚನಾ

ಹನುಮಂತನಿಂದ ಅಕಂಪನ ಸಂಹಾರ

ಮೂಲಮ್ - 1

ತದ್ಧಷ್ಟ್ವಾ ಸುಮಹತ್ಕರ್ಮ ಕೃತಂ ವಾನರಸತ್ತಮೈಃ ।
ಕ್ರೋಧಮಾಹಾರಯಾಮಾಸ ಯುಧಿ ತೀವ್ರಮಕಂಪನಃ ॥

ಅನುವಾದ

ಯುದ್ಧಭೂಮಿಯಲ್ಲಿ ಕುಮುದನೇ ಮೊದಲಾದ ವಾನರ ಶ್ರೇಷ್ಠರ ಪರಾಕ್ರಮವನ್ನು ನೋಡಿ ಆಕಂಪನನಿಗೆ ಕೋಪವು ಮಿತಿಮೀರಿತು.॥1॥

ಮೂಲಮ್ - 2

ಕ್ರೋಧಮೂರ್ಛಿತರೂಪಸ್ತು ಧೂನ್ವನ್ ಪರಮಕಾರ್ಮುಕಮ್ ।
ದೃಷ್ಟ್ವಾತು ಕರ್ಮ ಶತ್ರೂಣಾಂ ಸಾರಥಿಂ ವಾಕ್ಯಮಬ್ರವೀತ್ ॥

ಅನುವಾದ

ಶತ್ರುಗಳು ಗೈದ ಸಂಹಾರ ಕಾರ್ಯವನ್ನು ನೋಡಿ ಅವನ ಶರೀರವೆಲ್ಲ ಕ್ರೋಧದಿಂದ ಉರಿಯ ತೊಡಗಿತು. ಉತ್ತಮವಾದ ಧನುಸ್ಸನ್ನೆತ್ತಿ ಅವನು ಸಾರಥಿಗೆ ಹೇಳಿದನು.॥2॥

ಮೂಲಮ್ - 3

ತತ್ರೈವ ತಾವತ್ತ್ವರಿತೋ ರಥಂ ಪ್ರಾಪಯ ಸಾರಥೇ ।
ಏತೇ ಚ ಬಲಿನೋ ಘ್ನಂತಿ ಸುಬಹೂನ್ರಾಕ್ಷಸಾನ್ ರಣೇ ॥

ಅನುವಾದ

ಸಾರಥಿಯೇ ! ಈ ಬಲಿಷ್ಠ ವಾನರರು ಯುದ್ಧದಲ್ಲಿ ನಮ್ಮ ಕಡೆಯ ಅಪಾರ ರಾಕ್ಷಸರನ್ನು ಕೊಲ್ಲುತ್ತಿದ್ದಾರೆ. ಅಲ್ಲಿಗೆ ನನ್ನ ರಥವನ್ನು ಬೇಗನೆ ಕೊಂಡುಹೋಗು.॥3॥

ಮೂಲಮ್ - 4

ಏತೇ ಚ ಬಲವಂತೋ ವಾ ಭೀಮಕೋಪಾಶ್ಚ ವಾನರಾಃ ।
ದ್ರುಮಶೈಲಪ್ರಹರಣಾಸ್ತಿಷ್ಠಂತಿ ಪ್ರಮುಖೇ ಮಮ ॥

ಅನುವಾದ

ಈ ವಾನರರು ಮಹಾಬಲಿಷ್ಠರಾಗಿದ್ದು, ಇವರ ಕ್ರೋಧವೂ ಭಯಾನಕವಾಗಿದೆ. ಇವರು ವೃಕ್ಷಗಳಿಂದ ಪರ್ವತಗಳಿಂದ ಪ್ರಹಾರಮಾಡುತ್ತಾ ನನ್ನೆದುರಿಗೆ ನಿಂತಿದ್ದಾರೆ.॥4॥

ಮೂಲಮ್ - 5

ಏತಾನ್ನಿಹಂತುಮಿಚ್ಛಾಮಿ ಸಮರಶ್ಲಾಘಿಘಿನೋ ಹ್ಯಹಮ್ ।
ಏತೈಃ ಪ್ರಮಥಿತಂ ಸರ್ವಂ ರಕ್ಷಸಾಂ ದೃಶ್ಯತೇ ಬಲಮ್ ॥

ಅನುವಾದ

ಸಮರ ಶ್ಲಾಘಿಗಳಾದ ಈ ಎಲ್ಲ ವಾನರರನ್ನು ನಾನು ಸಂಹರಿಸುವ ವನಿದ್ದೇನೆ. ಇವರು ಸಮಸ್ತ ರಾಕ್ಷಸರನ್ನು ಸಂಹಾರ ಮಾಡುವಂತೆ ಕಾಣುತ್ತದೆ.॥5॥

