वाचनम्
ಭಾಗಸೂಚನಾ
ರಾತ್ರೆಯಲ್ಲಿ ವಾನರರ ರಾಕ್ಷಸರ ಘೋರಯುದ್ಧ, ಅಂಗದನಿಂದ ಇಂದ್ರಜಿತುವಿನ ಪರಾಜಯ, ಮಾಯೆಯಿಂದ ಅದೃಶ್ಯವಾದ ಇಂದ್ರಜಿತು ನಾಗಬಾಣಗಳಿಂದ ಶ್ರೀರಾಮ-ಲಕ್ಷ್ಮಣರನ್ನು ಬಂಧಿಸಿದುದು
ಮೂಲಮ್ - 1
ಯುದ್ಧ್ಯತಾಮೇವ ತೇಷಾಂ ತು ತದಾ ವಾನರರಕ್ಷಸಾಮ್ ।
ರವಿರಸ್ತಂ ಗತೋ ರಾತ್ರಿಃ ಪ್ರವೃತ್ತಾ ಪ್ರಾಣಹಾರಿಣೀ ॥
ಅನುವಾದ
ಹೀಗೆ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ಯುದ್ಧ ನಡೆಯುತ್ತಿರುವಾಗ ಸೂರ್ಯನು ಅಸ್ತಂಗತನಾಗಿ ಪ್ರಾಣಗಳ ಸಂಹಾರ ಮಾಡುವ ರಾತ್ರಿಯ ಆಗಮನ ವಾಯಿತು.॥1॥
ಮೂಲಮ್ - 2
ಅನ್ಯೋನ್ಯಂ ಬದ್ಧವೈರಾಣಾಂ ಘೋರಾಣಾಂ ಜಯಮಿಚ್ಛತಾಮ್ ।
ಸಂಪ್ರವೃತ್ತಂ ನಿಶಾಯುದ್ಧಂ ತದಾ ವಾನರರಕ್ಷಸಾಮ್ ॥
ಅನುವಾದ
ಬದ್ಧವೈರಿಗಳಾದ ಎರಡೂ ಪಕ್ಷದಲ್ಲಿ ವಾನರರು, ರಾಕ್ಷಸರು, ಭಾರೀ ಭಯಂಕರ ಯೋಧರಿದ್ದರು ಹಾಗೂ ತಮ್ಮ ತಮ್ಮ ವಿಜಯವನ್ನು ಇಚ್ಛಿಸುತ್ತಿದ್ದರು. ಅದರಿಂದ ಆಗ ರಾತ್ರೆಯುದ್ಧ ಪ್ರಾರಂಭವಾಯಿತು.॥2॥
ಮೂಲಮ್ - 3
ರಾಕ್ಷಸೋಽಸೀತಿ ಹರಯೋ ವಾನರೋಽಸೀತಿ ರಾಕ್ಷಸಾಃ ।
ಅನ್ಯೋನ್ಯಂ ಸಮರೇ ಜಘ್ನು ಸ್ತಸ್ಮಿಂಸ್ತಮಸಿ ದಾರುಣೇ ॥
ಅನುವಾದ
ಆ ದಾರುಣ ಅಂಧಕಾರದಲ್ಲಿ ವಾನರರು ತನ್ನ ಎದುರಾಳಿಯನ್ನು ನೀನು ರಾಕ್ಷಸನಾಗಿರುವೆಯಾ? ಎಂದು ಕೇಳುತ್ತಿದ್ದರು. ಹಾಗೆಯೇ ರಾಕ್ಷಸರು-ನೀನು ವಾನರನಾಗಿರುವೆಯಾ? ಎಂದು ಕೇಳುತ್ತಿದ್ದರು. ಹೀಗೆ ಕೇಳಿ-ಕೆರಳಿ ಪರಸ್ಪರ ಯುದ್ಧದಲ್ಲಿ ಪ್ರಹರಿಸುತ್ತಿದ್ದರು.॥3॥
ಮೂಲಮ್ - 4
ಹತ ದಾರಯ ಚೈಹೀತಿ ಕಥಂ ವಿದ್ರವಸೀತಿ ಚ ।
ಏವಂ ಸುತುಮುಲಃ ಶಬ್ದ ಸ್ತಸ್ಮಿಂ ಸೈನ್ಯೇ ತು ಶುಶ್ರುವೇ ॥
ಅನುವಾದ
ಸೈನ್ಯಗಳಲ್ಲಿ ಹೊಡಿ, ಕಡಿ, ನಿಲ್ಲು, ಓಡಬೇಡ ಮುಂತಾದ ಭಯಂಕರ ಶಬ್ದಗಳು ಕೇಳಿಬರುತ್ತಿದ್ದವು.॥4॥
ಮೂಲಮ್ - 5
