वाचनम्
ಭಾಗಸೂಚನಾ
ರಾವಣನ ಆಜ್ಞೆಯಂತೆ ಅಕಂಪನೇ ಮೊದಲಾದ ರಾಕ್ಷಸರು ಯುದ್ಧಕ್ಕೆ ಬಂದುದು, ವಾನರರೊಡನೆ ಘೋರ ಸಂಗ್ರಾಮ
ಮೂಲಮ್ - 1
ವಜ್ರದಂಷ್ಟ್ರಂ ಹತಂ ಶ್ರುತ್ವಾ ವಾಲಿಪುತ್ರೇಣ ರಾವಣಃ ।
ಬಲಾಧ್ಯಕ್ಷ ಮುವಾಚೇದಂ ಕೃತಾಂಜಲಿಮುಪಸ್ಥಿತಮ್ ॥
ಅನುವಾದ
ಅಂಗದನ ಕೈಯಿಂದ ವಜ್ರದಂಷ್ಟ್ರನು ಸತ್ತುಹೋದ ಸಮಾಚಾರವನ್ನು ಕೇಳಿ ರಾವಣನು ಕೈಮುಗಿದು ತನ್ನ ಬಳಿ ನಿಂತಿದ್ದ ಸೇನಾಪತಿ ಪ್ರಹಸ್ತನಲ್ಲಿ ಇಂತೆಂದನು.॥1॥
ಮೂಲಮ್ - 2
ಶೀಘ್ರಂ ನಿರ್ಯಾಂತುದುರ್ಧರ್ಷಾ ರಾಕ್ಷಸಾ ಭೀಮವಿಕ್ರಮಾಃ ।
ಅಕಂಪನಂ ಪುರಸ್ಕೃತ್ಯ ಸರ್ವಶಸ್ತ್ರಾಸ್ತ್ರಕೋವಿದಮ್ ॥
ಅನುವಾದ
ಅಕಂಪನು ಎಲ್ಲ ಶಾಸ್ತ್ರಗಳನ್ನು ಬಲ್ಲವನು, ಆದ್ದರಿಂದ ಅವನನ್ನೇ ಮುಂದಿಟ್ಟು ಕೊಂಡು ಭಯಂಕರ ಪರಾಕ್ರಮಿ ಜಯಿಸಲು ದುಃಸಾಧ್ಯವಾದ ರಾಕ್ಷಸರು ಯುದ್ಧಕ್ಕಾಗಿ ಹೋಗಲಿ.॥2॥
ಮೂಲಮ್ - 3
ಏಷ ಶಾಸ್ತಾ ಚ ಗೋಪ್ತಾ ಚ ನೇತಾ ಚ ಯುಧಿ ಸತ್ತಮಃ ।
ಭೂತಿಕಾಮಶ್ಚ ಮೇ ನಿತ್ಯಂ ನಿತ್ಯಂ ಚ ಸಮರಪ್ರಿಯಃ ॥
ಅನುವಾದ
ಅಕಂಪನಿಗೆ ಯುದ್ಧವು ಸದಾ ಪ್ರಿಯವಾಗಿದೆ. ಅವನು ಯಾವಾಗಲೂ ನನ್ನ ಉನ್ನತಿಯನ್ನೇ ಬಯಸುತ್ತಾನೆ. ಇವನನ್ನು ಒಬ್ಬ ಶ್ರೇಷ್ಠ ಯೋಧನೆಂದು ತಿಳಿಯಲಾಗಿದೆ. ಇವನು ಶತ್ರುಗಳನ್ನು ದಂಡಿಸಲು, ಸೈನಿಕರನ್ನು ರಕ್ಷಿಸಲು ಹಾಗೂ ರಣರಂಗದಲ್ಲಿ ಸೈನ್ಯದ ಸಂಚಲನದಲ್ಲಿ ಸಮರ್ಥನಾಗಿದ್ದಾನೆ.॥3॥
ಮೂಲಮ್ - 4
