वाचनम्
ಭಾಗಸೂಚನಾ
ಶ್ರೀರಾಮನಿಂದ ಲಂಕೆಯ ವರ್ಣನೆ, ವ್ಯೂಹಕ್ರಮದಲ್ಲಿ ನಿಲ್ಲಲು ಸೈನ್ಯಕ್ಕೆ ಆದೇಶ, ಶ್ರೀರಾಮನಿಂದ ಬಿಡುಗಡೆಗೊಂಡ ಶುಕನು ರಾವಣನ ಬಳಿಗೆ ಹೋಗಿ ಶ್ರೀರಾಮನ ಸೈನ್ಯಶಕ್ತಿಯನ್ನು ವಿವರಿಸಿದುದು, ರಾವಣನಿಂದ ತನ್ನ ಬಲದ ಬಗೆಗೆ ಪ್ರಶಂಸೆ
ಮೂಲಮ್ - 1
ಸಾ ವೀರಸಮಿತೀ ರಾಜ್ಞಾ ವಿರರಾಜ ವ್ಯವಸ್ಥಿತಾ ।
ಶಶಿನಾ ಶುಭನಕ್ಷತ್ರಾ ಪೌರ್ಣಮಾಸೀವ ಶಾರದೀ ॥
ಅನುವಾದ
ಸುಗ್ರೀವನಿಂದ ವ್ಯವಸ್ಥೆಗೊಳಿಸಲ್ಪಟ್ಟ ಆ ಮಹಾಸೈನ್ಯವು ಶರತ್ಕಾಲದಲ್ಲಿ ಶುಭನಕ್ಷತ್ರಗಳಿಂದಲೂ, ಚಂದ್ರನಿಂದಲೂ ಕಂಗೊಳಿಸುವ ಹುಣ್ಣಿಮೆಯಂತೆ ಪ್ರಕಾಶಿಸುತ್ತಿತ್ತು.॥1॥
ಮೂಲಮ್ - 2
ಪ್ರಚಚಾಲ ಚ ವೇಗೇನ ತ್ರಸ್ತಾ ಚೈವ ವಸುಂಧರಾ ।
ಪೀಡ್ಯಮಾನಾ ಬಲೌಘೇನ ತೇನ ಸಾಗರವರ್ಚಸಾ ॥
ಅನುವಾದ
ಆ ವಿಶಾಲ ಸೈನ್ಯ ಸಮೂಹವು ಸಮುದ್ರದಂತೆ ಕಂಡುಬರುತ್ತಿದ್ದು, ಅದರ ಭಾರಕ್ಕೆ ಒತ್ತಲ್ಪಟ್ಟ ವಸುಧೆಯು ಭಯಭೀತವಾಗಿ ವೇಗವಾಗಿ ತೂಗಾಡತೊಡಗಿತು.॥2॥
ಮೂಲಮ್ - 3
ತತಃ ಶುಶ್ರುವುರಾಕ್ರುಷ್ಟಂ ಲಂಕಾಯಾಂ ಕಾನನೌಕಸಃ ।
ಭೇರೀಮೃದಂಗಸಂಘುಷ್ಟಂ ತುಮುಲಂ ರೋಮಹರ್ಷಣಮ್ ॥
ಅನುವಾದ
ಅನಂತರ ವಾನರರು ಲಂಕೆಯಲ್ಲಿ ಆಗುತ್ತಿದ್ದ ಮಹಾ ಕೋಲಾಹಲ, ಭೇರಿ-ಮೃದಂಗಗಳ ಗಂಭೀರ ಘೋಷವೂ ಸೇರಿ ಭಾರೀ ಭಯಂಕರ, ರೋಮಾಂಚಕರವಾಗಿ ಕೇಳಿದರು.॥3॥
ಮೂಲಮ್ - 4
ಬಭೂವುಸ್ತೇನ ಘೋಷೇಣ ಸಂಹೃಷ್ಟಾ ಹರಿಯೂಥಪಾಃ ।
ಅಮೃಷ್ಯಮಾಣಾಸ್ತದ್ ಘೋಷಂ ವಿನೇದುರ್ಘೋಷವತ್ತರಮ್ ॥
ಅನುವಾದ
ಆ ತುಮುಲ ನಾದವನ್ನು ಕೇಳಿ ವಾನರಯೂಥಪತಿಗಳು ಹರ್ಷೋತ್ಸಾಹಗೊಂಡರು. ಅವರು ಅದನ್ನು ಸಹಿಸಲಾರದೆ ಅದಕ್ಕಿಂತಲೂ ಜೋರು-ಜೋರಾಗಿ ಗರ್ಜಿಸತೊಡಗಿದರು.॥4॥
ಮೂಲಮ್ - 5
ರಾಕ್ಷಸಾಸ್ತತ್ ಪ್ಲವಂಗಾನಾಂ ಶುಶ್ರುವುಸ್ತೇಽಪಿ ಗರ್ಜಿತಮ್ ।
ನರ್ದತಾಮಿವ ದೃಪ್ತಾನಾಂ ಮೇಘಾನಾಮಂಬರೇ ಸ್ವನಮ್ ॥
ಅನುವಾದ
ದರ್ಪದಿಂದ ಸಿಂಹನಾದ ಮಾಡುತ್ತಿದ್ದ ರಾಕ್ಷಸರು ವಾನರರ ಆ ಗರ್ಜನೆಯನ್ನು ಕೇಳಿದರು. ಅವರ ಮಹಾನಾದವು ಆಕಾಶದಲ್ಲಿನ ಮೇಘಗಳ ಗರ್ಜನೆಯಂತೆ ಅನಿಸುತ್ತಿತ್ತು.॥5॥
ಮೂಲಮ್ - 6
ದೃಷ್ಟ್ವಾ ದಾಶರಥಿರ್ಲಂಕಾಂ ಚಿತ್ರಧ್ವಜಪತಾಕಿನೀಮ್ ।
ಜಗಾಮ ಮನಸಾ ಸೀತಾಂ ದೂಯಮಾನೇನ ಚೇತಸಾ ॥
