वाचनम्
ಭಾಗಸೂಚನಾ
ರಾವಣನು ಪುನಃ ಶುಕ-ಸಾರಣರನ್ನು ಗುಪ್ತವಾಗಿ ವಾನರಸೈನ್ಯಕ್ಕೆ ಕಳಿಸಿದುದು, ವಿಭೀಷಣನು ಅವರನ್ನು ಗುರುತಿಸಿದುದು, ಶ್ರೀರಾಮನ ಕೃಪೆಯಿಂದ ಬಿಡುಗಡೆ, ಶ್ರೀರಾಮನ ಸಂದೇಶವನ್ನು ರಾವಣನಿಗೆ ತಿಳಿಸಿ, ಸಮಜಾಯಿಸಿದುದು
ಮೂಲಮ್ - 1
ಸಬಲೇ ಸಾಗರಂ ತೀರ್ಣೇ ರಾಮೇ ದಶರಥಾತ್ಮಜೇ ।
ಅಮಾತ್ಯೌ ರಾವಣಃ ಶ್ರೀಮಾನಬ್ರವೀಚ್ಛುಕಸಾರಣೌ ॥
ಅನುವಾದ
ದಶರಥನಂದನ ಭಗವಾನ್ ಶ್ರೀರಾಮನು ಸೈನ್ಯಸಹಿತ ಸಮುದ್ರವನ್ನು ದಾಟಿದಾಗ ಶ್ರೀಮಾನ್ ರಾವಣನು ತನ್ನ ಇಬ್ಬರು ಮಂತ್ರಿಗಳಾದ ಶುಕ-ಸಾರಣರಲ್ಲಿ ಹೇಳಿದನು.॥1॥
ಮೂಲಮ್ - 2
ಸಮಗ್ರಂ ಸಾಗರಂ ತೀರ್ಣಂ ದುಸ್ತರಂ ವಾನರಂ ಬಲಮ್ ।
ಅಭೂತಪೂರ್ವಂ ರಾಮೇಣ ಸಾಗರೇ ಸೇತುಬಂಧನಮ್ ॥
ಅನುವಾದ
ಸಮುದ್ರವನ್ನು ದಾಟುವುದು ಅತ್ಯಂತ ಕಠಿಣವಾಗಿದ್ದರೂ ಇಡೀ ವಾನರ ಸೈನ್ಯವು ಅದನ್ನು ದಾಟಿ ಇಲ್ಲಿಗೆ ಬಂದಿದೆ. ರಾಮನು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ್ದು ಅಭೂತ ಪೂರ್ವ ಕಾರ್ಯವಾಗಿದೆ.॥2॥
ಮೂಲಮ್ - 3
ಸಾಗರೇ ಸೇತುಬಂಧಂ ತಂ ನ ಶ್ರದ್ಧಧ್ಯಾಂ ಕಥಂಚನ ।
ಅವಶ್ಯಂ ಚಾಪಿ ಸಂಖ್ಯೇಯಂ ತನ್ಮಯಾ ವಾನರಂ ಬಲಮ್ ॥
ಅನುವಾದ
ಸಮುದ್ರದ ಮೇಲೆ ಸೇತುವೆ ಕಟ್ಟಲಾಗಿದೆ ಎಂದು ಜನರಿಂದ ಕೇಳಿದರೂ ನನಗೆ ವಿಶ್ವಾಸವಾಗುತ್ತಿಲ್ಲ. ವಾನರ ಸೈನ್ಯ ಎಷ್ಟಿದೆ? ಎಂಬುದನ್ನು ತಿಳಿಯುವುದು ನನಗೆ ಅವಶ್ಯವಾಗಿದೆ.॥3॥
ಮೂಲಮ್ - 4
ಭವಂತೌ ವಾನರಂ ಸೈನ್ಯಂ ಪ್ರವಿಶ್ಯಾನುಪಲಕ್ಷಿತೌ ।
ಪರಿಮಾಣಂ ಚ ವೀರ್ಯಂ ಚ ಯೇ ಚ ಮುಖ್ಯಾಃ ಪ್ಲವಂಗಮಾಃ ॥
ಮೂಲಮ್ - 5
