०४६ रावणेन इन्द्रजित्प्रशंसनम्

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣರು ಮೂರ್ಛಿರಾದುದನ್ನು ನೋಡಿ ವಾನರರ ಶೋಕ, ಇಂದ್ರಜಿತುವಿನ ಹರ್ಷೋದ್ಗಾರ, ವಿಭೀಷಣನಿಂದ ಸುಗ್ರೀವನ ಸಾಂತ್ವನ, ಇಂದ್ರಜಿತುವಿನ ಶತ್ರುವಧೆಯ ವೃತ್ತಾಂತವನ್ನು ತಿಳಿದ ರಾವಣನಿಂದ ಪುತ್ರನಿಗೆ ಅಭಿನಂದನೆ

ಮೂಲಮ್ - 1

ತತೋ ದ್ಯಾಂ ಪೃಥಿವೀಂ ಚೈವ ವೀಕ್ಷಮಾಣಾ ವನೌಕಸಃ ।
ದದೃಶುಃ ಸಂತತೌ ಬಾಣೈರ್ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಶ್ರೀರಾಮನ ಅಪ್ಪಣೆಯಂತೆ ವಾನರವೀರರು ಪೃಥ್ವಿ, ಆಕಾಶವನ್ನು ಜಾಲಾಡಿಸಿ ಮರಳಿದಾಗ ಅವರು ಶ್ರೀರಾಮ- ಲಕ್ಷ್ಮಣರು ಬಾಣಗಳಿಂದ ಚುಚ್ಚಲ್ಪಟ್ಟವರಾಗಿ ಕಂಡರು.॥1॥

ಮೂಲಮ್ - 2

ವೃಷ್ಟ್ವೇವೋಪರತೇ ದೇವೇ ಕೃತಕರ್ಮಣಿ ರಾಕ್ಷಸೇ ।
ಆಜಗಾಮಾಥ ತಂ ದೇಶಂ ಸಸುಗ್ರೀವೋ ವಿಭೀಷಣಃ ॥

ಅನುವಾದ

ಮಳೆಗರೆದು ದೇವೇಂದ್ರನು ಶಾಂತನಾಗುವಂತೆ ಆ ರಾಕ್ಷಸ ಇಂದ್ರಜಿತು ತನ್ನ ಕಾರ್ಯವನ್ನು ಮಾಡಿ ಪೂರೈಸಿದಾಗ ಸುಗ್ರೀವಸಹಿತ ವಿಭೀಷಣನೂ ಅಲ್ಲಿಗೆ ಬಂದನು.॥2॥

ಮೂಲಮ್ - 3

ನೀಲಶ್ಚದ್ವಿವಿದೋ ಮೈಂದಃ ಸುಷೇಣಃ ಕುಮುದೋಂಗದಃ ।
ತೂರ್ಣಂ ಹನುಮತಾ ಸಾರ್ಧಮನ್ವಶೋಚಂತ ರಾಘವೌ ॥

ಅನುವಾದ

ಹನುಮಂತ ನೀಲ, ದ್ವಿವಿದ, ಮೈಂದ, ಸುಷೇಣ, ಕುಮುದ, ಅಂಗದ ಮೊದಲಾದವರೂ ಶ್ರೀರಘುನಾಥನಿಗಾಗಿ ಶೋಕಿಸತೊಡಗಿದರು.॥3॥

ಮೂಲಮ್ - 4

ಅಚೇಷ್ಟೌ ಮಂದನಿಃಶ್ವಾಸೌ ಶೋಣಿತೇನ ಪರಿಪ್ಲುತೌ ।
ಶರಜಾಲಾಚಿತೌ ಸ್ತಬ್ಧೌ ಶಯಾನೌ ಶರತಲ್ಪಗೌ ॥

ಅನುವಾದ

ಆಗ ಅವರಿಬ್ಬರು ಸಹೋದರರು ಹಸಿವಿನಿಂದ ವ್ಯಾಕುಲರಾಗಿ ಶರಶಯ್ಯೆಯಲ್ಲಿ ಬಿದ್ದಿದ್ದರು. ಬಾಣಗಳಿಂದ ಅವರ ಇಡೀ ಶರೀರ ನೋಯುತ್ತಿತ್ತು. ಅವರು ನಿಶ್ಚಲರಾಗಿ ನಿಧಾನವಾಗಿ ಉಸಿರಾಡುತ್ತಿದ್ದರು. ಅವರ ಚೇಷ್ಟೆಗಳೆಲ್ಲ ನಿಂತು ಹೋಗಿದ್ದವು.॥4॥

ಮೂಲಮ್ - 5

ನಿಃಶ್ವಸಂತೌ ಯಥಾ ಸರ್ಪೌ ನಿಶ್ಚೇಷ್ಟೌ ಮಂದವಿಕ್ರಮೌ ।
ರುಧಿರಸ್ರಾವದಿಗ್ಧಾಂಗೌ ತಪನೀಯಾವಿವ ಧ್ವಜೌ ॥

ಅನುವಾದ

ಸರ್ಪಗಳಂತೆ ನಿಟ್ಟುಸಿರುಬಿಡುತ್ತಾ ನಿಶ್ಚೇಷ್ಟಿತರಾಗಿ ಬಿದ್ದಿರುವ ಅವರ ಪರಾಕ್ರಮ ಮಂಕಾಗಿತ್ತು. ಅವರ ಇಡೀ ದೇಹಗಳು ರಕ್ತದಿಂದ ತೋಯ್ದು ಹೋಗಿದ್ದವು. ಮುರಿದುಬಿದ್ದ ಎರಡು ಸುವರ್ಣಧ್ವಜಗಳಂತೆ ಅವರು ಕಾಣುತ್ತಿದ್ದರು.॥5॥