ಅನುವಾದ
ದಶರಥನಂದನ ಶ್ರೀರಾಮನ ವಿಚಿತ್ರ ಧ್ವಜ-ಪತಾಕೆಗಳಿಂದ ಸುಶೋಭಿತವಾಗಿದ್ದ ಲಂಕಾಪಟ್ಟಣವನ್ನು ನೋಡಿ, ವ್ಯಥಿತನಾಗಿ ಮನಸ್ಸಿನಲ್ಲೇ ಸೀತೆಯನ್ನು ಸ್ಮರಿಸಿದನು.॥6॥
ಮೂಲಮ್ - 7
ಅತ್ರ ಸಾ ಮೃಗಶಾವಾಕ್ಷೀ ರಾವಣೇನೋಪರುಧ್ಯತೇ ।
ಅಭಿಭೂತಾ ಗ್ರಹೇಣೇವ ಲೋಹಿತಾಂಗೇನ ರೋಹಿಣೀ ॥
ಅನುವಾದ
ಅವನು ಒಳಗೊಳಗೆ ಹೇಳಿಕೊಂಡನು- ಅಯ್ಯೋ! ಇಲ್ಲೇ ಆ ಮೃಗಲೋಚನೆ ಸೀತೆಯು ರಾವಣನ ಸೆರೆಯಲ್ಲಿ ಇರುವಳು. ಆಕೆಯ ಸ್ಥಿತಿಯು ಮಂಗಳಗ್ರಹದಿಂದ ಆಕ್ರಾಂತವಾದ ರೋಹಿಣಿಯಂತೆ ಆಗಿದೆ.॥7॥
ಮೂಲಮ್ - 8
ದೀರ್ಘಮುಷ್ಣಂ ಚ ನಿಃಶ್ವಸ್ಯ ಸಮುದ್ವೀಕ್ಷ್ಯ ಚ ಲಕ್ಷ್ಮಣಮ್ ।
ಉವಾಚ ವಚನಂ ವೀರಸ್ತತ್ಕಾಲಹಿತಮಾತ್ಮನಃ ॥
ಅನುವಾದ
ಮನಸ್ಸಿನಲ್ಲೇ ಹೀಗೆ ಅಂದುಕೊಂಡು ವೀರ ಶ್ರೀರಾಮನು ಬಿಸಿಯಾದ ದೀರ್ಘನಿಟ್ಟುಸಿರು ಬಿಡುತ್ತಾ ಲಕ್ಷ್ಮಣನ ಕಡೆಗೆ ನೋಡುತ್ತಾ ತನ್ನ ಸಮಯಾನುಕೂಲ ಹಿತಕರ ಮಾತನ್ನು ಹೇಳಿದನು.॥8॥
ಮೂಲಮ್ - 9
ಆಲಿಖಂತೀಮಿವಾಕಾಶಮುತ್ಥಿತಾಂ ಪಶ್ಯ ಲಕ್ಷ್ಮಣ ।
ಮನಸೇವ ಕೃತಾಂ ಲಂಕಾಂ ನಗಾಗ್ರೇ ವಿಶ್ವಕರ್ಮಣಾ ॥
ಅನುವಾದ
ಲಕ್ಷ್ಮಣ! ಈ ಲಂಕೆಯ ಕಡೆಗೆ ನೋಡಲ್ಲಿ, ಇದು ತನ್ನ ಎತ್ತರದಿಂದ ಆಕಾಶದಲ್ಲಿ ಗೆರೆ ಎಳೆದಂತೆ ಅನಿಸುತ್ತದೆ. ಹಿಂದೆ ವಿಶ್ವಕರ್ಮನು ತನ್ನ ಮನಸ್ಸಿನಿಂದಲೇ ಈ ಪರ್ವತ ಶಿಖರದಲ್ಲಿ ಲಂಕೆಯನ್ನು ನಿರ್ಮಿಸಿದಂತೆ ಕಂಡುಬರುತ್ತದೆ.॥9॥
(ಶ್ಲೋಕ - 10
ಮೂಲಮ್
ವಿಮಾನೈರ್ಬಹುಭಿರ್ಲಂಕಾ ಸಂಕೀರ್ಣಾ ರಚಿತಾ ಪುರಾ ।
ವಿಷ್ಣೋಃ ಪದಮಿವಾಕಾಶಂ ಛಾದಿತಂ ಪಾಂಡುಭಿರ್ಘನೈಃ ॥
ಅನುವಾದ
ಹಿಂದೆಯೇ ಈ ಪುರಿಯು ಅನೇಕ ಏಳು ಅಂತಸ್ತಿನ ಮನೆಗಳಿಂದ ತುಂಬಿದಂತೆ ಕಟ್ಟಿದ್ದರು. ಇದರ ಬೆಳ್ಳಗಿನ ಘನ ವಿಮಾನಾಕಾರ ಭವನಗಳಿಂದ ಭಗವಾನ್ ವಿಷ್ಣುವಿನ ಚರಣಸ್ಥಾನವಾದ ಆಕಾಶವನ್ನು ಮುಚ್ಚಿಬಿಟ್ಟಿವೆ.॥10॥
ಮೂಲಮ್ - 11
ಪುಷ್ಪಿತೈಃ ಶೋಭಿತಾ ಲಂಕಾ ವನೈಶ್ಚಿತ್ರರಥೋಪಮೈಃ ।
ನಾನಾಪತಗಸಂಘುಷ್ಟಲಪುಷ್ಪೋಪಗೈಃ ಶುಭೈಃ ॥
ಅನುವಾದ
ಹೂವುಗಳಿಂದ ತುಂಬಿದ ಚೈತ್ರರಥ ವನದಂತೆ ಸುಂದರ ಕಾನನಗಳಿಂದ ಲಂಕೆಯು ಶೋಭಿಸುತ್ತಿದೆ. ಆ ಕಾನನಗಳಲ್ಲಿ ನಾನಾ ರೀತಿಯ ಪಕ್ಷಿಗಳು ಕಲರವ ಮಾಡುತ್ತಿವೆ. ಹೂವು-ಹಣ್ಣುಗಳನ್ನು ಪಡೆದಿದ್ದರಿಂದ ಅವು ಬಹಳ ಸುಂದರವಾಗಿ ಕಾಣುತ್ತಿವೆ.॥11॥
