वाचनम्
ಭಾಗಸೂಚನಾ
ರಾವಣ ಮತ್ತು ಅವನ ಸಭಾಸದರು ಸಭೆ ಸೇರಿದುದು
ಮೂಲಮ್ - 1
ಸ ಬಭೂವ ಕೃಶೋ ರಾಜಾ ಮೈಥಿಲೀ ಕಾಮಮೋಹಿತಃ ।
ಅಸನ್ಮಾನಾಚ್ಚ ಸುಹೃದಾಂ ಪಾಪಃ ಪಾಪೇನ ಕರ್ಮಣಾ ॥
ಅನುವಾದ
ರಾಕ್ಷಸರ ರಾಜ ರಾವಣನು ಸೀತೆಯ ಕುರಿತು ಕಾಮಮೋಹಿತನಾಗಿದ್ದನು. ಅವನ ಹಿತೈಷಿ ಸುಹೃದ್ ವಿಭೀಷಣಾ ದಿಗಳು ಅವನನ್ನು ಅನಾದರಿಸತೊಡಗಿದ್ದರು. ಅವನ ಕೆಟ್ಟ ಕೆಲಸವನ್ನು ನಿಂದಿಸುತ್ತಿದ್ದರು. ಹಾಗೂ ಸೀತಾಪಹರಣರೂಪೀ ಜಘನ್ಯ ಪಾಪ-ಕರ್ಮದಿಂದ ಪಾಪಿ ಎಂದು ಘೋಷಿಸಿದ್ದರು. ಇದೆಲ್ಲ ಕಾರಣದಿಂದ ಅವನು ಅತ್ಯಂತ ಕೃಶ (ಚಿಂತಾಯುಕ್ತ ಮತ್ತು ದುರ್ಬಲ)ನಾಗಿದ್ದನು.॥1॥
ಮೂಲಮ್ - 2
ಅತೀವ ಕಾಮಸಂಪನ್ನೋ ವೈದೇಹೀಮನುಚಿಂತಯನ್ ।
ಅತೀವಸಮಯೇ ಕಾಲೇ ತಸ್ಮಿನ್ ವೈ ಯುಧಿ ರಾವಣಃ ।
ಅಮಾತ್ಯೈಶ್ಚ ಸುಹೃದ್ಭಿಶ್ಚ ಪ್ರಾಪ್ತಕಾಲಮಮನ್ಯತ ॥
ಅನುವಾದ
ಅವನು ಅತ್ಯಂತ ಕಾಮದಿಂದ ಪೀಡಿತನಾಗಿ ಪದೇಪದೇ ವೈದೇಹಿಯನ್ನು ಚಿಂತಿಸುತ್ತಿದ್ದನು. ಅದಕ್ಕಾಗಿ ಯುದ್ಧದ ಅವಕಾಶ ಒದಗಿದಾಗ ಮಂತ್ರಿಗಳ ಮತ್ತು ಸುಹೃದಯರೊಂದಿಗೆ ಸಲಹೆ ಪಡೆದು ಯುದ್ಧವೇ ಸಮಯೋಚಿತ ಕರ್ತವ್ಯವೆಂದು ತಿಳಿದನು.॥2॥
ಮೂಲಮ್ - 3
ಸ ಹೇಮಜಾಲವಿತತಂ ಮಣಿವಿದ್ರುಮಭೂಷಿತಮ್ ।
ಉಪಗಮ್ಯ ವಿನೀತಾಶ್ವಮಾರುರೋಹ ಮಹಾರಥಮ್ ॥
ಅನುವಾದ
ಅವನು ಚಿನ್ನದ ಜಾಲರಿಗಳಿಂದ ಮುಚ್ಚಿದ, ಹವಳ ಮಣಿ ಗಳಿಂದ ಅಲಂಕೃತವಾದ, ಸುಶಿಕ್ಷಿತ ಕುದುರೆಗಳನ್ನು ಹೂಡಿದ ವಿಶಾಲ ರಥವನ್ನು ಏರಿದನು.॥3॥
ಮೂಲಮ್ - 4
ತಮಾಸ್ಥಾಯ ರಥಶ್ರೇಷ್ಠಂ ಮಹಾಮೇಘಸಮಸ್ವನಮ್ ।
ಪ್ರಯಯೌ ರಾಕ್ಷಸಾಂ ಶ್ರೇಷ್ಠೋ ದಶಗ್ರೀವಃ ಸಭಾಂ ಪ್ರತಿ ॥
ಅನುವಾದ