ಮೂಲಮ್ - 6

ತೌ ವೀರಶಯನೇ ವೀರೌ ಶಯಾನೌ ಮಂದಚೇಷ್ಟಿತೌ ।
ಯೂಥಪೈಃ ಸ್ವೈಃ ಪರಿವೃತೌ ಭಾಷ್ಪವ್ಯಾಕುಲಲೋಚನೈಃ ॥

ಅನುವಾದ

ವೀರ ಶಯ್ಯೆಯಲ್ಲಿ ಮಲಗಿದ್ದ, ಚೇಷ್ಟಾಹೀನರಾದ ಆ ವೀರರು, ಕಣ್ಣೀರು ತುಂಬಿದ ವಾನರ ಸೇನಾನಾಯಕರಿಂದ ಸುತ್ತುವರೆದಿದ್ದರು.॥6॥

ಮೂಲಮ್ - 7

ರಾಘವೌ ಪತಿತೌ ದೃಷ್ಟ್ವಾ ಶರಜಾಲಸಮಾವೃತೌ ।
ಬಭೂವುರ್ವ್ಯಥಿತಾಃ ಸರ್ವೇ ವಾನರಾಃ ಸವಿಭೀಷಣಾಃ ॥

ಅನುವಾದ

ಬಾಣ ಸಮೂಹದಿಂದ ಆವೃತರಾಗಿ ನೆಲದಲ್ಲಿ ಬಿದ್ದಿರುವ ಇಬ್ಬರು ರಘುವಂಶಿಯರನ್ನು ನೋಡಿ ವಿಭೀಷಣಸಹಿತ ಎಲ್ಲ ವಾನರರು ದುಃಖಿತರಾದರು.॥7॥

ಮೂಲಮ್ - 8

ಅಂತರಿಕ್ಷಂ ನಿರೀಕ್ಷಂತೋ ದಿಶಃ ಸರ್ವಾಶ್ಚ ವಾನರಾಃ ।
ನ ಚೈನಂ ಮಾಯಯಾ ಛನ್ನಂ ದದೃಶೂ ರಾವಣಿಂ ರಣೇ ॥

ಅನುವಾದ

ಸಮಸ್ತ ವಾನರರು ಎಲ್ಲ ದಿಕ್ಕುಗಳನ್ನು ಆಕಾಶವನ್ನು ಪದೇ ಪದೇ ನೋಡುತ್ತಿದ್ದರೂ ಮಾಯೆಯಿಂದ ಅದೃಶ್ಯನಾದ ಇಂದ್ರಜತುವನ್ನು ಮಾತ್ರ ಎಲ್ಲಿಯೂ ನೋಡಲಿಲ್ಲ.॥8॥

ಮೂಲಮ್ - 9

ತಂ ತು ಮಾಯಾಪ್ರತಿಚ್ಛನ್ನಂ ಮಾಯಯೈವ ವಿಭೀಷಣಃ ।
ವೀಕ್ಷಮಾಣೋ ದದರ್ಶಾಗ್ರೇ ಭ್ರಾತುಃ ಪುತ್ರಮವಸ್ಥಿತಮ್ ।
ತಮಪ್ರತಿಮಕರ್ಮಾಣಮಪ್ರತಿದ್ವಂದ್ವಮಾಹವೇ ॥

ಅನುವಾದ

ಆಗ ವಿಭೀಷಣನು ಮಾಯೆಯಿಂದಲೇ ನೋಡಿದಾಗ, ಮಾಯೆಯಿಂದ ಅಡಗಿದ್ದ, ಅನುಪಮ ಕರ್ಮಿ, ಯುದ್ಧದಲ್ಲಿ ಯಾರಿಂದಲೂ ಗೆಲ್ಲಲಾರದೆ ತನ್ನಣ್ಣನ ಮಗನನ್ನು ಎದುರಿಗೆ ನೋಡಿದನು.॥9॥

ಮೂಲಮ್ - 10

ದದರ್ಶಾಂತರ್ಹಿತಂ ವೀರಂ ವರದಾನಾದ್ ವಿಭೀಷಣಃ ।
ತೇಜಸಾ ಯಶಸಾ ಚೈವ ವಿಕ್ರಮೇಣ ಚ ಸಂಯುತಃ ॥

ಅನುವಾದ

ತೇಜಸ್ಸು, ಯಶಸ್ಸು, ಪರಾಕ್ರಮಗಳಿಂದ ಕೂಡಿದ ವಿಭೀಷಣನು ಮಾಯೆಯಿಂದ ವರ ಪ್ರಭಾವದಿಂದ ಅಡಗಿದ್ದ ವೀರ ಇಂದ್ರಜಿತುವನ್ನು ನೋಡಿದನು.॥10॥

ಮೂಲಮ್ - 11

ಇಂದ್ರಜಿತ್ತ್ವಾತ್ಮನಃ ಕರ್ಮ ತೌ ಶಯಾನೌ ಸಮೀಕ್ಷ್ಯ ಚ ।
ಉವಾಚ ಪರಮಪ್ರೀತೋ ಹರ್ಷಯನ್ ಸರ್ವರಾಕ್ಷಸಾನ್ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ಯುದ್ಧಭೂಮಿಯಲ್ಲಿ ಮಲಗಿರುವುದನ್ನು ನೋಡಿ ಇಂದ್ರಜಿತುವಿಗೆ ಭಾರೀ ಸಂತೋಷವಾಯಿತು. ಎಲ್ಲ ರಾಕ್ಷಸರ ಹರ್ಷವನ್ನು ಹೆಚ್ಚಿಸುತ್ತಾ ಅವನು ತನ್ನ ಪರಾಕ್ರಮವನ್ನು ವರ್ಣಿಸತೊಡಗಿದನು.॥11॥

ಮೂಲಮ್ - 12

ದೂಷಣಸ್ಯ ಚ ಹಂತಾರೌ ಖರಸ್ಯ ಚ ಮಹಾಬಲೌ ।
ಸಾದಿತೌ ಮಾಮಕೈರ್ಬಾಣೈರ್ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಖರ-ದೂಷಕರನ್ನು ವಧಿಸಿರುವ ಅವನನ್ನು ನೋಡಿರಿ. ಆ ಮಹಾಬಲಿ ಶ್ರೀರಾಮ-ಲಕ್ಷ್ಮಣರು ನನ್ನ ಬಾಣಗಳಿಂದ ಸುತ್ತುಹೋದರು.॥12॥

