०२० रावणेन स्वामात्यशुकप्रेषणम्

वाचनम्
ಭಾಗಸೂಚನಾ

ಶಾರ್ದೂಲನು ಹೇಳಿದಂತೆ ರಾವಣನು ಶುಕನನ್ನು ದೂತನನ್ನಾಗಿಸಿ ಸುಗ್ರೀವನ ಬಳಿಗೆ ಸಂದೇಶ ಕಳಿಸಿದುದು, ಅಲ್ಲಿ ವಾನರರಿಂದ ಅವನ ದುರ್ದಶೆ, ಶ್ರೀರಾಮನ ಕೃಪೆಯಿಂದ ಅವನು ಸಂಕಟದಿಂದ ಬಿಡುಗಡೆ, ಸುಗ್ರೀವನು ರಾವಣನಿಗಾಗಿ ಶುಕನಲ್ಲಿ ಉತ್ತರ ಕಳಿಸಿ ಕೊಡುವುದು

ಮೂಲಮ್ - 1

ತತೋ ನಿವಿಷ್ಟಾಂ ಧ್ವಜಿನೀಂ ಸುಗ್ರೀವೇಣಾಭಿಪಾಲಿತಾಮ್ ।
ದದರ್ಶ ರಾಕ್ಷಸೋಽಭ್ಯೇತ್ಯ ಶಾರ್ದೂಲೋ ನಾಮ ವೀರ್ಯವಾನ್ ॥

ಮೂಲಮ್ - 2½

ಚಾರೋ ರಾಕ್ಷಸರಾಜಸ್ಯ ರಾವಣಸ್ಯ ದುರಾತ್ಮನಃ ।
ತಾಂ ದೃಷ್ಟ್ವಾ ಸರ್ವತೋಽವ್ಯಗ್ರಾಂ ಪ್ರತಿಗಮ್ಯ ಸ ರಾಕ್ಷಸಃ ॥
ಪ್ರವಿಶ್ಯ ಲಂಕಾಂ ವೇಗೇನ ರಾಜಾನ ಮಿದಮಬ್ರವೀತ್ ॥

ಅನುವಾದ

ದುರಾತ್ಮಾ ರಾವಣನ ಗುಪ್ತಚರ ಪರಾಕ್ರಮಿ ರಾಕ್ಷಸ ಶಾರ್ದೂಲನು ಸಾಗರ ತೀರದಲ್ಲಿ ಸುಗ್ರೀವನಿಂದ ರಕ್ಷಿತವಾದ ವಾನರ ಸೈನ್ಯವು ಬೀಡುಬಿಟ್ಟಿರುವುದನ್ನು ನೋಡಿದನು. ಎಲ್ಲ ಕಡೆಯಿಂದ ಶಾಂತಭಾವದಿಂದ ಸ್ಥಿತವಾದ ಆ ವಿಶಾಲ ಸೈನ್ಯವನ್ನು ನೋಡಿ, ಅವನು ಅವಸರವಾಗಿ ಲಂಕೆಗೆ ಹೋಗಿ ರಾವಣನಲ್ಲಿ ಹೇಳಿದನು.॥1-2½॥

ಮೂಲಮ್ - 3½

ಏಷ ವೈವಾನರರ್ಕ್ಷೌಘೋ ಲಂಕಾಂ ಸಮಭಿವರ್ತತೇ ॥
ಅಗಾಧಶ್ಚಾಪ್ರಮೇಯಶ್ಚ ದ್ವಿತೀಯ ಇವ ಸಾಗರಃ ।

ಅನುವಾದ

ಮಹಾರಾಜ! ಲಂಕೆಯ ಕಡೆಗೆ ವಾನರರ ಮತ್ತು ಕರಡಿಗಳ ಸೈನ್ಯವು ಪ್ರವಾಹದಂತೆ ಬರುತ್ತಾ ಇದೆ. ಅದು ಇನ್ನೊಂದು ಸಮುದ್ರದಂತೆ ಅಗಾಧ ಮತ್ತು ಅಸೀಮವಾಗಿದೆ.॥3½॥

ಮೂಲಮ್ - 4½

ಪುತ್ರೌ ದಶರಥಸ್ಯೇಮೌ ಭ್ರಾತರೌ ರಾಮಲಕ್ಷ್ಮಣೌ ॥
ಉತ್ತಮೌ ರೂಪಸಂಪನ್ನೌ ಸೀತಾಯಾಃ ಪದಮಾಗತೌ ।

ಅನುವಾದ

ರಾಜಾ ದಶರಥನ ಈ ಪುತ್ರರಿಬ್ಬರಾದ ಶ್ರೀರಾಮ- ಲಕ್ಷ್ಮಣರು ಬಹಳ ರೂಪವಂತ ಮತ್ತು ಶ್ರೇಷ್ಠವೀರರಾಗಿದ್ದಾರೆ. ಅವರು ಸೀತೆಯನ್ನು ಬಿಡಿಸಿಕೊಂಡು ಹೋಗಲು ಬರುತ್ತಿದ್ದಾರೆ.॥4½॥

