०१९ विभीषणस्य रामपादशरणगमनम्

वाचनम्
ಭಾಗಸೂಚನಾ

ವಿಭೀಷಣನು ಆಕಾಶದಿಂದ ಇಳಿದು ಭಗವಾನ್ ಶ್ರೀರಾಮನ ಚರಣಗಳಲ್ಲಿ ಶರಣಾಗುವುದು, ಅವನಲ್ಲಿ ಕೇಳಿದಾಗ ರಾವಣನ ಶಕ್ತಿಯ ಪರಿಚಯ ಕೊಡುವುದು ಮತ್ತೆ ಶ್ರೀರಾಮನು ರಾವಣನನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿ ವಿಭೀಷಣನಿಗೆ ಲಂಕೆಯ ರಾಜ್ಯಕ್ಕೆ ಪಟ್ಟಕಟ್ಟುವುದು, ಅವನ ಸಮ್ಮತಿಯಂತೆ ಸಮುದ್ರತೀರದಲ್ಲಿ ಧರಣಿ ಕುಳಿತುಕೊಳ್ಳುವುದು

ಮೂಲಮ್ - 1

ರಾಘವೇಣಾಭಯೇ ದತ್ತೇ ಸಂನತೋ ರಾವಣಾನುಜಃ ।
ವಿಭೀಷಣೋ ಮಹಾಪ್ರಾಜ್ಞೋ ಭೂಮಿಂ ಸಮವಲೋಕಯತ್ ॥

ಅನುವಾದ

ಹೀಗೆ ರಘುನಾಥನು ಅಭಯಕೊಟ್ಟಾಗ ವಿನಯಶೀಲ ಮಹಾಬುದ್ಧಿವಂತ ವಿಭೀಷಣನು ಕೆಳಗೆ ಇಳಿದು ಭೂಮಿಯ ಕಡೆಗೆ ನೋಡಿದನು.॥1॥

ಮೂಲಮ್ - 2½

ಖಾತ್ ಪಪಾತಾವನೀಂ ಹೃಷ್ಟೋ ಭಕ್ತೈರನುಚರಃ ಸಹ ।
ಸ ತು ರಾಮಸ್ಯ ಧರ್ಮಾತ್ಮಾ ನಿಪಪಾತ ವಿಭೀಷಣಃ ॥
ಪಾದಯೋರ್ನಿಪಪಾತಾಥ ಚತುರ್ಭಿಃ ಸಹ ರಾಕ್ಷಸೈಃ ।

ಅನುವಾದ

ಅವನು ತನ್ನ ಭಕ್ತ ಸೇವಕರೊಂದಿಗೆ ಹರ್ಷಗೊಂಡು ಆಕಾಶದಿಂದ ಇಳಿದು ಭೂಮಿಗೆ ಬಂದನು. ಇಳಿದು ನಾಲ್ಕು ರಾಕ್ಷಸರೊಂದಿಗೆ ಧರ್ಮಾತ್ಮಾ ವಿಭೀಷಣನು ಶ್ರೀರಾಮಚಂದ್ರನ ಚರಣದಲ್ಲಿ ಕುಸಿದುಬಿದ್ದನು.॥2½॥

ಮೂಲಮ್ - 3½

ಅಬ್ರವೀಚ್ಚ ತದಾ ವಾಕ್ಯಂ ರಾಮಂ ಪ್ರತಿ ವಿಭೀಷಣಃ ॥
ಧರ್ಮಯುಕ್ತಂ ಚ ಯುಕ್ತಂ ಚ ಸಾಂಪ್ರತಂ ಸಂಪ್ರಹರ್ಷಣಮ್ ।

ಅನುವಾದ

ಆಗ ವಿಭೀಷಣನು ಶ್ರೀರಾಮನಲ್ಲಿ ಧರ್ಮಾನುಕೂಲ, ಯುಕ್ತಿಯುಕ್ತ, ಸಮಯೋಚಿತ ಮತ್ತು ಹರ್ಷವರ್ಧಕ ಮಾತನ್ನು ಹೇಳಿದನು.॥3½॥

ಮೂಲಮ್ - 4½

ಅನುಜೋ ರಾವಣಸ್ಯಾಹಂ ತೇನ ಚಾಸ್ಮ್ಯವಮಾನಿತಃ ॥
ಭವಂತಂ ಸರ್ವಭೂತಾನಾಂ ಶರಣ್ಯಂ ಶರಣಂ ಗತಃ ।

ಅನುವಾದ

ಭಗವಂತಾ! ನಾನು ರಾವಣನ ತಮ್ಮನಾಗಿದ್ದೇನೆ. ರಾವಣನು ನನಗೆ ಅಪಮಾನ ಮಾಡಿರುವನು. ನೀನು ಸಮಸ್ತ ಪ್ರಾಣಿಗಳಿಗೆ ಶರಣ್ಯನಾಗಿರುವೆ. ಅದಕ್ಕಾಗಿ ನಾನು ನಿನಗೆ ಶರಣಾಗಿದ್ದೇನೆ.॥4½॥