ಮೂಲಮ್ - 13

ನೇಮೌ ಮೋಕ್ಷಯಿತುಂ ಶಕ್ಯಾವೇತಸ್ಮಾದಿಷು ಬಂಧನಾತ್ ।
ಸರ್ವೈರಪಿ ಸಮಾಗಮ್ಯ ಸರ್ಷಿಸಘೈಃ ಸುರಾಸುರೈಃ ॥

ಅನುವಾದ

ಸಮಸ್ತ ಮುನಿಗಳು ಎಲ್ಲ ದೇವತೆಗಳೊಂದಿಗೆ ಬಂದರೂ ಜೊತೆಗೆ ಅಸುರರು ಬಂದರೂ ಈ ಬಾಣ ಬಂಧನದಿಂದ ಇವರಿಬ್ಬರನ್ನು ಬಿಡಿಸಲಾರರು.॥13॥

ಮೂಲಮ್ - 14

ಯತ್ಕ್ರತೇ ಚಿಂತಯಾನಸ್ಯ ಶೋಕಾರ್ತಸ್ಯ ಪಿತುರ್ಮಮ ।
ಅಸ್ಪಷ್ಟ್ವಾ ಶಯನಂ ಗಾತ್ರೈಸ್ತ್ರಿಯಾಮಾಯಾತಿ ಶರ್ವರೀ ॥

ಮೂಲಮ್ - 15

ಕೃತ್ನೇಯಂ ಯತ್ಕೃತೇ ಲಂಕಾ ನದೀ ವರ್ಷಾಸ್ವಿವಾಕುಲಾ ।
ಸೋಽಯಂ ಮೂಲಹರೋಽನರ್ಥಃ ಸರ್ವೇಷಾಂ ಶಮಿತೋ ಮಯಾ ॥

ಅನುವಾದ

ಯಾವುದರ ಕುರಿತಾದ ಚಿಂತೆ-ಶೋಕದಿಂದ ಪೀಡಿತರಾದ ನನ್ನ ತಂದೆಯವರು ಇಡೀ ರಾತ್ರೆ ಮಲಗದೇ ಇರುತ್ತಿದ್ದರೋ, ಯಾವುದರ ಕಾರಣದಿಂದ ಈ ಲಂಕೆಯು ಮಳೆಗಾಲದ ನದಿಯಂತೆ ದುಃಖಿತವಾಗಿತ್ತೋ, ನಮ್ಮೆಲ್ಲರ ಬೇರನ್ನೇ ಕತ್ತರಿಸಲು ಮುಂದಾದ ಆ ಅನರ್ಥವನ್ನು ಇಂದು ನಾನು ಶಾಂತಗೊಳಿಸಿದೆ.॥14-15॥

ಮೂಲಮ್ - 16

ರಾಮಸ್ಯ ಲಕ್ಷ್ಮಣಸ್ಯೈವ ಸರ್ವೇಷಾಂ ಚ ವನೌಕಸಾಮ್ ।
ವಿಕ್ರಮಾ ನಿಷ್ಪಲಾಃ ಸರ್ವೇ ಯಥಾ ಶರದಿ ತೋಯದಾಃ ॥

ಅನುವಾದ

ಶರದ್ಋತುವಿನ ಮೋಡಗಳು ನೀರನ್ನು ಸುರಿಸದೆ ವ್ಯರ್ಥವಾಗುವಂತೆ, ಶ್ರೀರಾಮ-ಲಕ್ಷ್ಮಣ ಹಾಗೂ ಸಮಸ್ತ ವಾನರರ ಎಲ್ಲ ಬಲ-ಪರಾಕ್ರಮಗಳು ನಿಷ್ಪಲವಾಗಿ ಹೋಯಿತು.॥16॥

ಮೂಲಮ್ - 17

ಏವಮುಕ್ತ್ವಾತು ತಾನ್ಸರ್ವಾನ್ ರಾಕ್ಷಸಾನ್ಪರಿಪಶ್ಯತಃ ।
ಯೂಥಪಾನಪಿ ತಾನ್ಸರ್ವಾಂಸ್ತಾಡಯತ್ ಸ ಚ ರಾವಣಿಃ ॥

ಅನುವಾದ

ತನ್ನ ಸುತ್ತಲೂ ಇದ್ದ ರಾಕ್ಷಸರಲ್ಲಿ ಹೀಗೆ ಹೇಳಿ ಇಂದ್ರಜಿತು ವಾನರರ ಸುಪ್ರಸಿದ್ಧ ಆ ಸೇನಾಪತಿಗಳನ್ನು ಪ್ರಹರಿಸಲು ಪ್ರಾರಂಭಿಸಿದನು.॥17॥

ಮೂಲಮ್ - 18

ನೀಲಂ ನವಭಿರಾಹತ್ಯ ಮೈಂದಂ ಚ ದ್ವಿವಿದಂ ತಥಾ ।
ತ್ರಿಭಿಸ್ತ್ರಿಭಿರಮಿತ್ರಘ್ನಸ್ತತಾಪ ಪ್ರರಮೇಷುಭಿಃ ॥

ಅನುವಾದ

ಆ ಶತ್ರುಸೂದನ ನಿಶಾಚರ ವೀರನು ಒಂಭತ್ತು ಬಾಣಗಳಿಂದ ನೀಲನನ್ನು, ಮೂರು ಮೂರು ಬಾಣಗಳಿಂದ ಮೈಂದ, ದ್ವಿವಿದರನ್ನು ಪರಿತಾಪಗೊಳಿಸಿದನು.॥18॥

