०४१ रामेण अङ्गदप्रेषणम्

वाचनम्
ಭಾಗಸೂಚನಾ

ಶ್ರೀರಾಮನು ದುಃಸ್ಸಾಹಸದಿಂದ ಸುಗ್ರೀವನನ್ನು ತಡೆದುದು, ಲಂಕೆಯ ನಾಲ್ಕು ದ್ವಾರಗಳನ್ನು ಆಕ್ರಮಿಸಲು ವಾನರ ಸೈನ್ಯದ ನಿಯುಕ್ತಿ, ರಾವಣನ ಅರಮನೆಯಲ್ಲಿ ರಾಮದೂತ ಅಂಗದನ ಪರಾಕ್ರಮ, ವಾನರರ ಆಕ್ರಮಣದಿಂದ ರಾಕ್ಷಸರಿಗೆ ಭಯ

ಮೂಲಮ್ - 1

ಅಥ ತಸ್ಮಿನ್ನಿಮಿತ್ತಾನಿ ದೃಷ್ಟ್ವಾಲಕ್ಷ್ಮಣಪೂರ್ವಜಃ ।
ಸುಗ್ರೀವಂ ಸಂಪರಿಷ್ವಜ್ಯ ರಾಮೋ ವಚನಮಬ್ರವೀತ್ ॥

ಅನುವಾದ

ಬಳಿಕ ಶ್ರೀರಾಮನು ಸುಗ್ರೀವನ ಶರೀರದಲ್ಲಾದ ಗಾಯಗಳನ್ನು ನೋಡಿ, ಅವನನ್ನು ಸಂತೈಸುತ್ತಾ ಆಲಿಂಗಿಸಿ ಕೊಂಡು ಹೀಗೆ ಹೇಳಿದನು .॥1॥

ಮೂಲಮ್ - 2

ಅಸಮ್ಮಂತ್ರ್ಯ ಮಯಾ ಸಾರ್ಧಂ ತದಿದಂ ಸಾಹಸಂ ಕೃತಮ್ ।
ಏವಂ ಸಾಹಸಯುಕ್ತಾನಿ ನ ಕುರ್ವಂತಿ ಜನೇಶ್ವರಾಃ ॥

ಅನುವಾದ

ಸುಗ್ರೀವನೇ! ನನ್ನೊಡನೆ ಸಮಾಲೋಚಿಸದೆ ನೀನು ಇಂತಹ ಸಾಹಸ ಕಾರ್ಯಮಾಡಿರುವೆ. ರಾಜರಾದವರು ಇಂತಹ ದುಃಸ್ಸಾಹಸ ಕಾರ್ಯಕ್ಕೆ ಕೈಹಾಕುವುದಿಲ್ಲ.॥2॥

ಮೂಲಮ್ - 3

ಸಂಶಯೇ ಸ್ಥಾಪ್ಯ ಮಾಂ ಚೇದಂ ಬಲಂ ಚೇಮಂ ವಿಭೀಷಣಮ್ ।
ಕಷ್ಟಂ ಕೃತಮಿದಂ ವೀರ ಸಾಹಸಂ ಸಾಹಸಪ್ರಿಯ ॥

ಅನುವಾದ

ವೀರ ಸಾಹಸಿಯೇ! ನೀನು ನನ್ನನ್ನು, ವಾನರ ಸೈನ್ಯವನ್ನು, ವಿಭೀಷಣನನ್ನು ಸಂಶಯದಲ್ಲಿ ಕೆಡಹಿ, ಮಾಡಿದ ಈ ಸಾಹಸ ಕಾರ್ಯದಿಂದ ನನಗೆ ತುಂಬಾ ಕಷ್ಟವಾಯಿತು.॥3॥

ಮೂಲಮ್ - 4

ಇದಾನೀಂ ಮಾ ಕೃಥಾ ವೀರ ಏವಂ ವಿಧಮರಿಂದಮ ।
ತ್ವಯಿ ಕಿಂಚಿತ್ಸಮಾಪನ್ನೇ ಕಿಂ ಕಾರ್ಯಂ ಸೀತಯಾ ಮಮ ॥

ಮೂಲಮ್ - 5

ಭರತೇನ ಮಹಾಬಾಹೋ ಲಕ್ಷ್ಮಣೇನ ಯವೀಯಸಾ ।
ಶತ್ರುಘ್ನೇನ ಚ ಶತ್ರುಘ್ನ ಸ್ವಶರೀರೇಣ ವಾ ಪುನಃ ॥

ಅನುವಾದ

ಶತ್ರುದಮನ ವೀರನೇ! ಇನ್ನು ಮುಂದೆ ಇಂತಹ ದುಃಸ್ಸಾಹಸ ಮಾಡಬೇಡ. ಮಹಾಬಾಹುವೇ! ನಿನಗೆ ಏನಾದರೂ ಆದರೆ ಸೀತೆಯಿಂದ, ಭರತ, ಲಕ್ಷ್ಮಣ, ಶತ್ರುಘ್ನ ಇವರಿಂದ ಹಾಗೂ ಈ ಶರೀರದಿಂದಾದರೂ ನನಗೇನಾಗಬೇಕು.॥4-5॥

ಮೂಲಮ್ - 6

ತ್ವಯಿ ಚಾನಾಗತೇ ಪೂರ್ವಮಿತಿಮೇ ನಿಶ್ಚಿತಾ ಮತಿಃ ।
ಜಾನತಶ್ಚಾಪಿ ತೇ ವೀರ್ಯಂಮಹೇಂದ್ರ ವರುಣೋಪಮ ॥

ಮೂಲಮ್ - 7½

ಹತ್ವಾಹಂ ರಾವಣಂ ಯುದ್ಧೇ ಸಪುತ್ರಬಲವಾಹನಮ್ ।
ಅಭಿಷಿಚ್ಯ ಚ ಲಂಕಾಯಾಂ ವಿಭೀಷಣಮಥಾಪಿ ಚ ॥
ಭರತೇ ರಾಜ್ಯಮಾರೋಪ್ಯ ತ್ಯಕ್ಷ್ಯೇ ದೇಹಂ ಮಹಾಬಲ ॥

ಅನುವಾದ

ಮಹೇಂದ್ರ ವರುಣರಂತೆ ಮಹಾಬಲಿಯೇ! ನಿನ್ನ ಬಲ ಪರಾಕ್ರಮವನ್ನು ನಾನು ತಿಳಿದಿದ್ದರೂ ನೀನು ಮರಳಿ ಇಲ್ಲಿಗೆ ಬರುವ ಮೊದಲು ಯುದ್ಧದಲ್ಲಿ ವಾಹನ, ಸೈನ್ಯ, ಪುತ್ರರ ಸಹಿತ ರಾವಣನನ್ನು ವಧಿಸಿ, ಲಂಕೆಯ ರಾಜ್ಯವನ್ನು ವಿಭೀಷಣನಿಗೆ ಒಪ್ಪಿಸಿ, ಅಯೋಧ್ಯೆಯ ರಾಜ್ಯವನ್ನು ಭರತನಿಗೆ ಕೊಟ್ಟು, ನಾನು ಈ ಶರೀರವನ್ನು ತ್ಯಜಿಸಿ ಬಿಡುವ ವಿಚಾರ ಮಾಡಿದ್ದೆ.॥6-7½॥

ಮೂಲಮ್ - 8

ತಮೇವಂ ವಾದಿನಂ ರಾಮಂ ಸುಗ್ರೀವಃ ಪ್ರತ್ಯಭಾಷತ ॥

ಮೂಲಮ್ - 9

ತವ ಭಾರ್ಯಾಪಹರ್ತಾರಂ ದೃಷ್ಟ್ವಾ ರಾಘವ ರಾವಣಮ್ ।
ಮರ್ಷಯಾಮಿ ಕಥಂ ವೀರಜಾನನ್ ವಿಕ್ರಮಮಾತ್ಮನಃ ॥

ಅನುವಾದ

ಹೀಗೆ ಹೇಳಿದ ಶ್ರೀರಾಮನಲ್ಲಿ ಸುಗ್ರೀವನು ಇಂತು ನುಡಿದನು - ವೀರ ರಘುನಂದನ ! ನನ್ನ ಪರಾಕ್ರಮವನ್ನು ಚೆನ್ನಾಗಿ ಅರಿತಿರುವ ನಾನು, ನಿನ್ನ ಭಾರ್ಯೆಯನ್ನು ಅಪಹರಿಸಿದ ರಾವಣನನ್ನು ನೋಡಿ ಹೇಗೆ ಕ್ಷಮಿಸಲಿ.॥8-9॥

ಮೂಲಮ್ - 10

ಇತ್ಯೇವಂ ವಾದಿನಂ ವೀರಮಭಿನಂದ್ಯ ಚ ರಾಘವಃ ।
ಲಕ್ಷ್ಮಣಂ ಲಕ್ಷ್ಮಿಸಂಪನ್ನಮಿದಂ ವಚನಮಬ್ರವೀತ್ ॥

ಅನುವಾದ

ವೀರ ಸುಗ್ರೀವನ ಮಾತನ್ನು ಕೇಳಿದಾಗ ಶ್ರೀರಾಮಚಂದ್ರನು ಅವನನ್ನು ಅಭಿನಂದಿಸುತ್ತಾ ಶೋಭಾಸಂಪನ್ನ ಲಕ್ಷ್ಮಣನಲ್ಲಿ ಇಂತೆದನು.॥10॥

ಮೂಲಮ್ - 11

ಪರಿಗೃಹ್ಯೋದಕಂ ಶೀತಂ ವನಾನಿ ಫಲವಂತಿ ಚ ।
ಬಲೌಘಂ ಸಂವಿಭಜ್ಯೇಮಂ ವ್ಯೂಹ್ಯ ತಿಷ್ಠಾಮ ಲಕ್ಷ್ಮಣ ॥

ಅನುವಾದ

ಲಕ್ಷ್ಮಣ! ಶೀತಲ ಜಲದಿಂದ ತುಂಬಿದ ಜಲಾಶಯ ಮತ್ತು ಫಲಭರಿತ ವನವನ್ನು ಆಶ್ರಯಿಸಿದ ನಾವು ಈ ವಿಶಾಲ ವಾನರ ಸೈನ್ಯವನ್ನು ವಿಭಾಗಿಸಿ ವ್ಯೂಹ ರಚಿಸಿಕೊಂಡು ಯುದ್ಧಕ್ಕೆ ಉದ್ಯುಕ್ತವಾಗಲಿ.॥11॥

ಮೂಲಮ್ - 12

ಲೋಕಕ್ಷಯಕರಂ ಭೀಮಂ ಭಯಂ ಪಶ್ಯಾಮ್ಯುಪಸ್ಥಿತಮ್ ।
ನಿಬರ್ಹಣಂ ಪ್ರವೀರಾಣಾಮೃಕ್ಷ ವಾನರರಕ್ಷಸಾಮ್ ॥

ಅನುವಾದ

ಈಗ ನಾನು ಲಂಕಾ ಸಂಹಾರವನ್ನು ಸೂಚಿಸುವ ಭಯಾನಕ ಅಪಶಕುನಗಳನ್ನು ನೋಡುತ್ತಿದ್ದೇನೆ. ಇದರಿಂದ ವಾನರ-ಕರಡಿಗಳಿಂದ ರಾಕ್ಷಸರ ಮುಖ್ಯ ಮುಖ್ಯ ವೀರರ ಸಂಹಾರವಾಗುವುದೆಂದು ಸಿದ್ಧವಾಗುತ್ತದೆ.॥12॥

ಮೂಲಮ್ - 13

ವಾತಾಹಿ ಪರುಷಂ ವಾಂತಿ ಕಂಪತೇ ಚ ವಸುಂಧರಾ ।
ಪರ್ವತಾಗ್ರಾಣಿ ವೇಪಂತೇ ನದಂತಿ ಧರಣೀಧರಾಃ ॥

ಅನುವಾದ

ಪ್ರಚಂಡ ಬಿರುಗಾಳಿ ಬೀಸುತ್ತಿದೆ, ಭೂಮಿ ನಡುಗುತ್ತಾ ಇದೆ. ಪರ್ವತ ಶಿಖರಗಳು ಕಂಪಿಸುತ್ತಿವೆ, ದಿಗ್ಗಜರು ಬೊಬ್ಬೆಯಿಡುತ್ತಿವೆ.॥13॥