ಕಾಲಾಃ ಕಾಂಚನ ಸನ್ನಾಹಾಸ್ತಸ್ಮಿಂಸ್ತಮಸಿ ರಾಕ್ಷಸಾಃ ।
ಸಂಪ್ರದೃಶ್ಯಂತ ಶೈಲೇಂದ್ರಾ ದೀಪ್ತೌಷಧಿವನಾ ಇವ ॥
ಅನುವಾದ
ಕಪ್ಪಾದ ರಾಕ್ಷಸರು ಸ್ವರ್ಣಮಯ ಕವಚಗಳನ್ನು ತೊಟ್ಟು, ಆ ಅಂಧಕಾರದಲ್ಲಿ ಹೊಳೆಯುತ್ತಿರುವ ಔಷಧಿಗಳಿಂದ ಕೂಡಿದ ಕಪ್ಪಾದ ಪರ್ವತದಂತೆ ಕಾಣುತ್ತಿದ್ದರು.॥5॥
ಮೂಲಮ್ - 6
ತಸ್ಮಿಂ ಸ್ತಮಸಿ ದುಷ್ಪಾರೇ ರಾಕ್ಷಸಾಃ ಕ್ರೋಧಮೂರ್ಛಿತಾಃ ।
ಪರಿಪೇತುರ್ಮಹಾವೇಗಾ ಭಕ್ಷಯಂತಃ ಪ್ಲವಂಗಮಾನ್ ॥
ಅನುವಾದ
ಅಂಧಕಾರದಿಂದ ಪಾರಾಗಲು ಬಹಳ ಕಠಿಣವಾಗಿತ್ತು. ಅದರಲ್ಲಿ ಕ್ರೋಧದಿಂದ ಅಧೀರರಾದ ಮಹಾವೇಗಶಾಲಿ ರಾಕ್ಷಸರು ವಾನರರನ್ನು ತಿಂದು ಹಾಕುತ್ತಾ ಅವರನ್ನು ಆಕ್ರಮಿಸಿದರು.॥6॥
ಮೂಲಮ್ - 7
ತೇ ಹಯಾನ್ ಕಾಂಚನಾಪೀಡಾನ್ ಧ್ವಜಾಂಶ್ಚಾಶೀವಿಘೋಪಮಾನ್ ।
ಆಪ್ಲುತ್ಯ ದಶನೈಸ್ತೀಕ್ಷ್ಣೈರ್ಭೀಮಕೋಪಾ ವ್ಯದಾರಯನ್ ॥
ಅನುವಾದ
ಆಗ ವಾನರರ ಕ್ರೋಧವು ಭಯಾನಕವಾಗಿ ಹೆಚ್ಚಿತು. ಅವರು ನೆಗೆಯುತ್ತಾ ತಮ್ಮ ಹರಿತವಾದ ಹಲ್ಲುಗಳಿಂದ ಸ್ವರ್ಣಭೂಷಿತ ರಾಕ್ಷಸರ ಸೈನ್ಯವನ್ನು, ಕುದುರೆಗಳನ್ನು, ವಿಷಧರ ಸರ್ಪಗಳಂತೆ ಕಾಣುವ ಧ್ವಜಗಳನ್ನು ಧ್ವಂಸಮಾಡಿದರು.॥7॥
ಮೂಲಮ್ - 8½
ವಾನರಾ ಬಲಿನೋ ಯುದ್ಧೇಽಕ್ಷೋ ಭಯನ್ ರಾಕ್ಷಸೀಂ ಚಮೂಮ್ ।
ಕುಂಜರಾನ್ಕುಂಜ ರಾರೋಹಾನ್ ಪತಾಕಾಧ್ವ ಜಿನೋ ರಥಾನ್ ॥
ಚಕರ್ಷುಶ್ಚ ದದಂಶುಶ್ಚದಶನೈಃ ಕ್ರೋಧಮೂರ್ಛಿತಾಃ ।
ಅನುವಾದ
ಬಲವಂತ ವಾನರರು ಯುದ್ಧದಲ್ಲಿ ರಾಕ್ಷಸ ಸೈನ್ಯದೊಳಗೆ ಕೋಲಾಹಲವೆಬ್ಬಿಸಿದರು. ಅವರೆಲ್ಲರೂ ಕ್ರೋಧದಿಂದ ಹುಚ್ಚರಂತಾಗಿ ಆನೆಗಳನ್ನು, ಆನೆಯ ಸವಾರರನ್ನು ಧ್ವಜ-ಪತಾಕೆಗಳನ್ನು ಸುಶೋಭಿತ ರಥಗಳನ್ನು ಎಳೆದೆಳೆದು ಹಲ್ಲುಗಳಿಂದ ಕಡಿದು ಕ್ಷತ-ವಿಕ್ಷಿತ ಗೊಳಿಸುತ್ತಿದ್ದರು.॥8॥
ಮೂಲಮ್ - 9½
ಲಕ್ಷ್ಮಣಶ್ಚಾಪಿ ರಾಮಶ್ಚ ಶರೈರಾಶೀವಿಷೋಪಮೈಃ ॥
ದೃಶ್ಯಾದೃಶ್ಯಾನಿ ರಕ್ಷಾಂಸಿ ಪ್ರವರಾಣಿ ನಿಜಘ್ನತುಃ ।