ಮಹಾಮೇಘಗರ್ಜನೆ ಯಂತೆ ಶಬ್ದಮಾಡುವ ಆ ಉತ್ತಮ ರಥದಲ್ಲಿ ಕುಳಿತ ರಾಕ್ಷಸ ಶ್ರೇಷ್ಠ ದಶಗ್ರೀವನು ಸಭಾಭವನದ ಕಡೆಗೆ ಹೊರಟನು.॥4॥
ಮೂಲಮ್ - 5
ಅಸಿಚರ್ಮಧರಾ ಯೋಧಾಃ ಸರ್ವಾಯುಧಧರಾಸ್ತಥಾ ।
ರಾಕ್ಷಸಾ ರಾಕ್ಷಸೇಂದ್ರಸ್ಯ ಪುರಸ್ತಾತ್ ಸಂಪ್ರತಸ್ಥಿರೇ ॥
ಅನುವಾದ
ಆಗ ರಾಕ್ಷಸರಾಜ ರಾವಣನ ಮುಂದುಗಡೆ ಕತ್ತಿ-ಗುರಾಣಿ ಹಾಗೂ ಎಲ್ಲ ಪ್ರಕಾರದ ಆಯುಧಗಳನ್ನು ಧರಿಸಿದ ಅಸಂಖ್ಯ ರಾಕ್ಷಸ ಯೋಧರು ನಡೆಯುತ್ತಿದ್ದರು.॥5॥
ಮೂಲಮ್ - 6
ನಾನಾವಿಕೃತವೇಷಾಶ್ಚ ನಾನಾ ಭೂಷಣಭೂಷಿತಾಃ ।
ಪಾರ್ಶ್ವತಃ ಪೃಷ್ಠತಶ್ಚೈನಂ ಪರಿವಾರ್ಯ ಯಯುಸ್ತದಾ ॥
ಅನುವಾದ
ಇದೇ ರೀತಿ ಬಗೆ-ಬಗೆಯ ಒಡವೆಗಳಿಂದ ಅಲಂಕರಿಸಿಕೊಂಡ, ನಾನಾ ವಿಧದ ವಿಕರಾಳ ವೇಷವುಳ್ಳ ಅಗಣಿತ ನಿಶಾಚರರು ಅವನನ್ನು ಎಡ-ಬಲ-ಹಿಂದೆ ಎಲ್ಲ ಕಡೆಯಿಂದ ಸುತ್ತುವರಿದು ಹೋಗುತ್ತಿದ್ದರು.॥6॥
ಮೂಲಮ್ - 7
ರಥೈಶ್ಚಾತಿರಥಾಃ ಶೀಘ್ರಂ ಮತ್ತೈಶ್ಚ ವರವಾರಣೈಃ ।
ಅನೂತ್ಪೇತುರ್ದಶಗ್ರೀವಮಾಕ್ರೀಡದ್ಭಿಶ್ಚ ವಾಜಿಭಿಃ ॥
ಅನುವಾದ
ರಾವಣನು ಹೋಗುತ್ತಿದ್ದಾಗ ಅನೇಕ ಅತಿರಥಿವೀರರು ರಥಗಳಲ್ಲಿ, ಮತ್ತಗಜಗಳ ಮೇಲೆ, ಲೀಲಾಜಾಲವಾಗಿ ಅನೇಕ ನಡೆಗಳನ್ನು ತೋರಿಸುತ್ತಿದ್ದ ಕುದುರೆಗಳನ್ನೇರಿ ಅವನ ಹಿಂದೆ-ಹಿಂದೆ ಸಾಗುತ್ತಿದ್ದರು.॥7॥
ಮೂಲಮ್ - 8
ಗದಾಪರಿಘಹಸ್ತಾಶ್ಚ ಶಕ್ತಿತೋಮರ ಪಾಣಯಃ ।
ಪರಶ್ವಧಧರಾಶ್ಚಾನ್ಯೇ ತಥಾನ್ಯೇ ಶೂಲಪಾಣಯಃ ।
ತತಸ್ತೂರ್ಯಸಹಸ್ರಾಣಾಂ ಸಂಜಜ್ಞೇ ನಿಃಸ್ವನೋ ಮಹಾನ್ ॥
ಅನುವಾದ
ಕೆಲವರ ಕೈಗಳಲ್ಲಿ ಗದೆ, ಪರಿಘ ಶೋಭಿಸುತ್ತಿದ್ದವು. ಕೆಲವರು ಶಕ್ತಿ, ತೋಮರ ಧರಿಸಿದ್ದರು. ಕೆಲವರು ಗಂಡುಕೊಡಲಿ ಹಿಡಿದಿದ್ದರು, ಇತರ ರಾಕ್ಷಸರ ಕೈಗಳಲ್ಲಿ ಶೂಲಗಳು ಹೊಳೆಯುತ್ತಿದ್ದವು. ಮತ್ತೆ ಅಲ್ಲಿ ಸಾವಿರಾರು ವಾದ್ಯಗಳು ಮೊಳಗತೊಡಗಿದವು.॥.॥
