०१७ विभीषणेन रामदर्शनम्

वाचनम्
ಭಾಗಸೂಚನಾ

ವಿಭೀಷಣನು ಶ್ರೀರಾಮನಿಗೆ ಶರಣಾಗುವುದು, ಶ್ರೀರಾಮನು ತನ್ನ ಮಂತ್ರಿಗಳೊಂದಿಗೆ ಅವನಿಗೆ ಆಶ್ರಯ ಕೊಡುವ ವಿಷಯದಲ್ಲಿ ವಿಚಾರ ಮಾಡುವುದು

ಮೂಲಮ್ - 1

ಇತ್ಯುಕ್ತ್ವಾ ಪರುಷಂ ವಾಕ್ಯಂ ರಾವಣಂ ರಾವಣಾನುಜಃ ।
ಆಜಗಾಮ ಮುಹೂರ್ತೇನ ಯತ್ರ ರಾಮಃ ಸಲಕ್ಷ್ಮಣಃ ॥

ಅನುವಾದ

ರಾವಣನು ಹೀಗೆ ಕಠೋರ ಮಾತುಗಳನ್ನಾಡಿದಾಗ ಅವನ ತಮ್ಮನಾದ ವಿಭೀಷಣನು ಮುಹೂರ್ತ ಮಾತ್ರದಲ್ಲಿ ಲಕ್ಷ್ಮಣ ಸಹಿತ ಶ್ರೀರಾಮನು ವಿರಾಜಿಸುತ್ತಿದ್ದ ಸ್ಥಾನಕ್ಕೆ ಬಂದನು.॥1॥

ಮೂಲಮ್ - 2

ತಂ ಮೇರುಶಿಖರಾಕಾರಂ ದೀಪ್ತಾಮಿವ ಶತಹ್ರದಾಮ್ ।
ಗಗನಸ್ಥಂ ಮಹೀಸ್ಥಾಸ್ತೇ ದದೃಶುರ್ವಾನರಾಧಿಪಾಃ ॥

ಅನುವಾದ

ವಿಭೀಷಣನ ಶರೀರವು ಸುಮೇರು ಪರ್ವತದಂತೆ ಎತ್ತರವಾಗಿತ್ತು. ಅವನು ಆಕಾಶದಲ್ಲಿ ಹೊಳೆಯುವ ಮಿಂಚಿನಂತೆ ಅನಿಸುತ್ತಿದ್ದನು. ಭೂಮಿಯಲ್ಲಿ ನಿಂತ ವಾನರ ಯೂಥಪತಿಗಳು ಅವನನ್ನು ಆಕಾಶದಲ್ಲಿ ನೋಡಿದರು.॥2॥

ಮೂಲಮ್ - 3

ತೇ ಚಾಪ್ಯನುಚರಾಸ್ತಸ್ಯ ಚಾತ್ವಾರೋ ಭೀಮವಿಕ್ರಮಾಃ ।
ತೇಽಪಿ ವರ್ಮಾಯುಧೋಪೇತಾ ಭೂಷಣೋತ್ತಮಭೂಷಿತಾಃ ॥

ಅನುವಾದ

ಅವನ ಜೊತೆಗಿದ್ದ ನಾಲ್ಕು ಅನುಚರರೂ ಭಾರೀ ಭಯಂಕರ ಪರಾಕ್ರಮ ಪ್ರಕಟಿಸುವವರಾಗಿದ್ದರು. ಅವರು ಕವಚವನ್ನು ತೊಟ್ಟು ಅಸ್ತ್ರ-ಶಸ್ತ್ರ ಧರಿಸಿದ್ದರು. ಅವರೆಲ್ಲರೂ ಉತ್ತಮ ಆಭೂಷಣಗಳನ್ನು ತೊಟ್ಟಿದ್ದರು.॥3॥

ಮೂಲಮ್ - 4

ಸ ಚ ಮೇಘಾಚಲಪ್ರಖ್ಯೋ ವಜ್ರಾಯುಧಸಮಪ್ರಭಃ ।
ವರಾಯುಧಧರೋ ವೀರೋ ದಿವ್ಯಾಭರಣಭೂಷಿತಃ ॥

ಅನುವಾದ

ವೀರ ವಿಭೀಷಣನೂ ಮೇಘ ಮತ್ತು ಪರ್ವತದಂತೆ ಕಾಣುತ್ತಿದ್ದನು. ವಜ್ರಧಾರೀ ಇಂದ್ರನಂತೆ ತೇಜಸ್ವಿಯೂ, ಉತ್ತಮ ಆಯುಧಧಾರಿಯೂ, ದಿವ್ಯಆಭೂಷಣಗಳಿಂದ ಅಲಂಕೃತನಾಗಿದ್ದನು.॥4॥

ಮೂಲಮ್ - 5

ತಮಾತ್ಮಪಚಮಂ ದೃಷ್ಟ್ವಾ ಸುಗ್ರೀವೋ ವಾನರಾಧಿಪಃ ।
ವಾನರೈಃ ಸಹ ದುರ್ಧರ್ಷಶ್ಚಿಂತಯಾಮಾಸ ಬುದ್ಧಿಮಾನ್ ॥

ಅನುವಾದ

ಆ ನಾಲ್ಕು ರಾಕ್ಷಸರೊಂದಿಗೆ ಐದನೆಯ ವಿಭೀಷಣನನ್ನು ನೋಡಿ ದುರ್ಧರ್ಷ, ಬುದ್ಧಿವಂತ ವೀರ ವಾನರರಾಜ ಸುಗ್ರೀವನು ವಾನರರೊಂದಿಗೆ ವಿಚಾರ ಮಾಡಿದನು.॥5॥

ಮೂಲಮ್ - 6

ಚಿಂತಯಿತ್ವಾ ಮುಹೂರ್ತಂ ತು ವಾನರಾಂಸ್ತಾನುವಾಚ ಹ ।
ಹನುಮತ್ಪ್ರಮುಖಾನ್ ಸರ್ವಾನಿದಂ ವಚನಮುತ್ತಮಮ್ ॥

ಅನುವಾದ

ಸ್ವಲ್ಪ ಹೊತ್ತು ಯೋಚಿಸಿ ಅವನು ಹನುಮಂತನೇ ಮೊದಲಾದ ವಾನರರಲ್ಲಿ ಈ ಉತ್ತಮ ವಚನವನ್ನಾಡಿದನು.॥6॥

ಮೂಲಮ್ - 7

ಏಷ ಸರ್ವಾಯುಧೋಪೇತಶ್ಚತುರ್ಭಿಃ ಸಹ ರಾಕ್ಷಸೈಃ ।
ರಾಕ್ಷಸೋಭ್ಯೇತಿ ಪಶ್ಯಧ್ವಮಸ್ಮಾನ್ ಹಂತುಂ ನ ಸಂಶಯಃ ॥

ಅನುವಾದ

ನೋಡಿ, ಎಲ್ಲ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಸಂಪನ್ನ ಈ ರಾಕ್ಷಸನು ಬೇರೆ ನಾಲ್ಕು ನಿಶಾಚರರೊಂದಿಗೆ ಬರುತ್ತಿದ್ದಾನೆ. ಇವರು ನಮ್ಮನ್ನು ಕೊಲ್ಲಲಿಕ್ಕಾಗಿಯೇ ಬರುತ್ತಿರುವುದರಲ್ಲಿ ಸಂದೇಹವೇ ಇಲ್ಲ.॥7॥

ಮೂಲಮ್ - 8

ಸುಗ್ರೀವಸ್ಯ ವಚಃ ಶ್ರುತ್ವಾ ಸರ್ವೇ ತೇ ವಾನರೋತ್ತಮಾಃ ।
ಶಾಲಾನುದ್ಯಮ್ಯ ಶೈಲಾಂಶ್ಚ ಇದಂ ವಚನಮಬ್ರುವನ್ ॥

ಅನುವಾದ

ಸುಗ್ರೀವನ ಮಾತನ್ನು ಕೇಳಿ ಅವರೆಲ್ಲ ಶ್ರೇಷ್ಠ ವಾನರರು ಸಾಲವೃಕ್ಷ ಮತ್ತು ಪರ್ವತದ ಬಂಡೆಗಳನ್ನು ಎತ್ತಿಕೊಂಡು ಹೀಗೆ ಹೇಳಿದರು.॥8॥

ಮೂಲಮ್ - 9

ಶೀಘ್ರಂ ವ್ಯಾದಿಶ ನೋ ರಾಜನ್ ವಧಾಯೈಷಾಂ ದುರಾತ್ಮನಾಮ್ ।
ನಿಪತಂತಿಹತಾ ಯಾವದ್ ಧರಣ್ಯಾಮಲ್ಪಚೇತನಾಃ ॥

ಅನುವಾದ

ರಾಜನೇ! ಬೇಗನೇ ಈ ದುರಾತ್ಮರನ್ನು ವಧಿಸುವಂತೆ ನೀವು ಅಪ್ಪಣೆ ಮಾಡಿರಿ. ಅದರಿಂದ ಈ ಮತಿಮಂದ ನಿಶಾಚರರು ಸತ್ತು ಈ ಭೂಮಿಯಲ್ಲಿ ಬೀಳುವರು.॥9॥