ಮಂತ್ರಿಣೋ ಯೇ ಚ ರಾಮಸ್ಯ ಸುಗ್ರೀವಸ್ಯ ಚ ಸಮ್ಮತಾಃ ।
ಯೇ ಪೂರ್ವಮಭಿವರ್ತಂತೇ ಯೇ ಚ ಶೂರಾಃ ಪ್ಲವಂಗಮಾಃ ॥
ಮೂಲಮ್ - 6
ಸ ಚ ಸೇತುರ್ಯಥಾ ಬದ್ಧಃ ಸಾಗರೆ ಸಲಿಲಾರ್ಣವೇ ।
ನಿವೇಶಂ ಚ ಯಥಾ ತೇಷಾಂ ವಾನರಾಣಾಂ ಮಹಾತ್ಮನಾಮ್ ॥
ಮೂಲಮ್ - 7
ರಾಮಸ್ಯ ವ್ಯವಸಾಯಂ ಚ ವೀರ್ಯಂ ಪ್ರಹರಣಾನಿ ಚ ।
ಲಕ್ಷ್ಮಣಸ್ಯ ಚ ವೀರಸ್ಯ ತತ್ತ್ವತೋ ಜ್ಞಾತುಮರ್ಹಥಃ ॥
ಮೂಲಮ್ - 8
ಕಶ್ಚ ಸೇನಾಪತಿಸ್ತೇಷಾಂ ವಾನರಾಣಾಂ ಮಹಾತ್ಮನಾಮ್ ।
ತಚ್ಚ ಜ್ಞಾತ್ವಾ ಯಥಾತತ್ತ್ವಂ ಶೀಘ್ರಮಾಗಂತುಮರ್ಹಥಃ ॥
ಅನುವಾದ
ನೀವಿಬ್ಬರೂ ಯಾರೂ ಗುರುತಿಸದಂತೆ ವಾನರ ಸೈನ್ಯವನ್ನು ಪ್ರವೇಶಿಸಿರಿ. ಅಲ್ಲಿಗೆ ಹೋಗಿ ವಾನರರ ಸಂಖ್ಯೆ ಎಷ್ಟಿದೆ? ಅವರ ಶಕ್ತಿ ಎಂತಹುದಿದೆ? ಅವರಲ್ಲಿ ಮುಖ್ಯ-ಮುಖ್ಯವಾನರರು ಯಾರು ಯಾರು ಇದ್ದಾರೆ? ಶ್ರೀರಾಮ ಮತ್ತು ಸುಗ್ರೀವನಿಗೆ ಮನೋನುಕೂಲ ಮಂತ್ರಿ ಯಾರು ಯಾರಿದ್ದಾರೆ? ಯಾವ ಯಾವ ಶೂರವೀರ ವಾನರರು ಸೈನ್ಯದ ಮುಂದೆ ಇದ್ದಾರೆ? ಅಗಾಧ ಜಲರಾಶಿಯಿಂದ ತುಂಬಿದ ಸಮುದ್ರದಲ್ಲಿ ಸೇತುವೆ ಹೇಗೆ ಕಟ್ಟಲಾಯಿತು? ಮಹಾಮನಸ್ವೀ ವಾನರರ ಶಿಬಿರ ಹೇಗಿದೆ? ಎಲ್ಲಿದೆ? ಶ್ರೀರಾಮ ಮತ್ತು ಲಕ್ಷ್ಮಣರ ನಿಶ್ಚಯ ಏನಿದೆ? ಅವರು ಏನು ಮಾಡಲು ಬಯಸುತ್ತಿರುವರು? ಅವರ ಬಲ-ಪರಾಕ್ರಮ ಇದೆಲ್ಲದರ ಅರಿವನ್ನು ನೀವು ಸರಿಯಾಗಿ ತಿಳಿದುಕೊಂಡು ಬೇಗನೇ ಮರಳಿ ಬಂದು ಬಿಡಿರಿ.॥4-8॥
ಮೂಲಮ್ - 9
ಇತಿ ಪ್ರತಿಸಮಾದಿಷ್ಟೌ ರಾಕ್ಷಸೌ ಶುಕಸಾರಣೌ ।
ಹರಿರೂಪಧರೌ ವೀರೌ ಪ್ರವಿಷ್ಟೌ ವಾನರಂ ಬಲಮ್ ॥
ಅನುವಾದ
ಹೀಗೆ ಅಪ್ಪಣೆ ಪಡೆದ ಇಬ್ಬರೂ ರಾಕ್ಷಸ ಶುಕ-ಸಾರಣರು ವಾನರ ರೂಪದಿಂದ ರಾಮನ ವಾನರ ಸೈನ್ಯವನ್ನು ಹೊಕ್ಕರು.॥9॥
