०५० रामसमीपे गरुडागमनम्

वाचनम्
ಭಾಗಸೂಚನಾ

ವಾನರರ ಪಲಾಯನ, ಜಾಂಬವಂತನಿಂದ ಸೈನಿಕರಿಗೆ ಸಾಂತ್ವನ, ವಿಭೀಷಣನ ವಿಲಾಪ, ಸುಗ್ರೀವನ ಸಾಂತ್ವನ, ಗರುಡನ ಆಗಮನ, ನಾಗಪಾಶದಿಂದ ಶ್ರೀರಾಮ-ಲಕ್ಷ್ಮಣರ ಬಿಡುಗಡೆಗೊಳಿಸಿ ಗರುಡನ ನಿಷ್ಕ್ರಮಣ

ಮೂಲಮ್ - 1

ಅಥೋವಾಚ ಮಹಾತೇಜಾ ಹರಿರಾಜೋ ಮಹಾಬಲಃ ।
ಕಿಮಿಯಂ ವ್ಯಥಿತಾ ಸೇನಾ ಮೂಢವಾತೇವ ನೌರ್ಜಲೇ ॥

ಅನುವಾದ

ಮಹಾತೇಜಸ್ವೀ ಮಹಾಬಲೀ ವಾನರರಾಜ ಸುಗ್ರೀವನು ಕೇಳಿದನು - ವಾನರರೇ! ಬಿರುಗಾಳಿಗೆ ಸಿಕ್ಕಿದ ನೌಕೆಯಂತೆ ಈ ನಮ್ಮ ಸೈನ್ಯವು ವ್ಯಥಿತವಾಗಿರುವುದರ ಕಾರಣವೇನು.॥1॥

ಮೂಲಮ್ - 2

ಸುಗ್ರೀವಸ್ಯ ವಚಃ ಶ್ರುತ್ವಾ ವಾಲಿಪುತ್ರೋಂಽಗದೋಽಬ್ರವೀತ್ ।
ನ ತ್ವಂ ಪಶ್ಯಸಿ ರಾಮಂ ಚ ಲಕ್ಷ್ಮಣಂ ಚ ಮಹಾರಥಮ್ ॥

ಅನುವಾದ

ಸುಗ್ರೀವನ ಈ ಮಾತನ್ನು ಕೇಳಿ ವಾಲಿಪುತ್ರ ಅಂಗದನು ಹೇಳಿದನು-ನೀವು ಶ್ರೀರಾಮ ಮತ್ತು ಮಹಾರಥಿ ಲಕ್ಷ್ಮಣರ ಸ್ಥಿತಿಯನ್ನು ನೋಡುತ್ತಿದ್ದಿರಲ್ಲ.॥2॥

ಮೂಲಮ್ - 3

ಶರಜಾಲಾಚಿತೌ ವೀರಾವುಭೌ ದಶರಥಾತ್ಮಜೌ ।
ಶರತಲ್ಪೇ ಮಹಾತ್ಮಾನೌ ಶಯಾನೌ ರುಧಿರೋಕ್ಷಿತೌ ॥

ಅನುವಾದ

ಮಹಾತ್ಮಾ ದಶರಥ ಕುಮಾರ ಇವರಿಬ್ಬರೂ ರಕ್ತದಿಂದ ತೊಯ್ದು, ಬಾಣಗಳ ಶಯ್ಯೆಯಲ್ಲಿ ಬಿದ್ದಿರುವರು ಹಾಗೂ ಬಾಣ ಸಮೂಹಗಳಿಂದ ವ್ಯಾಪ್ತರಾಗಿದ್ದಾರೆ.॥3॥

ಮೂಲಮ್ - 4

ಅಥಾಬ್ರವೀದ್ ವಾನರೇಂದ್ರಃ ಸುಗ್ರೀವಃ ಪುತ್ರಮಂಗದಮ್ ।
ನಾನಿಮಿತ್ತಮಿದಂಮನ್ಯೇ ಭವಿತವ್ಯಂ ಭಯೇನ ತು ॥

ಅನುವಾದ

ಆಗ ವಾನರರಾಜ ಸುಗ್ರೀವನು ಅಂಗದನಲ್ಲಿ ಹೇಳಿದನು - ಮಗು! ಸೈನ್ಯದಲ್ಲಿ ಕಾರಣವಿಲ್ಲದೆ ಹೀಗೆ ಗೊಂದಲ ಗದ್ದಲವಾಗಲಾರದು ಎಂದು ನಾನು ತಿಳಿಯುತ್ತೇನೆ. ಯಾವುದೋ ಭಯದಿಂದ ಹೀಗಾಗುತ್ತಿದೆ ಎಂದು ಅನಿಸುತ್ತದೆ.॥4॥

ಮೂಲಮ್ - 5

ವಿಷಣ್ಣ ವದನಾ ಹ್ಯೇತೇ ತ್ಯಕ್ತಪ್ರಹರಣಾ ದಿಶಃ ।
ಪಲಾಯಂತೇಽತ್ರ ಹರಯಸ್ತ್ರಾಸಾದುತ್ಫುಲ್ಲಲೋಚನಾಃ ॥

ಅನುವಾದ

ಈ ವಾನರರು ಬಾಡಿದ ಮುಖದಿಂದ ತಮ್ಮ ತಮ್ಮ ಆಯುಧಗಳಿಂದ ಚೆಲ್ಲಿ ಎಲ್ಲೆಡೆ ಓಡುತ್ತಿದ್ದಾರೆ. ಭಯದಿಂದಾಗಿ ಕಣ್ಣು ಬಿಟ್ಟು ನೋಡುತ್ತಿದ್ದಾರೆ.॥5॥

ಮೂಲಮ್ - 6

ಅನ್ಯೋನ್ಯಸ್ಯ ನ ಲಜ್ಜಂತೇ ನ ನಿರೀಕ್ಷಂತಿ ಪೃಷ್ಠತಃ ।
ವಿಪ್ರಕರ್ಷಂತಿ ಚಾನ್ಯೋನ್ಯಂ ಪತಿತಂ ಲಂಘಯಂತಿ ಚ ॥

ಅನುವಾದ

ಪಲಾಯನ ಮಾಡುವಾಗ ಪರಸ್ಪರ ನಾಚಿಕೆಯಾಗುವುದಿಲ್ಲ. ಅವರು ಹಿಂದಿರುಗಿ ನೋಡುವುದಿಲ್ಲ. ಒಬ್ಬರಿಗೊಬ್ಬರು ಡಿಕ್ಕಿಹೊಡೆದು ಬೀಳುತ್ತಿದ್ದಾರೆ. ಅವರನ್ನು ದಾಟಿ ಓಡಿಹೋಗುತ್ತಾರೆ.॥6॥

ಮೂಲಮ್ - 7

ಏತಸ್ಮಿನ್ನಂತರೇ ವೀರೋ ಗದಾಪಾಣಿರ್ವಿಭೀಷಣಃ ।
ಸುಗ್ರೀವಂ ವರ್ಧಯಾಮಾಸ ರಾಘವಂ ಚ ಜಯಾಶಿಷಾ ॥

ಅನುವಾದ

ಆಗಲೇ ವೀರ ವಿಭೀಷಣನು ಗದೆಯನ್ನೆತ್ತಿಕೊಂಡು ಅಲ್ಲಿಗೆ ಬಂದನು. ಅವನು ವಿಜಯಸೂಚಕ ಆಶೀರ್ವಾದ ಕೊಡುತ್ತಾ ಸುಗ್ರೀವ ಹಾಗೂ ಶ್ರೀರಾಮನ ಅಭ್ಯುದಯವನ್ನು ಹಾರೈಸಿದನು.॥7॥

ಮೂಲಮ್ - 8

ವಿಭೀಷಣಂ ಚ ಸುಗ್ರೀವೋ ದೃಷ್ಟ್ವಾ ವಾನರಭೀಷಣಮ್ ।
ಋಕ್ಷರಾಜಂ ಮಹಾತ್ಮಾನಂ ಸಮೀಪಸ್ಥಮುವಾಚ ಹ ॥

ಅನುವಾದ

ವಾನರರನ್ನು ಭಯಗೊಳಿಸುವ ವಿಭೀಷಣನನ್ನು ನೋಡಿ ಸುಗ್ರೀವನು ತನ್ನ ಬಳಿ ನಿಂತಿರುವ ಮಹಾತ್ಮಾ ಋಕ್ಷರಾಜ ಜಾಂಬವಂತರಲ್ಲಿ ಹೇಳಿದನು.॥8॥

