वाचनम्
ಭಾಗಸೂಚನಾ
ಸುವೇಲ ಶಿಖರದಿಂದ ಶ್ರೀರಾಮನು ವಾನರರೊಂದಿಗೆ ಲಂಕೆಯನ್ನು ನಿರೀಕ್ಷಿಸಿದುದು
ಮೂಲಮ್ - 1
ತಾಂ ರಾತ್ರಿಮುಷಿತಾಸ್ತತ್ರ ಸುವೇಲೇ ಹರಿಯೂಥಪಾಃ ।
ಲಂಕಾಯಾಂ ದದೃಶುರ್ವೀರಾ ವನಾನ್ಯುಪವನಾನಿ ಚ ॥
ಅನುವಾದ
ವಾನರ ಸೇನಾಪತಿಗಳು ಆ ರಾತ್ರೆಯನ್ನು ಆ ಸುವೇಲ ಪರ್ವತದಲ್ಲೇ ಕಳೆದು, ಅಲ್ಲಿಂದ ವಾನರ ವೀರರು ಲಂಕೆಯ ವನ-ಉಪವನಗಳೂ ನೋಡಿದರು.॥1॥
ಮೂಲಮ್ - 2
ಸಮಸೌಮ್ಯಾನಿ ರಮ್ಯಾಣಿ ವಿಶಾಲಾನ್ಯಾಯತಾನಿ ಚ ।
ದೃಷ್ಟಿರಮ್ಯಾಣಿ ತೇ ದೃಷ್ಟ್ವಾಬಭೂವುರ್ಜಾತವಿಸ್ಮಯಾಃ ॥
ಅನುವಾದ
ಅವು ಚೌಕಾಕಾರವಿದ್ದು, ಶಾಂತ, ಸುಂದರ, ವಿಶಾಲ-ವಿಸ್ತೃತವಾಗಿದ್ದವು. ನೋಡಲು ಅತ್ಯಂತ ರಮಣೀಯವಾಗಿ ಕಂಡುಬರುತ್ತಿದ್ದವು. ಅವನ್ನು ನೋಡಿ ಆ ಎಲ್ಲ ವಾನರರಿಗೆ ಬಹಳ ವಿಸ್ಮಯವಾಯಿತು.॥2॥
ಮೂಲಮ್ - 3
ಚಂಪಕಾಶೋಕಬಕುಲಶಾಲತಾಲ ಸಮಾಕುಲಾ ।
ತಮಾಲವನಸಂಛನ್ನಾ ನಾಗಮಾಲಾ ಸಮಾವೃತಾ ॥
ಮೂಲಮ್ - 4
ಹಿಂತಾಲೈರರ್ಜುನೈರ್ನೀಪೈಃ ಸಪ್ತಪರ್ಣೈಃ ಸುಪುಷ್ಟಿತೈಃ ।
ತಿಲಕೈಃ ಕರ್ಣಿಕಾರೈಶ್ಚ ಪಾಟಲೈಶ್ಚ ಸಮಂತತಃ ॥
ಮೂಲಮ್ - 5
ಶುಶುಭೇ ಪುಷ್ಪಿತಾಗ್ರೈಶ್ಚ ಲತಾಪರಿಗತೈರ್ದ್ರುಮೈಃ ।
ಲಂಕಾ ಬಹುವಿಧೈರ್ದಿವ್ಯೈರ್ಯಥೇಂದ್ರಸ್ಯಾಮರಾವತೀ ॥
ಅನುವಾದ
ಸಂಪಿಗೆ, ಅಶೋಕ, ಬಕುಲ, ಸಾಲ-ತಾಲವೃಕ್ಷಗಳಿಂದ ವ್ಯಾಪ್ತವಾಗಿದ್ದು, ಅರಳಿನಿಂತ ಹಾಗೂ ಬಳ್ಳಿಗಳಿಂದ ಸುತ್ತುವರಿದ ಹಿಂತಾಲ, ಅರ್ಜುನ, ಕದಂಬ, ಹೂಗಳು ಅರಳಿದ ಏಳೆಲೆ ಬಾಳೆ, ತಿಲಕ, ಕರ್ಣಿಕಾರ, ಪಾಟಲ ಮುಂತಾದ ದಿವ್ಯವೃಕ್ಷಗಳಿಂದ ಕೂಡಿದ ಲಂಕಾಪಟ್ಟಣವು ಇಂದ್ರನ ಅಮರಾವತಿಯಂತೆ ಶೋಭಿಸುತ್ತಿತ್ತು.॥3-5॥