ಮೂಲಮ್ - 5

ಏತೌ ಸಾಗರಮಾಸಾದ್ಯ ಸಂನಿವಿಷ್ಟೌ ಮಹಾದ್ಯುತೇ ॥

ಮೂಲಮ್ - 6

ಬಲಂ ಚಾಕಾಶಮಾವೃತ್ಯ ಸರ್ವತೋ ದಶಯೋಜನಮ್ ।
ತತ್ತ್ವಭೂತಂ ಮಹಾರಾಜ ಕ್ಷಿಪ್ರಂ ವೇದಿತುಮರ್ಹಸಿ ॥

ಅನುವಾದ

ಮಹಾತೇಜಸ್ವೀ ಮಹಾರಾಜಾ! ರಘುವಂಶಿ ಸಹೋದರ ಇವರಿಬ್ಬರೂ ಈಗ ಸಮುದ್ರತೀರಕ್ಕೆ ಬಂದು ನಿಂತಿರುವರು. ವಾನರರ ಆ ಸೈನ್ಯವು ಹತ್ತು ಯೋಜನದವರೆಗೆ ಸ್ಥಳವನ್ನು ಆಕ್ರಮಿಸಿ ಅಲ್ಲಿ ನೆಲೆಸಿದೆ. ಇದು ಖಂಡಿತವಾಗಿ ಸರಿಯಾಗಿದೆ. ನೀವು ಬೇಗನೇ ಈ ವಿಷಯದಲ್ಲಿ ವಿಶೇಷ ತಿಳಿವಳಿಕೆಯನ್ನು ಪಡೆಯಿರಿ.॥5-6॥

ಮೂಲಮ್ - 7

ತವ ದೂತಾ ಮಹಾರಾಜ ಕ್ಷಿಪ್ರಮರ್ಹಂತಿ ವೇದಿತುಮ್ ।
ಉಪಪ್ರದಾನಂ ಸಾಂನ್ತ್ವಂ ವಾ ಭೇದೋ ವಾತ್ರ ಪ್ರಯುಜ್ಯತಾಮ್ ॥

ಅನುವಾದ

ರಾಕ್ಷಸ ಸಾಮ್ರಾಟನೇ! ನಿಮ್ಮ ದೂತರು ಬೇಗನೆ ಎಲ್ಲ ಸಂಗತಿಗಳನ್ನು ತಿಳಿಯಲು ಯೋಗ್ಯರಾಗಿದ್ದಾರೆ. ಆದ್ದರಿಂದ ಅವರನ್ನು ಕಳಿಸಿರಿ. ಬಳಿಕ ಉಚಿತವೆನಿಸಿಂತೆ ಮಾಡಿರಿ. ಬೇಕಾದರೆ ಸೀತೆಯನ್ನು ಮರಳಿಸಿರಿ, ಬೇಕಾದರೆ ಸುಗ್ರೀವನಲ್ಲಿ ಮಧುರ ಮಾತುಗಳನ್ನಾಡಿ ಅವನನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಿ ಅಥವಾ ಸುಗ್ರೀವ ಮತ್ತು ರಾಮನಲ್ಲಿ ಒಡಕು ಉಂಟುಮಾಡಿರಿ.॥7॥

ಮೂಲಮ್ - 8

ಶಾರ್ದೂಲಸ್ಯ ವಚಃ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ ।
ಉವಾಚ ಸಹಸಾ ವ್ಯಗ್ರಃ ಸಂಪ್ರಧಾರ್ಯಾರ್ಥಮಾತ್ಮನಃ ।
ಶುಕಂ ಸಾಧು ತದಾ ರಕ್ಷೋ ವಾಕ್ಯಮರ್ಥವಿದಾಂ ವರಮ್ ॥

ಅನುವಾದ

ಶಾರ್ದೂಲನ ಮಾತನ್ನು ಕೇಳಿ ರಾಕ್ಷಸರಾಜ ರಾವಣನು ತತ್ಕ್ಷಣ ವ್ಯಗ್ರವಾಗಿ, ತನ್ನ ಕರ್ತವ್ಯವನ್ನು ನಿಶ್ಚಯಿಸಿ, ಅರ್ಥವೇತ್ತರಲ್ಲಿ ಶ್ರೇಷ್ಠನಾದ ಶುಕನೆಂಬ ರಾಕ್ಷಸನಲ್ಲಿ ಹೀಗೆ ನುಡಿದನು.॥8॥

ಮೂಲಮ್ - 9

ಸುಗ್ರೀವಂ ಬ್ರೂಹಿ ಗತ್ವಾಽಽಶು ರಾಜಾನಂ ವಚನಾನ್ಮಮ ।
ಯಥಾ ಸಂದೇಶಮಕ್ಲೀಬಂ ಶ್ಲಕ್ಷ್ಣಯಾ ಪರಯಾ ಗಿರಾ ॥

