०२६ रावणस्य कपिनायकविवरणश्रवणेच्छा

वाचनम्
ಭಾಗಸೂಚನಾ

ಸಾರಣನು ರಾವಣನಿಗೆ ವಾನರದಂಡನಾಯಕರ ಪರಿಚಯ ಮಾಡಿಕೊಟ್ಟುದು

ಮೂಲಮ್ - 1

ತದ್ವಚಃ ಸತ್ಯಮಕ್ಲೀಬಂ ಸಾರಣೇನಾಭಿಭಾಷಿತಮ್ ।

ಭಾಗಸೂಚನಾ

ನಿಶಮ್ಯ ರಾವಣೋ ರಾಜಾ ಪ್ರತ್ಯಭಾಷತ ಸಾರಣಮ್ ॥

ಅನುವಾದ

ಸತ್ಯವೂ ಧೈರ್ಯದಿಂದಲೂ ಕೂಡಿದ ಸಾರಣನ ಮಾತುಗಳನ್ನು ಕೇಳಿ ರಾವಣನು ಹೇಳಿದನು.॥1॥

ಮೂಲಮ್ - 2

ಯದಿ ಮಾಮಭಿಯುಂಜೀರನ್ ದೇವಗಂಧರ್ವದಾನವಾಃ ।
ನೈವ ಸೀತಾ ಮಹಂ ದದ್ಯಾಂ ಸರ್ವಲೋಕಭಯಾದಪಿ ॥

ಅನುವಾದ

ದೇವತೆಗಳು, ಗಂಧರ್ವರು, ದಾನವರು ನನ್ನೊಂದಿಗೆ ಯುದ್ಧಕ್ಕೆ ಬಂದರೂ, ಸಮಸ್ತ ಲೋಕಗಳು ನನ್ನನ್ನು ಭಯಪಡಿಸಿದರೂ ನಾನು ಸೀತೆಯನ್ನು ರಾಮನಿಗೆ ಒಪ್ಪಿಸಲಾರೆನು.॥2॥

ಮೂಲಮ್ - 3½

ತ್ವಂ ತು ಸೌಮ್ಯ ಪರಿತ್ರಸ್ತೋ ಹರಿಭಿಃ ಪೀಡಿತೋ ಭೃಶಮ್ ।
ಪ್ರತಿಪ್ರದಾನಮದ್ಯೈವಸೀತಾಯಾಃ ಸಾಧು ಮನ್ಯಸೇ ॥
ಕೋ ಹಿ ನಾಮ ಸಪತ್ನೋ ಮಾಂ ಸಮರೇಜೇತುಮರ್ಹತಿ ।

ಅನುವಾದ

ಸೌಮ್ಯನೇ! ನಿನ್ನನ್ನು ಕಪಿಗಳು ಬಹಳ ಪೀಡಿಸಿದಂತೆ ಅನಿಸುತ್ತದೆ. ಇದರಿಂದ ಭಯಗೊಂಡು ನೀನು ಇಂದೇ ಸೀತೆಯನ್ನು ರಾಮನಿಗೆ ಒಪ್ಪಿಸುವುದು ಸರಿ ಎಂದು ತಿಳಿದಿರುವೆ. ಸಮರಾಂಗಣದಲ್ಲಿ ನನ್ನನ್ನು ಗೆಲ್ಲಬಲ್ಲ ಶತ್ರುವು ಯಾರು ತಾನೇ ಇರಬಲ್ಲನು.॥3॥

ಮೂಲಮ್ - 4

ಇತ್ಯುಕ್ತ್ವಾ ಪರುಷಂ ವಾಕ್ಯಂ ರಾವಣೋ ರಾಕ್ಷಸಾಧಿಪಃ ॥

ಮೂಲಮ್ - 5

ಆರುರೋಹ ತತಃ ಶ್ರೀಮಾನ್ ಪ್ರಾಸಾದಂ ಹಿಮಪಾಂಡುರಮ್ ।
ಬಹುತಾಲಸಮುತ್ಸೇಧಂ ರಾವಣೋಽಥ ದಿದೃಕ್ಷಯಾ ॥

ಅನುವಾದ

ಹೀಗೆ ಕಠೋರ ಮಾತನಾಡಿ ಶ್ರೀಮಾನ್ ರಾಕ್ಷಸರಾಜ ರಾವಣನು ವಾನರ ಸೈನ್ಯದ ನಿರೀಕ್ಷಣೆಗಾಗಿ ಅನೇಕ ತಾಲ ವೃಕ್ಷಗಳಷ್ಟು ಎತ್ತರವಾದ ಹಿಮದಂತೇ ಬೆಳ್ಳಗಿನ ಸೌಧದ ಮೇಲೆ ಹತ್ತಿದನು.॥4-.॥

ಮೂಲಮ್ - 6½

ತಾಭ್ಯಾಂ ಚರಾಭ್ಯಾಂ ಸಹಿತೋ ರಾವಣಃ ಕ್ರೋಧಮೂರ್ಛಿತಃ ।
ಪಶ್ಯಮಾನಃ ಸಮುದ್ರಂ ತಂ ಪರ್ವತಾಂಶ್ಚ ವನಾನಿ ಚ ॥
ದದರ್ಶ ಪೃಥಿವೀದೇಶಂ ಸುಸಂಪೂರ್ಣಂ ಪ್ಲವಂಗಮೈಃ ।

ಅನುವಾದ

ಆಗ ರಾವಣನು ಸಿಟ್ಟಿನಿಂದ ಉಲಿದೆದಿದ್ದನು. ಅವನು ಆಗ ಗುಪ್ತಚರರೊಂದಿಗೆ ಸಮುದ್ರ, ಪರ್ವತ ಮತ್ತು ವಾನರರನ್ನು ನೋಡಿದಾಗ ಅಲ್ಲಿದ್ದ ಭೂಭಾಗವು ವಾನರರಿಂದ ತುಂಬಿಹೋದುದು ಕಂಡುಬಂತು.॥6½॥