ಮೂಲಮ್ - 10

ತೇಷಾಂ ಸಂಭಾಷಣಮಾಣಾನಾಮನ್ಯೋನ್ಯಂ ಸ ವಿಭೀಷಣಃ ।
ಉತ್ತರಂ ತೀರಮಾಸಾದ್ಯ ಖಸ್ಥ ಏವ ವ್ಯತಿಷ್ಠತ ॥

ಅನುವಾದ

ಪರಸ್ಪರ ಅವರು ಹೀಗೆ ಮಾತನಾಡುತ್ತಿರುವಾಗಲೇ ವಿಭೀಷಣನು ಸಮುದ್ರದ ಉತ್ತರ ತೀರಕ್ಕೆ ಬಂದು ಆಕಾಶದಲ್ಲೇ ನಿಂತುಕೊಂಡನು.॥10॥

ಮೂಲಮ್ - 11

ಸ ಉವಾಚ ಮಹಾಪ್ರಾಜ್ಞಃ ಸ್ವರೇಣ ಮಹತಾ ಮಹಾನ್ ।
ಸುಗ್ರೀವಂ ತಾಂಶ್ಚ ಸಂಪ್ರೇಕ್ಷ್ಯ ಖಸ್ಥ ಏವ ವಿಭೀಷಣಃ ॥

ಅನುವಾದ

ಮಹಾಬುದ್ಧಿವಂತ ಮಹಾಪುರುಷ ವಿಭೀಷಣನು ಆಕಾಶದಲ್ಲೇ ನಿಂತು ಸುಗ್ರೀವ ಹಾಗೂ ಆ ವಾನರರ ಕಡೆಗೆ ನೋಡುತ್ತಾ ಗಟ್ಟಿಯಾಗಿ ಇಂತೆಂದನು-॥11॥

ಮೂಲಮ್ - 12

ರಾವಣೋ ನಾಮ ದೃವೃತ್ತೋ ರಾಕ್ಷಸೋ ರಾಕ್ಷಸೇಶ್ವರಃ ।
ತಸ್ಯಾಹಮನುಜೋ ಭ್ರಾತಾ ವಿಭೀಷಣ ಇತಿ ಶ್ರುತಃ ॥

ಅನುವಾದ

ರಾವಣ ಎಂಬ ದುರಾಚಾರಿ ರಾಕ್ಷಸ ನಿಶಾಚರರ ರಾಜನ ತಮ್ಮನಾಗಿದ್ದೇನೆ ನಾನು. ನನ್ನ ಹೆಸರು ವಿಭೀಷಣ ಎಂದಾಗಿದೆ.॥12॥

ಮೂಲಮ್ - 13

ತೇನ ಸೀತಾ ಜನಸ್ಥಾನಾದ್ಧೃತಾ ಹತ್ವಾ ಜಟಾಯುಷಮ್ ।
ರುದ್ಧಾ ಚ ವಿವಶಾ ದೀನಾ ರಾಕ್ಷಸೀಭಿಃ ಸುರಕ್ಷಿತಾ ॥

ಅನುವಾದ

ರಾವಣನು ಜಟಾಯುವನ್ನು ಕೊಂದು ಜನಸ್ಥಾನದಿಂದ ಸೀತೆಯನ್ನು ಅಪಹರಿಸಿದ್ದನು. ಅವನೇ ದೀನ ಹಾಗೂ ಅಸಹಾಯ ಸೀತೆಯನ್ನು ತಡೆದಿಟ್ಟಿರುವನು. ಈ ದಿನಗಳಲ್ಲಿ ಸೀತೆಯು ರಾಕ್ಷಸಿಯರ ಕಾವಲಿನಲ್ಲಿ ಇದ್ದಾಳೆ.॥13॥

ಮೂಲಮ್ - 14

ತಮಹಂ ಹೇತುಭಿರ್ವಾಕ್ಯೈರ್ವಿವಿಧೈಶ್ಚ ನ್ಯದರ್ಶಯಮ್ ।
ಸಾಧು ನಿರ್ಯಾತ್ಯತಾಂ ಸೀತಾ ರಾಮಾಯೇತಿ ಪುನಃ ಪುನಃ ॥

ಅನುವಾದ

ನಾನು ಬಗೆ ಬಗೆಯ ಯುಕ್ತಿಸಂಗತ ವಚನಗಳಿಂದ ನೀನು ಶ್ರೀರಾಮಚಂದ್ರನ ಸೇವೆಯಲ್ಲಿ ಸೀತೆಯನ್ನು ಆದರ ದಿಂದ ಮರಳಿಸು, ಇದರಲ್ಲಿ ನಿನ್ನ ಒಳಿತು ಇದೆ ಎಂದು ಅವನನ್ನು ಪದೇ ಪದೇ ಸಮಜಾಯಿಸಿದೆ.॥14॥

ಮೂಲಮ್ - 15

ಸ ಚ ನ ಪ್ರತಿಜಗ್ರಾಹ ರಾವಣಃ ಕಾಲಚೋದಿತಃ ।
ಉಚ್ಯಮಾನಂ ಹಿತಂ ವಾಕ್ಯಂ ವಿಪರೀತ ಇವೌಷಧಮ್ ॥

ಅನುವಾದ

ನಾನು ಈ ಮಾತನ್ನು ಅವನ ಹಿತಕ್ಕಾಗಿಯೇ ಹೇಳಿದ್ದರೂ ಮರಣಾಸನ್ನ ಪುರುಷನು ಔಷಧವನ್ನು ಕುಡಿಯುವುದಿಲ್ಲ ಹಾಗೆಯೇ ಕಾಲದಿಂದ ಪ್ರೇರಿತನಾಗಿದ್ದರಿಂದ ರಾವಣನು ನನ್ನ ಮಾತನ್ನು ಒಪ್ಪಿಕೊಳ್ಳಲಿಲ್ಲ.॥15॥

ಮೂಲಮ್ - 16

ಸೋಽಹಂ ಪರುಷಿತಸ್ತೇನ ದಾಸವಚ್ಚಾವಮಾನಿತಃ ।
ತ್ಯಕ್ತ್ವಾ ಪುತ್ರಾಂಶ್ಚ ದಾರಾಂಶ್ಚ ರಾಘವಂ ಶರಣಂ ಗತಃ ॥

ಅನುವಾದ

ಇಷ್ಟೇ ಅಲ್ಲ, ಅವನು ನನಗೆ ಬಹಳ ಕಠೋರ ಮಾತನ್ನು ಹೇಳಿದನು ಮತ್ತು ದಾಸನಂತೆ ನನ್ನನ್ನು ಅಪಮಾನ ಮಾಡಿದನು. ಅದಕ್ಕಾಗಿ ನಾನು ನನ್ನ ಪತ್ನೀ ಪುತ್ರರನ್ನು ಅಲ್ಲೇ ಬಿಟ್ಟು ಶ್ರೀರಾಮನಿಗೆ ಶರಣು ಬಂದಿರುವೆನು.॥16॥

ಮೂಲಮ್ - 17

ನಿವೇದಯತ ಮಾಂ ಕ್ಷಿಪ್ರಂ ರಾಘವಾಯ ಮಹಾತ್ಮನೇ ।
ಸರ್ವಲೋಕಶರಣ್ಯಾಯ ವಿಭೀಷಣಮುಪಸ್ಥಿತಮ್ ॥

ಅನುವಾದ

ವಾನರರೇ! ಸಮಸ್ತ ಲೋಕಗಳಿಗೆ ಶರಣ ಕೊಡುವ ಮಹಾತ್ಮಾ ಶ್ರೀರಾಮಚಂದ್ರನ ಬಳಿಗೆ ಹೋಗಿ ಬೇಗನೇ ನನ್ನ ಆಗಮನದ ಸೂಚನೆಯನ್ನಿತ್ತು - ‘ಶರಣಾರ್ಥಿ ವಿಭೀಷಣನು ನಿನ್ನ ಸೇನೆಯಲ್ಲಿ ಉಪಸ್ಥಿತನಾಗಿದ್ದಾನೆ’ ಎಂದು ಹೇಳಿರಿ.॥17॥

ಮೂಲಮ್ - 18

ಏತತ್ತುವಚನಂ ಶ್ರುತ್ವಾ ಸುಗ್ರೀವೋ ಲಘುವಿಕ್ರಮಃ ।
ಲಕ್ಷ್ಮಣಸ್ಯಾಗ್ರತೋ ರಾಮಂ ಸಂರಬ್ಧಮಿದಮಬ್ರವೀತ್ ॥

ಅನುವಾದ

ವಿಭೀಷಣನ ಈ ಮಾತನ್ನು ಕೇಳಿ ಶೀಘ್ರಗಾಮಿ ಸುಗ್ರೀವನು ಕೂಡಲೇ ಭಗವಾನ್ ಶ್ರೀರಾಮನ ಬಳಿಗೆ ಹೋಗಿ ಲಕ್ಷ್ಮಣನ ಎದುರಿಗೇ ಸ್ವಲ್ಪ ಆವೇಶದಿಂದಲೇ ಈ ಪ್ರಕಾರ ಹೇಳಿದನು.॥18॥

ಮೂಲಮ್ - 19

ಪ್ರವಿಷ್ಟಃ ಶತ್ರುಸೈನ್ಯಂ ಹಿ ಪ್ರಾಪ್ತಃ ಶತ್ರುರತರ್ಕಿತಃ ।
ನಿಹನ್ಯಾದಂತರಂ ಲಬ್ಧ್ವಾ ಉಲೂಕೋ ವಾಯಸಾನಿವ ॥

