वाचनम्
ಭಾಗಸೂಚನಾ
ಸೀತೆಯು ಒತ್ತಾಯಿಸಿದಾಗ ಸರಮೆಯು ಆಕೆಗೆ ಮಂತ್ರಿಗಳ ಸಹಿತ ರಾವಣನ ನಿಶ್ಚಿತ ಅಭಿಪ್ರಾಯವನ್ನು ತಿಳಿಸುವುದು
ಮೂಲಮ್ - 1
ಅಥ ತಾಂ ಜಾತಸಂತಾಪಾಂ ತೇನ ವಾಕ್ಯೇನ ಮೋಹಿತಾಮ್ ।
ಸರಮಾ ಹ್ಲಾದಯಾಮಾಸ ಮಹೀಂ ದಗ್ಧಾಮಿವಾಂಭಸಾ ॥
ಅನುವಾದ
ರಾವಣನು ಹಿಂದೆ ಆಡಿದ ಮಾತುಗಳಿಂದ ಮೋಹಿತ ಹಾಗೂ ಸಂತೃಪ್ತಳಾದ ಸೀತೆಗೆ ಸರಮೆಯು ಗ್ರೀಷ್ಮಋತುವಿನ ತಾಪದಿಂದ ಬೆಂದಿರುವ ಭೂಮಿಯನ್ನು ವರ್ಷಾಕಾಲದ ಮೇಘಗಳು ತಮ್ಮ ನೀರಿನಿಂದ ಆಹ್ಲಾದಿತಗೊಳಿಸುವಂತೆ, ತನ್ನ ಮಾತುಗಳಿಂದ ಆಕೆಯನ್ನು ಸಂತೋಷಪಡಿಸಿದಳು.॥1॥
ಮೂಲಮ್ - 2
ತತಸ್ತಸ್ಯಾ ಹಿತಂ ಸಖ್ಯಾಶ್ಚಿಕೀರ್ಷಂತೀ ಸಖೀ ವಚಃ ।
ಉವಾಚ ಕಾಲೇ ಕಾಲಜ್ಞಾ ಸ್ಮಿತಪೂರ್ವಾಭಿ ಭಾಷಿಣೀ ॥
ಅನುವಾದ
ಬಳಿಕ ಸಮಯ ಪ್ರಜ್ಞೆಯುಳ್ಳ, ಮುಗುಳ್ನಕ್ಕು ಮಾತನಾಡುವ ಸಖೀ ಸರಮೆಯು ತನ್ನ ಪ್ರಿಯಸಖೀ ಸೀತೆಯ ಹಿತವನ್ನು ಮಾಡುವ ಇಚ್ಛೆಯಿಂದ ಸಮಯೋಚಿತ ಮಾತನ್ನು ಹೇಳಿದಳು.॥2॥
ಮೂಲಮ್ - 3
ಉತ್ಸಹೇಯಮಹಂ ಗತ್ವಾ ತ್ವದ್ವಾಕ್ಯಮಸಿತೇಕ್ಷಣೇ ।
ನಿವೇದ್ಯ ಕುಶಲಂ ರಾಮೇ ಪ್ರತಿಚ್ಛನ್ನಾ ನಿವರ್ತಿತುಮ್ ॥
ಅನುವಾದ
ಸಖೀ ಅಸಿತೇಕ್ಷಣೆ! ಶ್ರೀರಾಮನ ಬಳಿಗೆ ಹೋಗಿ ನಿನ್ನ ಸಂದೇಶ ಮತ್ತು ಕ್ಷೇಮ ಸಮಾಚಾರವನ್ನು ನಿವೇದಿಸಿ ಮತ್ತೆ ಅಡಗಿಕೊಂಡು ಮರಳಿ ಬರಲು ನನ್ನಲ್ಲಿ ಸಾಹಸ ಮತ್ತು ಉತ್ಸಾಹ ತುಂಬಿದೆ.॥3॥
ಮೂಲಮ್ - 4
ನಹಿ ಮೇ ಕ್ರಮಮಾಣಾಯಾ ನಿರಾಲಂಬೇ ವಿಹಾಯಸಿ ।
ಸಮರ್ಥೋ ಗತಿಮನ್ವೇತುಂ ಪವನೋ ಗರುಡೋಽಪಿ ವಾ ॥
ಅನುವಾದ