ಮೂಲಮ್ - 7½

ತದಪಾರಮಸಹ್ಯಂ ಚ ವಾನರಾಣಾಂ ಮಹಾಬಲಮ್ ॥
ಆಲೋಕ್ಯ ರಾವಣೋ ರಾಜಾ ಪರಿಪಪ್ರಚ್ಛ ಸಾರಣಮ್ ।

ಅನುವಾದ

ವಾನರರ ಆ ಸೈನ್ಯವು ಅಪಾರ ಹಾಗೂ ಅಸಹ್ಯವಾಗಿತ್ತು. ಅದನ್ನು ನೋಡಿ ರಾವಣನು ಸಾರಣನಲ್ಲಿ ಕೇಳಿದನು.॥7½॥

ಮೂಲಮ್ - 8

ಏಷಾಂಕೇ ವಾನರಾ ಮುಖ್ಯಾಃ ಕೇ ಶೂರಾಃ ಕೇ ಮಹಾಬಲಾಃ ॥

ಅನುವಾದ

ಸಾರಣನೇ! ಈ ವಾನರರಲ್ಲಿ ಯಾರು-ಯಾರು ಪ್ರಮುಖರಾಗಿದ್ದಾರೆ? ಯಾರು ಶೂರ-ವೀರ ಮತ್ತು ಮಹಾಬಲಿಷ್ಠ ರಾಗಿದ್ದಾರೆ.॥8॥

ಮೂಲಮ್ - 9½

ಕೇ ಪೂರ್ವಮಭಿವರ್ತಂತೇ ಮಹೋತ್ಸಾಹಾಃ ಸಮಂತತಃ ।
ಕೇಷಾಂ ಶೃಣೋತಿ ಸುಗ್ರೀವಃ ಕೇ ವಾ ಯೂಥಪಯೂಥಪಾಃ ॥
ಸಾರಣಾಚಕ್ಷ್ವ ಮೇ ಸರ್ವಂ ಕಿಂ ಪ್ರಭಾವಾಃ ಪ್ಲವಂಗಮಾಃ ।

ಅನುವಾದ

ಯಾವ ಯಾವ ವಾನರರು ಮಹಾ ಉತ್ಸಾಹದಿಂದ ಕೂಡಿದ್ದು, ಯುದ್ಧದಲ್ಲಿ ಮುಂಭಾಗದಲ್ಲಿ ಇರುತ್ತಾರೆ? ಸುಗ್ರೀವನು ಯಾರ ಮಾತನ್ನು ಕೇಳುವನು? ಇಲ್ಲಿರುವ ಅನೇಕ ಸೇನಾಪತಿಗಳಿಗೆ ದಂಡನಾಯಕನು ಯಾರು? ಸಾರಣನೇ! ಈ ವಾನರರ ಪ್ರಭಾವ-ಪರಾಕ್ರಮಗಳಾದರೂ ಎಷ್ಟಿದೆ? ಇದೆಲ್ಲವನ್ನೂ ನನಗೆ ತಿಳಿಸು.॥9½॥

ಮೂಲಮ್ - 10½

ಸಾರಣೋ ರಾಕ್ಷಸೇಂದ್ರಸ್ಯ ವಚನಂ ಪರಿಪೃಚ್ಛತಃ ॥
ಆಬಭಾಷೇಽಥ ಮುಖ್ಯಜ್ಞೋ ಮುಖ್ಯಾಂಸ್ತತ್ರ ವನೌಕಸಃ ।

ಅನುವಾದ

ರಾವಣನು ಹೀಗೆ ಕೇಳಿದಾಗ ಮುಖ್ಯ ಮುಖ್ಯ ವಾನರರನ್ನು ಬಲ್ಲ ಸಾರಣನು ಅವರ ಪರಿಚಯವನ್ನು ಮಾಡಿಕೊಡಲು ತೊಡಗಿದನು.॥10½॥

ಮೂಲಮ್ - 11

ಏಷ ಯೋಽಭಿಮುಖೋ ಲಂಕಾಂ ನರ್ದಂಸ್ತಿಷ್ಠತಿ ವಾನರಃ ॥

ಮೂಲಮ್ - 12

ಯೂಥಪಾನಾಂ ಸಹಸ್ರಾಣಾಂ ಶತೇನ ಪರಿವಾರಿತಃ ।
ಯಸ್ಯ ಘೋಷೇಣ ಮಹತಾ ಸಪ್ರಾಕಾರಾ ಸತೋರಣಾ ॥

ಮೂಲಮ್ - 13½

ಲಂಕಾ ಪ್ರತಿಹತಾ ಸರ್ವಾ ಸಶೈಲವನಕಾನನಾ ।
ಸರ್ವಶಾಖಾಮೃಗೇಂದ್ರಸ್ಯ ಸುಗ್ರೀವಸ್ಯ ಮಹಾತ್ಮನಃ ॥
ಬಲಾಗ್ರೇ ತಿಷ್ಠತೇ ವೀರೋ ನೀಲೋ ನಾಮೈಷ ಯೂಥಪಃ ।

