०२२ सेतुबन्धनम्

वाचनम्
ಭಾಗಸೂಚನಾ

ಸಮುದ್ರರಾಜನ ಸಲಹೆಯಂತೆ ನಲನಿಂದ ಸಮುದ್ರದ ಮೇಲೆ ನೂರು ಯೋಜನಗಳ ಉದ್ದದ ಸೇತುವೆಯ ನಿರ್ಮಾಣ, ಅದರ ಮೂಲಕ ಶ್ರೀರಾಮನೇ ಮೊದಲಾದವರು ಸಮುದ್ರವನ್ನು ದಾಟಿ ಆಚೆಯ ದಡದಲ್ಲಿ ಬೀಡುಬಿಟ್ಟದು

ಮೂಲಮ್ - 1

ಅಥೋವಾಚ ರಘುಶ್ರೇಷ್ಠಃ ಸಾಗರಂ ದಾರುಣಂ ವಚಃ ।
ಅದ್ಯ ತ್ವಾಂ ಶೋಷಯಿಷ್ಯಾಮಿ ಸ ಪಾತಾಲಂ ಮಹಾರ್ಣವ ॥

ಅನುವಾದ

ಆಗ ರಘುಕುಲತಿಲಕ ಶ್ರೀರಾಮನು ಸಮುದ್ರನಲ್ಲಿ ಕಠೋರ ಶಬ್ದಗಳಲ್ಲಿ ಹೇಳಿದನು- ಮಹಾಸಾಗರವೇ! ಇಂದು ನಿನ್ನನ್ನು ಪಾತಾಳ ಸಹಿತ ನಿನ್ನನ್ನು ಒಣಗಿಸಿ ಬಿಡುವೆನು.॥1॥

ಮೂಲಮ್ - 2

ಶರನಿರ್ದಗ್ಧತೋಯಸ್ಯ ಪರಿಶುಷ್ಕಸ್ಯ ಸಾಗರ ।
ಮಯಾ ನಿಹತಸತ್ತ್ವಸ್ಯ ಪಾಂಸುರುತ್ಪದ್ಯತೇ ಮಹಾನ್ ॥

ಅನುವಾದ

ಸಾಗರನೇ! ನನ್ನ ಬಾಣಗಳಿಂದ ನಿನ್ನ ಎಲ್ಲ ಜಲರಾಶಿಯು ಸುಟ್ಟು ಹೋಗಿ ನೀನು ಒಣಗಿ ಹೋಗುವೆ. ನಿನ್ನೊಳಗೆ ವಾಸಿಸುವ ಎಲ್ಲ ಜೀವಿಗಳು ನಾಶವಾಗಿ ಹೋಗುವುದು. ಆ ಸ್ಥಿತಿಯಲ್ಲಿ ನಿನ್ನ ನೀರಿನ ಸ್ಥಾನದಲ್ಲಿ ವಿಶಾಲ ಮರಳರಾಶಿಯು ತುಂಬಿಕೊಳ್ಳುತ್ತದೆ.॥2॥

ಮೂಲಮ್ - 3

ಮತ್ಕಾರ್ಮುಕವಿಸೃಷ್ಟೇನ ಶರವರ್ಷೇಣ ಸಾಗರ ।
ಪಾರಂ ತೀರಂ ಗಮಿಷ್ಯಂತಿ ಪದ್ಭಿರೇವ ಪ್ಲವಂಗಮಾಃ ॥

ಅನುವಾದ

ಸಮುದ್ರವೇ! ಧನುಸ್ಸಿನಿಂದ ನಾನು ಮಾಡಿದ ಬಾಣದ ಮಳೆಯಿಂದ ಇಂತಹ ಸ್ಥಿತಿ ಉಂಟಾದಾಗ ವಾನರರು ಕಾಲ್ನಡಿಗೆಯಿಂದಲೇ ಆಚೆಯ ದಡವನ್ನು ಸೇರುವರು.॥.॥

ಮೂಲಮ್ - 4

ವಿಚಿನ್ವನ್ನಾಭಿಜಾನಾಸಿ ಪೌರುಷಂ ನಾಪಿ ವಿಕ್ರಮಮ್ ।
ದಾನವಾಲಯ ಸಂತಾಪಂ ಮತ್ತೋ ನಾಮ ಗಮಿಷ್ಯಸಿ ॥

ಅನುವಾದ

ದಾನವರ ನಿವಾಸ ಸ್ಥಾನವೇ! ನೀನು ಕೇವಲ ನಾಲ್ಕು ಕಡೆಗಳಿಂದ ಹರಿದು ಬಂದ ಜಲರಾಶಿಯನ್ನು ಸಂಗ್ರಹಿಸುವೆ. ನಿನಗೆ ನನ್ನ ಬಲ-ಪರಾಕ್ರಮದ ಅರಿವಿಲ್ಲ. ಆದರೂ ಈ ಉಪೇಕ್ಷೆಯಿಂದಾಗಿ ನಿನಗೆ ಭಾರೀ ಸಂತಾಪ ಪ್ರಾಪ್ತವಾಗುವುದೆಂದು ನೆನಪಿಡು.॥4॥

ಮೂಲಮ್ - 5

ಬ್ರಾಹ್ಮೇಣಾಸ್ತ್ರೇಣ ಸಂಯೋಜ್ಯ ಬ್ರಹ್ಮದಂಡ ನಿಭಂ ಶರಮ್ ।
ಸಂಯೋಜ್ಯ ಧನುಷಿ ಶ್ರೇಷ್ಠೇ ವಿಚಕರ್ಷ ಮಹಾಬಲಃ ॥

ಅನುವಾದ

ಹೀಗೆ ಹೇಳಿ ಮಹಾಬಲಿ ಶ್ರೀರಾಮನು ಬ್ರಹ್ಮದಂಡದಂತಹ ಒಂದು ಭಯಂಕರ ಬಾಣವನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ತನ್ನ ಶ್ರೇಷ್ಠ ಧನುಸ್ಸಿಗೆ ಹೂಡಿದನು.॥5॥

ಮೂಲಮ್ - 6

ತಸ್ಮಿನ್ ವಿಕೃಷ್ಟೇ ಸಹಸಾ ರಾಘವೇಣ ಶರಾಸನೇ ।
ರೋದಸೀ ಸಂಪಪಾಲೇವ ಪರ್ವತಾಶ್ಚ ಚಕಂಪಿರೇ ॥

ಅನುವಾದ

ಶ್ರೀರಘುನಾಥನು ಕೂಡಲೇ ಆ ಧನುಸ್ಸನ್ನು ಸೆಳೆಯುತ್ತಲೇ ಭೂಮಿ-ಆಕಾಶಗಳು ಸೀಳಿ ಹೋಗುವವೋ ಎಂಬಂತೆ ಕಾಣುತ್ತಿತ್ತು. ಪರ್ವತಗಳು ನಡುಗಿದವು.॥6॥

ಮೂಲಮ್ - 7

ತಮಶ್ಚ ಲೋಕಮಾವವ್ರೇ ದಿಶಶ್ಚ ನ ಚಕಾಶಿರೇ ।
ಪರಿಚುಕ್ಷುಭಿರೇ ಚಾಶು ಸರಾಂಸಿ ಸರಿತಸ್ತಥಾ ॥

ಅನುವಾದ

ಪ್ರಪಂಚದ ಎಲ್ಲೆಡೆ ಅಂಧಕಾರ ಆವರಿಸಿತು. ಯಾವ ದಿಕ್ಕಿನ ಜ್ಞಾನವೂ ಉಳಿಯಲಿಲ್ಲ. ನದಿಗಳೂ, ಸರೋವರಗಳೂ ಅಲ್ಲೋಲಕಲ್ಲೋಲವಾದುವು.॥7॥

ಮೂಲಮ್ - 8

ತಿರ್ಯಕ್ ಚ ಸಹನಕ್ಷತ್ರೈಃ ಸಂಗತೌ ಚಂದ್ರಭಾಸ್ಕರೌ ।
ಭಾಸ್ಕರಾಂಶುಭಿರಾದೀಪ್ತಂ ತಮಸಾ ಚ ಸಮಾವೃತಮ್ ॥

ಅನುವಾದ

ಸೂರ್ಯ-ಚಂದ್ರರು ನಕ್ಷತ್ರಗಳೊಂದಿಗೆ ಅಡ್ಡಡ್ಡವಾಗಿ ಸಂಚರಿಸ ತೊಡಗಿದವು. ಸೂರ್ಯ ಕಿರಣಗಳಿಂದ ಪ್ರಕಾಶಿತವಾಗಿದ್ದರೂ ಆಕಾಶವು ಅಂಧಕಾರದಿಂದ ತುಂಬಿಹೋಯಿತು.॥8॥

ಮೂಲಮ್ - 9

ಪ್ರಚಕಾಶೇ ತದಾಽಽಕಾಶಮುಲ್ಕಾಶತವಿದೀಪಿತಮ್ ।
ಅಂತರಿಕ್ಷಾಚ್ಛ ನಿರ್ಘಾತಾ ನಿರ್ಜಗ್ಮು ರತುಲಸ್ವನಾಃ ॥

ಅನುವಾದ

ಆಗ ಆಕಾಶದಲ್ಲಿ ನೂರಾರು ಉಲ್ಕೆಗಳು ಪ್ರಜ್ವಲಿತವಾಗಿ ಅದನ್ನು ಪ್ರಕಾಶಿಸತೊಡಗಿದವು. ಅಂತರಿಕ್ಷದಲ್ಲಿ ಘೋರ ಶಬ್ದದೊಂದಿಗೆ ಸಿಡಿಲುಗಳು ಬಡಿಯತೊಡಗಿತು.॥9॥

ಮೂಲಮ್ - 10½

ವಪುಃ ಪ್ರಕರ್ಷೇಣ ವವುರ್ದಿವ್ಯಮಾರುತ ಪಂಕ್ತಯಃ ।
ಬಭಂಜ ಚ ತದಾ ವೃಕ್ಷಾಂಜಲದಾನುದ್ವಹನ್ಮುಹುಃ ॥
ಅರುಜಂಶ್ಚೈವ ಶೈಲಾಗ್ರಾನ್ ಶಿಖರಾಣಿ ಪ್ರಭಂಜ ಚ ।

ಅನುವಾದ

ಪರಿವಹವೇ ಮೊದಲಾದ ವಾಯು ಸಮೂಹಗಳು ವೇಗವಾಗಿ ಬೀಸತೊಡಗಿದವು. ಅವು ಮೋಡಗಳನ್ನು ಚೆಲ್ಲಾಪಿಲ್ಲಿಯಾಗಿಸಿ, ಪದೇಪದೇ ಮರಗಗಳನ್ನು ಮುರಿದು, ದೊಡ್ಡ ದೊಡ್ಡ ಪರ್ವತಗಳಿಗೆ ಢಿಕ್ಕಿಹೊಡೆದು, ಪರ್ವತ ಶಿಖರಗಳನ್ನು ಕೆಡಹಿ ಬೀಳಿಸತೊಡಗಿತು.॥10½॥