ಮೂಲಮ್ - 19

ಜಾಂಬವಂತಂ ಮಹೇಷ್ವಾಸೋ ವಿದ್ಧ್ವಾ ಬಾಣೇನ ವಕ್ಷಸಿ ।
ಹನೂಮತೋ ವೇಗವತೋ ವಿಸಸರ್ಜ ಶರಾನ್ದಶ ॥

ಅನುವಾದ

ಮಹಾಧನುರ್ಧರ ಇಂದ್ರಜಿತು ಜಾಂಬವಂತರ ಎದೆಗೆ ಒಂದು ಬಾಣವನ್ನು ಪ್ರಯೋಗಿಸಿ, ಹನುಮಂತನಿಗೂ ಹತ್ತು ಬಾಣಗಳನ್ನು ಪ್ರಯೋಗಿಸಿದನು.॥19॥

ಮೂಲಮ್ - 20

ಗವಾಕ್ಷಂ ಶರಭಂ ಚೈವ ತಾವಪ್ಯಮಿತವಿಕ್ರಮೌ ।
ದ್ವಾಭ್ಯಾಂ ದ್ವಾಭ್ಯಾಂ ಮಹಾವೇಗೋ ವಿವ್ಯಾಧ ಯುಧಿ ರಾವಣಿಃ ॥

ಅನುವಾದ

ಆಗ ರಾವಣಕುಮಾರನ ವೇಗ ಬಹಳ ಹೆಚ್ಚಿತ್ತು. ಅವನು ರಣರಂಗದಲ್ಲಿ ಅಮಿತ ಪರಾಕ್ರಮಿ ಗವಾಕ್ಷ ಮತ್ತು ಶರಭರನ್ನು ಎರಡೆರಡು ಬಾಣಗಳನ್ನೂ ಹೂಡಿ ಗಾಯಗೊಳಿಸಿದನು.॥20॥

ಮೂಲಮ್ - 21

ಗೋಲಾಂಗೂಲೇಶ್ವರಂ ಚೈವ ವಾಲಿಪುತ್ರಮಥಾಂಗದಮ್ ।
ವಿವ್ಯಾಧ ಬಹುಭಿರ್ಬಾಣೈಸ್ತ್ವ ರಮಾಣೋಽಥ ರಾವಣಿಃ ॥

ಅನುವಾದ

ಮತ್ತೆ ಇಂದ್ರಜಿತು ಅತ್ಯಂತ ತ್ವರೆಯಿಂದ ಗೋಲಾಂಗೂಲಗಳ ರಾಜನಾದ ಗವಾಕ್ಷನನ್ನೂ, ವಾಲಿಪುತ್ರ ಅಂಗದನನ್ನು, ಅನೇಕ ಬಾಣಗಳಿಂದ ಪ್ರಹರಿಸಿ ಗಾಯಗೊಳಿಸಿದನು.॥21॥

ಮೂಲಮ್ - 22

ತಾನ್ವಾನರವರಾನ್ ಭಿತ್ತ್ವಾ ಶರೈರಗ್ನಿಶಿಖೋಪಮೈಃ ।
ನನಾದ ಬಲವಾಂಸ್ತತ್ರ ಮಹಾಸತ್ತ್ವಃ ಸ ರಾವಣಿಃ ॥

ಅನುವಾದ

ಹೀಗೆ ಅಗ್ನಿಯಂತೆ ತೇಜಸ್ವೀ ಬಾಣಗಳಿಂದ ಆ ಮುಖ್ಯ ಮುಖ್ಯ ವಾನರರನ್ನು ಗಾಯಗೊಳಿಸಿ, ಮಹಾ ಧೈರ್ಯಶಾಲಿ, ಬಲವಂತ ರಾವಣಕುಮಾರನು ಇಲ್ಲಿ ಜೋರಾಗಿ ಗರ್ಜಿಸತೊಡಗಿದನು.॥22॥

ಮೂಲಮ್ - 23

ತಾನರ್ದಯಿತ್ವಾ ಬಾಣೌಘೈಸಾಸಯಿತ್ವಾ ಚ ವಾನರಾನ್ ।
ಪ್ರಜಹಾಸ ಮಹಾಬಾಹುರ್ವಚನಂ ಚೇದಮಬ್ರವೀತ್ ॥

ಅನುವಾದ

ತನ್ನ ಬಾಣಸಮೂಹದಿಂದ ವಾನರರನ್ನು ಪೀಡಿಸಿ, ಭಯಗೊಳಿಸಿ ಮಹಾಬಾಹು ಇಂದ್ರಜಿತು ಅಟ್ಟಹಾಸ ಮಾಡುತ್ತಾ ಹೀಗೆ ಹೇಳಿದನು.॥23॥

ಮೂಲಮ್ - 24

ಶರಬಂಧೇನ ಘೋರೇಣ ಮಯಾ ಬದ್ಧೌ ಚಮೂಮುಖೇ ।
ಸಹಿತೌ ಭ್ರಾತರಾವೇತೌ ನಿಶಾಮಯತ ರಾಕ್ಷಸಾಃ ॥

ಅನುವಾದ

ರಾಕ್ಷಸರೇ! ನೋಡಿದಲ್ಲ! ನಾನು ಯುದ್ಧದಲ್ಲಿ ಭಯಂಕರ ಬಾಣಗಳಿಂದ ಈ ಶ್ರೀರಾಮ-ಲಕ್ಷ್ಮಣ ಇಬ್ಬರನ್ನೂ ಒಟ್ಟಿಗೆ ಕಟ್ಟಿಬಿಟ್ಟಿರುವೆನು.॥24॥

ಮೂಲಮ್ - 25

ಏವಮುಕ್ತಾಸ್ತು ತೇ ಸರ್ವೇ ರಾಕ್ಷಸಾಃ ಕೂಟಯೋಧಿನಃ ।
ಪರಂ ವಿಸ್ಮಯಮಾಪನ್ನಾಃ ಕರ್ಮಣಾ ತೇನ ಹರ್ಷಿತಾಃ ॥