ಅನುವಾದ

ಮಹಾರಾಜ! ಲಂಕೆಯ ಕಡೆಗೆ ಮುಖ ಮಾಡಿ ನಿಂತು ಗರ್ಜಿಸುತ್ತಿರುವನು ಒಂದು ಲಕ್ಷ ಸೇನಾಪತಿಗಳಿಂದ ಸುತ್ತುವರೆದಿರುವನು. ಇವನ ಗರ್ಜನೆಯ ಗಂಭೀರ ಘೋಷದಿಂದ ಪ್ರಾಕಾರ, ಹೆಬ್ಬಾಗಿಲು, ಪರ್ವತ-ವನಗಳ ಸಹಿತ ಇಡೀ ಲಂಕೆಯು ಪ್ರತಿಧ್ವನಿಸುತ್ತಿದೆ. ಇವನ ಹೆಸರು ನೀಲ ಎಂದಿದ್ದು, ವೀರ ಸೇನಾಪತಿಯಾಗಿದ್ದಾನೆ. ಸಮಸ್ತ ವಾನರರ ರಾಜಾ ಸುಗ್ರೀವನ ಸೈನ್ಯದ ಮುಂಭಾಗದಲ್ಲಿ ಇವನೇ ನಿಂತಿರುತ್ತಾನೆ.॥11-13½॥

ಮೂಲಮ್ - 14

ಬಾಹೂ ಪ್ರಗೃಹ್ಯ ಯಃ ಪದ್ಭ್ಯಾಂ ಮಹೀಂ ಗಚ್ಛತಿ ವೀರ್ಯವಾನ್ ॥

ಮೂಲಮ್ - 15

ಲಂಕಾಮಭಿಮುಖಃ ಕೋಪಾದಭೀಕ್ಷ್ಣಂ ಚ ವಿಜೃಂಭತೇ ।
ಗಿರಿಶೃಂಗ ಪ್ರತೀಕಾಶಃ ಪದ್ಮಕಿಂಜಲ್ಕಸನ್ನಿಭಃ॥

ಮೂಲಮ್ - 16

ಸ್ಫೋಟಯತ್ಯತಿಸಂರಬ್ಧೋ ಲಾಂಗೂಲಂ ಚ ಪುನಃ ಪುನಃ ।
ಯಸ್ಯ ಲಾಂಗೂಲ ಶಬ್ದೇನ ಸ್ವನಂತಿ ಪ್ರದಿಶೋ ದಶ ॥

ಮೂಲಮ್ - 17

ಏಷ ವಾನರರಾಜೇನ ಸುಗ್ರೀವೇಣಾಭಿಷೇಚಿತಃ ।
ಯುವರಾಜೋಂಽಗದೋ ನಾಮ ತ್ವಾಮಾಹ್ವಯತಿ ಸಂಯುಗೇ ॥

ಅನುವಾದ

ಅಲ್ಲಿ ನೋಡು, ಅಲ್ಲೊಬ್ಬ ವಾನರ ಶ್ರೇಷ್ಠನು ಕೈಗಳಿಂದ ಬಾಹುಗಳನ್ನು ಹಿಡಿದುಕೊಂಡು ದಾಪುಗಾಲು ಹಾಕುತ್ತಾ ಅತ್ತಂದಿತ್ತ ಸಂಚರಿಸುತ್ತಿದ್ದಾನೆ. ಲಂಕೆಯ ಕಡೆಗೆ ಮುಖಮಾಡಿ ಕೋಪದಿಂದ ಪದೇ ಪದೇ ಉಬ್ಬುತ್ತಿದ್ದಾನೆ. ಪರ್ವತ ಶಿಖರದಂತೆ ಎತ್ತರವಾಗಿದ್ದು, ಅವನ ಮೈಬಣ್ಣ ತಾವರೆಯ ಎಸಳಿನಂತಿದೆ. ರೋಷದಿಂದ ತನ್ನ ಬಾಲವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸುತ್ತಿದ್ದಾನೆ. ಆ ಶಬ್ದವು ದಶದಿಕ್ಕುಗಳಲ್ಲಿಯೂ ಪ್ರತಿಧ್ವನಿಸುತ್ತಿದೆ. ಇವನೇ ಯುವರಾಜ ಅಂಗದನಾಗಿದ್ದಾನೆ. ವಾನರ ರಾಜ ಸುಗ್ರೀವನು ಇವನನ್ನು ಯುವರಾಜನನ್ನಾಗಿಸಿದ್ದಾನೆ. ಇವನು ನಿಮ್ಮನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದಾನೆ.॥14-17॥

ಮೂಲಮ್ - 18

ವಾಲಿನಃ ಸದೃಶಃ ಪುತ್ರಃ ಸುಗ್ರೀವಸ್ಯ ಸದಾ ಪ್ರಿಯಃ ।
ರಾಘವಾರ್ಥೇ ಪರಾಕ್ರಾಂತಃ ಶಕ್ರಾರ್ಥೇ ವರುಣೋ ಯಥಾ ॥

ಅನುವಾದ

ವಾಲಿಯ ಈ ಪುತ್ರನು ತನ್ನ ತಂದೆಯಂತೆಯೇ ಮಹಾಬಲಶಾಲಿಯಾಗಿದ್ದಾನೆ. ಸುಗ್ರೀವನಿಗೆ ಇವನು ಸದಾ ಪ್ರಿಯನಾಗಿದ್ದಾನೆ. ವರುಣನು ಇಂದ್ರನಿಗಾಗಿ ಪರಾಕ್ರಮವನ್ನು ಪ್ರಕಟಿಸುವಂತೆಯೇ ಇವನು ಶ್ರೀರಾಮನಿಗಾಗಿ ತನ್ನ ಪರಾಕ್ರಮವನ್ನು ಪ್ರಕಟಿಸಲು ಸಿದ್ಧನಾಗಿ ನಿಂತಿದ್ದಾನೆ.॥18॥