ಮೂಲಮ್ - 5½

ಪರಿತ್ಯಕ್ತಾ ಮಯಾ ಲಂಕಾ ಮಿತ್ರಾಣಿ ಚ ಧನಾನಿ ಚ ॥
ಭವದ್ಗತಂ ಹಿ ಮೇ ರಾಜ್ಯಂ ಜೀವಿತಂ ಚ ಸುಖಾನಿ ಚ ।

ಅನುವಾದ

ಎಲ್ಲ ಮಿತ್ರರನ್ನು ಐಶ್ವರ್ಯ ಮತ್ತು ಲಂಕಾಪುರಿಯನ್ನು ಬಿಟ್ಟು ಬಂದಿರುವೆನು. ಈಗ ನನ್ನ ರಾಜ್ಯ, ಜೀವನ, ಸುಖ ಎಲ್ಲವೂ ನಿನ್ನ ಅಧೀನವೇ ಆಗಿದೆ.॥5½॥

ಮೂಲಮ್ - 6½

ತಸ್ಯ ತದ್ವಚನಂ ಶ್ರುತ್ವಾ ರಾಮೋ ವಚನಮಬ್ರವೀತ್ ॥
ವಚಸಾ ಸಾಂತ್ವಯಿತ್ವೈನಂ ಲೋಚನಾಭ್ಯಾಂ ಪಿಬನ್ನಿವ ।

ಅನುವಾದ

ವಿಭೀಷಣನ ಈ ಮಾತನ್ನು ಕೇಳಿ ಶ್ರೀರಾಮನು ಮಧುರವಾಣಿಯಿಂದ ಅವನನ್ನು ಸಾಂತ್ವನಗೊಳಿಸಿ, ಕಣ್ಣು ಗಳಿಂದಲೇ ಅವನನ್ನು ಕುಡಿದುಬಿಡುವಂತೆ ಪ್ರೇಮಪೂರ್ವಕ ಅವನ ಕಡೆಗೆ ನೋಡುತ್ತಾ ಹೇಳಿದನು.॥6½॥

ಮೂಲಮ್ - 7

ಆಖ್ಯಾಹಿ ಮಮ ತತ್ವೇನ ರಾಕ್ಷಸಾನಾಂ ಬಲಾಬಲಮ್ ॥

ಮೂಲಮ್ - 8

ಏವಮುಕ್ತಂ ತದಾ ರಕ್ಷೋ ರಾಮೇಣಾಕ್ಲಿಷ್ಟಕರ್ಮಣಾ ।
ರಾವಣ್ಯಸ್ಯ ಬಲಂ ಸರ್ವಮಾಖ್ಯಾತುಮುಪಚಕ್ರಮೇ ॥

ಅನುವಾದ

ವಿಭೀಷಣನೇ! ನೀನು ನನಗೆ ಸರಿಯಾಗಿ ರಾಕ್ಷಸರ ಬಲಾಬಲಗಳನ್ನು ತಿಳಿಸು. ಆಯಾಸವಿಲ್ಲದೆ ಮಹತ್ಕಾರ್ಯವನ್ನು ಮಾಡುವ ಶ್ರೀರಾಮನು ಹೀಗೆ ಹೇಳಿದಾಗ ವಿಭೀಷಣನು ರಾವಣನ ಸಂಪೂರ್ಣ ಬಲದ ಪರಿಚಯ ಹೇಳಲುತೊಡಗಿದನು.॥7-8॥

ಮೂಲಮ್ - 9

ಅವಧ್ಯಃ ಸರ್ವಭೂತಾನಾಂ ಗಂಧರ್ವೋರಗಪಕ್ಷಿಣಾಮ್ ।
ರಾಜಪುತ್ರ ದಶಗ್ರೀವೋ ವರದಾನಾತ್ಸ್ವಯಂಭುವಃ ॥

ಅನುವಾದ

ರಾಜಕುಮಾರ ! ಬ್ರಹ್ಮದೇವರ ವರಬಲದಿಂದ ದಶಮುಖ ರಾವಣನು (ಕೇವಲ ಮನುಷ್ಯರನ್ನು ಬಿಟ್ಟು) ಗಂಧರ್ವ, ನಾಗ, ಪಕ್ಷಿ ಮೊದಲಾದ ಎಲ್ಲ ಪ್ರಾಣಿಗಳಿಂದ ಅವಧ್ಯನಾಗದ್ದಾನೆ.॥9॥

ಮೂಲಮ್ - 10

ರಾವಣಾನಂತರೋ ಭ್ರಾತಾ ಮಮ ಜ್ಯೇಷ್ಠಶ್ಚ ವೀರ್ಯವಾನ್ ।
ಕುಂಭಕರ್ಣೋ ಮಹಾತೇಜಾಃ ಶಕ್ರಪ್ರತಿಬಲೋ ಯುಧಿ ॥

ಅನುವಾದ

ರಾವಣನಿಗೆ ತಮ್ಮ ಮತ್ತು ನನಗೆ ಅಣ್ಣನಾದ ಕುಂಭಕರ್ಣನು ಮಹಾತೇಜಸ್ವೀ ಮತ್ತು ಪರಾಕ್ರಮಿಯಾಗಿದ್ದಾನೆ. ಯುದ್ಧದಲ್ಲಿ ಅವನು ಇಂದ್ರನಂತೆ ಬಲಶಾಲಿಯಾಗಿದ್ದಾನೆ.॥10॥

