०४२ रामेण युद्धादेशः

वाचनम्
ಭಾಗಸೂಚನಾ

ವಾನರರಿಂದ ಲಂಕೆಯ ಆಕ್ರಮಣ, ರಾಕ್ಷಸರೊಂದಿಗೆ ಘೋರಯುದ್ಧ

ಮೂಲಮ್ - 1

ತತಸ್ತೇ ರಾಕ್ಷಸಾಸ್ತತ್ರಗತ್ವಾ ರಾವಣ ಮಂದಿರಮ್ ।
ನ್ಯವೇದಯನ್ಪುರೀಂ ರುದ್ಧಾಂ ರಾಮೇಣ ಸಹ ವಾನರೈಃ ॥

ಅನುವಾದ

ಅನಂತರ ರಾಕ್ಷಸರು ರಾವಣನ ಅರಮನೆಗೆ ಹೋಗಿ-ಶ್ರೀರಾಮನು ವಾನರ ಸೈನಿಕರೊಂದಿಗೆ ಲಂಕೆಯನ್ನು ಆಕ್ರಮಿಸಿರುವನೆಂಬ ಸಮಾಚಾರ ತಿಳಿಸಿದರು.॥1॥

ಮೂಲಮ್ - 2

ರುದ್ಧಾಂ ತು ನಗರೀಂ ಶ್ರುತ್ವಾ ಜಾತಕ್ರೋಧೋ ನಿಶಾಚರಃ ।
ವಿಧಾನಂ ದ್ವಿಗುಣಂ ಕೃತ್ವಾ ಪ್ರಾಸಾದಂ ಚಾಪ್ಯರೋಹತ ॥

ಅನುವಾದ

ಲಂಕೆಯ ಆಕ್ರಮಣದ ವಾರ್ತೆಯನ್ನು ಕೇಳಿ ರಾವಣನು ಅತಿಕ್ರುದ್ಧನಾಗಿ ನಗರದ ರಕ್ಷಣೆಯನ್ನು ಇಮ್ಮಡಿಯಾಗಿಸಿ ಪ್ರಾಸಾದವನ್ನು ಏರಿದನು.॥2॥

ಮೂಲಮ್ - 3

ಸ ದದರ್ಶ ವೃತಾಂ ಲಂಕಾಂ ಸಶೈಲವನಕಾನನಾಮ್ ।
ಅಸಂಖ್ಯೇಯೈರ್ಹರಿಗಣೈಃ ಸರ್ವತೋ ಯುದ್ಧಕಾಂಕ್ಷಿಭಿಃ ॥

ಅನುವಾದ

ಅಲ್ಲಿಂದಲೇ ಅವನು ಪರ್ವತ, ವನ, ಕಾನನಗಳ ಸಹಿತ ಇಡೀ ಲಂಕೆಯು ಎಲ್ಲೆಡೆಗಳಿಂದಲೂ ಅಸಂಖ್ಯ ಯುದ್ಧಾಭಿಲಾಷಿ ವಾನರರುಗಳಿಂದ ಆಕ್ರಮಿಸಿಕೊಂಡಿರುವುದನ್ನು ನೋಡಿದನು.॥3॥

ಮೂಲಮ್ - 4

ಸ ದೃಷ್ಟ್ವಾ ವಾನರೈಃ ಸರ್ವೈರ್ವಸುಧಾಂ ಕಪಿಲೀಕೃತಾಮ್ ।
ಕಥಂ ಕ್ಷಪಯಿತವ್ಯಾಃ ಸ್ಯುರಿತಿ ಚಿಂತಾಪರೋಽಭವತ್ ॥

ಅನುವಾದ

ಹೀಗೆ ವಾನರರಿಂದ ಆಚ್ಛಾದಿತವಾದ ಸಮಸ್ತ ಭೂಭಾಗವು ಕಪಿಲ ವರ್ಣದಿಂದ ಕೂಡಿರುವುದನ್ನು ನೋಡಿ, ಇವರೆಲ್ಲರ ವಿನಾಶ ಹೇಗಾಗಬಹುದು? ಎಂಬ ಚಿಂತೆಗಳಗಾದನು.॥4॥

ಮೂಲಮ್ - 5

ಸ ಚಿಂತಯಿತ್ವಾ ಸುಚಿರಂ ಧೈರ್ಯಮಾಲಂಬ್ಯ ರಾವಣಃ ।
ರಾಘವಂ ಹರಿಯೂಥಾಂಶ್ಚ ದದರ್ಶಾಯತಲೋಚನಃ ॥

ಅನುವಾದ

ಬಹಳ ಹೊತ್ತು ಯೋಚಿಸಿದ ಬಳಿಕ ಧೈರ್ಯವಹಿಸಿ ವಿಶಾಲನೇತ್ರನಾದ ರಾವಣನು ಶ್ರೀರಾಮ ಮತ್ತು ವಾನರ ಸೈನ್ಯದ ಕಡೆಗೆ ಪುನಃ ನೋಡಿದನು.॥5॥

ಮೂಲಮ್ - 6

ರಾಘವಃ ಸಹ ಸೈನ್ಯೇನ ಮುದಿತೋ ನಾಮ ಪುಪ್ಲುವೇ ।
ಲಂಕಾಂ ದದರ್ಶ ಗುಪ್ತಾಂ ವೈ ಸರ್ವತೋ ರಾಕ್ಷಸೈರ್ವೃತಾಮ್ ॥