ಮೂಲಮ್ - 6
ವಿಚಿತ್ರ ಕುಸುಮೋಪೇತೈ ರಕ್ತಕೋಮಲ ಪಲ್ಲವೈಃ ।
ಶಾದ್ವಲೈಶ್ಚ ತಥಾ ನೀಲೈಶ್ಚಿತ್ರಾಭಿರ್ವನರಾಜಿಭಿಃ ॥
ಅನುವಾದ
ವಿಚಿತ್ರ ಹೂವುಗಳಿಂದ ಕೂಡಿದ, ಕೆಂಪಾದ ತಳಿರುಗಳಿಂದ, ಹಸುರಾದ ಹುಲ್ಲಿನಿಂದ, ವಿಚಿತ್ರ ವನಶ್ರೇಣಿಗಳಿಂದಲೂ ಆ ಪುರಿಯ ಶೋಭೆ ಇನ್ನೂ ಹೆಚ್ಚಾಗಿತ್ತು.॥6॥
ಮೂಲಮ್ - 7
ಗಂಧಾಢ್ಯಾನ್ಯತಿರಮ್ಯಾಣಿ ಪುಷ್ಪಾಣಿ ಚ ಫಲಾನಿ ಚ ।
ಧಾರಯನ್ತ್ಯಗಮಾಸ್ತತ್ರ ಭೂಷಣಾನೀವ ಮಾನವಾಃ ॥
ಅನುವಾದ
ಮನುಷ್ಯರು ಒಡವೆಗಳನ್ನು ಧರಿಸುವಂತೆ ಅಲ್ಲಿಯ ವೃಕ್ಷಗಳು ಸುಗಂಧಿತ ಹೂವುಗಳನ್ನು ಮತ್ತು ಅತ್ಯಂತ ರಮಣೀಯ ಹಣ್ಣುಗಳನ್ನು ಧರಿಸಿದ್ದವು.॥7॥
ಮೂಲಮ್ - 8
ತಚ್ಚೈತ್ರರಥಸಂಕಾಶಂ ಮನೋಜ್ಞಂ ನಂದನೋಪಮಮ್ ।
ವನಂ ಸರ್ವರ್ತುಕಂ ರಮ್ಯಂ ಶುಶುಭೇ ಷಟ್ಪದಾಯುತಮ್ ॥
ಅನುವಾದ
ಚೈತ್ರರಥ ಮತ್ತು ನಂದನ ವನದಂತೆ ಅಲ್ಲಿಯ ಮನೋಹರ ವನಗಳೆಲ್ಲವೂ ಎಲ್ಲ ಋತುಗಳಲ್ಲಿ ಭ್ರಮರಗಳಿಂದ ವ್ಯಾಪ್ತವಾಗಿ ರಮಣೀಯವಾಗಿ ಶೋಭಿಸುತ್ತಿದ್ದವು.॥8॥
ಮೂಲಮ್ - 9
ದಾತ್ಯೂಹಕೋಯಷ್ಟಿಬಕೈರ್ನೃತ್ಯಮಾನೈಶ್ಚ ಬರ್ಹಿಣೈಃ ।
ರುತಂ ಪರಭೃತಾನಾಂ ಚ ಶುಶ್ರುವೇವನನಿರ್ಝರೇ ॥
ಅನುವಾದ
ಚಾತಕಪಕ್ಷಿಗಳಿಂದಲೂ ನೀರು ಕೋಳಿಗಳಿಂದಲೂ, ಬಕಪಕ್ಷಿಗಳೂ, ನೃತ್ಯಮಾಡುತ್ತಿದ್ದ ನವಿಲುಗಳಿಂದಲೂ ಆ ವನಗಳು ಶೋಭಿಸುತ್ತಿದ್ದವು. ವನದಲ್ಲಿದ್ದ ಚಿಲುಮೆಗಳ ಬಳಿಯಲ್ಲಿ ಕೋಗಿಲೆಗಳ ಕೂಜನವು ಕೇಳಿ ಬರುತ್ತಿತ್ತು.॥9॥
ಮೂಲಮ್ - 10
