०२१ रामेण समुद्रक्रोधः

वाचनम्
ಭಾಗಸೂಚನಾ

ಶ್ರೀರಾಮನು ಸಮುದ್ರತೀರದಲ್ಲಿ ದರ್ಭೆಹಾಸಿ ಮೂರು ದಿನ ಪ್ರಾಯೋಪವೇಶ ಮಾಡಿದರೂ ಸಮುದ್ರನ ದರ್ಶನವಾಗದಿದ್ದಾಗ ಕುಪಿತನಾಗಿ ಅವನ ಮೇಲೆ ಬಾಣಪ್ರಯೋಗ ಮಾಡಿದುದು

ಮೂಲಮ್ - 1

ತತಃ ಸಾಗರವೇಲಾಯಾಂ ದರ್ಭಾನಾಸ್ತೀರ್ಯ ರಾಘವಃ ।
ಅಂಜಲಿಂ ಪ್ರಾಙ್ಮುಖಃ ಕೃತ್ವಾ ಪ್ರತಿಶಿಶ್ಯೇ ಮಹೋದಧೇಃ ॥

ಅನುವಾದ

ಅನಂತರ ಶ್ರೀರಘುನಾಥನು ಸಮುದ್ರತೀರದಲ್ಲಿ ದರ್ಭೆಗಳನ್ನು ಹಾಸಿಕೊಂಡು ಮಹಾಸಾಗರದ ಎದುರಿಗೆ ಕೈಮುಗಿದು ಪೂರ್ವಾಭಿಮುಖವಾಗಿ ಮಲಗಿಬಿಟ್ಟನು.॥1॥

ಮೂಲಮ್ - 2

ಬಾಹುಂ ಭುಜಂಗ ಭೋಗಾಭಮುಪಧಾಯಾರಿಸೂದನಃ ।
ಜಾತರೂಪಮಯೈಶ್ಚೈವ ಭೂಷಣೈರ್ಭೂಷಿತಂ ಪುರಾ ॥

ಅನುವಾದ

ಆಗ ಶತ್ರುಸೂದನ ಶ್ರೀರಾಮನು ಸರ್ಪದಂತಹ ಕೋಮಲ ಮತ್ತು ವನವಾಸದ ಮೊದಲು ಬಂಗಾರದ ಸುಂದರ ಒಡವೆಗಳಿಂದ ಅಲಂಕೃತವಾಗಿದ್ದ ತನ್ನ ಬಲತೊಳನ್ನು ದಿಂಬಾಗಿಸಿದ್ದನು.॥2॥

ಮೂಲಮ್ - 3

ಮಣಿಕಾಂಚನ ಕೇಯೂರ ಮುಕ್ತಾಪ್ರವರಭೂಷಣೈಃ ।
ಭುಜೈಃ ಪರಮನಾರೀಣಾಮಭಿಮೃಷ್ಟಮನೇಕಧಾ ॥

ಅನುವಾದ

ಅಯೋಧ್ಯೆಯಲ್ಲಿ ಇರುವಾಗ ಮಣಿ ಮತ್ತು ಸುವರ್ಣದ ಕೇಯೂರ ಹಾಗೂ ಮುತ್ತಿನ ಶ್ರೇಷ್ಠ ಒಡವೆಗಳಿಂದ ವಿಭೂಷಿತ ವಾದ ಆ ತೋಳನ್ನು ಪರಮೋತ್ತಮ ನಾರಿಯರು ತಮ್ಮ ಕರಕಮಲಗಳಿಂದ ಸ್ನಾನ ಮಾಡಿಸುವಾಗ ಅಲಂಕರಿಸುವ ಸಮಯ ಅನೇಕಬಾರಿ ಸವರುತ್ತಾ, ಒತ್ತುತ್ತಿದ್ದರು.॥3॥

ಮೂಲಮ್ - 4

ಚಂದನಾಗರುಭಿಶ್ಚೈವ ಪುರಸ್ತಾದಭಿ ಸೇವಿತಮ್ ।
ಬಾಲಸೂರ್ಯ ಪ್ರತೀಕಾಶೈಶ್ಚ ಚಂದನೈರುಪಶೋಭಿತಮ್ ॥

ಅನುವಾದ

ಮೊದಲಿಗೆ ಚಂದನ ಮತ್ತು ಅಗರುಗಳಿಂದ ಆ ಬಾಹುವಿನ ಸೇವೆಯಾಗುತ್ತಿತ್ತು. ಪ್ರಾತಃಕಾಲದ ಸೂರ್ಯನಂತಹ ಕಾಂತಿಯುಳ್ಳ, ರಕ್ತಚಂದನವು ಅದರ ಶೋಭೆಯನ್ನು ಹೆಚ್ಚಿಸುತ್ತಿತ್ತು.॥4॥

