०४९ राम-विभीषणसंवादः

वाचनम्
ಭಾಗಸೂಚನಾ

ಶ್ರೀರಾಮನು ಎಚ್ಚರಗೊಂಡು ಲಕ್ಷ್ಮಣನಿಗಾಗಿ ವಿಲಪಿಸಿದುದು, ತಾನೂ ಪ್ರಾಣತ್ಯಾಗ ಮಾಡಲು ನಿಶ್ಚಯಿಸಿ ವಾನರರಿಗೆ ಮರಳಿಹೋಗುವಂತೆ ಆಜ್ಞಾಪಿಸಿದುದು

ಮೂಲಮ್ - 1

ಘೋರೇಣ ಶರಬಂಧೇನ ಬದ್ಧೌ ದಶರಥಾತ್ಮಜೌ ।
ನಿಃಶ್ವಸಂತೌ ಯಥಾ ನಾಗೌ ಶಯಾನೌ ರುಧಿರೋಕ್ಷಿತೌ ॥

ಅನುವಾದ

ಘೋರವಾದ ಸರ್ಪಾಕಾರ ಬಾಣಗಳಿಂದ ಬಂಧಿತರಾದ ದಶರಥಕುಮಾರ ಶ್ರೀರಾಮ-ಲಕ್ಷ್ಮಣರು ರಕ್ತದಲ್ಲಿ ಮುಳುಗಿ ಸರ್ಪಗಳಂತೆ ನಿಟ್ಟುಸಿರು ಬಿಡುತ್ತಾ ಬಿದ್ದಿದ್ದರು.॥1॥

ಮೂಲಮ್ - 2

ಸರ್ವೇ ತೇ ವಾನರಶ್ರೇಷ್ಠಾಃ ಸಸುಗ್ರೀವ ಮಹಾಬಲಾಃ ।
ಪರಿವಾರ್ಯ ಮಹಾತ್ಮಾನೌ ತಸ್ಥುಃ ಶೋಕಪರಿಪ್ಲುತಾಃ ॥

ಅನುವಾದ

ಮಹಾತ್ಮರಾದ ಅವರಿಬ್ಬರ ಸುತ್ತಲೂ ಮುತ್ತಿಕೊಂಡು ಸುಗ್ರೀವಾದಿ ಎಲ್ಲ ಶ್ರೇಷ್ಠ ಮಹಾಬಲಿ ವಾನರವೀರರು ಶೋಕದಲ್ಲಿ ಮುಳುಗಿದ್ದರು.॥2॥

ಮೂಲಮ್ - 3

ಏತಸ್ಮಿನ್ನಂತರೇ ರಾಮಃ ಪ್ರತ್ಯಬುಧ್ಯತ ವೀರ್ಯವಾನ್ ।
ಸ್ಥಿರತ್ವಾತ್ಸತ್ವ್ವಯೋಗಾಚ್ಚ ಶರೈಃ ಸಂದಾನಿತೋಽಪಿ ಸನ್ ॥

ಅನುವಾದ

ಆಗಲೇ ಪರಾಕ್ರಮಿಯಾದ ಶ್ರೀರಾಮನು ನಾಗಪಾಶದಿಂದ ಬಂಧಿತನಾಗಿದ್ದರೂ ಸ್ಥೈರ್ಯದಿಂದಲೂ, ಶಕ್ತಿಸಂಪನ್ನತೆಯಿಂದಲೂ ಮೂರ್ಛೆಯಿಂದ ಎಚ್ಚರಗೊಂಡನು.॥3॥

ಮೂಲಮ್ - 4

ತತೋ ದೃಷ್ಟ್ವಾ ಸರುಧಿರಂ ವಿಷಣ್ಣಂ ಗಾಢಮರ್ಪಿತಮ್ ।
ಭ್ರಾತರಂ ದೀನವದನಂ ಪರ್ಯದೇವಯದಾತುರಃ ॥

ಅನುವಾದ

ಸಹೋದರ ಲಕ್ಷ್ಮಣನು ಬಾಣಗಳಿಂದ ಅತ್ಯಂತ ಗಾಯಗೊಂಡು ರಕ್ತದಿಂದ ತೊಯ್ದುಹೋಗಿದ್ದನು. ಶ್ರೀರಾಮನು ದೀನನಾದವನಾದ ತಮ್ಮನ ಪಕ್ಕದಲ್ಲಿ ನೆಲದ ಮೇಲೆ ಕುಳಿತು ವಿಲಪಿಸತೊಡಗಿದನು.॥4॥