ಏಷ ಜೇಷ್ಯತಿ ಕಾಕುತ್ಸ್ಥೌ ಸುಗ್ರೀವಂ ಚ ಮಹಾಬಲಮ್ ।
ವಾನರಾಂಶ್ಚಾಪರಾನ್ ಘೋರಾನ್ ಹನಿಷ್ಯತಿ ನ ಸಂಶಯಃ ॥
ಅನುವಾದ
ಅಕಂಪನು ರಾಮ-ಲಕ್ಷ್ಮಣರಿಬ್ಬರನ್ನು ಹಾಗೂ ಮಹಾಬಲಿ ಸುಗ್ರೀವನನ್ನು ಸೋಲಿಸಬಲ್ಲನು ಮತ್ತು ಇತರ ವಾನರರನ್ನೂ ಸಂಹರಿಸುವುದರಲ್ಲಿ ಸಂಶಯವೇ ಇಲ್ಲ.॥4॥
ಮೂಲಮ್ - 5
ಪರಿಗೃಹ್ಯ ಚ ತಾಮಾಜ್ಞಾಂ ರಾವಣಸ್ಯ ಮಹಾಬಲಃ ।
ಬಲಂ ಸಂಪ್ರೇರಯಾಮಾಸ ತದಾ ಲಘುಪರಾಕ್ರಮಃ ॥
ಅನುವಾದ
ರಾವಣನ ಆಜ್ಞೆಯನ್ನು ಶಿರಸಾವಹಿಸಿ ಶೀಘ್ರಪರಾಕ್ರಮಿ ಮಹಾಬಲಿ ಸೇನಾಧ್ಯಕ್ಷನು ಆಗ ಯುದ್ಧಕ್ಕಾಗಿ ಸೈನ್ಯವನ್ನು ಕಳಿಸಿಕೊಟ್ಟನು.॥5॥
ಮೂಲಮ್ - 6
ತತೋ ನಾನಾ ಪ್ರಹರಣಾ ಭೀಮಾಕ್ಷಾ ಭೀಮದರ್ಶನಾಃ ।
ನಿಷ್ಪೇತೂ ರಾಕ್ಷಸಾ ಮುಖ್ಯಾ ಬಲಾಧ್ಯಕ್ಷ ಪ್ರಚೋದಿತಾಃ ॥
ಅನುವಾದ
ಸೇನಾಪತಿಯಿಂದ ಪ್ರೇರಿತರಾದ ಭಯಾನಕ ಕಣ್ಣುಗಳುಳ್ಳ ಮುಖ್ಯಮುಖ್ಯ ಭಯಂಕರ ರಾಕ್ಷಸರು ನಾನಾ ವಿಧದ ಅಸ್ತ್ರ-ಶಸ್ತ್ರಗಳನ್ನು ಹಿಡಿದು ನಗರದಿಂದ ಹೊರಟರು.॥6॥
ಮೂಲಮ್ - 7½
ರಥಮಾಸ್ಥಾಯ ವಿಪುಲಂ ತಪ್ತಕಾಂಚನಭೂಷಣಮ್ ।
ಮೇಘಾಭೋ ಮೇಘವರ್ಣಶ್ಚ ಮೇಘಸ್ವನಮಹಾಸ್ವನಃ ॥
ರಾಕ್ಷಸೈಃ ಸಂವೃತೋ ಘೋರೈಸ್ತದಾ ನಿರ್ಯಾತ್ಯಕಂಪನ ।
ಅನುವಾದ
ಆಗಲೇ ಪುಟಕ್ಕಿಟ್ಟ ಚಿನ್ನದಿಂದ ವಿಭೂಷಿತ ವಿಶಾಲ ರಥದಲ್ಲಿ ಕುಳಿತು, ಘೋರ ರಾಕ್ಷಸರಿಂದ ಸುತ್ತುವರೆದು ಅಕಂಪನೂ ಹೊರಟ. ಅವನು ಕಪ್ಪಾದ ಮೋಡದಂತೆ ಬಣ್ಣದವನಾಗಿದ್ದು, ಗರ್ಜನೆಯು ಮೇಘದಂತೆ ಇತ್ತು.॥7½॥
ಮೂಲಮ್ - 8½
