०१२ रावणेन प्रहस्तप्रेषणम्

वाचनम्
ಭಾಗಸೂಚನಾ

ನಗರ ರಕ್ಷಣೆಗಾಗಿ ಸೈನಿಕರ ನಿಯುಕ್ತಿ, ರಾವಣನು ಸೀತೆಯ ಕುರಿತು ತನ್ನ ಆಸಕ್ತಿಯನ್ನು ತಿಳಿಸಿ, ಆಕೆಯ ಹರಣದ ಪ್ರಸಂಗವನ್ನು ಹೇಳಿ, ಭಾವೀ ಕರ್ತವ್ಯಕ್ಕಾಗಿ ಸಭಾಸದರ ಸಮ್ಮತಿ ಬಯಸಿದುದು, ಕುಂಭಕರ್ಣನು ಮೊದಲಿಗೆ ಅವನನ್ನು ಗದರಿಸಿ, ಮತ್ತೆ ಸಮಸ್ತ ಶತ್ರುಗಳನ್ನು ವಧಿಸುವ ಹೊಣೆಯನ್ನು ಹೊತ್ತುಕೊಂಡಿದುದು

ಮೂಲಮ್ - 1

ಸ ತಾಂ ಪರಿಷದಂ ಕೃತ್ನಾಂ ಸಮೀಕ್ಷ್ಯಸಮಿತಿಂಜಯಃ ।
ಪ್ರಚೋದಯಾಮಾಸ ತದಾ ಪ್ರಹಸ್ತಂ ವಾಹಿನೀಪತಿಮ್ ॥

ಅನುವಾದ

ಶತ್ರುವಿಜಯಿ ರಾವಣನು ಆ ಸಂಪೂರ್ಣ ಸಭೆಯ ಕಡೆಗೆ ದೃಷ್ಟಿಪಾತ ಮಾಡಿ ಸೇನಾಪತಿ ಪ್ರಹಸ್ತನಿಗೆ ಆಗ ಹೀಗೆ ಆದೇಶಿಸಿದನು .॥1॥

ಮೂಲಮ್ - 2

ಸೇನಾಪತೇ ಯಥಾ ತೇ ಸ್ಯುಃ ಕೃತವಿದ್ಯಾಶ್ಚತುರ್ವಿಧಾಃ ।
ಯೋಧಾ ನಗರರಕ್ಷಾಯಾಂ ತಥಾ ವ್ಯಾದೇಷ್ಟುಮರ್ಹಸಿ ॥

ಅನುವಾದ

ಸೇನಾಪತಿಯೇ! ಅಸ್ತ್ರವಿದ್ಯಾ ಪಾರಂಗತರಾದ ರಥೀ, ಕುದುರೆ ಸವಾರರು, ಆನೆ ಸವಾರರು ಮತ್ತು ಕಾಲಾಳುಗಳಾದಿ ಯೋಧರಿಗೆ ನಗರ ರಕ್ಷಣೆಯಲ್ಲಿ ತತ್ಪರರಾಗಿರುವಂತೆ ಸೈನಿಕರಿಗೆ ಆಜ್ಞಾಪಿಸು.॥2॥

ಮೂಲಮ್ - 3

ಸ ಪ್ರಹಸ್ತಃ ಪ್ರಣೀತಾತ್ಮಾ ಚಕೀರ್ಷನ್ ರಾಜಶಾಸನಮ್ ।
ವಿನಿಕ್ಷಿಪದ್ ಬಲಂ ಸರ್ವಂ ಬಹಿರಂತಶ್ಚ ಮಂದಿರೇ ॥

ಅನುವಾದ

ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟಿದ್ದ ಪ್ರಹಸ್ತನು ರಾಜನ ಆದೇಶವನ್ನು ಪಾಲಿಸುವ ಇಚ್ಛೆಯಿಂದ ಎಲ್ಲ ಸೈನ್ಯಕ್ಕೆ ನಗರದ ಹೊರಗೆ ಮತ್ತು ಒಳಗೆ ಯಥಾಯೋಗ್ಯ ಸ್ಥಾನಗಳಲ್ಲಿ ನಿಯುಕ್ತಗೊಳಿಸಿದನು.॥3॥

ಮೂಲಮ್ - 4

ತತೋ ವಿನಿಕ್ಷಿಪ್ಯ ಬಲಂ ಸರ್ವಂ ನಗರಗುಪ್ತಯೇ ।
ಪ್ರಹಸ್ತಃ ಪ್ರಮುಖೇ ರಾಜ್ಞೋ ನಿಷಸಾದ ಜಗಾದ ಚ ॥

ಅನುವಾದ

ನಗರದ ರಕ್ಷಣೆಗಾಗಿ ಎಲ್ಲ ಸೈನ್ಯವನ್ನು ನಿಯಮಿಸಿ ಪ್ರಹಸ್ತನು ರಾಜಾ ರಾವಣನ ಎದುರಿಗೆ ಬಂದು ಕುಳಿತು ಹೀಗೆ ನುಡಿದನು.॥.॥

ಮೂಲಮ್ - 5

ನಿಹಿತಂ ಬಹಿರಂತಶ್ಚ ಬಲಂ ಬಲವತಸ್ತವ ।
ಕುರಷ್ವಾವಿಮನಾಃ ಕ್ಷಿಪ್ರಂ ಯದಭಿಪ್ರೇತಮಸ್ತಿ ತೇ ॥

ಅನುವಾದ

ರಾಕ್ಷಸ ರಾಜನೇ! ಮಹಾಬಲಿ ರಾಜರಾದ ನಿಮ್ಮ ಸೈನ್ಯವನ್ನು ನಾನು ನಗರದ ಹೊರಗೆ-ಒಳಗೆ ಯಥಾ ಸ್ಥಾನಗಳಲ್ಲಿ ನಿಯುಕ್ತಗೊಳಿಸಿರುವೆನು. ಈಗ ನೀವು ನೆಮ್ಮದಿಯಾಗಿ ಇದ್ದು, ತಮ್ಮ ಅಭೀಷ್ಟ ಕಾರ್ಯವನ್ನು ನೆರವೇರಿಸಿರಿ.॥.॥