ಮೂಲಮ್ - 5

ಕಿಂ ನು ಮೇ ಸೀತಯಾ ಕಾರ್ಯಂ ಲಬ್ಧಯಾ ಜೀವಿತೇನ ವಾ ।
ಶಯಾನಂ ಯೋಽದ್ಯ ಪಶ್ಯಾಮಿ ಭ್ರಾತರಂ ಯುಧಿ ನಿರ್ಜಿತಮ್ ॥

ಅನುವಾದ

ಅಯ್ಯೋ ! ಇಂದು ಪರಾಜಿತನಾಗಿ ಯುದ್ಧರಂಗದಲ್ಲಿ ಬಿದ್ದಿರುವ ಲಕ್ಷ್ಮಣನನ್ನು ನೋಡಿ, ನನಗೆ ಸೀತೆಯು ದೊರಕಿದರೂ ನನಗೇನಾಗಬೇಕು? ಅಥವಾ ಬದುಕಿದ್ದರೂ ಏನು ಪ್ರಯೋಜನ.॥5॥

ಮೂಲಮ್ - 6

ಶಕ್ಯಾ ಸೀತಾಸಮಾ ನಾರೀ ಮರ್ತ್ಯಲೋಕೇ ವಿಚಿನ್ವತಾ ।
ನ ಲಕ್ಷ್ಮಣ ಸಮೋ ಭ್ರಾತಾ ಸಚಿವಃ ಸಾಂಪರಾಯಿಕಃ ॥

ಅನುವಾದ

ಮನುಷ್ಯ ಲೋಕದಲ್ಲಿ ಹುಡುಕಿದರೆ ನನಗೆ ಸೀತೆಯಂತಹ ಬೇರೆ ಹೆಂಡತಿ ಸಿಗಬಹುದು, ಆದರೆ ಲಕ್ಷ್ಮಣನಂತಹ ಸಹಾಯಕ, ಯುದ್ಧಕುಶಲಿ ಸಹೋದರ ಎಲ್ಲಿಯೂ ಸಿಗಲಾರನು.॥6॥

ಮೂಲಮ್ - 7

ಪರಿತ್ಯಕ್ಷ್ಯಾಮ್ಯಹಂ ಪ್ರಾಣಾನ್ವಾನರಾಣಾಂ ತು ಪಶ್ಯತಾಮ್ ।
ಯದಿ ಪಂಚತ್ವಮಾಪನ್ನಃ ಸುಮಿತ್ರಾನಂದವರ್ಧನಃ ॥

ಅನುವಾದ

ಸುಮಿತ್ರೆಯ ಆನಂದವನ್ನು ಹೆಚ್ಚಿಸುವ ಲಕ್ಷ್ಮಣನು ಅಸುನೀಗಿದರೆ ನಾನು ವಾನರರು ನೋಡುತ್ತಿರುವಂತೆಯೇ ನನ್ನ ಪ್ರಾಣಗಳನ್ನು ತ್ಯಜಿಸುವೆನು.॥7॥

ಮೂಲಮ್ - 8

ಕಿಂ ನು ವಕ್ಷ್ಯಾಮಿ ಕೌಸಲ್ಯಾಂ ಮಾತರಂ ಕಿಂ ನು ಕೈಕಯೀಮ್ ।
ಕಥಮಂಬಾಂ ಸುಮಿತ್ರಾಂ ಚ ಪುತ್ರ ದರ್ಶನ ಲಾಲಸಾಮ್ ॥