ಮೂಲಮ್ - 9

ವಿಭೀಷಣೋಽಯಂ ಸಂಪ್ರಾಪ್ತೋ ಯಂ ದೃಷ್ಟ್ವಾ ವಾನರರ್ಷಭಾಃ ।
ವಿದ್ರವಂತ್ಯಾಯತಸಂತ್ರಾಸಾ ರಾವಣಾತ್ಮಜಶಂಕಯಾ ॥

ಅನುವಾದ

ಈ ವಿಭೀಷಣನು ಬಂದಿರು ವುದನ್ನು ನೋಡಿ ಇವನು ರಾವಣನ ಮಗ ಇಂದ್ರಜಿತುವೇ ಬಂದ ಎಂದು ವಾನರ ಶ್ರೇಷ್ಠರಿಗೆ ಸಂದೇಹವುಂಟಾಗಿದೆ. ಇದರಿಂದ ಅವರ ಭಯ ಹೆಚ್ಚಿ ಓಡುತ್ತಿದ್ದಾರೆ.॥9॥

ಮೂಲಮ್ - 10

ಶೀಘ್ರಮೇತಾನ್ ಸುಸಂತ್ರಸ್ತಾನ್ ಬಹುಧಾ ವಿಪ್ರಧಾವಿತಾನ್ ।
ಪರ್ಯವಸ್ಥಾಪಯಾಖ್ಯಾಹಿ ವಿಭೀಷಣಮುಪಸ್ಥಿತಮ್ ॥

ಅನುವಾದ

ಇವನು ಇಂದ್ರಜಿತು ಅಲ್ಲ ವಿಭೀಷಣನು ಬಂದಿರುವನು ಎಂದು ನೀನು ಹೋಗಿ ಅವರಿಗೆ ತಿಳಿಸು. ಹೀಗೆ ಹೇಳಿ ಭಯಗೊಂಡು ಓಡುತ್ತಿರುವ ವಾನರರನ್ನು ಸ್ಥಿರಗೊಳಿಸು.॥10॥

ಮೂಲಮ್ - 11

ಸುಗ್ರೀವೇಣೈವ ಮುಕ್ತಸ್ತು ಜಾಂಬವಾನೃಕ್ಷಪಾರ್ಥಿವಃ ।
ವಾನರಾನ್ಸಾಂತ್ವ್ವಯಾಮಾಸ ಸಂನಿವರ್ತ್ಯ ಪ್ರಧಾವತಃ ॥

ಅನುವಾದ

ಸುಗ್ರೀವನು ಹೀಗೆ ಹೇಳಿದಾಗ ಋಕ್ಷರಾಜ ಜಾಂಬವಂತನು ಓಡುತ್ತಿರುವ ವಾನರರನ್ನು ಮರಳಿಸಿ ಅವರನ್ನು ಸಾಂತ್ವನಪಡಿಸಿದನು.॥11॥

ಮೂಲಮ್ - 12

ತೇ ನಿವೃತ್ತಾಃ ಪುನಃ ಸರ್ವೇ ವಾನರಾಸ್ತ್ಯಕ್ತಸಾಧ್ವಸಾಃ ।
ಋಕ್ಷರಾಜವಚಃ ಶ್ರುತ್ವಾ ತಂ ಚ ದೃಷ್ಟ್ವಾ ವಿಭೀಷಣಮ್ ॥

ಅನುವಾದ

ಜಾಂಬವಂತರ ಮಾತನ್ನು ಕೇಳಿ, ವಿಭೀಷಣನನ್ನು ನೋಡಿ ವಾನರರು ಭಯಮುಕ್ತರಾದರು ಹಾಗೂ ಅವರೆಲ್ಲರೂ ಹಿಂದಿರುಗಿದರು.॥12॥

ಮೂಲಮ್ - 13

ವಿಭೀಷಣಸ್ತು ರಾಮಸ್ಯದೃಷ್ಟ್ವಾ ಗಾತ್ರಂ ಶರೈಶ್ಚಿತಮ್ ।
ಲಕ್ಷ್ಮಣಸ್ಯ ತು ಧರ್ಮಾತ್ಮಾ ಬಭೂವ ವ್ಯಥಿತಸ್ತದಾ ॥

ಅನುವಾದ

ಬಾಣಗಳಿಂದ ವ್ಯಾಪ್ತರಾದ ಶ್ರೀರಾಮ-ಲಕ್ಷ್ಮಣರನ್ನು ನೋಡಿ ಧರ್ಮಾತ್ಮಾ ವಿಭೀಷಣನಿಗೆ ಆಗ ಬಹಳ ದುಃಖವುಂಟಾಯಿತು.॥13॥

ಮೂಲಮ್ - 14

ಜಲಕ್ಲಿನ್ನೇನ ಹಸ್ತೇನ ತಯೋರ್ನೇತ್ರೇ ವಿಮೃಜ್ಯ ಚ ।
ಶೋಕಸಂಪೀಡಿತಮನಾ ರುರೋದ ವಿಲಲಾಪ ಚ ॥

ಅನುವಾದ

ಅವನು ಅವರಿಬ್ಬರ ಕಣ್ಣು ಒರೆಸಿ, ಮನಸ್ಸಿನಲ್ಲೇ ಶೋಕದಿಂದ ಪೀಡಿತನಾಗಿ ಅಳುತ್ತಾ ವಿಲಾಪ ಮಾಡತೊಡಗಿದನು.॥14॥

ಮೂಲಮ್ - 15

ಇಮೌ ತೌ ಸತ್ತ್ವ ಸಂಪನ್ನೌ ವಿಕ್ರಾಂತೌ ಪ್ರಿಯಸಂಯುಗೌ ।
ಇಮಾಮವಸ್ಥಾಂ ಗಮಿತೌ ರಾಕ್ಷಸೈಃ ಕೂಟಯೋಧಿಭಿಃ ॥

ಅನುವಾದ

ಅಯ್ಯೋ! ಯುದ್ಧವು ಹೆಚ್ಚು ಪ್ರಿಯವುಳ್ಳ, ಬಲವಿಕ್ರಮ ಸಂಪನ್ನರಾದ ಇವರಿಬ್ಬರೂ ಸಹೋದರ ಶ್ರೀರಾಮ- ಲಕ್ಷ್ಮಣರನ್ನು ಮಾಯಾಯುದ್ಧ ಮಾಡುವ ರಾಕ್ಷಸರು ಈ ಸ್ಥಿತಿಗೆ ತಂದಿದ್ದಾರೆ.॥15॥

ಮೂಲಮ್ - 16

ಭ್ರಾತೃಃ ಪುತ್ರೇಣ ಚೈತೇನ ದುಷ್ಪುತ್ರೇಣ ದುರಾತ್ಮನಾ ।
ರಾಕ್ಷಸ್ಯಾ ಜಿಹ್ಮಯಾ ಬುದ್ಧ್ಯಾ ವಂಚಿತಾವೃಜುವಿಕ್ರಮೌ ॥

ಅನುವಾದ

ಈ ವೀರರಿಬ್ಬರು ಸರಳತೆಯಿಂದ ಪರಾಕ್ರಮ ಪ್ರಕಟಿಸುತ್ತಿದ್ದರು. ಆದರೆ ಅಣ್ಣನ ಕುಪುತ್ರ, ದುರಾತ್ಮಾ ಇಂದ್ರಜಿತು ರಾಕ್ಷಸರ ಕುಟಿಲ ಬುದ್ಧಿಯಿಂದ ಇವರಿಬ್ಬರಿಗೂ ಮೋಸ ಮಾಡಿದನು.॥16॥