ಅನುವಾದ

ಇತ್ತ ಶ್ರೀರಾಮಚಂದ್ರನು ತನ್ನ ಸೈನ್ಯದೊಂದಿಗೆ ಸಂತೋಷವಾಗಿ ಮುಂದುವರಿದು ಲಂಕೆಯು ಎಲ್ಲ ಕಡೆಗಳಿಂದಲೂ ರಾಕ್ಷಸರಿಂದ ಆವೃತವಾಗಿ ಸುರಕ್ಷಿತವಾಗಿರುವುದನ್ನು ನೋಡಿದನು.॥6॥

ಮೂಲಮ್ - 7

ದೃಷ್ಟ್ವಾ ದಾಶರಥಿರ್ಲಂಕಾಂ ಚಿತ್ರಧ್ವಜಪತಾಕಿನೀಮ್ ।
ಜಗಾಮ ಸಹಸಾ ಸೀತಾಂ ದೂಯಮಾನೇನ ಚೇತಸಾ ॥

ಅನುವಾದ

ಚಿತ್ರ-ವಿಚಿತ್ರ ಧ್ವಜ ಪತಾಕೆಗಳಿಂದ ಅಲಂಕೃತ ಲಂಕಾಪುರ ವನ್ನು ನೋಡಿ ದಾಶರಥಿಯು ವ್ಯಥಿತನಾಗಿ ಮನಸ್ಸಿನಲ್ಲೇ ಸೀತೆಯನ್ನು ಸ್ಮರಿಸತೊಡಗಿದನು.॥7॥

ಮೂಲಮ್ - 8

ಅತ್ರ ಸಾ ಮೃಗಶಾವಾಕ್ಷೀ ಮತ್ ಕೃತೇ ಜನಕಾತ್ಮಜಾ ।
ಪೀಡ್ಯತೇ ಶೋಕಸಂತಪ್ತಾ ಕೃಶಾ ಸ್ಥಂಡಿಲಶಾಯಿನೀ ॥

ಅನುವಾದ

ಅಯ್ಯೋ! ಆ ಮೃಗಶಾವಾಕ್ಷಿ ಜನಕನಂದಿನೀ ಸೀತೆಯೂ ಇಲ್ಲೇ ನನಗಾಗಿ ಶೋಕಸಂತಪ್ತಳಾಗಿ ಪೀಡೆಯನ್ನು ಸಹಿಸುತ್ತಿರಬಹುದು. ನೆಲದ ಮೇಲೆ ಮಲಗುತ್ತಾ ಬಹಳ ದುರ್ಬಲಳಾಗಿರುವುದನ್ನು ಕೇಳಿರುವೆನು.॥8॥

ಮೂಲಮ್ - 9

ನಿಪೀಡ್ಯಮಾನಾಂ ಧರ್ಮಾತ್ಮಾ ವೈದೇಹೀಮನುಚಿಂತಯನ್ ।
ಕ್ಷಿಪ್ರಮಾಜ್ಞಾಪಯದ್ರಾಮೋ ವಾನರಾನ್ ದ್ವಿಷತಾಂ ವಧೇ ॥

ಅನುವಾದ

ಹೀಗೆ ರಾಕ್ಷಸಿಯರಿಂದ ಪೀಡಿತಳಾದ ವೈದೇಹಿಯನ್ನು ಪದೇ ಪದೇ ಚಿಂತಿಸುತ್ತಾ ಧರ್ಮಾತ್ಮಾ ಶ್ರೀರಾಮನು ಕೂಡಲೇ ಶತ್ರುಗಳಾದ ರಾಕ್ಷಸರನ್ನು ವಧಿಸಲು ವಾನರರಿಗೆ ಆಜ್ಞಾಪಿಸಿದನು.॥9॥

ಮೂಲಮ್ - 10

ಏವಮುಕ್ತೇ ತು ವಚನೇ ರಾಮೇಣಾಕ್ಲಿಷ್ಟಕರ್ಮಣಾ ।
ಸಂಘರ್ಷಮಾಣಾಃ ಪ್ಲವಗಾಃ ಸಿಂಹನಾದೈರನಾದಯನ್ ॥

ಅನುವಾದ

ಕ್ಲಿಷ್ಟ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡುವ ಶ್ರೀರಾಮನು ಹೀಗೆ ಆಜ್ಞಾಪಿಸುತ್ತಲೇ ರಾಕ್ಷಸರ ಮೇಲೆ ಬೀಳಲು ಸ್ಪರ್ಧೆಯಿಂದ ವಾನರ ಸೈನ್ಯವು ತಮ್ಮ ಸಿಂಹನಾದದಿಂದ ಭೂಮ್ಯಾಕಾಶಗಳು ತುಂಬಿಬಿಟ್ಟರು.॥10॥

ಮೂಲಮ್ - 11

ಶಿಖರೈರ್ವಿಕಿರಾಮೈತಾಂ ಲಂಕಾಂ ಮುಷ್ಟಿಭಿರೇವ ವಾ ।
ಇತಿ ಸ್ಮ ದಧಿರೇ ಸರ್ವೇ ಮನಾಂಸಿ ಹರಿಯೂಥಪಾಃ ॥

ಅನುವಾದ

ಆ ಸಮಸ್ತ ವಾನರರು ಪರ್ವತ ಶಿಖರಗಳಿಂದ ಮಳೆಗರೆದು ಲಂಕೆಯ ಭವನಗಳನ್ನು ನುಚ್ಚುನೂರು ಮಾಡಿ, ರಾಕ್ಷಸರನ್ನು ಗುದ್ದಿಗುದ್ದಿ ಕೊಂದು ಬಿಡುವೆವು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಯೇ ನಿಂತಿದ್ದರು.॥1.॥

