वाचनम्
ಭಾಗಸೂಚನಾ
ಶ್ರೀರಾಮನು ಸತ್ತನೆಂದು ತಿಳಿದು ಸೀತೆಯ ವಿಲಾಪ, ರಾವಣನು ಮಂತ್ರಿಗಳ ಸಲಹೆಯಂತೆ ಯುದ್ಧದ ಸಿದ್ಧತೆ
ಮೂಲಮ್ - 1
ಸಾ ಸೀತಾ ತಚ್ಛಿರೋ ದೃಷ್ಟ್ವಾ ತಚ್ಚ ಕಾರ್ಮುಕಮುತ್ತಮಮ್ ।
ಸುಗ್ರೀವ ಪ್ರತಿಸಂಸರ್ಗಮಾಖ್ಯಾತಂ ಚ ಹನೂಮತಾ ॥
ಮೂಲಮ್ - 2
ನಯನೇ ಮುಖವರ್ಣಂ ಚ ಭರ್ತುಸ್ತತ್ಸದೃಶಂ ಮುಖಮ್ ।
ಕೇಶಾನ್ಕೇಶಾಂತದೇಶಂ ಚ ತಂ ಚ ಚೂಡಾಮಣಿಂ ಶುಭಮ್ ॥
ಮೂಲಮ್ - 3
ಏತೈಃ ಸರ್ವೈರಭಿಜ್ಞಾ ನೈರಭಿಜ್ಞಾಯ ಸುದುಃಖಿತಾ ।
ವಿಜಗರ್ಹೇಽತ್ರ ಕೈಕೇಯೀಂ ಕ್ರೋಶಂತೀ ಕುರರೀ ಯಥಾ ॥
ಅನುವಾದ
ಆ ಶ್ರೀರಾಮನ ಮಸ್ತಕವನ್ನು, ಧನುಷ್ಯವನ್ನು ನೋಡಿ, ಹನುಮಂತನು ಹೇಳಿದ ಸುಗ್ರೀವನೊಂದಿಗೆ ಆದ ಮಿತ್ರತೆಯ ಮಾತನ್ನು ನೆನೆದು, ತನ್ನ ಪತಿಯಂತೆಯೇ ನೇತ್ರ, ಮುಖವರ್ಣ, ಮುಖಾಕೃತಿ, ಕೂದಲು, ಹಣೆ ಹಾಗೂ ಆ ಸುಂದರ ಚೂಡಾಮಣಿಯನ್ನು ಗಮನಿಸಿದಳು. ಇವೆಲ್ಲ ಚಿಹ್ನೆಗಳಿಂದ ಪತಿಯನ್ನು ಗುರುತಿಸಿ ಅವಳು ಬಹಳ ದುಃಖಿತಳಾಗಿ ಕುಕುರ ಪಕ್ಷಿಯಂತೆ ಅಳುತ್ತಾ ಕೈಕೇಯಿಯನ್ನು ನಿಂದಿಸತೊಡಗಿದಳು.॥1-3॥
ಮೂಲಮ್ - 4
ಸಕಾಮಾ ಭವ ಕೈಕೇಯಿ ಹತೋಽಯಂ ಕುಲನಂದನಃ ।
ಕುಲಮುತ್ಸಾದಿತಂ ಸರ್ವಂ ತ್ವಯಾ ಕಲಹಶೀಲಯಾ ॥
ಅನುವಾದ
ಕೈಕೇಯಿ! ಈಗ ನೀನು ಸಫಲ ಮನೋರಥಳಾಗು. ನೀನು ಸಮಸ್ತ ರಘುಕುಲವನ್ನು ಸಂಹರಿಸಿವೆ.॥4॥
ಮೂಲಮ್ - 5
ಆರ್ಯೇಣ ಕಿಂ ನು ಕೈಕೇಯ್ಯಾಃ ಕೃತಂ ರಾಮೇಣ ವಿಪ್ರಿಯಮ್ ।
ಯನ್ಮಯಾ ಚೀರವಸನಂ ದತ್ತ್ವಾ ಪ್ರವ್ರಾಜಿತೋ ವನಮ್ ॥
ಅನುವಾದ
ಕೈಕೆಯು ಶ್ರೀರಾಮನಿಗೆ ನಾರುಮಡಿಯನ್ನು ಉಡಿಸಿ ನನ್ನೊಂದಿಗೆ ಕಾಡಿಗೆ ಕಳಿಸಲು, ಆರ್ಯನಾದ ಶ್ರೀರಾಮನು ಆಕೆಯ ಯಾವ ಅಪರಾಧ ಮಾಡಿದ್ದನು.॥5॥
ಮೂಲಮ್ - 6
ಏವಮುಕ್ತ್ವಾತು ವೈದೇಹೀ ವೇಪಮಾನಾ ತಪಸ್ವಿನೀ ।
ಜಗಾಮ ಜಗತೀಂ ಬಾಲಾ ಛಿನ್ನಾ ತು ಕದಲೀ ಯಥಾ ॥
ಅನುವಾದ
ಹೀಗೆ ಹೇಳುತ್ತಾ ದುಃಖದಿಂದಾಗಿ ವೈದೇಹಿಯು ಗಡಗಡನೆ ನಡುಗುತ್ತಾ ಕಡಿದ ಬಾಳೆಯಂತೆ ನಿಶ್ಚೇಷ್ಟಿತಳಾಗಿ ನೆಲಕ್ಕೆ ಕುಸಿದು ಬಿದ್ದಳು.॥6॥
ಮೂಲಮ್ - 7
ಸಾ ಮುಹೂರ್ತಾತ್ ಸಮಾಶ್ವಾಸ್ಯ ಪ್ರರಿಲಭ್ಯಾಥ ಚೇತನಾಮ್ ।
