०१० रावण-विभीषणसंवादः

वाचनम्
ಭಾಗಸೂಚನಾ

ವಿಭೀಷಣನು ರಾವಣನ ಭವನಕ್ಕೆ ಹೋಗಿ, ಅವನಿಗೆ ಅಪಶಕುನಗಳ ಭಯವನ್ನು ತೋರಿ ಸೀತೆಯನ್ನು ಮರಳಿ ಕೊಡುವಂತೆ ಪ್ರಾರ್ಥಿಸುವುದು, ರಾವಣನು ಅವನ ಮಾತನ್ನು ಮನ್ನಿಸದೆ ಅವನನ್ನು ಅಲ್ಲಿಂದ ಬೀಳ್ಕೊಟ್ಟುದುದು

ಮೂಲಮ್ - 1

ತತಃ ಪ್ರತ್ಯುಷಸಿ ಪ್ರಾಪ್ತೇ ಪ್ರಾಪ್ತಧರ್ಮಾರ್ಥನಿಶ್ಚಯಃ ।
ರಾಕ್ಷಸಾಧಿಪತೇರ್ವೇಶ್ಮ ಭೀಮಕರ್ಮಾ ವಿಭೀಷಣಃ ॥

ಮೂಲಮ್ - 2

ಶೈಲಾಗ್ರಚಯಸಂಕಾಶಂ ಶೈಲಶೃಂಗಮಿವೋನ್ನತಮ್ ।
ಸುವಿಭಕ್ತಮಹಾಕಕ್ಷಂ ಮಹಾಜನಪರಿಗ್ರಹಮ್ ॥

ಮೂಲಮ್ - 3

ಮತಿಮದ್ಭಿರ್ಮಹಾಮಾತ್ರೈರನುರಕ್ತೈರಧಿಷ್ಠಿತಮ್ ।
ರಾಕ್ಷಸೈರಾಪ್ತಪರ್ಯಾಪ್ತ್ಯೈಃ ಸರ್ವತಃ ಪರಿರಕ್ಷಿತಮ್ ॥

ಮೂಲಮ್ - 4

ಮತ್ತಮಾತಂಗ ನಿಃಶ್ವಾಸೈರ್ವ್ಯಾಕುಲೀಕೃತಮಾರುತಮ್ ।
ಶಂಖಘೋಷಮಹಾಘೋಷಂ ತೂರ್ಯಸಂಬಾಧನಾದಿತಮ್ ॥

ಮೂಲಮ್ - 5

ಪ್ರಮದಾಜನಸಂಬಾಧಂ ಪ್ರಜಪ್ಪಿತಮಹಾಪಥಮ್ ।
ತಪ್ತಕಾಂಚನನಿರ್ಯೂಹಂ ಭೂಷಣೋತ್ತಮಭೂಷಿತಮ್ ॥

ಮೂಲಮ್ - 6

ಗಂಧರ್ವಾಣಾಮಿವಾವಾಸಮಾಲಯಂ ಮರುತಾಮಿವ ।
ರತ್ನಸಂಚಯಸಂಬಾಧಂ ಭವನಂ ಭೋಗಿನಾಮಿವ ॥

ಮೂಲಮ್ - 7

ತಂ ಮಹಾಭ್ರಮಿವಾದಿತ್ಯಸ್ತೇಜೋವಿಸ್ತೃತರಶ್ಮಿವಾನ್ ।
ಅಗ್ರಜಸ್ಯಾಲಯಂ ವೀರಃ ಪ್ರವಿವೇಶ ಮಹಾದ್ಯುತಿಃ ॥

