वाचनम्
ಭಾಗಸೂಚನಾ
ರಾವಣನು ಕಳಿಸಿದ ಗುಪ್ತಚರರು ಮತ್ತು ಶಾರ್ದೂಲನು ವಾನರ ಸೈನ್ಯದ ಸಮಾಚಾರ ತಿಳಿಸಿ, ಮುಖ್ಯ-ಮುಖ್ಯ ವೀರರ ಪರಿಚಯ ಮಾಡಿಸಿದುದು
ಮೂಲಮ್ - 1
ತತಸ್ತಮಕ್ಷೋಭ್ಯ ಬಲಂ ಲಂಕಾಧಿಪತಯೇ ಚರಾಃ ।
ಸುವೇಲೇ ರಾಘವಂ ಶೈಲೇ ನಿವಿಷ್ಟಂ ಪ್ರತ್ಯವೇದಯನ್ ॥
ಅನುವಾದ
ಶ್ರೀರಾಮಚಂದ್ರನ ಸೈನ್ಯವು ಸುವೇಲಾ ಪರ್ವತದ ಬಳಿಗೆ ಬಂದು ನಿಂತಿದೆ ಹಾಗೂ ಅದು ಸರ್ವಥಾ ಅಜೇಯ ವಾಗಿದೆ ಎಂದು ಗೂಢಚಾರರು ರಾವಣನಲ್ಲಿ ತಿಳಿಸುತ್ತಿದ್ದಾರೆ.॥1॥
ಮೂಲಮ್ - 2
ಚಾರಾಣಾಂ ರಾವಣಃ ಶ್ರುತ್ವಾ ಪ್ರಾಪ್ತಂ ರಾಮಂ ಮಹಾಬಲಮ್ ।
ಜಾತೋದ್ವೇಗೋಽಭವತ್ ಕಿಂಚಿಚ್ಛಾರ್ದೂಲಂ ವಾಕ್ಯಮಬ್ರವೀತ್ ॥
ಅನುವಾದ
ಮಹಾಬಲಿ ಶ್ರೀರಾಮನು ಬಂದಿರುವನೆಂದು ಕೇಳಿ ರಾವಣನಿಗೆ ಸ್ವಲ್ಪ ಭಯವಾಯಿತು ಹಾಗೂ ಅವನು ಶಾರ್ದೂಲನ ಬಳಿ ಹೇಳಿದನು.॥2॥
ಮೂಲಮ್ - 3
ಅಯಥಾವಚ್ಚತೇ ವರ್ಣೋ ದೀನಶ್ಚಾಸಿ ನಿಶಾಚರ ।
ನಾಸಿ ಕಚ್ಚಿದಮಿತ್ರಾಣಾಂ ಕ್ರುದ್ಧಾನಾಂ ವಶಮಾಗತಃ ॥
ಅನುವಾದ
ನಿಶಾಚರನೇ ! ನಿನ್ನ ಶರೀರದ ಕಾಂತಿಯು ಹಿಂದಿನಂತೆ ಇರದೆ ಮಸಕಾಗಿದೆ. ನೀನು ದೀನನಾಗಿ ಕಂಡು ಬರುವೆ. ಎಲ್ಲಾದರೂ ಶತ್ರುಗಳ ವಶದಲ್ಲಿ ಬಿದ್ದಿಲ್ಲವಲ್ಲ.॥3॥
ಮೂಲಮ್ - 4
ಇತಿ ತೇನಾನುಶಿಷ್ಟಸ್ತು ವಾಚಂ ಮಂದಮುದೀರಯನ್ ।
ತದಾ ರಾಕ್ಷಸಶಾರ್ದೂಲಂ ಶಾರ್ದೂಲೋಭಯವಿಕ್ಲವಃ ॥
ಅನುವಾದ
ರಾವಣನು ಹೀಗೆ ಕೇಳಿದಾಗ ಭಯದಿಂದ ಗಾಬರಿಗೊಂಡ ಶಾರ್ದೂಲನು ರಾಕ್ಷಸಶ್ರೇಷ್ಠ ರಾವಣನಲ್ಲಿ ಮೆಲ್ಲಗೆ ಹೇಳಿದನು.॥4॥
ಮೂಲಮ್ - 5
ನ ತೇ ಚಾರಯಿತುಂ ಶಕ್ಯಾ ರಾಜನ್ವಾನರಪುಂಗವಾಃ ।
ವಿಕ್ರಾಂತಾ ಬಲವಂತಶ್ಚ ರಾಘವೇಣ ಚ ರಕ್ಷಿತಾಃ ॥
ಅನುವಾದ