ನಿರಾಧಾರ ಆಕಾಶದಲ್ಲಿ ತೀವ್ರ ವೇಗವಾಗಿ ಹೋಗುವ ನನ್ನ ಗತಿಯನ್ನು ಅನುಸರಿಸಲು ವಾಯು ಅಥವಾ ಗರುಡನೂ ಸಮರ್ಥರಲ್ಲ.॥4॥
ಮೂಲಮ್ - 5
ಏವಂ ಬ್ರುವಾಣಾಂ ತಾಂ ಸೀತಾ ಸರಮಾಮಿದನುಬ್ರವೀತ್ ।
ಮಧುರಂ ಶ್ಲಕ್ಷ್ಣಯಾ ವಾಚಾ ಪೂರ್ವಶೋಕಾಭಿಪನ್ನಯಾ ॥
ಅನುವಾದ
ಹೀಗೆ ನುಡಿದ ಸರಮೆಯ ಬಳಿ ಮೊದಲೇ ಶೋಕದಿಂದ ಸಂತಪ್ತಳಾದ ಸೀತೆಯು ಸ್ನೇಹ ತುಂಬಿದ ಮಧುರವಾಣಿಯಿಂದ ಹೀಗೆ ಹೇಳಿದಳು.॥5॥
ಮೂಲಮ್ - 6
ಸಮರ್ಥಾ ಗಗನಂ ಗಂತುಮಪಿ ಚ ತ್ವಂ ರಸಾತಲಮ್ ।
ಅವಗಚ್ಛಾದ್ಯ ಕರ್ತವ್ಯಂ ಕರ್ತವ್ಯಂ ತೇ ಮದಂತರೇ ॥
ಅನುವಾದ
ಸರಮೇ! ನೀನು ಆಕಾಶ ಮತ್ತು ಪಾತಾಳ ಎಲ್ಲ ಕಡೆಗೆ ಹೋಗಲು ಸಮರ್ಥಳಾಗಿರುವೆ. ನೀನು ನನಗಾಗಿ ಮಾಡಬಹುದಾದ ಕಾರ್ಯವನ್ನು ಈಗ ಹೇಳುತ್ತಿದ್ದೇನೆ, ಕೇಳು.॥6॥
ಮೂಲಮ್ - 7
ಮತ್ಪ್ರಿಯಂ ಯದಿ ಕರ್ತವ್ಯಂ ಯದಿ ಬುದ್ಧಿಃ ಸ್ಥಿರಾ ತವ ।
ಜ್ಞಾತುಮಿಚ್ಛಾಮಿ ತಂ ಗತ್ವಾ ಕಿಂ ಕರೋತೀತಿ ರಾವಣಃ ॥
ಅನುವಾದ
ನೀನು ನನ್ನ ಪ್ರಿಯವನ್ನು ಮಾಡುವುದಿದ್ದರೆ, ಈ ವಿಷಯದಲ್ಲಿ ನಿನ್ನ ಬುದ್ಧಿಸ್ಥಿರವಾಗಿದ್ದರೆ, ರಾವಣನು ಇಲ್ಲಿಂದ ಹೋಗಿ ಏನು ಮಾಡುತ್ತಿರವನು ಎಂದು ತಿಳಿಯಲು ನಾನು ಬಯಸುತ್ತೇನೆ.॥7॥
ಮೂಲಮ್ - 8
ಸ ಹಿ ಮಾಯಾಬಲಃ ಕ್ರೂರೋ ರಾವಣಃ ಶತ್ರುರಾವಣಃ ।
ಮಾಂ ಮೋಹಯತಿ ದುಷ್ಟಾತ್ಮಾ ಪೀತಮಾತ್ರೇವ ವಾರುಣೀ ॥
ಅನುವಾದ
ಶತ್ರುಗಳನ್ನು ಅಳಿಸುವ ರಾವಣನು ಮಾಯಾಬಲದಿಂದ ಸಂಪನ್ನನಾಗಿದ್ದಾನೆ. ವಾರುಣಿಯನ್ನು ಹೆಚ್ಚು ಕುಡಿದಾಗ ಅದು ಅವನನ್ನು ಮೋಹಿತ (ಅಚೇತ) ಮಾಡುವಂತೆ ಆ ದುಷ್ಟಾತ್ಮಾ ರಾವಣನು ನನ್ನನ್ನು ಮೋಹಿತಗೊಳಿಸುತ್ತಿದ್ದಾನೆ.॥8॥