ಮೂಲಮ್ - 12

ಉದ್ಯಮ್ಯ ಗಿರಿಶೃಂಗಾಣಿ ಮಹಾಂತಿ ಶಿಖರಾಣಿ ಚ ।
ತರೂಂಶ್ಚೋತ್ಪಾಟ್ಯ ವಿವಿಧಾಂಸ್ತಿಷ್ಠಂತಿ ಹರಿಯೂಥಪಾಃ ॥

ಅನುವಾದ

ಆ ವಾನರ ಸೇನಾಪತಿಗಳು ದೊಡ್ಡ ದೊಡ್ಡ ಪರ್ವತ ಶಿಖರಗಳನ್ನು ಮತ್ತು ಅನೇಕ ಪ್ರಕಾರದ ವೃಕ್ಷಗಳನ್ನು ಕಿತ್ತು ಪ್ರಹಾರ ಮಾಡಲು ಸಿದ್ಧರಾಗಿ ನಿಂತಿದ್ದರು.॥12॥

ಮೂಲಮ್ - 13

ಪ್ರೇಕ್ಷತೋ ರಾಕ್ಷಸೇಂದ್ರಸ್ಯ ತಾನ್ಯನೀಕಾನಿ ಭಾಗಶಃ ।
ರಾಘವಪ್ರಿಯಕಾಮಾರ್ಥಂ ಲಂಕಾಮಾರುರುಹುಸ್ತದಾ ॥

ಅನುವಾದ

ರಾಕ್ಷಸೇಂದ್ರ ರಾವಣನು ನೋಡುನೋಡುತ್ತಾ ಇರುವಂತೆಯೇ ಬೇರೆ ಬೇರೆಯಾಗಿ ಹಂಚಿಹೋದ ವಾನರ ಸೈನಿಕರು ಶ್ರೀರಾಮನ ಪ್ರಿಯಮಾಡುವ ಇಚ್ಛೆಯಿಂದ ಕೂಡಲೇ ಲಂಕೆಯ ಪ್ರಾಕಾರಗಳನ್ನು ಹತ್ತಿದರು.॥13॥

ಮೂಲಮ್ - 14

ತೇ ತಾಮ್ರವಕ್ತ್ರಾ ಹೇಮಾಭಾ ರಾಮಾರ್ಥೇ ತ್ಯಕ್ತಜೀವಿತಾಃ ।
ಲಂಕಾಮೇವಾಭ್ಯವರ್ತಂತ ಸಾಲಭೂಧರಯೋಧಿನಃ ॥

ಅನುವಾದ

ಕೆಂಪಾದ ಮುಖವುಳ್ಳ ಹಾಗೂ ಸುವರ್ಣದಂತಹ ಕಾಂತಿಯುಳ್ಳ ಆ ವಾನರರು ಶ್ರೀರಾಮನಿಗಾಗಿ ಪ್ರಾಣಗಳನ್ನು ಅರ್ಪಿಸಲೂ ಸಿದ್ಧರಾಗಿದ್ದರು. ಅವರೆಲ್ಲರೂ ತಾಲವೃಕ್ಷಗಳಿಂದ ಹಾಗೂ ಶೈಲ ಶಿಖರಗಳಿಂದ ಯುದ್ಧಮಾಡುವವರಾಗಿದ್ದರು; ಅಂತಹ ವಾನರ ವೀರರು ಲಂಕೆಯ ಮೇಲೆ ಆಕ್ರಮಣ ಮಾಡಿದರು.॥14॥

ಮೂಲಮ್ - 15

ತೇ ದ್ರುಮೈಃ ಪರ್ವತಾಗ್ರೈಶ್ಚ ಮುಷ್ಟಿಭಿಶ್ಚ ಪ್ಲವಂಗಮಾಃ ।
ಪ್ರಾಕಾರಾಗ್ರಾಣ್ಯಸಂಖ್ಯಾನಿ ಮಮಂಥುಸ್ತೋರಣಾನಿ ಚ ॥

ಅನುವಾದ

ಆ ಅಸಂಖ್ಯವಾನರರೆಲ್ಲ ವೃಕ್ಷ-ಪರ್ವತಗಳಿಂದ ಹಾಗೂ ಗುದ್ದಿ ಪ್ರಾಕಾರಗಳನ್ನೂ, ದ್ವಾರಗಳನ್ನೂ ಮುರಿಯತೊಡಗಿದರು.॥15॥

ಮೂಲಮ್ - 16

ಪರಿಖಾನ್ ಪೂರಯಂತಶ್ಚ ಪ್ರಸನ್ನಸಲಿಲಾಶಯಾನ್ ।
ಪಾಂಸುಭಿಃಪರ್ವತಾಗ್ರೈಶ್ಚ ತೃಣೈಃ ಕಾಷ್ಠೈಶ್ಚ ವಾನರಾಃ ॥

ಅನುವಾದ

ಆ ವಾನರರು ಶುದ್ಧ ನೀರಿನಿಂದ ತುಂಬಿದ ಕಂದಕಗಳನ್ನು ಮಣ್ಣಿನಿಂದ, ಪರ್ವತಗಳಿಂದ, ಹುಲ್ಲು, ಮರಗಳಿಂದ, ತುಂಬಿಬಿಟ್ಟರು.॥16॥

