वाचनम्
ಭಾಗಸೂಚನಾ
ವಾನರ ಸೈನ್ಯದ ಮುಖ್ಯರಾದ ದಳಪತಿಗಳ ಪರಿಚಯ
ಮೂಲಮ್ - 1
ತಾಂಸ್ತು ತೇ ಸಂಪ್ರವಕ್ಷ್ಯಾಮಿ ಪ್ರೇಕ್ಷಮಾಣಸ್ಯ ಯೂಥಪಾನ್ ।
ರಾಘವಾರ್ಥೇ ಪರಾಕ್ರಾಂತಾ ಯೇ ನ ರಕ್ಷಂತಿ ಜೀವಿತಮ್ ॥
ಅನುವಾದ
ಸಾರಣನು ಮುಂದುವರಿಸುತ್ತಾನೆ- ಮಹಾರಾಜ! ವಾನರ ಸೈನ್ಯವನ್ನು ಗಮನಿಸುತ್ತಿರುವ ನಿಮಗೆ, ರಾಮನ ಸಲುವಾಗಿ ತಮ್ಮ ಪರಾಕ್ರಮ ತೋರುವ, ಜೀವದ ಹಂಗನ್ನು ತೊರೆದು ಬಂದಿರುವ ದಳಪತಿಗಳ ಪರಿಚಯಮಾಡಿಕೊಡುತ್ತೇನೆ.॥1॥
ಮೂಲಮ್ - 2
ಸ್ನಿಗ್ದಾ ಯಸ್ಯ ಬಹುವ್ಯಾಮಾ ದೀರ್ಘಲಾಂಗೂಲಮಾಶ್ರಿತಾಃ ।
ತಾಮ್ರಾಃ ಪೀತಾಃ ಸಿತಾಃ ಶ್ವೇತಾಃ ಪ್ರಕೀರ್ಣಾ ಘೋರಕರ್ಮಣಃ ॥
ಮೂಲಮ್ - 3
ಪ್ರಗೃಹೀತಾಃ ಪ್ರಕಾಶಂತೇ ಸೂರ್ಯಸ್ಯೇವ ಮರೀಚಯಃ ।
ಪೃಥಿವ್ಯಾಂ ಚಾನುಕೃಷ್ಯಂತೇ ಹರೋ ನಾಮೈಷ ವಾನರಃ ॥
ಮೂಲಮ್ - 4½
ಯಂ ಪೃಷ್ಠ ತೋಽನುಗಚ್ಛಂತಿ ಶತಶೋಽಥ ಸಹಸ್ರಶಃ ।
ದ್ರುಮಾನುದ್ಯಮ್ಯ ಸಹಸಾ ಲಂಕಾರೋಹಣತತ್ಪರಾಃ ॥
ಯೂಥಪಾ ಹರಿರಾಜಸ್ಯ ಕಿಂಕರಾಃ ಸಮುಪಸ್ಥಿತಾಃ ।
ಅನುವಾದ
ಅಲ್ಲಿ ಕಾಣುತ್ತಿರುವವನೇ ಹರನೆಂಬ ವಾನರನು ಭಯಂಕರ ಕರ್ಮಮಾಡುವ ಇವನ ಉದ್ದವಾದ ಬಾಲದಲ್ಲಿ ಕೆಂಪು-ಹಳದಿ ಬೂದು ಬಿಳಿ ಬಣ್ಣದ ಅನೇಕ ಮಾರುಗಳಷ್ಟು ಕೂದಲುಗಳಿವೆ. ಹರಡಿಕೊಂಡು ಮೇಲಕ್ಕೆದ್ದ ಇವನ ಕೂದಲುಗಳು ಸೂರ್ಯಕಿರಣಗಳಂತೆ ಹೊಳೆಯುತ್ತಿವೆ, ನಡೆವಾಗ ನೆಲದಲ್ಲಿ ಎಳೆದಾಡಿಕೊಂಡು ಹೋಗುತ್ತಾನೆ. ಇವನ ಹಿಂದೆ ಲಂಕೆಯನ್ನು ಆಕ್ರಮಿಸಲು ನೂರಾರು ಸಾವಿರ ವಾನರ ಕಿಂಕರರು ವೃಕ್ಷಗಳನ್ನೆತ್ತಿಕೊಂಡು ಸಿದ್ಧರಾಗಿ ನಿಂತಿದ್ದಾರೆ.॥2-4॥
ಮೂಲಮ್ - 5
ನೀಲಾನಿವ ಮಹಾಮೇಘಾಂಸ್ತಿಷ್ಠತೋ ಯಾಂಸ್ತು ಪಶ್ಯಸಿ ॥
ಮೂಲಮ್ - 6
ಅಸಿತಾಂಜನಸಂಕಾಶಾನ್ ಯುದ್ಧೇ ಸತ್ಯಪರಾಕ್ರಮಾನ್ ।
ಅಸಂಖ್ಯೇಯಾನ ನಿರ್ದೇಶಾನ್ ಪರಂ ಪಾರಮಿವೋದಧೇಃ ॥
ಮೂಲಮ್ - 7
ಪರ್ವತೇಷು ಚ ಯೇ ಕೇಚಿದ್ ವಿಷಯೇಷು ನದೀಷು ಚ।
ಏತೇ ತ್ವಾಮಭಿವರ್ತಂತೇ ರಾಜನ್ನಕ್ಷಾಃ ಸುದಾರಣಾಃ ॥
ಮೂಲಮ್ - 8
ಏಷಾಂ ಮಧ್ಯೇ ಸ್ಥಿತೋ ರಾಜನ್ ಭೀಮಾಕ್ಷೋ ಭೀಮದರ್ಶನಃ ।
ಪರ್ಜನ್ಯ ಇವ ಜೀಮೂತೈಃ ಸಮಂತಾತ್ ಪರಿವಾರಿತಃ ॥
ಮೂಲಮ್ - 9
ಋಕ್ಷವಂತಂ ಗಿರಿಶ್ರೇಷ್ಠ ಮಧ್ಯಾಸ್ತೇ ನರ್ಮದಾಂ ಪಿಬನ್ ।
ಸರ್ವರ್ಕ್ಷಾಣಾಮಧಿಪತಿರ್ಧೂಮ್ರೋ ನಾಮೈಷ ಯೂಥಪಃ ॥
