०४० सुग्रीवेण रावणोत्प्लवः

वाचनम्
ಭಾಗಸೂಚನಾ

ಸುಗ್ರೀವ ಮತ್ತು ರಾವಣರ ಮಲ್ಲಯುದ್ಧ

ಮೂಲಮ್ - 1

ತತೋ ರಾಮಃ ಸುವೇಲಾಗ್ರಂ ಯೋಜನದ್ವಯ ಮಂಡಲಮ್ ।
ಉಪಾರೋಹತ್ ಸಸುಗ್ರೀವೋ ಹರಿಯೂಥೈಃ ಸಮನ್ವಿತಃ ॥

ಅನುವಾದ

ಅನಂತರ ವಾನರ ಸೇನಾಪತಿಗಳಿಂದ ಕೂಡಿದ ಸುಗ್ರೀವನೊಂದಿಗೆ ಶ್ರೀರಾಮನು ಎರಡು ಯೋಜನ ವಿಸ್ತಾರವಾದ ಸುವೇಲ ಪರ್ವತ ಶಿಖರವನ್ನು ಹತ್ತಿದನು.॥1॥

ಮೂಲಮ್ - 2½

ಸ್ಥಿತ್ವಾ ಮುಹೂರ್ತಂ ತತ್ರೈವ ದಿಶೋ ದಶ ವಿಲೋಕಯನ್ ।
ತ್ರಿಕೂಟಶಿಖರೇ ರಮ್ಯೇ ನಿರ್ಮಿತಾಂ ವಿಶ್ವಕರ್ಮಣಾ ॥
ದದರ್ಶ ಲಂಕಾಂ ಸುನ್ಯಸ್ತಾಂ ರಮ್ಯಕಾನನ ಶೋಭಿತಾಮ್ ।

ಅನುವಾದ

ಅಲ್ಲಿ ಮುಹೂರ್ತಕಾಲ ನಿಂತು ಶ್ರೀರಾಮನು ಎಲ್ಲ ದಿಕ್ಕುಗಳನ್ನು ಅವಲೋಕಿಸುತ್ತಾ ತ್ರಿಕೂಟ ಪರ್ವತದ ಶಿಖರದ ಮೇಲೆ ನೆಲೆಸಿದ, ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಮನೋಹರ ಕಾಮನೆಗಳಿಂದ ಶೋಭಿಸುತ್ತಿರುವ ಸುಂದರ ಲಂಕಾಪುರಿ ಯನ್ನು ನೋಡಿದನು.॥2॥

ಮೂಲಮ್ - 3

ತಸ್ಯ ಗೋಪುರಶೃಂಗಸ್ಥಂ ರಾಕ್ಷಸೇಂದ್ರಂ ದುರಾಸದಮ್ ॥

ಮೂಲಮ್ - 4

ಶ್ವೇತಚಾಮರಪರ್ಯಂತಂ ವಿಜಯಚ್ಛತ್ರಶೋಭಿತಮ್ ।
ರಕ್ತಚಂದನಸಂಲಿಪ್ತಂ ರತ್ನಾಭರಣ ಭೂಷಿತಮ್ ॥

ಅನುವಾದ

ಆಗ ಲಂಕಾಪಟ್ಟಣದ ಗೋಪುರದ ತುದಿಯಲ್ಲಿ ಕುಳಿತಿದ್ದ ದುರ್ಜಯ ರಾವಣನೂ ಕಂಡುಬಂದನು. ಅವನ ಇಕ್ಕೆಲಗಳಲ್ಲಿ ಬಿಳಿಯ ಚಾಮರ ಬೀಸುತ್ತಿದ್ದರು, ತಲೆಯ ಮೇಲೆ ಶ್ವೇತಛತ್ರ ಶೋಭಿಸುತ್ತಿತ್ತು. ರಾವಣನು ಶರೀರ ಕೆಂಪಾದ ಆಭರಣಗಳಿಂದ ಅಲಂಕೃತವಾಗಿ ರಕ್ತಚಂದನದಿಂದ ಚರ್ಚಿತವಾಗಿತ್ತು.॥3-4॥

ಮೂಲಮ್ - 5

ನೀಲಜೀಮೂತಸಂಕಾಶಂ ಹೇಮಸಂಛಾದಿತಾಂಬರಮ್ ।
ಐರಾವತವಿಷಾಣಾಗ್ರೈರುತ್ಕೃಷ್ಟಕಿಣವಕ್ಷಸಮ್ ॥

ಅನುವಾದ

ಅವನು ಕಪ್ಪಾದ ಮೋಡದಂತೆ ಕಾಣುತ್ತಿದ್ದನು. ಚಿನ್ನದ ಜರತಾರೀ ವಸ್ತ್ರಗಳನ್ನು ಧರಿಸಿದ್ದನು. ಐರಾವತದ ದಾಡೆಗಳಿಂದ ಆದ ಏಟಿನ ಚಿಹ್ನೆ ಎದೆಯಮೇಲೆ ಕಾಣುತ್ತಿತ್ತು.॥.॥

