वाचनम्
ಭಾಗಸೂಚನಾ
ಅಂಗದ ವಜ್ರದಂಷ್ಟ್ರನ ಯುದ್ಧ, ಅಂಗದನಿಂದ ವಜ್ರದಂಷ್ಟ್ರನ ಸಂಹಾರ
ಮೂಲಮ್ - 1
ಸ್ವಬಲಸ್ಯ ಚ ಘಾತೇನ ಅಂಗದಸ್ಯ ಬಲೇನ ಚ ।
ರಾಕ್ಷಸಃ ಕ್ರೋಧಮಾವಿಷ್ಟೋ ವಜ್ರದಂಷ್ಟ್ರೋ ಮಹಾಬಲಃ ॥
ಅನುವಾದ
ಅಂಗದನ ಪರಾಕ್ರಮದಿಂದ ತನ್ನ ಸೈನ್ಯದ ಸಂಹಾರವಾಗುತ್ತಿರುವುದನ್ನು ನೋಡಿ ಬಹಾಬಲಿ ರಾಕ್ಷಸ ವಜ್ರ ದಂಷ್ಟ್ರನು ಅತ್ಯಂತ ಕ್ರೋಧಾವಿಷ್ಟನಾದನು.॥1॥
ಮೂಲಮ್ - 2
ವಿಸ್ಫಾರ್ಯ ಚ ಧನುರ್ಘೋರಂ ಶಕ್ರಾಶನಿಸಮಪ್ರಭಮ್ ।
ವಾನರಾಣಾಮನೀಕಾನಿ ಪ್ರಾಕಿರಚ್ಛರವೃಷ್ಟಿಭಿಃ ॥
ಅನುವಾದ
ಅವನು ಇಂದ್ರನ ವಜ್ರದಂತಹ ತನ್ನ ತೇಜಸ್ವೀ ಭಯಂಕರ ಧನುಸ್ಸನ್ನೆತ್ತಿಕೊಂಡು ವಾನರ ಸೈನ್ಯದ ಮೇಲೆ ಬಾಣಗಳ ಮಳೆಗರೆಯತೊಡಗಿದನು.॥2॥
ಮೂಲಮ್ - 3
ರಾಕ್ಷಸಾಶ್ಚಾಪಿ ಮುಖ್ಯಾಸ್ತೇ ರಥೇಷು ಸಮವಸ್ಥಿತಾಃ ।
ನಾನಾ ಪ್ರಹರಣಾಃ ಶೂರಾಃ ಪ್ರಾಯುಧ್ಯಂತ ತದಾ ರಣೇ ॥
ಅನುವಾದ
ಅವನೊಂದಿಗೆ ಇತರ ಪ್ರಧಾನ ಶೂರ-ವೀರ ರಾಕ್ಷಸರೂ ರಥಗಳಲ್ಲಿ ಕುಳಿತು ಬಗೆಬಗೆಯ ಆಯುಧಗಳಿಂದ ಸಂಗ್ರಾಮ ಭೂಮಿಯಲ್ಲಿ ಯುದ್ಧಮಾಡತೊಡಗಿದರು.॥3॥
ಮೂಲಮ್ - 4
ವಾನರಾಣಾಂ ತು ಶೂರಾಸ್ತು ತೇ ಸರ್ವೇ ಪ್ಲವಗರ್ಷಭಾಃ ।
ಅಯುಧ್ಯಂತ ಶಿಲಾಹಸ್ತಾಃ ಸಮವೇತಾಃ ಸಮಂತತಃ ॥
ಅನುವಾದ
ವಾನರರಲ್ಲಿಯೂ ವಿಶೇಷ ವೀರರಾದ ಎಲ್ಲ ಶ್ರೇಷ್ಠ ವಾನರರು ಎಲ್ಲೆಡೆಗಳಿಂದ ಒಂದಾಗಿ ಕೈಗಳಲ್ಲಿ ಬಂಡೆಗಳನ್ನೆತ್ತಿಕೊಂಡು ಕಾದತೊಡಗಿದರು.॥4॥
ಮೂಲಮ್ - 5
ತತ್ರಾಯುಧ ಸಹಸ್ರಾಣಿ ತಸ್ಮಿನ್ನಾಯೋಧನೇ ಭೃಶಮ್ ।
ರಾಕ್ಷಸಾಃ ಕಪಿಮುಖ್ಯೇಷು ಪಾತಯಾಂ ಚಕ್ರಿರೇ ತದಾ ॥
ಅನುವಾದ
ಆಗ ಆ ರಣಭೂಮಿಯಲ್ಲಿ ರಾಕ್ಷಸರು ಮುಖ್ಯಮುಖ್ಯ ವಾನರರ ಮೇಲೆ ಸಾವಿರಾರು ಅಸ್ತ್ರ-ಶಸ್ತ್ರಗಳ ಮಳೆ ಸುರಿಸಿದರು.॥5॥
