००६ रावण-तन्मन्त्रिसंवादः

वाचनम्
ಭಾಗಸೂಚನಾ

ಕರ್ತವ್ಯ ನಿರ್ಣಯಕ್ಕಾಗಿ ರಾವಣನು ತನ್ನ ಮಂತ್ರಿಗಳಲ್ಲಿ ಸರಿಯಾದ ಸಲಹೆ ಕೊಡುವಂತೆ ಒತ್ತಾಯಿಸಿದುದು

ಮೂಲಮ್ - 1

ಲಂಕಾಯಾಂ ತು ಕೃತಂ ಕರ್ಮ ಘೋರಂ ದೃಷ್ಟ್ವಾ ಭಯಾವಹಮ್ ।
ರಾಕ್ಷಸೇಂದ್ರೋ ಹನುಮತಾ ಶಕ್ರೇಣೇವ ಮಹಾತ್ಮನಾ ।
ಅಬ್ರವೀದ್ ರಾಕ್ಷಸಾನ್ ಸರ್ವಾನ್ ಹ್ರಿಯಾ ಕಿಂಚಿದವಾಂಗ್ಮುಖಃ ॥

ಅನುವಾದ

ಇತ್ತ ಇಂದ್ರತುಲ್ಯ ಪರಾಕ್ರಮೀ ಮಹಾತ್ಮಾ ಹನುಮಂತನು ಲಂಕೆಯಲ್ಲಿ ಮಾಡಿದ ಅತ್ಯಂತ ಭಯಾನಕ ಘೋರ ಕರ್ಮವನ್ನು ನೋಡಿ ರಾಕ್ಷಸರಾಜ ರಾವಣನ ಮುಖವು ನಾಚಿಕೆಯಿಂದ ಬಾಗಿ, ಅವನು ಸಮಸ್ತ ರಾಕ್ಷಸರಲ್ಲಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಧರ್ಷಿತಾ ಚ ಪ್ರವಿಷ್ಟಾ ಚ ಲಂಕಾ ದುಷ್ಟ್ರಸಹಾ ಪುರೀ ।
ತೇನ ವಾನರಮಾತ್ರೇಣ ದೃಷ್ಟ್ವಾ ಸೀತಾ ಚ ಜಾನಕೀ ॥

ಅನುವಾದ

ನಿಶಾಚರರೇ! ಆ ಒಂದು ವಾನರ ಮಾತ್ರ ಹನುಮಂತನು ಒಬ್ಬಂಟಿಗನಾಗಿ ಈ ದುರ್ಧರ್ಷ ಪುರಿಯನ್ನು ಪ್ರವೇಶಿಸಿದನು. ಅವನು ಇದನ್ನು ಹಾಳುಗೆಡಹಿದ್ದಲ್ಲದೆ ಸೀತೆಯನ್ನು ಭೆಟ್ಟಿ ಮಾಡಿದನು.॥3॥

ಮೂಲಮ್ - 3

ಪ್ರಾಸಾದೋ ಧರ್ಶಿತಶ್ಚೈತ್ಯಃ ಪ್ರವರಾ ರಾಕ್ಷಸಾ ಹತಾಃ ।
ಆವಿಲಾ ಚ ಪುರೀ ಲಂಕಾ ಸರ್ವಾ ಹನುಮತಾ ಕೃತಾ ॥

ಅನುವಾದ

ಇಷ್ಟೇ ಅಲ್ಲ, ಹನುಮಂತನು ಚೈತ್ಯ ಪ್ರಾಸಾದವನ್ನು ನೆಲಸಮ ಮಾಡಿ, ಮುಖ್ಯ-ಮುಖ್ಯ ರಾಕ್ಷಸರನ್ನು ಕೊಂದುಹಾಕಿದನು ಹಾಗೂ ಇಡೀ ಲಂಕೆಯಲ್ಲಿ ಉತ್ಪಾತವೆಬ್ಬಿಸಿದನು.॥3॥