ಅನುವಾದ

ಮರುದಿನ ಬೆಳಗಾಗುತ್ತಲೇ ಧರ್ಮ ಮತ್ತು ಅರ್ಥತತ್ತ್ವವನ್ನು ತಿಳಿದ ಭೀಮಕರ್ಮಾ ಮಹಾತೇಜಸ್ವೀ ವೀರ ವಿಭೀಷಣನು ತನ್ನ ಅಣ್ಣ ರಾಕ್ಷಸರಾಜ ರಾವಣನ ಅರಮನೆಗೆ ಹೋದನು. ಆ ಭವನವು ಅನೇಕ ಪ್ರಾಸಾದಗಳಿಂದ ಪರ್ವತ ಶಿಖರಗಳ ಸಮೂಹಗಳಂತೆ ಶೋಭಿಸುತ್ತಿತ್ತು. ಅದರ ಎತ್ತರವು ಬೆಟ್ಟದ ತುದಿಯನ್ನು ನಾಚಿಸುತ್ತಿತ್ತು. ಅದರಲ್ಲಿನ ಬೇರೆ-ಬೇರೆ ಕಕ್ಷೆಗಳನ್ನು ಸುಂದರವಾಗಿ ರಚಿಸಿದ್ದರು. ಅನೇಕ ಶ್ರೇಷ್ಠಪುರುಷರು ಅಲ್ಲಿಗೆ ಬಂದು ಹೋಗುತ್ತಾ ಇದ್ದರು. ರಾಜನ ಕುರಿತು ಅನುರಾಗವುಳ್ಳ ಬಹಳಷ್ಟು ಬುದ್ಧಿವಂತ ಮಹಾಮಂತ್ರಿಗಳು ಅದರಲ್ಲಿ ಕುಳಿತ್ತಿದ್ದರು. ವಿಶ್ವಾಸಿ ಹಿತೈಷಿ ಹಾಗೂ ಕಾರ್ಯ ಕುಶಲ ರಾಕ್ಷಸರು ಬಹುಸಂಖ್ಯೆಯಲ್ಲಿ ಎಲ್ಲೆಡೆಗಳಿಂದ ಆ ಭವನವನ್ನು ರಕ್ಷಿಸುತ್ತಿದ್ದರು. ಅಲ್ಲಿಯ ವಾಯುವು ಮತ್ತ ಗಜಗಳ ನಿಃಶ್ವಾಸದಿಂದ ಮಿಶ್ರಿತವಾಗಿ ಬಿರುಗಾಳಿಯಂತೆ ಅನಿಸುತ್ತಿತ್ತು. ಶಂಖಧ್ವನಿಯಂತೆ ರಾಕ್ಷಸರ ಗಂಭೀರಘೋಷವು ಅಲ್ಲಿ ನಿನಾದಿಸುತ್ತಿತ್ತು. ನಾನಾ ಪ್ರಕಾರದ ವಾದ್ಯಗಳ ಮನೋರಮ ಶಬ್ದವು ಆ ಭವನದಲ್ಲಿ ಪ್ರತಿಧ್ವನಿಸುತ್ತಿತ್ತು. ರೂಪ-ಯೌವನ ಮದದಿಂದ ಉನ್ಮತ್ತರಾದ ಯುವತಿಯರ ಗದ್ದಲವೇ ಅಲ್ಲಿತ್ತು. ಅಲ್ಲಿಯ ದೊಡ್ಡ ದೊಡ್ಡ ರಾಜಬೀದಿಗಳು ಜನರ ವಾರ್ತಾಲಾಪದಿಂದ ತುಂಬಿ ತುಳುಕುತ್ತಿದ್ದವು. ಅದರ ಬಾಗಿಲುಗಳು ಕಾದ ಚಿನ್ನದಿಂದ ರಚಿಸಿದ್ದರೂ ಉತ್ತಮ ಅಲಂಕಾರಿಕ ವಸ್ತುಗಳಿಂದ ಆ ಭವನವನ್ನು ಚೆನ್ನಾಗಿ ಅಣಿಗೊಳಿಸಿದ್ದರು. ಆದ್ದರಿಂದ ಅದು ಗಂಧರ್ವರ ಅವಾಸ ಮತ್ತು ದೇವತೆಗಳ ನಿವಾಸಸ್ಥಾನದಂತೆ ಮನೋಹರವಾಗಿ ಅನಿಸುತ್ತಿತ್ತು. ರತ್ನರಾಶಿಗಳಿಂದ ಪರಿಪೂರ್ಣವಾದ್ದರಿಂದ ಅದು ನಾಗಭವನದಂತೆ ಹೊಳೆಯುತ್ತಿತ್ತು. ವಿಸ್ತೃತ ಕಿರಣಗಳುಳ್ಳ ಸೂರ್ಯನು ಮಹಾಮೇಘರಾಶಿಯಲ್ಲಿ ಪ್ರವೇಶಿಸುವಂತೆ ತೇಜಸ್ವೀ ವಿಭೀಷಣನು ರಾವಣನ ಆ ಭವನದಲ್ಲಿ ಕಾಲಿರಿಸಿದನು.॥1-7॥

