००७ रावणेन राक्षसाह्वानम्

वाचनम्
ಭಾಗಸೂಚನಾ

ರಾಕ್ಷಸರು, ರಾವಣ ಮತ್ತು ಇಂದ್ರಜಿತುವಿನ ಬಲ ಪರಾಕ್ರಮವನ್ನು ವರ್ಣಿಸುತ್ತಾ ರಾಮನ ಮೇಲೆ ವಿಜಯ ಪಡೆಯಲು ರಾವಣನಿಗೆ ವಿಶ್ವಾಸ ನೀಡಿದುದು

ಮೂಲಮ್ - 1½

ಇತ್ಯುಕ್ತ್ವಾ ರಾಕ್ಷಸೇಂದ್ರೇಣ ರಾಕ್ಷಸಾಸ್ತೇ ಮಹಾಬಲಾಃ ।
ಊಚುಃ ಪ್ರಾಂಜಲಯಃ ಸರ್ವೇ ರಾವಣಂ ರಾಕ್ಷಸೇಶ್ವರಮ್ ॥
ದ್ವಿಷತ್ಪಕ್ಷಮವಿಜ್ಞಾಯ ನೀತಿಬಾಹ್ಯಾಸ್ತ್ವಬುದ್ಧಯಃ ।

ಅನುವಾದ

ರಾಕ್ಷಸರಿಗೆ ನೀತಿಯ ಜ್ಞಾನವಿರಲಿಲ್ಲ ಮತ್ತು ಅವರಿಗೆ ಶತ್ರುಪಕ್ಷದ ಬಲಾಬಲವೂ ತಿಳಿದಿರಲಿಲ್ಲ. ಅವರು ಬಲಶಾಲಿ ಗಳಾಗಿದ್ದರೂ ನೀತಿಯ ದೃಷ್ಟಿಯಿಂದ ಮಹಾ ಮೂರ್ಖರಾಗಿದ್ದರು. ಇದರಿಂದ ರಾಕ್ಷಸರಾಜ ರಾವಣನು ಹಿಂದಿನಂತೆ ಕೇಳಿದಾಗ ಎಲ್ಲರೂ ಕೈಮುಗಿದುಕೊಂಡು ಅವನಲ್ಲಿ ಹೇಳಿದರು.॥1॥

ಮೂಲಮ್ - 2½

ರಾಜನ್ ಪರಿಘಶಕತ್ಯಷ್ಟಿ ಶೂಲಪಟ್ಟಿಶಕುಂತಲಮ್ ॥
ಸುಮಹನ್ನೋ ಬಲಂ ಕಸ್ಮಾದ್ ವಿಷಾದಂ ಭಜತೇ ಭವಾನ್ ।

ಅನುವಾದ

ಮಹಾರಾಜ! ನಮ್ಮ ಬಳಿ ಪರಿಘ, ಶಕ್ತಿ, ಯಷ್ಟಿ, ಶೂಲ, ಪಟ್ಟಿಶ, ಭಲ್ಲೆಗಳಿಂದ ಸುಸಜ್ಜಿತ ಬಹಳ ದೊಡ್ಡ ಸೈನ್ಯವಿದೆ; ಹೀಗಿರುವಾಗ ನೀವೇಕೆ ವಿಷಾದಪಡುತ್ತಿರುವಿರಿ.॥2॥

ಮೂಲಮ್ - 3

ತ್ವಯಾ ಭೋಗವರ್ತಿ ಗತ್ವಾ ನಿರ್ಜಿತಾಃ ಪನ್ನಗಾ ಯುಧಿ ॥

ಮೂಲಮ್ - 4

ಕೈಲಾಸ ಶಿಖರಾವಾಸೀ ಯಕ್ಷೈರ್ಬಹುಭಿರಾವೃತಃ ।
ಸುಮಹತ್ಕದನಂ ಕೃತ್ವಾ ವಶ್ಯಸ್ತೇ ಧನದಃ ಕೃತಃ ॥

ಅನುವಾದ

ನೀವಾದರೋ ಭೋಗವತಿ ಪುರಿಗೆ ಹೋಗಿ ನಾಗಗಳನ್ನು ಯುದ್ಧದಲ್ಲಿ ಸೋಲಿಸಿರುವಿರಿ. ಅಸಂಖ್ಯ ಯಕ್ಷರಿಂದ ಸುತ್ತುವರಿದ ಕೈಲಾಸಶಿಖರದ ನಿವಾಸಿ ಕುಬೇರನನ್ನು ಯುದ್ಧದಲ್ಲಿ ಕಾದಾಡಿ ತನ್ನ ವಶಪಡಿಸಿಕೊಂಡಿರುವಿರಿ.॥3-4॥

