वाचनम्
ಭಾಗಸೂಚನಾ
ಇಂದ್ರಜಿತುವಿನ ಬಾಣಗಳಿಂದ ರಾಮ-ಲಕ್ಷ್ಮಣರ ಮೂರ್ಛೆ, ವಾನರರ ಶೋಕ
ಮೂಲಮ್ - 1
ಸ ತಸ್ಯ ಗತಿಮನ್ವಿಚ್ಛನ್ ರಾಜಪುತ್ರಃ ಪ್ರತಾಪವಾನ್ ।
ದಿದೇಶಾತಿಬಲೋ ರಾಮೋ ದಶ ವಾನರಯೂಥಪಾನ್ ॥
ಅನುವಾದ
ಮಹಾಬಲಶಾಲೀ, ಪ್ರತಾಪಿಯಾದ ಶ್ರೀರಾಮನು ಇಂದ್ರಜಿತು ಎಲ್ಲಿರುವನೆಂದು ತಿಳಿಯಲು ವಾನರ ಸೇನಾನಾಯಕರಿಗೆ ಆಜ್ಞಾಪಿಸಿದನು.॥1॥
ಮೂಲಮ್ - 2
ದ್ವೌ ಸುಷೇಣಸ್ಯ ದಾಯಾದೌ ನೀಲಂ ಚ ಪ್ಲವಗಾಧಿಪಮ್ ।
ಅಂಗದಂ ವಾಲಿಪುತ್ರಂ ಚ ಶರಭಂ ಚ ತರಸ್ವಿನಮ್ ॥
ಮೂಲಮ್ - 3
ದ್ವಿವಿದಂ ಚ ಹನೂಮಂತಂ ಸಾನುಪ್ರಸ್ಥಂ ಮಹಾಬಲಮ್ ।
ಋಷಭಂ ಚರ್ಷಭಸ್ಕಂಧಮಾದಿದೇಶ ಪರಂತಪಃ ॥
ಅನುವಾದ
ಅವರಲ್ಲಿ ಇಬ್ಬರು ಸುಷೇಣನ ಪುತ್ರರಾಗಿದ್ದರು, ಉಳಿದ ಎಂಟು ಮಂದಿ ನೀಲ, ವಾಲಿಪುತ್ರ ಅಂಗದ, ವೇಗಶಾಲೀ ಶರಭ, ದ್ವಿವಿದ, ಹನುಮಂತ, ಮಹಾಬಲಿ ಸಾನುಪ್ರಸ್ಥ, ಋಷಭ ಹಾಗೂ ಋಷಭಸ್ಕಂದರಾಗಿದ್ದರು. ಪರಂತಪರಾದ ಈ ಹತ್ತು ವಾನರರಿಗೆ ಅವನನ್ನು ಹುಡುಕಲು ತಿಳಿಸಿದನು.॥2-3॥
ಮೂಲಮ್ - 4
ತೇ ಸಂಪ್ರಹೃಷ್ಟಾ ಹರಯೋ ಭೀಮಾನುದ್ಯಮ್ಯ ಪಾದಪಾನ್ ।
ಆಕಾಶಂ ವಿವಿಶುಃ ಸರ್ವೇ ಮಾರ್ಗಮಾಣಾ ದಿಶೋ ದಶ ॥
ಅನುವಾದ
ಆಗ ಆ ಎಲ್ಲ ವಾನರರು ಭಯಂಕರ ವೃಕ್ಷಗಳನ್ನೆತ್ತಿಕೊಂಡು ಹತ್ತು ದಿಕ್ಕುಗಳಲ್ಲಿಯೂ ಹುಡುಕುತ್ತಾ ಭಾರೀ ಹರ್ಷದಿಂದ ಆಕಾಶಮಾರ್ಗದಿಂದ ಹೊರಟರು.॥4॥
ಮೂಲಮ್ - 5
ತೇಷಾಂ ವೇಗವತಾಂ ವೇಗಮಿಷುಭಿರ್ವೇಗವತ್ತರೈಃ ।