ನಿತ್ಯಮತ್ತವಿಹಂಗಾನಿ ಭ್ರಮರಾಚರಿತಾನಿ ಚ ।
ಕೋಕಿಲಾ ಕುಲಷಂಡಾನಿ ವಿಹಂಗಾಭಿರುತಾನಿ ಚ ॥
ಮೂಲಮ್ - 11
ಭೃಂಗರಾಜಾಧಿ ಗೀತಾನಿ ಕುರರಸ್ವನಿತಾನಿ ಚ ।
ಕೋಣಾಲಕವಿಘುಷ್ಟಾನಿ ಸಾರಸಾಭಿರುತಾನಿ ಚ ।
ವಿವಿಶುಸ್ತೇ ತತಸ್ತಾನಿ ವನಾನ್ಯುಪವನಾನಿ ಚ ॥
ಅನುವಾದ
ಲಂಕೆಯ ವನ-ಉಪವನಗಳು ಸದಾ ಮತ್ತ ವಿಹಂಗಮಗಳಿಂದ ವಿಭೂಷಿತವಾಗಿದ್ದವು. ಅಲ್ಲಿ ವೃಕ್ಷಗಳಲ್ಲಿ ಭ್ರಮರಗಳು ಝೇಂಕರಿಸುತ್ತಿದ್ದವು. ಎಲ್ಲೆಡೆ ಕೋಗಿಲೆಗಳ ಕೂಹು-ಕೂಹು ಕೇಳಿಬರುತ್ತಿತ್ತು. ಪಕ್ಷಿಗಳು ಚಿಲಿಪಿಲಿ ಗುಟ್ಟಿತ್ತಿದ್ದವು. ಭೃಂಗಗಳು ಹಾಡುತ್ತಿದ್ದವು. ಕುರರ ಪಕ್ಷಿಗಳ ಶಬ್ದ ಪ್ರತಿಧ್ವನಿಸುತ್ತಿತ್ತು. ಗೀಜಗದ ಹಕ್ಕಿಗಳಿಂದಲೂ ಸಾರಸ ಪಕ್ಷಿಗಳಿಂದಲೂ ಶೋಭಾಯಮಾನವಾಗಿದ್ದ ಲಂಕೆಯ ವನ-ಉಪವನಗಳನ್ನು ವಾನರರು ಪ್ರವೇಶಿಸಿದರು.॥10-11॥
ಮೂಲಮ್ - 12
ಹೃಷ್ಟಾಃ ಪ್ರಮುದಿತಾ ವೀರಾ ಹರಯಃ ಕಾಮರೂಪಿಣಃ ।
ತೇಷಾಂ ಪ್ರವಿಶತಾಂ ತತ್ರ ವಾನರಾಣಾಂ ಮಹೌಜಸಾಮ್ ॥
ಮೂಲಮ್ - 13
ಪುಷ್ಪಸಂಸರ್ಗಸುರಭಿರ್ವವೌ ಘ್ರಾಣಸುಖೋಽನಿಲಃ ।
ಅನ್ಯೇ ತು ಹರಿವೀರಾಣಾಂ ಯೂಥಾನ್ನಿಷ್ಕ್ರಮ್ಯ ಯೂಥಪಾಃ ।
ಸುಗ್ರೀವೇಣಾಭ್ಯನುಜ್ಞಾತಾ ಲಂಕಾಂ ಜಗ್ಮುಃ ಪತಾಕಿನೀಮ್ ॥
ಅನುವಾದ
ಆ ವೀರರೆಲ್ಲರೂ ಇಚ್ಛಾನುಸಾರ ರೂಪ ಧರಿಸುವವರೂ, ಉತ್ಸಾಹಿಗಳೂ, ಆನಂದಮಗ್ನರೂ ಆಗಿದ್ದರು. ಮಹಾತೇಜಸ್ವೀ ಆ ವಾನರರು ಅಲ್ಲಿ ಪ್ರವೇಶಿಸುತ್ತಲೇ ಪುಷ್ಪಗಳ ಸಂಸರ್ಗದಿಂದ ಮೂಗಿಗೆ ಸುಖಕರವಾದ ಸುಗಂಧಿತ ಮಂದಮಾರುತ ಬೀಸತೊಡಗಿತು. ಇತರ ಅನೇಕ ಸೇನಾಪತಿ ವಾನರವೀರರು ಸುಗ್ರೀವನಿಂದ ಅಪ್ಪಣೆ ಪಡೆದು, ಧ್ವಜ-ಪತಾಕೆಗಳಿಂದ ಅಲಂಕೃತರಾಗಿ ಅಲ್ಲಿಂದ ಹೊರಟು ಲಂಕಾಪಟ್ಟಣವನ್ನು ಪ್ರವೇಶಿಸಿದರು.॥12-13॥