ಅನುವಾದ
ದೊಡ್ಡ ದೊಡ್ಡ ರಾಕ್ಷಸರು ಕೆಲವೊಮ್ಮೆ ಪ್ರಕಟರಾಗಿ, ಕೆಲವೊಮ್ಮೆ ಅದೃಶ್ಯರಾಗುತ್ತಿದ್ದರು. ಆದರೆ ಶ್ರೀರಾಮ-ಲಕ್ಷ್ಮಣರು ವಿಷಧರ ಸರ್ಪಗಳಂತೆ ಬಾಣಗಳಿಂದ ದೃಶ್ಯ-ಅದೃಶ್ಯ ಎಲ್ಲ ರಾಕ್ಷಸರನ್ನು ಕೊಂದುಹಾಕುತ್ತಿದ್ದರು.॥9॥
ಮೂಲಮ್ - 10½
ತುರಂಗಖುರವಿಧ್ವಸ್ತಂ ರಥನೇಮಿಸಮುತ್ಥಿತಮ್ ॥
ರುರೋಧ ಕರ್ಣನೇತ್ರಾಣಿ ಯುದ್ಧ್ಯತಾಂ ಧರಣೀ ರಜಃ ।
ಅನುವಾದ
ಕುದುರೆಗಳ ಗೊರಸುಗಳಿಂದ, ರಥ ಚಕ್ರಗಳಿಂದ ಎದ್ದ ಧೂಳು ಯೋಧರ ಕಿವಿ-ಕಣ್ಣುಗಳಲ್ಲಿ ತುಂಬಿಹೋಗುತ್ತಿತ್ತು.॥10॥
ಮೂಲಮ್ - 11
ವರ್ತಮಾನೇ ತಥಾಘೋರೇ ಸಂಗ್ರಾಮೇ ರೋಮಹರ್ಷಣೇ ।
ರುಧಿರೌಘಾ ಮಹಾಘೋರಾ ನದ್ಯಸ್ತತ್ರ ಪ್ರಸುಸ್ರುವುಃ ॥
ಅನುವಾದ
ಹೀಗೆ ರೋಮಾಂಚಕಾರಿ ಭಯಂಕರ ಸಂಗ್ರಾಮ ನಡೆದಾಗ ಅಲ್ಲಿ ರಕ್ತದ ಭಯಂಕರ ನದಿಗಳು ಹರಿಯ ತೊಡಗಿದವು.॥11॥
ಮೂಲಮ್ - 12
ತತೋ ಭೇರೀಮೃದಂಗಾನಾಂ ಪಣವಾನಾಂ ಚ ನಿಃಸ್ವನಃ ।
ಶಂಖನೇಮಿಸ್ವನೋನ್ಮಿಶ್ರಃ ಸಂಬಭೂವಾದ್ಭುತೋಪಮಃ ॥
ಅನುವಾದ
ಅನಂತರ ಭೇರಿ, ಮೃದಂಗ, ಪಣವ, ಶಂಖ ಮೊದಲಾದ ವಾದ್ಯಗಳ ಧ್ವನಿಗಳು, ರಥ ಚಕ್ರಗಳ ಗಡ ಗಡ ಶಬ್ದದೊಂದಿಗೆ ಬೆರೆತು ಅದ್ಭುತವಾಗಿ ಅನಿಸುತ್ತಿತ್ತು.॥12॥
ಮೂಲಮ್ - 13
ಹತಾನಾಂ ಸ್ತನಮಾನಾನಾಂ ರಾಕ್ಷಸಾನಾಂ ಚ ನಿಃಸ್ವನಃ ।
ಶಸ್ತಾನಾಂ ವಾನರಾಣಾಂ ಚ ಸಂಬಭೂವಾತ್ರ ದಾರುಣಃ ॥
ಅನುವಾದ
ಗಾಯಗೊಂಡು ನರಳುತ್ತಿರುವ ರಾಕ್ಷಸರ ಮತ್ತು ಶಸಗಳಿಂದ ಕ್ಷತ-ವಿಕ್ಷಿತರಾದ ವಾನರರ ಆರ್ತನಾದವು ಅಲ್ಲಿ ಭಯಂಕರವಾಗಿ ಕೇಳಿಸುತ್ತಿತ್ತು.॥13॥
ಮೂಲಮ್ - 14
ಹತೈರ್ವಾನರಮುಖ್ಯೈಶ್ಚ ಶಕ್ತಿಶೂಲಪರಶ್ವಧೈಃ ।
ನಿಹತೈಃ ಪರ್ವತಾಕಾರೈ ರಾಕ್ಷಸೈಃ ಕಾಮರೂಪಿಭಿಃ ॥
ಮೂಲಮ್ - 15
ಶಸ್ತ್ರಪುಷ್ಪೋಪಹಾರಾ ಚ ತತ್ರಾಸೀದ್ ಯುದ್ಧಮೇದಿನೀ ।
ದುರ್ಜ್ಞೆಯಾ ದುರ್ನಿವೇಶಾ ಚ ಶೋಣಿತಾಸ್ರಾವಕರ್ದಮಾ ॥