ಅನುವಾದ

ಇಂದ್ರಜಿತು ಹೀಗೆ ಹೇಳಿದಾಗ ಕಪಟಯುದ್ಧ ಮಾಡುವ ಆ ರಾಕ್ಷಸರೆಲ್ಲರೂ ಚಿಕಿತರಾದರು ಹಾಗೂ ಅವನ ಕರ್ಮದಿಂದಾಗಿ ಬಹಳ ಹರ್ಷಗೊಂಡರು.॥25॥

ಮೂಲಮ್ - 26

ವಿನೇದುಶ್ಚ ಮಹಾನಾದಾನ್ಸರ್ವೇತೇ ಜಲದೋಪಮಾಃ ।
ಹತೋ ರಾಮ ಇತಿ ಜ್ಞಾತ್ವಾ ರಾವಣಿಂ ಸಮಪೂಜಯನ್ ॥

ಅನುವಾದ

ಅವರೆಲ್ಲರೂ ಮೇಘದಂತೆ ಗಂಭೀರ ಸ್ವರದಿಂದ ಮಹಾ ಸಿಂಹನಾದ ಮಾಡಿದರು ಹಾಗೂ ಶ್ರೀರಾಮನು ಸತ್ತು ಹೋದನು ಎಂದು ತಿಳಿದು ಇಂದ್ರಜಿತುವನ್ನು ಬಹಳವಾಗಿ ಅಭಿನಂದಿಸಿದರು.॥26॥

ಮೂಲಮ್ - 27

ನಿಷ್ಪಂದೌ ತು ತದಾ ದೃಷ್ಟ್ವಾ ಭ್ರಾತರೌ ರಾಮಲಕ್ಷ್ಮಣೌ ।
ವಸುಧಾಯಾಂ ನಿರುಚ್ಛ್ವಾಸೌ ಹತಾವಿತ್ಯನ್ವಮನ್ಯತ ॥

ಅನುವಾದ

ಶ್ರೀರಾಮ-ಲಕ್ಷ್ಮಣರು ನಿಶ್ಪೇಷ್ಟಿತರಾಗಿ ಭೂಮಿಯಲ್ಲಿ ಬಿದ್ದು ಉಸಿರಾಟವೂ ನಡೆಯುವುದಿಲ್ಲ ಎಂದು ನೋಡಿದ ಇಂದ್ರಜಿತುವು ಅವರಿಬ್ಬರೂ ಸತ್ತು ಹೋದರೆಂದೇ ತಿಳಿದನು.॥27॥

ಮೂಲಮ್ - 28

ಹರ್ಷೇಣ ತು ಸಮಾವಿಷ್ಟ ಇಂದ್ರಜಿತ್ ಸಮಿತಿಂಜಯಃ ।
ಪ್ರವಿವೇಶ ಪುರೀಂ ಲಂಕಾಂ ಹರ್ಷಯನ್ ಸರ್ವನೈರ್ಋತಾನ್ ॥

ಅನುವಾದ

ಇದರಿಂದ ಯುದ್ಧವಿಜಯೀ ಇಂದ್ರಜಿತು ಬಹಳ ಹರ್ಷಗೊಂಡು, ಸಮಸ್ತ ರಾಕ್ಷಸರಿಗೆ ಹರ್ಷವನ್ನು ಹೆಚ್ಚಿಸುತ್ತಾ ಲಂಕಾಪುರಿಗೆ ನಡೆದನು.॥28॥

ಮೂಲಮ್ - 29

ರಾಮಲಕ್ಷ್ಮಣಯೋರ್ದೃಷ್ಟ್ವಾ ಶರೀರೇ ಸಾಯಕೈಶ್ಚಿತೇ ।
ಸರ್ವಾಣಿ ಚಾಂಗೋಪಾಂಗಾನಿ ಸುಗ್ರೀವಂ ಭಯಮಾವಿಶತ್ ॥

ಅನುವಾದ

ಶ್ರೀರಾಮ-ಲಕ್ಷ್ಮಣರ ಶರೀರದ ಎಲ್ಲ ಅಂಗ-ಉಪಾಂಗಗಳು ಬಾಣಗಳಿಂದ ವ್ಯಾಪ್ತವಾಗಿರುವುದರಿಂದ ಸುಗ್ರೀವನ ಮನಸ್ಸಿನಲ್ಲಿ ಭಯ ತುಂಬಿಕೊಂಡಿತು.॥29॥

ಮೂಲಮ್ - 30½

ತಮುವಾಚ ಪರಿತ್ರಸ್ತಂ ವಾನರೇಂದ್ರ ವಿಭೀಷಣಃ ।
ಸಬಾಷ್ಪವದನಂ ದೀನಂ ಶೋಕವ್ಯಾಕುಲಲೋಚನಮ್ ॥
ಅಲಂ ತ್ರಾಸೇನ ಸುಗ್ರೀವ ಭಾಷ್ಪವೇಗೋ ನಿಗೃಹ್ಯತಾಮ್ ।

ಅನುವಾದ

ಅವನ ಮುಖಬಾಡಿತು, ಕಣ್ಣುಗಳಿಂದ ನೀರು ಹರಿದು ಶೋಕದಿಂದ ವ್ಯಾಕುಲನಾದನು. ಆಗ ಅತ್ಯಂತ ಭಯಭೀತನಾದ ವಾನರರಾಜನಿಗೆ ವಿಭೀಷಣನು ಹೇಳಿದನು-‘ಸುಗ್ರೀವ! ಹೆದರಬೇಡ. ಭಯಪಡುವುದರಿಂದ ಯಾವ ಲಾಭವೂ ಇಲ್ಲ. ಕಣ್ಣೀರಿಡಬೇಡ.॥30॥

