वाचनम्
ಭಾಗಸೂಚನಾ
ಮಾಲ್ಯವಂತನನ್ನು ಆಕ್ಷೇಪಿಸಿ, ನಗರ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ರಾವಣನು ತನ್ನ ಅಂತಃಪುರವನ್ನು ಪ್ರವೇಶಿಸಿದುದು.
ಮೂಲಮ್ - 1
ತತ್ತು ಮಾಲ್ಯವತೋ ವಾಕ್ಯಂ ಹಿತಮುಕ್ತಂ ದಶಾನನಃ ।
ನ ಮರ್ಷಯತಿ ದುಷ್ಟಾತ್ಮಾ ಕಾಲಸ್ಯ ವಶಮಾಗತಃ ॥
ಅನುವಾದ
ದುಷ್ಟಾತ್ಮಾ ದಶಾನನನು ಕಾಲಕ್ಕೆ ಅಧೀನನಾಗಿದ್ದನು, ಅದರಿಂದ ಮಾಲ್ಯವಂತನು ಹೇಳಿದ ಹಿತಕರ ಮಾತುಗಳನ್ನು ಸಹಿಸದಾದನು.॥1॥
ಮೂಲಮ್ - 2
ಸ ಬದ್ಧ್ವಾಭ್ರುಕುಟಿಂ ವಕ್ತ್ರೇ ಕ್ರೋಧಸ್ಯ ವಶಮಾಗತಃ ।
ಅಮರ್ಷಾತ್ಪರಿವೃತ್ತಾಕ್ಷೋ ಮಾಲ್ಯವಂತ ಮಥಾಬ್ರವೀತ್ ॥
ಅನುವಾದ
ಅವನು ಕ್ರೋಧಕ್ಕೆ ವಶೀಭೂತನಾಗಿ, ದ್ವೇಷದಿಂದ ಕಣ್ಣುಗಳು ಕೆಂಪಾಗಿದ್ದವು. ಅವನು ಓರೆನೋಟದಿಂದ ನೋಡುತ್ತಾ ಮಾಲ್ಯವಂತನಲ್ಲಿ ಹೇಳಿದನು.॥2॥
ಮೂಲಮ್ - 3
ಹಿತಬುದ್ಧ್ಯಾ ಯದಹಿತಂ ವಚಃ ಪರುಷಮುಚ್ಯತೇ ।
ಪರಪಕ್ಷಂ ಪ್ರವಿಶ್ಯೈವ ನೈತಚ್ಛ್ರೋತ್ರಗತಂ ಮಮ ॥
ಅನುವಾದ
ನೀನು ಶತ್ರುಪಕ್ಷವನ್ನು ವಹಿಸಿ, ಹಿತಬುದ್ಧಿಯಿಂದ ನನ್ನ ಅಹಿತದ ಕಠೋರವಾಗಿ ನುಡಿದ ಮಾತು ಪೂರ್ಣವಾಗಿ ನನ್ನ ಕಿವಿವರೆಗೆ ತಲುಪಲೇ ಇಲ್ಲ.॥3॥
ಮೂಲಮ್ - 4
ಮಾನುಷಂ ಕೃಪಣಂ ರಾಮಮೇಕಂ ಶಾಖಾಮೃಗಾಶ್ರಯಮ್ ।
ಸಮರ್ಥಂ ಮನ್ಯಸೇ ಕೇನ ತ್ಯಕ್ತಂ ಪಿತ್ರಾ ವನಾಶ್ರಯಮ್ ॥
ಅನುವಾದ
ಬಡಪಾಯಿ ರಾಮನು ಒಬ್ಬ ಮನುಷ್ಯನೇ ಆಗಿದ್ದಾನಲ್ಲ, ಅವನು ಕೆಲವು ವಾನರರನ್ನು ಆಶ್ರಯಿಸಿರುವನು. ತಂದೆಯು ತ್ಯಜಿಸಿದ್ದರಿಂದ ಕಾಡನ್ನು ಸೇರಿದನು. ಇದರಲ್ಲಿ ಇಂತಹ ವಿಶೇಷವೇನಿದೆ? ಅದರಿಂದ ನೀನು ದೊಡ್ಡ ಸಾಮರ್ಥ್ಯಶಾಲೀ ಎಂದು ತಿಳಿಯುತ್ತಿ ರುವೆಯಲ್ಲ.॥4॥
ಮೂಲಮ್ - 5