ಮೂಲಮ್ - 19

ಏತಸ್ಯ ಸಾ ಮತಿಃ ಸರ್ವಾ ಯದ್ ದೃಷ್ಟಾ ಜನಕಾತ್ಮಜಾ ।
ಹನೂಮತಾ ವೇಗವತಾ ರಾಘವಸ್ಯ ಹಿತೈಷಿಣಾ ॥

ಅನುವಾದ

ರಾಘವನ ಹಿತೈಷಿಯಾದ ವೇಗಶಾಲಿ ಹನುಮಂತನು ಇಲ್ಲಿಗೆ ಬಂದು ಸೀತೆಯನ್ನು ನೋಡಿಕೊಂಡು ಹೋಗಲು ಈ ಅಂಗದನ ಕುಶಲಬುದ್ಧಿಯೇ ಕಾರಣವಾಗಿತ್ತು.॥19॥

ಮೂಲಮ್ - 20

ಬಹೂನಿ ವಾನರೇಂದ್ರಾಣಾಮೇಷ ಯೂಥಾನಿ ವೀರ್ಯವಾನ್ ।
ಪರಿಗೃಹ್ಯಾಭಿಯಾತಿ ತ್ವಾಂ ಸ್ವೇನಾನೀಕೇನ ಮರ್ದಿತುಮ್ ॥

ಅನುವಾದ

ಪರಾಕ್ರಮಿಯಾದ ಅಂಗದನು ಅನೇಕ ವಾನರ ಶ್ರೇಷ್ಠರ ಗುಂಪುಗಳನ್ನು ತನ್ನೊಡನೆ ಕರೆದುಕೊಂಡು ನಿನ್ನ ಸೈನ್ಯದೊಡನೆ ನಿನ್ನನ್ನು ಮರ್ದಿಸಲು ಬರುತ್ತಿದ್ದಾನೆ.॥20॥

ಮೂಲಮ್ - 21

ಅನುವಾಲಿಸುತಸ್ಯಾಪಿ ಬಲೇನ ಮಹತಾ ವೃತಃ ।
ವೀರಸ್ತಿಷ್ಠತಿ ಸಂಗ್ರಾಮೇ ಸೇತುಹೇತುರಯಂ ನಲಃ ॥

ಅನುವಾದ

ಅಂಗದನ ಹಿಂಭಾಗದಲ್ಲಿ ಅಪಾರ ವಾನರ ಸೈನ್ಯದೊಂದಿಗೆ ರಣರಂಗದಲ್ಲಿ ನಿಂತಿರುವವನೇ ನಳನು. ಇವನೇ ಸೇತುವೆಯ ನಿರ್ಮಾಣಕ್ಕೆ ಮುಖ್ಯಕಾರಣನು.॥21॥

ಮೂಲಮ್ - 22

ಯೇ ತು ವಿಷ್ಟಭ್ಯ ಗಾತ್ರಾಣಿ ಕ್ಷ್ವೇಡಯಂತಿ ನದಂತಿ ಚ ।
ಉತ್ಥಾಯ ಚ ವಿಜೃಂಭಂತೇ ಕ್ರೋಧೇನ ಹರಿಪುಂಗವಾಃ ॥

ಮೂಲಮ್ - 23½

ಏತೇ ದುಷ್ಟ್ರಸಹಾ ಘೋರಾಶ್ಚಂಡಾಶ್ಚಂಡಪರಾಕ್ರಮಾಃ ।
ಅಷ್ಟೌ ಶತಸಹಸ್ರಾಣಿ ದಶಕೋಟಿ ಶತಾನಿ ಚ ।
ಯ ಏನಮನುಗಚ್ಛಂತಿ ವೀರಾಶ್ಚಂದನವಾಸಿನಃ ॥

ಅನುವಾದ

ಶರೀರಗಳನ್ನು ಮೇಲಕ್ಕೆ ನಿಮಿರಿಸಿಕೊಂಡು ಗಟ್ಟಿಯಾಗಿ ಗರ್ಜಿಸುತ್ತಿರುವ ಆ ವಾನರರನ್ನು ನೋಡು. ಕೆಲವು ವಾನರರು ಕುಳಿತಲ್ಲಿಂದ ಮೇಲಕ್ಕೆದ್ದು ಕೋಪದಿಂದ ಉಬ್ಬುತ್ತಿದ್ದಾರೆ. ಅವರ ವೇಗವನ್ನು ಸಹಿಸುವುದು ಅತಿ ದುಸ್ತರವಾಗಿದೆ. ಅವರು ಮಹಾಭಯಂಕರರೂ, ಮಹಾಕೋಪಿಷ್ಠರೂ ಆಗಿದ್ದು, ಪ್ರಚಂಡವಾದ ಪರಾಕ್ರಮ ಉಳ್ಳವರು. ಅವರ ಸಂಖ್ಯೆ ನೂರು ಕೋಟಿ ಎಂಟು ಲಕ್ಷದಷ್ಟಿದೆ. ಚಂದನವನದಲ್ಲಿ ವಾಸಿಸುವ ಅವರೆಲ್ಲರೂ ವಾನರ ಶ್ರೇಷ್ಠನಾದ ನಳನ ಅನುಯಾಯಿಗಳು. ನಳನೂ ಕೂಡ ತನ್ನ ಅಪಾರ ಸೈನ್ಯದೊಂದಿಗೆ ಲಂಕಾಪಟ್ಟಣವನ್ನು ಮರ್ದಿಸಲು ಇಚ್ಛಿಸುತ್ತಿದ್ದಾನೆ.॥22-23॥

ಮೂಲಮ್ - 24

ಏಷೈವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ ।
ಶ್ವೇತೋ ರಜತಸಂಕಾಶಶ್ಚಪಲೋ ಭೀಮವಿಕ್ರಮಃ ॥