ಮೂಲಮ್ - 11

ದಿವಿ ಚ ಸ್ಮ ಮಹಾಮೇಘಾಃ ಸಂಹತಾಹ ಸಮಹಾಸ್ವನಾಃ ॥
(ಶ್ಲೋಕ - 12½)
ಮುಮುಚುರ್ವೈದ್ಯುತಾನಗ್ನೀಂಸ್ತೇ ಮಹಾಶನಯಸ್ತದಾ ।
ಯಾನಿ ಭೂತಾನಿ ದೃಶ್ಯಾನಿ ಚುಕ್ರುಶುಶ್ಚಾಶನೇಃ ಸಮಮ್ ॥
ಅದೃಶ್ಯಾನಿ ಚ ಭೂತಾನಿ ಮುಮುಚುರ್ಭೈರವಸ್ವನಮ್ ।

ಅನುವಾದ

ಆಕಾಶದಲ್ಲಿ ಮಹಾವೇಗಶಾಲೀ ವಿಶಾಲ ಸಿಡಿಲಿನ ಭಾರೀ ಶಬ್ದದಿಂದ ಕೂಡಿದ್ದ ಮೇಘಗಳು ಪರಸ್ಪರ ಸಂಘರ್ಷಿಸಿ ವೈದ್ಯುತಾಗ್ನಿಯನ್ನು ಸುರಿಯತೊಡಗಿತು. ಕಂಡುಬರುವ ಅದೃಶ್ಯವಾಗಿದ್ದ ಪ್ರಾಣಿಗಳೆಲ್ಲವೂ ಆ ಸಿಡಿಲಿನ ಶಬ್ದಕ್ಕೆ ಅನುರೂಪವಾಗಿ ಭಯಂಕರ ಶಬ್ದ ಮಾಡತೊಡಗಿದವು.॥11-12½॥

ಮೂಲಮ್ - 13½

ಶಿಶ್ಯಿರೇ ಚಾಪಿ ಭೂತಾನಿ ಸಂತ್ರಸ್ತಾನ್ಯುದ್ವಿಜಂತಿ ಚ ॥
ಸಂಪ್ರವಿವ್ಯಥಿರೇ ಚಾಪಿ ನ ಚ ಪಸ್ಪಂದಿರೇ ಭಯಾತ್ ।

ಅನುವಾದ

ಆ ಪ್ರಾಣಿಗಳಲ್ಲಿ ಎಷ್ಟೋ ಸೊರಗಿ, ಸೊಪ್ಪಾಗಿ ಭೂಮಿಯಲ್ಲಿ ಮಲಗಿಬಿಟ್ಟವು. ಎಷ್ಟೋ ಭಯದಿಂದ ಉದ್ವಿಗ್ನರಾದವು. ಕೆಲವುಗಳು ವ್ಯಥೆಯಿಂದ ಕಳವಳಗೊಂಡವು. ಎಷ್ಟೋ ಪ್ರಾಣಿಗಳು ಭಯಗೊಂಡು ಜಡದಂತಾದುವು.॥13½॥

ಮೂಲಮ್ - 14

ಸಹ ಭೂತೈಃ ಸತೋಯೋರ್ಮಿಃ ಸನಾಗಃ ಸಹ ರಾಕ್ಷಸಃ ॥

ಮೂಲಮ್ - 15

ಸಹಸಾಭೂತ್ತತೋ ವೇಗಾದ್ ಭೀಮವೇಗೋ ಮಹೋದಧಿಃ ।
ಯೋಜನಂ ವ್ಯತಿಚಕ್ರಾಮ ವೇಲಾಮನ್ಯತ್ರ ಸಂಪ್ಲವಾತ್ ॥

ಅನುವಾದ

ಸಮುದ್ರವು ತನ್ನೊಳಗೆ ಇರುವ ಪ್ರಾಣಿಗಳಿಂದ, ತರಂಗಗಳಿಂದ, ಸರ್ಪಗಳಿಂದ, ರಾಕ್ಷಸರಿಂದ ಭಯಂಕರ ವೇಗದಿಂದ ಪ್ರಳಯಕಾಲ ಬಾರದಿದ್ದರೂ ತೀವ್ರಗತಿಯಿಂದ ತನ್ನ ಎಲ್ಲೆಯನ್ನು ದಾಟಿ ಒಂದೊಂದು ಯೋಜನ ದೂರಕ್ಕೆ ಉಕ್ಕೇರಿತು.॥14-15॥

ಮೂಲಮ್ - 16

ತಂ ತಥಾ ಸಮತಿಕ್ರಾಂತಂ ನಾತಿ ಚಕ್ರಾಮ ರಾಘವಃ ।
ಸಮುದ್ಧತಮಮಿತ್ರಘ್ನೋ ರಾಮೋ ನದನದೀಪತಿಮ್ ॥

ಅನುವಾದ

ಈ ಪ್ರಕಾರ ನದ-ನದಿಗಳ ಒಡೆಯ ಆ ಉದ್ಧಟ ಸಮುದ್ರವು ಮೇರೆ ಮೀರಿ ಹೋಗುತ್ತಿದ್ದರೂ ಶತ್ರುಸೂದನ ಶ್ರೀರಾಮಚಂದ್ರನು ತನ್ನ ಸ್ಥಾನದಿಂದ ಹಿಮ್ಮೆಟ್ಟಲಿಲ್ಲ.॥16॥

ಮೂಲಮ್ - 17

ತತೋ ಮಧ್ಯಾತ್ ಸಮುದ್ರಸ್ಯ ಸಾಗರಃ ಸ್ವಯಮುತ್ಥಿತಃ ।
ಉದಯಾದ್ರಿ ಮಹಾಶೈಲಾನ್ಮೇರೋರಿವ ದಿವಾಕರಃ ॥

ಅನುವಾದ

ಆಗ ಸಮುದ್ರದ ಮಧ್ಯದಿಂದ ಮಹಾಶೈಲ ಮೇರುಪರ್ವತ ಅಂಗಭೂತ ಉದಯಾಚಲದಿಂದ ಸೂರ್ಯನು ಉದಯಿಸುವಂತೆ ಸಾಗರನು ಮೂರ್ತಿಭವಿಸಿ ಪ್ರಕಟನಾದನು.॥17॥

ಮೂಲಮ್ - 18

ಪನ್ನಗೈಃ ಸಹ ದೀಪ್ತಾಸ್ಯೈಃ ಸಮುದ್ರಃ ಪ್ರತ್ಯದೃಶ್ಯತ ।
ಸ್ನಿಗ್ಧ ವೈಢೂರ್ಯ ಸಂಕಾಶೋ ಚಾಂಬೂನದ ವಿಭೂಷಣಃ ॥

ಅನುವಾದ

ಹೆಳೆಯುತ್ತಿರ ಹೆಡೆಗಳುಳ್ಳ ಸರ್ಪಗಳೊಂದಿಗೆ ಸಮುದ್ರದ ದರ್ಶನವಾಯಿತು. ಅವನ ವರ್ಣಸಿಗ್ಧ ವೈಡೂರ್ಯದಂತೆ ಶ್ಯಾಮಲವಾಗಿತ್ತು. ಅವನು ಜಾಂಬೂನದ ಸ್ವರ್ಣಾಭರಣಗಳನ್ನು ತೊಟ್ಟಿದ್ದನು.॥18॥

ಮೂಲಮ್ - 19

ರಕ್ತಮಾಲ್ಯಾಂಬರಧರಃ ಪದ್ಮಪತ್ರ ನಿಭೇಕ್ಷಣಃ ।
ಸರ್ವಪುಷ್ಪಮಯೀಂ ದಿವ್ಯಾಂ ಶಿರಸಾ ಧಾರಯನ್ ಸ್ರಜಮ್ ॥

ಅನುವಾದ

ಕೆಂಪು ಬಣ್ಣದ ಹೂವಿನ ಮಾಲೆಯನ್ನು ಕೆಂಪಾದ ವಸ್ತ್ರವನ್ನು ಅವನು ಧರಿಸಿದ್ದನು. ಅವನ ನೇತ್ರಗಳು ಅರಳಿದ ತಾವರೆಯಂತೆ ಸುಂದರವಾಗಿದ್ದವು. ಅವನು ತಲೆಯ ಮೇಲೆ ಎಲ್ಲ ಪ್ರಕಾರದ ಪುಷ್ಪಗಳಿಂದ ಮಾಡಿದ ದಿವ್ಯಪುಷ್ಪಮಾಲೆಯನ್ನು ಧರಿಸಿದ್ದನು.॥19॥

ಮೂಲಮ್ - 20

ಜಾತರೂಪಮಯೈಶ್ಚೈವ ತಪನೀಯ ವಿಭೂಷಣೈಃ ।
ಆತ್ಮಜಾನಾಂ ಚ ರತ್ನಾನಾಂ ಭೂಷಿತೋ ಭೂಷಣೋತ್ತಮೈಃ ॥

ಅನುವಾದ

ಸುವರ್ಣ ಮಯವಾದ ಮತ್ತು ಪುಟಕ್ಕಿಟ್ಟ ಚಿನ್ನದಿಂದ ಮಾಡಿದ ಆಭರಣಗಳಿಂದ ಸಮಲಂಕೃತವಾಗಿದ್ದನು. ತನ್ನಲ್ಲಿಯೇ ಹುಟ್ಟಿದ ರತ್ನಗಳ ಉತ್ತಮ ಆಭೂಷಣಗಳಿಂದ ಭೂಷಿತನಾಗಿದ್ದನು.॥2.॥

ಮೂಲಮ್ - 21½

ಧಾತುಭಿರ್ಮಣ್ಡಿತಃ ಶೈಲೋ ವಿವಿಧೈರ್ಹಿಮವಾನಿವ ।
ಏಕಾವಲೀ ಮಧ್ಯಗತಂ ತರಲಂ ಪಾಂಡರಪ್ರಭಮ್ ॥
ವಿಪುಲೇನೋರಸಾ ಬಿಭ್ರತ್ಕೌಸ್ತುಭಸ್ಯ ಸಹೋದರಮ್ ।

ಅನುವಾದ

ಸಮುದ್ರರಾಜನು ಅನೇಕ ಪ್ರಕಾರದ ಗೈರಿಕಾದಿ ಧಾತು ಗಳಿಂದ ಅಲಂಕೃತವಾದ ಹಿಮವಂತನಂತೆ ಶೋಭಿಸುತ್ತಿದ್ದನು. ತನ್ನ ವಿಶಾಲವಕ್ಷಸ್ಥಳದಲ್ಲಿ ಕೌಸ್ತುಭಮಣಿಯಂತೆ ಒಂದು ಶ್ವೇತ ಪ್ರಭೆಯುಳ್ಳ ರತ್ನವನ್ನು ಧರಿಸಿದ್ದನು, ಅದು ಮುತ್ತಿನ ಹಾರದ ಮಧ್ಯಭಾಗದಲ್ಲಿ ಪ್ರಕಾಶಿಸುತ್ತಿತ್ತು.॥21½॥