ಮೂಲಮ್ - 6

ಪ್ರಹಸ್ತಸ್ಯ ವಚಃ ಶ್ರುತ್ವಾ ರಾಜಾ ರಾಜ್ಯಹಿತೈಷಿಣಃ ।
ಸುಖೇಪ್ಸುಃ ಸುಹೃದಾಂ ಮಧ್ಯೇ ವ್ಯಾಜಹಾರ ಸ ರಾವಣಃ ॥

ಅನುವಾದ

ರಾಜ್ಯದ ಹಿತವನ್ನು ಬಯಸುವ ಪ್ರಹಸ್ತನ ಈ ಮಾತನ್ನು ಕೇಳಿ ತನ್ನ ಸುಖವನ್ನು ಬಯಸುವ ರಾವಣನು ಸುಹೃದರ ನಡುವೆ ಹೀಗೆ ಹೇಳಿದನು.॥.॥

ಮೂಲಮ್ - 7

ಪ್ರಿಯಾಪ್ರಿಯೇ ಸುಖೇ ದುಃಖೇ ಲಾಭಾಲಾಭೇ ಹಿತಾಹಿತೇ ।
ಧರ್ಮಕಾಮಾರ್ಥಕೃಚ್ಛ್ರೇಷು ಯೂಯಮರ್ಹಥ ವೇದಿತುಮ್ ॥

ಅನುವಾದ

ಸಭಾಸದರೇ! ಧರ್ಮ, ಅರ್ಥ ಮತ್ತು ಕಾಮ ವಿಷಯಕ ಸಂಕಟ ಉಪಸ್ಥಿತವಾದಾಗ, ಪ್ರಿಯ-ಅಪ್ರಿಯ, ಸುಖ-ದುಃಖ, ಲಾಭ-ಹಾನಿ ಮತ್ತು ಹಿತಾಹಿತದ ವಿಚಾರ ಮಾಡುವುದರಲ್ಲಿ ನೀವು ಸಮರ್ಥರಿದ್ದೀರಿ.॥7॥

ಮೂಲಮ್ - 8

ಸರ್ವಕೃತ್ಯಾನಿ ಯುಷ್ಮಾಭಿಃ ಸಮಾರಬ್ಧಾನಿ ಸರ್ವದಾ ।
ಮಂತ್ರಕರ್ಮನಿಯುಕ್ತಾನಿ ನ ಜಾತು ವಿಲಾನಿ ಮೇ ॥

ಅನುವಾದ

ನೀವು ಸದಾ ಪರಸ್ಪರ ವಿಚಾರ ಮಾಡಿ ಯಾವ ಯಾವ ಕಾರ್ಯವನ್ನು ಪ್ರಾರಂಭಿಸಿರುವಿರೋ ಅವೆಲ್ಲವೂ ನನಗಾಗಿ ಎಂದೂ ನಿಷ್ಫಲವಾಗಲಿಲ್ಲ.॥8॥

ಮೂಲಮ್ - 9

ಸಸೋಮಗ್ರಹನಕ್ಷತ್ರೈರ್ಮರುದ್ಭಿರಿವ ವಾಸವಃ ।
ಭವದ್ಭಿರಹಮತ್ಯರ್ಥಂ ವೃತ್ತಃ ಶ್ರಿಯಮವಾಪ್ನುಯಾಮ್ ॥

ಅನುವಾದ

ಚಂದ್ರ, ಗ್ರಹ-ನಕ್ಷತ್ರಗಳ ಸಹಿತ ಮರುದ್ಗಣರಿಂದ ಸುತ್ತು ವರೆದು ಇಂದ್ರನು ಸ್ವರ್ಗದ ಸಂಪತ್ತನ್ನು ಅನುಭವಿಸುವಂತೆ, ನಿಮ್ಮಿಂದ ಸುತ್ತುವರಿದ ನಾನೂ ಕೂಡ ಲಂಕೆಯ ವಿಪುಲ ರಾಜ್ಯಲಕ್ಷ್ಮಿಯ ಸುಖವನ್ನು ಭೋಗಿಸುತ್ತಾ ಇರಬೇಕೆಂಬ ಅಭಿಲಾಷೆ ನನ್ನದು.॥.॥

ಮೂಲಮ್ - 10

ಅಹಂ ತು ಖಲು ಸರ್ವಾನ್ವಃ ಸಮರ್ಥಯಿತುಮುದ್ಯತಃ ।
ಕುಂಭಕರ್ಣಸ್ಯ ತು ಸ್ವಪ್ನಾನ್ನೇಮಮರ್ಥಮಚೋದಯಮ್ ॥

ಅನುವಾದ

ನಾನು ಮಾಡಿದ ಕಾರ್ಯವನ್ನು ಮೊದಲೇ ನಿಮ್ಮೆಲ್ಲರ ಮುಂದೆ ಇಟ್ಟು ನಿಮ್ಮಿಂದ ಅದರ ಸಮರ್ಥನೆ ಬಯಸುತ್ತಿದ್ದೆ. ಆದರೆ ಆಗ ಕುಂಭಕರ್ಣನು ಮಲಗಿದ್ದನು, ಅದರಿಂದ ನಾನು ಅದರ ಚರ್ಚೆ ಮಾಡಲಿಲ್ಲ.॥10॥

ಮೂಲಮ್ - 11

ಅಯಂ ಹಿ ಸುಪ್ತಃ ಷಣ್ಮಾಸಾನ್ ಕುಂಭಕರ್ಣೋ ಮಹಾಬಲಃ ।
ಸರ್ವಶಸ್ತ್ರಭೃತಾಂ ಮುಖ್ಯಃ ಸ ಇದಾನೀಂ ಸಮುತ್ಥಿತಃ ॥

ಅನುವಾದ

ಸಮಸ್ತ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಮಹಾಬಲಿ ಕುಂಭಕರ್ಣನು ಆರು ತಿಂಗಳಿನಿಂದ ಮಲಗಿದ್ದನು. ಈಗ ಅವನು ಎಚ್ಚರಗೊಂಡಿರುವನು.॥11॥