ಮೂಲಮ್ - 14

ಮೇಘಾಃ ಕ್ರವ್ಯಾದಸಂಕಾಶಾಃ ಪರುಷಾಃ ಪರುಷಸ್ವರಾಃ ।
ಕ್ರೂರಾಃ ಕ್ರೂರಂ ಪ್ರವರ್ಷಂತೇ ಮಿಶ್ರಂ ಶೋಣಿತಬಿಂದುಭಿಃ ॥

ಅನುವಾದ

ಹಿಂಸ್ರ ಪಶುಗಳಂತೆ ಮೇಘಗಳು ಗರ್ಜಿಸುತ್ತಿವೆ. ಕರ್ಕಶ ಸ್ವರದಿಂದ ವಿಕಟವಾಗಿ ಗರ್ಜಿಸುತ್ತಾ ರಕ್ತದ ಮಳೆಗರೆಯುತ್ತಿವೆ.॥14॥

ಮೂಲಮ್ - 15

ರಕ್ತಚಂದನ ಸಂಕಾಶಾ ಸಂಧ್ಯಾ ಪರಮದಾರುಣಾ ।
ಜ್ವಲಚ್ಚ ನಿಪತತ್ಯೇತದಾದಿತ್ಯಾದಗ್ನಿಮಂಡಲಮ್ ॥

ಅನುವಾದ

ಅತ್ಯಂತ ದಾರುಣವಾದ ಸಂಜೆಯು ರಕ್ತಚಂದನದಂತೆ ಕೆಂಪಾಗಿ ಕಾಣುತ್ತಿದೆ. ಉರಿಯುತ್ತಿರುವ ಅಗ್ನಿಪುಂಜವೇ ಸೂರ್ಯನಿಂದ ಕಳಚಿ ಬೀಳುವಂತಿದೆ.॥15॥

ಮೂಲಮ್ - 16

ಆದಿತ್ಯ ಮಭಿವಾಶ್ಯಂತಿ ಜನಯಂತೋ ಮಹದ್ಭಯಮ್ ।
ದೀನಾ ದೀನಸ್ವರಾ ಘೋರಾ ಅಪ್ರಶಸ್ತಾ ಮೃಗದ್ವಿಜಾಃ ॥

ಅನುವಾದ

ನಿಷಿದ್ಧವಾದ ಪಶು-ಪಕ್ಷಿಗಳು ದೀನತೆಯಿಂದ ಸೂರ್ಯ ನನ್ನು ನೋಡುತ್ತಾ ಕೂಗುತ್ತಿವೆ. ಅವು ಮಹಾಭಯವನ್ನುಂಟು ಮಾಡುತ್ತಾ ಭಯಂಕರವಾಗಿ ಕಾಣುತ್ತಿವೆ.॥16॥

ಮೂಲಮ್ - 17

ರಜನ್ಯಾಮಪ್ರಕಾಶಶ್ಚ ಸಂತಾಪಯತಿ ಚಂದ್ರಮಾಃ ।
ಕೃಷ್ಣರಕ್ತಾಂಶುಪರ್ಯಂತೋ ಯಥಾ ಲೋಕಸ್ಯ ಸಂಕ್ಷಯೇ ॥

ಅನುವಾದ

ರಾತ್ರೆಯಲ್ಲಿ ಚಂದ್ರನ ಪ್ರಕಾಶವು ಮಂಕಾಗಿದೆ, ಅವನು ಶೀತಲತೆಯ ಬದಲು ಉರಿಯನ್ನೆ ಕೊಡುತ್ತಿದ್ದಾನೆ. ಸಮಸ್ತ ಲೋಕಗಳ ಸಂಹಾರ ಕಾಲದಲ್ಲಿ ಚಂದ್ರನಿರುವಂತೆಯೇ ಈಗಲೂ ಕಂಡುಬರುತ್ತಿದ್ದಾನೆ.॥17॥

ಮೂಲಮ್ - 18

ಹ್ರಸ್ವೋ ರೂಕ್ಷೋಽಪ್ರಶಸ್ತಶ್ಚ ಪರಿವೇಷಃ ಸುಲೋಹಿತಃ ।
ಆದಿತ್ಯಮಂಡಲೇ ನೀಲಂ ಲಕ್ಷ್ಮ ಲಕ್ಷ್ಮಣ ದೃಶ್ಯತೇ ॥

ಮೂಲಮ್ - 19

ದೃಶ್ಯಂತೇ ನ ಯಥಾವಚ್ಚ ನಕ್ಷತ್ರಾಣ್ಯಭಿವರ್ತತೇ ।
ಯುಗಾಂತಮಿವ ಲೋಕಸ್ಯ ಪಶ್ಯ ಲಕ್ಷ್ಮಣ ಶಂಸತಿ ॥

ಅನುವಾದ

ಲಕ್ಷ್ಮಣ! ಈ ನಕ್ಷತ್ರಗಳು ಚೆನ್ನಾಗಿ ಹೊಳೆಯುತ್ತಿಲ್ಲ, ಮಲಿನವಾಗಿ ಕಾಣುತ್ತಿವೆ. ಈ ಅಶುಭ ಲಕ್ಷಣಗಳು ಜಗತ್ತಿನಲ್ಲಿ ಪ್ರಳಯವಾಗುವುದನ್ನು ಸೂಚಿಸುತ್ತಿದೆ.॥18-19॥

ಮೂಲಮ್ - 20

ಕಾಕಾಃ ಶ್ಯೇನಾಸ್ತಥಾ ಗೃಧ್ರಾ ನೀಚೈಃ ಪರಿಪತಂತಿ ಚ ।
ಶಿವಾಶ್ಚಾ ಪ್ಯಶುಭಾವಾಚಃ ಪ್ರವದಂತಿ ಮಹಾಸ್ವನಾಃ ॥

ಅನುವಾದ

ಕಾಗೆಗಳು, ಗಿಡುಗಗಳು, ಹದ್ದುಗಳು ಕೆಳಭಾಗದಲ್ಲೇ ಹಾರುತ್ತಾ ನೆಲದ ಮೇಲೆ ಬಂದು ಕುಳಿತುಕೊಳ್ಳುತ್ತಿವೆ. ಗುಳ್ಳೆನರಿಗಳು ಗಟ್ಟಿಯಾಗಿ ಅಮಂಗಳಕರವಾಗಿ ಕೂಗುತ್ತಿವೆ.॥20॥

ಮೂಲಮ್ - 21

ಶೈಲೈಃ ಶೂಲೈಶ್ಚ ಖಡ್ಗೈಶ್ಚ ವಿಮುಕ್ತೈಃ ಕಪಿರಾಕ್ಷಸೈಃ ।
ಭವಿಷ್ಯತ್ಯಾವೃತಾ ಭೂಮಿರ್ಮಾಂಸಶೋಣಿತಕರ್ದಮಾ ॥

ಅನುವಾದ

ಇದರಿಂದ ಸೂಚಿತವಾಗುತ್ತದೆ - ವಾನರರು ಮತ್ತು ರಾಕ್ಷಸರು ಪ್ರಯೋಗಿಸಿದ ಶಿಲಾಖಂಡಗಳಿಂದ, ಖಡ್ಗಗಳಿಂದ ಈ ಭೂಮಿಯು ತುಂಬಿಹೋಗಿ, ರಕ್ತ-ಮಾಂಸಗಳಿಂದ ಎಲ್ಲೆಡೆ ಕೆಸರೇ ತುಂಬಿಹೋಗುವುದು.॥21॥

ಮೂಲಮ್ - 22

ಕ್ಷಿಪ್ರಮದ್ಯ ದುರಾಧರ್ಷಾಂ ಪುರೀಂ ರಾವಣ ಪಾಲಿತಾಮ್ ।
ಅಭಿಯಾಮ ಜವೇನೈವ ಸರ್ವತೋ ಹರಿಭಿರ್ವೃತಾಃ ॥

ಅನುವಾದ

ರಾವಣನಿಂದ ಪಾಲಿತವಾದ ಈ ಲಂಕೆಯು ಶತ್ರುಗಳಿಗೆ ದುರ್ಜಯವಾಗಿದ್ದರೂ ಈಗ ನಾವು ಶೀಘ್ರವಾಗಿ ವಾನರರೊಂದಿಗೆ ವೇಗವಾಗಿ ಆಕ್ರಮಿಸೋಣ.॥22॥

ಮೂಲಮ್ - 23

ಇತ್ಯೇವಂ ತು ವದನ್ವೀರೋ ಲಕ್ಷ್ಮಣಂ ಲಕ್ಷ್ಮಣಾಗ್ರಜಃ ।
ತಸ್ಮಾದವಾತರಚ್ಛೀಘ್ರಂ ಪರ್ವತಾಗ್ರಾನ್ಮಹಾಬಲಃ ॥

ಅನುವಾದ

ಲಕ್ಷ್ಮಣನಲ್ಲಿ ಹೀಗೆ ಹೇಳುತ್ತಾ ಮಹಾಬಲಿ ಶ್ರೀರಾಮಚಂದ್ರನು ಆ ಪರ್ವತದಿಂದ ಕೂಡಲೇ ಕೆಳಗೆ ಇಳಿದು ಬಂದನು.॥23॥

ಮೂಲಮ್ - 24

ಅವತೀರ್ಯ ತು ಧರ್ಮಾತ್ಮಾ ತಸ್ಮಾಚ್ಛೈಲಾತ್ ಸ ರಾಘವಃ ।
ಪರೈಃ ಪರಮದುರ್ಧರ್ಷಂ ದದರ್ಶ ಬಲಮಾತ್ಮನಃ ॥

ಅನುವಾದ

ಆ ಪರ್ವತದಿಂದ ಇಳಿದು ಧರ್ಮಾತ್ಮಾ ಶ್ರೀರಘುನಾಥನು ಶತ್ರುಗಳಿಗೆ ಅತ್ಯಂತ ದುರ್ಜಯವಾದ ತನ್ನ ಸೈನ್ಯವನ್ನು ವೀಕ್ಷಿಸಿದನು.॥24॥

ಮೂಲಮ್ - 25

ಸಂನಹ್ಯ ತು ಸಸುಗ್ರೀವಃ ಕಪಿರಾಜಬಲಂ ಮಹತ್ ।
ಕಾಲಜ್ಞೋ ರಾಘವಃ ಕಾಲೇ ಸಂಯುಗಾಯಾಭ್ಯಚೋದಯತ್ ॥

ಅನುವಾದ

ಕಾಲಜ್ಞನಾದ ಶ್ರೀರಾಮನು ಕಪಿರಾಜನ ಆ ಸೈನ್ಯವನ್ನು ಸುಗ್ರೀವ ಸಹಿತ ಸುಸಜ್ಜಿತಗೊಳಿಸಿ ಸಕಾಲದಲ್ಲಿ ಯುದ್ಧಸನ್ನದ್ಧರಾಗುವಂತೆ ಸೈನಿಕರಿಗೆ ಆಜ್ಞಾಪಿಸಿದನು.॥25॥

ಮೂಲಮ್ - 26

ತತಃ ಕಾಲೇ ಮಹಾಬಾಹುರ್ಬಲೇನ ಮಹತಾ ವೃತಃ ।
ಪ್ರಸ್ಥಿತಃ ಪುರತೋ ಧನ್ವೀ ಲಂಕಾಮಭಿಮುಖಃ ಪುರೀಮ್ ॥

ಅನುವಾದ

ಅನಂತರ ಮಹಾಬಾಹು ಧನುರ್ಧರ ಶ್ರೀರಾಮನು ಆ ಮಹಾಸೈನ್ಯದೊಂದಿಗೆ ಶುಭ ಮುಹೂರ್ತದಲ್ಲಿ ಲಂಕಾ ಪಟ್ಟಣದ ಕಡೆಗೆ ಪ್ರಯಾಣ ಬೆಳೆಸಿದನು.॥26॥

