वाचनम्
ಭಾಗಸೂಚನಾ
ಧೂಮ್ರಾಕ್ಷನ ಯುದ್ಧ, ಹನುಮಂತನಿಂದ ಧೂಮ್ರಾಕ್ಷನ ವಧೆ
ಮೂಲಮ್ - 1
ಧೂಮ್ರಾಕ್ಷಂ ಪ್ರೇಕ್ಷ್ಯ ನಿರ್ಯಾಂತಂ ರಾಕ್ಷಸಂ ಭೀಮವಿಕ್ರಮಮ್ ।
ವಿನೇದುರ್ವಾನರಾಃ ಸರ್ವೇ ಪ್ರಹೃಷ್ಟ ಯುದ್ಧಕಾಂಕ್ಷಿಣಃ ॥
ಅನುವಾದ
ಭಯಂಕರ ಪರಾಕ್ರಮಿ ನಿಶಾಚರ ಧೂಮ್ರಾಕ್ಷನು ಬಂದಿರುವುದನ್ನು ನೋಡಿ ಯುದ್ಧದ ಇಚ್ಛೆಯುಳ್ಳ ಸಮಸ್ತ ವಾನರರು ಹರ್ಷೋಲ್ಲಾಸದಿಂದ ಸಿಂಹನಾದ ಮಾಡತೊಡಗಿದರು.॥1॥
ಮೂಲಮ್ - 2
ತೇಷಾಂ ಸುತುಮುಲಂ ಯುದ್ಧಂ ಸಂಜಜ್ಞೆ ಕಪಿರಕ್ಷಸಾಮ್ ।
ಅನ್ಯೋನ್ಯಂ ಪಾದಪೈರ್ಘೋರೈರ್ನಿಘ್ನತಾಂ ಶೂಲಮುದ್ಗರೈಃ ॥
ಅನುವಾದ
ಆಗ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ಅತ್ಯಂತ ಭಯಂಕರ ಯುದ್ಧ ಹತ್ತಿಕೊಂಡಿತು. ಅವರು ಘೋರ ವೃಕ್ಷಗಳಿಂದ ಹಾಗೂ ಶೂಲ, ಮುದ್ಗರಗಳಿಂದ ಒಬ್ಬರು ಮತ್ತೊಬ್ಬರನ್ನು ಹೊಡೆಯುತ್ತಿದ್ದರು.॥2॥
ಮೂಲಮ್ - 3
ರಾಕ್ಷಸೈರ್ವಾನರಾ ಘೋರಾ ವಿನಿಕೃತ್ತಾಃ ಸಮಂತತಃ ।
ವಾನರೈ ರಾಕ್ಷಸಾಶ್ಚಾಪಿ ದ್ರುಮೈರ್ಭೂಮಿ ಸಮೀಕೃತಾಃ ॥
ಅನುವಾದ
ರಾಕ್ಷಸರು ಎಲ್ಲೆಡೆ ಘೋರ ವಾನರರನ್ನು ಕತ್ತರಿಸಿದರೆ, ವಾನರರು ವೃಕ್ಷಗಳಿಂದ ಹೊಡೆದು ಹೊಡೆದು ರಾಕ್ಷಸರನ್ನು ಧರಾಶಾಯಿಯಾಗಿಸುತ್ತಿದ್ದರು.॥3॥
ಮೂಲಮ್ - 4
ರಾಕ್ಷಸಾಸ್ತ್ವಭಿಸಂಕ್ರುದ್ಧಾ ವಾನರಾನ್ನಿಶಿತೈಃ ಶರೈಃ ।
ವಿವ್ಯಧುರ್ಘೋರಸಂಕಾಶೈಃ ಕಂಕಪತ್ರೈರಜಿಹ್ಮಗೈಃ ॥
ಅನುವಾದ
ಕ್ರೋಧಗೊಂಡ ರಾಕ್ಷಸರು ತಮ್ಮ ಕಂಕಪತ್ರಯುಕ್ತ, ನೇರವಾಗಿ ಹೋಗುವ, ಘೋರ ಹರಿತ ಬಾಣಗಳಿಂದ ವಾನರರನ್ನು ಗಾಯಗೊಳಿಸುತ್ತಿದ್ದರು.॥4॥
ಮೂಲಮ್ - 5
ತೇ ಗದಾಭಿಶ್ಚ ಭೀಮಾಭಿಃ ಪಟ್ಟಿಶೈಃ ಕೂಟಮುದ್ಗರೈಃ ।
ಘೋರೈಶ್ಚ ಪರಿಘೈಶ್ಚಿತ್ರೈಸ್ತ್ರಿಶೂಲೈಶ್ಚಾಪಿ ಸಂಶ್ರಿತೈಃ ॥