ಮೂಲಮ್ - 17

ತತಃ ಸಹಸ್ರಯೂಥಾಶ್ಚ ಕೋಟಿಯೂಥಾಶ್ಚ ಯೂಥಪಾಃ ।
ಕೋಟಿಯೂಥಶತಾಶ್ಚಾನ್ಯೇ ಲಂಕಾಮಾರುರುಹುಸ್ತದಾ ॥

ಅನುವಾದ

ಮತ್ತೆ ಸಾವಿರಾರು ಲಕ್ಷ ಲಕ್ಷ, ಕೋಟಿ ಕೋಟಿ ವಾನರ ನಾಯಕರು ಆಗ ಲಂಕೆಯ ಪ್ರಾಕಾರಗಳನ್ನು ಹತ್ತಿದರು.॥17॥

ಮೂಲಮ್ - 18

ಕಾಂಚನಾನಿ ಪ್ರಮರ್ದಂತಸ್ತೋರಣಾನಿ ಪ್ಲವಂಗಮಾಃ ।
ಕೈಲಾಸ ಶಿಖರಾಗ್ರಾಣಿ ಗೋಪುರಾಣಿ ಪ್ರಮಥ್ಯ ಚ ॥

ಮೂಲಮ್ - 19

ಆಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಲಂಕಾಂ ತಾಮಭಿಧಾವಂತಿ ಮಹಾವಾರಣಸಂನಿಭಾಃ ॥

ಅನುವಾದ

ದೊಡ್ಡ ದೊಡ್ಡ ಆನೆಗಳಂತೆ ಇದ್ದ ವಿಶಾಲಕಾಯ ವಾನರರು ಸುವರ್ಣಮಯ ಮಹಾದ್ವಾರಗಳನ್ನು ಕೈಲಾಸ ಶಿಖರಗಳಂತೆ ಇದ್ದ ಎತ್ತರವಾದ ಗೋಪುರಗಳನ್ನು ಧ್ವಂಸಮಾಡುತ್ತಾ, ಜಿಗಿದಾಡುತ್ತ ಭಯಂಕರವಾಗಿ ಗರ್ಜಿಸುತ್ತಾ ಲಂಕೆಯ ಮೇಲೆ ಧಾಳಿ ಮಾಡಿದರು.॥18-19॥

ಮೂಲಮ್ - 20

ಜಯತ್ಯುರುಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ ।
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ॥

ಮೂಲಮ್ - 21

ಇತ್ಯೇವಂ ಘೋಷಯಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಅಭ್ಯಧಾವಂತ ಲಂಕಾಯಾಃ ಪ್ರಾಕಾರಂ ಕಾಮರೂಪಿಣಃ ॥

ಅನುವಾದ

ಮಹಾಬಲಶಾಲಿಯಾದ ಶ್ರೀರಾಮನಿಗೆ ಜಯವಾಗಲೀ, ಮಹಾಬಲನಾದ ಲಕ್ಷ್ಮಣನಿಗೆ ಜಯವಾಗಲೀ, ಶ್ರೀರಾಘವನಿಂದ ರಕ್ಷಿತನಾದ ಸುಗ್ರೀವನಿಗೆ ಜಯವಾಗಲಿ ಎಂದು ಗರ್ಜಿಸುತ್ತಾ, ಕಾಮರೂಪಿಗಳಾದ ವಾನರರು ಲಂಕೆಯ ಪ್ರಾಕಾರಗಳನ್ನು ಆಕ್ರಮಿಸಿದರು.॥20-21॥

ಮೂಲಮ್ - 22

ವೀರಬಾಹುಃ ಸುಬಾಹುಶ್ಚ ನಲಶ್ಚ ಪವಸಸ್ತಥಾ ।
ನಿಪೀಡ್ಯೋಪನಿವಿಷ್ಟಾಸ್ತೇ ಪ್ರಾಕಾರಂ ಹರಿಯೂಥಪಾಃ ।
ಏತಸ್ಮಿನ್ನಂತರೇ ಚಕ್ರುಃ ಸ್ಕಂಧಾವಾರ ನಿವೇಶನಮ್ ॥

ಅನುವಾದ

ಆಗಲೇ ವೀರಬಾಹು, ಸುಬಾಹು, ನಲ ಮತ್ತು ಪನಸ ಈ ಸೇನಾಪತಿಗಳು ಲಂಕೆಯ ಪ್ರಾಕಾರದ ಮೇಲೆ ಹತ್ತಿ ಕುಳಿತು, ಅಲ್ಲೇ ತಮ್ಮ ಸೈನ್ಯದ ಶಿಬಿರಗಳನ್ನು ಸ್ಥಾಪಿಸಿದರು.॥22॥

ಮೂಲಮ್ - 23

ಪೂರ್ವದ್ವಾರಂ ತು ಕುಮುದಃ ಕೋಟಿಭಿರ್ದಶಭಿರ್ವೃತಃ ।
ಆವೃತ್ಯ ಬಲವಾಂಸ್ತಸ್ಥೌ ಹರಿಭಿರ್ಜಿತಕಾಶಿಭಿಃ ॥

ಅನುವಾದ

ಬಲವಂತ ಕುಮುದನು ವಿಜಯ ಶ್ರೀಯಿಂದ ಶೋಭಿಸುವ ಹತ್ತು ಕೋಟಿ ವಾನರರೊಂದಿಗೆ ಈಶಾನ್ಯದಲ್ಲಿರುವ ದ್ವಾರವನ್ನು ಮುತ್ತಿಕೊಂಡನು.॥23॥