ಮೂಲಮ್ - 14
ವಿತ್ರಾಸಯಂತೋ ವಿಹಗಾನ್ ಗ್ಲಾಪಯಂತೋ ಮೃಗದ್ವಿಪಾನ್ ।
ಕಂಪಯಂತಶ್ಚ ತಾಂ ಲಂಕಾಂ ನಾದೈಃ ಸ್ವೈರ್ನದತಾಂ ವರಾಃ ॥
ಅನುವಾದ
ಗರ್ಜಿಸು ವವರಲ್ಲಿ ಶ್ರೇಷ್ಠರಾದ ಆ ವಾನರವೀರರು ತಮ್ಮ ಸಿಂಹಗರ್ಜನೆಯಿಂದ ಪಕ್ಷಗಳನ್ನು ಹೆದರಿಸುತ್ತ, ಮೃಗಗಳನ್ನು, ಆನೆಗಳನ್ನು ಆಯಾಸಪಡಿಸುತ್ತಾ, ಲಂಕೆಯನ್ನು ನಡುಗಿಸುತ್ತಾ ಮುಂದರಿದರು.॥14॥
ಮೂಲಮ್ - 15
ಕುರ್ವಂತಸ್ತೇ ಮಹಾವೇಗಾ ಮಹೀಂ ಚರಣ ಪೀಡಿತಾಮ್ ।
ರಜಶ್ಚ ಸಹಸೈವೋರ್ಧ್ವಂ ಜಗಾಮ ಚರಣೋತ್ಥಿತಮ್ ॥
ಅನುವಾದ
ಮಹಾವೇಗಶಾಲಿ ವಾನರರು ತಮ್ಮ ಕಾಲುಗಳ ಸಂಘಟ್ಟನೆಯಿಂದ ನಡೆಯುತ್ತಿದ್ದಾಗ ಎದ್ದ ಧೂಳಿಯು ಆಕಾಶವನ್ನು ವ್ಯಾಪಿಸಿತು.॥15॥
ಮೂಲಮ್ - 16
ಋಕ್ಷಾಃ ಸಿಂಹಾಶ್ಚ ಮಹಿಷಾ ವಾರಣಾಶ್ವ ಮೃಗಾಃ ಖಗಾಃ ।
ತೇನ ಶಬ್ದೇನ ವಿತ್ರಸ್ತಾ ಜಗ್ಮುರ್ಭೀತಾ ದಿಶೋ ದಶ ॥
ಅನುವಾದ
ವಾನರರ ಆ ಸಿಂಹನಾದದಿಂದ ಭಯಗೊಂಡ ಕರಡಿಗಳು, ಸಿಂಹಗಳು, ಕೋಣಗಳು, ಆನೆಗಳು, ಜಿಂಕೆಗಳು, ಪಕ್ಷಿಗಳು ದಿಕ್ಕಾಪಾಲಾಗಿ ಓಡಿಹೋದುವು.॥16॥
ಮೂಲಮ್ - 17
ಶಿಖರಂ ತು ತ್ರಿಕೂಟಸ್ಯ ಪ್ರಾಂಶು ಚೈಕಂ ದಿವಿಸ್ಪಶಮ್ ।
ಸಮಂತಾತ್ಪುಷ್ಪಸಂಛನ್ನಂ ಮಹಾರಜತ ಸಂನಿಭಮ್ ॥
ಅನುವಾದ
ತ್ರಿಕೂಟ ಪರ್ವತದ ಒಂದು ಶಿಖರವು ಆಕಾಶವನ್ನೇ ಮುಟ್ಟುವಷ್ಟು ಎತ್ತರವಾಗಿತ್ತು. ಅದರ ಮೇಲೆ ಎಲ್ಲೆಡೆ ಹಳದಿ ಹೂವುಗಳು ಬಿಟ್ಟಿದ್ದರಿಂದ ಅದು ಚಿನ್ನದಂತೆ ತೋರುತ್ತಿತ್ತು.॥17॥