ಮೂಲಮ್ - 5

ಸ ಮಹೇಶ್ವರಸಖ್ಯೇನ ಶ್ಲಾಘಮಾನಸ್ತಯಾ ವಿಭೋ ।
ನಿರ್ಜಿತಃ ಸಮರೇ ರೋಷಾಲ್ಲೋಕಪಾಲೋ ಮಹಾಬಲಃ ॥

ಅನುವಾದ

ಪ್ರಭೋ! ಮಹಾಬಲಿ ಲೋಕಪಾಲ ಕುಬೇರನು ಮಹಾದೇವನೊಂದಿಗೆ ಮಿತ್ರತೆ ಇದ್ದುದರಿಂದ ನಿಮ್ಮೊಂದಿಗೆ ಭಾರೀ ಸ್ಪರ್ಧಿಸುತ್ತಿದ್ದನು; ಆದರೆ ನೀವು ಸಮರಾಂಗಣದಲ್ಲಿ ಅವನನ್ನು ರೋಷದಿಂದ ಸೋಲಿಸಿದಿರಿ.॥5॥

ಮೂಲಮ್ - 6

ವಿನಿಪಾತ್ಯ ಚ ಯಕ್ಷೌಘಾನ್ ವಿಕ್ಷೋಭ್ಯ ವಿನಿಗೃಹ್ಯ ಚ ।
ತ್ವಯಾ ಕೈಲಾಸಶಿಖರಾದ್ ವಿಮಾನಮಿದಮಾಹೃತಮ್ ॥

ಅನುವಾದ

ಯಕ್ಷರ ಸೈನ್ಯವನ್ನು ವಿಚಲಿತಗೊಳಿಸಿ ಸೆರೆಹಿಡಿದು ಎಷ್ಟೋ ಯಕ್ಷರನ್ನು ಧರಾಶಾಯಿಯಾಗಿಸಿ, ಕೈಲಾಸ ಶಿಖರದಿಂದ ನೀವು ಅವನ ವಿಮಾನವನ್ನು ಕಸಿದುಕೊಂಡಿರುವಿರಿ.॥6॥

ಮೂಲಮ್ - 7

ಮಯೇನ ದಾನವೇಂದ್ರೇಣ ತ್ವದ್ಭಯಾತ್ ಸಖ್ಯಮಿಚ್ಛತಾ ।
ದುಹಿತಾ ತವ ಭಾರ್ಯಾರ್ಥೇ ದತ್ತಾ ರಾಕ್ಷಸಪುಂಗವ ॥

ಅನುವಾದ

ರಾಕ್ಷಸ ಶಿರೋಮಣಿಯೇ! ದಾನವರಾಜ ಮಯನು ನಿಮಗೆ ಹೆದರಿಯೇ ನಿಮ್ಮೊಂದಿಗೆ ಮಿತ್ರತೆಯನ್ನು ಮಾಡಿಕೊಂಡು ತನ್ನ ಪುತ್ರಿಯನ್ನು ನಿಮ್ಮ ಧರ್ಮಪತ್ನಿಯಾಗಿ ಅರ್ಪಿಸಿದನು.॥7॥

ಮೂಲಮ್ - 8

ದಾನವೇಂದ್ರೋ ಮಹಾಬಾಹೋ ವೀರ್ಯೋತ್ಸಿಕ್ತೋ ದುರಾಸದಃ ।
ವಿಗೃಹ್ಯ ವಶಮಾನೀತಃ ಕುಂಭೀನಸ್ಯಾಃ ಸುಖಾವಹಃ ॥

ಅನುವಾದ

ಮಹಾಬಾಹೋ! ನಿಮ್ಮ ತಂಗಿ ಕುಂಭೀನಸಿಗೆ ಸುಖ ಕೊಡುವ ಆಕೆಯ ಪತಿಯು, ತನ್ನ ಪರಾಕ್ರಮದ ಗರ್ವವುಳ್ಳ ದುರ್ಜಯ ದಾನವರಾಜ ಮಧುವನ್ನು ನೀವು ಯುದ್ಧದಲ್ಲಿ ವಶಪಡಿಸಿಕೊಂಡಿರುವಿರಿ.॥8॥

