०३५ सरमया रावणनिर्धारकथनम्

वाचनम्
ಭಾಗಸೂಚನಾ

ಮಾಲ್ಯವಂತನು ರಾವಣನಿಗೆ ರಾಮನೊಂದಿಗೆ ಸಂಧಿಮಾಡಿಕೊಳ್ಳುವಂತೆ ಸಮಜಾಯಿಸಿದುದು

ಮೂಲಮ್ - 1

ತೇನ ಶಂಖವಿಮಿಶ್ರೇಣ ಭೇರೀ ಶಬ್ದೇನ ನಾದಿನಾ ।
ಉಪಯಾತಿ ಮಹಾಬಾಹೂ ರಾಮಃ ಪರಪುರಂಜಯಃ ॥

ಅನುವಾದ

ಶತ್ರುನಗರವನ್ನು ಜಯಿಸುವ ಮಹಾಬಾಹು ಶ್ರೀರಾಮನು ಶಂಖಧ್ವನಿಯಿಂದ ಮಿಶ್ರಿತವಾದ ತುಮುಲ ನಾದ ಮಾಡುವ ಭೇರಿಯ ಶಬ್ದದೊಂದಿಗೆ ಲಂಕೆಯ ಮೇಲೆ ಆಕ್ರಮಣ ಮಾಡಿದನು.॥1॥

ಮೂಲಮ್ - 2

ತಂ ನಿನಾದಂ ನಿಶಮ್ಯಾಥ ರಾವಣೋ ರಾಕ್ಷಸೇಶ್ವರಃ ।
ಮುಹೂರ್ತಂ ಧ್ಯಾನಮಾಸ್ಥಾಯ ಸಚಿವಾನಭ್ಯುದೈಕ್ಷತ ॥

ಅನುವಾದ

ಆ ಭೇರಿಯ ನಾದ ಕೇಳಿ ರಾಕ್ಷಸರಾಜ ರಾವಣನು ಎರಡು ಗಳಿಗೆ ಏನೋ ವಿಚಾರಮಾಡಿದ ಬಳಿಕ ತನ್ನ ಮಂತ್ರಿಗಳ ಕಡೆಗೆ ನೋಡಿದನು.॥2॥

ಮೂಲಮ್ - 3½

ಅಥ ತಾನ್ಸಚಿವಾಂಸ್ತತ್ರ ಸರ್ವಾನಾಭಾಷ್ಯ ರಾವಣಃ ।
ಸಭಾಂ ಸಂನಾದಯನ್ ಸರ್ವಾಮಿತ್ಯುವಾಚ ಮಹಾಬಲಃ ॥
ಜಗತ್ಸಂತಾಪನಃ ಕ್ರೂರೋಽಗರ್ಹಯನ್ ರಾಕ್ಷಸೇಶ್ವರಃ ।

ಅನುವಾದ

ಎಲ್ಲ ಮಂತ್ರಿಗಳನ್ನು ಸಂಬೋಧಿಸುತ್ತಾ ಜಗತ್ತಿಗೆ ಸಂತಾಪ ನೀಡುತ್ತಿರುವ ಮಹಾಬಲೀ, ಕ್ರೂರಿ ರಾವಣನು ಇಡೀ ಸಭೆಯನ್ನು ಪ್ರತಿಧ್ವನಿಸುತ್ತಾ ಯಾರನ್ನು ಆಕ್ಷೇಪಿಸದೆ ಹೇಳಿದನು.॥3॥

ಮೂಲಮ್ - 4

ತರಣಂ ಸಾಗರಸ್ಯಾಸ್ಯ ವಿಕ್ರಮಂ ಬಲಪೌರುಷಮ್ ॥

ಮೂಲಮ್ - 5

ಯದುಕ್ತವಂತೋ ರಾಮಸ್ಯ ಭವಂತಸ್ತನ್ಮಯಾ ಶ್ರುತಮ್ ।
ಭವತಶ್ಚಾಪ್ಯಹಂ ವೇದ್ಮಿ ಯುದ್ಧೇ ಸತ್ಯಪರಾಕ್ರಮಾನ್ ।
ತೂಷ್ಣೀಕಾನೀಕ್ಷತೋಽನ್ಯೋನ್ಯಂ ವಿದಿತ್ವಾ ರಾಮವಿಕ್ರಮಮ್ ॥

ಅನುವಾದ

ರಾಮನ ಪರಾಕ್ರಮ, ಬಲಪೌರುಷ ಹಾಗೂ ಸಮುದ್ರಲಂಘನ ಮುಂತಾದ ಮಾತುಗಳೆಲ್ಲವನ್ನು ನೀವು ಹೇಳಿದುದು ನಾನು ಕೇಳಿಕೊಂಡೆ; ಆದರೆ ಈಗ ರಾಮನ ಪರಾಕ್ರಮವನ್ನು ತಿಳಿದು ಸುಮ್ಮನೇ ಒಬ್ಬರು ಮತ್ತೊಬ್ಬರ ಮುಖ ನೋಡುತ್ತಿರುವ ನೀವು ರಣರಂಗದಲ್ಲಿ ಸತ್ಯಪರಾಕ್ರಮೀ ವೀರರೆಂದೇ ನಾನು ತಿಳಿಯುತ್ತೇನೆ.॥4-5॥

