वाचनम्
ಭಾಗಸೂಚನಾ
ಶ್ರೀರಾಮನು ಸೀತೆಗಾಗಿ ಶೋಕಿಸಿದುದು
ಮೂಲಮ್ - 1
ಸಾ ತು ನೀಲೇನ ವಿಧಿವತ್ಸ್ವಾರಕ್ಷಾ ಸುಸಮಾಹಿತಾ ।
ಸಾಗರಸ್ಯೋತ್ತರೇ ತೀರೇ ಸಾಧು ಸಾ ವಿನಿವೇಶಿತಾ ॥
ಅನುವಾದ
ವಿಧಿವತ್ತಾಗಿ ರಕ್ಷಣೆಯ ವ್ಯವಸ್ಥೆ ಮಾಡಿ ಆ ಹೆಚ್ಚು ಜಾಗ್ರತವಾಗಿರುವ ವಾನರ ಸೈನ್ಯವನ್ನು ನೀಲನು ಸಮುದ್ರ ತೀರದಲ್ಲಿ ಚೆನ್ನಾಗಿ ನೆಲೆಗೊಳಿಸಿದನು.॥1॥
ಮೂಲಮ್ - 2
ಮೈಂದಶ್ಚ ದ್ವಿವಿದಶ್ಚೋಭೌ ತತ್ರ ವಾನರಪುಂಗವೌ ।
ವಿಚೇರತುಶ್ಚ ತಾಂ ಸೇನಾಂ ರಕ್ಷಾರ್ಥಂ ಸರ್ವತೋದಿಶಮ್ ॥
ಅನುವಾದ
ಮೈಂದ ಮತ್ತು ದ್ವಿವಿದ ಇಬ್ಬರು ಪ್ರಮುಖ ವಾನರವೀರರು ಆ ಸೈನ್ಯದ ರಕ್ಷಣೆಗಾಗಿ ಎಲ್ಲೆಡೆ ಸುತ್ತಾಡುತ್ತಾ ಇದ್ದರು.॥2॥
ಮೂಲಮ್ - 3
ನಿವಿಷ್ಟಾಯಾಂ ತು ಸೇನಾಯಾಂ ತೀರೆ ನದನದೀಪತೇಃ ।
ಪಾರ್ಶ್ವಸ್ಥಂ ಲಕ್ಷ್ಮಣಂ ದೃಷ್ಟ್ವಾ ರಾಮೋ ವಚನಮಬ್ರವೀತ್ ॥
ಅನುವಾದ
ಸಮುದ್ರತೀರದಲ್ಲಿ ಸೈನ್ಯದ ಶಿಬಿರ ಹೂಡಿದಾಗ ಶ್ರೀರಾಮಚಂದ್ರನು ತನ್ನ ಬಳಿ ಕುಳಿತಿರುವ ಲಕ್ಷ್ಮಣನ ಕಡೆಗೆ ನೋಡಿ ಇಂತೆಂದನು.॥3॥
ಮೂಲಮ್ - 4
ಶೋಕಶ್ಚ ಕಿಲ ಕಾಲೇನ ಗಚ್ಛತಾ ಹ್ಯಪಗಚ್ಛತಿ ।
ಮಮ ಚಾಪಶ್ಯತಃ ಕಾಂತಾಮಹನ್ಯಹನಿ ವರ್ಧತೇ ॥
ಅನುವಾದ
ಸುಮಿತ್ರಾನಂದನನೇ! ಶೋಕವು ಸಮಯಕಳೆದಂತೆ ತಾನಾಗಿ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ನನ್ನ ಶೋಕವಾದರೋ ನನ್ನ ಪ್ರಾಣವಲ್ಲಭೆಯನ್ನು ನೋಡದೆ ದಿನ-ದಿನವೂ ಹೆಚ್ಚುತ್ತಲೇ ಇದೆ.॥4॥
