०१८ विभीषणेन रामसैन्यप्रवेशेच्छानिवेदनम्

वाचनम्
ಭಾಗಸೂಚನಾ

ಭಗವಾನ್ ಶ್ರೀರಾಮನು ಶರಣಾಗತನ ರಕ್ಷಣೆಯ ಮಹತ್ವ ಹಾಗೂ ತನ್ನ ವ್ರತವನ್ನು ತಿಳಿಸಿ ವಿಭೀಷಣನನ್ನು ಭೆಟ್ಟಿಯಾದುದು

ಮೂಲಮ್ - 1

ಅಥ ರಾಮಃ ಪ್ರಸನ್ನಾತ್ಮಾ ಶ್ರುತ್ವಾ ವಾಯುಸುತಸ್ಯ ಹ ।
ಪ್ರತ್ಯಭಾಷತ ದುರ್ಧರ್ಷಃ ಶ್ರುತವಾನಾತ್ಮನಿ ಸ್ಥಿತಮ್ ॥

ಅನುವಾದ

ವಾಯುನಂದನ ಹನುಮಂತನ ಮುಖದಿಂದ ತನ್ನ ಮನಸ್ಸಿನಲ್ಲಿದ್ದ ಮಾತನ್ನು ಕೇಳಿ ದುರ್ಜಯ ವೀರ ಭಗವಾನ್ ಶ್ರೀರಾಮನ ಚಿತ್ತಪ್ರಸನ್ನವಾಗಿ, ಅವನು ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಮಮಾಪಿ ಚ ವಿವಕ್ಷಾಸ್ತಿ ಕಾಚಿತ್ಪ್ರತಿ ವಿಭೀಷಣಮ್ ।
ಶ್ರೋತುಮಿಚ್ಛಾಮಿ ತತ್ಸರ್ವಂ ಭವದ್ಭಿಃಶ್ರೇಯಸಿ ಸ್ಥಿತೈಃ ॥

ಅನುವಾದ

ಮಿತ್ರರೇ! ವಿಭೀಷಣನ ಸಂಬಂಧದಲ್ಲಿ ನಾನೂ ಸ್ವಲ್ಪ ಹೇಳಲು ಬಯಸುತ್ತೇನೆ. ನೀವೆಲ್ಲರೂ ನನ್ನ ಹಿತಸಾಧನೆಯಲ್ಲಿ ಸಂಲಗ್ನರಾಗಿ ಇರುವವರು. ಆದ್ದರಿಂದ ನೀವೂ ಅದನ್ನು ಕೇಳಬೇಕೆಂದು ಇಚ್ಛಿಸುತ್ತೇನೆ.॥2॥

ಮೂಲಮ್ - 3

ಮಿತ್ರಭಾವೇನ ಸಂಪ್ರಾಪ್ತಂ ನತ್ಯೇಜೇಯಂ ಕಥಂಚನ ।
ದೋಷೋ ಯದ್ಯಪಿ ತಸ್ಯ ಸ್ಯಾತ್ಸತಾಮೇತದಗರ್ಹಿತಮ್ ॥

ಅನುವಾದ

ಮಿತ್ರಭಾವದಿಂದ ನನ್ನ ಬಳಿಗೆ ಬಂದಿರುವವನನ್ನು ನಾನು ಯಾವ ರೀತಿಯಿಂದಲೂ ತ್ಯಜಿಸಲಾರೆನು. ಅವನಲ್ಲಿ ಕೆಲವು ದೋಷಗಳಿದ್ದರೂ, ದೋಷಿಗೆ ಆಶ್ರಯಕೊಡುವುದು ಸತ್ಪುರುಷರಿಗೆ ನಿಂದಿತವಾಗಿಲ್ಲ. (ಆದ್ದರಿಂದ ವಿಭೀಷಣನಿಗೆ ನಾನು ಅವಶ್ಯವಾಗಿ ತನ್ನದಾಗಿಸಿಕೊಳ್ಳುವೆನು.॥3॥

ಮೂಲಮ್ - 4

ಸುಗ್ರೀವಸ್ತ್ವಥ ತದ್ವಾಕ್ಯಮಾಭಾಷ್ಯ ಚ ವಿಮೃಶ್ಯ ಚ ।
ತತಃ ಶುಭತರಂ ವಾಕ್ಯಮುವಾಚ ಹರಿಪುಂಗವಃ ॥

ಅನುವಾದ

ವಾನರರಾಜ ಸುಗ್ರೀವನು ಭಗವಾನ್ ಶ್ರೀರಾಮನ ಈ ಮಾತನ್ನು ಕೇಳಿ ತಾನೂ ಅದನ್ನು ಪುನರುಚ್ಚರಿಸಿ ಅದರ ಕುರಿತು ವಿಚಾರಮಾಡಿ ಹೀಗೆ ಪರಮ ಸುಂದರ ಮಾತನ್ನು ಹೇಳಿದನು.॥4॥

ಮೂಲಮ್ - 5½

ಸದುಷ್ಟೋ ವಾಪ್ಯದುಷ್ಟೋ ವಾ ಕಿಮೇಷ ರಜನೀಚರಃ ।
ಈದೃಶಂ ವ್ಯಸನಂ ಪ್ರಾಪ್ತಂ ಭ್ರಾತರಂ ಯಃ ಪರಿತ್ಯಜೇತ್ ॥
ಕೋ ನಾಮ ಸ ಭವೇತ್ತಸ್ಯ ಯಮೇಷ ನ ಪರಿತ್ಯಜೇತ್ ।