ಮೂಲಮ್ - 6

ತತಸ್ತು ಸುಮಹಾಪ್ರಾಜ್ಞೊ ಮಾಲ್ಯವಾನ್ನಾಮ ರಾಕ್ಷಸಃ ।
ರಾವಣಸ್ಯ ವಚಃ ಶ್ರುತ್ವಾ ಇತಿ ಮಾತಾಮಹೋಽಬ್ರವೀತ್ ॥

ಅನುವಾದ

ರಾವಣನ ಈ ಕೊಂಕುನುಡಿಯನ್ನು ಕೇಳಿದ ಬಳಿಕ ರಾವಣನ ತಾತನಾದ ಮಹಾಬುದ್ಧಿವಂತ ಮಾಲ್ಯವಂತ ಎಂಬ ರಾಕ್ಷಸನು ಈ ಪ್ರಕಾರ ಹೇಳಿದನು.॥6॥

ಮೂಲಮ್ - 7

ವಿದ್ಯಾಸ್ವಭಿವಿನೀತೋ ಯೋ ರಾಜಾ ರಾಜನ್ ನಯಾನುಗಃ ।
ಸ ಶಾಸ್ತಿ ಚಿರಮೈಶ್ವರ್ಯಮರೀಂಶ್ಚ ಕುರುತೇ ವಶೇ ॥

ಅನುವಾದ

ರಾಜನೇ! ಹದಿನಾಲ್ಕು ವಿದ್ಯೆಗಳಲ್ಲಿ ಸುಶಿಕ್ಷಿತ ಮತ್ತು ನೀತಿಯನ್ನು ಅನುಸರಿಸುವ ರಾಜನು ದೀರ್ಘಕಾಲ ರಾಜ್ಯವನ್ನು ಆಳುವನು. ಅವನು ಶತ್ರುಗಳನ್ನು ಕೂಡ ವಶಪಡಿಸಿ ಕೊಳ್ಳುವನು.॥7॥

ಮೂಲಮ್ - 8

ಸಂದಧಾನೋ ಹಿ ಕಾಲೇನ ವಿಗೃಹ್ಣಂಶ್ಚಾರಿಭಿಃ ಸಹ ।
ಸ್ವಪಕ್ಷೇ ವರ್ಧನಂ ಕುರ್ವನ್ಮಹದೈಶ್ವರ್ಯಮಶ್ನುತೇ ॥

ಅನುವಾದ

ಸಮಯಕ್ಕನುಸಾರ ಆವಶ್ಯಕತೆ ಬಿದ್ದಾಗ ಶತ್ರುಗಳೊಂದಿಗೆ ಸಂಧಿ-ವಿಗ್ರಹ ಮಾಡುವವನು, ತನ್ನ ಪಕ್ಷದ ವೃದ್ಧಿಯಲ್ಲಿ ತೊಡಗಿರುವವನು ಮಹಾ ಐಶ್ವರ್ಯಕ್ಕೆ ಭಾಗಿಯಾಗುತ್ತಾನೆ.॥8॥

ಮೂಲಮ್ - 9

ಹೀಯಮಾನೇನ ಕರ್ತವ್ಯೋ ರಾಜ್ಞಾ ಸಂಧಿಃ ಸಮೇನ ಚ ।
ನ ಶತ್ರುಮವಮನ್ಯೇತ ಜ್ಯಾಯಾನ್ ಕುರ್ವೀತ ವಿಗ್ರಹಮ್ ॥

ಅನುವಾದ

ಯಾವ ರಾಜನ ಶಕ್ತಿಯು ಕ್ಷೀಣವಾಗಿದೆಯೋ, ಅಥವಾ ಯಾರು ಶತ್ರುವಿನಂತೆ ಶಕ್ತಿಶಾಲಿಯಾಗಿದ್ದಾನೋ, ಅವನು ಸಂಧಿಮಾಡಿಕೊಳ್ಳಬೇಕು. ತನಗಿಂತ ಹೆಚ್ಚು ಇಲ್ಲವೇ ಸಮಾನ ಶಕ್ತಿಯುಳ್ಳ ಶತ್ರುವನ್ನು ಎಂದಿಗೂ ಅಪಮಾನ ಮಾಡಬಾರದು. ಸ್ವತಃ ಶಕ್ತಿಯಲ್ಲಿ ಹೆಚ್ಚಿನವನಾಗಿದ್ದರೆ ಆಗ ಶತ್ರುವಿನೊಂದಿಗೆ ಯುದ್ಧ ಸಾರಬೇಕು.॥9॥