ಮೂಲಮ್ - 9

ವಿವತ್ಸಾಂ ವೇಪಮಾನಾಂ ಚ ವೇಪಂತೀಂ ಕುರರೀಮಿವ ।
ಕಥಮಾಶ್ಚಾಸಯಿಷ್ಯಾಮಿ ಯದಿ ಯಾಸ್ಯಾಮಿ ತಂ ವಿನಾ ॥

ಅನುವಾದ

ಲಕ್ಷ್ಮಣನಿಲ್ಲದೆ ನಾನು ಅಯೋಧ್ಯೆಗೆ ಹೋದರೆ ತಾಯಿ ಕೌಸಲ್ಯೆ ಮತ್ತು ಕೈಕೇಯಿ ಲಕ್ಷ್ಮಣನೆಲ್ಲಿ ಎಂದು ಕೇಳಿದರೆ ಏನೆಂದು ಉತ್ತರಿಸಲಿ? ಮಗನನ್ನು ಕಾಣಬೇಕೆಂದು ಉತ್ಸುಕತೆಯಿಂದಿರುವ, ಕರುವನ್ನು ಅಗಲಿದ ಹಸುವಿನಂತೆ ನಡಗುತ್ತಿರುವ, ಹೆಣ್ಣು ಕುರರ ಪಕ್ಷಿಯಂದೆ ಕೂಗುತ್ತಿರುವ ಮಾತೆ ಸುಮಿತ್ರೆಗೆ ಏನು ಹೇಳಲಿ? ಆಕೆಯನ್ನು ಹೇಗೆ ಸಮಾಧಾನಗೊಳಿಸಲಿ.॥8-9॥

ಮೂಲಮ್ - 10

ಕಥಂ ವಕ್ಷ್ಯಾಮಿ ಶತ್ರುಘ್ನಂ ಭರತಂ ಚ ಯಶಸ್ವಿನಮ್ ।
ಮಯಾ ಸಹ ವನಂ ಯಾತೋ ವಿನಾ ತೇನಾಹಮಾಗತಃ ॥

ಅನುವಾದ

ಯಶಸ್ವೀ ಭರತ-ಶತ್ರುಘ್ನರಲ್ಲಿ-ಲಕ್ಷ್ಮಣ ನನ್ನೊಂದಿಗೆ ವನಕ್ಕೆ ಬಂದಿದ್ದ, ಆದರೆ ನಾನು ಅವನನ್ನು ಅಲ್ಲೇ ಕಳೆದುಕೊಂಡು ಅವನಿಲ್ಲದೆ ಮರಳಿ ಬಂದಿರುವೆನು ಎಂದು ಹೇಗೆ ಹೇಳಲಿ.॥10॥

ಮೂಲಮ್ - 11

ಉಪಾಲಂಭಂ ನ ಶಕ್ಷ್ಯಾಮಿ ಸೋ ಮಂಬಾಸುಮಿತ್ರಯಾ ।
ಇಹೈವ ದೇಹಂ ತ್ಯಕ್ಷ್ಯಾಮಿ ನಹಿ ಜೀವಿತುಮುತ್ಸಹೇ ॥

ಅನುವಾದ

ಇಬ್ಬರೂ ತಾಯಂದಿರ ಸಹಿತ ಸುಮಿತ್ರಾದೇವಿಯ ನಿಂದನೆಯನ್ನು ನಾನು ಸಹಿಸಲಾರೆನು; ಆದ್ದರಿಂದ ಇಲ್ಲೇ ದೇಹತ್ಯಾಗ ಮಾಡುವೆನು. ಈಗ ಬದುಕುಳಿಯುವ ಉತ್ಸಾಹವೇ ನನ್ನಲ್ಲಿ ಇಲ್ಲ.॥11॥

ಮೂಲಮ್ - 12

ಧಿಙ್ಮಾಂ ದುಷ್ಕೃತಕರ್ಮಾಣಮನಾರ್ಯ ಯತ್ಕೃತೇ ಹ್ಯಸೌ ।
ಲಕ್ಷ್ಮಣಃ ಪತಿತಃ ಶೇತೇ ಶರತಲ್ಪೇ ಗತಾಸುವತ್ ॥

