वाचनम्
ಭಾಗಸೂಚನಾ
ಮಾಯಾರಚಿತ ಶ್ರೀರಾಮನ ಕತ್ತರಿಸಿದ ಶಿರವನ್ನು ಸೀತೆಗೆ ತೋರಿಸಿ, ಆಕೆಯನ್ನು ವಿಮೋಹಗೊಳಿಸಲು ರಾವಣನ ಪ್ರಯತ್ನ
ಮೂಲಮ್ - 1
ತತಸ್ತಮಕ್ಷೋಭ್ಯಬಲಂ ಲಂಕಾಯಾಂ ನೃಪತೇಶ್ವರಾಃ ।
ಸುವೇಲೇ ರಾಘವಂ ಶೈಲೇ ನಿವಿಷ್ಟಂ ಪ್ರತ್ಯವೇದಯನ್ ॥
ಮೂಲಮ್ - 2
ಚಾರಾಣಾಂ ರಾವಣಃ ಶ್ರುತ್ವಾ ಪ್ರಾಪ್ತಂ ರಾಮಂ ಮಹಾಬಲಮ್ ।
ಜಾತೋದ್ವೇಗೋಽಭವತ್ ಕಿಂಚಿತ್ ಸಚಿವಾನಿದಮಬ್ರವೀತ್ ॥
ಅನುವಾದ
ರಾವಣನ ಗುಪ್ತಚರರು ಲಂಕೆಗೆ ಬಂದು - ಶ್ರೀರಾಮಚಂದ್ರನ ಸೈನ್ಯವು ಸುವೇಲಪರ್ವತದಲ್ಲಿ ಬೀಡು ಬಿಟ್ಟಿದ್ದು, ಅದನ್ನು ಜಯಿಸುವುದು ಅಸಂಭವವೆಂದು ತಿಳಿಸಿದಾಗ, ಅವರ ಮಾತನ್ನು ಕೇಳಿ, ಶ್ರೀರಾಮನು ಬಂದಿರುವನೆಂದು ತಿಳಿದು ರಾವಣನು ಉದ್ವಿಗ್ನನಾಗಿ ಮಂತ್ರಿಗಳಲ್ಲಿ ಹೀಗೆ ಹೇಳಿದನು.॥1-2॥
ಮೂಲಮ್ - 3
ಮಂತ್ರಿಣಃ ಶೀಘ್ರಮಾಯಾಂತು ಸರ್ವೇ ವೈ ಸುಸಮಾಹಿತಾಃ ।
ಅಯಂ ನೋ ಮಂತ್ರಕಾಲೋ ಹಿ ಸಂಪ್ರಾಪ್ತ ಇತಿ ರಾಕ್ಷಸಾಃ ॥
ಅನುವಾದ
ಸಚಿವರೇ! ನನ್ನ ಮಂತ್ರಿಗಳೆಲ್ಲರೂ ಆದಷ್ಟು ಬೇಗ ಇಲ್ಲಿಗೆ ಬರಲಿ. ನಾವೆಲ್ಲರೂ ಸೇರಿ ಗುಪ್ತಸಮಾಲೋಚನೆ ಮಾಡುವ ಕಾಲ ಈಗ ಸನ್ನಿಹಿತವಾಗಿದೆ.॥3॥
ಮೂಲಮ್ - 4
ತಸ್ಯ ತಚ್ಛಾಸನಂ ಶ್ರುತ್ವಾ ಮಂತ್ರಿಣೋಽಭ್ಯಾಗಮನ್ ದ್ರುತಮ್ ।
ತತಃ ಸ ಮಂತ್ರಯಾಮಾಸ ರಾಕ್ಷಸೈಃ ಸಚಿವೈಃ ಸಹ ॥
ಅನುವಾದ
ರಾವಣನ ಆದೇಶವನ್ನು ಕೇಳಿ ಸಮಸ್ತ ಮಂತ್ರಿಗಳು ಶೀಘ್ರವಾಗಿ ಅಲ್ಲಿಗೆ ಬಂದರು. ಆಗ ರಾವಣನು ಆ ರಾಕ್ಷಸ ಮಂತ್ರಿಗಳೊಂದಗೆ ಕುಳಿತು ಆವಶ್ಯಕ ಕರ್ತವ್ಯದ ಕುರಿತು ವಿಚಾರ ಮಾಡಿದನು.॥4॥
ಮೂಲಮ್ - 5
ಮಂತ್ರಯಿತ್ವಾ ತು ದುರ್ಧರ್ಷಃ ಕ್ಷಮಂ ಯತ್ ತದನಂತರಮ್ ।
ವಿಸರ್ಜಯಿತ್ವಾ ಸಚಿವಾನ್ಪ್ರವಿವೇಶ ಸ್ವಮಾಲಯಮ್ ॥
ಅನುವಾದ
ದುರ್ಧರ್ಷ ವೀರ ರಾವಣನು ಉಚಿತವಾದ ಕರ್ತವ್ಯದ ಕುರಿತು ಬೇಗನೆ ವಿಚಾರ-ವಿಮರ್ಶೆ ಮಾಡಿ ಆ ಸಚಿವರನ್ನು ಬೀಳ್ಕೊಟ್ಟು ತನ್ನ ಅಂತಃಪುರವನ್ನು ಪ್ರವೇಶಿಸಿದನು.॥5॥
ಮೂಲಮ್ - 6
ತತೋ ರಾಕ್ಷಸಮಾದಾಯ ವಿದ್ಯುಜ್ಜಿಹ್ವಂ ಮಹಾಬಲಮ್ ।