ಮೂಲಮ್ - 9

ನಿರ್ಜಿತಾಸ್ತೇ ಮಹಾಬಾಹೋ ನಾಗಾ ಗತ್ವಾ ರಸಾತಲಮ್ ।
ವಾಸುಕಿಸ್ತಕ್ಷಕಃ ಶಂಖೋ ಜಟೀ ಚ ವಶಮಾಹೃತಾಃ ॥

ಅನುವಾದ

ವಿಶಾಲಬಾಹುವಿರಾ! ನೀವು ರಸಾತಲಕ್ಕೆ ಆಕ್ರಮಣಮಾಡಿ ವಾಸುಕಿ, ತಕ್ಷಕ, ಶಂಖ ಮತ್ತು ಜಟೀ ಮೊದಲಾದ ನಾಗಗಳನ್ನು ಯುದ್ಧದಲ್ಲಿ ಗೆದ್ದು, ಅವರನ್ನು ನಿಮಗೆ ಅಧೀನವಾಗಿಸಿಕೊಂಡಿರಿ.॥9॥

ಮೂಲಮ್ - 10

ಅಕ್ಷಯಾ ಬಲವಂತಶ್ಚ ಶೂರಾ ಲಬ್ಧವರಾಃ ಪುನಃ ।
ತ್ವಯಾ ಸಂವತ್ಸರಂ ಯುದ್ಧ್ವಾ ಸಮರೇ ದಾನವಾ ವಿಭೋ ॥

ಮೂಲಮ್ - 11

ಸ್ವಬಲಂ ಸಮುಪಾಶ್ರಿತ್ಯ ನೀತಾ ವಶಮರಿಂದಮ ।
ಮಾಯಾಶ್ಚಾಧಿಗತಾಸ್ತತ್ರ ಬಹ್ವಯೋ ವೈ ರಾಕ್ಷಸಾಧಿಪ ॥

ಅನುವಾದ

ಪ್ರಭೋ! ಶತ್ರುದಮನ ರಾಕ್ಷಸರಾಜಾ! ದಾನವರು ಬಹಳ ಬಲಿಷ್ಠರಾಗಿದ್ದು, ಯಾರಿಂದಲೂ ಸೋಲದಿರುವ ಶೂರವೀರರಾಗಿದ್ದು, ವರ ಪಡೆದು ಅದ್ಭುತ ಶಕ್ತಿಸಂಪನ್ನರಾಗಿದ್ದರು, ಆದರೆ ನೀವು ರಣರಂಗದಲ್ಲಿ ಒಂದು ವರ್ಷದ ತನಕ ಯುದ್ಧಮಾಡಿ ತನ್ನ ಬಲದ ಭರವಸೆಯಿಂದ ಅವರೆಲ್ಲರನ್ನು ತಮ್ಮ ಅಧೀನವಾಗಿಸಿಕೊಂಡಿರಿ ಮತ್ತು ಅವರಿಂದ ಅನೇಕ ಮಾಯೆಗಳನ್ನು ಪಡೆದುಕೊಂಡಿರಿ.॥10-11॥

ಮೂಲಮ್ - 12

ಶೂರಾಶ್ಚ ಬಲವಂತಶ್ಚ ವರುಣಸ್ಯ ಸುತಾ ರಣೇ ।
ನಿರ್ಜಿತಾಸ್ತೇ ಮಹಾಭಾಗ ಚತುರ್ವಿಧ ಬಲಾನುಗಾಃ ॥

ಅನುವಾದ

ಮಹಾಭಾಗ! ನೀವು ವರುಣನ ಶೂರವೀರ, ಬಲಿಷ್ಠ ಪುತ್ರರನ್ನು ಅವರ ಚತುರಂಗ ಸೈನ್ಯಸಹಿತ ಯುದ್ಧದಲ್ಲಿ ಸೋಲಿಸಿ ಬಿಟ್ಟಿದ್ದೀರಿ.॥12॥