ಮೂಲಮ್ - 4

ಕಿಂ ಕರಿಷ್ಯಾಮಿ ಭದ್ರಂ ವಃ ಕಿಂ ವೋ ಯುಕ್ತಮನಂತರಮ್ ।
ಉಚ್ಯತಾಂ ನಃ ಸಮರ್ಥಂ ಯತ್ ಕೃತಂ ಚ ಸುಕೃತಂ ಭವೇತ್ ॥

ಅನುವಾದ

ನಿಮಗೆಲ್ಲರಿಗೆ ಒಳ್ಳೆಯದಾಗಲಿ. ಈಗ ನಾನು ಏನು ಮಾಡಲಿ? ನಿಮಗೆ ಉಚಿತವಾಗಿ ಕಾಣುವ, ಸಮರ್ಥವಾದ ಕಾರ್ಯವನ್ನು ಮಾಡುವುದರಿಂದ ಒಳ್ಳೆಯ ಪರಿಣಾಮವಾಗುವುದನ್ನು ತಿಳಿಸಿರಿ.॥4॥

ಮೂಲಮ್ - 5

ಮಂತ್ರಮೂಲಂ ಚ ವಿಜಯಂ ಪ್ರವದಂತಿ ಮನಸ್ವಿನಃ ।
ತಸ್ಯಾದ್ ವೈ ರೋಚಯೇ ಮಂತ್ರಂ ರಾಮಂ ಪ್ರತಿ ಮಹಾಬಲಾಃ ॥

ಅನುವಾದ

ಮಹಾಬಲಿ ವೀರರೇ! ವಿಜಯದ ಮೂಲ ಕಾರಣವು ಮಂತ್ರಿಗಳು ಕೊಟ್ಟ ಉತ್ತಮ ಸಲಹೆಯೇ ಆಗಿದೆ ಎಂದು ಮನಸ್ವೀ ಪುರುಷರು ಹೇಳಿರುವರು. ಅದಕ್ಕಾಗಿ ಶ್ರೀರಾಮನ ವಿಷಯದಲ್ಲಿ ನಿಮ್ಮಿಂದ ಸಲಹೆ ಪಡೆಯುವುದೇ ಒಳ್ಳೆಯದೆಂದು ನಾನು ತಿಳಿಯುತ್ತೇನೆ.॥5॥

ಮೂಲಮ್ - 6

ತ್ರಿವಿಧಾಃ ಪುರುಷಾ ಲೋಕೇ ಉತ್ತಮಾಧಮಮಧ್ಯಮಾಃ ।
ತೇಷಾಂ ತು ಸಮವೇತಾನಾಂ ಗುಣದೋಷೌ ವದಾಮ್ಯಹಮ್ ॥

ಅನುವಾದ

ಜಗತ್ತಿನಲ್ಲಿ ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ವಿಧದ ಪುರುಷರಿರುತ್ತಾರೆ. ನಾನು ಅವರೆಲ್ಲರ ಗುಣ-ದೋಷಗಳನ್ನು ವರ್ಣಿಸುವೆನು.॥6॥

ಮೂಲಮ್ - 7

ಮಂತ್ರಸ್ತ್ರಿಭಿರ್ಹಿ ಸಂಯುಕ್ತಃ ಸಮರ್ಥೈರ್ಮಂತ್ರನಿರ್ಣಯೇ ।
ಮಿತ್ರೈರ್ವಾಪಿ ಸಮಾನಾರ್ಥೈರ್ಬಾಂಧವೈರಪಿ ವಾಧಿಕೈಃ ॥

ಮೂಲಮ್ - 8

ಸಹಿತೋ ಮಂತ್ರಯಿತ್ವಾ ಯಃ ಕರ್ಮಾರಂಭಾನ್ ಪ್ರವರ್ತಯೇತ್ ।
ದೈವೇ ಚ ಕುರುತೇ ಯತ್ನಂ ತಮಾಹುಃ ಪುರುಷೋತ್ತಮಮ್ ॥

