वाचनम्
ಭಾಗಸೂಚನಾ
ಸರಮೆಯು ಸೀತೆಯನ್ನು ಸಮಾಧಾನಗೊಳಿಸಿದುದು, ರಾವಣನ ಮಾಯೆಯ ರಹಸ್ಯ ಬಯಲು, ಶ್ರೀರಾಮನು ಲಂಕೆಗೆ ಆಗಮಿಸಿದ ಪ್ರಿಯ ಸಮಾಚಾರ ತಿಳಿಸಿ, ಅವನು ವಿಜಯಿಯಾಗುವನೆಂಬ ವಿಶ್ವಾಸ ಕೊಡಿಸುವುದು
ಮೂಲಮ್ - 1
ಸೀತಾಂ ತು ಮೋಹಿತಾಂ ದೃಷ್ಟ್ವಾ ಸರಮಾ ನಾಮ ರಾಕ್ಷಸೀ ।
ಆಸಸಾದಾಥ ವೈದೇಹೀಂ ಪ್ರಿಯಾಂ ಪ್ರಣಯಿನೀ ಸಖೀಮ್ ॥
ಅನುವಾದ
ವಿದೇಹವಂದಿನೀ ಸೀತೆಯು ಮೋಹದಲ್ಲಿ ಬಿದ್ದಿರುವುದನ್ನು ನೋಡಿ ಸರಮೆ ಎಂಬ ರಾಕ್ಷಸಿಯು, ಪ್ರಿಯಸಖಿಯು ತನ್ನ ಪ್ರೀತಿಯ ಸಖಿಯ ಬಳಿಗೆ ಬರುವಂತೆ ಸೀತೆಯ ಬಳಿಗೆ ಬಂದಳು.॥1॥
ಮೂಲಮ್ - 2
ಮೋಹಿತಾಂ ರಾಕ್ಷಸೇಂದ್ರೇಣ ಸೀತಾಂ ಪರಮದುಃಖಿತಾಮ್ ।
ಆಶ್ವಾಸಯಾಮಾಸ ತದಾ ಸರಮಾ ಮೃದುಭಾಷಿಣೀ ॥
ಅನುವಾದ
ಸೀತೆಯು ರಾಕ್ಷಸರಾಜನ ಮಾಯೆಯಿಂದ ಮೋಹಿತಳಾಗಿ ದುಃಖದಲ್ಲಿ ಬಿದ್ದಿದ್ದಳು. ಆಗ ಮೃದುಭಾಷಿಣೀ ಸರಮೆಯು ಆಕೆಗೆ ತನ್ನ ಮಾತುಗಳಿಂದ ಸಾಂತ್ವನಪಡಿಸಿದಳು.॥2॥
ಮೂಲಮ್ - 3
ಸಾ ಹಿ ತತ್ರ ಕೃತಾ ಮಿತ್ರಂ ಸೀತಯಾ ರಕ್ಷ್ಯಮಾಣಯಾ ।
ರಕ್ಷಂತೀ ರಾವಣಾದಿಷ್ಟಾ ಸಾನುಕ್ರೋಶಾ ದೃಢವ್ರತಾ ॥
ಅನುವಾದ
ಸರಮೆಯು ರಾವಣನ ಅಪ್ಪಣೆಯಂತೆ ಸೀತೆಯನ್ನು ರಕ್ಷಿಸುತ್ತಿದ್ದಳು. ಆಕೆಯು ತನ್ನಿಂದ ರಕ್ಷಿತಳಾದ ಸೀತೆಯೊಂದಿಗೆ ಸ್ನೇಹ ಬೆಳೆಸಿದ್ದಳು. ಅವಳು ತುಂಬಾ ದಯಾಳು ಮತ್ತು ದೃಢಸಂಕಲ್ಪದವಳಾಗಿದ್ದಳು.॥3॥
ಮೂಲಮ್ - 4
ಸಾ ದದರ್ಶ ತತಃ ಸೀತಾಂ ಸರಮಾ ನಷ್ಟ ಚೇತನಾಮ್ ।
ಉಪಾವೃತ್ಯೋತ್ಥಿತಾಂ ಧ್ವಸ್ತಾಂ ವಡವಾಮಿವ ಪಾಂಸುಷು ॥
ಅನುವಾದ
ಸರಮೆಯು ಸೀತೆಯನ್ನು ನೋಡಿದಾಗ ಆಕೆಯು ನಿಶ್ಚೇಷ್ಟಿತಳಾಗಿದ್ದಳು. ಪರಿಶ್ರಮದಿಂದ ಬಳಲಿದ ಹೆಣ್ಣು ಕುದುರೆ ಧೂಳಿನಲ್ಲಿ ಹೊರಳಾಡುವಂತೆ ಸೀತೆಯೂ ನೆಲಕ್ಕೆ ಕುಸಿದು, ವಿಲಾಪಿಸುವುದರಿಂದ ಧೂಳೀ ಧೂಸರಿತಳಾಗಿದ್ದಳು.॥4॥
ಮೂಲಮ್ - 5
ತಾಂ ಸಮಾಶ್ವಾಸಯಾಮಾಸ ಸಖೀಸ್ನೇಹೇನ ಸುವ್ರತಾಮ್ ।