ಮೂಲಮ್ - 17

ಶರೈರಿಮಾವಲಂ ವಿದ್ಧೌ ರುಧಿರೇಣ ಸಮುಕ್ಷಿತೌ ।
ವಸುಧಾಯಾಮಿಮೌ ಸುಪ್ತೌ ದೃಶ್ಯೇತೇ ಶಲ್ಯಕಾವಿವ ॥

ಅನುವಾದ

ಇವರಿಬ್ಬರ ಶರೀರಗಳೂ ಬಾಣಗಳಿಂದ ಛಿದ್ರವಾಗಿವೆ, ರಕ್ತದಿಂದ ತೊಯ್ದುಹೋಗಿದ್ದಾರೆ ಹಾಗೂ ಈ ಸ್ಥಿತಿಯಲ್ಲಿ ನೆಲದಲ್ಲಿ ಮಲಗಿರುವ ಈ ರಾಜಕುಮಾರರು ಮುಳ್ಳುಹಂದಿಗಳಂತೆ ಕಂಡುಬರುತ್ತಿದ್ದಾರೆ.॥17॥

ಮೂಲಮ್ - 18

ಯಯೋರ್ವೀರ್ಯಮುಪಾಶ್ರಿತ್ಯ ಪ್ರತಿಷ್ಠಾ ಕಾಂಕ್ಷಿತಾ ಮಯಾ ।
ತಾವಿಮೌ ದೇಹನಾಶಾಯ ಪ್ರಸುಪ್ತೌ ಪುರುಷರ್ಷಭೌ ॥

ಅನುವಾದ

ಯಾರ ಬಲ-ಪರಾಕ್ರಮವನ್ನು ಆಶ್ರಯಿಸಿ ನಾನು ಲಂಕೆಯ ರಾಜ್ಯವನ್ನು ಪಡೆಯುವ ಅಭಿಲಾಷೆ ಹೊಂದಿದ್ದೆನೋ, ಅವರಿಬ್ಬರೂ ಪುರುಷಶ್ರೇಷ್ಠ ಶ್ರೀರಾಮ-ಲಕ್ಷ್ಮಣರು ದೇಹ ತ್ಯಾಗಕ್ಕಾಗಿ ಮಲಗಿರುವರು.॥18॥

ಮೂಲಮ್ - 19

ಜೀವನ್ನದ್ಯ ವಿಪನ್ನೋಽಸ್ಮಿ ನಷ್ಟ ರಾಜ್ಯಮನೋರಥಃ ।
ಪ್ರಾಪ್ತಪ್ರತಿಜ್ಞಶ್ಚ ರಿಪುಃ ಸಕಾಮೋ ರಾವಣಃ ಕೃತಃ ॥

ಅನುವಾದ

ಇಂದು ನಾನು ಸತ್ತಂತೆ ಆಗಿದ್ದೇನೆ. ನನ್ನ ರಾಜ್ಯಪ್ರಾಪ್ತಿಯ ಮನೋರಥ ಮಣ್ಣುಪಾಲಾಯಿತು. ಸೀತೆಯನ್ನು ಮರಳಿಸುವುದಿಲ್ಲ ಎಂಬ ರಾವಣನ ಪ್ರತಿಜ್ಞೆ ನಿಜವಾಯಿತು. ಅವನ ಮಗನು ಅಣ್ಣನ ಮನೋರಥ ಸಫಲವಾಗಿಸಿದನು.॥19॥

ಮೂಲಮ್ - 20

ಏವಂ ವಿಲಪಮಾನಂ ತಂ ಪರಿಷ್ವಜ್ಯ ವಿಭೀಷಣಮ್ ।
ಸುಗ್ರೀವಃ ಸತ್ತ್ವಸಂಪನ್ನೋ ಹರಿರಾಜೋಽಬ್ರವೀದಿದಮ್ ॥

ಅನುವಾದ

ಹೀಗೆ ವಿಲಾಪಿಸುತ್ತಿರುವ ವಿಭೀಷಣನನ್ನು ಶಕ್ತಿಶಾಲಿ ಸುಗ್ರೀವನು ಬಿಗಿದಪ್ಪಿಕೊಂಡು ಹೀಗೆ ಹೇಳಿದನು.॥20॥

ಮೂಲಮ್ - 21

ರಾಜ್ಯಂ ಪ್ರಾಪ್ಸ್ಯಸಿ ಧರ್ಮಜ್ಞ ಲಂಕಾಯಾಂ ನೇಹ ಸಂಶಯಃ ।
ರಾವಣಃ ಸಹ ಪುತ್ರೇಣ ಸ್ವಕಾಮಂ ನೇಹ ಲಪ್ಸ್ಯತೇ ॥

ಅನುವಾದ

ಧರ್ಮಜ್ಞನೇ! ನಿನಗೆ ಲಂಕೆಯ ರಾಜ್ಯ ಪ್ರಾಪ್ತವಾಗುವುದು, ಇದರಲ್ಲಿ ಸಂಶಯವೇ ಇಲ್ಲ. ಪುತ್ರಸಹಿತ ರಾವಣನು ತನ್ನ ಕಾಮನೆಯನ್ನು ಪೂರ್ಣಗೊಳಿಸಲಾರನು.॥21॥

ಮೂಲಮ್ - 22

ಗರುಡಾಧಿಷ್ಠಿತಾವೇತಾವುಭೌ ರಾಘವಲಕ್ಷ್ಮಣೌ ।
ತ್ಯಕ್ತ್ವಾ ಮೋಹಂ ವಧಿಷ್ಯೇತೇ ಸಗಣಂ ರಾವಣಂ ರಣೇ ॥

ಅನುವಾದ

ಶ್ರೀರಾಮ-ಲಕ್ಷ್ಮಣ ಇವರಿಬ್ಬರೂ ಮೂರ್ಛೆಯಿಂದ ಎಚ್ಚರಗೊಂಡ ಬಳಿಕ ಗರುಡನ ಹೆಗಲೇರಿ ರಣಭೂಮಿಯಲ್ಲಿ ರಾಕ್ಷಸರ ಸಹಿತ ರಾವಣನ ವಧೆಮಾಡುವರು.॥22॥

ಮೂಲಮ್ - 23

ತಮೇವಂ ಸಾಂತ್ವಯಿತ್ವಾ ತು ಸಮಾಶ್ವಾಸ್ಯ ತಪ ರಾಕ್ಷಸಮ್ ।
ಸುಷೇಣಂ ಶ್ವಶುರಂ ಪಾರ್ಶ್ವೇ ಸುಗ್ರೀವಸ್ತಮುವಾಚ ಹ ॥

ಅನುವಾದ

ರಾಕ್ಷಸ ವಿಭೀಷಣನಿಗೆ ಹೀಗೆ ಸಾಂತ್ವನ ನೀಡಿ ಆಶ್ವಾಸನೆ ಕೊಟ್ಟು ಸುಗ್ರೀವನು ಪಕ್ಕದಲ್ಲೇ ನಿಂತಿದ್ದ ಮಾವ ಸುಷೇಣನಲ್ಲಿ ಇಂತೆಂದನು.॥23॥

ಮೂಲಮ್ - 24

ಸಹ ಶೂರೈರ್ಹರಿಗಣೈರ್ಲಬ್ಧಸಂಜ್ಞಾವರಿಂದಮೌ ।
ಗಚ್ಛ ತ್ವಂ ಭ್ರಾತರೌ ಗೃಹ್ಯಕಿಷ್ಕಿಂಧಾಂ ರಾಮಲಕ್ಷ್ಮಣೌ ॥

ಅನುವಾದ

ಶತ್ರುದಮನ ಇವರಿಬ್ಬರು ರಾಮ-ಲಕ್ಷ್ಮಣರು ಎಚ್ಚರಗೊಂಡಾಗ ನೀವು ಇವರನ್ನು ಕರೆದುಕೊಂಡು ಶೂರರಾದ ವಾನರರೊಂದಿಗೆ ಕಿಷ್ಕಿಂಧೆಗೆ ಹೊರಟುಹೋಗಿರಿ.॥24॥

ಮೂಲಮ್ - 25

ಅಹಂ ತು ರಾವಣಂ ಹತ್ವಾ ಸಪುತ್ರಂ ಸಹಬಾಂಧವಮ್ ।
ಮೈಥಿಲೀಮಾನಯಿಷ್ಯಾಮಿ ಶಕ್ರೋ ನಷ್ಟಾಮಿವ ಶ್ರಿಯಮ್ ॥