ಮೂಲಮ್ - 6

ತತಃ ಪ್ರಚಲಿತಾಶ್ವೇನ ರಥೇನ ರಥಿನಾಂ ವರಃ ।
ಹರೀನಭ್ಯಪತದ್ ದೂರಾಚ್ಛರಜಾಲೈರಕಂಪನಃ ॥

ಅನುವಾದ

ವೇಗವಾಗಿ ಹೋಗುವ ಕುದುರೆ ಗಳನ್ನು ಕೂಡಿದ ರಥದಲ್ಲಿ ಕುಳಿತ ರಥಿಗಳಲ್ಲಿ ಶ್ರೇಷ್ಠನಾದ ಅಕಂಪನು ದೂರದಿಂದಲೇ ಬಾಣಗಳ ಮಳೆ ಸುರಿಸಿ ವಾನರ ರನ್ನು ಆಕ್ರಮಿಸಿದನು.॥6॥

ಮೂಲಮ್ - 7

ನ ಸ್ಥಾತುಂ ವಾನರಾಃ ಶೇಕುಃ ಕಿಂ ಪುನರ್ಯೋದ್ಧುಮಾಹವೇ ।
ಅಕಂಪನಶರೈರ್ಭಗ್ನಾಃ ಸರ್ವ ಏವಾಭಿದುದ್ರುವುಃ ॥

ಅನುವಾದ

ಆಕಂಪನ ಬಾಣಗಳಿಂದ ಘಾಸಿಗೊಂಡ ಎಲ್ಲ ವಾನರರು ರಣರಂಗದಲ್ಲಿ ನಿಲ್ಲಲಾರದೆ ಓಡಿಹೋದರು. ಮತ್ತೆ ಯುದ್ಧ ಮಾಡುವ ಮಾತು ಎಲ್ಲಿದೆ.॥7॥

ಮೂಲಮ್ - 8

ತಾನ್ ಮೃತ್ಯುವಶಮಾಪನ್ನಾನಕಂಪನಶರಾನುಗಾನ್ ।
ಸಮೀಕ್ಷ್ಯ ಹನುಮಾನ್ಜ್ಞಾತೀನುಪತಸ್ಥೇ ಮಹಾಬಲಃ ॥

ಅನುವಾದ

ಅಕಂಪನ ಬಾಣಗಳ ಪ್ರಹಾರದಿಂದ ಮೃತ್ಯುವಶರಾದ ಮತ್ತು ಗಾಯಗೊಂಡು ಓಡುತ್ತಿರುವ ತನ್ನ ಜ್ಞಾತಿಬಾಂಧವರ ಸ್ಥಿತಿಯನ್ನು ನೋಡಿ ಮಹಾಬಲಿ ಹನುಮಂತನು ಅಕಂಪನ ಬಳಿಗೆ ಬಂದನು.॥8॥

ಮೂಲಮ್ - 9

ತಂ ಮಹಾಪ್ಲವಗಂ ದೃಷ್ಟ್ವಾ ಸರ್ವೇ ತೇ ಪ್ಲವಗರ್ಷಭಾಃ ।
ಸಮೇತ್ಯ ಸಮರೇ ವೀರಾಃ ಸಂಹೃಷ್ಟಾಃ ಪರ್ಯವಾರಯನ್ ॥

ಅನುವಾದ

ಮಹಾಕಪಿ ಹನುಮಂತನು ಬಂದಿರುವುದನ್ನು ನೋಡಿ ಸಮಸ್ತ ವೀರವಾನರ ಶ್ರೇಷ್ಠರು ಒಂದಾಗಿ ಹರ್ಷದಿಂದ ಅವನನ್ನು ಸುತ್ತುವರೆದು ನಿಂತುಕೊಂಡರು.॥9॥

ಮೂಲಮ್ - 10

ವ್ಯವಸ್ಥಿತಂ ಹನೂಮಂತಂ ತೇ ದೃಷ್ಟ್ವಾಪ್ಲವಗರ್ಷಭಾಃ ।
ಬಭೂವುರ್ಬಲವಂತೋ ಹಿ ಬಲವಂತ ಮುಮಾಶ್ರಿತಾಃ ॥

ಅನುವಾದ

ಹನುಮಂತನು ಯುದ್ಧಕ್ಕಾಗಿ ಸಿದ್ಧನಾಗಿ ನಿಂತಿರುವುದನ್ನು ನೋಡಿ ಎಲ್ಲ ಶ್ರೇಷ್ಠವಾನರರು ಆ ಬಲವಂತ ವೀರನನ್ನು ಆಶ್ರಯಿಸಿ ಸ್ವತಃ ಬಲವಂತರಾದರು.॥10॥