ಮೂಲಮ್ - 6
ವಿದಾರ್ಯಮಾಣಾ ರಕ್ಷೋಭಿರ್ವಾನರಾಸ್ತೇ ಮಹಾಬಲಾಃ ।
ಅಮರ್ಷಾಜನಿತೋದ್ಧರ್ಷಾಶ್ಚಕ್ರುಃ ಕರ್ಮಾಣ್ಯಭೀತವೃತ್ ॥
ಅನುವಾದ
ರಾಕ್ಷಸರು ಧರಿಸಿದ ಭಯಂಕರ ಗದೆಗಳಿಂದಲೂ, ಪಟ್ಟಿಶ, ಶೂಲ, ಮುದ್ಗರ, ಘೋರಪರಿಘ ಗಳಿಂದಲೂ, ವಿಚಿತ್ರವಾದ ತ್ರಿಶೂಲಗಳಿಂದಲೂ, ಗಾಯ ಗೊಂಡ ಬಲಿಷ್ಠರಾದ ವಾನರರು ಅಸಹನೆಯಿಂದ ಯುದ್ಧೋತ್ಸಾಹಗೊಂಡು ನಿರ್ಭಯರಂತೆ ಮಹಾಕರ್ಮ ಮಾಡತೊಡಗಿದರು.॥5-6॥
ಮೂಲಮ್ - 7
ಶರನಿರ್ಭಿನ್ನ ಗಾತ್ರಾಸ್ತೇ ಶೂಲನಿರ್ಭಿನ್ನ ದೇಹಿನಃ ।
ಜಗೃಹುಸ್ತೇ ದ್ರುಮಾಂಸ್ತತ್ರ ಶಿಲಾಶ್ಚ ಹರಿಯೂಥಪಾಃ ॥
ಅನುವಾದ
ಬಾಣಗಳಿಂದ ಭಿನ್ನವಾದ ಅವಯವಗಳಿಂದ ಕೂಡಿದ್ದ, ಶೂಲಗಳಿಂದ ವಿದೀರ್ಣವಾದ ಆ ವಾನರ ದಳಪತಿಗಳು ಬಂಡೆಗಳನ್ನೂ, ಮಹಾವೃಕ್ಷಗಳನ್ನೂ ಎತ್ತಿಕೊಂಡರು.॥7॥
ಮೂಲಮ್ - 8
ತೇ ಭೀಮವೇಗಾ ಹರಯೋ ನರ್ದಮಾನಾಸ್ತತಸ್ತತಃ ।
ಮಮಂಥೂ ರಾಕ್ಷಸಾನ್ ವೀರಾನ್ನಾಮಾನಿ ಚ ಬಭಾಷಿರೇ ॥
ಅನುವಾದ
ಭಯಂಕರವಾದ ವೇಗದಿಂದ ಕೂಡಿದ್ದ ವಾನರರು ಜೋರಾಗಿ ಗರ್ಜಿಸುತ್ತಾ ಕಂಡ ಕಂಡಲ್ಲಿ ರಾಕ್ಷಸರನ್ನು ಜಜ್ಜಿಹಾಕಿ ತಮ್ಮ ನಾಮಧೇಯವನ್ನು ಉದ್ಘೋಷಿಸುತ್ತಿದ್ದರು.॥8॥
ಮೂಲಮ್ - 9
ತದ್ಬಭೂವಾದ್ಭುತಂ ಘೋರಂ ಯುದ್ಧಂ ವಾನರ ರಕ್ಷಸಾಮ್ ।
ಶಿಲಾಭಿರ್ವಿವಿಧಾಭಿಶ್ಚ ಬಹುಶಾಖೈಶ್ಚ ಪಾದಪೈಃ ॥
ಅನುವಾದ
ನಾನಾ ವಿಧದ ಶಿಲೆಗಳಿಂದ ಮತ್ತು ದಟ್ಟವಾಗಿ ಶಾಖೆಗಳುಳ್ಳ ವೃಕ್ಷಗಳ ಪ್ರಹಾರದಿಂದ ಅಲ್ಲಿ ವಾನರರಿಗೂ ರಾಕ್ಷಸರಿಗೂ ಘೋರ, ಅದ್ಭುತಯುದ್ಧ ನಡೆಯಿತು.॥9॥
ಮೂಲಮ್ - 10
ರಾಕ್ಷಸಾ ಮಥಿತಾಃ ಕೇಚಿದ್ ವಾನರೈರ್ಜಿತಕಾಶಿಭಿಃ ।
ಪ್ರವೇಮೂ ರುಧಿರಂ ಕೇಚಿನ್ಮುಖೈ ರುಧಿರಭೋಜನಾಃ ॥
ಅನುವಾದ