ಮೂಲಮ್ - 8

ಪುಣ್ಯಾನ್ ಪುಣ್ಯಾಹಘೋಷಾಂಶ್ಚ ವೇದವಿದ್ಭಿರುದಾಹೃತಾನ್ ।
ಶುಶ್ರಾವ ಸುಮಹಾತೇಜಾ ಭ್ರಾತುರ್ವಿಜಯ ಸಂಶ್ರಿತಾನ್ ॥

ಅನುವಾದ

ಅಲ್ಲಿಗೆ ಹೋಗಿ ಆ ಮಹಾತೇಜಸ್ವೀ ವಿಭೀಷಣನು ತನ್ನ ಅಣ್ಣನ ವಿಜಯದ ಉದ್ದೇಶದಿಂದ ವೇದವೇತ್ತಾ ಬ್ರಾಹ್ಮಣರು ಮಾಡಿದ ಪುಣ್ಯಾಹ ವಾಚನದ ಪವಿತ್ರ ಘೋಷವನ್ನು ಕೇಳಿದನು.॥8॥

ಮೂಲಮ್ - 9

ಪೂಜಿತಾನ್ ದಧಿಪಾತ್ರೈಶ್ಚ ಸರ್ಪಿಭಿಃ ಸುಮನೋಕ್ಷತೈಃ ।
ಮಂತ್ರವೇದವಿದೋ ವಿಪ್ರಾನ್ ದದರ್ಶ ಸ ಮಹಾಬಲಃ ॥

ಅನುವಾದ

ಅನಂತರ ಆ ಮಹಾಬಲೀ ವಿಭೀಷಣನು ವೇದಮಂತ್ರಗಳ ಜ್ಞಾನೀ ಬ್ರಾಹ್ಮಣರನ್ನು ದರ್ಶಿಸಿದನು. ಅವರ ಕೈಗಳಲ್ಲಿ ಮೊಸರು, ತುಪ್ಪದ ಪಾತ್ರೆ ಗಳಿದ್ದವು. ಹೂವುಗಳು ಮತ್ತು ಅಕ್ಷತೆಗಳಿಂದ ಅವರೆಲ್ಲರನ್ನೂ ಪೂಜಿಸಿದ್ದರು.॥9॥

ಮೂಲಮ್ - 10

ಸ ಪೂಜ್ಯಮಾನೋ ರಕ್ಷೋಭಿರ್ದಿಪ್ಯಮಾನಂ ಸ್ವತೇಜಸಾ ।
ಆಸನಸ್ಥಂ ಮಹಾಬಾಹುರ್ವವಂದೇ ದನದಾನುಜಮ್ ॥

ಅನುವಾದ

ಅಲ್ಲಿಗೆ ಹೋದಾಗ ರಾಕ್ಷಸರು ಅವನನ್ನು ಸ್ವಾಗತ-ಸತ್ಕಾರ ಮಾಡಿದನು. ಮತ್ತೆ ಆ ಮಹಾಬಾಹು ವಿಭೀಷಣನು ತನ್ನ ತೇಜದಿಂದ ದೇದಿಪ್ಯಮಾನವಾದ, ಸಿಂಹಾಸನದಲ್ಲಿ ಕುಳಿತು ಕುಬೇರನ ತಮ್ಮ ರಾವಣನಿಗೆ ವಂದಿಸಿದನು.॥10॥