ಮೂಲಮ್ - 9
ತರ್ಜಾಪಯತಿ ಮಾಂ ನಿತ್ಯಂ ಭರ್ತ್ಸಾಪಯತಿ ಚಾಸಕೃತ್ ।
ರಾಕ್ಷಸೀಭಿಃ ಸುಘೋರಾಭಿರ್ಯೋ ಮಾಂ ರಕ್ಷತಿ ನಿತ್ಯಶಃ ॥
ಅನುವಾದ
ಆ ರಾಕ್ಷಸನು ಅತ್ಯಂತ ಭಯಾನಕ ರಾಕ್ಷಸಿಯರಿಂದ ಪ್ರತಿದಿನ ನನ್ನನ್ನು ಗದರಿಸುತ್ತಿದ್ದಾನೆ, ಹೆದರಿಸುತ್ತಿದ್ದಾನೆ ಮತ್ತು ಸದಾ ನನ್ನ ಕಾವಲು ಕಾಯುವಂತೆ ಮಾಡಿರುವನು.॥.॥
ಮೂಲಮ್ - 10
ಉದ್ವಿಗ್ನಾ ಶಂಕಿತಾ ಚಾಸ್ಮಿ ನ ಸ್ವಸ್ಥಂ ಚ ಮನೋಮಮ ।
ತದ್ಭಯಾಚ್ಚಾಹಮುದ್ವಿಗ್ನಾ ಅಶೋಕವನಿಕಾಂ ಗತಾ ॥
ಅನುವಾದ
ನಾನು ಸದಾ ಅದರಿಂದ ಉದ್ವಿಗ್ನ ಮತ್ತು ಸಂಶಯ ಪಡುತ್ತಿದ್ದೇನೆ. ನನ್ನ ಚಿತ್ತ ಸ್ವಸ್ಥವಾಗಿರು ವುದಿಲ್ಲ. ನಾನು ಅವನ ಭಯದಿಂದಲೇ ವ್ಯಾಕುಲಳಾಗಿ ಅಶೋಕಾವನದಲ್ಲಿ ಇದ್ದೇನೆ.॥10॥
ಮೂಲಮ್ - 11
ಯದಿ ನಾಮ ಕಥಾ ತಸ್ಯ ನಿಶ್ಚಿತಂ ವಾಪಿ ಯದ್ ಭವೇತ್ ।
ನಿವೇದಯೇಥಾಃ ಸರ್ವಂ ತದ್ ವರೋ ಮೇ ಸ್ಯಾದನುಗ್ರಹಃ ॥
ಅನುವಾದ
ಮಂತ್ರಿಗಳೊಂದಿಗೆ ಅವನ ಮಂತ್ರಾಲೋಚನೆ ನಡೆಯುತ್ತಿದ್ದರೆ, ಅಲ್ಲಿ ಆದ ನಿಶ್ಚಯ ಹಾಗೂ ರಾವಣನ ನಿಶ್ಚಿತ ವಿಚಾರವೆಲ್ಲವನ್ನೂ ನನಗೆ ತಿಳಿಸುತ್ತಾ ಇರು. ಇದು ನನ್ನ ಮೇಲೆ ಮಾಡಿದ ನಿನ್ನ ದೊಡ್ಡ ಉಪಕಾರವೆಂದು ತಿಳಿಯುವೆ.॥11॥
ಮೂಲಮ್ - 12
ಸಾಷ್ಯೇನಂ ಬ್ರುವತೀಂ ಸೀತಾಂ ಸರಮಾ ಮೃದುಭಾಷಿಣೀ ।
ಉವಾಚ ವದನಂ ತಸ್ಯಾಃ ಸ್ಪೃಶಂತೀ ಭಾಷ್ಪವಿಕ್ಲವಮ್ ॥
ಅನುವಾದ
ಹೀಗೆ ಹೇಳುತ್ತಿರುವ ಸೀತೆಯಲ್ಲಿ ಮಧುರಭಾಷಿಣಿ ಸರಮೆಯು ಕಣ್ಣೀರಿನಿಂದ ಒದ್ದೆಯಾಗಿದ್ದ ಆಕೆಯ ಮುಖವನ್ನು ಕೈಯಿಂದ ಸವರಿಸುತ್ತಾ ಹೀಗೆ ಹೇಳಿದಳು.॥12॥
ಮೂಲಮ್ - 13