ಸಮಾಶ್ವಸಿಹಿ ವೈದೇಹಿ ಮಾ ಭೂತ್ತೇ ಮನಸೋ ವ್ಯಥಾ ।
ಉಕ್ತಾ ಯದ್ರಾವಣೇನ ತ್ವಂ ಪ್ರತ್ಯುಕ್ತಶ್ಚ ಸ್ವಯಂ ತ್ವಯಾ ॥
ಮೂಲಮ್ - 6
ಸಖೀ ಸ್ನೇಹೇನ ತದ್ಭೀರು ಮಯಾ ಸರ್ವಂ ಪ್ರತಿಶ್ರುತಮ್ ।
ಲೀನಯಾ ಗಹನೇ ಶೂನ್ಯೇ ಭಯಮುತ್ಸಜ್ಯ ರಾವಣಾತ್ ।
ತವ ಹೇತೋರ್ವಿಶಾಲಾಕ್ಷಿ ನಹಿ ಮೇ ರಾವಣಾದ್ ಭಯಮ್ ॥
ಅನುವಾದ
ಸರಮೆಯು ಓರ್ವ ಸಖಿಯ ಸ್ನೇಹದಿಂದ ಸುವ್ರತಳಾದ ಸೀತೆಗೆ ಆಶ್ವಾಸನೆಯನ್ನು ನೀಡುತ್ತಾ-ವಿದೇಹನಂದಿನೀ! ಧೈರ್ಯವಹಿಸು. ನೀನು ಮನಸ್ಸಿನಲ್ಲಿ ವ್ಯಥಿಸಬಾರದು. ಭೀರು! ರಾವಣನು ನಿನ್ನಲ್ಲಿ ಹೇಳಿದುದು ಹಾಗೂ ನೀನು ಅವನಿಗೆ ಉತ್ತರಿಸಿದುದು ಎಲ್ಲವನ್ನೂ ನಾನು ಸಖಿಯಲ್ಲಿ ಸ್ನೇಹವಿರುವ ಕಾರಣ ಕೇಳಿಕೊಂಡಿರುವೆ. ವಿಶಾಲಲೋಚನೆ! ನಿನಗಾಗಿ ನಾನು ರಾವಣನ ಭಯತೊರೆದು ಅಶೋಕವನದ ನಿರ್ಜನ ಸ್ಥಾನದಲ್ಲಿ ಅಡಗಿದ್ದು ಎಲ್ಲ ಮಾತುಗಳನ್ನು ಕೇಳುತ್ತಿದ್ದೆ. ನನಗೆ ರಾವಣನಿಂದ ಯಾವುದೇ ಭಯವಿಲ್ಲ.॥5-6॥
ಮೂಲಮ್ - 7
ಸ ಸಂಭ್ರಾಂತಶ್ಚ ನಿಷ್ಕ್ರಾಂತೋ ಯತ್ಕೃತೇ ರಾಕ್ಷಸೇಶ್ವರಃ ।
ತತ್ರ ಮೇ ವಿದಿತಂ ಸರ್ವಮಭಿನಿಷ್ಕ್ರಾಮ್ಯ ಮೈಥಿಲಿ ॥
ಅನುವಾದ
ಮೈಥಿಲೀ! ಯಾವ ಕಾರಣಕ್ಕಾಗಿ ರಾವಣನು ಇಲ್ಲಿಂದ ಗಾಬರಿಗೊಂಡು ಹೊರಟು ಹೋದನೋ, ಅದನ್ನು ನಾನೂ ಅಲ್ಲಿಗೆ ಹೋಗಿ ಸಂಪೂರ್ಣವಾಗಿ ತಿಳಿದುಕೊಂಡಿರುವನೆನು.॥7॥
ಮೂಲಮ್ - 8
ನ ಶಕ್ಯಂ ಸೌಪ್ತಿಕಂ ಕರ್ತುಂ ರಾಮಸ್ಯ ವಿದಿತಾತ್ಮನಃ ।
ವಧಶ್ಚ ಪುರುಷವ್ಯಾಘ್ರೇ ತಸ್ಮಿನ್ ನೈವೋಪಪದ್ಯತೇ ॥
ಅನುವಾದ
ಭಗವಾನ್ ಶ್ರೀರಾಮನು ವಿದಿತಾತ್ಮನಾಗಿದ್ದಾನೆ, ಸರ್ವಜ್ಞ ಪರಮಾತ್ಮನಾಗಿದ್ದಾನೆ. ಅವನು ಮಲಗಿರುವಾಗ ವಧಿಸುವುದು ಯಾರಿಗೂ ಸಾಧ್ಯವಿಲ್ಲ. ಪುರುಷಸಿಂಹ ಶ್ರೀರಾಮನ ವಿಷಯದಲ್ಲಿ ಹೀಗೆ ಅವನು ವಧೆಯಾಗುವುದು ಯುಕ್ತಿಸಂಗತವಾಗಿ ತಿಳಿಯುವುದಿಲ್ಲ.॥8॥
ಮೂಲಮ್ - 9
ನ ತ್ವೇವಂ ವಾನರಾ ಹಂತುಂ ಶಕ್ಯಾಃ ಪಾದಪಯೋಧಿನಃ ।