ಮೂಲಮ್ - 11

ರಾಮ ಸೇನಾಪತಿಸ್ತಸ್ಯ ಪ್ರಹಸ್ತೋ ಯದಿ ತೇ ಶ್ರುತಃ ।
ಕೈಲಾಸೇ ಯೇನ ಸಮರೇ ಮಣಿಭದ್ರಃ ಪರಾಜಿತಃ ॥

ಅನುವಾದ

ಶ್ರೀರಾಮಾ! ರಾವಣನ ಸೇನಾಪತಿ ಪ್ರಹಸ್ತನ ಹೆಸರು ನೀನೂ ಕೇಳಿರಬಹುದು. ಅವನು ಕೈಲಾಸದಲ್ಲಿ ಘಟಿಸಿದ ಯುದ್ಧದಲ್ಲಿ ಕುಬೇರನ ಸೇನಾಪತಿ ಮಣಿಭದ್ರನನ್ನು ಪರಾಜಿತಗೊಳಿಸಿದ್ದನು.॥11॥

ಮೂಲಮ್ - 12

ಬದ್ಧಗೋಧಾಂಗುಲಿತ್ರಾಣಸ್ತ್ವವಧ್ಯಕವಚೋ ಯುಧಿ ।
ಧನುರಾದಾಯ ತಿಷ್ಠನ್ನದೃಶ್ಯೋ ಭವತೀಂದ್ರಜಿತ್ ॥

ಅನುವಾದ

ರಾವಣನ ಪುತ್ರ ಇಂದ್ರಜಿತನು ಉಡದ ಚರ್ಮವನ್ನು ಬೆರಳುಗಳಿಗೆ ಸುತ್ತಿ ಅಭೇದ್ಯ ಕವಚವನ್ನು ಧರಿಸಿ, ಕೈಯಲ್ಲಿ ಧನುಷ್ಯ ಹಿಡಿದು ಯುದ್ಧದಲ್ಲಿ ನಿಂತಿರುವಾಗ ಅದೃಶ್ಯನಾಗಿ ಬಿಡುವನು.॥12॥

ಮೂಲಮ್ - 13

ಸಂಗ್ರಾಮೇ ಸು ಮಹಾವ್ಯೂಹೇ ತರ್ಪಯಿತ್ವಾ ಹುತಾಶನಮ್ ।
ಅಂತರ್ಧಾನಗತಃ ಶ್ರೀಮಾನಿಂದ್ರಜಿದ್ಧಂತಿ ರಾಘವ ॥

ಅನುವಾದ

ರಘುನಂದನ! ಶ್ರೀಮಾನ್ ಇಂದ್ರಜಿತನು ಯಜ್ಞೇಶ್ವರನನ್ನು ಮೆಚ್ಚಿಸಿ ವಿಶಾಲ ವ್ಯೂಹದಿಂದ ಕೂಡಿದ ಸಂಗ್ರಾಮದಲ್ಲಿ ಅದೃಶ್ಯನಾಗಿ ಶತ್ರುಗಳ ಮೇಲೆ ಪ್ರಹಾರ ಮಾಡುವ ಶಕ್ತಿಯನ್ನು ಪಡೆದುಕೊಂಡಿರುವನು.॥13॥

ಮೂಲಮ್ - 14

ಮಹೋದರ ಮಹಾಪಾರ್ಶ್ವೌ ರಾಕ್ಷಸಶ್ಚಾಪ್ಯಕಂಪನಃ ।
ಅನೀಕಪಾಸ್ತು ತಸ್ಯೈತೇ ಲೋಕಪಾಲಸಮಾ ಯುಧಿ ॥

ಅನುವಾದ

ಮಹೋದರ, ಮಹಾಪಾರ್ಶ್ವ, ಅಕಂಪನ-ಈ ಮೂವರು ರಾಕ್ಷಸರು ರಾವಣನ ಸೇನಾಪತಿಯಾಗಿದ್ದಾರೆ. ಯುದ್ಧದಲ್ಲಿ ಲೋಕಪಾಲಕರಂತೆ ಪರಾಕ್ರಮ ಪ್ರಕಟಪಡಿಸುವವರಾಗಿದ್ದಾರೆ.॥14॥