ಮೂಲಮ್ - 10

ತನ್ಮಹ್ಯಂ ರೋಚತೇ ಸಂಧಿಃ ಸಹ ರಾಮೇಣ ರಾವಣ ।
ಯದರ್ಥಮಭಿಯುಕ್ತೋಽಸಿ ಸೀತಾ ತಸ್ಮೈ ಪ್ರದೀಯತಾಮ್ ॥

ಅನುವಾದ

ಅದಕ್ಕೆ ರಾವಣನೇ! ನನಗಾದರೋ ಶ್ರೀರಾಮನೊಂದಿಗೆ ಸಂಧಿ ಮಾಡಿಕೊಳ್ಳುವುದೇ ಸರಿ ಎಂದು ಅನಿಸುತ್ತದೆ. ಯಾರಿಗಾಗಿ ನಿನ್ನ ಮೇಲೆ ಆಕ್ರಮಣವಾಗಿದೆಯೋ ಆ ಸೀತೆಯನ್ನು ನೀನು ರಾಮನಿಗೆ ಹಿಂದಿರುಗಿಸು.॥10॥

ಮೂಲಮ್ - 11

ತಸ್ಯ ದೇವರ್ಷಯಃ ಸರ್ವೇ ಗಂಧರ್ವಾಶ್ಚ ಜಯೈಷಿಣಃ ।
ವಿರೋಧಂ ಮಾ ಗಮಸ್ತೇನ ಸಂಧಿಸ್ತೇ ತೇನ ರೋಚತಾಮ್ ॥

ಅನುವಾದ

ನೋಡು, ದೇವತೆಗಳು, ಋಷಿಗಳು, ಗಂಧರ್ವರು ಎಲ್ಲರೂ ಶ್ರೀರಾಮನ ವಿಜಯವನ್ನು ಬಯಸುತ್ತಾರೆ; ಆದ್ದರಿಂದ ನೀನು ಅವನಲ್ಲಿ ವಿರೋಧಮಾಡಬೇಡ. ಅವನೊಂದಿಗೆ ಸಂಧಿಮಾಡಿಕೊಳ್ಳಲು ಇಚ್ಛಿಸು.॥11॥

ಮೂಲಮ್ - 12

ಅಸೃಜದ್ ಭಗವಾನ್ ಪಕ್ಷೌ ದ್ವಾವೇವ ಹಿ ಪಿತಾಮಹಃ ।
ಸುರಾಣಾಮಸುರಾಣಾಂ ಚ ಧರ್ಮಾಧರ್ಮೌ ತದಾಶ್ರಯೌ ॥

ಅನುವಾದ

ಭಗವಾನ್ ಬ್ರಹ್ಮದೇವರು ಸುರ ಮತ್ತು ಅಸುರ ಎಂಬ ಎರಡೇ ಪಕ್ಷಗಳನ್ನು ಸೃಷ್ಟಿಸಿರುವನು. ಧರ್ಮ ಮತ್ತು ಅಧರ್ಮವೇ ಇವರ ಆಶ್ರಯವಾಗಿದೆ.॥12॥

ಮೂಲಮ್ - 13

ಧರ್ಮೋ ಹಿ ಶ್ರೂಯತೇ ಪಕ್ಷ ಅಮರಾಣಾಂ ಮಹಾತ್ಮನಾಮ್ ।
ಅಧರ್ಮೋ ರಕ್ಷಸಾಂ ಪಕ್ಷೋ ಹ್ಯಸುರಾಣಾಂ ಚ ರಾಕ್ಷಸ ॥

ಅನುವಾದ

ಮಹಾತ್ಮಾ ದೇವತೆಗಳ ಪಕ್ಷ ಧರ್ಮವಾಗಿದೆ. ರಾಕ್ಷಸ ರಾಜನೇ! ರಾಕ್ಷಸರ ಮತ್ತು ಅಸುರರ ಪಕ್ಷ ಅಧರ್ಮವಾಗಿದೆ ಎಂದು ಕೇಳಲಾಗುತ್ತದೆ.॥13॥

ಮೂಲಮ್ - 14

ಧರ್ಮೋ ವೈ ಗ್ರಸತೇಽಧರ್ಮಂ ಯದಾ ಕೃತಮಭೂದ್ಯುಗಮ್ ।
ಅಧರ್ಮೋ ಗ್ರಸತೇ ಧರ್ಮಂ ಯದಾ ಸ್ತಿಷ್ಯಃ ಪ್ರವರ್ತತೇ ॥

ಅನುವಾದ

ಸತ್ಯಯುಗವಿದ್ದಾಗ ಧರ್ಮವು ಬಲಿಷ್ಠನಾಗಿ ಅಧರ್ಮವನ್ನು ನುಂಗಿಹಾಕುತ್ತದೆ ಮತ್ತು ಕಲಿಯುಗ ಬಂದಾಗ ಅಧರ್ಮವೇ ಧರ್ಮವನ್ನು ತುಳಿದು ಬಿಡುತ್ತದೆ.॥14॥