ತಚ್ಛಿರಃ ಸಮುಪಾಸ್ಥಾಯ ವಿಲಲಾಪಾಯತೇಕ್ಷಣಾ ॥
ಅನುವಾದ
ಒಂದು ಗಳಿಗೆಯಲ್ಲಿ ಎಚ್ಚರಗೊಂಡು ಆ ವಿಶಾಲಲೋಚನೆ ಸೀತೆಯು ಸ್ವಲ್ಪ ಧೈರ್ಯವಹಿಸಿ ಆ ಮಸ್ತಕವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡು ವಿಲಾಪಿಸ ತೊಡಗಿದಳು.॥7॥
ಮೂಲಮ್ - 8
ಹಾ ಹತಾಸ್ಮಿ ಮಹಾಬಾಹೋ ವೀರವ್ರತಮನುವ್ರತ ।
ಇಮಾಂ ತೇ ಪಶ್ಚಿಮಾವಸ್ಥಾಂಗತಾಸ್ಮಿ ವಿಧವಾ ಕೃತಾ ॥
ಅನುವಾದ
ಅಯ್ಯೋ! ಮಹಾಬಾಹುವೇ ! ನಾನು ಸತ್ತುಹೋದೆ. ನೀವು ವೀರವ್ರತವನ್ನು ಪಾಲಿಸುವರಾಗಿದ್ದೀರಿ. ನಿಮ್ಮ ಈ ಕೊನೆಯ ಸ್ಥಿತಿಯನ್ನು ನನ್ನ ಕಣ್ಣಿನಿಂದ ನೋಡಬೇಕಾಯಿತಲ್ಲ! ನೀವು ನನ್ನನ್ನು ವಿಧವೆಯನ್ನಾಗಿಸಿದಿರಿ.॥8॥
ಮೂಲಮ್ - 9
ಪ್ರಥಮಂ ಮರಣಂ ನಾರ್ಯಾ ಭರ್ತುರ್ವೈಗುಣ್ಯಮುಚ್ಯತೇ ।
ಸುವೃತ್ತಃ ಸಾಧುವೃತ್ತಾಯಾಃ ಸಂವೃತ್ತಸ್ತ್ವಂ ಮಮಾಗ್ರತಃ ॥
ಅನುವಾದ
ಪತ್ನಿಗಿಂತ ಮೊದಲು ಪತಿಯು ಸಾಯುವುದು ಆಕೆಗೆ ಮಹಾ ಅನರ್ಥಕರ ದೋಷವೆಂದು ತಿಳಿಯಲಾಗಿದೆ. ಸತೀ-ಸಾಧ್ವಿಯಾಗಿ ಇರುವ ನನ್ನ ಮುಂದೆ ನಿಮ್ಮಂತಹ ಸದಾಚಾರೀ ಪತಿಯ ನಿಧನ ವಾದುದು ನನಗೆ ಮಹಾದುಃಖದ ಮಾತಾಗಿದೆ.॥9॥
ಮೂಲಮ್ - 10
ಮಹದ್ದುಃಖಂ ಪ್ರಪನ್ನಾಯಾ ಮಗ್ನಾಯಾಃ ಶೋಕಸಾಗರೇ ।
ಯೋ ಹಿ ಮಾಮುದ್ಯತಸ್ತ್ರಾತುಂ ಸೋಽಪಿ ತ್ವಂ ವಿನಿಪಾತಿತಃ ॥
ಅನುವಾದ
ನಾನು ಮಹಾಸಂಕಟದಲ್ಲಿ ಬಿದ್ದಿರುವೆನು, ಶೋಕ ಸಮುದ್ರದಲ್ಲಿ ಮುಳುಗಿರುವೆನು. ನನ್ನನ್ನು ಉದ್ಧರಿಸುತ್ತಿದ್ದ ನಿಮ್ಮಂತಹ ವೀರನನ್ನು ಶತ್ರುಗಳು ಕೊಂದು ಹಾಕಿದರು.॥10॥
ಮೂಲಮ್ - 11
ಸಾ ಶ್ವಶ್ರೂರ್ಮಮ ಕೌಸಲ್ಯಾ ತ್ವಯಾ ಪುತ್ರೇಣ ರಾಘವ ।
ವತ್ಸೇನೇವ ಯಥಾ ಧೇನುರ್ವಿವತ್ಸಾ ವತ್ಸಲಾ ಕೃತಾ ॥
ಅನುವಾದ
ರಘುನಂದನ! ಸ್ನೇಹತುಂಬಿದ ಆಕಳನ್ನು ಕರುವಿನಿಂದ ಅಗಲಿಗಿದಂತೆ ಸ್ಥಿತಿ ನನ್ನ ಅತ್ತೆ ಕೌಸಲ್ಯೆಯದಾಗಿದೆ. ಆ ದಯಾಮಯ ಜನನೀ ನಿಮ್ಮಂತಹ ಪುತ್ರನಿಂದ ಅಗಲಿ ಹೋದಳು.॥11॥
ಮೂಲಮ್ - 12
ಆದಿಷ್ಟಂ ದೀರ್ಘಮಾಯುಸ್ತೇ ದೈವಜ್ಞೈರಪಿ ರಾಘವ ।
ಅನೃತಂ ವಚನಂ ತೇಷಾಮಲ್ಪಾಯುರಸಿ ರಾಘವ ॥
ಅನುವಾದ
