वाचनम्
ಭಾಗಸೂಚನಾ
ದ್ವಂದ್ವಯುದ್ಧದಲ್ಲಿ ರಾಕ್ಷಸರ ಪರಾಜಯ
ಮೂಲಮ್ - 1
ಯುದ್ಧ್ಯತಾಂ ತು ತತಸ್ತೇಷಾಂ ವಾನರಾಣಾಂ ಮಹಾತ್ಮನಾಮ್ ।
ರಕ್ಷಸಾಂ ಸಂಬಭೂವಾಥ ಬಲರೋಷಃ ಸುದಾರುಣಃ ॥
ಅನುವಾದ
ಪರಸ್ಪರ ಯುದ್ಧ ಮಾಡುತ್ತಿದ್ದಾಗ ಮಹಾತ್ಮರಾದ ವಾನರರಿಗೂ ರಾಕ್ಷಸರಿಗೂ ಬಲಸಂಬಂಧೀ ದಾರುಣವಾದ ಭಯಂಕರ ರೋಷ ಉಂಟಾಯಿತು.॥1॥
ಮೂಲಮ್ - 2
ತೇ ಹಯೈಃ ಕಾಂಚನಾಪೀಡೈರ್ಗಜೈಶ್ಚಾಗ್ನಿ ಶಿಖೋಪಮೈಃ ।
ರಥೈಶ್ಚಾದಿತ್ಯಸಂಕಾಶೈಃ ಕವಚೈಶ್ಚ ಮನೋರಮೈಃ ॥
ಮೂಲಮ್ - 3
ನಿರ್ಯಯೂ ರಾಕ್ಷಸಾ ವೀರಾ ನಾದಯಂತೋ ದಿಶೋ ದಶ ।
ರಾಕ್ಷಸಾ ಭೀಮಕರ್ಮಾಣೋ ರಾವಣಸ್ಯ ಜಯೈಷಿಣಃ ॥
ಅನುವಾದ
ಸುವರ್ಣ ಆಭರಣಗಳಿಂದ ಅಲಂಕೃತವಾಗಿದ್ದ ಆನೆ-ಕುದುರೆಗಳ ಮೇಲೆ ಹತ್ತಿ, ಅಗ್ನಿ ಜ್ವಾಲೆಗಳಂತೆ ದೇದೀಪ್ಯಯಾನ ರಥಗಳಲ್ಲಿಯೂ, ಸೂರ್ಯತುಲ್ಯ ಸುಂದರ ಕವಚಗಳಿಂದ ಕೂಡಿದ ರಾಕ್ಷಸ ವೀರರು ತಮ್ಮ ಗರ್ಜನೆಯಿಂದ ಹತ್ತು ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಹೊರಟರು. ಭಯಾನಕ ಕರ್ಮಮಾಡುವ ಅವರೆಲ್ಲರೂ ನಿಶಾಚರ ರಾವಣನ ವಿಜಯವನ್ನು ಬಯಸುತ್ತಿದ್ದರು.॥2-3॥
ಮೂಲಮ್ - 4
ವಾನರಾಣಾಮಪಿ ಚಮೂರ್ಬೃಹತೀ ಜಯಮಿಚ್ಛತಾಮ್ ।
ಅಭ್ಯಧಾವತ ತಾಂ ಸೇನಾಂ ರಕ್ಷಸಾಂ ಘೋರಕರ್ಮಣಾಮ್ ॥
ಅನುವಾದ
ಭಗವಾನ್ ಶ್ರೀರಾಮನ ವಿಜಯವನ್ನು ಬಯಸುವ ವಾನರ ವಿಶಾಲ ಸೈನ್ಯವು ಘೋರಕರ್ಮ ಮಾಡುವ ರಾಕ್ಷಸರ ಸೇನೆಯನ್ನು ಆಕ್ರಮಿಸಿತು.॥4॥
ಮೂಲಮ್ - 5
ಏತಸ್ಮಿನ್ನಂತರೇ ತೇಷಾಮನ್ಯೋನ್ಯ ಮಭಿಧಾವತಾಮ್ ।
ರಕ್ಷಸಾಂ ವಾನರಾಣಾಂ ಚ ದ್ವಂದ್ವ ಯುದ್ಧಮವರ್ತತ ॥
ಅನುವಾದ
ಆಗಲೇ ಪರಸ್ಪರ ಆಕ್ರಮಣ ಮಾಡುತ್ತಾ ರಾಕ್ಷಸರಿಗೂ ವಾನರರಿಗೂ ದ್ವಂದ್ವಯುದ್ಧ ಪ್ರಾರಂಭವಾಯಿತು.॥.॥
ಮೂಲಮ್ - 6
ಅಂಗದೇನೇಂದ್ರಜಿತ್ಸಾರ್ಧಂ ವಾಲಿಪುತ್ರೇಣ ರಾಕ್ಷಸಃ ।
ಅಯುಧ್ಯತ ಮಹಾತೇಜಾಸ್ತಂಬಕೇಣ ಯಥಾಂಧಕಃ ॥
ಅನುವಾದ
ವಾಲಿಪುತ್ರ ಅಂಗದನೊಂದಿಗೆ ಮಹಾ ತೇಜಸ್ವಿ ಇಂದ್ರಜಿತು ತ್ರಂಬಕನೊಡನೆ ಅಂಧಕಾಸುರನು ಯುದ್ಧ ಮಾಡಿದಂತೆ ಕಾದಾಡತೊಡಗಿದನು.॥6॥
ಮೂಲಮ್ - 7