ಮೂಲಮ್ - 10
ತತಸ್ತದ್ವಾವರಂ ಸೈನ್ಯಮಚಿಂತ್ಯಂ ಲೋಮಹರ್ಷಣಮ್ ।
ಸಂಖ್ಯಾತುಂ ನಾಧ್ಯಗಚ್ಛೇತಾಂ ತದಾ ತೌ ಶುಕಸಾರಣೌ ॥
ಅನುವಾದ
ವಾನರರ ಆ ಸೈನ್ಯವು ಎಷ್ಟಿದೆ ಎಂಬುದರ ಗಣನೆ ದೂರ ಉಳಿಯತು. ಮನಸ್ಸಿನಿಂದ ಅಂದಾಜು ಮಾಡುವುದೂ ಅಸಂಭವವಾಗಿತ್ತು. ಆ ಅಪಾರ ಸೈನ್ಯವನ್ನು ನೋಡಿ ರೋಮಾಂಚನವಾಗುತ್ತಿತ್ತು. ಆಗ ಶಕ-ಸಾರಣರು ಯಾವ ರೀತಿಯಿಂದಲೂ ಅದನ್ನು ಎಣಿಸದಾದರು.॥10॥
ಮೂಲಮ್ - 11
ತತ್ ಸ್ಥಿತಂ ಪರ್ವತಾಗ್ರೇಷು ನಿರ್ಝರೇಷು ಗುಹಾಸು ಚ ।
ಸಮುದ್ರಸ್ಯ ಚ ತೀರೇಷು ವನೇಷೂಪವನೇಷು ಚ ।
ತರಮಾಣಂ ಚ ತೀರ್ಣಂ ಚ ತರ್ತುಕಾಮಂ ಚ ಸರ್ವಶಃ ॥
ಅನುವಾದ
ಆ ಸೈನ್ಯವು ಪರ್ವತ ಶಿಖರಗಳಲ್ಲಿ, ಜಲಪಾತದ ಅಕ್ಕ-ಪಕ್ಕದಲ್ಲಿ, ಗುಹೆಗಳಲ್ಲಿ, ಸಮುದ್ರ ತೀರದಲ್ಲಿ, ವನ- ಉಪವನಗಳಲ್ಲಿ ಹರಡಿಕೊಂಡಿತ್ತು. ಅದರಲ್ಲಿ ಸ್ವಲ್ಪಭಾಗ ಸಮುದ್ರವನ್ನು ದಾಟುತ್ತಿದ್ದರು, ಕೆಲವರು ದಾಟಿ ಬಂದಿದ್ದರು; ಕೆಲವರು ಸಮುದ್ರವನ್ನು ದಾಟಲು ಸಿದ್ಧರಾಗಿದ್ದಾರೆ.॥11॥
ಮೂಲಮ್ - 12
ನಿವಿಷ್ಟಂ ನಿವಿಶಶ್ಚೈವ ಭೀಮನಾದಂ ಮಹಾಬಲಮ್ ।
ತದ್ಬಲಾರ್ಣವಮಕ್ಷೋಭ್ಯಂ ದದೃಶಾತೇ ನಿಶಾಚರೌ ॥
ಅನುವಾದ
ಭಯಂಕರ ಕೋಲಾಹಲ ಮಾಡುತ್ತಿದ್ದ ಆ ವಿಶಾಲ ಸೈನ್ಯವು ಕೆಲವು ಕಡೆ ಶಿಬಿರ ನಿರ್ಮಿಸಿದ್ದರು, ಕೆಲವೆಡೆ ಶಿಬಿರವನ್ನು ನಿರ್ಮಿಸುತ್ತಿದ್ದರು. ಆ ವಾನರವಾಹಿನಿಯು ಸಮುದ್ರದಂತೆ ಅಕ್ಷೋಭ್ಯವಾಗಿರುವುದನ್ನು ಆ ಇಬ್ಬರೂ ನಿಶಾಚರರು ನೋಡಿದರು.॥12॥
ಮೂಲಮ್ - 13
ತೌ ದದರ್ಶಮಹಾತೇಜಾಃ ಪ್ರತಿಚ್ಛನ್ನೌ ವಿಭೀಷಣಃ ।
ಆಚಚಕ್ಷೇ ಸ ರಾಮಾಯ ಗೃಹೀತ್ವಾ ಶುಕಸಾರಣೌ ॥
