वाचनम्
ಭಾಗಸೂಚನಾ
ವಿಭೀಷಣನು ರಾಮನನ್ನು ಅಜೇಯನೆಂದು ತಿಳಿಸಿ, ಅವನಿಗೆ ಸೀತೆಯನ್ನು ಮರಳಿಸಲು ಸಮ್ಮತಿಸುವುದು
ಮೂಲಮ್ - 1
ನಿಶಾಚರೇಂದ್ರಸ್ಯ ನಿಶಮ್ಯ ವಾಕ್ಯಂ
ಸ ಕುಂಭಕರ್ಣಸ್ಯ ಚ ಗರ್ಜಿತಾನಿ ।
ವಿಭೀಷಣೋ ರಾಕ್ಷಸರಾಜಮುಖ್ಯ-
ಮುವಾಚ ವಾಕ್ಯಂ ಹಿತಮರ್ಥಯುಕ್ತಮ್ ॥
ಅನುವಾದ
ರಾಕ್ಷಸರಾಜ ರಾವಣನ ಈ ಮಾತನ್ನು ಮತ್ತು ಕುಂಭಕರ್ಣನ ಗರ್ಜನೆಯನ್ನು ಕೇಳಿ ವಿಭೀಷಣನು ರಾವಣನಲ್ಲಿ ಹೀಗೆ ಸಾರ್ಥಕ ಮತ್ತು ಹಿತಕರ ಮಾತನ್ನು ಹೇಳಿದನು.॥1॥
ಮೂಲಮ್ - 2
ವೃತೋ ಹಿ ಬಾಹ್ವಂತರಭೋಗರಾಶಿ-
ಶ್ಚಿಂತಾವಿಷಃ ಸುಸ್ಮಿತತೀಕ್ಷ್ಣದಂಷ್ಟ್ರಃ ।
ಪಂಚಾಂಗುಲೀ ಪಂಚಶಿರೋತಿಕಾಯಃ
ಸೀತಾಮಹಾಹಿಸ್ತವ ಕೇನ ರಾಜನ್ ॥
ಅನುವಾದ
ರಾಜನೇ! ಸೀತೆ ಎಂಬ ವಿಶಾಲಕಾಯ ಮಹಾ ಸರ್ಪವನ್ನು ಯಾರು ನಿಮ್ಮ ಕುತ್ತಿಗೆ ಕಟ್ಟಿದರು? ಆಕೆಯ ಹೃದಯದ ಭಾಗವೇ ಆ ಸರ್ಪದ ಶರೀರವಾಗಿದೆ, ಚಿಂತೆಯೇ ವಿಷವಾಗಿದೆ, ಸುಂದರ ಮುಗುಳ್ನಗೆಯೇ ತೀಕ್ಷ್ಣವಾದ ದಾಡೆಯಾಗಿದೆ, ಪ್ರತಿಯೊಂದು ಕೈಯ ಐದೈದು ಬೆರಳುಗಳೇ ಆ ಸರ್ಪದ ಐದು ಹೆಡೆಗಳಾಗಿವೆ.॥2॥
ಮೂಲಮ್ - 3
ಯಾವನ್ನ ಲಂಕಾಂ ಸಮಭಿದ್ರವಂತಿ
ಬಲೀಮುಖಾಃ ಪರ್ವತಕೂಟಮಾತ್ರಾಃ ।
ದಂಷ್ಟ್ರಾಯುಧಾಶ್ಚೈವ ನಖಾಯುಧಾಶ್ಚ
ಪ್ರದೀಯತಾಂ ದಾಶರಥಾಯ ಮೈಥಿಲೀ ॥
ಅನುವಾದ
ಹಲ್ಲು ಮತ್ತು ಉಗುರುಗಳೇ ಆಯುಧವುಳ್ಳ ಪರ್ವತ ಶಿಖರದಂತೆ ಎತ್ತರವಾದ ವಾನರು ಲಂಕೆಯನ್ನು ಆಕ್ರಮಿಸುವ ಮೊದಲೇ ನೀವು ದಶರಥನಂದನ ಶ್ರೀರಾಮನ ಕೈಗೆ ಸೀತೆಯನ್ನು ಒಪ್ಪಿಸಿಬಿಡಿರಿ.॥3॥