ರಕ್ಷಸಾಮೀಶ್ವರಂ ಮಾಂ ಚ ದೇವಾನಾಂ ಚ ಭಯಂಕರಮ್ ।
ಹೀನಂ ಮಾಂ ಮನ್ಯಸೇ ಕೇನ ಅಹೀನಂ ಸರ್ವವಿಕ್ರಮೈಃ ॥
ಅನುವಾದ
ನಾನು ರಾಕ್ಷಸರ ಒಡೆಯನಾಗಿದ್ದು, ಎಲ್ಲ ರೀತಿಯ ಪ್ರರಾಕ್ರಮಗಳಿಂದ ಸಂಪನ್ನನಾಗಿರುವೆನು. ದೇವತೆಗಳ ಮನಸ್ಸಿನಲ್ಲಿಯೂ ಭಯವನ್ನು ಹುಟ್ಟಿಸುತ್ತೇನೆ; ಹೀಗಿರುವಾಗ ಯಾವ ಕಾರಣದಿಂದ ನೀನು ರಾಮನಿಗಿಂತ ನನ್ನನ್ನು ಕೀಳೆಂದು ತಿಳಿಯುತ್ತಿರುವೆಯಲ್ಲ.॥5॥
ಮೂಲಮ್ - 6
ವೀರದ್ವೇಷೇಣ ವಾ ಶಂಕೇ ಪಕ್ಷಪಾತೇನ ವಾ ರಿಪೋಃ ।
ತ್ವಯಾಹಂ ಪರುಷಾಣ್ಯಕ್ತೋಃ ಪರಪ್ರೋತ್ಸಾಹನೇನ ವಾ ॥
ಅನುವಾದ
ನೀನು ಹೇಳಿದ ಕಠೋರ ಮಾತನ್ನು ಕೇಳಿದಾಗ - ನೀನು ನನ್ನಂತಹ ವೀರನನ್ನು ದ್ವೇಷಿಸುತ್ತಿರುವೆಯಾ? ಅಥವಾ ಶತ್ರುಗಳೊಂದಿಗೆ ಸೇರಿಕೊಂಡಿರುವೆಯಾ? ಇಲ್ಲವೇ ಶತ್ರುಗಳು ಹೀಗೆ ಹೇಳಲು, ಮಾಡಲು ನಿನ್ನನ್ನು ಪ್ರೋತ್ಸಾಹಿಸಿರುವರೇ? ಎಂದು ನನ್ನ ಮನಸ್ಸಿನಲ್ಲಿ ಸಂಶಯ ಉಂಟಾಗಿದೆ.॥6॥
ಮೂಲಮ್ - 7
ಪ್ರಭವಂತಂ ಪದಸ್ಥಂ ಹಿಪರುಷಂ ಕೋಽಭಿಭಾಷತೇ ।
ಪಂಡಿತಃ ಶಾಸ್ತ್ರ ತತ್ತ್ವಜ್ಞೋ ವಿನಾ ಪ್ರೋತ್ಸಾಹನೇನ ವಾ ॥
ಅನುವಾದ
ಪ್ರಭಾವಶಾಲಿಯಾಗಿದ್ದು ಜೊತೆಗೆ ತನ್ನ ರಾಜ್ಯದಲ್ಲಿ ಪ್ರತಿಷ್ಠಿತ ನಾಗಿದ್ದ ಶಾಸ್ತ್ರತತ್ತ್ವಜ್ಞ ವಿದ್ವಾನ್ ಪುರುಷನು ಶತ್ರುಗಳ ಪ್ರೋತ್ಸಾಹವಿಲ್ಲದೆ ಇಂತಹ ಕಟುವಚನ ಹೇಗೆ ಹೇಳಬಲ್ಲನು.॥7॥
ಮೂಲಮ್ - 8
ಆನೀಯ ಚ ವನಾತ್ ಸೀತಾಂ ಪದ್ಮಹೀನಾಮಿವ ಶ್ರಿಯಮ್ ।
ಕಿಮರ್ಥಂ ಪ್ರತಿದಾಸ್ಯಾಮಿ ರಾಘವಸ್ಯ ಭಯಾದಹಮ್ ॥
ಅನುವಾದ
ಕಮಲಹೀನ ಲಕ್ಷ್ಮಿಯಂತಹ ಸುಂದರಿ ಸೀತೆಯನ್ನು ವನದಿಂದ ತಂದು ಈಗ ಕೇವಲ ರಾಮನ ಭಯದಿಂದ ನಾನು ಹೇಗೆ ಮರಳಿಸಬಲ್ಲೆನು.॥8॥
ಮೂಲಮ್ - 9
ವೃತಂ ವಾನರಕೋಟೀಭಿಃ ಸಸುಗ್ರೀವಂ ಸಲಕ್ಷ್ಮಣಮ್ ।