ಅನುವಾದ

ನನ್ನಂತಹ ದುಷ್ಕರ್ಮಿ ಮತ್ತು ಅನಾರ್ಯನಿಗೆ ಧಿಕ್ಕಾರವಿರಲಿ. ಅದರಿಂದಲೇ ಲಕ್ಷ್ಮಣನು ಸತ್ತಂತೆ ಬಾಣಗಳ ಶಯ್ಯೆಯಲ್ಲಿ ಮಲಗಿರುವನು.॥12॥

ಮೂಲಮ್ - 13

ತ್ವಂ ನಿತ್ಯಂ ಸವಿಷಣ್ಣಂ ಮಾಮಾಶ್ವಾಸಯಸಿ ಲಕ್ಷ್ಮಣ ।
ಗತಾಸುರ್ನಾದ್ಯ ಶಕ್ತೋಽಸಿ ಮಾಮಾರ್ತಮಭಿಭಾಷಿತುಮ್ ॥

ಅನುವಾದ

ಲಕ್ಷ್ಮಣ ! ನಾನು ಅತ್ಯಂತ ವಿಷಾದದಲ್ಲಿ ಮುಳುಗಿದ್ದಾಗ ನೀನೇ ಸದಾ ನನಗೆ ಆಶ್ವಾಸನ ಕೊಡುತ್ತಿದ್ದೆ. ಆದರೆ ಇಂದು ನೀನು ಪ್ರಾಣಗಳನ್ನು ತೊರೆದಾಗ ನನ್ನಂಥಹ ದುಃಖಿತನಲ್ಲಿ ಮಾತನಾಡಲೂ ಅಸಮರ್ಥನಾಗಿರುವೆ.॥13॥

ಮೂಲಮ್ - 14

ಯೇನಾದ್ಯ ಬಹವೋ ಯುದ್ಧೇ ನಿಹತಾ ರಾಕ್ಷಸಾಃ ಕ್ಷಿತೌ ।
ತಸ್ಯಾಮೇವಾದ್ಯ ಶೂರಸ್ತ್ವಂ ಶೇಷೇ ವಿನಿಹತಃ ಶನೈಃ ॥

ಅನುವಾದ

ತಮ್ಮ! ಯಾವ ರಣಭೂಮಿ ಯಲ್ಲಿ ಇಂದು ನೀನು ಅನೇಕ ರಾಕ್ಷಸರನ್ನು ಕೊಂದಿರುವೆಯೋ, ಅವರಲ್ಲಿ ಶೂರನಾಗಿದ್ದರೂ ನೀನು ಬಾಣಗಳಿಂದ ಹತನಾಗಿ ಮಲಗಿ ಬಿಟ್ಟಿರುವೆ.॥14॥

ಮೂಲಮ್ - 15

ಶಯಾನಃ ಶರತಲ್ಪೇಽಸ್ಮಿನ್ ಸಶೋಣಿತ ಪರಿಸ್ರುತಃ ।
ಶರಭೂತಸ್ತತೋ ಭಾಸಿ ಭಾಸ್ಕರೋಽಸ್ತಮಿವ ವ್ರಜನ್ ॥

ಅನುವಾದ

ಶರತಲ್ಪದಲ್ಲಿ ರಕ್ತದಿಂದ ತೊಯ್ದುಹೋಗಿ ಬಿದ್ದಿರುವೆ, ಬಾಣಗಳಿಂದ ವ್ಯಾಪ್ತನಾಗಿ ಅಸ್ತಾಚಲಕ್ಕೆ ಹೋಗುವ ಸೂರ್ಯನಂತೆ ಪ್ರಕಾಶಿಸುತ್ತಿರುವೆ.॥15॥

ಮೂಲಮ್ - 16

ಬಾಣಾಭಿಹತಮರ್ಮತ್ವಾನ್ನ ಶಕ್ನೋಷೀಹ ಭಾಷಿತುಮ್ ।
ರುಜಾ ಚಾಬ್ರುವತೋಯಸ್ಯ ದೃಷ್ಟಿ ರಾಗೇಣ ಸೂಚ್ಯತೇ ॥