ನಹಿ ಕಂಪಯಿತುಂ ಶಕ್ಯಃ ಸುರೈರಪಿ ಮಹಾಮೃಧೇ ॥
ಅಕಂಪನಸ್ತತಸ್ತೇಷಾಮಾದಿತ್ಯ ಇವ ತೇಜಸಾ ।
ಅನುವಾದ
ಮಹಾಸಮರದಲ್ಲಿ ದೇವತೆಗಳೂ ಕೂಡ ಅವನನ್ನು ಕಂಪಿತನನ್ನಾಗಿಸಲಿಲ್ಲ. ಅದಕ್ಕಾಗಿ ಅವನು ಅಕಂಪನ ಎಂದು ವಿಖ್ಯಾತನಾಗಿದ್ದ ಹಾಗೂ ರಾಕ್ಷಸರಲ್ಲಿ ಸೂರ್ಯನಂತೆ ತೇಜಸ್ವಿಯಾಗಿದ್ದ.॥8½॥
ಮೂಲಮ್ - 9½
ತಸ್ಯ ನಿರ್ಧಾವಮಾನಸ್ಯ ಸಂರಬ್ಧಸ್ಯ ಯುಯುತ್ಸಯಾ ॥
ಅಕಸ್ಮಾದ್ ದೈನ್ಯಮಾಗಚ್ಛದ್ಧಯಾನಾಂ ರಥವಾಹಿನಾಮ್ ।
ಅನುವಾದ
ರೋಷಾವೇಶದಿಂದ ಯುದ್ಧದ ಇಚ್ಛೆಯಿಂದ ಆಕ್ರಮಣ ಮಾಡುವ ಅಕಂಪನ ರಥಕ್ಕೆ ಹೂಡಿದ ಕುದುರೆಗಳು ಕಾರಣವಿಲ್ಲದೆ ದೈನ್ಯಭಾವ ಹೊಂದಿದವು.॥9½॥
ಮೂಲಮ್ - 10½
ವ್ಯಸ್ಫುರನ್ನಯನಂ ಚಾಸ್ಯ ಸವ್ಯಂ ಯುದ್ಧಾಭಿನಂದಿನಃ ॥
ವಿವರ್ಣೋ ಮುಖವರ್ಣಶ್ಚ ಗದ್ಗದಶ್ಚಾಭವತ್ ಸ್ವನಃ ।
ಅನುವಾದ
ಅಕಂಪನು ಯುದ್ಧವನ್ನು ಅಭಿನಂದಿಸುವನಾಗಿದ್ದರೂ ಆಗ ಅವನ ಎಡಕಣ್ಣು ಹಾರತೊಡಗಿತು. ಮುಖಕಾಂತಿಯು ಮಂಕಾಯಿತು, ವಾಣಿ ಗದ್ಗದವಾಯಿತು.॥10½॥
ಮೂಲಮ್ - 11½
ಅಭವತ್ಸುದಿನೇ ಕಾಲೇ ದುರ್ದಿನಂ ರೂಕ್ಷಮಾರುತಮ್ ॥
ಊಚುಃ ಖಗಾಮೃಗಾಃ ಸರ್ವೇ ವಾಚಃ ಕ್ರೂರಾ ಭಯಾವಹಾಃ ।
ಅನುವಾದ
ಆ ದಿನವು ಸೂರ್ಯನು ಪ್ರಕಾಶಿಸುತ್ತಾ ಸುದಿನವಾಗಿದ್ದರೂ ಸುಂಟರಗಾಳಿಯಿಂದ ಧೂಳು ತುಂಬಿ ದುರ್ದಿನ ದಂತಾಯಿತು. ಎಲ್ಲ ಪಶು-ಪಕ್ಷಿಗಳು ಕ್ರೂರವಾಗಿ ಕೂಗಿಕೊಳ್ಳುತ್ತಿದ್ದವು.॥11½॥
ಮೂಲಮ್ - 12½