ಅನುವಾದ

ದೂತನೇ! ನೀನು ನಾನು ಹೇಳಿದಂತೆ ಬೇಗನೇ ಸುಗ್ರೀವನ ಬಳಿಗೆ ಹೋಗಿ, ಮಧುರ ಹಾಗೂ ಉತ್ತಮ ಮಾತುಗಳಿಂದ ನಿರ್ಭಯವಾಗಿ ಅವನಿಗೆ ನನ್ನ ಈ ಸಂದೇಶವನ್ನು ತಿಳಿಸು.॥9॥

ಮೂಲಮ್ - 10

ತ್ವಂ ವೈ ಮಹಾರಾಜ ಕುಲಪ್ರಸೂತೋ
ಮಹಾಬಲಶ್ಚರ್ಕ್ಷರಜಃಸುತಶ್ಚ ।
ನ ಕಶ್ಚನಾರ್ಥಸ್ತವ ನಾಸ್ತ್ಯನರ್ಥ
ಸ್ತಥಾಪಿ ಮೇ ಭ್ರಾತೃಸಮೋ ಹರೀಶ ॥

ಅನುವಾದ

ವಾನರರಾಜನೇ! ನೀನು ವಾನರ ಮಹಾರಾಜರ ಕುಲದಲ್ಲಿ ಹುಟ್ಟಿರುವೆ. ಆದರಣೀಯ ಋಕ್ಷರಾಜನ ಪುತ್ರನಾಗಿರುವೆ ಹಾಗೂ ಸ್ವತಃ ಬಹಳ ಬಲಿಷ್ಠನಾಗಿರುವೆ. ನಾನು ನಿನ್ನನ್ನು ತಮ್ಮನಂತೆ ತಿಳಿಯುತ್ತೇನೆ. ನನ್ನಿಂದ ನಿನಗೆ ಯಾವುದೇ ಲಾಭ ಆಗದಿದ್ದರೂ, ಯಾವುದೇ ಹಾನಿಯಂತೂ ಆಗಲಿಲ್ಲ.॥10॥

ಮೂಲಮ್ - 11

ಅಹಂ ಯದ್ಯಹರಂ ಭರ್ಯಾಂ ರಾಜಪುತ್ರಸ್ಯ ಧೀಮತಃ ।
ಕಿಂ ತತ್ರ ತವ ಸುಗ್ರೀವ ಕಿಷ್ಕಿಂಧಾಂ ಪ್ರತಿ ಗಮ್ಯತಾಮ್ ॥

ಅನುವಾದ

ಸುಗ್ರೀವನೇ! ನಾನು ಬುದ್ಧಿವಂತ ರಾಜಪುತ್ರ ರಾಮನ ಪತ್ನಿಯನ್ನು ಕದ್ದು ತಂದರೆ ನನಗೆ ಏನು ಹಾನಿಯಾಗಿದೆ. ಆದ್ದರಿಂದ ನೀನು ಕಿಷ್ಕಿಂಧೆಗೆ ಮರಳಿಹೋಗು.॥11॥

ಮೂಲಮ್ - 12

ನಹೀಯಂ ಹರಿಭಿರ್ಲಂಕಾಂ ಪ್ರಾಪ್ತುಂ ಶಕ್ಯಾ ಕಥಂಚನ ।
ದೈವೇರಪಿ ಸಗಂಧರ್ವೈಃ ಕಿಂ ಪುನರ್ನರವಾನರೈಃ ॥

ಅನುವಾದ

ನಮ್ಮ ಈ ಲಂಕೆಯಲ್ಲಿ ವಾನರರು ಯಾವ ರೀತಿಯಿಂದಲೂ ಪ್ರವೇಶಿಸಲಾರರು. ಇಲ್ಲಿ ದೇವತೆಗಳು ಮತ್ತು ಗಂಧರ್ವರೂ ಬರುವುದು ಅಸಂಭವವಾಗಿದೆ. ಹಾಗಿರುವಾಗ ಮನುಷ್ಯರು ಹಾಗೂ ವಾನರರ ಮಾತೇನಿದೆ.॥12॥

ಮೂಲಮ್ - 13

ಸ ತದಾ ರಾಕ್ಷಸೇಂದ್ರೇಣ ಸಂದಿಷ್ಟೋ ರಜನೀಚರಃ ।
ಶುಕೋ ವಿಹಂಗಮೋ ಭೂತ್ವಾ ತೂರ್ಣಮಾಪ್ಲುತ್ಯ ಚಾಂಬರಮ್ ॥

ಅನುವಾದ

ರಾಕ್ಷಸರಾಜ ರಾವಣನ ಈ ಪ್ರಕಾರದ ಸಂದೇಶವನ್ನು ಕೇಳಿ ಆಗ ನಿಶಾಚರ ಶುಕನು ಗಿಳಿಯ ರೂಪವನ್ನು ಧರಿಸಿ ಕೂಡಲೇ ಆಕಾಶಕ್ಕೆ ಹಾರಿಹೋದನು.॥13॥