ಅನುವಾದ
ವಾನರ ವೇಶದಲ್ಲಿ ಅಡಗಿದ್ದು ಸೈನ್ಯವನ್ನು ನಿರೀಕ್ಷಿಸುತ್ತಿರುವ ರಾಕ್ಷಸ ಶುಕ-ಸಾರಣರನ್ನು ಮಹಾತೇಜಸ್ವೀ ವಿಭೀಷಣನು ನೋಡಿದನು. ನೋಡುತ್ತಲೇ ಗುರುತಿಸಿ ಅವರಿಬ್ಬರನ್ನು ಹಿಡಿದು ಶ್ರೀರಾಮಚಂದ್ರನಲ್ಲಿ ಹೇಳಿದನು.॥13॥
ಮೂಲಮ್ - 14
ತಸ್ಯೈತೌ ರಾಕ್ಷಸೇಂದ್ರಸ್ಯ ಮಂತ್ರಿಣೌ ಶುಕಸಾರಣೌ ।
ಲಂಕಾಯಾಃ ಸಮನುಪ್ರಾಪ್ತೌ ಚಾರೌ ಪರಪುರಂಜಯ ॥
ಅನುವಾದ
ಪರಪುರಂಜಯ ನರೇಶನೇ! ಇವರಿಬ್ಬರೂ ಲಂಕೆಯಿಂದ ಬಂದಿರುವ ಗುಪ್ತಚರ ಹಾಗೂ ರಾಕ್ಷಸ ರಾಜಾ ರಾವಣನ ಮಂತ್ರಿ ಶುಕ-ಸಾರಣರಾಗಿದ್ದಾರೆ.॥14॥
ಮೂಲಮ್ - 15
ತೌ ದೃಷ್ಟ್ವಾ ವ್ಯಥಿತೌ ರಾಮಂ ನಿರಾಶೌ ಜೀವಿತೇ ತಥಾ ।
ಕೃತಾಂಜಲಿಪುಟೌ ಭೀತೌ ವಚನಂ ಚೇದಮೂಚತುಃ ॥
ಅನುವಾದ
ಈ ಇಬ್ಬರೂ ರಾಕ್ಷಸರು ಶ್ರೀರಾಮಚಂದ್ರನನ್ನು ನೋಡಿ ಅತ್ಯಂತ ವ್ಯಥಿತರಾದರು ಮತ್ತು ಬದುಕಿರುವುದರ ಕುರಿತು ನಿರಾಶರಾದರು. ಅವರ ಮನಸ್ಸಿನಲ್ಲಿ ಭಯವುಂಟಾಗಿ, ಕೈಮುಗಿದು ಹೀಗೆ ನುಡಿದರು.॥15॥
ಮೂಲಮ್ - 16
ಆವಾಮಿಹಾಗತೌ ಸೌಮ್ಯ ರಾವಣ ಪ್ರಹಿತಾವುಭೌ ।
ಪರಿಜ್ಞಾತುಂ ಬಲಂ ಸರ್ವಂ ತದಿದಂ ರಘುನಂದನ ॥
ಅನುವಾದ
ಸೌಮ್ಯ! ರಘುನಂದನ! ನಮ್ಮಿಬ್ಬರನ್ನು ರಾವಣನು ಕಳಿಸಿರುವನು ಹಾಗೂ ನಾವು ಈ ಎಲ್ಲ ಸೈನ್ಯದ ವಿಷಯದಲ್ಲಿ ಆವಶ್ಯಕ ಅರಿವನ್ನು ತಿಳಿಯಲಿಕ್ಕಾಗಿ ಬಂದಿರುವೆವು.॥16॥
ಮೂಲಮ್ - 17
ತಯೋಸ್ತದ್ವಚನಂ ಶ್ರುತ್ವಾ ರಾಮೋ ದಶರಥಾತ್ಮಜಃ ।
ಅಬ್ರವೀತ್ ಪ್ರಹಸನ್ ವಾಕ್ಯಂ ಸರ್ವಭೂತಹಿತೇ ರತಃ ॥
ಅನುವಾದ
ಅವರಿಬ್ಬರ ಮಾತನ್ನು ಕೇಳಿ ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರನಾದ ದಶರಥನಂದನ ಭಗವಾನ್ ಶ್ರೀರಾಮನು ನಗುತ್ತಾ ನುಡಿದನು.॥17॥