ಪ್ರಜಂಘೇನ ಚ ಸಂಪಾತಿರ್ನಿತ್ಯಂ ದುರ್ಧರ್ಷಣೋ ರಣೇ ।
ಜಂಬುಮಾಲಿನಮಾರಬ್ಧೋ ಹನೂಮಾನಪಿ ವಾನರಃ ॥
ಅನುವಾದ
ಪ್ರಜಂಘ ಎಂಬ ರಾಕ್ಷಸ ನೊಂದಿಗೆ, ರಣದುರ್ಜಯ ವೀರ ಸಂಪಾತಿಯು ಹಾಗೂ ಜಂಬುಮಾಲಿಯೊಡನೆ ವಾನರವೀರ ಹನುಮಂತನು ಯುದ್ಧ ಮಾಡತೊಡಗಿದನು.॥7॥
ಮೂಲಮ್ - 8
ಸಂಗತಸ್ತು ಮಹಾಕ್ರೋಧೋ ರಾಕ್ಷಸೋ ರಾವಣಾನುಜಃ ।
ಸಮರೇ ತೀಕ್ಷ್ಣ ವೇಗೇನ ಮಿತ್ರುಘ್ನೇನ ವಿಭೀಷಣಃ ॥
ಅನುವಾದ
ಅತ್ಯಂತ ಕ್ರೋಧಗೊಂಡಿರುವ ರಾವಣನ ತಮ್ಮ ವಿಭೀಷಣನು ಸಮರಾಂಗಣ ದಲ್ಲಿ ಪ್ರಚಂಡ ವೇಗಶಾಲಿ ರಾಕ್ಷಸ ಶತ್ರುಘ್ನನೊಂದಿಗೆ ಯುದ್ಧಕ್ಕೆ ತೊಡಗಿದನು.॥8॥
ಮೂಲಮ್ - 9
ತಪತೇನ ಗಜಃ ಸಾರ್ಧಂ ರಾಕ್ಷಸೇನ ಮಹಾಬಲಃ ।
ನಿಕುಂಭೇನ ಮಹಾತೇಜಾ ನೀಲೋಽಪಿ ಸಮಯುಧ್ಯತ ॥
ಅನುವಾದ
ಮಹಾಬಲೀ ಗಜನು ತಪನನೆಂಬ ರಾಕ್ಷಸನೊಡನೆ ಕಾದಾಡಿದರೆ, ಮಹಾತೇಜಸ್ವೀ ನೀಲನು ನಿಕುಂಭನೊಂದಿಗೆ ಯುದ್ಧಮಾಡತೊಡಗಿದನು.॥9॥
ಮೂಲಮ್ - 10
ವಾನರೇಂದ್ರಸ್ತು ಸುಗ್ರೀವಃ ಪ್ರಘಸೇನ ಸುಸಂಗತಃ ।
ಸಂಗತಃ ಸಮರೇ ಶ್ರೀಮಾನ್ ವಿರೂಪಾಕ್ಷೇಣ ಲಕ್ಷ್ಮಣಃ ॥
ಅನುವಾದ
ವಾನರರಾಜ ಸುಗ್ರೀವನು ಪ್ರಘಸನೊಂದಿಗೆ ಹಾಗೂ ಶ್ರೀಮಾನ್ ಲಕ್ಷ್ಮಣನು ರಣರಂಗದಲ್ಲಿ ವಿರೂಪಾಕ್ಷನೊಂದಿಗೆ ಯುದ್ಧ ಮಾಡಿದರು.॥10॥
ಮೂಲಮ್ - 11
ಅಗ್ನಿಕೇತುಃ ಸುದುರ್ಧರ್ಷೋ ರಶ್ಮಿಕೇತುಶ್ಚ ರಾಕ್ಷಸಃ ।
ಸುಪ್ತಘ್ನೋ ಯಜ್ಞಕೋಪಶ್ಚ ರಾಮೇಣ ಸಹ ಸಂಗತಾಃ ॥
ಅನುವಾದ
ದುರ್ಜಯವೀರ ಅಗ್ನಿಕೇತು, ರಶ್ಮಿಕೇತು, ಸುಪ್ತಘ್ನ, ಯಜ್ಞಕೋಪ ಮುಂತಾದ ರಾಕ್ಷಸರೆಲ್ಲರೂ ಶ್ರೀರಾಮನೊಡನೆ ಯುದ್ಧಕ್ಕೆ ತೊಡಗಿದರು.॥11॥
ಮೂಲಮ್ - 12
ವಜ್ರಮುಷ್ಟಿಶ್ಚ ಮೈಂದೇನ ದ್ವಿವಿದೇನಾಶನಿಪ್ರಭಃ ।
ರಾಕ್ಷಸಾಭ್ಯಾಂ ಸುಘೋರಾಭ್ಯಾಂ ಕಪಿಮುಖ್ಯೌ ಸಮಾಗತೌ ॥
ಅನುವಾದ
ಮೈಂದನೊಂದಿಗೆ ವಜ್ರಮುಷ್ಟಿಯು, ದ್ವಿವಿದನೊಂದಿಗೆ ಅಶನಿಪ್ರಭನು ಯುದ್ಧಮಾಡ ತೊಡಗಿದರು. ಹೀಗೆ ಈ ಇಬ್ಬರು ಭಯಾನಕ ರಾಕ್ಷಸರೊಂದಿಗೆ ಇಬ್ಬರು ಕಪಿಶ್ರೇಷ್ಠರು ಹೋರಾಡಿದರು.॥12॥
ಮೂಲಮ್ - 13
ವೀರಃ ಪ್ರತಪನೋ ಘೋರೋ ರಾಕ್ಷಸೋ ರಣದುರ್ಧರಃ ।