ಮೂಲಮ್ - 12
ಪಶ್ಯ ಮತ್ತವಿಹಂಗಾನಿ ಪ್ರಲೀನಭ್ರಮರಾಣಿ ಚ ।
ಕೋಕಿಲಾಕುಲಷಂಡಾನಿ ದೋಧವೀತಿ ಶಿವೋಽನಿಲಃ ॥
ಅನುವಾದ
ಮತ್ತ ಪಕ್ಷಿಗಳು ಕೂಗುತ್ತಿರುವ, ದುಂಬಿಗಳು, ಎಲೆ ಮತ್ತು ಹೂವುಗಳಲ್ಲಿ ಲೀನವಾದ, ಪ್ರತಿಯೊಂದು ಖಂಡವು ಕೋಗಿಲೆಗಳ ಸಂಗೀತದಿಂದ ವ್ಯಾಪ್ತವಾದ, ಈ ವನಗಳನ್ನು ಪದೇ ಪದೇ ಕಂಪಿಸುತ್ತಾ ಈ ಶೀತಲ ಸುಖದ ವಾಯುವನ್ನು ನೋಡಲ್ಲ.॥12॥
ಮೂಲಮ್ - 13
ಇತಿ ದಾಶರಥೀ ರಾಮೋ ಲಕ್ಷ್ಮಣಂ ಸಮಭಾಷತ ।
ಬಲಂ ಚ ತತ್ರ ವಿಭಜನ್ ಶಾಸ್ತ್ರದೃಷ್ಟೇನ ಕರ್ಮಣಾ ॥
ಅನುವಾದ
ದಶರಥನಂದನ ಭಗವಾನ್ ಶ್ರೀರಾಮನು ಲಕ್ಷ್ಮಣನಲ್ಲಿ ಹೀಗೆ ಹೇಳಿ, ಯುದ್ಧ ಶಾಸ್ತ್ರದ ನಿಯಮಾನುಸಾರ ಸೇನೆಯನ್ನು ವಿಭಾಗಿಸಿದನು.॥13॥
ಮೂಲಮ್ - 14
ಶಶಾಸ ಕಪಿಸೇನಾಂ ತಾಂ ಬಲಾದಾದಾಯ ವೀರ್ಯವಾನ್ ।
ಅಂಗದಃ ಸಹ ನೀಲೇನ ತಿಷ್ಠೇದುರಸಿ ದುರ್ಜಯಃ ॥
ಅನುವಾದ
ಆಗ ಶ್ರೀರಾಮನು- ಈ ವಿಶಾಲ ಸೈನ್ಯ ಸಮೂಹದಲ್ಲಿ ದುರ್ಜಯನೂ ಪರಾಕ್ರಮಿಯೂ ಆದ ಅಂಗದನು ತನ್ನ ಸೈನ್ಯವನ್ನು ತೆಗೆದುಕೊಂಡು ನೀಲನೊಡನೆ ವ್ಯೂಹದ ಹೃದಯ ಸ್ಥಾನದಲ್ಲಿ ನಿಲ್ಲಲಿ ಎಂದು ಆಜ್ಞಾಪಿಸಿದನು.॥14॥
ಮೂಲಮ್ - 15
ತಿಷ್ಠೇದ್ ವಾನರವಾಹಿನ್ಯಾ ವಾನರೌಘ ಸಮಾವೃತಃ ।
ಆಶ್ರಿತೋ ದಕ್ಷಿಣಂ ಪಾರ್ಶ್ವ ಮೃಷಭೋ ನಾಮ ವಾನರಃ ॥
ಅನುವಾದ
ಹಾಗೆಯೇ ವಾನರನಾಯಕ ಋಷಭನು ತನ್ನ ಅಧೀನದಲ್ಲಿದ್ದ ಕಪಿ ಸಮುದಾಯದೊಂದಿಗೆ ವಾನರ ವಾಹಿನಿಯ ದಕ್ಷಿಣ ಪಾರ್ಶ್ವದಲ್ಲಿ ನಿಲ್ಲಲಿ.॥15॥
ಮೂಲಮ್ - 16
ಗಂಧ ಹಸ್ತೀವ ದುರ್ಧರ್ಷಸ್ತರಸ್ವೀ ಗಂಧಮಾದನಃ ।
ತಿಷ್ಠೇದ್ವಾನರವಾಹಿನ್ಯಾಃ ಸವ್ಯಂ ಪಾರ್ಶ್ವಮಧಿಷ್ಠಿತಃ ॥
ಅನುವಾದ
ಗಂಧಹಸ್ತಿಗೆ ಸಮಾನವಾದ ಪರಾಕ್ರಮವುಳ್ಳ, ದುರ್ಜಯ, ವೇಗಶಾಲಿ ಕಪಿಶ್ರೇಷ್ಠ ಗಂಧಮಾದನನು ವಾಹಿನಿಯ ಎಡ ಪಾರ್ಶ್ವದಲ್ಲಿ ನಿಲ್ಲಲಿ.॥16॥
ಮೂಲಮ್ - 17½
ಮೂಧ್ನಿ ಸ್ಥಾಸ್ಯಾಮ್ಯಹಂ ಯತ್ತೋ ಲಕ್ಷ್ಮಣೇನ ಸಮನ್ವಿತಃ ।
ಜಾಂಬವಾಂಶ್ಚ ಸುಷೇಣಶ್ಚ ವೇಗದರ್ಶೀ ಚ ವಾನರಃ ॥
ಋಕ್ಷಮುಖ್ಯಾ ಮಹಾತ್ಮಾನಃ ಕುಕ್ಷಿಂ ರಕ್ಷಂತು ತೇ ತ್ರಯಃ ।
ಅನುವಾದ