ಮೂಲಮ್ - 25½

ಬುದ್ಧಿಮಾನ್ವಾನರೋ ಶೂರಸ್ತ್ರೀಷು ಲೋಕೇಷು ವಿಶ್ರುತಃ ।
ತೂರ್ಣಂ ಸುಗ್ರೀವಮಾಗಮ್ಯ ಪುನರ್ಗಚ್ಛತಿ ವಾನರಃ ॥
ವಿಭಜನ್ವಾನರೀಂ ಸೇನಾಮನೀಕಾನಿ ಪ್ರಹರ್ಷಯನ್ ॥

ಅನುವಾದ

ನೋಡು, ಬೆಳ್ಳಿಯಂತೆ ಕಂಡುಬರುವ ಬಿಳಿಬಣ್ಣದ ಈ ಚಂಚಲ ವಾನರನ ಹೆಸರು ಶ್ವೇತ ಎಂದಾಗಿದೆ. ಇವನು ಭಯಂಕರ ಪರಾಕ್ರಮಿ, ಬುದ್ಧಿವಂತ, ಶೂರ-ವೀರನಾಗಿದ್ದು, ಮೂರು ಲೋಕಗಳಲ್ಲಿಯೂ ವಿಖ್ಯಾತನಾಗಿದ್ದಾನೆ. ಶ್ವೇತನು ಸುಗ್ರೀವ ಬಳಿಗೆ ಆಗಾಗ ಬಂದು ಹೋಗುತ್ತಾ ವಾನರ ಸೈನ್ಯವನ್ನು ಸಮಯಕ್ಕೆ ತಕ್ಕಂತೆ ವಿಭಾಗಿಸುವುದು ಮತ್ತು ಅವರಲ್ಲಿ ಹರ್ಷೋತ್ಸಾಹಗಳನ್ನು ತುಂಬುವುದೇ ಅವನ ಕಾರ್ಯವಾಗಿದೆ.॥24-25॥

ಮೂಲಮ್ - 26

ಯಃ ಪುರಾ ಗೋಮತೀ ತೀರೇ ರಮ್ಯಂ ಪರ್ಯೇತಿ ಪರ್ವತಮ್ ॥

ಮೂಲಮ್ - 27

ನಾಮ್ನಾ ಸಂರೋಚನೋ ನಾಮ ನಾನಾ ನಗಯುತೋ ಗಿರಿಃ ।
ತತ್ರ ರಾಜ್ಯಂ ಪ್ರಶಾಸ್ತ್ಯೇಷ ಕುಮದೋ ನಾಮ ಯೂಥಪಃ ॥

ಅನುವಾದ

ಗೋಮತೀ ನದಿಯ ತೀರದಲ್ಲಿ ನಾನಾ ಪ್ರಕಾರದ ವೃಕ್ಷಗಳಿಂದ ಕೂಡಿದ ಸಂರೋಚಕ ಎಂಬ ಪರ್ವತವಿದೆ. ಆ ರಮಣೀಯ ಪರ್ವತದ ಸುತ್ತಲೂ ಸಂಚರಿಸುತ್ತಾ ಅಲ್ಲೇ ತನ್ನ ವಾನರರಾಜ್ಯವನ್ನು ಆಳುತ್ತಿರುವವನೇ ಈ ಕುಮುದ ನೆಂಬ ಸೇನಾಪತಿಯು.॥26-27॥

ಮೂಲಮ್ - 28

ಯೋಽಸೌ ಶತಸಹಸ್ರಾಣಿ ಸಹರ್ಷಂ ಪರಿಕರ್ಷತಿ ।
ಯಸ್ಯ ವಾಲಾ ಬಹುವ್ಯಾಮಾ ದೀರ್ಘಲಾಂಗೂಲಮಾಶ್ರಿತಾಃ ॥

ಮೂಲಮ್ - 29

ತಾಮ್ರಾಃ ಪೀತಾಃ ಸಿತಾಃ ಶ್ವೇತಾಃ ಪ್ರಕೀರ್ಣಾ ಘೋರದರ್ಶನಾಃ ।
ಅದೀನೋ ವಾನರಶ್ಚಂಡಃ ಸಂಗ್ರಾಮಮಭಿಕಾಂಕ್ಷತಿ ।
ಏಷೋಽಪ್ಯಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ ॥

ಅನುವಾದ

ಲಕ್ಷಾವಧಿ ವಾನರ ಸೈನಿಕರನ್ನು ಹರ್ಷದಿಂದ ತನ್ನೊಂದಿಗೆ ತಂದಿರುವ, ಇವನ ಉದ್ದವಾದ ಬಾಲದಲ್ಲಿರುವ ರೋಮಗಳು ಬಹಳ ನೀಳವಾಗಿವೆ. ಕೆಂಪು-ಹಳದಿ-ಬಿಳುಪು ಮುಂತಾದ ಬಣ್ಣಗಳಿಂದ ಕೂಡಿವೆ. ನೋಡಲು ಮಹಾಭಯಂಕರನಾಗಿದ್ದು, ದೈನ್ಯವೆಂಬುದೇ ಇಲ್ಲದಿರುವ, ಯುದ್ಧೋಚ್ಛುಕನಾದ ಆ ವಾನರನ ಹೆಸರು ಚಂಡ ಎಂದಾಗಿದೆ. ಈ ಚಂಡನೂ ತನ್ನ ಸೈನ್ಯದ ಮೂಲಕ ಲಂಕೆಯನ್ನು ಮರ್ದಿಸಲು ಇಚ್ಛಿಸುತ್ತಿರುವನು.॥28-29॥

ಮೂಲಮ್ - 30

ಯಸ್ತ್ವೇಷ ಸಿಂಹಸಂಕಾಶಃ ಕಪಿಲೋ ದೀರ್ಘಕೇಸರಃ ।
ನಿಭೃತಃ ಪ್ರೇಕ್ಷತೇ ಲಂಕಾಂ ದಧಕ್ಷನ್ನಿವ ಚಕ್ಷುಷಾ ॥