ಮೂಲಮ್ - 15

ತತ್ತ್ವಯಾ ಚರತಾ ಲೋಕಾನ್ ಧರ್ಮೋಽಪಿ ನಿಹತೋ ಮಹಾನ್ ।
ಅಧರ್ಮಃ ಪ್ರಗೃಹೀತಶ್ಚ ತೇನಾಸ್ಮದ್ಬಲಿನಃ ಪರೇ ॥

ಅನುವಾದ

ನೀನು ದಿಗ್ವಿಜಯಕ್ಕಾಗಿ ಎಲ್ಲ ಲೋಕಗಳಲ್ಲಿ ಸಂಚರಿಸುತ್ತಾ ಧರ್ಮವನ್ನು ನಾಶಮಾಡಿರುವೆ ಹಾಗೂ ಅಧರ್ಮವನ್ನು ತನ್ನದಾಗಿಸಿಕೊಂಡಿರುವೆ, ಅದಕ್ಕಾಗಿ ನಮ್ಮ ಶತ್ರುಗಳು ನಮಗಿಂತ ಪ್ರಬಲರಾಗಿದ್ದಾರೆ.॥15॥

ಮೂಲಮ್ - 16

ಸ ಪ್ರಮಾದಾತ್ ಪ್ರವೃದ್ಧಸ್ತೇಽಧರ್ಮೋಽಹಿರ್ಗ್ರಸತೇ ಹಿ ನಃ ।
ವಿವರ್ಧಯತಿ ಪಕ್ಷಂ ಚ ಸುರಾಣಾಂ ಸುರಭಾವನಃ ॥

ಅನುವಾದ

ನಿನ್ನ ಪ್ರಮಾದದಿಂದ ಬೆಳೆದಿರುವ ಅಧರ್ಮರೂಪೀ ಹೆಬ್ಬಾವು ಈಗ ನಮ್ಮನ್ನು ನುಂಗಲು ಬಯಸುತ್ತಿದೆ. ದೇವತೆಗಳಿಂದ ಪಾಲಿಸಲ್ಪಟ್ಟ ಧರ್ಮವು ಶತ್ರುಪಕ್ಷವನ್ನು ವೃದ್ಧಿಮಾಡುತ್ತಾ ಇದೆ.॥16॥

ಮೂಲಮ್ - 17

ವಿಷಯೇಷು ಪ್ರಸಕ್ತೇನ ಯತ್ ಕಾಚಿತ್ ಕಾರಿಣಾ ತ್ವಯಾ ।
ಋಷೀಣಾಮಗ್ನಿ ಕಲ್ಪಾನಾಮುದ್ವೇಗೋ ಜನಿತೋ ಮಹಾನ್ ॥

ಅನುವಾದ

ವಿಷಯಗಳಲ್ಲಿ ಆಸಕ್ತನಾಗಿ ಏನನ್ನೂ ಮಾಡುವ ನೀನು, ಮನಸ್ವೀ ಆಚರಣ ಮಾಡಿದ್ದರಿಂದ ಅಗ್ನಿಯಂತಹ ತೇಜಸ್ವೀ ಋಷಿಗಳಿಗೆ ಭಾರೀ ಉದ್ವೇಗ ಉಂಟಾಗಿದೆ.॥17॥

ಮೂಲಮ್ - 18

ತೇಷಾಂ ಪ್ರಭಾವೋ ದುರ್ಧರ್ಷಃ ಪ್ರದೀಪ್ತ ಇವ ಪಾವಕಃ ।
ತಪಸಾ ಭಾವಿತಾತ್ಮಾನೋ ಧರ್ಮಸ್ಯಾನುಗ್ರಹೇ ರತಾಃ ॥

ಅನುವಾದ

ಅವರ ಪ್ರಭಾವ ಉರಿಯುವ ಅಗ್ನಿಯಂತೆ ದುರ್ಧರ್ಷವಾಗಿದೆ. ಆ ಋಷಿ ಮುನಿಗಳು ತಪಸ್ಸಿನ ಆಚರಣೆಯಿಂದ ತಮ್ಮ ಅಂತಃಕರಣವನ್ನು ಶುದ್ಧಗೊಳಿಸಿ ಕೊಂಡು ಧರ್ಮದ ಸಂಗ್ರಹದಲ್ಲೇ ತತ್ಪರರಾಗಿರುತ್ತಾರೆ.॥18॥

ಮೂಲಮ್ - 19

ಮುಖ್ಯೈರ್ಯಜ್ಞೈರ್ಯಜಂತ್ಯೇತೇ ತೈಸ್ತೈರ್ಯತ್ತೇ ದ್ವಿಜಾತಯಃ ।
ಜುಹ್ವತ್ಯಗ್ನೀಂಶ್ಚ ವಿಧಿವದ್ವೇದಾಂಶ್ಚೋಚ್ಚೈರಧೀಯತೇ ॥