ನಾನು ಲಕ್ಷ್ಮಣನೊಡನೆ ವ್ಯೂಹದ ತಲೆಯ ಸ್ಥಾನದಲ್ಲಿ ನಿಲ್ಲುವೆನು. ಮಹಾತ್ಮರಾದ, ಕರಡಿಗಳ ಸೈನ್ಯದ ಮುಖ್ಯಸ್ಥನಾದ ಜಾಂಬವಂತ, ಸುಷೇಣ ಮತ್ತು ವೇಗದರ್ಶಿ ಇವರು ಮೂವರು ವ್ಯೂಹದ ಹೊಟ್ಟೆಯ ಭಾಗವನ್ನು ರಕ್ಷಿಸಲಿ.॥17½॥
ಮೂಲಮ್ - 18
ಜಘನಂ ಕಪಿಸೇನಾಯಾಃ ಕಪಿರಾಜೋಽಭಿರಕ್ಷತು ।
ಪಶ್ಚಾರ್ಧಮಿವ ಲೋಕಸ್ಯ ಪ್ರಚೇತಾಸ್ತೇಜಸಾ ವೃತಃ ॥
ಅನುವಾದ
ತೇಜಸ್ವೀ ವರುಣನು ಈ ಜಗತ್ತಿನ ಪಶ್ಚಿಮ ದಿಕ್ಕನ್ನು ರಕ್ಷಿಸುವಂತೆ ವಾನರರಾಜ ಸುಗ್ರೀವನು ವಾಹಿನಿಯ ಹಿಂಭಾಗದಲ್ಲಿ ರಕ್ಷಿಸುತ್ತಾ ಇರಲಿ.॥18॥
ಮೂಲಮ್ - 19
ಸುವಿಭಕ್ತಮಹಾವ್ಯೂಹಾ ಮಹಾವಾನರ ರಕ್ಷಿತಾ ।
ಅನೀಕಿನೀ ಸಾ ವಿಬಭೌ ಯಥಾದ್ಯೌಃ ಸಾಭ್ರಸಂಪ್ಲವಾ ॥
ಅನುವಾದ
ಹೀಗೆ ಸುಂದರವಾಗಿ ವಿಭಾಗಿಸಿದ ವ್ಯೂಹಕ್ರಮದಲ್ಲಿ ನಿಂತಿದ್ದ, ಮಹಾವಾನರರಿಂದ ರಕ್ಷಿಸಲ್ಪಡುತ್ತಿದ್ದ ಆ ವಾಹಿನಿಯು ಮೇಘಗಳಿಂದ ಆವರಿಸಿ ಆಕಾಶದಂತೆ ಕಾಣುತ್ತಿತ್ತು.॥19॥
ಮೂಲಮ್ - 20
ಪ್ರಗೃಹ್ಯ ಗಿರಿಶೃಂಗಾಣಿ ಮಹತಶ್ಚ ಮಹೀರುಹಾನ್ ।
ಆಸೇದುರ್ವಾನರಾ ಲಂಕಾಂ ಮಿಮರ್ದಯಿಷವೋ ರಣೇ ॥
ಅನುವಾದ
ವಾನರರು ಪರ್ವತ ಶಿಖರಗಳನ್ನು, ದೊಡ್ಡ ದೊಡ್ಡ ವೃಕ್ಷ ಗಳನ್ನೆತ್ತಿಕೊಂಡು ಯುದ್ಧಕ್ಕಾಗಿ ಲಂಕೆಯನ್ನು ಆಕ್ರಮಿಸಿದರು. ಅವರು ಆ ಪುರಿಯನ್ನು ಧೂಳೀಪಟವಾಗಿಸಲು ಇಚ್ಚಿಸುತ್ತಿದ್ದರು.॥20॥
ಮೂಲಮ್ - 21
ಶಿಖರೈರ್ವಿಕಿರಾಮೈನಾಂ ಲಂಕಾಂ ಮುಷ್ಟಿಭಿರೇವ ವಾ ।
ಇತಿ ಸ್ಮ ದಧಿರೇ ಸರ್ವೇ ಮನಾಂಸಿ ಹರಿಪುಂಗವಾಃ ॥
ಅನುವಾದ
ಎಲ್ಲ ವಾನರ ಯೂಥಪತಿಗಳು - ಲಂಕೆಯ ಮೇಲೆ ಪರ್ವತ ಶಿಖರಗಳ ಮಳೆಗರೆದು, ಲಂಕಾವಾಸಿಗಳನ್ನು ಮುಷ್ಟಿ ಗಳಿಂದ ಗುದ್ದಿ ಸಂಹರಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ್ದರು.॥21॥
ಮೂಲಮ್ - 22
ತತೋ ರಾಮೋ ಮಹಾತೇಜಾಃ ಸುಗ್ರೀವಮಿದಮಬ್ರವೀತ್ ।
ಸುವಿಭಕ್ತಾನಿ ಸೈನ್ಯಾನಿ ಶುಕ ಏಷ ವಿಮುಚ್ಯತಾಮ್ ॥
ಅನುವಾದ
ಬಳಿಕ ಮಹಾತೇಜಸ್ವೀ ರಾಮನು ಸುಗ್ರೀವನಲ್ಲಿ - ನಾವು ನಮ್ಮ ಸೈನ್ಯವನ್ನು ಸುಂದರವಾಗಿ ವಿಭಾಗಿಸಿ ವ್ಯೂಹ ಬದ್ಧರಾಗಿಸಿದ್ದೇವೆ; ಆದ್ದರಿಂದ ಈಗ ಈ ಶುಕನನ್ನು ಬಿಟ್ಟು ಬಿಡು ಎಂದು ಹೇಳಿದನು.॥22॥
ಮೂಲಮ್ - 23
ರಾಮಸ್ಯ ತು ವಚಃ ಶ್ರುತ್ವಾ ವಾನರೇಂದ್ರೋ ಮಹಾಬಲಃ ।