ಅನುವಾದ
ಅತ್ತಕಡೆ, ಮಹಾಮೇಘ ಗಳಂತೆಯೂ, ಕಪ್ಪಾದ ಕಾಡಿಗೆಯಂತೆಯೂ ಇರುವ ಕರಡಿ ಗಳನ್ನು ನೋಡುತ್ತಿರುವೆಯಲ್ಲವೇ? ಅವರೆಲ್ಲರೂ ಯುದ್ಧದಲ್ಲಿ ನಿಜವಾದ ಪರಾಕ್ರಮವನ್ನು ತೋರಿಸತಕ್ಕವರು. ಸಮುದ್ರದ ಆಚೆಯ ದಡವು ಕಾಣದಂತೆ, ಕಣ್ಣುಗಳಿಗೆ ನಿಲುಕದಷ್ಟು ವಿಶಾಲವಾಗಿ ವ್ಯಾಪಿಸಿಕೊಂಡಿದ್ದಾರೆ. ಅಸಂಖ್ಯಾತರಾಗಿದ್ದಾರೆ. ಅವರಲ್ಲಿ ಒಬ್ಬಬ್ಬ ದಳಪತಿಯನ್ನು ಪರಿಚಯಿಸಲು ಸಾಧ್ಯವೇ ಇಲ್ಲ. ಇವರೆಲ್ಲರೂ ಪರ್ವತಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ನದೀತೀರಗಳಲ್ಲಿ ವಾಸಿಸುತ್ತಾರೆ. ರಾಜನೇ! ಅತ್ಯಂತ ಭಯಂಕರ ಸ್ವಭಾವದ ಈ ಕರಡಿಗಳು ನಿನ್ನ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾರೆ. ಇವರ ಮಧ್ಯದಲ್ಲಿ ಭಯಂಕರವಾಗಿ ಕಾಣುವ, ಭಯಂಕರವಾದ ಕಣ್ಣುಗಳುಳ್ಳ ಧೂಮ್ರನೆಂಬ ದಳಪತಿಯಿದ್ದಾನೆ. ಮೇಘಗಳಿಂದ ಸುತ್ತುವರೆದ ಇಂದ್ರನಂತೆ, ಇವನ ಸುತ್ತಲೂ ಕರಡಿಗಳ ನಾಯಕರು ಆವರಿಸಿಕೊಂಡಿರುವರು. ಇವನು ನರ್ಮದಾ ನದಿಯ ನೀರನ್ನು ಕುಡಿಯುತ್ತಾ ಋಕ್ಷವಂತ ಎಂಬ ಶ್ರೇಷ್ಠ ಪರ್ವತದಲ್ಲಿ ವಾಸಿಸುತ್ತಾನೆ. ಎಲ್ಲ ಕರಡಿಗಳಿಗೆ ಇವನೇ ರಾಜನಾಗಿದ್ದಾನೆ.॥5-9॥
ಮೂಲಮ್ - 10
ಯವೀಯಾನಸ್ಯ ತು ಭ್ರಾತಾ ಪಶ್ಯೆನಂ ಪರ್ವತೋಪಮಮ್ ।
ಭ್ರಾತ್ರಾ ಸಮಾನೋ ರೂಪೇಣ ವಿಶಿಷ್ಟಸ್ತು ಪರಾಕ್ರಮೇ ॥
ಮೂಲಮ್ - 11
ಸ ಏಷ ಜಾಂಬವಾನ್ನಾಮ ಮಹಾಯೂಥಪಯೂಥಪಃ ।
ಪ್ರಶಾಂತೋ ಗುರುವರ್ತೀ ಚ ಸಂಪ್ರಹಾರೇಷ್ವಮರ್ಷಣಃ ॥
ಅನುವಾದ
ಈ ಧೂಮ್ರನ ತಮ್ಮ ಜಾಂಬವಂತನು ಮಹಾದಳಪತಿಗಳಿಗೂ ದಂಡನಾಯಕನಾಗಿದ್ದಾನೆ. ನೋಡು ಇವನು ಹೇಗೆ ಪರ್ವತದಂತೆ ಕಾಣುತ್ತಿರುವನು? ಇವನು ರೂಪದಲ್ಲಿ ತಮ್ಮನಂತೆ ಇದ್ದರೂ ಪರಾಕ್ರಮದಲ್ಲಿ ಅವನಿಗಿಂತಲೂ ಹೆಚ್ಚಿನವನು. ಶಾಂತ ಸ್ವಭಾವದ ಇವನು ಅಣ್ಣನ ಹಾಗೂ ಹಿರಿಯರ ಆಜ್ಞೆಗಧೀನನಾಗಿ ಇರುತ್ತಾನೆ. ಅವರ ಸೇವೆ ಮಾಡುತ್ತಾನೆ. ಯುದ್ಧಗಳಲ್ಲಿ ಮಾತ್ರ ಇವನು ಸಹನೆಯಿಲ್ಲದವನಾಗುತ್ತಾನೆ.॥10-11॥
ಮೂಲಮ್ - 12
ಏತೇನ ಸಾಹ್ಯಂ ತು ಮಹತ್ಕೃತಂ ಶಕ್ರಸ್ಯ ಧೀಮತಾ ।
ದೈವಾಸುರೇ ಜಾಂಬವತಾಲಬ್ಧಾಶ್ಚ ಬಹವೋ ವರಾಃ ॥
ಅನುವಾದ
ಬುದ್ಧಿವಂತ ಈ ಜಾಂಬವಂತನು ದೇವಾಸುರರ ಸಂಗ್ರಾಮದಲ್ಲಿ ಇಂದ್ರನಿಗೆ ಬಹಳ ದೊಡ್ಡ ಸಹಾಯ ಮಾಡಿದ್ದನು ಹಾಗೂ ಇಂದ್ರನಿಂದ ಇವನು ಬಹಳಷ್ಟು ವರಗಳನ್ನು ಪಡೆದುಕೊಂಡಿದ್ದನು.॥1.॥