ಮೂಲಮ್ - 18
ಯದಿ ದೃಷ್ಟಂ ಬಲಂ ಸರ್ವಂ ವಯಂ ವಾ ಸುಸಮಾಹಿತಾಃ ।
ಯಥೋಕ್ತಂ ವಾ ಕೃತಂ ಕಾರ್ಯಂ ಛಂದತಃ ಪ್ರತಿಗಮ್ಯತಾಮ್ ॥
ಅನುವಾದ
ನೀವು ಎಲ್ಲ ಸೈನ್ಯವನ್ನು ನೋಡಿದ್ದರೆ, ನಮ್ಮ ಸೈನ್ಯದ ಶಕ್ತಿಯನ್ನು ತಿಳಿದಿದ್ದರೆ, ರಾವಣನು ಹೇಳಿದಂತೆ ಎಲ್ಲ ಕಾರ್ಯ ಮುಗಿಸಿದ್ದರೆ, ಈಗ ನೀವಿಬ್ಬರೂ ನಿಮ್ಮ ಇಚ್ಛಾನಸಾರ ಸಂತೋಷದಿಂದ ಮರಳಿ ಹೋಗಿರಿ.॥18॥
ಮೂಲಮ್ - 19
ಅಥ ಕಿಂಚಿದದೃಷ್ಟಂ ವಾ ಭೂಯಸ್ತದ್ದ್ರಷ್ಟು ಮರ್ಹಥಃ ।
ವಿಭೀಷಣೋ ವಾ ಕಾರ್ತ್ಸ್ನ್ಯೇನ ಪುನಃ ಸಂದರ್ಶಯಿಷ್ಯತಿ ॥
ಅನುವಾದ
ಅಥವಾ ಇನ್ನೂ ಏನಾದರೂ ನೋಡುವುದು ಉಳಿದಿದ್ದರೆ ಪುನಃ ನೋಡಿರಿ. ವಿಭೀಷಣನು ನಿಮಗೆ ಎಲ್ಲವನ್ನು ಪುನಃ ಪೂರ್ಣವಾಗಿ ತೋರಿಸುವನು.॥19॥
ಮೂಲಮ್ - 20
ನ ಚೇದಂ ಗ್ರಹಣಂ ಪ್ರಾಪ್ಯ ಭೇತವ್ಯಂ ಜೀವಿತಂ ಪ್ರತಿ ।
ನ್ಯಸ್ತ ಶಸ್ತ್ರೌ ಗೃಹೀತೌ ಚ ನ ದೂತೌ ವಧಮರ್ಹಥಃ ॥
ಅನುವಾದ
ಈಗ ನೀವು ಬಂಧಿತರಾದ್ದರಿಂದ ನಿಮಗೆ ಸಾವಿನ ಯಾವುದೇ ಭಯ ಆಗಬಾರದು; ಏಕೆಂದರೆ ಶಸಹೀನ ಸ್ಥಿತಿಯಲ್ಲಿ ಬಂಧಿತರಾದ ನೀವಿಬ್ಬರೂ ದೂತರೂ ವಧೆಗೆ ಯೋಗ್ಯರಲ್ಲ.॥20॥
ಮೂಲಮ್ - 21
ಪ್ರಚ್ಛನ್ನೌ ಚ ವಿಮುಂಚೇಮೌ ಚಾರೌ ರಾತ್ರಿಂಚರಾವುಭೌ ।
ಶತ್ರುಪಕ್ಷಸ್ಯ ಸತತಂ ವಿಭೀಷಣ ವಿಕರ್ಷಿಣೌ ॥
ಅನುವಾದ
ವಿಭೀಷಣನೇ! ಇವರಿಬ್ಬರೂ ರಾಕ್ಷಸ ರಾವಣನ ಗುಪ್ತಚರರಾಗಿದ್ದಾರೆ ಹಾಗೂ ಅಡಗಿಕೊಂಡು ಇಲ್ಲಿನ ರಹಸ್ಯವನ್ನು ತಿಳಿಯಲು ಬಂದಿರುವರು. ಇವರು ನಮ್ಮ ವಾನರ ಸೈನ್ಯದಲ್ಲಿ ಒಡಕನ್ನುಂಟುಮಾಡಲು ಪ್ರಯತ್ನಿಸು ತ್ತಿದ್ದಾರೆ. ಈಗಲಾದರೋ ಇವರ ರಹಸ್ಯ ಬದಲಾಯಿತು; ಆದ್ದರಿಂದ ಇವರನ್ನು ಬಿಟ್ಟುಬಿಡು.॥21॥