ಮೂಲಮ್ - 11

ಅಕಂಪನಸ್ತು ಶೈಲಾಭಂ ಹನೂಮಂತಮವಸ್ಥಿತಮ್ ।
ಮಹೇಂದ್ರ ಇವ ಧಾರಾಭಿಃ ಶರೈರಭಿವವರ್ಷ ಹ ॥

ಅನುವಾದ

ಪರ್ವ ದಂತಹ ವಿಶಾಲಕಾಯ ಹನುಮಂತನನ್ನು ತನ್ನೆದುರಿಗೆ ನಿಂತಿರುವುದನ್ನು ನೋಡಿ ಅಕಂಪನು ಅವನ ಮೇಲೆ ದೇವೇಂದ್ರನು ಮಳೆ ಸುರಿಸುವಂತೆ ಬಾಣಗಳ ಮಳೆ ಸುರಿಸಿದನು.॥11॥

ಮೂಲಮ್ - 12

ಅಚಿಂತಯಿತ್ವಾ ಬಾಣೌಘಾನ್ ಶರೀರೇ ಪಾತಿತಾನ್ ಕಪಿಃ ।
ಅಕಂಪನವಧಾರ್ಥಾಯ ಮನೋ ದಧ್ರೇ ಮಹಾಬಲಃ ॥

ಅನುವಾದ

ತನ್ನ ಮೇಲೆ ಬೀಳುವ ಬಾಣಗಳ ಮಳೆಯನ್ನು ಲೆಕ್ಕಿಸದೆ ಮಹಾಬಲಿ ಹನುಮಂತನು ಅಕಂಪನನ್ನು ಕೊಂದುಹಾಕಲು ವಿಚಾರ ಮಾಡಿದನು.॥12॥

ಮೂಲಮ್ - 13

ಸ ಪ್ರಸಹ್ಯ ಮಹಾತೇಜಾ ಹನೂಮಾನ್ಮಾರುತಾತ್ಮಜಃ ।
ಅಭಿದುದ್ರಾವ ತದ್ರಕ್ಷಃ ಕಂಪಯನ್ನಿವ ಮೇದಿನೀಮ್ ॥

ಅನುವಾದ

ಮತ್ತೆ ಮಹಾತೇಜಸ್ವೀ ಪವನ ಕುಮಾರ ಹನುಮಂತನು ಮಹಾ ಅಟ್ಟಹಾಸ ಮಾಡಿ, ಭೂಮಿಯನ್ನು ನಡುಗಿಸುತ್ತಾ ಆ ರಾಕ್ಷಸನ ಕಡೆಗೆ ಓಡಿದನು.॥13॥

ಮೂಲಮ್ - 14

ತಸ್ಯಾಥ ನರ್ದಮಾನಸ್ಯ ದೀಪ್ಯಮಾನಸ್ಯ ತೇಜಸಾ ।
ಬಭೂವ ರೂಪಂ ದುರ್ಧರ್ಷಂ ದೀಪ್ತಸ್ಯೇವ ವಿಭಾವಸೋಃ ॥

ಅನುವಾದ

ಆಗ ಗರ್ಜಿಸುತ್ತಿರುವ, ತೇಜದಿಂದ ದೇದಿಪ್ಯಮಾನವಾದ ಹನುಮಂತನ ರೂಪವು ಪ್ರಜ್ವಲಿತ ಅಗ್ನಿಯಂತೆ ದುರ್ಧರ್ಷವಾಗಿತ್ತು.॥14॥

ಮೂಲಮ್ - 15

ಆತ್ಮಾನಂ ತ್ವಪ್ರಹರಣಂ ಜ್ಞಾತ್ವಾ ಕ್ರೋಧಸಮನ್ವಿತಃ ।
ಶೈಲಮುತ್ಪಾಟಯಾಮಾಸ ವೇಗೇನ ಹರಿಪುಂಗವಃ ॥

ಅನುವಾದ

ತನ್ನ ಕೈಯಲ್ಲಿ ಆಯುಧ ವಿಲ್ಲದಿರುವುದನ್ನು ತಿಳಿದು ಕ್ರೋಧಗೊಂಡ ವಾನರಶ್ರೇಷ್ಠ ಹನುಮಂತನು ವೇಗವಾಗಿ ಒಂದು ಪರ್ವತವನ್ನು ಕಿತ್ತು ತಂದನು.॥15॥