ವಿಜಯೋಲ್ಲಾಸದಿಂದ ಶೋಭಿಸುವ ವಾನರರು ಎಷ್ಟೋ ರಾಕ್ಷಸರನ್ನು ಸಂಹರಿಸಿದರು. ಎಷ್ಟೋ ರಕ್ತಭೋಜೀ ರಾಕ್ಷಸರು ವಾನರರ ಏಟು ತಿಂದು ರಕ್ತವನ್ನು ವಾಂತಿಮಾಡುತ್ತಿದ್ದರು.॥10॥
ಮೂಲಮ್ - 11
ಪಾರ್ಶ್ವೇಷು ದಾರಿತಾಃ ಕೇಚಿತ್ಕೇಚಿದ್ ರಾಶೀಕೃತಾ ದ್ರುಮೈಃ ।
ಶಿಲಾಭಿಶ್ಚೂರ್ಣಿತಾಃ ಕೇಚಿತ್ ಕೇಚಿದ್ದಂತೈರ್ವಿದಾರಿತಾಃ ॥
ಅನುವಾದ
ಕೆಲವು ರಾಕ್ಷಸರ ಪಕ್ಕೆಗಳು ಮುರಿದುಹೋದುವು. ಎಷ್ಟೋ ರಾಕ್ಷಸರು ವೃಕ್ಷಗಳ ಪೆಟ್ಟುತಿಂದು ಸತ್ತುಹೋದರು. ಕೆಲವರು ಬಂಡೆಗಳ ಏಟಿನಿಂದ ನುಚ್ಚುನೂರಾದರು. ಕೆಲವು ರಾಕ್ಷಸರನ್ನು ವಾನರರು ಹಲ್ಲುಗಳಿಂದಲೇ ಕಚ್ಚಿ ಸೀಳಿಬಿಟ್ಟರು.॥11॥
ಮೂಲಮ್ - 12
ಧ್ವಜೈರ್ವಿಮಥಿತೈರ್ಭಗ್ನೈಃ ಖಡ್ಗೈಶ್ಚ್ಚ ವಿನಿಪಾತಿತೈಃ ।
ರಥೈರ್ವಿಧ್ವಂಸಿತೈಃ ಕೇಚಿದ್ ವ್ಯಥಿತಾ ರಜನೀಚರಾಃ ॥
ಅನುವಾದ
ಕೆಲವರ ಧ್ವಜಗಳನ್ನು ಮುರಿದು ಹೊಸಕಿಹಾಕಿದರು. ಖಡ್ಗಗಳನ್ನು ಕಸಿದುಕೊಂಡು ಎಸೆದುಬಿಟ್ಟರು, ರಥಗಳನ್ನು ಪುಡಿಮಾಡಿಬಿಟ್ಟರು. ಇಂತಹ ದುರ್ದಶೆ ಹೊಂದಿ ಅನೇಕ ರಾಕ್ಷಸರು ದುಃಖಿತರಾದರು.॥12॥
ಮೂಲಮ್ - 13
ಗಜೇಂದ್ರೈಃ ಪರ್ವತಾಕಾರೈಃ ಪರ್ವತಾಗ್ರೈರ್ವನೌಕಸಾಮ್ ।
ಮಥಿತೈರ್ವಾಭಿಜಿಃ ಕೀರ್ಣಂ ಸಾರೋಹೈರ್ವಸುಧಾತಲಮ್ ॥
ಅನುವಾದ
ವಾನರರು ಎಸೆದಿರುವ ಪರ್ವತ ಶಿಖರಗಳಿಂದ ಪರ್ವತಾಕಾರ ಆನೆಗಳೂ, ಕುದುರೆಗಳೂ, ಕುದುರೆ ಸವಾರರು ವಿಧ್ವಸ್ತರಾಗಿ ರಣಭೂಮಿಯು ತುಂಬಿಹೋಯಿತು.॥13॥
ಮೂಲಮ್ - 14
ವಾನರೈರ್ಭೀಮವಿಕ್ರಾಂತೈರಾಪ್ಲುತ್ಯೋಪ್ಲುತ್ಯ ವೇಗಿತೈಃ ।
ರಾಕ್ಷಸಾಃ ಕರಜೈಸ್ತೀಕ್ಷ್ಣೈರ್ಮುಖೇಷು ವಿನಿದಾರಿತಾಃ ॥
ಅನುವಾದ
ಭಯಾನಕ ಪರಾಕ್ರಮ ಪ್ರಕಟಿಸುವ ವೇಗಶಾಲೀ ವಾನರರು ನೆಗೆದಾಡುತ್ತಾ ತಮ್ಮ ತೀಕ್ಷ್ಣವಾದ ಉಗುರುಗಳಿಂದ ರಾಕ್ಷಸರ ಮುಖಗಳನ್ನು ಪರಚಿ ಸೀಳಿಹಾಕುತ್ತಿದ್ದರು.॥14॥
ಮೂಲಮ್ - 15
