वाचनम्
ಭಾಗಸೂಚನಾ
ವಜ್ರದಂಷ್ಟ್ರನು ಸೈನ್ಯಸಹಿತ ಯುದ್ಧಕ್ಕಾಗಿ ಹೊರಟಿದ್ದು, ವಾನರರ ಮತ್ತು ರಾಕ್ಷಸರ ಯುದ್ಧ, ವಜ್ರದಂಷ್ಟ್ರನು ವಾನರರನ್ನು ಹಾಗೂ ಅಂಗದನು ರಾಕ್ಷಸರನ್ನು ಸಂಹರಿಸಿದುದು
ಮೂಲಮ್ - 1
ಧೂಮ್ರಾಕ್ಷಂ ನಿಹತಂ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ ।
ಕ್ರೋಧೇನ ಮಹತಾಽಽವಿಷ್ಟೋ ನಿಃಶ್ವಸನ್ನುರಗೋ ಯಥಾ ॥
ಮೂಲಮ್ - 2
ದೀರ್ಘಮುಷ್ಣಂ ವಿನಿಃಶ್ವಸ್ಯ ಕ್ರೋಧೇನ ಕಲುಷೀಕೃತಃ ।
ಅಬ್ರವೀದ್ರಾಕ್ಷಸಂ ಕ್ರೂರಂ ವಜ್ರದಂಷ್ಟ್ರಂ ಮಹಾಬಲಮ್ ॥
ಅನುವಾದ
ಧೂಮ್ರಾಕ್ಷನು ಮಡಿದ ಸಮಾಚಾರ ತಿಳಿದು ರಾಕ್ಷಸೇಶ್ವರ ರಾವಣನು ಮಹಾ ಕ್ರೋಧಗೊಂಡು, ಹಾವು ಬುಸುಗುಟ್ಟು ವಂತೆ ಜೋರಾಗಿ ನಿಟ್ಟುಸಿರುಬಿಡುತ್ತಾ ರಾವಣನು ಕ್ರೂರ ನಿಶಾಚರ ಮಹಾಬಲಿ ವಜ್ರದಂಷ್ಟ್ರನಲ್ಲಿ ಹೇಳಿದನು.॥1-2॥
ಮೂಲಮ್ - 3
ಗಚ್ಛ ತ್ವಂ ವೀರ ನಿರ್ಯಾಹಿ ರಾಕ್ಷಸೈಃ ಪರಿವಾರಿತಃ ।
ಜಹಿ ದಾಶರಥಿಂ ರಾಮಂ ಸುಗ್ರೀವಂ ವಾನರೈಃ ಸಹ ॥
ಅನುವಾದ
ವೀರನೇ! ನೀನು ರಾಕ್ಷಸರೊಂದಿಗೆ ಹೋಗಿ ದಾಶರಥಿ ರಾಮನನ್ನು ಮತ್ತು ವಾನರ ಸಹಿತ ಸುಗ್ರೀವನನ್ನು ಕೊಂದು ಹಾಕು.॥3॥
ಮೂಲಮ್ - 4
ತಥೇತ್ಯುಕ್ತ್ವಾದ್ರುತತರಂ ಮಾಯಾವೀ ರಾಕ್ಷಸೇಶ್ವರಃ ।
ನಿರ್ಜಗಾಮ ಬಲೈಃ ಸಾರ್ಧಂ ಬಹುಭಿಃ ಪರಿವಾರಿತಃ ॥
ಅನುವಾದ
ಆಗ ಆ ಮಾಯಾವಿ ರಾಕ್ಷಸನು ‘ಹಾಗೆಯೇ ಆಗಲಿ’ ಎಂದು ಹೇಳಿ, ದೊಡ್ಡ ಸೈನ್ಯದೊಂದಿಗೆ ಕೂಡಲೇ ಯುದ್ಧಕ್ಕಾಗಿ ಹೊರಟನು.॥4॥
ಮೂಲಮ್ - 5