ಮೂಲಮ್ - 22½

ಆಘೂರ್ಣಿತ ತರಂಗೌಘಃ ಕಾಲಿಕಾನಿಲ ಸಂಕುಲಃ ॥
ಗಂಗಾಸಿಂಧು ಪ್ರಧಾನಾಭಿರಾಪಗಾಭಿಃ ಸಮಾವೃತಃ ।

ಅನುವಾದ

ಮೇಘ ಮಾಲೆ ಮತ್ತು ವಾಯುವಿನಿಂದ ವ್ಯಾಪ್ತವಾದ ಚಂಚಲ ತರಂಗಗಳು ಅವನನ್ನು ಸುತ್ತುವರಿದಿದ್ದವು. ಗಂಗಾ-ಸಿಂಧು ಮೊದಲಾದ ನದಿಗಳು ಅವನನ್ನು ಆವರಿಸಿ ನಿಂತಿದ್ದರು.॥22½॥

ಮೂಲಮ್ - 23

ಉದ್ವರ್ತಿತ ಮಹಾಗ್ರಾಹಃ ಸಂಭ್ರಾಂತೋರಗ ರಾಕ್ಷಸಃ ॥

ಮೂಲಮ್ - 24

ದೇವತಾನಾಂ ಸರೂಪಾಭಿರ್ನಾನಾರೂಪಾಭಿರೀಶ್ವರಃ ।
ಸಾಗರಃ ಸಮುಪಕ್ರಮ್ಯ ಪೂರ್ವಮಾಮಂತ್ರ್ಯವೀರ್ಯವಾನ್ ॥

ಮೂಲಮ್ - 25

ಅಬ್ರವೀತ್ ಪ್ರಾಂಜಲಿರ್ವಾಕ್ಯಂ ರಾಘವಂ ಶರಪಾಣಿನಮ್ ॥

ಅನುವಾದ

ಅವನೊಳಗೆ ಇರುವ ದೊಡ್ಡ ದೊಡ್ಡ ಮೊಸಳೆಗಳು ಭ್ರಾಂತ ರಾಗಿದ್ದವು. ನಾಗ ಮತ್ತು ರಾಕ್ಷಸರು ಗಾಬರಿಗೊಂಡಿದ್ದರು. ದೇವತೆಗಳಂತೆ ಸುಂದರ ರೂಪಧರಿಸಿ ಬಂದಿರುವ ವಿಭಿನ್ನ ರೂಪವುಳ್ಳ ನದಿಗಳೊಂದಿಗೆ, ಶಕ್ತಿಶಾಲಿ ನದೀಪತಿ ಸಮುದ್ರರಾಜನು ಧನುರ್ಧರ ಶ್ರೀರಘುನಾಥನ ಬಳಿಗೆ ಬಂದು ಕೈಮುಗಿದುಕೊಂಡು ನುಡಿದನು.॥23-25॥

ಮೂಲಮ್ - 26

ಪೃಥಿವೀವಾಯುರಾಕಾಶಮಾಪೋ ಜ್ಯೋತಿಶ್ಚ ರಾಘವ ।
ಸ್ವಭಾವೇ ಸೌಮ್ಯ ತಿಷ್ಠಂತಿ ಶಾಶ್ವತಂ ಮಾರ್ಗಮಾಶ್ರಿತಾಃ ॥

ಅನುವಾದ

ಸೌಮ್ಯ ರಘುನಂದನ! ಪೃಥಿವಿ, ವಾಯು, ಆಕಾಶ, ಜಲ ಮತ್ತು ತೇಜ ಇವು ಸದಾ ತನ್ನ ಸ್ವಭಾವದಲ್ಲೇ ಸ್ಥಿತವಾಗಿವೆ. ತನ್ನ ಸನಾತನ ಧರ್ಮವನ್ನು ಎಂದೂ ಬಿಡಲಿಲ್ಲ. ಸದಾ ಅದನ್ನು ಆಶ್ರಯಿಸಿಯೇ ಇರುತ್ತವೆ.॥26॥

ಮೂಲಮ್ - 27

ತತ್ಸ್ವಭಾವೋ ಮಮಾಪ್ಯೇಷ ಯದಗಾಧೋಽಹಮಪ್ಲವಃ ।
ವಿಕಾರಸ್ತು ಭವೇದ್ ಗಾಧ ಏತತ್ ತೇ ಪ್ರವದಾಮ್ಯಹಮ್ ॥

ಅನುವಾದ

ಅಗಾಧ ಮತ್ತು ಆಳ ಇರುವುದೇ ನನ್ನ ಸ್ವಭಾವವಾಗಿದೆ - ಯಾರೂ ನನ್ನನ್ನು ದಾಟಲಾರರು. ನನ್ನ ಆಳ ಸಿಕ್ಕಿಬಿಟ್ಟರೆ ಈ ವಿಕಾರ ನನ್ನ ಸ್ವಭಾವದ ವ್ಯತಿಕ್ರಮವಾದೀತು. ಆದ್ದರಿಂದ ನನ್ನನ್ನು ದಾಟಲು ಈ ಉಪಾಯ ತಿಳಿಸುತ್ತೇನೆ.॥27॥

ಮೂಲಮ್ - 28

ನ ಕಾಮಾನ್ನ ಚ ಲೋಭಾದ್ ವಾ ನ ಭಯಾತ್ ಪಾರ್ಥಿವಾತ್ಮಜ ।
ಗ್ರಾಹನಕ್ರಾಕುಲಜಲಂ ಸ್ತಂಭಯೇಯಂ ಕಥಂಚನ ॥

ಅನುವಾದ

ರಾಜಕುಮಾರ! ಮೀನು-ಮೊಸಳೆಗಳಿಂದ ತುಂಬಿದ ಜಲವನ್ನು ನಾನು ಯಾವುದೇ ಕಾಮನೆಯಿಂದ, ಲೋಭದಿಂದ ಅಥವಾ ಭಯದಿಂದ ಯಾವ ರೀತಿಯಿಂದಲೂ ಸ್ತಂಭಿಸಲು ಬಿಡುವುದಿಲ್ಲ.॥28॥

ಮೂಲಮ್ - 29

ವಿಧಾಸ್ಯೇ ಯೇನ ಗಂತಾಸಿ ವಿಷೇಹಿಷ್ಯೇಽಪ್ಯಹಂ ತಥಾ ।
ಗ್ರಾಹಾ ನ ವಿಧಮಿಷ್ಯಂತಿ ಯಾವತ್ಸೇನಾ ತರಿಷ್ಯತಿ ।
ಹರೀಣಾಂ ತರಣೇ ರಾಮ ಕರಿಷ್ಯಾಮಿ ಯಥಾ ಸ್ಥಲಮ್ ॥

ಅನುವಾದ

ಶ್ರೀರಾಮಾ! ನಾನು ತಿಳಿಸುವ ಉಪಾಯದಿಂದ ನೀನು ನನ್ನನ್ನು ದಾಟಿ ಹೋಗುವೆ. ಅದರಿಂದ ಮೊಸಳೆಗಳು ವಾನರರಿಗೆ ಕಷ್ಟಕೊಡಲಾರವು, ಎಲ್ಲ ಸೈನ್ಯವು ದಾಟಿ ಹೋಗುವುದು ಮತ್ತು ನನಗೂ ಖೇದವಾಗಲಾರದು. ನಾನು ಸುಲಭವಾಗಿ ಸಹಿಸಿಕೊಳ್ಳುವೆನು. ವಾನರರು ದಾಟಿ ಹೋಗಲು ಹೇಗೆ ಸೇತುವೆ ನಿರ್ಮಾಣ ವಾಗುವುದೋ ಅದಕ್ಕಾಗಿ ನಾನು ಪ್ರಯತ್ನಿಸುವೆನು.॥29॥

ಮೂಲಮ್ - 30

ತಮಬ್ರವೀತ್ ತದಾ ರಾಮಃ ಶೃಣು ಮೇ ವರುಣಾಲಯ ।
ಅಮೋಘೋಽಯಂ ಮಹಾಬಾಣಃ ಕಸ್ಮಿನ್ ದೇಶೇ ನಿಪಾತ್ಯತಾಮ್ ॥

ಅನುವಾದ

ಆಗ ಶ್ರೀರಾಮಚಂದ್ರನು ಅವನಲ್ಲಿ ಹೇಳಿದನು - ವರುಣಾಲಯನೇ! ನನ್ನ ಮಾತನ್ನು ಕೇಳು. ನನ್ನ ಈ ವಿಶಾಲ ಬಾಣವು ಅಮೋಘವಾಗಿದೆ. ಇದನ್ನು ಯಾವ ಸ್ಥಾನದಲ್ಲಿ ಬಿಡಲಿ? ಹೇಳು.॥30॥

ಮೂಲಮ್ - 31

ರಾಮಸ್ಯ ವಚನಂ ಶ್ರುತ್ವಾ ತಂ ಚ ದೃಷ್ವಾ ಮಹಾಶರಮ್ ।
ಮಹೋದಧಿರ್ಮಹಾತೇಜಾ ರಾಘವಂ ವಾಕ್ಯಮಬ್ರವೀತ್ ॥

ಅನುವಾದ

ಶ್ರೀರಾಮನ ಈ ಮಾತನ್ನು ಕೇಳಿ, ಆ ಮಹಾಬಾಣವನ್ನು ನೋಡಿ ಮಹಾತೇಜಸ್ವೀ ಮಹಾಸಾಗರನು ರಘುನಾಥನಲ್ಲಿ ಇಂತೆಂದನು.॥31॥

ಮೂಲಮ್ - 32

ಉತ್ತರೇಣಾವಕಾಶೋಽಸ್ತಿ ಕಶ್ಚಿತ್ ಪುಣ್ಯತರೋ ಮಮ ।
ದ್ರುಮಕುಲ್ಯ ಇತಿ ಖ್ಯಾತೋ ಲೋಕೇ ಖ್ಯಾತೋ ಯಥಾ ಭವಾನ್ ॥

ಅನುವಾದ

ಪ್ರಭೋ! ಜಗತ್ತಿನಲ್ಲಿ ನೀನು ಸರ್ವತ್ರ ವಿಖ್ಯಾತ ಹಾಗೂ ಪುಣ್ಯಾತ್ಮನಾಗಿರುವಂತೆಯೇ ನನ್ನ ಉತ್ತರದ ಕಡೆಗೆ ಧ್ರುವಕುಲ್ಯ ಎಂಬ ವಿಖ್ಯಾತವಾದ ಒಂದು ದೊಡ್ಡ ಪವಿತ್ರ ದೇಶವಿದೆ.॥32॥