ಮೂಲಮ್ - 13
ಆರುಹ್ಯ ಪರ್ವತಾಗ್ರೇಭ್ಯೋ ಮಹಾಭ್ರವಿಪುಲಾಃ ಶಿಲಾಃ ।
ಮುಂಚಂತಿ ವಿಪುಲಾಕಾರಾ ನ ಮೃತ್ಯೋರುದ್ವಿಜಂತಿ ಚ ॥
ಮೂಲಮ್ - 14
ರಾಕ್ಷಸಾನಾಂ ಚ ಸದೃಶಾಃ ಪಿಶಾಚಾನಾಂ ಚ ರೋಮಶಾಃ ।
ಏತಸ್ಯ ಸೈನ್ಯಾ ಬಹವೋ ವಿಚರಂತ್ಯಮಿತೌಜಸಃ ॥
ಅನುವಾದ
ಅಸೀಮ ಬಲ ಪರಾಕ್ರಮಿ. ಇವನ ಸೈನಿಕರು ಎಲ್ಲೆಡೆ ಸಂಚರಿಸುತ್ತಿರುವರು. ಇವರೆಲ್ಲರ ದೊಡ್ಡದಾದ ಶರೀರಗಳು ದಟ್ಟವಾದ ಕೂದಲುಗಳಿಂದ ಕೂಡಿಕೊಂಡಿವೆ. ಇವನು ರಾಕ್ಷಸ ಮತ್ತು ಪಿಶಾಚ ಸದೃಶರು. ಮೃತ್ಯುವಿಗೂ ಹೆದರದೇ ಇರುವ ಇವರು ಪರ್ವತಶಿಖರಗಳನ್ನು ಹತ್ತಿ ಮೇಘಗಳಂತಹ ಭಾರೀ ಕಲ್ಲು ಬಂಡೆಗಳನ್ನು ಶತ್ರುಗಳ ಮೇಲೆ ಎಸೆಯುತ್ತಾರೆ.॥13-14॥
ಮೂಲಮ್ - 15
ಯ ಏನಮಭಿಸಂರಬ್ಧಂ ಪ್ಲವಮಾನಮಿವಸ್ಥಿತಮ್ ।
ಪ್ರೇಕ್ಷಂತೇ ವಾನರಾಃ ಸರ್ವೇ ಸ್ಥಿತಾ ಯೂಥಪಯೂಥಪಮ್ ॥
ಮೂಲಮ್ - 16
ಏಷ ರಾಜನ್ ಸಹಸ್ರಾಕ್ಷಂ ಪರ್ಯುಪಾಸ್ತೇ ಹರೀಶ್ವರಃ ।
ಬಲೇನ ಬಲ ಸಂಯುಕ್ತೋ ದಂಭೋ ನಾಮೈಷ ಯೂಥಪಃ ॥
ಅನುವಾದ
ಈ ದಂಭನೆಂದು ಪ್ರಸಿದ್ಧನಾದ ವಾನರ ದಳಪತಿಯ ದಂಡ ನಾಯಕನು ಲೀಲಾಜಾಲವಾಗಿ ನೆಗೆಯುತ್ತಾ, ಕೆಲವೊಮ್ಮೆ ನಿಂತಿರುತ್ತಾನೆ. ಎಲ್ಲ ವಾನರರು ಅವನ ಕಡೆಗೆ ಆಶ್ಚರ್ಯ ದಿಂದ ನೋಡುತ್ತಿರುತ್ತಾರೆ. ಸದಾಕಾಲ ರೋಷಗೊಂಡು ಕಾಣುವ ಇವನ ಬಳಿ ಬಹಳ ದೊಡ್ಡ ಸೈನ್ಯವಿದೆ. ರಾಜನೇ! ಈ ವಾನರರಾಜ ದಂಭನು ತನ್ನ ಸೈನ್ಯದ ಮೂಲಕವೇ ಸಹಸ್ರಾಕ್ಷ ಇಂದ್ರನ ಉಪಾಸನೆ ಮಾಡುತ್ತಾನೆ, ಅವನ ಸಹಾಯಕ್ಕೆ ಸೈನ್ಯವನ್ನು ಕಳಿಸಿಕೊಡುತ್ತಾ ಇರುತ್ತಾನೆ.॥15-16॥
ಮೂಲಮ್ - 17
ಯಃ ಸ್ಥಿತಂ ಯೋಜನೇ ಶೈಲಂ ಗಚ್ಛನ್ ಪಾರ್ಶ್ವೇನ ಸೇವತೇ ।
ಊರ್ಧ್ವಂ ತಥೈವ ಕಾಯೇನ ಗತಃ ಪ್ರಾಪ್ನೋತಿ ಯೋಜನಮ್ ॥
ಮೂಲಮ್ - 18
ಯಸ್ಮಾತ್ತು ಪರಮಂ ರೂಪಂ ಚತುಷ್ಪಾತ್ಸು ನ ವಿದ್ಯತೇ ।
ಶ್ರುತಃ ಸನ್ನಾದನೋ ನಾಮ ವಾನರಾಣಾಂ ಪಿತಾಮಹಃ ॥
ಮೂಲಮ್ - 19
ಯೇನ ಯುದ್ಧಂ ತದಾ ದತ್ತಂ ರಣೇ ಶಕ್ರಸ್ಯ ಧೀಮತಾ ।
ಪರಾಜಯಶ್ಚ ನ ಪ್ರಾಪ್ತಃ ಸೋಽಯಂ ಯೂಥಪಯೂಥಪಃ ॥
ಅನುವಾದ