ರಾಜನೇ! ಆ ಶ್ರೇಷ್ಠ ವಾನರರ ಗತಿ-ವಿಧಿಗಳನ್ನು ಗುಪ್ತಚರರಿಂದ ತಿಳಿಯಲಾಗುವುದಿಲ್ಲ. ಅವರು ದೊಡ್ಡ ಪರಾಕ್ರಮೀ, ಬಲವಂತರೂ ಹಾಗೂ ಶ್ರೀರಾಮಚಂದ್ರನಿಂದ ಸುರಕ್ಷಿತವಾಗಿದ್ದಾರೆ.॥5॥
ಮೂಲಮ್ - 6
ನಾಪಿ ಸಂಭಾಷಿತುಂ ಶಕ್ಯಾಃ ಸಂಪ್ರಶ್ನೋಽತ್ರ ನ ಲಭ್ಯತೇ ।
ಸರ್ವತೋ ರಕ್ಷ್ಯತೇ ಪಂಥಾವಾನರೈಃ ಪರ್ವತೋಪಮೈಃ ॥
ಅನುವಾದ
ಅವರೊಡನೆ ಮಾತನಾಡುವುದೂ ಅಸಂಭವವಾಗಿದೆ; ಆದ್ದರಿಂದ ‘ನೀವು ಯಾರು? ನಿಮ್ಮ ವಿಚಾರವೇನು?’ ಮುಂತಾದ ಪ್ರಶ್ನೆಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಪರ್ವತದಂತಹ ವಿಶಾಲಕಾಯ ವಾನರರು ಎಲ್ಲೆಡೆಗಳಿಂದ ರಕ್ಷಿಸುತ್ತಿರುವಾಗ ಅಲ್ಲಿಗೆ ಪ್ರವೇಶಿಸಿವುದೂ ಕಷ್ಟವೇ ಆಗಿದೆ.॥6॥
ಮೂಲಮ್ - 7
ಪ್ರವಿಷ್ಟ ಮಾತ್ರೇ ಜ್ಞಾತೋಽಹಂ ಬಲೇ ತಸ್ಮಿನ್ವಿಚಾರಿತೇ ।
ಬಲಾದ್ ಗೃಹೀತೋ ರಕ್ಷೋಭಿರ್ಬಹುಧಾಸ್ಮಿ ವಿಚಾರಿತಃ ॥
ಅನುವಾದ
ಆ ಸೈನ್ಯದಲ್ಲಿ ಪ್ರವೇಶಿಸಿ ಅವರ ಗತಿ-ವಿಧಿಗಳನ್ನು ಅರಿಯಲು ಪ್ರಾರಂಭಿಸುತ್ತಲೇ ವಿಭೀಷಣನ ಅನುಯಾಯಿಗಳು ನಮ್ಮನ್ನು ಗುರುತಿಸಿ ಬಲವಂತವಾಗಿ ಹಿಡಿದು ಅತ್ತಂದಿತ್ತ ಎಳೆದಾಡಿದರು.॥7॥
ಮೂಲಮ್ - 8
ಜಾನುಭಿರ್ಮುಷ್ಟಿ ಭಿರ್ದಂತೈಸ್ತಲೈಶ್ಚಾಭಿಹತೋ ಭೃಶಮ್ ।
ಪರಿಣೀತೋಽಸ್ಮಿ ಹರಿಭಿರ್ಬಲಮಧ್ಯೇ ಅಮರ್ಷಣೈಃ ॥
ಅನುವಾದ
ಆ ಸೈನ್ಯದಲ್ಲಿ ಕ್ರೋಧ ತುಂಬಿದ ವಾನರರು ನನ್ನನ್ನು ಕಾಲುಗಳಿಂದ, ಮುಷ್ಟಿಗಳಿಂದ, ಕೈಗಳಿಂದ ಬಹಳ ಹೊಡೆದರು ಮತ್ತು ಇಡೀ ಸೈನ್ಯದಲ್ಲಿ ನಾನು ಅಪರಾಧಿ ಎಂದು ಘೋಷಿಸುತ್ತಾ, ಎಲ್ಲೆಡೆ ಸುತ್ತಾಡಿಸಿದರು.॥8॥
ಮೂಲಮ್ - 9
ಪರಿಣೀಯ ಚ ಸರ್ವತ್ರ ನೀತೋಽಹಂ ರಾಮಸಂಸದಿ ।