ಮೂಲಮ್ - 12

ಇಯಂ ಚ ದಂಡಕಾರಣ್ಯಾದ್ ರಾಮಸ್ಯ ಮಹಿಷೀ ಪ್ರಿಯಾ ।
ರಕ್ಷೋಭಿಶ್ಚರಿತಾದ್ದೇಶಾದಾನೀತಾ ಜನಕಾತ್ಮಜಾ ॥

ಅನುವಾದ

ರಾಕ್ಷಸರು ವಿಚರಿಸುವ ದಂಡಕಾರಣ್ಯದಿಂದ ನಾನು ರಾಮನ ಪ್ರಿಯರಾಣಿ ಜನಕನಂದಿನೀ ಸೀತೆಯನ್ನು ಕದ್ದು ತಂದಿರುವೆನು.॥12॥

ಮೂಲಮ್ - 13

ಸಾ ಮೇ ನ ಶಯ್ಯಾಮಾರೋಢುಮಿಚ್ಛತ್ಯಲಸಗಾಮಿನೀ ।
ತ್ರಿಷು ಲೋಕೇಷು ಚಾನ್ಯಾ ಮೇ ನ ಸೀತಾಸದೃಶೀ ತಥಾ ॥

ಅನುವಾದ

ಆದರೆ ಆ ಮಂದಗಾಮಿನಿ ಸೀತೆಯು ನನ್ನ ಶಯ್ಯೆಯಲ್ಲಿ ಆರೂಢಳಾಗಲು ಬಯಸುತ್ತಿಲ್ಲ. ನನ್ನ ದೃಷ್ಟಿಯಲ್ಲಿ ಮೂರು ಲೋಕಗಳಲ್ಲಿ ಸೀತೆಯಂತಹ ಸುಂದರ ಸ್ತ್ರೀಯು ಯಾರೂ ಇಲ್ಲ.॥13॥

ಮೂಲಮ್ - 14

ತನುಮಧ್ಯಾ ಪೃಥುಶ್ರೋಣೀ ಶರದಿಂದುನಿಭಾನನಾ ।
ಹೇಮಬಿಂಬನಿಭಾ ಸೌಮ್ಯಾ ಮಾಯೇವ ಮಯನಿರ್ಮಿತಾ ॥

ಅನುವಾದ

ಆಕೆಯ ಕಟಿಯು ಸುಂದರವಾಗಿದ್ದು, ಕಟಿಯ ಹಿಂಭಾಗ ಸ್ಥೂಲವಾಗಿದೆ. ಮುಖವು ಶರತ್ಕಾಲದ ಚಂದ್ರನನ್ನು ನಾಚಿಸುವಂತಿದೆ. ಆ ಸೌಮ್ಯರೂಪ, ಸೌಮ್ಯ ಸ್ವಭಾವವುಳ್ಳ ಸೀತೆಯು ಬಂಗಾರದಿಂದ ಮಾಡಿದ ಪ್ರತಿಮೆಯಂತೆ ಇದ್ದಾಳೆ. ಅವಳು ಮಯಾಸುರನು ರಚಿಸಿದ ಯಾವುದೋ ಮಾಯೆಯಂತೆ ಅನಿಸುತ್ತದೆ.॥14॥

ಮೂಲಮ್ - 15

ಸುಲೋಹಿತತಲೌ ಶ್ಲಕ್ಷ್ಣೌ ಚರಣೌ ಸುಪ್ರತಿಷ್ಠಿತೌ ।
ದೃಷ್ಟ್ವಾ ತಾಮ್ರನಖೌ ತಸ್ಯಾ ದೀಪ್ಯತೇ ಮೇ ಶರೀರಜಃ ॥

ಅನುವಾದ

ಆಕೆಯ ಅಂಗಾಲುಗಳು ಕೆಂಪಾಗಿವೆ. ಎರಡೂ ಕಾಲುಗಳು ಸುಂದರ ವಾಗಿ ನುಣುಪಾಗಿ ಇದ್ದು, ಕಾಲಿನ ಉಗುರುಗಳು ತಾಮ್ರ ದಂತೆ ಕೆಂಪಾಗಿವೆ. ಸೀತೆಯ ಆ ಚರಣಗಳನ್ನು ನೋಡಿ ನನ್ನ ಕಾಮಾಗ್ನಿಯು ಪ್ರಜ್ವಲಿತವಾಗುತ್ತಿದೆ.॥15॥

ಮೂಲಮ್ - 16½

ಹುತಾಗ್ನೇರರ್ಚಿಸಂಕಾಶಾಮೇನಾಂ ಸೌರೀಮಿವ ಪ್ರಭಾಮ್ ।
ಉನ್ನಸಂ ವಿಮಲಂ ವಲ್ಗು ವದನಂ ಚಾರುಲೋಚನಮ್ ॥
ಪಶ್ಯಂಸ್ತದವಶಸ್ತಸ್ಯಾಃ ಕಾಮಸ್ಯ ವಶಮೇಯಿವಾನ್ ।

ಅನುವಾದ

ತುಪ್ಪದ ಆಹುತಿ ಹಾಕಿದ ಅಗ್ನಿಯ ಜ್ವಾಲೆಯಂತೆ ಹಾಗೂ ಸೂರ್ಯ ಪ್ರಭೆಯಂತೆ ತೇಜಸ್ವಿನೀ ಸೀತೆಯನ್ನು ನೋಡಿ, ಉಬ್ಬಿದ ಮೂಗು ಮತ್ತು ವಿಶಾಲ ನೇತ್ರಗಳಿಂದ ಸುಶೋಭಿತವಾಗಿರುವ ಆಕೆಯ ನಿರ್ಮಲ ಮನೋಹರ ಮುಖವನ್ನು ಅವಲೋಕಿಸಿ ನಾನು ಪರಾಧೀನನಾಗಿದ್ದೇನೆ. ಕಾಮವು ನನ್ನನ್ನು ಸ್ವಾಧೀನಪಡಿಸಿಕೊಂಡಿವೆ.॥16॥