ಪಶ್ಯ ಕೈಶ್ಚಿದಹೋಭಿಶ್ಚ ರಾಘವಂ ನಿಹತಂ ಮಯಾ ॥
ಅನುವಾದ
ಕೋಟ್ಯಾವಧಿ ವಾನರರಿಂದ ಸುತ್ತುವರೆದ ಸುಗ್ರೀವ ಮತ್ತು ಲಕ್ಷ್ಮಣಸಹಿತ ರಾಮನನ್ನು ನಾನು ಕೆಲವೇ ದಿನಗಳಲ್ಲಿ ಕೊಂದುಹಾಕುವೆನು, ಇದನ್ನು ನೀನು ನಿನ್ನ ಕಣ್ಣುಗಳಿಂದ ನೋಡುವೆ.॥9॥
ಮೂಲಮ್ - 10
ದ್ವಂದ್ವೇ ಯಸ್ಯ ನ ತಿಷ್ಠಂತಿ ದೈವತಾನ್ಯಪಿ ಸಂಯುಗೇ ।
ಸ ಕಸ್ಮಾದ್ ರಾವಣೋ ಯುದ್ಧೇ ಭಯಮಾಹಾರಯಿಷ್ಯತಿ ॥
ಅನುವಾದ
ಯಾರ ಎದುರಿಗೆ ದ್ವಂದ್ವಯುದ್ಧದಲ್ಲಿ ದೇವತೆಗಳೂ ನಿಲ್ಲಲಾರರೋ, ಅಂತಹ ರಾವಣನು ಯುದ್ಧದಲ್ಲಿ ಯಾರಿಂದ ಭಯಗೊಳ್ಳುವನು.॥10॥
ಮೂಲಮ್ - 11
ದ್ವಿಧಾ ಭಜ್ಯೇಯಮಪ್ಯೇವಂ ನ ನಮೇಯಂ ತು ಕಸ್ಯಚಿತ್ ।
ಏಷ ಮೇ ಸಹಜೋ ದೋಷಃ ಸ್ವಭಾವೋ ದುರತಿಕ್ರಮಃ ॥
ಅನುವಾದ
ನಾನು ನಡುವಿನಲ್ಲಿ ಎರಡು ಸೀಳಾದರೂ ಯಾರ ಮುಂದೆಯೂ ತಲೆಬಾಗಲಾರೆ. ಇದು ನನ್ನ ಸಹಜ ದೋಷವಾಗಿದೆ ಮತ್ತು ಸ್ವಭಾವವು ಎಲ್ಲರಿಗಾಗಿ ದುರ್ಲಂಘ್ಯನಾಗಿರುತ್ತದೆ.॥11॥
ಮೂಲಮ್ - 12
ಯದಿ ತಾವತ್ ಸಮುದ್ರೇ ತು ಸೇತುರ್ಬದ್ಧೋ ಯದೃಚ್ಛಯಾ ।
ರಾಮೇಣ ವಿಸ್ಮಯಃ ಕೋಽತ್ರ ಯೇನ ತೇ ಭಯಮಾಗತಮ್ ॥
ಅನುವಾದ
ರಾಮನು ದೈವವಶ ಸಮುದ್ರಕ್ಕೆ ಸೇತುವೆ ಕಟ್ಟಿದುದರಲ್ಲಿ ಯಾವ ವಿಸ್ಮಯದ ಮಾತಾಗಿದೆ? ಅದರಿಂದ ನಿನಗೆ ಇಷ್ಟು ಭಯವಾಗುತ್ತಿದೆಯಲ್ಲ.॥12॥
ಮೂಲಮ್ - 13
ಸ ತು ತೀರ್ತ್ವಾರ್ಣವಂ ರಾಮಃ ಸಹ ವಾನರಸೇನಯಾ ।
ಪ್ರತಿಜಾನಾಮಿ ತೇ ಸತ್ಯಂ ನ ಜೀವನ್ ಪ್ರತಿಯಾಸ್ಯತಿ ॥
ಅನುವಾದ
ಸಮುದ್ರವನ್ನು ದಾಟಿ ವಾನರರೊಂದಿಗೆ ಬಂದಿರುವ ರಾಮನು ಇಲ್ಲಿಂದ ಜೀವಂತವಾಗಿ ಹೋಗಲಾರನು ಎಂದು ನಿನ್ನ ಮುಂದೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ.॥13॥