ವಿಷಣ್ಣವದನಾ ಭೂಯೋ ವಿಪ್ರಕೀರ್ಣ ಶಿರೋರುಹಾಃ ।
ಮೂಢಾಃ ಶೋಣಿತ ಗಂಧೇನ ನಿಪೇತುರ್ಧರಣೀತಲೇ ॥
ಅನುವಾದ
ಆ ರಾಕ್ಷಸರ ಮುಖಗಳಲ್ಲಿ ವಿಷಾದತುಂಬಿತು. ಕೂದಲು ಕೆದರಿ, ರಕ್ತದ ವಾಸನೆಯಿಂದ ಮೂರ್ಛಿತರಾಗಿ ನೆಲದ ಮೇಲೆ ಬೀಳುತ್ತಿದ್ದರು.॥15॥
ಮೂಲಮ್ - 16
ಅನ್ಯೇತು ಪರಮಕ್ರುದ್ಧಾ ರಾಕ್ಷಸಾ ಭೀಮವಿಕ್ರಮಾಃ ।
ತಲೈರೇವಾಭಿಧಾವಂತಿ ವಜ್ರಸ್ಪರ್ಶಸಮೈರ್ಹರೀನ್ ॥
ಅನುವಾದ
ಇತರ ಭೀಷಣ ಪರಾಕ್ರಮಿ ರಾಕ್ಷಸರು ಅತ್ಯಂತ ಕ್ರುದ್ಧರಾಗಿ ತಮ್ಮ ವಜ್ರಮುಷ್ಟಿಗಳಿಂದ ಪ್ರಹರಿಸುತ್ತಾ ವಾನರರ ಮೇಲೆ ಆಕ್ರಮಿಸಿದರು.॥16॥
ಮೂಲಮ್ - 17
ವಾನರೈಃ ಪಾತಯಂತಸ್ತೇ ವೇಗಿತಾ ವೇಗವತ್ತರೈಃ ।
ಮುಷ್ಟಿಭಿಶ್ಚರಣೈರ್ದಂತೈಃ ಪಾದಪೈಶ್ಚಾವಪೋಥಿತಾಃ ॥
ಅನುವಾದ
ಶತ್ರುಪಕ್ಷವನ್ನು ವೇಗವಾಗಿ ಕೊಲ್ಲುತ್ತಿದ್ದ ಆ ರಾಕ್ಷಸರನ್ನು ಅತ್ಯಂತ ವೇಗಶಾಲಿ ಅನೇಕ ವಾನರರು ಒದೆಗಳಿಂದ, ಮುಷ್ಠಿಗಳಿಂದ, ಹಲ್ಲುಗಳಿಂದ, ವೃಕ್ಷಗಳಿಂದ ಹೊಡೆದು ನುಚ್ಚುನೂರಾಗಿಸಿದರು.॥17॥
ಮೂಲಮ್ - 18
ಸೈನ್ಯಂ ತು ವಿದ್ರುತಂ ದೃಷ್ಟ್ವಾ ಧೂಮ್ರಾಕ್ಷೋ ರಾಕ್ಷಸರ್ಷಭಃ ।
ರೋಷೇಣ ಕದನಂ ಚಕ್ರೇ ವಾನರಾಣಾಂ ಯುಯುತ್ಸತಾಮ್ ॥
ಅನುವಾದ
ವಾನರರಿಂದ ಓಡಿಸಲ್ಪಟ್ಟ ತಮ್ಮ ಸೈನ್ಯವನ್ನು ರಾಕ್ಷಸ ಶ್ರೇಷ್ಠ ಧೂಮ್ರಾಕ್ಷನು ನೋಡಿ, ಯುದ್ಧದ ಇಚ್ಛೆಯಿಂದ ಮುನ್ನುಗ್ಗಿ ಬರುತ್ತಿದ್ದದ ವಾನರರನ್ನು ಸಂಹರಿಸತೊಡಗಿದನು.॥18॥
ಮೂಲಮ್ - 19
ಪ್ರಾಸೈಃ ಪ್ರಮಥಿತಾಃ ಕೇಚಿದ್ವಾನರಾಃ ಶೋಣಿತಸ್ರವಾಃ ।
ಮುದ್ಗರೈರಾಹತಾಃ ಕೇಚಿತ್ ಪತಿಕಾ ಧರಣೀತಲೇ ॥
ಅನುವಾದ
ಕೆಲವು ವಾನರರನ್ನು ಅವನು ಪ್ರಾಸಗಳಿಂದ ಪ್ರಹರಿಸಿದನು. ಅದರಿಂದ ರಕ್ತದ ಪ್ರವಾಹವೇ ಹರಿಯಿತು. ಅವನ ಮುದ್ಗರಗಳ ಏಟಿನಿಂದ ಕೆಲವರು ಅಸುನೀಗಿ ಭೂಮಿಯ ಮೇಲೆ ಒರಗಿದರು.॥19॥