ಮೂಲಮ್ - 4
ಯಾವನ್ನ ಗೃಹ್ಣಂತಿ ಶಿರಾಂಸಿ ಬಾಣಾ
ರಾಮೇರಿತಾ ರಾಕ್ಷಸಪುಂಗವಾನಾಮ್ ।
ವಜ್ರೋಪಮಾ ವಾಯುಸಮಾನ ವೇಗಾಃ
ಪ್ರದೀಯತಾಂ ದಾಶರಥಾಯ ಮೈಥಿಲೀ ॥
ಅನುವಾದ
ಶ್ರೀರಾಮಚಂದ್ರನು ಪ್ರಯೋಗಿಸಿದ ವಾಯುವಿನಂತೆ ವೇಗಶಾಲಿ ಹಾಗೂ ವಜ್ರತುಲ್ಯ ಬಾಣಗಳು ರಾಕ್ಷಸ ಶಿರೋಮಣಿಗಳ ತಲೆಯನ್ನು ತರಿಯುವ ಮೊದಲೇ ನೀವು ದಶರಥನಂದನ ಶ್ರೀರಾಮನ ಸೇವೆಯಲ್ಲಿ ಸೀತೆಯನ್ನು ಸಮರ್ಪಿಸಿ ಬಿಡಿರಿ.॥4॥
ಮೂಲಮ್ - 5
ನ ಕುಂಭಕರ್ಣೇಂದ್ರಜಿತೌ ನ ರಾಜಂ-
ಸ್ತಥಾ ಮಹಾಪಾರ್ಶ್ವಮಹೋದರೌ ವಾ ।
ನಿಕುಂಭಕುಂಭೌ ಚ ತಥಾತಿಕಾಯಃ
ಸ್ಥಾತುಂ ಸಮರ್ಥಾ ಯುಧಿ ರಾಘವಸ್ಯ ॥
ಅನುವಾದ
ರಾಜನೇ! ಈ ಕುಂಭಕರ್ಣ, ಇಂದ್ರಜಿತ್ತು, ಮಹಾಪಾರ್ಶ್ವ, ಮಹೋದರ, ನಿಕುಂಭ, ಕುಂಭ ಮತ್ತು ಅತಿಕಾಯ - ಇವರು ಯಾರೂ ಸಮರಾಂಗಣದಲ್ಲಿ ಶ್ರೀರಾಮನ ಎದುರಿಗೆ ನಿಲ್ಲಲಾರರು.॥5॥
ಮೂಲಮ್ - 6
ಜೀವಂಸ್ತು ರಾಮಸ್ಯ ನ ಮೋಕ್ಷ್ಯಸೇ ತ್ವಂ
ಗುಪ್ತಃ ಸವಿತ್ರಾಪ್ಯಥವಾ ಮರುದ್ಭಿಃ ।
ನ ವಾಸವಸ್ಯಾಂಕಗತೋ ನ ಮೃತ್ಯೋ
ರ್ನಭೋ ಪಾತಾಲಮನುಪ್ರವಿಷ್ಟಃ ॥
ಅನುವಾದ
ಸೂರ್ಯ ಅಥವಾ ವಾಯ ನಿಮ್ಮನ್ನು ರಕ್ಷಿಸಿದರೂ, ಇಂದ್ರ ಇಲ್ಲವೇ ಯಮನು ನಿಮ್ಮನ್ನು ಉಡಿಯಲ್ಲಿ ಅಡಗಿಸಿಕೊಂಡರೂ, ಅಥವಾ ನೀವು ಆಕಾಶ-ಪಾತಾಳದಲ್ಲಿ ನುಗ್ಗಿಹೋದರೂ ಶ್ರೀರಾಮನ ಕೈಯಿಂದ ಬದುಕಿ ಇರಲಾರಿರಿ.॥6॥
ಮೂಲಮ್ - 7
ನಿಶಮ್ಯ ವಾಕ್ಯಂ ತು ವಿಭೀಷಣಸ್ಯ