ಅಸ್ತ್ರವಿತ್ ಪರಮಾಸ್ತ್ರಸ್ತು ವಾರಯಾಮಾಸ ರಾವಣಿಃ ॥
ಅನುವಾದ
ಆದರೆ ಅಸ್ತ್ರವೇತ್ತನಾದ ಇಂದ್ರಜಿತು ಅತ್ಯಂತ ವೇಗಶಾಲಿ ಬಾಣಗಳ ಮಳೆಗರೆದು, ಉತ್ತಮ ಅಸ್ತ್ರಗಳಿಂದ ಆ ವಾನರರ ವೇಗವನ್ನು ತಡೆದುಬಿಟ್ಟನು.॥5॥
ಮೂಲಮ್ - 6
ತಂ ಭೀಮವೇಗಾ ಹರಯೋ ನಾರಾಚೈಃ ಕ್ಷತವಿಕ್ಷತಾಃ ।
ಅಂಧಕಾರೇ ನ ದದೃಶುರ್ಮೇಘೈಃ ಸೂರ್ಯಮಿವಾವೃತಮ್ ॥
ಅನುವಾದ
ಬಾಣಗಳಿಂದ ಕ್ಷತವಿಕ್ಷಿತರಾದರೂ ಆ ಭಯಾನಕ ವೇಗಶಾಲೀ ವಾನರರು ಅಂಧಕಾರಮಯ ಮೋಡಗಳಲ್ಲಿ ಮರೆಯಾದ ಸೂರ್ಯನನ್ನು ನೋಡಲಾಗದಂತೆ ಇಂದ್ರಜಿತುವನ್ನು ಕಾಣದಾದರು.॥6॥
ಮೂಲಮ್ - 7
ರಾಮಲಕ್ಷ್ಮಣಯೋರೇವ ಸರ್ವದೇಹಭಿದಃ ಶರಾನ್ ।
ಭೃಶಮಾವೇಶಯಾಮಾಸ ರಾವಣಿಃ ಸಮಿತಿಂಜಯಃ ॥
ಅನುವಾದ
ಬಳಿಕ ಯುದ್ಧವಿಜಯೀ ಇಂದ್ರಜಿತು ಪುನಃ ಶ್ರೀರಾಮ-ಲಕ್ಷ್ಮಣರ ಮೇಲೆ ಬಾಣಗಳ ಮಳೆಗರೆದು, ಅವರ ಅಂಗಗಳನ್ನು ಗಾಯಗೊಳಿಸಿದನು.॥7॥
ಮೂಲಮ್ - 8
ನಿರಂತರಶರೀರೌ ತು ತಾವುಭೌ ರಾಮಲಕ್ಷ್ಮಣೌ ।
ಕ್ರುದ್ಧೇನೇಂದ್ರಜಿತಾ ವೀರೌ ಪನ್ನಗೈಃ ಶರತಾಂ ಗತೈಃ ॥
ಅನುವಾದ
ಕುಪಿತನಾದ ಇಂದ್ರಜಿತು ರಾಮ-ಲಕ್ಷ್ಮಣರ ಶರೀರದಲ್ಲಿ ಎಳ್ಳು ಹಾಕಲು ಜಾಗ ಇಲ್ಲದ ಸರ್ಪರೂಪೀ ಬಾಣಗಳನ್ನು ಪ್ರಯೋಗಿಸಿದನು.॥8॥
ಮೂಲಮ್ - 9
ತಯೋಃ ಕ್ಷತಜಮಾರ್ಗೇಣ ಸುಸ್ರಾವ ರುಧಿರಂ ಬಹು ।
ತಾವುಭೌ ಚ ಪ್ರಕಾಶೇತೇ ಪುಷ್ಪಿತಾವಿವ ಕಿಂಶುಕೌ ॥
ಅನುವಾದ
ಅವರಿಬ್ಬರ ಶರೀರಕ್ಕೆ ಬಾಣ ತಗುಲಿ ರಕ್ತಹರಿಯತೊಡಗಿತು. ಆಗ ಅವರಿಬ್ಬರೂ ಅರಳಿದ ಹೂವುಗಳುಳ್ಳ ಮುತ್ತುಗದ ಮರಗಳಂತೆ ಪ್ರಕಾಶಿಸುತ್ತಿದ್ದರು.॥9॥