ಅನುವಾದ
ಶಕ್ತಿ, ಶೂಲ, ಗಂಡುಕೊಡಲಿಯಿಂದ ಕೊಲ್ಲಲ್ಪಟ್ಟ ಮುಖ್ಯ ಮುಖ್ಯ ವಾನರರಿಂದ ಹಾಗೂ ವಾನರರಿಂದ ಕಾಲವಶರಾದ ಕಾಮರೂಪಿಗಳಾದ ರಾಕ್ಷಸರಿಂದ ಹರಿದ ರಕ್ತಪ್ರವಾಹದಿಂದ ಆ ಯುದ್ಧಭೂಮಿಯಲ್ಲಿ ಕೆಸರಾಗಿ ಹೋಗಿತ್ತು. ಅದನ್ನು ನೋಡುವುದು, ಅಲ್ಲಿ ನಿಲ್ಲುವುದು ಬಹಳ ಕಷ್ಟವಾಗಿತ್ತು. ಆ ಯುದ್ಧಭೂಮಿಯಲ್ಲಿ ಶಸರೂಪೀ ಪುಷ್ಪಗಳನ್ನು ಅರ್ಪಿಸಿದಂತೆ ಅನಿಸುತ್ತಿತ್ತು.॥14-15॥
ಮೂಲಮ್ - 16
ಸಾ ಬಭೂವ ನಿಶಾ ಘೋರಾ ಹರಿರಾಕ್ಷಸಹಾರಿಣೀ ।
ಕಾಲರಾತ್ರೀವ ಭೂತಾನಾಂ ಸರ್ವೇಷಾಂ ದುರತಿಕ್ರಮಾ ॥
ಅನುವಾದ
ವಾನರರ ಹಾಗೂ ರಾಕ್ಷಸರ ಸಂಹಾರ ಮಾಡಿದ ಆ ಭಯಂಕರ ರಜನಿಯು ಕಾಲರಾತ್ರಿಯಂತೆ ಸಮಸ್ತ ಪ್ರಾಣಿಗಳಿಗೆ ದಾಟಲಶಕ್ಯವಾಗಿತ್ತು.॥16॥
ಮೂಲಮ್ - 17
ತತಸ್ತೇ ರಾಕ್ಷಸಾಸ್ತತ್ರ ತಸ್ಮಿಂಸ್ತಮಸಿ ದಾರುಣೇ ।
ರಾಮಮೇವಾಭ್ಯ ವರ್ತಂತ ಸಂಹೃಷ್ಟಾಃ ಶರವೃಷ್ಟಿಭಿಃ ॥
ಅನುವಾದ
ಅನಂತರ ಆ ದಾರುಣ ಅಂಧಕಾರದಲ್ಲಿ ಎಲ್ಲ ರಾಕ್ಷಸರು ಹರ್ಷೋತ್ಸಾಹದಿಂದ ಬಾಣಗಳ ಮಳೆಗರೆಯುತ್ತಾ ಶ್ರೀರಾಮನ ಮೇಲೆ ಆಕ್ರಮಣ ಮಾಡಿದರು.॥17॥
ಮೂಲಮ್ - 18
ತೇಷಾಮಾಪತತಾಂ ಶಬ್ದಃ ಕ್ರುದ್ಧಾನಾಮಪಿ ಗರ್ಜತಾಮ್ ।
ಉದ್ವರ್ತ ಇವ ಸಪ್ತಾನಾಂ ಸಮುದ್ರಾಣಾಮಭೂತ್ ಸ್ವನಃ ॥
ಅನುವಾದ
ಆಗ ಕುಪಿತರಾಗಿ ಗರ್ಜಿಸುತ್ತಿರುವ ಆಕ್ರಮಣಕಾರೀ ರಾಕ್ಷಸರ ಶಬ್ದವು ಪ್ರಳಯಸಮಯದಲ್ಲಿ ಏಳು ಸಮುದ್ರಗಳ ಮಹಾಕೋಲಾಹದಂತೆ ಅನಿಸುತ್ತಿತ್ತು.॥18॥
ಮೂಲಮ್ - 19
ತೇಷಾಂ ರಾಮಃ ಶರೈಃ ಷಡ್ಭಿಃ ಷಡ್ ಜಘಾನ ನಿಶಾಚರಾನ್ ।
ನಿಮೇಷಾಂತರಮಾತ್ರೇಣ ಶಿತೈರಗ್ನಿಶಿಖೋಪಮೈಃ ॥
ಅನುವಾದ
ಶ್ರೀರಾಮಚಂದ್ರನು ಆಗ ಕಣ್ಣುಮುಚ್ಚಿತೆರೆಯು ವಷ್ಟರಲ್ಲಿ ಅಗ್ನಿಯಂತಹ ಆರು ಭಯಾನಕ ಬಾಣಗಳಿಂದ ಕೆಳಗೆ ಹೇಳಿದ ಆರು ನಿಶಾಚರನನ್ನು ಗಾಯಗೊಳಿಸಿದನು.॥19॥
ಮೂಲಮ್ - 20