ಮೂಲಮ್ - 5

ಶಯನೇ ಚೋತ್ತಮಾಂಗೇನ ಸೀತಾಯಾಃ ಶೋಭಿತಂ ಪುರಾ ।
ತಕ್ಷಕಸ್ಯೇವ ಸಂಭೋಗಂ ಗಂಗಾಜಲನಿಷೇವಿತಮ್ ॥

ಅನುವಾದ

ಸೀತಾಪಹರಣದ ಮೊದಲು ಶಯನಕಾಲದಲ್ಲಿ ಸೀತೆಯ ಶಿರವು ಆ ಬಾಹುವನ್ನು ಅಲಂಕರಿಸುತ್ತಿತ್ತು. ಶ್ವೇತ ಶಯ್ಯೆಯಲ್ಲಿ ಸ್ಥಿತ ಹಾಗೂ ಕೆಂಪು ಚಂದನದಿಂದ ಚರ್ಚಿತವಾದ ಆ ಬಾಹುವು ಗಂಗಾಜಲದಲ್ಲಿ ವಾಸಿಸುವ ತಕ್ಷಕನ* ಶರೀರದಂತೆ ಸುಶೋಭಿತವಾಗುತ್ತಿತ್ತು.॥5॥

ಟಿಪ್ಪನೀ
  • ತಕ್ಷಕ ನಾಗನ ಬಣ್ಣ ಕೆಂಪು ಎಂದು ತಿಳಿಯಲಾಗಿದೆ. (ನೋಡಿ-ಮಹಾಭಾರತ ಆದಿ-44/2-3)
ಮೂಲಮ್ - 6

ಸಂಯುಗೇ ಯುಗಸಂಕಾಶಂ ಶತ್ರೂಣಾಂ ಶೋಕವರ್ಧನಮ್ ।
ಸುಹೃದಾಂ ನಂದನಂ ದೀರ್ಘಂ ಸಾಗರಾಂತವ್ಯಪಾಶ್ರಯಮ್ ॥

ಅನುವಾದ

ನೇಗಿಲಿನಂತೆ ಸುದೀರ್ಘವಾಗಿದ್ದ ಆ ಬಾಹುವು ಯುದ್ಧದಲ್ಲಿ ಶತ್ರುಗಳ ಶೋಕವನ್ನು ಹೆಚ್ಚಿಸುತ್ತಿತ್ತು. ಸುಹೃದರಿಗೆ ಸಂತೋಷವನ್ನುಂಟುಮಾಡುತ್ತಿತ್ತು. ಸಾಗರಾಂತ ಭೂಮಂಡಲದ ರಕ್ಷಣೆಯ ಭಾರವೂ ಅವನ ಆ ಬಾಹುವನ್ನೇ ಆಶ್ರಯಿಸಿತ್ತು.॥.॥

ಮೂಲಮ್ - 7

ಅಸ್ಯತಾ ಚ ಪುನಃ ಸವ್ಯಂ ಜ್ಯಾಘಾತವಿಹತತ್ವಚಮ್ ।
ದಕ್ಷಿಣೋ ದಕ್ಷಿಣಂ ಬಾಹುಂ ಮಹಾಪರಿಘ ಸನ್ನಿಭಮ್ ॥

ಮೂಲಮ್ - 8

ಗೋಸಹಸ್ರಪ್ರದಾತಾರಂಹ್ಯುಪಧಾಯ ಭುಜಂ ಮಹತ್ ।
ಅದ್ಯ ಮೇ ತರಣಂ ವಾಥ ಮರಣಂ ಸಾಗರಸ್ಯ ವಾ ॥

ಮೂಲಮ್ - 9

ಇತಿ ರಾಮೋ ಧೃತಿಂ ಕೃತ್ವಾ ಮಹಾಬಾಹುರ್ಮಹೋದಧಿಮ್ ।
ಅಧಿಶಿಶ್ಯೇ ಚ ವಿಧಿವತ್ ಪ್ರಯತೋ ನಿಯತೋ ಮುನಿಃ ॥