ಮೂಲಮ್ - 6
ವಾನರಾಶ್ಚೈವ ರಕ್ಷಃಸು ಗಿರೀವೃಕ್ಷಾನ್ ಮಹಾಶಿಲಾಃ ।
ಪ್ರವೀರಾಃ ಪಾತಯಾಮಾಸುರ್ಮತ್ತವಾರಣಸಂನಿಭಾಃ ॥
ಅನುವಾದ
ಮದೋನ್ಮತ್ತ ಆನೆಗಳಂತೆ ವಿಶಾಲಕಾಯ ವೀರ ವಾನರರೂ ಕೂಡ ರಾಕ್ಷಸರ ಮೇಲೆ ಅನೇಕಾನೇಕ ಪರ್ವತ, ವೃಕ್ಷ ಮತ್ತು ದೊಡ್ಡ ದೊಡ್ಡ ಶಿಲೆಗಳನ್ನು ಎತ್ತಿ ಹಾಕಿದರು.॥6॥
ಮೂಲಮ್ - 7
ಶೂರಾಣಾಂ ಯುಧ್ಯಮಾನಾನಾಂ ಸಮರೇಷ್ವ ನಿವರ್ತಿನಾಮ್ ।
ತದ್ರಾಕ್ಷಸಗಣಾನಾಂ ಚ ಸುಯುದ್ಧಂ ಸಮವರ್ತತ ॥
ಅನುವಾದ
ಯುದ್ಧದಲ್ಲಿ ಬೆನ್ನು ತೋರದ, ಉತ್ಸಾಹದಿಂದ ಕಾದಾಡುತ್ತಿರುವ ಶೂರವೀರ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ನಡೆದ ಆ ಯುದ್ಧವು ಉತ್ತರೋತ್ತರ ಹೆಚ್ಚುತ್ತಾ ಹೋಯಿತು.॥7॥
ಮೂಲಮ್ - 8
ಪ್ರಭಿನ್ನಶಿರಸಃ ಕೇಚಿಚ್ಛಿನ್ನೈಃ ಪಾದೈಶ್ಚ ಬಾಹುಭಿಃ ।
ಶಸ್ತ್ರೈರರ್ದಿತದೇಹಾಸ್ತು ರುಧಿರೇಣ ಸಮುಕ್ಷಿತಾಃ ॥
ಅನುವಾದ
ಕೆಲವರ ತಲೆ ಒಡೆದುಹೋದುವು, ಕೆಲವರ ಕೈಕಾಲು ಕಳೆದುಕೊಂಡರು. ಅನೇಕ ಯೋಧರ ಶರೀರಗಳು ಶಸಗಳಿಂದ ಘಾಸಿಗೊಂಡು ರಕ್ತದಿಂದ ತೊಯ್ದು ಹೋಯಿತು.॥8॥
ಮೂಲಮ್ - 9
ಹರಯೋ ರಾಕ್ಷಸಾಶ್ಚೈವ ಶೇರತೇ ಗಾಂ ಸಮಾಶ್ರಿತಾಃ ।
ಕಂಕಗೃಧ್ರಬಲಾಢ್ಯಾಶ್ಚ ಗೋಮಾಯುಕುಲ ಸಂಕುಲಾಃ ॥
ಅನುವಾದ
ವಾನರರು ಮತ್ತು ರಾಕ್ಷಸರು ಧರಾಶಾಯಿಗಳಾದರು. ಆ ಹೆಣಗಳ ಮೇಲೆ ಹದ್ದು- ರಣಹದ್ದು, ಕಾಗೆಗಳು ಆಕ್ರಮಿಸಿದ್ದವು. ಗುಳ್ಳೆನರಿಗಳು ಹಿಂಡುಹಿಂಡಾಗಿ ಸಮಾಕುಲರಾಗಿದ್ದವು.॥9॥
ಮೂಲಮ್ - 10
ಕಬಂಧಾನಿ ಸಮುತ್ಪೇತುರ್ಭೀರೂಣಾಂ ಭೀಷಣಾನಿ ವೈ ।
ಭುಜಪಾಣಿಶಿರಶ್ಛಿನ್ನಾಶ್ಛಿನ್ನಕಾಯಾಶ್ಚ ಭೂತಲೇ ॥
ಅನುವಾದ