ಸುರಾ ದೇವರ್ಷಭೇಣೇವ ರಾಮೇಣ ಹಿ ಸುರಕ್ಷಿತಾಃ ॥
ಅನುವಾದ
ವಾನರರು ವೃಕ್ಷಗಳಿಂದ ಯುದ್ಧ ಮಾಡುವವರಾಗಿದ್ದಾರೆ. ಅವರೂ ಕೂಡ ಹೀಗೆ ಕೊಲ್ಲಲ್ಪಡುವುದು ಎಂದಿಗೂ ಸಂಭವಿಸಲಾರದು; ಏಕೆಂದರೆ ದೇವತೆಗಳು ಇಂದ್ರನಿಂದ ಪಾಲಿತರಾಗಿರುವಂತೆಯೇ ಈ ವಾನರರೂ ಶ್ರೀರಾಮಚಂದ್ರನಿಂದ ಚೆನ್ನಾಗಿ ಸುರಕ್ಷಿತರಾಗಿದ್ದಾರೆ.॥9॥
ಮೂಲಮ್ - 10
ದೀರ್ಘವೃತ್ತ ಭುಜಃ ಶ್ರೀಮಾನ್ಮಹೋರಸ್ಕಃ ಪ್ರತಾಪವಾನ್ ।
ಧನ್ವೀ ಸಂನಹನೋಪೇತೋ ಧರ್ಮಾತ್ಮಾ ಭುವಿ ವಿಶ್ರುತಃ ॥
ಮೂಲಮ್ - 11
ವಿಕ್ರಾಂತೋ ರಕ್ಷಿತಾ ನಿತ್ಯ ಮಾತ್ಮನಶ್ಚ ಪರಸ್ಯ ಚ ।
ಲಕ್ಷ್ಮಣೇನ ಸಹ ಭ್ರಾತ್ರಾ ಕುಲಿನೋ ನಯಶಾಸ್ತ್ರವಿತ್ ॥
ಮೂಲಮ್ - 12
ಹಂತಾ ಪರಬಲೌಘಾನಾಮಚಿಂತ್ಯಬಲಪೌರುಷಃ ।
ನ ಹತೋ ರಾಘವಃ ಶ್ರೀಮಾನ್ ಸೀತೇ ಶತ್ರುನಿಬರ್ಹಣಃ ॥
ಅನುವಾದ
ಸೀತೇ! ಶ್ರೀರಾಮನು ದುಂಡಾದ ದೊಡ್ಡ ದೊಡ್ಡ ಭುಜಗಳಿಂದ ಸುಶೋಭಿತನಾಗಿರುವನು. ವಿಶಾಲ ವಕ್ಷಃಸ್ಥಳವುಳ್ಳ, ಪ್ರತಾಪಿ, ಧನುರ್ಧರ, ಕಟ್ಟುಮಸ್ತಾದ ದೇಹದಿಂದ ಕೂಡಿದ್ದು, ಭೂಮಂಡಲದಲ್ಲಿ ಸುವಿಖ್ಯಾತ ಧರ್ಮಾತ್ಮನಾಗಿದ್ದಾನೆ. ಅವನಲ್ಲಿ ಮಹಾಪರಾಕ್ರಮವಿದೆ. ಅವನು ಸಹೋದರ ಲಕ್ಷ್ಮಣನ ಸಹಾಯದಿಂದ ತನ್ನನ್ನೂ ಹಾಗೂ ಇತರರನ್ನು ರಕ್ಷಿಸಲು ಸಮರ್ಥನಾಗಿದ್ದಾನೆ. ನೀತಿಶಾಸ್ತ್ರಜ್ಞ ಹಾಗೂ ಕುಲೀನನಾಗಿದ್ದಾನೆ. ಅವನ ಬಲ-ಪೌರುಷ ಅಚಿಂತ್ಯವಾಗಿದೆ. ಅವನು ಶತ್ರುಸೈನ್ಯವನ್ನು ಸಂಹರಿಸಲು ಸಮರ್ಥನಾಗಿದ್ದಾನೆ. ಶತ್ರುಸೂದನ ಶ್ರೀರಾಮನು ಎಂದಿಗೂ ಸಾಯಲಾರನು..॥10-12॥
ಮೂಲಮ್ - 13
ಆಯುಕ್ತ ಬುದ್ಧಿ ಕೃತ್ಯೇನ ಸರ್ವಭೂತವಿರೋಧಿನಾ ।
ಏಯಂ ಪ್ರಯುಕ್ತಾ ರೌದ್ರೇಣ ಮಾಯಾ ಮಾಯಾವಿದಾ ತ್ವಯಿ ॥
ಅನುವಾದ
ರಾವಣನ ಬುದ್ಧಿ ಮತ್ತು ಕರ್ಮ ಎರಡೂ ಕೆಟ್ಟದಾಗಿದೆ. ಅವನು ಸಮಸ್ತ ಪ್ರಾಣಿಗಳ ವಿರೋಧಿಯೂ, ಕ್ರೂರನೂ, ಮಾಯಾವಿಯೂ ಆಗಿರುವನು. ಅವನು ನಿನ್ನ ಮೇಲೆ ಈ ಮಾಯೆಯನ್ನು ಪ್ರಯೋಗಿಸಿರುವನು. (ಆ ಶಿರಸ್ಸು ಮತ್ತು ಧನುಸ್ಸು ಮಾಯೆಯಿಂದ ರಚಿತವಾದವುಗಳು.).॥13॥