ಮೂಲಮ್ - 14½

ಸ ಗತ್ವಾ ದೂರಮಧ್ವಾನಮುಪರ್ಯುಪರಿ ಸಾಗರಮ್ ।
ಸಂಸ್ಥಿತೋ ಹ್ಯಂಬರೇ ವಾಕ್ಯಂ ಸುಗ್ರೀವಮಿದಮಬ್ರವೀತ್ ॥
ಸರ್ವಮುಕ್ತಂ ಯಥಾಽಽದಿಷ್ಟಂ ರಾವಣೇನ ದುರಾತ್ಮನಾ ।

ಅನುವಾದ

ಸಮುದ್ರದ ಮೇಲಿನಿಂದ ಬಹಳ ದೂರದ ದಾರಿಯನ್ನು ಸಾಗಿ ಸುಗ್ರೀವನ ಬಳಿಗೆ ತಲುಪಿ, ಆಕಾಶದಲ್ಲೇ ನಿಂತು ಅವನು ದುರಾತ್ಮಾ ರಾವಣನ ಆಜ್ಞೆಗನುಸಾರ ಆ ಎಲ್ಲ ಮಾತುಗಳನ್ನು ಸುಗ್ರೀವನಿಗೆ ಹೇಳಿದನು.॥14॥

ಮೂಲಮ್ - 15½

ತತ್ ಪ್ರಾಪಯಂತಂ ವಚನಂ ತೂರ್ಣಮಾಪ್ಲುತ್ಯ ವಾನರಾಃ ॥
ಪ್ರಾಪದ್ಯಂತ ತದಾ ಕ್ಷಿಪ್ರಂ ಲೋಪ್ತುಂ ಹಂತುಂ ಚ ಮುಷ್ಟಿಭಿಃ ॥

ಅನುವಾದ

ಆ ಸಂದೇಶವನ್ನು ತಿಳಿಸುತ್ತಿರುವಾಗಲೇ ವಾನರರು ನೆಗೆದು ಅವನ ಬಳಿಗೆ ತಲುಪಿ, ಬೇಗನೇ ಇವನ ರೆಕ್ಕೆಕಿತ್ತು, ಅವನನ್ನು ಗುದ್ದಿ ಕೊಲ್ಲಲು ಬಯಸುತ್ತಿದ್ದರು.॥15॥

ಮೂಲಮ್ - 16½

ಸವೈಃ ಪ್ಲವಂಗೈಃ ಪ್ರಸಭಂ ನಿಗೃಹೀತೋ ನಿಶಾಚರಃ ॥
ಗಗನಾದ್ಭೂತಲೇ ಚಾಶು ಪರಿಗೃಹ್ಯಾವತಾರಿತಃ ।

ಅನುವಾದ

ಹೀಗೆ ನಿಶ್ಚಯಿಸಿ ಎಲ್ಲ ವಾನರರು ಆ ನಿಶಾಚರನನ್ನು ಬಲವಂತವಾಗಿ ಸೆರೆ ಹಿಡಿದು ಆಕಾಶದಿಂದ ಭೂಮಿಗೆ ಇಳಿದರು.॥16॥

ಮೂಲಮ್ - 17

ವಾನರೈಃ ಪೀಡ್ಯಮಾನಸ್ತು ಶುಕೋ ವಚನಮಬ್ರವೀತ್ ॥

ಮೂಲಮ್ - 18

ನ ದೂತಾನ್ ಘ್ನಂತಿ ಕಾಕುತ್ಸ್ಥ ವಾರ್ಯಂತಾಂ ಸಾಧು ವಾನರಾಃ ।
ಯಸ್ತು ಹಿತ್ವಾ ಮತಂ ಭರ್ತುಃ ಸ್ವಮತಂ ಸಂಪ್ರಧಾರಯೇತ್ ।
ಅನುಕ್ತವಾದೀ ದೂತಃ ಸನ್ಸ ದೂತೋವಧರ್ಮಹತಿ ॥

ಅನುವಾದ

ಈ ಪ್ರಕಾರ ವಾನರರು ಪೀಡಿಸುತ್ತಿರುವಾಗ ಶುಕನು ಕೂಗಿಕೊಂಡನು - ರಘುನಂದನ! ರಾಜರು ದೂತರನ್ನು ಕೊಲ್ಲುವುದಿಲ್ಲ; ಆದ್ದರಿಂದ ಈ ವಾನರರನ್ನು ಸರಿಯಾಗಿ ತಡೆಯಿರಿ. ಒಡೆಯನ ಅಭಿಪ್ರಾಯವನ್ನು ಬಿಟ್ಟು, ತನ್ನ ಮತವನ್ನು ಪ್ರಕಟಿಸಿದ ದೂತನು ಹೇಳದಿರುವ ಮಾತನ್ನು ಹೇಳಿದ ಅಪರಾಧಿಯಾಗಿದ್ದಾನೆ. ಆದ್ದರಿಂದ ಅವನೇ ವಧೆಗೆ ಯೋಗ್ಯನಾಗಿದ್ದಾನೆ.॥17-18॥