ಮೂಲಮ್ - 15

ದಶಕೋಟಿ ಸಹಸ್ರಾಣಿ ರಕ್ಷಸಾಂ ಕಾಮರೂಪಿಣಾಮ್ ।
ಮಾಂಸಶೋಣಿತಭಕ್ಷಾಣಾಂ ಲಂಕಾಪುರನಿವಾಸಿನಾಮ್ ॥

ಮೂಲಮ್ - 16

ಸ ತೈಸ್ತು ಸಹಿತೋ ರಾಜಾ ಲೋಕಪಾಲಾನಯೋಧಯತ್ ।
ಸಹ ದೇವೈಸ್ತು ತೇ ಭಗ್ನಾ ರಾವಣೇನ ಮಹಾತ್ಮನಾ ॥

ಅನುವಾದ

ಲಂಕೆಯಲ್ಲಿ ರಕ್ತ-ಮಾಂಸದ ಭೋಜನ ಮಾಡುವ, ಕಾಮರೂಪಿಗಳಾದ ಹತ್ತುಕೋಟಿ ಸಾವಿರ ರಾಕ್ಷಸರು ವಾಸಿಸುತ್ತಾರೆ. ಅವರನ್ನು ಜೊತೆಗೂಡಿ ರಾವಣನು ಲೋಕಪಾಲಕರೊಂದಿಗೆ ಯುದ್ಧ ಮಾಡಿದ್ದನು. ಆಗ ದೇವತೆಗಳ ಸಹಿತ ಆ ಎಲ್ಲ ಲೋಕ ಪಾಲಕರು ದುರಾತ್ಮಾ ರಾವಣನಿಂದ ಪರಾಜಿತರಾಗಿ ಓಡಿ ಹೋಗಿದ್ದರು.॥15-16॥

ಮೂಲಮ್ - 17

ವಿಭೀಷಣಸ್ಯ ತು ವಚಸ್ತಚ್ಛ್ರುತ್ವಾ ರಘುಸತ್ತಮಃ ।
ಅನ್ವೀಕ್ಷ್ಯಮನಸಾ ಸರ್ವಮಿದಂ ವಚನಮಬ್ರವೀತ್ ॥

ಅನುವಾದ

ವಿಭೀಷಣನ ಈ ಮಾತನ್ನು ಕೇಳಿ ರಘು ಕುಲತಿಲಕ ಶ್ರೀರಾಮನು ಮನಸ್ಸಿನಲ್ಲೇ ಅದೆಲ್ಲದರ ಕುರಿತು ಪದೇ ಪದೇ ವಿಚಾರಮಾಡಿ ಈ ಪ್ರಕಾರ ಹೇಳಿದನು.॥17॥

ಮೂಲಮ್ - 18

ಯಾನಿ ಕರ್ಮಾಪದಾನಾನಿ ರಾವಣಸ್ಯ ವಿಭೀಷಣ ।
ಆಖ್ಯಾತಾನಿ ಚ ತತ್ತ್ವೇನ ಹ್ಯವಗಚ್ಛಾಮಿ ತಾನ್ಯಹಮ್ ॥

ಅನುವಾದ

ವಿಭೀಷಣನೇ! ರಾವಣನ ಯುದ್ಧವಿಷಯದಲ್ಲಿ ನೀನು ವರ್ಣಿಸಿದ ಪರಾಕ್ರಮವನ್ನು ನಾನು ಚೆನ್ನಾಗಿ ತಿಳಿಯುತ್ತೇನೆ.॥18॥

ಮೂಲಮ್ - 19

ಅಹಂ ಹತ್ವಾ ದಶಗ್ರೀವಂ ಸಪ್ರಹಸ್ತಂ ಸಹಾತ್ಮಜಮ್ ।
ರಾಜಾನಂ ತ್ವಾಂ ಕರಿಷ್ಯಾಮಿ ಸತ್ಯಮೇತಚ್ಛ್ರುಣೋತು ಮೇ ॥

ಅನುವಾದ

ಆದರೂ ಕೇಳು, ಪ್ರಹಸ್ತ ಮತ್ತು ಪುತ್ರರ ಸಹಿತ ರಾವಣನನ್ನು ವಧಿಸಿ ಖಂಡಿತವಾಗಿ ನಿನ್ನನ್ನು ಲಂಕೆಯ ರಾಜನಾಗಿಸುವೆನೆಂದು ಹೇಳುತ್ತಿದ್ದೇನೆ.॥19॥

ಮೂಲಮ್ - 20

ರಸಾತಲಂ ವಾ ಪ್ರವಿಶೇ ತ್ಪಾತಾಲಂ ವಾಪಿ ರಾವಣಃ ।
ಪಿತಾಮಹಸಕಾಶಂ ವಾ ನ ಮೇ ಜೀವನ್ವಿಮೋಕ್ಷ್ಯತೇ ॥

ಅನುವಾದ

ರಾವಣನು ರಸಾತಲ ಅಥವಾ ಪಾತಾಳವನ್ನು ಪ್ರವೇಶಿಸಿದರೂ, ಅಥವಾ ಪಿತಾಮಹ ಬ್ರಹ್ಮನ ಬಳಿಗೆ ಹೊರಟುಹೋದರೂ ಅವನು ಇನ್ನು ನನ್ನ ಕೈಯಿಂದ ಜೀವಂತನಾಗಿ ಇರಲಾರನು.॥20॥

ಮೂಲಮ್ - 21

ಅಹತ್ವಾ ರಾವಣಂ ಸಂಖ್ಯೇ ಸುಪುತ್ರಜನ ಬಾಂಧವಮ್ ।
ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈರ್ಭ್ರಾತೃಭಿಃ ಶಪೇ ॥

