वाचनम्
ಭಾಗಸೂಚನಾ
ಶ್ರೀರಾಮನು ಬಂಧಮುಕ್ತನಾದುದನ್ನು ತಿಳಿದ ರಾವಣನು ಚಿಂತಿತನಾಗಿ ಧೂಮ್ರಾಕ್ಷನನ್ನು ಯುದ್ಧಕ್ಕಾಗಿ ಕಳಿಸಿದುದು, ಸೇನಾಸಹಿತ ಧೂಮ್ರಾಕ್ಷನು ನಗರದಿಂದ ಹೊರಗೆ ಬಂದುದು
ಮೂಲಮ್ - 1
ತೇಷಾಂ ತು ತುಮುಲಂ ಶಬ್ದಂ ವಾನರಾಣಾಂ ಮಹೌಜಸಾಮ್ ।
ನರ್ದತಾಂ ರಾಕ್ಷಸೈಃ ಸಾರ್ಧಂ ತದಾ ಶುಶ್ರಾವ ರಾವಣಃ ॥
ಅನುವಾದ
ಆ ಸಮಯದಲ್ಲಿ ಭೀಷಣ ಗರ್ಜಿಸುತ್ತಿರುವ ಮಹಾಬಲಿ ವಾನರರ ಆ ತುಮುಲನಾದವನ್ನು ರಾಕ್ಷಸರ ಸಹಿತ ರಾವಣನು ಕೇಳಿದನು.॥1॥
ಮೂಲಮ್ - 2
ಸ್ನಿಗ್ಧ ಗಂಭೀರ ನಿರ್ಘೋಷಂ ಶ್ರುತ್ವಾ ತಂ ನಿನದಂ ಭೃಶಮ್ ।
ಸಚಿವಾನಾಂ ತತಸ್ತೇಷಾಂ ಮಧ್ಯೇ ವಚನಮಬ್ರವೀತ್ ॥
ಅನುವಾದ
ಮಂತ್ರಿಗಳ ನಡುವೆ ಕುಳಿತಿರುವ ರಾವಣನು ಸಿಗ್ಧಗಂಭೀರ ಘೋಷ, ಗಟ್ಟಿಯಾಗಿ ಮಾಡಿದ ಸಿಂಹನಾದವನ್ನು ಕೇಳಿದಾಗ ಅವನು ಇಂತೆಂದನು.॥2॥
ಮೂಲಮ್ - 3
ಯಥಾಸೌ ಸಂಪ್ರಹೃಷ್ಟಾನಾಂ ವಾನರಾಣಾಮುಪತ್ಥಿತಃ ।
ಬಹೂನಾಂ ಸುಮಹಾನಾದೋ ಮೇಘಾನಾಮಿವ ಗರ್ಜತಾಮ್ ॥
ಮೂಲಮ್ - 4
ಸುವ್ಯಕ್ತಂ ಮಹತೀ ಪ್ರೀತಿರೇತೇಷಾಂ ನಾತ್ರ ಸಂಶಯಃ ।
ತಥಾಹಿ ವಿಪುಲೈರ್ನಾದೈಶ್ಚುಕ್ಷುಭೇ ಲವಣಾರ್ಣವಃ ॥
ಅನುವಾದ
ಈಗ ಹೆಚ್ಚು ಹರ್ಷದಿಂದ ಮೇಘಗಳಂತೆ ಗರ್ಜಿಸುವ ವಾನರರ ಈ ಮಹಾಕೋಲಾಹಲ ಪ್ರಕಟ ವಾಗುತ್ತಿರುವುದರಿಂದ ಇವರೆಲ್ಲರಿಗೆ ಭಾರೀ ಹರ್ಷ ಉಂಟಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಇದರಲ್ಲಿ ಸಂಶಯವೇ ಇಲ್ಲ. ಅದರಿಂದಲೆ ಈ ರೀತಿ ಪದೇಪದೇ ಮಾಡುವ ಗರ್ಜನೆಯಿಂದ ಈ ಲವಣ ಸಮುದ್ರ ವಿಕ್ಷುಬ್ಧವಾಗಿದೆ.॥3-4॥
ಮೂಲಮ್ - 5
ತೌ ತು ಬದ್ಧೌ ಶರೈಸ್ತೀಕ್ಷ್ಣೈರ್ಭ್ರಾತರೌ ರಾಮಲಕ್ಷ್ಮಣೌ ।