ಸಮರೇ ತೀಕ್ಷ್ಣವೇಗೇನ ನಲೇನ ಸಮಯುಧ್ಯತ ॥
ಅನುವಾದ
ರಣರಂಗದಲ್ಲಿ ಸೋಲಿಸಲು ಅತ್ಯಂತ ಕಷ್ಟಕರನಾದ ಪ್ರತಪನ ಎಂಬ ಪ್ರಸಿದ್ಧ ಘೋರರಾಕ್ಷಸನು ಯುದ್ಧರಂಗದಲ್ಲಿ ಪ್ರಚಂಡವೇಗಶಾಲಿ ನಳನೊಂದಿಗೆ ಕಾದಾಡತೊಡಗಿದನು.॥13॥
ಮೂಲಮ್ - 14
ಧರ್ಮಸ್ಯ ಪುತ್ರೋ ಬಲವಾನ್ಸುಷೇಣ ಇತಿ ವಿಶ್ರುತಃ ।
ಸ ವಿದ್ಯುನ್ಮಾಲಿನಾ ಸಾರ್ಧಮಯುಧ್ಯತ ಮಹಾಕಪಿಃ ॥
ಅನುವಾದ
ಧರ್ಮನ ಪುತ್ರ ಮಹಾ ಬಲವಂತ ಮಹಾಕಪಿ ಸುಷೇಣನು ರಾಕ್ಷಸ ವಿದ್ಯುನ್ಮಾಲಿ ಯೊಂದಿಗೆ ಯುದ್ಧಕ್ಕೆ ತೊಡಗಿದನು.॥14॥
ಮೂಲಮ್ - 15
ವಾನರಾಶ್ಚಾಪರೇ ಘೋರಾ ರಾಕ್ಷಸೈರಪರೈಃ ಸಹ ।
ದ್ವ್ವಂದ್ವ ಸಮೀಯುಃ ಸಹಸಾ ಯುದ್ಧ್ವಾಚ ಬಹುಭಿಃ ಸಹ ॥
ಅನುವಾದ
ಹೀಗೆ ಬೇರೆ ಬೇರೆ ಭಯಾನಕ ವಾನರರು ಅನೇಕರೊಂದಿಗೆ ಯುದ್ಧ ಮಾಡಿ, ಬಳಿಕ ಇತರ ರಾಕ್ಷಸರೊಂದಿಗೆ ದ್ವಂದ್ವಯುದ್ಧ ಮಾಡತೊಡಗಿದರು.॥15॥
ಮೂಲಮ್ - 16
ತತ್ರಾಸೀತ್ಸುಮಹದ್ಯುದ್ಧಂ ತುಮುಲಂ ರೋಮಹರ್ಷಣಮ್ ।
ರಕ್ಷಸಾಂ ವಾನರಾಣಾಂ ಚ ವೀರಾಣಾಂ ಜಯಮಿಚ್ಛತಾಮ್ ॥
ಅನುವಾದ
ತಮ್ಮ ತಮ್ಮ ವಿಜಯವನ್ನು ಬಯಸುವ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ಭಾರೀ ಭಯಂಕರ ರೋಮಾಂಚಕ ಯುದ್ಧ ನಡೆಯಿತು.॥16॥
ಮೂಲಮ್ - 17
ಹರಿರಾಕ್ಷಸದೇಹೇಭ್ಯಃ ಪ್ರಭೂತಾಃ ಕೇಶಶಾದ್ವಲಾಃ ।
ಶರೀರಸಂಘಾಟವಹಾಃ ಸುಸ್ರುವುಃ ಶೋಣಿತಾಪಗಾಃ ॥
ಅನುವಾದ
ವಾನರರ ಮತ್ತು ರಾಕ್ಷಸರ ಶರೀರಗಳಿಂದ ಅನೇಕ ರಕ್ತದ ನದಿಗಳು ಹರಿಯತೊಡಗಿತು. ಅವರ ತಲೆಯ ಕೂದಲುಗಳು ಅಲ್ಲಿ ಪಾಚಿಯಂತೆ ಕಂಡುಬರುತ್ತಿತ್ತು. ಆ ನದಿಗಳಲ್ಲಿ ಸೈನಿಕರು ಮೃತ ಶರೀರಗಳು ಮರದ ದಿಮ್ಮಿಗಳಂತೆ ಹರಿದುಹೋಗುತ್ತಿದ್ದವು.॥17॥
ಮೂಲಮ್ - 18
ಆಜಘಾನೇಂದ್ರಜಿತ್ ಕ್ರುದ್ದೋವಜ್ರೇಣೇವ ಶತಕ್ರತುಃ ।
ಅಂಗದಂಗದಯಾ ವೀರಂ ಶತ್ರುಸೈನ್ಯವಿದಾರಣಮ್ ॥
ಅನುವಾದ
ಇಂದ್ರನು ವಜ್ರದಿಂದ ಪ್ರಹರಿಸು ವಂತೆ ಕ್ರುದ್ಧನಾದ ಇಂದ್ರಜಿತು ಶತ್ರುಸೈನ್ಯವನ್ನು ವಿದೀರ್ಣಗೊಳಿಸುವ ವೀರ ಅಂಗದನನ್ನು ಗದೆಯಿಂದ ಪ್ರಹರಿಸಿದನು.॥18॥
ಮೂಲಮ್ - 19