ನಾಗೈರಶ್ವೈಃ ಖರೈರುಷ್ಟ್ರೈಃ ಸಂಯುಕ್ತಃ ಸುಸಮಾಹಿತಃ ।
ಪತಾಕಾಧ್ವಜಚಿತ್ರೈಶ್ಚ ಬಹುಭಿಃ ಸಮಲಂಕೃತಃ ॥
ಅನುವಾದ
ಅವನು ಆನೆ, ಕುದುರೆ, ಕತ್ತೆ, ಒಂಟೇ ಮೊದಲಾದ ವಾಹನಗಳಿಂದ ಕೂಡಿದ್ದು, ಚಿತ್ತವನ್ನು ಏಕಾಗ್ರಗೊಳಿಸಿದ್ದನು. ಧ್ವಜ, ಪತಾಕೆಗಳಿಂದ ವಿಚಿತ್ರವಾಗಿ ಶೋಭಿಸುವ ಅನೇಕ ಸೇನಾಧ್ಯಕ್ಷರು ಅವನ ಶೋಭೆ ಹೆಚ್ಚಿಸಿದ್ದರು.॥5॥
ಮೂಲಮ್ - 6
ತತೋ ವಿಚಿತ್ರಕೇಯೂರ ಮುಕುಟೇನ ವಿಭೂಷಿತಃ ।
ತನುತ್ರಂ ಚ ಸಮಾವೃತ್ಯ ಸಧನುರ್ನಿರ್ಯಯೌ ದ್ರುತಮ್ ॥
ಅನುವಾದ
ವಿಚಿತ್ರವಾದ ಭುಜಬಂದಿಗಳಿಂದಲೂ, ಕಿರೀಟದಿಂದಲೂ ಅಲಂಕೃತವಾಗಿ, ಕವಚವನ್ನು ಧರಿಸಿ, ಕೈಯಲ್ಲಿ ಧನುಷ್ಯವನ್ನೆತ್ತಿಕೊಂಡು ಶೀಘ್ರವಾಗಿ ಹೊರಟನು.॥6॥
ಮೂಲಮ್ - 7
ಪತಾಕಾಲಂಕೃತಂ ದೀಪ್ತಂ ತಪ್ತಕಾಂಚನ ಭೂಷಿತಮ್ ।
ರಥಂ ಪ್ರದಕ್ಷಿಣಂ ಕೃತ್ವಾ ಸಮಾರೋಹಚ್ಚಮೂಪತಿಃ ॥
ಅನುವಾದ
ಧ್ವಜ-ಪತಾಕೆಗಳಿಂದ ಅಲಂಕೃತವಾದ, ಸ್ವರ್ಣಭೂಷಿತ ನಾದ, ಹೊಳೆಯುತ್ತಿರುವ ಸುಸಜ್ಜಿತ ರಥದ ಪ್ರದಕ್ಷಿಣೆ ಮಾಡಿ ಸೇನಾಪತಿ ವಜ್ರದಂಷ್ಟ್ರನು ಅದನ್ನು ಹತ್ತಿದನು.॥7॥
ಮೂಲಮ್ - 8
ಯಷ್ಟಿಭಿಸ್ತೋಮರೈಶ್ಚಿತ್ರೈಃ ಶ್ಲಕ್ಷ್ಣೈಶ್ಚ ಮುಸಲೈರಪಿ ।
ಭಿಂದಿಪಾಲೈಶ್ಚ ಚಾಪೈಶ್ಚ ಶಕ್ತಿಭಿಃಪಟ್ಟಿಶೈರಪಿ ॥
ಮೂಲಮ್ - 9
ಖಡ್ಗೈಶ್ಚಕ್ರೈರ್ಗದಾಭಿಶ್ಚ ನಿಶಿತೈಶ್ಚ ಪರಶ್ವಧೈಃ ।
ಪದಾತಯಶ್ಚ ನಿರ್ಯಾಂತಿ ವಿವಿಧಾಃ ಶಸ್ತ್ರಪಾಣಯಃ ॥
ಅನುವಾದ