ಮೂಲಮ್ - 16

ಗೃಹೀತ್ವಾ ಸುಮಹಾಶೈಲಂ ಪಾಣಿನೈಕೇನ ಮಾರುತಿಃ ।
ಸ ವಿನದ್ಯ ಮಹಾನಾದಂ ಭ್ರಾಮಯಾಮಾಸ ವೀರ್ಯವಾನ್ ॥

ಅನುವಾದ

ಆ ಮಹಾಪರ್ವತವನ್ನು ಒಂದು ಕೈಯಲ್ಲೆತ್ತಿ ಕೊಂಡು ಪರಾಕ್ರಮಿ ಪವನಕುಮಾರನು ಜೋರಾಗಿ ಗರ್ಜಿಸುತ್ತಾ ಅದನ್ನು ತಿರುಗಿಸತೊಡಗಿದನು.॥16॥

ಮೂಲಮ್ - 17

ತತಸ್ತಮಭಿದುದ್ರಾವ ರಾಕ್ಷಸೇಂದ್ರಮಕಂಪನಮ್ ।
ಪುರಾ ಹಿ ನಮುಚಿಂ ಸಂಖ್ಯೇ ವಜ್ರೇಣೇವ ಪುರಂದರಃ ॥

ಅನುವಾದ

ಹಿಂದೆ ದೇವೇಂದ್ರನು ವಜ್ರವನ್ನೆತ್ತಿಕೊಂಡು ಯುದ್ಧ ದಲ್ಲಿ ನಮೂಚಿಯ ಮೇಲೆ ಆಕ್ರಮಣ ಮಾಡಿದಂತೆ ಮಾರುತಿಯು ರಾಕ್ಷಸ ಅಕಂಪನ ಮೇಲೆ ಆಕ್ರಮಣ ಮಾಡಿದನು.॥17॥

ಮೂಲಮ್ - 18

ಅಕಂಪನಸ್ತು ತದ್ದೃಷ್ಟ್ವಾಗಿರಿಶೃಂಗಂ ಸಮುದ್ಯತಮ್ ।
ದೂರಾದೇವ ಮಹಾಬಾಣೈರರ್ಧಚಂದ್ರೈರ್ವ್ಯದಾರಯತ್ ॥

ಅನುವಾದ

ಆ ಎತ್ತಿಕೊಂಡಿರುವ ಪರ್ವತ ಶಿಖರವನ್ನು ಅಕಂಪನು ನೋಡಿ ಅರ್ಧಚಂದ್ರಾಕಾರನ ದೊಡ್ಡ ಬಾಣಗಳ ಮೂಲಕ ಅದನ್ನು ದೂರದಿಂದಲೇ ಚೂರು ಚೂರಾಗಿಸಿದನು.॥18॥

ಮೂಲಮ್ - 19

ತಂ ಪರ್ವತಾಗ್ರಮಾಕಾಶೇ ರಕ್ಷೋಬಾಣವಿದಾರಿತಮ್ ।
ವಿಶೀರ್ಣಂ ಪತಿತಂ ದೃಷ್ಟ್ವಾ ಹನುಮಾನ್ಕ್ರೋಧಮೂರ್ಛಿತಃ ॥

ಅನುವಾದ

ರಾಕ್ಷಸನ ಬಾಣದಿಂದ ವಿದೀರ್ಣವಾದ ಆ ಪರ್ವತ ಶಿಖರವು ಆಕಾಶದಲ್ಲೇ ಚದುರಿಹೋಗಿ ಬಿದ್ದುಹೋಯಿತು. ಇದನ್ನು ನೋಡಿ ಹನುಮಂತನು ಅತ್ಯಂತ ಕ್ರುದ್ಧನಾದನು.॥19॥

ಮೂಲಮ್ - 20

ಸೋಽಶ್ವಕರ್ಣಂ ಸಮಾಸಾದ್ಯ ರೋಷದರ್ಪಾನ್ವಿತೋ ಹರಿಃ ।
ತೂರ್ಣಮುತ್ಪಾಟಯಾಮಾಸ ಮಹಾಗಿರಿಮಿವೋಚ್ಛ್ರಿತಮ್ ॥

ಅನುವಾದ

ಮತ್ತೆ ರೋಷ, ದರ್ಪದಿಂದ ಆ ವಾನರವೀರನು ಮಹಾಪರ್ವತದಂತೆ ಎತ್ತರವಾದ ಅಶ್ವಕರ್ಣ ಎಂಬ ವೃಕ್ಷದ ಬಳಿಗೆ ಹೋಗಿ ಅದನ್ನು ಬೇಗನೇ ಕಿತ್ತುಕೊಂಡನು.॥20॥

ಮೂಲಮ್ - 21

ತಂ ಗೃಹೀತ್ವಾ ಮಹಾಸ್ಕನ್ಧಂ ಸೋಽಶ್ವಕರ್ಣಂ ಮಹಾದ್ಯುತಿಃ ।
ಪ್ರಹಸ್ಯ ಪರಯಾ ಪ್ರೀತ್ಯಾ ಭ್ರಾಮಯಾಮಾಸ ಸಂಯುಗೇ ॥