ಮೂಲಮ್ - 9½
ತುಮುಲಃ ಶಂಖ ಶಬ್ದಶ್ಚ ಸಭಾಂ ಗಚ್ಛತಿ ರಾವಣೇ ।
ಸ ನೇಮಿಘೋಷೇಣ ಮಹಾನ್ ಸಹಸಾಭಿನಿನಾದಯಮ್ ॥
ರಾಜಮಾರ್ಗಂ ಶ್ರಿಯಾ ಜುಷ್ಟಂ ಪ್ರತಿಪೇದೇ ಮಹಾರಥಃ ।
ಅನುವಾದ
ರಾವಣನು ಸಭಾಭವನದ ಕಡೆಗೆ ಪ್ರಯಾಣಿಸುತ್ತಿದ್ದಾಗ ಶಂಖಧ್ವನಿಯ ತುಮುಲವೇ ಆಗತೊಡಗಿತು. ಅವನ ಆ ವಿಶಾಲರಥವು ತನ್ನ ಗಾಲಿಗಳ ಘರ-ಘರ ದನಿಯಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸುತ್ತಾ ಶೋಭಾಸಂಪನ್ನ ರಾಜಬೀದಿಗೆ ಬಂದು ತಲುಪಿತು.॥9॥
ಮೂಲಮ್ - 10½
ವಿಮಲಂ ಚಾತಪತ್ರಂ ಚ ಪ್ರಗೃಹೀತಾಮಶೋಭತ ।
ಪಾಂಡುರಂ ರಾಕ್ಷಸೇಂದ್ರಸ್ಯ ಪೂರ್ಣಸ್ತಾರಾಧಿಪೋ ಯಥಾ ।
ಅನುವಾದ
ಆಗ ರಾಕ್ಷಸರಾಜ ರಾವಣನ ತಲೆಯ ಮೇಲಿದ್ದ ಶ್ವೇತಚ್ಛತ್ರವು ಪೂರ್ಣಚಂದ್ರನಂತೆ ಶೋಭಿಸುತ್ತಿತ್ತು..॥10॥
ಮೂಲಮ್ - 11½
ಹೇಮಮಂಜರಿ ಗರ್ಭೇ ಚ ಶುದ್ಧಸ್ಫಟಿಕವಿಗ್ರಹೇ ॥
ಚಾಮರವ್ಯಜನೇ ತಸ್ಯ ರೇಜತುಃ ಸವ್ಯದಕ್ಷಿಣೇ ।
ಅನುವಾದ
ಅವನ ಎಡಬಲದಲ್ಲಿ ಶುದ್ಧ ಸ್ಫಟಿಕದ ಹಿಡಿಯುಳ್ಳ ಚಿನ್ನದ ಮಂಜರಿಗಳುಳ್ಳ ಚಾಮರಗಳು ತುಂಬಾ ಶೋಭಿಸುತ್ತಿದ್ದವು.॥11॥
ಮೂಲಮ್ - 12½
ತೇ ಕೃತಾಂಜಲಯಃ ಸರ್ವೇ ರಥಸ್ಥಂ ಪೃಥಿವೀಸ್ಥಿತಾಃ ॥
ರಾಕ್ಷಸಾ ರಾಕ್ಷಸಶ್ರೇಷ್ಠಂ ಶಿರೋಭಿಸ್ತಂ ವವಂದಿರೇ ।
ಅನುವಾದ
ದಾರಿಯಲ್ಲಿ ಇಕ್ಕೆಡೆಗಳಲ್ಲಿ ನಿಂತಿರುವ ಎಲ್ಲ ರಾಕ್ಷಸರು ಕೈಮುಗಿದು ರಥದಲ್ಲಿ ಕುಳಿತಿರುವ ರಾಕ್ಷಸ ಶ್ರೇಷ್ಠ ರಾವಣನನ್ನು ತಲೆಬಾಗಿ ವಂದಿಸುತ್ತಿದ್ದರು.॥12॥
ಮೂಲಮ್ - 13½