ಮೂಲಮ್ - 14
ಶೋಕಸ್ತೇ ವಿಗತಃ ಸರ್ವಕಲ್ಯಾಣಂ ತ್ವಾಮುಪಸ್ಥಿತಮ್ ।
ಧ್ರುವಂ ತ್ವಾಂ ಭಜತೇ ಲಕ್ಷ್ಮೀಃ ಪ್ರಿಯಂ ತೇ ಭವತಿ ಶೃಣು ॥
ಅನುವಾದ
ಈಗ ನಿನ್ನ ಶೋಕದ ದಿನಗಳು ಮುಗಿದುಹೋದುವು. ಎಲ್ಲ ರೀತಿಯ ಶ್ರೇಯಸ್ಸಿನ ಅವಕಾಶ ಮುಂದೆ ಬಂದಿದೆ. ನಿಶ್ಚಯವಾಗಿ ಲಕ್ಷ್ಮಿಯು ನಿನ್ನನ್ನು ಸೇವಿಸುತ್ತಿರುವಳು. ನಿನ್ನ ಪ್ರಿಯ ಕಾರ್ಯ ಆಗಲು ತೊಡಗಿದೆ, ಅದನ್ನು ನಾನು ಹೇಳುತ್ತೇನೆ ಕೇಳು.॥14॥
ಮೂಲಮ್ - 15
ಉತ್ತೀರ್ಯ ಸಾಗರಂ ರಾಮಃ ಸಹ ವಾನರಸೇನಯಾ ।
ಸಂನಿವಿಷ್ಟಃ ಸಮುದ್ರಸ್ಯ ತೀರಮಾಸಾದ್ಯ ದಕ್ಷಿಣಮ್ ॥
ಅನುವಾದ
ಶ್ರೀರಾಮಚಂದ್ರನು ವಾನರ ಸೈನ್ಯ ದೊಂದಿಗೆ ಸಮುದ್ರವನ್ನು ದಾಟಿ ಇಲ್ಲಿಗೆ ಬಂದಿರುವನು. ಅವನು ಸಮುದ್ರದ ದಕ್ಷಿಣ ತೀರದಲ್ಲಿ ಬೀಡುಬಿಟ್ಟಿರುವನು.॥15॥
ಮೂಲಮ್ - 16
ದೃಷ್ಟೋ ಮೇ ಪರಿಪೂರ್ಣಾರ್ಥಃ ಕಾಕುತ್ಸ್ಥಃ ಸಹಲಕ್ಷ್ಮಣಃ ।
ಸಹಿತೈಃ ಸಾಗರಾಂತಸ್ಥೈರ್ಬಲೈಸ್ತಿಷ್ಠತಿ ರಕ್ಷಿತಃ ॥
ಅನುವಾದ
ನಾನು ಸ್ವತಃ ಲಕ್ಷ್ಮಣಸಹಿತ ಪೂರ್ಣಕಾಮ ಶ್ರೀರಾಮನನ್ನು ದರ್ಶಿಸಿರುವೆನು. ಅವನು ಸಮುದ್ರ ತೀರದಲ್ಲಿ ನೆಲೆಸಿದ ಸುಸಂಗಠಿತ ಸೈನ್ಯದೊಂದಿಗೆ ಸರ್ವಥಾ ಸುರಕ್ಷಿತನಾಗಿದ್ದಾನೆ.॥16॥
ಮೂಲಮ್ - 17
ಅನೇನ ಪ್ರೇಷಿತಾ ಯೇ ಚ ರಾಕ್ಷಸಾ ಲಘುವಿಕ್ರಮಾಃ ।
ರಾಘವಸ್ತೀರ್ಣ ಇತ್ಯೇವಂ ಪ್ರವೃತ್ತಿಸ್ತೈರಿಹಾಹೃತಾ ॥
ಅನುವಾದ
ರಾವಣನು ಕಳಿಸಿದ ಶೀಘ್ರಗಾಮಿ ರಾಕ್ಷಸರೆಲ್ಲರೂ ‘ಶ್ರೀರಘುನಾಥನು ಸಮುದ್ರವನ್ನು ದಾಟಿ ಇಲ್ಲಿಗೆ ಬಂದಿರುವನು’ ಎಂಬ ಸಮಾಚಾರವನ್ನು ತಂದಿರುವರು.॥17॥
ಮೂಲಮ್ - 18
ಸಾ ತಾಂ ಶ್ರುತ್ವಾ ವಿಶಾಲಾಕ್ಷಿ ಪ್ರವೃತ್ತಿಂ ರಾಕ್ಷಸಾಧಿಪಃ ।
ಏಷಮಂತ್ರಯತೇ ಸರ್ವೈಃ ಸಚಿವೈಃ ಸಹ ರಾವಣಃ ॥
ಅನುವಾದ