ಮೂಲಮ್ - 6

ಶಶಲೋಹಿತರಾಗೇಣ ಸಂವೀತಂ ರಕ್ತವಾಸಸಾ ।
ಸಂಧ್ಯಾತಪೇನ ಸಂಛನ್ನಂ ಮೇಘರಾಶಿಮಿವಾಂಬರೇ ॥

ಅನುವಾದ

ಮೊಲದ ರಕ್ತದಂತೆ ಕೆಂಪಾದ ವಸ್ತ್ರಗಳನ್ನು ಹೊದ್ದುಕೊಂಡು, ಅವನು ಆಕಾಶದಲ್ಲಿನ ಸಂಧ್ಯಾಕಾಲದ ಕೆಂಪಾದ ಮೋಡಗಳಂತೆ ಕಂಡು ಬರುತ್ತಿದ್ದನು.॥.॥

ಮೂಲಮ್ - 7

ಪಶ್ಯತಾಂ ವಾನರೇಂದ್ರಾಣಾಂ ರಾಘವಸ್ಯಾಪಿ ಪಶ್ಯತಃ ।
ದರ್ಶನಾದ್ರಾಕ್ಷಸೇಂದ್ರಸ್ಯ ಸುಗ್ರೀವಃ ಸಹಸೋತ್ಥಿತಃ ॥

ಅನುವಾದ

ಮುಖ್ಯ ಮುಖ್ಯ ವಾನರರ ಹಾಗೂ ಶ್ರೀರಘುನಾಥನ ದೃಷ್ಟಿಯು ಎದುರಿಗಿದ್ದ ರಾವಣನ ಮೇಲೆ ಬೀಳುತ್ತಲೇ ಸುಗ್ರೀವನು ಸಟ್ಟನೆ ಎದ್ದುನಿಂತನು.॥7॥

ಮೂಲಮ್ - 8

ಕ್ರೋಧವೇಗೇನ ಸಂಯುಕ್ತಃ ಸತ್ತ್ವೇನ ಚ ಬಲೇನ ಚ ।
ಅಚಲಾಗ್ರಾದಥೋತ್ಥಾಯ ಪುಪ್ಲುವೇ ಗೋಪುರಸ್ಥಲೇ ॥

ಅನುವಾದ

ಅವನು ಕ್ರೋಧಗೊಂಡು ಶಾರೀರಿಕ ಹಾಗೂ ಮಾನಸಿಕ ಬಲದಿಂದ ಪ್ರೇರಿತನಾಗಿ ಸುವೇಲ ಪರ್ವತದಿಂದ ರಾವಣನು ಕುಳಿತಿದ್ದ ಗೋಪುರಕ್ಕೆ ನೆಗೆದನು.॥8॥

ಮೂಲಮ್ - 9

ಸ್ಥಿತ್ವಾ ಮುಹೂರ್ತಂ ಸಂಪ್ರೇಕ್ಷ್ಯ ನಿರ್ಭಯೇನಾಂತರಾತ್ಮನಾ ।
ತೃಣೀಕೃತ್ಯ ಚ ತದ್ರಕ್ಷಃ ಸೋಽಬ್ರವೀತ್ಪರುಷಂ ವಚಃ ॥

ಅನುವಾದ

ಅವನು ಅಲ್ಲಿ ನಿಂತುಕೊಂಡು ಸ್ವಲ್ಪ ಹೊತ್ತು ರಾವಣನನ್ನು ನೋಡುತ್ತಲೇ ಇದ್ದ. ಮತ್ತೆ ನಿರ್ಭಯನಾಗಿ ಆ ರಾಕ್ಷಸನು ತೃಣದಂತೆ ತಿಳಿದು ಕಠೋರವಾಗಿ ಮಾತನ್ನಾಡಿದನು.॥9॥

ಮೂಲಮ್ - 10

ಲೋಕನಾಥಸ್ಯ ರಾಮಸ್ಯ ಸಖಾ ದಾಸೋಽಸ್ಮಿ ರಾಕ್ಷಸ ।
ನ ಮಯಾ ಮೋಕ್ಷ್ಯಸೇಽದ್ಯ ತ್ವಂ ಪಾರ್ಥಿವೇಂದ್ರಸ್ಯ ತೇಜಸಾ ॥

ಅನುವಾದ

ರಾಕ್ಷಸನೇ! ನಾನು ಲೋಕನಾಥ ಭಗವಾನ್ ಶ್ರೀರಾಮನ ಸಖನೂ, ದಾಸನೂ ಆಗಿದ್ದೇನೆ. ಮಹಾರಾಜಾ ಶ್ರೀರಾಮನ ತೇಜದಿಂದ ಇಂದು ನೀನು ನನ್ನ ಕೈಯಿಂದ ತಪ್ಪಿಸಿಕೊಳ್ಳಲಾರೆ.॥10॥

ಮೂಲಮ್ - 11

ಇತ್ಯುಕ್ತ್ವಾ ಸಹಸೋತ್ಪತ್ಯ ಪುಪ್ಲುವೇ ತಸ್ಯ ಚೋಪರಿ ।
ಆಕೃಷ್ಯ ಮುಕುಟಂ ಚಿತ್ರಂ ಪಾತಯಾಮಾಸತದ್ಭುವಿ ॥