ರಾಕ್ಷಸೈ ಸ್ತೂಯಮಾನಃ ಸಂಜಯಾಶೀರ್ಭಿರರಿಂದಮಃ ॥
ಆಸಸಾದ ಮಹಾತೇಜಾಃ ಸಭಾಂ ವಿರಚಿತಾಂ ತದಾ ।
ಅನುವಾದ
ರಾಕ್ಷಸರು ಮಾಡುತ್ತಿದ್ದ ಜಯ-ಜಯಕಾರ ಮತ್ತು ಆಶೀರ್ವಾದಗಳನ್ನು ಕೇಳುತ್ತಾ ಶತ್ರುದಮನ ಮಹಾ ತೇಜಸ್ವೀ ರಾವಣನು ಆಗ ವಿಶ್ವಕರ್ಮನಿಂದ ನಿರ್ಮಿತವಾದ ರಾಜಭವನವನ್ನು ತಲುಪಿದನು.॥13॥
ಮೂಲಮ್ - 14
ಸುವರ್ಣರಜತಾಸ್ತೀರ್ಣಾಂ ವಿಶುದ್ಧ ಸ್ಫಟಿಕಾಂತರಾಮ್ ॥
ಮೂಲಮ್ - 15½
ವಿರಾಜಮಾನೋ ವಪುಷಾ ರುಕ್ಮಪಟ್ಟೋತ್ತರಚ್ಛದಾಮ್ ।
ತಾಂ ಪಿಶಾಚಶತೈಃ ಷಡ್ಭಿರಭಿಗುಪ್ತಾಂ ಸದಾಪ್ರಭಾಮ್ ॥
ಪ್ರವಿವೇಶ ಮಹಾತೇಜಾಃ ಸುಕೃತಾಂ ವಿಶ್ವಕರ್ಮಣಾ ।
ಅನುವಾದ
ಆ ಸಭೆಯ ನೆಲದಲ್ಲಿ ಚಿನ್ನ-ಬೆಳ್ಳಿಯ ಕೆತ್ತನೆ ಮಾಡಿ, ನಡು-ನಡುವೆ ಶುದ್ಧ ಸ್ಫಟಿಕಗಳನ್ನು ಜೋಡಿಸಿದ್ದರು. ಅದರಲ್ಲಿ ಚಿನ್ನದ ಕಸೂತಿ ಮಾಡಿದ ರೇಶ್ಮೆವಸ್ತ್ರಗಳನ್ನು ಹಾಸಿದ್ದರು. ಆ ಸಭೆಯು ತನ್ನದಾವ ಪ್ರಭೆಯಿಂದ ಹೊಳೆಯುತ್ತಾ ಇತ್ತು. ಆರುನೂರು ಪಿಶಾಚಿಗಳು ಅದನ್ನು ರಕ್ಷಿಸುತ್ತಿದ್ದರು. ವಿಶ್ವಕರ್ಮನು ಅದನ್ನು ಬಹಳ ಸುಂದರವಾಗಿಯೇ ರಚಿಸಿದ್ದನು. ತನ್ನ ಶರೀರ ಶೋಭೆಯಿಂದ ಸುಶೋಭಿತನಾದ ಮಹಾತೇಜಸ್ವೀ ರಾವಣನು ಅದನ್ನು ಪ್ರವೇಶಿಸಿದನು.॥14-15॥
ಮೂಲಮ್ - 16
ತಸ್ಯಾಂ ತು ವೈದೂರ್ಯಮಯಂ ಪ್ರಿಯಕಾಜಿನ ಸಂವೃತಮ್ ॥
ಮೂಲಮ್ - 17
ಮಹತ್ಸೋಪಾಶ್ರಯಂ ಭೇಜೇ ರಾವಣಃ ಪರಮಾಸನಮ್ ।
ತತಃ ಶಶಾಸೇಶ್ವರವದ್ದೂತಾಂಲ್ಲಘುಪರಾಕ್ರಮಾನ್ ॥
ಅನುವಾದ
ಆ ಸಭಾಭವನದಲ್ಲಿ ನೀಲಮಣಿಗಳ ಒಂದು ವಿಶಾಲ ಸಿಂಹಾಸನವಿತ್ತು. ಅದರ ಮೇಲೆ ಅತ್ಯಂತ ನಯವಾದ ಚರ್ಮವುಳ್ಳ ‘ಪ್ರಿಯಕ’ ಎಂಬ ಮೃಗದ ಚರ್ಮಹಾಸಿತ್ತು ಮತ್ತು ಅದರ ಮೇಲೆ ಒರಗುವ ದಿಂಬು ಇರಿಸಲಾಗಿತ್ತು. ರಾವಣನು ಅದರಮೇಲೆ ಕುಳಿತು ತನ್ನ ಶೀಘ್ರಗಾಮಿ ದೂತರಿಗೆ ಆಜ್ಞಾಪಿಸಿದನು.॥16-17॥