ಅನುವಾದ

ಬಾಣಗಳಿಂದ ನಿನ್ನ ಮರ್ಮಸ್ಥಳ ವಿದೀರ್ಣವಾದ್ದರಿಂದ ನೀನು ಈಗ ಮಾತನಾಡಲಾರೆ; ನೀನು ಮಾತನಾಡದಿದ್ದರೂ ನಿನ್ನ ಕೆಂಪಾದ ಕಣ್ಣುಗಳಿಂದ ನಿನ್ನ ಮಾರ್ಮಿಕಪೀಡೆ ಸೂಚಿಸುತ್ತದೆ.॥16॥

ಮೂಲಮ್ - 17

ಯಥೈವ ಮಾಂ ವನಂ ಯಾಂತಮನುಯಾತೋ ಮಹಾದ್ಯುತಿಃ ।
ಅಹಮಪ್ಯನುಯಾಸ್ಯಾಮಿ ತಥೈವೈನಂ ಯಮಕ್ಷಯಮ್ ॥

ಅನುವಾದ

ವನದ ಯಾತ್ರೆ ಮಾಡುವಾಗ ಮಹಾತೇಜಸ್ವೀ ಲಕ್ಷ್ಮಣನು ಹಿಂದೆ-ಹಿಂದೆ ಬಂದಿದ್ದನು, ಹಾಗೆಯೇ ನಾನೂ ಯಮಲೋಕಕ್ಕೆ ಅವನನ್ನು ಅನುಸರಿಸುವೆನು.॥17॥

ಮೂಲಮ್ - 18

ಇಷ್ಟಬಂಧುಜನೋ ನಿತ್ಯಂ ಮಾಂ ಚ ನಿತ್ಯಮನುವ್ರತಃ ।
ಇಮಾಮದ್ಯ ಗತೋಽವಸ್ಥಾಂ ಮಮಾನಾರ್ಯಸ್ಯ ದುರ್ನಯೈಃ ॥

ಅನುವಾದ

ನನ್ನ ಪ್ರಿಯಬಂಧುಗಳು ನನ್ನಲ್ಲಿ ಅನುರಾಗ ಭಕ್ತಿಭಾವವಿಟ್ಟಂತೆ ಲಕ್ಷ್ಮಣನಲ್ಲಿ ಇಡುತ್ತಿದ್ದರು. ಆ ಲಕ್ಷ್ಮಣನು ಇಂದು ಅನಾರ್ಯಾನಾದ ನನ್ನನ್ನು ದುರ್ನಿತೀಯ ಕಾರಣ ಈ ಸ್ಥಿತಿಗೆ ತಲುಪಿಸಿರುವನು.॥18॥

ಮೂಲಮ್ - 19

ಸುರುಷ್ಟೇನಾಪಿ ವೀರೇಣ ಲಕ್ಷ್ಮಣೇನ ನ ಸಂಸ್ಮರೇ ।
ಪರುಷಂ ವಿಪ್ರಿಯಂ ಚಾಪಿ ಶ್ರಾವಿತಂ ತು ಕದಾಚನ ॥

ಅನುವಾದ

ಲಕ್ಷ್ಮಣನು ಅತ್ಯಂತ ಕುಪಿತನಾಗಿದ್ದರೂ ನನಗೆ ಎಂದೂ ಯಾವುದೇ ಕಠೋರ, ಅಪ್ರಿಯ ಮಾತನ್ನು ಹೇಳದ ಪ್ರಸಂಗವು ನನ್ನ ಸ್ಮರಣೆಯಲ್ಲಿ ಇಲ್ಲ.॥19॥

ಮೂಲಮ್ - 20

ವಿಸಸರ್ಜೈಕವೇಗೇನ ಪಂಚ ಬಾಣಶತಾನಿ ಯಃ ।
ಇಷ್ವಸ್ರೇಷ್ವಧಿಕಸ್ತಸ್ಮಾತ್ ಕಾರ್ತವೀರ್ಯಾಚ್ಚ ಲಕ್ಷ್ಮಣಃ ॥