ಅನುವಾದ

ಹೀಗೆ ಹೇಳಿ ಅವನು ತತ್ಕ್ಷಣ ನೆಗೆದು ರಾವಣನ ಮೇಲೆ ಹಾರಿ ಅವನ ವಿಚಿತ್ರ ಕಿರೀಟಗಳನ್ನು ಸೆಳೆದು ಅವನನ್ನು ನೆಲಕ್ಕೆ ಕೆಡಹಿದನು.॥11॥

ಮೂಲಮ್ - 12

ಸಮೀಕ್ಷ್ಯ ತೂರ್ಣಮಾಯಾಂತ ಬಭಾಷೇ ತಂ ನಿಶಾಚರಃ ।
ಸುಗ್ರೀವಸ್ತ್ವಂ ಪರೋಕ್ಷಂ ಮೇ ಹೀನಗ್ರೀವೋ ಭವಿಷ್ಯಸಿ ॥

ಅನುವಾದ

ಇವನು ಹೀಗೆ ತೀವ್ರಗತಿಯಿಂದ ತನ್ನ ಮೇಲೆ ಆಕ್ರಮಣ ಮಾಡಿದುದನ್ನು ನೋಡಿ ರಾವಣನು ಹೇಳಿದನು- ಎಲವೋ! ನೀನು ನನ್ನ ಎದುರಿಗೆ ಬರುವ ತನಕ ಸುಗ್ರೀವ (ಸುಂದರ ಕಂಠವುಳ್ಳ)ನಾಗಿದ್ದ. ಈಗ ನೀನು ನಿನ್ನ ಈ ಕಂಠರಹಿತನಾಗುವೆ.॥12॥

ಮೂಲಮ್ - 13

ಇತ್ಯುಕ್ತ್ವೋತ್ಥಾಯ ತಂ ಕ್ಷಿಪ್ರಂ ಬಾಹುಭ್ಯಾಮಾಕ್ಷಿಪತ್ತಲೇ ।
ಕಂದುವತ್ ಸ ಸಮುತ್ಥಾಯ ಬಾಹುಭ್ಯಾಮಾಕ್ಷಿಪದ್ಧರಿಃ ॥

ಅನುವಾದ

ಹೀಗೆ ಹೇಳಿ ರಾವಣನು ತನ್ನೆರಡೂ ಭುಜಗಳಿಂದ ಅವನನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದನು. ಮತ್ತೆ ವಾನರರಾಜ ಸುಗ್ರೀವನು ಚೆಂಡಿನಂತೆ ಪುಟಿದು ರಾವಣನನ್ನು ಎರಡೂ ಭುಜಗಳಿಂದ ಎತ್ತಿ ನೆಲಕ್ಕೆ ಜೋರಾಗಿ ಒಗೆದನು.॥13॥

ಮೂಲಮ್ - 14

ಪರಸ್ಪರಂ ಸ್ವೇದವಿದಿಗ್ಧಗಾತ್ರೌ
ಪರಸ್ಪರಂ ಶೋಣಿತರಕ್ತದೇಹೌ ।
ಪರಸ್ಪರಂ ಶ್ಲಿಷ್ಟನಿರುದ್ಧ ಚೇಷ್ಟೌ
ಪರಸ್ಪರಂ ಶಾಲ್ಮಲಿಕಿಂಶುಕಾವಿವ ॥

ಅನುವಾದ

ಮತ್ತೆ ಅವರಿಬ್ಬರೂ ಪರಸ್ಪರ ದ್ವಂದ್ವಯುದ್ಧಕ್ಕೆ ತೊಡಗಿದರು. ಇಬ್ಬರ ಶರೀರಗಳೂ ಬೆವರಿನಿಂದ ಹಾಗೂ ರಕ್ತದಿಂದ ತೊಯ್ದು ಹೋಯಿತು. ಒಬ್ಬರನ್ನೊಬ್ಬರು ಬಾಚಿ ತಬ್ಬಿಕೊಂಡಾಗ ಆ ಬಿಗಿತದಿಂದ ಇಬ್ಬರೂ ನಿಶ್ಚೇಷ್ಟಿತರಂತಾದರು. ಆಗ ಆ ರಾಕ್ಷಸ-ವಾನರರು ಬೂರುಗದ ಮತ್ತು ಮುತ್ತುಗದ ಮರಗಳಂತೆ ಕಾಣುತ್ತಿದ್ದರು.॥14॥

ಮೂಲಮ್ - 15

ಮುಷ್ಟಿಪ್ರಹಾರೈಶ್ಚ ತಲಪ್ರಹಾರೈ
ರರತ್ನಿಘಾತೈಶ್ಚ ಕರಾಗ್ರಘಾತೈಃ ।
ತೌ ಚಕ್ರತುರ್ಯುದ್ಧಮಸಹ್ಯರೂಪಂ
ಮಹಾಬಲೌ ವಾನರರಾಕ್ಷಸೇಂದ್ರೌ ॥