ತತಃ ಪ್ರಹಸ್ತೋ ವಚನಂ ಬಭಾಷೇ ।
ನ ನೋ ಭಯಂ ವಿದ್ಮ ನ ದೈವತೇಭ್ಯೋ
ನ ದಾನವೇಭ್ಯೋಽಪ್ಯಥವಾ ಕದಾಚಿತ್ ॥
ಅನುವಾದ
ವಿಭೀಷಣನ ಈ ಮಾತನ್ನುಕೇಳಿ ಪ್ರಹಸ್ತನು ಹೇಳಿದನು - ನಾವು ದೇವತೆಗಳಿಗೆ ಅಥವಾ ದಾನವರಿಗೆ ಹೆದರುವುದಿಲ್ಲ. ಭಯ ಎಂಬುದು ಏನೆಂದೇ ನಾವು ತಿಳಿಯುವುದಿಲ್ಲ.॥7॥
ಮೂಲಮ್ - 8
ನ ಯಕ್ಷಗಂಧರ್ವಮಹೋರಗೇಭ್ಯೋ
ಭಯಂ ನ ಸಂಖ್ಯೇ ಪತಗೋರಗೇಭ್ಯಃ ।
ಕಥಂ ನು ರಾಮಾದ್ಭವಿತಾ ಭಯಂ ನೋ
ನರೇಂದ್ರಪುತ್ರಾತ್ಸಮರೇ ಕದಾಚಿತ್ ॥
ಅನುವಾದ
ಯುದ್ಧದಲ್ಲಿ ನಮಗೆ ಯಕ್ಷರಿಂದ, ಗಂಧರ್ವರಿಂದ, ದೊಡ್ಡ ದೊಡ್ಡ ನಾಗಗಳಿಂದ, ಪಕ್ಷಿಗಳಿಂದ, ಸರ್ಪಗಳಿಂದ ಭಯವೇ ಇಲ್ಲದಿರುವಾಗ ಸಮರಾಂಗಣದಲ್ಲಿ ರಾಜಕುಮಾರ ರಾಮ ನಿಂದ ಹೇಗೆ ಭಯ ಇರುವುದು.॥8॥
ಮೂಲಮ್ - 9
ಪ್ರಹಸ್ತವಾಕ್ಯಂ ತ್ವಹಿತಂ ನಿಶಮ್ಯ
ವಿಭೀಷಣೋ ರಾಜಹಿತಾನುಕಾಂಕ್ಷೀ ।
ತತೋ ಮಹಾರ್ಥಂ ವಚನಂ ಬಭಾಷೇ
ಧರ್ಮಾರ್ಥ ಕಾಮೇಷು ನಿವಿಷ್ಟಬುದ್ಧಿಃ ॥
ಅನುವಾದ
ವಿಭೀಷಣನು ರಾಜಾ ರಾವಣನ ನಿಜವಾದ ಹಿತೈಷಿಯಾಗಿದ್ದನು. ಅವನ ಬುದ್ಧಿಯು ಧರ್ಮ, ಅರ್ಥ ಮತ್ತು ಕಾಮ ಇವುಗಳಲ್ಲಿ ಚೆನ್ನಾಗಿ ಪರಿಣಿತವಾಗಿತ್ತು. ಅವನು ಪ್ರಹಸ್ತನ ಅಹಿತಕರ ಮಾತನ್ನು ಕೇಳಿ, ಹೀಗೆ ಮಹಾನ್ ಅರ್ಥಯುಕ್ತ ಮಾತನ್ನು ಹೇಳಿದನು.॥9॥
ಮೂಲಮ್ - 10
ಪ್ರಹಸ್ತ ರಾಜಾ ಚ ಮಹೋದರಶ್ಚ
ತ್ವಂ ಕುಂಭಕರ್ಣಶ್ಚ ಯದರ್ಥಜಾತಮ್ ।
ಬ್ರವೀತ ರಾಮಂ ಪ್ರತಿ ತನ್ನ ಶಕ್ಯಂ
ಯಥಾ ಗತಿಃ ಸ್ವರ್ಗಮಧರ್ಮಬುದ್ಧೇಃ ॥
ಅನುವಾದ