ಮೂಲಮ್ - 17½

ಕ್ರೋಧಹರ್ಷ ಸಮಾನೇನ ದುರ್ವರ್ಣಕರಣೇನ ಚ ॥
ಶೋಕಸಂತಾಪನಿತ್ಯೇನ ಕಾಮೇನ ಕಲುಷೀಕೃತಃ ।

ಅನುವಾದ

ಕ್ರೋಧ ಮತ್ತು ಹರ್ಷ ಎರಡೂ ಅವಸ್ಥೆಗಳಲ್ಲಿ ಸಮಾನವಾಗಿ ಇರುತ್ತದೆ. ಶರೀರದ ಕಾಂತಿ ಮಂಕಾಗಿಸಿದೆ. ಶೋಕ ಮತ್ತು ಸಂತಾಪಗಳು ಮನಸ್ಸಿನಿಂದ ಎಂದೂ ದೂರವಾಗುವುದಿಲ್ಲ. ಆ ಕಾಮವು ನನ್ನ ಹೃದಯವನ್ನು ಕಲುಷಿತಗೊಳಿಸಿದೆ.॥17॥

ಮೂಲಮ್ - 18

ಸಾ ತು ಸಂವತ್ಸರಂ ಕಾಲಂ ಮಾಮಯಾಚತ ಭಾಮಿನೀ ॥

ಮೂಲಮ್ - 19

ಪ್ರತೀಕ್ಷಮಾಣಾ ಭರ್ತಾರಂ ರಾಮಮಾಯತಲೋಚನಾ ।
ತನ್ಮಯಾ ಚಾರು ನೇತ್ರಾಯಾಃ ಪ್ರತಿಜ್ಞಾತಂ ವಚಃ ಶುಭಮ್ ॥

ಅನುವಾದ

ವಿಶಾಲನೇತ್ರವುಳ್ಳ ಮಾನನೀ ಸೀತೆಯು ನನ್ನಲ್ಲಿ ಒಂದು ವರ್ಷದ ಸಮಯ ಕೇಳಿದ್ದಾಳೆ. ಅಷ್ಟರವರೆಗೆ ಅವಳು ತನ್ನ ಪತಿ ಶ್ರೀರಾಮನ ಪ್ರತಿಕ್ಷೆ ಮಾಡುವಳು. ಮನೋಹರ ಕಣ್ಣುಗಳುಳ್ಳ ಸೀತೆಯ ಆ ಸುಂದರ ವಚನವನ್ನು ಕೇಳಿ ಆಕೆಗೆ ಪೂರ್ಣಗೊಳಿಸುವ ಪ್ರತಿಜ್ಞೆ ಮಾಡಿದ್ದೇನೆ..॥18-19॥

ಟಿಪ್ಪನೀ
  • ಇಲ್ಲಿ ರಾವಣನು ಸಭಾಸದರ ಮುಂದೆ ತನ್ನ ಸುಳ್ಳು ಉದಾರತೆ ತೋರಿಸಲು ಸರ್ವಥಾ ಸುಳ್ಳು ಹೇಳಿರುವನು. ಸೀತೆಯು ‘ನನಗೆ ಒಂದು ವರ್ಷ ಸಮಯ ಕೊಡು, ಅಷ್ಟು ದಿನಗಳಲ್ಲಿ ಶ್ರೀರಾಮನು ಬಾರದಿದ್ದರೆ ನಾನು ನಿನ್ನವಳಾಗುವೆನು’ ಎಂದು ಹೇಳಿರಲಿಲ್ಲ. ಸೀತೆಯಾದರೋ ಸದಾ ತಿರಸ್ಕಾರಪೂರ್ವಕ ಅವನ ಜಘನ್ಯ ಪ್ರಸ್ತಾಪವನ್ನು ಅಲ್ಲಗಳೆದಿದ್ದಳು. ಇವನೇ ಸ್ವತಃ ತನ್ನ ಕಡೆಯಿಂದ ಆಕೆಗೆ ಒಂದು ವರ್ಷದ ಅವಕಾಶ ಕೊಟ್ಟಿದ್ದನು. (ನೋಡಿ ಅರಣ್ಯಕಾಂಡ ಸರ್ಗ 56 ಶ್ಲೋಕ 24-25)
ಮೂಲಮ್ - 20½

ಭ್ರಾಂತೋಽಹಂ ಸತತಂ ಕಾಮಾದ್ಯಾತೋ ಹಯ ಇವಾಧ್ವನಿ ।
ಕಥಂ ಸಾಗರಮಕ್ಷೋಭ್ಯಂ ತರಿಷ್ಯಂತಿ ವನೌಕಸಃ ॥
ಬಹುಸತ್ತ್ವಝುಷಾಕೀರ್ಣಂ ತೌ ವಾ ದಶರಥಾತ್ಮಜೌ ।

ಅನುವಾದ

ದೂರದ ದಾರಿಯನ್ನು ನಡೆದು-ನಡೆದು ಕುದುರೆ ಬಳಲಿ ಹೋಗುವಂತೆ ನಾನೂ ಕೂಡ ಕಾಮಪೀಡೆಯಿಂದ ಬಳಲಿಕೆಯನ್ನು ಅನುಭವಿಸುತ್ತಿದ್ದೇನೆ. ಹಾಗಂತ ನನಗೆ ಶತ್ರುಗಳ ಕಡೆಯಿಂದ ಯಾವುದೇ ಭಯವಿಲ್ಲ; ಏಕೆಂದರೆ ಆ ವನವಾಸೀ ವಾನರರು ಅಥವಾ ಆ ಇಬ್ಬರೂ ದಶರಥಕುಮಾರ ಶ್ರೀರಾಮ ಮತ್ತು ಲಕ್ಷ್ಮಣರು ಅಸಂಖ್ಯ ಜಲ-ಜಂತುಗಳಿಂದ ಹಾಗೂ ಮೀನುಗಳಿಂದ ತುಂಬಿದ ಅಲಂಘ್ಯ ಮಹಾಸಾಗರವನ್ನು ಹೇಗೆ ತಾನೇ ದಾಟಬಲ್ಲರು.॥20॥