ಅನುವಾದ

ರಾಕ್ಷಸರಾಜ ಮತ್ತು ವಾನರರಾಜರಿಬ್ಬರೂ ಮಹಾ ಬಲಿಷ್ಠರಾಗಿದ್ದರು. ಮುಷ್ಟಿಗಳ ಗುದ್ದಾಟದಿಂದಲೂ, ಅಂಗೈಗಳ ಪ್ರಹಾರಗಳಿಂದಲೂ, ಮೊಣಕೈಗಳ ತಿವಿತದಿಂದಲೂ, ಉಗುರುಗಳ ಪರಚುವಿಕೆಯಿಂದಲೂ ಸಾಮಾನ್ಯರಿಂದ ಸಹಿಸಲಾಗದ ಘೋರಯುದ್ಧವನ್ನು ಮಾಡುತ್ತಿದ್ದರು.॥15॥

ಮೂಲಮ್ - 16

ಕೃತ್ವಾ ನಿಯುದ್ಧಂ ಭೃಶಮುಗ್ರವೇಗೌ
ಕಾಲಂ ಚಿರಂ ಗೋಪುರವೇದಿಮಧ್ಯೇ ।
ಉತ್ಕ್ಷಿಪ್ಯ ಚೋತ್ಕ್ಷಿಪ್ಯ ವಿನಮ್ಯ ದೇಹೌ
ಪಾದಕ್ರಮಾದ್ ಗೋಪುರವೇದಿ ಲಗ್ನೌ ॥

ಅನುವಾದ

ಭಯಂಕರ ವೇಗವಂತರಾದ ಆ ಇಬ್ಬರು ವೀರರೂ ಗೋಪುರದ ಜಗುಲಿಯ ಮೇಲೆ ಬಹಳ ಹೊತ್ತಿನವರೆಗೆ ಮಲ್ಲಯುದ್ಧ ಮಾಡುತ್ತಾ ಪದೇ ಪದೇ ಒಬ್ಬರನ್ನೊಬ್ಬರು ಬಗ್ಗಿಸುತ್ತಾ, ತಳ್ಳುತ್ತಾ, ಕಾಲುಗಳ ಅನೇಕ ಪಟ್ಟುಗಳನ್ನು ಪ್ರಯೋಗಿಸುತ್ತಾ ಆ ಜಗಲಿಯಿಂದ ಸರಿಯುತ್ತಿದ್ದರು.॥16॥

ಮೂಲಮ್ - 17

ಅನ್ಯೋನ್ಯಮಾಪೀಡ್ಯ ವಿಲಗ್ನದೇಹೌ
ತೌ ಪೇತತುಃ ಸಾಲನಿಖಾತಮಧ್ಯೇ ।
ಉತ್ಪೇತತುರ್ಭೂಮಿತಲಂಸ್ಪಶಂತೌ
ಸ್ಥಿತ್ವಾ ಮುಹೂರ್ತಂ ತ್ವಭಿನಿಃಶ್ವಸಂತೌ ॥

ಅನುವಾದ

ಒಬ್ಬರು ಮತ್ತೊಬ್ಬರನ್ನು ತಳ್ಳಿಕೊಂಡು ಹೋಗುವಾಗ ಆ ಇಬ್ಬರೂ ಯೋಧರೂ ಕೋಟೆ ಮತ್ತು ಕಂದಕದ ನಡುವೆ ಬಿದ್ದುಬಿಟ್ಟರು. ಕ್ಷಣಕಾಲ ಭೂಮಿಯ ಮೇಲೆ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ, ಮರುಕ್ಷಣದಲ್ಲಿ ಎದ್ದು ನಿಂತರು.॥1.॥

ಮೂಲಮ್ - 18

ಆಲಿಂಗ್ಯ ಚಾಲಿಂಗ್ಯ ಚ ಬಾಹುಯೋಕ್ತೈಃ
ಸಂಯೋಜಯಾಮಾಸತುರಾಹವೇ ತೌ ।
ಸಂರಂಭಶಿಕ್ಷಾಬಲಸಂಪ್ರಯುಕ್ತೌ
ಸುಚೇರತುಃ ಸಂಪ್ರತಿ ಯುದ್ಧಮಾರ್ಗೈಃ ॥

ಅನುವಾದ

ಮತ್ತೆ ಅವರು ತೋಳುಗಳೆಂಬ ಪಾಶದಿಂದ ಒಬ್ಬರು ಮತ್ತೊಬ್ಬರನ್ನು ಪುನಃ ಪುನಃ ಬಿಗಿಯಾಗಿ ಬಿಗಿಯುತ್ತಿದ್ದರು. ಇಬ್ಬರೂ ಕ್ರೋಧಿಗಳೂ, ಮಲ್ಲಯುದ್ಧದ ಶಿಕ್ಷಣದಲ್ಲಿ ಪರಿಣಿತರಾಗಿದ್ದು, ಶರೀರ ಬಲದಿಂದ ಸಂಪನ್ನರಾಗಿದ್ದರು. ಇದರಿಂದ ಆ ಯುದ್ಧಸ್ಥಳದಲ್ಲಿ ಮಲ್ಲಯುದ್ಧದ ಅನೇಕ ವರಸೆಗಳನ್ನು ತೋರುತ್ತಾ, ಸುತ್ತಲೂ ಸುತ್ತಿತ್ತಿದ್ದರು.॥18॥