ಮೂಲಮ್ - 33

ಉಗ್ರದರ್ಶನ ಕರ್ಮಾಣೋ ಬಹವಸ್ತತ್ರ ದಸ್ಯವಃ ।
ಆಭೀರಪ್ರಮುಖಾಃ ಪಾಪಾಃ ಪಿಬಂತಿ ಸಲಿಲಂ ಮಮ ॥

ಅನುವಾದ

ಅಲ್ಲಿ ಆಭೀರ ಮೊದಲಾದ ಜಾತಿಯ ಬಹಳಷ್ಟು ಜನರು ವಾಸಿಸುತ್ತಾರೆ, ಅವರ ರೂಪ ಮತ್ತು ಕರ್ಮ ಭಾರೀ ಭಯಾನಕವಾಗಿದೆ. ಅವರೆಲ್ಲರೂ ಪಾಪಿಗಳೂ ದರೋಡೆ ಕೋರರೂ ಆಗಿದ್ದಾರೆ. ಅವರು ನನ್ನ ಜಲವನ್ನು ಕುಡಿಯುತ್ತಾರೆ.॥33॥

ಮೂಲಮ್ - 34

ತೈರ್ನ ತತ್ಪ್ಸರ್ಶನಂ ಪಾಪಂ ಸಹೇಯಂ ಪಾಪಕರ್ಮಭಿಃ ।
ಅಮೋಘಃ ಕ್ರಿಯತಾಂ ರಾಮ ಅಯಂ ತತ್ರ ಶರೋತ್ತಮಃ ॥

ಅನುವಾದ

ಆ ಪಾಪಾಚಾರಿಗಳ ಸ್ಪರ್ಶ ನನಗೆ ಆಗುತ್ತಾ ಇರುತ್ತದೆ, ಆ ಪಾಪವನ್ನು ನಾನು ಸಹಿಸಲಾರೆನು. ಶ್ರೀರಾಮಾ! ನೀನು ನಿನ್ನ ಈ ಉತ್ತಮ ಬಾಣವನ್ನು ಅಲ್ಲಿ ಸಫಲಗೊಳಿಸು.॥34॥

ಮೂಲಮ್ - 35

ತಸ್ಯ ತದ್ ವಚನಂ ಶ್ರುತ್ವಾ ಸಾಗರಸ್ಯ ಮಹಾತ್ಮನಃ ।
ಮುಮೋಚ ತಂ ಶರಂ ದೀಪ್ತಂ ಪರಂ ಸಾಗರ ದರ್ಶನಾತ್ ॥

ಅನುವಾದ

ಮಹಾಮನಾ ಸಮುದ್ರನ ಈ ಮಾತನ್ನು ಕೇಳಿ ಸಾಗರನು ತೋರಿಸಿದ ದೇಶಕ್ಕೆ ಶ್ರೀರಾಮಚಂದ್ರನು ಆ ಅತ್ಯಂತ ಪ್ರಜ್ವಲಿತ ಬಾಣವನ್ನು ಪ್ರಯೋಗಿಸಿದನು.॥35॥

ಮೂಲಮ್ - 36

ತೇನ ತನ್ಮರುಕಾಂತಾರಂ ಪೃಥಿವ್ಯಾಂ ಕಿಲ ವಿಶ್ರುತಮ್ ।
ನಿಪಾತಿತಃ ಶರೋ ಯತ್ರ ದೀಪ್ತಾಶನಿಸಮಪ್ರಭಃ ॥

ಅನುವಾದ

ಸಿಡಿಲಿನಂತೆ ತೇಜಸ್ವೀ ಆ ಬಾಣವು ಎಲ್ಲಿ ಬಿತ್ತೋ, ಆ ಸ್ಥಾನವು ಆ ಬಾಣದಿಂದಾಗಿಯೇ ಜಗತ್ತಿನಲ್ಲಿ ದುರ್ಗಮ ಮರುಭೂಮಿ ಎಂದು ಪ್ರಸಿದ್ಧವಾಯಿತು.॥36॥

ಮೂಲಮ್ - 37

ನನಾದ ಚ ತದಾ ತತ್ರ ವಸುಧಾ ಶಲ್ಯಪೀಡಿತಾ ।
ತಸ್ಮಾದ್ ವ್ರಣಮುಖಾತ್ ತೋಯಮುತ್ಪಪಾತ ರಸಾತಲಾತ್ ॥

ಅನುವಾದ

ಆಗ ಆ ಬಾಣದಿಂದ ಪೀಡಿತಳಾಗಿ ವಸುಧೆ ಆರ್ತನಾದ ಮಾಡಿದಳು. ಬಾಣದ ಏಟಿನಿಂದ ಆದ ಛಿದ್ರದಿಂದ ರಸಾತಲದ ನೀರು ಮೇಲಕ್ಕೆ ಉಕ್ಕಿ ಬರತೊಡಗಿತು.॥37॥

ಮೂಲಮ್ - 38

ಸ ಬಭೂನ ತದಾ ಕೂಪೋ ವ್ರಣ ಇತ್ಯೇವ ವಿಶ್ರುತಃ ।
ಸತತಂ ಚೋತ್ಥಿಥಂ ತೋಯಂ ಸಮುದ್ರಸ್ಯೇವ ದೃಶ್ಯತೇ ॥

ಅನುವಾದ

ಆ ಛಿದ್ರವು ಕೆರೆಯಂತಾಗಿ ವ್ರಣವೆಂದು ಪ್ರಸಿದ್ಧವಾಯಿತು ಆ ಕೆರೆಯಿಂದ ಸದಾಕಾಲ ಹರಿಯುವ ನೀರು ಸಮುದ್ರದ ಜಲದಂತೇ ಕಂಡುಬರುತ್ತದೆ.॥38॥

ಮೂಲಮ್ - 39

ಅವದಾರಣ ಶಬ್ದಶ್ಚ ದಾರುಣಃ ಸಮಪದ್ಯತ ।
ತಸ್ಮಾತ್ ತದ್ ಬಾಣಪಾತೇನ ಅಪಃ ಕುಕ್ಷಿಷ್ವಶೋಷಯತ್ ॥

ಅನುವಾದ

ಆಗ ಅಲ್ಲಿ ಭೂಮಿಯು ಬಿರಿದ ಭಯಂಕರ ಶಬ್ದ ಕೇಳಿಬಂತು. ಆ ಬಾಣವನ್ನು ಬಿಟ್ಟು ಅಲ್ಲಿಯ ಭೂಮಿಯ ಗರ್ಭದಲ್ಲಿರುವ ವರ್ತಮಾನ ನೀರನ್ನು ಶ್ರೀರಾಮನು ಒಣಗಿಸಿಬಿಟ್ಟನು.॥39॥

ಮೂಲಮ್ - 40

ವಿಖ್ಯಾತಂ ತ್ರಿಷು ಲೋಕೇಷು ಮರುಕಾಂತಾರಮೇವ ಚ ॥

ಮೂಲಮ್ - 41

ಶೋಷಯಿತ್ವಾ ತು ತಂ ಕುಕ್ಷಿಂ ರಾಮೋ ದಶರಥಾತ್ಮಜಃ ।
ವರಂ ತಸ್ಮೈ ದದೌ ವಿದ್ವಾನ್ ಮರವೇಽಮರವಿಕ್ರಮಃ ॥

ಅನುವಾದ

ಅಂದಿನಿಂದ ಆ ಸ್ಥಾನವು ಮೂರು ಲೋಕಗಳಲ್ಲಿ ಮರುಕಾಂತಾರ ಎಂಬ ಹೆಸರಿನಿಂದಲೇ ವಿಖ್ಯಾತವಾಯಿತು. ಮೊದಲು ಸಮುದ್ರದ ಕುಕ್ಷಿ ಪ್ರದೇಶವನ್ನು ಒಣಗಿಸಿ ದೇವೋಪಮ ಪರಾಕ್ರಮಿ ವಿದ್ವಾನ್ ದಶರಥನಂದನ ಶ್ರೀರಾಮನು ಆ ಮರುಭೂಮಿಗೆ ಹೀಗೆ ವರವನ್ನು ಕೊಟ್ಟನು.॥40-41॥

ಮೂಲಮ್ - 42

ಪಶವ್ಯಶ್ಚಾಲ್ಪರೋಗಶ್ಚ ಫಲಮೂಲ ರಸಾಯುತಃ ।
ಬಹುಸ್ನೇಹೋ ಬಹುಕ್ಷೀರಃ ಸುಗಂಧಿರ್ವಿವಿಧೌಷಧಿಃ ॥

ಅನುವಾದ

ಈ ಮರುಭೂಮಿಯು ಪಶುಗಳಿಗೆ ಹಿತಕಾರಿಯಾಗಲಿ. ಇಲ್ಲಿ ರೋಗಗಳು ಕಡಿಮೆಯಾಗಲಿ ಈ ಭೂಮಿಯು ಫಲ, ಮೂಲ ಮತ್ತು ರಸಗಳಿಂದ ಸಂಪನ್ನವಾಗಲೀ. ಇಲ್ಲಿ ತುಪ್ಪವೇ ಆದಿ ಜಿಡ್ಡು ಪದಾರ್ಥಗಳು ಹೆಚ್ಚಾಗಿ ಸುಲಭವಾಗಲಿ, ಹಾಲೂ ಕೂಡ ಧಾರಾಳವಾಗಲಿ. ಇಲ್ಲಿ ಸುಗಂಧ ವ್ಯಾಪ್ತವಾಗಿರಲಿ, ಅನೇಕ ರೀತಿಯ ಔಷಧಿಗಳೂ ಹುಟ್ಟಲಿ.॥42॥

ಮೂಲಮ್ - 43

ಏವಮೇತೈಶ್ಚ ಸಂಯುಕ್ತೋ ಬಹುಭಿಃ ಸಂಯುತೋ ಮರುಃ ।
ರಾಮಸ್ಯ ವರದಾನಾಚ್ಚ ಶಿವಃ ಪಂಥಾ ಬಭೂವ ಹ ॥

ಅನುವಾದ

ಈ ಪ್ರಕಾರ ಭಗವಾನ್ ಶ್ರೀರಾಮನ ವರದಿಂದ ಆ ಮರುಪ್ರದೇಶವು ಹೀಗೆ ಅಸಂಖ್ಯಗುಣಗಳಿಂದ ಸಂಪನ್ನವಾಗಿ, ಎಲ್ಲರಿಗೆ ಮಂಗಲಕಾರಿ ಮಾರ್ಗ ಉಂಟಾಯಿತು.॥43॥

ಮೂಲಮ್ - 44

ತಸ್ಮಿನ್ ದಗ್ಧೇ ತದಾ ಕುಕ್ಷೌ ಸಮುದ್ರಃ ಸರಿತಾಂ ಪತಿಃ ।
ರಾಘವಂ ಸರ್ವಶಾಸ್ತ್ರಜ್ಞಮಿದಂ ವಚನಮಬ್ರವೀತ್ ॥

ಅನುವಾದ

ಆ ಕುಕ್ಷಿಸ್ಥಾನವು ದಗ್ಧವಾದಾಗ ಸರಿತೆಗಳ ಸ್ವಾಮಿ ಸಮುದ್ರವು ಸಮಸ್ತ ಶಾಸ್ತ್ರಗಳ ಜ್ಞಾನಿ ಶ್ರೀರಘುನಾಥನಲ್ಲಿ ಹೇಳಿದನು.॥44॥