ಅನುವಾದ

ಲಕ್ಷ್ಮಣನು ಒಂದೇ ವೇಗದಿಂದ ಐದುನೂರು ಬಾಣಗಳ ಮಳೆಗರೆಯುತ್ತಿದ್ದನು. ಇದರಿಂದ ಧನುರ್ವಿದ್ಯೆಯಲ್ಲಿ ಕಾರ್ತವೀರ್ಯ ಅರ್ಜುನನ್ನು ಮೀರಿಸುತ್ತಿದ್ದನು.॥20॥

ಮೂಲಮ್ - 21

ಅಸೈರಸ್ತ್ರಾಣಿ ಯೋ ಹನ್ಯಾಚ್ಛಕ್ರಸ್ಯಾಪಿ ಮಹಾತ್ಮನಃ ।
ಸೋಽಯಮುರ್ವ್ಯಾಂ ಹತಃ ಶೇತೇ ಮಹಾರ್ಹಶಯನೋಚಿತಃ ॥

ಅನುವಾದ

ತನ್ನ ಅಸ್ತ್ರಗಳಿಂದ ಮಹಾತ್ಮಾ ಇಂದ್ರನ ಅಸ್ತ್ರಗಳನ್ನು ಕತ್ತರಿಸಬಲ್ಲವನೋ, ಅಮೂಲ್ಯ ಶಯ್ಯೆಯಲ್ಲಿ ಮಲಗುತ್ತಿದ್ದನೋ, ಆ ಲಕ್ಷ್ಮಣ ಇಂದು ಸತ್ತುಹೋಗಿ ಭೂಮಿಯಲ್ಲಿ ಮಲಗಿರುವನು.॥21॥

ಮೂಲಮ್ - 22

ತತ್ತು ಮಿಥ್ಯಾ ಪ್ರಲಪ್ತಂ ಮಾಂ ಪ್ರಧಕ್ಷ್ಯತಿನ ಸಂಶಯಃ ।
ಯನ್ಮಯಾ ನ ಕೃತೋ ರಾಜಾ ರಾಕ್ಷಸಾನಾಂ ವಿಭೀಷಣಃ ॥

ಅನುವಾದ

ವಿಭೀಷಣನನ್ನು ನಾನು ರಾಕ್ಷಸರ ರಾಜನನ್ನಾಗಿಸದೇ ಹೋದೆ; ಅದರಿಂದ ನನ್ನ ಆ ಸುಳ್ಳುಪ್ರಲಾಪ ನನ್ನನ್ನು ಸದಾ ಸುಡುತ್ತಿರಬಹುದು; ಇದರಲ್ಲಿ ಸಂಶಯವೇ ಇಲ್ಲ.॥22॥

ಮೂಲಮ್ - 23

ಅಸ್ಮಿನ್ಮುಹೂರ್ತೇ ಸುಗ್ರೀವ ಪ್ರತಿಯಾತುಮಿತೋಽರ್ಹಸಿ ।
ಮತ್ವಾ ಹೀನಂ ಮಯಾ ರಾಜನ್ ರಾವಣೋಽಭಿಭವಿಷ್ಯತಿ ॥

ಅನುವಾದ

ವಾನರರಾಜ ಸುಗ್ರೀವನೇ ! ನೀನು ಈಗಲೇ ಇಲ್ಲಿಂದ ಮರಳಿ ಹೋಗು; ಏಕೆಂದರೆ ನಾನಿಲ್ಲದೆ ಅಸಹಾಯಕನೆಂದು ತಿಳಿದು ರಾವಣನು ನಿನ್ನನ್ನು ತಿರಸ್ಕರಿಸುವನು.॥23॥

ಮೂಲಮ್ - 24

ಅಂಗದಂ ತು ಪುರಸ್ಕೃತ್ಯ ಸಸೈನ್ಯಂ ಸಪರಿಚ್ಛದಮ್ ।
ಸಾಗರಂ ತರ ಸುಗ್ರೀವ ನೀಲೇನ ಚ ನಲೇನ ಚ ॥

ಅನುವಾದ

ಮಿತ್ರ ಸುಗ್ರೀವನೇ! ಸೈನ್ಯ ಮತ್ತು ಸಾಮಗ್ರಿಗಳೊಂದಿಗೆ ಅಂಗದನನ್ನು ಮುಂದಿಟ್ಟು ಕೊಂಡು ನಳ, ನೀಲರೊಂದಿಗೆ ಸಮುದ್ರ ದಾಟಿ ಹೋಗು.॥24॥