ಮೂಲಮ್ - 19

ಶಾರ್ದೂಲಸಿಂಹಾವಿವ ಜಾತದಂಷ್ಟ್ರೌ
ಗಜೇಂದ್ರಪೋತಾವಿವ ಸಂಪ್ರಯುಕ್ತೌ ।
ಸಂಹತ್ಯ ಸಂವೇದ್ಯ ಚ ತೌ ಕರಾಭ್ಯಾಂ
ತೌ ಪೇತತುರ್ವೈ ಯುಗಪದ್ ಧರಾಯಾಮ್ ॥

ಅನುವಾದ

ಹೊಸದಾಗಿ ಹಲ್ಲು ಮೂಡಿದ ಸಿಂಹ-ಶಾರ್ದೂಲಗಳ ಮರಿಗಳು ಪರಸ್ಪರ ಕಾದಾಡುತ್ತಿದ್ದಂತೆ, ಆನೆದ ಮರಿಗಳಂತೆ ಆ ಇಬ್ಬರೂ ವೀರರೂ ತಮ್ಮ ಎದೆಗಳಿಂದ ಒಬ್ಬರು ಮತ್ತೊಬ್ಬನನ್ನು ತಳ್ಳುತ್ತಾ, ಕೈಗಳಿಂದ ಪ್ರಹರಿಸುತ್ತಾ ಒಟ್ಟಿಗೆ ನೆಲಕ್ಕೆ ಬಿದ್ದುಬಿಟ್ಟರು.॥19॥

ಮೂಲಮ್ - 20

ಉದ್ಯಮ್ಯ ಚಾನ್ಯೋನ್ಯಮಧಿಕ್ಷಿಪಂತೌ
ಸಂಚಕ್ರಮಾತೇ ಬಹು ಯುದ್ದಮಾರ್ಗೇ ।
ವ್ಯಾಯಾಮ ಶಿಕ್ಷಾಬಲ ಸಂಪ್ರಯುಕ್ತೌ
ಕ್ಲಮಂ ನ ತೌ ಜಗ್ಮತುರಾಶು ವೀರೌ ॥

ಅನುವಾದ

ಇಬ್ಬರೂ ವ್ಯಾಯಾಮ ಮಾಡಿದ ತರುಣರಾಗಿದ್ದರು. ಮಲ್ಲಯುದ್ಧದಲ್ಲಿ ನಿಷ್ಣಾತರಾಗಿದ್ದು ಮಹಾಬಲಿಷ್ಠರಾಗಿದ್ದರು. ಆದ್ದರಿಂದ ಯುದ್ಧದ ವಿಜಯಕ್ಕಾಗಿ ಇಬ್ಬರೂ ಹೋರಾಡುತ್ತಿದ್ದರು. ಪರಸ್ಪರವಾಗಿ ಒಬ್ಬರು ಮತ್ತೊಬ್ಬರನ್ನು ಆಕ್ಷೇಪಿಸುತ್ತಾ ಮಲ್ಲಯುದ್ಧದ ವರಸೆಗಳಿಂದ ಅಲ್ಲಿಂದಿಲ್ಲಿಗೆ ಸಂಚರಿಸುತ್ತಿದ್ದರೂ ಆ ವೀರರಿಬ್ಬರಿಗೂ ಆಯಾಸವೆಂಬುದೇ ಆಗುತ್ತಿರಲಿಲ್ಲ.॥20॥

ಮೂಲಮ್ - 21

ಬಾಹೂತ್ತಮೈರ್ವಾರಣವಾರಣಾಭೈ
ರ್ನಿವಾರಯಂತೌ ಪರವಾರಣಾಭೌ ।
ಚಿರೇಣ ಕಾಲೇನ ಭೃಶಂ ಪ್ರಯದ್ಧೌ
ಸಂಚೇರತುರ್ಮಂಡಲ ಮಾರ್ಗಮಾಶು ॥

ಅನುವಾದ

ಮತ್ತೆ ಗಜಗಳಂತಿರುವ ಸುಗ್ರೀವ ಮತ್ತು ರಾವಣರು ಗಜರಾಜನ ಶುಂಡದಂಡದಂತೆ ಇರುವ ಬಲಿಷ್ಠಬಾಹುಗಳಿಂದ ಒಬ್ಬರು ಮತ್ತೊಬ್ಬರ ಪಟ್ಟುಗಳನ್ನು ತಪ್ಪಿಸಿಕೊಳ್ಳುತ್ತಾ ಬಹಳ ಸಮಯದವರೆಗೆ ಆವೇಶಪೂರ್ಣವಾಗಿ ಯುದ್ಧಮಾಡುತ್ತಾ ಬೇಗ ಬೇಗನೇ ಮಂಡಲಾಕಾರವಾಗಿ ಚಲಿಸುತ್ತಿದ್ದರು.॥21॥

ಮೂಲಮ್ - 22

ತೌ ಪರಸ್ಪರಮಾಸಾದ್ಯ ಯತ್ತಾವನ್ಯೋನ್ಯ ಸೂದನೇ ।
ಮಾರ್ಜಾರಾವಿವ ಭಕ್ಷಾರ್ಥೇಽವತಸ್ಥಾತೇ ಮುಹುರ್ಮುಹುಃ ॥