ಅನುವಾದ

ಈ ದ್ವಿಜರು ಮುಖ್ಯ-ಮುಖ್ಯ ಯಜ್ಞಗಳ ಮೂಲಕ ಯಜನ ಮಾಡುತ್ತಾರೆ. ವಿಧಿವತ್ತಾಗಿ ಅಗ್ನಿಯಲ್ಲಿ ಆಹುತಿಗಳನ್ನು ಕೊಟ್ಟು, ಉಚ್ಚಸ್ವರದಲ್ಲಿ ವೇದಗಳನ್ನು ಪಠಿಸುತ್ತಾರೆ.॥19॥

ಮೂಲಮ್ - 20

ಅಭಿಭೂಯ ಚ ರಕ್ಷಾಂಸಿ ಬ್ರಹ್ಮಘೋಷಾನುದೀರಯನ್ ।
ದಿಶೋ ವಿಪ್ರದ್ರುತಾಃ ಸರ್ವಾಃ ಸ್ತನಯಿತ್ನುರಿವೋಷ್ಣಗೇ ॥

ಅನುವಾದ

ಅವರು ರಾಕ್ಷಸರನ್ನು ಸೋಲಿಸಿ ವೇದಮಂತ್ರಗಳ ಧ್ವನಿಯನ್ನು ವಿಸ್ತಾರಗೊಳಿಸಿರುವರು, ಅದಕ್ಕಾಗಿ ಗ್ರೀಷ್ಮ ಋತುವಿನಲ್ಲಿ ಮೇಘಗಳಂತೆ ರಾಕ್ಷಸರು ಎಲ್ಲ ದಿಕ್ಕುಗಳಿಗೆ ಓಡಿ ಹೋಗುತ್ತಾರೆ.॥20॥

ಮೂಲಮ್ - 21

ಋಷೀಣಾಮಗ್ನಿಕಲ್ಪಾನಾಮಗ್ನಿಹೋತ್ರಸಮುತ್ಥಿತಃ ।
ಆದತ್ತೇ ರಕ್ಷಸಾಂ ತೇಜೋ ಧೂಮೋ ವ್ಯಾಪ್ಯ ದಿಶೋ ದಶ ॥

ಅನುವಾದ

ಬೆಂಕಿಯಂತಹ ತೇಜಸ್ವೀ ಋಷಿಗಳ ಅಗ್ನಿಹೋತ್ರದಿಂದ ಪ್ರಕಟ ವಾದ ಹೊಗೆಯು ಹತ್ತುದಿಕ್ಕುಗಳಲ್ಲಿಯೂ ವ್ಯಾಪಿಸಿ ರಾಕ್ಷಸರ ತೇಜವನ್ನು ಅಪಹರಿಸುತ್ತದೆ.॥21॥

ಮೂಲಮ್ - 22

ತೇಷು ತೇಷು ಚ ದೇಶೇಷು ಪುಣ್ಯೇಷ್ವೇವ ದೃಢವ್ರತೈಃ ।
ಚರ್ಯಮಾಣಂ ತಪಸ್ತೀವ್ರಂ ಸಂತಾಪಯತಿ ರಾಕ್ಷಸಾನ್ ॥

ಅನುವಾದ

ಬೇರೆ ಬೇರೆ ದೇಶಗಳಲ್ಲಿ ಪುಣ್ಯಕರ್ಮಗಳಲ್ಲೇ ತೊಡಗಿದ್ದು, ದೃಢತೆಯಿಂದ ಉತ್ತಮ ವ್ರತವನ್ನು ಪಾಲಿಸುವ ಋಷಿಗಳು ಮಾಡುವ ತೀವ್ರ ತಪಸ್ಸೇ ರಾಕ್ಷಸರಿಗೆ ಸಂತಾಪಕೊಡುತ್ತಾ ಇದೆ.॥22॥

ಮೂಲಮ್ - 23

ದೇವದಾನವಯಕ್ಷೇಭ್ಯೋ ಗೃಹೀತಶ್ಚ ವರಸ್ತ್ವಯಾ ।
ಮನುಷ್ಯಾ ವಾನರಾ ಋಕ್ಷಾ ಗೋಲಾಂಗೂಲಾ ಮಹಾಬಲಾಃ ।
ಬಲವಂತ ಇಹಾಗಮ್ಯ ಗರ್ಜಂತಿ ದೃಢವಿಕ್ರಮಾಃ ॥

ಅನುವಾದ

ನೀನು ದೇವತೆಗಳಿಂದ, ದಾನವರಿಂದ, ರಾಕ್ಷಸರಿಂದಲೇ ಅವಧ್ಯನಾಗಲು ವರ ಪಡೆದಿರುವೆ, ಆದರೆ ಮನುಷ್ಯರಿಂದ ಇಲ್ಲ. ಆದರೆ ಇಲ್ಲಾದರೋ ಮನುಷ್ಯರು, ವಾನರರು, ಕರಡಿಗಳು, ಗೋಲಾಂಗೂಲರು ಬಂದು ಗರ್ಜಿಸುತ್ತಿದ್ದಾರೆ. ಅವರೆಲ್ಲರೂ ಭಾರೀ ಬಲವಂತರೂ, ಸೈನ್ಯಶಕ್ತಿಯಿಂದ ಸಂಪನ್ನರೂ, ಸುದೃಢ ಪರಾಕ್ರಮಿಗಳೂ ಆಗಿದ್ದಾರೆ.॥23॥