ಮೂಲಮ್ - 22
ಪ್ರವಿಶ್ಯ ಮಹತೀಂ ಲಂಕಾಂ ಭವದ್ಬ್ಯಾಂ ಧನದಾನುಜಃ ।
ವಕ್ತವ್ಯೋ ರಕ್ಷಸಾಂ ರಾಜಾ ಯಥೋಕ್ತಂ ವಚನಂ ಮಮ ॥
ಅನುವಾದ
ಶುಕ-ಸಾರಣರೇ! ನೀವಿಬ್ಬರೂ ಲಂಕೆಗೆ ಹೋದಾಗ ಕುಬೇರನ ತಮ್ಮನಾದ ರಾಕ್ಷಸರಾಜ ರಾವಣನಲ್ಲಿ ನನ್ನ ಕಡೆಯಿಂದ ಈ ಸಂದೇಶವನ್ನು ತಿಳಿಸಿರಿ.॥22॥
ಮೂಲಮ್ - 23
ಯದ್ಬಲಂ ತ್ವಂ ಸಮಾಶ್ರಿತ್ಯ ಸೀತಾಂ ಮೇ ಹೃತವಾನಸಿ ।
ತದ್ದರ್ಶಯ ಯಥಾ ಕಾಮಂ ಸಸೈನ್ಯಶ್ಚ ಸಬಾಂಧವಃ ॥
ಅನುವಾದ
ರಾವಣನೇ! ಯಾವ ಬಲದ ಭರವಸೆಯಿಂದ ನೀನು ಸೀತೆಯನ್ನು ಅಪಹರಿಸಿರುವೆಯೋ, ಅದನ್ನು ಈಗ ಸೈನ್ಯ ಮತ್ತು ಬಂಧು-ಬಾಂಧವರೊಂದಿಗೆ ಬಂದು ಯಥೇಚ್ಛವಾಗಿ ಪ್ರದರ್ಶಿಸು.॥23॥
ಮೂಲಮ್ - 24
ಶ್ವಃ ಕಾಲ್ಯೇ ನಗರೀಂ ಲಂಕಾಂ ಸಪ್ರಾಕಾರಾಂ ಸತೋರಣಾಮ್ ।
ರಕ್ಷಸಾಂ ಚ ಬಲಂ ಪಶ್ಯ ಶರೈರ್ವಿಧ್ವಂಸಿತಂ ಮಯಾ ॥
ಅನುವಾದ
ನಾಳೆ ಬೆಳಗಾಗುತ್ತಲೇ ಮಹಾದ್ವಾರ ಮತ್ತು ಪ್ರಾಕಾರಗಳಿಂದ ಕೂಡಿದ ಲಂಕಾಪಟ್ಟಣವು ಹಾಗೂ ರಾಕ್ಷಸರ ಸೈನ್ಯವೂ ನನ್ನ ಬಾಣಗಳಿಂದ ಧ್ವಂಸವಾಗುವುದನ್ನುನೋಡುವೆ.॥24॥
ಮೂಲಮ್ - 25
ಕ್ರೋಧಂ ಭೀಮಮಹಂ ಮೋಕ್ಷ್ಯೇ ಸಸೈನ್ಯೇ ತ್ವಯಿ ರಾವಣ ।
ಶ್ವಃ ಕಾಲ್ಯೇ ವಜ್ರವಾನ್ ವಜ್ರಂ ದಾನವೇಷ್ವಿವ ವಾಸವಃ ॥
ಅನುವಾದ
ರಾವಣನೇ ! ವಜ್ರಧಾರೀ ಇಂದ್ರನು ದಾನವರ ಮೇಲೆ ವಜ್ರಾಯುಧವನ್ನು ಪ್ರಯೋಗಿಸು ವಂತೆಯೇ ನಾಳೆ ಬೆಳಿಗ್ಗೆಯೇ ಸೈನ್ಯಸಹಿತ ನಿನ್ನ ಮೇಲೆ ನನ್ನ ಭಯಂಕರವಾದ ಕ್ರೋಧವನ್ನು ವಿಸರ್ಜಿಸುವೆನು.॥25॥
ಮೂಲಮ್ - 26½
ಇತಿ ಪ್ರತಿಸಮಾದಿಷ್ಟೌ ರಾಕ್ಷಸೌ ಶುಕಸಾರಣೌ ।