ಮೂಲಮ್ - 18
ಶತಯೋಜನವಿಸ್ತೀರ್ಣಂ ವಿಮಲಂ ಚಾರುದರ್ಶನಮ್ ।
ಶ್ಲಕ್ಷ್ಣಂ ಶ್ರೀಮನ್ಮಹಚ್ಚೈವ ದುಷ್ಟ್ರಾಪಂ ಶಕುನೈರಪಿ ॥
ಅನುವಾದ
ಆ ಶಿಖರವು ನೂರು ಯೋಜನ ವಿಸ್ತಾರವಾಗಿತ್ತು. ಅದು ನೋಡಲು ಬಹಳ ಸುಂದರ, ಸ್ವಚ್ಛ, ಸ್ನಿಗ್ಧ, ಕಾಂತಿಯುಕ್ತ ವಿಶಾಲವಾಗಿತ್ತು. ಪಕ್ಷಿಗಳಿಗೂ ತದಿಯವರೆಗೆ ತಲುಪಲು ಕಷ್ಟವಾಗುತ್ತಿತ್ತು.॥18॥
ಮೂಲಮ್ - 19
ಮನಸಾಪಿ ದುರಾರೋಹಂ ಕಿಂ ಪುನಃ ಕರ್ಮಣಾ ಜನೈಃ ।
ನಿವಿಷ್ಟಾ ತಸ್ಯ ಶಿಖರೇ ಲಂಕಾ ರಾವಣಪಾಲಿತಾ ॥
ಅನುವಾದ
ಸಾಮಾನ್ಯರಿಗೆ ಅದನ್ನು ಹತ್ತಲು ಮನಸ್ಸಿನಿಂದಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಪ್ರತ್ಯಕ್ಷವಾಗಿ ಹತ್ತುವುದು ಎಲ್ಲಿಂದ ಬಂತು? ಇಂತಹ ದುರ್ಗಮ ತ್ರಿಕೂಟ ಪರ್ವತ ಶಿಖರದ ಮೇಲ್ಭಾಗದಲ್ಲಿ ರಾವಣನು ಪಾಲಿಸುತ್ತಿದ್ದ ಲಂಕೆಯು ನೆಲೆಸಿತ್ತು.॥19॥
ಮೂಲಮ್ - 20
ದಶಯೋಜನ ವಿಸ್ತೀರ್ಣಾ ವಿಂಶದ್ಯೋಜನಮಾಯತಾ ।
ಸಾ ಪುರೀ ಗೋಪುರೈರುಚ್ಚೈಃ ಪಾಂಡುರಾಂಬುದಸಂನಿಭೈಃ ।
ಕಾಂಚನೇನ ಚ ಶಾಲೇನ ರಾಜತೇನ ಚ ಶೋಭತೇ ॥
ಅನುವಾದ
ಆ ಲಂಕಾಪುರಿಯು ಹತ್ತು ಯೋಜನ ಅಗಲವಾಗಿಯೂ, ಇಪ್ಪತ್ತು ಯೋಜನ ಉದ್ದವಾಗಿಯೂ ಇದ್ದು, ಬಿಳಿಯ ಮೋಡಗಳಂತೆ ಕಾಣುವ ಎತ್ತರವಾದ ಗೋಪುರಗಳಿಂದ ಶೋಭಿಸುತ್ತಿತ್ತು.॥20॥
ಮೂಲಮ್ - 21
ಪ್ರಾಸಾದೈಶ್ಚ ವಿಮಾನೈಶ್ಚ ಲಂಕಾ ಪರಮಭೂಷಿತಾ ।
ಘನೈರಿವಾತಪಾಪಾಯೇ ಮಧ್ಯಮಂ ವೈಷ್ಣವಂ ಪದಮ್ ॥
ಅನುವಾದ
