वाचनम्
ಭಾಗಸೂಚನಾ
ಮಹಾಪಾರ್ಶ್ವನು ರಾವಣನಿಗೆ ಸೀತೆಯ ಮೇಲೆ ಬಲಾತ್ಕಾರ ಮಾಡುವಂತೆ ಪ್ರೋತ್ಸಾಹಿಸಿದುದು, ರಾವಣನು ಶಾಪದಿಂದಾಗಿ ಹಾಗೆ ಮಾಡಲು ನಾನು ಅಸಮರ್ಥನೆಂದು ತಿಳಿಸುವುದು ಹಾಗೂ ತನ್ನ ಪರಾಕ್ರಮವನ್ನು ಹೊಗಳಿಕೊಂಡಿದುದು
ಮೂಲಮ್ - 1
ರಾವಣಂ ಕುದ್ಧಮಾಜ್ಞಾಯ ಮಹಾಪಾರ್ಶ್ವೋ ಮಹಾಬಲಃ ।
ಮುಹೂರ್ತಮನುಸಂಚಿತ್ಯ ಪ್ರಾಂಜಲಿರ್ವಾಕ್ಯಮಬ್ರವೀತ್ ॥
ಅನುವಾದ
ರಾವಣನು ಕುಪಿತನಾಗಿರುವುದನ್ನು ತಿಳಿದು ಮಹಾಬಲಿ ಮಹಾಪಾರ್ಶ್ವನು ಎರಡುಗಳಿಗೆ ಸುಮ್ಮನಿದ್ದು ಏನೋ ಯೋಚಿಸಿದ ಬಳಿಕ ಕೈಮುಗಿದುಕೊಂಡು ಹೇಳಿದನು-॥1॥
ಮೂಲಮ್ - 2
ಯಃ ಖಲ್ವಪಿ ವನಂ ಪ್ರಾಪ್ಯಮೃಗವ್ಯಾಲನಿಷೇವಿತಮ್ ।
ನ ಪಿಬೇನ್ಮಧು ಸಂಪ್ರಾಪ್ಯ ಸ ನರೋ ಬಾಲಿಶೋ ಭವೇತ್ ॥
ಅನುವಾದ
ಹಿಂಸಕ ಪಶುಗಳು ಮತ್ತು ಸರ್ಪಗಳಿಂದ ತುಂಬಿದ ದುರ್ಗಮ ವನಕ್ಕೆ ಹೋಗಿ ಅಲ್ಲಿ ಕುಡಿಯಲು ಯೋಗ್ಯ ವಾದ ಜೇನು ಪಡೆದರೂ ಅದನ್ನು ಕುಡಿಯದಿರುವವನು ಮೂರ್ಖನೇ ಆಗಿದ್ದಾನೆ.॥2॥
ಮೂಲಮ್ - 3
ಈಶ್ವರಸ್ಯೇಶ್ವರಃ ಕೋಽಸ್ತಿ ತವ ಶತ್ರುನಿಬರ್ಹಣ ।
ರಮಸ್ವ ಸಹ ವೈದೇಹ್ಯಾ ಶತ್ರೂನಾಕ್ರಮ್ಯ ಮೂರ್ಧಸು ॥
ಅನುವಾದ
ಶತ್ರುಸೂದನ ಮಹಾರಾಜಾ! ನೀವಾದರೋ ಸ್ವತಃ ಈಶ್ವರರಾಗಿದ್ದೀರಿ. ನಿಮಗೆ ಈಶ್ವರ ಯಾರಿದ್ದಾರೆ? ನೀವು ಶತ್ರುಗಳ ತಲೆಯ ಮೇಲೆ ಕಾಲನ್ನಿರಿಸಿ ವೈದೇಹಿ ಸೀತೆಯೊಂದಿಗೆ ರಮಿಸಿರಿ, ಉಪಭೋಗಿಸಿರಿ.॥3॥
ಮೂಲಮ್ - 4
ಬಲಾತ್ಕುಕ್ಕುಟವೃತ್ತೇನ ಪ್ರವರ್ತಸ್ವ ಸುಮಹಾಬಲ ।
ಆಕ್ರಮ್ಯಾಕ್ರಮ್ಯ ಸೀತಾಂವೈ ತಾಂ ಭುಂಕ್ಷ್ವ ಚರಮಸ್ವಚ ॥
ಅನುವಾದ
ಮಹಾಬಲಿ ವೀರನೇ ! ನೀವು ಕೋಳಿಗಳ ವರ್ತನೆಯನ್ನು ತನ್ನದಾಗಿಸಿ ಸೀತೆಯೊಂದಿಗೆ ಬಲಾತ್ಕಾರ ಮಾಡಿರಿ. ಪದೇ-ಪದೇ ಆಕ್ರಮಣ ಮಾಡಿ ಆಕೆಯೊಂದಿಗೆ ರಮಿಸಿ, ಉಪಭೋಗಿಸಿರಿ.॥4॥