ತಸ್ಯ ಕಾಂಚನಚಿತ್ರಾಂಗಂ ರಥಂ ಸಾಶ್ವಂ ಸಸಾರಥಿಮ್ ।
ಜಘಾನ ಗದಯಾ ಶ್ರೀಮಾನಂಗದೋ ವೇಗವಾನ್ ಹರಿಃ ॥
ಅನುವಾದ
ಆದರೆ ವೇಗಶಾಲೀ ವಾನರ ಶ್ರೀಮಾನ್ ಅಂಗದನು ಅವನ ಗದೆಯನ್ನು ಕೈಯಿಂದ ಹಿಡಿದುಕೊಂಡು ಅದೇ ಗದೆಯಿಂದ ಇಂದ್ರಜಿತನ ಸುವರ್ಣಮಯ ರಥವನ್ನು ಸಾರಥಿ ಕುದರೆಗಳ ನುಚ್ಚು ನೂರಾಗಿಸಿದನು.॥19॥
ಮೂಲಮ್ - 20
ಸಂಪಾತಿಸ್ತು ಪ್ರಜಂಘೇನ ತ್ರಿಭಿರ್ಬಾಣೈಃ ಸಮಾಹತಃ ।
ನಿಜಘಾನಾಶ್ವಕರ್ಣೇನ ಪ್ರಜಂಘಂ ರಣಮೂರ್ಧನಿ ॥
ಅನುವಾದ
ಪ್ರಜಂಘನು ಸಂಪಾತಿಯನ್ನು ಮೂರು ಬಾಣಗಳಿಂದ ಗಾಯಗೊಳಿಸಿದನು. ಆಗ ಸಂಪಾತಿಯು ಅಶ್ವಕರ್ಣವೆಂಬ ವೃಕ್ಷದಿಂದ ಯುದ್ಧ ಭೂಮಿಯಲ್ಲಿ ಪ್ರಜಂಘನನ್ನು ಕೊಂದು ಹಾಕಿದನು.॥20॥
ಮೂಲಮ್ - 21
ಜಂಬುಮಾಲೀ ರಥಸ್ಥಸ್ತು ರಥಶಕ್ತ್ಯಾ ಮಹಾಬಲಃ ।
ಬಿಭೇದ ಸಮರೇ ಕ್ರುದ್ಧೋ ಹನೂಮಂತಂ ಸ್ತನಾಂತರೇ ॥
ಅನುವಾದ
ಮಹಾಬಲಿ ಜಂಬುಮಾಲಿ ರಥದಲ್ಲಿ ಕುಳಿತು ಕುಪಿತನಾಗಿ ರಣರಂಗದಲ್ಲಿ ಒಂದು ರಥಶಕ್ತಿಯಿಂದ ಹನುಮಂತನ ಎದೆಗೆ ಹೊಡೆದನು.॥21॥
ಮೂಲಮ್ - 22
ತಸ್ಯ ತಂ ರಥಮಾಸ್ಥಾಯ ಹನೂಮಾನ್ ಮಾರುತಾತ್ಮಜಃ ।
ಪ್ರಮಮಾಥ ತಲೇನಾಶು ಸಹ ತೇನೈವ ರಕ್ಷಸಾ ॥
ಅನುವಾದ
ಆದರೆ ಪವನನಂದನ ಹನುಮಂತನು ಅವನ ರಥಕ್ಕೆ ನೆಗೆದು ಕೈಯ ಏಟಿನಿಂದಲೇ ರಥಸಹಿತನಾದ ಜಂಬುಮಾಲಿಯ ಕಥೆ ಮುಗಿಸಿಬಿಟ್ಟನು. (ಜಂಬುಮಾಲಿ ಸತ್ತುಹೋದನು.॥22॥
ಮೂಲಮ್ - 23½
ನದನ್ಪ್ರತಪನೋ ಘೋರೋ ನಲಂ ಸೋಽಭ್ಯನುಧಾವತ ।
ನಲಃ ಪ್ರತಪನಸ್ಯಾಶು ಪಾತಯಾಮಾಸ ಚಕ್ಷುಷೀ ॥
ಭಿನ್ನಗಾತ್ರಃ ಶರೈಸ್ತೀಕ್ಷ್ಣೈಃ ಕ್ಷಿಪ್ರಹಸ್ತೇನ ರಕ್ಷಸಾ ।
ಅನುವಾದ
ಇನ್ನೊಂದೆಡೆ ಭಯಾನಕ ರಾಕ್ಷಸ ಪ್ರತಪನು ಭೀಷಣವಾಗಿ ಗರ್ಜಿಸುತ್ತಾ ನಳನ ಕಡೆಗೆ ಓಡಿದನು. ಕ್ಷಿಪ್ರಹಸ್ತನಾದ ಆ ರಾಕ್ಷಸನ ತೀಕ್ಷ್ಣವಾದ ಬಾಣಗಳಿಂದ ನಳನ ಶರೀರವನ್ನು ಗಾಯಗೊಳಿಸಿದನು. ಆಗ ನಳನು ಕೂಡಲೇ ಅವನ ಎರಡೂ ಕಣ್ಣುಗಳನ್ನು ಕಿತ್ತುಬಿಟ್ಟನು.॥23½॥
ಮೂಲಮ್ - 24½
ಗ್ರಸಂತಮಿವ ಸೈನ್ಯಾನಿ ಪ್ರಘಸಂ ವಾನರಾಧಿಪಃ ॥
ಸುಗ್ರೀವಃ ಸಪ್ತಪರ್ಣೇನ ನಿಜಘಾನ ಜವೇನ ಚ ।
ಅನುವಾದ