ಮೂಲಮ್ - 11

ಸ ರಾಜದೃಷ್ಟಿಸಂಪನ್ನಮಾಸನಂ ಹೇಮಭೂಷಿತಮ್ ।
ಜಗಾಮ ಸಮುದಾಚಾರಮ್ ಪ್ರಯುಜ್ಯಾಚಾರಕೋವಿದಃ ॥

ಅನುವಾದ

ಬಳಿಕ ಶಿಷ್ಟಾಚಾರವನ್ನು ಬಲ್ಲ ವಿಭೀಷಣನು ‘ವಿಜಯತಾಂ ಮಹಾರಾಜಃ’ (ಮಹಾರಾಜರ ಜಯವಾಗಲಿ) ಮುಂತಾದ ರಾಜನ ಕುರಿತು ಪರಂಪರಾಪ್ರಾಪ್ತ ಶುಭಶಂಸಸೂಚಕ ವಚನಗಳನ್ನು ಪ್ರಯೋಗಿಸಿ, ರಾಜನು ಕಣ್ಸನ್ನೆ ಮಾಡಿದ ಸುವರ್ಣಭೂಷಿತ ಸಿಂಹಾಸನದಲ್ಲಿ ಕುಳಿತನು.॥11॥

ಮೂಲಮ್ - 12

ಸ ರಾವಣಂ ಮಹಾತ್ಮಾನಂ ವಿಜನೇ ಮಂತ್ರಿಸಂನಿಧೌ ।
ಉವಾಚ ಹಿತಮತ್ಯರ್ಥಂ ವಚನಂ ಹೇತುನಿಶ್ಚಿತಮ್ ॥

ಮೂಲಮ್ - 13

ಪ್ರಸಾದ್ಯ ಭ್ರಾತರಂ ಜ್ಯೇಷ್ಠಂ ಸಾಂತ್ವೋನೋಪಸ್ಥಿತಕ್ರಮಃ ।
ದೇಶಕಾಲಾರ್ಥಸಂವಾದಿ ದೃಷ್ಟಲೋಕ ಪರಾವರಃ ॥

ಅನುವಾದ

ವಿಭೀಷಣನು ಜಗತ್ತಿನ ಒಳ್ಳೆಯ - ಕೆಟ್ಟ ಮಾತುಗಳನ್ನು ಚೆನ್ನಾಗಿ ಅರಿತಿದ್ದನು. ಅವನು ನಮಸ್ಕಾರಾದಿ ವ್ಯವಹಾರವನ್ನು ಯಥಾರ್ಥವಾಗಿ ನಿರ್ವಹಿಸಿ ಸಾಂತ್ವನಪೂರ್ಣ ಮಾತುಗಳಿಂದ ತನ್ನ ಅಣ್ಣ ಮಹಾಮನಾ ರಾವಣನನ್ನು ಸಂತೋಷಗೊಳಿಸಿ ಪ್ರಯೋಜನಕ್ಕನುರೂಪ ಯುಕ್ತಿಗಳಿಂದ ನಿಶ್ಚಿತ ಹಾಗೂ ಅತ್ಯಂತ ಹಿತವಾದ ಮಾತನ್ನು ಹೇಳಿದನು .॥12-13॥

ಮೂಲಮ್ - 14

ಯದಾಪ್ರಭೃತಿ ವೈದೇಹೀ ಸಂಪ್ರಾಪ್ತೇಹ ಪರಂತಪ ।
ತದಾಪ್ರಭೃತಿ ದೃಶ್ಯಂತೇ ನಿಮಿತ್ತಾನ್ಯಶುಭಾನಿ ನಃ ॥

ಅನುವಾದ

ಪರಂತಪನೇ! ವಿದೇಹಕುಮಾರಿ ಸೀತೆಯು ಇಲ್ಲಿಗೆ ಬಂದಂದಿನಿಂದ ನಮಗೆ ಅನೇಕ ಪ್ರಕಾರದ ಅಮಂಗಲ ಸೂಚಕ ಅಪಶಕುನಗಳು ಕಂಡುಬರುತ್ತಿವೆ.॥14॥