ಅನುವಾದ

ಪುನಃ ಪುನಃ ಬಿಲ್ಲಿನ ನಾಣನ್ನು ಸೆಳೆಯುತ್ತಿದ್ದ ಕಾರಣ ಜಡ್ಡುಕಟ್ಟಿದ್ದ, ದೊಡ್ಡ ಪರಿಘಾಯುಧಕ್ಕೆ ಸಮಾನವಾದ, ಸುದೃಢವಾಗಿಯೂ ಬಲಿಷ್ಠವೂ ಆಗಿದ್ದ, ಸಾವಿರಾರು ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದ್ದ, ವಿಶಾಲ ಬಲದ ತೋಳನ್ನು ತಲೆದಿಂಬಾಗಿಸಿಕೊಂಡಿದ್ದನು. ಉದಾರತೆ ಮೊದಲಾದ ಗುಣಗಳಿಂದ ಕೂಡಿದ ಮಹಾಬಾಹು ಶ್ರೀರಾಮನ- ‘ಇಂದು ಒಂದೋ ನಾನು ಸಮುದ್ರವನ್ನು ದಾಟಿ ಹೋಗುವೆನು, ಇಲ್ಲದಿದ್ದರೆ ಸಮುದ್ರವನ್ನು ಸಂಹರಿಸಿಬಿಡುವೆನು’ ಎಂದು ನಿಶ್ಚಯಿಸಿ, ಮೌನದಿಂದ ಮನ-ವಾಣಿಯನ್ನು, ಶರೀರವನ್ನು ಸಂಯಮದಲ್ಲಿಟ್ಟುಕೊಂಡು ಮಹಾಸಾಗರವನ್ನು ಒಲಿಸಿ ಕೊಳ್ಳುವ ಉದ್ದೇಶದಿಂದ ವಿಧಿವತ್ತಾಗಿ ಪ್ರಾಯೋಪವೇಶ ಮಾಡುತ್ತಾ ಆ ಕುಶಾಸನದಲ್ಲಿ ಮಲಗಿಬಿಟ್ಟಿದ್ದನು.॥7-9॥

ಮೂಲಮ್ - 10

ತಸ್ಯ ರಾಮಸ್ಯ ಸುಪ್ತಸ್ಯ ಕುಶಾಸ್ತೀರ್ಣೇ ಮಹೀತಲೇ ।
ನಿಯಮಾದಪ್ರಮತ್ತಸ್ಯ ನಿಶಾಸ್ತಿಸ್ರೋಽಭಿಜಗ್ಮತುಃ ॥

ಅನುವಾದ

ದರ್ಭೆಗಳನ್ನು ಹಾಸಿದ್ದ ಭೂಮಿಯ ಮೇಲೆ ಮಲಗಿ, ನಿಯಮಾನುಸಾರ ಅಪ್ರಮತ್ತನಾಗಿ ಶ್ರೀರಾಮನು ಹೀಗೆ ಮೂರು ರಾತ್ರೆಗಳನ್ನು ಕಳೆದನು.॥1.॥

ಮೂಲಮ್ - 11

ಸ ತ್ರಿರಾತ್ರೋಷಿತಸ್ತತ್ರ ನಯಜ್ಞೋ ಧರ್ಮವತ್ಸಲಃ ।
ಉಪಾಸತ ತದಾ ರಾಮಃ ಸಾಗರಂ ಸರಿತಾಂ ಪತಿಮ್ ॥

ಮೂಲಮ್ - 12

ನ ಚ ದರ್ಶಯತೇ ರೂಪಂ ಮಂದೋ ರಾಮಸ್ಯ ಸಾಗರಃ ।
ಪ್ರಯತೇನಾಪಿ ರಾಮೇಣ ಯಥಾರ್ಹಮಭಿಪೂಜಿತಃ ॥

ಅನುವಾದ

ಈ ಪ್ರಕಾರ ಆಗ ಅಲ್ಲಿ ಮೂರು ರಾತ್ರೆಗಳನ್ನು ಮಲಗಿದ್ದು ನೀತಿಜ್ಞ, ಧರ್ಮವತ್ಸಲ ಶ್ರೀರಾಮಚಂದ್ರನು ಸರಿತೆಗಳ ಸ್ವಾಮಿ ಸಮುದ್ರದ ಉಪಾಸನೆ ಮಾಡುತ್ತಾ ಇದ್ದನು; ಆದರೂ ನಿಯಮ ಪೂರ್ವಕವಾಗಿದ್ದ ಶ್ರೀರಾಮನಿಂದ ಯಥೋಚಿತ ಪೂಜೆ - ಸತ್ಕಾರ ಪಡೆದರೂ ಆ ಮಂದಮತಿ ಮಹಾಸಾಗರನು ತನ್ನ ಅಧಿದೈವಿಕ ರೂಪವನ್ನು ತೋರಿಸಲಿಲ್ಲ-ಅವನು ರಾಮನ ಮುಂದೆ ಪ್ರಕಟನಾಗಲಿಲ್ಲ.॥11-12॥

ಮೂಲಮ್ - 13

ಸಮುದ್ರಸ್ಯ ತತಃ ಕ್ರುದ್ಧೋ ರಾಮೋ ರಕ್ತಾಂತಲೋಚನಃ ।
ಸಮೀಪಸ್ಥಮುವಾಚೇದಂ ಲಕ್ಷ್ಮಣಂ ಶುಭಲಕ್ಷಣಮ್ ॥

ಅನುವಾದ

ಕೆಂಪಾಗಿದ್ದ ಕಡೆಗಣ್ಣಿನ ಭಗವಾನ್ ಶ್ರೀರಾಮನು ಸಮುದ್ರದ ಮೇಲೆ ಕುಪಿತನಾಗಿ, ಬಳಿಯಲ್ಲೇ ನಿಂತಿದ್ದ ಶುಭಲಕ್ಷಣಯುಕ್ತ ಲಕ್ಷ್ಮಣನಲ್ಲಿ ಹೀಗೆ ನುಡಿದನು.॥1.॥