ಮೂಲಮ್ - 31

ವಿಂಧ್ಯಂ ಕೃಷ್ಣಗಿರಿಂ ಸಹ್ಯಂ ಪರ್ವತಂ ಚ ಸುದರ್ಶನಮ್ ।
ರಾಜನ್ಸತತಮಧ್ಯಾಸ್ತೇಸ ರಂಭೋ ನಾಮ ಯೂಥಪಃ ॥

ಮೂಲಮ್ - 32

ಶತಂ ಶತಸಹಸ್ರಾಣಾಂ ತ್ರಿಂಶಚ್ಚ ಹರಿಪುಂಗವಾಃ ॥
ಯಂ ಯಾಂತಂ ವಾನರಾ ಘೋರಾಶ್ಚಂಡಾಶ್ಚಂಡಪರಾಕ್ರಮಾಃ ।
ಪರಿವಾರ್ಯಾನುಗಚ್ಛಂತಿ ಲಂಕಾಂ ಮರ್ದಿತುಮೋಜಸಾ ॥

ಅನುವಾದ

ರಾವಣೇಶ್ವರ! ಅದೋ ಅಲ್ಲಿ ನೋಡು, ಉದ್ದವಾದ ಕೂದಲುಗಳುಳ್ಳ ಸಿಂಹದಂತೆ ಕಾಣುತ್ತಿರುವ, ಲಂಕೆಯನ್ನೇ ಸುಟ್ಟು ಬಿಡುವನೋ ಎಂದು ಏಕಾಗ್ರಚಿತ್ತದಿಂದ ನೋಡುತ್ತಿರುವ, ಕಪಿಲವರ್ಣದ ವಾನರಯೂಥಪತಿಯೇ ರಂಭ ಎಂಬ ವಾನರನು. ಅವನು ನಿರಂತರ ವಿಂಧ್ಯ, ಕೃಷ್ಣಗಿರಿ, ಸಹ್ಯ, ಸುದರ್ಶನ ಮುಂತಾದ ಪರ್ವತಗಳಲ್ಲಿ ಸುತ್ತಾಡುತ್ತಿರುತ್ತಾನೆ. ಅವನು ಯುದ್ಧಕ್ಕೆ ಹೊರಟಾಗ ಅವನ ಹಿಂದೆ ಒಂದು ಕೋಟಿ ಮೂವತ್ತು ಶ್ರೇಷ್ಠ ಭಯಂಕರ, ಅತ್ಯಂತ ಕ್ರೋಧೀ, ಪ್ರಚಂಡಪರಾಕ್ರಮಿ ವಾನರ ವೀರರು ಅನುಸರಿಸುತ್ತಾರೆ. ಅವನು ತನ್ನೆಲ್ಲ ಬಲದೊಂದಿಗೆ ಲಂಕೆಯನ್ನು ಮರ್ದನ ಮಾಡಲು ಬರುತ್ತಿದ್ದಾನೆ.॥30-32॥

ಮೂಲಮ್ - 33

ಯಸ್ತು ಕರ್ಣೌ ವಿವೃಣುತೇ ಜೃಂಭತೇ ಚ ಪುನಃ ಪುನಃ ।
ನ ತು ಸಂವಿಜತೇ ಮೃತ್ಯೋರ್ನ ಚ ಸೇನಾಂ ಪ್ರಧಾವತಿ ॥

ಮೂಲಮ್ - 34

ಪ್ರಕಂಪತೇ ಚ ರೋಷೇಣ ತಿರ್ಯಕ್ ಚ ಪುನರೀಕ್ಷತೇ ।
ಪಶ್ಯ ಲಾಂಗೂಲ ವಿಕ್ಷೇಪಂ ಕ್ಷ್ವೇಡತ್ಯೇಷ ಮಹಾಬಲಃ ॥

ಅನುವಾದ

ಮಹಾರಾಜಾ! ನೋಡಿರಿ, ಕಿವಿಗಳನ್ನು ಪದೇ ಪದೇ ಹಿಗ್ಗಿಸಿಕೊಳ್ಳುತ್ತಾ, ಶರೀರವನ್ನು ಉಬ್ಬಿಸಿಕೊಂಡು, ಮೃತ್ಯುವಿಗೂ ಹೆದರದೇ ಇರುವವನೇ ಶರಭನು. ಅವನಿಗೆ ಸೈನ್ಯದ ಆವಶ್ಯಕತೆಯೂ ಇಲ್ಲದೆ, ರೋಷದಿಂದ ಕಂಪಿಸುತ್ತಾ ಓರ್ವನೇ ಯುದ್ಧ ಮಾಡಲು ಬಯಸುತ್ತಿದ್ದಾನೆ. ದುರುಗಟ್ಟಿ ನೋಡುತ್ತಾ ಈ ಮಹಾಬಲಿಯು ಬಾಲವನ್ನು ನೆಲಕ್ಕೆ ಅಪ್ಪಳಿಸುತ್ತಾ ಸಿಂಹನಾದ ಮಾಡುತ್ತಿದ್ದಾನೆ.॥33-34॥

ಮೂಲಮ್ - 35

ಮಹಾಜವೋ ವೀತಭಯೋ ರಮ್ಯಂ ಸಾಲ್ವೇಯ ಪರ್ವತಮ್ ।
ರಾಜನ್ ಸತತಮಧ್ಯಾಸ್ತೇ ಶರಭೋ ನಾಮ ಯೂಥಪಃ ॥

ಅನುವಾದ

ಮಹಾರಾಜಾ! ಈ ಯೂಥಪತಿ ಶರಭನು ಸದಾ ರಮಣೀಯವಾಗಿರುವ ಸಾಲ್ವೇಯ ಪರ್ವತದಲ್ಲಿ ವಾಸಿಸುತ್ತಾ, ಮಹಾವೇಗಶಾಲಿಯಾದ ಇವನಿಗೆ ಭಯವೆಂಬುದೇ ಇಲ್ಲ.॥35॥