ಅನುವಾದ

ನಾನು ಪುತ್ರ-ಬಂಧು ಬಾಂಧವರ ಸಹಿತ ರಾವಣನನ್ನು ಕೊಂದು, ದೇವೇಂದ್ರನು ಕಳೆದುಕೊಂಡ ರಾಜ್ಯಲಕ್ಷ್ಮಿಯನ್ನು ದೈತ್ಯರಿಂದ ಕಸಿದುಕೊಂಡಂತೆ ಅವನ ಕೈಯಿಂದ ಸೀತೆಯನ್ನು ಕಸಿದುಕೊಂಡು ತರುವೆನು.॥25॥

ಮೂಲಮ್ - 26

ಶ್ರುತ್ವೈತದ್ವಾನರೇಂದ್ರಸ್ಯ ಸುಷೇಣೋ ವಾಕ್ಯಮಬ್ರವೀತ್ ।
ದೇವಾಸುರಂ ಮಹಾಯುದ್ಧಮನುಭೂತಂ ಪುರಾತನಮ್ ॥

ಅನುವಾದ

ವಾನರರಾಜ ಸುಗ್ರೀವನ ಮಾತನ್ನು ಕೇಳಿ ಸುಷೇಣನು ಹೇಳಿದನು - ಹಿಂದೆ ನಡೆದ ದೇವಾಸುರ ಮಹಾಯುದ್ಧವನ್ನು ನಾನು ನೋಡಿರುವೆನು.॥26॥

ಮೂಲಮ್ - 27

ತದಾ ಸ್ಮ ದಾನವಾ ದೇವಾನ್ ಶರಸಂಸ್ಪರ್ಶಕೋವಿದಾನ್ ।
ನಿಜಘ್ನುಃ ಶಸ್ತ್ರವಿದುಷಶ್ಛಾದಯಂತೋ ಮುಹುರ್ಮುಹುಃ ॥

ಅನುವಾದ

ಆಗ ಅಸ್ತ್ರ-ಶಸ್ತ್ರಗಳನ್ನು ತಿಳಿದ, ಲಕ್ಷ್ಯವೇಧದಲ್ಲಿ ಕುಶಲರಾದ ದೇವತೆಗಳನ್ನು ದಾನವರು ಪದೇಪದೇ ಬಾಣಗಳಿಂದ ಮುಚ್ಚಿಬಿಟ್ಟು ತುಂಬಾ ಗಾಯಪಡಿಸಿದ್ದರು.॥27॥

ಮೂಲಮ್ - 28

ತಾನಾರ್ತಾನ್ನಷ್ಟಸಂಜ್ಞಾಂಶ್ಚ ಗತಾಸೂಂಶ್ಚ ಬೃಹಸ್ಪತಿಃ ।
ವಿದ್ಯಾಭಿರ್ಮಂತ್ರಯುಕ್ತಾಭಿರೋಷಧೀಭಿಶ್ಚಿಕಿತ್ಸತಿ ॥

ಅನುವಾದ

ಆ ಯುದ್ಧದಲ್ಲಿ ಅಸ್ತ್ರ-ಶಸ್ತ್ರಗಳಿಂದ ಪೀಡಿತರಾಗಿ, ನಿಶ್ಚೇಷ್ಠಿತ, ಪ್ರಾಣಶೂನ್ಯರಾದ ದೇವತೆಗಳೆಲ್ಲರ ರಕ್ಷಣೆಗಾಗಿ ೃಹಸ್ಪತಿಗಳು ಮಂತ್ರವಿದ್ಯೆಯಿಂದ ಹಾಗೂ ದಿವ್ಯ ಔಷಧಗಳಿಂದ ಅವರ ಚಿಕಿತ್ಸೆ ಮಾಡುತ್ತಿದ್ದರು.॥28॥

ಮೂಲಮ್ - 29

ತಾನ್ಯೌಷಧಾನ್ಯಾನಯಿತುಂ ಕ್ಷೀರೋದಂ ಯಾಂತು ಸಾಗರಮ್ ।
ಜವೇನ ವಾನರಾಃ ಶೀಘ್ರಂ ಸಂಪಾತಿ ಪನಸಾದಯಃ ॥

ಅನುವಾದ

ನನ್ನ ಅಭಿಪ್ರಾಯದಂತೆ ಔಷಧಿಗಳನ್ನು ತರಲು ಸಂಪಾತಿ ಮತ್ತು ಪನಸರೇ ಆದಿ ವಾನರರು ಶೀಘ್ರವಾಗಿ ವಾಯುವೇಗದಿಂದ ಕ್ಷೀರಸಾಗರದ ತಟಕ್ಕೆ ಹೋಗಲಿ.॥29॥

ಮೂಲಮ್ - 30

ಹರಯಸ್ತು ವಿಜಾನಂತಿ ಪಾರ್ವತೀ ತೇ ಮಹೌಷಧೀ ।
ಸಂಜೀವಕರಣೀಂ ದಿವ್ಯಾಂ ವಿಶಲ್ಯಾಂ ದೇವನಿರ್ಮಿತಾಮ್ ॥

ಅನುವಾದ

ಸಂಪಾತಿಯೇ ಮೊದಲಾದ ವಾನರರು ಆ ಪರ್ವತ ದಲ್ಲಿರುವ ಎರಡು ಪ್ರಸಿದ್ಧ ಔಷಧಿಗಳನ್ನು ಬಲ್ಲರು. ಒಂದರ ಹೆಸರು ಸಂಜೀವಕರಣೀ ಹಾಗೂ ಇನ್ನೊಂದು ವಿಶಲ್ಯ ಕರಣಿ, ಇವೆರಡೂ ದಿವ್ಯ ಔಷಧಿಗಳನ್ನು ಸಾಕ್ಷಾತ್ ಬ್ರಹ್ಮದೇವರೇ ನಿರ್ಮಿಸಿದ್ದಾರೆ.॥30॥

ಮೂಲಮ್ - 31

ಚಂದ್ರಶ್ಚ ನಾಮ ದ್ರೋಣಶ್ಚ ಕ್ಷೀರೋದೇ ಸಾಗರೋತ್ತಮೇ ।
ಆಮೃತಂ ಯತ್ರ ಮಥಿತಂ ತತ್ರ ತೇ ಪರಮೌಷಧೀ ॥

ಮೂಲಮ್ - 32

ತೌ ತತ್ರ ವಿಹಿತೌ ದೇವೈಃ ಪರ್ವತೌ ತೌ ಮಹಾದಧೌ ।
ಅಯಂ ವಾಯುಸುತೋ ರಾಜನ್ ಹನುಮಾಂಸ್ತತ್ರ ಗಚ್ಛತು ॥

ಅನುವಾದ

ಸಾಗರೋತ್ತಮ ಕ್ಷೀರಸಮುದ್ರದ ತೀರದಲ್ಲಿ ಚಂದ್ರ ಮತ್ತು ದ್ರೋಣ ಎಂಬ ಎರಡು ಪರ್ವತಗಳಿವೆ. ಅಲ್ಲಿ ಹಿಂದೆ ಅಮೃತಮಂಥನ ನಡೆದಿತ್ತು. ಅದೇ ಶ್ರೇಷ್ಠಪರ್ವತಗಳಲ್ಲಿ ಇವೆರಡು ಔಷಧಿಗಳು ಇವೆ. ಮಹಾಸಾಗರದಲ್ಲಿ ದೇವತೆಗಳೇ ಅವೆರಡು ಪರ್ವತಗಳನ್ನು ಸ್ಥಾಪಿಸಿದ್ದಾರೆ. ರಾಜನೇ! ಈ ವಾಯುಪುತ್ರನೂ ಆ ದಿವ್ಯಔಷಧಿಗಳನ್ನು ತರಲು ಹೋಗಲಿ.॥31-32॥

ಮೂಲಮ್ - 33

ಏತಸ್ಮಿನ್ನಂತರೇ ವಾಯುರ್ಮೇಘಾಶ್ಚಾಪಿ ಸವಿದ್ಯುತಃ ।
ಪರ್ಯಸ್ಯಸಾಗರೇ ತೋಯಂ ಕಂಪಯನ್ನಿವ ಪರ್ವತಾನ್ ॥