ಮೂಲಮ್ - 25

ಕೃತಂ ಹಿ ಸುಮಹತ್ಕರ್ಮ ಯದನ್ಯೈರ್ದುಷ್ಕರಂ ರಣೇ ।
ಋಕ್ಷರಾಜೇನ ತುಷ್ಯಾಮಿ ಗೋಲಾಂಗೂಲಾಧಿಪೇನ ಚ ॥

ಅನುವಾದ

ಗೋಲಾಂಗುಲರ ಒಡೆಯ ಗವಾಕ್ಷ ಮತ್ತು ಋಕ್ಷರಾಜ ಜಾಂಬವಂತರಿಂದ ತುಂಬಾ ಸಂತುಷ್ಟನಾಗಿದ್ದೇನೆ. ಬೇರೆಯವರಿಗೆ ಅತ್ಯಂತ ದುಷ್ಕರವಾದ ಮಹಾ ಪುರಾಷಾರ್ಥ ವನ್ನು ನೀವು ಯುದ್ಧದಲ್ಲಿ ತೋರಿಸಿರುವಿರಿ.॥25॥

ಮೂಲಮ್ - 26

ಅಂಗದೇನ ಕೃತಂ ಕರ್ಮ ಮೈಂದೇನ ದ್ವಿವಿದೇನ ಚ ।
ಯುದ್ಧಂ ಕೇಸರಿಣಾ ಸಂಖ್ಯೇ ಘೋರಂ ಸಂಪಾತಿನಾ ಕೃತಮ್ ॥

ಅನುವಾದ

ಅಂಗದ, ಮೈಂದ, ದ್ವಿವಿದರೂ ಕೂಡಾ ಮಹಾ ಪರಾಕ್ರಮ ಪ್ರಕಟಿಸಿ ರುವರು. ಕೇಸರಿ ಮತ್ತು ಸಂಪಾತಿಯೂ ರಣರಂಗದಲ್ಲಿ ಘೋರ ಯುದ್ಧಮಾಡಿರುವರು.॥26॥

ಮೂಲಮ್ - 27

ಗವಯೇನ ಗವಾಕ್ಷೇಣ ಶರಭೇಣ ಗಜೇನ ಚ ।
ಅನ್ಯೈಶ್ಚ ಹರಿಭಿರ್ಯುದ್ಧಂ ಮದರ್ಥೇತ್ಯಕ್ತ ಜೀವಿತೈಃ ॥

ಅನುವಾದ

ಗವಯ, ಗವಾಕ್ಷ, ಶರಭ, ಗಜ ಹಾಗೂ ಇತರ ವಾನರೂ ಕೂಡ ನನಗಾಗಿ ಪ್ರಾಣಗಳ ಹಂಗನ್ನು ತೊರೆದು ಯುದ್ಧಮಾಡಿದ್ದರು.॥27॥

ಮೂಲಮ್ - 28

ನ ಚಾತಿಕ್ರಮಿತುಂ ಶಕ್ಯಂ ದೇವಂ ಸುಗ್ರೀವ ಮಾನುಷೈಃ ।
ಯತ್ತು ಶಕ್ಯಂ ವಯಸ್ಯೇನ ಸುಹೃದಾ ಚ ಪರಂಮಮ ॥

ಮೂಲಮ್ - 29½

ಕೃತಂ ಸುಗ್ರೀವ ತತ್ಸರ್ವಂ ಭವತಾ ಧರ್ಮಭೀರುಣಾ ।
ಮಿತ್ರ ಕಾರ್ಯಂ ಕೃತಮಿದಂ ಭವದ್ಬಿರ್ವಾನರರ್ಷಭಾಃ ॥
ಅನುಜ್ಞಾ ತಾ ಮಯಾ ಸರ್ವೇ ಯಥೇಷ್ಟಂ ಗಂತು ಮರ್ಹಥ ।