ಮೂಲಮ್ - 27

ತಂ ವಿಭೀಷಣ ಸುಗ್ರೀವೌ ಹನೂಮಾನ್ ಜಾಂಬವಾನ್ನಲಃ ।
ಋಕ್ಷರಾಜಸ್ತಥಾ ನೀಲೋ ಲಕ್ಷ್ಮಣಶ್ಚಾನ್ವಯುಸ್ತದಾ ॥

ಅನುವಾದ

ಆಗ ವಿಭೀಷಣ, ಸುಗ್ರೀವ, ಹನುಮಂತ, ಋಕ್ಷರಾಜನಾದ ಜಾಂಬವಂತ, ನಳ, ನೀಲ ಹಾಗೂ ಲಕ್ಷ್ಮಣನೂ ಅವನನ್ನು ಹಿಂಬಾಲಿಸಿದರು.॥27॥

ಮೂಲಮ್ - 28

ತತಃ ಪಶ್ಚಾತ್ಸುಮಹತೀ ಪೃತನರ್ಕ್ಷವನೌಕಸಾಮ್ ।
ಪ್ರಚ್ಛಾದ್ಯ ಮಹತೀಂ ಭೂಮಿಮನುಯಾತಿ ಸ್ಮ ರಾಘವಮ್ ॥

ಅನುವಾದ

ಅವರ ಹಿಂದೆ ಕರಡಿಗಳ ಮತ್ತು ವಾನರರ ವಿಶಾಲ ಸೈನ್ಯವು ವಿಸ್ತಾರವಾದ ಭೂಭಾಗವನ್ನು ಆವರಿಸಿಕೊಂಡು ಶ್ರೀರಾಮನ ಹಿಂದೆ ಹೊರಟಿತು.॥28॥

ಮೂಲಮ್ - 29

ಶೈಲಶೃಂಗಾಣಿ ಶತಶಃ ಪ್ರವೃದ್ಧಾಂಶ್ಚ ಮಹೀರುಹಾನ್ ।
ಜಗೃಹುಃ ಕುಂಜರಪ್ರಖ್ಯಾ ವಾನರಾಃ ಪರವಾರಣಾಃ ॥

ಅನುವಾದ

ಶತ್ರುಗಳು ಮುಂದೆ ಬರದಂತೆ ತಡೆಯುವ ಆನೆಗಳಂತೆ ಮಹಾಕಾಯರಾದ ವಾನರರು ಪರ್ವತಶಿಖರಗಳನ್ನು ದೊಡ್ಡ ದೊಡ್ಡ ವೃಕ್ಷಗಳನ್ನು ಎತ್ತಿಕೊಂಡಿದ್ದರು.॥29॥

ಮೂಲಮ್ - 30

ತೌ ತ್ವದೀರ್ಘೇಣ ಕಾಲೇನ ಭ್ರಾತರೌ ರಾಮಲಕ್ಷ್ಮಣೌ ।
ರಾವಣಸ್ಯ ಪುರೀಂ ಲಂಕಾಮಾಸೇದತುರರಿಂದಮೌ ॥

ಅನುವಾದ

ಶತ್ರುದಮನರಾದ ಶ್ರೀರಾಮ-ಲಕ್ಷ್ಮಣರು ಸ್ವಲ್ಪ ಸಮಯದಲ್ಲೇ ರಾವಣನ ಲಂಕೆಯನ್ನು ಸಮೀಪಿಸಿದರು.॥30॥

ಮೂಲಮ್ - 31

ಪತಾಕಾಮಾಲಿನೀಂ ರಮ್ಯಾಮುದ್ಯಾನವನ ಶೋಭಿತಾಮ್ ।
ಚಿತ್ರವಪ್ರಾಂ ಸುದುಷ್ಟ್ರಾಪಾಮುಚ್ಛೈಃ ಪ್ರಾಕಾರ ತೋರಣಾಮ್ ॥

ಅನುವಾದ

ಆ ಲಂಕೆಯು ರಮಣೀಯ ಧ್ವಜ-ಪತಾಕೆಗಳಿಂದ ಅಲಂಕೃತವಾಗಿತ್ತು. ಅನೇಕ ಉದ್ಯಾನವನಗಳಿಂದ ಅದರ ಶೋಭೆ ಹೆಚ್ಚಿತ್ತು. ಸುತ್ತಲೂ ಎತ್ತರವಾದ ಪ್ರಾಕಾರಗಳಿದ್ದವು. ಆ ಪ್ರಾಕಾರದ ನಾಲ್ಕು ಕಡೆಗಳಲ್ಲಿಯೂ ನಾಲ್ಕು ಹೆಬ್ಬಾಗಿಲುಗಳಿದ್ದವು. ಅವುಗಳ ಮೂಲಕ ಲಂಕೆಯನ್ನು ಪ್ರವೇಶಿಸುವುದು ಯಾರಿಗೂ ಸುಲಭವಾಗಿರಲಿಲ್ಲ.॥31॥

ಮೂಲಮ್ - 32

ತಾಂ ಸುರೈರಪಿ ದುರ್ಧರ್ಷಾಂ ರಾಮವಾಕ್ಯ ಪ್ರಚೋದಿತಾಃ ।
ಯಥಾನಿದೇಶಂ ಸಂಪೀಡ್ಯ ನ್ಯವಿಶಂತ ವನೌಕಸಃ ॥

ಅನುವಾದ

ಲಂಕೆಯನ್ನು ಆಕ್ರಮಿಸಲು ದೇವತೆಗಳಿಗೂ ಕಠಿಣವಾಗಿದ್ದರೂ ಶ್ರೀರಾಮನ ಆಜ್ಞೆಯಂತೆ ವಾನರರು ಅಲ್ಲಲ್ಲಿ ನಿಂತು ಆ ಪುರಿಯನ್ನು ಸುತ್ತುವರಿದು ಒಳಗೆ ಪ್ರವೇಶಿಸತೊಡಗಿದರು.॥32॥

ಮೂಲಮ್ - 33

ಲಂಕಾಯಾ ಸ್ತೂತ್ತರದ್ವಾರಂ ಶೈಲಶೃಂಗಮಿವೋನ್ನತಮ್ ।
ರಾಮಃ ಸಹಾನುಜೋ ಧನ್ವೀ ಜುಗೋಪ ಚ ರುರೋಧ ಚ ॥

ಅನುವಾದ

ಪರ್ವತ ಶಿಖರದಂತೆ ಇದ್ದ ಲಂಕೆಯ ಉತ್ತರದ್ವಾರದಲ್ಲಿ ಶ್ರೀರಾಮ-ಲಕ್ಷ್ಮಣರು ಧನುಷ್ಪಾಣಿಗಳಾಗಿ ನಿಂತು ತಮ್ಮ ಸೈನ್ಯವನ್ನು ರಕ್ಷಿಸುತ್ತಿದ್ದರು.॥33॥

ಮೂಲಮ್ - 34

ಲಂಕಾಮುಪನಿವಿಷ್ಟಸ್ತು ರಾಮೋ ದಶರಥಾತ್ಮಜಃ ।
ಲಕ್ಷ್ಮಣಾನುಚರೋ ವೀರಃ ಪುರೀಂ ರಾವಣ ಪಾಲಿತಾಮ್ ॥

ಮೂಲಮ್ - 35

ಉತ್ತರದ್ವಾರಮಾಸಾದ್ಯ ಯತ್ರ ತಿಷ್ಠತಿ ರಾವಣಃ ।
ನಾನ್ಯೋ ರಾಮಾದ್ಧಿ ತದ್ದ್ವಾರಂ ಸಮರ್ಥಃ ಪರಿರಕ್ಷಿತುಮ್ ॥

ಅನುವಾದ

ದಶರಥನಂದನ ವೀರ ಶ್ರೀರಾಮನು ಲಕ್ಷ್ಮಣನೊಂದಿಗೆ ರಾವಣನ ಲಂಕೆಯ ಉತ್ತರದ್ವಾರಕ್ಕೆ ಹೋದನು, ಅಲ್ಲಿ ಸ್ವತಃ ರಾವಣನೇ ಸಿದ್ಧನಾಗಿ ನಿಂತಿದ್ದನು. ಶ್ರೀರಾಮನ ಹೊರತಾಗಿ ಯಾರೂ ಆ ದ್ವಾರದಲ್ಲಿ ಸೈನಿಕರನ್ನು ರಕ್ಷಿಸಲು ಸಮರ್ಥರಾಗುತ್ತಿರಲಿಲ್ಲ.॥34-35॥

ಮೂಲಮ್ - 36

ರಾವಣಾಧಿಷ್ಠಿತಂ ಭೀಮಂ ವರುಣೇನೇವ ಸಾಗರಮ್ ।
ಸಾಯುಧೈ ರಾಕ್ಷಸೈರ್ಭೀಮೈರಭಿಗುಪ್ತಂ ಸಮಂತತಃ ॥

ಅನುವಾದ

ಆಯುಧಪಾಣಿಗಳಾದ ಭಯಂಕರ ರಾಕ್ಷಸರಿಂದ ಸುತ್ತಲೂ ರಕ್ಷಿತವಾದ ಆ ಭಯಾನಕ ದ್ವಾರದಲ್ಲಿ ವರುಣದೇವತೆ ಸಮುದ್ರದಲ್ಲಿ ಅಧಿಷ್ಠಿತವಾಗಿರುವಂತೆ, ರಾವಣನು ನಿಂತಿದ್ದನು.॥36॥

ಮೂಲಮ್ - 37½

ಲಘೂನಾಂ ತ್ರಾಸಜನನಂ ಪಾತಾಲಮಿವ ದಾನವೈಃ ।
ವಿನ್ಯಸ್ತಾನಿ ಚ ಯೋಧನಾಂ ಬಹೂನಿ ವಿವಿಧಾನಿ ಚ ॥
ದದರ್ಶಾಯುಧ ಜಾಲಾನಿ ತಥೈವ ಕವಚಾನಿ ಚ ।

ಅನುವಾದ

ಆ ಉತ್ತರದ್ವಾರವು ದಾನವರಿಂದ ರಕ್ಷಿತವಾದ ಪಾತಾಳದಂತೆ ಅಲ್ಪ ಬಲರ ಮನಸ್ಸಿನಲ್ಲಿ ಭಯವನ್ನುಂಟು ಮಾಡುತ್ತಿತ್ತು. ಆ ದ್ವಾರದೊಳಗೆ ವೀರರ ಬಗೆಬಗೆಯ ಅಸ್ತ್ರ-ಶಸ್ತ್ರಗಳು, ಕವಚಗಳೂ ಇರಿಸಿದ್ದನ್ನು ಭಗವಾನ್ ಶ್ರೀರಾಮನು ನೋಡಿದನು.॥37½॥

ಮೂಲಮ್ - 38½

ಪೂರ್ವಂ ತು ದ್ವಾರಮಾಸಾದ್ಯ ನೀಲೋ ಹರಿಚಮೂಪತಿಃ ॥
ಅತಿಷ್ಠತ್ಸಹ ಮೈಂದೇನ ದ್ವಿವಿದೇನ ಚ ವೀರ್ಯವಾನ್ ।

ಅನುವಾದ

ವಾನರ ಸೇನಾಪತಿ ಪರಾಕ್ರಮಿ ನೀಲನು ಮೈಂದ, ದ್ವಿವಿದರೊಡನೆ ಲಂಕೆಯ ಪೂರ್ವದ್ವಾರವನ್ನು ಆಕ್ರಮಿಸಿದನು.॥38½॥