ಮೂಲಮ್ - 15

ಸಸ್ಫುಲಿಂಗಃ ಸಧೂಮಾರ್ಚಿಃ ಸಧೂಮಕಲುಷೋದಯಃ ।
ಮಂತ್ರಸಂಧುಕ್ಷಿತೋಽಪ್ಯಗ್ನಿರ್ನ ಸಮ್ಯಗಭಿವರ್ಧತೆ ॥

ಅನುವಾದ

ವಿಧಿಪೂರ್ವಕ ಮಂತ್ರಗಳ ಮೂಲಕ ಉರಿಸಿದರೂ ಅಗ್ನಿಯು ಚೆನ್ನಾಗಿ ಉರಿಯುವುದಿಲ್ಲ ಅದರಿಂದ ಕಿಡಿಗಳೇ ಸಿಡಿಯುತ್ತಿವೆ. ಅದರ ಜ್ವಾಲೆಯೊಂದಿಗೆ ಹೊಗೆಯೇ ಏಳುತ್ತದೆ. ಮಂಥನ ಕಾಲದಲ್ಲಿಯೂ ಅದು ಹೊಗೆಯಿಂದ ಮಲಿನವಾಗಿರುತ್ತದೆ.॥15॥

ಮೂಲಮ್ - 16

ಅಗ್ನಿಷ್ಟೇಷ್ವಗ್ನಿಶಾಲಾಸು ತಥಾ ಬ್ರಹ್ಮಸ್ಥಲೀಷು ಚ ।
ಸರಿಸೃಪಾಣಿ ದೃಶ್ಯಂತೇ ಹವ್ಯೇಷು ಚ ಪಿಪೀಲಿಕಾಃ ॥

ಅನುವಾದ

ಅಡಿಗೆಮನೆಯಲ್ಲಿ, ಯಜ್ಞಶಾಲೆಯಲ್ಲಿ, ವೇದಾಧ್ಯಯನದ ಸ್ಥಳದಲ್ಲಿಯೂ ಹಾವುಗಳು ಕಂಡುಬರುತ್ತವೆ. ಹವನ ಸಾಮಗ್ರಿಗಳಲ್ಲಿ ಇರುವೆಗಳು ತುಂಬಿಕೊಂಡಿರುತ್ತವೆ.॥16॥

ಮೂಲಮ್ - 17

ಗವಾಂ ಪಯಾಂಸಿ ಸ್ಕನ್ನಾನಿ ವಿಮದಾ ವರಕುಂಜರಾಃ ।
ದೀನಮಶ್ವಾಃ ಪ್ರಹೇಶಂತೇ ನವಗ್ರಾಸಾಭಿನಂದಿನಃ ॥

ಅನುವಾದ

ಹಸುಗಳ ಹಾಲು ಇಂಗಿಹೋಗಿದೆ. ದೊಡ್ಡ-ದೊಡ್ಡ ಆನೆಗಳು ಮದರಹಿತವಾಗಿವೆ. ಕುದುರೆಗಳು ಹೊಸ ಹುಲ್ಲು ತಿಂದು ಸಂತುಷ್ಟರಾದರೂ ದೀನಸ್ವರದಲ್ಲಿ ಕೆನೆಯುತ್ತವೆ.॥17॥

ಮೂಲಮ್ - 18

ಖರೋಷ್ಟ್ರಾಶ್ವತರಾ ರಾಜನ್ ಭಿನ್ನರೋಮಾಃ ಸ್ರವಂತಿ ಚ ।
ನ ಸ್ವಭಾವೇಽವತಿಷ್ಠಂತೇ ವಿಧಾನೈರಪಿ ಚಿಂತಿತಾಃ ॥

ಅನುವಾದ

ರಾಜನೇ! ಕತ್ತೆ, ಒಂಟೆ, ಹೇಸರಗತ್ತೆ ಇವುಗಳ ರೋಮ ನಿಮಿರಿನಿಂತಿವೆ. ಅವುಗಳು ಕಣ್ಣೀರು ಸುರಿಸುತ್ತಿವೆ. ವಿಧಿವತ್ತಾಗಿ ಚಿಕಿತ್ಸೆಮಾಡಿದರೂ ಅವು ಪೂರ್ಣವಾಗಿ ಗುಣಮುಖರಾಗುವುದಿಲ್ಲ.॥18॥