ಮೂಲಮ್ - 24

ಸಾಹಾಯಾರ್ಥೇ ತು ತಸ್ಯೈವ ನಿವಿಷ್ಟಃ ಪ್ರಘಸೋ ಹರಿಃ ।
ಪನಸಶ್ಚ ಮಹಾಬಾಹುರ್ವಾನರೈರ್ಬಹುಭಿರ್ವೃತಃ ॥

ಅನುವಾದ

ಅವನ ಸಹಾಯಕ್ಕಾಗಿ ಇತರ ವಾನರರೊಂದಿಗೆ ಮಹಾಬಾಹು ಪನಸ ಮತ್ತು ಪ್ರಘಸರೂ ಬಂದು ಸೇರಿದರು.॥24॥

ಮೂಲಮ್ - 25

ದಕ್ಷಿಣ ದ್ವಾರಮಾಸಾದ್ಯ ವೀರಃ ಶತಬಲಿಃ ಕಪಿಃ ।
ಆವೃತ್ಯ ಬಲವಾಂಸ್ತಸ್ಥೌ ವಿಂಶತ್ಯಾ ಕೋಟಿಭಿರ್ವೃತಃ ॥

ಅನುವಾದ

ವೀರ ಶತಬಲಿಯು ಇಪ್ಪತ್ತು ಕೋಟಿ ವಾನರರೊಂದಿಗೆ ಆಗ್ನೇಯ ದ್ವಾರವನ್ನು ಆಕ್ರಮಿಸಿ ಅಲ್ಲೆ ಬೀಡುಬಿಟ್ಟನು.॥25॥

ಮೂಲಮ್ - 26

ಸುಷೇಣಃ ಪಶ್ಚಿಮದ್ವಾರಂ ಗತ್ವಾ ತಾರಾಪಿತಾ ಬಲೀ ।
ಆವೃತ್ಯ ಬಲವಾಂಸ್ತಸ್ಥೌ ಕೋಟಿಕೋಟಿಭಿರಾವೃತಃ ॥

ಅನುವಾದ

ತಾರೆಯ ತಂದೆಯಾದ ಬಲವಂತ ಸುಷೇಣನು ಕೋಟಿ ಕೋಟಿ ವಾನರರೊಂದಿಗೆ ನೈಋತ್ಯದ ದ್ವಾರವನ್ನು ಆಕ್ರಮಿಸಿ, ಸುತ್ತುವರಿದು ನಿಂತುಕೊಂಡನು.॥26॥

ಮೂಲಮ್ - 27

ಉತ್ತರದ್ವಾರಮಾಗಮ್ಯ ರಾಮಃ ಸೌಮಿತ್ರಿಣಾ ಸಹ ।
ಆವೃತ್ಯ ಬಲವಾಂಸ್ತಸ್ಥೌ ಸುಗ್ರೀವಶ್ಚ ಹರೀಶ್ವರಃ ॥

ಅನುವಾದ

ಸುಮಿತ್ರಾಕುಮಾರ ಲಕ್ಷ್ಮಣ ಸಹಿತ ಮಹಾಬಲವಂತ ಶ್ರೀರಾಮ ಹಾಗೂ ವಾನರರಾಜ ಸುಗ್ರೀವ ಉತ್ತರ ದ್ವಾರವನ್ನು (ವಾಯವ್ಯದ ಬಾಗಿಲನ್ನು) ಆಕ್ರಮಿಸಿ ನಿಂತುಕೊಂಡನು.॥27॥

ಮೂಲಮ್ - 28

ಗೋಲಾಂಗೂಲೋ ಮಹಾಕಾಯೋ ಗವಾಕ್ಷೋ ಭೀಮದರ್ಶನಾ ।
ವೃತಃ ಕೋಟ್ಯಾ ಮಹಾವೀರ್ಯಸ್ತಸ್ಥೌ ರಾಮಸ್ಯ ಪಾರ್ಶ್ವತಃ ॥

ಅನುವಾದ

ಗೋಲಾಂಗೂಲ ಜಾತಿಯ ವಿಶಾಲಕಾಯನಾದ ಭಯಂಕರ ವಾಗಿ ಕಾಣುತ್ತಿದ್ದಾಗ ಗವಾಕ್ಷನು ಒಂದು ಕೋಟಿ ವಾನರರೊಂದಿಗೆ ಶ್ರೀರಾಮಚಂದ್ರನ ಒಂದು ಪಕ್ಕದಲ್ಲಿ ನಿಂತಿದ್ದನು.॥28॥

ಮೂಲಮ್ - 29

ಋಕ್ಷಾಣಾಂ ಭೀಮಕೋಪಾನಾಂ ಧೂಮ್ರಃ ಶತ್ರುನಿಬರ್ಹಣಃ ।
ವೃತಃ ಕೋಟ್ಯಾ ಮಹಾವೀರ್ಯಸ್ತಸ್ಥೌ ರಾಮಸ್ಯ ಪಾರ್ಶ್ವತಃ ॥

ಅನುವಾದ

ಹೀಗೆಯೇ ಮಹಾಬಲಿ ಶತ್ರುಸೂದನ ಧೂಮ್ರನು ಒಂದು ಕೋಟಿ ಭಯಾನಕ ಕ್ರೋಧೀ ಕರಡಿಗಳಿಂದೊಡಗೂಡಿ ಶ್ರೀರಾಮನ ಇನ್ನೊಂದು ಪಕ್ಕದಲ್ಲಿ ನಿಂತನ.॥29॥