ಮೂಲಮ್ - 5
ಲಬ್ಧಕಾಮಸ್ಯ ತೇ ಪಶ್ಚಾದಾಗಮಿಷ್ಯತಿ ಕಿಂ ಭಯಮ್ ।
ಪ್ರಾಪ್ತಮಪ್ರಾಪ್ತಕಾಲಂ ವಾ ಸರ್ವಂ ಪ್ರತಿವಿಧಾಸ್ಯಸೇ ॥
ಅನುವಾದ
ನಿಮ್ಮ ಮನೋರಥವು ಸಫಲವಾದಾಗ ಮತ್ತೆ ನಿಮ್ಮ ಮೇಲೆ ಯಾವ ಭಯ ಬಂದಿತು? ವರ್ತಮಾನ ಹಾಗೂ ಭವಿಷ್ಯದಲ್ಲಿ ಯಾವುದಾದರೂ ಭಯಬಂದರೂ ಆ ಎಲ್ಲ ಭಯದ ಯಥೋಚಿತ ಪ್ರತೀಕಾರ ಮಾಡಲಾಗುವುದು.॥.॥
ಮೂಲಮ್ - 6
ಕುಂಭಕರ್ಣಃ ಸಹಾಸ್ಮಾಭಿರಿಂದ್ರಜಿಚ್ಚ ಮಹಾಬಲಃ ।
ಪ್ರತಿಷೇಧಯಿತುಂ ಶಕ್ತೌ ಸವಜ್ರಮಪಿ ವಜ್ರಿಣಮ್ ॥
ಅನುವಾದ
ನಮ್ಮೊಂದಿಗೆ ಮಹಾಬಲಿ ಕುಂಭಕರ್ಣ ಮತ್ತು ಇಂದ್ರಜಿತು ನಿಂತುಬಿಟ್ಟರೆ, ಇವರಿಬ್ಬರೂ ವಜ್ರಧಾರೀ ಇಂದ್ರನನ್ನು ತಡೆಯಬಲ್ಲರು.॥6॥
ಮೂಲಮ್ - 7
ಉಪಪ್ರದಾನಂ ಸಾಂತ್ವಂ ವಾ ಭೇದಂ ವಾ ಕುಶಲೈಃ ಕೃತಮ್ ।
ಸುಮತಿಕ್ರಮ್ಯ ದಂಡೇನ ಸಿದ್ಧಿಮರ್ಥೇಷು ರೋಚಯೇ ॥
ಅನುವಾದ
ನಾನಾದರೋ ನೀತಿ ನಿಪುಣ ಪುರುಷರಿಂದ ಪ್ರಯುಕ್ತವಾದ ಸಾಮ, ದಾನ, ಭೇದವನ್ನು ಬಿಟ್ಟು ಕೇವಲ ದಂಡದಿಂದಲೇ ಕಾರ್ಯಸಾಧಿಸಿಕೊಳ್ಳುವುದು ಒಳ್ಳೆಯದೆಂದು ತಿಳಿಯುತ್ತೇನೆ.॥7॥
ಮೂಲಮ್ - 8
ಇಹ ಪ್ರಾಪ್ತಾನ್ವಯಂ ಸರ್ವಾನ್ ಶತ್ರೂಂಸ್ತವ ಮಹಾಬಲ ।
ವಶೇ ಶಸ್ತ್ರಪ್ರತಾಪೇನ ಕರಿಷ್ಯಾಮೋ ನ ಸಂಶಯಃ ॥
ಅನುವಾದ
ಮಹಾಬಲಿ ರಾಕ್ಷಸರಾಜನೇ! ಇಲ್ಲಿ ನಿಮ್ಮ ಯಾವನೇ ಶತ್ರುಗಳು ಬಂದರೆ ಅವರನ್ನು ನಾವು ಶಸ್ತ್ರಗಳ ಪ್ರತಾಪದಿಂದ ವಶಮಾಡಿಕೊಳ್ಳುವೆವು, ಇದರಲ್ಲಿ ಸಂಶಯವೇ ಬೇಡ.॥8॥
ಮೂಲಮ್ - 9
ಏವಮುಕ್ತಸ್ತದಾ ರಾಜಾ ಮಹಾಪಾರ್ಶ್ವೇನ ರಾವಣಃ ।
ತಸ್ಯ ಸಂಪೂಜಯನ್ ವಾಕ್ಯಮಿದಂ ವಚನಮಬ್ರವೀತ್ ॥