ಮೂಲಮ್ - 39½

ಅಂಗದೋ ದಕ್ಷಿಣ ದ್ವಾರಂ ಜಗ್ರಾಹ ಸುಮಹಾಬಲಃ ॥
ಋಷಭೇಣ ಗವಾಕ್ಷೇಣ ಗಜೇನ ಗವಯೇನ ಚ ।

ಅನುವಾದ

ಮಹಾಬಲಿ ಅಂಗದನು ಋಷಭ, ಗವಾಕ್ಷ, ಗಜ, ಗವಯರೊಂದಿಗೆ ದಕ್ಷಿಣ ದ್ವಾರವನ್ನು ಆಕ್ರಮಿಸಿದನು.॥39½॥

ಮೂಲಮ್ - 40½

ಹನೂಮಾನ್ ಪಶ್ಚಿಮದ್ವಾರಂ ರರಕ್ಷ ಬಲವಾನ್ಕಪಿಃ ।
ಪ್ರಮಾಥಿಪ್ರಘಸಾಭ್ಯಾಂ ಚ ವೀರೈರನ್ಯೈಶ್ಚ ಸಂಗತಃ ।

ಅನುವಾದ

ಪ್ರಮಾಧಿ, ಪ್ರಘಸ ಹಾಗೂ ಇತರ ವಾನರ ವೀರರೊಂದಿಗೆ ಬಲವಂತ ಕಪಿಶ್ರೇಷ್ಠ ಹನುಮಂತನು ಪಶ್ಚಿಮದ ದ್ವಾರವನ್ನು ತಡೆದು ನಿಂತನು.॥40½॥

ಮೂಲಮ್ - 41½

ಮಧ್ಯಮೇ ಚ ಸ್ವಯಂ ಗುಲ್ಮೇ ಸುಗ್ರೀವಃ ಸಮತಿಷ್ಠತ ॥
ಸಹ ಸರ್ವೈರ್ಹರಿಶ್ರೇಷ್ಠೈಃ ಸುಪರ್ಣ ಪವನೋಪಮೈಃ ।

ಅನುವಾದ

ವಾಯವ್ಯದಲ್ಲಿದ್ದ ರಾಕ್ಷಸರ ಸೇನಾ ಶಿಬಿರದ ಮೇಲೆ ಗರುಡ, ವಾಯುವಿನಂತೆ ವೇಗಶಾಲೀ ಶ್ರೇಷ್ಠ ವಾನರೊಂದಿಗೆ ಸುಗ್ರೀವನು ಆಕ್ರಮಣ ಮಾಡಿದನು.॥41½॥

ಮೂಲಮ್ - 42½

ವಾನರಾಣಾಂ ತು ಷಟ್ತ್ರಿಂಶತ್ಕೋಟ್ಯಃ ಪ್ರಖ್ಯಾತ ಯೂಥಪಾಃ ॥
ನಿಪೀಡ್ಯೋಪನಿವಿಷ್ಟಾಶ್ಚ ಸುಗ್ರೀವೋ ಯತ್ರ ವಾನರಃ ।

ಅನುವಾದ

ವಾನರರಾಜ ಸುಗ್ರೀವನಿರುವಲ್ಲಿ ಮೂವತ್ತಾರು ಕೋಟಿ ಪ್ರಖ್ಯಾತ ವಾನರ ಸೇನಾಪತಿಗಳು ರಾಕ್ಷಸರನ್ನು ಪೀಡಿಸುತ್ತಾ ಉಪಸ್ಥಿತರಾಗಿದ್ದರು.॥42½॥

ಮೂಲಮ್ - 43½

ಶಾಸನೇನ ತು ರಾಮಸ್ಯ ಲಕ್ಷ್ಮಣಃ ಸವಿಭೀಷಣಃ ॥
ದ್ವಾರೇ ದ್ವಾರೇ ಹರೀಣಾಂ ತು ಕೋಟಿಂ ಕೋಟಿರ್ನ್ಯವೇಶಯತ್ ।

ಅನುವಾದ

ಶ್ರೀರಾಮನ ಅಪ್ಪಣೆಯಂತೆ ವಿಭೀಷಣ ಸಹಿತ ಲಕ್ಷ್ಮಣನು ಲಂಕೆಯ ಪ್ರತಿಯೊಂದು ದ್ವಾರದಲ್ಲಿ ಒಂದೊಂದು ಕೋಟಿ ವಾನರರನ್ನು ನಿಯುಕ್ತಗೊಳಿಸಿದನು.॥43½॥

ಮೂಲಮ್ - 44½

ಪಶ್ಚಿಮೇನ ತು ರಾಮಸ್ಯ ಸುಷೇಣಃ ಸಹಜಾಂಬವಾನ್ ॥
ಅದೂರಾನ್ಮಧ್ಯಮೇ ಗುಲ್ಮೇ ತಸ್ಥೌ ಬಹುಬಲಾನುಗಃ ।

ಅನುವಾದ

ಸುಷೇಣ ಮತ್ತು ಜಾಂಬವಂತರು ಅತುಲ ಸೈನ್ಯದೊಂದಿಗೆ ಶ್ರೀರಾಮನ ಸ್ವಲ್ಪದೂರದಲ್ಲಿ ನಿಂತು ಸೈನ್ಯವನ್ನು ರಕ್ಷಿಸುತ್ತಿದ್ದರು.॥44½॥

ಮೂಲಮ್ - 45

ತೇ ತು ವಾನರಶಾರ್ದೂಲಾಃ ಶಾರ್ದೂಲಾ ಇವ ದಂಷ್ಟ್ರಿಣಃ ।
ಗೃಹೀತ್ವಾ ದ್ರುಮಶೈಲಾಗ್ರಾನ್ ಹೃಷ್ಟಾ ಯುದ್ಧಾಯ ತಸ್ಥಿರೇ ॥

ಅನುವಾದ

ಆ ವಾನರರು ಸಿಂಹ, ಹುಲಿಯಂತೆ ದೊಡ್ಡ ದೊಡ್ಡ ಕೊರೆದಾಡೆಗಳಿಂದ ಕೂಡಿದ್ದರು. ಅವರ ಹರ್ಷೋತ್ಸಾಹದಿಂದ ಕೈಗಳಲ್ಲಿ ವೃಕ್ಷ, ಪರ್ವತ ಶಿಖರಗಳನ್ನೆತ್ತಿಕೊಂಡು ಯುದ್ಧಕ್ಕಾಗಿ ಸಿದ್ಧರಾಗಿದ್ದರು.॥45॥

ಮೂಲಮ್ - 46

ಸರ್ವೇ ವಿಕೃತಲಾಂಗೂಲಾಃ ಸರ್ವೇ ದಂಷ್ಟ್ರಾನಖಾಯುಧಾಃ ।
ಸರ್ವೇ ವಿಕೃತ ಚಿತ್ರಾಂಗಾಃ ಸರ್ವೇ ಚ ವಿಕೃತಾನನಾಃ ॥

ಅನುವಾದ

ಎಲ್ಲ ವಾನರರ ಬಾಲಗಳು ಕ್ರೋಧದಿಂದ ನಿಮಿರಿ ನಿಂತಿದ್ದವು. ಉಗುರು, ಕೋರೆ ದಾಡೆಗಳೇ ಅವರ ಆಯುಧಗಳಾಗಿದ್ದವು. ಅವರೆಲ್ಲರ ಮುಖದಲ್ಲಿ ಕ್ರೋಧದ ಚಿಹ್ನೆಗಳು ಕಾಣುತ್ತಿದ್ದವು. ಹಾಗೂ ಅದರಿಂದ ಎಲ್ಲರ ಮುಖಗಳು ವಿಕಟ, ವಿಕರಾಳವಾಗಿ ಕಂಡುಬರುತ್ತಿದ್ದವು.॥46॥

ಮೂಲಮ್ - 47

ದಶನಾಗಬಲಾಃ ಕೇಚಿತ್ಕೇಚಿದ್ದಶ ಗುಣೋತ್ತರಾಃ ।
ಕೇಚಿನ್ನಾಗ ಸಹಸ್ರಸ್ಯ ಬಭೂವುಸ್ತುಲ್ಯವಿಕ್ರಮಾಃ ॥

ಅನುವಾದ

ಇವರಲ್ಲಿ ಕೆಲವು ವಾನರು ಹತ್ತು ಆನೆಗಳ ಬಲವಿದ್ದರೆ, ಕೆಲವರಲ್ಲಿ ಇದಕ್ಕೆ ಹತ್ತುಪಟ್ಟು ಬಲವಿತ್ತು. ಕೆಲವರಲ್ಲಿ ಅಂತೂ ಒಂದು ಸಾವಿರ ಆನೆಗಳ ಬಲವಿತ್ತು.॥47॥

ಮೂಲಮ್ - 48

ಸಂತಿ ಚೌಘಬಲಾಃ ಕೇಚಿತ್ಕೋಚಿಚ್ಛತ ಗುಣೋತ್ತರಾಃ ।
ಅಪ್ರಮೇಯ ಬಲಾಶ್ಚಾನ್ಯೇ ತತ್ರಾಸನ್ ಹರಿಯೂಥಪಾಃ ॥

ಅನುವಾದ

ಕೆಲವರಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇದ್ದರೆ, ಕೆಲವರು ಇದಕ್ಕೆ ನೂರುಪಟ್ಟು ಬಲಿಷ್ಠರಾಗಿದ್ದರು. ಇತರ ಅನೇಕ ಸೇನಾಪತಿಗಳ ಬಲಕ್ಕೆ ಗಣನೆಯೇ ಇರಲಿಲ್ಲ. ಅಸೀಮ ಬಲಶಾಲಿಗಳಾಗಿದ್ದರು.॥48॥

ಮೂಲಮ್ - 49

ಅದ್ಭುತಶ್ಚ ವಿಚಿತ್ರಶ್ಚ ತೇಷಾಮಾಸೀತ್ಸಮಾಗಮಃ ।
ತತ್ರ ವಾನರ ಸೈನ್ಯಾನಾಂ ಶಲಭಾನಾಮಿವೋದ್ಗಮಃ ॥

ಅನುವಾದ

ಪತಂಗದ ಹುಳುಗಳು ಕೋಟಿ ಕೋಟಿ ಸಂಖ್ಯೆಯಲ್ಲಿ ಒಮ್ಮೆಲೆ ಹುಟ್ಟಿಕೊಳ್ಳುವಂತೆ, ಆ ವಾನರ ಸೈನ್ಯದ ಅದ್ಭುತ ಮತ್ತು ವಿಚಿತ್ರ ಸಮಾಗಮ ಅಲ್ಲಿ ಆಗಿತ್ತು.॥49॥

ಮೂಲಮ್ - 50

ಪರಿಪೂರ್ಣಮಿವಾಕಾಶಂ ಸಂಪೂರ್ಣೇವ ಚ ಮೇದಿನೀ ।
ಲಂಕಾಮುಪನಿವಿಷ್ಟೈಶ್ಚ ಸಂಪತದ್ಭಿಶ್ಚ ವಾನರೈಃ ॥

ಅನುವಾದ

ಲಂಕೆಗೆ ಹಾರಿ ಬರುತ್ತಿದ್ದ ವಾನರರಿಂದ ಆಕಾಶ ತುಂಬಿಹೋಯಿತು ಮತ್ತು ಪುರ ಪ್ರವೇಶಿಸಿ ನಿಂತಿರುವ ಕವಿ ಸಮೂಹದಿಂದ ಅಲ್ಲಿಯ ಸ್ಥಳವೆಲ್ಲ ಮುಚ್ಚಿಹೋಗಿತ್ತು.॥50॥

ಮೂಲಮ್ - 51

ಶತಂ ಶತಸಹಸ್ರಾಣಾಂ ಪೃತನರ್ಕ್ಷವನೌಕಸಾಮ್ ।
ಲಂಕಾದ್ವಾರಾಣ್ಯುಪಾಜಗ್ಮುರನ್ಯೇ ಯೋದ್ಧುಂ ಸಮಂತತಃ ॥

ಅನುವಾದ

ಕರಡಿಗಳ ಮತ್ತು ವಾನರರ ಒಂದೊಂದು ಕೋಟಿ ಸೈನ್ಯವು ಲಂಕೆಯ ನಾಲ್ಕು ದ್ವಾರಗಳನ್ನು ಆಕ್ರಮಿಸಿದ್ದರೆ ಇತರ ಸೈನಿಕರು ಎಲ್ಲೆಡೆ ಯುದ್ಧಕ್ಕಾಗಿ ಸನ್ನದ್ಧರಾಗಿ ನಿಂತಿದ್ದರು.॥51॥