ಅನುವಾದ

ನಾನು ಮೂವರೂ ತಮ್ಮಂದಿರ ಆಣೆಯಿಟ್ಟು ಹೇಳುತ್ತೇನೆ. ಯುದ್ಧದಲ್ಲಿ, ಭೃತ್ಯರು, ಬಂಧು ಬಾಂಧವರೊಂದಿಗೆ ರಾವಣನನ್ನು ವಧಿಸದೆ ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ.॥21॥

ಮೂಲಮ್ - 22

ಶ್ರುತ್ವಾ ತು ವಚನಂ ತಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ ।
ಶಿರಸಾಽಽವಂದ್ಯ ಧರ್ಮಾತ್ಮಾ ವಕ್ತುಮೇವಂ ಪ್ರಚಕ್ರಮೇ ॥

ಅನುವಾದ

ಕ್ಲಿಷ್ಟವಾದ ಕಾರ್ಯವನ್ನು ಶ್ರಮವಿಲ್ಲದೆ ಮಾಡುವ ಶ್ರೀರಾಮನ ಈ ಮಾತನ್ನು ಕೇಳಿ ಧರ್ಮಾತ್ಮಾ ವಿಭೀಷಣನು ತಲೆಬಾಗಿ ವಂದಿಸಿ, ಈ ಪ್ರಕಾರ ಹೇಳಲುಪಕ್ರಮಿಸಿದನು .॥22॥

ಮೂಲಮ್ - 23

ರಾಕ್ಷಾಸಾನಾಂ ವಧೇ ಸಾಹ್ಯಂ ಲಂಕಾಯಾಶ್ಚ ಪ್ರಧರ್ಷಣೇ ।
ಕರಿಷ್ಯಾಮಿ ಯಥಾಪ್ರಾಣಂ ಪ್ರವೇಕ್ಷ್ಯಾಮಿ ಚ ವಾಹಿನೀಮ್ ॥

ಅನುವಾದ

ಪ್ರಭೋ! ರಾಕ್ಷಸರ ಸಂಹಾರದಲ್ಲಿ ಮತ್ತು ಲಂಕೆಯ ಮೇಲೆ ಆಕ್ರಮಣ ಮಾಡಿ ಅದನ್ನು ಗೆಲ್ಲಲು ನಾನು ನಿನಗೆ ಯಥಾಶಕ್ತಿ ಸಹಾಯ ಮಾಡುವೆನು. ಪ್ರಾಣಗಳನ್ನು ಪಣಕಿಟ್ಟು ಯುದ್ಧಕ್ಕಾಗಿ ರಾವಣನ ಸೈನ್ಯದಲ್ಲಿಯೂ ಪ್ರವೇಶಿಸುವೆನು.॥23॥

ಮೂಲಮ್ - 24

ಇತಿ ಬ್ರುವಾಣಂ ರಾಮಸ್ತು ಪರಿಷ್ವಜ್ಯ ವಿಭೀಷಣಮ್ ।
ಅಬ್ರವೀಲ್ಲಕ್ಷ್ಮಣಂ ಪ್ರೀತಃ ಸಮುದ್ರಾಜ್ಜಲಮಾನಯ ॥

ಮೂಲಮ್ - 25

ತೇನ ಚೇಮಂ ಮಹಾಪ್ರಾಜ್ಞಮಭಿಷಿಂಚ ವಿಭೀಷಣಮ್ ।
ರಾಜಾನ ರಕ್ಷಸಾಂ ಕ್ಷಿಪ್ರಂ ಪ್ರಸನ್ನೇ ಮಯಿ ಮಾನದ ॥

ಅನುವಾದ

ವಿಭೀಷಣನು ಹೀಗೆ ಹೇಳಿದಾಗ ಶ್ರೀರಾಮನು ಅವನನ್ನು ಅಪ್ಪಿಕೊಂಡು, ಸಂತೋಷಗೊಂಡು ಲಕ್ಷ್ಮಣನಲ್ಲಿ ಹೇಳಿದನು- ಬೇರೆಯವರಿಗೆ ಮಾನಕೊಡುವ ಸುಮಿತ್ರಾನಂದನನೇ! ನೀನು ಸಮುದ್ರದ ಜಲವನ್ನು ಎತ್ತಿಕೊಂಡು ಬಾ, ಅದರಿಂದ ಈ ಪರಮ ಬುದ್ಧಿವಂತ ರಾಕ್ಷಸರಾಜ ವಿಭೀಷಣನ ಲಂಕೆಯ ಪಟ್ಟಾಭಿಷೇಕ ಮಾಡು. ನಾನು ಪ್ರಸನ್ನನಾದಾಗ ಇವನಿಗೆ ಈ ಲಾಭ ಸಿಗಲೇಬೇಕು.॥24-25॥

ಮೂಲಮ್ - 26

ಏವಮುಕ್ತಸ್ತು ಸೌಮಿತ್ರಿರಭ್ಯಷಿಂಚಿದ್ ವಿಭೀಷಣಮ್ ।
ಮಧ್ಯೇ ವಾನರಮುಖ್ಯಾನಾಂ ರಾಜಾನಂ ರಾಜಶಾಸನಾತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಲಕ್ಷ್ಮಣನು ಪ್ರಧಾನ ವಾನರರ ನಡುವೆ ಮಹಾರಾಜ ರಾಮನ ಆದೇಶದಂತೆ ವಿಭೀಷಣನಿಗೆ ರಾಕ್ಷಸರ ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದನು.॥2.॥