ಯಜ್ಞ ಶತ್ರುಶ್ಚ ದುರ್ಧರ್ಷೋ ಮಹಾಪಾರ್ಶ್ವ ಮಹೋದರೌ ।
ವಜ್ರದಂಷ್ಟ್ರೋ ಮಹಾಕಾಯಸ್ತೌ ಚೋಭೌ ಶುಕಸಾರಣೌ ॥
ಅನುವಾದ
ಅವರ ಹೆಸರುಗಳು ಇಂತಿದ್ದವು-ದುರ್ಧರ್ಷ ವೀರ ಯಜ್ಞಶತ್ರು, ಮಹಾಪಾರ್ಶ್ವ, ಮಹೋದರ, ಮಹಾ ಕಾಯ, ವಜ್ರದಂಷ್ಟ್ರ ಹಾಗೂ ಶುಕ ಸಾರಣ.॥20॥
ಮೂಲಮ್ - 21
ತೇ ತು ರಾಮೇಣ ಬಾಣೌಘೈಃ ಸರ್ವಮರ್ಮಸು ತಾಡಿತಾಃ ।
ಯುದ್ಧಾ ದಪಸೃತಾಸ್ತತ್ರ ಸಾವಶೇಷಾಯುಷೋಽಭವನ್ ॥
ಅನುವಾದ
ಶ್ರೀರಾಮನ ಬಾಣಸಮೂಹಗಳಿಂದ ಮರ್ಮಸ್ಥಾನಕ್ಕೆ ಏಟು ಬಿದ್ದಿದ್ದರಿಂದ ಆ ಆರೂ ರಾಕ್ಷಸರು ಯುದ್ಧಬಿಟ್ಟು ಓಡಿಹೋದರು; ಅದರಿಂದ ಅವರು ಬದುಕುಳಿದರು.॥21॥
ಮೂಲಮ್ - 22
ನಿಮೇಷಾಂತರಮಾತ್ರೇಣ ಘೋರೈರಗ್ನಿಶಿಖೋಪಮೈಃ ।
ದಿಶಶ್ಚಕಾರ ವಿಮಲಾಃ ಪ್ರದಿಶಶ್ಚ ಮಹಾರಥಃ ॥
ಅನುವಾದ
ಮಹಾರಥಿ ಶ್ರೀರಾಮನ ಅಗ್ನಿಶಿಖೆಯಂತಿದ್ದ ಪ್ರಜ್ವಲಿತ ಭಯಂಕರ ಬಾಣಗಳಿಂದ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ದಶದಿಕ್ಕುಗಳನ್ನು ನಿರ್ಮಲ ಪ್ರಕಾಶಮಾನವಾಗಿ ಮಾಡಿದನು.॥22॥
ಮೂಲಮ್ - 23
ಯೇ ತ್ವನ್ಯೇ ರಾಕ್ಷಸಾ ವೀರಾ ರಾಮಸ್ಯಾಭಿಮುಖೇ ಸ್ಥಿತಾಃ ।
ತೇಽಪಿ ನಷ್ಟಾಃ ಸಮಾಸಾದ್ಯ ಪತಂಗಾ ಇವ ಪಾವಕಮ್ ॥
ಅನುವಾದ
ಶ್ರೀರಾಮನ ಎದುರಿಗೆ ನಿಂತಿದ್ದ ಇತರ ರಾಕ್ಷಸವೀರರು ಬೆಂಕಿಯಲ್ಲಿ ಬಿದ್ದು ಸುಟ್ಟುಹೋಗುವ ಪತಂಗಳಂತೆ ನಾಶವಾಗಿ ಹೋದರು.॥23॥
ಮೂಲಮ್ - 24
ಸುವರ್ಣಪುಂಖೈರ್ವಿಶಿಖೈಃ ಸಂಪತದ್ಭಿಃ ಸಮಂತತಃ ।
ಬಭೂವ ರಜನೀ ಚಿತ್ರಾ ಖದ್ಯೋತೈರಿವ ಶಾರದೀ ॥
ಅನುವಾದ
ಎಲ್ಲೆಲ್ಲೂ ಸುವರ್ಣಮಯ ಪಂಖಗಳುಳ್ಳ ಬಾಣಗಳು ಬೀಳುತ್ತಿದ್ದವು. ಅವುಗಳ ಪ್ರಭೆಯಿಂದ ಆ ರಜನಿಯು ಮಿಣುಕು ಹುಳುಗಳಿಂದ ವಿಚಿತ್ರವಾಗಿ ತೋರುವ ಶರದ್ ಋತುವಿನ ರಾತ್ರಿಯಂತೆ ಅದ್ಭುತವಾಗಿ ಕಾಣುತ್ತಿತ್ತು.॥24॥
ಮೂಲಮ್ - 25
ರಾಕ್ಷಸಾನಾಂ ಚ ನಿನದೈರ್ಭೇರೀಣಾಂ ಚೈವ ನಿಃಸ್ವನೈಃ ।