ಅತ್ತ ರಾಕ್ಷಸ ಪ್ರಘಸನು ವಾನರ ಸೇನೆಯನ್ನು ಕಾಲಕ್ಕೆ ತುತ್ತಾಗಿಸುತ್ತಿದ್ದನು. ಇದನ್ನು ನೋಡಿ ವಾನರರಾಜ ಸುಗ್ರೀವನು ಸಪ್ತಪರ್ಣ ಎಂಬ ವೃಕ್ಷದಿಂದ ಅವನನ್ನು ವೇಗವಾಗಿ ಕೊಂದು ಹಾಕಿದನು.॥24½॥
ಮೂಲಮ್ - 25½
ಪ್ರಪೀಡ್ಯ ಶರವರ್ಷೇಣ ರಾಕ್ಷಸಂ ಭೀಮದರ್ಶನಮ್ ॥
ನಿಜಘಾನ ವಿರೂಪಾಕ್ಷಂ ಶರೇಣೈಕೇನ ಲಕ್ಷ್ಮಣಃ ।
ಅನುವಾದ
ಲಕ್ಷ್ಮಣನು ಬಾಣಗಳ ಮರೆಗರೆದು ಮೊದಲಿಗೆ ಭಯಂಕರ ದೃಷ್ಟಿಯುಳ್ಳ ರಾಕ್ಷಸ ವಿರೂಪಾಕ್ಷನನ್ನು ಗಾಯಗೊಳಿಸಿ, ಮತ್ತೆ ಒಂದೇ ಬಾಣದಿಂದ ಅವನನ್ನು ಮೃತ್ಯುಮುಖವಾಗಿಸಿದನು.॥25½॥
ಮೂಲಮ್ - 26
ಅಗ್ನಿಕೇತುಶ್ಚ ದುರ್ಧರ್ಘೋ ರಶ್ಮಿಕೇತುಶ್ಚ ರಾಕ್ಷಸಃ ।
ಸುಪ್ತಘ್ನೋ ಯಜ್ಞಕೋಪಶ್ಚ ರಾಮಂ ನಿರ್ಬಿಭಿದುಃ ಶರೈಃ ॥
ಅನುವಾದ
ಅಗ್ನಿಕೇತು, ದುರ್ಜಯ, ರಶ್ಮಿಕೇತು, ಸುಪ್ತಘ್ನ ಮತ್ತು ಯಜ್ಞಕೇತು ಎಂಬ ರಾಕ್ಷಸರು ಶ್ರೀರಾಮನನ್ನು ತಮ್ಮ ಬಾಣಗಳಿಂದ ಗಾಯಗೊಳಿಸಿದರು.॥26॥
ಮೂಲಮ್ - 27
ತೇಷಾಂ ಚತುರ್ಣಾಂ ರಾಮಸ್ತು ಶಿರಾಂಸಿ ಸಮರೇ ಶರೈಃ ।
ಕ್ರುದ್ಧಶ್ಚ ತುರ್ಭಿಶ್ಚಿಚ್ಛೇದ ಘೋರೈರಗ್ನಿಶಿಖೋಪಮೈಃ ॥
ಅನುವಾದ
ಆಗ ಶ್ರೀರಾಮನು ಕುಪಿತನಾಗಿ ಅಗ್ನಿ ಶಿಖೆಯಂತಿರುವ ಭಯಂಕರ ಬಾಣಗಳಿಂದ ರಣರಂಗದಲ್ಲಿ ಆ ನಾಲ್ವರ ತಲೆಗಳನ್ನು ಕತ್ತರಿಸಿ ಹಾಕಿದನು.॥27॥
ಮೂಲಮ್ - 28
ವಜ್ರಮುಷ್ಟಿಸ್ತು ಮೈಂದೇನ ಮುಷ್ಟಿನಾ ನಿಹತೋರಣೇ ।
ಪಪಾತ ಸರಥಃ ಸಾಶ್ವಃ ಸುರಾಟ್ಟ ಇವ ಭೂತಲೇ ॥
ಅನುವಾದ
ಆ ರಣರಂಗದಲ್ಲಿ ಮೈಂದನು ವಜ್ರಮುಷ್ಟಿಯನ್ನು ಗುದ್ದಿದನು. ಅದರಿಂದ ಅವನು ರಥ-ಕುದುರೆಗಳ ಸಹಿತ ದೇವತೆಗಳ ವಿಮಾನ ಧರಾಶಾಯಿಯಾಗುವಂತೆ ನೆಲಕ್ಕೆ ಬಿದ್ದು ಹೋದನು.॥28॥
ಮೂಲಮ್ - 29
ನಿಕುಂಭಸ್ತು ರಣೇ ನೀಲಂನೀಲಾಂಜನಚಯಪ್ರಭಮ್ ।
ನಿರ್ಬಿಭೇದ ಶರೈಸ್ತೀಕ್ಷ್ಣೈಃ ಕರೈರ್ಮೇಘಮಿವಾಂಶುಮಾನ್ ॥
ಅನುವಾದ
ನಿಕುಂಭನು ಕಪ್ಪಾದ ಇದ್ದಲಿನಂತಿದ್ದ ನೀಲನನ್ನು ರಣರಂಗದಲ್ಲಿ ಹರಿತವಾದ ಬಾಣಗಳಿಂದ ಸೂರ್ಯನು ತನ್ನ ಪ್ರಚಂಡ ಕಿರಣಗಳಿಂದ ಮೋಡಗಳನ್ನು ಚದುರಿಸಿಬಿಡುವಂತೆ ಭಿನ್ನಭಿನ್ನಗೊಳಿಸಿದನು.॥29॥
ಮೂಲಮ್ - 30