ಮೂಲಮ್ - 27

ತಂ ಪ್ರಸಾದಂ ತು ರಾಮಸ್ಯ ದೃಷ್ಟ್ವಾ ಸದ್ಯಃ ಪ್ಲವಂಗಮಾಃ ।
ಪ್ರಚುಕ್ರುಶುರ್ಮಹಾತ್ಮಾನಂ ಸಾಧುಸಾಧ್ವಿತಿ ಚಾಬ್ರುವನ್ ॥

ಅನುವಾದ

ಭಗವಾನ್ ಶ್ರೀರಾಮನ ಈ ತಾತ್ಕಾಲಿಕ ಪ್ರಸಾದವನ್ನು ನೋಡಿ ವಾನರರು ಹರ್ಷಧ್ವನಿ ಮಾಡಿದರು ಮತ್ತು ಮಹಾತ್ಮಾ ಶ್ರೀರಾಮನಿಗೆ ಧನ್ಯವಾದಗಳನ್ನು ಕೊಡಲು ತೊಡಗಿದರು.॥27॥

ಮೂಲಮ್ - 28

ಅಬ್ರವೀಚ್ಚ ಹನೂಮಾಂಶ್ಚ ಸುಗ್ರೀವಶ್ಚ ವಿಭೀಷಣಮ್ ।
ಕಥಂ ಸಾಗರಮಕ್ಷೋಭ್ಯಂ ತರಾಮ ವರುಣಾಲಯಮ್ ।
ಸೈನ್ಯೈಃ ಪರಿವೃತಾಃ ಸರ್ವೇ ವಾನಾರಾಣಾಂ ಮಹೌಜಸಾಮ್ ॥

ಅನುವಾದ

ಅನಂತರ ಹನುಮಂತ ಮತ್ತು ಸುಗ್ರೀವರು ವಿಭೀಷಣನಲ್ಲಿ ಕೇಳಿದರು - ರಾಕ್ಷಸರಾಜನೇ! ನಾವೆಲ್ಲರೂ ಈ ಅಕ್ಷೋಭ್ಯ ಸಮುದ್ರವನ್ನು ಮಹಾಬಲಿ ವಾನರರೊಂದಿಗೆ ಹೇಗೆ ದಾಟಬಲ್ಲೆವು.॥28॥

ಮೂಲಮ್ - 29

ಉಪಾಯೈರಭಿಗಚ್ಛಾಮ ಯಥಾ ನದನದೀಪತಿಮ್ ।
ತರಾಮ ತರಸಾ ಸರ್ವೇ ಸಸೈನ್ಯಾ ವರುಣಾಲಯಮ್ ॥

ಅನುವಾದ

ನಾವೆಲ್ಲರೂ ಸೈನ್ಯಸಹಿತ ನದ-ನದಿಗಳ ಸ್ವಾಮಿ ವರುಣಾಲಯ ಸಮುದ್ರವನ್ನು ದಾಟಬಹುದಾದ ಉಪಾಯ ವನ್ನು ತಿಳಿಸು.॥29॥

ಮೂಲಮ್ - 30

ಏವಮುಕ್ತಸ್ತು ಧರ್ಮಾತ್ಮಾ ಪ್ರತ್ಯುವಾಚ ವಿಭೀಷಣಃ ।
ಸಮುದ್ರಂ ರಾಘವೋ ರಾಜಾ ಶರಣಂ ಗಂತುಮರ್ಹತಿ ॥

ಅನುವಾದ

ಅವರು ಹೀಗೆ ಕೇಳಿದಾಗ ಧರ್ಮಾತ್ಮಾ ವಿಭೀಷಣನು - ‘ರಘುವಂಶೀ ರಾಜಾ ಶ್ರೀರಾಮನು ಸಮುದ್ರಕ್ಕೆ ಶರಣಾಗಬೇಕು’ ಎಂದು ಉತ್ತರಿಸಿದನು.॥30॥

ಮೂಲಮ್ - 31

ಖಾನಿತಃ ಸಗರೇಣಾಯಮಪ್ರಮೇಯೋ ಮಹೋದಧಿಃ ।
ಕರ್ತುಮರ್ಹತಿ ರಾಮಸ್ಯ ಜ್ಞಾತೇಃ ಕಾರ್ಯಂ ಮಹೋದಧಿಃ ॥

ಅನುವಾದ

ಈ ಅಪಾರ ಮಹಾಸಾಗರವನ್ನು ಸಗರರಾಜನು ಅಗೆಸಿದ್ದನು. ಶ್ರೀರಾಮನೂ ಸಗರನ ವಂಶಜನೇ ಆಗಿದ್ದಾನೆ. ಅದಕ್ಕಾಗಿ ಸಮುದ್ರವು ಇವನ ಕಾರ್ಯವನ್ನು ಅವಶ್ಯವಾಗಿ ಮಾಡಬೇಕು.॥31॥