ಮಾಯಾವಿನಂ ಮಹಾಮಾಯಂ ಪ್ರಾವಿಶದ್ ಯತ್ರ ಮೈಥಿಲೀ ॥
ಅನುವಾದ
ಮತ್ತೆ ಅವನು ಮಹಾಬಲೀ, ಮಹಾಮಾಯಾವೀ, ಮಾಯಾವಿಶಾರದ ರಾಕ್ಷಸ ವಿದ್ಯುಜ್ಜಿಹ್ವನನ್ನು ಜೊತಯಲ್ಲಿ ಕರೆದು ಕೊಂಡು ಸೀತೆಯು ಇರುವ ಪ್ರಮದಾವನವನ್ನು ಪ್ರವೇಶಿಸಿದನು.॥.॥
ಮೂಲಮ್ - 7
ವಿದ್ಯುಜ್ಜಿಹ್ವಂ ಚ ಮಾಯಾಜ್ಞಮಬ್ರವೀದ್ ರಾಕ್ಷಸಾಧಿಪಃ ।
ಮೋಹಯಿಷ್ಯಾವಹೇ ಸೀತಾಂ ಮಾಯಯಾ ಜನಕಾತ್ಮಜಾಮ್ ॥
ಅನುವಾದ
ಆಗ ರಾಕ್ಷಸರಾಜ ರಾವಣನು ಮಾಯೆಯನ್ನು ಬಲ್ಲ ವಿದ್ಯುಜ್ಜೀಹನಲ್ಲಿ ಹೇಳಿದನು-ನಾವಿಬ್ಬರೂ ಮಾಯೆಯ ಮೂಲಕ ಜನಕನಂದಿನೀ ಸೀತೆಯನ್ನು ಮೋಹಿತ ಗೊಳಿಸುವಾ.॥7॥
ಮೂಲಮ್ - 8
ಶಿರೋ ಮಾಯಾಮಯಂ ಗೃಹ್ಯರಾಘವಸ್ಯ ನಿಶಾಚರ ।
ಮಾಂ ತ್ವಂ ಸಮುಪತಿಷ್ಠಸ್ವ ಮಹಚ್ಚ ಸಶರಂ ಧನುಃ ॥
ಅನುವಾದ
ನಿಶಾಚರನೇ! ನೀನು ಶ್ರೀರಾಮನ ಮಾಯಾನಿರ್ಮಿತ ಶಿರಸ್ಸನ್ನು ಮತ್ತು ಮಹಾಧನುಷ್ಯ ಬಾಣಗಳನ್ನು ಎತ್ತಿಕೊಂಡು ನನ್ನ ಬಳಿಗೆ ಬಾ.॥8॥
ಮೂಲಮ್ - 9
ಏವಮುಕ್ತ ಸ್ತ ಥೇತ್ಯಾಹ ವಿದ್ಯುಜ್ಜಿಹ್ವೋ ನಿಶಾಚರಃ ।
ದರ್ಶಯಾಮಾಸ ತಾಂ ಮಾಯಾಂ ಸುಪ್ರಯುಕ್ತಾಂ ಸ ರಾವಣೇ ॥
ಅನುವಾದ
ರಾವಣನ ಅಪ್ಪಣೆ ಪಡೆದು, ನಿಶಾಚರ ವಿದ್ಯುಜ್ಜಿಹ್ವನು ‘ಹಾಗೆಯೇ ಆಗಲಿ’ ಎಂದು ಹೇಳಿ ತುಂಬಾ ಕುಶಲತೆಯಿಂದ ಪ್ರಕಟಿಸಿದ ತನ್ನ ಮಾಯೆಯನ್ನು ತೋರಿಸಿದನು.॥.॥
ಮೂಲಮ್ - 10½
ತಸ್ಯ ತುಷ್ಟೋಽಭವದ್ ರಾಜಾ ಪ್ರದದೌ ಚ ವಿಭೂಷಣಮ್ ।
ಅಶೋಕವನಿಕಾಯಾಂ ಚ ಸೀತಾದರ್ಶನಲಾಲಸಃ ॥
ನೈರ್ಋತಾನಾಮಧಿಪತಿಃ ಸಂವಿವೇಶ ಮಹಾಬಲಃ ।
ಅನುವಾದ
ಇದರಿಂದ ರಾಕ್ಷಸರಾಜ ರಾವಣನು ಅವನಿಗೆ ಅಮೂಲ್ಯ ವಸಾಭರಣಗಳನ್ನು ಇತ್ತು, ಆ ಮಹಾಬಲಿಯು ಸೀತೆಯನ್ನು ನೋಡಲು ಅಶೋಕವನಕ್ಕೆ ಹೋದನು.॥10½॥
ಮೂಲಮ್ - 11
ತತೋ ದೀನಾಮದೈನ್ಯಾರ್ಹಾಂ ದದರ್ಶ ಧನದಾನುಜಃ ॥
ಮೂಲಮ್ - 12
ಅಧೋಮುಖೀಂ ಶೋಕ ಪರಾಮುಪವಿಷ್ಟಾಂ ಮಹೀತಲೇ ।
ಭರ್ತಾರಂ ಸಮನುಧ್ಯಾಂತೀಮಶೋಕವನಿಕಾಂ ಗತಾಮ್ ॥
ಅನುವಾದ
ಕುಬೇರನ ತಮ್ಮನಾದ ರಾವಣನು ಇಲ್ಲಿ ದೈನ್ಯಕ್ಕೆ ಯೋಗ್ಯಳಲ್ಲದ ಸೀತೆಯನ್ನು ದೀನಸ್ಥಿತಿಯಲ್ಲಿ ನೋಡಿದನು. ಆಕೆಯು ಅಶೋಕವನದಲ್ಲಿದ್ದರೂ ಶೋಕಮಗ್ನಳಾಗಿದ್ದಳು. ನೆಲದ ಮೇಲೆ ಕುಳಿತು, ಮುಖತಗ್ಗಿಸಿಕೊಂಡು ತನ್ನ ಪತಿಯನ್ನು ಚಿಂತಿಸುತ್ತಿದ್ದಳು.॥11-12॥