ಮೋಚಯಾಮಾಸ ತಂ ದೂತಂ ಶುಕಂ ರಾಮಸ್ಯ ಶಾಸನಾತ್ ॥
ಅನುವಾದ
ಶ್ರೀರಾಮಚಂದ್ರನ ಮಾತನ್ನು ಕೇಳಿ ಮಹಾಬಲಿ ವಾನರರಾಜನು ರಾಮನ ಆದೇಶದಂತೆ ರಾವಣದೂತನಾದ ಶುಕನನ್ನು ಬಿಡುಗಡೆಗೊಳಿಸಿದನು.॥23॥
ಮೂಲಮ್ - 24
ಮೋಚಿತೋ ರಾಮವಾಕ್ಯೇನ ವಾನರೈಶ್ಚ ನಿಪೀಡಿತಃ ।
ಶುಕಃ ಪರಮಸಂತ್ರಸ್ತೋ ರಕ್ಷೋಧಿಪಮುಪಾಗಮತ್ ॥
ಅನುವಾದ
ವಾನರರಿಂದ ಪೀಡಿಸಲ್ಪಟ್ಟ ಶುಕನು ಶ್ರೀರಾಮನ ಆಜ್ಞೆಯಂತೆ ಬಿಡುಗಡೆ ಹೊಂದಿ ಅತ್ಯಂತ ಭಯಗೊಂಡು ರಾಕ್ಷಸರಾಜ ರಾವಣನ ಬಳಿಗೆ ಹೋದನು.॥24॥
ಮೂಲಮ್ - 25½
ರಾವಣಃ ಪ್ರಹಸನ್ನೇವ ಶುಕಂ ವಾಕ್ಯಮುವಾಚ ಹ ।
ಕಿಮಿಮೌ ತೇ ಸಿತೌ ಪಕ್ಷೌ ಲೂನಪಕ್ಷಶ್ಚ ದೃಶ್ಯಸೇ ॥
ಕಚ್ಚಿನ್ನಾನೇಕಚಿತ್ತಾನಾಂ ತೇಷಾಂ ತ್ವಂ ವಶಮಾಗತಃ ।
ಅನುವಾದ
ಆಗ ರಾವಣನು ನಗುತ್ತಾ ಶುಕನಲ್ಲಿ ಕೇಳುತ್ತಾನೆ - ಶುಕನೇ! ಇದೇನಿದು? ನಿನ್ನ ಎರಡೂ ರೆಕ್ಕೆಗಳು ಕತ್ತರಿಸಲ್ಪ ಟ್ಟಂತೆ ಕಾಣುತ್ತಿವೆ. ಚಂಚಲಚಿತ್ತರಾದ ಆ ಕಪಿಗಳಿಗೆ ನೀನು ಬಂದಿಯಾಗಿಲ್ಲವಲ್ಲ.॥25॥
ಮೂಲಮ್ - 26
ತತಃ ಸ ಭಯಸಂವಿಗ್ನಸ್ತೇನ ರಾಜ್ಞಾಭಿಚೋದಿತಃ ।
ವಚನಂ ಪ್ರತ್ಯುವಾಚೇದಂ ರಾಕ್ಷಸಾಧಿಪಮುತ್ತಮಮ್ ॥
ಅನುವಾದ
ರಾಜಾ ರಾವಣನು ಹೀಗೆ ಕೇಳಿದಾಗ ಭಯದಿಂದ ಗಾಬರಿಗೊಂಡ ಶುಕನು ರಾಕ್ಷಸಾಧಿಪನಲ್ಲಿ ಹೀಗೆ ಹೇಳಿದನು.॥26॥
ಮೂಲಮ್ - 27
ಸಾಗರಸ್ಯೋತ್ತರೇ ತೀರೇಽಬ್ರುವಂ ತೇ ವಚನಂ ತಥಾ ।
ಯಥಾ ಸಂದೇಶಮಕ್ಲಿಷ್ಟಂ ಸಾಂತ್ವಯನ್ಶ್ಲಕ್ಷ್ಣಯಾ ಗಿರಾ ॥
ಅನುವಾದ
ಮಹಾರಾಜಾ! ನಾನು ಸಮುದ್ರದ ಉತ್ತರ ತಟಕ್ಕೆ ಹೋಗಿ ನಿಮ್ಮ ಸಂದೇಶವನ್ನು ಸ್ಪಷ್ಟ ಶಬ್ದಗಳಲ್ಲಿ, ಮಧುರ ವಾಣಿಯಿಂದ ಸಾಂತ್ವನ ನೀಡುತ್ತಾ ಹೇಳಿದೆ.॥27॥
ಮೂಲಮ್ - 28
ಕ್ರುದ್ಧೈಸ್ತೈರಹಮುತ್ಪ್ಲುತ್ಯ ದೃಷ್ಟಮಾತ್ರಃ ಪ್ಲವಂಗಮೈಃ ।
ಗೃಹಿತೋಽಸ್ಮ್ಯಪಿ ಚಾರಬ್ಧೋ ಹಂತುಂ ಲೋಪ್ತುಂ ಚಮುಷ್ಟಿ ಭಿಃ ॥
ಅನುವಾದ
ಆದರೆ ನನ್ನನ್ನು ನೋಡುತ್ತಲೇ ಕಂಪಿತರಾದ ವಾನರರು ನೆಗೆದು ನನ್ನನ್ನು ಹಿಡಿದುಕೊಂಡು, ಮುಷ್ಠಿಗಳಿಂದ ಪ್ರಹರಿಸಲು ಹಾಗೂ ರೆಕ್ಕೆಗಳನ್ನು ಕೀಳಲು ತೊಡಗಿದರು.॥28॥
ಮೂಲಮ್ - 29
ನ ತೇ ಸಂಭಾಷಿತುಂ ಶಕ್ಯಾಃ ಸಂಪ್ರಶ್ನೋಽತ್ರ ನ ವಿದ್ಯತೇ ।