ಏಷ ತೇಯದ್ಯಭಿಪ್ರಾಯಸ್ತಸ್ಮಾದ್ ಗಚ್ಛಾಮಿ ಜಾನಕಿ ।
ಗೃಹ್ಯ ಶತ್ರೋರಭಿಪ್ರಾಯಮುಪಾವರ್ತಾಮಿ ಮೈಥಿಲಿ ॥
ಅನುವಾದ
ಮಿಥಿಲೇಶ ಕುಮಾರೀ ಮೈಥಿಲಿಯೇ! ಇದೇ ನಿನ್ನ ಇಚ್ಛೆ ಇದ್ದರೆ, ನಾನು ಹೋಗಿ ಶತ್ರುವಿನ ಅಭಿಪ್ರಾಯವನ್ನು ತಿಳಿದು ಈಗಲೇ ಮರಳಿ ಬರುತ್ತೇನೆ.॥1.॥
ಮೂಲಮ್ - 14
ಏವಮುಕ್ತ್ವಾ ತತೋಗತ್ವಾ ಸಮೀಪಂ ತಸ್ಯ ರಾಕ್ಷಸಃ ।
ಶುಶ್ರಾವ ಕಥಿತಂ ತಸ್ಯ ರಾವಣಸ್ಯ ಸಮಂತ್ರಿಣಃ ॥
ಅನುವಾದ
ಹೀಗೆ ಹೇಳಿ ಸರಮೆಯು ಆ ರಾಕ್ಷಸನ ಬಳಿಗೆ ಹೋಗಿ ಮಂತ್ರಿಗಳ ಸಹಿತ ರಾವಣನು ಹೇಳಿದ ಎಲ್ಲ ಮಾತುಗಳನ್ನು ಕೇಳಿದಳು.॥14॥
ಮೂಲಮ್ - 15
ಸಾ ಶ್ರುತ್ವಾ ನಿಶ್ಚಯಂ ತಸ್ಯ ನಿಶ್ಚಯಜ್ಞಾ ದುರಾತ್ಮನಃ ।
ಪುನರೇವಾಗಮತ್ ಕ್ಷಿಪ್ರಮಶೋಕವನಿಕಾಂ ಶುಭಾಮ್ ॥
ಅನುವಾದ
ಆ ದುರಾತ್ಮನ ನಿಶ್ಚಯವನ್ನು ಕೇಳಿ ಅವಳು ಚೆನ್ನಾಗಿ ತಿಳಿದುಕೊಂಡು ಬೇಗನೇ ಸುಂದರ ಅಶೋಕಾವನಕ್ಕೆ ಮರಳಿ ಬಂದಳು.॥15॥
ಮೂಲಮ್ - 16
ಸಾ ಪ್ರವಿಷ್ಟಾ ತತಸ್ತತ್ರ ದದರ್ಶ ಜನಕಾತ್ಮಜಮ್ ।
ಪ್ರತೀಕ್ಷಮಾಣಾಂ ಸ್ವಾಮೇವ ಭ್ರಷ್ಟಪದ್ಮಾಮಿವ ಶ್ರೀಯಮ್ ॥
ಅನುವಾದ
ಅಲ್ಲಿಗೆ ಬಂದು ತನ್ನ ಪ್ರತೀಕ್ಷೆಯಲ್ಲೇ ಕುಳಿತಿರುವ ತನ್ನ ಕೈಯ ಕಮಲ ಕೆಳಗೆ ಬಿದ್ದಿರುವ ಲಕ್ಷ್ಮಿಯಂತೆ ಕಂಡುಬರುತ್ತಿದ್ದ ಜಾನಕಿಯನ್ನು ನೋಡಿದಳು.॥16॥
ಮೂಲಮ್ - 17
ತಾಂ ತು ಸೀತಾ ಪುನಃ ಪ್ರಾಪ್ತಾಂ ಸರಮಾಂ ಪ್ರಿಯಭಾಷಿಣೀಮ್ ।
ಪರಿಷ್ವಜ್ಯ ಚ ಸುಸ್ರಿಗ್ಧಂ ದದೌ ಚ ಸ್ವಯಮಾಸನಮ್ ॥
ಅನುವಾದ
ಮರಳಿ ಬಂದಿರುವ ಪ್ರಿಯಭಾಷಿಣೀ ಸರಮೆಯನ್ನು ಸೀತೆಯು ತುಂಬಾ ಸ್ನೇಹದಿಂದ ಅಪ್ಪಿಕೊಂಡು ಕುಳಿತು ಕೊಳ್ಳಲು ಆಸನವನ್ನಿತ್ತು ಹೇಳಿದಳು.॥17॥