ಅನುವಾದ

ಪ್ರಭೋ! ರಾಕ್ಷಸನಾದ ಕಾರಣ ಮೊದಲು ನಮ್ಮ ಶತ್ರು ರಾವಣನ ಸೈನ್ಯದಲ್ಲಿ ನಿಮ್ಮಿಲಿತನಾದ ಯಾರೋ ವೈರಿ ಇಂದು ಅಕಸ್ಮಾತ್ ನಮ್ಮ ಸೈನ್ಯದಲ್ಲಿ ಪ್ರವೇಶ ಪಡೆಯಲು ಬಂದಿರುವನು. ಗೂಬೆಯು ಸಂದರ್ಭ ನೋಡಿ ಕಾಗೆಗಳನ್ನು ಮುಗಿಸಿಬಿಡುವಂತೆ ಅವನು ಸಮಯ ಸಾಧಿಸಿ ನಮ್ಮನ್ನು ಕೊಂದುಬಿಡಬಹುದು.॥19॥

ಮೂಲಮ್ - 20

ಮಂತ್ರೇ ವ್ಯೆಹೇ ನಯೇ ಚಾರೇ ಯುಕ್ತೋ ಭವಿತುಮರ್ಹಸಿ ।
ವಾನರಾಣಾಂ ಚ ಭದ್ರಂ ತೇ ಪರೇಷಾಂ ಚ ಪರಂತಪ ॥

ಅನುವಾದ

ಪರಂತಪ ರಘುನಂದನ! ಆದ್ದರಿಂದ ನೀವು ನಿಮ್ಮ ವಾನರ ಸೈನಿಕರ ಮೇಲೆ ಅನುಗ್ರಹ ಮತ್ತು ಶತ್ರುಗಳ ನಿಗ್ರಹ ಮಾಡಲಿಕ್ಕಾಗಿ ಕಾರ್ಯಾಕಾರ್ಯದ ವಿಚಾರ, ಸೈನ್ಯದ ವ್ಯೂಹರಚನೆ ನೀತಿಯುಕ್ತ ಉಪಾಯಗಳ ಪ್ರಯೋಗ ಹಾಗೂ ಗುಪ್ತಚರರ ನಿಯುಕ್ತಿ ಮುಂತಾದ ವಿಷಯಗಳಲ್ಲಿ ಸತತ ಸಾವಧಾನವಿರ ಬೇಕು. ಹೀಗೆ ಮಾಡುವುದರಿಂದಲೇ ನಿಮಗೆ ಒಳ್ಳೆಯದಾಗಬಹುದು.॥20॥

ಮೂಲಮ್ - 21

ಅಂತರ್ಧಾನಗತಾ ಹ್ಯೇತೇ ರಾಕ್ಷಸಾಃ ಕಾಮರೂಪಿಣಃ ।
ಶೂರಾಶ್ಚ ನಿಕೃತಿಜ್ಞಾಶ್ಚ ತೇಷಾಂ ಜಾತು ನ ವಿಶ್ವಸೇತ್ ॥

ಅನುವಾದ

ಈ ರಾಕ್ಷಸರು ಮನಬಂದಂತೆ ರೂಪ ಧರಿಸಬಲ್ಲರು. ಇವರಲ್ಲಿ ಅಂತರ್ಧಾನರಾಗುವ ಶಕ್ತಿಯೂ ಇರುತ್ತದೆ. ಶೂರವೀರ ಮತ್ತು ಮಾಯಾವಿಯಾದರೋ ಆಗಿಯೇ ಇರುತ್ತಾರೆ. ಅದಕ್ಕಾಗಿ ಇವರ ಮೇಲೆ ಎಂದೂ ವಿಶ್ವಾಸವಿಡಬಾರದು.॥21॥

ಮೂಲಮ್ - 22

ಪ್ರಣಿಧೀ ರಾಕ್ಷಸೇಂದ್ರಸ್ಯ ರಾವಣಸ್ಯ ಭವೇದಯಮ್ ।
ಅನುಪ್ರವಿಷ್ಯ ಸೋಽಸ್ಮಾಸು ಭೇದಂ ಕುರ್ಯಾನ್ನ ಸಂಶಯಃ ॥

ಅನುವಾದ

ರಾಕ್ಷಸರಾಜ ರಾವಣನ ಯಾರೋ ಗುಪ್ತಚರನಾಗಿರುವ ಸಂಭವವೂ ಇದೆ. ಹೀಗಾದರೆ ನಮ್ಮೊಳಗೆ ನುಗ್ಗಿ ನಮ್ಮನಮ್ಮಲ್ಲಿಯೇ ಭೇದ ಉಂಟುಮಾಡುವರು, ಇದರಲ್ಲಿ ಸಂದೇಹವೇ ಇಲ್ಲ.॥22॥

ಮೂಲಮ್ - 23

ಅಥ ವಾ ಸ್ವಯಮೇವೈಷ ಚ್ಚಿದ್ರಮಾಸಾದ್ಯ ಬುದ್ಧಿಮಾನ್ ।
ಅನುಪ್ರವಿಶ್ಯ ವಿಶ್ವಸ್ತೇ ಕದಾಚಿತ್ ಪ್ರಹರೇದಪಿ ॥

ಅನುವಾದ

ಅಥವಾ ಈ ಬುದ್ಧಿವಂತ ರಾಕ್ಷಸರು ಛಿದ್ರ ಹುಡುಕಿ ನಮ್ಮ ವಿಶ್ವಸ್ತ ಸೈನ್ಯದೊಳಗೆ ನುಗ್ಗಿ ಎಂದಾದರೂ ಸ್ವತಃ ನಮ್ಮ ಮೇಲೆಯೇ ಪ್ರಹಾರ ಮಾಡಿಬಿಡುವರು - ಹೀಗೂ ಸಂಭವವಿದೆ.॥23॥

ಮೂಲಮ್ - 24

ಮಿತ್ರಾಟವಿಬಲಂ ಚೈವ ಮೌಲಭೃತ್ಯಬಲಂ ತಥಾ ।
ಸರ್ವಮೇತದ್ ಬಲಂ ಗ್ರಾಹ್ಯಂ ವರ್ಜಯಿತ್ವಾ ದ್ವಿಷದ್ವಲಮ್ ॥

ಅನುವಾದ

ಮಿತ್ರರ, ಕಾಡು ಜನರ ಹಾಗೂ ಪರಂಪರಾಗತ ಭೃತ್ಯರ ಸೈನ್ಯವನ್ನು ಸಂಗ್ರಹಿಸಲಾಗುವುದು; ಆದರೆ ಶತ್ರು ಪಕ್ಷಕ್ಕೆ ಸೇರಿರುವ ಸೈನಿಕರ ಸಂಗ್ರಹವನ್ನು ಎಂದಿಗೂ ಮಾಡಬಾರದು.॥24॥

ಮೂಲಮ್ - 25

ಪ್ರಕೃತ್ಯಾ ರಾಕ್ಷಸೋ ಹ್ಯೇಷ ಭ್ರಾತಾಮಿತ್ರಸ್ಯ ವೈ ಪ್ರಭೋ ।
ಆಗತಶ್ಚ ರಿಪುಃ ಸಾಕ್ಷಾತ್ ಕಥಮಸ್ಮಿಂಶ್ಚ ವಿಶ್ವಸೇತ್ ॥

ಅನುವಾದ

ಪ್ರಭೋ! ಇವರು ಸ್ವಭಾವತಃ ರಾಕ್ಷಸರೇ ಆಗಿದ್ದಾರೆ, ತನ್ನನ್ನು ಶತ್ರುವಿನ ತಮ್ಮನೆಂದೂ ಹೇಳುತ್ತಿರುವನು. ಈ ದೃಷ್ಟಿಯಿಂದ ಇವನು ಸಾಕ್ಷಾತ್ ನಮ್ಮ ಶತ್ರುವೇ ಇಲ್ಲಿಗೆ ಬಂದಿರುವನು. ಹಾಗಿರುವಾಗ ಇವನ ಮೇಲೆ ಹೇಗೆ ವಿಶ್ವಾಸ ಮಾಡಬಹುದು.॥25॥

ಮೂಲಮ್ - 26

ರಾವಣಸ್ಯಾನುಜೋಭ್ರಾತಾ ವಿಭೀಷಣ ಇತಿ ಶ್ರುತಃ ।
ಚತುರ್ಭಿಃಸಹ ರಕ್ಷೋಭಿರ್ಭವಂತಂ ಶರಣಂ ಗತಃ ॥

ಅನುವಾದ

ರಾವಣನ ತಮ್ಮ ವಿಭೀಷಣ ಎಂದು ಪ್ರಸಿದ್ಧನಾದ ಇವನು ನಾಲ್ಕು ರಾಕ್ಷಸರೊಂದಿಗೆ ನಿಮ್ಮಲ್ಲಿ ಶರಣಾಗಿದ್ದಾನೆ.॥26॥

ಮೂಲಮ್ - 27

ರಾವಣೇನ ಪ್ರಣೀತಂ ಹಿ ತಮವೇಹಿ ವಿಭೀಷಣಮ್ ।
ತಸ್ಯಾಹಂ ನಿಗ್ರಹಂ ಮನ್ಯೇ ಕ್ಷಮಂ ಕ್ಷಮವತಾಂ ವರ ॥

ಅನುವಾದ

ಈ ವಿಭೀಷಣನನ್ನು ರಾವಣನೇ ಕಳಿಸಿರುವನು ಎಂದು ನೀನು ತಿಳಿ. ಉಚಿತ ವ್ಯಾಪಾರ ಮಾಡುವವರಲ್ಲಿ ಶ್ರೇಷ್ಠ ರಘುನಂದನಾ! ನಾನಾದರೋ ಇವನನ್ನು ಬಂಧಿಸುವುದೇ ಉಚಿತವೆಂದು ತಿಳಿಯುತ್ತೇನೆ.॥27॥