ಮೂಲಮ್ - 24

ಉತ್ಪಾತಾನ್ ವಿವಿಧಾನ್ ದೃಷ್ಟ್ವಾ ಘೋರಾನ್ ಬಹುವಿಧಾನ್ ಬಹೂನ್ ।
ವಿನಾಶಮನುಪಶ್ಯಾಮಿ ಸರ್ವೇಷಾಂ ರಕ್ಷಸಾಮಹಮ್ ॥

ಅನುವಾದ

ಅನೇಕ ಪ್ರಕಾರದ ಬಹಳಷ್ಟು ಭಯಂಕರ ಉತ್ಪಾತಗಳನ್ನು ಗಮನಿಸಿ, ಈ ರಾಕ್ಷಸರೆಲ್ಲರ ವಿನಾಶದ ಸಂದರ್ಭವೇ ಇದಿರಾಗಿದೆ ಎಂದು ನೋಡುತ್ತಾ ಇದ್ದೇನೆ.॥24॥

ಮೂಲಮ್ - 25

ಖರಾಭಿಸ್ತನಿತಾ ಘೋರಾ ಮೇಘಾಃ ಪ್ರತಿಭಯಂಕರಾಃ ।
ಶೋಣಿತೇನಾಭಿವರ್ಷಂತಿ ಲಂಕಾಮುಷ್ಣೇನ ಸರ್ವತಃ ॥

ಅನುವಾದ

ಘೋರ, ಭಯಂಕರ ಮೇಘಗಳು ಪ್ರಚಂಡವಾಗಿ ಗರ್ಜಿಸುತ್ತಾ ಲಂಕೆಯ ಮೇಲೆ ಎಲ್ಲೆಡೆ ಬಿಸಿಯಾದ ರಕ್ತದ ಮಳೆಯನ್ನೇ ಸುರಿಸುತ್ತಿವೆ.॥25॥

ಮೂಲಮ್ - 26

ರುದತಾಂ ವಾಹನಾನಾಂ ಚ ಪ್ರಪತನ್ ತ್ಯಶ್ರುಬಿಂದವಃ ।
ರಜೋ ಧ್ವಸ್ತಾ ವಿವರ್ಣಾಶ್ಚ ನ ಪ್ರಭಾಂತಿ ಯಥಾ ಪುರಮ್ ॥

ಅನುವಾದ

ಆನೆ-ಕುದುರೆಗಳು ಅಳುತ್ತಿವೆ, ಅವುಗಳ ಕಣ್ಣುಗಳಿಂದ ಕಣ್ಣೀರು ತೊಟ್ಟಿಕುತ್ತಿದೆ. ದಿಕ್ಕುಗಳು ಧೂಳಿನಿಂದ ತುಂಬಿ ಮಲಿನವಾಗಿ ಈಗ ಮೊದಲಿನಂತೆ ಪ್ರಕಾಶಿಸುವುದಿಲ್ಲ.॥26॥

ಮೂಲಮ್ - 27

ವ್ಯಾಲಾ ಗೋಮಾಯವೋ ಗೃಧ್ರಾ ವಾಶ್ಯಂತಿ ಚ ಸುಭೈರವಮ್ ।
ಪ್ರವಿಶ್ಯ ಲಂಕಾಮಾರಾಮೇ ಸಮವಾಯಾಂಶ್ಚ ಕುರ್ವತೇ ॥

ಅನುವಾದ

ಮಾಂಸಾಹಾರಿ ಹಿಂಸಕ ಪಶುಗಳು, ರಣಹದ್ದು, ಗಿಡುಗಗಳು ಭಯಂಕರವಾಗಿ ಕೂಗುತ್ತಾ ಲಂಕೆಯ ಉಪವನವನ್ನು ಹೊಕ್ಕು ಗುಂಪುಗುಂಪಾಗಿ ಕುಳಿತಿವೆ.॥27॥

ಮೂಲಮ್ - 28

ಕಾಲಿಕಾಃ ಪಾಂಡುರೈರ್ದಂತೈಃ ಪ್ರಹಸನ್ತ್ಯಗ್ರತಃ ಸ್ಥಿತಾಃ ।
ಸ್ತ್ರಿಯಃ ಸ್ವಪ್ನೇಷು ಮುಷ್ಣಂತ್ಯೋ ಗೃಹಾಣಿ ಪ್ರತಿಭಾಷ್ಯ ಚ ॥