ಅವನೊಂದಿಗೆ ಋಷ್ಟ, ವಿಚಿತ್ರತೋಮರ, ಒನಕೆ, ಬಿಂದಿಪಾಲ, ಧನುಸ್ಸು, ಶಕ್ತಿ, ಪಟ್ಟಿಶ, ಖಡ್ಗ, ಚಕ್ರ, ಗದೆ, ಹರಿತವಾದ ಗಂಡುಕೊಡಲಿ ಇವುಗಳಿಂದ ಸುಸಜ್ಜಿತರಾದ ಕಾಲಾಳುಗಳು ಇದ್ದರು. ಅವರ ಕೈಗಳಲ್ಲಿ ಅನೇಕ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಶೋಭಿಸುತ್ತಿದ್ದರು.॥8-9॥
ಮೂಲಮ್ - 10
ವಿಚಿತ್ರವಾಸಸಃ ಸರ್ವೇ ದೀಪ್ತಾ ರಾಕ್ಷಸಪುಂಗವಾಃ ।
ಗಜಾ ಮದೋತ್ಕಟಾಃ ಶೂರಾಶ್ಚಲಂತ ಇವ ಪರ್ವತಾಃ ॥
ಅನುವಾದ
ವಿಚಿತ್ರ ವಸ್ತ್ರಗಳನ್ನು ಧರಿಸಿದ್ದ ಆ ಎಲ್ಲ ವೀರರಾಕ್ಷಸರು ತೇಜದಿಂದ ಹೊಳೆಯುತ್ತಿದ್ದರು. ಶೌರ್ಯಸಂಪನ್ನ ಮದಮತ್ತ ಗಜಗಳಂತೆ, ನಡೆದಾಡುವ ಪರ್ವತಗಳಂತೆ ಕಂಡುಬರುತ್ತಿದ್ದರು.॥10॥
ಮೂಲಮ್ - 11
ತೇ ಯುದ್ಧಕುಶಲಾ ರೂಢಾಸ್ತೋಮರಾಂಕುಶ ಪಾಣಿಭಿಃ ।
ಅನ್ಯೇ ಲಕ್ಷಣ ಸಂಯುಕ್ತಾಃ ಶೂರಾರೂಢಾ ಮಹಾಬಲಾಃ ॥
ಅನುವಾದ
ಕೈಗಳಲ್ಲಿ ತೋಮರ ಅಂಕುಶ ಧರಿಸಿದ ಮಾವುತರು ಏರಿ ಕುಳಿತಿದ್ದ ಆ ಆನೆಗಳು ಯುದ್ಧದಲ್ಲಿ ಕುಶಲಿಗಳಾಗಿದ್ದು, ಯುದ್ಧಕ್ಕಾಗಿ ಸಾಗುತ್ತಿದ್ದರು. ಉತ್ತಮ ಲಕ್ಷಣಗಳಿಂದ ಕೂಡಿದ ಇತರ ಬಲವಂತರಾದ ಕುದುರೆಗಳಿದ್ದು, ಅವುಗಳ ಮೇಲೆ ವೀರ ಸೈನಿಕರು ಹತ್ತಿ ಯುದ್ಧಕ್ಕಾಗಿ ಹೊರಟಿದ್ದವು.॥11॥
ಮೂಲಮ್ - 12
ತದ್ರಾಕ್ಷಸ ಬಲಂ ಸರ್ವಂ ವಿಪ್ರಸ್ಥಿತಮಶೋಭತ ।
ಪ್ರಾವೃಟ್ಕಾಲೇ ಯಥಾ ಮೇಘಾ ನರ್ದಮಾನಾಃ ಸವಿದ್ಯುತಃ ॥
ಅನುವಾದ
ಯುದ್ಧಕ್ಕಾಗಿ ಹೊರಟ ರಾಕ್ಷಸರ ಆ ಸೈನ್ಯವು ವರ್ಷಾಕಾಲದಲ್ಲಿ ಸಿಡಿಲು ಸಹಿತ ಗರ್ಜಿಸುವ ಮೇಘಗಳಂತೆ ಶೋಭಿಸುತ್ತಿದ್ದವು.॥12॥
ಮೂಲಮ್ - 13