ಮೂಲಮ್ - 18
ಇಹಾಸೀನಾ ಸುಖಂ ಸರ್ವಮಾಖ್ಯಾಹಿ ಮಮ ತತ್ತ್ವತಃ ।
ಕ್ರೂರಸ್ಯ ನಿಶ್ಚಯಂ ತಸ್ಯ ರಾವಣಸ್ಯ ದುರಾತ್ಮನಃ ॥
ಅನುವಾದ
ಸಖಿಯೇ! ಇಲ್ಲಿ ಸುಖವಾಗಿ ಕುಳಿತು ಎಲ್ಲ ಮಾತುಗಳನ್ನು ಸರಿಯಾಗಿ ತಿಳಿಸು. ಆ ಕ್ರೂರಿ ಮತ್ತು ದುರಾತ್ಮಾ ರಾವಣನು ಏನು ನಿಶ್ಚಯಿಸಿರುವನು.॥18॥
ಮೂಲಮ್ - 19
ಏವಮುಕ್ತಾ ತು ಸರಮಾ ಸೀತಯಾ ವೇಪಮಾನಯಾ ।
ಕಥಿತಂ ಸರ್ವಮಾಚಷ್ಟ ರಾವಣಸ್ಯ ಸಮಂತ್ರಿಣಃ ॥
ಅನುವಾದ
ನಡುಗುತ್ತಿರುವ ಸೀತೆಯು ಹೀಗೆ ಕೇಳಿದಾಗ ಸರಮೆಯು ಮಂತ್ರಿಗಳ ಸಹಿತ ರಾವಣನು ಹೇಳಿದ ಎಲ್ಲ ಮಾತುಗಳನ್ನು ತಿಳಿಸಿದಳು .॥19॥
ಮೂಲಮ್ - 20
ಜನನ್ಯಾ ರಾಕ್ಷಸೇಂದ್ರೋ ವೈ ತ್ವನ್ಮೋಕ್ಷಾರ್ಥಂ ಬೃಹದ್ವಚಃ ।
ಅತಿ ಸ್ನಿಗ್ಧೇನ ವೈದೇಹಿ ಮಂತ್ರಿವೃದ್ಧೇನ ಚೋದಿತಃ ॥
ಅನುವಾದ
ವಿದೇಹನಂದಿನೀ! ರಾಕ್ಷಸರಾಜಾ ರಾವಣನ ತಾಯಿಯು ಹಾಗೂ ರಾವಣನ ಕುರಿತು ಅತ್ಯಂತ ಸ್ನೇಹವಿರುವ ಓರ್ವ ಮುದುಕ ಮಂತ್ರಿಯೂ ಕೂಡ ದೊಡ್ಡ ದೊಡ್ಡ ಮಾತುಗಳನ್ನಾಡಿ ನಿನ್ನನ್ನು ಬಿಟ್ಟುಬಿಡಲು ರಾವಣನನ್ನು ಹೀಗೆ ಪ್ರೇರೇಪಿಸಿದರು.॥2.॥
ಮೂಲಮ್ - 21
ದೀಯತಾಮಭಿಸತ್ಕೃತ್ಯ ಮನುಜೇಂದ್ರಾಯ ಮೈಥಿಲೀ ।
ನಿದರ್ಶನಂ ತೇ ಪರ್ಯಾಪ್ತಂ ಜನಸ್ಥಾನೇ ಯದದ್ಭುತಮ್ ॥
ಅನುವಾದ
ರಾಕ್ಷಸ ರಾಜನೇ! ನೀನು ಮಹಾರಾಜಾ ಶ್ರೀರಾಮನಿಗೆ ಸತ್ಕಾರಪೂರ್ವಕ ಅವನ ಪತ್ನೀ ಸೀತೆಯನ್ನು ಹಿಂದಿರುಗಿಸು. ಜನಸ್ಥಾನದಲ್ಲಿ ನಡೆದ ಅದ್ಭುತ ಘಟನೆಯೇ ಶ್ರೀರಾಮ ಪರಾಕ್ರಮವನ್ನು ತಿಳಿಯಲು ಸಾಕಷ್ಟು ಪ್ರಮಾಣವಾಗಿದೆ.॥21॥