ಮೂಲಮ್ - 19

ಶುಕಸ್ಯ ವಚನಂ ಶ್ರತ್ವಾ ರಾಮಸ್ತು ಪರಿದೇವಿತಮ್ ।
ಉವಾಚ ಮಾವಧಿಷ್ಟೇತಿ ಘ್ನತಃ ಶಾಖಾಮೃಗರ್ಷಭಾನ್ ॥

ಅನುವಾದ

ಶುಕನ ಮಾತು ಮತ್ತು ವಿಲಾಪವನ್ನು ಕೇಳಿ ಭಗವಾನ್ ಶ್ರೀರಾಮನು ಅವನನ್ನು ಹೊಡೆಯುತ್ತಿರುವ ಮುಖ್ಯ ವಾನರರನ್ನು ಕರೆದು - ‘ಇವನನ್ನು ಹೊಡೆಯದಿರಿ’ ಎಂದು ಹೇಳಿದನು.॥19॥

ಮೂಲಮ್ - 20

ಸ ಚ ಪತ್ರಲಘುರ್ಭೂತ್ವಾ ಹರಿಭಿರ್ದರ್ಶಿತೇಽಭಯೇ ।
ಅಂತರಿಕ್ಷೇ ಸ್ಥಿತೋ ಭೂತ್ವಾ ಪುನರ್ವಚನಮಬ್ರವೀತ್ ॥

ಅನುವಾದ

ಆಗ ಶುಕನ ರೆಕ್ಕೆಗಳ ಭಾರ ಸ್ವಲ್ಪ ಕಡಿಮೆಯಾಗಿತ್ತು. (ಏಕೆಂದರೆ ವಾನರರು ಅವನ್ನು ಕಿತ್ತುಬಿಟ್ಟಿದ್ದರು.) ಮತ್ತೆ ಅವನಿಗೆ ಅಭಯ ಕೊಟ್ಟ ಮೇಲೆ ಶುಕನು ಆಕಾಶದಲ್ಲಿ ನಿಂತು ಪುನಃ ಹೇಳಿದನು .॥20॥

ಮೂಲಮ್ - 21

ಸುಗ್ರೀವ ಸತ್ತ್ವಸಂಪನ್ನ ಮಹಾಬಲಪರಾಕ್ರಮ ।
ಕಿಂ ಮಯಾ ಖಲು ವಕ್ತವ್ಯೋ ರಾವಣೋ ಲೋಕರಾವಣಃ ॥

ಅನುವಾದ

ಮಹಾಬಲ ಮತ್ತು ಪರಾಕ್ರಮದಿಂದ ಕೂಡಿದ ಶಕ್ತಿಶಾಲಿ ಸುಗ್ರೀವನೇ! ಸಮಸ್ತ ಲೋಕಗಳನ್ನು ಅಳುವಂತೆ ಮಾಡುವ ರಾವಣನಿಗೆ ನಿನ್ನ ಕಡೆಯಿಂದ ಯಾವ ಉತ್ತರವನ್ನು ಕೊಡಲು ಬಯಸುತ್ತಿರುವೆ.॥21॥

ಮೂಲಮ್ - 22

ಸ ಏವಮುಕ್ತಃ ಪ್ಲವಗಾಧಿಪಸ್ತದಾ
ಪ್ಲವಂಗಮಾನಾಮೃಷಭೋ ಮಹಾಬಲಃ ।
ಉವಾಚ ವಾಕ್ಯಂ ರಜನೀಚರಸ್ಯ
ಚಾರಂ ಶುಕಂ ದೀನಮದೀನಸತ್ತ್ವಃ ॥

ಅನುವಾದ

ಶುಕನು ಈ ಪ್ರಕಾರ ಕೇಳಿದಾಗ ಕಪಿಶಿರೋಮಣಿ ಮಹಾಬಲೀ ಉದಾರಚೇತಾ ವಾನರರಾಜ ಸುಗ್ರೀವನು ಆ ನಿಶಾಚರ ದೂತನಲ್ಲಿ ಹಾಗೆ ಸ್ಪಷ್ಟ ಹಾಗೂ ನಿಶ್ಚಲ ಮಾತನ್ನು ಹೇಳಿದನು .॥2.॥

ಮೂಲಮ್ - 23

ನ ಮೇಽಸಿ ಮಿತ್ರಂ ನ ತಥಾನುಕಂಪ್ಯೋ
ನ ಚೋಪಕರ್ತಾಸಿನ ಮೇ ಪ್ರಿಯೋಽಸಿ ।
ಅರಿಶ್ಚ ರಾಮಸ್ಯ ಸಹಾನುಬಂಧ-
ಸ್ತತೋಽಸಿವಾಲೀವ ವಧಾರ್ಹ ವಧ್ಯಃ ॥