ಮೂಲಮ್ - 20
ಪರಿಘೈರ್ಮಥಿತಾಃ ಕೇಚಿತ್ ಭಿಂದಿ ಪಾಲೈಶ್ಚ ದಾರಿತಾಃ ।
ಪಟ್ಟಿಶೈರ್ಮಥಿತಾಃ ಕೇಚಿದ್ವಿಹ್ವಲಂತೋ ಗತಾಸವಃ ॥
ಅನುವಾದ
ಧೂಮ್ರಾಕ್ಷನು ಕೆಲವು ವಾನರರನ್ನು ಪರಿಘಗಳಿಂದ ಥಳಿಸಿದರೆ, ಕೆಲವರನ್ನು ಭಿಂದಿಪಾಲಗಳಿಂದ ಸೀಳಿಹಾಕಿದನು. ಕೆಲವರನ್ನು ಪಟ್ಟಿಶಗಳಿಂದ ಪ್ರಹರಿಸಿದರೆ, ಅವರು ವ್ಯಾಕುಲರಾಗಿ ಪ್ರಾಣಗಳನ್ನು ತೊರೆದರು.॥20॥
ಮೂಲಮ್ - 21
ಕೇಚಿದ್ವಿನಿಹತಾ ಭೂಮೌ ರುಧಿರಾರ್ದ್ರಾ ವನೌಕಸಃ ।
ಕೇಚಿದ್ವಿದ್ರಾವಿತಾ ನಷ್ಟಾಃ ಸಂಕ್ರುದ್ಧೈ ರಾಕ್ಷಸೈರ್ಯುಧಿ ॥
ಅನುವಾದ
ಎಷ್ಟೋ ವಾನರರು ರಾಕ್ಷಸರಿಂದ ಹತರಾಗಿ ರಕ್ತದಿಂದ ತೊಯ್ದುಹೋಗಿ ನೆಲಕ್ಕೊರಗಿದರು. ಎಷ್ಟೋ ಕ್ರುದ್ಧರಾದ ರಾಕ್ಷಸರಿಂದ ಓಡಿಸಲ್ಪಟ್ಟು ಕಣ್ಮರೆಯಾದರು.॥21॥
ಮೂಲಮ್ - 22
ವಿಭಿನ್ನ ಹೃದಯಾಃ ಕೇಚಿದೇಕಪಾರ್ಶ್ವೇನ ಶಾಯಿತಾಃ ।
ವಿದಾರಿತಾಸ್ತ್ರಿಶೂಲೈಶ್ಚ ಕೇಚಿದಾಂತೈರ್ವಿನಿಃಸೃತಾಃ ॥
ಅನುವಾದ
ಕೆಲವು ವಾನರರ ತ್ರಿಶೂಲದಿಂದ ತಿವಿದು ಕರುಳುಗಳು ಹೊರಗೆ ಬರುವಂತೆ ಮಾಡಿದ್ದನು.॥22॥
ಮೂಲಮ್ - 23
ತತ್ಸುಭೀಮಂ ಹದ್ಯುದ್ಧಂ ಹರಿರಾಕ್ಷಸ ಸಂಕುಲಮ್ ।
ಪ್ರಬಭೌ ಶಸ್ತ್ರ ಬಹುಲಂ ಶಿಲಾಪಾದಪಸಂಕುಲಮ್ ॥
ಅನುವಾದ
ವಾನರರು ಮತ್ತು ರಾಕ್ಷಸರಿಂದ ತುಂಬಿಹೋಗಿದ್ದ ಆ ರಣರಂಗವು ಭಯಾನಕವಾಗಿತ್ತು. ಅಪಾರವಾದ ಅಸ್ತ್ರಶಸ್ತ್ರಗಳಿಂದ, ಶಿಲೆಗಳ, ವೃಕ್ಷಗಳ ಮಳೆಯಿಂದಾಗಿ ಇಡೀ ರಣಭೂಮಿಯು ತುಂಬಿಹೋಗಿತ್ತು.॥23॥
ಮೂಲಮ್ - 24
ಧನುರ್ಜ್ಯಾತಂತ್ರಿಮಧುರಂ ಹಿಕ್ಕಾತಾಲಸಮನ್ವಿತಮ್ ।
ಮಂದಸ್ತನಿತಗೀತಂ ತದ್ ಯುದ್ಧಗಾಂಧರ್ವಮಾ ಬಭೌ ॥
ಅನುವಾದ
ಆ ಯುದ್ಧರೂಪೀ ಗಾಂಧರ್ವ (ಸಂಗೀತ ಮಹೋತ್ಸವ) ಅದ್ಭುತವಾಗಿ ಕಾಣುತ್ತಿತ್ತು. ಧನುಸ್ಸಿನ ಟಂಕಾರವೇ ವೀಣೆಯ ಮಧುರನಾದದಂತಿತ್ತು. ಬಿಕ್ಕಳಿಕೆಗಳೇ ತಾಳವಾಗಿತ್ತು, ಮೆಲ್ಲನೆ ನರಳುವ ಶಬ್ದಗಳೇ ಗೀತವಾಗಿತ್ತು.॥24॥