ಮೂಲಮ್ - 13½
ಉಪಾಸ್ಯಮಾನಾಂ ಘೋರಾಭೀ ರಾಕ್ಷಸೀಭಿರದೂರತಃ ।
ಉಪಸೃತ್ಯ ತತಃ ಸೀತಾಂ ಪ್ರಹರ್ಷಂ ನಾಮ ಕೀರ್ತಯನ್ ॥
ಇದಂ ಚ ವಚನಂ ಧೃಷ್ಟಮುವಾಚ ಜನಕಾತ್ಮಜಾಮ್ ।
ಅನುವಾದ
ಆಕೆಯ ಸುತ್ತಲೂ ಅನೇಕ ಭಯಂಕರ ರಾಕ್ಷಸಿಯರು ಕುಳಿತ್ತಿದ್ದರು. ರಾವಣನು ಹರ್ಷದಿಂದ ತನ್ನ ಹೆಸರನ್ನು ಹೇಳಿ ಜಾನಕಿಯ ಬಳಿಗೆ ಹೋಗಿ ಗರ್ವದಿಂದ ಹೀಗೆ ನುಡಿದನು.॥13½॥
ಮೂಲಮ್ - 14½
ಸಾಂತ್ವ್ಯಮಾನಾ ಮಯಾ ಭದ್ರೇ ಯಮಾಶ್ರಿತ್ಯ ವಿಮನ್ಯಸೇ ॥
ಖರಹಂತಾ ಸ ತೇ ಭರ್ತಾ ರಾಘವಃ ಸಮರೇ ಹತಃ ।
ಅನುವಾದ
ಭದ್ರೇ! ನಾನು ಪದೇ ಪದೇ ಸಮಜಾಯಿಸಿದರೂ, ಪ್ರಾರ್ಥಿಸಿದರೂ ನೀನು ಆಶ್ರಯಿಸಿದ ಖರಾರಿಯಾದ ಆ ನಿನ್ನ ಪತಿದೇವ ಶ್ರೀರಾಮನು ಸಮರ ಭೂಮಿಯಲ್ಲಿ ಕೊಲ್ಲಲ್ಪಟ್ಟನು.॥14½॥
ಮೂಲಮ್ - 15
ಛಿನ್ನಂ ತೇ ಸರ್ವಥಾ ಮೂಲಂ ದರ್ಪಶ್ಚ ನಿಹತೋ ಮಯಾ ॥
ಮೂಲಮ್ - 16
ವ್ಯಸನೇನಾತ್ಮನಃ ಸೀತೇ ಮಮ ಭಾರ್ಯಾ ಭವಿಷ್ಯಸಿ ।
ವಿಸೃಜೈಮಾಂ ಮತಿಂ ಮೂಢೇ ಕಿಂ ಮೃತೇನ ಕರಿಷ್ಯಸಿ ॥
ಅನುವಾದ
ನಿನ್ನ ಬೇರು (ಬುಡವೇ) ಕಡಿದುಹೋಯಿತು. ನಿನ್ನ ದರ್ಪವನ್ನು ನಾನು ಚೂರು-ಚೂರು ಮಾಡಿಬಿಟ್ಟೆ. ಈಗ ನಿನ್ನ ಮೇಲೆ ಬಂದಿರುವ ಈ ಸಂಕಟದಿಂದ ವಿವಶಳಾಗಿ ನೀನೇ ಸ್ವತಃ ನನ್ನ ಭಾರ್ಯೆಯಾಗುವೆ. ಮೂಢಮತಿ ಸೀತೇ! ಇನ್ನು ರಾಮನ ವಿಷಯದ ಚಿಂತೆ ಬಿಡು. ಆ ಸತ್ತಿರುವ ರಾಮನಿಂದ ಏನು ಮಾಡುವೆ.॥15-16॥
ಮೂಲಮ್ - 17
ಭವಸ್ವ ಭದ್ರೇ ಭಾರ್ಯಾಣಾಂ ಸರ್ವಾಸಾಮೀಶ್ವರೀ ಮಮ ।
ಅಲ್ಪಪುಣ್ಯೇ ನಿವೃತ್ತಾರ್ಥೇಮೂಢೇ ಪಂಡಿತಮಾನಿನಿ ।
ಶೃಣು ಭರ್ತೃವಧಂ ಸೀತೇ ಘೋರಂ ವೃತ್ರವಧಂ ಯಥಾ ॥
ಅನುವಾದ
ಮಂಗಳೇ! ನನ್ನ ಎಲ್ಲ ರಾಣಿಯರಿಗೆ ಒಡತಿಯಾಗು. ಮೂಢೇ! ನೀನು ತನ್ನನ್ನು ಬಹಳ ಬುದ್ಧಿವಂತಳೆಂದು ತಿಳಿಯುತ್ತಿ ದ್ದೆಯಲ್ಲ? ನಿನ್ನ ಪುಣ್ಯ ಕಡಿಮೆಯಾಗಿತ್ತು, ಇದರಿಂದ ಹೀಗಾಯಿತು. ಈ ರಾಮನು ಸತ್ತುಹೋಗಿ, ಅವನ ಪ್ರಾಪ್ತಿ ರೂಪೀ ಇದ್ದ ಪ್ರಯೋಜನ ಮುಗಿದು ಹೋಯಿತು. ಸೀತೆ! ಕೇಳ ಬಯಸುವೆಯಾದರೆ ವೃತ್ರಾಸುರನ ವಧೆಯ ಘಟನೆ ಯಂತೆ ನಿನ್ನ ಪತಿಯ ಮರಣದ ಘೋರ ಸಮಾಚಾರವನ್ನು ಕೇಳು.॥17॥