ಮೂಲಮ್ - 32

ಏವಂ ವಿಭೀಷಣೇನೋಕ್ತೋ ರಾಕ್ಷಸೇನ ವಿಪಶ್ಚಿತಾ ।
ಅಜಗಾಮಾಥ ಸುಗ್ರೀವೋ ಯತ್ರ ರಾಮಃ ಸಲಕ್ಷ್ಮಣಃ ॥

ಅನುವಾದ

ವಿದ್ವಾನ್ ರಾಕ್ಷಸ ವಿಭೀಷಣನು ಹೀಗೆ ಹೇಳಿದಾಗ ಲಕ್ಷ್ಮಣಸಹಿತ ಶ್ರೀರಾಮನು ಇದ್ದ ಸ್ಥಾನಕ್ಕೆ ಸುಗ್ರೀವನು ಬಂದನು.॥32॥

ಮೂಲಮ್ - 33

ತತಶ್ಚಾಖ್ಯಾತುಮಾರೇಭೇ ವಿಭೀಷಣವಚಃ ಶುಭಮ್ ।
ಸುಗ್ರೀವೋ ವಿಪುಲಗ್ರೀವಃ ಸಾಗರಸ್ಯೋಪವೇಶನಮ್ ॥

ಅನುವಾದ

ಬಳಿಕ ವಿಶಾಲ ಕುತ್ತಿಗೆಯುಳ್ಳ ಸುಗ್ರೀವನು ಸಮುದ್ರದ ಬಳಿಯಲ್ಲಿ ಪ್ರಾಯೋಪವೇಶ ಮಾಡುವ ವಿಷಯ ವಾಗಿ ವಿಭೀಷಣನ ಶುಭಕರವಾದ ಮಾತನ್ನು ಹೇಳಿದನು.॥33॥

ಮೂಲಮ್ - 34½

ಪ್ರಕೃತ್ಯಾ ಧರ್ಮಶೀಲಸ್ಯ ರಾಘಸ್ಯಾಸ್ಯಾಪ್ಯರೋಚತ ।
ಸ ಲಕ್ಷ್ಮಣಂ ಮಹಾತೇಜಾಃ ಸುಗ್ರಿವಂ ಚ ಹರೀಶ್ವರಮ್ ॥
ಸತ್ಕ್ರಿಯಾರ್ಥಂ ಕ್ರಿಯಾದಕ್ಷಂ ಸ್ಮಿತಪೂರ್ವಮಭಾಷತ ।

ಅನುವಾದ

ಭಗವಾನ್ ಶ್ರೀರಾಮನು ಸ್ವಭಾವದಿಂದಲೇ ಧರ್ಮಶೀಲನಾಗಿದ್ದ. ಆದ್ದರಿಂದ ಅವನಿಗೂ ವಿಭೀಷಣನ ಮಾತು ಸರಿ ಎಂದು ತೋರಿತು. ಮಹಾತೇಜಸ್ವೀ ರಘುನಾಥನು ಲಕ್ಷ್ಮಣ ಸಹಿತ ಕಾರ್ಯದಕ್ಷ ವಾನರರಾಜ ಸುಗ್ರೀವನನ್ನು ಸತ್ಕರಿಸುತ್ತಾ ಲಕ್ಷ್ಮಣನಲ್ಲಿ ಮುಗುಳ್ನಕ್ಕು ಹೇಳಿದನು.॥34½॥

ಮೂಲಮ್ - 35

ವಿಭೀಷಣಸ್ಯ ಮಂತ್ರೋಽಯಂ ಮಮ ಲಕ್ಷ್ಮಣ ರೋಚತೇ ॥

ಮೂಲಮ್ - 36

ಸುಗ್ರೀವಃ ಪಂಡಿತೋ ನಿತ್ಯಂ ಭವಾನ್ಮಂತ್ರವಿಚಕ್ಷಣಃ ।
ಉಭಾಭ್ಯಾಂ ಸಂಪ್ರಧಾರ್ಯಾರ್ಥಂ ರೋಚತೇ ಯತ್ತದುಚ್ಯತಾಮ್ ॥

ಅನುವಾದ

ಲಕ್ಷ್ಮಣಾ! ವಿಭೀಷಣನ ಈ ಸಮ್ಮತಿ ನನಗೆ ಮೆಚ್ಚಿಗೆಯಾಯಿತು, ಆದರೆ ಸುಗ್ರೀವನು ರಾಜನೀತಿಯ ದೊಡ್ಡ ಪಂಡಿತನಾಗಿದ್ದಾನೆ ಮತ್ತು ನೀನೂ ಸಮಯೋಚಿತ ಸಲಹೆ ಕೊಡುವುದರಲ್ಲಿ ಕುಶಲನಾಗಿರುವೆ. ಅದಕ್ಕಾಗಿ ನೀವಿಬ್ಬರೂ ಪ್ರಸ್ತುತ ಕಾರ್ಯದ ಬಗ್ಗೆ ಚೆನ್ನಾಗಿ ವಿಚಾರಮಾಡಿ ಸರಿ ಎಂದು ಎನಿಸಿದನ್ನು ತಿಳಿಸಿರಿ.॥35-36॥