ಸಾ ಬಭೂವ ನಿಶಾ ಘೋರಾ ಭೂಯೋ ಘೋರತರಾಭವತ್ ॥
ಅನುವಾದ
ರಾಕ್ಷಸರ ಸಿಂಹನಾದಗಳಿಂದ, ಭೇರಿಗಳ ನಿನಾದದಿಂದ ಆ ಭಯಾನಕ ರಾತ್ರಿಯು ಇನ್ನೂ ಭಯಂಕರವಾಯಿತು.॥25॥
ಮೂಲಮ್ - 26
ತೇನ ಶಬ್ದೇನ ಮಹತಾ ಪ್ರವೃದ್ಧೇನ ಸಮಂತತಃ ।
ತ್ರಿಕೂಟಃ ಕಂದರಾಕೀರ್ಣಃ ಪ್ರವ್ಯಾಹರದಿವಾಚಲಃ ॥
ಅನುವಾದ
ಎಲ್ಲೆಡೆ ಹರಡಿದ ಆ ಮಹಾನ್ ಶಬ್ದವು ಪ್ರತಿಧ್ವನಿತವಾಗಿ ಕಂದರಗಳಿಂದ ಕೂಡಿದ ತ್ರಿಕೂಟಪರ್ವತವು ಯಾರೋ ಮಾತಿಗೆ ಉತ್ತರಿಸುವಂತೆ ಅನಿಸುತ್ತಿತ್ತು.॥26॥
ಮೂಲಮ್ - 27
ಗೋಲಾಂಗೂಲಾ ಮಹಾಕಾಯಾಸ್ತಮಸಾ ತುಲ್ಯವರ್ಚಸಃ ।
ಸಂಪರಿಷ್ವಜ್ಯ ಬಾಹುಭ್ಯಾಂ ಭಕ್ಷಯನ್ ರಜನೀಚರಾನ್ ॥
ಅನುವಾದ
ಗೋಲಾಂಗುಲ ಜಾತಿಯ ವಿಶಾಲಕಾಯ ವಾನರರು ಅಂಧಕಾರದಂತೆ ಕಪ್ಪಾಗಿದ್ದು, ನಿಶಾಚರರನ್ನು ಎರಡೂ ಬಾಹುಗಳಿಂದ ಬಿಗಿದಪ್ಪಿ ಕೊಂದು ಹಾಕಿ, ಅವರನ್ನು ನಾಯಿಗಳಿಗೆ ತಿನ್ನಲು ಎಸೆಯುತ್ತಿದ್ದರು.॥27॥
ಮೂಲಮ್ - 28
ಅಂಗದಸ್ತು ರಣೇ ಶತ್ರೂನ್ ನಿಹಂತುಂ ಸಮುಪಸ್ಥಿತಃ ।
ರಾವಣಿಂ ನಿಜಘಾನಾಶು ಸಾರಥಿಂ ಚ ಹಯಾನಪಿ ॥
ಅನುವಾದ
ಇನ್ನೊಂದೆಡೆ ಅಂಗದನು ರಣಭೂಮಿಯಲ್ಲಿ ಶತ್ರುಗಳನ್ನು ಸಂಹರಿಸಲು ಮುಂದುವರಿದನು. ಅವನು ರಾವಣಪುತ್ರ ಇಂದ್ರಜಿತುವನ್ನು ಗಾಯಗೊಳಿಸಿ ಅವನ ಸಾರಥಿ ಮತ್ತು ಕುದುರೆಗಳನ್ನು ಕೊಂದುಹಾಕಿದನು.॥28॥
ಮೂಲಮ್ - 29
ಇಂದ್ರಜಿತ್ತು ರಥಂ ತ್ಯಕ್ತ್ವಾ ಹತಾಶ್ವೋ ಹತಸಾರಥಿಃ ।
ಅಂಗದೇನ ಮಹಾತ್ಯಸ್ತಸ್ತತ್ರೈವಾಂತರಧೀಯತ ॥
ಅನುವಾದ
ಅಂಗದನು ಕುದುರೆ, ಸಾರಥಿಯನ್ನು ಕೊಂದುಹಾಕಿದಾಗ ಇಂದ್ರಜಿತು ತೊಂದರೆಗೊಳಗಾಗಿ ರಥವನ್ನು ಬಿಟ್ಟು ಅಂತರ್ಧಾನನಾದನು.॥29॥
ಮೂಲಮ್ - 30
ತತ್ಕರ್ಮ ವಾಲಿಪುತ್ರಸ್ಯ ಸರ್ವೇ ದೇವಾಃ ಸಹರ್ಷಿಭಿಃ ।
ತುಷ್ಟುವುಃ ಪೂಜನಾರ್ಹಸ್ಯ ತೌ ಚೋಭೌ ರಾಮಲಕ್ಷ್ಮಣೌ ॥
ಅನುವಾದ