ಪ್ರಹಸ್ತನೇ! ಮಹಾರಾಜ ರಾವಣ, ಮಹೋದರ, ನೀನು ಮತ್ತು ಕುಂಭಕರ್ಣ-ಶ್ರೀರಾಮನ ಕುರಿತು ಹೇಳುತ್ತಿರುವುದೆಲ್ಲ ನಿಮ್ಮಿಂದ ಮಾಡಲಾಗುವುದಿಲ್ಲ. ಪಾಪಾತ್ಮನು ಸ್ವರ್ಗಕ್ಕೆ ಹೋಗಲಾರನು, ಅದರಂತೆ ಇದಾಗಿದೆ.॥10॥
ಮೂಲಮ್ - 11
ವಧುಸ್ತು ರಾಮಸ್ಯ ಮಯಾ ತ್ವಯಾ ಚ
ಪ್ರಹಸ್ತ ಸರ್ವೈರಪಿ ರಾಕ್ಷಸೈರ್ವಾ ।
ಕಥಂ ಭವೇದರ್ಥವಿಶಾರದಸ್ಯ
ಮಹಾರ್ಣವಂ ತರ್ತುಮಿವಾಪ್ಲವಸ್ಯ ॥
ಅನುವಾದ
ಪ್ರಹಸ್ತನೇ! ಶ್ರೀರಾಮನು ಅರ್ಥವಿಶಾರದನಾಗಿದ್ದಾನೆ. ಎಲ್ಲ ಕಾರ್ಯ ಸಾಧನಗಳಲ್ಲಿ ಕುಶಲನಾಗಿದ್ದಾನೆ. ಹಡಗು ಅಥವಾ ದೋಣಿಯಿಲ್ಲದೆ ಯಾರೂ ಮಹಾಸಾಗರವನ್ನು ದಾಟಲಾರನೋ, ಹಾಗೆಯೇ ನನ್ನಿಂದ, ನಿನ್ನಿಂದ ಅಥವಾ ಸಮಸ್ತ ರಾಕ್ಷಸ ರಿಂದಲೂ ಕೂಡ ರಾಮನನ್ನು ವಧಿಸುವುದು ಹೇಗೆ ಸಾಧ್ಯವಿದೆ.॥11॥
ಮೂಲಮ್ - 12
ಧರ್ಮಪ್ರಧಾನಸ್ಯ ಮಹಾರಥಸ್ಯ
ಇಕ್ಷ್ವಾಕುವಂಶ ಪ್ರಭವಸ್ಯ ರಾಜ್ಞಃ ।
ಪುರೋಽಸ್ಯ ದೇವಾಶ್ಚ ತಥಾವಿಧಸ್ಯ
ಕೃತ್ಯೇಷು ಶಕ್ತಸ್ಯ ಭವಂತಿ ಮೂಢಾಃ ॥
ಅನುವಾದ
ಶ್ರೀರಾಮನು ಧರ್ಮವನ್ನು ಪ್ರಧಾನವಸ್ತುವೆಂದು ತಿಳಿಯುತ್ತಾನೆ. ಅವನು ಇಕ್ಷ್ವಾಕುಕುಲದಲ್ಲಿ ಪ್ರಾದುರ್ಭವಿಸಿರುವನು. ಅವನು ಎಲ್ಲ ಕಾರ್ಯಗಳನ್ನು ನೆರವೇರಿಸಲು ಸಮರ್ಥ ಮತ್ತು ಮಹಾರಥೀ ವೀರನಾಗಿದ್ದಾನೆ. (ಅವನು ವಿರಾಧ, ಕಬಂಧ, ವಾಲಿಯಂತಹ ವೀರರನ್ನು ಲೀಲಾಜಾಲವಾಗಿ ಯಮಲೋಕಕ್ಕೆ ಅಟ್ಟಿ ಬಿಟ್ಟಿರುವನು.) ಇಂತಹ ಪ್ರಸಿದ್ಧ ಪರಾಕ್ರಮಿ ರಾಜಾ ಶ್ರೀರಾಮನಿಗೆ ಇದಿರಾದರೆ ದೇವತೆಗಳೂ ಕೂಡ ತಮ್ಮ ಉದ್ಧಟತನ ಮರೆತುಬಿಡುವರು. (ಹಾಗಿರುವಾಗ ನಮ್ಮ-ನಿಮ್ಮ ಮಾತಾದರೂ ಏನಿದೆ?.॥12॥