ಮೂಲಮ್ - 52

ಆವೃತಃ ಸ ಗಿರಿಃ ಸರ್ವೈಸ್ತೈಃ ಸಮಂತಾತ್ ಪ್ಲವಂಗಮೈಃ ।
ಅಯುತಾನಾಂ ಸಹಸ್ರಂ ಚ ಪುರೀಂ ತಾಮಭ್ಯ ವರ್ತತ ॥

ಅನುವಾದ

ಲಂಕೆಯು ನೆಲಸಿದ ತ್ರಿಕೂಟ ಪರ್ವತವನ್ನು ಸಮಸ್ತ ವಾನರು ಸುತ್ತುಹಾಕಿದ್ದರು. ಸಾವಿರ ಕೋಟಿ ವಾನರರಾದರೋ ಆ ಪುರಿಯ ಎಲ್ಲ ದ್ವಾರಗಳಲ್ಲಿ ಕಾದಾಡುತ್ತಿರುವ ಸೈನ್ಯದ ಸಮಾಚಾರಕ್ಕಾಗಿ ನಗರದೆಲ್ಲೆಡೆ ಸಂಚರಿಸುತ್ತಿದ್ದರು.॥52॥

ಮೂಲಮ್ - 53

ವಾನರೈರ್ಬಲವದ್ಭಿಶ್ಚ ಬಭೂವ ದ್ರುಮಪಾಣಿಭಿಃ ।
ಸರ್ವತಃ ಸಂವೃತಾ ಲಂಕಾ ದುಷ್ಟ್ರವೇಶಾಪಿ ವಾಯುನಾ ॥

ಅನುವಾದ

ಕೈಗಳಲ್ಲಿ ವೃಕ್ಷಗಳನ್ನೆತ್ತಿಕೊಂಡ ಬಲವಂತ ವಾನರರಿಂದ ಎಲ್ಲೆಡೆ ತುಂಬಿಹೋದ ಲಂಕೆಯಲ್ಲಿ ಗಾಳಿಯೂ ಪ್ರವೇಶಿಸಲು ಕಷ್ಟವಾಯಿತು.॥53॥

ಮೂಲಮ್ - 54

ರಾಕ್ಷಸಾ ವಿಸ್ಮಯಂ ಜಗ್ಮುಃ ಸಹಸಾಭಿನಿಪೀಡಿತಾಃ ।
ವಾನರೈರ್ಮೇಘಸಂಕಾಶೈಃ ಶಕ್ರತುಲ್ಯ ಪರಾಕ್ರಮೈಃ ॥

ಅನುವಾದ

ಕಪ್ಪು ಮೋಡಗಳಂತೆ ಭಯಂಕರನಾದ ಇಂದ್ರನಂತೆ ಪರಾಕ್ರಮಿ ವಾನರರಿಂದ ಪೀಡಿಸಲ್ಪಟ್ಟ ರಾಕ್ಷಸರು ವಿಸ್ಮಯದಿಂದ ವಾನರ ಸೈನ್ಯವನ್ನು ನೋಡುತ್ತಿದ್ದರು.॥54॥

ಮೂಲಮ್ - 55

ಮಹಾನ್ಶಬ್ದೋಽಭವತ್ತತ್ರ ಬಲೌಘಸ್ಯಾಭಿವರ್ತತಃ ।
ಸಾಗರಸ್ಯೇವ ಭಿನ್ನಸ್ಯ ಯಥಾ ಸ್ಯಾತ್ ಸಲಿಲಸ್ವನಃ ॥

ಅನುವಾದ

ಸಮುದ್ರವು ಎಲ್ಲೆಯನ್ನು ಮೀರಿ ಉಕ್ಕಿಹರಿದಾಗ ಆಗುವ ಮಹಾಶಬ್ದದಂತೆ, ಅಲ್ಲಿ ಆಕ್ರಮಿಸಿದ ವಿಶಾಲ ವಾನರಸೇನೆಯ ಭಯಂಕರ ಕೋಲಾಹಲ ಆಗುತ್ತಿತ್ತು.॥55॥

ಮೂಲಮ್ - 56

ತೇನ ಶಬ್ದೇನ ಮಹತಾ ಸಪ್ರಾಕಾರಾ ಸತೋರಣಾ ।
ಲಂಕಾ ಪ್ರಚಲಿತಾ ಸರ್ವಾ ಸಶೈಲವನಕಾನನಾ ॥

ಅನುವಾದ

ಆ ಕೋಲಾಹಲ ಧ್ವನಿಯಿಂದ ಪ್ರಾಕಾರ ಗಳು ಮಹಾದ್ವಾರಗಳು, ಪರ್ವತ-ವನ-ಕಾನನಗಳಿಂದ ಕೂಡಿದ ಲಂಕೆಯು ನಡುಗಿಹೋಯಿತು.॥56॥

ಮೂಲಮ್ - 57

ರಾಮಲಕ್ಷ್ಮಣಗುಪ್ತಾ ಸಾ ಸುಗ್ರೀವೇಣ ಚ ವಾಹಿನೀ ।
ಬಭೂವ ದುರ್ಧರ್ಷತರಾ ಸರ್ವೈರಪಿ ಸುರಾಸುರೈಃ ॥

ಅನುವಾದ

ಶ್ರೀರಾಮ, ಲಕ್ಷ್ಮಣ ಮತ್ತು ಸುಗ್ರೀವರಿಂದ ಸುರಕ್ಷಿತವಾದ ಆ ವಾನರ ಸೈನ್ಯವು ಸುರಾಸುರರಿಂದಲೂ ಎದುರಿಸಲು ಅಸಾಧ್ಯವಾಗಿತ್ತು.॥57॥

ಮೂಲಮ್ - 58

ರಾಘವಃ ಸಂನಿವೇಶ್ಯೈವಂ ಸ್ವಸೈನ್ಯಂ ರಕ್ಷಸಾಂ ವಧೇ ।
ಸಮ್ಮಂತ್ರ್ಯಮಂತ್ರಿಭಿಃ ಸಾರ್ಧಂ ನಿಶ್ಚಿತ್ಯ ಚ ಪುನಃ ಪುನಃ ॥

ಮೂಲಮ್ - 59½

ಆನಂತರ್ಯಮಭಿಪ್ರೇಪ್ಸುಃ ಕ್ರಮಯೋಗಾರ್ಥತತ್ತ್ವವಿತ್ ।
ವಿಭೀಷಣಸ್ಯಾನುಮತೇ ರಾಜಧರ್ಮಮನುಸ್ಮರನ್ ॥
ಅಂಗದಂ ವಾಲಿತನಯಂ ಸಮಾಹೂಯೇದಮಬ್ರವೀತ್ ॥

ಅನುವಾದ

ರಾಕ್ಷಸ ವಧೆಗಾಗಿ ತನ್ನ ಸೈನ್ಯವನ್ನು ಹೀಗೆ ಯಥಾಸ್ಥಿತಿಯಲ್ಲಿ ನಿಲ್ಲಿಸಿ, ಮುಂದಿನ ಕರ್ತವ್ಯವನ್ನು ತಿಳಿಯುವ ಇಚ್ಛೆಯಿಂದ ಶ್ರೀರಾಮನು ಮಂತ್ರಿಗಳೊಡನೆ ಪದೇಪದೇ ಸಮಾಲೋಚಿಸಿ, ಮುಂದಿನ ಕಾರ್ಯವನ್ನು ನಿಶ್ಚಯಿಸಿದನು. ಸಾಮ-ದಾನ-ಭೇದ-ದಂಡಗಳನ್ನು ಪ್ರಯೋಗಿಸುವ ಪ್ರಯೋಜನವನ್ನು ತಿಳಿದಿದ್ದ ಶ್ರೀರಘುನಾಥನು ವಿಭೀಷಣನ ಅನುಮತಿಯಿಂದ ರಾಜಧರ್ಮವನ್ನು ಜ್ಞಾಪಿಸಿಕೊಳ್ಳುತ್ತಾ ವಾಲಿಪುತ್ರ ಅಂಗದನನ್ನು ಕರೆದು ಈ ಪ್ರಕಾರ ಹೇಳಿದನು .॥58-59॥

ಮೂಲಮ್ - 60

ಗತ್ವಾ ಸೌಮ್ಯ ದಶಗ್ರೀವಂ ಬ್ರೂಹಿ ಮದ್ವಚನಾತ್ಕಪೇ ॥

ಮೂಲಮ್ - 61

ಲಂಘಯಿತ್ವಾ ಪುರೀಂ ಲಂಕಾಂ ಭಯಂ ತ್ಯಕ್ತ್ವಾ ಗತವ್ಯಥಃ ।
ಭ್ರಷ್ಟಶ್ರೀಕಂ ಗತೈಶ್ವರ್ಯಂ ಮುಮೂರ್ಷಾನಷ್ಟ ಚೇತನಮ್ ॥

ಅನುವಾದ

ಸೌಮ್ಯ ಅಂಗದನೇ! ದಶಾನನನು ರಾಜ್ಯಲಕ್ಷ್ಮಿಯಿಂದ ಭ್ರಷ್ಟನಾಗಿ ರುವನು, ಈಗ ಅವನ ಐಶ್ವರ್ಯ ಮುಗಿದು ಹೋಗಿದೆ. ಅವನು ಸಾಯಲೆಂದೇ ಬಯಸಿದ್ದರಿಂದ ಅವನ ವಿಚಾರಶಕ್ತಿ ನಾಶವಾಗಿ ಹೋಗಿದೆ. ನೀನು ಪ್ರಾಕಾರವನ್ನು ನೆಗೆದು, ಭಯವಿಟ್ಟು ಲಂಕೆಗೆ ಹೋಗಿ, ಧೈರ್ಯದಿಂದ ರಾವಣನಿಗೆ ನನ್ನ ಮಾತುಗಳನ್ನು ಹೇಳು.॥60-61॥

ಮೂಲಮ್ - 62

ಋಷೀಣಾಂ ದೇವತಾನಾಂ ಚ ಗಂಧರ್ವಾಪ್ಸ ರಸಾಂ ತಥಾ ।
ನಾಗಾನಾಮಥ ಯಕ್ಷಾಣಾಂ ರಾಜ್ಞಾಂ ಚ ರಜನೀಚರ ॥

ಮೂಲಮ್ - 63

ಯಚ್ಚ ಪಾಪಂ ಕೃತಂ ಮೋಹಾದವಲಿಪ್ತೇನ ರಾಕ್ಷಸ ।
ನೂನಂತೇ ವಿಗತೋ ದರ್ಪಃ ಸ್ವಯಂಭೂವರದಾನಜಃ ।
ತಸ್ಯ ಪಾಪಸ್ಯ ಸಂಪ್ರಾಪ್ತಾ ವ್ಯಷ್ಟಿ ರದ್ಯ ದುರಾಸದಾ ॥

ಅನುವಾದ

ನಿಶಾಚರನೇ! ರಾಕ್ಷಸರಾಜನೇ! ನೀನು ಮೋಹವಶನಾಗಿ ದರ್ಪದಿಂದ ಋಷಿ, ಗಂಧರ್ವ, ದೇವತಾ, ಅಪ್ಸರಾ, ನಾಗ, ಯಕ್ಷ ಮತ್ತು ರಾಜರಿಗೆ ಹಲವಾರು ಅಪರಾಧಗಳನ್ನು ಮಾಡಿರುವೆ. ಬ್ರಹ್ಮದೇವರಿಂದ ವರವನ್ನು ಪಡೆದ ನಿನಗೆ ಅಭಿಮಾನ ಉಂಟಾಗಿದೆ, ಖಂಡಿತವಾಗಿ ಅದರ ನಾಶವಾಗುವ ಕಾಲ ಬಂದಿದೆ. ನಿನ್ನ ಆ ಪಾಪದ ದುಸ್ಸಾಹಸದ ಫಲವು ನಿನಗೆ ಎದುರಾಗಿದೆ. ॥62-63॥