ಮೂಲಮ್ - 5
ನ ಮೆ ದುಃಖಂ ಪ್ರಿಯಾ ದೂರೆ ನ ಮೇ ದುಃಖಂ ಹೃತೇತಿ ಚ ।
ಏತದೇವಾನುಶೋಚಾಮಿ ವಯೋಽಸ್ಯಾ ಹ್ಯತಿವರ್ತತೇ ॥
ಅನುವಾದ
ನನ್ನ ಪ್ರಿಯೆ ನನ್ನಿಂದ ದೂರವಾಗಿದ್ದಾಳೆ ಎಂಬ ದುಃಖ ನನಗಿಲ್ಲ. ಆಕೆಯ ಅಪಹರಣವಾಗಿದೆ ಎಂಬುದರ ದುಃಖವೂ ನನಗಿಲ್ಲ. ಆದರೆ ಆಕೆಯು ಬದುಕಿರಲು ನಿಶ್ಚಿತಗೊಳಿಸಿದ ಅವಧಿಯು ಬೇಗನೇ ಮುಗಿಯುತ್ತಾ ಇದೆಯಲ್ಲ ಇದಕ್ಕಾಗಿ ನಾನು ಪದೇ-ಪದೇ ಶೋಕದಲ್ಲಿ ಮುಳುಗಿದ್ದೇನೆ.॥5॥
ಮೂಲಮ್ - 6
ವಾಹಿ ವಾತ ಯತಃ ಕಾಂತಾ ತಾಂ ಸ್ಪೃಷ್ಟ್ವಾ ಮಾಮಪಿ ಸ್ಪೃಶ ।
ತ್ವಯಿ ಮೇ ಗಾತ್ರಸಂಸ್ಪರ್ಶಶ್ಚಂದ್ರೇ ದೃಷ್ಟಿಸಮಾಗಮಃ ॥
ಅನುವಾದ
ಗಾಳಿಯೇ! ನನ್ನ ಪ್ರಾಣವಲ್ಲಭೆ ಇರುವಲ್ಲಿ ಬೀಸಿ, ಆಕೆಯನ್ನು ಸ್ಪರ್ಶಿಸಿ ನನ್ನನ್ನು ಸ್ಪರ್ಶಿಸು. ಆ ಸ್ಥಿತಿಯಲ್ಲಿ ನೀನು ನನ್ನನ್ನು ಸ್ಪರ್ಶಿಸಿದುದು ಚಂದ್ರನಿಂದ ಆಗುವ ದೃಷ್ಟಿಸಂಯೋಗದಂತೆ ನನ್ನ ಎಲ್ಲ ಸಂತಾಪಗಳು ದೂರ ಮಾಡುವುದು ಹಾಗೂ ಆಹ್ಲಾದಜನಕವಾಗುವುದು.॥6॥
ಮೂಲಮ್ - 7
ತನ್ಮೇ ದಹತಿ ಗಾತ್ರಾಣಿ ವಿಷಂ ಪೀತಮಿವಾಶಯೆ ।
ಹಾ ನಾಯೇತಿ ಪ್ರಿಯಾ ಸಾ ಮಾಂ ಹ್ರಿಯಮಾಣಾ ಯದಬ್ರವೀತ್ ॥
ಅನುವಾದ
ಅಪಹರಣದ ಸಮಯ ನನ್ನ ಪ್ರಿಯ ಸೀತೆಯು ‘ಹಾನಾಥ!’ ಎಂದು ಕೂಗಿದ ದನಿಯು, ನುಂಗಿದ ಹೊಟ್ಟೆಯೊಳಗೆ ಇರುವ ವಿಷದಂತೆ ನನ್ನ ಸರ್ವಾಂಗ ವನ್ನೂ ಸುಡುತ್ತಾ ಇದೆ.॥7॥
ಮೂಲಮ್ - 8
ತದ್ವಿಷಯೋಗೇಂಧನವತಾ ತಚ್ಚಿತ್ತಾವಿಮಲಾರ್ಚಿಷಾ ।