ರುಧಿರಸ್ರಾವಿದೀನಾಂಗೋ ವಿಹ್ವಲಶ್ಚಲಿತೇಂದ್ರಿಯಃ ॥
ಅನುವಾದ
ಎಲ್ಲೆಡೆ ಎಳೆದಾಡಿ ನನ್ನನ್ನು ಶ್ರೀರಾಮನ ಮುಂದೆ ಕೊಂಡುಹೋದರು. ಆಗ ನನ್ನ ಮೈಯಿಂದ ರಕ್ತಸುರಿಯುತ್ತಿತ್ತು. ಶರೀರದಲ್ಲೆಲ್ಲ ದೀನತೆ ಆವರಿಸಿತ್ತು. ನಾನು ವ್ಯಾಕುಲನಾಗಿ, ನನ್ನ ಇಂದ್ರಿಯಗಳೆಲ್ಲ ವಿಚಲಿತವಾಗಿದ್ದವು.॥9॥
ಮೂಲಮ್ - 10
ಹರಿಭಿರ್ವಧ್ಯಮಾನಶ್ಚ ಯಾಚಮಾನಃ ಕೃತಾಂಜಲಿಃ ।
ರಾಘವೇಣ ಪರಿತ್ರಾತೋ ಮಾಮೇತಿ ಚ ಯದೃಚ್ಛಯಾ ॥
ಅನುವಾದ
ವಾನರರು ಹೊಡೆಯುತ್ತಿದ್ದಾಗ ನಾನು ಅವರ ಬಳಿ ಕೈಮುಗಿದು ರಕ್ಷಿಸಬೇಕೆಂದು ಅಂಗಲಾಚುತ್ತಿದ್ದೆ. ಆ ಸ್ಥಿತಿಯಲ್ಲಿ ಶ್ರೀರಾಮನು ಅಕಸ್ಮಾತ್ತಾಗಿ ಅವನನ್ನು ಹೊಡೆಯಬೇಡಿ, ಹೊಡೆಯಬೇಡಿ ಎಂದು ಹೇಳಿ ರಕ್ಷಿಸಿದನು.॥10॥
ಮೂಲಮ್ - 11
ಏಷ ಶೈಲ ಶಿಲಾಭಿಸ್ತು ಪೂರಯಿತ್ವಾ ಮಹಾರ್ಣವಮ್ ।
ದ್ವಾರಮಾಶ್ರಿತ್ಯ ಲಂಕಾಯಾ ರಾಮಸ್ತಿಷ್ಠತಿ ಸಾಯುಧಃ ॥
ಅನುವಾದ
ಶ್ರೀರಾಮನು ಪರ್ವತದ ಬಂಡೆಗಳಿಂದ ಸಮುದ್ರವನ್ನು ತುಂಬಿ ಲಂಕೆಯ ಬಾಗಿಲಿಗೆ ಬಂದು, ಕೈಯ್ಲಲಿ ಧನುಸ್ಸನ್ನು ಹಿಡಿದು ನಿಂತಿರುವನು.॥11॥
ಮೂಲಮ್ - 12
ಗರುಡವ್ಯೆಹಮಾಸ್ಥಾಯ ಸರ್ವತೋ ಹರಿಭಿರ್ವೃತಃ ।
ಮಾಂ ವಿಸೃಜ್ಯ ಮಹಾತೇಜಾ ಲಂಕಾಮೇವಾಭಿತಿರ್ತತೇ ॥
ಅನುವಾದ
ಆ ಮಹಾತೇಜಸ್ವೀ ರಘುನಾಥನು ಗರುಡವ್ಯೂಹವನ್ನು ಆಶ್ರಯಿಸಿ ವಾನರರ ನಡುವೆ ವಿರಾಜಿಸುತ್ತಿರುವನು. ನನ್ನನ್ನು ಬೀಳ್ಕೊಟ್ಟು ಲಂಕೆಯ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾನೆ.॥12॥
ಮೂಲಮ್ - 13
ಪುರಾ ಪ್ರಾಕಾರಮಾಯಾತಿ ಕ್ಷಿಪ್ರಮೇಕತರಂ ಕುರು ।
ಸೀತಾಂ ವಾಪಿ ಪ್ರಯಚ್ಛಾಶು ಯುದ್ಧಂ ವಾಪಿ ಪ್ರದೀಯತಾಮ್ ॥