ಸ ಸಿಂಹೋಪಚಿತಸ್ಕಂಧಃ ಶಾರ್ದೂಲಸಮವಿಕ್ರಮಃ ॥
ತಾನುತ್ಪಾತಾನಚಿಂತ್ಯೈವ ನಿರ್ಜಗಾಮ ರಣಾಜಿರಮ್ ।
ಅನುವಾದ
ಅಕಂಪನ ಹೆಗಲು ಸಿಂಹ ದಂತೆ ಪುಷ್ಟವಾಗಿತ್ತು. ಅವನ ಪರಾಕ್ರಮ ಹುಲಿಯಂತಿತ್ತು. ಅವನು ಹಿಂದಿನ ಉತ್ಪಾತಗಳನ್ನು ಲೆಕ್ಕಿಸದೆ ಯುದ್ಧಭೂಮಿಗೆ ಹೋದನು.॥12½॥
ಮೂಲಮ್ - 13½
ತಥಾ ನಿರ್ಗಚ್ಛತಸ್ತಸ್ಯ ರಕ್ಷಸಃ ಸಹ ರಾಕ್ಷಸೈಃ ॥
ಬಭೂವ ಸುಮಹಾನ್ನಾದಃ ಕ್ಷೋಭಯನ್ನಿವ ಸಾಗರಮ್ ।
ಅನುವಾದ
ಆ ರಾಕ್ಷಸನು ಇತರ ರಾಕ್ಷಸರೊಂದಿಗೆ ಲಂಕೆಯಿಂದ ಹೊರಟಾಗ ಸಮುದ್ರವು ಕ್ಷೋಭೆಗೊಂಡು ಮಹಾ ಕೋಲಾಹಲ ಉಂಟಾಯಿತು.॥13½॥
ಮೂಲಮ್ - 14
ತೇನ ಶಬ್ದೇನ ವಿತ್ರಸ್ತಾ ವಾನರಾಣಾಂ ಮಹಾಚಮೂಃ ॥
ಮೂಲಮ್ - 15
ದ್ರುಮಶೈಲಪ್ರಹಾರಾಣಾಂ ಯೋದ್ಧುಂ ಸಮಪತಿಷ್ಠತಾಮ್ ।
ತೇಷಾಂ ಯುದ್ಧಂ ಮಹಾರೌದ್ರಂ ಸಂಜಜ್ಞೇ ಕಪಿರಕ್ಷಸಾಮ್ ॥
ಅನುವಾದ
ಆ ಮಹಾ ಕೋಲಾಹಲದಿಂದ ವೃಕ್ಷ ಪರ್ವತಗಳನ್ನು ಧರಿಸಿಕೊಂಡು ಯುದ್ಧಕ್ಕಾಗಿ ಸಿದ್ಧರಾಗಿ ನಿಂತಿದ್ದ ವಾನರರ ವಿಶಾಲಸೈನ್ಯವು ಭಯಗೊಂಡಿತು. ಅನಂತರ ವಾನರರಿಗೂ ರಾಕ್ಷಸರಿಗೂ ಮಹಾ ಭಯಂಕರ ಯುದ್ಧ ಪ್ರಾರಂಭವಾಯಿತು.॥14-15॥
ಮೂಲಮ್ - 16
ರಾಮರಾವಣಯೋರರ್ಥೇ ಸಮಭಿತ್ಯಕ್ತದೇಹಿನಃ ।
ಸರ್ವೇ ಹ್ಯತಿಬಲಾಃ ಶೂರಾಃ ಸರ್ವೇ ಪರ್ವತಸಂನಿಭಾಃ ॥
ಅನುವಾದ
ಶ್ರೀರಾಮ ಮತ್ತು ರಾವಣನ ನಿಮಿತ್ತ ದೇಹತ್ಯಾಗಕ್ಕೂ ಸಿದ್ಧರಾದ ಅವರೆಲ್ಲರೂ ಮಹಾಬಲಶಾಲಿಗಳೂ, ಶೂರರೂ, ಪರ್ವತದಂತೆ ವಿಶಾಲಕಾಯರಾಗಿದ್ದರು.॥16॥