ಮೂಲಮ್ - 64

ಯಸ್ಯ ದಂಡಧರಸ್ತೇಽಹಂ ದಾರಾಹರಣಕರ್ಶಿತಃ ।
ದಂಡಂ ಧಾರಯಮಾಣಸ್ತು ಲಂಕಾದ್ವಾರೇ ವ್ಯವಸ್ಥಿತಃ ॥

ಅನುವಾದ

ನಾನು ಅಪರಾಧಿಗಳಿಗೆ ಶಿಕ್ಷೆ ಕೊಡುವ ಶಾಸಕನಾಗಿದ್ದೇನೆ. ನೀನು ಮಾಡಿದ ಭಾರ್ಯಾಪಹರಣದಿಂದ ನಾನು ಬಹಳ ಪೀಡಿತನಾಗಿದ್ದೇನೆ. ಆದ್ದರಿಂದ ನಿನ್ನನ್ನು ಶಿಕ್ಷಿಸಲು ನಾನು ಲಂಕೆಯ ಹೆಬ್ಬಾಗಿಲಿನಲ್ಲಿ ನಿಂತಿದ್ದೇನೆ.॥64॥

ಮೂಲಮ್ - 65

ಪದವೀಂ ದೇವತಾನಾಂ ಚ ಮಹರ್ಷೀಣಾಂ ಚ ರಾಕ್ಷಸ ।
ರಾಜರ್ಷೀಣಾಂ ಚ ಸರ್ವೇಷಾಂ ಗಮಿಷ್ಯಸಿ ಯುಧಿ ಸ್ಥಿರಃ ॥

ಅನುವಾದ

ರಾಕ್ಷಸನೇ! ನೀನು ಯುದ್ಧದಲ್ಲಿ ನನ್ನನ್ನು ಎದುರಿಸಿದರೆ ದೇವತೆಗಳ, ಮಹರ್ಷಿಗಳ, ರಾಜರ್ಷಿಗಳ ಪದವಿಯನ್ನು ಪಡೆಯಬಲ್ಲೆ. ಅವರಂತೆ ನೀನೂ ಪರಲೋಕವಾಸಿ ಆಗಬೇಕಾದೀತು.॥65॥

ಮೂಲಮ್ - 66

ಬಲೇನ ಯೇನ ವೈ ಸೀತಾಂ ಮಾಯಯಾ ರಾಕ್ಷಸಾಧಮ ।
ಮಾಮತಿಕ್ರಮಯಿತ್ವಾ ತ್ವಂ ಹೃತವಾಂಸ್ತನ್ನಿದರ್ಶಯ ॥

ಅನುವಾದ

ನೀಚ ನಿಶಾಚರನೇ ! ಯಾವ ಬಲದ ಭರವಸೆಯಿಂದ ನೀನು ನನ್ನನ್ನು ವಂಚಿಸಿ ಸೀತೆಯನ್ನು ಮಾಯೆಯಿಂದ ಕದ್ದು ತಂದಿರುವೆಯೋ ಆ ಬಲವನ್ನು ಇಂದು ರಣರಂಗದಲ್ಲಿ ತೋರಿಸು.॥66॥

ಮೂಲಮ್ - 67

ಅರಾಕ್ಷಸಮಿಮಂ ಲೋಕಂ ಕರ್ತಾಸ್ಮಿ ನಿಶಿತೈಃ ಶರೈಃ ।
ನ ಚೇಚ್ಛರಣಮಭ್ಯೇಷಿ ತಾಮಾದಾಯತು ಮೈಥಿಲೀಮ್ ॥

ಅನುವಾದ

ಈಗಲಾದರೂ ನೀನು ಮೈಥಿಲಿಯನ್ನು ಕರೆತಂದು ನನಗೆ ಒಪ್ಪಿಸದಿದ್ದರೆ, ನನ್ನ ಹರಿತ ಬಾಣಗಳಿಂದ ಜಗತ್ತಿನಲ್ಲಿ ರಾಕ್ಷಸರೇ ಇಲ್ಲದಂತೆ ಮಾಡಿಬಿಡುತ್ತೇನೆ.॥67॥

ಮೂಲಮ್ - 68

ಧರ್ಮಾತ್ಮಾ ರಕ್ಷಸಂ ಶ್ರೇಷ್ಠಃ ಸಂಪ್ರಾಪ್ತೋಽಯಂ ವಿಭೀಷಣಃ ।
ಲಂಕೈಶ್ವರ್ಯಂ ಮಿದಂ ಶ್ರೀಮಾನ್ ಧ್ರುವಂ ಪ್ರಾಪ್ನೋತ್ಯಕಂಟಕಮ್ ॥

ಅನುವಾದ

ರಾಕ್ಷಸರಲ್ಲಿ ಶ್ರೇಷ್ಠನಾದ, ಧರ್ಮಾತ್ಮನಾದ ವಿಭೀಷಣನೂ ನನ್ನೊಡನೆ ಇರುವನು. ನಿಶ್ಚಯವಾಗಿ ಲಂಕೆಯ ನಿಷ್ಕಂಟಕ ರಾಜ್ಯವು ಪಡೆದುಕೊಳ್ಳುವನು.॥68॥

ಮೂಲಮ್ - 69

ನಹಿ ರಾಜ್ಯಮಧರ್ಮೇಣ ಭೋಕ್ತುಂ ಕ್ಷಣಮಪಿ ತ್ವಯಾ ।
ಶಕ್ಯಂ ಮೂರ್ಖ ಸಹಾಯೇನ ಪಾಪೇನಾವಿದಿತಾತ್ಮನಾ ॥

ಅನುವಾದ

ಪಾಪಿಷ್ಠನಾದ, ಆತ್ಮಸ್ವರೂಪವನ್ನು ತಿಳಿಯದಿರುವ ಮೂರ್ಖರನ್ನೇ ನೀನು ಸಹಾಯಕರಾಗಿಸಿಕೊಂಡಿರುವೆ. ಅಧರ್ಮಸ್ವರೂಪನಾದ ನೀನು ಕ್ಷಣಕಾಲವೂ ಈ ರಾಜ್ಯವನ್ನು ಉಪಭೋಗಿಸಲಾರೆ.॥69॥

ಮೂಲಮ್ - 70

ಯುದ್ಧ್ಯಸ್ವ ಮಾ ಧೃತಿಂ ಕೃತ್ವಾ ಶೌರ್ಯಮಾಲಂಬ್ಯ ರಾಕ್ಷಸ ।
ಮಚ್ಛರೈಸ್ತ್ವಂರಣೇ ಶಾಂತಸ್ತತಃ ಪೂತೋ ಭವಿಷ್ಯಸಿ ॥

ಅನುವಾದ

ರಾಕ್ಷಸನೇ ! ಶೌರ್ಯವನ್ನು, ಧೈರ್ಯವನ್ನು ಧರಿಸಿ ನನ್ನೊಡನೆ ಯುದ್ಧ ಮಾಡು. ಯುದ್ಧದಲ್ಲಿ ನನ್ನ ಬಾಣಗಳಿಂದ ಹತನಾಗಿ ನೀನು ಪರಿಶುದ್ಧನಾಗುವೆ.॥70॥

ಮೂಲಮ್ - 71

ಯದ್ಯಾವಿಶಸಿ ಸ್ತ್ರಿನ್ ಲೋಕಾಂ ಪಕ್ಷಿಭೂತೋ ನಿಶಾಚರ ।
ಮಮ ಚಕ್ಷುಃಪಥಂ ಪ್ರಾಪ್ಯ ನ ಜೀವನ್ ಪ್ರತಿಯಾಸ್ಯಸಿ ॥

ಅನುವಾದ

ನಿಶಾಚರನೇ! ನನ್ನ ಕಣ್ಣಿಗೆ ಬಿದ್ದಮೇಲೆ ನೀನು ಪಕ್ಷಿಯ ರೂಪವನ್ನಾಂತು ಮೂರು ಲೋಕಗಳಲ್ಲಿ ಹಾರಿ ಹೋದರೂ ಬದುಕಿ ಮನೆಗೆ ಬರಲಾರೆ.॥71॥

ಮೂಲಮ್ - 72

ಬ್ರವೀಮಿ ತ್ವಾಂ ಹಿತಂ ವಾಕ್ಯಂ ಕ್ರಿಯತಾಮೌರ್ಧ್ವದೈಹಿಕಮ್ ।
ಸುದೃಷ್ಟಾ ಕ್ರಿಯತಾಂ ಲಂಕಾ ಜೀವಿತಂ ತೇ ಮಯಿ ಸ್ಥಿತಮ್ ॥

ಅನುವಾದ

ರಾವಣ! ನಿನಗೆ ಹಿತಕರವಾದ ಮಾತನ್ನು ಹೇಳುತ್ತಿದ್ದೇನೆ. ಪರಲೋಕದ ಸಾಧಕವಾದ ನಿನ್ನ ಅಂತ್ಯಸಂಸ್ಕಾರವನ್ನು ಈಗಲೇ ಮುಗಿಸಿಕೋ. ಲಂಕೆಯನ್ನು ಒಮ್ಮೆ ಮನತುಂಬಿ ನೋಡಿಕೋ; ಏಕೆಂದರೆ ನಿನ್ನ ಜೀವನವು ನನ್ನ ಅಧೀನವಾಗಿ ಬಿಟ್ಟಿದೆ.॥72॥

ಮೂಲಮ್ - 73

ಇತ್ಯುಕ್ತಃ ಸ ತು ತಾರೇಯೋ ರಾಮೇಣಾಕ್ಲಿಷ್ಟ ಕರ್ಮಣಾ ।
ಜಗಾಮಾಕಾಶಮಾವಿಶ್ಯ ಮೂರ್ತಿಮಾನಿವ ಹವ್ಯವಾಟ್ ॥

ಅನುವಾದ

ಆಯಾಸವಿಲ್ಲದೆ ಎಂತಹ ಮಹತ್ಕರ್ಮವನ್ನು ಮಾಡಬಲ್ಲ ಭಗವಾನ್ ಶ್ರೀರಾಮನು ಅಂಗದನಲ್ಲಿ ಹೀಗೆ ಹೇಳಲು, ಅವನು ಮೂರ್ತಿಮಂತ ಅಗ್ನಿಯಂತೆ ಆಕಾಶಮಾರ್ಗದಿಂದ ಲಂಕೆಗೆ ಹೊರಟನು.॥73॥

ಮೂಲಮ್ - 74

ಸೋಽತಿಪತ್ಯ ಮುಹೂರ್ತೇನ ಶ್ರೀಮಾನ್ ರಾವಣಮಂದಿರಮ್ ।
ದದರ್ಶಾಸೀನಮವ್ಯಗ್ರಂ ರಾವಣಂ ಸಚಿವೈಃ ಸಹ ॥

ಅನುವಾದ

ಶ್ರೀಮಾನ್ ಅಂಗದನು ಮುಹೂರ್ತಮಾತ್ರದಲ್ಲಿ ಕೋಟೆಯನ್ನು ದಾಟಿ ರಾವಣನ ಅರಮನೆಗೆ ಬಂದನು. ಅಲ್ಲಿ ಅವನು ಮಂತ್ರಿಗಳೊಂದಿಗೆ ಶಾಂತವಾಗಿ ಕುಳಿತ್ತಿದ್ದ ರಾವಣನನ್ನು ನೋಡಿದನು.॥74॥