ರಘುವೀರ ! ಜ್ಯೋತಿಷಿಗಳು ನೀವು ದೀರ್ಘಾಯುಸ್ಸು ಉಳ್ಳವರು ಎಂದು ಹೇಳಿದ್ದರೂ ಅವರ ಮಾತು ಸುಳ್ಳಾಯಿತು. ರಘುನಂದನ! ನೀವು ಅಲ್ವಾಯುಷಿಗಳಾದಿರಿಯಲ್ಲ!.॥12॥
ಮೂಲಮ್ - 13
ಅಥವಾ ನಶ್ಯತಿ ಪ್ರಜ್ಞಾ ಪ್ರಾಜ್ಞಸ್ಯಾಪಿ ಸತಸ್ತವ ।
ಪಚತ್ಯೇನಂ ತಥಾ ಕಾಲೋ ಭೂತಾನಾಂ ಪ್ರಭವೋ ಹ್ಯಯಮ್ ॥
ಅನುವಾದ
ಬುದ್ಧಿವಂತರಾಗಿದ್ದರೂ ನಿಮ್ಮ ಬುದ್ಧಿ ಹಾಳಾಯಿತಲ್ಲ. ಅದರಿಂದಲೇ ನೀವು ಮಲಗಿರುವಾಗಲೇ ಶತ್ರುಗಳ ವಶರಾದರಲ್ಲ ಅಥವಾ ಈ ಕಾಲವೇ ಸಮಸ್ತ ಪ್ರಾಣಿಗಳ ಉದ್ಭವದಲ್ಲಿ ಕಾರಣವಾಗಿವೆ. ಆದ್ದರಿಂದ ಅದೇ ಎಲ್ಲ ಪ್ರಾಣಿಗಳ ಪತಾಕೆಯಾಗಿದೆ-ಅವನನ್ನು ಶುಭಾಶುಭ ಕರ್ಮದಲ್ಲಿ ತೊಡಗಿಸುತ್ತದೆ.॥13॥
ಮೂಲಮ್ - 14
ಅದೃಷ್ಟಂ ಮೃತ್ಯುಮಾಪನ್ನಃ ಕಸ್ಮಾತ್ತ್ವಂ ನಯಶಾಸ್ತ್ರವಿತ್ ।
ವ್ಯಸನಾನಾಮುಪಾಯಜ್ಞಃ ಕುಶಲೋ ಹ್ಯಸಿ ವರ್ಜನೇ ॥
ಅನುವಾದ
ನೀವಾದರೋ ನೀತಿಶಾಸ್ತ್ರ ನಿಪುಣರಾಗಿದ್ದವರು. ಸಂಕಟದಿಂದ ಪಾರಾಗುವ ಉಪಾಯ ವನ್ನು ತಿಳಿದವರು ಹಾಗೂ ವ್ಯಸನಗಳನ್ನು ನಿವಾರಿಸಲು ಕುಶಲರಾದವರು. ಹೀಗಿದ್ದರೂ ಹೇಗೆ ನಿಮಗೆ ಮೃತ್ಯು ಉಂಟಾಯಿತು? ಇಂತಹ ಮೃತ್ಯುವು ಬೇರೆ ಯಾವುದೇ ಮನುಷ್ಯನಲ್ಲಿ ನೋಡಲಾಗುವುದಿಲ್ಲ.॥14॥
ಮೂಲಮ್ - 15
ತಥಾ ತ್ವಂ ಸಂಷರಿಷ್ವಜ್ಯ ರೌದ್ರಯಾತಿ ನೃಶಂಸಯಾ ।
ಕಾಲರಾತ್ರ್ಯಾ ಮಯಾಚ್ಛಿದ್ಯ ಹೃತಃ ಕಮಲಲೋಚನ ॥
ಅನುವಾದ
ಕಮಲನಯನ! ಅತ್ಯಂತ ಕ್ರೂರ ಭೀಷಣ ಕಾಲ ರಾತ್ರಿಯು ನಿಮ್ಮನ್ನು ಅಪ್ಪಿಕೊಂಡು, ನನ್ನಿಂದ ಕಿತ್ತುಕೊಂಡಿತು.॥15॥
ಮೂಲಮ್ - 16
ಇಹಶೇಷೇ ಮಹಾಬಾಹೋ ಮಾಂ ವಿಹಾಯ ತಪಸ್ವಿನೀಮ್ ।
ಪ್ರಿಯಾಮಿವ ಯಥಾ ನಾರೀಂ ಪೃಥಿವೀಂ ಪುರುಷರ್ಷಭ ॥
ಅನುವಾದ
ಪುರುಷೋತ್ತಮನೇ! ಮಹಾ ಬಾಹೋ! ತಪಸ್ವಿನಿಯಾದ ನನ್ನನ್ನು ತ್ಯಜಿಸಿ, ತನ್ನ ಪ್ರಿಯತಮೆ ನಾರಿಯಂತಿರುವ ಈ ಪೃಥಿವಿಯನ್ನು ಆಲಂಗಿಸಿಕೊಂಡು ಮಲಗಿರುವಿರಲ್ಲ.॥16॥
ಮೂಲಮ್ - 17
ಅರ್ಚಿತಂ ಸತತಂ ಯತ್ನಾದ್ಗಂಧಮಾಲ್ಯೈರ್ಮಯಾ ತವ ।
ಇದಂ ತೇ ಮತ್ಪ್ರಿಯಂ ವೀರ ಧನುಃ ಕಾಂಚನಭೂಷಿತಮ್ ॥
ಅನುವಾದ
ವೀರ! ನಾನು ಪ್ರಯತ್ನಪೂರ್ವಕ ಗಂಧ-ಪುಷ್ಪ ಮಾಲೆಗಳಿಂದ ಪ್ರತಿದಿನ ಪೂಜಿಸುತ್ತಿದ್ದ, ನನಗೆ ಅತ್ಯಂತ ಪ್ರಿಯವಾಗಿದ್ದ ನಿಮ್ಮ ಸ್ವರ್ಣಭೂಷಿತ ಧನುಸ್ಸು ಅದೇ ಆಗಿದೆ.॥17॥