ಅನುವಾದ

ಪ್ರಭೋ! ಇವನು ದುಷ್ಟನಾಗಲಿ, ಅದುಷ್ಟನಾಗಲೀ ಇದರಿಂದ ಏನಾಗಿದೆ? ಅವನಾದರೋ ರಾಕ್ಷಸನೇ ಆಗಿದ್ದಾನೆ. ಮತ್ತೆ ಸಂಕಟದಲ್ಲಿ ಬಿದ್ದ ಇಂತಹವನನ್ನು ತನ್ನಣ್ಣನೇ ತ್ಯಜಿಸಬಲ್ಲನಾದರೆ, ಅವನನ್ನು ತ್ಯಜಿಸದಿರುವ ಸಂಬಂಧಿ ಬೇರೆ ಯಾರು ಇರಬಲ್ಲರು.॥5½॥

ಮೂಲಮ್ - 6

ವಾನರಾಧಿಪತೇರ್ವಾಕ್ಯಂ ಶ್ರುತ್ವಾ ಸರ್ವಾನುದೀಕ್ಷ್ಯ ತು ॥

ಮೂಲಮ್ - 7

ಈಷದುತ್ಸ್ಮಯಮಾನಸ್ತು ಲಕ್ಷ್ಮಣಂ ಪುಣ್ಯಲಕ್ಷಣಮ್ ।
ಇತಿ ಹೋವಾಚ ಕಾಕುತ್ಸ್ಥೋ ವಾಕ್ಯಂ ಸತ್ಯಪರಾಕ್ರಮಃ ॥

ಅನುವಾದ

ವಾನರರಾಜ ಸುಗ್ರೀವನ ಈ ಮಾತನ್ನು ಕೇಳಿ ಸತ್ಯಪರಾಕ್ರಮಿ ಶ್ರೀರಘುನಾಥನು ಎಲ್ಲರ ಕಡೆಗೆ ನೋಡಿ ಸ್ವಲ್ಪ ಮುಗುಳ್ನಕ್ಕು, ಪವಿತ್ರ ಲಕ್ಷಣಗಳುಳ್ಳ ಲಕ್ಷ್ಮಣನಲ್ಲಿ ಈ ಪ್ರಕಾರ ಹೇಳಿದನು.॥6-7॥

ಮೂಲಮ್ - 8

ಅನಧೀತ್ಯ ಚ ಶಾಸ್ತ್ರಾಣಿ ವೃದ್ಧಾನನುಪಸೇವ್ಯ ಚ ।
ನ ಶಕ್ಯಮೀದೃಶಂ ವಕ್ತುಂ ಯದುವಾಚ ಹರೀಶ್ವರಃ ॥

ಅನುವಾದ

ಸುಮಿತ್ರಾನಂದನ! ಈಗ ವಾನರರಾಜನು ಹೇಳಿದ ಮಾತನ್ನು ಶಾಸ್ತ್ರಗಳ ಅಧ್ಯಯನ ಮತ್ತು ಗುರುಗಳ ಸೇವೆ ಮಾಡದಿರುವ ಯಾವ ಪುರುಷ ತಾನೇ ಹೇಳಬಲ್ಲನು.॥8॥

ಮೂಲಮ್ - 9

ಅಸ್ತಿ ಸೂಕ್ಷ್ಮತರಂ ಕಿಂಚಿದ್ ಯಥಾತ್ರ ಪ್ರತಿಭಾತಿ ಮಾ ।
ಪ್ರತ್ಯಕ್ಷಂ ಲೌಕಿಕಂ ಚೌಪಿ ವಿರ್ತತೇ ಸರ್ವರಾಜಸು ॥

ಅನುವಾದ

ಆದರೆ ಸುಗ್ರೀವನೇ! ನೀನು ವಿಭೀಷಣನಲ್ಲಿ ಅಣ್ಣನು ಪರಿತ್ಯಜಿಸಿದ ದೋಷವನ್ನು ಎಣಿಸಿದ್ದಿ, ಆ ವಿಷಯದಲ್ಲಿ ನನಗೆ ಅನಿಸಿದ ಸೂಕ್ಷ್ಮ ಅರ್ಥ, ಸಮಸ್ತರಾಜರಲ್ಲಿ ಪ್ರತ್ಯಕ್ಷ ವಾಗಿ ಕಂಡುಬರುವ ಮತ್ತು ಎಲ್ಲ ಲೋಕಗಳಲ್ಲಿ ಪ್ರಸಿದ್ಧವಾದುದನ್ನು ನಿಮ್ಮೆಲ್ಲರಲ್ಲಿ ಹೇಳಲು ನಾನು ಬಯಸುತ್ತಿರುವೆನು.॥9॥

ಮೂಲಮ್ - 10

ಅಮಿತ್ರಾಸ್ತತ್ಕುಲೀನಾಶ್ಚ ಪ್ರಾತಿದೇಶ್ಯಾಶ್ಚ ಕೀರ್ತಿತಾಃ ।
ವ್ಯಸನೇಷು ಪ್ರಹರ್ತಾರಸ್ತಸ್ಮಾದಯಮಿಹಾಗತಃ ॥