ಅನುವಾದ

ಸ್ವಪ್ನದಲ್ಲಿ ಕಪ್ಪಾದ ಸ್ತ್ರೀಯರು ತಮ್ಮ ಹಳದಿ ಹಲ್ಲುಗಳನ್ನು ತೋರಿಸುತ್ತಾ ಎದುರಿಗೆ ಬಂದು ನಿಲ್ಲುವರು ಮತ್ತು ಪ್ರತಿಕೂಲ ಮಾತುಗಳನ್ನಾಡುತ್ತಾ ಮನೆಯ ವಸ್ತುಗಳನ್ನು ಕದ್ದು ಜೋರಾಗಿ ನಗುತ್ತಿರುವರು.॥28॥

ಮೂಲಮ್ - 29

ಗೃಹಾಣಾಂ ಬಲಿಕರ್ಮಾಣಿ ಶ್ವಾನಃ ಪರ್ಯುಪಭುಂಜತೇ ।
ಖರಾ ಗೋಷು ಪ್ರಜಾಯಂತೇ ಮೂಷಿಕಾ ನಕುಲೇಷು ಚ ॥

ಅನುವಾದ

ಮನೆಗಳಲ್ಲಿ ಮಾಡುವ ಬಲಿಕರ್ಮದ ಬಲಿಯನ್ನು ನಾಯಿಗಳು ತಿಂದುಬಿಡುತ್ತವೆ. ದನಗಳಿಂದ ಕತ್ತೆಗಳು ಮತ್ತು ಮುಂಗುಸಿಯಿಂದ ಇಲಿಗಳು ಹುಟ್ಟುತ್ತವೆ.॥29॥

ಮೂಲಮ್ - 30

ಮಾರ್ಜಾರಾ ದ್ವೀಪಿಭಿಃ ಸಾರ್ಧಂ ಸೂಕರಾಃ ಶುನಕೈಃ ಸಹ ।
ಕಿಂನರಾ ರಾಕ್ಷಸೈಶ್ಚಾಪಿ ಸಮೀಯುರ್ಮಾನುಷೈಃ ಸಹ ॥

ಅನುವಾದ

ಹುಲಿಗಳ ಜೊತೆಗೆ ಬೆಕ್ಕುಗಳು, ನಾಯಿಗಳೊಂದಿಗೆ ಹಂದಿಗಳು, ರಾಕ್ಷಸರು ಮತ್ತು ಮನುಷ್ಯರೊಂದಿಗೆ ಕಿನ್ನರರು ಸಮಾಗಮ ಮಾಡುತ್ತಿವೆ.॥30॥

ಮೂಲಮ್ - 31

ಪಾಂಡುರಾ ರಕ್ತಪಾದಾಶ್ಚ ವಿಹಗಾಃ ಕಾಲಚೋದಿತಾಃ ।
ರಾಕ್ಷಸಾನಾಂ ವಿನಾಶಾಯ ಕಪೋತಾ ವಿಚರಂತಿ ಚ ॥

ಅನುವಾದ

ಬಿಳಿಯ ರೆಕ್ಕೆ ಮತ್ತು ಕೆಂಪಾದ ಕಾಲುಗಳುಳ್ಳ ಪಾರಿವಾಳಗಳು ದೈವಪ್ರೇರಣೆಯಿಂದ ರಾಕ್ಷಸರ ಭಾವೀ ವಿನಾಶವನ್ನು ಸೂಚಿಸುತ್ತಾ ಎಲ್ಲೆಡೆ ಸುತ್ತುತ್ತಿವೆ.॥31॥

ಮೂಲಮ್ - 32

ಚೀಚೀಕೂಚೀತಿ ವಾಶಂತ್ಯಃ ಶಾರಿಕಾ ವೇಶ್ಮಸು ಸ್ಥಿತಾ ।
ಪತಂತಿ ಗ್ರಥಿತಾಶ್ಚಾಪಿ ನಿರ್ಜಿತಾಃ ಕಲಹೈಷಿಭಿಃ ॥

ಅನುವಾದ

ಮನೆಗಳಲ್ಲಿದ್ದ ಸಾರಿಕ ಪಕ್ಷಿಗಳು ಕಲಹದ ಇಚ್ಛೆಯಿಂದ ಇತರ ಪಕ್ಷಿಗಳೊಂದಿಗೆ ಚೂ, ಚೂ ಮಾಡುತ್ತಾ ಜಗಳಕ್ಕಿಳಿದು ಅವುಗಳಿಂದ ಸೋತು ನೆಲಕ್ಕೆ ಬಿದ್ದು ಬಿಡುತ್ತಿವೆ.॥32॥

ಮೂಲಮ್ - 33½

ಪಕ್ಷಿಣಶ್ಚ ಮೃಗಾಃ ಸರ್ವೇ ಪ್ರತ್ಯಾದಿತ್ಯಂ ರುದಂತಿ ಚ ।
ಕರಾಲೋ ವಿಕಟೋ ಮುಂಡಃ ಪುರುಷಃ ಕೃಷ್ಣಪಿಂಗಲಃ ॥
ಕಾಲೋ ಗೃಹಾಣಿ ಸರ್ವೇಷಾಂ ಕಾಲೇ ಕಾಲೇಽನ್ವವೇಕ್ಷತೇ ।