ಅಯಂ ಚ ಸುಮಹಾನ್ನಾದಃ ಶಂಕಾಂ ಜನಯತೀವ ಮೇ ॥
ಅನುವಾದ
ಆದರೆ ಆ ಇಬ್ಬರು ರಾಮ-ಲಕ್ಷ್ಮಣರು ಹರಿತ ಬಾಣಗಳಿಂದ ಬಂಧಿತರಾಗಿದ್ದಾರೆ. ಜೊತೆಗೆ ಈ ಮಹಾ ಹರ್ಷನಾದವೂ ಆಗುತ್ತಿದೆ. ಇದರಿಂದ ನನ್ನ ಮನಸ್ಸಿನಲ್ಲಿ ಸಂಶಯ ಉಂಟಾಗಿದೆ.॥5॥
ಮೂಲಮ್ - 6
ಏವಂ ಚ ವಚನಂ ಚೋಕ್ತ್ವಾ ಮಂತ್ರಿಣೋ ರಾಕ್ಷಸೇಶ್ವರಃ ।
ಉವಾಚ ನೈರ್ಋತಾಂಸ್ತತ್ರ ಸಮೀಪ ಪರಿವರ್ತಿನಃ ॥
ಅನುವಾದ
ಮಂತ್ರಿಗಳಲ್ಲಿ ಹೀಗೆ ಹೇಳಿ ರಾವಣನು ತನ್ನ ಬಳಿಯಲ್ಲೇ ನಿಂತಿದ್ದ ರಾಕ್ಷಸರಲ್ಲಿ ಹೇಳಿದನು.॥6॥
ಮೂಲಮ್ - 7
ಜ್ಞಾಯತಾಂ ತೂರ್ಣಮೇತೇಷಾಂ ಸರ್ವೇಷಾಂ ಚ ವನೌಕಸಾಮ್ ।
ಶೋಕಕಾಲೇ ಸಮುತ್ಪನ್ನೇ ಹರ್ಷಕಾರಣಮುತ್ಥಿತಮ್ ॥
ಅನುವಾದ
ನೀವು ಶೀಘ್ರವಾಗಿ ಹೋಗಿ ಶೋಕದ ಸಂದರ್ಭ ಉಪಸ್ಥಿತವಾದರೂ ಈ ಎಲ್ಲ ವಾನರರ ಹರ್ಷದ ಕಾರಣವನ್ನು ತಿಳಿದು ಬನ್ನಿ.॥7॥
ಮೂಲಮ್ - 8
ತಥೋಕ್ತಾಸ್ತೇ ಸುಸಂಭ್ರಾಂತಾಃ ಪ್ರಾಕಾರಮಧಿರುಹ್ಯ ಚ ।
ದದೃಶುಃ ಪಾಲಿತಾಂ ಸೇನಾಂ ಸುಗ್ರೀವೇಣ ಮಹಾತ್ಮನಾ ॥
ಅನುವಾದ
ರಾವಣನ ಈ ಆದೇಶದಂತೆ ಆ ರಾಕ್ಷಸನು ಗಾಬರಿಗೊಂಡು ಪ್ರಾಕಾರಗಳ ಮೇಲೆ ಹತ್ತಿ ಮಹಾತ್ಮಾ ಸುಗ್ರೀವನಿಂದ ರಕ್ಷಿತವಾದ ವಾನರರ ಸೈನ್ಯದ ಕಡೆಗೆ ನೋಡಿದರು.॥8॥
ಮೂಲಮ್ - 9
ತೌ ಚ ಮುಕ್ತೌ ಸುಘೋರೇಣ ಶರಬಂಧೇನ ರಾಘವೌ ।
ಸಮುತ್ಥಿತೌ ಮಹಾಭಾಗೌ ವಿಷೇದುಃ ಸರ್ವ ರಾಕ್ಷಸಾಃ ॥
ಅನುವಾದ
ಮಹಾಭಾಗ ಶ್ರೀರಾಮ-ಲಕ್ಷ್ಮಣರು ಆ ಅತ್ಯಂತ ಭಯಂಕರ ನಾಗರೂಪೀ ಬಾಣಗಳ ಬಂಧನದಿಂದ ಮುಕ್ತರಾಗಿ ಎದ್ದಿರುವರು ಎಂದು ಅವರಿಗೆ ತಿಳಿದಾಗ ಸಮಸ್ತ ರಾಕ್ಷಸರಿಗೆ ಬಹಳ ದುಃಖವಾಯಿತು.॥9॥
ಮೂಲಮ್ - 10
ಸಂತ್ರಸ್ತಹೃದಯಾಃ ಸರ್ವೇ ಪ್ರಾಕಾರಾದವರುಹ್ಯ ತೇ ।
ವಿವರ್ಣಾ ರಾಕ್ಷಸಾ ಘೋರಾ ರಾಕ್ಷಸೇಂದ್ರಮುಪಸ್ಥಿತಾಃ ॥