ಮೂಲಮ್ - 18
ಸಮಾಯಾತಃ ಸಮುದ್ರಾಂತಂ ಹಂತುಂ ಮಾಂ ಕಿಲ ರಾಘವಃ ।
ವಾನರೇಂದ್ರ ಪ್ರಣೀತೇನ ಬಲೇನ ಮಹತಾ ವೃತಃ ॥
ಅನುವಾದ
ರಾಮನು ನನ್ನನ್ನು ಕೊಲ್ಲಲು ಸಮುದ್ರತೀರಕ್ಕೆ ಬಂದಿದ್ದನೆಂದು ಹೇಳಲಾಗಿದೆ. ಅವನೊಂದಿಗೆ ವಾನರ ರಾಜಾ ಸುಗ್ರೀವನ ವಿಶಾಲ ಸೈನ್ಯವೂ ಇತ್ತಂತೆ.॥18॥
ಮೂಲಮ್ - 19
ಸಂನಿವಿಷ್ಟಃ ಸಮುದ್ರಸ್ಯ ಪೀಡ್ಯ ತೀರಮಥೋತ್ತರಮ್ ।
ಬಲೇನ ಮಹತಾ ರಾಮೋ ವ್ರಜತ್ಯಸ್ತಂ ದಿವಾಕರೇ ॥
ಅನುವಾದ
ಆ ಸೈನ್ಯ ದೊಂದಿಗೆ ಶ್ರೀರಾಮನು ಸಮುದ್ರದ ಉತ್ತರ ತೀರವನ್ನು ತಡೆದು ನಿಂತಿದ್ದನು. ಆಗ ಸೂರ್ಯನು ಅಸ್ತಾಚಲಕ್ಕೆ ನಡೆದನು.॥19॥
ಮೂಲಮ್ - 20
ಅಥಾಧ್ವನಿ ಪರಿಶ್ರಾಂತಮರ್ಧರಾತ್ರೇ ಸ್ಥಿತಂ ಬಲಮ್ ।
ಸುಖಸುಪ್ತಂ ಸಮಾಸಾದ್ಯ ಚರಿತಂ ಪ್ರಥಮಂ ಚರೈಃ ॥
ಅನುವಾದ
ಅರ್ಧ ರಾತ್ರೆಯಾದಾಗ ಮಾರ್ಗಾಯಾಸದಿಂದ ಎಲ್ಲ ಸೈನ್ಯವು ಸುಖವಾಗಿ ಮಲಗಿತ್ತು. ಆ ಸ್ಥಿತಿಯಲ್ಲಿ ನನ್ನ ಗುಪ್ತಚರರು ಅಲ್ಲಿಗೆ ಹೋಗಿ ಚೆನ್ನಾಗಿ ನಿರೀಕ್ಷಣೆ ಮಾಡಿದರು.॥20॥
ಮೂಲಮ್ - 21
ತತ್ಪ್ರಹಸ್ತಪ್ರಣೀತೇನ ಬಲೇನ ಮಹತಾ ಮಮ ।
ಬಲಮಸ್ಯ ಹತಂ ರಾತ್ರೌ ಯತ್ರ ರಾಮಃ ಸಲಕ್ಷ್ಮಣಃ ॥
ಅನುವಾದ
ಮತ್ತೆ ಪ್ರಹಸ್ತನ ಸೇನಾಪತಿತ್ವದಲ್ಲಿ ಅಲ್ಲಿಗೆ ಹೋದ ನನ್ನ ದೊಡ್ಡ ಸೈನ್ಯವು ರಾತ್ರಿಯಲ್ಲಿ ರಾಮ-ಲಕ್ಷ್ಮಣರಿದ್ದ ಆ ವಾನರ ಸೈನ್ಯವನ್ನೆಲ್ಲ ನಾಶಮಾಡಿತು.॥21॥
ಮೂಲಮ್ - 22
ಪಟ್ಟಿಶಾನ್ ಪರಿಘಾಂಶ್ಚಕ್ರಾನೃಷ್ಟೀನ್ ದಂಡಾನ್ ಮಹಾಯುಧಾನ್ ।
ಬಾಣಜಾಲಾನಿ ಶೂಲಾನಿ ಭಾಸ್ವರಾನ್ಕೂಟಮುದ್ಗರಾನ್ ॥
ಮೂಲಮ್ - 23
ಯಷ್ಟೀಶ್ಚ ತೋಮರಾನ್ ಪ್ರಾಸಾಂಶ್ಚಕ್ರಾಣಿ ಮುಸಲಾನಿ ಚ ।
ಉದ್ಯಮ್ಯೋದ್ಯಮ್ಯ ರಕ್ಷೋಭಿರ್ವಾನರೇಷು ನಿಪಾತಿತಾಃ ॥
ಅನುವಾದ
ಆಗ ರಾಕ್ಷಸರು ಪಟ್ಟಿಶ, ಪರಿಘ, ಋಷ್ಟಿ, ದಂಡ, ದೊಡ್ಡ ದೊಡ್ಡ ಆಯುಧಗಳನ್ನು, ಬಾಣ ಸಮೂಹಗಳಿಂದ, ತ್ರಿಶೂಲ, ಹೊಳೆಯುವ ಕೂಟ-ಮುದ್ಗರ, ತೋಮರ, ಪ್ರಾಸ ಹಾಗೂ ಮುಸಲಗಳನ್ನು ಎತ್ತಿ ಎತ್ತಿ ವಾನರರ ಮೇಲೆ ಪ್ರಹಾರ ಮಾಡಿದರು.॥22-23॥