ತಲೆಗಳನ್ನು ಕಳೆದುಕೊಂಡು ಮುಂಡಗಳು ಭೀರುಗಳಾದ ಸೈನಿಕರಿಗೆ ಭಯವನ್ನುಂಟು ಮಾಡುತ್ತಾ ಕುಣಿಯತೊಡಗಿದವು. ಯೋಧರ ತುಂಡಾದ ಭುಜಗಳು, ಶಿರಗಳು, ಕೈಗಳು, ದೇಹಗಳು ರಾಶಿರಾಶಿಯಾಗಿ ಬಿದ್ದಿದ್ದವು.॥10॥
ಮೂಲಮ್ - 11½
ವಾನರಾ ರಾಕ್ಷಸಾಶ್ಚಾಪಿ ನಿಪೇತುಸ್ತತ್ರ ಭೂತಲೇ ।
ತತೋ ವಾನರಸೈನ್ಯೇನ ಹನ್ಯಮಾನಂ ನಿಶಾಚರಮ್ ॥
ಪ್ರಾಭಜ್ಯತ ಬಲಂ ಸರ್ವಂ ವಜ್ರದಂಷ್ಟ್ರಸ್ಯ ಪಶ್ಯತಃ ॥
ಅನುವಾದ
ಎರಡೂ ಪಕ್ಷದ ವಾನರರು ಮತ್ತು ರಾಕ್ಷಸರು ಅಲ್ಲಿ ಧರಾಶಾಯಿಯಾಗಿದ್ದರು. ಸ್ವಲ್ಪ ಸಮಯದಲ್ಲೇ ವಾನರರ ಪ್ರಹಾರದಿಂದ ಪೀಡಿಸಲ್ಪಟ್ಟ ನಿಶಾಚರರ ಎಲ್ಲ ಸೇನೆಯು ವಜ್ರದಂಷ್ಟ್ರನು ನೋಡುತ್ತಿರುವಂತೆ ಓಡಿಹೋಯಿತು.॥11½॥
ಮೂಲಮ್ - 12½
ರಾಕ್ಷಸಾನ್ ಭಯವಿತ್ರಸ್ತಾನ್ ಹನ್ಯಮಾನಾನ್ ಪ್ಲವಂಗಮೈಃ ॥
ದೃಷ್ಟ್ವಾ ಸ ರೋಷ ತಾಮ್ರಾಕ್ಷೋ ವಜ್ರದಂಷ್ಟ್ರಃ ಪ್ರತಾಪವಾನ್ ।
ಅನುವಾದ
ವಾನರರ ಏಟಿನಿಂದ ಭಯಗೊಂಡ ರಾಕ್ಷಸರನ್ನು ನೋಡಿ, ಪ್ರತಾಪಿ ವಜ್ರದಂಷ್ಟ್ರನ ಕಣ್ಣುಗಳು ಕ್ರೋಧದಿಂದ ಕೆಂಪಾದವು.॥12½॥
ಮೂಲಮ್ - 13½
ಪ್ರವಿವೇಶ ಧನುಷ್ಪಾಣಿಸ್ತ್ರಾಸಯನ್ ಹರಿವಾಹಿನೀಮ್ ॥
ಶರೈರ್ವಿದಾರಯಾಮಾಸ ಕಂಕಪತ್ರೈರಜಿಹ್ಮಗೈಃ ।
ಅನುವಾದ
ಅವನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ವಾನರ ಸೈನ್ಯವನ್ನು ಭಯಪಡಿಸುತ್ತಾ, ವಾನರ ಸೈನ್ಯದೊಳಗೆ ನುಗ್ಗಿ, ಕಂಕಪತ್ರಯುಕ್ತ ಬಾಣಗಳಿಂದ ಶತ್ರುಗಳನ್ನು ಭೇದಿಸತೊಡಗಿದನು.॥13½॥
ಮೂಲಮ್ - 14½
ಬಿಭೇದ ವಾನರಾಂಸ್ತತ್ರ ಸಪ್ತಾಷ್ಟೌ ನವ ಪಂಚ ಚ ॥
ವಿವ್ಯಾಧ ಪರಮಕ್ರುದ್ಧೋ ವಜ್ರದಂಷ್ಟ್ರಃ ಪ್ರತಾಪವಾನ್ ।
ಅನುವಾದ
ಅತ್ಯಂತ ಕ್ರೋಧಗೊಂಡ ಪ್ರತಾಪಿ ವಜ್ರದಂಷ್ಟ್ರನು ಒಂದೇ ಏಟಿನಿಂದ ಐದು, ಏಳು, ಎಂಟು, ಒಂಭತ್ತು ವಾನರರನ್ನು ಒಟ್ಟಿಗೆ ಪ್ರಹರಿಸುತ್ತಿದ್ದನು.॥14½॥