ಮೂಲಮ್ - 14½

ಅವಲೇಪಃ ಸಮುದ್ರಸ್ಯ ನ ದರ್ಶಯತಿ ಯಃ ಸ್ವಯಮ್ ।
ಪ್ರಶಮಶ್ಚ ಕ್ಷಮಾ ಚೈವ ಆರ್ಜವಂ ಪ್ರಿಯವಾದಿತಾ ॥
ಅಸಾಮರ್ಥ್ಯ ಫಲಾಹ್ಯೇತೇ ನಿರ್ಗುಣೇಷು ಸತಾಂ ಗುಣಾಃ ॥

ಅನುವಾದ

ಸಮುದ್ರನಿಗೆ ತನ್ನ ಕುರಿತಾದ ಭಾರೀ ಅಹಂಕಾರವಿದೆ. ಅದರಿಂದ ಅವನು ಸ್ವತಃ ನನ್ನ ಮುಂದೆ ಪ್ರಕಟನಾಗುತ್ತಿಲ್ಲ. ಶಾಂತಿ, ಕ್ಷಮೆ, ಸರಳತೆ ಮತ್ತು ಮಧುರಭಾಷಣ ಇವು ಸತ್ಪುರುಷರ ಗುಣಗಳನ್ನು, ಗುಣಾಹೀನ ಕುರಿತು ಪ್ರಯೋಗಿಸಿದರ ಪರಿಣಾಮ ಅವರು ಆ ಗುಣೀ ಮನುಷ್ಯನನ್ನು ಅಸಮರ್ಥರೆಂದು ತಿಳಿಯುತ್ತಾರೆ.॥14½॥

ಮೂಲಮ್ - 15½

ಆತ್ಮ ಪ್ರಶಂಸಿನಂ ದುಷ್ಟಂ ಧೃಷ್ಟಂ ವಿಪರಿಧಾವಕಮ್ ॥
ಸರ್ವತ್ರೋತ್ಸೃಷ್ಟದಂಡಂ ಚ ಲೋಕಃ ಸತ್ಕುರುತೇ ನರಮ್ ।

ಅನುವಾದ

ತನ್ನನ್ನು ಪ್ರಶಂಸಿಸಿಕೊಳ್ಳುವವ, ದುಷ್ಟ, ಧೃಷ್ಟ, ಎಲ್ಲೆಡೆ ಆಕ್ರಮಣ ಮಾಡುವವ, ಒಳ್ಳೆಯವರು, ಕೆಟ್ಟವರು ಹೀಗೆ ಎಲ್ಲ ಜನರಿಗೆ ಕಠೋರವಾಗಿ ದಂಡಿಸುವ ಮನುಷ್ಯನನ್ನು ಎಲ್ಲರೂ ಸತ್ಕರಿಸುತ್ತಾರ.॥15½॥

ಮೂಲಮ್ - 16½

ನ ಸಾಮ್ನಾ ಶಕ್ಯತೇ ಕೀರ್ತಿರ್ನ ಸಾಮ್ನಾ ಶಕ್ಯತೇ ಯಶಃ ॥
ಪ್ರಾಪ್ತುಂ ಲಕ್ಷ್ಮಣ ಲೋಕೇಽಸ್ಮಿನ್ ಜಯೋ ವಾ ರಣಮೂರ್ಧನಿ ।

ಅನುವಾದ

ಲಕ್ಷ್ಮಣಾ! ಸಾಮನೀತಿ (ಶಾಂತಿ)ಯಿಂದ ಈ ಲೋಕ ದಲ್ಲಿ ಕೀರ್ತಿ ಪ್ರಾಪ್ತವಾಗುವುದಿಲ್ಲ, ಯಶವೂ ಸಿಗಲಾರದು ಹಾಗೂ ಸಂಗ್ರಾಮದಲ್ಲಿ ವಿಜಯವೂ ಸಿಗಲಾರದು.॥16½॥

ಮೂಲಮ್ - 17½

ಅದ್ಯ ಮದ್ಬಾಣನಿರ್ಭಗ್ನೈರ್ಮಕರೈರ್ಮಕರಾಲಯಮ್ ॥
ನಿರುದ್ಧತೋಯಂ ಸೌಮಿತ್ರೇ ಪ್ಲವದ್ಭಿಃ ಪಶ್ಯ ಸರ್ವತಃ ।

ಅನುವಾದ

ಸುಮಿತ್ರಾನಂದನ! ಇಂದು ನನ್ನ ಬಾಣಗಳಿಂದ ಪುಡಿ ಪುಡಿಯಾಗಿ ಮೊಸಳೆ - ಮೀನುಗಳು ಎಲ್ಲೆಡೆ ಓಡತೊಡಗುವರು ಮತ್ತು ಅವುಗಳ ಹೆಣಗಳಿಂದ ಈ ಮಕರಾಲಯ (ಸಮುದ್ರ)ದ ಜಲವು ತುಂಬಿಹೋಗುವ ದೃಶ್ಯವನ್ನು ನೀನು ಕಣ್ಣಾರೆ ನೋಡುವೆ.॥17½॥