ಮೂಲಮ್ - 17½
ಹರಯೋ ರಾಕ್ಷಸಾಶ್ಚೈವ ಪರಸ್ಪರಜಿಘಾಂಸಯಾಃ ।
ತೇಷಾಂ ವಿನರ್ದತಾಂ ಶಬ್ದಃ ಸಂಯುಗೇಽತಿತರಸ್ವಿನಾಮ್ ॥
ಶುಶ್ರುವೇ ಸುಮಹಾನ್ ಕೋಪಾದನ್ಯೋನ್ಯಮಭಿಗರ್ಜತಾಮ್ ।
ಅನುವಾದ
ವಾನರ ಹಾಗೂ ರಾಕ್ಷಸರು ಒಬ್ಬರು ಮತ್ತೊಬ್ಬರನ್ನು ಸಂಹರಿಸುವ ಇಚ್ಛೆಯಿಂದ ಇಲ್ಲಿ ನೆರೆದಿದ್ದರು ಅವರು ರಣರಂಗದಲ್ಲಿ ಅತ್ಯಂತ ವೇಗಶಾಲಿಗಳಾಗಿದ್ದು, ಕೋಲಾಹಲವೆಬ್ಬಿಸುತ್ತಾ ಪರಸ್ಪರ ಗುರಿಯಾಗಿಸಿಕೊಂಡು ಗರ್ಜಿಸುತ್ತಿದ್ದರು. ಅವರ ಮಹಾನಾದವು ಬಹಳ ದೂರದವರೆಗೆ ಕೇಳಿ ಬರುತ್ತಿತ್ತು.॥17॥
ಮೂಲಮ್ - 18½
ರಜಶ್ಚಾರುಣವರ್ಣಾಭಂ ಸುಭೀಮಮಭವದ್ ಭೃಶಮ್ ॥
ಉದ್ಧೃತಂ ಹರಿರಕ್ಷೋಭಿಃ ಸಂರುರೋಧ ದಿಶೋ ದಶ ।
ಅನುವಾದ
ವಾನರ-ರಾಕ್ಷಸರು ಪಾದಾಘಾತದಿಂದ ಎದ್ದ ಕೆಂಪು ಧೂಳು ಭಯಂಕರವಾಗಿ ಅನಿಸುತ್ತಿತ್ತು. ಅದು ಹತ್ತು ದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿತು.॥18½॥
ಮೂಲಮ್ - 19½
ಅನ್ಯೋನ್ಯಂ ರಜಸಾ ತೇನ ಕೌಶೇಯೋದ್ಧತಪಾಂಡುನಾ ॥
ಸಂವೃತಾನಿ ಚ ಭೂತಾನಿ ದದೃಶುರ್ನ ರಣಾಜಿರೇ ।
ಅನುವಾದ
ಆ ಧೂಳು ಅಲ್ಲಾಡುತ್ತಿರುವ ನವಿರಾದ ರೇಷ್ಮೆ ಬಟ್ಟೆಯಂತೆ ಕಂಡುಬರುತ್ತಿತ್ತು. ಅದರಿಂದ ಸಮರಾಂಗಣದ ಸಮಸ್ತ ಪ್ರಾಣಿಗಳು ಮುಚ್ಚಿಹೋದವು. ಆದ್ದರಿಂದ ವಾನರರು-ರಾಕ್ಷಸರು ಪರಸ್ಪರ ನೋಡದಾದರು.॥19½॥
ಮೂಲಮ್ - 20½
ನ ಧ್ವಜೋ ನ ಪತಾಕಾ ವಾ ಚರ್ಮ ವಾ ತುರಗೋಽಪಿ ವಾ ॥