ಮೂಲಮ್ - 45

ಅಯಂ ಸೌಮ್ಯ ನಲೋ ನಾಮ ತನಯೋ ವಿಶ್ವಕರ್ಮಣಃ ।
ಪಿತ್ರಾ ದತ್ತವರಃ ಶ್ರೀಮಾನ್ ಪ್ರೀತಿಮಾನ್ ವಿಶ್ವಕರ್ಮಣಃ ॥

ಅನುವಾದ

ಸೌಮ್ಯನೇ! ನಿನ್ನ ಸೈನ್ಯದಲ್ಲಿರುವ ಕಾಂತಿಮಂತ ನಳ ಎಂಬುವನು ಸಾಕ್ಷಾತ್ ವಿಶ್ವಕರ್ಮನ ಮಗನಾಗಿದ್ದಾನೆ. ಇವನಿಗೆ ಇವನ ತಂದೆಯು - ‘ನೀನು ನನ್ನಂತೆಯೇ ಸಮಸ್ತ ಶಿಲ್ಪಕರ್ಮದಲ್ಲಿ ನಿಪುಣನಾಗು’ ಎಂಬ ವರವನ್ನು ಕೊಟ್ಟಿರುವನು. ಪ್ರಭೋ ! ನೀನೂ ಕೂಡ ಈ ವಿಶ್ವದ ಸ್ರಷ್ಟಾ ವಿಶ್ವಕರ್ಮನೇ ಆಗಿರುವೆ. ಈ ನಳನ ಹೃದಯದಲ್ಲಿ ನಿನ್ನ ಕುರಿತು ತುಂಬು ಪ್ರೇಮವಿದೆ.॥45॥

ಮೂಲಮ್ - 46

ಏಷ ಸೇತುಂ ಮಹೋತ್ಸಾಹಃ ಕರೋತು ಮಯಿ ವಾನರಃ ।
ತಮಹಂ ಧಾರಯಿಷ್ಯಾಮಿ ತಥಾ ಹ್ಯೇಷ ಪಿತಾ ತಥಾ ॥

ಅನುವಾದ

ಈ ಮಹಾ ಉತ್ಸಾಹಿ ವಾನರನು ತನ್ನ ತಂದೆಯಂತೆಯೇ ಶಿಲ್ಪಕರ್ಮದಲ್ಲಿ ನಿಪುಣನಾಗಿದ್ದಾನೆ, ಆದ್ದರಿಂದ ಇವನು ನನ್ನ ಮೇಲೆ ಸೇತುವೆ ನಿರ್ಮಿಸಲಿ. ನಾನು ಆ ಸೇತುವೆಯನ್ನು ಧರಿಸುವೆನು.॥46॥

ಮೂಲಮ್ - 47

ಏವಮುಕ್ತ್ವೋದಧಿರ್ನಷ್ಟಃ ಸಮುತ್ಥಾಯ ನಲಸ್ತತಃ ।
ಅಬ್ರವೀದ್ ವಾನರ ಶ್ರೇಷ್ಠೋ ವಾಕ್ಯಂ ರಾಮಂ ಮಹಾಬಲಮ್ ॥

ಅನುವಾದ

ಹೀಗೆ ಹೇಳಿ ಸಮುದ್ರನು ಅದೃಶ್ಯನಾದನು. ಆಗ ವಾನರ ಶ್ರೇಷ್ಠ ನಳನು ಎದ್ದು ಮಹಾಬಲೀ ಶ್ರೀರಾಮನಲ್ಲಿ ಹೇಳಿದನು.॥47॥

ಮೂಲಮ್ - 48

ಅಹಂ ಸೇತುಂ ಕರಿಷ್ಯಾಮಿ ವಿಸ್ತೀರ್ಣೇ ಮಕರಾಲಯೇ ।
ಪಿತುಃ ಸಾಮರ್ಥ್ಯಮಾಸಾದ್ಯ ತತ್ತ್ವಮಾಹ ಮಹೋದಧಿಃ ॥

ಅನುವಾದ

ಪ್ರಭೋ! ತಂದೆಯು ಕೊಟ್ಟ ಶಕ್ತಿಯನ್ನು ಪಡೆದು ನಾನು ಈ ವಿಸ್ತೃತ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸುವೆನು. ಸಾಗರನು ಸರಿಯಾಗಿಯೇ ಹೇಳಿರುವನು.॥48॥

ಮೂಲಮ್ - 49

ದಂಡ ಏವ ವರೋ ಲೋಕೇ ಪುರುಷಸ್ಯೇತಿ ಮೇಮತಿಃ ।
ಧಿಕ್ ಕ್ಷಮಾಮಕೃತಜ್ಞೇಷು ಸಾಂತ್ವಂ ದಾನಮಥಾಪಿ ವಾ ॥

ಅನುವಾದ

ಜಗತ್ತಿನಲ್ಲಿ ಅಕೃತಜ್ಞನ ಕುರಿತು ದಂಡನೀತಿಯ ಪ್ರಯೋಗವೇ ಎಲ್ಲಕ್ಕಿಂತ ದೊಡ್ಡ ಅರ್ಥ ಸಾಧನೆಯಾಗಿದೆ, ಎಂಬುದೇ ನನಗೆ ವಿಶ್ವಾಸವಾಗುತ್ತಾ ಇದೆ. ಅಂತಹವರ ಕುರಿತು ಕ್ಷಮೆ, ಸಾಂತ್ವನೆ, ದಾನ ನೀತಿಯ ಪ್ರಯೋಗಕ್ಕೆ ಧಿಕ್ಕಾರವಿರಲಿ.॥49॥

ಮೂಲಮ್ - 50

ಅಯಂ ಹಿ ಸಾಗರೋ ಭೀಮಃ ಸೇತುಕರ್ಮದಿದೃಕ್ಷಯಾ ।
ದದೌ ದಂಡ ಭಯಾದ್ ಗಾಧಂ ರಾಘವಾಯ ಮಹೋದಧಿಃ ॥

ಅನುವಾದ

ಈ ಭಯಾನಕ ಸಮುದ್ರವನ್ನು ಸಗರರಾಜನ ಪುತ್ರರೇ ಬೆಳೆಸಿರುವರು. ಹೀಗಿದ್ದರೂ ಇವನು ಕೃತಜ್ಞತೆಯಿಂದಲ್ಲ, ದಂಡನೆಯ ಭಯದಿಂದಲೇ ಸೇತುಕರ್ಮ ನೋಡಲು ಮನಸ್ಸಿನಲ್ಲಿ ಇಚ್ಛಿಸಿ ಶ್ರೀರಘುನಾಥನಿಗೆ ನೆರವನ್ನು ನೀಡಿರುವನು.॥50॥

ಮೂಲಮ್ - 51

ಮಮ ಮಾತುರ್ವರೋ ದತ್ತೋ ಮಂದರೇ ವಿಶ್ವಕರ್ಮಣಾ ।
ಮಯಾ ತು ಸದೃಶಃ ಪುತ್ರಸ್ತಸ್ಯ ದೇವಿ ಭವಿಷ್ಯತಿ ॥

ಅನುವಾದ

ಮಂದರಾಚಲದಲ್ಲಿ ವಿಶ್ವಕರ್ಮನು ನನ್ನ ತಾಯಿಗೆ-‘ದೇವಿ! ನಿನ್ನ ಪುತ್ರನು ನನ್ನಂತೆಯೇ ಆಗುವನು’ ಎಂಬ ವರವನ್ನು ಕೊಟ್ಟಿದ್ದನು.॥51॥

ಮೂಲಮ್ - 52

ಔರಸಸ್ತಸ್ಯ ಪುತ್ರೋಽಹಂ ಸದೃಶೋ ವಿಶ್ವಕರ್ಮಣಾ ।
ಸ್ಮಾರಿತೋಽಸ್ಮ್ಯಹಮೇತೇನ ತತ್ತ್ವಮಾಹ ಮಹೋದಧಿಃ ।
ನ ಚಾಪ್ಯಹಮನುಕ್ತೋ ವಃ ಪ್ರಬ್ರೂಯಾಮಾತ್ಮನೋ ಗುಣಾನ್ ॥

ಅನುವಾದ

ಹೀಗೆ ನಾನು ವಿಶ್ವಕರ್ಮನ ಔರಸ ಪುತ್ರನಾಗಿದ್ದೇನೆ, ಶಿಲ್ಪಕರ್ಮದಲ್ಲಿ ಅವನಂತೆಯೇ ಆಗಿರುವೆನು. ಈ ಸಮುದ್ರವು ಇಂದು ಇವನ್ನು ಜ್ಞಾಪಿಸಿದನು. ಮಹಾಸಾಗರನು ಹೇಳಿದುದು ಸರಿಯಾಗಿಯೇ ಇದೆ. ತಾವು ಕೇಳದೆಯೇ ನಾನು ನನ್ನ ಗುಣಗಳನ್ನು ಹೇಳಲಾಗಲಿಲ್ಲ, ಅದಕ್ಕಾಗಿ ಇಷ್ಟರವರೆಗೆ ಸುಮ್ಮನಿದ್ದೆ.॥52॥

ಮೂಲಮ್ - 53

ಸಮರ್ಥಶ್ಚಾಪ್ಯಹಂ ಸೇತುಂ ಕರ್ತುಂ ವೈ ವರುಣಾಲಯೇ ।
ತಸ್ಮಾದದ್ಯೈವ ಬಧ್ನಂತು ಸೇತುಂ ವಾನರಪುಂಗವಾಃ ॥

ಅನುವಾದ

ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಲು ನಾನು ಸಮರ್ಥನಾಗಿದ್ದೇನೆ, ಆದ್ದರಿಂದ ಎಲ್ಲ ವಾನರು ಇಂದೇ ಸೇತುವೆ ಕಟ್ಟಲು ಪ್ರಾರಂಭಿಸಲಿ.॥53॥

ಮೂಲಮ್ - 54

ತತೋನವಿಸೃಷ್ಟಾ ರಾಮೇಣ ಸರ್ವತೋ ಹರಿಪುಂಗವಾಃ ।
ಉತ್ಪೇತತುರ್ಮಹಾರಣ್ಯಂ ಹೃಷ್ಟಾಃ ಶತಸಹಸ್ರಶಃ ॥

ಅನುವಾದ

ಆಗ ಭಗವಾನ್ ಶ್ರೀರಾಮನು ಕಳಿಸಿದ್ದರಿಂದ ದೊಡ್ಡ ದೊಡ್ಡ ವಾನರರು ಹರ್ಷೋತ್ಸಾಹದಿಂದ ನೆಗೆಯುತ್ತಾ ಎಲ್ಲೆಡೆ ಹೋಗುತ್ತಾ ಮಹಾರಣ್ಯವನ್ನು ಹೊಕ್ಕರು.॥54॥