ಮೂಲಮ್ - 22
ಲಂಘನಂ ಚ ಸಮುದ್ರಸ್ಯ ದರ್ಶನಂ ಚ ಹನೂಮತಃ ।
ವಧಂ ಚ ರಕ್ಷಸಾಂ ಯುದ್ಧೇ ಕಃ ಕುರ್ಯಾನ್ಮಾನುಷೋ ಯುಧಿ ॥
ಅನುವಾದ
(ಅವನ ಸೇವಕರಲ್ಲಿಯೂ ಅದ್ಭುತ ಶಕ್ತಿ ಇದೆ) ಹನುಮಂತನು ಸಮುದ್ರವನ್ನು ದಾಟಿ, ಸೀತೆಯನ್ನು ಕಂಡು, ಯುದ್ಧದಲ್ಲಿ ಅನೇಕ ರಾಕ್ಷಸರನ್ನು ವಧಿಸಿದುದು-ಇವೆಲ್ಲ ಕಾರ್ಯ ಬೇರೆ ಯಾವ ಮನುಷ್ಯ ಮಾಡಬಲ್ಲನು.॥2.॥
ಮೂಲಮ್ - 23
ಏವಂ ಸ ಮಂತ್ರಿವೃದ್ಧೈಶ್ಚ ಮಾತ್ರಾ ಚ ಬಹುಬೋಧಿತಃ ।
ನ ತ್ವಾಮುತ್ಸಹತೇ ಮೋಕ್ತುಮರ್ಥಮರ್ಥಪರೋ ಯಥಾ ॥
ಅನುವಾದ
ವೃದ್ಧಮಂತ್ರಿ ಮತ್ತು ತಾಯಿಯು ಹೀಗೆ ಸಮಜಾಯಿಸಿದರೂ ಧನಲೋಭಿಯು ಧನವನ್ನು ತ್ಯಜಿಸುವುದಿಲ್ಲ ಹಾಗೆಯೇ ಅವನು ನಿನ್ನನ್ನು ಯಾವ ರೀತಿಯಿಂದಲೂ ಬಿಡಲು ಬಯಸಲಿಲ್ಲ.॥2.॥
ಮೂಲಮ್ - 24
ನೋತ್ಸಹತ್ಯಮೃತೋ ಮೋಕ್ತುಂ ಯುದ್ಧೇ ತ್ವಾಮಿತಿ ಮೈಥಿಲಿ ।
ಸಾಮಾತ್ಯಸ್ಯ ನೃಶಂಸಸ್ಯ ನಿಶ್ಚಯೋ ಹ್ಯೇಷ ವರ್ತತೇ ॥
ಅನುವಾದ
ಮಿಥಿಲೇಶಕುಮಾರೀ! ಅವನು ಯುದ್ಧದಲ್ಲಿ ತಾನು ಸಾಯದೆ ನಿನ್ನನ್ನು ಬಿಡಲು ಸಾಹಸ ಮಾಡಲಾರನು. ಮಂತ್ರಿಗಳ ಸಹಿತ ನೃಶಂಸ ನಿಶಾಚರನ ಇದೇ ನಿಶ್ಚಯವಾಗಿದೆ.॥24॥
ಮೂಲಮ್ - 25½
ತದೇಷಾ ಸುಸ್ಥಿರಾ ಬುದ್ಧಿರ್ಮೃತ್ಯುಲೋಭಾದುಪಸ್ಥಿತಾ ।
ಭಯಾನ್ನ ಶಕ್ತಸ್ತ್ವಾಂ ಮೋಕ್ತುಮನಿರಸ್ತಃ ಸ ಸಂಯುಗೆ ॥
ರಾಕ್ಷಸಾನಾಂ ಚ ಸರ್ವೇಷಾಮಾತ್ಮನಶ್ಚ ವಧೇನ ಹಿ ।
ಅನುವಾದ