ಮೂಲಮ್ - 31

ಏವಂ ಪ್ರಾಯಾಣಿ ಯುದ್ಧಾನಿ ವಿಜಯೋ ನಾಸ್ತಿ ನೈಷ್ಠಿಕಃ ॥

ಮೂಲಮ್ - 32

ಸಭಾಗ್ಯ ಶೇಷತಾಸ್ಮಾಕಂ ಯದಿ ವೀರ ಭವಿಷ್ಯತಿ ।
ಮೋಹಮೇತೌ ಪ್ರಹಾಸ್ಯೇತೇ ಮಹಾತ್ಮಾನೌ ಮಹಾಬಲೌ ॥

ಮೂಲಮ್ - 33

ಪರ್ಯವಸ್ಥಾಪಯಾತ್ಮಾನಮನಾಥಂ ಮಾಂ ಚ ವಾನರ ।
ಸತ್ಯಧರ್ಮಾಭಿರಕ್ತಾನಾಂ ನಾಸ್ತಿ ಮೃತ್ಯುಕೃತಂ ಭಯಮ್ ॥

ಅನುವಾದ

ವೀರನೇ! ಸಾಮಾನ್ಯವಾಗಿ ಎಲ್ಲ ಯುದ್ಧಗಳ ಸ್ಥಿತಿ ಹೀಗೆ ಆಗುತ್ತದೆ, ಅವರಲ್ಲಿ ವಿಜಯ ಅನಿಶ್ಚಿತವಾಗಿರುತ್ತದೆ. ನಮ್ಮ ಭಾಗ್ಯಶೇಷವಿದ್ದರೆ, ಇವರಿಬ್ಬರೂ ಮಹಾತ್ಮರು ಖಂಡಿತವಾಗಿ ಮೂರ್ಛೆಯಿಂದ ಎಚ್ಚರಗೊಳ್ಳುವರು. ವಾನರರಾಜನೇ! ನೀನು ತನ್ನನ್ನು ಮತ್ತು ಅನಾಥನಾದ ನನ್ನನ್ನು ಸಮಾಧಾನಗೊಳಿಸು. ಸತ್ಯ, ಧರ್ಮದಲ್ಲಿ ಅನುರಾಗವುಳ್ಳವರಿಗೆ ಮೃತ್ಯುಭಯ ಇರುವುದಿಲ್ಲ.॥31-33॥

ಮೂಲಮ್ - 34

ಏವಮುಕ್ತ್ವಾ ತತಸ್ತಸ್ಯ ಜಲಕ್ಲಿನ್ನೇನ ಪಾಣಿನಾ ।
ಸುಗ್ರೀವಸ್ಯ ಶುಭೇ ನೇತ್ರೇ ಪ್ರಮಮಾರ್ಜ ವಿಭೀಷಣಃ ॥

ಅನುವಾದ

ಹೀಗೆ ಹೇಳಿ ವಿಭೀಷಣನು ಒದ್ದೆ ಕೈಗಳಿಂದ ಸುಗ್ರೀವನ ಕಣ್ಣೀರನ್ನು ಒರೆಸಿದನು.॥34॥

ಮೂಲಮ್ - 35

ತತಃ ಸಲಿಲಮಾದಾಯ ವಿದ್ಯಯಾ ಪರಿಜಪ್ಯ ಚ ।
ಸುಗ್ರೀವನೇತ್ರೇ ಧರ್ಮಾತ್ಮಾ ಪ್ರಮಮಾರ್ಜ ವಿಭೀಷಣಃ ॥

ಅನುವಾದ

ಬಳಿಕ ಕೈಯಲ್ಲಿ ನೀರು ಹಿಡಿದು ಅದನ್ನು ಅಭಿಮಂತ್ರಿಸಿ ಧರ್ಮಾತ್ಮಾ ವಿಭೀಷಣನು ಸುಗ್ರೀವನ ಕಣ್ಣುಗಳಿಗೆ ಹಚ್ಚಿದನು.॥35॥

ಮೂಲಮ್ - 36

ವಿಮೃಜ್ಯ ವದನಂ ತಸ್ಯ ಕಪಿರಾಜಸ್ಯ ಧೀಮತಃ ।
ಅಬ್ರವೀತ್ಕಾಲಸಂಪ್ರಾಪ್ತಮಸಂಭ್ರಾಂತಮಿದಂ ವಚಃ ॥

ಅನುವಾದ

ಮತ್ತೆ ಬುದ್ಧಿವಂತ ವಾನರರಾಜನ ಒದ್ದೆಯಾದ ಮುಖವನ್ನು ಒರೆಸಿ, ಯಾವುದೇ ಗಾಬರಿಯಿಲ್ಲದೆ ಸಮಯೋಚಿತವಾಗಿ ಹೀಗೆ ಹೇಳಿದನು.॥36॥

ಮೂಲಮ್ - 37

ನ ಕಾಲಃ ಕಪಿರಾಜೇಂದ್ರ ವೈಕ್ಲವ್ಯಮವಲಂಬಿತುಮ್ ।
ಅತಿಸ್ನೇಹೋಽಪಿ ಕಾಲೇಽಸ್ಮಿನ್ ಮರಣಾಯೋಪಕಲ್ಪತೇ ॥

ಅನುವಾದ

ಕಪಿರಾಜೇಂದ್ರ! ಈಗ ಗಾಬರಿ ಪಡುವ ಸಮಯವಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚು ಸ್ನೇಹವನ್ನು ಪ್ರದರ್ಶಿಸುವುದ ರಿಂದಲೂ ಮೃತ್ಯು ಭಯ ತಂದೊಡ್ಡುತ್ತದೆ.॥37॥

ಮೂಲಮ್ - 38

ತಸ್ಮಾದುತ್ಸಜ್ಯ ವೈಕ್ಲವ್ಯಂ ಸರ್ವಕಾರ್ಯ ವಿನಾಶನಮ್ ।
ಹಿತಂ ರಾಮ ಪುರೋಗಾಣಾಂ ಸೈನ್ಯಾನಾಮನುಚಿಂತಯ ॥

ಅನುವಾದ

ಅದಕ್ಕಾಗಿ ಎಲ್ಲ ಕಾರ್ಯವನ್ನು ಕೆಡಿಸುವ ಈ ಗಾಬರಿಯನ್ನು ಬಿಟ್ಟು ಈ ಸೈನ್ಯದ ಮುಂದಾಳಾದ, ಸ್ವಾಮಿಯಾದ ಶ್ರೀರಾಮಚಂದ್ರನ ಹಿತದ ಕುರಿತು ವಿಚಾರಮಾಡು.॥38॥