ಅನುವಾದ

ಯಾರ ಮಂತ್ರಾಲೋಚನೆ ಮುಂದೆ ತಿಳಿಸುವ ಮೂರು ಲಕ್ಷಣಗಳಿಂದ ಕೂಡಿರುವುದೋ ಹಾಗೂ ಯಾವ ಪುರುಷನು ಮಂತ್ರಾಲೋಚನೆಯಲ್ಲಿ ಸಮರ್ಥನೋ, ಮಿತ್ರರಂತೆ ಸುಖ-ದುಃಖಗಳಲ್ಲಿ ಬಾಂಧವರಂತೆ ಹಾಗೂ ಅವರಿಗಿಂತಲೂ ಮಿಗಿಲಾಗಿ ತನ್ನ ಹಿತಕಾರಿಗಳೊಂದಿಗೆ ಸಲಹೆಯನ್ನು ಪಡೆದು ಕಾರ್ಯವನ್ನು ಪ್ರಾರಂಭಿಸುವನೋ ಮತ್ತು ದೈವದ ಆಸರೆಯಿಂದ ಪ್ರಯತ್ನಮಾಡುವವನೇ ಉತ್ತಮ ಪುರುಷನೆಂದು ಹೇಳುತ್ತಾರೆ.॥7-8॥

ಮೂಲಮ್ - 9

ಏಕೋಽರ್ಥಂ ವಿಮೃಶೇದೇಕೋ ಧರ್ಮೇ ಪ್ರಕುರುತೇ ಮನಃ ।
ಏಕಃ ಕಾರ್ಯಾಣಿ ಕುರುತೇ ತಮಾಹುರ್ಮಧ್ಯಮಂ ನರಮ್ ॥

ಅನುವಾದ

ಒಬ್ಬನೇ ತನ್ನ ಕರ್ತವ್ಯವನ್ನು ವಿಚಾರಮಾಡುವವನು, ಒಬ್ಬಂಟಿಗನಾಗಿಯೇ ಧರ್ಮದಲ್ಲಿ ಮನಸ್ಸು ತೊಡಗಿಸುವವನು, ಒಬ್ಬನೇ ಎಲ್ಲ ಕೆಲಸ ಮಾಡುವವನು, ಮಧ್ಯಮ ದರ್ಜೆಯವನೆಂದು ಹೇಳಲಾಗುತ್ತದೆ.॥9॥

ಮೂಲಮ್ - 10

ಗುಣದೋಷೌ ನ ನಿಶ್ಚಿತ್ಯ ತ್ಯಕ್ತ್ವಾ ದೈವವ್ಯಪಾಶ್ರಯಮ್ ।
ಕರಿಷ್ಯಾಮೀತಿ ಯಃ ಕಾರ್ಯಮುಪೇಕ್ಷೇತ್ ಸ ನರಾಧಮಃ ॥

ಅನುವಾದ

ಗುಣ-ದೋಷಗಳನ್ನು ವಿಚಾರ ಮಾಡದೆ, ದೈವವನ್ನು ಆಶ್ರಯಿಸದೆ ಕೇವಲ ‘ಮಾಡುವೆನು’ ಎಂಬ ಬುದ್ಧಿಯಿಂದ ಕಾರ್ಯವನ್ನು ಪ್ರಾರಂಭಿಸುವವನು ಹಾಗೂ ಅದನ್ನು ಉಪೇಕ್ಷೆ ಮಾಡುವವನು ಪುರುಷರಲ್ಲಿ ಅಧಮನಾಗಿದ್ದಾನೆ.॥10॥

ಮೂಲಮ್ - 11

ಯಥೇಮೇ ಪುರುಷಾ ನಿತ್ಯಮುತ್ತಮಾಧಮಮಧ್ಯಮಾಃ ।
ಏವಂ ಮಂತ್ರೋಽಪಿ ವಿಜ್ಞೇಯ ಉತ್ತಮಾಧಮಮಧ್ಯಮಃ ॥

ಅನುವಾದ

ಈ ಪುರುಷರು ಸದಾ ಉತ್ತಮ, ಮಧ್ಯಮ, ಅಧಮ ಎಂಬ ಮೂರು ಪ್ರಕಾರದವರು ಇರುವಂತೆಯೇ ಮಂತ್ರಾಲೋಚನೆಯೂ ಉತ್ತಮ, ಮಧ್ಯಮ, ಅಧಮ ಎಂಬ ಭೇದದಿಂದ ಮೂರು ಪ್ರಕಾರದಿಂದ ಇರುತ್ತದೆ.॥11॥