ಮೂಲಮ್ - 37

ಏವಮುಕ್ತೌ ತತೋ ವೀರಾವುಭೌ ಸುಗ್ರೀವಲಕ್ಷ್ಮಣೌ ।
ಸಮುದ್ರಾಚಾರ ಸಂಯುಕ್ತಮಿದಂ ವಚನಮೂಚತುಃ ॥

ಅನುವಾದ

ಭಗವಾನ್ ಶ್ರೀರಾಮನು ಹೀಗೆ ಹೇಳಿದಾಗ ಅವರಿಬ್ಬರೂ ವೀರ ಸುಗ್ರೀವ ಮತ್ತು ಲಕ್ಷ್ಮಣರು ಅವನಲ್ಲಿ ಆದರದಿಂದ ಹೇಳಿದರು.॥37॥

ಮೂಲಮ್ - 38

ಕಿಮರ್ಥಂ ನೌ ನರವ್ಯಾಘ್ರ ನ ರೋಚಿಷ್ಯತಿ ರಾಘವ ।
ವಿಭೀಷಣೇನ ಯತ್ತೂಕ್ತಮಸ್ಮಿನ್ಕಾಲೇ ಸುಖಾವಹಮ್ ॥

ಅನುವಾದ

ಪುರುಷಸಿಂಹ ರಘುನಂದನ! ಈ ಸಮಯದಲ್ಲಿ ವಿಭೀಷಣನು ಹೇಳಿದ ಸುಖದಾಯಕ ಮಾತು ನಮಗಿಬ್ಬರಿಗೆ ಏಕೆ ಒಳ್ಳೆಯದೆನಿಸುವುದಿಲ್ಲ.॥38॥

ಮೂಲಮ್ - 39

ಅಬದ್ಧ್ವಾ ಸಾಗರೇ ಸೇತುಂ ಘೋರೇಽಸ್ಮಿನ್ವರುಣಾಲಯೇ ।
ಲಂಕಾ ನಾಸಾದಿತುಂ ಶಕ್ಯಾ ಸೇಂದ್ರೈರಪಿ ಸುರಾಸುರೈಃ ॥

ಅನುವಾದ

ಈ ಭಯಂಕರ ಸಮುದ್ರಕ್ಕೆ ಸೇತುವೆ ಕಟ್ಟದೆ ಇಂದ್ರನ ಸಹಿತ ದೇವತೆಗಳು, ಅಸುರರೂ ಕೂಡ ಈ ಕಡೆಯಿಂದ ಲಂಕೆಯನ್ನು ತಲುಪಲಾರರು.॥39॥

ಮೂಲಮ್ - 40

ವಿಭೀಷಣಸ್ಯ ಶೂರಸ್ಯ ಯಥಾರ್ಥಂ ಕ್ರಿಯತಾಂ ವಚಃ ।
ಅಲಂ ಕಾಲಾತ್ಯಯಂ ಕೃತ್ವಾ ಸಾಗರೋಽಯಂ ನಿಯುಜ್ಯತಾಮ್ ।
ಯಥಾ ಸೈನ್ಯೇನ ಗಚ್ಛಾಮ ಪುರೀಂ ರಾವಣಪಾಲಿತಾಮ್ ॥

ಅನುವಾದ

ಅದಕ್ಕಾಗಿ ನೀವು ಶೂರವೀರ ವಿಭೀಷಣನ ಯಥಾರ್ಥ ವಚನಕ್ಕನುಸಾರವೇ ಕಾರ್ಯ ಮಾಡಿರಿ. ಈಗ ಹೆಚ್ಚು ವಿಳಂಬ ಮಾಡುವುದು ಸರಿಯಲ್ಲ. ಈ ಸಮುದ್ರದಲ್ಲಿ ನಮಗೆ ಸಹಾಯಮಾಡುವಂತೆ ಕೇಳಿಕೊಳ್ಳುವುದು, ಇದರಿಂದ ನಾವು ಸೈನ್ಯ ಸಹಿತ ರಾವಣಪಾಲಿತ ಲಂಕೆಯನ್ನು ತಲುಪಬಲ್ಲೆವು.॥40॥

ಮೂಲಮ್ - 41

ಏವಮುಕ್ತಃ ಕುಶಾಸ್ತೀರ್ಣೇ ತೀರೇ ನದನದೀಪತೇಃ ।
ಸಂವಿವೇಶ ತದಾ ರಾಮೋ ವೇದ್ಯಾಮಿವ ಹುತಾಶನಃ ॥

ಅನುವಾದ

ಅವರಿಬ್ಬರೂ ಹೀಗೆ ಹೇಳಿದಾಗ ಶ್ರೀರಾಮಚಂದ್ರನು ಆಗ ಸಮುದ್ರತೀರದಲ್ಲಿ ದರ್ಭೆಗಳನ್ನು ಹಾಸಿ ಅದರ ಮೇಲೆ ವೇದಿಯ ಮೇಲೆ ಅಗ್ನಿ ಪ್ರತಿಷ್ಠಾಪಿತವಾಗುವಂತೆ ಕುಳಿತುಬಿಟ್ಟನು.॥41॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥19॥