ಅನುವಾದ

ಔಷಧಿಗಳನ್ನು ತರುವ ಮಾತು ನಡೆಯುತ್ತಿರುವಾಗಲೇ ಜೋರಾಗಿ ವಾಯು ಬೀಸತೊಡಗಿತು, ಮೇಘಗಳು ಆವರಿಸಿದವು, ಮಿಂಚು ಹೊಳೆಯತೊಡಗಿತು. ಆ ಪ್ರಭಂಜನದಿಂದ ಸಮುದ್ರದ ನೀರು ಅಲ್ಲೋಲಕಲ್ಲೋಲವಾಗಿ, ಪರ್ವತಗಳು ನಡುಗತೊಡಗಿದವು.॥33॥

ಮೂಲಮ್ - 34

ಮಹತಾ ಪಕ್ಷವಾತೇನ ಸರ್ವದ್ವೀಪ ಮಹಾದ್ರುಮಾಃ ।
ನಿಪೇತುರ್ಭಗ್ನವಿಟಪಾಃ ಸಲಿಲೇ ಲವಣಾಂಭಸಿ ॥

ಅನುವಾದ

ಗರುಡನ ರೆಕ್ಕೆಗಳಿಂದ ಎದ್ದಿರುವ ಆ ಪ್ರಚಂಡ ವಾಯುವು ದ್ವೀಪದ ಸಮಸ್ತ ದೊಡ್ಡ ದೊಡ್ಡ ವೃಕ್ಷಗಳನ್ನು ಬುಡಸಹಿತ ಕಿತ್ತು ಲವಣ ಸಮುದ್ರಕ್ಕೆ ಹಾಕಿತು.॥34॥

ಮೂಲಮ್ - 35

ಅಭವನ್ ಪನ್ನಗಾಸ್ತ್ರಸ್ತಾ ಭೋಗಿನಸ್ತತ್ರವಾಸಿನಃ ।
ಶೀಘ್ರಂ ಸರ್ವಾಣಿ ಯಾದಾಂಸಿ ಜಗ್ಮುಶ್ಚ ಲವಣಾರ್ಣವಮ್ ॥

ಅನುವಾದ

ಲಂಕಾನಿವಾಸಿ ಮಹಾಕಾಯ ಸರ್ಪಗಳು ಭಯಗೊಂಡವು. ಸಮಸ್ತ ಜಲಚರಗಳು ಬೇಗನೆ ಸಮುದ್ರದೊಳಗೆ ಅಡಗಿಕೊಂಡವು.॥35॥

ಮೂಲಮ್ - 36

ತತೋ ಮುಹೂರ್ತಾದ್ಗರುಡಂ ವೈನತೇಯಂ ಮಹಾಬಲಮ್ ।
ವಾನರಾ ದದೃಶುಃ ಸರ್ವೇ ಜ್ವಲಂತಮಿವ ಪಾವಕಮ್ ॥

ಅನುವಾದ

ಅನಂತರ ಎರಡೇ ಗಳಿಗೆಯಲ್ಲಿ ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ಮಹಾಬಲಿ ವಿನತಾನಂದನ ಗರುಡನು ಅಲ್ಲಿಗೆ ಬಂದಿರುವುದನ್ನು ಎಲ್ಲ ವಾನರರು ನೋಡಿದರು.॥36॥

ಮೂಲಮ್ - 37

ತಮಾಗತಮಭಿಪ್ರೇಕ್ಷ್ಯ ನಾಗಾಸ್ತೇ ವಿಪ್ರದುದ್ರುವುಃ ।
ಯೈಸ್ತುತೌ ಪುರುಷೌ ಬದ್ಧೌ ಶರಭೂತೈರ್ಮಹಾಬಲೈಃ ॥

ಅನುವಾದ

ಗರುಡನು ಬಂದಿರುವುದನ್ನು ನೋಡಿ ಬಾಣರೂಪದಿಂದ ಅವರಿಬ್ಬರನ್ನು ಬಂಧಿಸಿದ್ದ ಮಹಾಬಲಿಷ್ಠ ನಾಗಗಳೆಲ್ಲವೂ ಅಲ್ಲಿಂದ ಓಡಿಹೋದುವು.॥37॥

ಮೂಲಮ್ - 38

ತತಃ ಸುಪರ್ಣಃ ಕಾಕುತ್ಸ್ಥೌ ಸೃಷ್ಟ್ವಾ ಪ್ರತ್ಯಭಿನಂದ್ಯ ಚ ।
ವಿಮಮರ್ಶ ಚ ಪಾಣಿಭ್ಯಾಂ ಮುಖೇ ಚಂದ್ರಸಮಪ್ರಭೇ ॥

ಅನುವಾದ

ಅನಂತರ ಗರುಡನು ಆ ಇಬ್ಬರೂ ರಘುವಂಶಿಯರನ್ನು ಸ್ಪರ್ಶಿಸಿ, ಅಭಿನಂದಿಸಿ, ಚಂದ್ರನಂತೆ ಕಾಂತಿಯುಳ್ಳ ಅವರ ಮುಖಗಳನ್ನು ಒರೆಸಿದನು.॥38॥

ಮೂಲಮ್ - 39

ವೈನತೇಯೇನ ಸಂಸ್ಪಷ್ಟಾಸ್ತಯೋಃ ಸಂರುರುಹುರ್ವ್ರಣಾಃ ।
ಸುವರ್ಣೇ ಚ ತನೂ ಸ್ನಿಗ್ಧೇ ತಯೋರಾಶು ಬಭೂವತುಃ ॥

ಅನುವಾದ

ಗರುಡನು ಸ್ಪರ್ಶವಾಗುತ್ತಲೇ ಶ್ರೀರಾಮ-ಲಕ್ಷ್ಮಣರ ಎಲ್ಲ ಗಾಯಗಳು ಮಾಯವಾಗಿ, ಅವರ ಶರೀರಗಳು ತತ್ಕಾಲ ಸುಂದರ ಕಾಂತಿಯುಕ್ತ ಸಿದ್ಧಗಳಾದವು.॥39॥

ಮೂಲಮ್ - 40

ತೇಜೋ ವೀರ್ಯಂ ಬಲಂ ಚೌಜ ಉತ್ಸಾಹಶ್ಚ ಮಹಾಗುಣಾಃ ।
ಪ್ರದರ್ಶನಂ ಚ ಬುದ್ಧಿಶ್ಚ ಸ್ಮತಿಶ್ಚ ದ್ವಿಗುಣಾ ತಯೋಃ ॥

ಅನುವಾದ

ಅವರಲ್ಲಿ ತೇಜ, ವೀರ್ಯ, ಬಲ, ಓಜ, ಉತ್ಸಾಹ, ದೃಷ್ಟಿಶಕ್ತಿ, ಬುದ್ಧಿ, ಸ್ಮರಣಶಕ್ತಿ ಮುಂತಾದ ಮಹಾಗುಣಗಳು ಮೊದಲಿಗಿಂತ ಇಮ್ಮಡಿಯಾದುವು.॥40॥

ಮೂಲಮ್ - 41

ತಾವುತ್ಥಾಪ್ಯ ಮಹಾತೇಜಾ ಗರುಡೋ ವಾಸವೋಪಮೌ ।
ಉಭೌ ಚ ಸಸ್ವಜೇ ಹೃಷ್ಟೋ ರಾಮಶ್ಚೈನಮುವಾಚ ಹ ॥

ಅನುವಾದ

ಮತ್ತೆ ಮಹಾತೇಜಸ್ವೀ ಗರುಡನು ಸಾಕ್ಷಾತ್ ಇಂದ್ರನಂತಿದ್ದ ಇಬ್ಬರೂ ಸಹೋದರರನ್ನು ಎತ್ತಿ ಬಿಗಿದಪ್ಪಿಕೊಂಡನು. ಆಗ ಶ್ರೀರಾಮನು ಪ್ರಸನ್ನನಾಗಿ ಅವನಲ್ಲಿ ಇಂತೆಂದನು.॥41॥

ಮೂಲಮ್ - 42

ಭವತ್ಪ್ರಸಾದಾದ್ ವ್ಯಸನಂ ರಾವಣಿಪ್ರಭವಂ ಮಹತ್ ।
ಉಪಾಯೇನ ವ್ಯತಿಕ್ರಾಂತೌ ಶೀಘ್ರಂ ಚ ಬಲಿನೌ ಕೃತೌ ॥