ಅನುವಾದ

ವಿಶಾಲ ರೆಂಬೆಗಳುಳ್ಳ ಆ ಅಶ್ವಕರ್ಣ ವೃಕ್ಷವನ್ನು ಕೈಯಲ್ಲೆತ್ತಿಕೊಂಡು ಮಹಾತೇಜಸ್ವೀ ಹನುಮಂತನು ಬಹಳ ಸಂತೋಷ ದಿಂದ ಅದನ್ನು ಗರಗರನೆ ತಿರುಗಿಸಲು ಪ್ರಾರಂಭಿಸಿದನು.॥21॥

ಮೂಲಮ್ - 22

ಪ್ರಧಾವನ್ನುರುವೇಗೇನ ಬಭಂಜತರಸಾ ದ್ರುಮಾನ್ ।
ಹನುಮಾನ್ ಪರಮಕ್ರುದ್ಧಶ್ಚರಣೈರ್ದಾರಯನ್ ಮಹೀಮ್ ॥

ಅನುವಾದ

ಅತ್ಯಂತ ಕ್ರುದ್ಧನಾಗಿ ಬಹಳ ವೇಗದಿಂದ ಅಕಂಪನ ಕಡೆಗೆ ವೇಗವಾಗಿ ಓಡುತ್ತಿರುವಾಗ ಅವನ ತೊಡೆಗಳಿಂದ ಹುಟ್ಟಿದ ಗಾಳಿಯಿಂದ ಅನೇಕ ವೃಕ್ಷಗಳು ಬುಡಮೇಲಾದವು. ಕಾಲುಗಳ ಸಂಘಟ್ಟನೆಯಿಂದ ಭೂಮಿಯನ್ನೇ ಸೀಳಿಕೊಂಡು ಮುಂದೆ ಹೋಗುತ್ತಿದ್ದನು.॥22॥

ಮೂಲಮ್ - 23

ಗಜಾಂಶ್ಚ ಸಗಜಾರೋಹಾನ್ ಸರಥಾನ್ ರಥಿನಸ್ತಥಾ ।
ಜಘಾನ ಹನುಮಾನ್ ಧೀಮಾನ್ರಾಕ್ಷಸಾಂಶ್ಚ ಪದಾತಿಗಾನ್ ॥

ಅನುವಾದ

ಯೋಧರ ಸಹಿತ ಆನೆಗಳನ್ನು, ರಥಸಹಿತ ರಥಿಕರನ್ನು ಮತ್ತು ಕಾಲಾಳುಗಳನ್ನು ಬುದ್ಧಿವಂತ ಹನುಮಂತನು ಸಂಹರಿಸಿ ಬಿಟ್ಟನು.॥23॥

ಮೂಲಮ್ - 24

ತಮಂತಕಮಿವ ಕ್ರುದ್ಧಂ ಸದ್ರುಮಂ ಪ್ರಾಣಹಾರಿಣಮ್ ।
ಹನುಮಂತಮಭಿಪ್ರೇಕ್ಷ್ಯ ರಾಕ್ಷಸಾ ವಿಪ್ರದುದ್ರುವುಃ ॥

ಅನುವಾದ

ಕ್ರೋಧಗೊಂಡು ಯಮನಂತೆ ವೃಕ್ಷವನ್ನು ಕೈಯ್ಯಲ್ಲೆತ್ತಿಕೊಂಡ ಪ್ರಾಣಾಹಾರೀ ಹನುಮಂತನನ್ನು ನೋಡಿ ರಾಕ್ಷಸರು ಓಡತೊಡಗಿದರು.॥24॥

ಮೂಲಮ್ - 25

ತಮಾಪತಂತಂ ಸಂಕ್ರುದ್ಧಂ ರಾಕ್ಷನಾಂ ಭಯಾವಹಮ್ ।
ದದರ್ಶಾಕಂಪನೋ ವೀರಶ್ಚುಕ್ಷೋಭ ಚ ನನಾದ ಚ ॥

ಅನುವಾದ

ರಾಕ್ಷಸರನ್ನು ಭಯಪಡಿಸುವ ಹನುಮಂತನು ಅತ್ಯಂತ ಕುಪಿತನಾಗಿ ಶತ್ರುಗಳ ಮೇಲೆ ಆಕ್ರಮಣ ಮಾಡುತ್ತಿದ್ದನು. ಆಗ ವೀರ ಅಕಂಪನು ಅವನನ್ನು ನೋಡುತ್ತಲೇ ಕ್ಷೋಭೆಗೊಂಡು ಜೋರಾಗಿ ಗರ್ಜಿಸತೊಡಗಿದನು.॥25॥