ಮೂಲಮ್ - 10
ತತಃ ಪರ್ಯಂತ ರಕ್ತಾಕ್ಷೋ ಭಿನ್ನಾಂಜನಚಯೋಪಮಃ ।
ರಾವಣಿರ್ಭ್ರಾತರೌ ವಾಕ್ಯಮಂತರ್ಧಾನಗತೋಽಬ್ರವೀತ್ ॥
ಅನುವಾದ
ಕೆಂಪಾದ ಕಡೆಗಣ್ಣುಗಳುಳ್ಳ ಇದ್ದಲು ರಾಶಿಯಂತೆ ಕಪ್ಪಾದ ಇಂದ್ರಜಿತು ಅಂತರ್ಧಾನನಾಗಿಯೇ ರಾಮ -ಲಕ್ಷ್ಮಣರಲ್ಲಿ ನುಡಿದನು.॥10॥
ಮೂಲಮ್ - 11
ಯುದ್ಧ್ಯಮಾನಮನಾಲಕ್ಷ್ಯಂ ಶಕ್ರೋಽಪಿ ತ್ರಿದಶೇಶ್ವರಃ ।
ದ್ರಷ್ಟುಮಾಸಾದಿತುಂ ವಾಪಿ ನ ಶಕ್ತಃ ಕಿಂ ಪುನರ್ಯುವಾಮ್ ॥
ಅನುವಾದ
ಯುದ್ಧದಲ್ಲಿ ಅದೃಶ್ಯನಾದಾಗ ನನ್ನನ್ನು ದೇವೇಂದ್ರನೂ ನೋಡಲಾರನು; ಹಾಗಿರುವಾಗ ನಿಮ್ಮಿಬ್ಬರ ವಿಷಯದಲ್ಲಿ ಹೇಳುವುದೇನಿದೆ.॥11॥
ಮೂಲಮ್ - 12
ಪ್ರಾಪಿತಾವಿಷುಜಾಲೇನ ರಾಘವೌ ಕಂಕಪತ್ರಿಣಾ ।
ಏಷ ರೋಷಪರೀತಾತ್ಮಾ ನಯಾಮಿ ಯಮಸಾದನಮ್ ॥
ಅನುವಾದ
ರಘುವಂಶೀಯರಾದ ನಿಮ್ಮಿಬ್ಬರನ್ನು ನಾನು ಕಾಗೆಯ ರೆಕ್ಕೆಗಳಿರುವ ಬಾಣಗಳಿಂದ ಮುಚ್ಚಿಬಿಟ್ಟಿರುವೆನು. ರೋಷ ಗೊಂಡಿರುವ ನಾನು ನಿಮ್ಮನ್ನು ಈಗಲೇ ಯಮಲೋಕಕ್ಕೆ ಅಟ್ಟಿಬಿಡುವೆನು.॥12॥
ಮೂಲಮ್ - 13
ಏವಮುಕ್ತ್ವಾ ತು ಧರ್ಮಜ್ಞೌ ಭ್ರಾತರೌ ರಾಮಲಕ್ಷ್ಮಣೌ ।
ನಿರ್ಬಿಭೇದ ಶಿತೈರ್ಬಾಣೈಃ ಪ್ರಜಹರ್ಷ ನನಾದ ಚ ॥
ಅನುವಾದ
ಹೀಗೆ ಹೇಳಿ ಅವನು ಧರ್ಮಜ್ಞರಾದ ರಾಮ-ಲಕ್ಷ್ಮಣರನ್ನು ಹರಿತವಾದ ಬಾಣಗಳಿಂದ ಪ್ರಹರಿಸಿ, ಗಹಗಹಿಸಿ ನಗುತ್ತಾ ಗರ್ಜಿಸಿದನು.॥13॥
ಮೂಲಮ್ - 14