ಅನುವಾದ

ರಾಜರಲ್ಲಿ ಎರಡು ವಿಧದ ಛಿದ್ರಗಳು ಹೇಳಲಾಗಿದೆ. ಒಂದು ಅದೇ ಕುಲದಲ್ಲಿ ಹುಟ್ಟಿದ ಸಹೋದರ ಮತ್ತು ಇನ್ನೊಂದು ನೆರೆ ರಾಜ್ಯದ ನಿವಾಸಿ. ಇವರು ಸಂಕಟದಲ್ಲಿ ಬಿದ್ದಾಗ ತನ್ನ ವಿರೋಧಿ ರಾಜ ಅಥವಾ ರಾಜಪುತ್ರನ ಮೇಲೆ ಪ್ರಹಾರ ಮಾಡುತ್ತಾರೆ. ಇದೇ ಭಯದಿಂದ ವಿಭೀಷಣನು ಇಲ್ಲಿಗೆ ಬಂದಿರುವನು. (ಇವನಿಗೂ ತನ್ನ ಸಹೋದರರಿಂದ ಭಯವಿದೆ.॥10॥

ಮೂಲಮ್ - 11

ಅಪಾಪಾಸ್ತತ್ಕುಲೀನಾಶ್ಚ ಮಾನಯಂತಿ ಸ್ವಕಾನ್ ಹಿತಾನ್ ।
ಏಷ ಪ್ರಾಯೋ ನರೇಂದ್ರಾಣಾಂ ಶಂಕನೀಯಸ್ತು ಶೋಭನಃ ॥

ಅನುವಾದ

ಮನಸ್ಸಿನಲ್ಲಿ ಪಾಪವಿಲ್ಲದಿರುವ ಕುಲದಲ್ಲಿ ಹುಟ್ಟಿದ ಸಹೋದರ ತನ್ನ ಕುಟುಂಬದವರ ಹಿತೈಷಿ ಎಂದು ತಿಳಿಯುತ್ತಾರೆ; ಆದರೆ ಇದೇ ಸಜಾತಿಯ ಬಂಧು ಒಳ್ಳೆಯವನಾಗಿದ್ದರೂ ಪ್ರಾಯಶಃ ರಾಜರಿಗಾಗಿ ಸಾಶಂಕವಾಗಿರುತ್ತದೆ. (ರಾವಣನೂ ವಿಭೀಷಣನನ್ನು ಶಂಕಿತ ದೃಷ್ಟಿಯಿಂದ ನೋಡತೊಡಗಿದ್ದಾನೆ, ಅದಕ್ಕಾಗಿ ಇವನು ತನ್ನ ರಕ್ಷಣೆಗಾಗಿ ಇಲ್ಲಿಗೆ ಬಂದುದು ಅನುಚಿತವಲ್ಲ; ಆದ್ದರಿಂದ ನೀವು ಇವನ ಮೇಲೆ ಅಣ್ಣನನ್ನು ತ್ಯಜಿಸಿದ ದೋಷವನ್ನು ಹೊರಿಸಬಾರದು.॥11॥

ಮೂಲಮ್ - 12

ಯಸ್ತು ದೋಷಸ್ತ್ವಯಾ ಪ್ರೋಕ್ತೋಹ್ಯಾದಾನೇಽರಿಬಲಸ್ಯ ಚ ।
ತತ್ರ ತೇ ಕೀರ್ತಯಿಷ್ಯಾಮಿ ಯಥಾಶಾಸ್ತ್ರಮಿದಂ ಶೃಣು ॥

ಅನುವಾದ

ನೀನು ಶತ್ರುಪಕ್ಷದ ಸೈನಿಕನನ್ನು ತನ್ನದಾಗಿಸಿಕೊಳ್ಳಲು ಅವನು ಸಂದರ್ಭ ನೋಡಿ ಪ್ರಹಾರ ಮಾಡಿಬಿಡುವನು ಎಂದು ತಿಳಿಸಿದ ದೋಷದ ವಿಷಯದಲ್ಲಿ ನಾನು ನಿನಗೆ ಈ ನೀತಿಶಾಸ್ತ್ರಕ್ಕನುಕೂಲವಾಗಿ ಉತ್ತರ ಕೊಡುತ್ತಿದ್ದೇನೆ, ಕೇಳು.॥12॥

ಮೂಲಮ್ - 13

ನ ವಯಂ ತತ್ಕುಲೀನಾಶ್ಚ ರಾಜ್ಯಕಾಂಕ್ಷೀ ಚ ರಾಕ್ಷಸಃ ।
ಪಂಡಿತಾ ಹಿ ಭವಿಷ್ಯಂತಿ ತಸ್ಮಾದ್ ಗ್ರಾಹ್ಯೋ ವಿಭೀಷಣಃ ॥

ಅನುವಾದ

ನಾವು ಇವನ ಕುಟುಂಬಿಗಳಾದರೋ ಇಲ್ಲ (ಆದ್ದರಿಂದ ನಮ್ಮಿಂದ ಸ್ವಾರ್ಥಹಾನಿಯ ಆಶಂಕೆ ಇವನಿಗಿಲ್ಲ) ಮತ್ತು ಇವನು ರಾಕ್ಷಸ ರಾಜ್ಯವನ್ನು ಪಡೆಯುವ ಅಭಿಲಾಷಿಯಾಗಿದ್ದಾನೆ. ಇದಕ್ಕಾಗಿಯೂ ಇವನು ನಮ್ಮನ್ನು ತ್ಯಜಿಸಲಾರನು.) ಈ ರಾಕ್ಷಸರಲ್ಲಿ ಅನೇಕ ಜನರು ದೊಡ್ಡ ವಿದ್ವಾಂಸರೂ ಆಗಿರುತ್ತಾರೆ. (ಆದ್ದರಿಂದ ಅವರು ಮಿತ್ರರಾದರೆ ಬಹಳ ಕಾರ್ಯಗಳೂ ಸಿದ್ಧವಾಗುವವು.) ಇದಕ್ಕಾಗಿ ವಿಭೀಷಣನನ್ನು ನಮ್ಮ ಪಕ್ಷದಲ್ಲಿ ಸೇರಿಸಿಕೊಳ್ಳಬೇಕು.॥13॥