ಅನುವಾದ
ಅವರ ಹೃದಯ ಭಯದಿಂದ ನಡುಗಿತು. ಆ ಎಲ್ಲ ಭಯಾನಕ ರಾಕ್ಷಸರು ಪ್ರಾಕಾರದಿಂದ ಇಳಿದು ಬೇಸರದಿಂದ ರಾಕ್ಷಸರಾಜಾ ರಾವಣನ ಸೇವೆಯಲ್ಲಿ ಉಪಸ್ಥಿತರಾದರು.॥10॥
ಮೂಲಮ್ - 11
ತದಪ್ರಿಯಂದೀನಮುಖಾ ರಾವಣಸ್ಯ ಚ ರಾಕ್ಷಸಾಃ ।
ಕೃತ್ಸ್ನಂ ನಿವೇದಯಾಮಾಸುರ್ಯಥಾವದ್ವಾಕ್ಯ ಕೋವಿದಾಃ ॥
ಅನುವಾದ
ಅವರು ಮಾತಿನಲ್ಲಿ ಕುಶಲರಾಗಿದ್ದು, ಅವರ ಮುಖದಲ್ಲಿ ದೀನತೆ ಆವರಿಸಿತ್ತು. ಆ ನಿಶಾಚರರು ಆ ಎಲ್ಲ ಅಪ್ರಿಯ ಸಮಾಚಾರವನ್ನು ರಾವಣನಿಗೆ ಯಥಾವತ್ತಾಗಿ ತಿಳಿಸಿದರು.॥11॥
ಮೂಲಮ್ - 12
ಯೌ ತಾವಿಂದ್ರಜಿತಾ ಯುದ್ಧೇ ಭ್ರಾತರೌ ರಾಮಲಕ್ಷ್ಮಣೌ ।
ನಿಬದ್ಧೌ ಶರಬಂಧೇನ ನಿಷ್ಪ್ರಕಂಪಭುಜೌ ಕೃತೌ ॥
ಮೂಲಮ್ - 13
ವಿಮುಕ್ತೌ ಶರಬಂಧೇನ ದೃಶ್ಯೇತೇ ತೌ ರಣಾಜಿರೇ ।
ಪಾಶಾನಿವ ಗಜೌ ಛಿತ್ತ್ವಾ ಗಜೇಂದ್ರ ಸಮವಿಕ್ರಮೌ ॥
ಅನುವಾದ
(ಅವರು ಹೇಳಿದರು-) ಮಹಾರಾಜಾ! ಕುಮಾರ ಇಂದ್ರಜಿತುವು ಯಾವ ರಾಮ-ಲಕ್ಷ್ಮಣರನ್ನು ಯುದ್ಧಸ್ಥಳದಲ್ಲಿ ನಾಗರೂಪೀ ಬಾಣಗಳಿಂದ ಬಂಧಿಸಿದ್ದನೋ, ಆ ಗಜರಾಜನಂತಹ ಪರಾಕ್ರಮಿ ಇಬ್ಬರೂ ವೀರರು ಆನೆಯು ಹಗ್ಗವನ್ನು ಹರಿದು ಸ್ವತಂತ್ರವಾಗುವಂತೆಯೇ ಬಾಣಬಂಧನದಿಂದ ಮುಕ್ತರಾಗಿ ಸಮರಾಂಗಣದಲ್ಲಿ ನಿಂತಿರುವುದನ್ನು ನೋಡಿದೆವು.॥12-13॥
ಮೂಲಮ್ - 14
ತಚ್ಛ್ರುತ್ವಾ ವಚನಂ ತೇಷಾಂ ರಾಕ್ಷಸೇಂದ್ರೋ ಮಹಾಬಲಃ ।
ಚಿಂತಾಶೋಕಸಮಾಕ್ರಾಂತೋ ವಿವರ್ಣ ವದನೋಽಭವತ್ ॥
ಅನುವಾದ
ಅವರ ಮಾತನ್ನು ಕೇಳಿ ಮಹಾಬಲಿ ರಾವಣನು ಚಿಂತಾ-ಶೋಕಕ್ಕೆ ವಶೀಭೂತನಾದನು. ಅವನ ಮುಖ ಕಳೆಗುಂದಿತು.॥14॥
ಮೂಲಮ್ - 15
ಘೋರೈರ್ದತ್ತವರೈರ್ಬದ್ಧೌ ಶರೈರಾಶೀವಿಷೋಪಮೈಃ ।