ಮೂಲಮ್ - 18
ಪಿತ್ರಾ ದಶರಥೇನ ತ್ವಂ ಶ್ವಶುರೇಣ ಮಮಾನಘ ।
ಸರ್ವೈಶ್ಚ ಪಿತೃಭಿಃ ಸಾರ್ಧಂ ನೂನಂ ಸ್ವರ್ಗೇ ಸಮಾಗತಃ ॥
ಅನುವಾದ
ನಿಷ್ಪಾಪ ರಘುನಂದನ! ನೀವು ಸ್ವರ್ಗಕ್ಕೆ ಹೋಗಿ ಖಂಡಿತವಾಗಿ ನನ್ನ ಮಾವನವರಾದ, ನಿಮ್ಮ ತಂದೆ ದಶರಥ ಮಹಾರಾಜರನ್ನು ಅಥವಾ ಇತರ ಎಲ್ಲ ಪಿತೃಗಳನ್ನು ಭೆಟ್ಟಿಯಾಗಿರಬಹುದು.॥18॥
ಮೂಲಮ್ - 19
ದಿವಿ ನಕ್ಷತ್ರಭೂತಂ ಚ ಮಹತ್ಕರ್ಮಕೃತಂ ತಥಾ ।
ಪುಣ್ಯಂ ರಾಜರ್ಷಿವಂಶಂ ತ್ವಮಾತ್ಮನಃ ಸಮುಪೇಕ್ಷಸೇ ॥
ಅನುವಾದ
ನೀವು ಪಿತೃವಾಕ್ಯ ಪಾಲನರೂಪೀ ಮಹಾನ್ ಕರ್ಮ ಮಾಡಿ ಅದ್ಭುತ ಪುಣ್ಯವನ್ನು ಗಳಿಸಿ, ರಾಜರ್ಷಿಕುಲವನ್ನು ಉಪೇಕ್ಷಿಸಿ (ಅದನ್ನು ಬಿಟ್ಟು), ಆಕಾಶದಲ್ಲಿ ನಕ್ಷತ್ರವಾಗಿ ಪ್ರಕಾಶಿಸುತ್ತಿರುವಲ್ಲಿಗೆ ಇಲ್ಲಿಂದ ಹೋಗುತ್ತಿದ್ದೀರಿ.॥19॥
ಮೂಲಮ್ - 20
ಕಿಂ ಮಾಂ ನ ಪ್ರೇಕ್ಷಸೇ ರಾಜನ್ಕಿಂ ವಾ ನ ಪ್ರತಿಭಾಷಸೇ ।
ಬಾಲಾಂ ಬಾಲ್ಯೇನ ಸಂಪ್ರಾಪ್ತಾಂ ಭಾರ್ಯಾಂ ಮಾಂ ಸಹಚಾರಿಣೀಮ್ ॥
ಅನುವಾದ
ರಾಜನೇ! ನಾನು ಸಣ್ಣ ವಯಸ್ಸಿನವಳಾಗಿದ್ದಾಗಲೇ ನೀವು ನನ್ನನ್ನು ಪತ್ನಿಯಾಗಿ ಪಡೆದಿರಿ. ನಾನು ಸದಾ ನಿಮ್ಮೊಂದಿಗೆ ವಿಚರಿಸುವ ಸಹಧರ್ಮಿಣಿಯಾಗಿರುವೆ. ನೀವು ನನ್ನ ಕಡೆಗೆ ಏಕೆ ನೋಡುವುದಿಲ್ಲ? ಇಲ್ಲವೇ ನನ್ನ ಮಾತಿಗೆ ಏಕೆ ಉತ್ತರಿಸುತ್ತಿಲ್ಲ.॥20॥
ಮೂಲಮ್ - 21
ಸಂಶ್ರುತಂ ಗೃಹ್ಣತಾ ಪಾಣಿಂ ಚರಿಷ್ಯಾಮೀತಿ ಯತ್ತ್ವಯಾ ।
ಸ್ಮರ ತನ್ನಾಮ ಕಾಕುತ್ಸ್ಥ ನಯ ಮಾಮಪಿ ದುಃಖಿತಾಮ್ ॥
ಅನುವಾದ
ಕಾಕುತ್ಸ್ಥನೇ! ನನ್ನ ಪಾಣಿಗ್ರಹಣ ಮಾಡುವಾಗ ನೀವು ನಾನು ನಿನ್ನೊಂದಿಗೆ ಧರ್ಮಾಚರಣ ಮಾಡುವೆನು ಎಂದು ಪ್ರತಿಜ್ಞೆ ಮಾಡಿರುವಿರಿ. ಅದನ್ನು ಸ್ಮರಿಸಿ ದುಃಖಿತೆಯಾದ ನನ್ನನ್ನು ಕರೆದುಕೊಂಡು ಹೋಗಿರಿ.॥21॥
ಮೂಲಮ್ - 22
ಕಸ್ಮಾನ್ಮಾಮಪಹಾಯ ತ್ವಂ ಗತೋ ಗತಿಮತಾಂ ವರ ।
ಅಸ್ಮಾಲ್ಲೋಕಾದಮುಂ ಲೋಕಂ ತ್ಯಕ್ತ್ವಾ ಮಾಮಪಿ ದುಃಖಿತಾಮ್ ॥
ಅನುವಾದ
ಗತಿಮಾನವರಲ್ಲಿ ಶ್ರೇಷ್ಠ ರಘುನಂದನ! ನೀವು ನನ್ನನ್ನು ನಿಮ್ಮೊಂದಿಗೆ ವನಕ್ಕೆ ಕರೆದುಕೊಂಡು ಬಂದು, ದುಃಖಿತೆಯಾದ ನನ್ನನ್ನು ಇಲ್ಲೇ ಬಿಟ್ಟು ಈ ಲೋಕದಿಂದ ಪರಲೋಕಕ್ಕೆ ಏಕೆ ಹೊರಟುಹೋದಿರಿ.॥22॥