ಅತ್ತಕಡೆ ನಿಂತಿರುವ ವಾನರರ ಪಿತಾಮಹನಾದ ಸನ್ನಾದನೆಂಬ ಯೂಥಪರ ದಂಡನಾಯಕನನ್ನು ನೋಡು. ಅವನು ನಡೆಯುತ್ತಿರುವಾಗ ಒಂದು ಯೋಜನ ದೂರದಲ್ಲಿರುವ ಪರ್ವತವನ್ನು ತನ್ನ ಕೈಯಿಂದಲೇ ಮುಟ್ಟುವನು. ಮತ್ತು ಒಂದು ಯೋಜನ ಎತ್ತರವಾದ ವಸ್ತುವನ್ನು ತನ್ನ ವಿಶಾಲ ಶರೀರದಿಂದಲೇ ಪಡೆದುಕೊಳ್ಳುವನು. ನಾಲ್ಕು ಕಾಲುಗಳಿರುವ ಪ್ರಾಣಿಗಳಲ್ಲಿ ಅಂತಹ ರೂಪವು ಬೇರೆ ಯಾರಿಗೂ ಇಲ್ಲ. ಆ ಬುದ್ಧಿವಂತನು ಎಂದೋ ಇಂದ್ರನಿಗೆ ತನ್ನೊಂದಿಗೆ ಯುದ್ಧದ ಅವಕಾಶ ಮಾಡಿಕೊಟ್ಟಿದ್ದನು. ಆದರೆ ಅವನು ಇಂದ್ರನಿಂದ ಸೋಲಲಿಲ್ಲ. ಅವನೇ ಈ ದಳಪತಿಗಳ ದಂಡ ನಾಯಕನಾಗಿದ್ದಾನೆ.॥17-1.॥
ಮೂಲಮ್ - 20
ಯಸ್ಯ ವಿಕ್ರಮಮಾಣಸ್ಯ ಶಕ್ರಸ್ಯೇವ ಪರಾಕ್ರಮಃ ।
ಏಷ ಗಂಧರ್ವಕನ್ಯಾಯಾಮುತ್ಪನ್ನಃ ಕೃಷ್ಣವರ್ತ್ಮನಾ ॥
ಮೂಲಮ್ - 21
ತದಾ ದೇವಾಸುರೇ ಯುದ್ಧೇ ಸಾಹ್ಯಾರ್ಥಂ ತ್ರಿದಿವೌಕಸಾಮ್ ।
ಯತ್ರ ವೈಶ್ರವಣೋ ರಾಜಾ ಜಂಬೂಮುಪನಿಷೇವತೇ ॥
ಮೂಲಮ್ - 22
ಯೋ ರಾಜಾ ಪರ್ವತೇಂದ್ರಾಣಾಂ ಬಹುಕಿನ್ನರ ಸೇವಿನಾಮ್ ।
ವಿಹಾರಸುಖದೋ ನಿತ್ಯಂ ಭ್ರಾತುಸ್ತೇ ರಾಕ್ಷಸಾಧಿಪ ॥
ಮೂಲಮ್ - 23
ತತ್ರೈಷ ರಮತೇ ಶ್ರೀಮಾನ್ ಬಲವಾನ್ ವಾನರೋತ್ತಮಃ ।
ಯುದ್ದೇಷ್ವಕತ್ಥನೋ ನಿತ್ಯಂ ಕ್ರಥನೋ ನಾಮ ಯೂಥಪಃ ॥
ಮೂಲಮ್ - 24
ವೃತಃ ಕೋಟಿ ಸಹಸ್ರೇಣ ಹರೀಣಾಂ ಸಮವಸ್ಥಿತಃ ।
ಏಷೈವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ ॥
ಅನುವಾದ
ಅಲ್ಲಿಯೇ ಮತ್ತೊಬ್ಬ ದಂಡನಾಯಕನಿದ್ದಾನೆ, ಅವನನ್ನು ನೋಡು. ಅವನೇ ಕ್ರಥನೆಂಬ ವಾನರ ಶ್ರೇಷ್ಠನು. ಅವನಲ್ಲಿ ಇಂದ್ರನಂತಹ ಪರಾಕ್ರಮವಿದೆ. ದೇವಾಸರರ ಯುದ್ಧದಲ್ಲಿ ದೇವತೆಗಳಿಗೆ ಸಹಾಯಮಾಡಲು ಅಗ್ನಿದೇವನು ಗಂಧರ್ವಕನ್ಯೆಯಲ್ಲಿ ಕ್ರಥನನ್ನು ಪಡೆದುಕೊಂಡಿದ್ದನು. ಅನೇಕ ಕಿನ್ನರರಿಂದ ಸೇವಿಸಲ್ಪಡುವ, ಶ್ರೇಷ್ಠ ಪರ್ವತಗಳಿಗೆ ರಾಜನಾದ, ವಿಹಾರಿಗಳಿಗೆ ಸುಖದಾಯಕನಾದ, ನಿನ್ನ ಅಣ್ಣ ಕುಬೇರನು ರಮಿಸುವ ಜಂಬೂವೃಕ್ಷದ ಆಶ್ರಯದಲ್ಲೇ ಮಹಾಪರಾಕ್ರಮಿಯಾದ, ಶ್ರೀಮಂತನಾದ, ಮಹಾಬಲಿಷ್ಠನಾದ ಕ್ರಥನೂ ರಮಿಸುತ್ತಿರುತ್ತಾನೆ. ಯುದ್ಧಗಳಲ್ಲಿ ಎಂದಿಗೂ ಇವನು ಜಂಬ ಕೊಚ್ಚಿಕೊಳ್ಳುವುದಿಲ್ಲ. ಸಾವಿರ ಕೋಟಿ ಸೈನಿಕರಿಂದ ಪರಿವೃತನಾಗಿ, ಅವನೂ ಕೂಡ ತನ್ನ ಸೈನ್ಯದೊಂದಿಗೆ ಲಂಕೆಯನ್ನು ಧ್ವಂಸಮಾಡಲು ಆಶಿಸಿದ್ದಾನೆ.॥20-2.॥
ಮೂಲಮ್ - 25
ಯೋ ಗಂಗಾಮನುಪರ್ಯೇತಿ ತ್ರಾಸಯನ್ ಗಜಯೂಥಪಾನ್ ।