ಅನುವಾದ

(ದೂತನೇ! ನೀನು ರಾವಣನಲ್ಲಿ ಹೀಗೆ ಹೇಳು-) ವಧೆಗೆ ಯೋಗ್ಯ ದಶಾನನನೇ! ನೀನು ನನ್ನ ಮಿತ್ರನೂ ಅಲ್ಲ, ದಯಾಪಾತ್ರನೂ ಅಲ್ಲ, ನೀನು ನನಗೆ ಉಪಕಾರಿಯೂ ಅಲ್ಲ, ನನ್ನ ಪ್ರಿಯವ್ಯಕ್ತಿಗಳಲ್ಲಿ ಯಾರೂ ಅಲ್ಲ. ಭಗವಾನ್ ಶ್ರೀರಾಮನ ಶತ್ರು ಆಗಿರುವೆ, ಈ ಕಾರಣದಿಂದ ತನ್ನ ನೆಂಟರಿಷ್ಟರಿಂದ ಸಹಿತ ನೀನು ವಾಲಿಯಂತೆ ನನಗೆ ವಧ್ಯನಾಗಿರುವೆ.॥2.॥

ಮೂಲಮ್ - 24

ನಿಹನ್ಮ್ಯಹಂ ತ್ವಾಂ ಸಸುತಂ ಸಬಂಧುಂ
ಸಜ್ಞಾತಿವರ್ಗಂ ರಜನೀಚರೇಶ ।
ಲಂಕಾಂ ಚ ಸರ್ವಾಂ ಮಹತಾ ಬಲೇನ
ಸರ್ವೈಃ ಕರಿಷ್ಯಾಮಿ ಸಮೇತ್ಯ ಭಸ್ಮ॥

ಅನುವಾದ

ನಿಶಾಚರ ರಾಜನೇ ! ನಿನ್ನ ಪುತ್ರರು, ಬಂಧು-ಕುಟುಂಬಿಗಳ ಸಹಿತ ನಾನು ನಿನ್ನನ್ನು ಸಂಹರಿಸುವೆನು ಹಾಗೂ ಭಾರೀ ದೊಡ್ಡ ಸೈನ್ಯದೊಂದಿಗೆ ಬಂದು ಸಮಸ್ತ ಲಂಕೆಯನ್ನು ಭಸ್ಮಮಾಡಿಬಿಡುವೆನು.॥24॥

ಮೂಲಮ್ - 25

ನ ಮೋಕ್ಷ್ಯಸೇ ರಾವಣ ರಾಘವಸ್ಯ
ಸುರೈಃ ಸಹೇಂದ್ರೈರಪಿ ಮೂಢ ಗುಪ್ತಃ ।
ಅಂತರ್ಹಿತಃ ಸೂರ್ಯಪಥಂ ಗತೋಽಪಿ
ತಥೈವ ಪಾತಾಲಮನುಪ್ರವಿಷ್ಟಃ ।
ಗಿರೀಶ ಪದಾಂಬು ಜಸಂಗತೋ ವಾ
ಹತೋಽಸ್ಮಿ ರಾಮೇಣ ಸಹಾನುಜಸ್ತ್ವಮ್ ॥

ಅನುವಾದ

ಮೂರ್ಖರಾವಣನೇ! ಇಂದ್ರಾದಿ ಸಮಸ್ತ ದೇವತೆಗಳು ನಿನ್ನನ್ನು ರಕ್ಷಿಸಿದರೂ ಶ್ರೀರಘುನಾಥನ ಕೈಯಲ್ಲಿ ಈಗ ನೀನು ಬದುಕಿರಲಾರೆ. ನೀನು ಅಂತರ್ಧಾನವಾಗು, ಆಕಾಶಕ್ಕೆ ಹೋಗು, ಪಾತಾಳದಲ್ಲಿ ನುಗ್ಗಿಕುಳಿತುಕೋ, ಅಥವಾ ಮಹಾದೇವನ ಚರಣಾರವಿಂದಗಳನ್ನು ಆಶ್ರಯಿಸು; ಆದರೂ ನಿನ್ನ ಸಹೋದರರೊಂದಿಗೆ ನೀನು ಅವಶ್ಯವಾಗಿ ಶ್ರೀರಾಮಚಂದ್ರನ ಕೈಯಿಂದ ಸತ್ತುಹೋಗುವೆ.॥25॥

ಮೂಲಮ್ - 26

ತಸ್ಯ ತೇ ತ್ರಿಷು ಲೋಕೇಷು ನ ಪಿಶಾಚಂ ನ ರಾಕ್ಷಸಮ್ ।
ತ್ರಾತಾರಂ ನಾನುಪಶ್ಯಾಮಿ ನ ಗಂಧರ್ವಂ ನ ಚಾಸುರಮ್ ॥