ಮೂಲಮ್ - 26

ಸ ಚತುರ್ದಶಭಿರ್ಬಾಣೈಃರ್ನಿಶಿತೈರ್ದೇಹವಿದಾರಣೈಃ ।
ನಿರ್ಬಿಭೇದ ಮಹಾವೀರ್ಯಂ ಹನೂಮಂತಮಕಂಪನಃ ॥

ಅನುವಾದ

ಅಕಂಪನು ದೇಹವನ್ನು ಸೀಳುವ ಹದಿನಾಲ್ಕು ಹರಿತವಾದ ಬಾಣಗಳನ್ನು ಪ್ರಯೋಗಿಸಿ ಮಹಾಪರಾಕ್ರಮಿ ಹನುಮಂತನನ್ನು ಗಾಯಗೊಳಿಸಿದನು.॥26॥

ಮೂಲಮ್ - 27

ಸ ತಥಾ ವಿಪ್ರಕೀರ್ಣಸ್ತು ನಾರಾಚೈಃ ಶಿತಶಕ್ತಿಭಿಃ ।
ಹನುಮಾನ್ದದೃಶೇ ವೀರಃ ಪ್ರರೂಢ ಇವ ಸಾನುಮಾನ್ ॥

ಅನುವಾದ

ಹೀಗೆ ನಾರಾಚಗಳಿಂದ ಮತ್ತು ತೀಕ್ಷ್ಣ ಶಕ್ತಿಗಳಿಂದ ವ್ಯಾಪ್ತನಾದ ಹನುಮಂತನು ಆಗ ವೃಕ್ಷಗಳಿಂದ ತುಂಬಿರುವ ಪರ್ವತದಂತೆ ಕಂಡು ಬರುತ್ತಿದ್ದನು.॥27॥

ಮೂಲಮ್ - 28

ವಿರರಾಜ ಮಹಾವೀರ್ಯೋ ಮಹಾಕಾಯೋ ಮಹಾಬಲಃ ।
ಪುಷ್ಪಿತಾಶೋಕಸಂಕಾಶೋ ವಿಧೂಮ ಇವ ಪಾವಕಃ ॥

ಅನುವಾದ

ಅವನ ಶರೀರವೆಲ್ಲವೂ ರಕ್ತದಿಂದ ತೊಯ್ದು ಹೋದದ್ದರಿಂದ ಮಹಾಪರಾಕ್ರಮಿ, ಮಹಾಬಲಿ, ಮಹಾಕಾಯ ಹನುಮಂತನು ಹೂವು ಅರಳಿದ ಅಶೋಕ ವೃಕ್ಷದಂತೆ, ಹೊಗೆಯಿಲ್ಲದೆ ಅಗ್ನಿಯಂತೆ ಪ್ರಕಾಶಿಸುತ್ತದ್ದನು.॥28॥

ಮೂಲಮ್ - 29

ತತೋಽನ್ಯಂ ವೃಕ್ಷಮುತ್ಪಾಟ್ಯ ಕೃತ್ವಾ ವೇಗಮನುತ್ತಮಮ್ ।
ಶಿರಸ್ಯಾಭಿಜಘಾನಾಶು ರಾಕ್ಷಸೇಂದ್ರಮಕಂಪನಮ್ ॥

ಅನುವಾದ

ಅನಂತರ ಹನುಮಂತನು ಮತ್ತೊಂದು ವೃಕ್ಷವನ್ನು ಕಿತ್ತು ಅತ್ಯಂತ ವೇಗದಿಂದ ತಿರುಗಿಸುತ್ತಾ ರಾಕ್ಷಸೇಂದ್ರ ಅಕಂಪನ ತಲೆಯಮೇಲೆ ಪ್ರಹರಿಸಿದನು.॥2.॥

ಮೂಲಮ್ - 30

ಸ ವೃಕ್ಷೇಣ ಹತಸ್ತೇನ ಸಕ್ರೋಧೇನ ಮಹಾತ್ಮನಾ ।
ರಾಕ್ಷಸೋ ವಾನರೇಂದ್ರೇಣ ಪಪಾತ ಚ ಮಮಾರ ಚ ॥

ಅನುವಾದ

ಕ್ರೋಧಗೊಂಡ ವಾನರ ಶ್ರೇಷ್ಠ ಮಹಾತ್ಮಾ ಹನುಮಂತನು ಹೊಡೆದ ವೃಕ್ಷದ ಬಲವಾದ ಏಟಿನಿಂದ ರಾಕ್ಷಸ ಅಕಂಪನು ನೆಲಕ್ಕೆ ಬಿದ್ದು ಸತ್ತುಹೋದನು.॥30॥