ಮೂಲಮ್ - 15
ತ್ರಸ್ತಾಃ ಸರ್ವೇ ಹರಿಗಣಾಃ ಶರೈಃ ಸಂಕೃತ್ತ ದೇಹಿನಃ ।
ಅಂಗದಂ ಸಂಪ್ರಧಾವಂತಿ ಪ್ರಜಾಪತಿಮಿವ ಪ್ರಜಾಃ ॥
ಅನುವಾದ
ಬಾಣಗಳಿಂದ ಭಿನ್ನಭಿನ್ನರಾದ ಸಮಸ್ತ ವಾನರರು ಭಯಗೊಂಡು ಪ್ರಜೆಯು ಪ್ರಜಾಪತಿಯಲ್ಲಿ ಶರಣಾದಂತೆ ಅಂಗದನ ಕಡೆಗೆ ಓಡಿದರು.॥15॥
ಮೂಲಮ್ - 16
ತತೋ ಹರಿಗಣಾನ್ ಭಗ್ನಾನ್ ದೃಷ್ಟ್ವಾವಾಲಿಸುತಸ್ತದಾ ।
ಕ್ರೋಧೇನ ವಜ್ರದಂಷ್ಟ್ರಂ ತಮುದೀಕ್ಷಂತ ಮುದೈಕ್ಷತ ॥
ಅನುವಾದ
ಆಗ ವಾನರರು ಓಡುತ್ತಿರುವುದನ್ನು ನೋಡಿ, ವಾಲಿಕುಮಾರ ಅಂಗದನು ತನ್ನ ಕಡೆಗೆ ನೋಡುತ್ತಿದ್ದ ವಜ್ರದಂಷ್ಟ್ರನನ್ನು ಕ್ರೋಧದಿಂದ ವೀಕ್ಷಿಸಿದನು.॥16॥
ಮೂಲಮ್ - 17
ವಜ್ರದಂಷ್ಟ್ರೋಂಽಗದಶ್ಚೋಭೌ ಯೋಯುಧ್ಯೇತೇ ಪರಸ್ಪರಮ್ ।
ಚೇರತುಃ ಪರಮಕ್ರುದ್ಧೌ ಹರಿಮತ್ತಗಜಾವಿವ ॥
ಅನುವಾದ
ಮತ್ತೆ ವಜ್ರದಂಷ್ಟ್ರ ಮತ್ತು ಅಂಗದ ಅತ್ಯಂತ ಕುಪಿತರಾಗಿ ಪರಸ್ಪರ ವೇಗವಾಗಿ ಯುದ್ಧಮಾಡತೊಡಗಿದರು. ಅವರಿಬ್ಬರೂ ಹುಲಿ ಮತ್ತು ಗಜಗಳಂತೆ ಸಂಚರಿಸತೊಡಗಿದರು.॥17॥
ಮೂಲಮ್ - 18
ತತಃ ಶತಸಹಸ್ರೇಣ ಹರಿಪುತ್ರಂ ಮಹಾಬಲಮ್ ।
ಜಘಾನ ಮರ್ಮದೇಶೇಷು ಶರೈರಗ್ನಿಶಿಖೋಪಮೈಃ ॥
ಅನುವಾದ
ಆಗ ವಜ್ರದಂಷ್ಟ್ರನು ಮಹಾಬಲಿ ಅಂಗದನ ಮರ್ಮಸ್ಥಾನಗಳಲ್ಲಿ ಅಗ್ನಿಶಿಖೆ ಯಂತಿದ್ದ ತೇಜಸ್ವೀ ಒಂದು ಲಕ್ಷ ಬಾಣಗಳನ್ನು ಹೊಡೆದನು.॥18॥
ಮೂಲಮ್ - 19
ರುಧಿರೋಕ್ಷಿತ ಸರ್ವಾಂಗೋ ವಾಲಿಸೂನುರ್ಮಹಾಬಲಃ ।
ಚಿಕ್ಷೇಪ ವಜ್ರದಂಷ್ಟ್ರಾಯ ವೃಕ್ಷಂ ಭೀಮಪರಾಕ್ರಮಃ ॥
ಅನುವಾದ
ಇದರಿಂದ ಅವನ ಸರ್ವಾಂಗವು ರಕ್ತಸಿಕ್ತ ವಾಯಿತು. ಆಗ ಪರಾಕ್ರಮಿ ಮಹಾಬಲಿ ವಾಲಿಕುಮಾರನು ವಜ್ರದಂಷ್ಟ್ರನ ಮೇಲೆ ಒಂದು ವೃಕ್ಷವನ್ನು ಎಸೆದನು.॥19॥
ಮೂಲಮ್ - 20
ದೃಷ್ಟ್ವಾಪತಂತಂ ತಂ ವೃಕ್ಷಮಸಂಭ್ರಾಂತಶ್ಚ ರಾಕ್ಷಸಃ ।