ಅನುವಾದ

ಮೂರು ಲೋಕಗಳಲ್ಲಿ ಪಿಶಾಚ, ರಾಕ್ಷಸ, ಗಂಧರ್ವ, ಅಸುರ ಇವರಲ್ಲಿ ಯಾರೂ ನಿನ್ನನ್ನ ರಕ್ಷಿಸಬಲ್ಲವರು ನನಗೆ ಕಂಡುಬರುವುದಿಲ್ಲ.॥26॥

ಮೂಲಮ್ - 27

ಅವಧೀಸ್ತ್ವಂ ಜರಾವೃದ್ಧಂ ಗೃದ್ಧರಾಜಂ ಜಟಾಯುಷಮ್ ।
ಕಿಂ ನು ತೇ ರಾಮಸಾನ್ನಿಧ್ಯೇ ಸಕಾಶೇ ಲಕ್ಷ್ಮಣಸ್ಯ ಚ ।
ಹೃತಾ ಸೀತಾ ವಿಶಾಲಾಕ್ಷೀ ಯಾಂ ತ್ವಂ ಗೃಹ್ಯ ನ ಬುಧ್ಯಸೇ ॥

ಅನುವಾದ

ಮುದುಕನಾದ ಗೃದ್ಧರಾಜ ಜಟಾಯುವನ್ನು ನೀನು ಏಕೆ ಕೊಂದೆ? ನಿನ್ನಲ್ಲಿ ಬಲವಿದ್ದಿದ್ದರೆ ಶ್ರೀರಾಮ ಮತ್ತು ಲಕ್ಷ್ಮಣನ ಬಳಿಯಿಂದ ನೀನು ವಿಶಾಲಲೋಚನೆ ಸೀತೆಯನ್ನು ಏಕೆ ಅಪಹರಿಸಲಿಲ್ಲ? ನೀನು ಸೀತೆಯನ್ನು ಕೊಂಡುಹೋಗಿ ತನ್ನ ತಲೆಯ ಮೇಲೆ ಬಂದಿರುವ ವಿಪತ್ತನ್ನು ಏಕೆ ತಿಳಿಯುತ್ತಿಲ್ಲ.॥27॥

ಮೂಲಮ್ - 28

ಮಹಾಬಲಂ ಮಹಾತ್ಮಾನಂ ದುರಾರ್ಧುರ್ಷಂ ಸುರೈರಪಿ ।
ನ ಬುಧ್ಯಸೇ ರಘುಶ್ರೇಷ್ಠಂ ಯಸ್ತೇ ಪ್ರಾಣಾನ್ ಹರಿಷ್ಯತಿ ॥

ಅನುವಾದ

ರಘುಕುಲ ತಿಲಕ ಶ್ರೀರಾಮನು ಮಹಾಬಲೀ, ಮಹಾತ್ಮಾ ಮತ್ತು ದೇವತೆಗಳಿಗೂ ದುರ್ಜಯನಾಗಿರುವುದನ್ನು ನೀನು ಇಷ್ಟರವರೆಗೆ ಅರಿಯದಾದೆ (ನೀನು ಅಡಗಿಕೊಂಡು ಸೀತೆಯನ್ನು ಅಪಹರಿಸಿದೆ, ಆದರೆ) ಅವನು ನಿನಗೆ ಎದುರಾಗಿ ನಿನ್ನ ಪ್ರಾಣಗಳನ್ನು ಅಪಹರಿಸುವನು.॥28॥

ಮೂಲಮ್ - 29

ತತೋಽಬ್ರವೀದ್ವಾಲಿಸುತೋಽಪ್ಯಂಗದೋ ಹರಿಸತ್ತಮಃ ।
ನಾಯಂ ದೂತೋ ಮಹಾರಾಜ ಚಾರಿಕಃ ಪ್ರತಿಭಾತಿ ಮೇ ॥

ಮೂಲಮ್ - 30

ತುಲಿತಂ ಹಿ ಬಲಂ ಸರ್ವಮನೇನತವ ತಿಷ್ಠತಾ ।
ಗೃಹ್ಯತಾಂ ಮಾಗಮಲ್ಲಂಕಾಮೇತದ್ಧಿ ಮಮ ರೋಚತೇ ॥

ಅನುವಾದ

ಅನಂತರ ವಾನರ ಶಿರೋಮಣಿ ವಾಲಿಕುಮಾರ ಅಂಗದನು ಹೇಳಿದನು- ಮಹಾರಾಜನೇ! ನನಗಾದರೋ ಇವನು ದೂತನಂತೆ ಕಾಣದೆ ಗುಪ್ತಚರನಂತೆ ಕಂಡುಬರುತ್ತಿದ್ದಾನೆ. ಇವನು ಇಲ್ಲಿ ನಿಂತುಕೊಂಡೇ ನಿನ್ನ ಎಲ್ಲ ಸೈನ್ಯದ ಪೂರ್ಣ ಬಲಾ-ಬಲವನ್ನು ತಿಳಿದುಕೊಂಡಿರುವನು. ಆದುದರಿಂದ ಲಂಕೆಗೆ ಹೋಗದಂತೆ ಇವನನ್ನು ಇಲ್ಲಿಯೇ ಬಂಧನದಲ್ಲಿಡುವುದು ನನಗೆ ಉಚಿತವಾಗಿ ಕಾಣುತ್ತದೆ.॥29-30॥