ಅನುವಾದ

ಸುಗ್ರೀವ! ಮನುಷ್ಯರಿಗೆ ದೈವ ವಿಧಾನವನ್ನು ಮೀರುವುದು ಅಶಕ್ಯವಾಗಿದೆ. ನನ್ನ ಪರಮ ಮಿತ್ರ ಅಥವಾ ಉತ್ತಮ ಸುಹೃದವಾದ್ದರಿಂದ ನಿನ್ನಂತಹ ಧರ್ಮ ಭೀರು ಏನೆಲ್ಲ ಮಾಡಬಲ್ಲನೋ ಅದೆಲ್ಲವನ್ನು ನೀನು ಮಾಡಿರುವೆ. ವಾನರ ಶ್ರೇಷ್ಠನೇ! ನೀವೆಲ್ಲರೂ ಸೇರಿ ಮಿತ್ರನ ಈ ಕಾರ್ಯವನ್ನು ನೆರವೇರಿಸುವಿರಿ. ನೀವೆಲ್ಲರೂ ಎಲ್ಲಿಗೆ ಹೋಗಲು ಬಯಸುವಿರೋ ಅಲ್ಲಿಗೆ ಹೋಗಿ ಎಂದು ನಾನು ಆಜ್ಞಾಪಿಸುತ್ತೇನೆ.॥28-29॥

ಮೂಲಮ್ - 30

ಶುಶ್ರುವುಸ್ತಸ್ಯ ಯೇ ಸರ್ವೇ ವಾನರಾಃ ಪರಿದೇವಿತಮ್ ॥

ಮೂಲಮ್ - 31

ವರ್ತಯಾಂಚಕ್ರಿರೇಽಶ್ರೂಣಿ ನೇತ್ರೈಃ ಕೃಷ್ಣೇತರೇಕ್ಷಣಾಃ॥

ಅನುವಾದ

ಭಗವಾನ್ ಶ್ರೀರಾಮನ ಈ ವಿಲಾಪವನ್ನು ಕೇಳಿ, ಪಿಂಗಾಕ್ಷರಾದ ವಾನರರು ಕಣ್ಣೀರು ಕೋಡಿಯನ್ನೇ ಹರಿಸಿದರು.॥30-31॥

ಮೂಲಮ್ - 32

ತತಃ ಸರ್ವಾಣ್ಯನೀಕಾನಿ ಸ್ಥಾಪಯಿತ್ವಾ ವಿಭೀಷಣಃ ।
ಆಜಗಾಮ ಗದಾಪಾಣಿಸ್ತ್ವರಿತಂ ಯತ್ರ ರಾಘವಃ ॥

ಅನುವಾದ

ಅನಂತರ ಸಮಸ್ತ ಸೈನ್ಯವನ್ನು ವ್ಯವಸ್ಥಿತಗೊಳಿಸಿ, ಗದಾಪಾಣಿಯಾದ ವಿಭೀಷಣನು ಶ್ರೀರಾಮಚಂದ್ರನಿದ್ದಲ್ಲಿಗೆ ಕೂಡಲೇ ಬಂದನು.॥32॥

ಮೂಲಮ್ - 33

ತಂ ದೃಷ್ಟ್ವಾ ತ್ವರಿತಂ ಯಾಂತಂ ನೀಲಾಂಜನಚಯೋಪಮಮ್ ।
ವಾನರಾ ದುದ್ರುವುಃ ಸರ್ವೇ ಮನ್ಯಮಾನಾಸ್ತು ರಾವಣಿಮ್ ॥

ಅನುವಾದ

ಕಪ್ಪಾದ ಇದ್ದಲು ರಾಶಿಯಂತಿದ್ದ ಕೃಷ್ಣಕಾಂತಿಯ ವಿಭೀಷಣನು ಅವಸರವಾಗಿ ಬಂದಿರುವುದನ್ನು ನೋಡಿ, ಅವನನ್ನು ರಾವಣಪುತ್ರ ಇಂದ್ರಜಿತುವೆಂದು ತಿಳಿದು ವಾನರರು ಚಲ್ಲಾಪಿಲ್ಲಿಯಾಗಿ ಓಡತೊಡಗಿದರು.॥33॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥49॥