ಮೂಲಮ್ - 14

ಅವ್ಯಗ್ರಾಶ್ಚ ಪ್ರಹೃಷ್ಟಾಶ್ಚ ತೇ ಭವಿಷ್ಯಂತಿ ಸಂಗತಾಃ ।
ಪ್ರಣಾದಶ್ಚ ಮಹಾನೇಷೋಽನ್ಯೋನ್ಯಸ್ಯ ಭಯಮಾಗತಮ್ ।
ಇತಿ ಭೇದಂ ಗಮಿಷ್ಯಂತಿ ತಸ್ಮಾದ್ ಗ್ರಾಹ್ಯೋ ವಿಭೀಷಣಃ ॥

ಅನುವಾದ

ನಮ್ಮಲ್ಲಿ ಸೇರಿ ಹೋದಾಗ ಈ ವಿಭೀಷಣಾದಿಗಳು ನಿಶ್ಚಿತರಾಗಿ ಸಂತೋಷಗೊಳ್ಳುವರು. ಇವನಲ್ಲಿ ಶರಣಾಗತಿಗಾಗಿ ಪ್ರಬಲ ಆಸಕ್ತಿ ಇದೆ. ರಾಕ್ಷಸರಲ್ಲಿ ಪರಸ್ಪರ ಭಯ ಉಂಟಾಗಿದೆ ಎಂದು ಇದರಿಂದ ತಿಳಿಯುತ್ತದೆ. ಇದೇ ಕಾರಣದಿಂದ ಇವರಲ್ಲಿ ಒಡಕು ಉಂಟಾಗಿ ನಾಶವಾಗಿ ಹೋಗುವರು. ಅದಕ್ಕಾಗಿ ವಿಭೀಷಣನನ್ನು ಸ್ವೀಕರಿಸಬೇಕು.॥14॥

ಮೂಲಮ್ - 15

ನ ಸರ್ವೇ ಭ್ರಾತರಸ್ತಾತ ಭವಂತಿ ಭರತೋಪಮಾಃ ।
ಮದ್ವಿಧಾ ವಾ ಪಿತುಃ ಪುತ್ರಾಃ ಸುಹೃದೋ ವಾ ಭವದ್ವಿಧಾಃ ॥

ಅನುವಾದ

ಅಯ್ಯಾ ಸುಗ್ರೀವನೇ! ಜಗತ್ತಿನಲ್ಲಿ ಎಲ್ಲ ಸಹೋದರರೂ ಭರತನಂತೆ ಇರುವುದಿಲ್ಲ. ಅಪ್ಪನಿಗೆ ಎಲ್ಲ ಪುತ್ರರೂ ನನ್ನಂತೆ ಇರುವುದಿಲ್ಲ ಹಾಗೂ ಎಲ್ಲ ಮಿತ್ರರು ನಿನ್ನಂತೆ ಇರುವುದಿಲ್ಲ.॥15॥

ಮೂಲಮ್ - 16

ಏವಮುಕ್ತಸ್ತು ರಾಮೇಣ ಸುಗ್ರೀವಃ ಸಹಲಕ್ಷ್ಮಣಃ ।
ಉತ್ಥಾಯೇದಂ ಮಹಾಪ್ರಾಜ್ಞಃ ಪ್ರಣತೋ ವಾಕ್ಯಮಬ್ರವೀತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಲಕ್ಷ್ಮಣ ಸಹಿತ ಮಹಾಬುದ್ಧಿವಂತ ಸುಗ್ರೀವನು ಎದ್ದು ಅವನಿಗೆ ನಮಸ್ಕರಿಸಿ ಹೀಗೆ ಹೇಳಿದನು.॥16॥

ಮೂಲಮ್ - 17

ರಾವಣೇನ ಪ್ರಣಿಹಿತಂ ತಮವೇಹಿ ನಿಶಾಚರಮ್ ।
ತಸ್ಯಾಹಂ ನಿಗ್ರಹಂ ಮನ್ಯೇ ಕ್ಷಮಂ ಕ್ಷಮವತಾಂ ವರ ॥

ಅನುವಾದ

ಉಚಿತ ಕಾರ್ಯ ಮಾಡುವವರಲ್ಲಿ ಶ್ರೇಷ್ಠ ರಘುನಂದನ! ನೀವು ಆ ರಾಕ್ಷಸನನ್ನು ರಾವಣನು ಕಳಿಸಿದನೆಂದೇ ತಿಳಿಯಿರಿ. ನಾನಾದರೋ ಅವನ್ನು ಬಂಧಿಸುವುದೇ ಸರಿ ಎಂದು ತಿಳಿಯುತ್ತೇನೆ.॥17॥

ಮೂಲಮ್ - 18

ರಾಕ್ಷಸೋ ಜಿಹ್ವಯಾ ಬುದ್ಧ್ಯಾಸಂದಿಷ್ಟೋಽಯಮಿಹಾಗತಃ ।
ಪ್ರಹರ್ತುಂ ತ್ವಯಿ ವಿಶ್ವಸ್ತೇ ವಿಶ್ವಸ್ತೇ ಮಯಿ ವಾನಘ ॥