ಹಸ್ತಿನಾಂ ವಾನರಾಣಾಂ ಚ ಪೂರ್ವವೈರಮನುಸ್ಮರನ್ ॥
ಮೂಲಮ್ - 26
ಏಷ ಯೂಥಪತಿರ್ನೇತಾ ಗರ್ಜನ್ಗಿರಿಗುಹಾಶಯಃ ।
ಗಜಾನ್ರೋಧಯತೇ ವನ್ಯಾನಾರುಜಂಶ್ಚ ಮಹೀರುಹಾನ್ ॥
ಮೂಲಮ್ - 27
ಹರೀಣಾಂ ವಾಹಿನೀಮುಖ್ಯೋ ನದೀಂ ಹೈಮವತೀಮನು ।
ಉಶೀರಬೀಜಮಾಶ್ರಿತ್ಯ ಮಂದರಂ ಪರ್ವತ್ತೋತಮಮ್ ॥
ಮೂಲಮ್ - 28
ರಮತೇ ವಾನರಶ್ರೇಷ್ಠೋ ದಿವಿ ಶಕ್ರ ಇವ ಸ್ವಯಮ್ ।
ಏನಂ ಶತಸಹಸ್ರಾಣಾಂ ಸಹಸ್ರಮಭಿವರ್ತತೇ ॥
ಮೂಲಮ್ - 29
ವೀರ್ಯವಿಕ್ರಮದೃಪ್ತಾನಾಂ ನರ್ದತಾಂ ಬಾಹುಶಾಲಿನಾಮ್ ।
ಸ ಏಷ ನೇತಾ ಚೈತೇಷಾಂ ವಾನರಾಣಾಂ ಮಹಾತ್ಮನಾಮ್ ॥
ಮೂಲಮ್ - 30
ಸ ಏಷ ದುರ್ಧರೋ ರಾಜನ್ ಪ್ರಮಾಥೀ ನಾಮಯೂಥಪಃ ।
ವಾತೇನೇವೋದ್ಧತಂ ಮೇಘಂ ಯಮೇನ ಮನುಪಶ್ಯಸಿ ॥
ಮೂಲಮ್ - 31½
ಅನೀಕಮಪಿ ಸಂರಬ್ಧಂ ವಾನರಾಣಾಂ ತರಸ್ವಿನಾಮ್ ।
ಉದ್ಧೂತಮರುಣಾಭಾಸಂ ಪವನೇನ ಸಮಂತತಃ ॥
ವಿವರ್ತಮಾನಂ ಬಹುಶೋ ಯತ್ರೈತದ್ಬಹುಲಂ ರಜಃ ।
ಅನುವಾದ
ರಾವಣನೇ! ನೀನಲ್ಲಿ ನೋಡುತ್ತಿರುವ ವಾನರ ನಾಯಕನೇ ಪ್ರಮಾಧಿ ಎಂಬುವನು. ವಾನರರಿಗೂ ಮತ್ತು ಆನೆಗಳಿಗೂ ಇರುವ ಹಿಂದಿನ ವೈರವನ್ನು ಸ್ಮರಿಸುತ್ತಾ ಪ್ರಮಾಧಿಯು ಆನೆಗಳನ್ನು ಭಯಗೊಳಿಸುತ್ತಾ ಗಂಗಾನದಿಯ ತೀರದಲ್ಲಿ ಸಂಚರಿಸುತ್ತಾನೆ. ಗಿರಿಗಳ ಗುಹೆಗಳಲ್ಲಿ ಮಲಗುವ ಪ್ರಮಾಧಿಯು ಕಾಡಿನಲ್ಲಿರುವ ವೃಕ್ಷಗಳನ್ನು ಬುಡಸಹಿತ ಕಿತ್ತು ಆನೆಗಳು ಹೋಗುವ ಹಾದಿಯಲ್ಲಿರಿಸಿ ಅವುಗಳು ಮುಂದೆ ಹೋಗದಂತೆ ತಡೆಯುವನು. ವಾನರರ ವಾಹಿನಿಗೆ ದಂಡ ನಾಯಕನಾಗಿರುವ ಅವನು ಗಂಗಾನದಿಯ ತೀರದಲ್ಲಿರುವ ಉಶೀರಬೀಜವೆಂಬ ಪರ್ವತವನ್ನೂ, ಪರ್ವತಗಳಲ್ಲಿ ಶ್ರೇಷ್ಠವಾದ ಮಂದರ ಪರ್ವತವನ್ನು ಆಶ್ರಯಿಸಿ ದೇವಲೋಕದ ಇಂದ್ರನಂತೆ ವಿಹರಿಸುತ್ತಿರುವನು. ವೀರ್ಯ-ಪರಾಕ್ರಮಗಳಿಂದ ಗರ್ವಿಷ್ಠನಾಗಿರುವ, ಬಾಹುಬಲದಿಂದ ಶೋಭಿಸುವ, ಸರ್ವಕಾಲದಲ್ಲಿಯೂ ಗರ್ಜಿಸುತ್ತಿರುವ ಹತ್ತುಕೋಟಿ ವಾನರ ಸೈನಿಕರು ಪ್ರಮಾಧಿಯನ್ನು ಅನುಸರಿಸಿ ಹೋಗುತ್ತಿರುತ್ತಾರೆ. ವಾನರರಿಗೆ ಇವನೇ ನೇತಾರನು. ವೇಗಶಾಲಿಗಳಾದ ವಾನರರಿಂದ ಕೂಡಿರುವ, ಯಾರ ಸೈನ್ಯವು ಕೋಪಗೊಂಡಿರುವುದೋ, ವಾಯುವಿನಿಂದ ಚದುರಿಹೋದ ಮೇಘದಂತೆ ಇರುವ ಯಾವನನ್ನು ನೀನು ನೋಡುತ್ತಿರುವೆಯೋ ಅವನೇ ಪ್ರಮಾಧಿಯು. ಗಾಳಿಯಿಂದ ಎದ್ದಿರುವ ಎಣ್ಣೆಗಂಪಿನಂತೆ ಇರುವ ಧೂಳು ಪುನಃ ಸುತ್ತಿಕೊಂಡು ಬೀಳುತ್ತಿರುವ ಸ್ಥಳವೇ ಪ್ರಮಾಧಿಯದಾಗಿದೆ.॥25-31॥