ಮೂಲಮ್ - 75

ತತಸ್ತಸ್ಯಾವಿದೂರೇಣ ನಿಪತ್ಯ ಹರಿಪುಂಗವಃ ।
ದೀಪ್ತಾಗ್ನಿಸದೃಶಸ್ತಸ್ಥಾವಂಗದಃ ಕನಕಾಂಗದಃ ॥

ಅನುವಾದ

ಸುವರ್ಣಮಯ ಭೂಜಕೀರ್ತಿಗಳನ್ನು ಧರಿಸಿದ್ದ, ಉರಿಯುವ ಅಗ್ನಿಯಂತೆ ಪ್ರಕಾಶಮಾನನಾದ ಅಂಗದನು ರಾವಣನ ಬಳಿಗೆ ಹೋಗಿ ನಿಂತುಕೊಂಡನು.॥75॥

ಮೂಲಮ್ - 76

ತದ್ರಾಮವಚನಂ ಸರ್ವಮನ್ಯೂನಾಧಿಕಮುತ್ತಮಮ್ ।
ಸಾಮಾತ್ಯಂ ಶ್ರಾವಯಾಮಾಸ ನಿವೇದ್ಯಾತ್ಮಾನಮಾತ್ಮನಾ ॥

ಅನುವಾದ

ಅವನು ಮೊದಲು ತನ್ನ ಪರಿಚಯವನ್ನು ತಿಳಿಸಿ, ಮಂತ್ರಿಗಳ ಸಹಿತ ರಾವಣನಿಗೆ ಶ್ರೀರಾಮನು ಹೇಳಿದ ಮಾತುಗಳಲ್ಲಿ ಹೆಚ್ಚು ಕಡಿಮೆ ಇಲ್ಲದಂತೆ ಉತ್ತಮವಾದ ಮಾತನ್ನು ಯಥಾವತ್ತಾಗಿ ನಿವೇದಿಸಿದನು.॥76॥

ಮೂಲಮ್ - 77

ದೂತೋಽಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟ ಕರ್ಮಣಃ ।
ವಾಲಿಪುತ್ರೋಂಽಗದೋ ನಾಮ ಯದಿ ತೇ ಶ್ರೋತ್ರಮಾಗತಃ ॥

ಅನುವಾದ

ರಾವಣೇಶ್ವರ! ಅತಿ ಕ್ಲಿಷ್ಟ ಕಾರ್ಯಗಳನ್ನು ಆಯಾಸವಿಲ್ಲದೆ ಮಾಡುವ ಕೋಸಲೇಂದ್ರನಾದ ಶ್ರೀರಾಮನ ದೂತನಾದ ನಾನು ವಾಲಿಯ ಪುತ್ರ ಅಂಗದನು. ನನ್ನ ಹೆಸರನ್ನು ನೀನೂ ಕೇಳಿರಬಹುದು.॥77॥

ಮೂಲಮ್ - 78

ಆಹ ತ್ವಾಂ ರಾಘವೋ ರಾಮಃ ಕೌಸಲ್ಯಾನಂದವರ್ಧನಃ ।
ನಿಷ್ಪತ್ಯ ಪ್ರತಿಯುದ್ಧ್ಯಸ್ವ ನೃಶಂಸ ಪುರುಷೋ ಭವ ॥

ಅನುವಾದ

ಕೌಸಲ್ಯಾನಂದವರ್ಧನನಾದ ರಘುಕುಲತಿಲಕ ಶ್ರೀರಾಮನು ನಿನಗೆ ಈ ಸಂದೇಶ ಕಳಿಸಿರುವನು-ಮಹಾಕ್ರೂರಿಯಾದ ರಾವಣ! ಅರಮನೆಯಿಂದ ಹೊರ ಬಂದು, ವೀರಪುರುಷನಾಗಿ ನನ್ನೊಡನೆ ಯುದ್ಧಮಾಡು.॥78॥

ಮೂಲಮ್ - 79

ಹಂತಾಸ್ಮಿ ತ್ವಾಂ ಸಹಾಮಾತ್ಯಂ ಸಪುತ್ರಜ್ಞಾತಿಬಾನ್ಧವಮ್ ।
ನಿರುದ್ವಿಗ್ನಾಸ್ತ್ರಯೋ ಲೋಕಾ ಭವಿಷ್ಯಂತಿ ಹತೇ ತ್ವಯಿ ॥

ಅನುವಾದ

ಅಮಾತ್ಯ-ಪುತ್ರ-ಬಂಧುಬಾಂಧವರ ಸಹಿತ ನಿನ್ನನ್ನು ನಾನು ವಧೆ ಮಾಡುವೆನು. ನೀನೊಬ್ಬನ ಸಂಹಾರವಾದರೆ ಮೂರು ಲೋಕದ ಪ್ರಾಣಿಗಳು ನಿರ್ಭಯರಾಗುವರು.॥79॥

ಮೂಲಮ್ - 80

ದೇವದಾನವ ಯಕ್ಷಾಣಾಂ ಗಂಧರ್ವೋರಗ ರಕ್ಷಸಾಮ್ ।
ಶತ್ರುಮದ್ಯೋದ್ಧರಿಷ್ಯಾಮಿ ತ್ವಾಮೃಷೀಣಾಂ ಚ ಕಂಟಕಮ್ ॥

ಅನುವಾದ

ದೇವ, ದಾನವ, ಯಕ್ಷ, ಗಂಧರ್ವ, ನಾಗ, ರಾಕ್ಷಸ ಹೀಗೆ ಎಲ್ಲರ ಶತ್ರುವೂ, ಋಷಿಗಳಿಗೆ ಕಂಟಕಪ್ರಾಯನಾದ ನಿನ್ನನ್ನು ಈಗಲೇ ನಿರ್ಮೂಲ ಮಾಡಿಬಿಡುತ್ತೇನೆ.॥80॥

ಮೂಲಮ್ - 81

ವಿಭೀಷಣಸ್ಯ ಚೈಶ್ವರ್ಯಂ ಭವಿಷ್ಯತಿ ಹತೇ ತ್ವಯಿ ।
ನ ಚೇತ್ಸತ್ಕೃತ್ಯ ವೈದೇಹೀಂ ಪ್ರಣಿಪತ್ಯ ಪ್ರದಾಸ್ಯಸಿ ॥

ಅನುವಾದ

ನೀನು ನಿನ್ನ ಕಾಲಿಗೆ ಬಿದ್ದು, ಆದರದಿಂದ ಸೀತೆಯನ್ನು ತಂದೊಪ್ಪಿಸದಿದ್ದರೆ, ನನ್ನ ಕೈಯಿಂದಲೇ ಹತನಾಗುವೆ. ನೀನು ಸತ್ತುಹೋದಮೇಲೆ ಲಂಕೆಯ ಸಕಲೈಶ್ವರ್ಯವೂ ವಿಭೀಷಣನಿಗೆ ದೊರೆಯುವುದು.॥81॥

ಮೂಲಮ್ - 82

ಇತ್ಯೇವಂ ಪರುಷಂ ವಾಕ್ಯಂ ಬ್ರುವಾಣೇ ಹರಿಪುಂಗವೇ ।
ಅಮರ್ಷವಶಮಾಪನ್ನೋ ನಿಶಾಚರಗಣೇಶ್ವರಃ ॥

ಅನುವಾದ

ವಾನರ ಶ್ರೇಷ್ಠನಾದ ಅಂಗದನು ಹೀಗೆ ಕಠೋರವಾದ ಮಾತುಗಳನ್ನು ಹೇಳಿದಾಗ ರಾಕ್ಷಸ ರಾಜನು ಅತ್ಯಂತ ಕ್ರೋಧವಶನಾದನು.॥82॥

ಮೂಲಮ್ - 83

ತತಃ ಸ ರೋಷಮಾಪನ್ನಃ ಶಶಾಸ ಸಚಿವಾಂಸ್ತದಾ ।
ಗೃಹ್ಯತಾಮಿತಿ ದುರ್ಮೇಧಾ ವಧ್ಯತಾಮಿತಿ ಚಾಸಕೃತ್ ॥

ಅನುವಾದ

ರೋಷಗೊಂಡ ರಾವಣನು ಮಂತ್ರಿಗಳನ್ನು ಕರೆದು - ‘ದುರ್ಬುದ್ಧಿಯ ಈ ವಾನರನನ್ನು ಹರಿಯಿರಿ, ಕೊಂದು ಹಾಕಿರಿ’ ಎಂದು ಪದೇ ಪದೇ ಹೇಳಿದನು.॥83॥

ಮೂಲಮ್ - 84

ರಾವಣಸ್ಯ ವಚಃ ಶ್ರುತ್ವಾ ದೀಪ್ತಾಗ್ನಿಮಿವತೇಜಸಃ ।
ಜಗೃಹುಸ್ತಂ ತತೋ ಘೋರಾಶ್ಚತ್ವಾರೋ ರಜನೀಚರಾಃ ॥

ಅನುವಾದ

ರಾವಣನ ಮಾತನ್ನ ಕೇಳಿ ಭಯಕಂರ ನಾಲ್ವರು ರಾಕ್ಷಸರು ಪ್ರಜ್ವಲಿತ ಅಗ್ನಿಯಂತೆ ತೇಜಸ್ವಿಯಾದ ಅಂಗದನನ್ನು ಹಿಡಿದುಕೊಂಡರು.॥84॥

ಮೂಲಮ್ - 85

ಗ್ರಾಹಯಾಮಾಸ ತಾರೇಯಃ ಸ್ವಯಮಾತ್ಮಾನಮಾತ್ಮವಾನ್ ।
ಬಲಂ ದರ್ಶಯಿತುಂ ವೀರೋ ಯಾತುಧಾನಗಣೇ ತದಾ ॥

ಅನುವಾದ

ಆತ್ಮಬಲ ಸಂಪನ್ನನಾದ ತಾರಾಕುಮಾರ ಅಂಗದನು ಆಗ ತನ್ನ ಬಲವನ್ನು ತೋರಿಸುವ ಸಲುವಾಗಿ ಯಾವುದೇ ಪ್ರತಿಭಟನೆ ತೋರದೆ ಅವರ ವಶನಾದನು.॥85॥

ಮೂಲಮ್ - 86

ಸ ತಾನ್ಬಾಹುದ್ವಯಾ ಸಕ್ತಾನಾದಾಯ ಪತಗಾನಿವ ।
ಪ್ರಾಸಾದಂ ಶೈಲ ಸಂಕಾಶಮುತ್ಪಪಾತಾಂಗದಸ್ತದಾ ॥

ಅನುವಾದ

ಇಬ್ಬಿಬ್ಬರು ಎರಡು ತೋಳುಗಳನ್ನು ಹಿಡಿದಿದ್ದ ರಾಕ್ಷಸರ ಸಹಿತ ಅಂಗದನು ಪರ್ವತದಂತಿದ್ದ ಪ್ರಾಸಾದದ ಮೇಲಕ್ಕೆ ನೆಗೆದನು.॥86॥

ಮೂಲಮ್ - 87

ತಸ್ಯೋತ್ಪತನವೇಗೇನ ನಿರ್ಧೂತಾಸ್ತತ್ರ ರಾಕ್ಷಸಾಃ ।
ಭೂಮೌ ನಿಪತಿತಾಃ ಸರ್ವೇ ರಾಕ್ಷಸೇಂದ್ರಸ್ಯ ಪಶ್ಯತಃ ॥

ಅನುವಾದ

ಹೀಗೆ ಹಾರಿದ ರಭಸಕ್ಕೆ ತೋಳುಗಳನ್ನು ಹಿಡಿದಿದ್ದ ರಾಕ್ಷಸರು ಎಸೆಯಲ್ಪಟ್ಟು ರಾಕ್ಷಸೇಂದ್ರನು ನೋಡುತ್ತಿರುವಂತೆಯೇ ನೆಲಕ್ಕೆ ಬಿದ್ದುಬಿಟ್ಟರು.॥8.॥