ಮೂಲಮ್ - 55

ತೇ ನಗಾನ್ ನಗಸಂಕಾಶಾಃ ಶಾಖಾಮೃಗಗಣರ್ಷಭಾಃ ।
ಬಭಂಜ ಪಾದಪಾಂಸ್ತತ್ರ ಪ್ರಚಕರ್ಷುಶ್ಚ ಸಾಗರಮ್ ॥

ಅನುವಾದ

ಪರ್ವತದಂತಹ ವಿಶಾಲಕಾಯ ಆ ಶ್ರೇಷ್ಠ ವಾನರರು ಪರ್ವತ ಶಿಖರಗಳನ್ನು ಮತ್ತು ವೃಕ್ಷಗಳನ್ನು ಕಿತ್ತು ಅವನ್ನು ಸಮುದ್ರ ತೀರಕ್ಕೆ ಎಳೆದುಕೊಂಡು ಬರುತ್ತಿದ್ದರು.॥55॥

ಮೂಲಮ್ - 56

ತೇ ಸಾಲೈಶ್ಚಾಶ್ಚಕರ್ಣೈಶ್ಚ ಧವೈರ್ವಂಶೈಶ್ಚ ವಾನರಾಃ ।
ಕುಟಜೈರರ್ಜುನೈಸ್ತಾಲೈಸ್ತಿಲಕೈಸ್ತಿನಿಶೈರಪಿ ॥

ಮೂಲಮ್ - 57

ಬಿಲ್ವೈಶ್ಚ ಸಪ್ತಪರ್ಣೈಶ್ಚ ಕರ್ಣಿಕಾರೈಶ್ಚ ಪುಷ್ಪಿತೈಃ ।
ಚೂತೈಶ್ಚಾಶೋಕವೃಕ್ಷೈಶ್ಚ ಸಾಗರಂ ಸಮಪೂರಯನ್ ॥

ಅನುವಾದ

ಸಾಲ, ಅಶ್ವಕರ್ಣ, ಧವ, ಕುಟಜ, ಅರ್ಜುನ, ತಾಲ, ತಿಲಕ, ಬಿಲ್ವ, ಅರಳಿದ ಕಣಗಿಲೆಯ ವೃಕ್ಷ, ಮಾವು, ಅಶೋಕ ಮುಂತಾದ ಮರಗಳನ್ನು ಅವರು ಸಮುದ್ರಕ್ಕೆ ಹಾಕಿ ತುಂಬುತ್ತಿದ್ದರು.॥56-57॥

ಮೂಲಮ್ - 58

ಸಮೂಲಾಂಶ್ಚ ವಿಮೂಲಾಂಶ್ಚ ಪಾದಪಾನ್ ಹರಿಸತ್ತಮಾಃ ।
ಇಂದ್ರ ಕೇತೂನಿವೋದ್ಯಮ್ಯ ಪ್ರಜಹ್ರುರ್ವಾನರಾಸ್ತರೂನ್ ॥

ಅನುವಾದ

ಆ ಶ್ರೇಷ್ಠ ವಾನರರು ಅಲ್ಲಿಯ ಮರಗಳನ್ನು ಬುಡಸಹಿತ ಕಿತ್ತು ಅಥವಾ ಮೇಲಿನಿಂದ ಮುರಿದು, ಇಂದ್ರ ಧ್ವಜದಂತೆ ಎತ್ತರವಾದ ವೃಕ್ಷಗಳನ್ನು ಎತ್ತಿಕೊಂಡು ಬರುತ್ತಿದ್ದರು.॥58॥

ಮೂಲಮ್ - 59

ತಾಲಾನ್ ದಾಡಿಮಗುಲ್ಮಾಂಶ್ಚ ನಾರಿಕೇಲಾನ್ವಿಭೀತಕಾನ್ ।
ಕರೀರಾನ್ ಬಕುಲಾನ್ ನಿಂಬಾನ್ ಸಮಾಜಹ್ರುರಿತಸ್ತತಃ ॥

ಅನುವಾದ

ತಾಲವೃಕ್ಷಗಳನ್ನು, ದಾಳಿಂಬೆ ಗಿಡಗಳನ್ನು, ತೆಂಗಿನ ಮರಗಳನ್ನು, ವಿಭೀತಕ-ಬಕುಳ ವೃಕ್ಷಗಳನ್ನು, ಬೇವಿನಮರ ಗಳನ್ನು ಕಿತ್ತು ಕಿತ್ತು ತಂದರು.॥59॥

ಮೂಲಮ್ - 60

ಹಸ್ತಿಮಾತ್ರಾನ್ಮಹಾಕಾಯಾಃ ಪಾಷಾಣಾಂಶ್ಚ ಮಹಾಬಲಾಃ ।
ಪರ್ವತಾಂಶ್ಚ ಸಮುತ್ಪಾಟ್ಯ ಯಂತ್ರೈಃ ಪರಿವಹಂತಿ ಚ ॥

ಅನುವಾದ

ಮಹಾಕಾಯ ಮಹಾಬಲೀ ವಾನರರು ಆನೆಯಂತಹ ದೊಡ್ಡ ದೊಡ್ಡ ಬಂಡೆಗಳನ್ನು, ಪರ್ವತಗಳನ್ನು ಕಿತ್ತು ಯಂತ್ರಗಳ (ಬೇರೆ ಬೇರೆ ಸಾಧನೆಗಳಿಂದ) ಮೂಲಕ ಸಮುದ್ರತೀರಕ್ಕೆ ತರುತ್ತಿದ್ದರು.॥60॥

ಮೂಲಮ್ - 61

ಪ್ರಕ್ಷಿಪ್ಯಮಾಣೈರಚಲೈಃ ಸಹಸಾ ಜಲಮುದ್ಧತಮ್ ।
ಸಮುತ್ಸಸರ್ಪ ಚಾಕಾಶಮವಾಸರ್ಪತ್ ತತಃ ಪುನಃ ॥

ಅನುವಾದ

ಶಿಲಾ ಖಂಡಗಳನ್ನು ಎಸೆದುದರಿಂದ ಸಮುದ್ರದ ನೀರು ಆಕಾಶದವರೆಗೆ ಚಿಮ್ಮಿ, ಕೆಳಗೆ ಬೀಳುತ್ತಿತ್ತು.॥61॥

ಮೂಲಮ್ - 62

ಸಮುದ್ರಂ ಕ್ಷೋಭಯಾಮಾಸುರ್ನಿಪತಂತಃ ಸಮಂತತಃ ।
ಸೂತ್ರಾಣ್ಯನ್ಯೇ ಪ್ರಗೃಹ್ಣಂತಿ ಹ್ಯಾಯತಂ ಶತಯೋಜನಮ್ ॥

ಅನುವಾದ

ಆ ವಾನರರು ಎಲ್ಲೆಡೆ ಬಂಡೆಗಳನ್ನು ಹಾಕಿ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಇತರ ಕೆಲವು ವಾನರರು ನೂರು ಯೋಜನ ಉದ್ದದ ದಾರವನ್ನು ಹಿಡಿದುಕೊಂಡಿದ್ದರು.॥62॥

ಮೂಲಮ್ - 63

ನಲಶ್ಚಕ್ರೇ ಮಹಾಸೇತುಂ ಮಧ್ಯೇ ನದನದೀಪತೇಃ ।
ಸ ತದಾ ಕ್ರಿಯತೇ ಸೇತುರ್ವಾನರೈರ್ಘೋರಕರ್ಮಭಿಃ ॥

ಅನುವಾದ

ನಳನು ನದ-ನದಿಗಳ ಸ್ವಾಮಿ ಸಮುದ್ರದ ಮಧ್ಯದಲ್ಲಿ ಮಹಾಸೇತುವೆಯನ್ನು ನಿರ್ಮಿಸುತ್ತಿದ್ದನು. ಭಯಂಕರ ಕರ್ಮರಾದ ವಾನರರು ಒಂದಾಗಿ ಆಗ ಸೇತುವೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು.॥63॥

ಮೂಲಮ್ - 64

ದಂಡಾನನ್ಯೇ ಪ್ರಗೃಹ್ಣಂತಿ ವಿಚಿನ್ವಂತಿ ತಥಾಪರೇ ।
ವಾನರೈಃ ಶತಶಸ್ತತ್ರ ರಾಮಸ್ಯಾಜ್ಞಾಪುರಃಸರೈಃ ॥

ಮೂಲಮ್ - 65

ಮೇಘಾಭೈಃ ಪರ್ವತಾಭೈಶ್ಚ ತೃಣೈಃ ಕಾಷ್ಠೈರ್ಬಬಂಧಿರೇ ।
ಪುಷ್ಟಿತಾಗ್ರೈಶ್ಚ ತರುಭಿಃ ಸೇತುಂ ಬಧ್ನಂತಿ ವಾನರಾಃ ॥

ಅನುವಾದ

ಕೆಲವರು ಅಳತೆ ಗಾಗಿ ದಂಡ ಹಿಡಿದರೆ, ಕೆಲವರು ಸಾಮಗ್ರಿಗಳನ್ನು ಒದಗಿಸುತ್ತಿದ್ದರು. ಶ್ರೀರಾಮಚಂದ್ರನ ಅಪ್ಪಣೆಯನ್ನು ಶಿರಸಾವಹಿಸಿ ಪರ್ವತಗಳಂತೆ, ಮೇಘ ಗಳಂತೆ ಕಂಡುಬರುವ ಸಾವಿರಾರು ವಾನರರು ಹುಲ್ಲು ಮತ್ತು ಕಟ್ಟಿಗೆಗಳಿಂದ ಅಲ್ಲಲ್ಲಿ ಸೇತುವೆ ಕಟ್ಟುತ್ತಿದ್ದರು. ತುದಿಯಲ್ಲಿ ಹೂವುಗಳು ಅರಳಿದ ಮರಗಳ ಮೂಲಕವೂ ಸೇತುವೆ ಕಟ್ಟುತ್ತಿದ್ದರು.॥64-65॥

ಮೂಲಮ್ - 66

ಪಾಷಾಣಾಂಶ್ಚ ಗಿರಿಪ್ರಖ್ಯಾನ್ ಗಿರೀಣಾಂ ಶಿಖರಾಣಿ ಚ ।
ದೃಶ್ಯಂತೇ ಪರಿಧಾವಂತೋ ಗೃಹ್ಯ ವಾರಣ ಸಂನಿಭಾಃ ॥

ಅನುವಾದ

ಪರ್ವತ ಗಳಂತಹ ದೊಡ್ಡ ದೊಡ್ಡ ಬಂಡೆಗಳನ್ನು ಮತ್ತು ಪರ್ವತ ಶಿಖರಗಳನ್ನು ಎತ್ತಿಕೊಂಡು ಎಲ್ಲೆಡೆ ಓಡುತ್ತಿರುವ ವಾನರರು ದಾನವರಂತೆ ಕಂಡುಬರುತ್ತಿದ್ದರು.॥6.॥