ಪ್ರಶಂಸೆಗೆ ಯೋಗ್ಯನಾದ ವಾಲಿಕುಮಾರ ಅಂಗದನ ಆ ಪರಾಕ್ರಮವನ್ನು ಋಷಿಗಳ ಸಹಿತ ದೇವತೆಗಳು ಹಾಗೂ ಶ್ರೀರಾಮ-ಲಕ್ಷ್ಮಣರು ಭೂರಿ ಭೂರಿ ಪ್ರಶಂಸಿದರು.॥30॥
ಮೂಲಮ್ - 31
ಪ್ರಭಾವಂ ಸರ್ವಭೂತಾನಿ ವಿದುರಿಂದ್ರ ಜಿತೋ ಯುಧಿ ।
ತತಸ್ತೇ ತಂ ಮಹಾತ್ಮಾನಂ ದೃಷ್ಟ್ವಾ ತುಷ್ಟಾಃ ಪ್ರಧರ್ಷಿತಮ್ ॥
ಅನುವಾದ
ಸಮಸ್ತ ಪ್ರಾಣಿಗಳು ಯುದ್ಧದಲ್ಲಿ ಇಂದ್ರಜಿತುವಿನ ಪ್ರಭಾವವನ್ನು ತಿಳಿದಿದ್ದರು. ಆದ್ದರಿಂದ ಅಂಗದನಿಂದ ಅವನ ಪರಾಭವವನ್ನು ನೋಡಿ ಆ ಮಹಾತ್ಮಾ ಅಂಗದನನ್ನು ನೋಡಿ ಎಲ್ಲರಿಗೆ ತುಂಬಾ ಸಂತೋಷವಾಯಿತು.॥31॥
ಮೂಲಮ್ - 32
ತತಃ ಪ್ರಹೃಷ್ಟಾಃ ಕಪಯಃ ಸಸುಗ್ರೀವ ವಿಭೀಷಣಾಃ ।
ಸಾಧುಸಾಧ್ವಿತಿ ನೇದುಶ್ಚ ದೃಷ್ಟ್ವಾ ಶತ್ರುಂ ಪಕಾಡಿತಮ್ ॥
ಅನುವಾದ
ಶತ್ರುವು ಪರಾಜಿತನಾದುದನ್ನು ನೋಡಿ ಸುಗ್ರೀವ, ವಿಭೀಷಣ ಸಹಿತ ಎಲ್ಲ ವಾನರರು ಬಹಳ ಸಂತೋಷಗೊಂಡು ಅಂಗದನನ್ನು ಅಭಿನಂದಿಸಿದರು.॥32॥
ಮೂಲಮ್ - 33
ಇಂದ್ರಜಿತ್ತು ತದಾತೇನ ನಿರ್ಜಿತೋ ಭೀಮಕರ್ಮಣಾ ।
ಸಂಯುಗೇ ವಾಲಿಪುತ್ರೇಣ ಕ್ರೋಧಂ ಚಕ್ರೇ ಸುದಾರುಣಮ್ ॥
ಅನುವಾದ
ಯುದ್ಧದಲ್ಲಿ ಭಯಾನಕ ಕರ್ಮ ಮಾಡುವ ವಾಲಿಪುತ್ರ ಅಂಗದನಿಂದ ಪರಾಜಿತನಾದ ಇಂದ್ರಜಿತು ಭಯಂಕರ ಕ್ರೋಧವನ್ನು ಪ್ರಕಟಪಡಿಸಿದನು.॥33॥
ಮೂಲಮ್ - 34½
ಸೋಂಽತರ್ಧಾನಗತಃ ಪಾಪೋ ರಾವಣೀ ರಣಕರ್ಶಿತಃ ।
ಬ್ರಹ್ಮದತ್ತವರೋ ವೀರೋ ರಾವಣಿಃ ಕ್ರೋಧಮೂರ್ಛಿತಃ ॥
ಅದೃಶ್ಶೋ ನಿಶಿತಾನ್ಬಾಣಾನ್ಮುಮೋಚಾಶನಿವರ್ಚಸಃ ।
ಅನುವಾದ
ರಾವಣಕುಮಾರ ಇಂದ್ರಜಿತು ಬ್ರಹ್ಮದೇವರಿಂದ ವರ ಪಡೆದುಕೊಂಡಿದ್ದನು. ಯುದ್ಧದಲ್ಲಿ ಭಾರೀ ಕಷ್ಟಗಳನ್ನು ಅನುಭವಿಸಿದ ಆ ಪಾಪಿ ರಾವಣಪುತ್ರನು ಕ್ರೋಧದಿಂದ ನಿಶ್ಚೇಷ್ಟಿತನಂತಾಗಿದ್ದನು; ಅದರಿಂದ ಅಂತರ್ಧಾನ ವಿದ್ಯೆಯನ್ನು ಆಶ್ರಯಿಸಿ, ಅದೃಶ್ಯನಾಗಿಯೇ ವಜ್ರದಂತಹ ತೇಜಸ್ವಿ, ಹರಿತಬಾಣಗಳ ಮಳೆಗರೆಯಲು ಪ್ರಾರಂಭಿಸಿದನು.॥34॥