ಆಯುಧಂ ಸ್ಯಂದನೋ ವಾಪಿ ದದೃಶೇ ತೇನ ರೇಣುನಾ ।
ಅನುವಾದ
ಆ ಧೂಳು ಆಚ್ಛಾದಿತವಾಗಿ ಧ್ವಜ, ಪತಾಕೆ, ಗುರಾಣಿ, ಕುದುರೆಗಳು, ಅಸ್ತ್ರ-ಶಸ್ತ್ರ, ರಥ ಇವು ಯಾವುದೇ ವಸ್ತು ಕಂಡು ಬರುತ್ತಿರಲಿಲ್ಲ.॥20½॥
ಮೂಲಮ್ - 21½
ಶಬ್ದಶ್ಚ ಸುಮಹಾಂಸ್ತೇಷಾಂ ನರ್ದತಾಮಭಿಧಾವತಾಮ್ ॥
ಶ್ರೂಯತೇ ತುಮುಲೇ ಯುದ್ಧೇ ನ ರೂಪಾಣಿ ಚಕಾಶಿರೇ ।
ಅನುವಾದ
ಗರ್ಜಿಸುತ್ತಾ ಓಡುತ್ತಿರುವ ಪ್ರಾಣಿಗಳ ಮಹಾಭಯಂಕರ ಶಬ್ದವು ರಣರಂಗದಲ್ಲಿ ಎಲ್ಲರಿಗೂ ಕೇಳಿ ಬರುತ್ತಿತ್ತು; ಆದರೆ ಅವುಗಳು ಕಂಡುಬರುತ್ತಿರಲಿಲ್ಲ.॥21½॥
ಮೂಲಮ್ - 22½
ಹರೀನೇವ ಸುಸಂರುಷ್ಟಾ ಹರಯೋಜಘ್ನು ರಾಹವೇ ॥
ರಾಕ್ಷಸಾ ರಾಕ್ಷಸಾಂಶ್ಚಾಪಿ ನಿಜಘ್ನುಸ್ತಿಮಿರೇ ತದಾ ।
ಅನುವಾದ
ಅಂಧಕಾರ ಆವರಿಸಿದ ಯುದ್ಧರಂಗದಲ್ಲಿ ಅತ್ಯಂತ ಕುಪಿತರಾದ ವಾನರರು ವಾನರರನ್ನೇ ಹಾಗೂ ರಾಕ್ಷಸರು ರಾಕ್ಷಸರನ್ನೇ ಹೊಡೆಯತೊಡಗಿದರು.॥22½॥
ಮೂಲಮ್ - 23½
ತೇ ಪರಾಂಶ್ಚ ವಿನಿಘ್ನಂತಃ ಸ್ವಾಂಶ್ಚ ವಾನರರಾಕ್ಷಸಾಃ ॥
ರುಧಿರಾರ್ದ್ರಾಂ ತದಾ ಚಕ್ರುರ್ಮಹೀಂ ಪಂಕಾನುಲೇಪನಾಮ್ ।
ಅನುವಾದ
ಹಲವು ಬಾರಿ ತಮ್ಮ ಕಡೆಯವರನ್ನು ಕೆಲವು ಸಲ ಶತ್ರುಪಕ್ಷದ ಯೋಧರನ್ನು ಸಂಹರಿಸಿ ರಕ್ತದ ಹೊಳೆಯನ್ನೇ ಹರಿಸಿದರು. ಅಲ್ಲಿ ಎಲ್ಲೆಡೆ ಕೆಸರೇ ತುಂಬಿಹೋಯಿತು.॥23½॥
ಮೂಲಮ್ - 24½
ತತಸ್ತು ರುಧಿರೌಘೇಣ ಸಿಕ್ತಂ ವ್ಯಪಗತಂ ರಜಃ ॥
ಶರೀರಶವಸಂಕೀರ್ಣಾ ಬಭೂವ ಚ ವಸುಂಧರಾ ।