ಮೂಲಮ್ - 25
ಧೂಮ್ರಾಕ್ಷಸ್ತು ಧನುಷ್ಪಾಣಿರ್ವಾನರಾನ್ರಣಮೂರ್ಧನಿ ।
ಹಸನ್ವಿದ್ರಾವಯಾಮಾಸ ದಿಶಸ್ತಾನ್ ಶರವೃಷ್ಟಿಭಿಃ ॥
ಅನುವಾದ
ಧನುಸ್ಸನ್ನು ಧರಿಸಿದ್ದ ಧೂಮ್ರಾಕ್ಷನು ಯುದ್ಧಭೂಮಿಯಲ್ಲಿ ಬಾಣಗಳ ಮಳೆಗರೆದು, ಅಟ್ಟಹಾಸದಿಂದ ನಗುತ್ತಾ ವಾನರ ಸೈನಿಕರನ್ನು ದಿಕ್ಕಾಪಾಲಾಗಿ ಓಡಿಸಿಬಿಟ್ಟನು.॥25॥
ಮೂಲಮ್ - 26
ಧೂಮ್ರಾಕ್ಷೇಣಾರ್ದಿತಂ ಸೈನ್ಯಂ ವ್ಯಥಿತಂ ಪ್ರೇಕ್ಷ್ಯ ಮಾರುತಿಃ ।
ಅಭ್ಯವರ್ತತ ಸಂಕ್ರುದ್ಧಃ ಪ್ರಗೃಹ್ಯ ವಿಪುಲಾಂ ಶಿಲಾಮ್ ॥
ಅನುವಾದ
ಧೂಮ್ರಾಕ್ಷನ ಏಟಿನಿಂದ ಪೀಡಿತ ಹಾಗೂ ವ್ಯಥಿತವಾದ ವಾನರ ಸೈನ್ಯವನ್ನು ಹನುಮಂತನು ನೋಡಿ, ಪರಮಕ್ರುದ್ಧನಾಗಿ ದೊಡ್ಡದಾದ ಒಂದು ಬಂಡೆಯನ್ನೆತ್ತಿಕೊಂಡು ಅವನ ಕಡೆಗೆ ಧಾವಿಸಿದನು.॥26॥
ಮೂಲಮ್ - 27
ಕ್ರೋಧಾದ್ ದ್ವಿಗುಣತಾಮ್ರಾಕ್ಷಃ ಪಿತುಸ್ತುಲ್ಯಪರಾಕ್ರಮಃ ।
ಶಿಲಾಂ ತಾಂ ಪಾತಯಾಮಾಸ ಧೂಮ್ರಾಕ್ಷಸ್ಯ ರಥಂ ಪ್ರತಿ ॥
ಅನುವಾದ
ಆಗ ಕ್ರೋಧದಿಂದ ಅವನ ಕಣ್ಣುಗಳು ಇಮ್ಮಡಿ ಕೆಂಪಾಗಿದ್ದವು. ಅವನ ಪರಾಕ್ರಮ ತಂದೆ ವಾಯುವಿನಂತೆ ಅತುಲವಾಗಿತ್ತು. ಅವನು ಆ ಬಂಡೆಯನ್ನು ಧೂಮ್ರಾಕ್ಷನ ರಥಕ್ಕೆ ಅಪ್ಪಳಿಸಿದನು.॥27॥
ಮೂಲಮ್ - 28
ಆಪತಂತೀಂ ಶಿಲಾಂ ದೃಷ್ಟ್ವಾಗದಾಮುದ್ಯಮ್ಯ ಸಂಭ್ರಮಾತ್ ।
ರಥಾದಾಪ್ಲುತ್ಯ ವೇಗೇನ ವಸುಧಾಯಾಂ ವ್ಯತಿಷ್ಠತ ॥
ಅನುವಾದ
ಆ ಬಂಡೆಯು ರಥದ ಕಡೆಗೆ ಬರುವುದನ್ನು ನೋಡಿ ಧೂಮ್ರಾಕ್ಷನು ಗದೆಯನ್ನಿತ್ತಿಕೊಂಡು ವೇಗವಾಗಿ ರಥದಿಂದ ಹಾರಿ ನೆಲದ ಮೇಲೆ ನಿಂತನು.॥28॥
ಮೂಲಮ್ - 29
ಸಾ ಪ್ರಮಥ್ಯ ರಥಂ ತಸ್ಯ ನಿಪಪಾತ ಶಿಲಾ ಭುವಿ ।
ಸಚಕ್ರಕೂಬರಂ ಸಾಶ್ವಂ ಸಧ್ವಜಂ ಸಶರಾಸನಮ್ ॥