ಮೂಲಮ್ - 32
ಏತೇಽಸಿತಮುಖಾ ಘೋರಾ ಗೋಲಾಂಗೂಲಾ ಮಹಾಬಲಾಃ ॥
ಮೂಲಮ್ - 33½
ಶತಂ ಶತಸಹಸ್ರಾಣಿ ದೃಷ್ಟ್ವಾ ವೈ ಸೇತುಬಂಧನಮ್ ।
ಗೋಲಾಂಗೂಲಂ ಮಹಾರಾಜ ಗವಾಕ್ಷಂ ನಾಮ ಯೂಥಪಮ್ ॥
ಪರಿವಾರ್ಯಾಭಿನರ್ದಂತೇ ಲಂಕಾಂ ಮರ್ದಿತುಮೋಜಸಾ ।
ಅನುವಾದ
ಅಲ್ಲಿ ಕಾಣುವ ಕಪ್ಪಾದ ಮುಖವುಳ್ಳ ಗೋಲಾಂಗೂಲ ಜಾತಿಗೆ ಸೇರಿದ ವಾನರರು ಮಹಾಬಲಿಷ್ಠರಾಗಿದ್ದಾರೆ. ಈ ವಾನರರ ಸಂಖ್ಯೆ ಒಂದು ಕೋಟಿಯಷ್ಟಿದೆ. ಮಹಾರಾಜಾ! ಸೇತುಬಂಧನದಲ್ಲಿ ಸಹಾಯಕರಾದ ಗೋಲಾಂಗೂಲ ಜಾತಿಯ ಗವಾಕ್ಷ ಎಂಬ ಯೂಥಪತಿಗಳನ್ನು ಸುತ್ತಲೂ ಆವರಿಸಿಕೊಂಡು ಈ ವಾನರನು ನಡೆಯುತ್ತಿದ್ದು, ಲಂಕೆಯನ್ನು ಬಲವಂತವಾಗಿ ಮರ್ದಿಸಲು ಜೋರುಜೋರಾಗಿ ಗರ್ಜಿಸುತ್ತಾ ಇದ್ದಾನೆ.॥32-33॥
ಮೂಲಮ್ - 34
ಭ್ರಮರಾಚರಿತಾ ಯತ್ರ ಸರ್ವ ಕಾಲ ಫಲದ್ರುಮಾಃ ॥
ಮೂಲಮ್ - 35
ಯಂ ಸೂರ್ಯಸ್ತುಲ್ಯ ವರ್ಣಾಭಮನುಪರ್ಯೇತಿ ಪರ್ವತಮ್ ।
ಯಸ್ಯ ಭಾಸಾ ಸದಾ ಭಾಂತಿ ತದ್ವರ್ಣಾ ಮೃಗಪಕ್ಷಿಣಃ ॥
ಮೂಲಮ್ - 36
ಯಸ್ಯ ಪ್ರಸ್ಥಂ ಮಹಾತ್ಮಾನೋ ನ ತ್ಯಜಂತಿ ಮಹರ್ಷಯಃ ।
ಸರ್ವಕಾಮಫಲಾ ವೃಕ್ಷಾಃ ಸದಾ ಫಲಸಮನ್ವಿತಾಃ ॥
ಮೂಲಮ್ - 37½
ಮಧೂನಿ ಚ ಮಹಾರ್ಹಾಣಿ ಯಸ್ಮಿನ್ ಪರ್ವತಸತ್ತಮೇ ।
ತತ್ರೈಷ ರಮತೇ ರಾಜನ್ ರಮ್ಯೇ ಕಾಂಚನಪರ್ವತೇ ॥
ಮುಖ್ಯೋ ವಾನರಮುಖ್ಯಾನಾಂ ಕೇಸರೀ ನಾಮ ಯೂಥಪಃ ॥
ಅನುವಾದ
ಅಲ್ಲಿ ಕಾಣುತ್ತಿರುವವನೇ ಹನುಮಂತನ ತಂದೆಯಾದ ಕೇಸರಿಯು. ಯಾವ ಪರ್ವತದಲ್ಲಿ ಎಲ್ಲ ಋತುಗಳಲ್ಲಿ ಫಲಗಳನ್ನು ಬಿಡುವ ಮತ್ತು ದುಂಬಿಗಳಿಂದ ಸೇವಿತವಾದ ವೃಕ್ಷಗಳು ಸಮೃದ್ಧವಾಗಿವೆಯೋ, ಸೂರ್ಯನು ತನಗೆ ಸಮಾನವಾದ ಬಣ್ಣವಿರುವ ಯಾವ ಪರ್ವತವನ್ನು ದಿನನಿತ್ಯ ಪ್ರದಕ್ಷಿಣೆ ಮಾಡುವನೋ, ಯಾವ ಪರ್ವತದ ಕಾಂತಿಯಿಂದ ಅಲ್ಲಿರುವ ಮೃಗ-ಪಕ್ಷಿಗಳೂ ಸುವರ್ಣ ಮಯವಾಗಿ ಕಾಣುತ್ತಿವೆಯೋ, ಮಹಾತ್ಮರಾದ ಮಹರ್ಷಿಗಳು ಯಾವ ಪರ್ವತದ ಶಿಖರವನ್ನು ಬಿಟ್ಟುಹೋಗುವುದಿಲ್ಲವೋ, ಯಾವ ಪರ್ವತದಲ್ಲಿರುವ ವೃಕ್ಷಗಳು ಯಾವಾಗಲೂ ಫಲಸಮೃದ್ಧವಾಗಿರುವವೋ, ಎಲ್ಲಿ ಶ್ರೇಷ್ಠವಾದ ಬಹುಮೂಲ್ಯ ಮಧುವು ಸದಾ ದೊರೆಯು ವುದೋ ಅಂತಹ ಸುವರ್ಣಮಯವಾದ ಸುಂದರ ಮೇರುಪರ್ವತದಲ್ಲಿ ಪ್ರಮುಖವಾನರರಲ್ಲಿ ಮುಖ್ಯನಾದ ಕೇಸರಿಯು ರಮಿಸುತ್ತಾ ಇರುತ್ತಾನೆ.॥34-37॥