ಅಮೋಘೈಃ ಸೂರ್ಯಸಂಕಾಶೈಃ ಪ್ರಮಥ್ಯೇಂದ್ರಜಿತಾ ಯುಧಿ ॥
ಮೂಲಮ್ - 16
ತದಸ್ರಬಂಧ ಮಾಸಾದ್ಯ ಯದಿ ಮುಕ್ತೌ ರಿಪೂ ಮಮ ।
ಸಂಶಯಸ್ಥಮಿದಂ ಸರ್ವಮನುಪಶ್ಯಾಮ್ಯಹಂ ಬಲಮ್ ॥
ಅನುವಾದ
(ಅವನು ಮನಸ್ಸಿನಲ್ಲೇ ಯೋಚಿಸತೊಡಗಿದನು-) ವಿಷಧರ ಸರ್ಪಗಳಂತೆ ಭಯಂಕರವಾದ, ವರಬಲದಿಂದ ಪಡೆದ, ಅಮೋಘವಾದ, ಸೂರ್ಯನಂತೆ ಇದ್ದ ಬಾಣಗಳಿಂದ ಯುದ್ಧಸ್ಥಳದಲ್ಲಿ ಇಂದ್ರಜಿತುವು ಯಾರನ್ನು ಕಟ್ಟಿ ಹಾಕಿದ್ದನೋ, ಆ ನನ್ನ ಶತ್ರುಗಳಿಬ್ಬರೂ ಅಸಬಂಧನದಿಂದ ಬಿಡುಗಡೆ ಹೊಂದಿದಾಗ ಈಗ ನಾನು ನನ್ನ ಸೈನ್ಯವನ್ನೇ ಸಂಶಯಾಪನ್ನವಾಗಿ ನೋಡುತ್ತಿದ್ದೇನೆ.॥15-16॥
ಮೂಲಮ್ - 17
ನಿಷ್ಪಲಾಃ ಖಲು ಸಂವೃತ್ತಾಃ ಶರಾಃ ಪಾವಕತೇಜಸಃ ।
ಆದತ್ತಂ ಯೈಸ್ತು ಸಂಗ್ರಾಮೇ ರಿಪೂಣಾಂ ಜೀವಿತಂ ಮಮ ॥
ಅನುವಾದ
ಮೊದಲು ಯುದ್ಧದಲ್ಲಿ ಯಾವ ಬಾಣಗಳು ನನ್ನ ಶತ್ರುಗಳ ಪ್ರಾಣಗಳನ್ನು ಕಳೆದಿದ್ದವೋ ಆ ಅಗ್ನಿತುಲ್ಯ ತೇಜಸ್ವೀ ಬಾಣಗಳು ನಿಶ್ಚಯವಾಗಿ ಇಂದು ನಿಷ್ಪಲವಾದುವು.॥17॥
ಮೂಲಮ್ - 18
ಏವಮುಕ್ತ್ವಾತು ಸಂಕ್ರುದ್ಧೋ ನಿಃಶ್ವಸನ್ನುರಗೋ ಯಥಾ ।
ಅಬ್ರವೀದ್ರಕ್ಷಸಾಂ ಮಧ್ಯೇ ಧೂಮ್ರಾಕ್ಷಂ ನಾಮ ರಾಕ್ಷಸಮ್ ॥
ಅನುವಾದ
ಹೀಗೆ ಹೇಳಿ ಅತ್ಯಂತ ಕುಪಿತನಾದ ರಾವಣನು ಬುಸುಗುಟ್ಟುವ ಸರ್ಪದಂತೆ ಜೋರಾಗಿ ನಿಟ್ಟುಸಿರುಬಿಡುತ್ತಾ, ರಾಕ್ಷಸರ ನಡುವೆ ಇದ್ದ ಧೂಮ್ರಾಕ್ಷ ಎಂಬ ನಿಶಾಚರನಲ್ಲಿ ಹೇಳಿದನು.॥18॥
ಮೂಲಮ್ - 19
ಬಲೇನ ಮಹತಾ ಯುಕ್ತೋ ರಕ್ಷಸಾಂ ಭೀಮವಿಕ್ರಮ ।
ತ್ವಂ ವಧಾಯಾಶು ನಿರ್ಯಾಹಿ ರಾಮಸ್ಯ ಸಹ ವಾನರೈಃ ॥
ಅನುವಾದ
ಭಯಾನಕ ಪರಾಕ್ರಮಿ ವೀರನೇ! ನೀನು ರಾಕ್ಷಸರ ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೋಗಿ ವಾನರರ ಸಹಿತ ರಾಮನನ್ನು ವಧಿಸಿ ಬೇಗನೇ ಬಂದುಬಿಡು.॥19॥