ಮೂಲಮ್ - 30

ಸಂನದ್ಧಸ್ತು ಮಹಾವೀರ್ಯೋ ಗದಾಪಾಣಿರ್ವಿಭೀಷಣಃ ।
ವೃತೋ ಯತ್ತೈಸ್ತು ಸಚಿವೈಸ್ತಸ್ಥೌ ತತ್ರ ಮಹಾಬಲಃ ॥

ಅನುವಾದ

ಕವಚಾದಿಗಳಿಂದ ಸುಸಜ್ಜಿತ ಮಹಾಪರಾಕ್ರಮಿ ವಿಭೀಷಣನು ಕೈಯಲ್ಲಿ ಗದೆ ಯನ್ನೆತ್ತಿಕೊಂಡು, ತನ್ನ ಜಾಗರೂಕರಾದ ಮಂತ್ರಿಗಳೊಡನೆ ಮಹಾಬಲಿ ಶ್ರೀರಾಮನಿದ್ದಲ್ಲಿಗೆ ಬಂದು ನಿಂತಿದ್ದನು.॥30॥

ಮೂಲಮ್ - 31

ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ।
ಸಮಂತಾತ್ ಪರಿಧಾವಂತೋ ರರಕ್ಷುರ್ಹರಿವಾಹಿನೀಮ್ ॥

ಅನುವಾದ

ಗಜ, ಗವಾಕ್ಷ, ಗವಯ, ಶರಭ ಮತ್ತು ಗಂಧಮಾದನರು ಎಲ್ಲೆಡೆ ಸಂಚರಿಸುತ್ತಾ ವಾನರ ಸೈನ್ಯವನ್ನು ರಕ್ಷಿಸುತ್ತಿದ್ದರು.॥31॥

ಮೂಲಮ್ - 32

ತತಃ ಕೋಪಪರೀತಾತ್ಮಾ ರಾವಣೋ ರಾಕ್ಷಸೇಶ್ವರಃ ।
ನಿರ್ಯಾಣಂ ಸರ್ವಸೈನ್ಯಾನಾಂ ದ್ರುತಮಾಜ್ಞಾಪಯತ್ತದಾ ॥

ಅನುವಾದ

ಆಗಲೇ ಅತ್ಯಂತ ಕ್ರೋಧಗೊಂಡ ರಾಕ್ಷಸರಾಜ ರಾವಣನು ತನ್ನ ಸಮಸ್ತ ಸೈನ್ಯಕ್ಕೆ ಕೂಡಲೇ ಹೊರಗೆ ಬರುವಂತೆ ಆಜ್ಞಾಪಿಸಿದನು.॥32॥

ಮೂಲಮ್ - 33

ಏತಚ್ಛ್ರುತ್ವಾ ತದಾ ವಾಕ್ಯಂ ರಾವಣಸ್ಯ ಮುಖೇರಿತಮ್ ।
ಸಹಸಾ ಭೀಮನಿರ್ಘೋಷಮುದ್ಘುಷ್ಟಂ ರಜನೀಚರೈಃ ॥

ಅನುವಾದ

ರಾವಣನ ಆಜ್ಞೆಯನ್ನು ಕೇಳುತ್ತಲೇ ರಾಕ್ಷಸರು ಅತ್ಯಂತ ಭಯಂಕರವಾಗಿ ಗರ್ಜಿಸಿದರು.॥33॥

ಮೂಲಮ್ - 34

ತತಃ ಪ್ರಭೋಧಿತಾ ಭೇರ್ಯಶ್ಚಂದ್ರಪಾಂಡುರಪುಷ್ಕರಾಃ ।
ಹೇಮಕೋಣೈರಭಿಹತಾ ರಾಕ್ಷಸಾನಾಂ ಸಮಂತತಃ ॥

ಅನುವಾದ

ಬಳಿಕ ಎಲ್ಲೆಡೆ ಚಂದ್ರನಂತೆ ಬಿಳುಪಾದ ಮುಖಭಾಗಗಳುಳ್ಳ ಭೇರಿಗಳನ್ನು ಸುವರ್ಣಮಯ ದಂಡಗಳಿಂದ ಬಾರಿಸಿದರು.॥34॥

ಮೂಲಮ್ - 35

ವಿನೇದುಶ್ಚ ಮಹಾಘೋಷಾಃ ಶಂಖಾಃ ಶತಸಹಸ್ರಶಃ ।
ರಾಕ್ಷಸಾನಾಂ ಸುಘೋರಾಣಾಂ ಮುಖಮಾರುತಪೂರಿತಾಃ ॥

ಅನುವಾದ

ಜೊತೆಗೆ ಭಯಾನಕ ರಾಕ್ಷಸರು ಊದುತ್ತಿರುವ ಲಕ್ಷ-ಲಕ್ಷ ಶಂಖಧ್ವನಿಗಳು ಮೊಳಗಿದವು.॥35॥

ಮೂಲಮ್ - 36

ತೇ ಬಭುಃ ಶುಭನೀಲಾಂಗಾಃ ಸಶಂಖಾ ರಜನೀಚರಾಃ ।
ವಿದ್ಯುನ್ಮಂಡಲಸಂನದ್ಧಾಃ ಸಬಲಾಕಾ ಇವಾಂಬುದಾಃ ॥

ಅನುವಾದ

ಆಭರಣಗಳ ಪ್ರಭೆಯಿಂದ ಸುಶೋಭಿತ ಕಪ್ಪಾದ ಶರೀರವುಳ್ಳ ನಿಶಾಚರರು ಶಂಖಗಳನ್ನು ಊದುತ್ತಿರುವಾಗ ಮಿಂಚಿನ ಪ್ರಭೆಯಿಂದ ಉದ್ಘಾಸಿತವಾದ ಬೆಳ್ವಕ್ಕಿಗಳ ಸಾಲುಗಳಿಂದ ಕೂಡಿದ ಕಪ್ಪಾದ ಮೋಡಗಳಂತೆ ಕಂಡುಬರುತ್ತಿದ್ದರು.॥36॥