ಮೂಲಮ್ - 23
ಕಲ್ಯಾಣೈ ರುಚಿರಂ ಗಾತ್ರಂ ಪರಿಷ್ಟಕ್ತಂ ಮಯೈವ ತು ।
ಕ್ರವ್ಯಾದೈಸ್ತಚ್ಛರೀರಂ ತೇ ನೂನಂ ವಿಪರಿಕೃಷ್ಯತೇ ॥
ಅನುವಾದ
ನಾನು ಅನೇಕ ಮಂಗಲ ಉಪಚಾರಗಳಿಂದ ಸುಂದರವಾದ ನಿಮ್ಮ ಶ್ರೀವಿಗ್ರಹವನ್ನು ಆಲಿಂಗಿಸಿದ್ದೆ, ಇಂದು ಅದನ್ನೇ ಮಾಂಸಭಕ್ಷಿ ಹಿಂಸಕ ಜಂತುಗಳು ಖಂಡಿತವಾಗಿ ಅತ್ತ-ಇತ್ತ ಎಳೆದಾಡುತ್ತಿರಬಹುದು.॥23॥
ಮೂಲಮ್ - 24
ಅಗ್ನಿಷ್ಟೋಮಾದಿಭಿರ್ಯಜ್ಞೈರಿಷ್ಟವಾನಾಪ್ತದಕ್ಷಿಣೈಃ ।
ಅಗ್ನಿಹೋತ್ರೇಣ ಸಂಸ್ಕಾರಂ ಕೇನ ತ್ವಂ ನ ತು ಲಪ್ಸ್ಯಸೇ ॥
ಅನುವಾದ
ನೀವಾದರೋ ಸಾಕಷ್ಟು ದಕ್ಷಿಣೆಗಳುಳ್ಳ ಅಗ್ನಿಷ್ಟೋಮಾದಿ ಯಜ್ಞಗಳ ಮೂಲಕ ಭಗವಾನ್ ಯಜ್ಞ ಪುರುಷನನ್ನು ಆರಾಧಿಸಿದ್ದೀರಿ; ಮತ್ತೆ ಅಗ್ನಿಹೋತ್ರದ ಅಗ್ನಿಯಿಂದ ದಾಹ ಸಂಸ್ಕಾರದ ಸುಯೋಗ ನಿಮಗೆ ದೊರೆಯದಿರಲು ಕಾರಣವಾದರೂ ಏನು.॥24॥
ಮೂಲಮ್ - 25
ಪ್ರವ್ರಜ್ಯಾಮುಪಪನ್ನಾನಾಂ ತ್ರಯಾಣಾಮೇಕಮಾಗತಮ್ ।
ಪರಿಪ್ರೇಕ್ಷ್ಯತಿ ಕೌಸಲ್ಯಾ ಲಕ್ಷ್ಮಣಂ ಶೋಕಲಾಲಸಾ ॥
ಅನುವಾದ
ನಾವು ಮೂವರೂ ಒಟ್ಟಿಗೆ ಕಾಡಿಗೆ ಬಂದಿದ್ದೆವು; ಆದರೆ ಈಗ ಶೋಕಾಕುಲವಾದ ತಾಯಿ ಕೌಸಲ್ಯೆಯು ಕೇವಲ ಲಕ್ಷ್ಮಣನೊಬ್ಬನೇ ಮರಳಿ ದುದನ್ನು ನೋಡುವಳು.॥25॥
ಮೂಲಮ್ - 26
ಸ ತಸ್ಯಾಃ ಪರಿಪೃಚ್ಛಂತ್ಯಾ ವಧಂ ಮಿತ್ರಬಲಸ್ಯ ತೇ ।
ತವ ಚಾಖ್ಯಾಸ್ಯತೇ ನೂನಂ ನಿಶಾಯಾಂ ರಾಕ್ಷಸೈರ್ವಧಮ್ ॥
ಅನುವಾದ
ಅವಳು ಕೇಳಿದಾಗ ಲಕ್ಷ್ಮಣನು-ರಾತ್ರೆಯಲ್ಲಿ ನಿಮ್ಮ ಸ್ನೇಹಿತನ ಸೈನ್ಯದೊಂದಿಗೆ ಮಲಗಿದ್ದಾಗ ನಿಮ್ಮನ್ನು ರಾಕ್ಷಸರು ವಧಿಸಿದರು ಎಂಬ ಸಮಾಚಾರ ಖಂಡಿತ ತಿಳಿಸುವನು.॥26॥
ಮೂಲಮ್ - 27
ಸಾ ತ್ವಾಂ ಸುಪ್ತಂ ಹತಂ ಜ್ಞಾತ್ವಾ ಮಾಂ ಚ ರಕ್ಷೋಗೃಹಂ ಗತಾಮ್ ।
ಹೃದಯೇನಾವದೀರ್ಣೇನ ನ ಭವಿಷ್ಯತಿ ರಾಘವ ॥
ಅನುವಾದ
ರಘುನಂದನ! ನೀವು ಮಲಗಿದ್ದಾಗ ಕೊಲ್ಲಲ್ಪಟ್ಟಿರಿ, ನಾನು ರಾಕ್ಷಸನ ಮನೆಯಲ್ಲಿ ಕದ್ದು ತಂದಿರುವೆ ಎಂಬ ಸಮಾಚಾರ ಕೇಳಿದಾಗ ಆಕೆಯ ಹೃದಯ ಒಡೆದು ಪ್ರಾಣತ್ಯಾಗ ಮಾಡುವಳು.॥27॥
ಮೂಲಮ್ - 28
ಮಮ ಹೇತೋರನಾರ್ಯಾಯಾ ಅನಘಃ ಪಾರ್ಥಿವಾತ್ಮಜಃ ।