ಪ್ರಕೃತ್ಯಾ ಕೋಪನಾಸ್ತೀಕ್ಷ್ಣಾ ವಾನರಾ ರಾಕ್ಷಸಾಧಿಪ ॥
ಅನುವಾದ
ರಾಕ್ಷಸ ರಾಜನೇ ! ಆ ವಾನರರು ಸ್ವಭಾವತಃ ಕ್ರೋಧಿಗಳೂ ಮತ್ತು ಕ್ರೂರಿಗಳೂ ಆಗಿದ್ದಾರೆ. ಅವರಲ್ಲಿ ಮಾತನ್ನಾಡಲೂ ಸಾಧ್ಯವಿಲ್ಲ. ಆದುದರಿಂದ ‘ನೀವೇಕೆ ನನ್ನನ್ನು ಹೊಡೆಯುತ್ತಿರುವಿರಿ’ ಎಂದು ಅವರನ್ನು ಕೇಳುವಷ್ಟು ಅವಕಾಶವೇ ಇರಲಿಲ್ಲ.॥29॥
ಮೂಲಮ್ - 30
ಸ ಚ ಹಂತಾ ವಿರಾಧಸ್ಯ ಕಬಂಧಸ್ಯ ಖರಸ್ಯ ಚ ।
ಸುಗ್ರೀವ ಸಹಿತೋ ರಾಮಃ ಸೀತಾಯಾಃ ಪದಮಾಗತಃ ॥
ಅನುವಾದ
ಯಾರು ವಿರಾಧ-ಕಬಂಧ-ಖರನನ್ನು ವಧಿಸಿರುವನೋ, ಆ ಶ್ರೀರಾಮನು ಸುಗ್ರೀವನೊಂದಿಗೆ ಸೀತೆಯು ಇಲ್ಲಿರುವಳೆಂದು ತಿಳಿದು, ಆಕೆಯ ಉದ್ಧಾರಕ್ಕಾಗಿ ಬಂದಿರುವನು.॥30॥
ಮೂಲಮ್ - 31
ಸ ಕೃತ್ವಾ ಸಾಗರೇ ಸೇತುಂ ತೀರ್ತ್ವಾ ಚ ಲವಣೋದಧಿಮ್ ।
ಏಷ ರಕ್ಷಾಂಸಿ ನಿರ್ಧೂಯ ಧನ್ವೀ ತಿಷ್ಠತಿ ರಾಘವಃ ॥
ಅನುವಾದ
ಆ ರಘುನಾಥನು ಸಮುದ್ರದ ಮೇಲೆ ಸೇತುವೆ ಕಟ್ಟಿ ಲವಣಾಂಬುಧಿಯನ್ನು ದಾಟಿ, ರಾಕ್ಷಸರನ್ನು ಹುಲ್ಲುಕಡ್ಡಿಗಳಂತೆ ತಿಳಿದು ಧನುಷ್ಪಾಣಿಯಾಗಿ ಇಲ್ಲಿಗೆ ಬಂದು ನಿಂತಿರುವನು.॥31॥
ಮೂಲಮ್ - 32
ಋಕ್ಷವಾನರಸಂಘಾನಾಮನೀಕಾನಿ ಸಹಸ್ರಶಃ ।
ಗಿರಿಮೇಘ ನಿಕಾಶಾನಾಂ ಛಾದಯಂತಿ ವಸುಂಧರಾಮ್ ॥
ಅನುವಾದ
ಪರ್ವತೋಪಮ, ಮೇಘಗಳಂತೆ ವಿಶಾಲಕಾಯರಾದ ಕರಡಿ ಮತ್ತು ವಾನರ ಸಮೂಹವು ಸಾವಿರಾರು ಲಕ್ಷ ಸೈನಿಕರು ಸಮುದ್ರತೀರದ ಪ್ರದೇಶವನ್ನು ಮುಚ್ಚಿಬಿಟ್ಟಿದ್ದಾರೆ.॥32॥
ಮೂಲಮ್ - 33
ರಾಕ್ಷಸಾನಾಂ ಬಲೌಘಸ್ಯ ವಾನರೇಂದ್ರಬಲಸ್ಯ ಚ ।
ನೈತಯೋರ್ವಿದ್ಯತೇ ಸಂಧಿರ್ದೇವ ದಾನವಯೋರಿವ ॥
ಅನುವಾದ
ದೇವತೆಗಳು ಮತ್ತು ದಾನವರಲ್ಲಿ ಹೊಂದಿಕೆಯಾಗುವುದು ಅಸಂಭವದಂತೆ ರಾಕ್ಷಸರಿಗೆ ಹಾಗೂ ವಾನರರಾಜ ಸುಗ್ರೀವನ ಸೈನಿಕರಲ್ಲಿ ಸಂಧಿಯಾಗಲಾರದು.॥33॥
ಮೂಲಮ್ - 34
ಪುರಾ ಪ್ರಾಕಾರಮಾಯಾಂತಿ ಕ್ಷಿಪ್ರಮೇಕತರಂ ಕುರು ।
ಸೀತಾಂ ವಾಸ್ಮೈ ಪ್ರಯಚ್ಛಾಶು ಯುದ್ಧಂ ವಾಪಿ ಪ್ರದೀಯತಾಮ್ ॥
ಅನುವಾದ
ಆದ್ದರಿಂದ ಅವರು ಲಂಕೆಯ ಪ್ರಾಕಾರಗಳನ್ನು ಮುತ್ತುವ ಮೊದಲೇ ನೀವು ಬೇಗನೇ ಒಂದೋ ಕೂಡಲೇ ಅವನಿಗೆ ಸೀತೆಯನ್ನು ಹಿಂದಿರುಗಿಸಿರಿ, ಅಥವಾ ಎದುರಿಗೆ ನಿಂತು ಯುದ್ಧಮಾಡಿರಿ.॥34॥
ಮೂಲಮ್ - 35