ಮೂಲಮ್ - 19

ವಾಯಾಸಾಃ ಸಂಘಶಃ ಕ್ರೂರಾ ವ್ಯಾಹರಂತಿ ಸಮಂತತಃ ।
ಸಮವೇತಾಶ್ಚ ದೃಶ್ಯಂತೇ ವಿಮಾನಾಗ್ರೇಷು ಸಂಘಶಃ ॥

ಅನುವಾದ

ಕ್ರೂರ ಕಾಗೆಗಳು ಗುಂಪು-ಗುಂಪಾಗಿ ಸೇರಿ ಕರ್ಕಶ ಸ್ವರದಿಂದ ಕೂಗುತ್ತವೆ ಹಾಗೂ ಏಳು ಅಂತಸ್ಥಿನ ಭವನಗಳ ಮೇಲೆ ಅವುಗಳ ಸಮೂಹಗಳೇ ಕಂಡುಬರುತ್ತವೆ.॥19॥

ಮೂಲಮ್ - 20

ಗೃಧ್ರಾಶ್ಚ ಪರಿಲೀಯಂತೇ ಪುರೀಮುಪರಿ ಪಿಂಡಿತಾಃ ।
ಉಪಪನ್ನಾಶ್ಚ ಸಂಧ್ಯೇ ದ್ವೇ ವ್ಯಾಹಾರಂತ್ಯಶಿವಂ ಶಿವಾಃ ॥

ಅನುವಾದ

ಲಂಕಾಪುರಿಯ ಮೇಲೆ ಹದ್ದುಗಳು ಗುಂಪುಗುಂಪಾಗಿ ಅದನ್ನು ಸ್ಪರ್ಶಿಸುತ್ತಾ ಹಾರಾಡುತ್ತಾ ಇವೆ. ಎರಡೂ ಸಂಧ್ಯೆಗಳಲ್ಲಿ ನರಿಗಳು ನಗರದ ಸಮೀಪ ಬಂದು ಅಮಂಗಲಸೂಚಕ ಶಬ್ದಮಾಡುತ್ತಿವೆ.॥20॥

ಮೂಲಮ್ - 21

ಕ್ರವ್ಯಾದಾನಾಂ ಮೃಗಾಣಾಂ ಚ ಪುರೀದ್ವಾರೇಷು ಸಂಘಶಃ ।
ಶ್ರೂಯಂತೇ ವಿಪುಲಾ ಘೋಷಾಃ ಸವಿಸ್ಫೂರ್ಜಿತನಿಃಸ್ವನಾಃ ॥

ಅನುವಾದ

ನಗರದ ಎಲ್ಲ ಬಾಗಿಲುಗಳ ಮೇಲೆ ತಂಡೋಪತಂಡವಾಗಿ ಮಾಂಸಭಕ್ಷಿ ಪಶುಗಳು ಜೋರಾಗಿ ಕೂಗುವ ಚೀತ್ಕಾರವು ಸಿಡಿಲಿನ ಶಬ್ದದಂತೆ ಕೇಳಿ ಬರುತ್ತಿದೆ.॥21॥

ಮೂಲಮ್ - 22

ತದೇವಂ ಪ್ರಸ್ತುತೇ ಕಾರ್ಯೇ ಪ್ರಾಯಶ್ಚಿತ್ತಮಿದಂ ಕ್ಷಯಮ್ ।
ರೋಚಯೆ ವೀರ ವೈದೇಹೀ ರಾಘವಾಯ ಪ್ರದೀಯತಾಮ್ ॥

ಅನುವಾದ

ವೀರವರನೇ! ಇಂತಹ ಪರಿಸ್ಥಿತಿಯಲ್ಲಿ ವೈದೇಹಿ ಸೀತೆಯನ್ನು ಶ್ರೀರಾಮಚಂದ್ರನಿಗೆ ಮರಳಿಸುವುದೇ ಪ್ರಾಯಶ್ಚಿತ್ತವೆಂದು ನನಗೆ ಅನಿಸುತ್ತದೆ.॥22॥

ಮೂಲಮ್ - 23

ಇದಂ ಚ ಯದೀ ಮೋಹಾಲ್ಲೋಭಾದ್ ವಾ ವ್ಯಾಹೃತಂ ಮಯಾ ।
ತತ್ರಾಪಿ ಚ ಮಹಾರಾಜ ನ ದೋಷಂ ಕರ್ತುಮರ್ಹಸಿ ॥

ಅನುವಾದ

ಮಹಾರಾಜಾ! ಈ ಮಾತು ನಾನು ಮೋಹ ಅಥವಾ ಲೋಭದಿಂದ ಹೇಳಿದ್ದರೂ ನೀವು ನನ್ನಲ್ಲಿ ದೋಷದೃಷ್ಟಿ ಇರಿಸಬಾರದು.॥23॥