ರಾತ್ರಿಂ ದಿವಂ ಶರೀರಂ ಮೇ ದಹ್ಯತೆ ಮದನಾಗ್ನಿನಾ ॥
ಅನುವಾದ
ಪ್ರಿಯತಮೆಯ ವಿಯೋಗವೇ ಇದರ ಉರುವಲಾಗಿದೆ, ಆಕೆಯ ಚಿಂತೆಯೇ ಅದರ ಜ್ವಾಲೆಯಾಗಿದೆ, ಆ ಪ್ರೇಮಾಗ್ನಿಯು ನನ್ನ ಶರೀರವನ್ನು ಹಗಲು-ರಾತ್ರಿ ಸುಡುತ್ತಾ ಇದೆ.॥8॥
ಮೂಲಮ್ - 9
ಅವಗಾಹ್ಯಾರ್ಣವಂ ಸ್ವಪ್ಸ್ಯೇ ಸೌಮಿತ್ರೇ ಭವತಾ ವಿನಾ ।
ಏವಂ ಚ ಪ್ರಜ್ವಲನ್ ಕಾಮೋ ನ ಮಾ ಸುಪ್ತಂ ಜಲೆ ದಹೇತ್ ॥
ಅನುವಾದ
ಸುಮಿತ್ರಾನಂದನ! ನೀನು ಇಲ್ಲೇ ಇರು. ನಾನು ನಿನ್ನನ್ನು ಬಿಟ್ಟು ಒಬ್ಬನೇ ಸಮುದ್ರದೊಳಗೆ ನುಗ್ಗಿ ಮಲಗುವೆನು. ಹೀಗೆ ನೀರಿನಲ್ಲಿ ಮಲಗಿದಾಗ ಈ ಉರಿಯುವ ಪ್ರೇಮಾಗ್ನಿಯು ನನ್ನನ್ನು ಸುಡಲಾರದು.॥9॥
ಮೂಲಮ್ - 10
ಬಹ್ವೇತತ್ ಕಾಮಯಾನಸ್ಯ ಶಕ್ಯಮೇತೇನ ಜೀವಿತುಮ್ ।
ಯದಹಂ ಸಾ ಚ ವಾಮೋರೂರೇಕಾಂ ಧರಣಿಮಾಶ್ರಿತೌ ॥
ಅನುವಾದ
ನಾನು ಮತ್ತು ಆ ವಾಮೋರು ಸೀತೆಯು ಒಂದೇ ನೆಲದಲ್ಲಿ ಮಲಗುತ್ತೇವೆ. ಪ್ರಿಯತಮೆಯ ಸಂಯೋಗವನ್ನು ಇಚ್ಛಿಸುವ ವಿರಹಿಯಾದ ನನಗೆ ಇಷ್ಟೇ ಸಾಕಾಗಿದೆ. ಇದರಿಂದಲೇ ನಾನು ಬದುಕಿರಬಲ್ಲೆ.॥10॥
ಮೂಲಮ್ - 11
ಕೇದಾರಸ್ಯೇವ ಕೇದಾರಃ ಸೋದಕಸ್ಯ ನಿರೂದಕಃ ।
ಉಪಸ್ನೇಹೇನ ಜೀವಾಮಿ ಜೀವಂತೀಂ ಯಚ್ಛೃಣೋಮಿ ತಾಮ್ ॥
ಅನುವಾದ
ನೀರಿನಿಂದ ತುಂಬಿದ ಹೊಲದ ಸಂಪರ್ಕದಿಂದ ನೀರಿಲ್ಲದ ಹೊಲದ ಪೈರು ಕೂಡ ಸಾಯದೆ ಬೆಳೆಯುತ್ತದೆ; ಹಾಗೆಯೇ ಸೀತೆಯು ಈಗಲೂ ಬದುಕಿದ್ದಾಳೆ ಎಂದು ಕೇಳುವುದರಿಂದಲೇ ನಾನು ಬದುಕಿರಬಲ್ಲೆನು.॥11॥