ಮೂಲಮ್ - 21

ಅಥವಾ ಕಪಿನೈಕೇನ ಕೃತಂ ನಃ ಕದನಂ ಮಹತ್ ॥

ಮೂಲಮ್ - 22

ದುರ್ಜ್ಞೇಯಾಃ ಕಾರ್ಯಗತಯೋ ಬ್ರೂತ ಯಸ್ಯ ಯಥಾಮತಿ ।
ಮಾನುಷಾನ್ನೋ ಭಯಂ ನಾಸ್ತಿ ತಥಾಪಿ ತು ವಿಮೃಶ್ಯತಾಮ್ ॥

ಅನುವಾದ

ಅಥವಾ ಒಂದೇ ವಾನರನು ಬಂದು ನಮ್ಮಲ್ಲಿ ಮಹಾನ್ ಸಂಹಾರ ನಡೆಸಿದ್ದನು. ಅದಕ್ಕಾಗಿ ಕಾರ್ಯಸಿದ್ಧಿಯ ಉಪಾಯ ಗಳನ್ನು ತಿಳಿದುಕೊಳ್ಳುವುದು ಅತ್ಯಂತ ಕಠಿಣವಾಗಿದೆ. ಆದ್ದರಿಂದ ತಮ್ಮ ಬುದ್ಧಿಗನುಸಾರ ಯಾರಿಗೆ ಹೇಗೆ ಉಚಿತವೆಂದು ತೋರುವುದೋ ಹಾಗೆಯೇ ತಿಳಿಸಿರಿ. ನೀವೆಲ್ಲರೂ ತಮ್ಮ ವಿಚಾರವನ್ನು ಅವಶ್ಯವಾಗಿ ವ್ಯಕ್ತಪಡಿಸಿರಿ. ನಮಗೆ ಮನುಷ್ಯನಿಂದ ಯಾವುದೇ ಭಯವಿಲ್ಲದ್ದರೂ, ನೀವು ವಿಜಯದ ಉಪಾಯದಲ್ಲಿ ವಿಚಾರ ಮಾಡಲೇಬೇಕು.॥21-2.॥

ಮೂಲಮ್ - 23

ತದಾ ದೇವಾಸುರೇ ಯುದ್ಧೇ ಯುಷ್ಮಾಭಿಃ ಸಹಿತೋಽಜಯಮ್ ।
ತೇ ಮೇ ಭವಂತಶ್ಚ ತಥಾ ಸುಗ್ರೀವಪ್ರಮುಖಾನ್ಹರೀನ್ ॥

ಮೂಲಮ್ - 24

ಪರೇ ಪಾರೇ ಸಮುದ್ರಸ್ಯ ಪುರಸ್ಕೃತ್ಯ ನೃಪಾತ್ಮಜೌ ।
ಸೀತಾಯಾಃ ಪದವೀಂ ಪ್ರಾಪ್ಯ ಸಂಪ್ರಾಪ್ತೌ ವರುಣಾಲಯಮ್ ॥

ಅನುವಾದ

ಹಿಂದೆ ದೇವತೆಗಳ ಮತ್ತು ಅಸುರರ ಯುದ್ಧ ನಡೆದಾಗ ನಿಮ್ಮೆಲ್ಲರ ಸಹಾಯದಿಂದಲೇ ನಾನು ವಿಜಯವನ್ನು ಪಡೆದಿದ್ದೆ. ಇಂದೂ ಕೂಡ ನೀವು ಹಾಗೆಯೇ ನನ್ನ ಸಹಾಯಕರಾಗಿದ್ದೀರಿ. ಆ ಇಬ್ಬರು ರಾಜಕುಮಾರರು ಸೀತೆಯ ಇರುವಿಕೆಯನ್ನು ಕಂಡು ಹಿಡಿದು ಸುಗ್ರೀವಾದಿ ವಾನರರೊಂದಿಗೆ ಸಮುದ್ರತೀರಕ್ಕೆ ಬಂದು ಬಿಟ್ಟಿದ್ದಾರೆ.॥23-2.॥

ಮೂಲಮ್ - 25

ಅದೇಯಾ ಚ ಯಥಾ ಸೀತಾ ವಧ್ಯೌ ದಶರಥಾತ್ಮಜೌ ।
ಭವದ್ಭ್ರಿರ್ಮಂತ್ರ್ಯತಾಂ ಮಂತ್ರಃ ಸುನೀತಂಚಾಭಿಧೀಯತಾಮ್ ॥

ಅನುವಾದ

ಈಗ ನೀವು ಪರಸ್ಪರ ವಿಚಾರ ಮಾಡಿರಿ ಮತ್ತು ಸೀತೆಯನ್ನು ಮರಳಿಸಿಕೊಡದಂತಹ ಹಾಗೂ ಆ ಇಬ್ಬರೂ ದಶರಥಕುಮಾರರನ್ನು ಕೊಲ್ಲುವಂತಹ ಯಾವುದಾದರೂ ಸುಂದರ ನೀತಿ ರೂಪಿಸಿರಿ.॥2.॥

ಮೂಲಮ್ - 26

ನಹಿ ಶಕ್ತಿಂ ಪ್ರಪಶ್ಯಾಮಿ ಜಗತ್ಯನ್ಯಸ್ಯ ಕಸ್ಯಚಿತ್ ।
ಸಾಗರಂ ವಾರರೈಸ್ತೀರ್ತ್ವಾ ನಿಶ್ಚಯೇನ ಜಯೋ ಮಮ ॥

ಅನುವಾದ

ವಾನರರೊಂದಿಗೆ ಸಮುದ್ರವನ್ನು ದಾಟಿ ಇಲ್ಲಿಯವರೆಗೆ ಬರುವ ಶಕ್ತಿ ಜಗತ್ತಿನಲ್ಲಿ ರಾಮನಿಗಲ್ಲದೆ ಬೇರೆ ಯಾರಲ್ಲಿಯೂ ನಾನು ನೋಡುವುದಿಲ್ಲ. (ಆದರೂ ರಾಮ ಮತ್ತು ವಾನರರು ಇಲ್ಲಿಗೆ ಬಂದರೂ ನನ್ನದೇನೂ ಕೆಡಿಸಲಾರರು) ಆದ್ದರಿಂದ ಜಯವು ನನ್ನದೇ ನಿಶ್ಚಿತವಾಗಿ ಆಗುವುದು.॥2.॥