ಮೂಲಮ್ - 24

ಅಯಂ ಹಿ ದೋಷಃ ಸರ್ವಸ್ಯ ಜನಸ್ಯಾಸ್ಯೋಪಲಕ್ಷ್ಯತೇ ।
ರಕ್ಷಸಾಂ ರಾಕ್ಷಸೀನಾಂ ಚ ಪುರಸ್ಯಾಂತಃಪುರಸ್ಯ ಚ ॥

ಅನುವಾದ

ಸೀತಾಪಹರಣ ಹಾಗೂ ಅದರಿಂದ ಆಗುತ್ತಿರುವ ಅಪಶಕುನರೂಪೀ ದೋಷಗಳು ಇಲ್ಲಿಯ ಎಲ್ಲ ಜನತೆ, ರಾಕ್ಷಸ-ರಾಕ್ಷಸಿಯರು, ನಗರ ಮತ್ತು ಅಂತಃಪುರ ಎಲ್ಲರಿಗೆ ಕುರಿತಾಗಿ ಇದೆ.॥24॥

ಮೂಲಮ್ - 25

ಪ್ರಾಪಣೇ ಚಾಸ್ಯ ಮಂತ್ರಸ್ಯ ನಿವೃತಾಃ ಸರ್ವಮಂತ್ರಿಣಃ ।
ಅವಶ್ಯಂ ಚ ಮಯಾ ವಾಚ್ಯಂ ಯದ್ದೃಷ್ಟಮಥವಾ ಶ್ರುತಮ್ ।
ಸಂಪ್ರಧಾರ್ಯ ಯಥಾನ್ಯಾಯಂ ತದ್ ಭವಾನ್ ಕರ್ತುಮರ್ಹತಿ ॥

ಅನುವಾದ

ಈ ಮಾತನ್ನು ನಿಮ್ಮ ಕಿವಿಗೆ ಹಾಕಲು ಪ್ರಾಯಶಃ ಎಲ್ಲ ಮಂತ್ರಿಗಳು ಸಂಕೋಚಪಡುತ್ತಾರೆ. ಆದರೆ ನಾನು ನೋಡಿದ, ಕೇಳಿದ ಸಂಗತಿಯನ್ನು ನಿಮ್ಮ ಮುಂದೆ ನಿವೇದಿಸುವುದು ನನಗೆ ಅವಶ್ಯಕತೆ ಇವೆ. ಆದ್ದರಿಂದ ಇದರ ಕುರಿತು ಯಥೋಚಿತ ವಿಚಾರಮಾಡಿ ನಿಮಗೆ ಉಚಿತವಾಗಿ ಕಂಡಂತೆ ಮಾಡಿರಿ..॥2.॥

ಮೂಲಮ್ - 26

ಇತಿ ಸ್ವಮಂತ್ರಿಣಾಂ ಮಧ್ಯೇ ಭ್ರಾತಾ ಭ್ರಾತರಮೂಚಿವಾನ್ ।
ರಾವಣಂ ರಾಕ್ಷಸಾಂ ಶ್ರೇಷ್ಠಂ ಪಥ್ಯಮೇತದ್ ವಿಭೀಷಣಃ ॥

ಅನುವಾದ

ಈ ಪ್ರಕಾರ ವಿಭೀಷಣನು ಮಂತ್ರಿಗಳ ನಡುವೆ ತನ್ನ ಅಣ್ಣ ರಾಕ್ಷಸರಾಜ ರಾವಣನಲ್ಲಿ ಹೀಗೆ ಹಿತಕರ ಮಾತನ್ನು ಹೇಳಿದನು.॥2.॥