ಮೂಲಮ್ - 36

ಏತಸ್ಯ ಬಲಿನಃ ಸರ್ವೇ ವಿಹಾರಾ ನಾಮ ಯೂಥಪಾಃ ।
ರಾಜನ್ ಶತಸಹಸ್ರಾಣಿ ಚತ್ವಾರಿಂ ಶತ್ತಥೈವ ಚ ॥

ಅನುವಾದ

ಇವನ ಬಳಿ ನಿಂತಿರುವ ಯೂಥಪತಿಯು ಸುತ್ತಲು ‘ವಿಹಾರ’ ಎಂಬ ಸಂಜ್ಞೆಯುಳ್ಳ ಮಹಾ ಬಲಿಷ್ಠರಾದ ಒಂದು ಲಕ್ಷ ನಲವತ್ತು ಸಾವಿರ ವಾನರರನ್ನು ನೋಡು.॥36॥

ಮೂಲಮ್ - 37

ಯಸ್ತುಮೇಘ ಇವಾಕಾಶಂ ಮಹಾನಾವೃತ್ಯ ತಿಷ್ಠತಿ ।
ಮಧ್ಯೇ ವಾನರವೀರಾಣಾಂ ಸುರಾಣಾಮಿವ ವಾಸವಃ ॥

ಮೂಲಮ್ - 38

ಭೇರೀಣಾಮಿವ ಸಂನಾದೋ ಯಸ್ಯೈಷ ಶ್ರೂಯತೇ ಮಹಾನ್ ।
ಘೋಷಃ ಶಾಖಾಮೃಗೇಂದ್ರಾಣಾಂ ಸಂಗ್ರಾಮಮಭಿಕಾಂಕ್ಷತಾಮ್ ॥

ಮೂಲಮ್ - 39

ಏಷ ಪರ್ವತಮಧ್ಯಾಸ್ತೇ ಪಾರಿಯಾತ್ರ ಮನುತ್ತಮಮ್ ।
ಯುದ್ಧೇ ದುಷ್ಟ್ರಸಹೋ ನಿತ್ಯಂ ಪನಸೋ ನಾಮ ಯೂಥಪಃ ॥

ಮೂಲಮ್ - 40

ಏನಂ ಶತಸಹಸ್ರಾಣಿ ಶತಾರ್ಧಂ ಪರ್ಯುಪಾಸತೇ ।
ಯೂಥಪಾ ಯೂಥಪಶ್ರೇಷ್ಠಂ ಯೇಷಾಂ ಯೂಥಾನಿ ಭಾಗಶಃ ॥

ಅನುವಾದ

ಅತ್ತಕಡೆ ನೋಡು - ಮಹಾಕಾಯನಾದ ಆ ವಾನರಶ್ರೇಷ್ಠನು ಮೇಘವು ಆಕಾಶವನ್ನು ಆವರಿಸಿರು ವಂತೆ ವಿಶಾಲ ಪ್ರದೇಶವನ್ನು ಆವರಿಸಿ ನಿಂತಿರುವನು. ವಾನರರ ನಡುವೆ ನಿಂತಿರುವ ಅವನು ದೇವತೆಗಳ ಮಧ್ಯದಲ್ಲಿರುವ ಇಂದ್ರನಂತೆ ಕಾಣುತ್ತಿದ್ದಾನೆ. ಅವನು ಮಾಡುವ ಗರ್ಜನೆ ಅನೇಕ ಭೇರಿಗಳ ನಿನಾದದಂತೆ ಕೇಳಿಬರುತ್ತದೆ. ಯುದ್ಧದಲ್ಲಿ ದುಸ್ಸಹನಾದ ಇವನು ಪನಸ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದಾನೆ. ಪಾರಿಯಾತ್ರ ಪರ್ವತದಲ್ಲಿ ಇವನು ವಾಸಿಸುತ್ತಾನೆ. ಯೂಥಪತಿಗಳಲ್ಲಿ ಶ್ರೇಷ್ಠನಾದ ಪನಸನ ಅಧೀನ ಐವತ್ತು ಲಕ್ಷಸೇನಾಪತಿಗಳು ಇರುತ್ತಾರೆ, ಅವರ ತಮ್ಮ ತಮ್ಮ ದಾದ ತುಕುಡಿಗಳು ಬೇರೆ ಬೇರೆಯಾಗಿವೆ.॥37-40॥

ಮೂಲಮ್ - 41

ಯಸ್ತು ಭೀಮಾಂ ಪ್ರವಲ್ಗಂತೀಂ ಚಮೂಂ ತಿಷ್ಠತಿ ಶೋಭಯನ್ ।
ಸ್ಥಿತಾಂ ತೀರೇ ಸಮುದ್ರಸ್ಯ ದ್ವಿತೀಯ ಇವ ಸಾಗರಃ ॥

ಮೂಲಮ್ - 42½

ಏಷ ದರ್ದುರ ಸಂಕಾಶೋ ವಿನತೋ ನಾಮ ಯೂಥಪಃ ।
ಪಿಬಂಶ್ಚರತಿಯೋ ವೇಣಾಂ ನದೀನಾಮುತ್ತಮಾಂ ನದೀಮ್ ॥
ಷಷ್ಟಿಃ ಶತಸಹಸ್ರಾಣಿ ಬಲಮಸ್ಯ ಪ್ಲವಂಗಮಾಃ ।