ಪುನಃ ಶರಶತೇನಾಥ ಕ್ಷಿಪ್ರಹಸ್ತೋ ನಿಶಾಚರಃ ।
ಬಿಭೇದ ಸಮರೇ ನೀಲಂ ನಿಕುಂಭಃ ಪ್ರಜಹಾಸ ಚ ॥
ಅನುವಾದ
ಆದರೆ ಶೀಘ್ರವಾಗಿ ಕೈಚಳಕ ತೋರುವ ಆ ನಿಶಾಚರನು ಯುದ್ಧದಲ್ಲಿ ಪುನಃ ನೂರು ಬಾಣಗಳಿಂದ ಗಾಯಗೊಳಿಸಿದನು. ಹೀಗೆ ಮಾಡಿ ನಿಕುಂಭನು ಜೋರಾಗಿ ನಗತೊಡಗಿದನು.॥30॥
ಮೂಲಮ್ - 31
ತಸ್ಯೈವ ರಥಚಕ್ರೇಣ ನೀಲೋ ವಿಷ್ಣುರಿವಾಹವೇ ।
ಶಿರಶ್ಚಿಚ್ಛೇದ ಸಮರೇ ನಿಕುಂಭಸ್ಯ ಚ ಸಾರಥೇಃ ॥
ಅನುವಾದ
ಇದನ್ನು ನೋಡಿದ ನೀಲನು ಅವನ ರಥದ ಚಕ್ರವನ್ನೇ ಕಿತ್ತು, ಭಗವಾನ್ ವಿಷ್ಣು ಸಂಗ್ರಾಮದಲ್ಲಿ ತನ್ನ ಚಕ್ರದಿಂದ ದೈತ್ಯರ ತಲೆಗಳನ್ನು ತರಿಯುವಂತೆ ನಿಕುಂಭನ ತಲೆಯನ್ನು ಸಾರಥಿಸಹಿತ ಕತ್ತರಿಸಿ ಹಾಕಿದನು.॥31॥
ಮೂಲಮ್ - 32
ವಜ್ರಾಶನಿಸಮಸ್ಪರ್ಶೋ ದ್ವಿವಿದೋಽಪ್ಯಶನಿಪ್ರಭಮ್ ।
ಜಘಾನ ಗಿರಿಶೃಂಗೇಣ ಮಿಷತಾಂ ಸರ್ವರಕ್ಷಸಾಮ್ ॥
ಅನುವಾದ
ದ್ವಿವಿದನ ಸ್ಪರ್ಶ ವಜ್ರ ಮತ್ತು ಸಿಡಿಲಿನಂತೆ ದುಃಸಹವಾಗಿತ್ತು. ಅವನು ಎಲ್ಲ ರಾಕ್ಷಸರು ನೋಡುತ್ತಿರುವಂತೆ ಅಶನಿಪ್ರಭ ಎಂಬ ನಿಶಾಚರನ ಮೇಲೆ ಪರ್ವತ ಶಿಖರದಿಂದ ಪ್ರಹರಿಸಿದನು.॥32॥
ಮೂಲಮ್ - 33
ದ್ವಿವಿದಂ ವಾನರೇಂದ್ರಂ ತು ದ್ರುಮಯೋಧಿನಮಾಹವೇ ।
ಶರೈರಶನಿಸಂಕಾಶೈಃ ಸ ವಿವ್ಯಾಧಾಶನಿಪ್ರಭಃ ॥
ಅನುವಾದ
ಆಗ ಅಶನಿಪ್ರಭನು ಯುದ್ಧದಲ್ಲಿ ವೃಕ್ಷಗಳಿಂದ ಯುದ್ಧಮಾಡುವ ವಾನರರಾಜ ದ್ವಿವಿದನನ್ನು ವಜ್ರದಂತಹ ತೇಜಸ್ವೀ ಬಾಣಗಳಿಂದ ಗಾಯಗೊಳಿಸಿದನು.॥33॥
ಮೂಲಮ್ - 34
ಸ ಶರೈರಭಿವಿದ್ಧಾಂಗೋ ದ್ವಿವಿದಃ ಕ್ರೋಧಮೂರ್ಛಿತಃ ।
ಸಾಲೇನ ಸರಥಂ ಸಾಶ್ವಂ ನಿಜಘಾನಾಶನಿಪ್ರಭಮ್ ॥
ಅನುವಾದ
ದ್ವಿವಿದನ ಇಡೀ ಶರೀರವು ಬಾಣಗಳಿಂದ ಕ್ಷತ-ವಿಕ್ಷತವಾಗಿತ್ತು. ಇದರಿಂದ ಅವನಿಗೆ ಭಾರೀ ಸಿಟ್ಟು ಬಂತು ಹಾಗೂ ಅವನು ಒಂದು ತಾಲವೃಕ್ಷದಿಂದ ರಥ, ಕುದುರೆಗಳ ಸಹಿತ ಅಶನಿಪ್ರಭನನ್ನು ಕೊಂದು ಹಾಕಿದನು.॥34॥
ಮೂಲಮ್ - 35
ವಿದ್ಯುನ್ಮಾಲೀ ರಥಸ್ಥಸ್ತು ಶರೈಃ ಕಾಂಚನಭೂಷಣೈಃ ।
ಸುಷೇಣಂ ತಾಡಯಾಮಾಸ ನನಾದ ಚ ಮುಹುರ್ಮುಹುಃ ॥
ಅನುವಾದ