ಮೂಲಮ್ - 20
ಏವಮುಕ್ತಸ್ತು ಧೂಮ್ರಾಕ್ಷೋ ರಾಕ್ಷಸೇಂದ್ರೇಣ ಧೀಮತಾ ।
ಪರಿಕ್ರಮ್ಯ ತತಃ ಶೀಘ್ರಂ ನಿರ್ಜಗಾಮ ನೃಪಾಲಯಾತ್ ॥
ಅನುವಾದ
ಬುದ್ಧಿವಂತ ರಾಕ್ಷಸರಾಜನು ಈ ಪ್ರಕಾರ ಆಜ್ಞೆ ಕೊಟ್ಟಾಗ ಧೂಮ್ರಾಕ್ಷನು ಅವನನ್ನು ಪ್ರದಕ್ಷಿಣೆ ಮಾಡಿ ಕೂಡಲೇ ರಾಜಭವನದಿಂದ ಹೊರಬಿದ್ದನು.॥20॥
ಮೂಲಮ್ - 21
ಅಭಿನಿಷ್ಕ್ರಮ್ಯ ತದ್ದ್ವಾರಂ ಬಲಾಧ್ಯಕ್ಷ ಮುವಾಚ ಹ ।
ತ್ವರಯಸ್ವ ಬಲಂ ಶೀಘ್ರಂ ಕಿಂ ಚಿರೇಣ ಯುಯುತ್ಸತಃ ॥
ಅನುವಾದ
ರಾವಣನ ಅರಮನೆಯ ಬಾಗಿಲಿಗೆ ಬಂದು ಅವನು ಸೇನಾಪತಿಗೆ ಸೈನ್ಯವನ್ನು ಬೇಗನೇ ಸಿದ್ಧಗೊಳಿಸು. ಯುದ್ಧದ ಇಚ್ಛೆಯುಳ್ಳ ಪುರುಷನಿಗೆ ವಿಳಂಬದಿಂದ ಏನು ಲಾಭ? ಎಂದು ಹೇಳಿದನು.॥21॥
ಮೂಲಮ್ - 22
ಧೂಮ್ರಾಕ್ಷವಚನಂ ಶ್ರುತ್ವಾ ಬಲಾಧ್ಯಕ್ಷೋ ಬಲಾನುಗಃ ।
ಬಲಮುದ್ಯೋಜಯಾಮಾಸ ರಾವಣಸ್ಯಾಜ್ಞಾಯಾ ಭೃಶಮ್ ॥
ಅನುವಾದ
ಧೂಮ್ರಾಕ್ಷನ ಮಾತನ್ನು ಕೇಳಿ ಸೇನಾಪತಿಯು ರಾವಣನ ಆಜ್ಞೆಗನುಸಾರ ತನ್ನ ಅಧೀನದಲ್ಲಿದ್ದ ಭಾರೀ ದೊಡ್ಡ ಸೈನ್ಯವನ್ನು ಸಿದ್ಧಗೊಳಿಸಿದನು.॥22॥
ಮೂಲಮ್ - 23
ತೇ ಬದ್ಧಘಂಟಾ ಬಲಿನೋ ಘೋರರೂಪಾ ನಿಶಾಚರಾಃ ।
ವಿನದ್ಯಮಾನಾಃ ಸಂಹೃಷ್ಟಾ ಧೂಮ್ರಾಕ್ಷಂ ಪರ್ಯವಾರಯನ್ ॥
ಅನುವಾದ
ಆ ಭಯಾನಕ ರೂಪಧಾರೀ ಬಲಿಷ್ಠರಾದ ನಿಶಾಚರರು ಪ್ರಾಸ, ಶಕ್ತಿ ಮುಂತಾದ ಅಸ್ತ್ರಗಳಲ್ಲಿ ಗಂಟೆಕಟ್ಟಿ ಹರ್ಷೋತ್ಸಾಹದಿಂದ ಜೋರಾಗಿ ಗರ್ಜಿಸುತ್ತಾ ಬಂದು ಧೂಮ್ರಾಕ್ಷನನ್ನು ಸುತ್ತುವರೆದು ನಿಂತರು.॥23॥
ಮೂಲಮ್ - 24
ವಿವಿಧಾಯುಧಹಸ್ತಾಶ್ಚ ಶೂಲಮುದ್ಗರಪಾಣಯಃ ।
ಗದಾಭಿಃ ಪಟ್ಟಿಶೈರ್ದಂಡೈರಾಯಸೈರ್ಮುಸಲೈರಪಿಮ್ ॥
ಮೂಲಮ್ - 25