ಅನುವಾದ

ಸಮುದ್ರತೀರದಲ್ಲಿ ಕುಣಿದಾಡುತ್ತಿರುವ, ಭಯಂಕರವಾದ ಸೈನ್ಯವನ್ನು ಶೋಭಾಯಮಾನಗೊಳಿಸುತ್ತಾ, ಮತ್ತೊಂದು ಸಮುದ್ರದಂತೆ ಕಾಣುವ, ದುರ್ದರ ಪರ್ವತಕ್ಕೆ ಸಮಾನನಾದ, ಅಲ್ಲಿ ಕಾಣುವ ದಳಪತಿಯು ವಿನತ ಎಂಬ ಪ್ರಸಿದ್ಧ ವಾನರನಾಗಿದ್ದಾನೆ. ಅವನು ನದಿಗಳಲ್ಲಿ ಶ್ರೇಷ್ಠವಾದ ವೇಣಾ ನದಿಯ ನೀರನ್ನು ಕುಡಿಯುತ್ತಾ ವಿಚರಿಸುತ್ತಿರುವ ಇವನೊಡನೆ ಅರವತ್ತು ಲಕ್ಷವಾನರ ಸೈನಿಕರಿದ್ದಾರೆ.॥41-42॥

ಮೂಲಮ್ - 43½

ತ್ವಾಮಾಹ್ವಯತಿ ಯುದ್ಧಾಯ ಕ್ರೋಧನೋ ನಾಮ ವಾನರಃ ॥
ವಿಕ್ರಾಂತಾ ಬವಂತಶ್ಚ ಯಥಾ ಯೂಥಾನಿ ಭಾಗಶಃ ।

ಅನುವಾದ

ಅಲ್ಲಿ ಕಾಣುತ್ತಿರುವವನೇ ಕ್ರೋಧನ ಎಂಬ ವಾನರ ಶ್ರೇಷ್ಠನು. ಅವನೂ ಕೂಡ ನಿಮ್ಮನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದಾನೆ. ಅವನ ಬಳಿ ಮಹಾಪರಾಕ್ರಮಿಗಳಾದ ಮತ್ತು ಬಲಿಷ್ಠರಾದ ಅನೇಕ ದಳಪತಿಗಳಿದ್ದಾರೆ. ಅವರ ಅಧೀನದಲ್ಲಿಯೂ ಬೇರೆ ಬೇರೆ ಅನೇಕ ತುಕಡಿಗಳ ವಾನರ ಸೈನ್ಯವಿದೆ.॥43॥

ಮೂಲಮ್ - 44

ಯಸ್ತು ಗೈರಿಕವರ್ಣಾಭಂ ವಪುಃ ಪುಷ್ಯತಿ ವಾನರಃ ॥

ಮೂಲಮ್ - 45

ಅವಮತ್ಯ ಸದಾ ಸರ್ವಾನ್ ವಾನರಾನ್ ಬಲದರ್ಪಿತಃ ।
ಗವಯೋ ನಾಮ ತೇಜಸ್ವೀ ತ್ವಾಂ ಕ್ರೋಧಾದಭಿವರ್ತತೇ ॥

ಮೂಲಮ್ - 46

ಏನಂ ಶತಸಹಸ್ರಾಣಿ ಸಪ್ತತಿಃ ಪರ್ಯುಪಾಸತೇ ।
ಏಷೈವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ ॥

ಅನುವಾದ

ಅದೋ ಅಲ್ಲಿ ನೋಡು-ಗೈರಿಕಧಾತುವಿನಂತೆ ಕೆಂಪಾದ ಶರೀರವುಳ್ಳ ತೇಜಸ್ವೀ ವಾನರನ ಹೆಸರು ಗವಯ ಎಂದಾಗಿದೆ. ಅವನಿಗೆ ತನ್ನ ಬಲದ ಭಾರೀ ಗರ್ವವಿದೆ. ಅವನು ಇದರಿಂದಲೇ ಎಲ್ಲ ವಾನರರನ್ನು ತಿರಸ್ಕರಿಸುತ್ತಿದ್ದಾನೆ. ರೋಷದಿಂದ ನಿಮ್ಮ ಕಡೆಗೆ ಮುನ್ನುಗ್ಗಿ ಬರುವ ಅವನ ಸೇನೆಯಲ್ಲಿ ಎಪ್ಪತ್ತು ಲಕ್ಷ ವಾನರರು ಇರುತ್ತಾರೆ. ಇವನೂ ಕೂಡ ತನ್ನ ಸೈನ್ಯದೊಂದಿಗೆ ಲಂಕೆಯನ್ನು ಧೂಳೀಪಟ ಮಾಡಲು ಬಯಸುತ್ತಿರುವನು.॥44-46॥

ಮೂಲಮ್ - 47

ಏತೇ ದುಷ್ಟ್ರ ಸಹಾ ವೀರಾ ಯೇಷಾಂ ಸಂಖ್ಯಾ ನ ವಿದ್ಯತೇ ।
ಯೂಥಪಾ ಯೂಥಪ ಶ್ರೇಷ್ಠಾ ಸ್ತೇಷಾಂ ಯೂಥಾನಿ ಭಾಗಶಃ ॥

ಅನುವಾದ

ಇವೆಲ್ಲ ವಾನರರು ದಸ್ಸಹವೀರರಾಗಿದ್ದಾರೆ. ಇವರ ಗಣನೆ ಅಸಂಭವವಾಗಿದೆ. ದಳಪತಿಗಳಲ್ಲಿ ಶ್ರೇಷ್ಠರಾದ ಪ್ರತಿಯೊಬ್ಬರ ಅಧೀನದಲ್ಲಿಯೂ ಪ್ರತ್ಯೇಕ ಪ್ರತ್ಯೇಕ ವಾನರ ಸೈನ್ಯ ವಿಭಾಗಗಳಿವೆ.॥47॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥27॥