ಮೂಲಮ್ - 18½

ಭೋಗಿನಾಂ ಪಶ್ಯಭೋಗಾನಿ ಮಯಾ ಭಿನ್ನಾನಿ ಲಕ್ಷ್ಮಣ ॥
ಮಹಾಭೋಗಾನಿ ಮತ್ಸ್ಯಾನಾಂ ಕರಿಣಾಂ ಚ ಕರಾನಿಹ ।

ಅನುವಾದ

ಲಕ್ಷ್ಮಣ! ಇಲ್ಲಿ ನೀರಿನಲ್ಲಿರುವ ಹಾವುಗಳ ಶರೀರಗಳು, ಮೀನುಗಳು ವಿಶಾಲಕಾಯಗಳು, ನೀರಾನೆಗಳು ಸೊಂಡಲುಗಳು ಹೇಗೆ ನಾನು ತುಂಡು ತುಂಡಾಗಿಸುವೆ ಎಂಬುದನ್ನು ನೀನು ನೋಡು.॥18½॥

ಮೂಲಮ್ - 19½

ಸಶಂಖಶುಕ್ತಿಕಾಜಾಲಂ ಸಮೀನಮಕರಂ ತಥಾ ॥
ಅದ್ಯ ಯುದ್ಧೇನ ಮಹತಾ ಸಮುದ್ರಂ ಪರಿಶೋಷಯೇ ।

ಅನುವಾದ

ಇಂದು ಮಹಾಯುದ್ಧವನ್ನು ಸಾರಿ ಶಂಖ-ಚಿಪ್ಪುಗಳ ಹುಳಗಳ ಸಮುದಾಯ ಹಾಗೂ ಮೀನು ಮೊಸಳೆಗಳ ಸಹಿತ ಸಮುದ್ರವನ್ನು ನಾನು ಈಗಲೇ ಒಣಗಿಸಿ ಬಿಡುವೆನು.॥19½॥

ಮೂಲಮ್ - 20½

ಕ್ಷಮಯಾ ಹಿ ಸಮಾಯುಕ್ತಂ ಮಾಮಯಂ ಮಕರಾಲಯಃ ॥
ಅಸಮರ್ಥಂ ವಿಜಾನಾತಿ ಧಿಕ್ ಕ್ಷಮಾಮೀದೃಶೇ ಜನೇ ।

ಅನುವಾದ

ಮೊಸಳೆಗಳ ನಿವಾಸವಾದ ಈ ಸಮುದ್ರವು ಕ್ಷಮಾಯುಕ್ತ ನನ್ನನ್ನು ನೋಡಿ ಇವನು ಅಸಮರ್ಥನೆಂದು ತಿಳಿಯುತ್ತಿದ್ದಾನೆ. ಇಂತಹ ಮೂರ್ಖನ ಕುರಿತು ಗೈದ ಕ್ಷಮೆಗೆ ಧಿಕ್ಕಾರವಿರಲಿ.॥20½॥

ಮೂಲಮ್ - 21

ನ ದರ್ಶಯತಿ ಸಾಮ್ನಾ ಮೇ ಸಾಗರೋ ರೂಪಮಾತ್ಮನಃ ॥

ಮೂಲಮ್ - 22

ಚಾಪಮಾನಯ ಸೌಮಿತ್ರೇ ಶರಾಂಶ್ಚಾಶೀವಿಷೋಪಮಾನ್ ।
ಸಾಗರಂ ಶೋಷಯಿಷ್ಯಾಮಿ ಪದ್ಭ್ಯಾಂ ಯಾಂತು ಪ್ಲವಂಗಮಾಃ ॥

ಅನುವಾದ

ಸಮಿತ್ರಾ ನಂದನ! ಸಾಮನೀತಿಯನ್ನು ಆಶ್ರಯಿಸಿದ್ದ ರಿಂದ ಈ ಸಮುದ್ರವು ತನ್ನ ರೂಪವನ್ನು ನನ್ನ ಮುಂದೆ ಪ್ರಕಟಿಸುತ್ತಿಲ್ಲ. ಆದ್ದರಿಂದ ಧನುಷ್ಯ ಮತ್ತು ವಿಷಧರ ಸರ್ಪದಂತಿರುವ ಬಾಣಗಳನ್ನು ತೆಗೆದುಕೊಂಡು ಬಾ. ನಾನು ಸಮುದ್ರವನ್ನು ಒಣಗಿಸಿಬಿಡುವೆನು; ಮತ್ತೆ ವಾನರರು ನಡೆದುಕೊಂಡೇ ಲಂಕೆಗೆ ಹೋಗಲಿ.॥21-22॥