ಭಿನ್ನಾಂಜನಚಯಶ್ಯಾಮೋ ವಿಸ್ಫಾರ್ಯ ವಿಪುಲಂ ಧನುಃ ।
ಭೂಯ ಏವ ಶರಾನ್ಘೋರಾನ್ ವಿಸಸರ್ಜ ಮಹಾಮೃಧೇ ॥
ಅನುವಾದ
ಕಾಡಿಗೆಯ ರಾಶಿಯಂತಿದ್ದ ಶ್ಯಾಮಲವರ್ಣದ ಇಂದ್ರಜಿತು ಪುನಃ ತನ್ನ ವಿಶಾಲವಾದ ಧನುಸ್ಸನ್ನೆತ್ತಿ ಬಾಣಗಳ ಘೋರ ಮಳೆಯನ್ನೇ ಸುರಿಸಿದನು.॥14॥
ಮೂಲಮ್ - 15
ತತೋ ಮರ್ಮಸು ಮರ್ಮಜ್ಞೋ ಮಜ್ಜಯನ್ನಿಶಿತಾನ್ಶರಾನ್ ।
ರಾಮಲಕ್ಷ್ಮಣಯೋರ್ವೀರೋ ನನಾದ ಚ ಮುಹುರ್ಮುಹುಃ ॥
ಅನುವಾದ
ಮರ್ಮ ಸ್ಥಾನಗಳನ್ನು ಬಲ್ಲ ಆ ವೀರನು ಶ್ರೀರಾಮ-ಲಕ್ಷ್ಮಣರ ಮರ್ಮಸ್ಥಾನಗಳಲ್ಲಿ ಬಾಣಿ ನೆಟ್ಟು ಪದೇ ಪದೇ ಗರ್ಜಿಸತೊಡಗಿದನು.॥15॥
ಮೂಲಮ್ - 16
ಬದ್ಧೌ ತು ಶರಬಂಧೇನ ತಾವುಭೌ ರಣಮೂರ್ಧನಿ ।
ನಿಮೇಷಾಂತರಮಾತ್ರೇಣ ನ ಶೇಕತುರವೇಕ್ಷಿತುಮ್ ॥
ಅನುವಾದ
ರಣಭೂಮಿಯಲ್ಲಿ ಇಂದ್ರಜಿತುವಿನ ಬಾಣಗಳ ಕಟ್ಟಿಗೆ ಸಿಕ್ಕಿಬಿದ್ದಿದ್ದ ರಾಮ-ಲಕ್ಷ್ಮಣರು ನಿಮಿಷ ಮಾತ್ರದಲ್ಲಿ ಕಣ್ಗಳಿಂದ ನೋಡಲೂ ಅಸಮರ್ಥರಾದರು. (ನಿಜವಾಗಿ ಇದು ನರಲೀಲಾ ಮಾತ್ರವಾಗಿತ್ತು. ಅವರಾದರೋ ಕಾಲಕ್ಕೂ ಕಾಲರಾಗಿರುವರು, ಅವರನ್ನು ಯಾರು ತಾನೇ ಬಂಧಿಸಬಲ್ಲರು?॥16॥
ಮೂಲಮ್ - 17
ತತೋ ವಿಭಿನ್ನ ಸರ್ವಾಂಗೌ ಶರಶಲ್ಯಾಚಿತೌಕೃತೌ ।
ಧ್ವಜಾವಿವ ಮಹೇಂದ್ರಸ್ಯ ರಜ್ಜು ಮುಕ್ತೌ ಪ್ರಕಂಪಿತೌ ॥
ಅನುವಾದ
ಹೀಗೆ ಅವರ ಶರೀರಗಳೆಲ್ಲ ಬಾಣಗಳಿಂದ ಛಿನ್ನವಾದುವು, ಬಾಣಗಳಿಂದ ವ್ಯಾಪ್ತರಾಗಿದ್ದರು. ಹಗ್ಗಹರಿದ ಎರಡು ಇಂದ್ರಧ್ವಜಗಳಂತೆ ಆ ರಾಜಕುಮಾರರು ಓಲಾಡತೊಡಗಿದರು.॥17॥