ಮೂಲಮ್ - 67

ಶಿಲಾನಾಂ ಕ್ಷಿಪ್ಯಮಾಣಾನಾಂ ಶೈಲಾನಾಂ ತತ್ರಪಾತ್ಯತಾಮ್ ।
ಬಭೂವ ತುಮುಲಃ ಶಬ್ದ ಸ್ತದಾ ತಸ್ಮಿನ್ ಮಹೋದಧೌ ॥

ಮೂಲಮ್ - 68

ಕೃತಾನಿ ಪ್ರಥಮೇನಾಹ್ನಾ ಯೋಜನಾನಿ ಚತುರ್ದಶ ।
ಪ್ರಹೃಷ್ಟೈರ್ಗಜ ಸಂಕಾಶೈಸ್ತ್ವರಮಾಣೈಃ ಪ್ಲವಂಗಮೈಃ ॥

ಅನುವಾದ

ಆಗ ಆ ಮಹಾಸಾಗರದಲ್ಲಿ ಎಸೆಯುವ ಶಿಲೆಗಳಿಂದ, ಬೆಟ್ಟಗಳಿಂದ ಭಾರೀ ಭೀಷಣ ಶಬ್ದವಾಗುತ್ತಿತ್ತು. ಆನೆಯಂತಹ ವಿಶಾಲಕಾಯ ವಾನರರು ಬಹಳ ಉತ್ಸಾಹದಿಂದ ಹಾಗೂ ವೇಗದಿಂದ ಕೆಲಸದಲ್ಲಿ ತೊಡಗುತ್ತಿದ್ದರು. ಮೊದಲನೆಯ ದಿನ ಅವರು ಹದಿನಾಲ್ಕು ಯೋಜನ ಉದ್ದದ ಸೇತುವೆ ಕಟ್ಟಿದರು.॥67-68॥

ಮೂಲಮ್ - 69

ದ್ವಿತೀಯೇನ ತಥೈವಾಹ್ನಾ ಯೋಜನಾನಿ ತು ವಿಂಶತಿಃ ।
ಕೃತಾನಿ ಪ್ಲವಗೈಸ್ತೂರ್ಣಂ ಭೀಮಕಾಯೈರ್ಮಹಾಬಲೈಃ ॥

ಅನುವಾದ

ಎರಡನೆಯ ದಿವಸ ಭಯಂಕರ ಶರೀರವುಳ್ಳ ಮಹಾಬಲಿ ವಾನರರು ವೇಗವಾಗಿ ಇಪ್ಪತ್ತು ಯೋಜನ ಉದ್ದದ ಸೇತುವೆ ಕಟ್ಟಿಬಿಟ್ಟರು.॥6.॥

ಮೂಲಮ್ - 70

ಅಹ್ನಾ ತೃತೀಯೇನ ತಥಾ ಯೋಜನಾನಿ ತು ಸಾಗರೇ ।
ತ್ವರಮಾಣೈರ್ಮಹಾಕಾಯೈರೇಕವಿಂಶತಿರೇವ ಚ ॥

ಅನುವಾದ

ಮೂರನೆಯ ದಿವಸ ಶೀಘ್ರವಾಗಿ ಕೆಲಸದಲ್ಲಿ ತೊಡಗಿರುವ ಮಹಾಕಾಯ ಕಪಿಗಳು ಸಮುದ್ರದಲ್ಲಿ ಇಪ್ಪತ್ತೊಂದು ಯೋಜನ ಉದ್ದದ ಸೇತುವೆ ಕಟ್ಟಿದರು.॥7.॥

ಮೂಲಮ್ - 71

ಚತುರ್ಥೇನ ತಥಾ ಚಾಹ್ನಾ ದ್ವಾವಿಂಶತಿ ರಥಾಪಿ ವಾ ।
ಯೋಜನಾನಿ ಮಹಾವೇಗೈಃ ಕೃತಾನಿ ತ್ವರಿತೈಸ್ತತಃ ॥

ಅನುವಾದ

ನಾಲ್ಕನೆಯ ದಿನ ಮಹಾವೇಗಶಾಲೀ ಮತ್ತು ಶೀಘ್ರಕಾರೀ ವಾನರರು ಇಪ್ಪತ್ತೆರಡು ಯೋಜನ ಉದ್ದದ ಸೇತುವೆಯನ್ನು ನಿರ್ಮಿಸಿದರು.॥7.॥

ಮೂಲಮ್ - 72

ಪಂಚಮೇನ ತಥಾ ಚಾಹ್ನಾ ಪ್ಲವಗೈಃ ಕ್ಷಿಪ್ರಕಾರಿಭಿಃ ।
ಯೋಜನಾನಿ ತ್ರಯೋವಿಂಶತ್ ಸುವೇಲಮಧಿಕೃತ್ಯ ವೈ ॥

ಅನುವಾದ

ಐದನೆಯ ದಿವಸ ಅವಸರಪಡುತ್ತಿದ್ದ ಆ ವಾನರ ವೀರರು ಸುವೇಲ ಪರ್ವತದವರೆಗೆ ಇಪ್ಪತ್ತಮೂರುಯೋಜನ ಉದ್ದ ಸೇತುವೆ ಕಟ್ಟಿದರು.॥72॥

ಮೂಲಮ್ - 73

ಸ ವಾನರವರಃ ಶ್ರೀಮಾನ್ ವಿಶ್ವಕರ್ಮಾತ್ಮಜೋ ಬಲೀ ।
ಬಬಂಧ ಸಾಗರೇ ಸೇತುಂ ಯಥಾ ಚಾಸ್ಯ ಪಿತಾ ತಥಾ ॥

ಅನುವಾದ

ಹೀಗೆ ವಿಶ್ವಕರ್ಮನ ಬಲಿಷ್ಠ ಪುತ್ರ, ಶಾಂತಿವಂತ ಕಪಿಶ್ರೇಷ್ಠ ನಳನು ಸಮುದ್ರದಲ್ಲಿ ನೂರು ಯೋಜನ ಉದ್ದದ ಸೇತುವೆಯನ್ನು ಸಿದ್ಧಗೊಳಿಸಿದನು. ಈ ಕಾರ್ಯದಲ್ಲಿ ಅವನು ತನ್ನ ತಂದೆಯಂತೆಯೇ ಪ್ರಭಾವಶಾಲಿಯಾಗಿದ್ದನು.॥73॥

ಮೂಲಮ್ - 74

ಸ ನಲೇನ ಕೃತಃ ಸೇತುಃ ಸಾಗರೇ ಮಕರಾಲಯೇ ।
ಶುಶುಭೇ ಸುಭಗಃ ಶ್ರೀಮಾನ್ ಸ್ವಾತೀಪಥ ಇವಾಂಬರೇ ॥

ಅನುವಾದ

ಮೀನುಗಳಿಗೆ ವಾಸಸ್ಥಾನವಾದ ಸಮುದ್ರದಲ್ಲಿ ನಳನಿಂದ ನಿರ್ಮಾಣಗೊಂಡ ಆ ಸುಂದರವಾದ ಮತ್ತು ಶೋಭಾಯಮಾನವಾಗಿದ್ದ ಸೇತುವೆಯು ಆಕಾಶದಲ್ಲಿ ಸ್ವಾತೀಪಥ (ಛಾಯಾಪಥ)ದಂತೆ ಸುಶೋಭಿತವಾಗಿತ್ತು.॥74॥

ಮೂಲಮ್ - 75

ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಆಗಮ್ಯ ಗಗನೇ ತಸ್ಥುರ್ದ್ರಷ್ಟುಕಾಮಾಸ್ತದದ್ಭುತಮ್ ॥

ಅನುವಾದ

ಆಗ ಆ ಅದ್ಭುತ ಕಾರ್ಯವನ್ನು ನೋಡಲು ದೇವತೆಗಳು, ಗಂಧರ್ವರು, ಸಿದ್ಧರು, ಮಹರ್ಷಿಗಳು ಆಕಾಶದಲ್ಲಿ ಬಂದು ನಿಂತುಕೊಂಡರು.॥75॥

ಮೂಲಮ್ - 76

ದಶಯೋಜನವಿಸ್ತೀರ್ಣಂ ಶತಯೋಜನಮಾಯತಮ್ ।
ದದೃಶುರ್ದೇವಗಂಧಾರ್ವಾ ನಲಸೇತುಂ ಸುದುಷ್ಕರಮ್ ॥

ಅನುವಾದ

ಹತ್ತು ಯೋಜನ ಅಗಲ ಮತ್ತು ನೂರು ಯೋಜನ ಉದ್ದವಾದ, ಸಮುದ್ರದಲ್ಲಿ ಕಟ್ಟಲು ಅತ್ಯಂತ ಕಠಿಣವಾದ ಆ ನಳಸೇತುವೆಯನ್ನು ದೇವ-ಗಂಧರ್ವ-ಸಿದ್ಧ-ಪರಮರ್ಷಿಗಳು ನೋಡಿ ವಿಸ್ಮಿತರಾದರು.॥76॥

ಮೂಲಮ್ - 77½

ಆಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ತಮಚಿಂತ್ಯಮಸಹ್ಯಂ ಚ ಹೃದ್ಭುತಂ ಲೋಮಹರ್ಷಣಮ್ ॥
ದದೃಶುಃ ಸರ್ವಭೂತಾನಿಸಾಗರೇ ಸೇತುಬಂಧನಮ್ ।

ಅನುವಾದ

ವಾನರರೂ ಕೂಡ ಅತ್ತಿಂದಿತ್ತ ನೆಗೆಯುತ್ತಾ, ಕುಣಿಯುತ್ತಾ, ಗರ್ಜಿಸುತ್ತಾ, ಊಹಿಸಲು ಅಸಾಧ್ಯವಾದ, ಪರಮಾದ್ಭುತವಾಗಿದ್ದ, ರೋಮಾಂಚಕರ ಸೇತುವೆಯನ್ನು ನೋಡುತ್ತಿದ್ದರು. ಸಮಸ್ತ ಪ್ರಾಣಿಗಳೂ ಸಮುದ್ರದ ಮೇಲೆ ನಿರ್ಮಿಸಿದ ಸೇತುವೆಯನ್ನು ನೋಡಿ ಅಚ್ಚರಿಪಟ್ಟರು.॥77½॥

ಮೂಲಮ್ - 78½

ತಾನಿ ಕೋಟಿ ಸಹಸ್ರಾಣಿ ವಾನರಾಣಾಂ ಮಹೌಜಸಾಮ್ ॥
ಬಧ್ನಂತಃ ಸಾಗರೇ ಸೇತುಂ ಜಗ್ಮುಃ ಪಾರಂ ಮಹೋದಧೇಃ ।

ಅನುವಾದ

ಹೀಗೆ ಮಹಾಬಲಿಷ್ಠರಾದ ಪರಮೋತ್ಸಾಹೀ ಸಾವಿರಕೋಟಿ ವಾನರ ಸೈನಿಕರು ಸಮುದ್ರದಲ್ಲಿ ಸೇತುವೆಯನ್ನು ಕಟ್ಟುತ್ತಲೇ ಸಮುದ್ರದ ಆಚೆಯ ದಡಕ್ಕೆ ತಲುಪಿದರು.॥78½॥