ಅನುವಾದ

ಒಬ್ಬರು ಮತ್ತೊಬ್ಬರನ್ನು ಹಿಡಿದು ಪ್ರಹರಿಸಲು ಪ್ರಯತ್ನಿಸು ತ್ತಿದ್ದರು. ತಿಂಡಿಗಾಗಿ ಗುರುಗುಟ್ಟುತ್ತಾ ಎದುರು ಬದುರಾಗಿ ನಿಂತ ಎರಡು ಬೆಕ್ಕುಗಳಂತೆ ರಾವಣ-ಸುಗ್ರೀವರು ಪರಸ್ಪರವಾಗಿ ಕೆಡವಿ ಕೆಳಕ್ಕೆ ಬಿಳಿಸಲು ಕಾಯುತ್ತಾ ನಿಂತಿದ್ದರು.॥22॥

ಮೂಲಮ್ - 23

ಮಂಡಲಾನಿ ವಿಚಿತ್ರಾಣಿ ಸ್ಥಾನಾನಿ ವಿವಿಧಾನಿ ಚ ।
ಗೋಮೂತ್ರಕಾಣಿ ಚಿತ್ರಾಣಿ ಗತ ಪ್ರತ್ಯಾಗತಾನಿ ಚ ॥

ಅನುವಾದ

ವಿಚಿತ್ರ ಮಂಡಲ* ಮತ್ತು ಬಗೆಬಗೆಯ ಸ್ಥಾನಗಳನ್ನು** ಪ್ರದರ್ಶಿಸುತ್ತಾ, ಗೋಮೂತ್ರದ ರೇಖೆಯಂತೆ ಅಂಕು ಡೊಂಕಾದ ಗತಿಯಿಂದ ಸಂಚರಿಸುತ್ತಾ, ವಿಚಿತ್ರ ಗತಿಯಿಂದ ಕೆಲವೊಮ್ಮೆ ಮುಂದೆ ಕೆಲವೊಮ್ಮೆ ಹಿಂದೆ ಸರಿಯುತ್ತಿದ್ದರು.॥23॥

ಟಿಪ್ಪನೀ
  • ಭರತಮುನಿಯು ಮಲ್ಲಯುದ್ಧದ ನಾಲ್ಕು ರೀತಿಯ ಮಂಡಲಗಳನ್ನು ಹೇಳಿರುವನು. ಅದರ ಹೆಸರು ಚಾರಿಮಮಂಡಲ, ಕರಣಮಂಡಲ, ಖಂಡಮಂಡಲ, ಮಹಾಮಂಡಲ ಎಂದಾಗಿವೆ. ಇವುಗಳ ಲಕ್ಷಣ ಇಂತಿವೆ- ಒಂದು ಕಾಲಿನಿಂದ ಮುಂದರಿದು ಸುತ್ತುತ್ತಾ ಶತ್ರುವಿನ ಮೇಲೆ ಆಕ್ರಮಣ ಮಾಡುವುದು ಚರಿಮ ಮಂಡಲವೆಂದು ಹೇಳುತ್ತಾರೆ. ಎರಡು ಕಾಲುಗಳಿಂದ ಮಂಡಲಾಕಾರ ತಿರುಗುತ್ತಾ ಆಕ್ರಮಣ ಮಾಡುವುದು ಕರಣಮಂಡಲವಾಗಿದೆ. ಅನೇಕ ಕರಣಮಂಡಲಗಳ ಸಂಯೋಗದಿಂದ ಖಂಡಮಂಡಲವಾಗುತ್ತದೆ. ಮೂರು ಅಥವಾ ನಾಲ್ಕು ಖಂಡಮಂಡಲಗಳ ಸಂಯೋಗದಿಂದ ಮಹಾಮಂಡಲವಾಗುತ್ತದೆ.
    ** ಭರತಮುನಿಯು ಮಲ್ಲಯುದ್ಧದಲ್ಲಿ ವೈಷ್ಣವ, ಸಮಪಾದ, ವೈಶಾಖ, ಮಂಡಲ, ಪ್ರತ್ಯಾಲೀಢ ಮತ್ತು ಅನಾಲೀಢ ಎಂಬ ಆರು ಸ್ಥಾನಗಳನ್ನು ಉಲ್ಲೇಖಿಸಿರುವನು. ಕಾಲುಗಳನ್ನು ಅಕ್ಕಪಕ್ಕ ಹಿಂದೆ ಹಿಂದೆ ಸರಿಸುತ್ತಾ ವಿಶೇಷ ರೀತಿಯಿಂದ ಅವನ್ನು ಯಥಾಸ್ಥಾನಕ್ಕೆ ತರುವುದು ಸ್ಥಾನವೆಂದು ಹೇಳುತ್ತಾರೆ. ಹುಲಿ, ಸಿಂಹ ಮುಂತಾದ ಪ್ರಾಣಿಗಳಂತೆ ನಿಂತುಕೊಳ್ಳುವ ರೀತಿಯನ್ನು ಸ್ಥಾನವೆಂದು ಹೇಳುತ್ತಾರೆ.
ಮೂಲಮ್ - 24