ಮೂಲಮ್ - 18
ತೌ ಸಂಪ್ರಚಲಿತೌ ವೀರೌಮರ್ಮಭೇದೇನ ಕರ್ಶಿತೌ ।
ನಿಪೇತತುರ್ಮಹೇಷ್ವಾಸೌ ಜಗತ್ಯಾಂ ಜಗತೀಪತೀ ॥
ಅನುವಾದ
ಆ ಮಹಾ ಧನುರ್ಧರ ವೀರಭೂಪಾಲರು ಮರ್ಮಸ್ಥಳ ಭೇದನದಿಂದಾಗಿ ವಿಚಲಿತರಾಗಿ ಬಳಲಿ ಭೂಮಿಯ ಮೇಲೆ ಬಿದ್ದರು.॥18॥
ಮೂಲಮ್ - 19
ತೌ ವೀರಶಯನೇ ವೀರೌ ಶಯಾನೌ ರುಧಿರೋಕ್ಷಿತೌ ।
ತರವೇಷ್ಟಿತ ಸರ್ವಾಂಗಾವಾರ್ತೌ ಪರಮಪೀಡಿತೌ ॥
ಅನುವಾದ
ರಣರಂಗದಲ್ಲಿ ವೀರಶಯ್ಯೆಯಲ್ಲಿ ಮಲಗಿದ ಆ ವೀರರೀರ್ವರು ರಕ್ತದಿಂದ ತೊಯ್ದುಹೋಗಿದ್ದರು. ಅವರ ಸರ್ವಾಂಗಗಳಲ್ಲಿ ಬಾಣರೂಪೀ ನಾಗಗಳು ಸುತ್ತಿಕೊಂಡಿದ್ದು ಅವರು ಅತ್ಯಂತ ಪೀಡಿತರಾಗಿದ್ದರು.॥19॥
ಮೂಲಮ್ - 20
ನಹ್ಯವಿದ್ಧಂ ತಯೋರ್ಗಾತ್ರೇ ಬಭೂವಾಂಗುಲಮಂತರಮ್ ।
ನಾನಿರ್ವಿಣ್ಣಂ ನ ಚಾಧ್ವಸ್ತಬ್ಧ ಮಾಕರಾಗ್ರಾದಜಿಹ್ಮಗೈಃ ॥
ಅನುವಾದ
ಬಾಣಗಳು ನಾಟದೇ ಇರುವ ಒಂದಂಗುಲ ಸ್ಥಳವೂ ಅವರ ಶರೀರದಲ್ಲಿ ಇರಲಿಲ್ಲ. ಬೆರಳು ತುದಿಗಳವರೆಗೂ ಪೀಡಿಸಲ್ಪಡದ ಸ್ಥಳವಾಗಲೀ, ನೋಯದೆ ಇರುವ ಜಾಗವಾಗಲೀ ಕೊಂಚವೂ ಇರಲಿಲ್ಲ.॥20॥
ಮೂಲಮ್ - 21
ತೌ ತು ಕ್ರೂರೇಣ ನಿಹತೌ ರಕ್ಷಸಾ ಕಾಮರೂಪಿಣಾ ।
ಅಸೃಕ್ಸುಸ್ರುವತುಸ್ತೀವ್ರಂ ಜಲಂ ಪ್ರಸ್ರವಣಾವಿವ ॥
ಅನುವಾದ
ಚಿಲುಮೆಯಿಂದ ನೀರು ಚಿಮ್ಮುವಂತೆ ಅವರಿಬ್ಬರ ಶರೀರಗಳಿಂದ ರಕ್ತ ಹರಿಯುತ್ತಿತ್ತು. ಕಾಮರೂಪಿಯಾದ ಆ ಕ್ರೂರ ರಾಕ್ಷಸನು ಬಾಣಗಳಿಂದ ಬಹಳವಾಗಿ ಗಾಯಗೊಳಿಸಿದ್ದನು.॥21॥
ಮೂಲಮ್ - 22