ಮೂಲಮ್ - 18
ಸಮಾನಯತ ಮೇ ಕ್ಷಿಪ್ರಮಿಂ ಹೈತಾನ್ ರಾಕ್ಷಸಾನಿತಿ ।
ಕೃತ್ಯಮಸ್ತಿ ಮಹಾಜ್ಜಾನೇ ಕರ್ತವ್ಯಮಿತಿ ಶತ್ರುಭಿಃ ॥
ಅನುವಾದ
ನೀವು ಬೇಗನೇ ಇಲ್ಲಿ ಕುಳಿತುಕೊಳ್ಳುವ ಸುವಿಖ್ಯಾತ ರಾಕ್ಷಸರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ. ಏಕೆಂದರೆ ಶತ್ರುಗಳೊಂದಿಗೆ ಮಾಡುವ ಮಹಾತ್ಕಾರ್ಯವು ನನ್ನ ಮೇಲೆ ಬಿದ್ದಿದೆ. ಇದನ್ನು ನಾನು ಚೆನ್ನಾಗಿ ತಿಳಿಯುತ್ತಿದ್ದೇನೆ. (ಆದ್ದರಿಂದ ಇದರ ಕುರಿತು ವಿಚಾರ ಮಾಡಲು ಸಭಾಸದರು ಇಲ್ಲಿ ಬರುವುದು ಅತ್ಯಂತ ಆವಶ್ಯಕವಾಗಿದೆ..॥18॥
ಮೂಲಮ್ - 19
ರಾಕ್ಷಸಾಸ್ತದ್ವಚಃ ಶೃತ್ವಾ ಲಂಕಯಾಂ ಪರಿಚಕ್ರಮುಃ ।
ಅನುಗೇಹಮವಸ್ಥಾಯ ವಿಹಾರಶಯನೇಷು ಚ ।
ಉದ್ಯಾನೇಷು ಚ ರಕ್ಷಾಂಸಿ ಚೋದಯಂತೋ ಹ್ಯಭೀತವತ್ ॥
ಅನುವಾದ
ರಾವಣನ ಈ ಸಂದೇಶ ಕೇಳಿ ಆ ರಾಕ್ಷಸರು ಲಂಕೆಯಲ್ಲಿ ಎಲ್ಲೆಡೆ ಸುತ್ತಾಡಿದರು. ಅವರು ಒಂದೊಂದು ಮನೆ, ವಿಹಾರ ಸ್ಥಳ, ಶಯನಗಾರ, ಉದ್ಯಾನವನಕ್ಕೆ ಹೋಗಿ ನಿರ್ಭಯತೆಯಿಂದ ಆ ಎಲ್ಲ ರಾಕ್ಷಸರನ್ನು ರಾಜಸಭೆಗೆ ಬರುವಂತೆ ಪ್ರೇರೇಪಿಸತೊಡಗಿದರು.॥19॥
ಮೂಲಮ್ - 20
ತೇ ರಥಾಂತಚಾರಾ ಏಕೇ ದೃಪ್ತಾನೇಕೇ ದೃಢಾನ್ ಹಯಾನ್ ।
ನಾಗಾನೇಕೇಽಧಿರುರುಹುರ್ಜಗ್ಮುಶ್ಚೈಕೇ ಪದಾತಯಃ ॥
ಅನುವಾದ
ಆಗ ಆ ರಾಕ್ಷಸರಲ್ಲಿ ಕೆಲವರು ರಥಗಳನ್ನು ಹತ್ತಿ, ಕೆಲವರು ಮತ್ತಗಜಗಳ ಮೇಲೆ, ಕೆಲವರು ದೃಢವಾದ ಕುದುರೆಗಳ ಮೇಲೆ ಹತ್ತಿ ತಮ್ಮ ತಮ್ಮ ಸ್ಥಾನದಿಂದ ಹೊರಟರು. ಅನೇಕ ರಾಕ್ಷಸರು ಕಾಲ್ನಡಿಗೆಯಿಂದ ಹೊರಟರು.॥20॥