ಮೂಲಮ್ - 13
ತೀಕ್ಷ್ಣಾ ನ ತಾವತ್ತವ ಕಂಕಪತ್ರಾ
ದುರಾಸದಾ ರಾಘವವಿಪ್ರಮುಕ್ತಾಃ ।
ಭಿತ್ತ್ವಾ ಶರೀರಂ ಪ್ರವಿಶಂತಿ ಬಾಣಾಃ
ಪ್ರಹಸ್ತ ತೇನೈವ ವಿಕತ್ಥಸೇ ತ್ವಮ್ ॥
ಅನುವಾದ
ಪ್ರಹಸ್ತನೇ! ಇಷ್ಟರವರೆಗೆ ಶ್ರೀರಾಮನು ಬಿಟ್ಟ ಕಂಕಪತ್ರಯುಕ್ತ, ದುರ್ಜಯ, ತೀಕ್ಷ್ಣಬಾಣಗಳು ನಿನ್ನ ಶರೀರವನ್ನು ಸೀಳಿ ಒಳಗೆ ಪ್ರವೇಶಿಸಲಿಲ್ಲ; ಅದಕ್ಕಾಗಿ ನೀನು ಬಡಾಯಿಕೊಚ್ಚಿಕೊಂಡಿರುವೆ.॥13॥
ಮೂಲಮ್ - 14
ಭಿತ್ತ್ವಾ ನ ತಾವತ್ಪ್ರವಿಶಂತಿ ಕಾಯಂ
ಪ್ರಾಣಾಂತಿಕಾಸ್ತೇಽಶನಿ ತುಲ್ಯವೇಗಾಃ ।
ಶಿತಾಃ ಶರಾ ರಾಘವವಿಪ್ರಮುಕ್ತಾಃ
ಪ್ರಹಸ್ತ ತೇನೈವ ವಿಕತ್ಥಸೇ ತ್ವಮ್ ॥
ಅನುವಾದ
ಪ್ರಹಸ್ತನೇ! ಶ್ರೀರಾಮನ ಬಾಣಗಳು ಸಿಡಿಲಿನಂತೆ ವೇಗಶಾಲಿಗಳಾಗಿವೆ. ಅವು ಪ್ರಾಣಾಂತಕವಾಗಿವೆ. ಶ್ರೀರಘುನಾಥನು ಧನುಸ್ಸಿನಿಂದ ಬಿಟ್ಟ ಬಾಣಗಳು ನಿನ್ನ ಶರೀರವನ್ನು ಭೇದಿಸಿ ಒಳಹೊಕ್ಕಿಲ್ಲ; ಅದರಿಂದ ನೀನು ಇಷ್ಟೊಂದು ಹಾರಾಡುತ್ತಿರುವೆ.॥14॥
ಮೂಲಮ್ - 15
ನ ರಾವಣೋ ನಾತಿಬಲಸ್ತ್ರಿಶೀರ್ಷೋ
ನ ಕುಂಭಕರ್ಣಸ್ಯ ಸುತೇ ನಿಕುಂಭಃ ।
ನ ಚೇಂದ್ರಜಿದ್ ದಾಶರಥಿಂ ಪ್ರವೋಢುಂ
ತ್ವಂ ವಾ ರಣೇ ಶಕ್ರಸಮಂ ಸಮರ್ಥಃ ॥
ಅನುವಾದ
ರಾವಣ, ಮಹಾಬಲಿ ತ್ರಿಶಿರಾ, ಕುಂಭಕರ್ಣ ಕುಮಾರ ನಿಕುಂಭ, ಇಂದ್ರವಿಜಯ ಮೇಘನಾದನೂ ಕೂಡ ಸಮರಾಂಗಣದಲ್ಲಿ ಇಂದ್ರತುಲ್ಯ ತೇಜಸ್ವೀ ದಶರಥನಂದನ ಶ್ರೀರಾಮನ ವೇಗವನ್ನು ಸಹಿಸಲು ಅಸಮರ್ಥರಾಗಿದ್ದಾರೆ.॥15॥