ಪರಿಘೈರ್ಭಿಂದಿ ಪಾಲೈಶ್ಚ ಭಲ್ಲೈಃ ಪಾಶೈಃ ಪರಶ್ವಧೈಃ ।
ನಿರ್ಯಯೂ ರಾಕ್ಷಸಾ ಘೋರಾ ನರ್ದಂತೋ ಜಲದಾ ಯಥಾ ॥
ಅನುವಾದ
ಅವರ ಕೈಗಳಲ್ಲಿ ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳಿದ್ದವು. ಕೆಲವರು ಕೈಗಳಲ್ಲಿ ಶೂಲ, ಮುದ್ಗರ ಧರಿಸಿದ್ದರು. ಕೆಲವರು ಗದೆ, ಪಟ್ಟಿಶ, ಲೋಹದಂಡ, ಒನಕೆ, ಪರಿಘ, ಭಿಂದಿಪಾಲ, ಭಲ್ಲೆ, ಪಾಶ, ಗಂಡುಗೊಡಲಿ ಹಿಡಿದುಕೊಂಡು ಭಯಾನಕ ರಾಕ್ಷಸರು ಯುದ್ಧಕ್ಕಾಗಿ ಹೊರಟರು. ಅವರೆಲ್ಲರೂ ಮೇಘಗಳಂತೆ ಗರ್ಜಿಸುತ್ತಿದ್ದರು.॥24-25॥
ಮೂಲಮ್ - 26
ರಥೈಃ ಕವಚಿನಸ್ತ್ವನ್ಯೇ ಧ್ವಜೈಶ್ಚ ಸಮಲಂಕೃತೈಃ ।
ಸುವರ್ಣಜಾಲ ವಿಹಿತೈಃ ಖರೈಶ್ಚ ವಿವಿಧಾನನೈಃ ॥
ಮೂಲಮ್ - 27
ಹಯೈಃ ಪರಮಶೀಘ್ರೈಶ್ಚ ಗಜೈಶ್ಚೈವ ಮದೋತ್ಕಟೈಃ ।
ನಿರ್ಯಯುರ್ನೈಋತವ್ಯಾಘ್ರಾ ವ್ಯಾಘ್ರಾ ಇವ ದುರಾಸದಾಃ ॥
ಅನುವಾದ
ಎಷ್ಟೋ ನಿಶಾಚರರು ಧ್ವಜಗಳಿಂದ ಅಲಂಕೃತವಾದ, ಚಿನ್ನದ ಜಾಲರಿಗಳುಳ್ಳ ರಥಗಳ ಮೂಲಕ ಯುದ್ಧಕ್ಕೆ ಹೊರಟರು. ಅವರೆಲ್ಲರೂ ಕವಚಗಳನ್ನು ಧರಿಸಿದ್ದರು. ಎಷ್ಟೋ ಶ್ರೇಷ್ಠ ರಾಕ್ಷಸರು ನಾನಾ ಪ್ರಕಾರದ ಮುಖಗಳುಳ್ಳ ಕತ್ತೆಗಳ ಮೇಲೆ, ಶೀಘ್ರ ಗಾಮಿ ಕುದುರೆಗಳ ಮೇಲೆ, ಮದಮತ್ತ ಆನೆಗಳ ಮೇಲೆ ಹತ್ತಿ ದುರ್ಜಯ ಹುಲಿಗಳಂತೆ ಯುದ್ಧಕ್ಕಾಗಿ ನಗರದಿಂದ ಹೊರಗೆ ಬಿದ್ದರು.॥26-27॥
ಮೂಲಮ್ - 28
ವೃಕಸಿಂಹಮುಖೈರ್ಯುಕ್ತಂ ಖರೈಃ ಕನಕಭೂಷಿತೈಃ ।
ಆರುರೋಹ ರಥಂ ದಿವ್ಯಂ ಧೂಮ್ರಾಕ್ಷಃ ಖರನಿಃಸ್ವನಃ ॥
ಅನುವಾದ
ಧೂಮ್ರಾಕ್ಷನ ರಥದಲ್ಲಿ ಸ್ವರ್ಣಭೂಷಿತ ಸಿಂಹ, ತೋಳಗಳಂತೆ ಮುಖಗಳುಳ್ಳ ಕತ್ತೆಗಳನ್ನು ಹೂಡಿದ್ದರು. ಕತ್ತೆಯಂತೆ ಅರಚುವ ಧೂಮ್ರಾಕ್ಷನು ಆ ದಿವ್ಯರಥವನ್ನು ಏರಿದನು.॥28॥
ಮೂಲಮ್ - 29