ಚಿಚ್ಛೇದ ಬಹುಧಾ ಸೋಪಿ ಮಥಿತಃ ಪ್ರಾಪತದ್ ಭುವಿ ॥
ಅನುವಾದ
ಆ ವೃಕ್ಷವು ತನ್ನ ಕಡೆಗೆ ಬರುವುದನ್ನು ನೋಡಿಯೂ ವಜ್ರದಂಷ್ಟ್ರನು ಹೆದರಲಿಲ್ಲ. ಅವನು ಬಾಣವನ್ನು ಪ್ರಯೋಗಿಸಿ ಆ ವೃಕ್ಷವನ್ನು ತುಂಡರಿಸಿ ನೆಲಕ್ಕೆ ಬೀಳಿಸಿದನು.॥20॥
ಮೂಲಮ್ - 21
ತಂ ದೃಷ್ಟ್ವಾ ವಜ್ರದಂಷ್ಟ್ರಸ್ಯ ವಿಕ್ರಮಂ ಪ್ಲವಗರ್ಷಭಃ ।
ಪ್ರಗೃಹ್ಯ ವಿಪುಲಂ ಶೈಲಂ ಚಿಕ್ಷೇಪ ಚ ನನಾದ ಚ ॥
ಅನುವಾದ
ವಜ್ರದಂಷ್ಟ್ರನ ಆ ಪರಾಕ್ರಮವನ್ನು ನೋಡಿ ವಾನರ ಶ್ರೇಷ್ಠ ಅಂಗದನು ಒಂದು ವಿಶಾಲ ಶಿಲಾಖಂಡವನ್ನು ಎತ್ತಿ ಜೋರಾಗಿ ಅವನಿಗೆ ಹೊಡೆದು ಜೋರಾಗಿ ಗರ್ಜಿಸಿದನು.॥21॥
ಮೂಲಮ್ - 22
ತಮಾಪತಂತಂ ದೃಷ್ಟ್ವಾ ಸ ರಥಾದಾಪ್ಲುತ್ಯ ವೀರ್ಯವಾನ್ ।
ಗದಾಪಾಣಿರಸಂಭ್ರಾಂತಃ ಪೃಥಿವ್ಯಾಂ ಸಮತಿಷ್ಠತ ॥
ಅನುವಾದ
ಆ ಶಿಲಾ ಖಂಡವು ತನ್ನತ್ತ ಬರುವುದನ್ನು ನೋಡಿ ಆ ಪರಾಕ್ರಮಿ ರಾಕ್ಷಸನು ಗಾಬರಿಪಡದೆ ರಥದಿಂದ ಹಾರಿ ಗದೆಯನ್ನು ಕೈಯಲ್ಲಿ ಹಿಡಿದು ನೆಲದ ಮೇಲೆ ನಿಂತುಕೊಂಡನು.॥22॥
ಮೂಲಮ್ - 23
ಅಂಗದೇನ ಶಿಲಾ ಕ್ಷಿಪ್ತಾ ಗತ್ವಾ ತು ರಣಮೂರ್ಧನಿ ।
ಸಚಕ್ರಕೂಬರಂ ಸಾಶ್ವಂ ಪ್ರಮಮಾಥ ರಥಂ ತದಾ ॥
ಅನುವಾದ
ಅಂಗದನು ಎಸೆದಿರುವ ಆ ಬಂಡೆಯು ಅವನ ರಥದ ಮೇಲೆ ಬಿದ್ದು ಯುದ್ಧರಂಗದಲ್ಲಿ ರಥದ ಗಾಲಿಗಳು, ಅಚ್ಚುಮರ, ಕುದುರೆಗಳ ಸಹಿತ ರಥವನ್ನು ಚೂರು-ಚೂರಾಗಿಸಿತು.॥23॥
ಮೂಲಮ್ - 24
ತತೋಽನ್ಯಚ್ಛಿಖರಂ ಗೃಹ್ಯ ವಿಪುಲಂ ದ್ರುಮಭೂಷಿತಮ್ ।
ವಜ್ರದಂಷ್ಟ್ರಸ್ಯ ಶಿರಸಿ ಪಾತಯಾಮಾಸ ವಾನರಃ ॥
ಅನುವಾದ
ಬಳಿಕ ವಾನರವೀರ ಅಂಗದನು ವೃಕ್ಷಗಳಿಂದ ಅಲಂಕೃತವಾದ ಇನ್ನೊಂದು ವಿಶಾಲ ಪರ್ವತ ಶಿಖರವನ್ನು ಕೈಗೆತ್ತಿಕೊಂಡು ವಜ್ರದಂಷ್ಟ್ರನ ತಲೆಗೆ ಅಪ್ಪಳಿಸಿದನು.॥24॥