ಅನುವಾದ

ಇಂದ್ರಜಿತುವಿನಿಂದಾಗಿ ನಮ್ಮ ಮೇಲೆ ಬಂದೆರಗಿದ ಮಹಾಸಂಕಟವನ್ನು ನಿನ್ನ ಕೃಪೆಯಿಂದ ದಾಟಿದೆವು. ನೀನು ವಿಶಿಷ್ಟ ಉಪಾಯಗಳನ್ನು ಬಲ್ಲೆ; ಅದರಿಂದ ನಾವಿಬ್ಬರೂ ಬೇಗನೇ ಹಿಂದಿನಂತೆ ಬಲಸಂಪನ್ನರಾದೆವು.॥42॥

ಮೂಲಮ್ - 43

ಯಥಾ ತಾತಂ ದಶರಥಂ ಯಥಾಜಂ ಚ ಪಿತಾಮಹಮ್ ।
ತಥಾಭವಂತಮಾಸಾದ್ಯ ಹೃದಯಂ ಮೇ ಪ್ರಸೀದತಿ ॥

ಅನುವಾದ

ತಂದೆ ದಶರಥ ಮತ್ತು ಅಜ್ಜ ಅಜನ ಬಳಿಗೆ ಹೋಗುವುದರಿಂದ ನನ್ನ ಮನಸ್ಸು ಸಂತೋಷಗೊಳ್ಳುವಂತೆಯೇ ನಿನ್ನನ್ನು ಪಡೆದ ನನ್ನ ಹೃದಯ ಹರ್ಷದಿಂದ ಅರಳಿದೆ.॥43॥

ಮೂಲಮ್ - 44

ಕೋ ಭವಾನ್ ರೂಪಸಂಪನ್ನೋ ದಿವ್ಯಸ್ರಗನುಲೇಪನಃ ।
ವಸಾನೋ ವಿರಜೇ ವಸ್ತ್ರೇ ದಿವ್ಯಾಭರಣಭೂಷಿತಃ ॥

ಅನುವಾದ

ನೀನು ತುಂಬಾ ರೂಪವಂತನಾಗಿದ್ದು, ದಿವ್ಯ ಪುಷ್ಪಮಾಲೆ ಮತ್ತು ದಿವ್ಯ ಅಂಗರಾಗದಿಂದ ವಿಭೂಷಿತನಾಗಿರುವೆ. ಎರಡು ಶುಭ್ರ ವಸ್ತ್ರಗಳನ್ನು ಉಟ್ಟು, ದಿವ್ಯ ಆಭರಣಗಳಿಂದ ನಿನ್ನ ಶೋಭೆ ಹೆಚ್ಚಿದೆ. ನೀನು ಯಾರೆಂದು ತಿಳಿಯಲು ನಾವು ಬಯಸುತ್ತೇವೆ. (ಸರ್ವಜ್ಞನಾಗಿದ್ದರೂ ಭಗವಂತನು ಮಾನವ ಭಾವವನ್ನು ಆಶ್ರಯಿಸಿ ಗರುಡನಲ್ಲಿ ಹೀಗೆ ಪ್ರಶ್ನಿಸಿದ್ದನು.॥44॥

ಮೂಲಮ್ - 45

ತಮುವಾಚ ಮಹಾತೇಜಾ ವೈನತೇಯೋ ಮಹಾಬಲಃ ।
ಪತತ್ರಿರಾಜಃ ಪ್ರೀತಾತ್ಮಾ ಹರ್ಷಪರ್ಯಾಕುಲೇಕ್ಷಣಮ್ ॥

ಅನುವಾದ

ಆಗ ಮಹಾತೇಜಸ್ವೀ, ಮಹಾಬಲಿ ಪಕ್ಷಿರಾಜ ವಿನತಾನಂದನ ಗರುಡನು ಮನಸ್ಸಿನಲ್ಲೇ ಸಂತೋಷಗೊಂಡು ಆನಂದಾಶ್ರು ಗಳಿಂದ ತುಂಬಿದ ನೇತ್ರಗಳುಳ್ಳ ಶ್ರೀರಾಮನಲ್ಲಿ ಹೇಳಿದನು.॥45॥

ಮೂಲಮ್ - 46

ಅಹಂ ಸಖಾ ತೇ ಕಾಕುತ್ಸ್ಥ ಪ್ರಿಯಃ ಪ್ರಾಣೋ ಬಹಿಶ್ಚರಃ ।
ಗರುತ್ಮಾನಿಹ ಸಂಪ್ರಾಪ್ತೋ ಯುವಯೋಃ ಸಾಹ್ಯಕಾರಣಾತ್ ॥

ಅನುವಾದ

ಕಾಕುತ್ಸ್ಥನೇ! ನಾನು ನಿಮ್ಮ ಪ್ರಿಯ ಗರುಡನಾಗಿದ್ದೇನೆ, ನಿಮ್ಮ ಬಹಿಃಪ್ರಾಣನಾಗಿದ್ದೇನೆ. ನಿಮ್ಮಿಬ್ಬರ ಸಹಾಯಕ್ಕಾಗಿಯೇ ನಾನು ಈಗ ಇಲ್ಲಿಗೆ ಬಂದಿರುವೆನು.॥46॥

ಮೂಲಮ್ - 47½

ಅಸುರಾ ವಾ ಮಹಾವೀರ್ಯಾ ದಾನವಾ ವಾ ಮಹಾಬಲಾಃ ।
ಸುರಾಶ್ಚಾಪಿ ಸ ಗಂಧರ್ವಾಃ ಪುರಸ್ಕೃತ್ಯ ಶತಕ್ರತುಮ್ ॥
ನೇಮಂ ಮೋಕ್ಷಯಿತುಂ ಶಕ್ತಾಃ ಶರಬಂಧಂ ಸುದಾರುಣಮ್ ॥

ಅನುವಾದ

ಮಹಾ ಪರಾಕ್ರಮಿ ಅಸುರರು, ಮಹಾಬಲಿ ದಾನವರು. ದೇವತೆಗಳು ಹಾಗೂ ಗಂಧರ್ವರೂ ಕೂಡ ಇಂದ್ರನನ್ನು ಮುಂದಿರಿಸಿ ಕೊಂಡು ಇಲ್ಲಿಗೆ ಬಂದಿದ್ದರೂ ಈ ಭಯಂಕರ ಸರ್ಪಾಕಾರ ಬಾಣಗಳಿಂದ ಬಿಡಿಸಲು ಸಮರ್ಥರಾಗುತ್ತಿರಲಿಲ್ಲ.॥47½॥

ಮೂಲಮ್ - 48

ಮಾಯಾಬಲಾದಿಂದ್ರಜಿತಾ ನಿರ್ಮಿತಂ ಕ್ರೂರಕರ್ಮಣಾ ॥

ಮೂಲಮ್ - 49

ಏತೇ ನಾಗಾಃ ಕಾದ್ರವೇಯಾಸ್ತೀಕ್ಷ್ಣದಂಷ್ಟ್ರಾ ವಿಷೋಲ್ಪಣಾಃ ।
ರಕ್ಷೋಮಾಯಾಪ್ರಭಾವೇಣ ಶರಾಭೂತಾಸ್ತ್ವದಾಶ್ರಯಾಃ ॥

ಅನುವಾದ

ಕ್ರೂರಕರ್ಮಿ ಇಂದ್ರಜಿತುವು ಮಾಯಾಬಲದಿಂದ ಸಿದ್ಧಗೊಳಿಸಿದ ನಾಗರೂಪೀ ಬಂಧನ ನಾಗಗಳು ಕದ್ರುವಿನ ಪುತ್ರರಾಗಿದ್ದರು. ಇವುಗಳ ಹಲ್ಲು ಬಹಳ ತೀಕ್ಷ್ಣವಾಗಿದ್ದು, ವಿಷವು ಭಯಂಕರವಾಗಿರುತ್ತದೆ. ಇವು ರಾಕ್ಷಸನ ಮಾಯಾ ಪ್ರಭಾವದಿಂದ ಬಾಣಗಳಾಗಿ ನಿಮ್ಮ ಶರೀರವನ್ನು ಸುತ್ತಿಕೊಂಡಿದ್ದರು.॥48-49॥