ನಿಃಸೃತಾ ದಕ್ಷಿಣ ದ್ವಾರಾದಂಗದೋ ಯತ್ರ ಯೂಥಪಃ ।
ತೇಷಾಂ ನಿಷ್ಕ್ರಮಮಾಣಾನಾಮಶುಭಂ ಸಮಜಾಯತ ॥
ಅನುವಾದ
ವಾನರಯೂಥಪತಿ ಅಂಗದನು ತಡೆದುನಿಂತಿದ್ದ ಲಂಕೆಯ ದಕ್ಷಿಣದ್ವಾರದಿಂದ ಸೈನ್ಯ ಹೊರಟಿತು. ಅಲ್ಲಿಂದ ಹೊರಬರುತ್ತಿರುವಂತೆಯೇ ರಾಕ್ಷಸರ ಮುಂದೆ ಅಶುಭಸೂತಕ ಅಪಶಕುನಗಳು ಕಾಣಿಸಿದವು.॥13॥
ಮೂಲಮ್ - 14
ಆಕಾಶಾದ್ವಿಘನಾತ್ತೀವ್ರಾ ಉಲ್ಕಾಶ್ಚಾಭ್ಯಪತಂಸ್ತದಾ ।
ವಮಂತಃ ಪಾವಕಜ್ವಾಲಾಃ ಶಿವಾ ಘೋರಾ ವವಾಶಿರೇ ॥
ಅನುವಾದ
ಮೇಘಗಳಿಲ್ಲದೆಯೇ ಆಕಾಶದಿಂದ ದುಃಸಹ ಉಲ್ಕಾಪಾತ ಆಗತೊಡಗಿತು. ಭಯಂಕರ ಗುಳ್ಳೆನರಿಗಳು ಬೆಂಕಿಯನ್ನು ಉಗುಳುತ್ತಾ ಕೆಟ್ಟದಾಗಿ ಕೂಗಿಕೊಳ್ಳುತ್ತಿದ್ದವು.॥14॥
ಮೂಲಮ್ - 15
ವ್ಯಾಹರಂತ ಮೃಗಾ ಘೋರಾರಕ್ಷಸಾಂ ನಿಧನಂ ತದಾ ।
ಸಮಾಪತಂತೋ ಯೋಧಾಸ್ತು ಪ್ರಾಸ್ಖಲಂಸ್ತತ್ರ ದಾರುಣಮ್ ॥
ಅನುವಾದ
ರಾಕ್ಷಸರ ಸಂಹಾರ ಸೂಚಕವಾಗಿ ಘೋರ ಪಶುಗಳು ಕೂಗುತ್ತಿದ್ದವು. ಯುದ್ಧಕ್ಕಾಗಿ ಹೊರಟ ಯೋಧರು ಎಡವಿ ಬೀಳುತ್ತಿದ್ದರು. ಇದರಿಂದ ಅವರ ದಾರುಣ ಅವಸ್ಥೆಯಾಯಿತು.॥15॥
ಮೂಲಮ್ - 16
ಏತಾನೌತ್ಪಾತಿಕಾನ್ ದೃಷ್ಟ್ವಾ ವಜ್ರದಂಷ್ಟ್ರೋ ಮಹಾಬಲಃ ।
ಧೈರ್ಯಮಾಲಂಬ್ಯ ತೇಜಸ್ವೀ ನಿರ್ಜಗಾಮ ರಣೋತ್ಸುಕಃ ॥
ಅನುವಾದ
ಇಂತಹ ಉತ್ಪಾತಸೂಚಕ ಅಪಶಕುನಗಳನ್ನು ನೋಡಿಯೂ ಮಹಾಬಲಿ ವಜ್ರದಂಷ್ಟ್ರನು ಧೈರ್ಯಗೆಡದೆ, ಆ ತೇಜಸ್ವೀ ವೀರನು ಯುದ್ಧಕ್ಕಾಗಿ ಉತ್ಸುಕನಾಗಿ ಹೊರಟೇಬಿಟ್ಟನು.॥16॥
ಮೂಲಮ್ - 17
ತಾಂಸ್ತು ವಿದ್ರವತೋ ದೃಷ್ಟ್ವಾ ವಾನರಾ ಜಿತಕಾಶಿನಃ ।