ಮೂಲಮ್ - 16
ದೇವಾಂತಕೋ ವಾಪಿ ನರಾಂತಕೋ ವಾ
ತಥಾತಿಕಾಯೋಽತಿರಥೋ ಮಹಾತ್ಮಾ।
ಅಕಂಪನಶ್ಚಾದ್ರಿಸಮಾನಸಾರಃ
ಸ್ಥಾತುಂ ನ ಶಕ್ತಾ ಯುಧಿ ರಾಘವಸ್ಯ ॥
ಅನುವಾದ
ದೇವಾಂತಕ, ನರಾಂತಕ, ಅತಿಕಾಯ, ಮಹಾಕಾಯ, ಅತಿರಥ ಹಾಗೂ ಪರ್ವತದಂತಹ ಶಕ್ತಿಶಾಲೀ ಅಕಂಪನನೂ ಯುದ್ಧಭೂಮಿಯಲ್ಲಿ ಶ್ರೀರಾಮನ ಎದುರಿಗೆ ನಿಲ್ಲಲಾರರು.॥16॥
ಮೂಲಮ್ - 17
ಅಯಂ ಚ ರಾಜಾ ವ್ಯಸನಾಭಿಭೂತೋ
ಮಿತೈರಮಿತ್ರಪ್ರತಿಮೈರ್ಭವದ್ಭಿಃ ।
ಅನ್ವಾಸ್ಯತೇ ರಾಕ್ಷಸನಾಶನಾರ್ಥೇ
ತೀಕ್ಷ್ಣಃ ಪ್ರಕೃತ್ಯಾ ಹ್ಯಸಮೀಕ್ಷಕಾರೀ ॥
ಅನುವಾದ
ಈ ಮಹಾರಾಜಾ ರಾವಣನಾದರೋ ವ್ಯಸನಗಳ* ವಶೀಭೂತನಾಗಿದ್ದಾನೆ, ಅದಕ್ಕಾಗಿ ಯೋಚಿಸಿ ಕಾರ್ಯ ಮಾಡುವುದಿಲ್ಲ. ಅಲ್ಲದೆ ಇವನು ಸ್ವಭಾವದಿಂದಲೂ ಕಠೋರ ನಾಗಿರುವನು. ರಾಕ್ಷಸರ ಸತ್ಯಾನಾಶಕ್ಕಾಗಿಯೇ ನಿನ್ನಂತಹ ಶತ್ರುತುಲ್ಯ ಮಿತ್ರನ ಸೇವೆಯಲ್ಲಿ ಉಪಸ್ಥಿತನಾಗಿದ್ದಾನೆ.॥17॥
ಟಿಪ್ಪನೀ
- ಇವು ರಾಜರ ಏಳು ವ್ಯಸನಗಳೆಂದು ತಿಳಿಯಲಾಗಿದೆ- ವಾಗ್ದಂಡಯೋಸ್ತ ಪಾರುಪ್ಯಮರ್ಥದೂಷಣಮೇವ ಚ ಪಾನಂ ಸ್ತ್ರೀ ಮೃಗಯಾ ದ್ಯೂತಂ ವ್ಯಸನಂ ಸಪ್ತಧಾ ಪ್ರಭೋ ॥ ವಾಣೀ ಮತ್ತು ದಂಡನೆಯಲ್ಲಿ ಕಠೋರತೆ, ಧನದ ಅಪವ್ಯಯ, ಮದ್ಯಪಾನ, ಸ್ತ್ರೀ, ಬೇಟೆ, ದ್ಯೂತ- ಇವು ರಾಜರ ಏಳು ವಿಧದ ವ್ಯಸನಗಳಾಗಿವೆ. (ಕಾಮಂದಕ ನೀತಿಯ ವಚನ ಗೋವಿಂದರಾಜರ ರಾಮಾಯಣ ಭೂಷಣದಿಂದ.)