ಅನುವಾದ
ಅವನು ಲಂಕೆಯ ಪ್ರಾಕಾರದ ಬಳಿಗೆ ಬರುವ ಮೊದಲೇ ನೀವು ಬೇಗನೇ ಒಂದೋ ಸೀತೆಯನ್ನು ಹಿಂದಿರುಗಿಸಿರಿ, ಇಲ್ಲವೇ ರಣರಂಗದಲ್ಲಿ ನಿಂತು ಅವನನ್ನು ಎದುರಿಸಿರಿ.॥13॥
ಮೂಲಮ್ - 14
ಮನಸಾ ತತ್ ತದಾ ಪ್ರೇಕ್ಷ್ಯ ತಚ್ಛ್ರುತ್ವಾ ರಾಕ್ಷಸಾಧಿಪಃ ।
ಶಾರ್ದೂಲಂ ಸುಮಹದ್ವಾಕ್ಯಮಥೋವಾಚ ಸ ರಾವಣಃ ॥
ಅನುವಾದ
ಶಾರ್ದೂಲನ ಮಾತನ್ನು ಕೇಳಿ ಮನಸ್ಸಿನಲ್ಲೆ ಅದರ ಕುರಿತು ವಿಚಾರಮಾಡಿ ರಾವಣನು ಅವನಲ್ಲಿ ಹೀಗೆ ಮಹತ್ವ ಪೂರ್ಣ ಮಾತನ್ನು ಹೇಳಿದನು.॥14॥
ಮೂಲಮ್ - 15
ಯದಿ ಮಾಂ ಪ್ರತಿಯುಧ್ಯಂತೇ ದೇವಗಂಧರ್ವ ದಾನವಾಃ ।
ನೈವ ಸೀತಾಂ ಪ್ರದಾಸ್ಯಾಮಿ ಸರ್ವಲೋಕ ಭಯಾದಪಿ ॥
ಅನುವಾದ
ದೇವತೆಗಳು, ಗಂಧರ್ವರು, ದಾನವರು ನನ್ನೊಂದಿಗೆ ಯುದ್ಧ ಮಾಡಿದರೂ, ಸಮಸ್ತ ಜಗತ್ತು ನನ್ನನ್ನು ಹೆದರಿಸಿದರೂ ನಾನು ಸೀತೆಯಲ್ಲಿ ಮರಳಿಸಲಾರೆ.॥15॥
ಮೂಲಮ್ - 16
ಏವಮುಕ್ತ್ವಾ ಮಹಾತೇಜಾ ರಾವಣಃ ಪುನರಬ್ರವೀತ್ ।
ಚರಿತಾ ಭವತಾ ಸೇನಾ ಕೇಽತ್ರ ಶೂರಾಃ ಪ್ಲವಂಗಮಾಃ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ರಾವಣನು ಪುನಃ ಹೇಳಿದನು - ನೀನಾದರೋ ವಾನರ ಸೈನ್ಯದಲ್ಲಿ ತಿರುಗಾಡಿಬಿಟ್ಟಿರುವೆ. ಅವರಲ್ಲಿ ಯಾವ ಯಾವ ವಾನರರು ಹೆಚ್ಚು ಶೂರರಾಗಿದ್ದಾರೆ.॥16॥
ಮೂಲಮ್ - 17
ಕಿಂ ಪ್ರಭಾಃ ಕೀದೃಶಾಃ ಸೌಮ್ಯ ವಾನರಾ ಯೇ ದುರಾಸದಾಃ ।
ಕಸ್ಯ ಪುತ್ರಾಶ್ಚ ಪೌತ್ರಾಶ್ಚ ತತ್ತ್ವಮಾಖ್ಯಾಹಿ ರಾಕ್ಷಸ ॥
ಅನುವಾದ
ಸೌಮ್ಯನೇ! ಈ ದುರ್ಜಯ ವಾನರರು ಯಾರಾಗಿದ್ದಾರೆ? ಅವರ ಪ್ರಭಾವ ಎಂತಹುದು? ಅವರು ಯಾರ ಪುತ್ರರಾಗಿದ್ದಾರೆ? ರಾಕ್ಷಸನೇ! ಇದೆಲ್ಲವನ್ನು ಸರಿಯಾಗಿ ತಿಳಿಸು.॥17॥