ಮೂಲಮ್ - 27

ತಸ್ಯ ಕಾಮಪರೀತಸ್ಯ ನಿಶಮ್ಯ ಪರಿದೇವಿತಮ್ ।
ಕುಂಭಕರ್ಣಃ ಪ್ರಚುಕ್ರೋಧ ವಚನಂ ಚೇದಮಬ್ರವೀತ್ ॥

ಅನುವಾದ

ಕಾಮಾತುರ ರಾವಣನ ಈ ಖೇದಪೂರ್ಣ ಪ್ರಲಾಪವನ್ನು ಕೇಳಿ ಕುಂಭಕರ್ಣನಿಗೆ ಕ್ರೋಧ ಬಂತು ಮತ್ತು ಅವನು ಈ ಪ್ರಕಾರ ಹೇಳಿದನು.॥2.॥

ಮೂಲಮ್ - 28

ಯದಾ ತು ರಾಮಸ್ಯ ಸಲಕ್ಷ್ಮಣಸ್ಯ
ಪ್ರಸಹ್ಯ ಸೀತಾ ಖಲು ಸಾ ಇಹಾಹೃತಾ ।
ಸಕೃತ್ಸಮೀಕ್ಷೈವ ಸುನಿಶ್ಚಿತಂ ತದಾ
ಭಜೇತ ಚಿತ್ತಂ ಯಮುನೇವ ಯಾಮುನಮ್ ॥

ಅನುವಾದ

ನೀನು ಲಕ್ಷ್ಮಣ ಸಹಿತ ಶ್ರೀರಾಮನ ಆಶ್ರಮಕ್ಕೆ ಸ್ವತಃ ಮನಸ್ಸಿಗೆ ಬಂದಂತೆ ವಿಚಾರ ಮಾಡಿ ಸೀತೆಯನ್ನು ಇಲ್ಲಿಗೆ ಬಲವಂತವಾಗಿ ಕದ್ದು ತಂದಾಗ ನೀನು ನಮ್ಮೊಂದಿಗೆ ಈ ವಿಷಯದಲ್ಲಿ ಸುನಿಶ್ಚಿತ ವಿಚಾರ ಮಾಡಬೇಕಾಗಿತ್ತು. ಯಮುನೆಯು ಪೃಥಿವಿಯ ಮೇಲೆ ಇಳಿದು ಬರಲು ಹೊರಟಾಗ ಅವಳು ಯಮುನೋತ್ರಿ ಪರ್ವತದ ಕುಂಡ ವಿಶೇಷವನ್ನು ತನ್ನ ಜಲದಿಂದ ಪೂರ್ಣಗೊಳಿಸಿದ್ದಳು. (ಭೂಮಿಗೆ ಬಂದು ಆಕೆಯ ವೇಗವು ಸಮುದ್ರವನ್ನು ಸೇರಿದಾಗ ಶಾಂತವಾಯಿತು. ಅವಳು ಪುನಃ ಆ ಕುಂಡವನ್ನು ತುಂಬಲಾರಳು, ಹಾಗೆಯೇ ನೀನೂ ಕೂಡ ಆಗ ವಿಚಾರ ಮಾಡುವ ಅವಕಾಶವಿದ್ದರೂ ನಮ್ಮೊಂದಿಗೆ ಕುಳಿತು ವಿಚಾರಮಾಡಲಿಲ್ಲ. ಈಗ ಸಮಯ ಕಳೆದು ಹೋಗಿ ಎಲ್ಲ ಕಾರ್ಯ ಕೆಟ್ಟುಹೋದ ಮೇಲೆ ನೀನು ವಿಚಾರ ಮಾಡಲು ಹೊರಟಿರುವೆ..॥28॥

ಮೂಲಮ್ - 29

ಸರ್ವಮೇತನ್ಮಹಾರಾಜ ಕೃತಮಪ್ರತಿಮಂ ತವ ।
ವಿಧೀಯೇತ ಸಹಾಸ್ಮಾಭಿರಾದಾವೇವಾಸ್ಯ ಕರ್ಮಣಃ ॥

ಅನುವಾದ

ಮಹಾರಾಜಾ! ನೀನು ಕಪಟದಿಂದ ಅಡಗಿ ಪರಸ್ತ್ರೀಯ ಅಪಹರಣಾದಿ ಮಾಡಿದ ಎಲ್ಲ ಕಾರ್ಯವು ನಿನಗಾಗಿ ಬಹಳ ಅನುಚಿತವಾಗಿದೆ. ಈ ಪಾಪಕರ್ಮವನ್ನು ಮಾಡುವ ಮೊದಲೇ ನೀನು ನಮ್ಮೊಂದಿಗೆ ವಿಮರ್ಶೆ ಮಾಡಿಕೊಳ್ಳ ಬೇಕಾಗಿತ್ತು.॥29॥

ಮೂಲಮ್ - 30

ನ್ಯಾಯೇನ ರಾಜಕಾರ್ಯಾಣಿಯಃ ಕರೋತಿ ದಶಾನನ ।
ನ ಸ ಸಂತಪ್ಯತೇ ಪಶ್ಚಾನ್ನಿಶ್ಚಿತಾರ್ಥಮತಿರ್ನೃಪಃ ॥

ಅನುವಾದ

ದಶಾನನನೇ! ಎಲ್ಲ ರಾಜಕಾರ್ಯಗಳನ್ನು ನ್ಯಾಯಪೂರ್ವಕ ಮಾಡಿದ ರಾಜನಿಗೆ, ಅವನ ಬುದ್ಧಿ ನಿಶ್ಚಯಪೂರ್ಣವಾದ್ದರಿಂದ ಕೊನೆಗೆ ಪಶ್ಚಾತ್ತಾಪಪಡಬೇಕಾಗುವುದಿಲ್ಲ.॥30॥