ಮೂಲಮ್ - 14
ಏವಂ ಬ್ರುವಾಣಂ ಸಂರಬ್ಧಂ ರುಷ್ಟಂ ವಿಜ್ಞಾಯ ರಾವಣಮ್ ।
ವ್ರೀಡಿತೋ ಮಾಲ್ಯವಾನ್ ವಾಕ್ಯಂ ನೋತ್ತರಂ ಪ್ರತ್ಯಪದ್ಯತ ॥
ಅನುವಾದ
ಹೀಗೆ ಹೇಳುತ್ತಿರುವ ರಾವಣನು ಕ್ರೋಧಗೊಂಡು ದುಷ್ಟನಾಗಿರುವನೆಂದು ತಿಳಿದು ಮಾಲ್ಯವಂತನು ತುಂಬಾ ನಾಚಿಕೊಂಡು, ಯಾವ ಉತ್ತರವನ್ನೂ ಕೊಡದಾದನು.॥14॥
ಮೂಲಮ್ - 15
ಜಯಾಶಿಷಾ ಚ ರಾಜಾನಂ ವರ್ಧಯಿತ್ವಾ ಯಥೋಚಿತಮ್ ।
ಮಾಲ್ಯವಾನಭ್ಯನುಜ್ಞಾತೋ ಜಗಾಮ ಸ್ವಂ ನಿವೇಶನಮ್ ॥
ಅನುವಾದ
ಮಾಲ್ಯವಂತನು ‘ಮಹಾರಾಜರಿಗೆ ಜಯವಾಗಲೀ’ ಎಂದು ವಿಜಯಸೂಚಕ ಆಶೀರ್ವಾದದಿಂದ ರಾಜನನ್ನು ಪ್ರೋತ್ಸಾಹಿಸಿ, ಅವನಿಂದ ಅಪ್ಪಣೆ ಪಡೆದು ತನ್ನ ಮನೆಗೆ ನಡೆದನು.॥15॥
ಮೂಲಮ್ - 16
ರಾವಣಸ್ತು ಸಹಾಮಾತ್ಯೋ ಮಂತ್ರಯಿತ್ವಾ ವಿಮೃಶ್ಯ ಚ ।
ಲಂಕಾಯಾಸ್ತು ತದಾ ಗುಪ್ತಿಂ ಕಾರಯಾಮಾಸ ರಾಕ್ಷಸಃ ॥
ಅನುವಾದ
ಬಳಿಕ ಮಂತ್ರಿಗಳ ಸಹಿತ ರಾವಣನು ಪರಸ್ಪರ ವಿಚಾರ ವಿಮರ್ಶೆಮಾಡಿ ತತ್ಕಾಲ ಲಂಕೆಯ ರಕ್ಷಣೆಯ ವ್ಯವಸ್ಥೆ ಮಾಡಿದನು.॥16॥
ಮೂಲಮ್ - 17
ವ್ಯಾದಿದೇಶ ಚ ಪೂರ್ವಸ್ಯಾಂ ಪ್ರಹಸ್ತಂ ದ್ವಾರಿ ರಾಕ್ಷಸಮ್ ।
ದಕ್ಷಿಣಸ್ಯಾಂ ಮಹಾವೀರ್ಯೌ ಮಹಾಪಾರ್ಶ್ವ ಮಹೋದರೌ ॥
ಮೂಲಮ್ - 18
ಪಶ್ಚಿಮಾಯಾಮಥ ದ್ವಾರಿ ಪುತ್ರಮಿಂದ್ರಜಿತಂ ತದಾ ।
ವ್ಯಾದಿದೇಶ ಮಹಾಮಾಯಂ ರಾಕ್ಷಸೈರ್ಬಹುಭಿರ್ವೃತಮ್ ॥
ಅನುವಾದ
ಅವನು ಪೂರ್ವದ್ವಾರದ ರಕ್ಷಣೆಗಾಗಿ ಪ್ರಹಸ್ತನನ್ನು ನೇಮಿಸಿದನು. ದಕ್ಷಿಣದ್ವಾರದಲ್ಲಿ ಮಹಾಪರಾಕ್ರಮಿ ಮಹಾಪಾರ್ಶ್ವ ಮತ್ತು ಮಹೋದರನ್ನು ನೇಮಿಸಿದನು. ಪಶ್ಚಿಮದ ಬಾಗಿಲಲ್ಲಿ ಮಹಾಮಾಯಾವಿಯಾದ ತನ್ನ ಮಗ ಇಂದ್ರಜಿತುವನ್ನು ಇರಿಸಿದನು. ಅವನು ಅನೇಕ ರಾಕ್ಷಸರಿಂದ ಸುತ್ತುವರಿದಿದ್ದನು.॥17-18॥