ಶುಕಸ್ಯ ವಚನಂ ಶ್ರುತ್ವಾ ರಾವಣೋ ವಾಕ್ಯಮಬ್ರವೀತ್ ।
ರೋಷ ಸಂರಕ್ತನಯನೋ ನಿರ್ದಹನ್ನಿವ ಚಕ್ಷುಷಾ ॥
ಅನುವಾದ
ಶುಕನ ಮಾತನ್ನು ಕೇಳಿ ರಾವಣನ ಕಣ್ಣುಗಳು ರೋಷದಿಂದ ಕೆಂಪಾದವು. ಅವನು ತನ್ನ ದೃಷ್ಟಿಯಿಂದಲೇ ಶುಕನನ್ನು ಸುಟ್ಟುಬಿಡುವನೋ ಎಂಬಂತೆ ಕಣ್ಣುಬಿಟ್ಟು ನೋಡುತ್ತಾ ಹೇಳಿದನು.॥35॥
ಮೂಲಮ್ - 36
ಯದಿ ಮಾಂ ಪ್ರತಿ ಯುದ್ಧೇರನ್ ದೇವಗಂಧರ್ವದಾನವಾಃ ।
ನೈವ ಸೀತಾಂ ಪ್ರದಾಸ್ಯಾಮಿ ಸರ್ವಲೋಕಭಯಾದಪಿ ॥
ಅನುವಾದ
ದೇವತೆಗಳು, ಗಂಧರ್ವರು, ದಾನವರು ನನ್ನಲ್ಲಿ ಯುದ್ಧಮಾಡಲು ಸಿದ್ಧರಾದರೂ, ಇಡೀ ಜಗತ್ತಿನ ಜನರು ನನ್ನನ್ನು ಹೆದರಿಸಿದರೂ, ನಾನು ಸೀತೆಯನ್ನು ಮರಳಿ ಕೊಡಲಾರೆ.॥36॥
ಮೂಲಮ್ - 37
ಕದಾ ಸಮಭಿಧಾವಂತಿ ಮಾಮಕಾ ರಾಘವಂ ಶರಾಃ ।
ವಸಂತೇ ಪುಷ್ಪಿತಂ ಮತ್ತಾ ಭ್ರಮರಾ ಇವ ಪಾದಪಮ್ ॥
ಅನುವಾದ
ಮತ್ತ ಭ್ರಮರಗಳು ವಸಂತಋತುವಿನಲ್ಲಿ ಹೂವುಗಳು ತುಂಬಿದ ಮರದ ಮೇಲೆ ಆಕ್ರಮಿಸಿ ದಂತೆ, ನನ್ನ ಬಾಣಗಳು ಆ ರಘುವಂಶಿಯರ ಮೇಲೆ ಆಕ್ರಮಿಸುವವು.॥37॥
ಮೂಲಮ್ - 38
ಕದಾ ಶೋಣಿತದಿಗ್ಧಾಂಗಂ ದೀಪ್ತೈಃ ಕಾರ್ಮುಕವಿಚ್ಯುತೈಃ ।
ಶರೈರಾದೀಪಯಿಷ್ಯಾಮಿ ಉಲ್ಕಾಭಿರಿವ ಕುಂಜರಮ್ ॥
ಅನುವಾದ
ನನ್ನ ಧನುಸ್ಸಿನಿಂದ ಚಿಮ್ಮಿದ ತೇಜಸ್ವೀ ಬಾಣಗಳಿಂದ ಗಾಯಗೊಂಡು ರಾಮನ ಶರೀರ ರಕ್ತದಿಂದ ತೋಯ್ದು, ಉಲ್ಕೆಗಳಿಂದ ಆನೆಯನ್ನು ಸುಟ್ಟು ಹಾಕುವಂತೆ ನಾನು ರಾಮನನ್ನು ಬಾಣಗಳಿಂದ ದಗ್ಧಗೊಳಿಸುವ ಸಮಯವನ್ನು ಎದುರು ನೋಡುತ್ತಿದ್ದೇನೆ.॥38॥
ಮೂಲಮ್ - 39
ತಚ್ಚಾಸ್ಯ ಬಲಮಾದಾಸ್ಯೇ ಬಲೇನ ಮಹತಾ ವೃತಃ ।
ಜ್ಯೋತಿಷಾಮಿವ ಸರ್ವೇಷಾಂ ಪ್ರಭಾಮುದ್ಯನ್ ದಿವಾಕರಃ ॥
ಅನುವಾದ
ಸೂರ್ಯನು ತನ್ನ ಉದಯದೊಂದಿಗೆ ಸಮಸ್ತ ನಕ್ಷತ್ರಗಳ ಪ್ರಭೆಯನ್ನು ಇಲ್ಲವಾಗಿಸುವಂತೆಯೇ, ನಾನು ವಿಶಾಲ ಸೈನ್ಯದೊಂದಿಗೆ ರಣಭೂಮಿಯಲ್ಲಿ ನಿಂತಿರುವ ರಾಮನ ಸಮಸ್ತ ವಾನರ ಸೈನ್ಯವನ್ನು ನಿರ್ನಾಮ ಮಾಡುವೆನು.॥39॥
ಮೂಲಮ್ - 40
ಸಾಗರಸ್ಯೇವ ಮೇ ವೇಗೋ ಮಾರುತಸ್ಯೇವ ಮೇ ಬಲಮ್ ।
ನ ಚ ದಾಶರಥಿರ್ವೇದ ತೇನ ಮಾಂ ಯೋದ್ಧುಮಿಚ್ಛತಿ ॥
ಅನುವಾದ
ದಶರಥನಂದನ ರಾಮನು ಸಮರಭೂಮಿಯಲ್ಲಿ ಸಮುದ್ರದಂತಹ ನನ್ನ ವೇಗ ಮತ್ತು ವಾಯುವಿನಂತೇ ನನ್ನ ಬಲವನ್ನು ಇನ್ನೂ ಅನುಭವಿಸಲಿಲ್ಲ. ಅದಕ್ಕಾಗಿ ಅವನು ನನ್ನೊಂದಿಗೆ ಯುದ್ಧ ಮಾಡಲು ಬಯಸುತ್ತಿರುವನು.॥40॥