ಅನುವಾದ
ಮಹಾಪಾರ್ಶ್ವನು ಹೀಗೆ ಹೇಳಿದಾಗ ಲಂಕೆಯ ರಾಜಾ ರಾವಣನು ಅವನ ಮಾತನ್ನು ಪ್ರಶಂಸಿಸುತ್ತಾ ಇಂತೆಂದನು.॥9॥
ಮೂಲಮ್ - 10
ಮಹಾಪಾರ್ಶ್ವ ನಿಬೋಧ ತ್ವಂ ರಹಸ್ಯಂ ಕಿಂಚಿದಾತ್ಮನಃ ।
ಚಿರವೃತ್ತಂ ತದಾಖ್ಯಾಸ್ಯೇ ಯದವಾಪ್ತಂ ಪುರಾ ಮಯಾ ॥
ಅನುವಾದ
ಮಹಾಪಾರ್ಶ್ವನೇ! ಬಹಳ ದಿನಗಳ ಹಿಂದೆ ಒಂದು ಘಟನೆ ಘಟಿಸಿತ್ತು. ನನಗೆ ಶಾಪ ಬಂದಿತ್ತು. ನನ್ನ ಜೀವನದ ಈ ಗುಪ್ತ ರಹಸ್ಯವನ್ನು ಇಂದು ನಾನು ತಿಳಿಸುತ್ತಿದ್ದೇನೆ, ಅದನ್ನು ಕೇಳು.॥10॥
ಮೂಲಮ್ - 11
ಪಿತಾಮಹಸ್ಯ ಭವನಂ ಗಚ್ಛಂತೀಂ ಪುಂಜಿಕಸ್ಥಲಾಮ್ ।
ಚಂಚೂರ್ಯಮಾಣಾಮದ್ರಾಕ್ಷಮಾಕಾಶೇಽಗ್ನಿಶಿಖಾಮಿವ ॥
ಅನುವಾದ
ಒಮ್ಮೆ ನಾನು ಆಕಾಶದಲ್ಲಿ ಅಗ್ನಿಶಿಖೆಯಂತೆ ಪ್ರಕಾಶಿಸುತ್ತಿದ್ದ ಪುಂಜಿಕಸ್ಥಲಾ ಎಂಬ ಅಪ್ಸರೆಯನ್ನು ನೋಡಿದೆ. ಅವಳು ಪಿತಾಮಹ ಬ್ರಹ್ಮ ದೇವರ ಭವನಕ್ಕೆ ಹೋಗುತ್ತಿದ್ದಳು. ಆ ಅಪ್ಸರೆ ನನ್ನ ಭಯದಿಂದ ಅಡಗಿ ಮುಚ್ಚಿ ಮುಂದರಿಯುತ್ತಿದ್ದಳು.॥11॥
ಮೂಲಮ್ - 12
ಸಾ ಪ್ರಸಹ್ಯ ಮಯಾ ಭುಕ್ತಾ ಕೃತಾ ವಿವಸನಾ ತತಃ ।
ಸ್ವಯಂಭೂಭವನಂ ಪ್ರಾಪ್ತಾ ಲೋಲಿತಾ ನಲಿನೀ ಯಥಾ ॥
ಅನುವಾದ
ನಾನು ಬಲಾತ್ಕಾರವಾಗಿ ಆಕೆಯ ಬಟ್ಟೆ ಬಿಚ್ಚಿ ಹಠಾತ್ತಾಗಿ ಆಕೆಯನ್ನು ಉಪಭೋಗಿಸಿದೆನು. ಬಳಿಕ ಅವಳು ಬ್ರಹ್ಮ ದೇವರ ಭವನಕ್ಕೆ ಹೋದಳು. ಆಕೆಯ ಸ್ಥಿತಿ ಆನೆಯು ಕಿವುಚಿ ಎಸೆದ ಕಮಲದಂತೆ ಆಗಿತ್ತು.॥12॥
ಮೂಲಮ್ - 13
ತಸ್ಯ ತಚ್ಚ ತಥಾ ಮನ್ಯೇ ಜ್ಞಾತಮಾಸೀನ್ಮಹಾತ್ಮನಃ ।
ಅಥ ಸಂಕುಪಿತೋ ವೇಧಾ ಮಾಮಿದಂ ವಾಕ್ಯಮಬ್ರವೀತ್ ॥
ಅನುವಾದ
ನಾನು ಮಾಡಿದ ಆಕೆಯ ದುರ್ದಶೆಯು ಪಿತಾಮಹ ಬ್ರಹ್ಮದೇವರಿಗೆ ತಿಳಿದುಹೋಯಿತೆಂದು ನಾನು ತಿಳಿಯುತ್ತೇನೆ. ಇದರಿಂದ ಅವರು ಅತ್ಯಂತ ಕುಪಿತರಾಗಿ ನನ್ನಲ್ಲಿ ಈ ಪ್ರಕಾರ ಹೇಳಿದರು.॥13॥