ವಿಶಾಲಲೋಚನೇ! ಈ ಸಮಾಚಾರವನ್ನು ಕೇಳಿ ಈ ರಾಕ್ಷಸರಾಜ ರಾವಣನು ತನ್ನ ಎಲ್ಲ ಮಂತ್ರಿಗಳೊಂದಿಗೆ ಗುಪ್ತವಾಗಿ ಸಮಾಲೋಚನೆ ಮಾಡುತ್ತಿದ್ದಾನೆ.॥18॥
ಮೂಲಮ್ - 19
ಇತಿ ಬ್ರುವಾಣಾ ಸರಮಾ ರಾಕ್ಷಸೀ ಸೀತಯಾ ಸಹ ।
ಸರ್ವೋದ್ಯೋಗೇನ ಸೈನ್ಯಾನಾಂ ಶಬ್ದಂ ಶುಶ್ರಾವ ಭೈರವಮ್ ॥
ಅನುವಾದ
ರಾಕ್ಷಸೀ ಸರಮೆಯು ಸೀತೆಯ ಬಳಿ ಹೀಗೆ ಮಾತನಾಡುತ್ತಿರುವಾಗಲೇ ಯುದ್ಧಕ್ಕಾಗಿ ಪೂರ್ಣವಾಗಿ ಸನ್ನದ್ಧರಾದ ಸೈನಿಕರ ಭೀಕರ ನಾದ ಕೇಳಿ ಬಂತು.॥19॥
ಮೂಲಮ್ - 20
ದಂಡ ನಿರ್ಘಾತವಾದಿನ್ಯಾಃ ಶ್ರುತ್ವಾ ಭೇರ್ಯಾ ಮಹಾಸ್ವನಮ್ ।
ಉವಾಚ ಸರಮಾ ಸೀತಾಮಿದಂ ಮಧುರಭಾಷಿಣೀ ॥
ಅನುವಾದ
ಕೋಲಿನಿಂದ ನುಡಿಸುವ ನಗಾರಿಯ ಗಂಭೀರನಾದವನ್ನು ಕೇಳಿ ಮಧುರಭಾಷಿಣಿ ಸರಮೆಯು ಸೀತೆಯಲ್ಲಿ ಹೇಳಿದಳು.॥20॥
ಮೂಲಮ್ - 21
ಸಂನಾಹಜನನೀ ಹ್ಯೇಷಾ ಭೈರವಾ ಭೀರು ಭೇರಿಕಾ ।
ಭೇರೀನಾದಂ ಚ ಗಮ್ಭೀರಂ ಶೃಣು ತೋಯದನಿಃಸ್ವನಮ್ ॥
ಅನುವಾದ
ಭೀರು! ಈ ಭಯಾನಕ ಭೇರಿಯನಾದವು ಯುದ್ಧದ ಸಿದ್ಧತೆಯನ್ನು ಸೂಚಿಸುತ್ತದೆ. ಮೇಘಗರ್ಜನೆಯಂತಿರುವ ರಣಭೇರಿಯ ಗಂಭೀರ ಶಬ್ದವನ್ನು ನೀನೂ ಕೇಳು.॥21॥
ಮೂಲಮ್ - 22
ಕಲ್ಪ್ಯಂತೇ ಮತ್ತ ಮಾತಂಗಾ ಯುಜ್ಯಂತೇ ರಥವಾಜಿನಃ ।
ದೃಷ್ಯಂತೇ ತುರಗಾರೂಢಾಃ ಪ್ರಾಸಹಸ್ತಾಃ ಸಹಸ್ರಶಃ ॥
ಅನುವಾದ
ಮತ್ತಗಜಗಳು ಅಲಂಕೃತವಾಗಿವೆ. ರಥಗಳಿಗೆ ಕುದುರೆಗಳನ್ನು ಹೂಡಲಾಗಿದೆ. ಸಾವಿರಾರು ಅಶ್ವದಳ ಸೈನಿಕರು ಕೈಗಳಲ್ಲಿ ಈಟಿಗಳನ್ನು ಹಿಡಿದುಕೊಂಡಿರುವುದು ಕಂಡುಬರುತ್ತಿದೆ.॥22॥
ಮೂಲಮ್ - 23½
ತತ್ರ ತತ್ರ ಚ ಸಂನದ್ಧಾಃ ಸಂಪತಂತಿ ಸಹಸ್ರಶಃ ।
ಆಪೂರ್ಯಂತೇ ರಾಜಮಾರ್ಗಾಃ ಸೈನ್ಯೈರದ್ಭುತದರ್ಶನೈಃ ॥
ವೇಗವದ್ಭಿರ್ನದದ್ಭಿಶ್ಚ ತೋಯೌಘೈರಿವ ಸಾಗರಃ ।
ಅನುವಾದ
ಅಲ್ಲಲ್ಲಿ ಯುದ್ಧಕ್ಕಾಗಿ ಸಿದ್ಧರಾದ ಸಾವಿರಾರು ಸೈನಿಕರು ಓಡುತ್ತಾ ಬರುತ್ತಿದ್ದಾರೆ. ಎಲ್ಲ ಮಾರ್ಗಗಳೂ ಅದ್ಭುತ ವೇಷದಿಂದ ಅಲಂಕೃತವಾಗಿ, ನೀರಿನ ಅಸಂಖ್ಯ ಪ್ರವಾಹಗಳು ಸಮುದ್ರವನ್ನು ಸೇರುವಂತೆ, ವೇಗವಾಗಿ ಗರ್ಜಿಸುತ್ತಿರುವ ಸೈನಿಕರ ಉತ್ಸಾಹ ಎಲ್ಲೆಡೆ ಕಾಣುತ್ತಿದೆ.॥23॥