ಪ್ರಣೇದುಃ ಸುಮಹಾನಾದಾನ್ ದಿಶಃ ಶಬ್ದೇನ ಪೂರಯನ್ ॥
ಅನುವಾದ
ತೀವ್ರಗತಿಯಿಂದ ಬರುತ್ತಿರುವ ರಾಕ್ಷಸರನ್ನು ನೋಡಿ ವಿಜಯಲಕ್ಷ್ಮಿಯಿಂದ ಸಂಪನ್ನರಾದ ವಾನರರು ಜೋರು ಜೋರಾಗಿ ಗರ್ಜಿಸತೊಡಗಿದರು. ಅವರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು.॥17॥
ಮೂಲಮ್ - 18
ತತಃ ಪ್ರವೃತ್ತಂ ತುಮುಲಂಹರೀಣಾಂ ರಾಕ್ಷಸೈಃ ಸಹ ।
ಘೋರಾಣಾಂ ಭೀಮರೂಪಾಣಾಮನ್ಯೋನ್ಯವಧಕಾಂಕ್ಷಿಣಾಮ್ ॥
ಅನುವಾದ
ಅನಂತರ ಭಯಾನಕ ರೂಪವನ್ನು ಧರಿಸುವ ಘೋರ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ತುಮುಲಯುದ್ಧ ಪ್ರಾರಂಭ ವಾಯಿತು. ಎರಡೂ ಪಕ್ಷದ ಯೋಧರು ಒಬ್ಬರು ಮತ್ತೊಬ್ಬರನ್ನು ಕೊಲ್ಲಲು ಬಯಸುತ್ತಿದ್ದರು.॥18॥
ಮೂಲಮ್ - 19
ನಿಷ್ಪತಂತೋ ಮಹೋತ್ಸಾಹಾ ಭಿನ್ನದೇಹ ಶಿರೋಧರಾಃ ।
ರುಧಿರೋಕ್ಷಿತಸರ್ವಾಧಿ ನ್ಯಪತನ್ ಧರಣೀತಲೇ ॥
ಅನುವಾದ
ಭಾರೀ ಉತ್ಸಾಹದಿಂದ ವಾನರರು-ರಾಕ್ಷಸರು ಯುದ್ಧಕ್ಕಾಗಿ, ಮುನ್ನುಗ್ಗುತ್ತಿದ್ದರು, ಆದರೆ ಶರೀರ, ಕತ್ತು ಕತ್ತರಿಸಲ್ಪಟ್ಟು ಭೂಮಿಗೆ ಬೀಳುತ್ತಿದ್ದರು. ಆಗ ಅವರ ಸರ್ವಾಂಗಗಳೂ ರಕ್ತದಿಂದ ತೊಯ್ದುಹೋಗುತ್ತಿತ್ತು.॥19॥
ಮೂಲಮ್ - 20
ಕೇಚಿದನ್ಯೋನ್ಯಮಾಸಾದ್ಯ ಶೂರಾಃ ಪರಿಘಬಾಹವಃ ।
ಚಿಕ್ಷಿಪುರ್ವಿವಿಧಾನ್ಶಸ್ತ್ರಾನ್ ಸಮರೇಷ್ವ ನಿವರ್ತಿನಃ ॥
ಅನುವಾದ
ಯುದ್ಧದಿಂದ ಎಂದೂ ಹಿಂದಕ್ಕೆ ಸರಿಯದೆ, ಪರಿಘಗಳಂತೆ ಬಾಹುಗಳಿದ್ದ ಎಷ್ಟೋ ಶೂರ ವೀರರು ಪರಸ್ಪರ ಹತ್ತಿರ ಹೋಗಿ ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಪ್ರಹರಿಸುತ್ತಿದ್ದರು.॥20॥