ಮೂಲಮ್ - 19

ಲಕ್ಷ್ಮಣೇ ವಾ ಮಹಾಬಾಹೋ ಸ ವಧ್ಯಃ ಸಚಿವೈಃ ಸಹ ।
ರಾವಣಸ್ಯ ನೃಶಂಸಸ್ಯ ಭ್ರಾತಾ ಹ್ಯೇಷ ವಿಭೀಷಣಃ ॥

ಅನುವಾದ

ನಿಷ್ಪಾಪ ರಾಮನೇ! ಈ ನಿಶಾಚರನು ರಾವಣನು ಹೇಳಿದ್ದರಿಂದಲೇ ಮನಸ್ಸಿನಲ್ಲಿ ಕುಟಿಲ ವಿಚಾರವನ್ನಿಟ್ಟುಕೊಂಡೇ ಇಲ್ಲಿಗೆ ಬಂದಿರುವನು. ನಾವು ಇವನ ಮೇಲೆ ವಿಶ್ವಾಸವಿಟ್ಟು ಇವನ ಕುರಿತು ನಿಶ್ಚಿಂತರಾದಾಗ ಇವನು ನಿಮ್ಮ ಮೇಲೆ ಅಥವಾ ಲಕ್ಷ್ಮಣನ ಮೇಲೆಯೂ ಪ್ರಹಾರ ಮಾಡಬಲ್ಲನು. ಅದಕ್ಕಾಗಿ ಮಹಾಬಾಹುವೇ! ಕ್ರೂರ ರಾವಣನ ತಮ್ಮನಾದ ಈ ವಿಭೀಷಣನನ್ನು ಮಂತ್ರಿಗಳ ಸಹಿತ ವಧಿಸುವುದೇ ಉಚಿತವಾಗಿದೆ.॥18-19॥

ಮೂಲಮ್ - 20

ಏವಮುಕ್ತ್ವಾ ರಘುಶ್ರೇಷ್ಠಂ ಸುಗ್ರೀವೋ ವಾಹಿನೀಪತಿಃ ।
ವಾಕ್ಯಜ್ಞೋ ವಾಕ್ಯಕುಶಲಂ ತತೋ ಮೌನಮುಪಾಗಮತ್ ॥

ಅನುವಾದ

ಪ್ರವಚನಕುಶಲ ರಘುಕುಲತಿಲಕ ಶ್ರೀರಾಮನಲ್ಲಿ ಹೀಗೆ ಹೇಳಿ ಮಾತುಕತೆಯ ಕಲೆಯನ್ನುಬಲ್ಲ ಸೇನಾಪತಿ ಸುಗ್ರೀವನು ಸುಮ್ಮನಾದನು.॥20॥

ಮೂಲಮ್ - 21

ಸಸುಗ್ರೀವಸ್ಯ ತದ್ವಾಕ್ಯಂ ರಾಮಃ ಶ್ರುತ್ವಾ ವಿಮೃಶ್ಯ ಚ ।
ತತಃ ಶುಭತರಂ ವಾಕ್ಯಮುವಾಚ ಹರಿವುಂಗವಮ್ ॥

ಅನುವಾದ

ಸುಗ್ರೀವನ ಆ ಮಾತನ್ನು ಕೇಳಿ, ಅದರ ಕುರಿತು ಚೆನ್ನಾಗಿ ವಿಚಾರಮಾಡಿ ಶ್ರೀರಾಮನು ಆ ವಾನರ ಶಿರೋಮಣಿಯಲ್ಲಿ ಹೀಗೆ ಪರಮ ಮಂಗಲಮಯ ಮಾತನ್ನು ಹೇಳಿದನು.॥21॥

ಮೂಲಮ್ - 22

ಸದುಷ್ಟೋ ವಾಪ್ಯದುಷ್ಟೋ ವಾ ಕಿಮೇಷ ರಜನೀಚರಃ ।
ಸೂಕ್ಷ್ಮಮಪ್ಯಹಿತಂ ಕರ್ತುಂ ಮಮ ಶಕ್ತಃ ಕಥಂಚನ ॥

ಅನುವಾದ

ವಾನರರಾಜಾ! ವಿಭೀಷಣನು ದುಷ್ಟನಾಗಲಿ ಅಥವಾ ಸಾಧು ಆಗಿರಲಿ. ಈ ನಿಶಾಚರ ಯಾವುದೇ ರೀತಿಯಿಂದ ನನಗೆ ಸೂಕ್ಷ್ಮಾತಿಸೂಕ್ಷ್ಮವಾದರೂ ಅಹಿತ ಮಾಡಬಲ್ಲನೇನು.॥22॥

ಮೂಲಮ್ - 23

ಪಿಶಾಚಾನ್ ದಾನವಾನ್ ಯಕ್ಷಾನ್ ಪೃಥಿವ್ಯಾಂ ಚೈವ ರಾಕ್ಷಸಾನ್ ।
ಅಂಗುಲ್ಯಗ್ರೇಣ ತಾನ್ಹನ್ಯಾಮಿಚ್ಛನ್ಹರಿಗಣೇಶ್ವರ ॥

ಅನುವಾದ

ವಾನರಯೂಥಪತೇ! ನಾನು ಬಯಸಿದರೆ ಪೃಥಿವಿಯಲ್ಲಿರುವ ವಿಶಾಚಗಳು, ದಾನವರು, ಯಕ್ಷರು, ರಾಕ್ಷಸರು ಇವರೆಲ್ಲರನ್ನೂ ಒಂದು ಬೆರಳ ತುದಿಯಿಂದಲೇ ಕೊಲ್ಲಬಲ್ಲೆನು.॥23॥