ಮೂಲಮ್ - 28

ರಾಕ್ಷಸೋ ಜಿಹ್ಮಯಾ ಬುದ್ಧ್ಯಾ ಸಂದಿಷ್ಟೋಽಯಮಿಹಾಗತಃ ।
ಪ್ರಹರ್ತುಂ ಮಾಯಯಾ ಛನ್ನೋ ವಿಶ್ವಸ್ತೇ ತ್ವಯಿ ಚಾನಘ ॥

ಅನುವಾದ

ಪುಣ್ಯಾತ್ಮ ಶ್ರೀರಾಮಾ! ಈ ರಾಕ್ಷಸ ರಾವಣನು ಹೇಳಿದ್ದರಿಂದಲೇ ಇಲ್ಲಿಗೆ ಬಂದಿರುವನೆಂದು ನನಗೆ ಅನಿಸುತ್ತದೆ. ಇವನ ಬುದ್ಧಿಯಲ್ಲಿ ಕುಟಿಲತೆಯೇ ತುಂಬಿದೆ. ಇವನು ಮಾಯೆಯಿಂದ ಅಡಗಿದ್ದು ನೀನು ಇವನ ಮೇಲೆ ವಿಶ್ವಾಸ ಮಾಡಿ ಇವನ ಕುರಿತು ನಿಶ್ಚಿಂತನಾದರೆ, ಇವನು ನಿಮ್ಮ ಮೇಲೆಯೇ ಎರಗುವನು. ಇದೇ ಉದ್ದೇಶದಿಂದ ಇವನು ಇಲ್ಲಿಗೆ ಬಂದಿರುವನು.॥28॥

ಮೂಲಮ್ - 29

ವಧ್ಯತಾಮೇಷ ತೀವ್ರೇಣ ದಂಡೇನ ಸಚಿವೈಃ ಸಹ ।
ರಾವಣಸ್ಯ ನೃಶಂಸಸ್ಯ ಭ್ರಾತಾ ಹ್ಯೇಷ ವಿಭೀಷಣಃ ॥

ಅನುವಾದ

ಇವನು ಮಹಾಕ್ರೂರಿ ರಾವಣನ ತಮ್ಮನಾಗಿದ್ದಾನೆ, ಅದಕ್ಕಾಗಿ ಇವನಿಗೆ ಕಠೋರ ದಂಡನೆಯನ್ನು ಕೊಟ್ಟು, ಇವನನ್ನು ಮಂತ್ರಿಗಳ ಸಹಿತ ಕೊಂದುಹಾಕಬೇಕು.॥29॥

ಮೂಲಮ್ - 30

ಏವಮುಕ್ತ್ವಾ ತು ತಂ ರಾಮಂ ಸಂರಬ್ಧೋ ವಾಹಿನೀಪತಿಃ ।
ವಾಕ್ಯಜ್ಞೋ ವಾಕ್ಯಕುಶಲಂ ತತೋ ಮೌನಮುಪಾಗಮತ್ ॥

ಅನುವಾದ

ಮಾತುಕತೆಯ ಕಲೆಯನ್ನು ಬಲ್ಲ ಹಾಗೂ ರೋಷಗೊಂಡ ಸೇನಾಪತಿ ಸುಗ್ರೀವನು ಪ್ರವಚನ ಕುಶಲ ಶ್ರೀರಾಮನಲ್ಲಿ ಹೀಗೆ ಹೇಳಿ ಸುಮ್ಮನಾದನು.॥30॥

ಮೂಲಮ್ - 31

ಸುಗ್ರೀವಸ್ಯ ತು ತದ್ ವಾಕ್ಯಂ ಶುತ್ವಾ ರಾಮೋ ಮಹಾಬಲಃ ।
ಸಮೀಪಸ್ಥಾನುವಾಚೇದಂ ಹನುಮತ್ಪ್ರಮುಖಾನ್ ಕಪೀನ್ ॥

ಅನುವಾದ

ಸುಗ್ರೀವನ ಆ ಮಾತನ್ನು ಕೇಳಿ ಮಹಾಬಲಿ ಶ್ರೀರಾಮನು ತನ್ನ ಬಳಿಯಲ್ಲಿ ಕುಳಿತಿರುವ ಹನುಮದಾದಿ ವಾನರರಲ್ಲಿ ಈ ಪ್ರಕಾರ ಹೇಳಿದನು.॥31॥

ಮೂಲಮ್ - 32

ಯದುಕ್ತಂ ಕಪಿರಾಜೇನ ರಾವಣಾವರಜಂ ಪ್ರತಿ ।
ವಾಕ್ಯಂ ಹೇತುಮದತ್ಯರ್ಥಂ ಭವದ್ಭಿರಪಿ ಚ ಶ್ರುತಮ್ ॥

ಅನುವಾದ

ವಾನರರೇ! ವಾನರರಾಜ ಸುಗ್ರೀವನು ರಾವಣನ ತಮ್ಮ ವಿಭೀಷಣನ ವಿಷಯದಲ್ಲಿ ಅತ್ಯಂತ ನೀತಿಯುಕ್ತ ಹೇಳಿದ ಮಾತುಗಳನ್ನು ನೀವೂ ಕೇಳಿಯೇ ಇದ್ದೀರಿ.॥32॥

ಮೂಲಮ್ - 33

ಸುಹೃದಾಮರ್ಥಕೃಚ್ಛ್ರೇಷು ಯುಕ್ತಂ ಬುದ್ಧಿಮತಾ ಸದಾ ।
ಸಮರ್ಥೇನೋಪ ಸಂದೇಷ್ಟುಂ ಶಾಶ್ವತೀಂ ಭೂತಿಮಿಚ್ಛತಾ ॥

ಅನುವಾದ

ಮಿತ್ರರ ಸ್ಥಾಯೀ ಉನ್ನತಿಯನ್ನು ಬಯಸುವ ಬುದ್ಧಿವಂತ ಹಾಗೂ ಸಮರ್ಥ ಪುರುಷನು ಕರ್ತವ್ಯಾಕರ್ತವ್ಯದ ವಿಷಯದಲ್ಲಿ ಸಂಶಯ ಉಂಟಾದಾಗ ಸದಾ ತನ್ನ ಸಮ್ಮತಿ ಕೊಡಬೇಕು.॥33॥

ಮೂಲಮ್ - 34

ಇತ್ಯೇವಂ ಪರಿಪೃಷ್ಟಾಸ್ತೇ ಸ್ವಂ ಸ್ವಂ ಮತಮತಂದ್ರಿತಾಃ ।
ಸೋಪಚಾರಂ ತದಾ ರಾಮಮೂಚುಃ ಪ್ರಿಯಚಿಕೀರ್ಷವಃ ॥

ಅನುವಾದ

ಈ ಪ್ರಕಾರ ಸಲಹೆ ಕೇಳಿದಾಗ ಶ್ರೀರಾಮನ ಪ್ರಿಯಮಾಡುವ ಇಚ್ಛೆಯುಳ್ಳ ಆ ವಾನರರೆಲ್ಲರೂ ಆಲಸ್ಯ ಬಿಟ್ಟು ಉತ್ಸಾಹಿತರಾಗಿ ಆದರದಿಂದ ತಮ್ಮ ತಮ್ಮ ಮತವನ್ನು ಪ್ರಕಟಪಡಿಸತೊಡಗಿದರು.॥34॥

ಮೂಲಮ್ - 35

ಅಜ್ಞಾತಂ ನಾಸ್ತಿ ತೇ ಕಿಂಚಿದ್ ತ್ರಿಷು ಲೋಕೇಷು ರಾಘವಃ ।
ಆತ್ಮಾನಂ ಪೂಜಯನ್ ರಾಮ ಪೃಚ್ಛಸ್ಯಸ್ಮಾನ್ ಸುಹೃತ್ತಯಾ ॥

ಅನುವಾದ

ರಘುನಂದನ! ನಿನಗೆ ತಿಳಿಯದಿರುವ ಮಾತು ಮೂರು ಲೋಕಗಳಲ್ಲಿ ಇಲ್ಲದಿದ್ದರೂ ನಾವು ನಿನ್ನ ಅಂಗವೇ ಆಗಿದ್ದೇವೆ. ಆದ್ದರಿಂದ ನೀನು ಮಿತ್ರಭಾವದಿಂದ ನಮ್ಮ ಸಮ್ಮಾನ ಹೆಚ್ಚಿಸುತ್ತಾ ನಮ್ಮಲ್ಲಿ ಸಲಹೆ ಕೇಳುತ್ತಿರುವೆ.॥35॥

ಮೂಲಮ್ - 36

ತ್ವಂ ಹಿ ಸತ್ಯವ್ರತಃ ಶೂರೋ ಧಾರ್ಮಿಕೋ ದೃಢವಿಕ್ರಮಃ ।
ಪರೀಕ್ಷ್ಯಕಾರೀ ಸ್ಮೃತಿಮಾನ್ ನಿಸೃಷ್ಟಾತ್ಮಾ ಸುಹೃತ್ಸು ಚ ॥