ಮೂಲಮ್ - 21
ದ್ರುಮಾಣಾಂ ಚ ಶಿಲಾನಾಂ ಚ ಶಸ್ತ್ರಾಣಾಂ ಚಾಪಿ ನಿಃಸ್ವನಃ ।
ಶ್ರೂಯತೇ ಸುಮಹಾಂಸ್ತತ್ರ ಘೋರೋ ಹೃದಯಭೇದನಃ ॥
ಅನುವಾದ
ಆ ರಣರಂಗದಲ್ಲಿ ಪ್ರಯೋಗಿಸುವ ವೃಕ್ಷ, ಪರ್ವತಗಳ ಹಾಗೂ ಶಸ್ತ್ರಗಳ ಮಹಾಘೋರ ಶಬ್ದವು ಕಿವಿಗೆ ಬಿದ್ದಾಕ್ಷಣ ಹೃದಯವನ್ನು ಸೀಳಿ ಬಿಡುತ್ತಿತ್ತು.॥21॥
ಮೂಲಮ್ - 22
ರಥನೇಮಿಸ್ವನಸ್ತತ್ರ ಧನುಷಶ್ಚಾಪಿ ಘೋರವತ್ ।
ಶಂಖಭೇರೀಮೃದಂಗಾನಾಂ ಬಭೂವ ತುಮುಲಃ ಸ್ವನಃ ॥
ಅನುವಾದ
ರಥಚಕ್ರಗಳ ಗಡ-ಗಡ, ಧನುಷ್ಟಂಕಾರ, ಶಂಖ, ಭೇರಿ, ಮೃದಂಗಗಳ ಶಬ್ದ ಒಂದಾಗಿ ಭಾರೀ ಭಯಂಕರವಾಗಿ ಅನಿಸುತ್ತಿತ್ತು.॥22॥
ಮೂಲಮ್ - 23
ಕೇಚಿದಸ್ತ್ರಾಣಿ ಸಂತ್ಯಜ್ಯ ಬಾಹುಯುದ್ಧಮಕುರ್ವತ ॥
ಮೂಲಮ್ - 24
ತಲೈಶ್ಚ ಚರಣೈಶ್ಚಾಪಿ ಮುಷ್ಟಿಭಿಶ್ಚ ದ್ರುಮೈರಪಿ ।
ಜಾನುಭಿಶ್ಚ ಹತಾಃ ಕೇಚಿದ್ ಭಗ್ನ್ನದೇಹಾಶ್ಚ ರಾಕ್ಷಸಾಃ ।
ಶಿಲಾಭಿಶ್ಚೂರ್ಣಿತಾಃ ಕೇಚಿದ್ ವಾನರೈರ್ಯುದ್ಧದುರ್ಮದೈಃ ॥
ಅನುವಾದ
ಕೆಲವು ಯೋಧರು ಶಸ್ತ್ರಗಳನ್ನು ಬಿಸುಟು ಬಾಹುಯುದ್ಧ ಮಾಡತೊಡಗಿದರು. ಕೈಏಟಿನಿಂದ, ಕಾಲಿನ ಒದೆಯಿಂದ, ಮುಷ್ಟಿಗಳಿಂದ, ವೃಕ್ಷಗಳಿಂದ, ಮೊಣಕಾಲುಗಳಿಂದ ಏಟು ತಿಂದು ಎಷ್ಟೋ ರಾಕ್ಷಸರ ಶರೀರಗಳು ನುಚ್ಚು ನೂರಾದವು. ರಣದುರ್ಮದ ವಾನರರು ಶಿಲೆಗಳಿಂದ ಹೊಡೆದು ಎಷ್ಟೋ ರಾಕ್ಷಸರನ್ನು ಕೊಂದುಹಾಕಿದರು.॥23-24॥
ಮೂಲಮ್ - 25