ಮೂಲಮ್ - 24
ಅಥ ಸುಪ್ತಸ್ಯ ರಾಮಸ್ಯ ಪ್ರಹಸ್ತೇನ ಪ್ರಮಾಥಿನಾ ।
ಅಸಕ್ತಂ ಕೃತಹಸ್ತೇನ ಶಿರಶ್ಛಿನ್ನಂ ಮಹಾಸಿನಾ ॥
ಅನುವಾದ
ಬಳಿಕ ಶತ್ರುಗಳನ್ನು ಮರ್ದಿಸುವ ಪ್ರಹಸ್ತನು, ದೊಡ್ಡ ಖಡ್ಗವನ್ನು ಕೈಯ್ಯಲೆತ್ತಿಕೊಂಡು ಅದರಿಂದ ಯಾರ ಅಡೆತಡೆಯಿಲ್ಲದೆ ರಾಮನ ಮಸ್ತಕವನ್ನು ತುಂಡರಿಸಿಬಿಟ್ಟನು.॥24॥
ಮೂಲಮ್ - 25
ವಿಭೀಷಣಃ ಸಮುತ್ಪತ್ಯ ನಿಗೃಹೀತೋ ಯದೃಚ್ಛಯಾ ।
ದಿಶಃ ಪ್ರವ್ರಾಜಿತಃ ಸೈನ್ಯೇರ್ಲಕ್ಷ್ಮಣಃ ಪ್ಲವಗೈಃ ಸಹ ॥
ಅನುವಾದ
ಮತ್ತೆ ಅಕಸ್ಮಾತ್ತಾಗಿ ನೆಗೆದು ವಿಭೀಷಣನನ್ನು ಹಿಡಿದುತಂದನು. ಹಾಗೂ ವಾನರ ಸೈನ್ಯಸಹಿತ ಲಕ್ಷ್ಮಣನು ಬೇರೆ ಬೇರೆ ದಿಕ್ಕುಗಳಿಗೆ ಓಡಿಹೋಗುವಂತೆ ವಿವಶಗೊಳಿಸಿದನು.॥25॥
ಮೂಲಮ್ - 26
ಸುಗ್ರೀವೋ ಗ್ರೀವಯಾ ಸೀತೇ ಭಗ್ನಯಾ ಪ್ಲವಗಾಧಿಪಃ ।
ನಿರಸ್ತಹನುಕಃ ಸೀತೇ ಹನುಮಾನ್ ರಾಕ್ಷಸೈರ್ಹತಃ ॥
ಅನುವಾದ
ಸೀತೆ! ವಾನರರಾಜ ಸುಗ್ರೀವನ ಕತ್ತನ್ನು ಕತ್ತರಿಸಿ, ಹನುಮಂತನ ಗದ್ದವನ್ನು ನಾಶಗೊಳಿಸಿ ಅವರನ್ನು ರಾಕ್ಷಸರು ಕೊಂದು ಹಾಕಿದರು.॥26॥
ಮೂಲಮ್ - 27
ಜಾಂಬವಾನಥ ಜಾನುಭ್ಯಾಮುತ್ಪತನ್ನಿಹತೋ ಯುಧಿ ।
ಪಟ್ಟಿಶೈರ್ಬಹುಭಿಶ್ಛಿನ್ನೋ ನಿಕೃತ್ತಃ ಪಾದಪೋ ಯಥಾ ॥
ಅನುವಾದ
ಆಗ ರಣರಂಗದಲ್ಲಿ ರಾಕ್ಷಸರು ಮೇಲಕ್ಕೆ ನೆಗೆಯುತ್ತಿದ್ದ ಜಾಂಬವಂತನ ಎರಡೂ ಮೊಣಕಾಲುಗಳಿಗೆ ಪ್ರಹರಿಸಿದರು. ಅವನ್ನು ಭಿನ್ನಭಿನ್ನವಾಗಿ ಕಡಿದ ಮರದಂತೆ ಧರಾಶಾಯಿಯಾದನು.॥27॥
ಮೂಲಮ್ - 28½
ಮೈಂದಶ್ಚ ದ್ವಿವಿದಶ್ಚೋಭೌ ತೌ ವಾನರವರರ್ಷಭೌ ।
ನಿಃಶ್ವಸಂತೌ ರುದಂತೌ ಚ ರುಧಿರೇಣ ಪರಿಪ್ಲುತೌ ॥
ಅಸಿನಾ ವ್ಯಾಯತೌ ಛಿನ್ನೌ ಮಧ್ಯೇ ಹ್ಯರಿನಿಷೂದನೌ ।
ಅನುವಾದ
ಮೈಂದ-ದ್ವಿವಿದರೆಂಬ ಶ್ರೇಷ್ಠವಾನರರು ರಕ್ತದಿಂದ ತೊಯ್ದು ಹೋಗಿ ಒದ್ದಾಡುತ್ತಾ ಬಿದ್ದಿದ್ದರು. ದೀರ್ಘವಾಗಿ ಉಸಿರುಬಿಡುತ್ತಾ ಅಳುತ್ತಿದ್ದಾಗ ಇಬ್ಬರೂ ವಿಶಾಲಕಾಯ ಶತ್ರುಸೂದನ ವಾನರರನ್ನು ಖಡ್ಗದಿಂದ ನಡುವೆಯೇ ಕತ್ತರಿಬಿಟ್ಟರು.॥28½॥