ಮೂಲಮ್ - 31

ತಂ ದೃಷ್ಟ್ವಾ ನಿಹತಂ ಭೂಮೌ ರಾಕ್ಷಸೇಂದ್ರಮಕಂಪನಮ್ ।
ವ್ಯಥಿತಾ ರಾಕ್ಷಸಾಃ ಸರ್ವೇ ಕ್ಷಿತಿಕಂಪ ಇವ ದ್ರುಮಾಃ ॥

ಅನುವಾದ

ಭೂಕಂಪವಾದಾಗ ಎಲ್ಲ ಮರಗಳು ನಡುಗುವಂತೆಯೇ ರಾಕ್ಷಸೇಂದ್ರ ಅಕಂಪನು ರಣಭೂಮಿ ಯಲ್ಲಿ ಹತನಾದುದನ್ನು ನೋಡಿ ಸಮಸ್ತ ರಾಕ್ಷಸರು ವ್ಯಥಿತರಾದರು.॥31॥

ಮೂಲಮ್ - 32

ತ್ಯಕ್ತ ಪ್ರಹರಣಾಃ ಸರ್ವೇ ರಾಕ್ಷಸಾಸ್ತೇ ಪರಾಜಿತಾಃ ।
ಲಂಕಾಮಭಿಯಯುಸ್ತ್ರಾಸಾದ್ ವಾನರೈಸ್ತೈರಭಿದ್ರುತಾಃ ॥

ಅನುವಾದ

ವಾನರರು ಹಿಮ್ಮೆಟ್ಟಿಸಿದ ರಾಕ್ಷಸರೆಲ್ಲರೂ ಸೋತು ತಮ್ಮ ತಮ್ಮ ಅಸ್ತ್ರ-ಶಸ್ತ್ರಗಳನ್ನು ಎಸೆದು ಭಯದಿಂದ ಲಂಕೆಗೆ ಓಡಿಹೋದರು.॥32॥

ಮೂಲಮ್ - 33

ತೇ ಮುಕ್ತಕೇಶಾಃ ಸಂಭ್ರಾಂತಾ ಭಗ್ನಮಾನಾಃ ಪರಾಜಿತಾಃ ।
ಭಯಾಚ್ಛ್ರಮಜಲೈರಂಗೈ ಪ್ರಸ್ರವದ್ಭಿರ್ವಿದುದ್ರುವುಃ ॥

ಅನುವಾದ

ಅವರ ಕೂದಲು ಕೆದರಿಹೋಗಿತ್ತು, ಗಾಬರಿಗೊಂಡು ಸೋತು ಹೋದುದರಿಂದ ಅವರ ಗರ್ವ ಚೂರುಚೂರಾಗಿ ಹೋಗಿತ್ತು. ಭಯದಿಂದ ಶರೀರದಲ್ಲಿ ಬೆವರು ಸುರಿಯುತ್ತಿದ್ದು, ಹಾಗೆಯೇ ಅವರು ಓಡುತ್ತಿದ್ದರು.॥33॥

ಮೂಲಮ್ - 34

ಅನ್ಯೋನ್ಯಂ ಯೇ ಪ್ರಮಥ್ನಂತೋ ವಿವಿಶುರ್ನಗರಂ ಭಯಾತ್ ।
ಪೃಷ್ಠತಸ್ತೇ ತು ಸಮ್ಮೂಢಾಃ ಪ್ರೇಕ್ಷಮಾಣಾ ಮುಹುರ್ಮುಹುಃ ॥

ಅನುವಾದ

ಭಯದಿಂದಾಗಿ ಒಬ್ಬರ ಮೇಲೆ ಒಬ್ಬರು ಬೀಳುತ್ತಾ ಓಡುತ್ತಾ ಪದೇಪದೇ ಹಿಂದಕ್ಕೆ ನೋಡುತ್ತಾ ಅವರು ಲಂಕೆಯನ್ನು ಸೇರಿದರು.॥34॥

ಮೂಲಮ್ - 35

ತೇಷು ಲಂಕಾಂ ಪ್ರವಿಷ್ಟೇಷು ರಾಕ್ಷಸೇಷು ಮಹಾಬಲಾಃ ।
ಸಮೇತ್ಯ ಹರಯಃ ಸರ್ವೇ ಹನೂಮಂತಮಪೂಜಯನ್ ॥

ಅನುವಾದ

ಆ ರಾಕ್ಷಸರು ಲಂಕೆಯನ್ನು ಹೊಕ್ಕ ಬಳಿಕ ಸಮಸ್ತ ಮಹಾಬಲಿ ವಾನರರು ಒಟ್ಟಗೆ ಸೇರಿ ಅಲ್ಲಿ ಹನುಮಂತನನ್ನು ಅಭಿನಂದಿಸಿದರು.॥35॥