ಮೂಲಮ್ - 23

ಅದ್ಯಾಕ್ಷೋಭ್ಯಮಪಿ ಕ್ರುದ್ಧಃ ಕ್ಷೋಭಯಿಷ್ಯಾಮಿ ಸಾಗರಮ್ ।
ವೇಲಾಸು ಕೃತಮರ್ಯಾದಂ ಸಹಸ್ರೋರ್ಮಿಸಮಾಕುಲಮ್ ॥

ಮೂಲಮ್ - 24

ನಿರ್ಮರ್ಯಾದಂ ಕರಿಷ್ಯಾಮಿ ಸಾಯಕೈರ್ವರುಣಾಲಯಮ್ ।
ಮಹಾರ್ಣವಂ ಕ್ಷೋಭಯಿಷ್ಯೇ ಮಹಾದಾನವ ಸಂಕುಲಮ್ ॥

ಅನುವಾದ

ಸಮುದ್ರವನ್ನು ಅಕ್ಷೋಭ್ಯವೆಂದು ಹೇಳುತ್ತಾರೆ, ಆದರೆ ಇಂದು ಕುಪಿತನಾಗಿ ನಾನು ಇದನ್ನು ವಿಕ್ಷುಬ್ಧಗೊಳಿಸುವೆನು. ಇದರಲ್ಲಿ ಸಾವಿರಾರು ತರಂಗಗಳು ಏಳುತ್ತಿವೆ. ಹೀಗಿದ್ದರೂ ಇದು ಸದಾಕಾಲ ತನ್ನ ಮೇರೆಯೊಳಗೇ ಇರುತ್ತದೆ. ಆದರೆ ನಾನು ಬಾಣಬಿಟ್ಟು ಇದರ ಮೇರೆಯನ್ನು ನಾಶಗೊಳಿಸುವೆನು. ದೊಡ್ಡ ದೊಡ್ಡ ದಾನವರು ತುಂಬಿರುವ ಈ ಮಹಾಸಾಗರವನ್ನು ಅಲ್ಲೋಲ ಕಲ್ಲೋಲವಾಗಿಸಿಬಿಡುತ್ತೇನೆ.॥23-24॥

ಮೂಲಮ್ - 25

ಏವಮುಕ್ತ್ವಾ ಧನುಷ್ಪಾಣಿಃ ಕ್ರೋಧವಿಸ್ಫಾರಿತೇಕ್ಷಣಃ ।
ಬಭೂವ ರಾಮೋ ದುರ್ಧರ್ಷೋ ಯುಗಾಂತಾಗ್ನಿರಿವ ಜ್ವಲನ್ ॥

ಅನುವಾದ

ಹೀಗೆ ಹೇಳಿ ದುರ್ಧರ್ಷ ವೀರ ಭಗವಾನ್ ಶ್ರೀರಾಮನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡನು. ಅವನು ಕ್ರೋಧದಿಂದ ಕಣ್ಣರಳಿಸಿ ಪ್ರಯಳಾಗ್ನಿಯಂತೆ ಪ್ರಜ್ವಲಿತನಾದನು.॥2.॥

ಮೂಲಮ್ - 26

ಸಂಪೀಡ್ಯ ಚ ಧನುರ್ಘೋರಂ ಕಂಪಯಿತ್ವಾ ಶರೈರ್ಜಗತ್ ।
ಮುಮೋಚ ವಿಶಿಖಾನುಗ್ರಾನ್ ವಜ್ರಾನಿವ ಶತಕ್ರತುಃ ॥

ಅನುವಾದ

ಅವನು ತನ್ನ ಭಯಂಕರ ಧನುಸ್ಸನ್ನು ಬಗ್ಗಿಸಿ ನಾಣನ್ನು ಏರಿಸಿದನು ಮತ್ತು ಅದರ ಟಂಕಾರದಿಂದ ಜಗತ್ತನ್ನೇ ನಡುಗಿಸುತ್ತಾ ಇಂದ್ರನು ಅನೇಕ ವಜ್ರಗಳನ್ನು ಪ್ರಯೋಗಿಸಿದಂತೆ ದೊಡ್ಡ ಭಯಂಕರವಾದ ಬಾಣವನ್ನು ಬಿಟ್ಟನು.॥2.॥

ಮೂಲಮ್ - 27

ತೇ ಜ್ವಲಂತೋ ಮಹಾವೇಗಾಸ್ತೇಜಸಾ ಸಾಯಕೋತ್ತಮಾಃ ।
ಪ್ರವಿಶಂತಿ ಸಮುದ್ರಸ್ಯ ಜಲಂ ವಿತ್ರಸ್ತಪನ್ನಗಮ್ ॥