ತಿರಶ್ಚೀನಗತಾನ್ಯೇವ ತಥಾ ವಕ್ರಗತಾನಿ ಚ ।
ಪರಿಮೋಕ್ಷಂ ಪ್ರಹಾರಾಣಾಂ ವರ್ಜನಂ ಪರಿಧಾವನಮ್ ॥

ಮೂಲಮ್ - 25

ಅಭಿದ್ರವಣಮಾಪ್ಲಾವಮವಸ್ಥಾನಂ ಸವಿಗ್ರಹಮ್ ।
ಪರಾವೃತ್ತಮಪಾವೃತ್ತಮಪದ್ರುತಮವಪ್ಲುತಮ್ ॥

ಮೂಲಮ್ - 26

ಉಪನ್ಯಸ್ತ ಮಪನ್ಯಸ್ತಂ ಯುದ್ಧಮಾರ್ಗ ವಿಶಾರದೌ ।
ತೌ ವಿಚೇರತುರನ್ಯೋನ್ಯಂ ವಾನರೇಂದ್ರಶ್ಚ ರಾವಣಃ ॥

ಅನುವಾದ

ಅವರು ಕೆಲವೊಮ್ಮೆ ಅಡ್ಡವಾಗಿ ಚರಿಸಿದರೆ, ಕೆಲವೊಮ್ಮೆ ಓರೆಯಾಗಿ ಎಡಕ್ಕೆ ಬಲಕ್ಕೆ ತಿರುಗುತ್ತಿದ್ದರು. ಕೆಲವೊಮ್ಮೆ ತನ್ನ ಸ್ಥಾನದಿಂದ ಸರಿದು ಶತ್ರುವಿನ ಏಟನ್ನು ಹುಸಿಯಾಗಿಸುತ್ತಿದ್ದರು. ಕೆಲವೊಮ್ಮೆ ಸ್ವತಃ ಪಟ್ಟುಗಳನ್ನು ಪ್ರಯೋಗಿಸಿ ಶತ್ರುವಿನ ಆಕ್ರಮಣದಿಂದ ತಪ್ಪಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಒಬ್ಬ ನಿಂತಿದ್ದರೆ ಮತ್ತೊಬ್ಬನು ಸುತ್ತಲೂ ಓಡುತ್ತಿದ್ದನು. ಕೆಲವೊಮ್ಮೆ ಇಬ್ಬರೂ ಓಡಿ ಪರಸ್ಪರ ಇದಿರು ಬದಿರಾಗಿ ಆಕ್ರಮಣ ಮಾಡುತ್ತಿದ್ದರು. ಕೆಲವೊಮ್ಮೆ ಬಾಗಿ, ಕಪ್ಪೆಯಂತೆ ನಿಧಾನವಾಗಿ ನೆಗೆಯುತ್ತಿದ್ದರು. ಕೆಲವೊಮ್ಮೆ ಒಂದೇ ಜಾಗದಲ್ಲಿ ನಿಂತು ಕಾದಾಡುತ್ತಿದ್ದರು. ಕೆಲವೊಮ್ಮೆ ಹಿಂದೆ ಸರಿದು, ತತ್ಕ್ಷಣ ಇದುರು ಬಂದು ನಿಲ್ಲುತ್ತಿದ್ದರು. ಕೆಲವೊಮ್ಮೆ ಶತ್ರುವನ್ನು ಹಿಡಿಯಲು ತನ್ನ ಶರೀರವನ್ನು ಕುಗ್ಗಿಸಿ ಅಥವಾ ಬಾಗಿ ಅವನೆಡೆಗೆ ಓಡುತ್ತಿದ್ದರು. ಕೆಲವೊಮ್ಮೆ ಪ್ರತಿದ್ವಂದ್ವಿಯ ಮೇಲೆ ಕಾಲಿನಿಂದ ಪ್ರಹರಿಸಲು ಮುಖ ತಗ್ಗಿಸಿಕೊಂಡು ಅವನ ಮೇಲೆ ಆಕ್ರಮಣ ಮಾಡುತ್ತಿದ್ದರು. ಕೆಲವೊಮ್ಮೆ ಶತ್ರುವಿನ ಭುಜವನ್ನು ಹಿಡಿಯಲು ತನ್ನ ಭುಜಗಳನ್ನು ಚಾಚುತ್ತಿದ್ದರು ಹಾಗೂ ಶತ್ರುವಿನ ಹಿಡಿತವನ್ನು ತಪ್ಪಿಸಲು ತಮ್ಮ ಬಾಹುಗಳನ್ನು ಹಿಂದಕ್ಕೆ ಸೆಳೆದುಕೊಳ್ಳುತ್ತಿದ್ದರು. ಹೀಗೆ ಮಲ್ಲಯುದ್ಧ ಕಲೆಯಲ್ಲಿ ಪರಮಪ್ರವೀಣ ವಾನರರಾಜ ಸುಗ್ರೀವ ಹಾಗೂ ರಾವಣನು ಒಬ್ಬರು ಮತ್ತೊಬ್ಬರಿಗೆ ಆಘಾತಮಾಡುತ್ತಾ ಮಂಡಲಾಕಾರವಾಗಿ ಸಂಚರಿಸುತ್ತಿದ್ದರು.॥24-26॥