ಮೂಲಮ್ - 31

ತತೋ ರಾಜ್ಞಾ ಸಮಾದಿಷ್ಟಾಃ ಸಮುತ್ಪತ್ಯ ವಲೀಮುಖಾಃ ।
ಜಗೃಹುಶ್ಚ ಬಬಂಧುಶ್ಚ ವಿಲಪಂತಮನಾಥವತ್ ॥

ಅನುವಾದ

ಮತ್ತೆ ರಾಜಾ ಸುಗ್ರೀವನ ಆದೇಶ ದಂತೆ ವಾನರರು ನೆಗೆದು ಅವನನ್ನು ಹಿಡಿದು ಕಟ್ಟಿಹಾಕಿದರು. ಆ ಬಡಪಾಯಿ ಅನಾಥನಂತೆ ವಿಲಾಪಿಸತೊಡಗಿದನು.॥31॥

ಮೂಲಮ್ - 32

ಶುಕಸ್ತು ವಾನರೈಶ್ಚಂಡೈಸ್ತತ್ರ ತೈಃ ಸಂಪ್ರಪೀಡಿತಃ ।
ವ್ಯಾಚುಕ್ರೋಶ ಮಹಾತ್ಮಾನಂ ರಾಮಂ ದಶರಥಾತ್ಮಜಮ್ ।
ಲುಪ್ಯೇತೇ ಮೇ ಬಲಾತ್ಪಕ್ಷೌ ಭಿದ್ಯೇತೇ ಮೇ ತಥಾಕ್ಷಿಣೀ ॥

ಮೂಲಮ್ - 33

ಯಾಂ ಚ ರಾತ್ರಿಂ ಮರಿಷ್ಯಾಮಿ ಜಾಯೇ ರಾತ್ರಿಂ ಚ ಯಾಮಹಮ್ ।
ಏತಸ್ಮಿನ್ನಂತರೇ ಕಾಲೇ ಯನ್ಮಯಾ ಹ್ಯಶುಭಂ ಕೃತಮ್ ।
ಸರ್ವಂ ತದುಪಪದ್ಯೇಥಾ ಜಹ್ಯಾಂ ಚೇದ್ಯದಿ ಜೀವಿತಮ್ ॥

ಅನುವಾದ

ಆ ಪ್ರಚಂಡ ವಾನರರಿಂದ ಪೀಡಿತನಾದ ಶುಕನು ದಶರಥನಂದನ ಮಹಾತ್ಮಾ ಶ್ರೀರಾಮನನ್ನು ಜೋರಾಗಿ ಕೂಗಿ ಹೇಳಿದನು - ಪ್ರಭೋ! ಬಲವಂತವಾಗಿ ನನ್ನ ರೆಕ್ಕೆಗಳನ್ನು ಕಿತ್ತರು, ಕಣ್ಣು ಒಡೆದು ಹಾಕಿದರು. ಇಂದು ನಾನು ಪ್ರಾಣ ತ್ಯಾಗ ಮಾಡಿದರೆ- ನಾನು ಹುಟ್ಟಿದ ರಾತ್ರಿಯಿಂದ ಸಾಯುವ ರಾತ್ರಿಯವರೆಗೆ ನಾನು ಮಾಡಿದ ಪಾಪಗಳೆಲ್ಲವನ್ನೂ ನೀನೇ ಭರಿಸಬೇಕಾಗುವುದು.॥32-33॥

ಮೂಲಮ್ - 34

ನಾಘಾತಯತ್ತದಾ ರಾಮಃ ಶ್ರುತ್ವಾ ತತ್ಪರಿದೇವಿತಮ್ ।
ವಾನರಾನಬ್ರವೀದ್ರಾಮೋ ಮುಚ್ಯತಾಂ ದೂತ ಆಗತಃ ॥

ಅನುವಾದ

ಆಗ ಅವನ ಆ ವಿಲಾಪವನ್ನು ಕೇಳಿ ಶ್ರೀರಾಮನು ಅವನನ್ನು ವಧಿಸಲು ಬಿಡಲಿಲ್ಲ. ಅವನು ವಾನರರಲ್ಲಿ ಇವನನ್ನು ಬಿಟ್ಟುಬಿಡಿ. ಇವನು ದೂತನಾಗಿಯೇ ಬಂದಿರುವನು ಎಂದು ಹೇಳಿದನು.॥34॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತನೆಯ ಸರ್ಗ ಪೂರ್ಣವಾಯಿತು.॥20॥