ಮೂಲಮ್ - 24
ಶಸ್ತ್ರಾಣಾಂ ಚ ಪ್ರಸನ್ನಾನಾಂ ಚರ್ಮಣಾಂ ವರ್ಮಣಾಂ ತಥಾ ॥
ಮೂಲಮ್ - 25
ರಥವಾಜಿಗಜಾನಾಂ ಚ ರಾಕ್ಷಸೇಂದ್ರಾನುಯಾಯಿನಾಮ್ ।
ಸಂಭ್ರಮೋ ರಾಕ್ಷಸಾಮೇಷ ಹೃಷಿತಾನಾಂ ತರಸ್ವಿನಾಮ್ ॥
ಮೂಲಮ್ - 26
ಪ್ರಭಾಂ ವಿಸೃಜತಾಂ ಪಶ್ಯ ನಾನಾವರ್ಣ ಸಮುತ್ಥಿತಾಮ್ ।
ವನಂ ನಿರ್ದಹತೋ ಘರ್ಮೇ ಯಥಾ ರೂಪಂ ವಿಭಾವಸೋಃ ॥
ಅನುವಾದ
ಹೊಳೆಯುತ್ತಿರುವ ನಾನಾ ಅಸ್ತ್ರ-ಶಸ್ತ್ರಗಳ, ಕತ್ತಿ-ಗುರಾಣಿಯ ಹೊಳಪು ನೋಡಿರಿ. ರಾಕ್ಷಸ ರಾಜಾ ರಾವಣನನ್ನು ಅನುಸರಿಸುವ ರಥ-ಕುದುರೆಗಳ, ಆನೆಗಳ, ರೋಮಾಂಚಿತರಾದ ವೇಗಶಾಲೀ ರಾಕ್ಷಸರಲ್ಲಿ ಈಗ ಉತ್ಸಾಹ ಕಂಡುಬರುತ್ತಿದೆ. ಗ್ರೀಷ್ಮ ಋತುವಿನಲ್ಲಿ ಕಾಡನ್ನು ಸುಡುವ ದಾವಾನಲವು ಉರಿಯುವ ರೂಪದಂತೆಯೇ ಈ ಅಸ್ತ್ರ-ಶಸ್ತ್ರಗಳ ಪ್ರಭೆ ಕಾಣುತ್ತಿದೆ.॥24-26॥
ಮೂಲಮ್ - 27
ಘಂಟಾನಾಂ ಶೃಣು ನಿರ್ಘೋಷಂ ರಥಾನಾಂ ಶೃಣು ನಿಃಸ್ವನಮ್ ।
ಹಯಾನಾಂ ಹೇಷಮಾಣಾನಾಂ ಶೃಣು ತೂರ್ಯಧ್ವನಿಂ ತಥಾ ॥
ಅನುವಾದ
ಆನೆಗಳಿಗೆ ಕಟ್ಟಿದ ಗಂಟೆಗಳ ಗಂಭೀರ ಧ್ವನಿ ಕೇಳು, ರಥಗಳ ಗಡಗಡ ಶಬ್ದ, ಕುದುರೆಗಳ ಹೇಷಾರವ, ಬಗೆಬಗೆಯ ವಾದ್ಯಗಳ ಗಂಭೀರನಾದವನ್ನು ಕೇಳಿರಿ.॥27॥
ಮೂಲಮ್ - 28½
ಉದ್ಯತಾಯುಧಹಸ್ತಾನಾಂ ರಾಕ್ಷಸೇಂದ್ರಾನುಯಾಯಿನಾಮ್ ।
ಸಂಭ್ರಮೋ ರಕ್ಷಸಾಮೇಷ ತುಮುಲೋ ರೋಮಹರ್ಷಣಮ್ ॥
ಶ್ರೀಸ್ತ್ವಾಂ ಭಜತಿ ಶೋಕಘ್ನೀ ರಕ್ಷಸಾಂ ಭಯಮಾಗತಮ್ ।
ಅನುವಾದ
ಆಯುಧಗಳನ್ನು ಧರಿಸಿ ಆನೆಯ ಮೇಲೆ ಕುಳಿತಿರುವ ರಾವಣನ ಅನುಗಾಮಿ ರಾಕ್ಷಸರು ಗಾಬರಿಗೊಂಡಿರುವರು. ಅವರ ಮೇಲೆ ಯಾವುದೋ ಭಾರೀ ರೋಮಾಂಚಕಾರಿ ಭಯ ಉಪಸ್ಥಿತವಾಗಿದೆ ಎಂದೆನಿಸುತ್ತದೆ. ಶೋಕವನ್ನು ನಿವಾರಿಸುವ ಲಕ್ಷ್ಮಿಯು ನಿಮ್ಮ ಸೇವೆಯಲ್ಲಿ ಉಪಸ್ಥಿತಳಾಗಿರುವಳು.॥28½॥
ಮೂಲಮ್ - 29