ಅನುವಾದ
ಅನಂತರ ರಕ್ತದ ಪ್ರವಾಹದಿಂದಾಗಿ ಧೂಳು ಅಡಗಿತು. ಇಡೀ ಯುದ್ಧಭೂಮಿಯು ಶವಗಳಿಂದ ತುಂಬಿಹೋಯಿತು.॥24½॥
ಮೂಲಮ್ - 25½
ದ್ರುಮಶಕ್ತಿಗದಾಪ್ರಾಸೈಃ ಶಿಲಾಪರಿಘತೋಮರೈಃ ॥
ರಾಕ್ಷಸಾ ಹರಯಸ್ತೂರ್ಣಂ ಜಘ್ನುರನ್ಯೋನ್ಯಮೋಜಸಾ ।
ಅನುವಾದ
ವಾನರರು ಮತ್ತು ರಾಕ್ಷಸರು ಒಬ್ಬರ ಮೇಲೊಬ್ಬರು ವೃಕ್ಷ, ಶಕ್ತಿ, ಗದೆ, ಪ್ರಾಸ, ಶಿಲೆ, ಪರಿಘ ಮತ್ತು ತೋಮರ ಮೊದಲಾದವುಗಳಿಂದ ಪ್ರಹಾರ ಮಾಡುತ್ತಿದ್ದರು.॥25½॥
ಮೂಲಮ್ - 26½
ಬಾಹುಭಿಃ ಪರಿಘಾಕಾರೈರ್ಯುಧ್ಯಂತಃ ಪರ್ವತೋಪಮಾನ್ ॥
ಹರಯೋ ಭೀಮಕರ್ಮಾಣೋ ರಾಕ್ಷಸಾಂ ಜಘ್ನುರಾಹವೇ ।
ಅನುವಾದ
ಭಯಂಕರ ಕರ್ಮಮಾಡುವ ವಾನರರು ಪರಿಘಗಳಂತಹ ತಮ್ಮ ಭುಜಗಳಿಂದ ಪರ್ವತಾಕಾರ ರಾಕ್ಷಸರೊಂದಿಗೆ ಯುದ್ಧ ಮಾಡುತ್ತಾ ಅವರನ್ನು ಕೊಲ್ಲತೊಡಗಿದರು.॥26½॥
ಮೂಲಮ್ - 27½
ರಾಕ್ಷಸಾಸ್ತ್ವಭಿಸಂಕ್ರುದ್ಧಾಃ ಪ್ರಾಸತೋಮರಪಾಣಯಃ ॥
ಕಪೀನ್ ನಿಜಘ್ನರೇ ತತ್ರ ಶಸ್ತ್ರೈಃ ಪರಮದಾರುಣೈಃ ।
ಅನುವಾದ
ಅತ್ತ ರಾಕ್ಷಸರೂ ಕೂಡ ಅತ್ಯಂತ ಕುಪಿತರಾಗಿ ಕೈಗಳಲ್ಲಿ ಪ್ರಾಸ, ತೋಮರ ಧರಿಸಿ ಅತ್ಯಂತ ಭಯಂಕರ ಶಸಗಳಿಂದ ವಾನರರನ್ನು ವಧಿಸತೊಡಗಿದರು.॥27½॥
ಮೂಲಮ್ - 28½
ಅಕಂಪನಃ ಸುಸಂಕ್ರುದ್ಧೋ ರಾಕ್ಷಸಾನಾಂ ಚಮೂಪತಿಃ ॥
ಸಂಹರ್ಷಯತಿ ತಾನ್ ಸರ್ವಾನ್ ರಾಕ್ಷಸಾನ್ ಭೀಮವಿಕ್ರಮಾನ್ ।
ಅನುವಾದ
ಆಗ ಹೆಚ್ಚು ರೋಷಗೊಂಡ ರಾಕ್ಷಸ ಸೇನಾಪತಿ ಅಂಕಪನೂ ಕೂಡ ಭಯಾನಕ ಪರಾಕ್ರಮ ಪ್ರಕಟಿಸುತ್ತಾ ಎಲ್ಲ ರಾಕ್ಷಸರ ಹರ್ಷವನ್ನು ಹೆಚ್ಚಿಸತೊಡಗಿದನು.॥28½॥