ಗ್ರೀಷ್ಮ ಋತುವಿನ ಕೊನೆಯಲ್ಲಿ ವರ್ಷಾಕಾಲದ ದಟ್ಟವಾದ ಮೋಡಗಳು ಆಕಾಶದ ಶೋಭೆ ಹೆಚ್ಚಿಸುವಂತೆಯೇ ಪ್ರಾಸಾದಗಳಿಂದ ಮತ್ತು ವಿಮಾನಗಳಿಂದ ಲಂಕೆಯು ಅತ್ಯಂತ ಶೋಭಿತವಾಗಿತ್ತು.॥21॥
ಮೂಲಮ್ - 22
ಯಸ್ಯಾಂ ಸ್ತಂಭಸಹಸ್ರೇಣ ಪ್ರಾಸಾದಃ ಸಮಲಂಕೃತಃ ।
ಕೈಲಾಸ ಶಿಖರಾಕಾರೋ ದೃಶ್ಯತೇ ಖಮಿವೋಲ್ಲಿಖನ್ ॥
ಅನುವಾದ
ಆ ಪುರಿಯಲ್ಲಿ ಸಾವಿರ ಕಂಬಗಳ ಅದ್ಭುತ ಒಂದು ಚೈತ್ಯಪ್ರಾಸಾದವು ಶೋಭಿಸುತ್ತಿತ್ತು. ಅದು ಕೈಲಾಸ ಶಿಖರದಂತೆ ಇದ್ದು, ಆಕಾಶದಲ್ಲಿ ಗೆರೆಯನ್ನು ಎಳೆಯುತ್ತಿರುವುದೋ ಎಂದು ಕಾಣುತ್ತಿತ್ತು.॥22॥
ಮೂಲಮ್ - 23
ಚೈತ್ಯಃ ಸ ರಾಕ್ಷಸೇಂದ್ರಸ್ಯ ಬಭೂವ ಪುರಭೂಷಣಮ್ ।
ಶತೇನ ರಕ್ಷಸಾಂ ನಿತ್ಯಂ ಯಃ ಸಮಗ್ರೇಣ ರಕ್ಷ್ಯತೇ ॥
ಅನುವಾದ
ರಾಕ್ಷಸರಾಜ ರಾವಣನ ಆ ಚೈತ್ಯಪ್ರಾಸಾದವು ಲಂಕೆಗೆ ಭೂಷಣಪ್ರಾಯ ವಾಗಿತ್ತು. ಅನೇಕ ನೂರು ರಾಕ್ಷಸರು ಆ ಪ್ರಾಸಾದವನ್ನು ಸಮಗ್ರವಾಗಿ ಪ್ರತಿದಿನ ರಕ್ಷಿಸುತ್ತಿದ್ದರು.॥23॥
ಮೂಲಮ್ - 24
ಮನೋಜ್ಞಾಂ ಕಾಂಚನವತೀಂ ಪರ್ವತೈರುಪಶೋಭಿತಾಮ್ ।
ನಾನಾಧಾತುವಿಚಿತ್ರೈಶ್ಚ ಉದ್ಯಾನೈರುಪಶೋಭಿತಾಮ್ ॥
ಅನುವಾದ
ಹೀಗೆ ಆ ಪುರಿಯು ಬಹಳ ಮನೋಹರ, ಸುವರ್ಣಮಯ ಅನೇಕ ಪರ್ವತಗಳಿಂದ ಅಲಂಕೃತವಾಗಿದ್ದು, ನಾನಾವಿಧದ ವಿಚಿತ್ರ ಧಾತುಗಳಿಂದ ಚಿತ್ರಿತವಾಗಿ, ಅನೇಕ ಉದ್ಯಾನವನಗಳಿಂದ ಶೋಭಿಸುತ್ತಿತ್ತು.॥24॥
ಮೂಲಮ್ - 25
ನಾನಾ ವಿಹಗಸಂಘುಷ್ಟಾಂ ನಾನಾ ಮೃಗ ನಿಷೇವಿತಾಮ್ ।
ನಾನಾ ಕುಸುಮ ಸಂಪನ್ನಾಂ ನಾನಾ ರಾಕ್ಷಸ ಸೇವಿತಾಮ್ ॥
ಅನುವಾದ