ಅನುವಾದ

ನೀನು ಸತ್ಯವ್ರತೀ, ಶೂರವೀರ, ಧರ್ಮಾತ್ಮಾ ಸುದೃಢ ಪರಾಕ್ರಮಿ, ಪರೀಕ್ಷಿಸಿ ಕಾರ್ಯಮಾಡುವವನು, ಸ್ಮರಣಶಕ್ತಿಯಿಂದ ಸಂಪನ್ನ ಮತ್ತು ಮಿತ್ರರ ಮೇಲೆ ವಿಶ್ವಾಸವಿಟ್ಟು ಅವರ ಕೈಗೆ ತನ್ನನ್ನೇ ಒಪ್ಪಿಸಿಕೊಳ್ಳುವವನಾಗಿರುವೆ.॥36॥

ಮೂಲಮ್ - 37

ತಸ್ಮಾದೇಕೈಕಕಶಸ್ತಾವದ್ ಬ್ರುವಂತು ಸಚಿವಾಸ್ತವ ।
ಹೇತುತೋ ಮತಿಸಂಪನ್ನಾಃ ಸಮರ್ಥಾಶ್ಚ ಪುನಃ ಪುನಃ ॥

ಅನುವಾದ

ಅದಕ್ಕಾಗಿ ನಿನ್ನ ಎಲ್ಲ ಬುದ್ಧಿವಂತ ಹಾಗೂ ಸಾಮರ್ಥ್ಯಶಾಲೀ ಸಚಿವರು ಒಬ್ಬೊಬ್ಬರಾಗಿ ಒಬ್ಬರಾದ ಮತ್ತೊಬ್ಬರು ಯುಕ್ತಿಯುಕ್ತ ತಮ್ಮ ವಿಚಾರ ಪ್ರಕಟಪಡಿಸಲಿ.॥37॥

ಮೂಲಮ್ - 38

ಇತ್ಯುಕ್ತೇ ರಾಘವಾಯಾಥ ಮತಿಮಾನಂಗದೋಽಗ್ರತಃ ।
ವಿಭಿಷಣಪರೀಕ್ಷಾರ್ಥಮುವಾಚ ವಚನಂ ಹರಿಃ ॥

ಅನುವಾದ

ವಾನರರು ಹೀಗೆ ಹೇಳಿದಾಗ ಎಲ್ಲರಿಗಿಂತ ಮೊದಲು ಬುದ್ಧಿವಂತ ವಾನರ ಅಂಗದನು ವಿಭೀಷಣನ ಪರೀಕ್ಷೆಗಾಗಿ ಸಲಹೆ ಕೊಡುತ್ತಾ ಶ್ರೀರಘುನಾಥನಲ್ಲಿ ಹೇಳಿದನು.॥38॥

ಮೂಲಮ್ - 39

ಶತ್ರೋಃ ಸಕಾಶಾತ್ ಸಂಪ್ರಾಪ್ತಃ ಸರ್ವಥಾ ತರ್ಕ್ಯ ಏವ ಹಿ ।
ವಿಶ್ವಾಸನೀಯಃ ಸಹಸಾ ನ ಕರ್ತವ್ಯೋ ವಿಭೀಷಣಃ ॥

ಅನುವಾದ

ಭಗವಂತನೇ! ವಿಭೀಷಣನು ಶತ್ರುವಿನ ಕಡೆಯಿಂದ ಬಂದಿರುವನು, ಅದಕ್ಕಾಗಿ ಅವನ ಮೇಲೆ ಸಂಶಯಪಡಲೇ ಬೇಕು. ಅವನನ್ನು ಕೂಡಲೇ ವಿಶ್ವಾಸಪಾತ್ರನನ್ನಾಗಿಸಿಕೊಳ್ಳಬಾರದು.॥39॥

ಮೂಲಮ್ - 40

ಛಾದಯಿತ್ವಾಽಽತ್ಮಭಾವಂ ಹಿ ಚರಂತಿ ಶಠಬುದ್ಧಯಃ ।
ಪ್ರಹರಂತಿ ಚ ರಂಧ್ರೇಷು ಸೋಽನರ್ಥಃ ಸುಮಹಾನ್ ಭವೇತ್ ॥

ಅನುವಾದ

ಬಹಳಷ್ಟು ಶಠತೆ ಪೂರ್ಣವಿಚಾರವುಳ್ಳ ಜನರು ತಮ್ಮ ಮನೋಭಾವವನ್ನು ಅಡಗಿಸಿಕೊಂಡು ಸಂಚರಿಸುತ್ತಾ ಇರುತ್ತಾರೆ ಹಾಗೂ ಸಂದರ್ಭ ಸಿಗುತ್ತಲೇ ಪ್ರಹರಿಸಿಬಿಡುತ್ತಾರೆ. ಇದರಿಂದ ದೊಡ್ಡ ಅನರ್ಥವೇ ಆಗುತ್ತದೆ.॥40॥

ಮೂಲಮ್ - 41

ಅರ್ಥಾನರ್ಥೌ ವಿನಿಶ್ಚಿತ್ಯ ವ್ಯವಸಾಯಂ ಭಜೇತ ಹ ।
ಗುಣತಃ ಸಂಗ್ರಹಂ ಕುರ್ಯಾದ್ ದೋಷತಸ್ತು ವಿಸರ್ಜಯೇತ್ ॥

ಅನುವಾದ

ಆದ್ದರಿಂದ ಗುಣದೋಷರ ವಿಚಾರ ಮಾಡಿ ಮೊದಲಿಗೆ - ಈ ವ್ಯಕ್ತಿಯಿಂದ ಅರ್ಥದ ಪ್ರಾಪ್ತಿಯಾಗುವುದೋ ಅನರ್ಥದ್ದೊ? (ಇವನು ಹಿತದ ಸಾಧನೆ ಮಾಡುವನೋ ಅಹಿತದ್ದೋ) ಇದನ್ನು ನಿಶ್ಚಯಿಸಬೇಕು. ಅವನಲ್ಲಿ ಉತ್ತಮ ಗುಣವಿದ್ದರೆ ಅವನನ್ನು ಸ್ವೀಕರಿಸಿರಿ, ದೋಷ ಕಂಡು ಬಂದರೆ ತ್ಯಜಿಸಿಬಿಡಿರಿ.॥41॥

ಮೂಲಮ್ - 42

ಯದಿ ದೋಷೋ ಮಹಾಂಸ್ತಸ್ಮಿಂಸ್ತ್ಯಜ್ಯತಾಮವಿಶಂಕಿತಮ್ ।
ಗುಣಾನ್ ವಾಪಿ ಬಹೂನ್ ಜ್ಞಾತ್ವಾ ಸಂಗ್ರಹಃ ಕ್ರಿಯತಾಂ ನೃಪ ॥

ಅನುವಾದ

ಮಹಾರಾಜಾ! ಅವನಲ್ಲಿ ಮಹಾದೋಷವಿದ್ದರೆ, ನಿಸ್ಸಂದೇಹವಾಗಿ ಅವನನ್ನು ತ್ಯಜಿಸುವುದೇ ಉಚಿತವಾಗಿದೆ. ಗುಣಗಳ ದೃಷ್ಟಿಯಿಂದ ಅವನಲ್ಲಿ ಅನೇಕ ಸದ್ಗುಣಗಳು ಇವೆ ಎಂದು ತಿಳಿದರೆ ಆ ವ್ಯಕ್ತಿಯನ್ನು ತನ್ನದಾಗಿಸಿಕೊಳ್ಳಬೇಕು.॥42॥

ಮೂಲಮ್ - 43

ಶರಭಸ್ತ್ವಥ ನಿಶ್ಚಿತ್ಯ ಸಾರ್ಥಂ ವಚನಮಬ್ರವೀತ್ ।
ಕ್ಷಿಪ್ರಮಸ್ಮಿನ್ ನರವ್ಯಾಘ್ರ ಚಾರಃ ಪ್ರತಿವಿಧೀಯತಾಮ್ ॥

ಅನುವಾದ

ಅನಂತರ ಶರಭನು ಯೋಚಿಸಿ ಸಾರ್ಥಕವಾದ ಮಾತನ್ನು ಹೇಳಿದನು - ಪುರುಷ ಸಿಂಹನೇ! ಈ ವಿಭೀಷಣನ ಮೇಲೆ ಶೀಘ್ರವಾಗಿ ಯಾರಾದರೂ ಗುಪ್ತಚರನನ್ನು ನೇಮಿಸಬೇಕು.॥43॥

ಮೂಲಮ್ - 44

ಪ್ರಣಿಧಾಯ ಹಿ ಚಾರೇಣ ಯಥಾವತ್ ಸೂಕ್ಷ್ಮಬುದ್ಧಿನಾ ।
ಪರೀಕ್ಷ್ಯ ಚ ತತಃ ಕಾರ್ಯೋ ಯಥಾನ್ಯಾಯಂ ಪರಿಗ್ರಹಃ ॥

ಅನುವಾದ

ಸೂಕ್ಷ್ಮಬುದ್ಧಿಯ ಗುಪ್ತಚರನನ್ನು ಕಳಿಸಿ ಅವನಿಂದ ಯಥಾವತ್ತಾಗಿ ಅವನನ್ನು ಪರೀಕ್ಷಿಸಲಾಗುವುದು. ಬಳಿಕ ಯಥೋಚಿತವಾಗಿ ಅವನನ್ನು ಸಂಗ್ರಹಿಸಬೇಕು.॥44॥