ಮೂಲಮ್ - 29
ಅನುಶ್ವಸಿತಿ ಮೇದಿನ್ಯಾಂ ಪನಸಃ ಪನಸೋ ಯಥಾ ॥
ಮೂಲಮ್ - 30
ನಾರಾಚೈರ್ಬಹುಭಿಶ್ಛಿನ್ನಃ ಶೇತೇ ದರ್ಯಾಂ ದರೀಮುಖಃ ।
ಕುಮುದಸ್ತು ಮಹಾತೇಜಾ ನಿಷ್ಕೂಜನ್ ಸಾಯಕೈರ್ಹತಃ ॥
ಅನುವಾದ
ಪನಸನೆಂಬ ವಾನರನನ್ನು ಹಿಡಿದು ಅವನನ್ನು ಬಗೆದ ಹಲಸಿನ ಹಣ್ಣಿನಂತೆ ಸಿಗಿದು ನೆಲಕ್ಕೆ ಕೆಡೆದಾಗ ಅವನೂ ಕೊನೆಯ ಶ್ವಾಸ ಎಳೆದನು. ದರೀಮುಖನು ಅನೇಕ ಬಾಣಗಳಿಂದ ಭಿನ್ನ-ಭಿನ್ನವಾಗಿ ಕಂದರದಲ್ಲಿ ಬಿದ್ದು ಮಲಗಿರುವನು. ಮಹಾ ತೇಜಸ್ವೀ ಕುಮುದನು ಸರಳುಗಳಿಂದ ಗಾಯಗೊಂಡು ಅರಚುತ್ತಾ ಸತ್ತುಹೋದನು.॥29-30॥
ಮೂಲಮ್ - 31
ಅಂಗದೋ ಬಹುಭಿಶ್ಛಿನ್ನಃ ಶರೈರಾಸಾದ್ಯ ರಾಕ್ಷಸೈಃ ।
ಪರಿತೋ ರುಧಿರೋದ್ಗಾರೀ ಕ್ಷಿತೌ ನಿಪತಿತೋಂಽಗದಃ ॥
ಅನುವಾದ
ಅಂಗದ(ತೋಳ್ಬಂದಿ)ವನ್ನು ತೊಟ್ಟ ಅಂಗದ ಮೇಲೆ ಆಕ್ರಮಣ ಮಾಡಿ ಅನೇಕ ರಾಕ್ಷಸರು ಅವನನ್ನು ಬಾಣಗಳಿಂದ ಭಿನ್ನ-ಭಿನ್ನವಾಗಿಸಿದರು. ಅವನು ಸರ್ವಾಂಗದಿಂದ ರಕ್ತಹರಿಯುತ್ತಾ ನೆಲದಲ್ಲಿ ಬಿದ್ದಿರುವನು.॥31॥
ಮೂಲಮ್ - 32
ಹರಯೋ ಮಥಿತಾ ನಾಗೈ ರಥಜಾಲೈಸ್ತಥಾಪರೇ ।
ಶಯಾನಾ ಮೃದಿತಾಸ್ತತ್ರ ವಾಯುವೇಗೈರಿವಾಂಬುದಾಃ ॥
ಅನುವಾದ
ಗಾಳಿಯ ಹೊಡೆತಕ್ಕೆ ಮೋಡಗಳು ಚೆದುರಿ ಹೋಗುವಂತೆ ದೊಡ್ಡ ದೊಡ್ಡ ಆನೆಗಳು ಹಾಗೂ ರಾಕ್ಷಸರು ಅಲ್ಲಿ ಮಲಗಿದ್ದ ವಾನರರನ್ನು ನುಚ್ಚುನೂರಾಗಿಸಿದರು.॥32॥
ಮೂಲಮ್ - 33
ಪ್ರಸೃತಾಶ್ಚ ಪರೇ ತ್ರಸ್ತಾ ಹನ್ಯಮಾನಾ ಜಘನ್ಯತಃ ।
ಅಭಿದ್ರುತಾಸ್ತು ರಕ್ಷೋಭಿಃ ಸಿಂಹೈರಿವ ಮಹಾದ್ವಿಪಾಃ ॥
ಅನುವಾದ
ಸಿಂಹಗಳು ಅಟ್ಟಿಸಿಕೊಂಡು ಹೋದಾಗ ಆನೆಗಳು ಓಡಿಹೋಗುವಂತೆಯೇ ರಾಕ್ಷಸರು ಆಕ್ರಮಿಸಿದಾಗ ಬಹಳಷ್ಟು ವಾನರರು ಬೆನ್ನಿಗೆ ಬಾಣ ತಗುಲಿ ಏಟು ತಿಂದು ಓಡಿಹೋದವು.॥33॥
ಮೂಲಮ್ - 34
ಸಾಗರೇ ಪತಿತಾಃ ಕೇಚಿತ್ ಕೇಚಿದ್ ಗಗನಮಾಶ್ರಿತಾಃ ।
ಋಕ್ಷಾ ವೃಕ್ಷಾನುಪಾರೂಢಾ ವಾನರೀಂ ವೃತ್ತಿಮಾಶ್ರಿತಾಃ ॥
ಅನುವಾದ
ಕೆಲವರು ಸಮುದ್ರಕ್ಕೆ ಹಾರಿದರೆ, ಕೆಲವರು ಆಕಾಶದಲ್ಲಿ ಹಾರಿಹೋದರು. ಅನೇಕ ಕರಡಿಗಳು ವಾನರರಂತೆ ಮರಹತ್ತಿ ಕುಳಿತುಕೊಂಡವು.॥34॥