ರಾವಣನ ತಲೆಯ ಮೇಲೆ ಕಾಲನು ಕುಣಿಯುತ್ತಿದ್ದಾನೆ. ಅದಕ್ಕಾಗಿ ಅವನ ಮನಸ್ಸಿನಲ್ಲಿ ಮೃತ್ಯುವಿನ ಕುರಿತು ಲೋಭ ಉಂಟಾಗಿದೆ. ನಿನ್ನನ್ನು ಮರಳಿಸದೇ ಇರುವ ನಿಶ್ಚಯದಲ್ಲಿ ಅವನ ಬುದ್ಧಿ ಸುಸ್ಥಿರವಾಗಿರುವುದೇ ಕಾರಣವಾಗಿದೆ. ಅವನು ಯುದ್ಧದಲ್ಲಿ ರಾಕ್ಷಸರ ಸಂಹಾರ ಮತ್ತು ತನ್ನ ವಧೆಯಿಂದ ನಾಶವಾಗುವ ತನಕ ಕೇವಲ ನಿನಗೆ ಭಯಪಡಿಸುವುದು ಬಿಡಲಾರನು.॥25½॥
ಮೂಲಮ್ - 26
ನಿಹತ್ಯ ರಾವಣಂ ಸಂಖ್ಯೇ ಸರ್ವಥಾ ನಿಶಿತೈಃ ಶರೈಃ ।
ಪ್ರತಿನೇಷ್ಯತಿ ರಾಮಸ್ತ್ವಾಮಯೋಧ್ಯಾಮಸಿತೇಕ್ಷಣೇ ॥
ಅನುವಾದ
ಕಾಡಿಗೆ ಕಣ್ಣುಗಳುಳ್ಳ ಸೀತೇ ! ಇದರ ಪರಿಣಾಮ ಭಗವಾನ್ ಶ್ರೀರಾಮನು ತನ್ನ ಹರಿತ ಬಾಣಗಳಿಂದ ಯುದ್ಧ ರಂಗದಲ್ಲಿ ರಾವಣನನ್ನು ವಧಿಸಿ ನಿನ್ನನ್ನು ಅಯೋಧ್ಯೆಗೆ ಕೊಂಡು ಹೋಗುವನು.॥26॥
ಮೂಲಮ್ - 27
ಏತಸ್ಮಿನ್ನಂತರೇ ಶಬ್ದೋ ಭೇರೀಶಂಖ ಸಮಾಕುಲಃ ।
ಶ್ರುತೋ ವೈ ಸರ್ವ ಸೈನ್ಯಾನಾಂ ಕಂಪಯನ್ ಧರಣೀತಲಮ್ ॥
ಅನುವಾದ
ಆಗಲೇ ಭೂಕಂಪವನ್ನೇ ಉಂಟುಮಾಡುವ ಭೇರಿನಾದ ಮತ್ತು ಶಂಖಧ್ವನಿಯಿಂದ ಕೂಡಿದ ಸೈನಿಕರ ಮಹಾ ಕೋಲಾಹಲ ಕೇಳಿಬಂತು.॥27॥
ಮೂಲಮ್ - 28
ಶ್ರುತ್ವಾ ತು ತಂ ವಾನರ ಸೈನ್ಯನಾದಂ
ಲಂಕಾಗತಾ ರಾಕ್ಷಸ ರಾಜಭೃತ್ಯಾಃ ।
ಹತೌಜಸೋ ದೈನ್ಯಪರೀತಚೇಷ್ಟಾಃ
ಶ್ರೇಯೋ ನ ಪಶ್ಯಂತಿ ನೃಪಸ್ಯ ದೋಷಾತ್ ॥
ಅನುವಾದ
ವಾನರ ಸೈನಿಕರ ಆ ಭೀಷಣ ಸಿಂಹನಾದವನ್ನು ಕೇಳಿ ಲಂಕೆ ಯಲ್ಲಿದ್ದ ರಾಕ್ಷಸ ರಾಜಾ ರಾವಣನ ಸೇವಕರ ಹತೋತ್ಸಾಹವಾಯಿತು. ಅವರ ಎಲ್ಲ ಚೇಷ್ಟೆಗಳು ದೀನತೆಯಿಂದ ವ್ಯಾಪಿಸಿದವು. ರಾವಣನ ದೋಷದಿಂದ ಅವರಿಗೂ ಕೂಡ ಯಾವುದೇ ಶ್ರೇಯಸ್ಸಿನ ಉಪಾಯ ಕಾಣುತ್ತಿರಲಿಲ್ಲ.॥28॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥34॥