ಮೂಲಮ್ - 37

ನಿಷ್ಪತಂತಿ ತತಃ ಸೈನ್ಯಾ ಹೃಷ್ಟಾ ರಾವಣಚೋದಿತಾಃ ।
ಸಮಯೇ ಪೂರ್ಯಮಾಣಸ್ಯ ವೇಗಾ ಇವ ಮಹೋದಧೇಃ ॥

ಅನುವಾದ

ರಾವಣನ ಪ್ರೇರಣೆಯಿಂದ ಅವನ ಸೈನಿಕರು, ಪ್ರಳಯಕಾಲದಲ್ಲಿ ಮಹಾ ಮೇಘಗಳ ಜಲದಿಂದ ತುಂಬಿದ ಸಮುದ್ರದ ರಭಸದಂತೆ ಹರ್ಷಗೊಂಡು ಯುದ್ಧಕ್ಕಾಗಿ ಹೊರಟರು.॥37॥

ಮೂಲಮ್ - 38

ತತೋ ವಾನರಸೈನ್ಯೇನ ಮುಕ್ತೋ ನಾದಃ ಸಮಂತತಃ ।
ಮಲಯಃ ಪೂರಿತೋ ಯೇನ ಸಸಾನುಪ್ರಸ್ಥಕಂದರಃ ॥

ಅನುವಾದ

ಅನಂತರ ವಾನರ ಸೈನಿಕರು ಎಲ್ಲ ಕಡೆಯೂ ಮಾಡಿದ ಸಿಂಹನಾದದಿಂದ ಪರ್ವತ ಶಿಖರ ಮತ್ತು ಕಂದರ ಸಹಿತ ಮಲಯಪರ್ವತವು ಪ್ರತಿಧ್ವನಿಸಿತು.॥38॥

ಮೂಲಮ್ - 39

ಶಂಖದುಂದುಭಿನಿರ್ಘೋಷಃ ಸಿಂಹನಾದಸ್ತರಸ್ವಿನಾಮ್ ।
ಪೃಥಿವೀಂ ಚಾಂತರಿಕ್ಷಂ ಚ ಸಾಗರಂ ಚಾಭ್ಯನಾದಯತ್ ॥

ಮೂಲಮ್ - 40

ಗಜಾನಾಂ ಬೃಂಹಿತೈಃ ಸಾರ್ಧಂ ಹಯಾನಾಂ ಹ್ರೇಷಿತೈರಪಿ ।
ರಥಾನಾಂ ನೇಮಿನಿರ್ಘೋಷೈ ರಕ್ಷಸಾಂವದನಸ್ವನೈಃ ॥

ಅನುವಾದ

ಹೀಗೆ ಆನೆಗಳ ಘೀಳಿಡುವಿಕೆಯಿಂದಲೂ, ಕುದುರೆಗಳ ಕೆನೆತಗಳಿಂದಲೂ, ರಥ ಚಕ್ರಗಳ ಗಡಗಡ ಧ್ವನಿಗಳಿಂದಲೂ, ರಾಕ್ಷಸರ ಬೊಬ್ಬೆಯಿಂದಲೂ, ಜೊತೆಗ ಶಂಖಭೇರಿಗಳ ನಿನಾದದಿಂದ ಹಾಗೂ ವೇಗವಂತ ವಾನರರ ಗರ್ಜನೆಯಿಂದಲೂ ಆಕಾಶ-ಭೂಮಿ-ಸಮುದ್ರಗಳು ಪ್ರತಿಧ್ವನಿಸಿದವು.॥39-40॥

ಮೂಲಮ್ - 41

ಏತಸ್ಮಿನ್ನಂತರೇ ಘೋರಃ ಸಂಗ್ರಾಮಃ ಸಮಪದ್ಯತ ।
ರಕ್ಷಸಾಂ ವಾನರಾಣಾಂ ಚ ಯಥಾ ದೇವಾಸುರೇ ಪುರಾ ॥

ಅನುವಾದ

ಇಷ್ಟರಲ್ಲೇ ಹಿಂದೆ ನಡೆದ ದೇವಾಸುರ ಸಂಗ್ರಾಮದಂತೆ ರಾಕ್ಷಸರ ಮತ್ತು ವಾನರರ ಘೋರಯುದ್ಧ ಪ್ರಾರಂಭವಾಯಿತು.॥41॥

ಮೂಲಮ್ - 42

ತೇ ಗದಾಭಿಃ ಪ್ರದೀಪ್ತಾಭಿಃ ಶಕ್ತಿ ಶೂಲಪರಶ್ವಧೈಃ ।
ನಿಜಘ್ನುರ್ವಾನರಾನ್ ಸರ್ವಾನ್ ಕಥಯಂತಃ ಸ್ವವಿಕ್ರಮಾನ್ ॥

ಅನುವಾದ

ರಾಕ್ಷಸರು ತಮ್ಮ ಪರಾಕ್ರಮವನ್ನು ಉದ್ಘೋಷಿಸುತ್ತಾ, ಹೊಳೆಯುವ ಗದೆ, ಶಕ್ತಿ, ಶೂಲ, ಗಂಡುಕೊಡಲಿಗಳಿಂದ ಸಮಸ್ತ ವಾನರರನ್ನು ಸಂಹರಿಸತೊಡಗಿದರು.॥42॥