ಪಪಾತ ಪ್ರಥಮಂ ರಾಮೋ ವಿದ್ಧೋ ಮರ್ಮಸು ಮಾರ್ಗಣೈಃ ।
ಕ್ರೋಧಾದಿಂದ್ರಜಿತಾ ಯೇನ ಪುರಾ ಶಕ್ರೋ ವಿನಿರ್ಜಿತಃ ॥
ಅನುವಾದ
ಹಿಂದೆ ಇಂದ್ರನನ್ನೇ ಗೆದ್ದ ಆ ಇಂದ್ರಜಿತು ಕ್ರುದ್ಧನಾಗಿ ಪ್ರಯೋಗಿಸಿದ ಬಾಣಗಳ ಮರ್ಮಾಘಾತದಿಂದ ಮೊದಲಿಗೆ ಶ್ರೀರಾಮನು ಧರೆಗುರುಳಿದನು.॥22॥
ಮೂಲಮ್ - 23
ರುಕ್ಮಪುಂಖೈಃ ಪ್ರಸನ್ನಾಗ್ರೈ ರಜೋಗತಿಭಿರಾಶುಗೈಃ ।
ನಾರಾಚೈರರ್ಧನಾರಾಚೈರ್ಭಲ್ಲೈರಂಜಲಿಕೈರಪಿ ।
ವಿವ್ಯಾಧ ವತ್ಸದಂತೈಶ್ಚ ಸಿಂಹದಂಷ್ಟ್ರೈಃ ಕ್ಷುರೈಸ್ತಥಾ ॥
ಅನುವಾದ
ಇಂದ್ರಜಿತುವು ಸ್ವರ್ಣ ಪಂಖಗಳುಳ್ಳ ಸ್ವಚ್ಛವಾದ ಅಗ್ರಭಾಗ ಮತ್ತು ಧೂಳಿಗೆ ಸಮಾನವಾದ ಶೀಘ್ರಗಾಮಿ ನಾರಾಚ, ಅರ್ಧನಾರಾಚ, ಭಲ್ಲ, ಅಂಜಲಿಕ, ವತ್ಸದಂತ, ಸಿಂಹದಂಷ್ಟ್ರ, ಕ್ಷುರ ಮುಂತಾದ ಬಾಣಗಳಿಂದ ಗಾಯಗೊಳಿಸಿದ್ದನು.॥23॥
ಮೂಲಮ್ - 24
ಸ ವೀರಶಯನೇ ಶಿಶ್ಯೇಽವಿಜ್ಯಮಾವಿಧ್ಯ ಕಾರ್ಮುಕಮ್ ।
ಭಿನ್ನಮುಷ್ಟಿಪರೀಣಾಹಂ ತ್ರಿನತಂ ರುಕ್ಮಭೂಷಿತಮ್ ॥
ಅನುವಾದ
ಶಿಥಿಲವಾದ ಮುಷ್ಟಿಯುಳ್ಳ ಎರಡೂ ತುದಿಗಳಲ್ಲಿ ಮತ್ತು ಮಧ್ಯಭಾಗದಲ್ಲಿಯೂ ಬಾಗಿಕೊಂಡಿದ್ದ ಸ್ವರ್ಣಭೂಷಿತವಾದ, ಹೆದೆ ಏರಿಸಿದ ಧನುಸ್ಸನ್ನು ತ್ಯಜಿಸಿ ಶ್ರೀರಾಮನು ವೀರಶಯ್ಯೆಯಲ್ಲಿ ಮಲಗಿದ್ದನು.॥24॥
ಮೂಲಮ್ - 25
ಬಾಣಪಾತಾಂತರೇ ರಾಮಂ ಪತಿತಂ ಪುರುಷರ್ಷಭಮ್ ।
ಸ ತತ್ರ ಲಕ್ಷ್ಮಣೋ ದೃಷ್ಟ್ವಾ ನಿರಾಶೋ ಜೀವಿತೇಽಭವತ್ ॥
ಅನುವಾದ