ಮೂಲಮ್ - 41
ನ ಮೇ ತೂಣೀಶಯಾನ್ ಬಾಣಾನ್ ಸವಿಷಾನಿವ ಪನ್ನಗಾನ್ ।
ರಾಮಃ ಪಶ್ಯತಿ ಸಂಗ್ರಾಮೇ ತೇನ ಮಾಂ ಯೋದ್ಧು ಮಿಚ್ಛತಿ ॥
ಅನುವಾದ
ನನ್ನ ಬತ್ತಳಿಕೆಯಲ್ಲಿ ವಿಷಧರ ಸರ್ಪದಂತಹ ಭಯಂಕರ ಬಾಣಗಳು ಮಲಗಿವೆ. ರಾಮನು ಸಂಗ್ರಾಮದಲ್ಲಿ ಆ ಬಾಣಗಳನ್ನು ನೋಡಿಯೇ ಇಲ್ಲ; ಆದರಿಂದ ಅವನು ನನ್ನೊಂದಿಗೆ ಕಾದಾಡಲು ಬಯಸುತ್ತಿರುವನು.॥41॥
ಮೂಲಮ್ - 42
ನ ಜಾನಾತಿ ಪುರಾ ವೀರ್ಯಂ ಮಮ ಯುದ್ಧೇ ಸ ರಾಘವಃ ।
ಮಮ ಚಾಪಮಯೀಂ ವೀಣಾಂ ಶರಕೋಣೈಃ ಪ್ರವಾದಿತಾಮ್ ॥
ಮೂಲಮ್ - 43
ಜ್ಯಾಶಬ್ದ ತುಮುಲಾಂ ಘೋರಾಮಾರ್ತಗೀತ ಮಹಾಸ್ವನಾಮ್ ।
ನಾರಾಚ ತಲಸನ್ನಾದಾಂ ನದೀಮಹಿತವಾಹಿನೀಮ್ ।
ಅವಗಾಹ್ಯ ಮಹಾರಂಗಂ ವಾದಯಿಷ್ಯಾಮ್ಯಹಂ ರಣೇ ॥
ಅನುವಾದ
ಮೊದಲು ಎಂದೂ ಯುದ್ಧದಲ್ಲಿ ರಾಮನು ನನ್ನ ಬಲ-ಪರಾಕ್ರಮವನ್ನು ಎದುರಿಸಲಿಲ್ಲ, ಇದರಿಂದಲೇ ಅವನು ನನ್ನೊಂದಿಗೆ ಯುದ್ಧಮಾಡಲು ಬಯಸುತ್ತಿರುವನು. ನನ್ನ ಧನುಸ್ಸು ಒಂದು ಸುಂದರ ವೀಣೆಯಾಗಿದೆ, ಅದನ್ನು ಬಾಣಗಳ ತುದಿಗಳಿಂದ ನುಡಿಸಲಾಗುತ್ತದೆ. ಅದರ ನೇಣಿನ ಟಂಕಾರ ಧ್ವನಿಯೇ ಭಯಂಕರ ಸ್ವರಲಹರಿಯಾಗಿದೆ. ಆರ್ತರ ಚೀತ್ಕಾರ ಹಾಗೂ ಕೂಗು ಅದರಲ್ಲಿ ಉಚ್ಚಸ್ವರದಲ್ಲಿ ಹಾಡುವ ಗೀತೆಯಾಗಿದೆ. ನಾರಾಚಗಳನ್ನು ಬಿಡುವಾಗ ಆಗುವ ಚಟ-ಚಟ ಶಬ್ದವೇ ಕೈಯಿಂದ ಹಾಕುವ ತಾಳವಾಗಿದೆ. ನದಿಯಂತೆ ಹರಿಯುವ ಶತ್ರುಗಳ ವಾಹಿನಿಯೇ ಆ ಸಂಗೀತೋತ್ಸವದ ವಿಶಾಲ ರಂಗಭೂಮಿಯಂತಿದೆ. ನಾನು ಆ ಸಮರಾಂಗಣದಲ್ಲಿ ಪ್ರವೇಶಿಸಿ ಆ ಭಯಂಕರ ವೀಣೆಯನ್ನು ನುಡಿಸುವೆನು..॥42-43॥
ಮೂಲಮ್ - 44
ನ ವಾಸವೇನಾಪಿ ಸಹಸ್ರ ಚಕ್ಷುಷಾ
ಯುದ್ಧೇಽಸ್ಮಿ ಶಕ್ಯೋ ವರುಣೇನ ವಾ ಸ್ವಯಮ್ ।
ಯಮೇನ ವಾ ಧರ್ಷಯಿತುಂ ಶರಾಗ್ನಿನಾ
ಮಹಾಹವೇ ವೈಶ್ರವಣೇನ ವಾ ಪುನಃ ॥
ಅನುವಾದ
ಮಹಾಸಂಗ್ರಾಮದಲ್ಲಿ ಸಹಸ್ರನೇತ್ರಧಾರೀ ಇಂದ್ರನು ಅಥವಾ ಸಾಕ್ಷಾತ್ ವರುಣನು, ಇಲ್ಲವೇ ಯಮರಾಜನು ಅಥವಾ ನನ್ನ ಅಣ್ಣ ಕುಬೇರನೇ ಬಂದರೂ ತಮ್ಮ ಬಾಣಾಗ್ನಿಯಿಂದ ನನ್ನನ್ನು ಸೋಲಿಸಲಾರರು.॥44॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥24॥