ಮೂಲಮ್ - 31

ಅನುಪಾಯೇನ ಕರ್ಮಾಣಿ ವಿಪರೀತಾನಿ ಯಾನಿ ಚ ।
ಕ್ರಿಯಮಾಣಾನಿ ದುಷ್ಯಂತಿ ಹವೀಂಷ್ಯ ಪ್ರಯತೇಷ್ವಿವ ॥

ಅನುವಾದ

ಯಾವ ಕರ್ಮವು ಉಚಿತ ಉಪಾಯವನ್ನು ಅವಲಂಬಿಸದೆಯೇ ಮಾಡಿದೆಯೋ, ಯಾವುದು ಲೋಕ ಮತ್ತು ಶಾಸ್ತ್ರಕ್ಕೆ ವಿಪರೀತವಾಗುತ್ತದೋ, ಆ ಪಾಪಕರ್ಮವು-ಅಪವಿತ್ರ ಅಭಿಚಾರಿಕ ಯಜ್ಞದಲ್ಲಿ ಹೋಮಮಾಡಿದ ಹವಿಸ್ಸಿನಂತೆ ದೋಷಪೂರ್ಣವಾಗುತ್ತದೆ.॥31॥

ಮೂಲಮ್ - 32

ಯಃ ಪಶ್ಚಾತ್ಪೂರ್ವ ಕಾರ್ಯಾಣಿ ಕರ್ಮಾಣ್ಯಭಿಚಿಕೀರ್ಷತಿ ।
ಪೂರ್ವಂ ಚಾಪರಕಾರ್ಯಾಣಿ ಸ ನ ವೇದ ನಯಾನಯೌ ॥

ಅನುವಾದ

ಯಾರು ಮೊದಲು ಮಾಡಲು ಯೋಗ್ಯಕರ್ಮವನ್ನು ಅನಂತರ ಮಾಡುತ್ತಾನೋ, ಮತ್ತೆ ಮಾಡಬೇಕಾದ ಕಾರ್ಯವನ್ನು ಮೊದಲೇ ಮಾಡಿಬಿಡುವನೋ, ಅವನು ನೀತಿ ಮತ್ತು ಅನೀತಿಯನ್ನು ತಿಳಿಯುವುದಿಲ್ಲ.॥32॥

ಮೂಲಮ್ - 33

ಚಪಲಸ್ಯ ತು ಕೃತ್ಯೇಷು ಪ್ರಸಮೀಕ್ಷ್ಯಾಧಿಕಂ ಬಲಮ್ ।
ಛಿದ್ರ್ರಮನ್ಯೇ ಪ್ರಪದ್ಯಂತೇ ಕ್ರೌಂಚಸ್ಯ ಖಮಿವ ದ್ವಿಜಾಃ ॥

ಅನುವಾದ

ಶತ್ರುಗಳು ತಮ್ಮ ವಿಪಕ್ಷದ ಬಲವನ್ನು ಹೆಚ್ಚೆಂದು ನೋಡಿಯೂ, ಅವನು ಪ್ರತಿಯೊಂದು ಕೆಲಸದಲ್ಲಿ ಚಪಲ (ಅವಸರ)ನಾಗಿದ್ದರೆ ಅವನನ್ನು ದಮನ ಮಾಡಲು ಪಕ್ಷಿಯು ದುರ್ಲಂಘ್ಯ ಕ್ರೌಂಚಪರ್ವತವನ್ನು ದಾಟಲು ಮುಂದೆ ಹೋಗಲು ಛಿದ್ರವನ್ನು* ಆಶ್ರಯಿಸುವಂತೆ, ಅವನ ಛಿದ್ರವನ್ನು ಹುಡುಕುತ್ತಿರುತ್ತಾರೆ.॥33॥

ಟಿಪ್ಪನೀ
  • ಕುಮಾರ ಕಾರ್ತಿಕೇಯನು ತನ್ನ ಶಕ್ತ್ಯಾಯುಧದಿಂದ ಕ್ರೌಂಚಪರ್ವತವನ್ನು ವಿದೀರ್ಣಗೊಳಿಸಿ ಅದರಲ್ಲಿ ಛಿದ್ರವನ್ನು ಮಾಡಿದ್ದನು. ಈ ಪ್ರಸಂಗವು ಮಹಾಭಾರತದಲ್ಲಿ ಬಂದಿದೆ. (ನೋಡಿ-ಶಲ್ಯ ಪರ್ವ 46/86)
ಮೂಲಮ್ - 34

ತ್ವಯೇದಂ ಮಹದಾರಬ್ಧಂ ಕಾರ್ಯಮಪ್ರತಿಚಿಂತಿತಮ್ ।
ದಿಷ್ಟ್ಯಾ ತ್ವಾಂ ನಾವಧೀದ್ ರಾಮೋ ವಿಷಮಿಶ್ರಮಿವಾಮಿಷಮ್ ॥

ಅನುವಾದ

ಮಹಾರಾಜಾ ! ನೀನು ಭಾವೀ ಪರಿಣಾಮವನ್ನು ವಿಚಾರ ಮಾಡದೆಯೇ ಇಂತಹ ಬಹಳ ದೊಡ್ಡ ದುಷ್ಕರ್ಮವನ್ನು ಪ್ರಾರಂಭಿಸಿರುವೆ. ವಿಷಮಿಶ್ರಿತ ಆಹಾರವನ್ನು ತಿಂದವನ ಪ್ರಾಣಹರಣವಾಗುವಂತೆ, ಶ್ರೀರಾಮಚಂದನು ನಿನ್ನನ್ನು ವಧಿಸಿ ಬಿಡುವನು. ಅವನು ಇಷ್ಟರವರೆಗೆ ನಿನ್ನನ್ನು ಕೊಲ್ಲದಿರುವುದು ನಮಗೆ ಸೌಭಾಗ್ಯದ ಮಾತಾಗಿದೆ.॥34॥

ಮೂಲಮ್ - 35

ತಸ್ಮತ್ತ್ವಯಾ ಸಮಾರಬ್ಧಂ ಕರ್ಮ ಹ್ಯಪ್ರತಿಮಂ ಪರೈಃ ।
ಅಹಂ ಸಮೀಕರಿಷ್ಯಾಮಿ ಹತ್ವಾ ಶತ್ರೂಂಸ್ತವಾನಘ ॥

ಅನುವಾದ

ಪಾಪರಹಿತನೇ! ನೀನು ಶತ್ರುಗಳೊಂದಿಗೆ ಅನುಚಿತ ಕರ್ಮ ವನ್ನು ಪ್ರಾರಂಭಿಸಿದರೂ ನಾನು ನಿನ್ನ ಶತ್ರುಗಳ ಸಂಹಾರ ಮಾಡಿ, ಎಲ್ಲವನ್ನು ಸರಿಯಾಗಿಸುವೆನು.॥35॥