ಮೂಲಮ್ - 24

ಶ್ರೂಯತೇ ಹಿ ಕಪೋತೇನ ಶತ್ರುಃ ಶರಣಮಾಗತಃ ।
ಅರ್ಚಿತಶ್ಚ ಯಥಾನ್ಯಾಯಂ ಸ್ವೈಶ್ಚ ಮಾಂಸೈರ್ನಿಮಂತ್ರಿತಃ ॥

ಅನುವಾದ

ಒಂದು ಪಾರಿವಾಳವು ತನಗೆ ಶರಣು ಬಂದ ತನ್ನ ಶತ್ರುವಾದ ಒಬ್ಬ ಬೇಡನ ಆತಿಥ್ಯ-ಸತ್ಕಾರ ಮಾಡಿ, ಅವನಿಗೆ ನಿಯಂತ್ರಣ ಕೊಟ್ಟು ತನ್ನ ಶರೀರದ ಮಾಂಸವನ್ನೇ ತಿನ್ನಿಸಿತ್ತು ಎಂದು ಕೇಳಲಾಗುತ್ತದೆ.॥24॥

ಮೂಲಮ್ - 25

ಸ ಹಿ ತಂ ಪ್ರತಿಜಗ್ರಾಹ ಭಾರ್ಯಾಹರ್ತಾರಮಾಗತಮ್ ।
ಕಪೋತೋ ವಾನರಶ್ರೇಷ್ಠ ಕಿಂ ಪುನರ್ಮದ್ವಿಧೋ ಜನಃ ॥

ಅನುವಾದ

ಆ ಬೇಡನು ಆ ಪಾರಿವಾಳದ ಹೆಂಡತಿಯನ್ನು ಸೆರೆಹಿಡಿದಿದ್ದರೂ ತನ್ನ ಮನೆಗ ಬಂದಾಗ ಪಾರಿವಾಳವು ಅವನನ್ನು ಆದರಿಸಿತ್ತು; ಹಾಗಿರುವಾಗ ನನ್ನಂತಹ ಮನುಷ್ಯನು ಶರಣಾಗತನ ಮೇಲೆ ಅನುಗ್ರಹ ಮಾಡಿದರೆ ಇದರಲ್ಲಿ ಹೇಳುವುದೇನಿದೆ.॥25॥

ಮೂಲಮ್ - 26

ಋಷೇಃ ಕಣ್ವಸ್ಯ ಪುತ್ರೇಣ ಕಂಡುನಾ ಪರಮರ್ಷಿಣಾ ।
ಶೃಣು ಗಾಥಾ ಪುರಾ ಗೀತಾ ಧರ್ಮಿಷ್ಠಾ ಸತ್ಯವಾದಿನಾ॥

ಅನುವಾದ

ಹಿಂದೆ ಕಣ್ವ ಮುನಿಯ ಪುತ್ರ ಸತ್ಯವಾದಿ ಮಹರ್ಷಿ ಕಂಡುವು ಒಂದು ಧರ್ಮವಿಷಯಕ ಗಾಥೆಯನ್ನು ಹಾಡಿದ್ದನು. ಅದನ್ನು ಹೇಳುತ್ತೇನೆ ಕೇಳಿರಿ.॥26॥

ಮೂಲಮ್ - 27

ಬದ್ಧಾಂಜಲಿಪುಟಂ ದೀನಂ ಯಾಚಂತಂ ಶರಣಾಗತಮ್ ।
ನ ಹನ್ಯಾದಾನೃಶಂಸ್ಯಾರ್ಥಮಪಿ ಶತ್ರುಂ ಪರಂತಪ ॥

ಅನುವಾದ

ಪರಂತಪ! ಶತ್ರುವೂ ಕೂಡ ಶರಣು ಬಂದು, ದೀನಭಾವದಿಂದ ಕೈಮುಗಿದು ದಯೆಯನ್ನು ಬೇಡಿದರೆ ಅವನ ಮೇಲೆ ಪ್ರಹಾರ ಮಾಡಬಾರದು.॥27॥

ಮೂಲಮ್ - 28

ಅರ್ತೋ ವಾ ಯದಿ ವಾ ದೃಪ್ತಃ ಪರೇಷಾಂ ಶರಣಂ ಗತಃ ।
ಅರಿಃ ಪ್ರಾಣಾನ್ ಪರಿತ್ಯಜ್ಯ ರಕ್ಷಿತವ್ಯಃ ಕೃತಾತ್ಮನಾ ॥

ಅನುವಾದ

ಶತ್ರುವು ದುಃಖಿಯಾಗಿರಲಿ ಅಥವಾ ಅಭಿಮಾನಿಯಾಗಿರಲಿ, ಅವನು ತನ್ನ ವಿಪಕ್ಷೀಯನ ಶರಣು ಹೋದರೆ ಶುದ್ಧ ಹೃದಯವುಳ್ಳ ಶ್ರೇಷ್ಠಪುರುಷನು ತನ್ನ ಪ್ರಾಣಗಳ ಪರಿವೆ ಮಾಡದೆ ಅವನನ್ನು ರಕ್ಷಿಸಬೇಕು.॥28॥