ರಾಮಃ ಕಮಲಪತ್ರಾಕ್ಷೋ ದೈತ್ಯಾನಾಮಿವ ವಾಸವಃ ॥
ಮೂಲಮ್ - 30
ಅವಜಿತ್ಯ ಜಿತಕ್ರೋಧಸ್ತಮಚಿಂತ್ಯ ಪರಾಕ್ರಮಃ ।
ರಾವಣಂ ಸಮರೇ ಹತ್ವಾ ಭರ್ತಾ ತ್ವಾಧಿಗಮಿಷ್ಯತಿ ॥
ಅನುವಾದ
ನಿಮ್ಮ ಪತಿ ಕಮಲನಯನ ಶ್ರೀರಾಮನು ಕ್ರೋಧವನ್ನು ಗೆದ್ದಿರುವನು. ಅವನ ಪರಾಕ್ರಮ ಅಚಿಂತ್ಯವಾಗಿದೆ. ಅವನು ದೈತ್ಯರನ್ನು ಸೋಲಿಸುವ ಇಂದ್ರನಂತೆ ರಾಕ್ಷಸರನ್ನು ಗೆದ್ದು ಸಮರಾಂಗಣದಲ್ಲಿ ರಾವಣನನ್ನು ವಧಿಸುವನು.॥29-30॥
ಮೂಲಮ್ - 31
ವಿಕ್ರಮಿಷ್ಯತಿ ರಕ್ಷಃಸು ಭರ್ತಾ ತೇ ಸಹಲಕ್ಷ್ಮಣಃ ।
ಯಥಾ ಶತ್ರುಷು ಶತ್ರುಘ್ನೋ ವಿಷ್ಣು ನಾ ಸಹ ವಾಸವಃ ॥
ಅನುವಾದ
ಶತ್ರುಸೂದನ ಇಂದ್ರನು ಉಪೇಂದ್ರನ ಸಹಾಯದಿಂದ ಶತ್ರುಗಳ ಮೇಲೆ ಪರಾಕ್ರಮ ಪ್ರಕಟಿಸಿದಂತೆಯೇ ನಿಮ್ಮ ಪತಿ ಶ್ರೀರಾಮನು ಲಕ್ಷ್ಮಣನ ಸಹಯೋಗದಿಂದ ರಾಕ್ಷಸರ ಮೇಲೆ ತನ್ನ ಬಲವನ್ನೂ, ವಿಕ್ರಮವನ್ನೂ ತೋರಿಸುವನು.॥31॥
ಮೂಲಮ್ - 32
ಆಗತಸ್ಯ ಹಿ ರಾಮಸ್ಯ ಕ್ಷಿಪ್ರಮಂಕಾಗತಾಂ ಸತೀಮ್ ।
ಅಹಂ ದ್ರಕ್ಷ್ಯಾಮಿ ಸಿದ್ಧಾರ್ಥಾಂ ತ್ವಾಂ ಶತ್ರೌ ವಿನಿಪಾತಿತೇ ॥
ಅನುವಾದ
ಶತ್ರುವಾದ ರಾವಣನ ಸಂಹಾರವಾದಾಗ ಬೇಗನೇ ನಿನ್ನಂತಹ ಸತೀ-ಸಾಧ್ವೀಯು ಇಲ್ಲಿಗೆ ಬಂದಿರುವ ಶ್ರೀರಾಮನ ತೊಡೆಯಲ್ಲಿ ಕುಳ್ಳಿರುವುದನ್ನು ನೋಡುವೆನು. ಇನ್ನು ನಿನ್ನ ಮನೋರಥ ಪೂರ್ಣವಾಗುವುದು.॥32॥
ಮೂಲಮ್ - 33
ಅಸ್ತ್ರಾಣ್ಯಾನಂದ ಜಾನಿ ತ್ವಂ ವರ್ತಯಿಷ್ಯಸಿ ಜಾನಕಿ ।
ಸಮಾಗಮ್ಯ ಪರಿಷ್ವಕ್ತಾ ತಸ್ಯೋರಸಿ ಮಹೋರಸಃ ॥
ಅನುವಾದ
ಜನಕನಂದಿನೀ! ವಿಶಾಲ ವಕ್ಷಃಸ್ಥಳವುಳ್ಳ ವಿಭೂಷಿತ ಶ್ರೀರಾಮನು ದೊರಕಿದಾಗ ಅವನನ್ನು ಎದೆಗೊತ್ತಿಕೊಂಡು ಆನಂದಾಶ್ರುಗಳನ್ನು ಹರಿಸುವಿ.॥33॥
ಮೂಲಮ್ - 34
ಅಚಿರಾನ್ಮೋಕ್ಷ್ಯತೇ ಸೀತೇ ದೇವಿ ತೇ ಜಘನಂ ಗತಾಮ್ ।
ಧೃತಾಮೇಕಾಂ ಬಹೂನ್ಮಾಸಾನ್ ವೇಣೀಂ ರಾಮೋ ಮಹಾಬಲಃ ॥
ಅನುವಾದ