ಮೂಲಮ್ - 45

ಜಾಂಬವಾಂಸ್ತ್ವಥ ಸಂಪ್ರೇಕ್ಷ್ಯ ಶಾಸ್ತ್ರಬುದ್ಧ್ಯಾವಿಚಕ್ಷಣಃ ।
ವಾಕ್ಯಂ ವಿಜ್ಞಾಪಯಾಮಾಸ ಗುಣವದ್ ದೋಷವರ್ಜಿತಮ್ ॥

ಅನುವಾದ

ಇದಾದ ಬಳಿಕ ಪರಮ ಚತುರ ಜಾಂಬವಂತನು ಶಾಸ್ತ್ರೀಯ ಬುದ್ಧಿಯಿಂದ ವಿಚಾರ ಮಾಡಿ, ಗುಣದೋಷ ರಹಿತವಾದ ಮಾತನ್ನು ಹೀಗೆ ಹೇಳಿದನು.॥45॥

ಮೂಲಮ್ - 46

ಬದ್ಧವೈರಾಚ್ಚ ಪಾಪಾಚ್ಚ ರಾಕ್ಷಸೇಂದ್ರಾದ್ ವಿಭೀಷಣಃ ।
ಅದೇಶಕಾಲೇ ಸಂಪ್ರಾಪ್ತಃ ಸರ್ವಥಾ ಶಂಕ್ಯತಾಮಯಮ್ ॥

ಅನುವಾದ

ರಾಕ್ಷಸರಾಜ ರಾವಣನು ದೊಡ್ಡ ಪಾಪಿಯಾಗಿದ್ದಾನೆ. ಅವನು ನಮ್ಮೊಂದಿಗೆ ವೈರ ಕಟ್ಟಿಕೊಂಡಿದ್ದಾನೆ ಮತ್ತು ಈ ವಿಭೀಷಣನು ಅವನ ಬಳಿಯಿಂದಲೇ ಬಂದಿರುವನು. ವಾಸ್ತವವಾಗಿ ಇವನು ಬರುವ ಸಮಯ ಇದಲ್ಲ ಹಾಗೂ ಸ್ಥಾನವೂ ಇದಲ್ಲ. ಅದಕ್ಕಾಗಿ ಇವನ ವಿಷಯದಲ್ಲಿ ಎಲ್ಲ ರೀತಿಯಿಂದ ಸಂಶಯಗೊಂಡೇ ಇರಬೇಕು.॥46॥

ಮೂಲಮ್ - 47

ತತೋ ಮೈಂದಸ್ತು ಸಂಪ್ರೇಕ್ಷ್ಯನಯಾಪನಯಕೋವಿದಃ ।
ವಾಕ್ಯಂ ವಚನಸಂಪನ್ನೋ ಬಭಾಷೇ ಹೇತುಮುತ್ತರಮ್ ॥

ಅನುವಾದ

ಬಳಿಕ ನೀತಿ ಮತ್ತು ಅನೀತಿಯನ್ನು ಬಲ್ಲ ಹಾಗೂ ವಾಗ್ವೈಭವದಿಂದ ಸಂಪನ್ನನಾದ ಮೈಂದನು ಯೋಚಿಸಿ ಹೀಗೆ ಯುಕ್ತಿಯುಕ್ತ ಉತ್ತಮ ಮಾತನ್ನು ಹೇಳಿದನು.॥47॥

ಮೂಲಮ್ - 48

ಅನುಜೋ ನಾಮ ತಸ್ಯೈಷ ರಾವಣಸ್ಯ ವಿಭೀಷಣಃ ।
ಪೃಚ್ಛ್ಯತಾಂ ಮಧುರೇಣಾಯಂ ಶನೈರ್ನರಪತೀಶ್ವರ ॥

ಅನುವಾದ

ಮಹಾರಾಜಾ! ಈ ವಿಭೀಷಣನು ರಾವಣನ ತಮ್ಮನೇ ಆಗಿದ್ದಾನೆ, ಅದಕ್ಕಾಗಿ ಇವನೊಂದಿಗೆ ಮಧುರ ವ್ಯವಹಾರದೊಂದಿಗೆ ನಿಧಾನವಾಗಿ ಎಲ್ಲವನ್ನೂ ಕೇಳಬೇಕು.॥48॥

ಮೂಲಮ್ - 49

ಭಾವಮಸ್ಯ ತು ವಿಜ್ಞಾಯ ತತ್ತ್ವತಸ್ತಂ ಕರಿಷ್ಯಸಿ ।
ಯದಿ ದುಷ್ಟೋ ನ ದುಷ್ಟೋ ವಾ ಬುದ್ಧಿಪೂರ್ವಂ ನರರ್ಷಭ ॥

ಅನುವಾದ

ನರಶ್ರೇಷ್ಠನೇ! ಮತ್ತೆ ಇವನ ಭಾವವನ್ನು ತಿಳಿದು ನೀವು ಬುದ್ಧಿಪೂರ್ವಕ ನಿಶ್ಚಯಿಸಿರಿ. ಇವನು ದುಷ್ಟನಾಗಿದ್ದಾನೋ ಇಲ್ಲವೋ. ಅನಂತರ ಉಚಿತವೆನಿಸಿದಂತೆ ಮಾಡಬೇಕು.॥49॥

ಮೂಲಮ್ - 50

ಅಥ ಸಂಸ್ಕಾರಸಂಪನ್ನೋ ಹನೂಮಾನ್ ಸಚಿವೋತ್ತಮಃ ।
ಉವಾಚ ವಚನಂ ಶ್ಲಕ್ಷ್ಣಮರ್ಥವನ್ ಮಧುರಂ ಲಘು ॥

ಅನುವಾದ

ಮತ್ತೆ ಸಚಿವರಲ್ಲಿ ಶ್ರೇಷ್ಠ, ಸಮಸ್ತ ಶಾಸ್ತ್ರಗಳ ಜ್ಞಾನಜನಿತ ಸಂಸ್ಕಾರದಿಂದ ಕೂಡಿದ ಹನುಮಂತನು ಹೀಗೆ ಶ್ರವಣ ಮಧುರ, ಸಾರ್ಥಕ, ಸುಂದರ ಮತ್ತು ಸಂಕ್ಷಿಪ್ತ ಮಾತನ್ನು ಹೇಳಿದನು.॥50॥

ಮೂಲಮ್ - 51

ನ ಭವತಂ ಮತಿಶ್ರೇಷ್ಠಂ ಸಮರ್ಥಂ ವದತಾಂ ವರಮ್ ।
ಅತಿಶಾಯಯಿತುಂ ಶಕ್ತೋ ಬೃಹಸ್ಪತಿರಪಿ ಬ್ರುವನ್ ॥

ಅನುವಾದ

ಪ್ರಭೋ! ನೀವು ಬುದ್ಧಿವಂತರಲ್ಲಿ ಉತ್ತಮರೂ, ಸಾಮರ್ಥ್ಯಶಾಲಿಗಳೂ, ವಕ್ತಾರಲ್ಲಿ ಶ್ರೇಷ್ಠರೂ ಆಗಿರುವಿರಿ. ೃಹಸ್ಪತಿಯು ಮಾತನಾಡಿದರೂ ನಿಮಗಿಂತ ಉತ್ತಮ ವಕ್ತಾ ಆಗಲಾರನು.॥51॥

ಮೂಲಮ್ - 52

ನ ವಾದಾನ್ನಾಪಿ ಸಂಘರ್ಷಾನ್ನಾಧಿಕ್ಯಾನ್ನ ಚ ಕಾಮತಃ ।
ವಕ್ಷ್ಯಾಮಿ ವಚನಂ ರಾಜನ್ಯಥಾರ್ಥಂ ರಾಮ ಗೌರವಾತ್ ॥

ಅನುವಾದ

ಮಹಾರಾಜ ಶ್ರೀರಾಮ! ನಾನು ಏನೋ ನಿವೇದಿಸುವುದು ವಾದ-ವಿವಾದ ಅಥವಾ ತರ್ಕ, ಸ್ಪರ್ಧೆ, ಹೆಚ್ಚು ಬುದ್ಧಿವಂತಿಕೆಯ ಅಭಿಮಾನ ಅಥವಾ ಯಾವುದೇ ಕಾಮನೆಯಿಂದ ಹೇಳಿದುದಲ್ಲ. ನಾನಾದರೋ ಕಾರ್ಯಗೌರವದ ಮೇಲೆ ದೃಷ್ಟಿ ಇರಿಸಿ ಯಥಾರ್ಥವಾಗಿ ಅನಿಸಿದ ಮಾತನ್ನೇ ಹೇಳುವೆನು.॥52॥

ಮೂಲಮ್ - 53

ಅರ್ಥಾನರ್ಥನಿಮಿತ್ತಂ ಹಿ ಯದುಕ್ತಂ ಸಚಿವೈಸ್ತವ ।
ತತ್ರ ದೋಷಂ ಪ್ರಪಶ್ಯಾಮಿ ಕ್ರಿಯಾ ನಹ್ಯುಪಪದ್ಯತೇ ॥

ಅನುವಾದ

ನಿಮ್ಮ ಮಂತ್ರಿಗಳು ಅರ್ಥ ಮತ್ತು ಅನರ್ಥದ ನಿರ್ಣಯಕ್ಕಾಗಿ ಗುಣ-ದೋಷಗಳನ್ನು ಪರೀಕ್ಷಿಸಬೇಕೆಂದು ಕೊಟ್ಟ ಸಲಹೆಯಲ್ಲಿ ನನಗೆ ದೋಷ ಕಂಡುಬರುತ್ತದೆ; ಏಕೆಂದರೆ ಈ ಪರೀಕ್ಷಿಸುವುದು ಎಂದಿಗೂ ಸಂಭವವಿಲ್ಲ.॥53॥