ಎಸೆದ ಬಾಣವು ಎಷ್ಟು ದೂರ ಬೀಳುವುದೋ ಅಷ್ಟು ದೂರದಲ್ಲಿ ನೆಲಕ್ಕೆ ಬಿದ್ದಿದ್ದ ಪುರುಷಶ್ರೇಷ್ಠ ಶ್ರೀರಾಮನನ್ನು ನೋಡಿ ಲಕ್ಷ್ಮಣನು ತನ್ನ ಜೀವಿತದಲ್ಲೇ ನಿರಾಶನಾದನು.॥25॥
ಮೂಲಮ್ - 26
ರಾಮಂ ಕಮಲಪತ್ರಾಕ್ಷಂ ಶರಣ್ಯಂ ರಣತೋಷಿಣಮ್ ।
ಶುಶೋಚ ಭ್ರಾತರಂ ದೃಷ್ಟ್ವಾಪತಿತಂ ಧರಣೀತಲೇ ॥
ಅನುವಾದ
ಸರ್ವರಿಗೂ ಶರಣ್ಯನಾದ, ಯುದ್ಧದಿಂದ ಸಂತುಷ್ಟನಾಗುವ ಕಮಲನಯನ, ತನ್ನಣ್ಣ ಶ್ರೀರಾಮನು ನೆಲದಲ್ಲಿ ಬಿದ್ದಿರುವುದನ್ನು ನೋಡಿ ಲಕ್ಷ್ಮಣನಿಗೆ ಬಹಳ ಶೋಕವುಂಟಾಯಿತು.॥26॥
ಮೂಲಮ್ - 27
ಹರಯಶ್ಚಾಪಿ ತಂ ದೃಷ್ಟ್ವಾ ಸಂತಾಪಂ ಪರಮಂ ಗತಾಃ ।
ಶೋಕಾರ್ತಾಶ್ಚುಕ್ರುಶುರ್ಘೋರಮಶ್ರುಪೂರಿತಲೋಚನಾಃ ॥
ಅನುವಾದ
ಆ ಸ್ಥಿತಿಯಲ್ಲಿ ರಾಮನನ್ನು ನೋಡಿದ ವಾನರರಿಗೂ ತುಂಬಾ ದುಃಖವಾಯಿತು. ಅವರು ಶೋಕಾತುರರಾಗಿ ಕಣ್ಣೀರು ಸುರಿಸುತ್ತಾ ಆರ್ತನಾದ ಮಾಡತೊಡಗಿದರು.॥27॥
ಮೂಲಮ್ - 28
ಬದ್ಧೌ ತು ತೌ ವೀರಶಯೇ ಶಯಾನೌ
ತೇ ವಾನರಾಃ ಸಂಪರಿವಾರ್ಯತಸ್ಥುಃ ।
ಸಮಾಗತಾ ವಾಯುಸುತ ಪ್ರಮುಖ್ಯಾ
ವಿಷಾದಮಾರ್ತಾಃ ಪರಮಂ ಚ ಜಗ್ಮುಃ ॥
ಅನುವಾದ
ನಾಗಪಾಶದಲ್ಲಿ ಬಂಧಿತರಾಗಿ ವೀರಶಯ್ಯೆಯಲ್ಲಿ ಮಲಗಿರುವ ಆ ಸಹೋದರರಿಬ್ಬರ ಸುತ್ತಲೂ ಎಲ್ಲ ವಾನರರು ನಿಂತುಕೊಂಡರು. ಅಲ್ಲಿಗೆ ಬಂದಿರುವ ಹನುಮಂತನೇ ಮುಖ್ಯ ಮುಖ್ಯ ವಾನರರು ವ್ಯಥೆಗೊಂಡು ಬಹಳವಾಗಿ ವಿಷಾದಿಸಿದರು.॥28॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತೈದನೆಯ ಸರ್ಗ ಪೂರ್ಣವಾಯಿತು.॥45॥