ಅನುವಾದ

ತೇಜದಿಂದ ಪ್ರಜ್ವಲಿತವಾದ ಆ ಮಹಾವೇಗಶಾಲೀ ಶ್ರೇಷ್ಠ ಬಾಣವು ಸಮುದ್ರದ ನೀರಿನೊಳಗೆ ನುಗ್ಗಿತು. ಅಲ್ಲಿ ಇರುವ ಸರ್ಪಗಳು ಭಯದಿಂದ ನಡುಗಿಹೋದವು.॥27॥

ಮೂಲಮ್ - 28

ತೋಯವೇಗಃ ಸಮುದ್ರಸ್ಯ ಸಮೀನಮಕರೋ ಮಹಾನ್ ।
ಸಬಭೂವ ಮಹಾಘೋರಃ ಸಮಾರುತರವಸ್ತಥಾ ॥

ಅನುವಾದ

ಮಿನುಗಳು ಮತ್ತು ಮೊಸಳೆಗಳ ಸಹಿತ ಮಹಾಸಾಗರದ ಜಲದ ವೇಗ ಅತ್ಯಂತ ಭಯಂಕರವಾಗಿ, ಅಲ್ಲಿ ಚಂಡಮಾರುತದ ಕೋಲಾಹಲ ಉಂಟಾಯಿತು.॥2.॥

ಮೂಲಮ್ - 29

ಮಹೋರ್ಮಿಮಾಲಾವಿತತಃ ಶಂಖಶುಕ್ತಿಸಮಾವೃತಃ ।
ಸಧೂಮಃ ಪರಿವೃತ್ತೋರ್ಮಿಃ ಸಹಸಾಸೀನ್ಮಹೋದಧಿಃ ॥

ಅನುವಾದ

ದೊಡ್ಡ ದೊಡ್ಡ ತರಂಗಗಳಿಂದ ಇಡೀ ಸಮುದ್ರವು ವ್ಯಾಪ್ತವಾಯಿತು. ಶಂಖಗಳು ಮತ್ತು ಚಿಪ್ಪುಗಳು ನೀರಿನ ಮೇಲೆ ತೇಲಿದವು. ಅಲ್ಲಿ ಹೊಗೆ ಏಳತೊಡಗಿತು. ಇಡೀ ಮಹಾಸಾಗರದಲ್ಲಿ ದೊಡ್ಡ ದೊಡ್ಡ ತೆರೆಗಳು ಸುತ್ತತೊಡಗಿದವು.॥29॥

ಮೂಲಮ್ - 30

ವ್ಯಥಿತಾಃ ಪನ್ನಗಾಶ್ಚಾಸನ್ ದಿಪ್ತಾಸ್ಯಾ ದೀಪ್ತಲೋಚನಾಃ ।
ದಾನವಾಶ್ಚ ಮಹಾವೀರ್ಯಾಃ ಪಾತಾಲತಲವಾಸಿನಃ ॥

ಅನುವಾದ

ಹೊಳೆಯುವ ಹೆಡೆಗಳು ಮತ್ತು ಕಣ್ಣುಗಳುಳ್ಳ ಸರ್ಪಗಳು ವ್ಯಥಿತವಾದವು. ಪಾತಾಳದಲ್ಲಿರುವ ಮಹಾಪರಾಕ್ರಮಿ ದಾನವರೂ ಕೂಡ ವ್ಯಾಕುಲರಾದರು.॥30॥

ಮೂಲಮ್ - 31

ಊರ್ಮಯಃ ಸಿಂಧುರಾಜಸ್ಯ ಸನಕ್ರಮಕರಾಸ್ತಥಾ ।
ವಿಂಧ್ಯಮಂದರಸಂಕಾಶಾಃ ಸಮುತ್ಪೇತುಃ ಸಹಸ್ರಶಃ ॥

ಅನುವಾದ

ವಿಂಧ್ಯಾಚಲ ಮತ್ತು ಮಂದರಾಚಲದಂತೆ ಸಮುದ್ರದ ಸಾವಿರಾರು ವಿಶಾಲ ತರಂಗಗಳು ಮೀನು - ಮೊಸಳೆಗಳೊಂದಿಗೆ ಮೇಲೆ ಏಳ ತೊಡಗಿದವು.॥31॥

ಮೂಲಮ್ - 32

ಆಘೂರ್ಣಿತ ತರಂಗೌಘಃ ಸಂಭ್ರಾಂತೋರಗರಾಕ್ಷಸಃ ।
ಉದ್ವರ್ತಿತ ಮಹಾಗ್ರಾಹಃ ಸಘೋಷೋ ವರುಣಾಲಯಃ ॥

ಅನುವಾದ

ಸಾಗರದ ಉತ್ತಾಲ ತರಂಗಮಾಲೆಗಳು ಗರ-ಗರನೆ ಸುತ್ತತೊಡಗಿದವು. ಅಲ್ಲಿ ವಾಸಿಸುವ ನಾಗಗಳು ಮತ್ತು ರಾಕ್ಷಸರು ಗಾಬರಿಗೊಂಡವು. ದೊಡ್ಡ ದೊಡ್ಡ ಮೊಸಳೆಗಳು ಮೇಲಕ್ಕೇಳುತ್ತಾ ವರುಣನ ನಿವಾಸಭೂತ ಆ ಸಮುದ್ರದಲ್ಲಿ ಎಲ್ಲೆಡೆ ಭಾರೀ ಕೋಲಾಹಲ ಉಂಟಾಯಿತು.॥32॥