ಮೂಲಮ್ - 39

ಅಥ ವಾ ರಕ್ಷ್ಯತಾಂ ರಾಮೋ ಯಾವತ್ಸಂಜ್ಞಾವಿಪರ್ಯಯಃ ।
ಲಬ್ಧಸಂಜ್ಞೋ ಹಿ ಕಾಕುತ್ಸ್ಥೌ ಭಯಂ ನೌ ವ್ಯಪನೇಷ್ಯತಃ ॥

ಅನುವಾದ

ಶ್ರೀರಾಮಚಂದ್ರನು ಎಚ್ಚರಗೊಳ್ಳುವ ತನಕ ಇವರನ್ನು ರಕ್ಷಿಸಬೇಕು. ಇವರಿಬ್ಬರೂ ರಘುವಂಶೀ ವೀರರು ಎಚ್ಚರಗೊಂಡಾಗ ನಮ್ಮ ಎಲ್ಲ ಭಯ ದೂರಮಾಡುವರು.॥39॥

ಮೂಲಮ್ - 40

ನೈತತ್ಕಿಂಚನ ರಾಮಸ್ಯ ನ ಚ ರಾಮೋ ಮುಮೂರ್ಷತಿ ।
ನಹ್ಯೇನಂ ಹಾಸ್ಯತೇ ಲಕ್ಷ್ಮೀರ್ದುರ್ಲಭಾ ಯಾ ಗತಾಯುಷಾಮ್ ॥

ಅನುವಾದ

ಶ್ರೀರಾಮನಿಗೆ ಈ ಸಂಕಟ ಏನೂ ಆಲ್ಲ. ಇವನು ಸಾಯಲಾರನು; ಏಕೆಂದರೆ ಆಯುಷ್ಯವು ಮುಗಿದು ಹೋದವರಿಗೆ ಇರಲು ಸಾಧ್ಯವಿಲ್ಲದ ಕಾಂತಿಯು ಇವನನ್ನು ಬಿಟ್ಟುಹೋಗಿಲ್ಲ.॥40॥

ಮೂಲಮ್ - 41

ತಸ್ಮಾದಾಶ್ವಾಸಯಾತ್ಮಾನಂ ಬಲಂ ಚಾಶ್ವಾಸಯ ಸ್ವಕಮ್ ।
ಯಾವತ್ಸೈನ್ಯಾನಿ ಸರ್ವಾಣಿ ಪುನಃ ಸಂಸ್ಥಾಪಯಾಮ್ಯಹಮ್ ॥

ಅನುವಾದ

ಆದುದರಿಂದ ಸುಗ್ರೀವ! ನೀನು ಮೊದಲು ಸುಧಾರಿಸಿಕೋ, ಅನಂತರ ನಿನ್ನ ಸೈನಿಕರಿಗೂ ಸಮಾಧಾನ ಹೇಳು. ಅಲ್ಲಿಯವರೆಗೆ ನಾನು ಗಾಬರಿಗೊಂಡಿರುವ ಸೈನ್ಯವನ್ನು ಹುರಿದುಂಬಿಸಿ ವ್ಯವಸ್ಥೆ ಮಾಡುತ್ತೇನೆ.॥41॥

ಮೂಲಮ್ - 42

ಏತೇ ಹಿ ಫುಲ್ಲನಯನಾಸ್ತ್ರಾಸಾದಾಗತಸಾಧ್ವಸಾಃ ।
ಕರ್ಣೇ ಕರ್ಣೇ ಪ್ರಕಥಿತಾ ಹರಯೋ ಹರಿಸತ್ತಮ ॥

ಅನುವಾದ

ಕಪಿಶ್ರೇಷ್ಠನೇ! ನೋಡು, ಈ ವಾನರರ ಮನಸ್ಸಿನಲ್ಲಿ ಭಯ ತುಂಬಿಹೋಗಿದೆ. ಅದರಿಂದ ಕಣ್ಣುಬಿಟ್ಟು ನೋಡುತ್ತಿದ್ದಾರೆ ಹಾಗೂ ಪರಸ್ಪರ ಪಿಸುಮಾತುಗಳನ್ನಾಡುತ್ತಿದ್ದಾರೆ.॥42॥

ಮೂಲಮ್ - 43

ಮಾಂ ತು ದೃಷ್ಟ್ವಾ ಪ್ರಧಾವಂತಮನೀಕಂ ಸಂಪ್ರಹರ್ಷಿತಮ್ ।
ತ್ಯಜಂತು ಹರಯಸ್ತ್ರಾಸಂ ಭುಕ್ತ ಪೂರ್ವಾಮಿವ ಸ್ರಜಮ್ ॥

ಅನುವಾದ

ಆದುದರಿಂದ ನಾನು ಈಗಲೇ ಹೋಗಿ ಅವರನ್ನು ಸಮಾಧಾನಪಡಿಸುತ್ತೇನೆ. ಹರ್ಷದಿಂದ ನಾನು ಓಡಾಡುವುದನ್ನು ಕಂಡು ವಾನರರು ಉಪಭೋಗಿಸಿದ ಪುಷ್ಪಹಾರವನ್ನು ತ್ಯಜಿಸುವಂತೆ ನಮ್ಮ ಭಯವನ್ನು ತ್ಯಜಿಸುವರು.॥43॥

ಮೂಲಮ್ - 44

ಸಮಾಶ್ವಾಸ್ಯ ತು ಸುಗ್ರೀವಂ ರಾಕ್ಷಸೇಂದ್ರೋ ವಿಭೀಷಣಃ ।
ವಿದ್ರುತಂ ವಾನರಾನೀಕಂ ತತ್ ಸಮಾಶ್ವಾಸಯತ್ಪುನಃ ॥