ಮೂಲಮ್ - 25
ಅಭವಚ್ಛೋಣಿತೋದ್ಗಾರೀ ವಜ್ರದಂಷ್ಟ್ರಃ ಸಮೂರ್ಛಿತಃ ।
ಮುಹೂರ್ತಮಭವನ್ಮೂಢೋ ಗದಾಮಾಲಿಂಗ್ಯ ನಿಃಶ್ವಸನ್ ॥
ಅನುವಾದ
ವಜ್ರದಂಷ್ಟ್ರನು ಅದರಿಂದ ಮೂರ್ಛಿತನಾಗಿ, ರಕ್ತವನ್ನು ಕಾರುತ್ತಾ, ಗದೆಯನ್ನು ಅಪ್ಪಿಕೊಂಡು ಎರಡು ಗಳಿಗೆ ಮೂರ್ಛಿತನಾಗಿ ಬಿದ್ದಿದ್ದನು. ಕೇವಲ ಉಸಿರಾಟ ಮಾತ್ರ ನಡೆಯುತ್ತಿತ್ತು.॥25॥
ಮೂಲಮ್ - 26
ಸ ಲಬ್ಧ ಸಂಂಜ್ಞೊ ಗದಯಾ ವಾಲಿಪುತ್ರಮವಸ್ಥಿತಮ್ ।
ಜಘಾನ ಪರಮಕ್ರುದ್ಧೋ ವಕ್ಷೋದೇಶೇ ನಿಶಾಚರಃ ॥
ಅನುವಾದ
ಮೂರ್ಛೆ ತಳೆದು ನಿಶಾಚರನು ಅತ್ಯಂತ ಕುಪಿತನಾಗಿ ಎದುರಿಗೆ ನಿಂತಿದ್ದ ವಾಲಿಪುತ್ರನ ಎದೆಗೆ ಗದೆಯಿಂದ ಪ್ರಹರಿಸಿದನು. ॥26॥
ಮೂಲಮ್ - 27
ಗದಾಂ ತ್ಯಕ್ತ್ವಾತತಸ್ತತ್ರ ಮುಷ್ಟಿಯುದ್ಧ ಮಕುರ್ವತ ।
ಅನ್ಯೋನ್ಯಂ ಜಘ್ನತುಸ್ತತ್ರ ತಾವುಭೌ ಹರಿರಾಕ್ಷಸೌ ॥
ಅನುವಾದ
ಮತ್ತೆ ಗದೆ ಬಿಟ್ಟು ಮಲ್ಲಯುದ್ಧ ಮಾಡತೊಡಗಿದನು. ಆ ವಾನರ ಮತ್ತು ರಾಕ್ಷಸರಿಬ್ಬರೂ ವೀರರು ಮುಷ್ಟಿಗಳಿಂದ ಹೊಡೆಯತೊಡಗಿದರು.॥27॥
ಮೂಲಮ್ - 28
ರುಧಿರೋದ್ಗಾರಿಣೌ ತೌತು ಪ್ರಹಾರೈರ್ಜನಿತಶ್ರಮೌ ।
ಬಭೂವತುಃ ಸುವಿಕ್ರಾಂತಾವಂಗಾರಕ ಬುಧಾವಿವ ॥
ಅನುವಾದ
ಇಬ್ಬರೂ ಭಾರೀ ಪರಾಕ್ರಮಿಗಳಾಗಿದ್ದರು. ಇಬ್ಬರು ಕಾದಾಡುತ್ತಿರುವಾಗ ಕುಜ ಮತ್ತು ಬುಧರಂತೆ ಕಂಡುಬರುತ್ತಿದ್ದರು. ಪರಸ್ಪರರ ಪ್ರಹಾರಗಳಿಂದ ಪೀಡಿತರಾಗಿ ಬಳಲಿ, ರಕ್ತವನ್ನು ವಮನಮಾಡತೊಡಗಿದರು.॥28॥
ಮೂಲಮ್ - 29
ತತಃ ಪರಮತೇಜಸ್ವೀ ಅಂಗದಃ ಪ್ಲವಗರ್ಷಭಃ ।
ಉತ್ಪಾಟ್ಯ ವೃಕ್ಷಂ ಸ್ಥಿತವಾನಾಸೀತ್ ಪುಷ್ಪಲೈರ್ಯುತಃ ॥
ಅನುವಾದ