ಮೂಲಮ್ - 18
ತಥಾತ್ರ ಪ್ರತಿಪತ್ಸ್ಯಾಮಿ ಜ್ಞಾತ್ವಾ ತೇಷಾಂ ಬಲಾಬಲಮ್ ।
ಅವಶ್ಯಂ ಖಲು ಸಂಖ್ಯಾನಂ ಕರ್ತವ್ಯಂ ಯುದ್ಧಮಿಚ್ಛತಾ ॥
ಅನುವಾದ
ಆ ವಾನರರ ಬಲಾ ಬಲಗಳನ್ನು ತಿಳಿದು ಅದಕ್ಕನುಸಾರವಾಗಿ ಕರ್ತವ್ಯವನ್ನು ನಿಶ್ಚಯಿಸುವೆನು. ಯುದ್ಧದ ಇಚ್ಛೆಯುಳ್ಳ ಪುರುಷನು ತನ್ನ ಮತ್ತು ಶತ್ರುಪಕ್ಷದ ಸೈನ್ಯದ ಗಣನೆ-ಅವರ ವಿಷಯದ ಆವಶ್ಯಕ ಅರಿವು ಇರುವುದು ಅಗತ್ಯವಾಗಿದೆ.॥18॥
ಮೂಲಮ್ - 19
ಅಥೈವಮುಕ್ತಃ ಶಾರ್ದೂಲೋ ರಾವಣೇನೋತ್ತಮಶ್ಚರಃ ।
ಇದಂ ವಚನಮಾರೇಭೇ ವಕ್ತಂ ರಾವಣಸಂನಿಧೌ ॥
ಅನುವಾದ
ರಾವಣನು ಹೀಗೆ ಕೇಳಿದಾಗ ಶ್ರೇಷ್ಠಗುಪ್ತಚರ ಶಾರ್ದೂಲನು ಹೀಗೆ ಹೇಳಲು ಪ್ರಾರಂಭಿಸಿದನು.॥19॥
ಮೂಲಮ್ - 20
ಅಥರ್ಕ್ಷರಜಸಃ ಪುತ್ರೋ ಯುಧಿ ರಾಜನ್ ಸುದುರ್ಜಯಃ ।
ಗದ್ಗದಸ್ಯಾಥ ಪುತ್ರೋಽತ್ರ ಜಾಂಬವಾನಿತಿ ವಿಶ್ರುತಃ ॥
ಅನುವಾದ
ರಾಜನೇ ! ಆ ವಾನರ ಸೈನ್ಯದಲ್ಲಿ ಜಾಂಬವಂತ ಎಂಬ ಪ್ರಸಿದ್ಧ ವೀರನಿದ್ದನೆ. ಅವನನ್ನು ಯುದ್ಧದಲ್ಲಿ ಸೋಲಿಸುವುದು ಬಹಳ ಕಠಿಣವಾಗಿದೆ. ಅವನು ಋಕ್ಷರಾಜ ಹಾಗೂ ಗದ್ಗದನ ಪುತ್ರನಾಗಿದ್ದಾನೆ.॥20॥
ಮೂಲಮ್ - 21
ಗದ್ಗದಸ್ಯಾಥ ಪುತ್ರೋಽನ್ಯೋ ಗುರುಪುತ್ರಃ ಶತಕ್ರತೋಃ ।
ಕದನಂ ಯಸ್ಯ ಪುತ್ರೇಣ ಕೃತಮೇಕೇನ ರಕ್ಷಸಾಮ್ ॥
ಅನುವಾದ
ಗದ್ಗದನ ಇನ್ನೊಬ್ಬ ಧೂಮ್ರನೆಂಬ ಪುತ್ರನೂ ಇದ್ದಾನೆ. ಇಂದ್ರನ ಗುರು ಬೃಹಸ್ಪತಿಯ ಪುತ್ರ ಕೇಸರಿಯಾಗಿದ್ದಾನೆ, ಅವನ ಪುತ್ರ ಹನುಮಂತನು ಒಬ್ಬಂಟಿಗನಾಗಿ ಇಲ್ಲಿಗೆ ಬಂದು ಬಹಳಷ್ಟು ರಾಕ್ಷಸರನ್ನು ಸಂಹರಿಸಿರುವನು.॥21॥
ಮೂಲಮ್ - 22
ಸುಷೇಣಶ್ಚಾತ್ರ ಧರ್ಮಾತ್ಮಾ ಪುತ್ರೋ ಧರ್ಮಸ್ಯ ವೀರ್ಯವಾನ್ ।