ಮೂಲಮ್ - 36

ಅಹಮುತ್ಸಾದಯಿಷ್ಯಾಮಿ ಶತ್ರೂಂಸ್ತವ ನಿಶಾಚರ ।
ಯದಿ ಶಕ್ರವಿವಸ್ವಂತೌ ಯದಿ ಪಾವಕಮಾರುತೌ ।
ತಾವಹಂ ಯೋಧಯಿಷ್ಯಾಮಿ ಕುಬೇರ ವರುಣಾವಪಿ ॥

ಅನುವಾದ

ನಿಶಾಚರನೇ! ನಿನ್ನ ಶತ್ರು ಇಂದ್ರ, ಸೂರ್ಯ, ಅಗ್ನಿ, ವಾಯು, ಕುಬೇರ, ವರುಣ ಇವರು ಯಾರಾಗಿದ್ದರೂ ನಾನು ಅವರೊಂದಿಗೆ ಯುದ್ಧಮಾಡಿ, ನಿನ್ನ ಶತ್ರುಗಳನ್ನು ಕಿತ್ತು ಬಿಸಾಡುವೆನು.॥36॥

ಮೂಲಮ್ - 37

ಗಿರಿಮಾತ್ರಶರೀರಸ್ಯ ಮಹಾಪರಿಘಯೋಧಿನಃ ।
ನರ್ದತಸ್ತೀಕ್ಷ್ಣದಂಷ್ಟ್ರಸ್ಯ ಬಿಭೀಯಾದ್ವೈ ಪುರಂದರಃ ॥

ಅನುವಾದ

ಪರ್ವತದಂತಹ ವಿಶಾಲ ಹಾಗೂ ತೀಕ್ಷ್ಣದಾಡೆಗಳಿಂದ ಕೂಡಿದ ಶರೀರವನ್ನು ಧರಿಸಿದ ನಾನು ಮಹಾಪರಿಘವನ್ನು ಕೈಯಲ್ಲೆತ್ತಿಕೊಂಡು ಸಮರಾಂಗಣದಲ್ಲಿ ಕಾದಾಡುತ್ತಾ ಗರ್ಜಿಸಿದಾಗ ದೇವೇಂದ್ರನೂ ಕೂಡ ಭಯಭೀತ ನಾಗುವನು.॥37॥

ಮೂಲಮ್ - 38

ಪುನರ್ಮಾಂ ಸ ದ್ವಿತೀಯೇನ ಶರೇಣ ನಿಹನಿಷ್ಯತಿ ।
ತತೋಽಹಂ ತಸ್ಯ ಪಾಸ್ಯಾಮಿ ರುಧಿರಂಕಾಮಮಾಶ್ವಸ ॥

ಅನುವಾದ

ರಾಮನು ನನಗೆ ಒಂದು ಬಾಣ ಹೊಡೆದು ಇನ್ನೊಂದು ಬಾಣವನ್ನು ಹೊಡೆಯತೊಡಗುವ ನಡುವೆಯೇ ನಾನು ಅವನ ರಕ್ತವನ್ನು ಕುಡಿದು ಬಿಡುವೆನು. ಅದಕ್ಕಾಗಿ ನೀನು ಪೂರ್ಣವಾಗಿ ನಿಶ್ಚಿಂತನಾಗು.॥38॥

ಮೂಲಮ್ - 39

ವಧೇನ ವೈ ದಾಶರಥೇಃ ಸುಖಾವಹಂ
ಜಯಂ ತವಾಹರ್ತುಮಹಂ ಯತಿಷ್ಯೇ ।
ಹತ್ವಾ ಚ ರಾಮಂ ಸಹ ಲಕ್ಷ್ಮಣೇನ
ಖಾದಾಮಿ ಸರ್ವಾನ್ ಹರಿಯೂಥಮುಖ್ಯಾನ್ ॥

ಅನುವಾದ

ನಾನು ದಶರಥನಂದನ ಶ್ರೀರಾಮನನ್ನು ವಧಿಸಿ ನಿನಗೆ ಸುಖದಾಯಕ ವಿಜಯವನ್ನು ಸುಲಭಗೊಳಿಸುವ ಪ್ರಯತ್ನ ಮಾಡುವೆನು. ಲಕ್ಷ್ಮಣ ಸಹಿತ ರಾಮನನ್ನು ಕೊಂದು ಸಮಸ್ತ ವಾನರಯೂಥಪತಿಗಳನ್ನು ತಿಂದು ಬಿಡುವನು.॥39॥

ಮೂಲಮ್ - 40

ರಮಸ್ವ ಕಾಮಂ ಪಿಬ ಚಾಗ್ರ್ಯವಾರುಣೀಂ
ಕುರುಷ್ವ ಕಾರ್ಯಾಣಿ ಹಿತಾನಿ ವಿಜ್ವರಃ ।
ಮಯಾ ತು ರಾಮೇ ಗಮಿತೇ ಯಮಕ್ಷಯಂ
ಚಿರಾಯ ಸೀತಾ ವಶಗಾ ಭವಿಷ್ಯತಿ ॥

ಅನುವಾದ

ನೀನು ಆನಂದವಾಗಿ ವಿಹರಿಸು. ಉತ್ತಮ ವಾರುಣಿಯನ್ನು ಕುಡಿದು, ನಿಶ್ಚಿಂತನಾಗಿ ತನ್ನ ಹಿತಕರ ಕಾರ್ಯವನ್ನು ಮಾಡುತ್ತಾ ಇರು. ನಾನು ರಾಮನನ್ನು ಯಮಲೋಕಕ್ಕೆ ಕಳಿಸಿದ ಬಳಿಕ ಸೀತೆಯು ಚಿರಕಾಲ ನಿನ್ನ ಅಧೀನಳಾಗುವಳು.॥40॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹನ್ನೆರಡನೆಯ ಸರ್ಗ ಪೂರ್ಣವಾಯಿತು.॥12॥