ಮೂಲಮ್ - 38½
ಷಷ್ಟಿ ರ್ಗಿರಿಸಹಸ್ರಾಣಿ ರಮ್ಯಾಃ ಕಾಂಚನಪರ್ವತಾಃ ॥
ಶೇಷಾಂ ಮಧ್ಯೇ ಗಿರಿವರಸ್ತ್ವಮಿವಾನಘ ರಕ್ಷಸಾಮ್ ।
ಅನುವಾದ
ಅರವತ್ತು ಸಾವಿರ ರಮಣೀಯ ಸುವರ್ಣಮಯ ಪರ್ವತಗಳ ನಡುವೆ ಸಾವರ್ಣಿಮೇರು ಎಂಬ ಒಂದು ಶ್ರೇಷ್ಠ ಪರ್ವತವಿದೆ. ರಾಕ್ಷಸಪತಿಯೇ! ರಾಕ್ಷಸರಲ್ಲಿ ನೀವು ಶ್ರೇಷ್ಠರಾಗಿರುವಂತೆಯೇ ಪರ್ವತಗಳಲ್ಲಿ ಆ ಪರ್ವತವು ಶ್ರೇಷ್ಠವಾಗಿದೆ.॥38॥
ಮೂಲಮ್ - 39
ತತ್ರೈಕೇ ಕಪಿಲಾಃ ಶ್ವೇತಾಸ್ತಾಮ್ರಾಸ್ಯಾ ಮಧುಪಿಂಗಲಾಃ ॥
ಮೂಲಮ್ - 40
ನಿವಸನ್ತ್ಯಂತಿಮಗಿರೌ ತೀಕ್ಷ್ಣ ದಂಷ್ಟ್ರಾ ನಖಾಯುಧಾಃ ।
ಸಿಂಹಾ ಇವ ಚತುರ್ದಂಷ್ಟ್ರಾ ವ್ಯಾಘ್ರಾ ಇವ ದುರಾಸದಾಃ ॥
ಮೂಲಮ್ - 41
ಸರ್ವೇ ವೈಶ್ವಾನರ ಸಮಾ ಜ್ವಲದಾಶೀವಿಷೋಪಮಾಃ ।
ಸುದೀರ್ಘಾಂಚಿತ ಲಾಂಗೂಲಾ ಮತ್ತಮಾತಂಗಸನ್ನಿಭಾಃ ॥
ಮೂಲಮ್ - 42½
ಮಹಾಪರ್ವತ ಸಂಕಾಶಾ ಮಹಾಜೀಮೂತನಿಃಸ್ವನಾಃ ।
ವೃತ್ತಪಿಂಗಲನೇತ್ರಾ ಹಿ ಮಹಾಭೀಮಗತಿ ಸ್ವನಾಃ ॥
ಮರ್ದಯಂತೀವ ತೇ ಸರ್ವೇತಸ್ಥುರ್ಲಂಕಾಂ ಸಮೀಕ್ಷ್ಯತೇ ।
ಅನುವಾದ
ಆ ಪರ್ವತದ ಕೊನೆಯ ಶಿಖರದಲ್ಲಿ ಕಪಿಲ, ಬಿಳಿ, ಕೆಂಪು ಮುಖಗಳಿರುವ ಜೇನಿನಂತೆ ಪಿಂಗಳವರ್ಣದ ವಾನರರು ವಾಸಿಸುತ್ತಾರೆ. ಅವರ ಹಲ್ಲುಗಳು ಹರಿತವಾಗಿದ್ದು, ಉಗುರುಗಳೇ ಆಯುಧಗಳಾಗಿವೆ. ಅವರೆಲ್ಲರೂ ಸಿಂಹದಂತೆ ನಾಲ್ಕು ಕೊರೆದಾಡೆಗಳನ್ನು ಹೊಂದಿದ್ದು ಹುಲಿಗಳಂತೆ ದುರ್ಜಯರಾಗಿದ್ದಾರೆ, ಅಗ್ನಿಯಂತೆ ತೇಜಸ್ವಿಗಳೂ, ಉರಿಯುವ ಮುಖವುಳ್ಳ ವಿಷಧರ ಸರ್ಪಗಳಂತೆ ಕ್ರೋಧಿಗಳಾಗಿದ್ದಾರೆ. ಅವುಗಳ ಬಾಲಗಳು ಉದ್ದವಾಗಿದ್ದು ಸುಂದರವಾಗಿ ಮೇಲಕ್ಕೆ ನಿಮಿರಿನಿಂತಿರುತ್ತದೆ. ಅವುಗಳು ಮದಿಸಿದ ಆನೆಯಂತೆ ಪರಾಕ್ರಮಿಗಳೂ, ಮಹಾಪರ್ವತದಂತೆ ಎತ್ತರವೂ, ಸುದೃಢ ಶರೀರಿಗಳೂ, ಮಹಾಮೇಘದಂತೆ ಗರ್ಜಿಸುವವರೂ ಆಗಿದ್ದಾರೆ. ಕಣ್ಣುಗಳು ದುಂಡಗಾಗಿದ್ದು, ಪಿಂಗಳವರ್ಣ ದ್ದಾಗಿರುತ್ತವೆ. ಅವರು ನಡೆಯುವಾಗಲೇ ಭಯಂಕರ ಶಬ್ದವಾಗುತ್ತದೆ. ಆ ಎಲ್ಲ ವಾನರು ಇಲ್ಲಿಗೆ ಬಂದು ಲಂಕೆಯನ್ನು ನೋಡುತ್ತಲೇ ಮರ್ದಿಸಿಬಿಡುವಂತೆ ನಿಂತುಕೊಂಡಿರುವರು.॥39- 42॥
ಮೂಲಮ್ - 43
ಏಷ ಚೈಷಾಮಧಿಪತಿರ್ಮಧ್ಯೇ ತಿಷ್ಠತಿ ವೀರ್ಯವಾನ್ ॥
ಮೂಲಮ್ - 44