ರಾಮಃ ಸಾಗರಮುತ್ತೀರ್ಯ ವೀರ್ಯವಾನ್ ಗೋಷ್ಪದೇ ಹತಃ ॥
ಅನುವಾದ
ಅಯ್ಯೋ! ಅನಾರ್ಯೆಯಾದ ನನ್ನ ಕುರಿತು ನಿಷ್ಪಾಪ ರಾಜಕುಮಾರ ಮಹಾ ಪರಾಕ್ರಮೀ ಶ್ರೀರಾಮನು ಸಮುದ್ರಲಂಘನದಂತಹ ಮಹಾಕರ್ಮ ಮಾಡಿಯೂ ಹಸುವಿನ ಗೊರಸಿನಷ್ಟು ನೀರಿನಲ್ಲಿ ಮುಳುಗಿ ಹೋದನಲ್ಲ ! ಯುದ್ಧಮಾಡದೆಯೇ ಮಲಗಿದ್ದಾಗ ಕೊಲ್ಲಲ್ಪಟ್ಟನಲ್ಲ.॥28॥
ಮೂಲಮ್ - 29
ಅಹಂ ದಾಶರಥೇನೋಢಾ ಮೋಹಾತ್ ಸ್ವಕುಲಪಾಂಸನೀ ।
ಆರ್ಯಪುತ್ರಸ್ಯ ರಾಮಸ್ಯ ಭಾರ್ಯಾ ಮೃತ್ಯುರಜಾಯತ ॥
ಅನುವಾದ
ಅಯ್ಯೋ ಶಿವನೇ! ದಶರಥನಂದನ ಶ್ರೀರಾಮನು ನನ್ನಂತಹ ಕುಲಕಲಂಕಿಯಾದ ನಾರಿಯನ್ನು ಮೋಹವಶ ಮದುವೆ ಮಾಡಿಕೊಂಡನು. ಪತ್ನಿಯೇ ಆರ್ಯಪುತ್ರ ಶ್ರೀರಾಮನ ಮೃತ್ಯುರೂಪಳಾದಳಲ್ಲ.॥29॥
ಮೂಲಮ್ - 30
ನೂನಮನ್ಯಾಂ ಮಯಾ ಜಾತಿಂ ವಾರಿತಂ ದಾನಮುತ್ತಮಮ್ ।
ಯಾಹಮದ್ಯೇಹ ಶೋಚಾಮಿ ಭಾರ್ಯಾ ಸರ್ವಾತಿಥೇರಿಹ ॥
ಅನುವಾದ
ಯಾರ ಬಳಿಗೆ ಎಲ್ಲ ಜನರು ಯಾಚಕರಾಗಿ ಬರುತ್ತಿದ್ದರೋ, ಎಲ್ಲ ಅತಿಥಿಗಳು ಯಾರಿಗೆ ಪ್ರಿಯರಾಗಿದ್ದರೋ ಅಂತಹ ಶ್ರೀರಾಮನ ಪತ್ನಿಯಾದ ನಾನು ಇಂದು ಶೋಕಿಸುತ್ತಿದ್ದೇನೆ. ನಾನು ಹಿಂದಿನ ಜನ್ಮದಲ್ಲಿ ಖಂಡಿತವಾಗಿ ಉತ್ತಮ ದಾನ ಧರ್ಮದಲ್ಲಿ ತೊಂದರೆಪಡಿಸಿದ್ದೆ ಎಂದು ಗೊತ್ತಾಗುತ್ತದೆ.॥30॥
ಮೂಲಮ್ - 31
ಸಾಧು ಘಾತಯ ಮಾಂ ಕ್ಷಿಪ್ರಂ ರಾಮಸ್ಯೋಪರಿ ರಾವಣ ।
ಸಮಾನಯ ಪತಿಂ ಪತ್ನ್ಯಾ ಕುರು ಕಲ್ಯಾಣಮುತ್ತಮಮ್ ॥
ಅನುವಾದ
ರಾವಣ! ನನ್ನನ್ನು ಕೂಡ ಶ್ರೀರಾಮನ ಶವದಮೇಲೆ ಇರಿಸಿ ನನ್ನನ್ನೂ ವಧಿಸಿಬಿಡು. ಹೀಗೆ ಪತಿಗೆ ಪತ್ನಿಯೊಂದಿಗೆ ಸೇರಿಸಿ ಬಿಡು. ಇದು ಉತ್ತಮ ಶ್ರೇಯಸ್ಕರ ಕಾರ್ಯವಾಗಿದೆ, ಇದನ್ನು ಅವಶ್ಯವಾಗಿ ಮಾಡು.॥31॥
ಮೂಲಮ್ - 32
ಶಿರಸಾ ಮೇ ಶಿರಶ್ಚಾಸ್ಯ ಕಾಯಂ ಕಾಯೇನ ಯೋಜಯ ।
ರಾವಣಾನುಗಮಿಷ್ಯಾಮಿ ಗತಿಂ ಭರ್ತುರ್ಮಹಾತ್ಮನಃ ॥
ಅನುವಾದ
ರಾವಣನೇ! ನನ್ನ ತಲೆಯನ್ನು ಪತಿಯ ತಲೆಯೊಂದಿಗೆ, ನನ್ನ ಶರೀರವನ್ನು ಪತಿಯ ಶರೀರದೊಂದಿಗೆ ಸಂಯೋಗ ಮಾಡಿಸು. ಹೀಗೆ ನಾನು ನನ್ನ ಮಹಾತ್ಮಾ ಪತಿಯ ಗತಿಯನ್ನು ಅನುಸರಿಸುವೆನು.॥32॥
ಮೂಲಮ್ - 33
ಇತೀವ ದುಃಖಸಂತಪ್ತಾ ವಿಲಲಾಪಾಯತೇಕ್ಷಣಾ ।