ಮೂಲಮ್ - 13

ಮೃತ್ಯುದಂಡ ಮಹಾಗ್ರಾಹಂ ಶಾಲ್ಮಲೀದ್ರುಮಮಂಡಿತಮ್ ।
ಕಾಲಪಾಶ ಮಹಾವೀಚಿಂ ಯಮಕಿಂಕರಪನ್ನಗಮ್ ॥

ಮೂಲಮ್ - 14

ಮಹಾಜ್ವರೇಣ ದುರ್ಧರ್ಷಂ ಯಮಲೋಕ ಮಹಾರ್ಣವಮ್ ।
ಅವಗಾಹ್ಯ ತ್ವಯಾ ರಾಜನ್ ಯಮಸ್ಯ ಬಲಸಾಗರಮ್ ॥

ಮೂಲಮ್ - 15

ಜಯಶ್ಚ ವಿಪುಲಃ ಪ್ರಾಪ್ತೋ ಮೃತ್ಯುಶ್ಚ ಪ್ರತಿಷೇಧಿತಃ ।
ಸುಯುದ್ಧೇನ ಚ ತೇ ಸರ್ವೇ ಲೋಕಸ್ತತ್ರ ಸುತೋಷಿತಾಃ ॥

ಅನುವಾದ

ರಾಜನೇ! ಮೃತ್ಯುದಂಡವೇ ಮಹಾ ಮೊಸಳೆಗಳಂತಿರುವ, ಯಮ-ಯಾತನಾ ಸಂಬಂಧೀ ಶಾಲ್ಮಲೀ ಮೊದಲಾದ ವೃಕ್ಷಗಳಿಂದ ಕೂಡಿದ ಕಾಲಪಾಶರೂಪೀ ಉತ್ತಾಲ ತರಂಗಗಳಿಂದ ಹೆಚ್ಚು ಶೋಭಿಸುವ, ಯಮ ದೂತರೂಪೀ ಸರ್ಪಗಳು ವಾಸವಾಗಿರುವ, ಮಹಾ ನೆರೆಯಿಂದಾಗಿ ದುರ್ಜಯವಾದ ಆ ಯಮಲೋಕರೂಪೀ ಮಹಾಸಾಗರದಲ್ಲಿ ಪ್ರವೇಶಿಸಿ ನೀವು ಯಮರಾಜನ ಸಾಗರದಂತಹ ಸೈನ್ಯವನ್ನು ನಾಶಮಾಡಿ ಮೃತ್ಯುವನ್ನು ತಡೆದು ಮಹಾವಿಜಯವನ್ನು ಪಡೆದಿರಿ. ಇಷ್ಟೇ ಅಲ್ಲ ಯುದ್ಧದ ಉತ್ತಮ ಕಲೆಯಿಂದ ನೀವು ಅಲ್ಲಿಯ ಎಲ್ಲರನ್ನು ಪೂರ್ಣ ಸಂತುಷ್ಟಗೊಳಿಸಿದಿರಿ.॥13-15॥

ಮೂಲಮ್ - 16

ಕ್ಷತ್ರಿಯೈರ್ಬಹುಭಿರ್ವೀರೈಃ ಶಕ್ರತುಲ್ಯಪರಾಕ್ರಮೈಃ ।
ಆಸೀದ್ ವಸುಮತೀ ಪೂರ್ಣಾ ಮಹದ್ಭಿರಿವ ಪಾದಪೈಃ ॥

ಅನುವಾದ

ಮೊದಲು ಈ ಪೃಥಿವಿಯು ವಿಶಾಲವೃಕ್ಷಗಳಂತೆ ಇಂದ್ರತುಲ್ಯ ಪರಾಕ್ರಮಿ ಅನೇಕ ಕ್ಷತ್ರಿಯವೀರರಿಂದ ತುಂಬಿ ಹೋಗಿತ್ತು.॥16॥

ಮೂಲಮ್ - 17

ತೇಷಾಂ ವೀರ್ಯಗುಣೋತ್ಸಾಹೈರ್ನ ಸಮೋ ರಾಘವೋ ರಣೇ ।
ಪ್ರಸಹ್ಯ ತೇ ತ್ವಯಾ ರಾಜನ್ ಹತಾಃ ಸಮರ ದುರ್ಜಯಾಃ ॥

ಅನುವಾದ

ಆ ವೀರರ ಪರಾಕ್ರಮ, ಗುಣ ಮತ್ತು ಉತ್ಸಾಹದ ದೃಷ್ಟಿಯಿಂದ ರಾಮನು ರಣರಂಗದಲ್ಲಿ ಅವರಿಗೆ ಸಮಾನ ಎಂದಿಗೂ ಆಗಲಾರನು. ರಾಜನೇ! ನೀವು ಆ ಸಮರದುರ್ಜಯ ವೀರರನ್ನು ಬಲಪೂರ್ವಕ ಕೊಂದುಹಾಕಿದಾಗ ರಾಮನನ್ನು ಗೆಲ್ಲುವುದು ನಿಮಗೆ ಯಾವ ದೊಡ್ಡ ಮಾತು.॥17॥