ಮೂಲಮ್ - 12

ಐಕಮತ್ಯಮುಪಾಗಮ್ಯ ಶಾಸ್ತ್ರದೃಷ್ಟೇನ ಚಕ್ಷುಷಾ ।
ಮಂತ್ರಿಣೋ ಯತ್ರ ನಿರತಾಸ್ತಮಾಹುರ್ಮಂತ್ರಮುತ್ತಮಮ್ ॥

ಅನುವಾದ

ಶಾಸ್ತ್ರೋಕ್ತ ದೃಷ್ಟಿಯಿಂದ ಎಲ್ಲ ಮಂತ್ರಿಗಳು ಒಮ್ಮತರಾಗಿ ಪ್ರವೃತ್ತರಾಗುವುದನ್ನು ಉತ್ತಮ ಮಂತ್ರಾಲೋಚನೆ ಎಂದು ಹೇಳುತ್ತಾರೆ.॥12॥

ಮೂಲಮ್ - 13

ಬಹ್ವೀರಪಿ ಮತೀರ್ಗತ್ವಾ ಮಂತ್ರಿಣಾಮರ್ಥನಿರ್ಣಯಃ ।
ಪುನರ್ಯತ್ರೈಕತಾಂ ಪ್ರಾಪ್ತಃ ಸ ಮಂತ್ರೋ ಮಧ್ಯಮಃ ಸ್ಮೃತಃ ॥

ಅನುವಾದ

ಪ್ರಾರಂಭದಲ್ಲಿ ಯಾವುದೇ ಪ್ರಕಾರದ ಮತಭೇದವಿದ್ದರೂ ಕೊನೆಗೆ ಎಲ್ಲ ಮಂತ್ರಿಗಳು ಕರ್ತವ್ಯ ವಿಷಯದಲ್ಲಿನ ನಿರ್ಣಯವು ಒಂದೇ ಆಗುವ ಮಂತ್ರಾಲೋಚನೆಯು ಮಧ್ಯಮವೆಂದು ತಿಳಿಯಲಾಗಿದೆ.॥13॥

ಮೂಲಮ್ - 14

ಅನ್ಯೋನ್ಯಮತಿಮಾಸ್ಥಾಯ ಯತ್ರ ಸಂಪ್ರತಿಭಾಷ್ಯತೇ ।
ನ ಚೈಕಮತ್ಯೇ ಶ್ರೇಯೋಽಸ್ತಿ ಮಂತ್ರಃ ಸೋಽಧಮ ಉಚ್ಯತೇ ॥

ಅನುವಾದ

ಭಿನ್ನ-ಭಿನ್ನ ಬುದ್ಧಿಯನ್ನು ಆಶ್ರಯಿಸಿ, ಎಲ್ಲ ಕಡೆಯಿಂದ ಸ್ಪರ್ಧಾಯುಕ್ತ ಭಾಷಣ ಮಾಡುವುದನ್ನು ಮತ್ತು ಒಮ್ಮತ ವಾದರೂ ಅದರಿಂದ ಶ್ರೇಯಸ್ಸಿನ ಸಂಭಾವನೆ ಇಲ್ಲ ದಿದ್ದರೆ, ಆ ಮಂತ್ರಾಲೋಚನೆಯು ನಿಶ್ಚಯವಾಗಿ ಅಧಮವೆಂದು ಹೇಳಲಾಗುತ್ತದೆ.॥14॥

ಮೂಲಮ್ - 15

ತಸ್ಮಾತ್ ಸುಮಂತ್ರಿತಂ ಸಾಧು ಭವಂತೋ ಮತಿಸತ್ತಮಾಃ ।
ಕಾರ್ಯಂ ಸಂಪ್ರತಿಪದ್ಯಂತಾಮೇತತ್ ಕೃತ್ಯಂ ಮತಂ ಮಮ ॥