ಮೂಲಮ್ - 36

ಸೋಽಪಿ ಪ್ರವೃದ್ಧಸ್ತಾನ್ಸರ್ವಾನ್ ಹರೀನ್ ಸಂಪ್ರತ್ಯಪೂಜಯತ್ ।
ಹನೂಮಾನ್ ಸತ್ತ್ವಸಂಪನ್ನೋ ಯಥಾರ್ಹಮನುಕೂಲತಃ ॥

ಅನುವಾದ

ಶಕ್ತಿಶಾಲಿ ಹನುಮಂತನು ಉತ್ಸಾಹಿತನಾಗಿ ಯಥಾ ಯೋಗ್ಯವಾಗಿ ವರ್ತಿಸುತ್ತಾ ಆ ಸಮಸ್ತ ವಾನರರನ್ನು ಚೆನ್ನಾಗಿ ಆದರಿಸಿದನು.॥36॥

ಮೂಲಮ್ - 37

ವಿನೇದುಶ್ಚ ಯಥಾಪ್ರಾಣಂ ಹರಯೋ ಜಿತಕಾಶಿನಃ ।
ಚಕೃಷುಶ್ಚ ಪುನಸ್ತತ್ರ ಸಪ್ರಾಣಾನೇವ ರಾಕ್ಷಸಾನ್ ॥

ಅನುವಾದ

ಬಳಿಕ ವಿಜಯೋಲ್ಲಾಸದಿಂದ ಸುಶೋಭಿತರಾದ ವಾನರರು ಪೂರ್ಣಬಲದಿಂದ ಗಟ್ಟಿಯಾಗಿ ಗರ್ಜಿಸಿದರು ಹಾಗೂ ಬದುಕಿ ಉಳಿದಿದ್ದ ರಾಕ್ಷಸರನ್ನು ಎಳೆದಾಡಿ ಕೊಲ್ಲಲು ಪ್ರಾರಂಭಿಸಿದರು.॥37॥

ಮೂಲಮ್ - 38

ಸ ವೀರಶೋಭಾಮಭಜನ್ಮಹಾಕಪಿಃ
ಸಮೇತ್ಯ ರಕ್ಷಾಂಸಿ ನಿಹತ್ಯ ಮಾರುತಿಃ ।
ಮಹಾಸುರಂ ಭೀಮಮಮಿತ್ರನಾಶನಂ
ವಿಷ್ಣುರ್ಯಥೈವೋರುಬಲಂ ಚಮೂಮುಖೇ ॥

ಅನುವಾದ

ಭಗವಾನ್ ವಿಷ್ಣು ಶತ್ರುನಾಶಕ, ಮಹಾಬಲೀ, ಭಯಂಕರ ಮಹಾ ಅಸುರ ಮಧುಕೈಟಭಾದಿಗಳನ್ನು ವಧಿಸಿ ವಿಜಯಲಕ್ಷ್ಮಿ ಯನ್ನು ವರಿಸಿದಂತೆಯೇ, ಮಹಾಕಪಿ ಹನುಮಂತನು ರಾಕ್ಷಸರ ಬಳಿಗೆ ಹೋಗಿ ಅವರನ್ನು ಯಮಸದನಕ್ಕೆ ಅಟ್ಟಿ ವಿರೋಚಿತ ಶೋಭೆಯನ್ನು ಧರಿಸಿದನು.॥38॥

ಮೂಲಮ್ - 39

ಅಪೂಜಯನ್ ದೇವಗಣಾಸ್ತದಾಕಪಿಂ
ಸ್ವಯಂ ಚ ರಾಮೋಽತಿ ಬಲಶ್ಚ ಲಕ್ಷ್ಮಣಃ ।
ತಥೈವ ಸುಗ್ರೀವಮುಖಾಃ ಪ್ಲವಂಗಮಾ
ವಿಭೀಷಣಶ್ಚೈವ ಮಹಾಬಲಸ್ತದಾ ॥

ಅನುವಾದ

ಆಗ ದೇವತೆಗಳು, ಶ್ರೀರಾಮ, ಲಕ್ಷ್ಮಣ, ಸುಗ್ರೀವಾದಿ ವಾನರರು ಹಾಗೂ ಅತ್ಯಂತ ಬಲಶಾಲಿ ವಿಭೀಷಣನೂ ಕೂಡ ಕಪಿವರ ಹನುಮಂತನನ್ನು ಯಥೋಚಿತವಾಗಿ ಸತ್ಕರಿಸಿದರು.॥39॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತಾರನೆಯ ಸರ್ಗ ಪೂರ್ಣವಾಯಿತು.॥56॥