ಮೂಲಮ್ - 12
ಕದಾ ನು ಖಲು ಸುಶ್ರೋಣೀಂ ಶತಪತ್ರಾಯತೇಕ್ಷಣಾಮ್ ।
ವಿಜಿತ್ಯ ಶತ್ರೂನ್ದ್ರಕ್ಷ್ಯಾಮಿ ಸೀತಾಂ ಸ್ಫೀತಾಮಿವ ಶ್ರಿಯಮ್ ॥
ಅನುವಾದ
ಶತ್ರುಗಳನ್ನು ನಾನು ಸೋಲಿಸಿ ಸಮೃದ್ಧಶಾಲಿನೀ ರಾಜ್ಯಲಕ್ಷ್ಮಿಯಂತಿರುವ ಕಮಲನಯನೀ ಸುಂದರ ಸೀತೆಯನ್ನು ನೋಡುವ ಸಮಯ ಯಾವಾಗ ಬರುವುದೋ.॥12॥
ಮೂಲಮ್ - 13
ಕದಾ ಸುಚಾರೂದಂತೋಷ್ಟಂ ತಸ್ಯಾಃ ಪದ್ಮಮಿವಾನನಮ್ ।
ಈಷದುನ್ನಾಮ್ಯ ಪಾಸ್ಯಾಮಿ ರಸಾಯನಮಿವಾತುರಃ ॥
ಅನುವಾದ
ರೋಗಿಯು ರಸಾಯನ ಕುಡಿಯುವಂತೆಯೇ ನಾನು ಸುಂದರ ಹಲ್ಲುಗಳುಳ್ಳ ಮನೋಹರ ತುಟಿಗಳಿಂದ ಕೂಡಿದ ಸೀತೆಯ ಪ್ರಫುಲ್ಲ ಕಮಲದಂತಹ ಮುಖವನ್ನು ಸ್ವಲ್ಪ ಮೇಲಕ್ಕೆತ್ತಿ ಚುಂಬಿಸುವೆನು.॥13॥
ಮೂಲಮ್ - 14
ತೌ ತಸ್ಯಾಃ ಸಹಿತೌ ಪೀನೌ ಸ್ತನೌ ತಾಲಲೋಪಮೌ ।
ಕದಾ ನ ಖಲು ಸೋತ್ಕಂಪೌ ಶ್ಲಿಷ್ಯಂತ್ಯಾ ಮಾಂ ಭಜಿಷ್ಯತಃ ॥
ಅನುವಾದ
ನನ್ನನ್ನು ಅಲಂಗಿಸುತ್ತಿರುವ ಸೀತೆಯ ಪರಸ್ಪರ ಹೊಂದಿಕೊಂಡ ತಾಲಫಲದಂತೆ ಗುಂಡಾಗಿ ಹಾಗೂ ದಪ್ಪವಾಗಿರುವ ಎರಡೂ ಸ್ತನಗಳು ಕೊಂಚ ಕಂಪನದಿಂದ ನನಗೆ ಯಾವಾಗ ಸ್ಪರ್ಶಿಸುವವೋ.॥14॥
ಮೂಲಮ್ - 15
ಸಾ ನೂನಮಸಿತಾಪಾಂಗಿ ರಕ್ಷೋಮಧ್ಯಗತಾ ಸತೀ ।
ಮನ್ನಾಥಾ ನಾಥ ಹೀನೇವ ತ್ರಾತಾರಂ ನಾಧಿಗಚ್ಛತಿ ॥
ಅನುವಾದ
ಕಾಡಿಗೆಯಂತೆ ಕಣ್ಣುಳ್ಳ ಸತೀ-ಸಾಧ್ವೀ ಸೀತೆಗೆ ನಾನು ನಾಥನಾಗಿದ್ದರೂ ಇಂದು ಅವಳು ಅನಾಥಳಂತೆ ರಾಕ್ಷಸರ ನಡುವೆ ಸಿಲುಕಿ ನಿಶ್ಚಯವಾಗಿ ಯಾರೂ ರಕ್ಷಕರಿಲ್ಲದೇ ಇರಬಹುದು.॥15॥