ಮೂಲಮ್ - 21
ಸಾ ಪುರೀ ಪರಮಾಕೀರ್ಣಾ ರಥಕುಂಜರವಾಜಿಭಿಃ ।
ಸಂಪತದ್ಭಿರ್ವಿರುರುಚೇ ಗುರುತ್ಮದ್ಭಿರಿವಾಂಬರಮ್ ॥
ಅನುವಾದ
ಆ ಸಮಯದಲ್ಲಿ ಓಡುತ್ತಿರುವ ಆನೆ-ಕುದುರೆಗಳಿಂದ ವ್ಯಾಪ್ತವಾದ ಆ ಪುರಿಯು ಅಸಂಖ್ಯ ಗರುಡರಿಂದ ತುಂಬಿದ ಆಕಾಶದಂತೆ ಶೋಭಿಸುತ್ತಿತ್ತು.॥21॥
ಮೂಲಮ್ - 22
ತೇ ವಾಹನಾನ್ಯವಸ್ಥಾಯ ಯಾನಾನಿ ವಿವಿಧಾನಿ ಚ ।
ಸಭಾಂ ಪದ್ಭಿಃ ಪ್ರವಿವಿಶುಃ ಸಿಂಹಾ ಗಿರಿಗುಹಾಮಿವ ॥
ಅನುವಾದ
ಗಂತವ್ಯಸ್ಥಾನಕ್ಕೆ ತಲುಪಿ ತಮ್ಮ ತಮ್ಮ ವಾಹನಗಳನ್ನು ಹೊರಗೆಯೇ ಬಿಟ್ಟು ಆ ಎಲ್ಲ ಸಭಾಸದರು ಅನೇಕ ಸಿಂಹಗಳು ಪರ್ವತದ ಗುಹೆಯನ್ನು ಹೊಕ್ಕುವಂತೆ ಕಾಲ್ನಡಿಗೆಯಿಂದಲೇ ಸಭಾಭವನವನ್ನು ಪ್ರವೇಶಿಸಿದರು.॥22॥
ಮೂಲಮ್ - 23
ರಾಜ್ಞಃ ಪಾದೌ ಗೃಹೀತ್ವಾ ತು ರಾಜ್ಞಾ ತೇ ಪ್ರತಿಪೂಜಿತಾಃ ।
ಪೀಠೇಷ್ವನ್ಯೇ ಬೃಸೀಷ್ವನ್ಯೇ ಭೂಮೌ ಕೇಚಿದುಪಾವಿಶನ್ ॥
ಅನುವಾದ
ಅಲ್ಲಿಗೆ ಹೋಗಿ ಅವರೆಲ್ಲರೂ ರಾಜನ ಕಾಲಿಗೆ ಬಿದ್ದರು ಹಾಗೂ ರಾಜನೂ ಅವರನ್ನು ಸತ್ಕರಿಸಿದನು. ಬಳಿಕ ಕೆಲವರು ಚಿನ್ನದ ಸಿಂಹಾಸನಗಳಲ್ಲಿ ಕೆಲವರು ದರ್ಭೆಯ ಚಾಪೆಗಳಲ್ಲಿ ಕೆಲವರು ಸಾಧಾರಣ ಹಾಸಿಗೆಗಳ ಮೇಲೆ ಕುಳಿತುಕೊಂಡರು.॥23॥
ಮೂಲಮ್ - 24
ತೇ ಸಮೇತ್ಯ ಸಭಾಯಾಂ ವೈ ರಾಕ್ಷಸಾ ರಾಜಶಾಸನಾತ್ ।
ಯಥಾರ್ಹಮುಪತಸ್ಥುತ್ವೇ ರಾವಣಂ ರಾಕ್ಷಸಾಧಿಪಮ್ ॥
ಅನುವಾದ
ರಾಜನ ಆಜ್ಞೆಯಂತೆ ಆ ಸಭೆಯಲ್ಲಿ ಸೇರಿದ ಆ ಎಲ್ಲ ರಾಕ್ಷಸರು ರಾಕ್ಷಸರಾಜ ರಾವಣನ ಅಕ್ಕಪಕ್ಕದಲ್ಲಿ ಯಥಾಯೋಗ್ಯ ಆಸನಗಳಲ್ಲಿ ಕುಳಿತರು.॥2.॥
ಮೂಲಮ್ - 25
ಮಂತ್ರಿಣಶ್ಚ ಯಥಾಮುಖ್ಯಾ ನಿಶ್ಚಿತಾರ್ಥೇಷು ಪಂಡಿತಾಃ ।