ಮೂಲಮ್ - 18

ತಿಷ್ಠ ವಾ ಕಿಂ ಮಹಾರಾಜ ಶ್ರಮೇಣ ತವ ವಾನರಾನ್ ।
ಅಯಮೇಕೋ ಮಹಾಬಾಹುರಿಂದ್ರಜಿತ್ ಕ್ಷಪಯಿಷ್ಯತಿ ॥

ಅನುವಾದ

ಮಹಾರಾಜ! ಇಲ್ಲದಿದ್ದರೆ ನೀವು ಸುಮ್ಮನೆ ಇಲ್ಲೇ ಕುಳಿತುಕೊಂಡಿರಿ. ನೀವು ಯಾವುದೇ ಪರಿಶ್ರಮ ಮಾಡಬೇಡಿ. ಈ ಮಹಾಬಾಹು ಇಂದ್ರಜಿತನು ಒಬ್ಬಂಟಿಗನಾಗಿಯೇ ಎಲ್ಲ ವಾನರರನ್ನು ಸಂಹರಿಸುವನು.॥18॥

ಮೂಲಮ್ - 19

ಅನೇನ ಚ ಮಹಾರಾಜ ಮಹೇಶ್ವರಮನುತ್ತಮಮ್ ।
ಇಷ್ಟ್ವಾ ಯಜ್ಞಂ ವರೋ ಲಬ್ಧೋ ಲೋಕೇ ಪರಮದುರ್ಲಭಃ ॥

ಅನುವಾದ

ರಾಜನೇ! ಇವನು ಪರಮೋತ್ತಮ ಮಾಹೇಶ್ವರ ಯಜ್ಞಾನುಷ್ಠಾನ ಮಾಡಿ ಜಗತ್ತಿನಲ್ಲಿ ಬೇರೆಯವರಿಗೆ ಅತ್ಯಂತ ದುರ್ಲಭವಾದ ವರವನ್ನು ಪಡೆದುಕೊಂಡಿರುವನು.॥19॥

ಮೂಲಮ್ - 20

ಶಕ್ತಿತೋಮರಮೀನಂ ಚ ವಿನಿಕೀರ್ಣಾಂತ್ರಶೈವಲಮ್ ।
ಗಜಕಚ್ಛಪಸಂಬಾಧಮಶ್ಚಮಂಡೂಕಸಂಕುಲಮ್ ॥

ಮೂಲಮ್ - 21

ರುದ್ರಾದಿತ್ಯಮಹಾಗ್ರಾಹಂ ಮರುದ್ ವಸುಮಹೋರಗಮ್ ।
ರಥಾಶ್ವಗಜೋಯೌಘಂ ಪದಾತಿಪುಲಿನಂ ಮಹತ್ ॥

ಮೂಲಮ್ - 22

ಅನೇನ ಹಿ ಸಮಾಸಾದ್ಯ ದೇವಾನಾಂ ಬಲಸಾಗರಮ್ ।
ಗೃಹೀತೋ ದೈವತಪತಿರ್ಲಂಕಾಂ ಚಾಪಿ ಪ್ರವೇಶಿತಃ ॥

ಅನುವಾದ

ಸಮುದ್ರದಂತೆ ಇದ್ದ ದೇವತೆಗಳ ಸೈನ್ಯದಲ್ಲಿ ಶಕ್ತಿ ಮತ್ತು ತೋಮರಗಳೇ ಅದರ ಮೀನುಗಳಾಗಿದ್ದವು. ಕಿತ್ತು ಎಸೆದ ಕರುಳುಗಳೇ ಪಾಚಿಯಾಗಿತ್ತು, ಆನೆಗಳೇ ಆ ಸೈನ್ಯಸಾಗರದ ಆಮೆಗಳಾಗಿದ್ದವು. ಕುದುರೆಗಳೇ ಕಪ್ಪೆಗಳಂತೆ ಅದರಲ್ಲಿ ಎಲ್ಲೆಡೆ ವ್ಯಾಪ್ತವಾಗಿದ್ದವು. ರುದ್ರಗಣ ಮತ್ತು ಆದಿತ್ಯಗಣರು ಆ ಸೈನ್ಯರೂಪೀ ಸಮುದ್ರದ ದೊಡ್ಡ ದೊಡ್ಡ ಮೊಸಳೆಗಳಾಗಿದ್ದವು. ಮರುದ್ಗಣ ಹಾಗೂ ವಸುಗಣರು ಅಲ್ಲಿಯ ವಿಶಾಲ ನಾಗಗಳಾಗಿದ್ದವು. ರಥಗಳು, ಆನೆ-ಕುದುರೆಗಳು ಜಲರಾಶಿಯಂತೆ ಇತ್ತು. ಕಾಲಾಳುಗಳು ಅದರ ವಿಶಾಲ ದಡಗಳಾಗಿದ್ದವು. ಆದರೆ ಈ ಇಂದ್ರಜಿತನು ದೇವತೆಗಳ ಆ ಸೈನ್ಯ ಸಮುದ್ರದಲ್ಲಿ ಹೊಕ್ಕು ದೇವೇಂದ್ರನನ್ನು ಸೆರೆಹಿಡಿದು ಲಂಕೆಗೆ ತಂದು ಬಂಧಿಸಿಟ್ಟಿದ್ದನು.॥20-22॥