ಮೂಲಮ್ - 35
ಸಾಗರಸ್ಯ ಚ ತೀರೇಷು ಶೈಲೇಷು ಚ ವನೇಷು ಚ ।
ಪಿಂಗಲಾಸ್ತೇ ವಿರೂಪಾಕ್ಷೈ ರಾಕ್ಷಸೈರ್ಬಹವೋ ಹತಾಃ ॥
ಅನುವಾದ
ವಿಕರಾಳ ಕಣ್ಣುಗಳ್ಳುಳ ರಾಕ್ಷಸರು ಈ ಅಸಂಖ್ಯೆ ಪಿಂಗಳ ವರ್ಣದ ಕೋತಿಗಳನ್ನು ಸಮುದ್ರತೀರ, ಪರ್ವತ ಮತ್ತು ವನಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಂದುಹಾಕಿದರು.॥35॥
ಮೂಲಮ್ - 36
ಏವಂ ತವ ಹತೋ ಭರ್ತಾ ಸಸೈನ್ಯೋ ಮಮ ಸೇನಯಾ ।
ಕ್ಷತಜಾರ್ದ್ರಂ ರಜೋಧ್ವಸ್ತಮಿದಂ ಚಾಸ್ಯಾಹೃತಂ ಶಿರಃ ॥
ಅನುವಾದ
ಈ ಪ್ರಕಾರ ನನ್ನ ಸೈನ್ಯವು ಸೈನ್ಯಸಹಿತ ನಿನ್ನ ಪತಿಯನ್ನು ಕೊಂದು ಹಾಕಿತು. ರಕ್ತದಿಂದ ತೊಯ್ದ ಮತ್ತು ಧೂಳು ಮೆತ್ತಿಕೊಂಡ ಅವನ ಈ ಮಸ್ತಕವನ್ನು ಇಲ್ಲಿಗೆ ತರಲಾಗಿದೆ.॥36॥
ಮೂಲಮ್ - 37
ತತಃ ಪರಮದುರ್ಧರ್ಷೋ ರಾವಣೋ ರಾಕ್ಷಸೇಶ್ವರಃ ।
ಸೀತಾಯಾಮಪಶೃಣ್ವತ್ಯಾಂ ರಾಕ್ಷಸೀಮಿದಮಬ್ರವೀತ್ ॥
ಅನುವಾದ
ಹೀಗೆ ಹೇಳಿ ದುರ್ಜಯ ರಾಕ್ಷಸ ರಾಜನಾದ ರಾವಣನು ಸೀತೆಯು ಕೇಳುವಂತೇ ಓರ್ವ ರಾಕ್ಷಸಿಯ ಬಳಿ ಹೇಳಿದನು.॥37॥
ಮೂಲಮ್ - 38
ರಾಕ್ಷಸಂ ಕ್ರೂರಕರ್ಮಾಣಂ ವಿದ್ಯುಜ್ಜಿಹ್ವಂ ಸಮಾನಯ ।
ಯೇನ ತದ್ರಾಘವಶಿರಃ ಸಂಗ್ರಾಮಾತ್ ಸ್ವಯಮಾಹೃತಮ್ ॥
ಅನುವಾದ
ನೀನು ಕ್ರೂರಕರ್ಮಿ ರಾಕ್ಷಸ ವಿದ್ಯುಜ್ಜಿಹ್ವನನ್ನು ಕರೆದು ತಾ. ಅವನು ಸ್ವತಃ ರಣಭೂಮಿಯಿಂದ ರಾಮನ ಶಿರಸ್ಸನ್ನು ಇಲ್ಲಿಗೆ ತಂದಿರುವನು.॥3.॥
ಮೂಲಮ್ - 39
ವಿದ್ಯುಜ್ಜಿಹ್ವಸ್ತದಾ ಗೃಹ್ಯ ಶಿರಸ್ತತ್ಸ ಶರಾಸನಮ್ ।
ಪ್ರಮಾಣಂ ಶಿರಸಾ ಕೃತ್ವಾ ರಾವಣಸ್ಯಾಗ್ರತಃ ಸ್ಥಿತಃ ॥
ಮೂಲಮ್ - 40
ತಮಬ್ರವೀತ್ತತೋ ರಾಜಾ ರಾವಣೋ ರಾಕ್ಷಸಂ ಸ್ಥಿತಮ್ ।
ವಿದ್ಯುಜ್ಜಿಹ್ವಂ ಮಹಾಜಿಹ್ವಂ ಸಮೀಪ ಪರಿವರ್ತಿನಮ್ ॥
ಅನುವಾದ
ಆ ವಿದ್ಯುಜ್ಜಿಹ್ವನು ಧನುಸ್ಸು ಸಹಿತ ಆ ಮಸ್ತಕವನ್ನು ತೆಗೆದುಕೊಂಡು ಬಂದು ರಾವಣನಿಗೆ ಶಿರಬಾಗಿ ವಂದಿಸಿ ಅವನ ಎದುರಿಗೆ ನಿಂತನು. ಆಗ ತನ್ನ ಬಳಿ ನಿಂತಿದ್ದ ವಿಶಾಲಜಿಹ್ವೆಯುಳ್ಳ ರಾಕ್ಷಸ ವಿದ್ಯುಜಿಹ್ವನಲ್ಲಿ ರಾವಣನು ಹೀಗೆ ಹೇಳಿದನು.॥39-40॥