ವಜ್ರದಂಷ್ಟ್ರೋ ಭೃಶಂ ಬಾಣೈ ರಣೇ ವಿತ್ರಾಸಯನ್ ಹರೀನ್ ।
ಚಚಾರ ಲೋಕಸಂಹಾರೇ ಪಾಶಹಸ್ತ ಇವಾಂತಕಃ ॥
ಅನುವಾದ
ಆಗ ವಜ್ರದಂಷ್ಟ್ರನು ಬಾಣಗಳಿಂದ ವಾನರರನ್ನು ಅತ್ಯಂತ ಭಯಗೊಳಿಸುತ್ತಾ ಮೂರು ಲೋಕಗಳನ್ನು ಸಂಹಾರ ಮಾಡಲು ಹೊರಟ ಪಾಶಧಾರೀ ಯಮನಂತೆ ಯುದ್ಧರಂಗದಲ್ಲಿ ಸಂಚರಿಸತೊಡಗಿದನು.॥25॥
ಮೂಲಮ್ - 26
ಬಲವಂತೋಽಸ್ತ್ರವಿದುಷೋ ನಾನಾ ಪ್ರಹರಣಾ ರಣೇ ।
ಜಘ್ನುರ್ವಾನರ ಸೈನ್ಯಾನಿ ರಾಕ್ಷಸಾಃ ಕ್ರೋಧಮೂರ್ಛಿತಾಃ ॥
ಅನುವಾದ
ಜೊತೆಗೆ ಕ್ರೋಧಗೊಂಡ ಇತರ ಅಸ್ತ್ರ ವೇತ್ತರಾದ ಬಲವಂತ ರಾಕ್ಷಸರು ಅಸ್ತ್ರ-ಶಸ್ತ್ರಗಳನ್ನು ಧರಿಸಿ ವಾನರ ಸೈನ್ಯವನ್ನು ಸಂಹರಿಸ ತೊಡಗಿದರು.॥26॥
ಮೂಲಮ್ - 27
ಜಘ್ನೇತಾನ್ ರಾಕ್ಷಸಾನ್ ಸರ್ವಾನ್ ದೃಷ್ಟೋ ವಾಲಿಸುತೋ ರಣೇ ।
ಕ್ರೋಧೇನ ದ್ವಿಗುಣಾವಿಷ್ಟಃ ಸಂವರ್ತಕ ಇವಾನಲಃ ॥
ಅನುವಾದ
ಆದರೆ ಪ್ರಳಯಕಾಲದ ಸಂವರ್ತಕ ಅಗ್ನಿಯು ಪ್ರಾಣಿಗಳನ್ನು ಸಂಹರಿಸು ವಂತೆಯೇ ವಾಲಿಪುತ್ರ ಅಂಗದನು ಇಮ್ಮಡಿ ಉತ್ಸಾಹದಿಂದ ರಾಕ್ಷಸರನ್ನು ವಧಿಸತೊಡಗಿದನು.॥27॥
ಮೂಲಮ್ - 28½
ತಾನ್ರಾಕ್ಷಸಗಣಾನ್ ಸರ್ವಾನ್ ವೃಕ್ಷಮುದ್ಯಮ್ಯ ವೀರ್ಯವಾನ್ ।
ಅಂಗದಃ ಕ್ರೋಧತಾಮ್ರಾಕ್ಷಃ ಸಿಂಹಃ ಕ್ಷುದ್ರಮೃಗಾನಿವ ॥
ಚಕಾರ ಕದನಂ ಘೋರಂ ಶಕ್ರತುಲ್ಯಪರಾಕ್ರಮಃ ।
ಅನುವಾದ
ಅವನ ಕಣ್ಣುಗಳು ಕ್ರೋಧದಿಂದ ಕೆಂಪಾಗಿದ್ದು, ಇಂದ್ರನಂತೆ ಪರಾಕ್ರಮಿಯಾಗಿದ್ದನು. ಸಿಂಹವು ಸಣ್ಣ ಪ್ರಾಣಿಗಳನ್ನು ಸುಲಭವಾಗಿ ಕೊಲ್ಲುವಂತೆ, ಪರಾಕ್ರಮಿ ಅಂಗದನು ಒಂದು ಮರವನ್ನೆತ್ತಿಕೊಂಡು ಎಲ್ಲ ರಾಕ್ಷಸ ಸೈನಿಕರನ್ನು ಸಂಹರಿಸತೊಡಗಿದನು.॥28½॥