ಬಳಿಕ ಪರಮ ತೇಜಸ್ವೀ ವಾನರಶ್ರೇಷ್ಠ ಅಂಗದನು ಒಂದು ಮರವನ್ನು ಕಿತ್ತುಕೊಂಡು ನಿಂತುಬಿಟ್ಟನು. ಅವನು ವೃಕ್ಷದ ಹೂವು-ಹಣ್ಣು ಗಳಿಂದ ಸತ್ವ ಫಲ-ಪುಷ್ಪಗಳಿಂದ ಕೂಡಿದವನಾಗಿ ಕಾಣುತ್ತಿದ್ದನು.॥29॥
ಮೂಲಮ್ - 30
ಜಗ್ರಾಹ ಚಾರ್ಷಭಂ ಚರ್ಮ ಖಡ್ಗಂ ಚ ವಿಪುಲಂ ಶುಭಮ್ ।
ಕಿಂಕಿಣೀಜಾಲ ಸಂಛನ್ನಂ ಚರ್ಮಣಾ ಚ ಪರಿಷ್ಕೃತಮ್ ॥
ಅನುವಾದ
ಅತ್ತ ವಜ್ರದಂಷ್ಟ್ರನು ಎತ್ತಿನ ಚರ್ಮದ ಗುರಾಣಿ ಮತ್ತು ಸುಂದರ ದೊಡ್ಡ ಖಡ್ಗವನ್ನೆತ್ತಿಕೊಂಡನು. ಆ ಖಡ್ಗವು ಸಣ್ಣ ಸಣ್ಣ ಗೆಜ್ಜೆಗಳಿಂದ ಅಲಂಕೃತವಾಗಿದ್ದು, ಚರ್ಮದ ಒರೆಯಿಂದ ಶೋಭಿಸುತ್ತಿತ್ತು.॥30॥
ಮೂಲಮ್ - 31
ಚಿತ್ರಾಂಶ್ಚ ರುಚಿರಾನ್ ಮಾರ್ಗಾಂಶ್ಚೇರತುಃ ಕಪಿರಾಕ್ಷಸೌ ।
ಜಘ್ನತುಶ್ಚ ತದಾನ್ಯೋನ್ಯಂ ನರ್ದಂತೌ ಜಯಕಾಂಕ್ಷಿಣೌ ॥
ಅನುವಾದ
ಆಗ ಪರಸ್ಪರ ವಿಜಯವನ್ನು ಬಯಸುವ ವಾನರ ಮತ್ತು ರಾಕ್ಷಸ ವೀರರಿಬ್ಬರೂ ಸುಂದರ ಹಾಗೂ ವಿಚಿತ್ರ ಪಟ್ಟುಗಳನ್ನು ಬದಲಿಸುತ್ತಾ ಗರ್ಜಿಸುತ್ತಾ ಪರಸ್ಪರ ಹೊಡೆದಾಡತೊಡಗಿದರು.॥31॥
ಮೂಲಮ್ - 32
ವ್ರಣೈಃ ಸಾಸ್ರೈರಶೋಭೇತಾಂ ಪುಷ್ಪಿತಾವಿವ ಕಿಂಶುಕೌ ।
ಯುಧ್ಯಮಾನೌ ಪರಿಶ್ರಾಂತೌ ಜಾನುಭ್ಯಾಮವನೀಂ ಗತೌ ॥
ಅನುವಾದ
ಇಬ್ಬರ ಗಾಯಗಳಿಂದ ರಕ್ತ ಸುರಿಯತೊಡಗಿತು. ಅದರಿಂದ ಅವರು ಅರಳಿನಿಂತ ಪಾಲಾಶ ವೃಕ್ಷದಂತೆ ಶೋಭಿಸುತ್ತಿದ್ದರು. ಕಾದಾಡುತ್ತಾ ಬಳಲಿ ಇಬ್ಬರೂ ನೆಲಕ್ಕೆ ಮಂಡಿ ಊರಿದರು.॥32॥
ಮೂಲಮ್ - 33
ನಿಮೇಷಾಂತರಮಾತ್ರೇಣ ಅಂಗದಃ ಕಪಿಕುಂಜರಃ ।
ಉದತಿಷ್ಠತ ದೀಪ್ತಾಕ್ಷೋ ದಂಡಾಹತ ಇವೋರಗಃ ॥
ಅನುವಾದ
ಆದರೆ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಪಿಶ್ರೇಷ್ಠ ಅಂಗದನು ಎದ್ದು ನಿಂತನು. ಅವನ ಕಣ್ಣುಗಳು ಕ್ರೋಧದಿಂದ ಕಿಡಿಕಾರುತ್ತಿದ್ದವು. ದೊಣ್ಣೆಯ ಏಟಿನಿಂದ ಕೆರಳಿದ ಹಾವಿನಂತೆ ಉತ್ತೇಜಿತನಾಗಿದ್ದನು.॥33॥