ಸ ನಿರ್ಯಾತೋ ಮಹಾವೀರ್ಯೋ ಧೂಮ್ರಾಕ್ಷೋ ರಾಕ್ಷಸೈರ್ವೃತಃ ।
ಪ್ರಹಸನ್ ವೈ ಪಶ್ಚಿಮದ್ವಾರಾದ್ಧ ಹನೂಮಾನ್ ಯತ್ರ ತಿಷ್ಠತಿ ॥
ಅನುವಾದ
ಹೀಗೆ ಅಸಂಖ್ಯ ರಾಕ್ಷಸರೊಂದಿಗೆ ಮಹಾಪರಾಕ್ರಮಿ ಧೂಮ್ರಾಕ್ಷನು ನಗುತ್ತಾ ಶತ್ರುವನ್ನು ಎದುರಿಸಲು ನಿಂತಿದ್ದ ಹನುಮಂತನು ಪಶ್ಚಿಮದ್ವಾರದಿಂದ ಯುದ್ಧಕ್ಕಾಗಿ ಹೊರಟನು.॥29॥
ಮೂಲಮ್ - 30½
ರಥಪ್ರವರಮಾಸ್ಥಾಯ ಖರಯುಕ್ತಂ ಖರಸ್ವನಮ್ ।
ಪ್ರಯಾಂತಂ ತು ಮಹಾಘೋರಂ ರಾಕ್ಷಸಂ ಭೀಮದರ್ಶನಮ್ ।
ಅಂತರಿಕ್ಷಗತಾಃ ಕ್ರೂರಾಃ ಶಕುನಾಃ ಪ್ರತ್ಯವಾರಯನ್ ।
ಅನುವಾದ
ಕತ್ತೆಗಳನ್ನು ಹೂಡಿದ ಶ್ರೇಷ್ಠರಥದಲ್ಲಿ ಕುಳಿತು ಯುದ್ಧಕ್ಕೆ ಹೋಗುವಾಗ ಕತ್ತೆಯಂತೆ ಕಿರುಚುವ ಮಹಾಘೋರ ರಾಕ್ಷಸ ಧೂಮ್ರಾಕ್ಷನು ಭಾರೀ ಭಯಂಕರವಾಗಿ ಕಾಣುತ್ತಿದ್ದನು. ಆಕಾಶದಲ್ಲಿ ಹಾರಾಡುತ್ತಿದ್ದ ಕ್ರೂರಪಕ್ಷಿಗಳು ಅಶುಭ ಸೂಚಕವಾಗಿ ಕೂಗುತ್ತಾ ಅವನನ್ನು ಮುಂದರಿಯಲು ತಡೆದವು.॥30½॥
ಮೂಲಮ್ - 31
ರಥಶೀರ್ಷೇ ಮಹಾಭೀಮೋ ಗೃಧ್ರಶ್ಚ ನಿಪಪಾತ ಹ ॥
ಮೂಲಮ್ - 32
ಧ್ವಜಾಗ್ರೇ ಗ್ರಥಿತಾಶ್ಚೈವ ನಿಪೇತುಃ ಕುಣಪಾಶನಾಃ ।
ರುಧಿರಾರ್ದ್ರೋ ಮಹಾನ್ ಶ್ವೇತಃ ಕಬಂಧಃ ಪತಿತೋ ಭುವಿ ॥
ಅನುವಾದ
ಮಹಾ ಭಯಂಕರವಾಗಿ ಕಾಣುತ್ತಿದ್ದ ರಣಹದ್ದು ಅವನ ರಥದ ಮೇಲ್ಭಾಗದಲ್ಲಿ ಬಿದ್ದಿತು. ಹೆಣಗಳನ್ನು ತಿನ್ನುವ ಪಕ್ಷಿಗಳು ಒಂದಕ್ಕೊಂದು ಸೇರಿಕೊಂಡಂತೆ ರಥದ ಧ್ವಜಾಗ್ರದಲ್ಲಿ ಬಿದ್ದುವು. ಆಗಲೇ ರಕ್ತದಿಂದ ತೊಯ್ದುಹೋದ ದೊಡ್ಡದಾದ ಬಿಳಿಬಣ್ಣದ ಮುಂಡವೊಂದು ರಥದ ಮುಂದೆ ನೆಲಕ್ಕೆ ಬಿದ್ದಿತು.॥31-32॥
ಮೂಲಮ್ - 33
ವಿಸ್ವರಂ ಚೋತ್ಸಜನ್ನಾದಾನ್ ಧೂಮ್ರಾಕ್ಷಸ್ಯ ಸಮೀಪತಃ ।
ವವರ್ಷ ರುಧಿರಂ ದೇವಃ ಸಂಚಚಾಲ ಚ ಮೇದಿನೀ ॥