ಅನುವಾದ
ಹನುಮಂತನು ಎಸೆದ ಆ ಶಿಲೆಯು ರಥಚಕ್ರ, ಅಚ್ಚುಮರ, ಕುದುರೆಗಳು, ಧ್ವಜ, ಧನುಷ್ಯಸಹಿತ ಅವನ ರಥವನ್ನು ನುಚ್ಚು ನೂರಾಗಿಸಿ ಭೂಮಿಗೆ ಬಿದ್ದುಹೋಯಿತು.॥29॥
ಮೂಲಮ್ - 30
ಸ ಭಂಕ್ತ್ವಾ ತು ರಥಂ ತಸ್ಯ ಹನೂಮಾನ್ಮಾರುತಾತ್ಮಜಃ ।
ರಕ್ಷಸಾಂ ಕದನಂ ಚಕ್ರೇ ಸಸ್ಕಂಧವಿಟಪೈರ್ದ್ರುಮೈಃ ॥
ಅನುವಾದ
ಈ ಪ್ರಕಾರ ಧೂಮ್ರಾಕ್ಷನ ರಥವನ್ನು ನಾಶಮಾಡಿ ಪವನಪುತ್ರ ಹನುಮಂತನು ರೆಂಬೆಗಳಿಂದ ಕೂಡಿದ ವೃಕ್ಷಗಳಿಂದ ರಾಕ್ಷಸರನ್ನು ಸಂಹರಿಸ ತೊಡಗಿದನು.॥30॥
ಮೂಲಮ್ - 31
ವಿಭಿನ್ನಶಿರಸೋ ಭೂತ್ವಾ ರಾಕ್ಷಸಾ ರುಧಿರೋಕ್ಷಿತಾಃ ।
ದ್ರುಮೈಃ ಪ್ರಮಥಿತಾಶ್ಚಾನ್ಯೇ ನಿಪೇತುರ್ಧರಣೀತಲೇ ॥
ಅನುವಾದ
ಹೆಚ್ಚಿನ ರಾಕ್ಷಸರ ತಲೆ ಒಡೆದು, ರಕ್ತದಿಂದ ತೊಯ್ದು ಹೋದುವು. ಇತರ ಎಷ್ಟೋ ನಿಶಾಚರರು ವೃಕ್ಷಗಳ ಏಟಿನಿಂದ ಜಜ್ಜಿ ಹೋಗಿ ನೆಲಕ್ಕೊರಗಿದರು.॥31॥
ಮೂಲಮ್ - 32
ವಿದ್ರಾವ್ಯ ರಾಕ್ಷಸಂ ಸೈನ್ಯಂ ಹನೂಮಾನ್ಮಾರುತಾತ್ಮಜಃ ।
ಗಿರೇಃ ಶಿಖರಮಾದಾಯ ಧೂಮ್ರಾಕ್ಷಮಭಿದುದ್ರುವೇ ॥
ಅನುವಾದ
ಹೀಗೆ ರಾಕ್ಷಸ ಸೈನ್ಯವನ್ನು ಹಿಂದಕ್ಕಟ್ಟಿ ಹನುಮಂತನು ಒಂದು ಪರ್ವತ ದಂತಹ ಬೃಹತ್ ಬಂಡೆಯನ್ನೆತ್ತಿಕೊಂಡು ಧೂಮ್ರಾಕ್ಷನನ್ನು ಆಕ್ರಮಿಸಿದನು.॥32॥
ಮೂಲಮ್ - 33
ತಮಾಪತಂತ ಧೂಮ್ರಾಕ್ಷೋ ಗದಾಮುದ್ಯಮ್ಯ ವೀರ್ಯವಾನ್ ।
ವಿನರ್ದಮಾನಃ ಸಹಸಾ ಹನೂಮಂತಮಭಿದ್ರವತ್ ॥
ಅನುವಾದ
ಹನುಮಂತನು ಬರುವುದನ್ನು ನೋಡಿದ ಧೂಮ್ರಾಕ್ಷನು ಗದೆಯನ್ನೆತ್ತಿಕೊಂಡು ಗರ್ಜಿಸುತ್ತಾ ವೇಗವಾಗಿ ಅವನ ಕಡೆಗೆ ಓಡಿದನು.॥33॥
ಮೂಲಮ್ - 34
ತತಃ ಕ್ರುದ್ಧಸ್ಯ ರೋಷೇಣ ಗದಾಂ ತಾಂ ಬಹುಕಂಟಕಾಮ್ ।
ಪಾತಯಾಮಾಸ ಧೂಮ್ರಾಕ್ಷೋ ಮಸ್ತಕೇಽಥ ಹನೂಮತಃ ॥
ಅನುವಾದ