ಅಮಾತ್ಯಾಶ್ಚ ಗುಣೋಪೇತಾಃ ಸರ್ವಜ್ಞಾ ಬುದ್ಧಿದರ್ಶನಾಃ ॥
ಮೂಲಮ್ - 26
ಸಮೀಯುಸ್ತತ್ರ ಶತತಃ ಶೂರಾಶ್ಚ ಬಹವಸ್ತಥಾ ।
ಸಭಾಯಾಂ ಹೇಮವರ್ಣಾಯಾಂ ಸರ್ವಾರ್ಥಸ್ಯ ಸುಖಾಯ ವೈ ॥
ಅನುವಾದ
ಬೇರೆ ಬೇರೆ ವಿಷಯಗಳಲ್ಲಿ ಯಥಾಯೋಗ್ಯ ಉಚಿತ ಸಮ್ಮತಿಕೊಡುವ ಮುಖ್ಯ ಮಂತ್ರಿಗಳು, ಕರ್ತವ್ಯ ನಿಶ್ಚಯದಲ್ಲಿ ಪಾಂಡಿತ್ಯದ ಪರಿಚಯ ಕೊಡುವ ಸಚಿವರು, ಬುದ್ಧಿದರ್ಶಿ, ಸರ್ವಜ್ಞ, ಸದ್ಗುಣ ಸಂಪನ್ನ ಉಪಮಂತ್ರಿಗಳು ಹಾಗೂ ಇನ್ನೂ ಅನೇಕ ಶೂರವೀರ ಸಮಸ್ತ ಅರ್ಥಗಳ ನಿಶ್ಚಯಕ್ಕಾಗಿ ಮತ್ತು ಸುಖಪ್ರಾಪ್ತಿಯ ಉಪಾಯದ ಮೇಲೆ ವಿಚಾರ ಮಾಡಲಿಕ್ಕಾಗಿ ಆ ಸ್ವರ್ಣಕಾಂತಿಯುಳ್ಳ ಸಭೆಯೊಳಗೆ ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಾಗಿದ್ದರು.॥25-26॥
ಮೂಲಮ್ - 27
ತತೋ ಮಹಾತ್ಮಾ ವಿಪುಲಂ ಸುಯುಗ್ಯಂ
ರಥಂ ವರಂ ಹೇಮವಿಚಿತ್ರಿತಾಂಗಮ್ ।
ಶುಭಂ ಸಮಾಥಾಯ ಯಯೌ ಯಶಸ್ವೀ
ವಿಭೀಷಣಃ ಸಂಸದಮಗ್ರಜಸ್ಯ ॥
ಅನುವಾದ
ಅನಂತರ ಯಶಸ್ವೀ ಮಹಾತ್ಮಾ ವಿಭೀಷಣನೂ ಕೂಡ ಒಂದು ಸುವರ್ಣಜಟಿತ, ಸುಂದರ ಕುದುರೆಗಳನ್ನು ಹೂಡಿದ, ವಿಶಾಲ, ಶ್ರೇಷ್ಠ ಹಾಗೂ ಶುಭಕರ ರಥದಲ್ಲಿ ಆರೂಢನಾಗಿ ಅಣ್ಣನ ಸಭೆಗೆ ಬಂದು ತಲುಪಿದನು.॥2.॥
ಮೂಲಮ್ - 28
ಸ ಪೂರ್ವಜಾಯಾವರಜಃ ಶಶಂಸ
ನಾಮಾಥ ಪಶ್ಚಾಚ್ಚರಣೌ ವವಂದೇ ।
ಶುಕಃ ಪ್ರಹಸ್ತಶ್ಚ ತಥೈವ ತೇಭ್ಯೋ
ದದೌ ಯಥಾರ್ಹಂ ಪೃಥಗಾಸನಾನಿ ॥
ಅನುವಾದ
ತಮ್ಮನಾದ ವಿಭೀಷಣನು ಮೊದಲಿಗೆ ತನ್ನ ಹೆಸರನ್ನು ಹೇಳಿಕೊಂಡು ಅಣ್ಣನ ಚರಣಗಳಲ್ಲಿ ತಲೆಬಾಗಿದನು. ಅದೇ ರೀತಿ ಶುಕ ಮತ್ತು ಪ್ರಹಸ್ತನೂ ವಂದಿಸಿದರು. ಆಗ ರಾವಣನು ಅವರೆಲ್ಲರಿಗೆ ಯಥಾಯೋಗ್ಯ ಬೇರೆ ಬೇರೆಯಾದ ಆಸನಗಳನ್ನು ನೀಡಿದನು.॥28॥