ಅನುವಾದ
ಅದು ಅಪಸ್ವರದಲ್ಲಿ ಚೀತ್ಕಾರ ಮಾಡುತ್ತಾ, ಧೂಮ್ರಾಕ್ಷನ ಹತ್ತಿರವೇ ಬಿದ್ದಿತು. ಮೋಡಗಳು ರಕ್ತದ ಮಳೆ ಸುರಿಸಿದವು, ಭೂಮಿಯು ನಡುಗತೊಡಗಿತು.॥33॥
ಮೂಲಮ್ - 34
ಪ್ರತಿಲೋಮಂ ವಮೌ ವಾಯುರ್ನಿರ್ಘಾತ ಸಮನಿಃಸ್ವನಃ ।
ತಿಮಿರೌಘಾವೃತಾಸ್ತತ್ರ ದಿಶಶ್ಚ ನ ಚಕಾಶಿರೇ ॥
ಅನುವಾದ
ಸಿಡಿಲಿನ ಶಬ್ದಮಾಡುತ್ತಿದ್ದ ವಾಯುವು ರಥಕ್ಕೆ ಎದುರಾಗಿ ಬೀಸುತ್ತಿತ್ತು. ಎಲ್ಲ ದಿಕ್ಕುಗಳಲ್ಲಿ ಅಂಧಕಾರ ಕವಿದು ಏನೂ ಕಾಣಿಸುತ್ತಿರಲಿಲ್ಲ.॥34॥
ಮೂಲಮ್ - 35
ಸ ತೂತ್ಪಾತಾಂಸ್ತತೋ ದೃಷ್ಟ್ವಾ ರಾಕ್ಷಸಾನಾಂ ಭಯಾವಹಾನ್ ।
ಪ್ರಾದುರ್ಭೂತಾನ್ಸುಘೋರಾಂಶ್ಚ ಧೂಮ್ರಾಕ್ಷೋ ವ್ಯಥಿತೋಽಭವತ್ ।
ಮುಮುಹೂ ರಾಕ್ಷಸಾಃ ಸರ್ವೇ ಧೂಮ್ರಾಕ್ಷಸ್ಯ ಪುರಃ ಸರಾಃ ॥
ಅನುವಾದ
ರಾಕ್ಷಸರಿಗೆ ಭಯವನ್ನುಂಟುಮಾಡುವ ಆ ಭಯಂಕರ ಉತ್ಪಾತಗಳನ್ನು ನೋಡಿ ಧೂಮ್ರಾಕ್ಷನು ದುಃಖಿತನಾದನು ಹಾಗೂ ಮುಂದೆ ನಡೆಯುತ್ತಿದ್ದ ರಾಕ್ಷಸರು ಮೂರ್ಛಿತರಂತಾದರು.॥35॥
ಮೂಲಮ್ - 36
ತತಃ ಸುಭೀಮೋ ಬಹುಭಿರ್ನಿಶಾಚರೈ-
ರ್ವೃತೋಽಭಿನಿಷ್ಕ್ರಮ್ಯ ರಣೋತ್ಸುಕೋ ಬಲೀ ।
ದದರ್ಶ ತಾಂ ರಾಘವ ಬಾಹುಪಾಲಿತಾಂ
ಮಹೌಘಕಲ್ಪಾಂ ಬಹುವಾನರೀಂ ಚಮೂಮ್ ॥
ಅನುವಾದ
ಹೀಗೆ ಬಹುಸಂಖ್ಯಾಕರಾದ ರಾಕ್ಷಸರಿಂದ ಸಮಾವೃತನಾಗಿದ್ದ, ರಣೋತ್ಸುಕನಾಗಿದ್ದ, ಮಹಾಭಯಂಕರ ಬಲವಂತ ರಾಕ್ಷಸ ಧೂಮ್ರಾಕ್ಷನು ನಗರದಿಂದ ಹೊರಗೆ ಹೊರಟು ಶ್ರೀರಾಮನ ಬಾಹುಬಲದಿಂದ ರಕ್ಷಿತವಾದ, ಪ್ರಳಯ ಕಾಲದ ಸಮುದ್ರದಂತೆ ವಿಶಾಲವಾದ ವಾನರ ಸೈನ್ಯವನ್ನು ನೋಡಿದನು.॥36॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತೊಂದನೆಯ ಸರ್ಗ ಪೂರ್ಣವಾಯಿತು.॥51॥