ಮೂಲಮ್ - 29

ಸ ಚೇದ್ಭಯಾದ್ವಾ ಮೋಹಾದ್ವಾ ಕಾಮಾದ್ವಾಪಿ ನ ರಕ್ಷತಿ ।
ಸ್ವಯಾ ಶಕ್ತ್ಯಾ ಯಥಾನ್ಯಾಯಂ ತತ್ಪಾಪಂ ಲೋಕಗರ್ಹಿತಮ್ ॥

ಅನುವಾದ

ಅವನು ಭಯ, ಮೋಹ ಅಥವಾ ಯಾವುದೇ ಕಾಮನೆಯಿಂದ ನ್ಯಾಯಾನುಸಾರ ಯಥಾಶಕ್ತಿ ಅವನನ್ನು ರಕ್ಷಿಸದಿದ್ದರೆ ಲೋಕದಲ್ಲಿ ಅವನ ಆ ಪಾಪಕರ್ಮದ ಭಾರೀ ನಿಂದೆಯಾಗುತ್ತದೆ.॥29॥

ಮೂಲಮ್ - 30

ವಿನಷ್ಟಃ ಪಶ್ಯತಸ್ತಸ್ಯ ರಕ್ಷಿಣಃ ಶರಣಂ ಗತಃ ।
ಆನಾಯ ಸುಕೃತಂ ತಸ್ಯ ಸರ್ವಂ ಗಚ್ಛೇದರಕ್ಷಿತಃ ॥

ಅನುವಾದ

ಶರಣುಬಂದಿರುವ ಪುರುಷನು ಸಂರಕ್ಷಣೆ ಪಡೆಯದೆ ಅವನು ನೋಡು-ನೋಡುತ್ತಾ ನಾಶವಾಗಿ ಹೋದರೆ ಅವನು ಇವನ ಎಲ್ಲ ಪುಣ್ಯಗಳನ್ನು ತನ್ನೊಂದಿಗೆ ಕೊಂಡುಹೋಗುತ್ತಾನೆ.॥30॥

ಮೂಲಮ್ - 31

ಏವಂ ದೋಷೋ ಮಹಾನತ್ರ ಪ್ರಪನ್ನಾನಾಮರಕ್ಷಣೇ ।
ಅಸ್ವರ್ಗ್ಯಂ ಚಾಯಶಸ್ಯಂ ಚ ಬಲವೀರ್ಯ ವಿನಾಶನಮ್ ॥

ಅನುವಾದ

ಹೀಗೆ ಶರಣಾಗತನನ್ನು ರಕ್ಷಿಸದಿದ್ದರೆ ಮಹಾದೋಷವನ್ನು ಹೇಳಲಾಗಿದೆ. ಶರಣಾಗತನ ತ್ಯಾಗವು ಸ್ವರ್ಗ ಮತ್ತು ಸುಯಶದ ಪ್ರಾಪ್ತಿಯನ್ನು ಅಳಿಸಿಬಿಡುತ್ತದೆ ಹಾಗೂ ಮನುಷ್ಯನ ಬಲ-ವೀರ್ಯಗಳನ್ನು ನಾಶ ಮಾಡಿಬಿಡುತ್ತದೆ.॥31॥

ಮೂಲಮ್ - 32

ಕರಿಷ್ಯಾಮಿ ಯಥಾರ್ಥಂ ತು ಕಂಡೋರ್ವಚನಮುತ್ತಮಮ್ ।
ಧರ್ಮಿಷ್ಠಂ ಚ ಯಶಸ್ಯಂ ಚ ಸ್ವರ್ಗ್ಯಂ ಸ್ಯಾತ್ತು ಫಲೋದಯೇ ॥

ಅನುವಾದ

ಅದಕ್ಕಾಗಿ ನಾನಾದರೋ ಮಹರ್ಷಿ ಕಂಡುವಿನ ಆ ಯಥಾರ್ಥ ಮತ್ತು ಉತ್ತಮ ವಚನವನ್ನು ಪಾಲಿಸುವೆನು; ಏಕೆಂದರೆ ಅದು ಪರಿಣಾಮದಲ್ಲಿ ಧರ್ಮ, ಯಶ ಮತ್ತು ಸ್ವರ್ಗವನ್ನು ದೊರಕಿಸಿಕೊಡುತ್ತದೆ.॥32॥

ಮೂಲಮ್ - 33

ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ॥

ಅನುವಾದ

ಯಾರು ಒಮ್ಮೆ ಶರಣು ಬಂದು ‘ನಾನು ನಿನ್ನವನು’ ಎಂದು ಹೇಳಿ ರಕ್ಷಣೆಗಾಗಿ ನನ್ನನ್ನು ಪ್ರಾರ್ಥಿಸಿದರೆ, ನಾನು ಸಮಸ್ತ ಪ್ರಾಣಿಗಳಿಂದ ನಿರ್ಭಯನಾಗಿಸುವೆನು. ಇದು ನನ್ನದು ಎಂದೆಂದಿಗೂ ವ್ರತವಾಗಿದೆ.॥33॥

ಮೂಲಮ್ - 34

ಆನಯೈನಂ ಹರಿಶ್ರೇಷ್ಠ ದತ್ತಮಸ್ಯಾಭಯಂ ಮಯಾ ।
ವಿಭೀಷಣೋ ವಾ ಸುಗ್ರೀವ ಯದಿ ವಾ ರಾವಣಃ ಸ್ವಯಮ್ ॥

ಅನುವಾದ

ಆದ್ದರಿಂದ ಕಪಿಶ್ರೇಷ್ಠ ಸುಗ್ರೀವನೇ! ಅವನು ವಿಭೀಷಣನಾಗಿರಲಿ ಅಥವಾ ಸ್ವತಃ ರಾವಣನೇ ಬಂದಿರಲೀ. ನೀನು ಅವನನ್ನು ಕರೆದುಕೊಂಡು ಬಾ. ನಾನು ಅವನಿಗೆ ಅಭಯದಾನ ಕೊಟ್ಟಿರುವೆನು.॥34॥