ಮೂಲಮ್ - 16
ಕಥಂ ಜನಕರಾಜಸ್ಯ ದುಹಿತಾ ಮಮ ಚ ಪ್ರಿಯಾ ।
ರಾಕ್ಷಸೀಮಧ್ಯಗಾ ಶೇತೆ ಸ್ನುಷಾ ದಶರಥಸ್ಯ ಚ ॥
ಅನುವಾದ
ಜನಕರಾಜನ ಪುತ್ರಿ, ದಶರಥ ಮಹಾರಾಜರ ಸೊಸೆ, ನನ್ನ ಪ್ರಿಯತಮೆ ಸೀತೆಯು ರಾಕ್ಷಸಿಯರ ನಡುವೆ ಹೇಗೆ ಮಲಗುತ್ತಿರಬಹುದೋ.॥16॥
ಮೂಲಮ್ - 17
ಅವಿಕ್ಷೋಭ್ಯಾಣಿ ರಕ್ಷಾಂಸಿ ಸಾ ವಿಧೂಯೋತ್ಪತಿಷ್ಯತಿ ।
ವಿಧೂಯ ಜಲದಾನ್ ನೀಲಾನ್ ಶಶಿಲೇಖಾ ಶರಸ್ತ್ವಿವ ॥
ಅನುವಾದ
ಶರತ್ಕಾಲದ ಚಂದ್ರಲೇಖೆಯು ಕರಿಮೋಡಗಳಿಂದ ಮುಕ್ತವಾಗುವಂತೆ ನಾನು ರಾಕ್ಷಸರನ್ನು ವಿನಾಶಗೈದು ಸೀತೆಯನ್ನು ಉದ್ಧರಿಸುವ ಸಮಯ ಎಂದು ಬರುವುದೋ.॥17॥
ಮೂಲಮ್ - 18
ಸ್ವಭಾವತನುಕಾ ನೂನಂ ಶೋಕೇನಾನಶನೇನ ಚ ।
ಭೂಯಸ್ತನುತರಾ ಸೀತಾ ದೇಶಕಾಲ ವಿಪರ್ಯಯಾತ್ ॥
ಅನುವಾದ
ಸ್ವಾಭಾವಿಕವಾಗಿಯೇ ತೆಳ್ಳಗೆ ಶರೀರವುಳ್ಳ ಸೀತೆಯು ವಿಪರೀತ ದೇಶಕಾಲದಲ್ಲಿ ಸಿಲುಕಿದ್ದರಿಂದ ಖಂಡಿತವಾಗಿ ಶೋಕ ಮತ್ತು ಉಪಾಸಮಾಡಿ ಇನ್ನೂ ತೆಳ್ಳಗೆ ಆಗಿರಬಹುದು.॥18॥
ಮೂಲಮ್ - 19
ಕದಾ ನು ರಾಕ್ಷಸೇಂದ್ರಸ್ಯ ನಿಧಾಯೋರಸಿ ಸಾಯಕಾನ್ ।
ಶೋಕಂ ಪ್ರತ್ಯಾಹರಿಷ್ಯಾಮಿ ಶೋಕಮುತ್ಮೃಜ್ಯ ಮಾನಸಮ್ ॥
ಅನುವಾದ
ರಾಕ್ಷಸರಾಜ ರಾವಣನ ಎದೆಗೆ ನನ್ನ ಬಾಣಗಳನ್ನು ನೆಟ್ಟು, ನನ್ನ ಮಾನಸಿಕ ಶೋಕವನ್ನು ನಿವಾರಿಸಿ ಎಂದು ಸೀತೆಯ ಶೋಕವನ್ನು ದೂರಗೊಳಿಸುವೆನೋ.॥19॥
ಮೂಲಮ್ - 20