ಮೂಲಮ್ - 34
ನಿರ್ಮಲೇನ ಸುಧೌತೇನ ಖಡ್ಗೇನಾಸ್ಯ ಮಹಚ್ಛಿರಃ ।
ಜಘಾನ ವಜ್ರದಂಷ್ಟ್ರಸ್ಯ ವಾಲಿಸೂನುರ್ಮಹಾಬಲಃ ॥
ಅನುವಾದ
ಮಹಾಬಲಿ ವಾಲಿಕುಮಾರನು ತನ್ನ ಹರಿತವಾದ, ಹೊಳೆ ಯುತ್ತಿದ್ದ ಖಡ್ಗದಿಂದ ವಜ್ರದಂಷ್ಟ್ರನ ವಿಶಾಲ ಶಿರವನ್ನು ಕತ್ತರಿಸಿಬಿಟ್ಟನು.॥34॥
ಮೂಲಮ್ - 35
ರುಧಿರೋಕ್ಷಿತಗಾತ್ರಸ್ಯ ಬಭೂವ ಪತಿತಂ ದ್ವಿಧಾ ।
ತಚ್ಚ ತಸ್ಯ ಪರೀತಾಕ್ಷಂ ಶುಭಂ ಖಡ್ಗಹತಂ ಶಿರಃ ॥
ಅನುವಾದ
ರಕ್ತದಿಂದ ತೊಯ್ದ, ಕಣ್ಣುಗಳು ಹೊರಬಂದು ಸುಂದರ ಮಸ್ತಕ ತುಂಡಾಗಿ ಆ ರಾಕ್ಷಸನು ಎರಡು ತುಂಡಾಗಿ ನೆಲಕ್ಕೆ ಬಿದ್ದು ಹೋದನು.॥35॥
ಮೂಲಮ್ - 36
ವಜ್ರದಂಷ್ಟ್ರಂ ಹತಂ ದೃಷ್ಟ್ವಾರಾಕ್ಷಸಾಃ ಭಯಮೋಹಿತಾಃ ।
ತ್ರಸ್ತಾಃ ಹ್ಯಭ್ಯದ್ರವಂಲ್ಲಂಕಾಂ ವಧ್ಯಮಾನಾಃ ಪ್ಲವಂಗಮೈಃ ।
ವಿಷಣ್ಣವದನಾ ದೀನಾ ಹ್ರಿಯಾ ಕಿಂಚಿದವಾಙ್ಮುಖಾಃ ॥
ಅನುವಾದ
ವಜ್ರದಂಷ್ಟ್ರನು ಸತ್ತು ಹೋದುದನ್ನು ನೋಡಿದ ರಾಕ್ಷಸರು ಭಯದಿಂದ ನಿಶ್ಚೇಷ್ಟಿತರಾದರು. ಅವರು ವಾನರರ ಏಟು ತಿಂದು ಭಯದಿಂದ ಲಂಕೆಗೆ ಓಡಿಹೋದರು. ಅವರು ವಿಷಾದ ಗ್ರಸ್ತರಾಗಿದ್ದರು. ಅವರು ದುಃಖಿತರಾಗಿ ನಾಚಿಕೆಯಿಂದ ಕೆಳ ಮೋರೆ ಹಾಕಿದ್ದರು.॥36॥
ಮೂಲಮ್ - 37
ನಿಹತ್ಯ ತಂ ವಜ್ರಧರಃ ಪ್ರತಾಪವಾನ್
ಸ ವಾಲಿಸೂನುಃ ಕಪಿಸೈನ್ಯಮಧ್ಯೇ ।
ಜಗಾಮ ಹರ್ಷಂ ಮಹಿತೋ ಮಹಾಬಲಃ
ಸಹಸ್ರನೇತ್ರಸ್ತ್ರಿದಶೈರಿವಾವೃತಃ ॥
ಅನುವಾದ
ವಜ್ರಧಾರೀ ಇಂದ್ರನಂತೆ ಪ್ರತಾಪಿ ಅಂಗದನು ಆ ನಿಶಾಚರ ವಜ್ರದಂಷ್ಟ್ರನನ್ನು ಕೊಂದು ದೇವತೆಗಳಿಂದ ಸುತ್ತುವರಿದ ಸಹಸ್ರಾಕ್ಷ ಇಂದ್ರನಂತೆ, ವಾನರರಿಂದ ಸಮ್ಮಾನಿತನಾಗಿ ಹರ್ಷಿತನಾದನು.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥54॥