ಸೌಮ್ಯಃ ಸೋಮಾತ್ಮಜಶ್ಚಾತ್ರ ರಾಜನ್ ದಧಿಮುಖಃ ಕಪಿಃ ॥
ಅನುವಾದ
ಧರ್ಮಾತ್ಮಾ, ಪರಾಕ್ರಮಿ ಸುಷೇಣನು ಧರ್ಮನ ಪುತ್ರನಾಗಿದ್ದಾನೆ. ರಾಜನೇ! ದಧಿಮುಖನೆಂಬ ಸೌಮ್ಯ ವಾನರನು ಚಂದ್ರನ ಮಗನಾಗಿದ್ದಾನೆ.॥22॥
ಮೂಲಮ್ - 23
ಸುಮುಖೋ ದುರ್ಮುಖಶ್ಚಾತ್ರ ವೇಗದರ್ಶೀ ಚ ವಾನರಃ ।
ಮೃತ್ಯುರ್ವಾನರ ರೂಪೇಣ ನೂನಂ ಸೃಷ್ಟಃ ಸ್ವಯಂಭುವಾ ॥
ಅನುವಾದ
ಸುಮುಖ, ದುರ್ಮುಖ ಮತ್ತು ವೇಗದರ್ಶಿ ಎಂಬ ವಾನರರು ಮೃತ್ಯುವಿನ ಪುತ್ರರಾಗಿದ್ದಾರೆ. ಸ್ವಯಂಭೂ ಬ್ರಹ್ಮದೇವರು ಖಂಡಿತವಾಗಿ ಮೃತ್ಯುರೂಪದಲ್ಲೇ ಈ ವಾನರರನ್ನು ಸೃಷ್ಟಿಸಿರುವರು.॥23॥
ಮೂಲಮ್ - 24
ಪುತ್ರೊ ಹುತವಹಸ್ಯಾಥ ನೀಲಃ ಸೇನಾಪತಿಃ ಸ್ವಯಮ್ ।
ಅನಿಲಸ್ಯ ತು ಪುತ್ರೋಽತ್ರ ಹನೂಮಾನಿತಿ ವಿಶ್ರುತಃ ॥
ಅನುವಾದ
ಸ್ವಯಂ ಸೇನಾಪತಿ ನೀಲನು ಅಗ್ನಿಯ ಪುತ್ರನು. ವಿಖ್ಯಾತ ವೀರ ಹನುಮಂತನು ವಾಯುಪುತ್ರನಾಗಿದ್ದಾನೆ.॥24॥
ಮೂಲಮ್ - 25
ನಪ್ತಾ ಶಕ್ರಸ್ಯ ದುರ್ಧರ್ಘೋ ಬಲವಾನಂಗದೋ ಯುವಾ ।
ಮೈಂದಶ್ಚ ದ್ವಿವಿದಶ್ಚೋಭೌ ಬಲಿನಾವಶ್ವಿಸಂಭವೌ ॥
ಅನುವಾದ
ಬಲವಂತ ಹಾಗೂ ದುರ್ಜಯವೀರ ಅಂಗದನು ಇಂದ್ರನ ಮೊಮ್ಮಗನಾಗಿದ್ದಾನೆ. ಅವನು ಇನ್ನೂ ತರುಣನಾಗಿದ್ದಾನೆ. ಬಲಿಷ್ಠರಾದ ಮೈಂದ-ದ್ವಿವಿದರು ಅಶ್ವಿನೀ ಕುಮಾರರ ಪುತ್ರರಾಗಿದ್ದಾರೆ.॥25॥
ಮೂಲಮ್ - 26
ಪುತ್ರಾ ವೈವಸ್ವತಸ್ಯಾಥ ಪಂಚ ಕಾಲಾಂತಕೋಪಮಾಃ ।
ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ॥
ಅನುವಾದ
ಗಜ, ಗವಾಕ್ಷ, ಗವಯ, ಶರಭ ಮತ್ತು ಗಂಧಮಾದನ ಇವರು ಯಮನ ಪುತ್ರರಾಗಿದ್ದು, ಕಾಲಾಂತಕನಂತೆ ಪರಾಕ್ರಮಿಗಳಾಗಿದ್ದಾರೆ.॥26॥
ಮೂಲಮ್ - 27