ಮೂಲಮ್ - 50

ಸಭಾಗ್ಯಶ್ಚಾಸಿ ಧರ್ಮಜ್ಞ ರಾಮ ಸತ್ಯಪರಾಕ್ರಮ ।
ಲಕ್ಷ್ಮಣೇನ ಸಹ ಭ್ರಾತ್ರಾ ಸಮರೇ ರಿಪುಘಾತಿನಾ ॥

ಅನುವಾದ

ಧರ್ಮಜ್ಞ ಸತ್ಯಪರಾಕ್ರಮಿ ರಾಮಾ! ರಣರಂಗದಲ್ಲಿ ಶತ್ರುಗಳನ್ನು ಸಂಹರಿಸುವ ನಿನ್ನ ತಮ್ಮ ಲಕ್ಷ್ಮಣನೊಂದಿಗೆ ನೀನು ಬಹಳ ಭಾಗ್ಯಶಾಲಿಯಾಗಿರುವೆ. (ಸುಲಭವಾಗಿ ನಾಗಪಾಶದಿಂದ ಮುಕ್ತನಾಗಿರುವೆ.॥50॥

ಮೂಲಮ್ - 51

ಇಮಂ ಶ್ರುತ್ವಾ ತು ವೃತ್ತಾಂತಂ ತ್ವರಮಾಣೋಽಹಮಾಗತಃ ।
ಸಹಸೈವಾವಯೋಃಸ್ನೇಹಾತ್ಸಖಿತ್ವ ಮನುಪಾಲಯನ್ ॥

ಅನುವಾದ

ನೀವು ನಾಗಪಾಶದಿಂದ ಬಂಧಿತರಾದ ಸಮಾಚಾರ ದೇವತೆಗಳಿಂದ ಕೇಳಿ ನಾನು ಅವಸರದಿಂದ ಇಲ್ಲಿಗೆ ಬಂದಿರುವೆನು. ನಮ್ಮಿಬ್ಬರಲ್ಲಿ ಇರುವ ಸ್ನೇಹದಿಂದ ಪ್ರೇರಿತನಾಗಿ ಮಿತ್ರಧರ್ಮವನ್ನು ಪಾಲಿಸಲು ಕೂಡಲೇ ಬಂದೆ.॥51॥

ಮೂಲಮ್ - 52

ಮೋಕ್ಷಿತೌ ಚ ಮಹಾಘೋರಾದಸ್ಮಾತ್ ಸಾಯಕ ಬಂಧನಾತ್ ।
ಅಪ್ರಮಾದಶ್ಚ ಕರ್ತವ್ಯೋ ಯುವಾಭ್ಯಾಂ ನಿತ್ಯಮೇವ ಹಿ ॥

ಅನುವಾದ

ನಾನು ಬಂದು ಈ ಮಹಾಭಯಂಕರ ಬಾಣ-ಬಂಧನದಿಂದ ನಿಮ್ಮನ್ನು ಬಿಡಿಸಿದೆ. ಇನ್ನು ನೀವು ಸದಾ ಎಚ್ಚರಿಕೆಯಿಂದ ಇರಬೇಕು.॥52॥

ಮೂಲಮ್ - 53

ಪ್ರಕೃತ್ಯಾ ರಾಕ್ಷಸಾಃ ಸರ್ವೇ ಸಂಗ್ರಾಮೇ ಕೂಟಯೋಧಿನಃ ।
ಶೂರಾಣಾಂ ಶುದ್ಧ ಭಾವಾನಾಂ ಭವತಾಮಾರ್ಜವಂ ಬಲಮ್ ॥

ಅನುವಾದ

ಸಮಸ್ತ ರಾಕ್ಷಸರು ಸ್ವಾಭಾವಿಕವಾಗಿಯೇ ಸಂಗ್ರಾಮದಲ್ಲಿ ಕಪಟಯುದ್ಧ ಮಾಡುವವರಾಗಿದ್ದಾರೆ, ಆದರೆ ಶುದ್ಧಸ್ವಭಾವದ ನಿಮ್ಮಂತಹ ಶೂರ-ವೀರರಿಗೆ ಸರಳತೆಯೇ ಬಲವಾಗಿದೆ.॥53॥

ಮೂಲಮ್ - 54

ತನ್ನ ವಿಶ್ವಸನೀಯಂ ವೋ ರಾಕ್ಷಸಾನಾಂ ರಣಾಜಿರೇ ।
ಏತೇನೈವೋಪಮಾನೇನ ನಿತ್ಯಂ ಜಿಹ್ಮಾ ಹಿ ರಾಕ್ಷಸಾಃ ॥

ಅನುವಾದ

ಆದ್ದರಿಂದ ಇದೇ ದೃಷ್ಟಾಂತವನ್ನು ಮುಂದಿರಿಸಿಕೊಂಡು ರಣಕ್ಷೇತ್ರದಲ್ಲಿ ನೀವು ರಾಕ್ಷಸರ ಮೇಲೆ ಎಂದೂ ವಿಶ್ವಾಸವಿಡಬಾರದು; ಏಕೆಂದರೆ ರಾಕ್ಷಸರು ಸದಾ ಕುಟಿಲರೇ ಆಗಿರುತ್ತಾರೆ.॥54॥

ಮೂಲಮ್ - 55

ಏವಮುಕ್ತ್ವಾ ತದಾ ರಾಮಂ ಸುಪರ್ಣಃ ಸುಮಹಾಬಲಃ ।
ಪರಿಷ್ವಜ್ಯ ಚ ಸುಸ್ನಿಗ್ಧಮಾಪ್ರಷ್ಟುಮುಪಚಕ್ರಮೇ ॥

ಅನುವಾದ

ಹೀಗೆ ಹೇಳಿ ಮಹಾಬಲಿ ಗರುಡನು ಆಗ ಪರಮಸ್ನೇಹೀ ಶ್ರೀರಾಮನನ್ನು ಬಿಗಿದಪ್ಪಿಕೊಂಡು ಅವನಲ್ಲಿ ಹೋಗಲು ಅನುಮತಿ ಬೇಡುವ ವಿಚಾರಮಾಡಿದನು.॥55॥

ಮೂಲಮ್ - 56

ಸಖೇ ರಾಘವ ಧರ್ಮಜ್ಞ ರಿಪೂಣಾಮಪಿ ವತ್ಸಲ ।
ಅಭ್ಯನುಜ್ಞಾತುಮಿಚ್ಛಾಮಿ ಗಮಿಷ್ಯಾಮಿ ಯಥಾಸುಖಮ್ ॥

ಅನುವಾದ

ಗರುಡ ಹೇಳಿದ - ಶತ್ರುಗಳ ಮೇಲೂ ದಯೆಮಾಡುವ ಧರ್ಮಜ್ಞ ರಘುನಂದನ! ಈಗ ನಾನು ಇಲ್ಲಿಂದ ಸುಖವಾಗಿ ಪ್ರಸ್ಥಾನ ಮಾಡುವೆನು. ಇದಕ್ಕಾಗಿ ನಿನ್ನಲ್ಲಿ ಅಪ್ಪಣೆ ಬಯಸುತ್ತಿದ್ದೇನೆ.॥56॥

ಮೂಲಮ್ - 57

ನ ಚ ಕೌತೂಹಲಂ ಕಾರ್ಯಂ ಸಖಿತ್ವಂ ಪ್ರತಿ ರಾಘವ ।
ಕೃತಕರ್ಮಾ ರಣೇ ವೀರ ಸಖಿತ್ವಂ ಪ್ರತಿವೇತ್ಸ್ಯಸಿ ॥

ಅನುವಾದ

ವೀರ ರಘುನಂದನ! ನಾನು ನನ್ನನ್ನು ನಿಮ್ಮ ಸಖನೆಂದು ಹೇಳಿದುದರಲ್ಲಿ ಯಾವುದೇ ಕುತೂಹಲವಿರಿಸಿಕೊಳ್ಳಬಾರದು. ನೀನು ಯುದ್ಧದಲ್ಲಿ ಸಫಲನಾದಾಗ ನನ್ನ ಈ ಸಖ್ಯಭಾವವನ್ನು ತಿಳಿದುಕೊಳ್ಳುವೆ.॥57॥