ನಾನಾ ಪ್ರಕಾರದ ಪಕ್ಷಿಗಳಿಂದ ನಿನಾದಿತವಾಗಿದ್ದಿತು. ನಾನಾವಿಧದ ಮೃಗಗಳಿಂದ ಸೇವಿತವಾಗಿತ್ತು. ಅನೇಕ ರೀತಿಯ ಪುಷ್ಪಗಳಿಂದ ಸಂಪನ್ನವಾಗಿದ್ದು, ಅನೇಕ ಆಕಾರದ ರಾಕ್ಷಸರು ಅಲ್ಲಿ ವಾಸಿಸುತ್ತಿದ್ದರು.॥25॥
ಮೂಲಮ್ - 26
ತಾಂ ಸಮೃದ್ಧಾಂ ಸಮೃದ್ಧಾರ್ಥಾಂ ಲಕ್ಷ್ಮೀವಾನ್ ಲ್ಲಕ್ಷ್ಮಣಾಗ್ರಜಃ ।
ರಾವಣಸ್ಯ ಪುರೀಂ ರಾಮೋ ದದರ್ಶ ಸಹ ವಾನರೈಃ ॥
ಅನುವಾದ
ಧನ-ಧಾನ್ಯಗಳಿಂದ ಸಮೃದ್ಧವಾದ, ಮನೋವಾಂಛಿತ ವಸ್ತುಗಳಿಂದ ತುಂಬಿದ್ದ ಆ ರಾವಣನ ಲಂಕೆಯನ್ನು ಲಕ್ಷ್ಮಣನ ಅಣ್ಣ ಲಕ್ಷ್ಮೀವಂತ ಶ್ರೀರಾಮನು ವಾನರರೊಂದಿಗೆ ನೋಡಿದನು.॥26॥
ಮೂಲಮ್ - 27
ತಾಂ ಮಹಾಗೃಹಸಂಬಾಧಾಂ ದೃಷ್ಟ್ವಾ ಲಕ್ಷ್ಮಣಪೂರ್ವಜಃ ।
ನಗರೀಂ ತ್ರಿದಿವಸಪ್ರಖ್ಯಾಂ ವಿಸ್ಮಯಂ ಪ್ರಾಪ ವೀರ್ಯವಾನ್ ॥
ಅನುವಾದ
ದೊಡ್ಡ ದೊಡ್ಡ ಸೌಧಗಳಿಂದ ಕೂಡಿದ್ದ ಆ ಸ್ವರ್ಗ ತುಲ್ಯನಗರವನ್ನ ನೋಡಿ ಪರಾಕ್ರಮಿ ಶ್ರೀರಾಮನು ವಿಸ್ಮಯಗೊಂಡನು.॥27॥
ಮೂಲಮ್ - 28
ತಾಂ ರತ್ನಪೂರ್ಣಾಂ ಬಹು ಸಂವಿಧಾನಾಂ
ಪ್ರಾಸಾದಮಾಲಾಭಿರಲಂಕೃತಾಂ ಚ ।
ಪುರೀಂ ಮಹಾಯಂತ್ರಕವಾಟಮುಖ್ಯಾಂ
ದದರ್ಶ ರಾಮೋ ಮಹತಾ ಬಲೇನ ॥
ಅನುವಾದ
ಹೀಗೆ ತನ್ನ ವಿಶಾಲ ಸೈನ್ಯದೊಂದಿಗೆ ಶ್ರೀರಘುನಾಥನು ಅನೇಕ ರೀತಿಯಿಂದ ರತ್ನಗಳಿಂದ ತುಂಬಿದ, ಹಲವಾರು ರಚನೆಗಳಿಂದ ಸುಸಜ್ಜಿತವಾದ, ಎತ್ತರವಾದ ಪ್ರಾಸಾದಗಳ ಸಾಲುಗಳಿಂದ ಸಮಲಂಕೃತವಾದ, ದೊಡ್ಡ ದೊಡ್ಡ ಯಂತ್ರಗಳಿಂದ ನಿರ್ವಹಿಸುತ್ತಿದ್ದ ಮಹಾದ್ವಾರಗಳಿಂದ ಕೂಡಿದ ಆ ಅದ್ಭುತಪುರಿಯನ್ನು ನೋಡಿದನು.॥28॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥39॥