ಮೂಲಮ್ - 14
ಅದ್ಯಪ್ರಭೃತಿ ಯಾಮನ್ಯಾಂ ಬಲಾನ್ನಾರೀಂ ಗಮಿಷ್ಯಸಿ ।
ತದಾ ತೇ ಶತಧಾ ಮೂರ್ಧಾ ಫಲಿಷ್ಯತಿ ನ ಸಂಶಯಃ ॥
ಅನುವಾದ
‘ಇಂದಿನಿಂದ ನೀನು ಯಾವುದೇ ಪರನಾರಿಯೊಂದಿಗೆ ಬಲವಂತವಾಗಿ ಸಮಾಗಮ ಮಾಡಿದರೆ ನಿನ್ನ ತಲೆಯು ನೂರು ಹೋಳಾಗಲಿ’ ಇದರಲ್ಲಿ ಸಂಶಯವೇ ಇಲ್ಲ.॥14॥
ಮೂಲಮ್ - 15
ಇತ್ಯಹಂ ತಸ್ಯ ಶಾಪಸ್ಯ ಭೀತಃ ಪ್ರಸಭಮೇವ ತಾಮ್ ।
ನಾರೋಹಯೇ ಬಲಾತ್ಸೀತಾಂ ವೈದೇಹೀಂ ಶಯನೇ ಶುಭೇ ॥
ಅನುವಾದ
ಹೀಗೆ ನಾನು ಬ್ರಹ್ಮ ದೇವರ ಶಾಪದಿಂದ ಭಯಭೀತನಾಗಿದ್ದೇನೆ. ಆದ್ದರಿಂದ ನನ್ನ ಶುಭಶಯ್ಯೆಯಲ್ಲಿ ವಿದೇಹಕುಮಾರಿ ಸೀತೆಯನ್ನು ಬಲಾತ್ಕಾರವಾಗಿ ಮಲಗಿಸುವುದಿಲ್ಲ.॥15॥
ಮೂಲಮ್ - 16
ಸಾಗರಸ್ಯೇವ ಮೇ ವೇಗೋ ಮಾರುತಸ್ಯೇವ ಮೇ ಗತಿಃ ।
ನೈತದ್ದಾಶರಥಿರ್ವೇದ ಹ್ಯಾಸಾದಯತಿ ತೇನ ಮಾಮ್ ॥
ಅನುವಾದ
ನನ್ನ ವೇಗವು ಸಮುದ್ರದಂತೆ ಇದ್ದು, ನನ್ನ ಗತಿ ವಾಯುವಿನಂತೆ ಇದೆ. ಈ ಮಾತನ್ನು ದಶರಥ ನಂದನ ರಾಮನಿಗೆ ತಿಳಿದಿಲ್ಲ. ಆದ್ದರಿಂದ ಅವನು ನನ್ನ ಮೇಲೆ ಆಕ್ರಮಣ ಮಾಡುತ್ತಿದ್ದಾನೆ.॥16॥
ಮೂಲಮ್ - 17
ಕೋ ಹಿ ಸಿಂಹಮಿವಾಸೀನಂ ಸುಪ್ತಂ ಗಿರಿಗುಹಾಶಯೇ ।
ಕ್ರುದ್ಧಂ ಮೃತ್ಯುಮಿವಾಸೀನಂ ಪ್ರಬೋಧಯಿತುಮಿಚ್ಛತಿ ॥
ಅನುವಾದ
ಇಲ್ಲದಿದ್ದರೆ, ಪರ್ವತದ ಕಂದರದಲ್ಲಿ ಸುಖವಾಗಿ ಮಲಗಿದ ಸಿಂಹದಂತೆ ಹಾಗೂ ಕುಪಿತನಾಗಿ ಕುಳಿತಿದ್ದ ಮೃತ್ಯುವಿನಂತೆ ಭಯಂಕರ ರಾವಣನಾದ ನನ್ನನ್ನು ಎಚ್ಚರಿಸಲು ಯಾರು ತಾನೇ ಬಯಸುವನು.॥17॥
ಮೂಲಮ್ - 18
ನ ಮತ್ತೋ ನಿರ್ಗತಾನ್ ಬಾಣಾನ್ ದ್ವಿಜಿಹ್ವಾನ್ ಪನ್ನಗಾನಿವ ।