ಮೂಲಮ್ - 41
ಅಗ್ರತಃ ಕುರು ಸೀತಾಯಾಃ ಶೀಘ್ರಂ ದಾಶರಥೇಃ ಶಿರಃ ।
ಅವಸ್ಥಾಂ ಪಶ್ಚಿಮಾಂ ಭರ್ತುಃ ಕೃಪಣಾ ಸಾಧು ಪಶ್ಯತು ॥
ಅನುವಾದ
ನೀನು ದಶರಥನಂದನ ರಾಮನ ಶಿರಸ್ಸನ್ನು ಬೇಗನೇ ಸೀತೆಯ ಮುಂದೆ ಇರಿಸು. ಅದರಿಂದ ಈ ಬಡಪಾಯಿ ತನ್ನ ಪತಿಯ ಅಂತಿಮ ಸ್ಥಿತಿಯನ್ನು ಚೆನ್ನಾಗಿ ನೋಡಲಿ.॥41॥
ಮೂಲಮ್ - 42
ಏವಮುಕ್ತಂ ತು ತದ್ರಕ್ಷಃ ಶಿರಸ್ತತ್ ಪ್ರಿಯದರ್ಶನಮ್ ।
ಉಪನಿಕ್ಷಿಪ್ಯ ಸೀತಾಯಾಃ ಕ್ಷಿಪ್ರಮಂತರಧೀಯತ ॥
ಅನುವಾದ
ರಾವಣನು ಹೀಗೆ ಹೇಳಿದಾಗ ಆ ರಾಕ್ಷಸನು ಆ ಸುಂದರ ಮಸ್ತಕವನ್ನು ಸೀತೆಯ ಮುಂದೆ ಇರಿಸಿ ತತ್ಕ್ಷಣ ಅದೃಶ್ಯ ನಾದನು.॥42॥
ಮೂಲಮ್ - 43
ರಾವಣಶ್ಚಾಪಿ ಚಿಕ್ಷೇಪ ಭಾಸ್ವರಂ ಕಾರ್ಮುಕಂ ಮಹತ್ ।
ತ್ರಿಷು ಲೋಕೇಷು ವಿಖ್ಯಾತಂ ರಾಮಸ್ಯೈತದಿತಿ ಬ್ರುವನ್ ॥
ಅನುವಾದ
ರಾವಣನೂ ಕೂಡ ಆ ವಿಶಾಲ ಹೊಳೆಯುತ್ತಿರುವ ಧನುಸ್ಸನ್ನು ‘ಇದೇ ರಾಮನ ತ್ರಿಭುವನ ವಿಖ್ಯಾತ ಧನುಷ್ಯ’ ಎಂದು ಹೇಳಿ ಸೀತೆಯ ಮುಂದೆ ಇಟ್ಟುಬಿಟ್ಟನು.॥43॥
ಮೂಲಮ್ - 44
ಇದಂ ತತ್ತವ ರಾಮಸ್ಯ ಕಾರ್ಮುಕಂ ಜ್ಯಾಸಮಾವೃತಮ್ ।
ಇಹ ಪ್ರಹಸ್ತೇನಾನೀತಂ ತಂ ಹತ್ವಾ ನಿಶಿ ಮಾನುಷಮ್ ॥
ಅನುವಾದ
ಮತ್ತೆ ಸೀತೇ! ಇದೇ ನಿನ್ನ ರಾಮನ ಹೆದೆ ಏರಿಸಿದ ಧನುಸ್ಸು ಆಗಿದೆ. ರಾತ್ರಿಯಲ್ಲಿ ಅವನನ್ನು ಕೊಂದು ಪ್ರಹಸ್ತನು ಈ ಧನುಸ್ಸನ್ನು ಇಲ್ಲಿಗೆ ತಂದಿರುವನು ಎಂದು ಹೇಳಿದನು.॥44॥
ಮೂಲಮ್ - 45
ಸ ವಿದ್ಯುಜ್ಜಿಹ್ವೇನ ಸಹೈವ ತಚ್ಛಿರೋ
ಧನುಶ್ಚ ಭೂಮೌ ವಿನಿಕೀರ್ಯಮಾಣಃ ।
ವಿದೇಹರಾಜಸ್ಯ ಸುತಾಂ ಯಶಸ್ವಿನೀಂ
ತತೋಽಬ್ರವೀತ್ತಾಂ ಭವ ಮೇ ವಶಾನುಗಾ ॥
ಅನುವಾದ
ವಿದ್ಯುಜ್ಜಿಹ್ವನು ಮಸ್ತಕವನ್ನು ಅಲ್ಲಿ ಇರಿಸಿದಾಗ, ರಾವಣನೂ ಧನುಸ್ಸನ್ನು ಅಲ್ಲಿ ನೆಲದ ಮೇಲೆ ಇಟ್ಟು ವಿದೇಹಕುಮಾರಿ ಯಶಸ್ವಿನೀ ಸೀತೆಯಲ್ಲಿ ‘ಇನ್ನು ನೀನು ನನ್ನ ವಶಳಾಗು’ ಎಂದು ಹೇಳಿದನು.॥45॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೊಂದನೆಯ ಸರ್ಗ ಪೂರ್ಣವಾಯಿತು.॥31॥