ಮೂಲಮ್ - 23

ಪಿತಾಮಹನಿಯೋಗಾಚ್ಚ ಮುಕ್ತಃ ಶಂಬುರವೃತ್ರಹಾ ।
ಗತಸ್ತ್ರಿವಿಷ್ಟಪಂ ರಾಜನ್ ಸರ್ವದೇವ ನಮಸ್ಕೃತಃ ॥

ಅನುವಾದ

ರಾಜನೇ! ಮತ್ತೆ ಬ್ರಹ್ಮದೇವರು ಹೇಳಿದ್ದರಿಂದ ಇವನು ಶಂಬರ ಮತ್ತು ವೃತ್ರಾಸುರರನ್ನು ಕೊಂದ ಸರ್ವದೇವ ವಂದಿತ ಇಂದ್ರನನ್ನು ಮುಕ್ತಗೊಳಿಸಿದನು. ಆಗ ಅವನು ಸ್ವರ್ಗಲೋಕಕ್ಕೆ ಹೊರಟುಹೋದನು.॥23॥

ಮೂಲಮ್ - 24

ತಮೇವ ತ್ವಂ ಮಹಾರಾಜ ವಿಸೃಜೇಂದ್ರಜಿತಂ ಸುತಮ್ ।
ಯಾವದ್ ವಾನರ ಸೇನಾಂ ತಾಂ ಸರಮಾಂ ನಯತಿ ಕ್ಷಯಮ್ ॥

ಅನುವಾದ

ಆದ್ದರಿಂದ ಮಹಾರಾಜಾ ! ಈ ಕಾರ್ಯಕ್ಕಾಗಿ ನೀವು ರಾಜಕುಮಾರ ಇಂದ್ರಜಿತುವನ್ನೇ ಕಳಿಸಿರಿ. ಇವನು ಈ ರಾಮನ ಸಹಿತ ವಾನರ ಸೈನ್ಯವು ಇಲ್ಲಿಗೆ ಬರುವ ಮೊದಲೇ ಸಂಹಾರ ಮಾಡಿಬಿಡುವನು.॥24॥

ಮೂಲಮ್ - 25

ರಾಜನ್ನಾಪದಯುಕ್ತೇಯಮಾಗತಾ ಪ್ರಕೃತಾಜ್ಜನಾತ್ ।
ಹೃದಿ ನೈವ ತ್ವಯಾ ಕಾರ್ಯಾ ತ್ವಂ ವಿಧಿಷ್ಯಸಿ ರಾಘವಮ್ ॥

ಅನುವಾದ

ರಾಜನೇ! ಸಾಧಾರಣ ನರ ಮತ್ತು ವಾನರರಿಂದ ಪ್ರಾಪ್ತವಾದ ಈ ಆಪತ್ತಿನ ವಿಷಯದಲ್ಲಿ ಚಿಂತಿಸುವುದು ನಿಮಗೆ ಉಚಿತವಲ್ಲ. ನೀವು ಇದಕ್ಕೆ ಮನಸ್ಸಿನಲ್ಲಿ ಸ್ಥಾನವನ್ನೇ ಕೊಡಬೇಡಿ. ನೀವು ಖಂಡಿತವಾಗಿ ರಾಮನನ್ನು ವಧಿಸಿಬಿಡುವಿರಿ.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಏಳನೆಯ ಸರ್ಗ ಪೂರ್ಣವಾಯಿತು.॥7॥