ಮೂಲಮ್ - 35

ರಾಮಸ್ಯ ತು ವಚಃ ಶ್ರುತ್ವಾ ಸುಗ್ರೀವಃ ಪ್ಲವಗೇಶ್ವರಃ ।
ಪ್ರತ್ಯಭಾಷತ ಕಾಕುತ್ಸ್ಥಂ ಸೌಹಾರ್ದೇನಾಭಿಪೂರಿತಃ ॥

ಅನುವಾದ

ಭಗವಾನ್ ಶ್ರೀರಾಮನ ಈ ಮಾತನ್ನು ಕೇಳಿ ವಾನರರಾಜ ಸುಗ್ರೀವನು ಸೌಹಾರ್ದ ತುಂಬಿ ಅವನಲ್ಲಿ ಹೇಳಿದನು.॥35॥

ಮೂಲಮ್ - 36

ಕಿಮತ್ರ ಚಿತ್ರಂ ಧರ್ಮಜ್ಞ ಲೋಕನಾಥಶಿಖಾಮಣೇ ।
ಯತ್ತ್ವಮಾರ್ಯಂ ಪ್ರಭಾಷೇಥಾಃಸತ್ತ್ವವಾನ್ಸತ್ಪಥೇ ಸ್ಥಿತಃ ॥

ಅನುವಾದ

ಧರ್ಮಜ್ಞನೇ! ಲೋಕೇಶ್ವರ ಶಿರೋಮಣಿಯೇ! ನೀನು ಹೇಳಿದ ಈ ಶ್ರೇಷ್ಠಧರ್ಮದ ಮಾತಿನಲ್ಲಿ ಆಶ್ಚರ್ಯವೇನಿದೆ? ಏಕೆಂದರೆ ನೀನು ಮಹಾಶಕ್ತಿಶಾಲಿ ಮತ್ತು ಸನ್ಮಾರ್ಗದಲ್ಲಿ ಸ್ಥಿತನಾಗಿರುವೆ.॥36॥

ಮೂಲಮ್ - 37

ಮಮ ಚಾಪ್ಯಂತರಾತ್ಮಾಯಂ ಶುದ್ಧಂ ವೇತ್ತಿ ವಿಭೀಷಣಮ್ ।
ಅನುಮಾನಾಚ್ಚ ಭಾವಾಚ್ಚ ಸರ್ವತಃ ಸುಪರೀಕ್ಷಿತಃ ॥

ಅನುವಾದ

ನನ್ನ ಅಂತರಾತ್ಮವೂ ವಿಭೀಷಣನು ಶುದ್ಧನೆಂದು ತಿಳಿಯುತ್ತದೆ. ಹನುಮಂತನೂ ಅನುಮಾನ ಮತ್ತು ಭಾವದಿಂದ ಅವನನ್ನು ಒಳಗೆ-ಹೊರಗೆ ಚೆನ್ನಾಗಿ ಪರೀಕ್ಷಿಸಿರುವನು.॥37॥

ಮೂಲಮ್ - 38

ತಸ್ಮಾತ್ಕ್ಷಿಪ್ರಂ ಸಹಾಸ್ಮಾಭಿಸ್ತುಲ್ಯೋ ಭವತು ರಾಘವ ।
ವಿಭೀಷಣೋ ಮಹಾಪ್ರಾಜ್ಞಃ ಸಖಿತ್ವಂ ಚಾಭ್ಯುಪೈತು ನಃ ॥

ಅನುವಾದ

ಆದ್ದರಿಂದ ರಘುನಂದನ! ಈಗ ವಿಭೀಷಣನು ಬೇಗನೇ ಇಲ್ಲಿ ನಮ್ಮಂತೆಯೇ ಆಗಿ ಇದ್ದು, ನಮ್ಮ ಮಿತ್ರತೆಯನ್ನು ಪಡೆಯುವನು.॥38॥

ಮೂಲಮ್ - 39

ತತಸ್ತು ಸುಗ್ರೀವವಚೋ ನಿಶಮ್ಯ ತ-
ದ್ಧರೀಶ್ವರೇಣಾಭಿಹಿತಂ ನರೇಶ್ವರಃ ।
ವಿಭೀಷಣೇನಾಶು ಜಗಾಮ ಸಂಗಮಂ
ಪತತ್ರಿರಾಜೇನ ಯಥಾ ಪುರಂದರಃ ॥

ಅನುವಾದ

ಅನಂತರ ವಾನರರಾಜ ಸುಗ್ರೀವನು ಹೇಳಿದ ಆ ಮಾತನ್ನು ಕೇಳಿ ರಾಜಾ ಶ್ರೀರಾಮನು ಮುಂದೆ ಹೋಗಿ ದೇವರಾಜ ಇಂದ್ರನು ಪಕ್ಷಿರಾಜ ಗರುಡನನ್ನು ಭೆಟ್ಟಿಯಾದಂತೆ ವಿಭೀಷಣನನ್ನು ಭೆಟ್ಟಿಯಾದನು.॥39॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿನೆಂಟನೆಯ ಸರ್ಗ ಪೂರ್ಣವಾಯಿತು.॥18॥

ಅನುವಾದ (ಸಮಾಪ್ತಿಃ)