ಮೂಲಮ್ - 54

ಋತೇ ನಿಯೋಗಾತ್ಸಾಮರ್ಥ್ಯಮವಬೋದ್ಧುಂ ನ ಶಕ್ಯತೇ ।
ಸಹಸಾ ವಿನಿಯೋಗೋಽಪಿ ದೋಷವಾನ್ಪ್ರತಿಭಾತಿ ಮೇ ॥

ಅನುವಾದ

ವಿಭೀಷಣನಿಗೆ ಆಶ್ರಯಕೊಡಲು ಯೋಗ್ಯವೋ ಅಲ್ಲವೋ ಎಂಬುದರ ನಿರ್ಣಯ ಅವನನ್ನು ಯಾವುದಾದರೂ ಕಾರ್ಯದಲ್ಲಿ ನಿಯುಕ್ತಗೊಳಿಸದೆ ತಿಳಿಯಲಾರದು. ತತ್ಕ್ಷಣ ಅವನನ್ನು ಯಾವುದೇ ಕಾರ್ಯದಲ್ಲಿ ತೊಡಗಿಸುವುದೂ ಕೂಡ ನನಗೆ ಸದೋಷವಾಗಿಯೇ ಕಾಣುತ್ತದೆ.॥54॥

ಮೂಲಮ್ - 55

ಚಾರಪ್ರಣಿಹಿತಂ ಯುಕ್ತಂ ಯದುಕ್ತಂ ಸಚಿವೈಸ್ತವ ।
ಅರ್ಥಸ್ಯಾಸಂಭವಾತ್ತತ್ರ ಕಾರಣಂ ನೋಪಪದ್ಯತೇ ॥

ಅನುವಾದ

ಗುಪ್ತಚರನನ್ನು ನಿಯುಕ್ತಗೊಳಿಸುವ ಮಾತನ್ನು ನಿಮ್ಮ ಮಂತ್ರಿಗಳು ಹೇಳಿದುದರಲ್ಲಿಯೂ ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಹಾಗೆ ಮಾಡಲು ಯಾವುದೇ ಯುಕ್ತಿಯುಕ್ತ ಕಾರಣ ಕಾಣುವುದಿಲ್ಲ. (ಯಾರು ದೂರವಿದ್ದಾನೋ ಮತ್ತು ಯಾರ ವೃತ್ತಾಂತ ತಿಳಿದಿಲ್ಲವೋ, ಅವನಿಗಾಗಿ ಗುಪ್ತಚರನನ್ನು ನಿಯುಕ್ತಗೊಳಿಸಲಾಗುತ್ತದೆ. ಎದುರಿಗೆ ನಿಂತಿದ್ದು, ತನ್ನ ವೃತ್ತಾಂತವನ್ನು ತಿಳಿಸುತ್ತಿರುವನ ಕುರಿತು ಗುಪ್ತಚರ ಕಳಿಸುವುದು ಆವಶ್ಯಕತೆ ಏನಿದೆ?.॥55॥

ಮೂಲಮ್ - 56

ಅದೇಶಕಾಲೇ ಸಂಪ್ರಾಪ್ತ ಇತ್ಯಯಂ ಯದ್ವಿಭೀಷಣಃ ।
ವಿವಕ್ಷಾ ತತ್ರ ಮೇಽಸ್ತೀಯಂ ತಾಂ ನಿಬೋಧ ಯಥಾಮತಿ ॥

ಅನುವಾದ

ಇದಲ್ಲದೆ ವಿಭೀಷಣನು ಈಗ ಇಲ್ಲಿಗೆ ಬಂದಿರುವುದು ದೇಶ-ಕಾಲಕ್ಕನುರೂಪವಾಗಿಲ್ಲ ಎಂದು ಹೇಳಿದುದರ ವಿಷಯದಲ್ಲಿಯೂ ನಾನು ನನ್ನ ಬುದ್ಧಿಗನುಸಾರ ಸ್ವಲ್ಪ ಹೇಳಲು ಬಯಸುತ್ತೇನೆ, ನೀವು ಕೇಳಿರಿ.॥56॥

ಮೂಲಮ್ - 57

ಏಷ ದೇಶಶ್ಚ ಕಾಲಶ್ಚ ಭವತೀಹ ಯಥಾ ತಥಾ ।
ಪುರುಷಾತ್ಪುರುಷಂ ಪ್ರಾಪ್ಯ ತಥಾ ದೋಷಗುಣಾವಪಿ ॥
(ಶ್ಲೋಕ - 58)
ದೌರಾತ್ಮ್ಯಂ ರಾವಣೇ ದೃಷ್ಟ್ವಾ ವಿಕ್ರಮಂ ಚ ತಥಾ ತ್ವಯಿ ।
ಯುಕ್ತಮಾಗಮನಂ ಹ್ಯತ್ರ ಸದೃಶಂ ತಸ್ಯ ಬುದ್ಧಿತಃ ॥

ಅನುವಾದ

ಅವನು ಇಲ್ಲಿಗೆ ಬರಲು ಇದೇ ಉತ್ತಮ ದೇಶ ಮತ್ತು ಕಾಲವಾಗಿದೆ, ಇದು ಹೇಗೆ ಸಿದ್ಧವಾಗುತ್ತದೆ ಎಂದು ತಿಳಿಸುತ್ತೇನೆ. ವಿಭೀಷಣನು ಒಬ್ಬ ನೀಚಪುರುಷನಿಂದ ಹೊರಟು ಓರ್ವ ಶ್ರೇಷ್ಠ ಪುರುಷನ ಬಳಿಗೆ ಬಂದಿರುವನು. ಅವನು ಇಬ್ಬರ ಗುಣ-ದೋಷಗಳನ್ನು ವಿವೇಚಿಸಿರುವನು. ಅನಂತರ ರಾವಣನಲ್ಲಿ ದುಷ್ಟತೆ ಮತ್ತು ನಿಮ್ಮಲ್ಲಿ ಪರಾಕ್ರಮವನ್ನು ನೋಡಿ ಅವನು ರಾವಣನನ್ನು ಬಿಟ್ಟು ನಿಮ್ಮ ಬಳಿಗೆ ಬಂದಿರುವನು. ಅದರಿಂದ ಅವನು ಇಲ್ಲಿಗೆ ಬಂದಿರುವುದು ಸರ್ವಥಾ ಉಚಿತ ಮತ್ತು ಅವನ ಬುದ್ಧಿಗನುರೂಪವಾಗಿದೆ.॥57-58॥

ಮೂಲಮ್ - 59

ಅಜ್ಞಾತರೂಪೈಃ ಪುರುಷೈಃ ಸ ರಾಜನ್ ಪ್ರಚ್ಛ್ಯತಾಮಿತಿ ।
ಯದುಕ್ತಮತ್ರ ಮೇ ಪ್ರೇಕ್ಷಾ ಕಾಚಿದಸ್ತಿ ಸಮೀಕ್ಷಿತಾ ॥

ಅನುವಾದ

ರಾಜನೇ! ಅಪರಿಚಿತ ಪುರುಷನ ಮೂಲಕ ಇವನಲ್ಲಿ ಎಲ್ಲ ಮಾತನ್ನು ಕೇಳಲಾಗುವುದು ಎಂದು ಯಾರೋ ಮಂತ್ರಿಯು ಹೇಳಿರುವನು. ಇದರ ವಿಷಯದಲ್ಲಿ ನಾನು ವಿಮರ್ಶಿಸಿ ನಿಶ್ಚಯಿಸಿದ ವಿಚಾರವನ್ನು ನಿಮ್ಮ ಮುಂದೆ ನಿವೇದಿಸುವೆನು.॥59॥

ಮೂಲಮ್ - 60

ಪೃಚ್ಛ್ಯಮಾನೋ ವಿಶಂಕೇತ ಸಹಸಾ ಬುದ್ಧಿ ಮಾನ್ವಚಃ ।
ತತ್ರ ಮಿತ್ರಂ ಪ್ರದುಷ್ಯೇತ ಮಿಥ್ಯಾ ಪೃಷ್ಟಂ ಸುಖಾಗತಮ್ ॥

ಅನುವಾದ

ಯಾವನಾದರೂ ಅಪರಿಚಿತ ವ್ಯಕ್ತಿ ‘ನೀನು ಯಾರು? ಎಲ್ಲಿಂದ ಬಂದೆ? ಏತಕ್ಕಾಗಿ ಬಂದಿರುವೆ? ಮುಂತಾಗಿ ಕೇಳಿದರೆ ಯಾರೇ ಬುದ್ಧಿವಂತ ಪುರುಷನು ಕೂಡಲೇ ಆ ಕೇಳುವವನ ಕುರಿತು ಸಂದೇಹಪಡುವನು. ಎಲ್ಲವನ್ನು ತಿಳಿಯುತ್ತಿದ್ದರೂ ನನ್ನಲ್ಲಿ ಸುಮ್ಮನೇ ಕೇಳಲಾಗುತ್ತದೆ ಎಂದು ಅವನಿಗೆ ತಿಳಿದಾಗ ಸುಖಕ್ಕಾಗಿ ಬಂದಿರುವ ಆ ನವಾಗತ ಮಿತ್ರನ ಹೃದಯ ಕಲುಷಿತವಾಗುವುದು. (ಹೀಗೆ ನಾವು ಓರ್ವ ಮಿತ್ರನ ಲಾಭದಿಂದ ವಂಚಿತರಾಗುವೆವು.॥60॥