ಧೂಮ್ರಾಕ್ಷನು ಕುಪಿತನಾಗಿ ಮುಳ್ಳುಗಳುಳ್ಳ ಗದೆಯಿಂದ ಹನುಮಂತನ ತಲೆಗೆ ಹೊಡೆದನು.॥34॥
ಮೂಲಮ್ - 35½
ತಾಡಿತಃ ಸ ತಯಾತತ್ರ ಗದಯಾ ಭೀಮವೇಗಯಾ ।
ಸ ಕಪಿರ್ಮಾರುತಬಲಸ್ತಂ ಪ್ರಹಾರಮಚಿಂತಯನ್ ॥
ಧೂಮ್ರಾಕ್ಷಸ್ಯ ಶಿರೋಮಧ್ಯೇ ಗಿರಿಶೃಂಗಮಪಾತಯತ್ ॥
ಅನುವಾದ
ಭಯಾನಕ ವೇಗವುಳ್ಳ ಆ ಗದೆಯ ಏಟು ತಿಂದರೂ ವಾಯುವಿನಂತೆ ಬಲಶಾಲಿ ಹನುಮಂತನು ಆ ಪೆಟ್ಟನ್ನು ಗಣನೆಗೆ ತಾರದೆ, ಧೂಮ್ರಾಕ್ಷನ ಮಸ್ತಕದಲ್ಲಿ ಆ ಪರ್ವತ ಶಿಖರವನ್ನು ಅಪ್ಪಳಿಸಿದನು.॥35॥
ಮೂಲಮ್ - 36
ಸ ವಿಸ್ಫಾರಿತ ಸರ್ವಾಂಗೋ ಗಿರಿಶೃಂಗೇಣ ತಾಡಿತಃ ॥
ಪಪಾತ ಸಹಸಾ ಭೂಮೌ ವಿಕೀರ್ಣ ಇವ ಪರ್ವತಃ ।
ಅನುವಾದ
ಪರ್ವತ ಶಿಖರದಿಂದ ಧೂಮ್ರಾಕ್ಷನ ಸರ್ವಾಂಗವು ಭಿನ್ನ-ಭಿನ್ನವಾಗಿ ಚದುರಿಬೀಳುವ ಪರ್ವತದಂತೆ ಅವನು ಪ್ರಾಣತೊರೆದು ಭೂಮಿಗೆ ಬಿದ್ದುಬಿಟ್ಟನು.॥36॥
ಮೂಲಮ್ - 37
ಧೂಮ್ರಾಕ್ಷಂ ನಿಹತಂ ದೃಷ್ಟ್ವಾ ಹತಶೇಷಾ ನಿಶಾಚರಾಃ ।
ತ್ರಸ್ತಾಃ ಪ್ರವಿವಿಶುರ್ಲಂಕಾಂ ವಧ್ಯಮಾನಾಃ ಪ್ಲವಂಗಮೈಃ ॥
ಅನುವಾದ
ಧೂಮ್ರಾಕ್ಷನು ಹತನಾದುದರಿಂದ ಬದುಕಿಉಳಿದಿದ್ದ ನಿಶಾಚರರು ಭಯಗೊಂಡು ವಾನರರಿಂದ ಏಟು ತಿನ್ನುತ್ತಾ ಲಂಕೆಯನ್ನು ಹೊಕ್ಕರು.॥37॥
ಮೂಲಮ್ - 38
ಸ ತು ಪವನಸುತೋ ನಿಹತ್ಯ ಶತ್ರುನ್
ಕ್ಷತಜವಹಾಃ ಸರಿತಶ್ಚ ಸಂವಿಕೀರ್ಯ ।
ರಿಪುವಧಜನಿತಶ್ರಮೋ ಮಹಾತ್ಮಾ
ಮುದಮಗಮತ್ ಕಪಿಭಿಃ ಸುಪೂಜ್ಯಮಾನಃ ॥
ಅನುವಾದ
ಹೀಗೆ ಶತ್ರುಗಳನ್ನು ಕೊಂದು ರಕ್ತದ ಹೊಳೆಗಳನ್ನು ಹರಿಸಿ ಮಹಾತ್ಮಾ ಪವನಕುಮಾರ ಹನುಮಂತನು ಶತ್ರುವಧೆಯಿಂದ ಬಳಲಿದ್ದರೂ ವಾನರರಿಂದ ಪೂಜಿತ ಹಾಗೂ ಪ್ರಶಂಸಿತನಾದುದರಿಂದ ಅವನು ಸಂತೋಷಭರಿತನಾದನು.॥38॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೆರಡನೆ ಸರ್ಗ ಪೂರ್ಣವಾಯಿತು.॥52॥