ಅನುವಾದ

ಹೀಗೆ ಸುಗ್ರೀವನಿಗೆ ಆಶ್ವಾಸನೆಯನ್ನಿತ್ತು ರಾಕ್ಷಸೇಂದ್ರ ವಿಭೀಷಣನು ಓಡಲು ತೊಡಗಿದ ವಾನರ ಸೈನ್ಯಕ್ಕೆ ಪುನಃ ಸಾಂತ್ವನವನ್ನು ಹೇಳಿದನು.॥44॥

ಮೂಲಮ್ - 45

ಇಂದ್ರ ಜಿತ್ತು ಮಹಾಮಾಯಃ ಸರ್ವಸೈನ್ಯ ಸಮಾವೃತಃ ।
ವಿವೇಶ ನಗರೀಂ ಲಂಕಾಂ ಪಿತರಂ ಚಾಭ್ಯುಪಾಗಮತ್ ॥

ಅನುವಾದ

ಇತ್ತ ಮಹಾ ಮಾಯಾವಿ ಇಂದ್ರಜಿತು ಸಮಸ್ತ ಸೈನ್ಯದೊಂದಿಗೆ ಲಂಕೆಗೆ ಬಂದು ತನ್ನ ತಂದೆಯನ್ನು ನೋಡಿದನು.॥45॥

ಮೂಲಮ್ - 46

ತತ್ರ ರಾವಣಮಾಸಾದ್ಯ ಅಭಿವಾದ್ಯ ಕೃತಾಂಜಲಿಃ ।
ಆಚಚಕ್ಷೇ ಪ್ರಿಯಂ ಪಿತ್ರೇ ನಿಹತೌ ರಾಮಲಕ್ಷ್ಮಣೌ ॥

ಅನುವಾದ

ರಾವಣನ ಬಳಿಗೆ ಹೋಗಿ ಕೈಮುಗಿದು ನಮಸ್ಕರಿಸಿ ರಾಮ-ಲಕ್ಷ್ಮಣರು ಸತ್ತುಹೋದ ವಾರ್ತೆಯನ್ನು ತಿಳಿಸಿದನು.॥46॥

ಮೂಲಮ್ - 47

ಉತ್ಪಪಾತ ತತೋ ಹೃಷ್ಟಃ ಪುತ್ರಂ ಚ ಪರಿಷಸ್ವಜೇ ।
ರಾವಣೋ ರಕ್ಷಸಾಂ ಮಧ್ಯೇ ಶ್ರುತ್ವಾಶತ್ರೂ ನಿಪಾತಿತೌ ॥

ಅನುವಾದ

ರಾಕ್ಷಸ ಸಭೆಯಲ್ಲಿ ತನ್ನ ಇಬ್ಬರೂ ಶತ್ರುಗಳು ಸತ್ತುಹೋದ ಸಮಾಚಾರ ಕೇಳಿ ರಾವಣನು ಹರ್ಷದಿಂದ ಕುಣಿಯುತ್ತಾ ತನ್ನ ಪುತ್ರನನ್ನು ಅಪ್ಪಿಕೊಂಡನು.॥47॥

ಮೂಲಮ್ - 48

ಉಪಾಘ್ರಾಯ ಚ ತಂ ಮೂರ್ಧ್ನಿಪಪ್ರಚ್ಛ ಪ್ರೀತಮಾನಸಃ ।
ಪೃಚ್ಛತೇ ಚ ಯಥಾವೃತ್ತಂ ಪಿತ್ರೇ ತಸ್ಮೈ ನ್ಯವೇದಯತ್ ॥

ಮೂಲಮ್ - 49

ಯಥಾ ತೌ ಶರಬಂಧೇನ ನಿಶ್ಚೇಷ್ಟೌ ನಿಷ್ಪ್ರಭೌ ಕೃತೌ ॥

ಅನುವಾದ

ಅವನ ಶಿರವನ್ನು ಆಘ್ರಾಣಿಸಿ ಸಂತೋಷಗೊಂಡು ಆ ಘಟನೆಯ ಪೂರ್ಣವಿವರ ಕೇಳಿದನು. ಇಂದ್ರಜಿತುವು ನಡೆದ ಎಲ್ಲ ವೃತ್ತಾಂತವನ್ನು ವಿವರಿಸಿ, ಹೇಗೆ ಬಾಣಗಳಿಂದ ಬಂಧಿಸಿ ಶ್ರೀರಾಮ- ಲಕ್ಷ್ಮಣರನ್ನು ನಿಸ್ತೇಜಗೊಳಿಸಿದೆನೆಂಬುದನ್ನು ತಿಳಿಸಿದನು.॥48-49॥

ಮೂಲಮ್ - 50

ಸ ಹರ್ಷವೇಗಾನುಗತಾಂತರಾತ್ಮಾ
ಶ್ರುತ್ವಾ ಗಿರಂಸ್ತಸ್ಯ ಮಹಾರಥಸ್ಯ ।
ಜಹೌ ಜ್ವರಂ ದಾಶರಥೇಃ ಸಮುತ್ಥಂ
ಪ್ರಹೃಷ್ಯವಾಚಾಭಿನನಂದ ಪುತ್ರಮ್ ॥

ಅನುವಾದ

ಮಹಾರಥಿ ಇಂದ್ರಜಿತುವಿನ ಮಾತನ್ನು ಕೇಳಿ ರಾವಣನ ಅಂತರಾತ್ಮವು ಅರಳಿ ಹರ್ಷಗೊಂಡನು. ಶ್ರೀರಾಮನ ಕಡೆಯಿಂದ ಉಂಟಾಗಿದ್ದ ಭಯ-ಚಿಂತೆ ದೂರವಾಗಿ ಸಂತೋಷದಿಂದ ಉತ್ತಮ ಮಾತುಗಳಿಂದ ಇಂದ್ರಜಿತುವನ್ನು ಅಭಿನಂದಿಸಿದನು.॥50॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತಾರನೆಯ ಸರ್ಗ ಪೂರ್ಣವಾಯಿತು.॥46॥