ಜಯೇತಿ ಪ್ರತಿನಂದ್ಯೈನಂ ರಾಘವಂ ಧರ್ಮವತ್ಸಲಮ್ ॥
ಆಗಮ್ಯ ನಗರೀಂ ಲಂಕಾಮಬ್ರೂತಾಂ ರಾಕ್ಷಸಾಧಿಪಮ್ ।
ಅನುವಾದ
ಭಗವಾನ್ ಶ್ರೀರಾಮನ ಈ ಸಂದೇಶವನ್ನು ಕೇಳಿ ರಾಕ್ಷಸರಿಬ್ಬರೂ ಶುಕ-ಸಾರಣರು ಧರ್ಮವತ್ಸಲ ಶ್ರೀರಘು ನಾಥನಲ್ಲಿ ‘ನಿನಗೆ ಜಯವಾಗಲಿ’ ಎಂದು ಅಭಿನಂದಿಸಿ ಲಂಕಾಪಟ್ಟಣಕ್ಕೆ ಹೋಗಿ ರಾವಣೇಶ್ವರನಲ್ಲಿ ಹೇಳಿದರು.॥26½॥
ಮೂಲಮ್ - 27½
ವಿಭೀಷಣ ಗೃಹೀತೌ ತು ವಧಾರ್ಥಂ ರಾಕ್ಷಸೇಶ್ವರ ॥
ದೃಷ್ಟ್ವಾಧರ್ಮಾತ್ಮನಾ ಮುಕ್ತೌ ರಾಮೇಣಾಮಿತತೇಜಸಾ ।
ಅನುವಾದ
ರಾಕ್ಷಸೇಶ್ವರನೇ! ನಮ್ಮನ್ನು ವಧಿಸಲೆಂದೇ ವಿಭೀಷಣನು ಬಂಧಿಸಿದ್ದನು; ಆದರೆ ಅಮಿತತೇಜಸ್ವೀ ಧರ್ಮಾತ್ಮಾ ಶ್ರೀರಾಮನು ನೋಡಿದಾಗ ನಮ್ಮನ್ನು ಬಿಡುಗಡೆಗೊಳಿಸಿದನು.॥27½॥
ಮೂಲಮ್ - 28
ಏಕಸ್ಥಾನಗತಾ ಯತ್ರ ಚತ್ವಾರಃ ಪುರುಷರ್ಷಭಾಃ ॥
ಮೂಲಮ್ - 29
ಲೋಕಪಾಲಸಮಾಃ ಶೂರಾಃ ಕೃತಾಸ್ತ್ರಾ ದೃಢವಿಕ್ರಮಾಃ ।
ರಾಮೋ ದಾಶರಥಿಃ ಶ್ರೀಮಾನ್ ಲ್ಲಕ್ಷ್ಮಣಶ್ಚ ವಿಭೀಷಣಃ ॥
ಮೂಲಮ್ - 30½
ಸುಗ್ರೀವಶ್ಚ ಮಹಾತೇಜಾ ಮಹೇಂದ್ರ ಸಮವಿಕ್ರಮಃ ।
ಏತೇ ಶಕ್ತಾಃ ಪುರೀಂ ಲಂಕಾಂ ಸ ಪ್ರಾಕಾರಾಂ ಸತೋರಣಾಮ್ ॥
ಉತ್ಪಾಟ್ಯ ಸಂಕ್ರಾಮಯಿತುಂ ಸರ್ವೇ ತಿಷ್ಠಂತು ವಾನರಾಃ ।
ಅನುವಾದ
ದಶರಥನಂದನ ಶ್ರೀರಾಮ, ಶ್ರೀಮಾನ್ ಲಕ್ಷ್ಮಣ, ವಿಭೀಷಣ ಹಾಗೂ ಮಹೇಂದ್ರತುಲ್ಯ ಪರಾಕ್ರಮೀ ಮಹಾತೇಜಸ್ವೀ ಸುಗ್ರೀವ - ಈ ನಾಲ್ವರು ವೀರರು ಲೋಕಪಾಲ ರಂತೆ ಶೌರ್ಯಶಾಲಿ, ದೃಢಪರಾಕ್ರಮೀ ಮತ್ತು ಅಸ್ತ್ರ-ಶಸ್ತ್ರಗಳ ಜ್ಞಾನಿಯಾಗಿದ್ದಾರೆ. ಈ ನಾಲ್ವರು ಒಂದೆಡೆ ಇರುವಲ್ಲಿಯೇ ವಿಜಯ ನಿಶ್ಚಯವಾಗಿದೆ. ಇತರ ಎಲ್ಲ ವಾನರರು ಬೇರೆ ಯಾಗಿ ಉಳಿದಿದ್ದರೂ ಈ ನಾಲ್ವರೇ ಪ್ರಾಕಾರಸಹಿತ ಮಹಾ ದ್ವಾರಗಳ ಸಹಿತ ಇಡೀ ಲಂಕೆಯನ್ನು ಕಿತ್ತು ಬಿಸಾಡಲು ಸಮರ್ಥರಾಗಿದ್ದಾರೆ.॥28-30॥