ಮೂಲಮ್ - 58

ಬಾಲವೃದ್ಧಾವಶೇಷಾಂ ತು ಲಂಕಾಕೃತ್ವಾ ಶರೋರ್ಮಿಭಿಃ ।
ರಾವಣಂ ತು ರಿಪುಂ ಹತ್ವಾ ಸೀತಾಂ ತ್ವಮುಪಲಪ್ಸ್ಯಸೇ ॥

ಅನುವಾದ

ಸಮುದ್ರದ ಅಲೆಗಳಂತೆ ನಿನ್ನ ಬಾಣಗಳ ಪರಂಪರೆಯಿಂದ, ಇಲ್ಲಿ ಕೇವಲ ಬಾಲಕರು ಮತ್ತು ಮುದುಕರು ಮಾತ್ರ ಇರುವಂತಹ ಲಂಕೆಯ ಸ್ಥಿತಿಯಾಗುವುದು. ಹೀಗೆ ತನ್ನ ಶತ್ರುವಾದ ರಾವಣನನ್ನು ಸಂಹರಿಸಿ ಸೀತೆಯನ್ನು ಖಂಡಿತವಾಗಿ ನೀನು ಪಡೆಯುವೆ.॥58॥

ಮೂಲಮ್ - 59

ಇತ್ಯೇವಮುಕ್ತ್ವಾ ವಚನಂ ಸುಪರ್ಣಃ ಶೀಘ್ರವಿಕ್ರಮಃ ।
ರಾಮಂ ಚ ನೀರುಜಂ ಕೃತ್ವಾ ಮಧ್ಯೇ ತೇಷಾಂ ವನೌಕಸಾಮ್ ॥

ಮೂಲಮ್ - 60

ಪ್ರದಕ್ಷಿಣಂ ತತಃಕೃತ್ವಾ ಪರಿಷ್ವಜ್ಯ ಚ ವೀರ್ಯವಾನ್ ।
ಜಗಾಮಾಕಾಶಮಾವಿಶ್ಯ ಸುಪರ್ಣಃ ಪವನೋ ಯಥಾ ॥

ಅನುವಾದ

ಹೀಗೆ ಹೇಳಿ ಶೀಘ್ರಗಾಮಿ ಹಾಗೂ ಶಕ್ತಿಶಾಲಿ ಗರುಡನು ಶ್ರೀರಾಮನನ್ನು ನಿರೋಗಿ ಯಾಗಿಸಿ, ಆ ವಾನರರ ನಡುವೆ ಅವನಿಗೆ ಪ್ರದಕ್ಷಿಣೆ ಬಂದು, ಅವನನ್ನು ಬಿಗಿದಪ್ಪಿಕೊಂಡು, ವಾಯುವೇಗದಿಂದ ಆಕಾಶಕ್ಕೆ ಹಾರಿ ಹೊರಟುಹೋದನು.॥59-60॥

ಮೂಲಮ್ - 61

ನೀರುಜೌ ರಾಘವೌ ದೃಷ್ಟ್ವಾ ತತೋ ವಾನರಯೂಥಪಾಃ ।
ಸಿಂಹನಾದಂ ತದಾ ನೇದುರ್ಲಾಂಗೂಲಂ ದುಧುವುಶ್ಚ ತೇ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ನಿರೋಗಿಯಾಗಿರುವುದನ್ನು ನೋಡಿ ಆಗ ಎಲ್ಲ ವಾನರ ಸೇನಾಪತಿಗಳು ಸಿಂಹನಾದ ಮಾಡುತ್ತಾ ಬಾಲವನ್ನು ಕುಣಿಸಲುತೊಡಗಿದರು.॥61॥

ಮೂಲಮ್ - 62

ತತೋ ಭೇರೀಃ ಸಮಾಜಘ್ನುರ್ಮೃದಂಗಾಂಶ್ಚಾಪ್ಯನಾದಯನ್ ।
ದಧ್ಮುಃ ಶಂಖಾನ್ ಸಂಪ್ರಹೃಷ್ಟಾಃ ಕ್ಷ್ವೇಲಂತ್ಯಪಿ ಯಥಾಪುರಮ್ ॥

ಅನುವಾದ

ಮತ್ತೆ ವಾನರರು ಭೇರಿ, ಮೃದಂಗ, ಶಂಖನಾದ ಮಾಡಿ ಹರ್ಷೋಲ್ಲಾಸದಿಂದ ಮೊದಲಿನಂತೆ ಗರ್ಜಿಸುತ್ತಾ, ಚಪ್ಪಾಳೆ ತಟ್ಟತೊಡಗಿದರು.॥62॥

ಮೂಲಮ್ - 63

ಅಪರೇಸ್ಪೋಟ್ಯ ವಿಕ್ರಾಂತಾ ವಾನರಾ ನಗಯೋಧಿನಃ ।
ದ್ರುಮಾನುತ್ಪಾಟ್ಯ ವಿವಿಧಾಂಸ್ತಸ್ಥುಃ ಶತಸಹಸ್ರಶಃ ॥

ಅನುವಾದ

ವೃಕ್ಷ, ಪರ್ವತ ಶಿಖರಗಳನ್ನೆತ್ತಿ ಯುದ್ಧಮಾಡುತ್ತಿದ್ದ ಇತರ ಪರಾಕ್ರಮಿ ವಾನರರು ನಾನಾ ಪ್ರಕಾರದಿಂದ ವೃಕ್ಷಗಳನ್ನು ಕಿತ್ತುಕೊಂಡು ಲಕ್ಷಲಕ್ಷ ಸಂಖ್ಯೆಯಲ್ಲಿ ಯುದ್ಧಕ್ಕಾಗಿ ಸಿದ್ಧರಾದರು.॥63॥

ಮೂಲಮ್ - 64

ವಿಸೃಜಂತೋ ಮಹಾನಾದಾಂಸ್ತ್ರಾಸಯಂತೋ ನಿಶಾಚರಾನ್ ।
ಲಂಕಾದ್ವಾರಾಣ್ಯುಷಾಜಗ್ಮುರ್ಯೋದ್ಧು ಕಾಮಾಃ ಪ್ಲವಂಗಮಾಃ ॥

ಅನುವಾದ

ಜೋರಾಗಿ ಗರ್ಜಿಸುತ್ತಾ, ನಿಶಾಚರರನ್ನು ಹೆದರಿಸುತ್ತಾ ಎಲ್ಲ ವಾನರರು ಯುದ್ಧದ ಇಚ್ಛೆಯಿಂದ ಲಂಕೆಯ ಮಹಾದ್ವಾರಗಳಲ್ಲಿ ಬಂದು ಸಿದ್ಧರಾಗಿ ನಿಂತರು.॥64॥

ಮೂಲಮ್ - 65

ತೇಷಾಂ ಸುಭೀಮಸ್ತುಮುಲೋ ನಿನಾದೋ
ಬಭೂವ ಶಾಖಾಮೃಗ ಯೂಥಪಾನಾಮ್ ।
ಕ್ಷಯೇ ನಿದಾಘಸ್ಯ ಯಥಾ ಘನಾನಾಂ
ನಾದಃ ಸುಭೀಮೋ ನದತಾಂ ನಿಶೀಥೇ ॥

ಅನುವಾದ

ಆಗ ಆ ವಾನರ ಸೇನಾಪತಿಗಳ ಭಯಂಕರ, ತುಮುಲ ಸಿಂಹನಾದವು ಗ್ರೀಷ್ಮಋತುವಿನ ಅಂತ್ಯದಲ್ಲಿ ಅರ್ಧರಾತ್ರಿಯಲ್ಲಿ ಗರ್ಜಿಸುತ್ತಿರುವ ಮೇಘಗಳ ಗಂಭೀರ ಗರ್ಜನೆಯು ಎಲ್ಲೆಡೆ ವ್ಯಾಪಿಸುವಂತೆ, ಎಲ್ಲಾ ಕಡೆಗಳಲ್ಲಿ ಪ್ರತಿಧ್ವನಿಸಿತು.॥65॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐವತ್ತನೆಯ ಸರ್ಗ ಪೂರ್ಣವಾಯಿತು.॥50॥