ರಥದಲ್ಲಿ ಕುಳಿತ ವಿದ್ಯುನ್ಮಾಲಿಯು ತನ್ನ ಸ್ವರ್ಣಭೂಷಿತ ಬಾಣಗಳಿಂದ ಸುಷೇಣನನ್ನು ಪದೇ ಪದೇ ಗಾಯಗೊಳಿಸಿದನು. ಮತ್ತೆ ಅವನು ಜೋರಾಗಿ ಗರ್ಜಿಸತೊಡಗಿದನು.॥35॥
ಮೂಲಮ್ - 36
ತಂ ರಥಸ್ಥಮಥೋ ದೃಷ್ಟ್ವಾ ಸುಷೇಣೋ ವಾನರೋತ್ತಮಃ ।
ಗಿರಿಶೃಂಗೇಣ ಮಹತಾ ರಥಮಾಶು ನ್ಯಪಾತಯತ್ ॥
ಅನುವಾದ
ರಥದಲ್ಲಿ ಕುಳಿತ ಅವನನ್ನು ನೋಡಿ ವಾನರಶ್ರೇಷ್ಠ ಸುಷೇಣನು ಒಂದು ವಿಶಾಲಪರ್ವತ ಶಿಖರವನ್ನು ಎಸೆದು ಅವನ ರಥವನ್ನು ಶೀಘ್ರವಾಗಿ ನುಚ್ಚುನೂರಾಗಿಸಿದನು.॥36॥
ಮೂಲಮ್ - 37
ಲಾಘವೇನ ತು ಸಂಯುಕ್ತೋ ವಿದ್ಯುನ್ಮಾಲೀ ನಿಶಾಚರಃ ।
ಅಪಕ್ರಮ್ಯ ರಥಾತ್ತೂರ್ಣಂ ಗದಾಪಾಣಿಃ ಕ್ಷಿತೌ ಸ್ಥಿತಃ ॥
ಅನುವಾದ
ನಿಶಾಚರ ವಿದ್ಯುನ್ಮಾಲಿಯು ಕೂಡಲೆ ಸ್ಫೂರ್ತಿಯಿಂದ ರಥದಿಂದ ಹಾರಿ ಕೈಯಲ್ಲಿ ಗದೆಯನ್ನೆತ್ತಿಕೊಂಡು ನೆಲದ ಮೇಲೆ ನಿಂತುಕೊಂಡನು.॥37॥
ಮೂಲಮ್ - 38
ತತಃ ಕ್ರೋಧಸಮಾವಿಷ್ಟಃ ಸುಷೇಣೋ ಹರಿಪುಂಗವಃ ।
ಶಿಲಾಂ ಸುಮಹತೀಂ ಗೃಹ್ಯ ನಿಶಾಚರಮಭಿದ್ರವತ್ ॥
ಅನುವಾದ
ಅನಂತರ ಕ್ರೋಧಗೊಂಡ ವಾನರಶಿರೋಮಣಿ ಸುಷೇಣನು ಒಂದು ದೊಡ್ಡ ಬಂಡೆಯನ್ನೆತ್ತಿಕೊಂಡು ನಿಶಾಚರನ ಕಡೆಗೆ ಓಡಿದನು.॥38॥
ಮೂಲಮ್ - 39
ತಮಾಪತಂತ ಗದಯಾ ವಿದ್ಯುನ್ಮಾಲೀ ನಿಶಾಚರಃ ।
ವಕ್ಷಸ್ಯಭಿಜಘಾನಾಶು ಸುಷೇಣಂ ಹರಿಪುಂಗವಮ್ ॥
ಅನುವಾದ
ಕಪಿಶ್ರೇಷ್ಠ ಸುಷೇಣನು ಆಕ್ರಮಿಸಿರುವುದನ್ನು ನೋಡಿ ರಾಕ್ಷಸ ವಿದ್ಯುನ್ಮಾಲಿಯು ಕೂಡಲೆ ಗದೆಯನ್ನೆತ್ತಿಕೊಂಡು ಅವನ ಎದೆಗೆ ಪ್ರಹರಿಸಿದನು.॥39॥
ಮೂಲಮ್ - 40
ಗದಾಪ್ರಹಾರಂ ತಂ ಘೋರಮಚಿಂತ್ಯ ಪ್ಲವಗೋತ್ತಮಃ ।
ತಾಂ ತೂಷ್ಣೀಂ ಪಾತಯಾಮಾಸ ತಸ್ಯೋರಸಿ ಮಹಾಮೃಧೇ ॥
ಅನುವಾದ
ಗದೆಯ ಆ ಭೀಷಣ ಪ್ರಹಾರದ ಪರಿವೆಯೇ ಇಲ್ಲದೆ ವಾನರಶ್ರೇಷ್ಠ ಸುಷೇಣನು ಮೊದಲಿನ ಬಂಡೆಯನ್ನೇ ಎತ್ತಿಕೊಂಡು ಯುದ್ಧದಲ್ಲಿ ವಿದ್ಯುನ್ಮಾಲಿಯ ಎದೆಗೆ ಹೊಡೆದನು.॥40॥
ಮೂಲಮ್ - 41
ಶಿಲಾಪ್ರಹಾರಾಭಿಹತೋ ವಿದ್ಯುನ್ಮಾಲೀ ನಿಶಾಚರಃ ।
ನಿಷ್ಪಿಷ್ಟಹೃದಯೋ ಭೂಮೌ ಗತಾಸುರ್ನಿಪಪಾತ ಹ ॥
ಅನುವಾದ
ಶಿಲಾ ಪ್ರಹಾರದಿಂದ ಗಾಯಗೊಂಡ ವಿದ್ಯುನ್ಮಾಲೀ ರಾಕ್ಷಸನ ಎದೆಯು ನುಚ್ಚುನೂರಾಗಿ ಪ್ರಾಣಶೂನ್ಯನಾಗಿ ಭೂಮಿಗೆ ಬಿದ್ದುಬಿಟ್ಟನು.॥41॥