ರಾಮಃ ಪಶ್ಯತಿ ಸಂಗ್ರಾಮೇ ತೇನ ಮಾಮಭಿಗಚ್ಛತಿ ॥
ಅನುವಾದ
ನಾನು ಧನುಸ್ಸಿನಿಂದ ಬಿಟ್ಟಿರುವ ಎರಡು ನಾಲಿಗೆಗಳುಳ್ಳ ಸರ್ಪದಂತೆ ಭಯಂಕರ ಬಾಣಗಳನ್ನು ರಣರಂಗದಲ್ಲಿ ರಾಮನು ಎಂದೂ ನೋಡಿಲ್ಲ; ಇದರಿಂದಾಗಿಯೇ ಅವನು ನನ್ನ ಮೇಲೆ ಆಕ್ರಮಣ ಮಾಡುತ್ತಿದ್ದಾನೆ.॥18॥
ಮೂಲಮ್ - 19
ಕ್ಷಿಪ್ರಂ ವಜ್ರೋಪಮೈರ್ಬಾಣೈಃ ಶತಧಾ ಕಾರ್ಮುಕಚ್ಯುತೈಃ ।
ರಾಮಮಾದೀಪಯಿಷ್ಯಾಮಿ ಉಲ್ಕಾಭಿರಿವ ಕುಂಜರಮ್ ॥
ಅನುವಾದ
ನಾನು ನನ್ನ ಧನುಸ್ಸಿನಿಂದ ಶೀಘ್ರವಾಗಿ ಬಿಟ್ಟಿರುವ ನೂರಾರು ವಜ್ರದಂತಹ ಬಾಣಗಳಿಂದ ಆನೆಯನ್ನು ಓಡಿಸಲು ಉಲ್ಕೆಗಳನ್ನು ಜನರು ಉರಿಸುವಂತೆ, ರಾಮನನ್ನು ಸುಟ್ಟುಬಿಡುವೆನು.॥19॥
ಮೂಲಮ್ - 20
ತಚ್ಚಾಸ್ಯ ಬಲಮಾದಾಸ್ಯೇ ಬಲೇನ ಮಹತಾ ವೃತಃ ।
ಉದಿತಃ ಸವಿತಾ ಕಾಲೇ ನಕ್ಷತ್ರಾಣಾಂ ಪ್ರಭಾಮಿವ ॥
ಅನುವಾದ
ಪ್ರಾತಃಕಾಲದಲ್ಲಿ ಉದಯಿಸಿದ ಸೂರ್ಯನು ನಕ್ಷತ್ರಗಳ ಪ್ರಭೆಯನ್ನು ಕಿತ್ತುಕೊಳ್ಳುವಂತೆ, ನನ್ನ ವಿಶಾಲ ಸೈನ್ಯದಿಂದ ಸುತ್ತುವರಿದ ನಾನು ಅವನ ವಾನರ ಸೈನ್ಯವನ್ನು ನಿರ್ನಾಮ ಮಾಡಿಬಿಡುವೆನು.॥20॥
ಮೂಲಮ್ - 21
ನ ವಾಸವೇನಾಪಿ ಸಹಸ್ರಚಕ್ಷುಷಾ
ಯುಧಾಸ್ಮಿ ಶಕ್ಯೋ ವರುಣೇನ ವಾ ಪುನಃ ।
ಮಯಾ ತ್ವಿಯಂ ಬಾಹುಬಲೇನ ನಿರ್ಜಿತಾ
ಪುರಾ ಪುರೀ ವೈಶ್ರವಣೇನ ಪಾಲಿತಾ ॥
ಅನುವಾದ
ಸಾವಿರ ಕಣ್ಣುಗಳುಳ್ಳ ಇಂದ್ರ ಮತ್ತು ವರುಣನೂ ಕೂಡ ಯುದ್ಧದಲ್ಲಿ ನನ್ನ ಎದುರಿಗೆ ನಿಲ್ಲಲಾರರು. ಹಿಂದೆ ಕುಬೇರನು ಪಾಲಿಸುತ್ತಿದ್ದ ಈ ಲಂಕಾಪುರಿಯನ್ನು ನಾನು ನನ್ನ ಬಾಹುಬಲದಿಂದ ಗೆದ್ದುಕೊಂಡಿದ್ದೆ.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿಮೂರನೆಯ ಸರ್ಗ ಪೂರ್ಣವಾಯಿತು.॥13॥