ದೇವಿ ಸೀತೇ! ಅನೇಕ ತಿಂಗಳುಗಳಿಂದ ನಿನ್ನ ಕೂದಲು ಜಟೆಗಟ್ಟಿ ಹೋಗಿ ಸೊಂಟದವರೆಗೆ ನೇತಾಡುತ್ತಿದೆ. ಅದನ್ನು ಮಹಾಬಲಿ ಶ್ರೀರಾಮನು ಬೇಗನೆ ತನ್ನ ಕೈಯಿಂದ ಬಿಡಿಸುವನು.॥34॥
ಮೂಲಮ್ - 35
ತಸ್ಯ ದೃಷ್ಟ್ವಾ ಮುಖಂ ದೇವಿ ಪೂರ್ಣಚಂದ್ರಮಿವೋದಿತಮ್ ।
ಮೋಕ್ಷ್ಯಸೇ ಶೋಕಜಂ ವಾರಿ ನಿರ್ಮೋಕಮಿವ ಪನ್ನಗೀ ॥
ಅನುವಾದ
ದೇವಿ! ಹಾವು ಪೊರೆಯನ್ನು ಬಿಡುವಂತೆ, ಉದಯಿಸಿದ ಪೂರ್ಣಚಂದ್ರನಂತೆ ನೀನು ತನ್ನ ಪತಿಯ ಮುದಿತ ಮುಖವನ್ನು ನೋಡಿ ನೀನು ಕಣ್ಣೀರು ಹರಿಸುವುದನ್ನು ಬಿಟ್ಟುಬಿಡುವೆ.॥35॥
ಮೂಲಮ್ - 36
ರಾವಣಂ ಸಮರೇ ಹತ್ವಾನಚಿರಾದೇವ ಮೈಥಿಲಿ ।
ತ್ವಯಾ ಸಮಗ್ರಃ ಪ್ರಿಯಯಾ ಸುಖಾರ್ಹೋ ಲಪ್ಸ್ಯತೇ ಸುಖಮ್ ॥
ಅನುವಾದ
ಮೈಥಿಲಿಯೇ! ರಣರಂಗದಲ್ಲಿ ಬೇಗನೇ ರಾವಣನನ್ನು ವಧಿಸಿ ಸುಖವನ್ನು ಅನುಭವಿಸಲು ಯೋಗ್ಯನಾದ ಶ್ರೀರಾಮನು ಸಫಲ ಮನೋರಥನಾಗಿ ಪ್ರಿಯತಮೆ ನಿನ್ನೊಂದಿಗೆ ಮನೋವಾಂಛಿತ ಸುಖವನ್ನು ಪಡೆಯುವನು.॥36॥
ಮೂಲಮ್ - 37
ಸಭಾಜಿತಾ ತ್ವಂ ರಾಮೇಣ ಮೋದಿಷ್ಯಸಿ ಮಹಾತ್ಮನಾ ।
ಸುವರ್ಷೇಣ ಸಮಾಯುಕ್ತಾ ಯಥಾ ಸಸ್ಯೇನ ಮೇದಿನೀ ॥
ಅನುವಾದ
ಭೂಮಿಯು ಉತ್ತಮ ಮಳೆಯಿಂದಾಗಿ ಹಸುರಾಗಿ ನಳನಳಿಸುವಂತೆ ನೀನು ಮಹಾತ್ಮಾ ಶ್ರೀರಾಮನಿಂದ ಸಮ್ಮಾನಿತಳಾಗಿ ಆನಂದಮಗ್ನಳಾಗುವೆ.॥37॥
ಮೂಲಮ್ - 38
ಗಿರಿವರಮಭಿತೋ ವಿವರ್ತಮಾನೋ
ಹಯ ಇವ ಮಂಡಲಮಾಶು ಯಃ ಕರೋತಿ ।
ತಮಿಹ ಶರಣಮಭ್ಯುಪೈಹಿ ದೇವಿ
ದಿವಸಕರಂ ಪ್ರಭವೋ ಹ್ಯಯಂ ಪ್ರಜಾನಾಮ್ ॥
ಅನುವಾದ
ದೇವೀ! ಗಿರಿಶ್ರೇಷ್ಠ ಮೇರುವಿನ ಸುತ್ತಲು ಕುದುರೆಯಂತೆ ಶೀಘ್ರವಾಗಿ ಮಂಡಲಾಕಾರ ಗತಿಯಿಂದ ಚಲಿಸುತ್ತಿರುವ ಭಗವಾನ್ ಸೂರ್ಯನಿಗೆ (ಅವನು ನಿಮ್ಮ ಕುಲದೇವತೆಯೂ ಆಗಿದ್ದಾನೆ.) ಶರಣಾಗು; ಏಕೆಂದರೆ ಅವನು ಪ್ರಜಾಜನರಿಗೆ ಸುಖಕೊಡಲು ಹಾಗೂ ಅವರ ದುಃಖವನ್ನು ದೂರಗೊಳಿಸಲು ಸಮರ್ಥನಾಗಿದ್ದಾನೆ.॥38॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತಮೂರನೆಯ ಸರ್ಗ ಪೂರ್ಣವಾಯಿತು.॥33॥