ಮೂಲಮ್ - 29
ಸುವರ್ಣನಾನಾಮಣಿಭೂಷಣಾನಾಂ
ಸುವಾಸಸಾಂ ಸಂಸದಿ ರಾಕ್ಷಸಾನಾಮ್ ।
ತೇಷಾಂ ಪರಾರ್ಧ್ಯಾಗುರುಚಂದನಾನಾಂ
ಸ್ರಜಾಂ ಚ ಗಂಧಾಃ ಪ್ರವವುಃ ಸಮಂತಾತ್ ॥
ಅನುವಾದ
ಸುವರ್ಣ ಹಾಗೂ ನಾನಾ ವಿಧದ ಮಣಿಗಳ ಆಭೂಷಣಗಳಿಂದ ಅಲಂಕೃತರಾದ ಆ ಸುಂದರ ವಸಧಾರೀ ರಾಕ್ಷಸರ ಅಮೂಲ್ಯ ಅಗರು, ಚಂದನ, ಪುಷ್ಪಹಾರಗಳ ಪರಿಮಳವು ಆ ಸಭೆಯಲ್ಲಿ ಎಲ್ಲೆಡೆ ಹರಡಿತ್ತು.॥29॥
ಮೂಲಮ್ - 30
ನ ಚುಕ್ರುಶುರ್ನಾನೃತಮಾಹ ಕಶ್ಚಿತ್
ಸಭಾಸದೋ ನಾಪಿ ಜಜಲ್ಪುರುಚ್ಚೈಃ ।
ಸಂಸಿದ್ಧಾರ್ಥಾಃ ಸರ್ವ ಏವೋಗ್ರವೀರ್ಯಾ
ಭರ್ತುಃ ಸರ್ವೇ ದದೃಶುಶ್ಚಾನನಂ ತೇ ॥
ಅನುವಾದ
ಆಗ ಆ ಸಭೆಯ ಯಾವ ಸದಸ್ಯನೂ ಸುಳ್ಳು ಹೇಳುತ್ತಿರಲಿಲ್ಲ. ಆ ಎಲ್ಲ ಸಭಾಸದರು ಬೊಬ್ಬೆ ಹಾಕದೆ, ಜೋರಾಗಿ ಮಾತನಾಡು ತ್ತಿರಲಿಲ್ಲ. ಅವರೆಲ್ಲರೂ ಸಲ ಮನೋರಥರಾಗಿದ್ದು, ಭಯಂಕರ ಪರಾಕ್ರಮಿಗಳಾಗಿದ್ದರು. ಎಲ್ಲರೂ ತಮ್ಮ ಸ್ವಾಮಿ ರಾವಣನ ಮುಖದ ಕಡೆಗೆ ನೋಡುತ್ತಿದ್ದರು.॥30॥
ಮೂಲಮ್ - 31
ಸ ರಾವಣಃ ಶಸ್ತ್ರಭೃತಾಂ ಮನಸ್ವಿನಾಂ
ಮಹಾಬಲಾನಾಂ ಸಮಿತೌ ಮನಸ್ವೀ ।
ತಸ್ಯಾಂ ಸಭಾಯಾಂ ಪ್ರಭಯಾ ಚಕಾಶೇ
ಮಧ್ಯೇವಸೂನಾಮಿವ ವಜ್ರಹಸ್ತಃ ॥
ಅನುವಾದ
ಆ ಸಭೆಯಲ್ಲಿ ಶಸ್ತ್ರಧಾರೀ ಮಹಾಬಲಿ ಮನಸ್ವೀ ವೀರರ ಸಮಾಗಮವಾದಾಗ ಅವರ ನಡುವೆ ಕುಳಿತಿರುವ ಮನಸ್ವೀ ರಾವಣನು ತನ್ನ ಪ್ರಭೆಯಿಂದ ವಸುಗಳ ನಡುವೆ ವಜ್ರಧಾರೀ ಇಂದ್ರನು ದೇದೀಪ್ಯನಾಗಿರುವಂತೆ ಪ್ರಕಾಶಿಸುತ್ತಿದ್ದನು.॥3.॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹನ್ನೊಂದನೆಯ ಸರ್ಗ ಪೂರ್ಣವಾಯಿತು. ॥11॥