ದಶ ವಾನರಕೋಟ್ಯಶ್ಚ ಶೂರಾಣಾಂ ಯುದ್ಧ ಕಾಂಕ್ಷಿಣಾಮ್ ।
ಶ್ರೀಮತಾಂ ದೇವಪುತ್ರಾಣಾಂ ಶೇಷಂ ನಾಖ್ಯಾತುಮುತ್ಸಹೇ ॥
ಅನುವಾದ
ಈ ಪ್ರಕಾರ ದೇವತೆಗಳಿಂದ ಉತ್ಪನ್ನರಾದ ತೇಜಸ್ವೀ ಶೂರವೀರ ವಾನರರ ಸಂಖ್ಯೆ ಹತ್ತುಕೋಟಿಯಾಗಿದೆ. ಇವರೆಲ್ಲರೂ ಯುದ್ಧದ ಇಚ್ಛೆಯುಳ್ಳವರಾಗಿದ್ದಾರೆ. ಇವರಲ್ಲದೆ ಉಳಿದ ವಾನರರ ವಿಷಯದಲ್ಲಿ ನಾನೇನೂ ಹೇಳಲಾರೆ, ಏಕೆಂದರೆ ಅವರ ಗಣನೆಯೇ ಅಸಂಭವವಾಗಿದೆ.॥27॥
ಮೂಲಮ್ - 28
ಪುತ್ರೋ ದಶರಥಸ್ಯೈಷ ಸಿಂಹಸಂಹನನೋ ಯುವಾ ।
ದೂಷಣೋ ನಿಹತೋ ಯೇನ ಖರಶ್ಚ ತ್ರಿಶಿರಾಸ್ತಥಾ ॥
ಅನುವಾದ
ದಶರಥನಂದನ ಶ್ರೀರಾಮನ ಶ್ರೀವಿಗ್ರಹವು ಸಿಂಹದಂತೆ ಮೈಕಟ್ಟು ಇದ್ದು ತರುಣವಾಗಿದೆ. ಇವನೊಬ್ಬನೇ ಖರ-ದೂಷಣ-ತ್ರಿಶಿರರನ್ನು ಸಂಹರಿಸಿರುವನು.॥28॥
ಮೂಲಮ್ - 29
ನಾಸ್ತಿ ರಾಮಸ್ಯ ಸದೃಶೇ ವಿಕ್ರಮೇ ಭುವಿ ಕಶ್ಚನ ।
ವಿರಾಧೋ ನಿಹತೋ ಯೇನ ಕಬಂಧಶ್ಚಾಂತಕೋಪಮಃ ॥
ಅನುವಾದ
ವಿರಾಧ ಮತ್ತು ಕಾಲನಂತಿದ್ದ ವಿಕರಾಳ ಕಬಂಧನನ್ನು ವಧಿಸಿದ ಶ್ರೀರಾಮಚಂದ್ರನಂತೆ ಪರಾಕ್ರಮಿ ಈ ಭೂಮಂಡಲದಲ್ಲಿ ಯಾರೂ ಇಲ್ಲ.॥29॥
ಮೂಲಮ್ - 30
ವಕ್ತುಂ ನ ಶಕ್ತೋ ರಾಮಸ್ಯ ಗುಣಾನ್ಕಶ್ಚಿನ್ನರಃ ಕ್ಷಿತೌ ।
ಜನಸ್ಥಾನಗತಾ ಯೇನ ಯಾವಂತೋ ರಾಕ್ಷಸಾ ಹತಾಃ ॥
ಅನುವಾದ
ಶ್ರೀರಾಮನ ಗುಣಗಳನ್ನು ಪೂರ್ಣವಾಗಿ ವರ್ಣಿಸಬಲ್ಲ ಮನುಷ್ಯನು ಈ ಭೂಮಂಡಲದಲ್ಲಿ ಯಾರೂ ಇಲ್ಲ. ಜನಸ್ಥಾನದಲ್ಲಿ ಶ್ರೀರಾಮನೇ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿರುವನು.॥30॥
ಮೂಲಮ್ - 31
ಲಕ್ಷ್ಮಣಶ್ಚಾತ್ರ ಧರ್ಮಾತ್ಮಾ ಮಾತಂಗಾನಾಮಿವರ್ಷಭಃ ।
ಯಸ್ಯ ಬಾಣಪಥಂ ಪ್ರಾಪ್ಯ ನ ಜೀವೇದಪಿ ವಾಸವಃ ॥