ಮೂಲಮ್ - 27

ಹಿತಂ ಮಹಾರ್ಥಂ ಮೃದು ಹೇತುಸಂಹಿತಂ
ವ್ಯತೀತಕಾಲಾಯತಿಸಂಪ್ರತಿಕ್ಷಮಮ್ ।
ನಿಶಮ್ಯ ತದ್ವಾಕ್ಯಮುಪಸ್ಥಿತಜ್ವರಃ
ಪ್ರಸಂಗವಾನುತ್ತರಮೇತದಬ್ರವೀತ್ ॥

ಮೂಲಮ್ - 28

ಭಯಂ ನ ಪಶ್ಯಾಮಿ ಕುತಶ್ಚಿದಪ್ಯಹಂ
ನ ರಾಘವಃ ಪ್ರಾಪ್ಸ್ಯತಿ ಜಾತು ಮೈಥಿಲೀಮ್ ।
ಸುರೈಃ ಸಹೇಂದ್ರೈರಪಿ ಸಂಗರೆ ಕಥಂ
ಮಮಾಗ್ರತಃ ಸ್ಥಾಸ್ಯತಿ ಲಕ್ಷ್ಮಣಾಗ್ರಜಃ ॥

ಅನುವಾದ

ವಿಭೀಷಣನ ಈ ಹಿತಕರ, ಮಹಾನ್ ಅರ್ಥಸಾಧಕ, ಕೋಮಲ, ಯುಕ್ತಿಸಂಗತ, ಭೂತ-ಭವಿಷ್ಯ ಮತ್ತು ವರ್ತಮಾನ ಗಳಲ್ಲಿಯೂ ಕಾರ್ಯಸಾಧನೆಯಲ್ಲಿ ಸಮರ್ಥವಾದ ಮಾತನ್ನು ಕೇಳಿ ರಾವಣನಿಗೆ ಮೈಬಿಸಿ ಏರಿತು. ಶ್ರೀರಾಮ ನೊಂದಿಗೆ ವೈರ ಬೆಳೆಸುವುದರಲ್ಲೇ ಅವನಿಗೆ ಆಸಕ್ತಿ ಇತ್ತು. ಅದಕ್ಕಾಗಿ ಅವನು ಈ ಪ್ರಕಾರ ಉತ್ತರಿಸಿದನು-ವಿಭೀಷಣನೇ! ನಾನಾದರೋ ಎಲ್ಲಿಯೂ ಭಯ ನೋಡುತ್ತಿಲ್ಲ. ರಾಮನು ಸೀತೆಯನ್ನು ಎಂದಿಗೂ ಪಡೆಯಲಾರನು. ಇಂದ್ರನ ಸಹಿತ ದೇವತೆಗಳ ಸಹಾಯ ಪಡೆದರೂ ಲಕ್ಷ್ಮಣನ ಅಣ್ಣ ರಾಮನು ನನ್ನ ಎದುರಿಗೆ ಸಂಗ್ರಾಮದಲ್ಲಿ ಹೀಗೆ ನಿಲ್ಲಬಲ್ಲನು.॥27-2.॥

ಮೂಲಮ್ - 29

ಇತ್ಯೇವಮುಕ್ತ್ವಾ ಸುರಸೈನ್ಯನಾಶನೋ
ಮಹಾಬಲಃ ಸಂಯತಿ ಚಂಡವಿಕ್ರಮಃ ।
ದಶಾನನೋ ಭ್ರಾತರಮಾಪ್ತವಾದಿನಂ
ವಿಸರ್ಜಯಾಮಾಸ ತದಾ ವಿಭೀಷಣಮ್ ॥

ಅನುವಾದ

ಹೀಗೆ ಹೇಳಿ ದೇವ ಸೈನ್ಯದ ನಾಶಕ ಮತ್ತು ಸಮರಾಂಗಣದಲ್ಲಿ ಪ್ರಚಂಡ ಪರಾಕ್ರಮ ಪ್ರಕಟಿಸುವ ಮಹಾಬಲಿ ದಶಾನನನು ಯಥಾರ್ಥವಾದಿ ತಮ್ಮನಾದ ವಿಭೀಷಣನನ್ನು ಕೂಡಲೇ ಬೀಳ್ಕೊಟ್ಟನು.॥2.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹತ್ತನೆಯ ಸರ್ಗ ಪೂರ್ಣವಾಯಿತು.॥10॥