ಅನುವಾದ

ಮೃಗ-ಪಕ್ಷಿಗಳು ಸೂರ್ಯನತ್ತ ಮುಖಮಾಡಿ ಕೂಗುತ್ತಿವೆ. ವಿಕರಾಳ, ವಿಕಟ ಕಪ್ಪು ಮತ್ತು ಬೂದು ಬಣ್ಣದ ತಲೆ ಬೋಳಿಸಿದ ಪುರುಷರ ರೂಪವನ್ನು ಧರಿಸಿ ಕಾಲನೇ ನಮ್ಮೆಲ್ಲರ ಮನೆಗಳ ಕಡೆಗೆ ನೋಡುತ್ತಿರುವನು.॥33½॥

ಮೂಲಮ್ - 34

ಏತಾನ್ಯನ್ಯಾನಿ ದುಷ್ಟಾನಿ ನಿಮಿತ್ತಾನ್ಯು ತ್ಪತಂತಿ ಚ ॥

ಮೂಲಮ್ - 35

ವಿಷ್ಣುಂ ಮನ್ಯಾಮಹೇ ರಾಮಂ ಮಾನುಷಂ ರೂಪಮಾಸ್ಥಿತಮ್ ।
ನ ಹಿ ಮಾನುಷಮಾತ್ರೋಽಸೌ ರಾಘವೋ ದೃಢವಿಕ್ರಮಃ ॥

ಮೂಲಮ್ - 36

ಯೇನ ಬದ್ಧಃ ಸಮುದ್ರೇ ಚ ಸೇತುಃ ಸ ಪರಮಾದ್ಭುತಃ ।
ಕುರುಷ್ವ ನರರಾಜೇನ ಸಂಧಿಂ ರಾಮೇಣ ರಾವಣ ।
ಜ್ಞಾತ್ವಾವಧಾರ್ಯ ಕರ್ಮಾಣಿ ಕ್ರಿಯತಾಮಾಯತಿಕ್ಷಮಮ್ ॥

ಅನುವಾದ

ಇಂತಹ ಅನೇಕ ಅಪಶಕುನಗಳು ಆಗುತ್ತಿವೆ. ಸಾಕ್ಷಾತ್ ಭಗವಾನ್ ವಿಷ್ಣುವೇ ಮಾನವರೂಪ ಧರಿಸಿ ರಾಮನಾಗಿ ಬಂದಿರುವನು ಎಂದು ನಾನು ತಿಳಿಯುತ್ತೇನೆ. ಅವನು ಸಮುದ್ರಕ್ಕೆ ಅತ್ಯಂತ ಅದ್ಭುತ ಸೇತುವೆಯನ್ನು ಕಟ್ಟಿದನು. ಆ ದೃಢಪರಾಕ್ರಮಿ ರಘುವೀರನು ಸಾಮಾನ್ಯ ಮನುಷ್ಯ ಮಾತ್ರನಲ್ಲ. ರಾವಣನೇ! ನೀನು ನರರಾಜ ಶ್ರೀರಾಮನೊಡನೆ ಸಂಧಿ ಮಾಡಿಕೋ. ಶ್ರೀರಾಮನ ಅಲೌಕಿಕ ಕರ್ಮಗಳನ್ನು ಮತ್ತು ಲಂಕೆಯಲ್ಲಿ ಆಗುತ್ತಿರುವ ಉತ್ಪಾತಗಳನ್ನು ತಿಳಿದು, ಭವಿಷ್ಯದಲ್ಲಿ ಸುಖಕೊಡುವಂತಹ ಕಾರ್ಯವನ್ನು ನಿಶ್ಚಯಿಸಿ ಅದನ್ನೇ ಮಾಡು.॥34-36॥

ಮೂಲಮ್ - 37

ಇದಂ ವಚಸ್ತಸ್ಯ ನಿಗದ್ಯ ಮಾಲ್ಯವಾನ್
ಪರೀಕ್ಷ್ಯ ರಕ್ಷೋಧಿಪತೇರ್ಮನಃ ಪುನಃ ।
ಅನುತ್ತಮೇಷೂತ್ತಮಪೌರುಷೋ ಬಲೀ
ಬಭೂವ ತೂಷ್ಣೀಂ ಸಮವೇಕ್ಷ್ಯರಾವಣಮ್ ॥

ಅನುವಾದ

ಹೀಗೆ ಹೇಳಿ, ರಾವಣನ ಮನೋಭಾವವನ್ನು ಪರೀಕ್ಷಿಸಿ ಉತ್ತಮ ಮಂತ್ರಿಗಳಲ್ಲಿ ಶ್ರೇಷ್ಠ ಪೌರುಷಶಾಲೀ, ಮಹಾಬಲೀ ಮಾಲ್ಯವಂತನು ರಾವಣನ ಕಡೆಗೆ ನೋಡುತ್ತಾ ಸುಮ್ಮನಾದನು.॥37॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೈದನೆಯ ಸರ್ಗ ಪೂರ್ಣವಾಯಿತು.॥35॥