ಮೂಲಮ್ - 29½
ಹರಯಸ್ತ್ವಪಿ ರಕ್ಷಾಂಸಿ ಮಹಾದ್ರುಮಮಹಾಶ್ಮಭಿಃ ॥
ವಿದಾರಯಂತ್ಯಭಿಕ್ರಮ್ಯ ಶಸ್ತ್ರಾಣ್ಯಾಚ್ಛಿದ್ಯ ವೀರ್ಯತಃ ।
ಅನುವಾದ
ವಾನರರೂ ಕೂಡ ಆಕ್ರಮಣ ಮಾಡಿ ಬಲವಂತವಾಗಿ ರಾಕ್ಷಸರ ಅಸ್ತ್ರ-ಶಸ್ತ್ರಗಳನ್ನು ಕಿತ್ತುಕೊಂಡು ದೊಡ್ಡ ದೊಡ್ಡ ವೃಕ್ಷಗಳಿಂದ, ಬಂಡೆಗಳಿಂದ ಅವರನ್ನು ಸೀಳಿಹಾಕುತ್ತಿದ್ದರು.॥29½॥
ಮೂಲಮ್ - 30½
ಏತಸ್ಮಿನ್ನಂತರೇ ವೀರಾ ಹರಯಃ ಕುಮುದೋ ನಲಃ ॥
ಮೈಂದಶ್ಚ ದ್ವಿವಿದಃ ಕ್ರುದ್ಧಾಶ್ಚಕ್ರುರ್ವೇಗಮನುತ್ತಮಮ್ ।
ಅನುವಾದ
ಆಗಲೇ ವೀರ ವಾನರ ಕುಮುದ, ನಳ, ಮೈಂದ ಮತ್ತು ದ್ವಿವಿದನು ಕುಪಿತರಾಗಿ ತಮ್ಮ ಪರಮೋತ್ತಮ ವೇಗ ಪ್ರಕಟಿಸಿದರು.॥30½॥
ಮೂಲಮ್ - 31
ತೇ ತು ವೃಕ್ಷೈರ್ಮಹಾವೀರಾ ರಾಕ್ಷಸಾನಾಂ ಚಮೂಮುಖೇ ॥
ಮೂಲಮ್ - 32
ಕದನಂ ಸುಮಹಚ್ಚಕ್ರುರ್ಲೀಲಯಾ ಹರಿಪುಂಗವಾಃ ।
ಮಮಂಥೂ ರಾಕ್ಷಸಾನ್ಸರ್ವೇ ನಾನಾ ಪ್ರಹರಣೈರ್ಭೃಶಮ್ ॥
ಅನುವಾದ
ಆ ಮಹಾವೀರ ವಾನರಶ್ರೇಷ್ಠರು ಯುದ್ಧಸ್ಥಳದಲ್ಲಿ ವೃಕ್ಷಗಳಿಂದ ಲೀಲಾಜಾಲವಾಗಿ ರಾಕ್ಷಸರನ್ನು ಭಾರೀ ಸಂಹಾರ ಮಾಡಿದರು. ಅವರೆಲ್ಲರೂ ನಾನಾ ಪ್ರಕಾರದಿಂದ ಅಸ್ತ್ರ-ಶಸ್ತ್ರಗಳಿಂದ ರಾಕ್ಷಸರನ್ನು ಚೆನ್ನಾಗಿ ಮಥಿಸಿಬಿಟ್ಟರು.॥31-32॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೈದನೆಯ ಸರ್ಗ ಪೂರ್ಣವಾಯಿತು.॥55॥