ಅನುವಾದ
ಧರ್ಮಾತ್ಮಾ ಲಕ್ಷ್ಮಣನೂ ಶ್ರೇಷ್ಠ ಗಜರಾಜನಂತೆ ಪರಾಕ್ರಮಿಯಾಗಿದ್ದು, ಅವನು ಬಾಣದ ಗುರಿಯಿಟ್ಟರೆ ದೇವರಾಜ ಇಂದ್ರನೂ ಬದುಕಿರಲಾರನು.॥31॥
ಮೂಲಮ್ - 32
ಶ್ವೇತೋ ಜ್ಯೋತಿರ್ಮುಖಶ್ಚಾತ್ರ ಭಾಸ್ಕರಸ್ಯಾತ್ಮಸಂಭವೌ ।
ವರುಣಸ್ಯಾಥ ಪುತ್ರೋಽಥ ಹೇಮಕೂಟಃ ಪ್ಲವಂಗಮಃ ॥
ಅನುವಾದ
ಇವರಲ್ಲದೇ ಆ ಸೈನ್ಯದಲ್ಲಿ ಶ್ವೇತ ಮತ್ತು ಜೋತಿರ್ಮುಖರೆಂಬ ಇಬ್ಬರು ವಾನರು ಸೂರ್ಯನ ಪುತ್ರರಾಗಿದ್ದಾರೆ. ಹೇಮಕೂಟನೆಂಬ ವಾನರರು ವರುಣನ ಮಗನಾಗಿದ್ದಾನೆ.॥32॥
ಮೂಲಮ್ - 33
ವಿಶ್ವಕರ್ಮಸುತೋ ವೀರೋ ನಲಃ ಪ್ಲವಗಸತ್ತಮಃ ।
ವಿಕ್ರಾಂತೋ ವೇಗವಾನತ್ರ ವಸುಪುತ್ರಃ ಸ ದುರ್ಧರಃ ॥
ಅನುವಾದ
ವಾನರಪ್ರವರ ವೀರನಳನು ವಿಶ್ವಕರ್ಮನ ಪುತ್ರನಾಗಿದ್ದಾನೆ. ವೇಗಶಾಲಿ ಮತ್ತು ಪರಾಕ್ರಮಿ ದುರ್ಧರನು ವಸುದೇವತೆಯ ಪುತ್ರನಾಗಿದ್ದಾನೆ.॥33॥
ಮೂಲಮ್ - 34
ರಾಕ್ಷಸಾನಾಂ ವರಿಷ್ಠಶ್ಚ ತವ ಭ್ರಾತಾ ವಿಭೀಷಣಃ ।
ಪರಿಗೃಹ್ಯ ಪುರೀಂ ಲಂಕಾಂ ರಾಘವಸ್ಯ ಹಿತೇ ರತಃ ॥
ಅನುವಾದ
ನಿಮ್ಮ ತಮ್ಮ ವಿಭೀಷಣನೂ ಕೂಡ ಲಂಕೆಯ ರಾಜ್ಯವನ್ನು ಪಡೆದು ಶ್ರೀರಘುನಾಥನ ಹಿತಸಾಧನೆಯಲ್ಲೇ ತತ್ಪರನಾಗಿರುವನು.॥34॥
ಮೂಲಮ್ - 35
ಇತಿ ಸರ್ವಂ ಸಮಾಖ್ಯಾತಂ ತಥಾ ವೈ ವಾನರಂ ಬಲಮ್ ।
ಸುವೇಲೇಽಧಿಷ್ಠಿತಂ ಶೈಲೇ ಶೇಷಕಾರ್ಯೇ ಭವಾನ್ಗತಿಃ ॥
ಅನುವಾದ
ಹೀಗೆ ಸುವೇಲ ಪರ್ವತದಲ್ಲಿ ಬೀಡುಬಿಟ್ಟ ವಾನರ ಸೈನ್ಯದ ಪೂರ್ಣ ಪರಿಚಯವನ್ನು ನಾನು ಮಾಡಿಸಿರುವೆನು. ಇನ್ನು ಉಳಿದಿರುವ ಕಾರ್ಯ ನಿಮ್ಮ ಕೈಯಲ್ಲೇ ಇದೆ.॥35॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತನೆಯ ಸರ್ಗವು ಪೂರ್ಣವಾಯಿತು.॥30॥