ಮೂಲಮ್ - 18
ಅನಂತಭೋಗೇನ ಸಹಸ್ರಮೂರ್ಧ್ನ
ನಾಗೇನ ಭೀಮೇನ ಮಹಾಬಲೇನ ।
ಬಲಾತ್ ಪರಿಕ್ಷಿಪ್ತಮಿಮಂ ಭವಂತೋ
ರಾಜಾನಮುತ್ಕ್ಷಿಪ್ಯ ವಿಮೋಚಯಂತು ॥
ಅನುವಾದ
ಅನಂತ ಶಾರೀರಿಕ ಬಲಸಂಪನ್ನ, ಸಾವಿರ ಹೆಡೆಗಳುಳ್ಳ, ಮಹಾಬಲಶಾಲೀ ಭಯಂಕರ ನಾಗನು ಈ ರಾಜನನ್ನು ಬಲವಾಗಿ ಸುತ್ತುಕೊಂಡಿದೆ. ನೀವೆಲ್ಲರೂ ಸೇರಿ ಇವರನ್ನು ಬಂಧನದಿಂದ ಬಿಡಿಸಿ ಪ್ರಾಣಸಂಕಟದಿಂದ ಉಳಿಸಿರಿ. (ಅರ್ಥಾತ್- ಶ್ರೀರಾಮಚಂದ್ರನೊಂದಿಗೆ ವೈರ ಕಟ್ಟಿಕೊಳ್ಳುವುದು ಸರ್ಪದಿಂದ ಸುತ್ತುವರಿದಂತೆ ಆಗಿದೆ. ಈ ಭಾವವನ್ನು ವ್ಯಕ್ತ ಗೊಳಿಸುವ ಕಾರಣ ಇಲ್ಲಿ ನಿದರ್ಶನಾ ಅಲಂಕಾರ ವ್ಯಂಗವಾಗಿದೆ.॥18॥
ಮೂಲಮ್ - 19
ಯಾವದ್ಧಿ ಕೇಶಗ್ರಹಣಾತ್ ಸುಹೃದ್ಭಿಃ
ಸಮೇತ್ಯ ಸರ್ವೈಃ ಪರಿಪೂರ್ಣಕಾಮೈಃ ।
ನಿಗೃಹ್ಯ ರಾಜಾ ಪರಿರಕ್ಷಿತವ್ಯೋ
ಭೂತೈರ್ಯಥಾ ಭೀಮಬಲೈರ್ಗೃಹೀತಃ ॥
ಅನುವಾದ
ಈ ರಾಜನಿಂದ ಇಷ್ಟರವರೆಗೆ ನಿಮ್ಮೆಲ್ಲರ ಎಲ್ಲ ಕಾಮನೆಗಳು ಪೂರ್ಣವಾಗಿವೆ. ನೀವೆಲ್ಲರೂ ಇವರ ಹಿತೈಷಿ ಸುಹೃದರಾಗಿದ್ದೀರಿ. ಆದ್ದರಿಂದ ಭಯಂಕರ ಬಲಶಾಲೀ ಭೂತವು ಬಡಿದ ಪುರುಷನನ್ನು ಅವನ ಹಿತೈಷಿ ಆತ್ಮೀಯರು ಬಲವಂತವಾಗಿ ಅವನನ್ನು ರಕ್ಷಿಸುತ್ತಾರೆ. ಹಾಗೆಯೇ ನೀವೆಲ್ಲರೂ ಏಕಮತರಾಗಿ-ಆವಶ್ಯಕತೆ ಬಿದ್ದರೆ ಇವನ ಕೂದಲು ಹಿಡಿದಾದರೂ ಇವನನ್ನು ಅನುಚಿತ ಮಾರ್ಗದಿಂದ ತಡೆದು, ಎಲ್ಲ ರೀತಿಯಿಂದ ರಕ್ಷಿಸಿರಿ.॥19॥
ಮೂಲಮ್ - 20
ಸುವಾರಿಣಾ ರಾಘವಸಾಗರೇಣ
ಪ್ರಚ್ಛಾದ್ಯಮಾನಸ್ತರಸಾ ಭವದ್ಭಿಃ ।
ಯುಕ್ತಸ್ತ್ವಯಂ ತಾರಯಿತುಂ ಸಮೇತ್ಯ