ಮೂಲಮ್ - 88

ತತಃ ಪ್ರಾಸಾದಶಿಖರಂ ಶೈಲಶೃಂಗಮಿವೋನ್ನತಮ್ ।
ಚಕ್ರಾಮ ರಾಕ್ಷಸೇಂದ್ರಸ್ಯ ವಾಲಿಪುತ್ರಃ ಪ್ರತಾಪವಾನ್ ॥

ಅನುವಾದ

ಪರ್ವತ ಶಿಖರದಂತೆ ಎತ್ತರವಾಗಿದ್ದ ರಾಕ್ಷಸೇಂದ್ರನ ಪ್ರಾಸಾದದ ಮೇಲೆ ವಾಲಿಕುಮಾರ ಅಂಗದನು ಕಾಲುಗಳನ್ನು ಅಪ್ಪಳಿಸುತ್ತಾ ಸುತ್ತತೊಡಗಿದನು.॥88॥

ಮೂಲಮ್ - 89

ಪಫಾಲ ಚ ಪದಾಕ್ರಾಂತಂ ದಶಗ್ರೀವಸ್ಯ ಪಶ್ಯತಃ ।
ಪುರಾ ಹಿಮವತಃ ಶೃಂಗಂ ವಜ್ರೇಣೇವ ವಿದಾರಿತಮ್ ॥

ಅನುವಾದ

ಹಿಂದೆ ವಜ್ರಾಘಾತದಿಂದ ಹಿಮವತ್ ಪರ್ವತದ ಶಿಖರಗಳು ವಿದೀರ್ಣವಾದಂತೆ, ರಾವಣನು ನೋಡುತ್ತಿದ್ದಂತೆ ಅವನ ಪಾದಾಘಾತದಿಂದ ಆ ಪ್ರಾಸಾದವು ಭಗ್ನವಾಗಿ ಕುಸಿದು ಹೋಯಿತು.॥89॥

ಮೂಲಮ್ - 90

ಭಂಕ್ತ್ವಾಪ್ರಾಸಾದಶಿಖರಂ ನಾಮ ವಿಶ್ರಾವ್ಯಚಾತ್ಮನಃ ।
ವಿನದ್ಯ ಸುಮಹಾನಾದಮುತ್ಪಪಾತ ವಿಹಾಯಸಾ ॥

ಅನುವಾದ

ಹೀಗೆ ಪ್ರಾಸಾದ ಶಿಖರವನ್ನು ಮುರಿದು, ತನ್ನ ನಾಮಧೇಯವನ್ನು ಹೇಳುತ್ತಾ ಗಟ್ಟಿಯಾಗಿ ಸಿಂಹನಾದ ಮಾಡಿ, ಅವನು ಆಕಾಶಮಾರ್ಗದಿಂದ ಹಾರಿ ಹೋದನು.॥90॥

ಮೂಲಮ್ - 91

ವ್ಯಥಯನ್ ರಾಕ್ಷಸಾನ್ ಸರ್ವಾನ್ ಹರ್ಷಯಂಶ್ಚಾಪಿ ವಾನರಾನ್ ।
ಸ ವಾನರಾಣಾಂ ಮಧ್ಯೇ ತು ರಾಮಪಾರ್ಶ್ವ ಮುಪಾಗತಃ ॥

ಅನುವಾದ

ರಾಕ್ಷಸರನ್ನು ಪೀಡಿಸಿ, ಸಮಸ್ತವಾನರರ ಹರ್ಷವನ್ನು ಹೆಚ್ಚಿಸುತ್ತಾ, ಅವನು ವಾನರ ಸೈನ್ಯದ ನಡುವೆ ಇದ್ದ ಶ್ರೀರಾಮಚಂದ್ರನ ಬಳಿಗೆ ಮರಳಿ ಬಂದನು.॥9.॥

ಮೂಲಮ್ - 92

ರಾವಣಸ್ತು ಪರಂ ಚಕ್ರೇ ಕ್ರೋಧಂ ಪ್ರಾಸಾದಧರ್ಷಣಾತ್ ।
ವಿನಾಶಂ ಚಾತ್ಮನಃ ಪಶ್ಯನ್ ನಿಃಶ್ವಾಸ ಪರಮೋಽಭವತ್ ॥

ಅನುವಾದ

ತನ್ನ ಪ್ರಾಸಾದವೇ ಮುರಿದುದರಿಂದ ರಾವಣನಿಗೆ ಭಾರೀ ಸಿಟ್ಟುಬಂತು, ಆದರೆ ವಿನಾಶದ ಘಳಿಗೆ ಹತ್ತಿರ ಬಂದುದನ್ನು ಮನಗಂಡು ನೀಳವಾಗಿ ನಿಟ್ಟುಸಿರುಬಿಟ್ಟನು.॥9.॥

ಮೂಲಮ್ - 93

ರಾಮಸ್ತು ಬಹುಭಿರ್ಹೃಷ್ಟೈರ್ವಿನದದ್ಭಿಃ ಪ್ಲವಂಗಮೈಃ ।
ವೃತೋ ರಿಪುವಧಾಕಾಂಕ್ಷೀ ಯುದ್ಧಾಯೈವಾಭ್ಯವರ್ತತ ॥

ಅನುವಾದ

ಇತ್ತ ಹರ್ಷಗೊಂಡು ಗರ್ಜಿಸುತ್ತಿರುವ ಅಸಂಖ್ಯ ವಾನರರಿಂದ ಸುತ್ತುವರೆದ ಶ್ರೀರಾಮನು ಯುದ್ಧಕ್ಕಾಗಿ ಸಿದ್ಧನಾಗಿ, ತನ್ನ ಶತ್ರುವನ್ನು ವಧಿಸಲು ಬಯಸುತ್ತಿದ್ದನು.॥93॥

ಮೂಲಮ್ - 94

ಸುಷೇಣಸ್ತು ಮಹಾವೀರ್ಯೋ ಗಿರಿಕೂಟೋಪಮೋ ಹರಿಃ ।
ಬಹುಭಿಃ ಸಂವೃತಸ್ತತ್ರ ವಾನರೈಃ ಕಾಮರೂಪಿಭಿಃ ॥

ಮೂಲಮ್ - 95

ಸ ತು ದ್ವಾರಾಣಿ ಸಂಯಮ್ಯ ಸುಗ್ರೀವವಚನಾತ್ ಕಪಿಃ ।
ಪರ್ಯಕ್ರಾಮತ ದುರ್ಧರ್ಷೋ ನಕ್ಷತ್ರಾಣೀವ ಚಂದ್ರಮಾಃ ॥

ಅನುವಾದ

ಆಗಲೇ ಪರ್ವತಾಕಾರ ವಿಶಾಲಕಾಯನಾದ ಮಹಾಪರಾಕ್ರಮಿ, ದುರ್ಜಯವೀರ ಸುಷೇಣನು ಕಾಮರೂಪಿಗಳಾದ ಅಸಂಖ್ಯ ವಾನರರೊಂದಿಗೆ ಲಂಕೆಯ ಎಲ್ಲ ದ್ವಾರಗಳನ್ನು ವಶಪಡಿಸಿಕೊಂಡನು. ಸುಗ್ರೀವನ ಅಪ್ಪಣೆಯಂತೆ ಅವನು ತನ್ನ ಸೈನ್ಯವನ್ನು ರಕ್ಷಿಸುತ್ತಾ, ಎಲ್ಲ ದ್ವಾರಗಳ ಸಮಾಚಾರ ಪಡೆಯಲು, ಚಂದ್ರನು ಕ್ರಮವಾಗಿ ಎಲ್ಲ ನಕ್ಷತ್ರಗಳಲ್ಲಿ ಗಮಿಸುವಂತೆ ಸರದಿಯಂತೆ ಸುತ್ತತೊಡಗಿದನು.॥94-95॥

ಮೂಲಮ್ - 96

ತೇಷಾಮಕ್ಷೌಹಿಣಿಶತಂ ಸಮವೇಕ್ಷ್ಯವನೌಕಸಾಮ್ ।
ಲಂಕಾಮುಪನಿವಿಷ್ಟಾನಾಂ ಸಾಗರಂ ಚಾಭಿ ವರ್ತತಾಮ್ ॥

ಮೂಲಮ್ - 97

ರಾಕ್ಷಸಾ ವಿಸ್ಮಯಂ ಜಗ್ಮುಸ್ತ್ರಾಸಂ ಜಗ್ಮುಸ್ತಥಾಪರೇ ।
ಅಪರೇ ಸಮರೇ ಹರ್ಷಾದ್ಧರ್ಷಮೇವೋಪಪೇದಿರೇ ॥

ಅನುವಾದ

ಲಂಕೆಯನ್ನು ಮುತ್ತಿರುವ, ಸಮುದ್ರದವರೆಗೆ ಪಸರಿಸಿದ ಆ ವನವಾಸೀ ವಾನರರ ನೂರು ಅಕ್ಷೌಹಿಣೀ ಸೈನ್ಯವನ್ನು ನೋಡಿ ರಾಕ್ಷಸರಿಗೆ ಆಶ್ಚರ್ಯವಾಯಿತು. ಅನೇಕ ನಿಶಾಚರರು ಭಯಗೊಂಡರೆ ಇತರ ಎಷ್ಟೋ ರಾಕ್ಷಸರು ರಣರಂಗದಲ್ಲಿ ಹರ್ಷೋತ್ಸಾಹದಿಂದ ಬಂದು ನೆರೆದರು.॥96-97॥

ಮೂಲಮ್ - 98

ಕೃತ್ಸ್ನಂ ಹಿ ಕಪಿಭಿರ್ವ್ಯಾಪ್ತಂ ಪ್ರಾಕಾರ ಪರಿಖಾಂತರಮ್ ।
ದದೃಶೂ ರಾಕ್ಷಸಾ ದೀನಾಃ ಪ್ರಾಕಾರಂ ವಾನರೀಕೃತಮ್ ।
ಹಾಹಾಕಾರ ಮಕುರ್ವಂತಿರಾಕ್ಷಸಾ ಭಯಮಾಗತಾಃ ॥

ಅನುವಾದ

ಆಗ ಲಂಕೆಯ ಎಲ್ಲ ಪ್ರಾಕಾರಗಳು, ಕಂದಕಗಳು ವಾನರರಿಂದ ತುಂಬಿಹೋದುವು. ಹೀಗೆ ಪ್ರಾಕಾರಗಳೆಲ್ಲ ವಾನರಾಕಾರವಾಗಿರು ವುದನ್ನು ನೋಡಿದಾಗ ರಾಕ್ಷಸರೆಲ್ಲ ಭಯದಿಂದ ನಡುಗಿ ಹಾಹಾಕಾರ ಮಾಡತೊಡಗಿದರು.॥98॥

ಮೂಲಮ್ - 99

ತಸ್ಮಿನ್ಮಹಾಭೀಷಣಕೇ ಪ್ರವೃತ್ತೇ
ಕೋಲಾಹಲೇ ರಾಕ್ಷಸರಾಜಯೋಧಾಃ ।
ಪ್ರಗೃಹ್ಯ ರಕ್ಷಾಂಸಿ ಮಹಾಯುಧಾನಿ
ಯುಗಾಂತವಾತಾ ಇವ ಸಂವಿಚೇರುಃ ॥

ಅನುವಾದ

ಮಹಾಭಯಂಕರ ಕೋಲಾಹಲ ಪ್ರಾರಂಭವಾದಾಗ ರಾಕ್ಷಸ ರಾಜನಾದ ರಾವಣನ ಕಡೆಯ ರಾಕ್ಷಸ ಯೋಧರು ದೊಡ್ಡ ದೊಡ್ಡ ಆಯುಧಗಳನ್ನೆತ್ತಿಕೊಂಡು ಪ್ರಳಯ ಕಾಲದ ಪ್ರಚಂಡ ವಾಯುವಿನಂತೆ ಎಲ್ಲ ಕಡೆಗಳಲ್ಲಿಯೂ ಸಂಚರಿಸತೊಡಗಿದರು.॥99॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತೊಂದನೆಯ ಸರ್ಗ ಪೂರ್ಣವಾಯಿತು.॥41॥