ಮೂಲಮ್ - 19
ಉತ್ತರಸ್ಯಾಂ ಪುರದ್ವಾರಿ ವ್ಯಾದಿಶ್ಯ ಶುಕಸಾರಣೌ ।
ಸ್ವಯಂ ಚಾತ್ರ ಗವಿಷ್ಯಾಮಿ ಮಂತ್ರಿಣಸ್ತಾನುವಾಚ ಹ ॥
ಅನುವಾದ
ಬಳಿಕ ನಗರದ ಉತ್ತರದ ದ್ವಾರದಲ್ಲಿ ಶುಕ-ಸಾರಣರಿಗೆ ರಕ್ಷಣೆಗಾಗಿ ಆಜ್ಞಾಪಿಸಿ, ರಾವಣನು ನಾನು ಸ್ವತಃ ಉತ್ತರ ದಿಕ್ಕಿನ ದ್ವಾರಕ್ಕೆ ಹೋಗುವೆನು ಎಂದು ಮಂತ್ರಿಗಳಲ್ಲಿ ಹೇಳಿದನು.॥19॥
ಮೂಲಮ್ - 20
ರಾಕ್ಷಸಂ ತು ವಿರೂಪಾಕ್ಷಂ ಮಹಾವೀರ್ಯ ಪರಾಕ್ರಮಮ್ ।
ಮಧ್ಯಮೇಽಸ್ಥಾಪಯದ್ ಗುಲ್ಮೇ ಬಹುಭಿಃ ಸಹ ರಾಕ್ಷಸೈಃ ॥
ಅನುವಾದ
ನಗರದ ಸೈನಿಕ ಪ್ರದೇಶದ ರಕ್ಷಣೆಗಾಗಿ ಅಸಂಖ್ಯ ರಾಕ್ಷಸರ ಜೊತೆಗೆ ಮಹಾಬಲ ಪರಾಕ್ರಮಿ ರಾಕ್ಷಸ ವಿರೂಪಾಕ್ಷನನ್ನು ನೇಮಿಸಿದನು.॥20॥
ಮೂಲಮ್ - 21
ಏವಂ ವಿಧಾನಂ ಲಂಕಾಯಾಂ ಕೃತ್ವಾ ರಾಕ್ಷಸಪುಂಗವಃ ।
ಕೃತಕೃತ್ಯಮಿವಾತ್ಮಾನಂ ಮನ್ಯತೇ ಕಾಲಚೋದಿತಃ ॥
ಅನುವಾದ
ಹೀಗೆ ಲಂಕಾಪುರಿಯ ರಕ್ಷಣೆಯ ವ್ಯವಸ್ಥೆ ಮಾಡಿ, ಕಾಲ-ಪ್ರೇರಿತನಾದ ರಾಕ್ಷಸ ಶ್ರೇಷ್ಠ ರಾವಣನು ತನ್ನನ್ನು ಕೃತಕೃತ್ಯನೆಂದು ತಿಳಿಯತೊಡಗಿದನು.॥21॥
ಮೂಲಮ್ - 22
ವಿಸರ್ಜಯಾಮಾಸ ತತಃ ಸ ಮಂತ್ರಿಣೋ
ವಿಧಾನಮಾಜ್ಞಾಪ್ಯ ಪುರಸ್ಯ ಪುಷ್ಕಲಮ್ ।
ಜಯಾಶಿಷಾ ಮಂತ್ರಿಗಣೇನ ಪೂಜಿತೋ
ವಿವೇಶ ಸೋಂಽತಃಪುರಮೃದ್ಧಿ ಮನ್ಮಹತ್ ॥
ಅನುವಾದ
ಈ ಪ್ರಕಾರ ನಗರ ರಕ್ಷಣೆಗಾಗಿ ಸಾಕಷ್ಟು ವ್ಯವಸ್ಥೆಗಾಗಿ ಆಜ್ಞಾಪಿಸಿ ರಾವಣನು ಎಲ್ಲ ಮಂತ್ರಿಗಳನ್ನು ಬೀಳ್ಕೊಟ್ಟನು, ಅವರ ವಿಜಯ ಸೂಚಕ ಆಶೀರ್ವಾದಗಳಿಂದ ಸಮ್ಮಾನಿತನಾಗಿ, ತನ್ನ ಸಮೃದ್ಧಶಾಲೀ ಮತ್ತು ವಿಶಾಲವಾದ ಅಂತಃಪುರಕ್ಕೆ ನಡೆದನು.॥22॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತಾರನೆಯ ಸರ್ಗ ಪೂರ್ಣವಾಯಿತು.॥36॥