ಮೂಲಮ್ - 29½
ಅಂಗದಾಭಿಹತಾಸ್ತತ್ರ ರಾಕ್ಷಸಾ ಭೀಮವಿಕ್ರಮಾಃ ॥
ವಿಭಿನ್ನಶಿರಸಃ ಪೇತುರ್ನಿಕೃತ್ತಾ ಇವ ಪಾದಪಾಃ ।
ಅನುವಾದ
ಅಂಗದನ ಪ್ರಹಾರದಿಂದ ಆ ಭಯಾನಕ ಪರಾಕ್ರಮಿ ರಾಕ್ಷಸರು ತಲೆ ಕಡಿದಮರಗಳಂತೆ ಶಿರಗಳನ್ನು ಕಳೆದುಕೊಂಡು ನೆಲಕ್ಕೆ ಬೀಳತೊಡಗಿದರು.॥29½॥
ಮೂಲಮ್ - 30½
ರಥೇಶ್ಚಿತ್ರೈರ್ಧ್ವಜೈರಶ್ವೈಃ ಶರೀರೈರ್ಹರಿರಕ್ಷಸಾಮ್ ॥
ರುಧಿರೌಘೇಣ ಸಂಛನ್ನಾ ಭೂಮಿರ್ಭಯಕರೀ ತದಾ ।
ಅನುವಾದ
ಆಗ ರಥಗಳಿಂದ, ಚಿತ್ರವಿಚಿತ್ರ ಧ್ವಜಗಳಿಂದ, ಕುದುರೆಗಳಿಂದ, ರಾಕ್ಷಸರ ಮತ್ತು ವಾನರರ ದೇಹಗಳಿಂದ, ಹರಿದ ರಕ್ತದ ಹೊಳೆಯಿಂದ ಆ ರಣಭೂಮಿಯು ಭಯಾನಕವಾಗಿ ಕಂಡುಬರುತ್ತಿತ್ತು.॥30½॥
ಮೂಲಮ್ - 31½
ಹಾರಕೇಯೂರವಸ್ಶಸ್ತ್ರೈ ಶಸ್ತ್ರೈಶ್ಚ ಸಮಲಂಕೃತಾ ॥
ಭೂಮಿರ್ಭಾತಿ ರಣೇ ತತ್ರ ಶಾರದೀವಯಥಾ ನಿಶಾ ।
ಅನುವಾದ
ಯೋಧರ ಹಾರ, ಕೇಯೂರ, ವಸ್ತ್ರ, ಶಸ್ತ್ರಗಳಿಂದ ಅಲಂಕೃತವಾದ ರಣಭೂಮಿಯು ಶರತ್ಕಾಲದ ಇರುಳಿನಂತೆ ಶೋಭಿಸುತ್ತಿತ್ತು.॥31½॥
ಮೂಲಮ್ - 32
ಅಂಗದಸ್ಯ ಚ ವೇಗೇನ ತದ್ರಾಕ್ಷಸ ಬಲಂ ಮಹತ್ ।
ಪ್ರಾಕಂಪತ ತದಾ ತತ್ರಪವನೇನಾಂಬುದೋ ಯಥಾ ॥
ಅನುವಾದ
ಅಂಗದನ ವೇಗದಿಂದ ಆ ವಿಶಾಲ ರಾಕ್ಷಸ ಸೈನ್ಯವು ವಾಯುವೇಗದಿಂದ ಕಂಪಿಸುವ ಮೇಘಗಳಂತೆ ನಡುಗಿಹೋಯಿತು.॥32॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತಮೂರನೆಯ ಸರ್ಗ ಪೂರ್ಣವಾಯಿತು.॥53॥