ಅನುವಾದ

ನೀವೆಲ್ಲರೂ ಪರಮ ಬುದ್ಧಿವಂತರಿದ್ದೀರಿ. ಅದಕ್ಕಾಗಿ ಚೆನ್ನಾಗಿ ವಿಚಾರ ವಿಮರ್ಶೆ ಮಾಡಿ ಯಾವುದಾದರೂ ಒಂದು ಕಾರ್ಯವನ್ನು ನಿಶ್ಚಯಿಸಿರಿ. ಅದೇ ನನ್ನ ಕರ್ತವ್ಯವೆಂದು ತಿಳಿಯುವೆನು.॥15॥

ಮೂಲಮ್ - 16

ವಾನರಾಣಾಂ ಹಿ ಧೀರಾಣಾಂ ಸಹಸ್ರೈಃ ಪರಿವಾರಿತಃ ।
ರಾಮೋಽಭೇತಿ ಪುರೀಂ ಲಂಕಾಮಸ್ಮಾಕಮುಪರೋಧಕಃ ॥

ಅನುವಾದ

ಇಂತಹ ನಿಶ್ಚಯದ ಆವಶ್ಯಕತೆ ಏಕೆಂದರೆ-ರಾಮನು ಸಾವಿರಾರು ಧೀರವೀರ ವಾನರರೊಂದಿಗೆ ನಮ್ಮ ಲಂಕೆಯನ್ನು ಆಕ್ರಮಿಸಲು ಬರುತ್ತಿದ್ದಾನೆ.॥16॥

ಮೂಲಮ್ - 17

ತರಿಷ್ಯತಿ ಚ ಸುವ್ಯಕ್ತಂ ರಾಘವಃ ಸಾರಗಂ ಸುಖಮ್ ।
ತರಸಾ ಯುಕ್ತರೂಪೇಣ ಸಾನುಜಃ ಸಬಲಾನುಗಃ ॥

ಅನುವಾದ

ಆ ರಘುವಂಶೀ ರಾಮನು ತನ್ನ ಸಮುಚಿತ ಬಲದಿಂದ ಸಹೋದರ, ಸೈನ್ಯ ಮತ್ತು ಸೇವಕರೊಂದಿಗೆ ಸುಲಭವಾಗಿ ಸಮುದ್ರವನ್ನು ದಾಟುವನು ಎಂಬುದೂ ಚೆನ್ನಾಗಿ ಸ್ಪಷ್ಟವಾಗಿದೆ.॥17॥

ಮೂಲಮ್ - 18

ಸಮುದ್ರಮುಚ್ಛೋಷಯತಿ ವಿರ್ಯೇಣಾನ್ಯತ್ಕರೋತಿ ವಾ ।
ತಸ್ಮಿನ್ನೇವಂವಿಧೇ ಕಾರ್ಯೇ ವಿರುದ್ಧೇ ವಾನರೈಃ ಸಹ ।
ಹಿತಂ ಪುರೆ ಚ ಸೈನ್ಯೇ ಚ ಸರ್ವಂ ಸಮ್ಮಂತ್ರ್ಯತಾಂ ಮಮ ॥

ಅನುವಾದ

ಅವನು ಒಂದೇ ಸಮುದ್ರವನ್ನು ಒಣಗಿಸಿಬಿಡಬಹುದು ಅಥವಾ ತನ್ನ ಪರಾಕ್ರಮದಿಂದ ಬೇರೆ ಯಾವುದಾದರೂ ಉಪಾಯ ಮಾಡುವನು. ಇಂತಹ ಸ್ಥಿತಿಯಲ್ಲಿ ವಾನರರೊಂದಿಗೆ ವಿರೋಧ ಉಂಟಾದಾಗ ನಗರ ಮತ್ತು ಸೈನ್ಯಕ್ಕಾಗಿ ಹಿತಕರವಾಗುವಂತಹ ಸಲಹೆ ನೀವು ಕೊಡಿರಿ.॥18॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಆರನೆಯ ಸರ್ಗ ಪೂರ್ಣವಾಯಿತು.॥6॥