ಮೂಲಮ್ - 43

ತಥಾ ವೃಕ್ಷೈರ್ಮಹಾಕಾಯಾಃ ಪರ್ವತಾಗ್ರೈಶ್ಚ ವಾನರಾಃ ।
ನಿಜಘ್ನುಸ್ತಾನಿ ರಕ್ಷಾಂಸಿ ನಖೈರ್ದಂತೈಶ್ಚ ವೇಗಿನಃ ॥

ಅನುವಾದ

ಹಾಗೆಯೇ ವೇಗಶಾಲಿ ವಿಶಾಲಕಾಯರಾದ ವಾನರರೂ ರಾಕ್ಷಸರ ಮೇಲೆ ದೊಡ್ಡ ದೊಡ್ಡ ವೃಕ್ಷ-ಪರ್ವತಗಳನ್ನು ಎಸೆಯುತ್ತಾ, ಉಗುರು, ಹುಲ್ಲುಗಳಿಂದ ಪ್ರಹರಿಸತೊಡಗಿದರು.॥43॥

ಮೂಲಮ್ - 44

ರಾಜಾ ಜಯತಿ ಸುಗ್ರೀವ ಇತಿ ಶಬ್ದೋ ಮಹಾನಭೂತ್ ।
ರಾಜನ್ ಜಯಜಯೇತ್ಯುಕ್ತ್ವಾ ಸ್ವಸ್ವನಾಮಕಥಾಂ ತತಃ ॥

ಅನುವಾದ

ವಾನರ ಸೈನ್ಯದಲ್ಲಿ ‘ವಾನರರಾಜ ಸುಗ್ರೀವನಿಗೆ ಜಯವಾಗಲೀ’ ಎಂಬ ಜಯಘೋಷವು ಕೇಳಿ ಬರುತ್ತಿತ್ತು. ಅತ್ತ ರಾಕ್ಷಸರೂ ಕೂಡ ‘ಮಹಾರಾಜ ರಾವಣನಿಗೆ ಜಯವಾಗಲೀ’ ಎಂದು ಕೂಗುತ್ತಾ ತಮ್ಮ ತಮ್ಮ ಹೆಸರುಗಳನ್ನು ಹೇಳುತ್ತ ಯುದ್ಧ ಮಾಡುತ್ತಿದ್ದರು.॥44॥

ಮೂಲಮ್ - 45

ರಾಕ್ಷಸಾಸ್ತ್ವ ಪರೇ ಭೀಮಾಃ ಪ್ರಾಕಾರಸ್ಥಾ ಮಹೀ ಗತಾನ್ ।
ವಾನರಾನ್ ಭಿಂದಿಪಾಲೈಶ್ಚ ಶೂಲೈಶ್ಚೈವ ವ್ಯದಾರಯನ್ ॥

ಅನುವಾದ

ಅನೇಕ ಭಯಾನಕ ರಾಕ್ಷಸರು ಪ್ರಾಕಾರದ ಮೇಲೆ ಹತ್ತಿ, ನೆಲದ ಮೇಲಿದ್ದ ವಾನರರನ್ನು ಶೂಲ, ಭಿಂದಿಪಾಲಗಳಿಂದ ಸೀಳಿ ಹಾಕುತ್ತಿದ್ದರು.॥45॥

ಮೂಲಮ್ - 46

ವಾನರಾಶ್ಚಾಪಿ ಸಂಕ್ರುದ್ಧಾಃ ಪ್ರಾಕಾರಸ್ಥಾನ್ ಮಹೀಂ ಗತಾಃ ।
ರಾಕ್ಷಸಾನ್ಪಾತಯಾಮಾಸುಃ ಖಮಾಪ್ಲುತ್ಯ ಸ್ವಬಾಹುಭಿಃ ॥

ಅನುವಾದ

ಆಗ ನೆಲದ ಮೇಲೆ ನಿಂತಿರುವ ವಾನರರೂ ಕೂಡ ಆಕಾಶಕ್ಕೆ ನೆಗೆದು ಪ್ರಾಕಾರದ ಮೇಲೆ ಕುಳಿತಿರುವ ರಾಕ್ಷಸರನ್ನು ತಮ್ಮ ತೋಳ್ಬಲದಿಂದ ಹಿಡಿದು ಕೆಳಕ್ಕೆ ಕೆಡಹುತ್ತಿದ್ದರು.॥46॥

ಮೂಲಮ್ - 47

ಸ ಸಂಪ್ರಹಾರಸ್ತುಮುಲೋ ಮಾಂಸಶೋಣಿತ ಕರ್ದಮಃ ।
ರಕ್ಷಸಾಂ ವಾನರಾಣಾಂ ಚ ಸಂಬಭೂವಾದ್ಭುತೋಪಮಃ ॥

ಅನುವಾದ

ಹೀಗೆ ರಾಕ್ಷಸರಿಗೂ, ವಾನರರಿಗೂ ಘನಘೋರ ಅದ್ಭುತ ಯುದ್ಧ ನಡೆಯಿತು. ಅದರಿಂದ ಅಲ್ಲಿ ರಕ್ತ ಮಾಂಸದ ಕೆಸರೇ ತುಂಬಿಹೋಯಿತು.॥47॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತೆರಡನೆಯ ಸರ್ಗ ಪೂರ್ಣವಾಯಿತು.॥42॥