ಮೂಲಮ್ - 27

ಏತಸ್ಮಿನ್ನಂತರೇ ರಕ್ಷೋ ಮಾಯಾಬಲಮಥಾತ್ಮನಃ ।
ಆರಬ್ಧು ಮುಪಸಂಪೇದೇ ಜ್ಞಾತ್ವಾ ತಂ ವಾನರಾಧಿಪಃ ॥

ಮೂಲಮ್ - 28

ಉತ್ಪಪಾತ ತದಾಽಽಕಾಶಂ ಜಿತಕಾಶೀ ಜಿತಕ್ಲಮಃ ।
ರಾವಣಃ ಸ್ಥಿತ ಏವಾತ್ರ ಹರಿರಾಜೇನ ವಂಚಿತಃ ॥

ಅನುವಾದ

ಇಷ್ಟರಲ್ಲಿ ರಾಕ್ಷಸ ರಾವಣನು ತನ್ನ ಮಾಯಾ ಶಕ್ತಿಯನ್ನು ಉಪಯೋಗಿಸಲು ಯೋಚಿಸಿದನು. ವಾನರರಾಜನು ಇದನ್ನು ಗ್ರಹಿಸಿ ಕೂಡಲೇ ಆಕಾಶಕ್ಕೆ ನೆಗೆದನು. ಅವನು ವಿಜಯೋಲ್ಲಾಸದಿಂದ ಶೋಭಿಸುತ್ತ ಬಳಲಿಕೆಯನ್ನು ಗೆದ್ದಿದ್ದನು. ವಾನರರಾಜನು ರಾವಣನಿಗೆ ಸೆಡ್ಡು ಹೊಡೆದು ಹೊರಟುಹೋದನು. ರಾವಣನು ನಿಂತು ನೋಡುತ್ತಲೇ ಇದ್ದು ಬಿಟ್ಟನು.॥27-28॥

ಮೂಲಮ್ - 29

ಅಥ ಹರಿವರನಾಥಃ ಪ್ರಾಪ್ತಸಂಗ್ರಾಮಕೀರ್ತಿ
ರ್ನಿಶಿಚರಪತಿಮಾಜೌ ಯೋಜಯಿತ್ವಾ ಶ್ರಮೇಣ ।
ಗಗನಮತಿವಿಶಾಲಂ ಲಂಘಯಿತ್ವಾರ್ಕಸೂನು
ರ್ಹರಿಗಣಮಧ್ಯೇ ರಾಮಪಾರ್ಶ್ವಂ ಜಗಾಮ ॥

ಅನುವಾದ

ಸಂಗ್ರಾಮದಲ್ಲಿ ಕೀರ್ತಿ ಪಡೆದ ವಾನರರಾಜ ಸೂರ್ಯಪುತ್ರ ಸುಗ್ರೀವನು ರಾವಣನನ್ನು ಯುದ್ಧದಲ್ಲಿ ಕಂಗಾಲುಪಡಿಸಿ, ಆಕಾಶಮಾರ್ಗದಲ್ಲಿ ನೆಗೆದು ವಾನರ ಸೇನೆಯ ನಡುವೆ ಶ್ರೀರಾಮನ ಬಳಿಗೆ ಬಂದನು.॥29॥

ಮೂಲಮ್ - 30

ಇತಿ ಸ ಸವಿತೃಸೂನುಸ್ತತ್ರ ತತ್ಕರ್ಮ ಕೃತ್ವಾ
ಪವನಗತಿರನೀಕಂ ಪ್ರಾವಿಶತ್ ಸಂ ಪ್ರಹೃಷ್ಟಃ ।
ರಘುವರ ನೃಪಸೂನೋರ್ವರ್ಧಯ ನ್ಯುದ್ಧ ಹರ್ಷಂ ।
ತರುಮೃಗಗಣಮುಖ್ಯೈಃ ಪೂಜ್ಯಮಾನೋ ಹರೀಂದ್ರಃ ॥

ಅನುವಾದ

ಹೀಗೆ ಅಲ್ಲಿ ಅದ್ಭುತ ಕರ್ಮವನ್ನು ಮಾಡಿ ವಾಯುವಿನಂತೆ ಶೀಘ್ರಗಾಮಿ ಸುಗ್ರೀವನು ದಶರಥನಂದನ ಶ್ರೀರಾಮನ ಯುದ್ಧೋತ್ಸಾಹವನ್ನು ಹೆಚ್ಚಿಸುತ್ತಾ ಉತ್ಸಾಹದಿಂದ ವಾನರ ಸೈನ್ಯವನ್ನು ಪ್ರವೇಶಿಸಿದನು. ಆಗ ಮುಖ್ಯ ಮುಖ್ಯ ವಾನರರು ವಾನರರಾಜನನ್ನು ಅಭಿನಂದಿಸಿದರು.॥30॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತನೆಯ ಸರ್ಗ ಪೂರ್ಣವಾಯಿತು.॥40॥

ಅನುವಾದ