ಮೂಲಮ್ - 61

ಅಶಕ್ಯಂ ಸಹಸಾ ರಾಜನ್ಭಾವೋ ಬೋದ್ಧುಂ ಪರಸ್ಯ ವೈ ।
ಅಂತರೇಣ ಸ್ವರೈರ್ಭಿರ್ನೈಪುಣ್ಯಂ ಪಶ್ಯತಾಂ ಭೃಶಮ್ ॥

ಅನುವಾದ

ಇದಲ್ಲದೆ ಮಹಾರಾಜಾ! ಯಾವನೇ ಬೇರೆಯವನ ಮನಸ್ಸಿನ ಮಾತನ್ನು ತತ್ಕ್ಷಣ ತಿಳಿಯುವುದು ಅಸಂಭವವಾಗಿದೆ. ನಡು ನಡುವೆ ಸ್ವರಭೇದದಿಂದ ಇವನು ಸಾಧು ಸ್ವಭಾವದಿಂದ ಬಂದಿರುವನೇ, ಅಸಾಧುಭಾವದಿಂದಲೋ? ಎಂಬುದನ್ನು ನೀವು ಚೆನ್ನಾಗಿ ನಿಶ್ಚಯಿಸಿಕೊಳ್ಳಿ.॥61॥

ಮೂಲಮ್ - 62

ನ ತ್ವಸ್ಯ ಬ್ರುವತೋಜಾತು ಲಕ್ಷ್ಯತೇ ದುಷ್ಟಭಾವತಾ ।
ಪ್ರಸನ್ನಂ ವದನಂ ಚಾಪಿ ತಸ್ಮಾನ್ಮೇ ನಾಸ್ತಿ ಸಂಶಯಃ ॥

ಅನುವಾದ

ಇವನ ಮಾತಿನಿಂದಲೂ ಎಂದೂ ಇವನ ದುರ್ಭಾವ ಕಾಣುವುದಿಲ್ಲ. ಇವನ ಮುಖವು ಪ್ರಸನ್ನವಾಗಿದೆ. ಅದಕ್ಕಾಗಿ ಇವನ ಕುರಿತು ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ.॥62॥

ಮೂಲಮ್ - 63

ಅಶಂಕಿತಮತಿಃ ಸ್ವಸ್ಥೋ ನ ಶಠಃ ಪರಿಸರ್ಪತಿ ।
ನ ಚಾಸ್ಯ ದುಷ್ಟವಾಗಸ್ತಿ ತಸ್ಮಾನ್ಮೇನಾಸ್ತಿ ಸಂಶಯಃ ॥

ಅನುವಾದ

ದುಷ್ಟಪುರುಷನು ಎಂದೂ ನಿಃಶಂಕ ಹಾಗೂ ಸ್ವಸ್ಥಚಿತ್ತನಾಗಿ ಎದುರಿಗೆ ಬರಲಾರನು. ಅದಲ್ಲದೆ ಇವನ ಮಾತೂ ಕೂಡ ದೋಷಯುಕ್ತವಾಗಿಲ್ಲ. ಆದ್ದರಿಂದ ನನಗೆ ಇವನ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ.॥63॥

ಮೂಲಮ್ - 64

ಆಕಾರಶ್ಚಾದ್ಯಮಾನೋಽಪಿ ನ ಶಕ್ಯೋ ವಿನಿಗೂಹಿತುಮ್ ।
ಬಲಾದ್ಧಿ ವಿವೃಣೋತ್ಯೇವ ಭಾವಮಂತರ್ಗತಂ ನೃಣಾಮ್ ॥

ಅನುವಾದ

ಯಾರೇ ಆಗಲಿ ತನ್ನ ಆಕಾರವನ್ನು ಎಷ್ಟೇ ಅಡಗಿಸಿದರೂ ಅವನ ಒಳಗಿನ ಭಾವ ಎಂದೂ ಅಡಗಿರಲಾರದು. ಹೊರಗಿನ ಆಕಾರವು ಪುರುಷರ ಆಂತರಿಕಭಾವವನ್ನು ಬಲವಂತವಾಗಿ ಪ್ರಕಟಿಸುತ್ತದೆ.॥64॥

ಮೂಲಮ್ - 65

ದೇಶಕಾಲೋಪಪನ್ನಂ ಚ ಕಾರ್ಯಂಕಾರ್ಯವಿದಾಂ ವರ ।
ಸಲಂ ಕುರುತೇ ಕ್ಷಿಪ್ರಂ ಪ್ರಯೋಗೇಣಾಭಿಸಂಹಿತಮ್ ॥

ಅನುವಾದ

ಕಾರ್ಯವೇತ್ತರಲ್ಲಿ ಶ್ರೇಷ್ಠ ರಘುನಂದನಾ! ವಿಭೀಷಣನ ಇಲ್ಲಿಗೆ ಆಗಮನರೂಪೀ ಕಾರ್ಯವು ದೇಶ-ಕಾಲಕ್ಕನು ರೂಪವೇ ಆಗಿದೆ. ಇಂತಹ ಕಾರ್ಯವು ಯೋಗ್ಯಪುರುಷನಿಂದ ನಡೆದರೆ ಅವನು ಶೀಘ್ರವಾಗಿ ಸಲನಾಗುತ್ತಾನೆ.॥65॥

ಮೂಲಮ್ - 66

ಉದ್ಯೋಗಂ ತವ ಸಂಪ್ರೇಕ್ಷ್ಯ ಮಿಥ್ಯಾವೃತ್ತಂ ಚ ರಾವಣಮ್ ।
ವಾಲಿನಶ್ಚ ವಧಂ ಶ್ರುತ್ವಾ ಸುಗ್ರೀವಂ ಚಾಭಿಷೇಚಿತಮ್ ॥

ಮೂಲಮ್ - 67

ರಾಜ್ಯಂ ಪ್ರಾರ್ಥಯಮಾನಸ್ತು ಬುದ್ಧಿಪೂರ್ವಮಿಹಾಗತಃ ।
ಏತಾವತ್ತು ಪುರಸ್ಕೃತ್ಯ ಯುಜ್ಯತೇ ತಸ್ಯ ಸಂಗ್ರಹಃ ॥

ಅನುವಾದ

ನಿಮ್ಮ ಉದ್ಯೋಗ, ರಾವಣನ ಮಿಥ್ಯಾಚಾರ, ವಾಲಿಯ ವಧೆ ಮತ್ತು ಸುಗ್ರೀವನ ಪಟ್ಟಾಭಿಷೇಕದ ಸಮಾಚಾರ ಕೇಳಿ ತಿಳಿದು ರಾಜ್ಯವನ್ನು ಪಡೆಯುವ ಇಚ್ಛೆಯಿಂದಲೇ ಇವನು ತಿಳಿದು-ತಿಳಿದು ಇಲ್ಲಿಗೆ ನಿಮ್ಮ ಬಳಿಗೆ ಬಂದಿರುವನು. (ಶರಣಾಗತವತ್ಸಲ ದಯಾಳು ಶ್ರೀರಾಮನು ಅವಶ್ಯವಾಗಿಯೇ ನನ್ನನ್ನು ರಕ್ಷಿಸಿ ರಾಜ್ಯವನ್ನು ಕೊಡುವನು ಎಂದು ಅವನ ಮನಸ್ಸಿನಲ್ಲಿ ವಿಶ್ವಾಸವಿದೆ.) ಇವೆಲ್ಲವನ್ನು ದೃಷ್ಟಿಯಲ್ಲಿಟ್ಟು ವಿಭೀಷಣನ ಸಂಗ್ರಹ ಮಾಡುವುದು - ಅವನನ್ನು ತನ್ನವನನ್ನಾಗಿಸುವುದು ನಿಮಗೆ ಉಚಿತವೆಂದು ನನಗೆ ತೋರುತ್ತದೆ.॥66-67॥

ಮೂಲಮ್ - 68

ಯಥಾಶಕ್ತಿ ಮಯೋಕ್ತಂ ತು ರಾಕ್ಷಸಸ್ಯಾರ್ಜವಂ ಪ್ರತಿ ।
ಪ್ರಮಾಣಂ ತ್ವಂ ಹಿ ಶೇಷಸ್ಯ ಶ್ರುತ್ವಾ ಬುದ್ಧಿಮತಾಂ ವರ ॥

ಅನುವಾದ

ಬುದ್ಧಿವಂತರಲ್ಲಿ ಶ್ರೇಷ್ಠನಾದ ರಘುನಾಥ! ಹೀಗೆ ಈ ರಾಕ್ಷಸನ ಸರಳತೆ ಮತ್ತು ನಿರ್ದೋಷತೆಯ ವಿಷಯದಲ್ಲಿ ನಾನು ಯಥಾಶಕ್ತಿ ನಿವೇದಿಸಿಕೊಂಡಿರುವೆನು. ಇದನ್ನು ಕೇಳಿ ಮುಂದೆ ಉಚಿತವೆನಿಸಿದಂತೆ ಮಾಡಿರಿ.॥68॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿನೇಳನೆಯ ಸರ್ಗ ಪೂರ್ಣವಾಯಿತು.॥17॥