ಜಯಾರ್ಥೀ ನಿತ್ಯಮಾದಿತ್ಯಮುಪತಿಷ್ಠತಿ ವೀರ್ಯವಾನ್ ।
ನಾಮ್ನಾ ಪೃಥಿವ್ಯಾಂ ವಿಖ್ಯಾತೋ ರಾಜನ್ ಶತಬಲೀತಿ ಯಃ ॥
ಅನುವಾದ
ರಾಜನೇ! ನೋಡಿ, ಅವರ ನಡುವೆ ಪರಾಕ್ರಮಿ ಸೇನಾಪತಿ ಯಾದ ಶತಬಲಿ ಎಂಬ ವಿಖ್ಯಾತ ವಾನರನು ನಿಂತಿರುವನು. ಇವನು ಮಹಾಬಲ ವಂತನೂ, ವಿಜಯಕ್ಕಾಗಿ ಸದಾ ಸೂರ್ಯನನ್ನು ಉಪಾಸಿಸುತ್ತಾನೆ.॥43-44॥
ಮೂಲಮ್ - 45½
ಏಷೈವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ ।
ವಿಕ್ರಾಂತೋ ಬಲವಾನ್ಶೂರಃ ಪೌರುಷೇ ಸ್ವೇ ವ್ಯವಸ್ಥಿತಃ ॥
ರಾಮಪ್ರಿಯಾರ್ಥಂ ಪ್ರಾಣಾನಾಂ ದಯಾಂ ನ ಕುರುತೇ ಹರಿಃ ।
ಅನುವಾದ
ಬಲಿಷ್ಠನಾದ ಪರಾಕ್ರಮಿ - ಶೂರವೀರ ಈ ಶತಬಲಿಯೂ ತನ್ನ ಪೌರುಷದ ಭರವಸೆಯಿಂದ ಯುದ್ಧಕ್ಕಾಗಿ ನಿಂತಿರುವನು. ತನ್ನ ಸೈನ್ಯದೊಂದಿಗೆ ಲಂಕೆಯನ್ನು ಧೂಳೀಪಟನಾಗಿಸಲು ಬಯಸುತ್ತಿ ರುವನು. ಈ ವಾನರವೀರನು ಶ್ರೀರಾಮಚಂದ್ರನಿಗೆ ಪ್ರಿಯವನ್ನುಂಟುಮಾಡಲು ತನ್ನ ಪ್ರಾಣಗಳನ್ನು ಲೆಕ್ಕಿಸುವುದಿಲ್ಲ.॥45॥
ಮೂಲಮ್ - 46½
ಗಜೋ ಗವಾಕ್ಷೋ ಗವಯೋ ನಲೋ ನೀಲಶ್ಚ ವಾನರಃ ॥
ಏಕೈಕ ಮೇವ ಯೋಧಾನಾಂ ಕೋಟಿಭಿರ್ದಶಭಿರ್ವೃತಃ ।
ಅನುವಾದ
ಗಜ, ಗವಾಕ್ಷ, ಗವಯ, ನಳ, ನೀಲ ಇವರಲ್ಲಿ ಒಬ್ಬೊಬ್ಬ ಸೇನಾಪತಿಯು ಹತ್ತು ಹತ್ತು ಕೋಟಿ ಯೋಧರಿಂದ ಸುತ್ತು ವರಿದರುವರು.॥46॥
ಮೂಲಮ್ - 47
ತಥಾನ್ಯೇ ವಾನರಶ್ರೇಷ್ಠಾಃ ವಿಂಧ್ಯಪರ್ವತವಾಸಿನಃ ।
ನ ಶಕ್ಯಂತೇ ಬಹುತ್ವಾತ್ತು ಸಂಖ್ಯಾತುಂ ಲಘುವಿಕ್ರಮಾಃ ॥
ಅನುವಾದ
ಇದೇ ರೀತಿ ವಿಂಧ್ಯಪರ್ವತದಲ್ಲಿ ವಾಸಿಸುವ ಇನ್ನೂ ಅನೇಕ ಶೀಘ್ರಪರಾಕ್ರಮಿ, ಶ್ರೇಷ್ಠ ಅಸಂಖ್ಯ ವಾನರರೂ ಇದ್ದಾರೆ.॥47॥
ಮೂಲಮ್ - 48
ಸರ್ವೇ ಮಹಾರಾಜ ಮಹಾಪ್ರಭಾವಾಃ
ಸರ್ವೇ ಮಹಾಶೈಲ ನಿಕಾಶಕಾಯಾಃ ।
ಸರ್ವೇ ಸಮರ್ಥಾಃ ಪೃಥಿವೀಂ ಕ್ಷಣೇನ
ಕರ್ತುಂ ಪ್ರವಿಧ್ವಸ್ತವಿಕೀರ್ಣಶೈಲಾಮ್ ॥
ಅನುವಾದ
ಮಹಾರಾಜಾ! ಇವೆಲ್ಲ ವಾನರು ಬಹಳ ಪ್ರಭಾವಶಾಲಿಗಳಾಗಿದ್ದು, ದೊಡ್ಡ ದೊಡ್ಡ ಪರ್ವತಗಳಂತೆ ವಿಶಾಲಕಾಯರಾಗಿದ್ದಾರೆ. ಎಲ್ಲರೂ ಕ್ಷಣಾರ್ಧದಲ್ಲಿ ಭೂಮಂಡಲದ ಸಮಸ್ತ ಪರ್ವತಗಳನ್ನು ನುಚ್ಚು ನೂರಾಗಿಸಿ ಎಲ್ಲೆಡೆ ಚೆಲ್ಲಿ ಬಿಡುವ ಶಕ್ತಿವಂತರಾಗಿದ್ದಾರೆ.॥48॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗಃ ಪೂರ್ಣವಾಯಿತು. ॥27॥