ಮೂಲಮ್ - 35½
ರಾಮಂ ಚ ಲಕ್ಷ್ಮಣಂ ಚೈವ ಘೋರೈರ್ನಾಗಮಯೈಃ ಶರೈಃ ॥
ಬಿಭೇದ ಸಮರೇ ಕ್ರುದ್ಧಃ ಸರ್ವಗಾತ್ರೇಷು ರಾಕ್ಷಸಃ ।
ಅನುವಾದ
ರಣರಂಗದಲ್ಲಿ ಕುಪಿತನಾದ ಇಂದ್ರಜಿತು ಘೋರವಾದ ಸರ್ಪಬಾಣಗಳಿಂದ ಶ್ರೀರಾಮ-ಲಕ್ಷ್ಮಣರನ್ನು ಗಾಯಗೊಳಿಸಿದನು. ರಘುವಂಶೀ ಅವರಿಬ್ಬರೂ ಸರ್ವಾಂಗದಲ್ಲಿ ಗಾಯಗೊಂಡು ಕ್ಷತ-ವಿಕ್ಷಿತರಾಗುತ್ತಿದ್ದರು.॥35॥
ಮೂಲಮ್ - 36
ಮಾಯಯಾ ಸಂವೃತಸ್ತತ್ರ ಮೋಹಯನ್ರಾಘವೌ ಯುಧಿ ॥
ಮೂಲಮ್ - 37
ಅದೃಶ್ಯಃ ಸರ್ವಭೂತಾನಾಂ ಕೂಟಯೋಧೀ ನಿಶಾಚರಃ ।
ಬಬಂಧ ಶರಬಂಧೇನ ಭ್ರಾತರೌ ರಾಮಲಕ್ಷ್ಮಣೌ ॥
ಅನುವಾದ
ಮಾಯೆಯಿಂದ ಸಮಸ್ತ ಪ್ರಾಣಿಗಳಿಗೆ ಅದೃಶ್ಯನಾಗಿದ್ದು ಕೂಟಯುದ್ಧ ಮಾಡುವ ಆ ನಿಶಾಚರನು ಯುದ್ಧದಲ್ಲಿ ರಘುವಂಶೀ ಶ್ರೀರಾಮ-ಲಕ್ಷ್ಮಣರನ್ನು ಮೋಹದಲ್ಲಿ ಕೆಡಹುತ್ತಾ ಸರ್ಪಾಕಾರ ಬಾಣಗಳಿಂದ ಬಂಧಿಸಿಬಿಟ್ಟನು.॥36-37॥
ಮೂಲಮ್ - 38
ತೌ ತೇನ ಪುರುಷವ್ಯಾಘ್ರೌ ಕ್ರುದ್ಧೇನಾಶೀವಿಷೈಃ ಶರೈಃ ।
ಸಹಸಾನಿಹತೌ ವೀರೌ ತದಾ ಪ್ರೈಕ್ಷಂತ ವಾನರಾಃ ॥
ಅನುವಾದ
ಹೀಗೆ ಕ್ರೋಧಗೊಂಡ ಇಂದ್ರಜಿತು ಆ ಇಬ್ಬರು ಪುರುಷಶ್ರೇಷ್ಠ ವೀರರನ್ನು ಸರ್ಪಬಾಣಗದಿಂದ ಬಂಧಿಸಿದನು. ಆಗ ವಾನರರು ನಾಗಪಾಶದಲ್ಲಿ ಬಂಧಿತರಾದ ರಾಮ-ಲಕ್ಷ್ಮಣರನ್ನು ನೋಡಿದರು.॥38॥
ಮೂಲಮ್ - 39
ಪ್ರಕಾಶರೂಪಸ್ತು ಯದಾ ನ ಶಕ್ತ
ಸ್ತೌ ಬಾಧಿತುಂ ರಾಕ್ಷಸರಾಜಪುತ್ರಃ ।
ಮಾಯಾಂ ಪ್ರಯೋಕ್ತುಂ ಸಮುಪಾಜಗಾಮ
ಬಬಂಧ ತೌ ರಾಜಸುತೌ ದುರಾತ್ಮಾ ॥
ಅನುವಾದ
ಪ್ರಕಟವಾಗಿ ಯುದ್ಧ ಮಾಡಿದಾಗ ಇಂದ್ರಜಿತು ಅವರಿಬ್ಬರನ್ನು ಬಾಧಿಸಲು ಅಸಮರ್ಥನಾದಾಗ, ಅವರ ಮೇಲೆ ಮಾಯೆಯನ್ನು ಪ್ರಯೋಗಿಸಿ ಯಶಸ್ವೀಯಾದನು. ಹಾಗೆ ಅವರಿಬ್ಬರನ್ನು ಆ ದುರಾತ್ಮನು ಬಂಧಿಸಿಬಿಟ್ಟನು.॥39॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥44॥