ಮೂಲಮ್ - 79½

ವಿಶಾಲಃ ಸುಕೃತಃ ಶ್ರೀಮಾನ್ ಸುಭೂಮಿಃ ಸುಸಮಾಹಿತಃ ॥
ಅಶೋಭತ ಮಹಾನ್ ಸೇತುಃ ಸೀಮಂತ ಇವ ಸಾಗರೆ ।

ಅನುವಾದ

ವಿಶಾಲವಾಗಿದ್ದ, ಸುಂದರವಾಗಿ ಕಟ್ಟಿದ ಸಮತಲವಾಗಿದ್ದ, ಸುಸಂಬದ್ಧವಾಗಿದ್ದ ಆ ಮಹಾಸೇತುವೆಯು ಸಾಗರದಲ್ಲಿ ಹೆಂಗಸರ ಬೈತಲೆಯಂತೆ ಶೋಭಿಸುತ್ತಿತ್ತು.॥79½॥

ಮೂಲಮ್ - 80½

ತತಃ ಪಾರೇ ಸಮುದ್ರಸ್ಯ ಗದಾಪಾಣಿರ್ವಿಭೀಷಣಃ ॥
ಪರೇಷಾಮಭಿಘಾತಾರ್ಥಮತಿಷ್ಠತ್ ಸಚಿವೈಃ ಸಹ ।

ಅನುವಾದ

ಸೇತುವೆ ಸಿದ್ಧವಾದೊಡನೆಯೇ ಗದಾಪಾಣಿಯಾದ ವಿಭೀಷಣನು ತನ್ನ ಸಚಿವರೊಡನೆ ಸಮುದ್ರದ ಆಚೆಯ ದಡದಲ್ಲಿ ನಿಂತನು. ಶತ್ರುಗಳೇನಾದರೂ ಸೇತುವೆಯನ್ನು ಮುರಿಯಲು ಬಂದರೆ ಅವರನ್ನು ದಂಡಿಸುವುದೇ ಅವನ ಉದ್ದೇಶವಾಗಿತ್ತು.॥80½॥

ಮೂಲಮ್ - 81

ಸುಗ್ರೀವಸ್ತು ತತಃ ಪ್ರಾಹ ರಾಮಂ ಸತ್ಯಪರಾಕ್ರಮಮ್ ॥

ಮೂಲಮ್ - 82½

ಹನೂಮಂತಂ ತ್ವಮಾರೋಹ ಅಂಗದಂ ಚಾಪಿ ಲಕ್ಷ್ಮಣಃ ।
ಅಯಂ ಹಿ ವಿಪುಲೋ ವೀರ ಸಾಗರೋ ಮಕರಾಲಯಃ ॥
ವೈಹಾಯಸೌ ಯುವಾಮೇತೌ ವಾನರೌ ಧಾರಯಿಷ್ಯತಃ ।

ಅನುವಾದ

ಬಳಿಕ ಸುಗ್ರೀವನು ಸತ್ಯಪರಾಕ್ರಮಿ ಶ್ರೀರಾಮನಲ್ಲಿ- ‘ವೀರವರನೇ! ನೀನು ಹನುಮಂತನ ಹೆಗಲೇರು, ಲಕ್ಷ್ಮಣನು ಅಂಗದನ ಹೆಗಲಲ್ಲಿ ಕುಳ್ಳಿರಲಿ; ಏಕೆಂದರೆ ಈ ಮಕರಾಲಯ ಸಮುದ್ರವು ಬಹಳ ಉದ್ದ-ಅಗಲವಾಗಿದೆ. ಇವರಿಬ್ಬರೂ ವಾನರರು ಆಕಾಶ ಮಾರ್ಗದಿಂದ ಹೋಗಬಲ್ಲವರಾಗಿದ್ದಾರೆ. ಆದ್ದರಿಂದ ಇವರಿಬ್ಬರು ನಿಮ್ಮಿಬ್ಬರನ್ನು ಹೊತ್ತುಕೊಳ್ಳುವರು.॥81-82½॥

ಮೂಲಮ್ - 83½

ಅಗ್ರತಸ್ತ ಸ್ಯ ಸೈನ್ಯಸ್ಯ ಶ್ರೀಮಾನ್ ರಾಮಃ ಸಲಕ್ಷ್ಮಣಃ ॥
ಜಗಾಮ ಧನ್ವೀಧರ್ಮಾತ್ಮಾ ಸುಗ್ರೀವೇಣ ಸಮನ್ವಿತಃ ।

ಅನುವಾದ

ಹೀಗೆ ಧನುರ್ಧರ, ಧರ್ಮಾತ್ಮಾ ಭಗವಾನ್ ಶ್ರೀರಾಮ-ಲಕ್ಷ್ಮಣರು, ಸುಗ್ರೀವನೊಂದಿಗೆ ಆ ಸೈನ್ಯದ ಮುಂಭಾಗದಲ್ಲಿ ಪಯಣಿಸುತ್ತಿದ್ದರು.॥83॥

ಮೂಲಮ್ - 84

ಅನ್ಯೇ ಮಧ್ಯೇನ ಗಚ್ಛಂತಿ ಪಾರ್ಶ್ವತೋಽನ್ಯೇ ಪ್ಲವಂಗಮಾಃ ॥

ಮೂಲಮ್ - 85

ಸಲಿಲಂ ಪ್ರಪತಂನ್ಯನ್ಯೇ ಮಾರ್ಗಮನ್ಯೇ ಪ್ರಪೇದಿರೇ ।
ಕೇಚಿದ್ ವೈಹಾಯಸಗತಾಃ ಸುಪರ್ಣಾ ಇವ ಪುಪ್ಲುವುಃ ॥

ಅನುವಾದ

ಇತರ ವಾನರರು ಸೈನ್ಯದ ನಡುವೆ ಮತ್ತು ಅಕ್ಕಪಕ್ಕದಲ್ಲಿ ನಡೆಯತೊಡಗಿದರು. ಎಷ್ಟೋ ವಾನರರು ಸಮುದ್ರಕ್ಕೆ ಹಾರಿ ಈಜಿಕೊಂಡೇ ಹೋಗುತ್ತಿದ್ದರು. ಇತರರು ಸೇತುವೆಯ ಮೂಲಕ ಹೋಗುತ್ತಿದ್ದರೆ, ಕೆಲವರು ಆಕಾಶಕ್ಕೆ ನೆಗೆದು ಗರುಡನಂತೆ ಹಾರಿ ಹೋಗುತ್ತಿದ್ದರು.॥84-85॥

ಮೂಲಮ್ - 86

ಘೋಷೇಣ ಮಹತಾ ಘೋಷಂ ಸಾಗರಸ್ಯ ಸಮುಚ್ಛ್ರಿತಮ್ ।
ಭೀಮಮಂತರ್ದಧೇ ಭೀಮಾ ತರಂತೀ ಹರಿವಾಹಿನೀ ॥

ಅನುವಾದ

ಈ ಪ್ರಕಾರ ದಾಟುತ್ತಿದ್ದ ಆ ಭಯಂಕರ ಸೈನ್ಯದ ಮಹಾಘೋಷವು ಸಮುದ್ರದ ಭಾರೀ ಗರ್ಜನೆಯನ್ನು ಮೀರಿಸಿದಂತಿತ್ತು.॥86॥

ಮೂಲಮ್ - 87

ವಾನರಾಣಾಂ ಹಿ ಸಾ ತೀರ್ಣಾ ವಾಹಿನೀ ನಲಸೇತುನಾ ।
ತೀರೇ ನಿವಿವಿಶೇ ರಾಜ್ಞೋ ಬಹುಮೂಲ ಫಲೋದಕೇ ॥

ಅನುವಾದ

ನಳನು ನಿರ್ಮಿಸಿದ ಸೇತುವೆಯಿಂದ ವಾನರರ ಎಲ್ಲ ಸೈನ್ಯವು ನಿಧಾನವಾಗಿ ಸಮುದ್ರದ ಆಚೆ ದಡವನ್ನು ತಲುಪಿತು. ರಾಜಾ ಸುಗ್ರೀವನು ಲ-ಮೂಲ ಮತ್ತು ನೀರಿನ ಸೌಲಭ್ಯ ಹೆಚ್ಚಿರುವುದನ್ನು ನೋಡಿ ಅಲ್ಲೇ ಸೈನ್ಯದ ಬಿಡಾರ ಬಿಟ್ಟನು.॥87॥

ಮೂಲಮ್ - 88

ತದದ್ಭುತಂ ರಾಘವಕರ್ಮ ದುಷ್ಕರಂ
ಸಮೀಕ್ಷ್ಯ ದೇವಾಃ ಸಹ ಸಿದ್ಧಚಾರಣೈಃ ।
ಉಪೇತ್ಯ ರಾಮಂ ಸಹಸಾ ಮಹರ್ಷಿಭಿಃ
ಸಮಭ್ಯಷಿಂಚನ್ ಸುಶುಭೈರ್ಜಲೈಃ ಪೃಥಕ್ ॥

ಅನುವಾದ

ಭಗವಾನ್ ಶ್ರೀರಾಮನ ಆ ಅದ್ಭುತ ಮತ್ತು ದುಷ್ಕರ ಕರ್ಮವನ್ನು ನೋಡಿ ಸಿದ್ಧರು, ಚಾರಣರು, ಮಹರ್ಷಿ ಗಳೊಂದಿಗೆ ದೇವತೆಗಳು ಅವನ ಬಳಿಗೆ ಬಂದು ಬೇರೆ ಬೇರೆಯಾದ ಶುಭಜಲದಿಂದ ಅವನ ಅಭಿಷೇಕ ಮಾಡಿದರು.॥88॥

ಮೂಲಮ್ - 89

ಜಯಸ್ವ ಶತ್ರೂನ್ ನರದೇವ ಮೇದಿನೀಂ
ಸಸಾಗರಾಂ ಪಾಲಯ ಶಾಶ್ವತೀಃ ಸಮಾಃ ।
ಇತೀವ ರಾಮಂ ನರದೇವಸತ್ಕತಂ
ಶುಭೈರ್ವಚೋಭಿರ್ವಿವಿಧೈರಪೂಜಯನ್ ॥

ಅನುವಾದ

ಮತ್ತೆ ನುಡಿದರು-ನರದೇವನೇ! ನೀನು ಶತ್ರುಗಳನ್ನು ಜಯಿಸಿ, ಸಾಗರಾಂತ ಪೃಥಿವಿಯನ್ನು ಸದಾ ಪಾಲಿಸುತ್ತಾ ಇರು. ಹೀಗೆ ಅನೇಕ ಶುಭವಾಕ್ಯಗಳಿಂದ ಶ್ರೀರಾಮನನ್ನು ಅಭಿನಂದಿಸಿದರು.॥89॥
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು.॥22॥