ಕಾಕುತ್ಸ್ಥಪಾತಾಲಮುಖೇ ಪತನ್ ಸಃ ॥
ಅನುವಾದ
ಉತ್ತಮ ಚರಿತ್ರರೂಪೀ ಜಲದಿಂದ ಪರಿಪೂರ್ಣ ಶ್ರೀರಘುನಾಥರೂಪೀ ಸಮುದ್ರವು ಇವನನ್ನು ಮುಳುಗಿಸುತ್ತಿದೆ, ಅಥವಾ ಇವನು ಶ್ರೀರಾಮರೂಪೀ ಪಾತಾಳದ ಆಳವಾದ ಹೊಂಡದಲ್ಲಿ ಬೀಳುತ್ತಿರುವನು ಎಂದು ತಿಳಿಯಿರಿ. ಇಂತಹ ಸ್ಥಿತಿಯಲ್ಲಿ ನೀವೆಲ್ಲರೂ ಸೇರಿ ಇವನನ್ನು ಉದ್ಧರಿಸಬೇಕು.॥20॥
ಮೂಲಮ್ - 21
ಇದಂ ಪುರಸ್ಯಾಸ್ಯ ಸರಾಕ್ಷಸಸ್ಯ
ರಾಜ್ಞಶ್ಚ ಪಥ್ಯಂ ಸಸುಹೃಜ್ಜನಸ್ಯ ।
ಸಂಮ್ಯಗ್ ಧಿ ವಾಕ್ಯಂ ಸ್ವಮತಂ ಬ್ರವೀಮಿ
ನರೇಂದ್ರಪುತ್ರಾಯ ದದಾತು ಮೈಥಿಲೀಮ್ ॥
ಅನುವಾದ
ನಾನಾದರೋ ರಾಕ್ಷಸರ ಸಹಿತ ಈ ಇಡೀನಗರದ ಮತ್ತು ಸುಹೃದರೊಂದಿಗೆ ಮಹಾರಾಜರ ಹಿತಕ್ಕಾಗಿ - ‘ಈ ರಾಜಕುಮಾರ ಶ್ರೀರಾಮನ ಕೈಗೆ ಸೀತೆಯನ್ನು ಒಪ್ಪಿಸಿ ಬಿಡಬೇಕು’ ಇದೇ ನಾನು ಉತ್ತಮ ಸಲಹೆಕೊಡುತ್ತಿದ್ದೇನೆ.॥21॥
ಮೂಲಮ್ - 22
ಪರಸ್ಯ ವೀರ್ಯಂ ಸ್ವಬಲಂ ಚ ಬುದ್ಧ್ಯಾ
ಸ್ಥಾನಂ ಕ್ಷಯಂ ಚೈವ ತಥೈವ ವೃದ್ಧಿಮ್ ।
ತಥಾ ಸ್ವಪಕ್ಷೇಽಪ್ಯನುಮೃಶ್ಯ ಬುದ್ಧ್ಯಾ
ವದೇತ್ ಕ್ಷಮಂ ಸ್ವಾಮಿಹಿತಂ ಸ ಮಂತ್ರೀ ॥
ಅನುವಾದ
ತನ್ನ ಮತ್ತು ಶತ್ರು ಪಕ್ಷದ ಬಲ-ಪರಾಕ್ರಮ ವನ್ನು ತಿಳಿದು, ಎರಡೂ ಪಕ್ಷಗಳ ಸ್ಥಿತಿ, ಹಾನಿ-ವೃದ್ಧಿಯನ್ನು ತನ್ನ ಬುದ್ಧಿಯಿಂದ ವಿಚಾರ ಮಾಡಿ, ಸ್ವಾಮಿಗಾಗಿ ಹಿತಕರ ಮತ್ತು ಉಚಿತವಾದ ಮಾತನ್ನು ಹೇಳುವವನೇ ವಾಸ್ತವವಾಗಿ ನಿಜವಾದ ಮಂತ್ರಿಯಾಗಿದ್ದಾನೆ.॥22॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು.॥14॥