ಭರ್ತುಃ ಶಿರೋ ಧನುಶ್ಚೈವ ದದರ್ಶ ಜನಕಾತ್ಮಜಾ ॥
ಅನುವಾದ
ಹೀಗೆ ದುಃಖದಿಂದ ಸಂತಪ್ತಳಾದ ವಿಶಾಲಲೋಚನೆ ಜನಕನಂದಿನಿ ಸೀತೆಯು ಪತಿಯ ಮಸ್ತಕ ಹಾಗೂ ಧನುಷ್ಯವನ್ನು ನೋಡಿ ವಿಲಪಿಸತೊಡಗಿದಳು.॥33॥
ಮೂಲಮ್ - 34
ಏವಂ ಲಾಲಪ್ಯಮಾನಾಯಾಂ ಸೀತಾಯಾಂ ತತ್ರ ರಾಕ್ಷಸಃ ।
ಅಭಿಚಕ್ರಾಮ ಭರ್ತಾರಮನೀಕಸ್ಥಃ ಕೃತಾಂಜಲಿಃ ॥
ಅನುವಾದ
ಸೀತೆಯು ಈ ಪ್ರಕಾರ ವಿಲಾಪಿಸುತ್ತಿದ್ದಾಗ ಅಲ್ಲಿಗೆ ರಾವಣನ ಸೈನ್ಯದ ಒಬ್ಬ ಸೈನಿಕನು ಕೈಮುಗಿದುಕೊಂಡು ತನ್ನ ಒಡೆಯನಲ್ಲಿಗೆ ಬಂದನು.॥34॥
ಮೂಲಮ್ - 35
ವಿಜಯಸ್ವಾರ್ಯಪುತ್ರೇತಿ ಸೋಽಭಿವಾದ್ಯ ಪ್ರಸಾದ್ಯ ಚ ।
ನ್ಯವೇದಯದನುಪ್ರಾಪ್ತಂ ಪ್ರಹಸ್ತಂ ವಾಹಿನೀಪತಿಮ್ ॥
ಅನುವಾದ
‘ಆರ್ಯಪುತ್ರನಿಗೆ ಜಯವಾಗಲೀ’ ಎಂದು ಹೇಳಿ ರಾವಣನಿಗೆ ಅಭಿವಾದನ ಮಾಡಿ ಪ್ರಸನ್ನಗೊಳಿಸಿ ಸೇನಾಪತಿ ಪ್ರಹಸ್ತ ಆಗಮಿಸಿರುವನು ಎಂದು ಸೂಚಿಸಿದನು.॥35॥
ಮೂಲಮ್ - 36
ಅಮಾತ್ಯೈಃ ಸಹಿತೈಃ ಸರ್ವೈಃ ಪ್ರಹಸ್ತಃ ಸ್ತ್ವಾಮುಪಸ್ಥಿತಃ ।
ತೇನ ದರ್ಶನಕಾಮೇನ ಅಹಂ ಪ್ರಸ್ಥಾಪಿತಃ ಪ್ರಭೋ ॥
ಅನುವಾದ
ಪ್ರಭೋ! ಎಲ್ಲ ಮಂತ್ರಿಗಳೊಂದಿಗೆ ಪ್ರಹಸ್ತನು ಮಹಾರಾಜರ ಸೇವೆಯಲ್ಲಿ ಉಪಸ್ಥಿತನಾಗಿದ್ದಾನೆ. ಅವನು ನಿಮ್ಮನ್ನು ನೋಡಲು ಬಯಸುತ್ತಿರುವನು, ಅದಕ್ಕಾಗಿ ಅವನು ನನ್ನನ್ನು ಇಲ್ಲಿಗೆ ಕಳಿಸಿರುವನು.॥36॥
ಮೂಲಮ್ - 37
ನೂನಮಸ್ತಿ ಮಹಾರಾಜ ರಾಜಭಾವಾತ್ ಕ್ಷಮಾನ್ವಿತ ।
ಕಿಂಚಿದಾತ್ಯಯಿಕಂ ಕಾರ್ಯಂ ತೇಷಾಂ ತ್ವಂ ದರ್ಶನಂ ಕುರು ॥
ಅನುವಾದ
ಕ್ಷಮಾಶೀಲ ಮಹಾರಾಜ! ನಿಶ್ಚಯವಾಗಿ ಯಾವುದೋ ಅತ್ಯಂತ ಆವಶ್ಯಕ ರಾಜಕೀಯ ಕಾರ್ಯಮುಂದಾಗಿದೆ; ಆದ್ದರಿಂದ ಅವನನ್ನು ಕಾಣಲು ನೀವು ಕಷ್ಟಪಡುವಿರಾ.॥37॥
ಮೂಲಮ್ - 38
ಏತಚ್ಛ್ರುತ್ವಾ ದಶಗ್ರೀವೋ ರಾಕ್ಷಸ ಪ್ರತಿವೇದಿತಮ್ ।
ಅಶೋಕವನಿಕಾಂ ತ್ಯಕ್ತ್ವಾ ಮಂತ್ರಿಣಾಂ ದರ್ಶನಂ ಯಯೌ ॥
ಅನುವಾದ
ರಾಕ್ಷಸನು ಹೇಳಿದ ಮಾತನ್ನು ಕೇಳಿ ರಾವಣನು ಅಶೋಕವನ್ನು ಬಿಟ್ಟು ಮಂತ್ರಿ ಗಳನ್ನು ಕಾಣಲು ಹೊರಟು ಹೋದನು.॥38॥
ಮೂಲಮ್ - 39
ಸ ತು ಸರ್ವಂ ಸಮರ್ಥ್ಯೈವ ಮಂತ್ರಿಭಿಃ ಕೃತ್ಯಮಾತ್ಮನಃ ।
ಸಭಾಂ ಪ್ರವಿಶ್ಯವಿದಧೇ ವಿದಿತ್ವಾ ರಾಮವಿಕ್ರಮಮ್ ॥