ಮೂಲಮ್ - 33

ತತಸ್ತು ತಂ ರಾಘವಮುಗ್ರವೇಗಂ
ಪ್ರಕರ್ಷಮಾಣಂ ಧನುರಪ್ರಮೇಯಮ್ ।
ಸೌಮಿತ್ರಿರುತ್ಪತ್ಯ ವಿನಿಃಶ್ವಸಂತಂ
ಮಾಮೇತಿ ಚೋಕ್ತ್ವಾ ಧನುರಾಲಲಂಬೇ ॥

ಅನುವಾದ

ಅನಂತರ ಶ್ರೀರಘುನಾಥನು ರೋಷದಿಂದ ನಿಟ್ಟುಸಿರುಬಿಡುತ್ತಾ ತನ್ನ ಭಯಂಕರ ವೇಗಶಾಲಿ ಅನುಪಮ ಧನುಸ್ಸನ್ನು ಪುನಃ ಸೆಳೆಯತೊಡಗಿದನು. ಇದನ್ನು ನೋಡಿ ಲಕ್ಷ್ಮಣನು ಹಾರಿ ಅವನ ಬಳಿಗೆ ಹೋಗಿ ‘ಸಾಕು, ಸಾಕು, ಇನ್ನು ಬೇಡ-ಇನ್ನು ಬೇಡ’ ಎಂದು ಹೇಳುತ್ತಾ ಅವನು ರಾಮನ ಧನುಸ್ಸನ್ನು ಹಿಡಿದುಕೊಂಡನು.॥33॥

ಮೂಲಮ್ - 34

ಏತದ್ವಿನಾಪಿ ಹ್ಯುದಧೇಸ್ತವಾದ್ಯ
ಸಂಪತ್ಸ್ಯತೇ ವೀರತಮಸ್ಯ ಕಾರ್ಯಮ್ ।
ಭವದ್ವಿಧಾಃ ಕ್ರೋಧವಶಂ ನ ಯಾಂತಿ
ದೀರ್ಘಂ ಭವಾನ್ ಪಶ್ಯತು ಸಾಧುವೃತ್ತಮ್ ॥

ಅನುವಾದ

ಮತ್ತೆ ಹೇಳಿದನು - ಅಣ್ಣಾ! ನೀನು ವೀರಶ್ರೇಷ್ಠವಾಗಿರುವೆ. ಈ ಸಮುದ್ರವನ್ನು ನಾಶಮಾಡದೆಯೂ ನಿಮ್ಮ ಕಾರ್ಯ ನೆರವೇರುವುದು. ಈಗ ನೀವು ದೀರ್ಘಕಾಲದವರೆಗೆ ಉಪಯೋಗಿಯಾದ ಯಾವು ದಾದರೂ ಒಳ್ಳೆಯ ಉಪಾಯವನ್ನು ನೋಡು, ಯಾವುದಾದರೂ ಉತ್ತಮ ಯುಕ್ತಿ ಯೋಚಿಸಿರಿ.॥34॥

ಮೂಲಮ್ - 35

ಅಂತರ್ಹಿತೈಶ್ಚಾಪಿ ತಥಾಂತರಿಕ್ಷೇ
ಬ್ರಹ್ಮರ್ಷಿಭಿಶ್ಚೈವ ಸುರರ್ಷಿಭಿಶ್ಚ ।
ಶಬ್ದಃ ಕೃತಃ ಕಷ್ಟಮಿತಿ ಬ್ರುವದ್ಭಿಃ
ಮಾಮೇತಿ ಚೋಕ್ತ್ವಾ ಮಹತಾ ಸ್ವರೇಣ ॥

ಅನುವಾದ

ಅದೇ ಸಮಯದಲ್ಲಿ ಅಂತರಿಕ್ಷದಲ್ಲಿ ಅವ್ಯಕ್ತರೂಪದಿಂದ ಸ್ಥಿತ ಮಹರ್ಷಿಗಳು ಮತ್ತು ದೇವರ್ಷಿಗಳೂ ಕೂಡ ‘ಅಯ್ಯೋ! ಇದು ದೊಡ್ಡ ಕಷ್ಟದ ಮಾತಾಗಿದೆ’ ಹೀಗೆ ಹೇಳುತ್ತಾ ‘ಈಗಬೇಡ-ಈಗಬೇಡ’ ಎಂದು ಹೇಳಿ ಜೋರಾಗಿ ಹಾಹಾಕಾರ ಮಾಡಿದರು.॥35॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು.॥21॥