ಕದಾ ನು ಖಲು ಮೇ ಸಾಧ್ವೀ ಸೀತಾಮರಸುತೋಪಮಾ ।
ಸೋತ್ಕಂಠಾ ಕಂಠಮಾಲಂಬ್ಯ ಮೋಕ್ಷ್ಯತ್ಯಾನಂದಜಂ ಜಲಮ್ ॥
ಅನುವಾದ
ದೇವಕನ್ಯೆಯಂತೆ ಸುಂದರಳಾದ ನನ್ನ ಸತೀ-ಸಾಧ್ವೀ ಸೀತೆಯು ಉತ್ಕಂಠತೆಯಿಂದ ನನ್ನನ್ನು ಅಪ್ಪಿಕೊಂಡು ಕಣ್ಣುಗಳಿಂದ ಎಂದು ಆನಂದಾಶ್ರುಗಳನ್ನು ಸುರಿಸುವಳು.॥20॥
ಮೂಲಮ್ - 21
ಕದಾ ಶೋಕಮಿಮಂ ಘೋರಂ ಮೈಥಿಲೀ ವಿಪ್ರಯೋಗಜಮ್ ।
ಸಹಸಾ ವಿಪ್ರಮೋಕ್ಷ್ಯಾಮಿ ವಾಸಾಃ ಶುಕ್ಲೇತರಂ ಯಥಾ ॥
ಅನುವಾದ
ಮಿಥಿಲೇಶ ಕುಮಾರಿಯ ವಿಯೋಗದಿಂದ ಆಗುವ ಈ ಭಯಂಕರ ಶೋಕವನ್ನು ಕೊಳೆ ಬಟ್ಟೆಯಂತೆ ಕೂಡಲೇ ತ್ಯಜಿಸುವ ಸಮಯ ಎಂದು ಬರುವುದೋ.॥21॥
ಮೂಲಮ್ - 22
ಏವಂ ವಿಲಪತಸ್ತಸ್ಯ ತತ್ರ ರಾಮಸ್ಯ ಧೀಮತಃ ।
ದಿನಕ್ಷಯಾನ್ಮಂದವಪುರ್ಭಾಸ್ಕರೋಽಸ್ತಮುಪಾಗಮತ್ ॥
ಅನುವಾದ
ಹಗಲು ಮುಗಿದಾಗ ಮಂದಕಿರಣಗಳುಳ್ಳ ಸೂರ್ಯನು ಅಸ್ತಾಚಲಕ್ಕೆ ಸರಿದರೂ ಬುದ್ಧಿವಂತ ಶ್ರೀರಾಮನು ಅಲ್ಲಿ ಈ ಪ್ರಕಾರ ವಿಲಾಪಮಾಡುತ್ತಲೇ ಇದ್ದನು.॥22॥
ಮೂಲಮ್ - 23
ಆಶ್ವಾಸಿತೋ ಲಕ್ಷ್ಮಣೇನ ರಾಮಃ ಸಂಧ್ಯಾಮುಪಾಸತ ।
ಸ್ಮರನ್ ಕಮಲಪತ್ರಾಕ್ಷಿಂ ಸೀತಾಂ ಶೋಕಾಕುಲೀಕೃತಃ ॥
ಅನುವಾದ
ಆಗ ಲಕ್ಷ್ಮಣನು ಧೈರ್ಯತುಂಬಿದಾಗ ಶೋಕದಿಂದ ವ್ಯಾಕುಲನಾದ ಶ್ರೀರಾಮನು ಕಮಲನಯನೀ ಸೀತೆಯನ್ನು ಚಿಂತಿಸುತ್ತಾ ಸಂಧ್ಯೋಪಾಸನೆ ಮಾಡಿದನು.॥23॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಐದನೆಯ ಸರ್ಗ ಪೂರ್ಣವಾಯಿತು.॥5॥