ಅನುವಾದ
ಅವನು ಮಂತ್ರಿಗಳಲ್ಲಿ ತನ್ನೆಲ್ಲ ಕೃತ್ಯಗಳನ್ನು ಸಮರ್ಥಿಸಿ, ಶ್ರೀರಾಮಚಂದ್ರನ ಪರಾಕ್ರಮವನ್ನು ಅರಿತು ಸಭಾಭವನವನ್ನು ಪ್ರವೇಶಿಸಿ ಪ್ರಸ್ತುತ ಕಾರ್ಯದ ವ್ಯವಸ್ಥೆಯಲ್ಲಿ ತೊಡಗಿದನು.॥39॥
ಮೂಲಮ್ - 40
ಅಂತರ್ಧಾನಂ ತು ತಚ್ಛೀರ್ಷಂ ತಚ್ಚ ಕಾರ್ಮುಕಮತ್ತಮಮ್ ।
ಜಗಾಮ ರಾವಣಸ್ಯೈವ ನಿರ್ಯಾಣಸಮನಂತರಮ್ ॥
ಅನುವಾದ
ರಾವಣನು ಅಲ್ಲಿಂದ ಹೊರಡುತ್ತಲೇ ಆ ಶಿರ ಮತ್ತು ಧನುಸ್ಸು ಅದೃಶ್ಯವಾಯಿತು.॥40॥
ಮೂಲಮ್ - 41
ರಾಕ್ಷಸೇಂದ್ರಸ್ತು ತೈಃ ಸಾರ್ಧಂ ಮಂತ್ರಿಭಿರ್ಭೀಮವಿಕ್ರಮೈಃ ।
ಸಮರ್ಥಯಾಮಾಸ ತದಾ ರಾಮಕಾರ್ಯ ವಿನಿಶ್ಚಯಮ್ ॥
ಅನುವಾದ
ರಾಕ್ಷಸರಾಜ ರಾವಣನು ತನ್ನ ಆ ಭಯಾನಕ ಮಂತ್ರಿಗಳೊಂದಿಗೆ ಕುಳಿತು ರಾಮನ ಕುರಿತು ಮಾಡಬಹುದಾದ ತತ್ಕಾಲೋಚಿತ ಕರ್ತವ್ಯವನ್ನು ನಿಶ್ಚಯಿಸಿದನು.॥41॥
ಮೂಲಮ್ - 42
ಅವಿದೂರಸ್ಥಿತಾನ್ ಸರ್ವಾನ್ ಬಲಾಧ್ಯಕ್ಷಾನ್ ಹಿತೈಷಿಣಃ ।
ಅಬ್ರವೀತ್ ಕಾಲಸದೃಶಂ ರಾವಣೋ ರಾಕ್ಷಸಾಽಧಿಪಃ ॥
ಅನುವಾದ
ಮತ್ತೆ ರಾವಣನು ಬಳಿಯಲ್ಲೇ ನಿಂತಿದ್ದ ತನ್ನ ಹಿತೈಷಿ ಸೇನಾಪತಿಗಳಲ್ಲಿ ಈ ಪ್ರಕಾರ ಸಮಯಾನುಕೂಲ ಮಾತನ್ನು ಹೇಳಿದನು.॥42॥
ಮೂಲಮ್ - 43
ಶೀಘ್ರಂ ಭೇರೀನಿನಾದೇನ ಸ್ಫುಟಂ ಕೋಣಾಹತೇನ ಮೇ ।
ಸಮಾನಯಧ್ವಂ ಸೈನ್ಯಾನಿ ವಕ್ತವ್ಯಂ ಚ ನ ಕಾರಣಮ್ ॥
ಅನುವಾದ
ನೀವೆಲ್ಲರೂ ಬೇಗನೇ ಡಂಗುರಸಾರಿ ಸಮಸ್ತ ಸೈನಿಕರನ್ನು ಒಟ್ಟುಗೂಡಿಸಿರಿ; ಆದರೆ ಅವರಿಗೆ ಇದರ ಕಾರಣ ತಿಳಿಸಬಾರದು.॥43॥
ಮೂಲಮ್ - 44
ತತಸ್ತಥೇತಿ ಪ್ರತಿಗೃಹ್ಯ ತದ್ವಚ
ಸ್ತದೈವ ದೂತಾಃ ಸಹಸಾ ಮಹದ್ ಬಲಮ್ ।
ಸಮಾನಯಂಶ್ಚೈವ ಸಮಾಗತಂ ಚ
ನ್ಯವೇದಯನ್ಭರ್ತರಿ ಯುದ್ಧಕಾಂಕ್ಷಿಣಿ ॥
ಅನುವಾದ
ಆಗ ದೂತರು ‘ಹಾಗೆಯೇ ಆಗಲೀ’ ಎಂದು ಹೇಳಿ ರಾವಣನ ಅಪ್ಪಣೆಯನ್ನು ಮನ್ನಿಸಿ, ಆಗಲೇ ವಿಶಾಲ ಸೈನ್ಯವನ್ನು ಒಟ್ಟುಗೂಡಿಸಿದರು. ಮತ್ತೆ ಯುದ್ಧಾಭಿಲಾಷಿಗಳಾದ ತನ್ನ ಒಡೆಯನಿಗೆ ‘ಎಲ್ಲ ಸೈನ್ಯ ಸಿದ್ಧವಾಗಿದೆ’ ಎಂದು ಸೂಚಿಸಿದರು.॥44॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೆರಡನೆಯ ಸರ್ಗ ಪೂರ್ಣವಾಯಿತು.॥32॥