ಮೂಲಮ್ - 42
ಏವಂ ತೈರ್ವಾನರೈಃ ಶೂರೈಃ ಶೂರಾಸ್ತೇ ರಜನೀಚರಾಃ ।
ದ್ವಂದ್ವ್ವೇ ವಿಮೃಥಿತಾಸ್ತತ್ರ ದೈತ್ಯಾ ಇವ ದಿವೌಕಸೈಃ ॥
ಅನುವಾದ
ಹೀಗೆ ಶೂರವೀರ ನಿಶಾಚರರೊಂದಿಗೆ ಶೌರ್ಯಸಂಪನ್ನ ವಾನರವೀರರು ದ್ವಂದ್ವಯುದ್ಧ ನಡೆಸಿ, ದೇವತೆಗಳು ದೈತ್ಯರನ್ನು ಸಂಹರಿಸಿದಂತೆ, ಸಂಹರಿಸಿಬಿಟ್ಟರು.॥42॥
ಮೂಲಮ್ - 43
ಭಬ್ಲೈಶ್ಚಾನ್ಯೈರ್ಗದಾಭಿಶ್ಚ ಶಕ್ತಿತೋಮರಸಾಯಕೈಃ ।
ಅಪವಿದ್ಧೈಶ್ಚಾಪಿ ರಥೈಸ್ತಥಾ ಸಾಂಗ್ರಾಮಿಕೈರ್ಹಯೈಃ ॥
ಮೂಲಮ್ - 44
ನಿಹತೈಃ ಕುಂಜರೈರ್ಮತ್ತೈಸ್ತಥಾ ವಾನರರಾಕ್ಷಸೈಃ
ಚಕ್ರಾಕ್ಷಯುಗದಂಡೈಶ್ಚ ಭಗ್ನೈರ್ಧರಣಿಸಂಶ್ರಿತೈಃ ॥
ಮೂಲಮ್ - 45
ಬಭೂವಾಯೋಧನಂ ಘೋರಂ ಗೋಮಾಯು ಗಣಸೇವಿತಮ್ ।
ಕಬಂಧಾನಿ ಸಮುತ್ಪೇತುರ್ದಿಕ್ಷು ವಾನರರಕ್ಷಸಾಮ್ ।
ವಿಮರ್ದೇ ತುಮುಲೇ ತಸ್ಮಿನ್ ದೇವಾಸುರರಣೋಪಮೇ ॥
ಅನುವಾದ
ಆಗ ತುಂಡಾದ ಭಲ್ಲೆ, ಬಾಣ, ಗದೆಗಳಿಂದ, ಶಕ್ತಿ, ತೋಮರ, ಸಾಯಕಗಳಿಂದ ರಥಚಕ್ರ, ನೊಗಗಳಿಂದ, ರಥಗಳಿಂದ ಮುರಿದು ಚೆಲ್ಲೆಹೋದ ಸತ್ತುಹೋದ ಆನೆ, ಕುದುರೆಗಳಿಂದ, ವಾನರ, ರಾಕ್ಷಸರಿಂದ ಆ ರಣರಂಗವು ಭಾರೀ ಭಯಾನಕವಾಗಿತ್ತು. ಗಿಡುಗ-ಹದ್ದುಗಳು ಎಲ್ಲೆಡೆ ಸಂಚರಿಸುತ್ತಿದ್ದವು. ದೇವಾಸುರ ಸಂಗ್ರಾಮದಂತೆ ಆ ಭಯಂಕರ ಮಾರಣಹೋಮದಲ್ಲಿ ವಾನರರ, ರಾಕ್ಷಸರ ಕಬಂಧಗಳು (ತಲೆಯಿಲ್ಲದ ದೇಹ) ಎಲ್ಲೆಡೆ ಕುಣಿಯುತ್ತಿದ್ದವು.॥43-45॥
ಮೂಲಮ್ - 46
ನಿಹನ್ಯಮಾನಾ ಹರಿಪುಂಗವೈಸ್ತದಾ
ನಿಶಾಚರಾಃ ಶೋಣಿತಗಂಧಮೂರ್ಚ್ಛಿತಾಃ ।
ಪುನಃ ಸುಯುದ್ಧಂ ತರಸಾ ಸಮಾಶ್ರಿತಾ
ದಿವಾಕರಸ್ಯಾಸ್ತಮಯಾಭಿಕಾಂಕ್ಷಿಣಃ ॥
ಅನುವಾದ
ಆಗ ವಾನರಶಿರೋಮಣಿಗಳಿಂದ ಹತರಾದ ನಿಶಾಚರರು ರಕ್ತದ ಗಂಧದಿಂದ ಉನ್ಮತ್ತರಾಗುತ್ತಿದ್ದರು. ಅವರು ಸೂರ್ಯಾಸ್ತವನ್ನು ಪ್ರತೀಕ್ಷೆ ಮಾಡುತ್ತಾ, ಪುನಃ ಭಾರಿ ವೇಗದಿಂದ ಘೋರ ಯುದ್ಧಕ್ಕೆ ತೊಡಗಿದರು.॥46॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತಮೂರನೆಯ ಸರ್ಗ ಪೂರ್ಣವಾಯಿತು.॥43॥