ಮೂಲಮ್ - 31½
ಯಾದೃಶಂತದ್ಧಿ ರಾಮಸ್ಯ ರೂಪಂ ಪ್ರಹರಣಾನಿ ಚ ॥
ವಧಿಷ್ಯತಿ ಪುರೀಂ ಲಂಕಾಮೇಕಸ್ತಿಷ್ಠಂತು ತೇ ತ್ರಯಃ ।
ಅನುವಾದ
ಶ್ರೀರಾಮಚಂದ್ರನ ರೂಪ ಮತ್ತು ಅವನ ಅಸ್ತ್ರ-ಶಸ್ತ್ರಗಳನ್ನು ನೋಡಿದರೆ, ಉಳಿದ ಮೂವರೂ ವೀರರು ಸುಮ್ಮನಿದ್ದರೂ, ಅವನನೊಬ್ಬನೇ ಇಡೀ ಲಂಕಾಪುರಿಯನ್ನು ವಧಿಸಬಲ್ಲನು ಎಂದು ತಿಳಿಯುತ್ತದೆ.॥31½॥
ಮೂಲಮ್ - 32
ರಾಮಲಕ್ಷ್ಮಣಗುಪ್ತಾ ಸಾ ಸುಗ್ರೀವೇಣ ಚ ವಾಹಿನೀ ।
ಬಭೂವ ದುರ್ಧರ್ಷತರಾ ಸರ್ವೈರಪಿ ಸುರಾಸುರೈಃ ॥
ಅನುವಾದ
ಮಹಾರಾಜನೇ! ಶ್ರೀರಾಮ, ಲಕ್ಷ್ಮಣ ಮತ್ತು ಸುಗ್ರೀವನಿಂದ ಸುರಕ್ಷಿತವಾದ ಆ ವಾನರ ಸೈನ್ಯವಾದರೋ ಸಮಸ್ತ ದೇವತೆಗಳಿಗೂ, ಅಸುರರಿಗೂ ಕೂಡ ಅತ್ಯಂತ ದುರ್ಜಯವಾಗಿದೆ.॥32॥
ಮೂಲಮ್ - 33
ಪ್ರಹೃಷ್ಟಯೋಧಾ ಧ್ವಜಿನೀ ಮಹಾತ್ಮನಾಂ
ವನೌಕಸಾಂ ಸಂಪ್ರತಿಯೋದ್ಧುಮಿಚ್ಛತಾಮ್ ।
ಅಲಂ ವಿರೋಧೇನ ಶಮೋ ವಿಧೀಯತಾಂ
ಪ್ರದೀಯತಾಂ ದಾಶರಥಾಯ ಮೈಥಿಲೀ ॥
ಅನುವಾದ
ಮಹಾಮನಸ್ವಿಗಳಾದ ವಾನರರು ಈಗ ಯುದ್ಧ ಮಾಡಲು ಉತ್ಸುಕರಾಗಿದ್ದಾರೆ. ಆ ಸೈನ್ಯದ ಎಲ್ಲ ವೀರರೂ ಬಹಳ ಪ್ರಸನ್ನರಾಗಿದ್ದಾರೆ. ಆದ್ದದರಿಂದ ಅವರೊಂದಿಗೆ ವಿರೋಧ ವಿರಿಸುವುದು ನಿಮಗೆ ಲಾಭವೇನೂ ಆಗದು. ಅದಕ್ಕಾಗಿ ನೀವು ಸಂಧಿ ಮಾಡಿಕೊಂಡು, ಶ್ರೀರಾಮ ಸೇವೆಯಲ್ಲಿ ಸೀತೆಯನ್ನು ಹಿಂದಿರುಗಿಸಿರಿ.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗ ಪೂರ್ಣವಾಯಿತು.॥25॥